ಜಗತ್ತಿನಲ್ಲಿ ಸಾವಿನ ಬಗ್ಗೆ ಆದಿಯಿಂದಲೂ ಮನುಶ್ಯನಿಗೆ ಹೆದರಿಕೆ ಇದ್ದೇ ಇದೆ. ಅದು ಯಾವ ದೇಶವೇ ಇರಲಿ ಯಾವ ಜನಾಂಗವೇ ಇರಲಿ, ಸಾವಿನ ಬಗ್ಗೆ, ಸಾವಿನ ನಂತರ ಎನಾಗುತ್ತದೆ ಎಂಬ ಕುತೂಹಲದಿಂದ ಬಹಳಷ್ಟು ಯೋಚನೆ ಮಾಡಿದ್ದಾರೆ. ಇದರ ಬಗ್ಗೆ ಹಲವು ಕಥೆಗಳನ್ನೂ ಬರೆದಿದ್ದಾರೆ. ಆದರೆ ಮನುಶ್ಯ ಎಷ್ಟೇ ಬುಧ್ದಿವಂತನಾದರೂ ಸಾವು ಯಾವಾಗ ಬರುತ್ತದೆ ಎಂದು ತಿಳಿಯಲಾಗಲಿಲ್ಲ. ಪ್ರಪಂಚದಾದ್ಯಂತ ಹಲವು ಜ್ಯೋತಿಷಿಗಳು ತಾವು ಮುಂದಾಗವುದನ್ನು ತಿಳಿಯಬಲ್ಲೆವು ಎಂದು ತಾವು ಅಧ್ಯಯನ ಮಾಡಿದ ಯಾವುದೋ ಆಧಾರ ಗ್ರಂಥಗಳನ್ನು ಮುಂದಿಟ್ಟುಕೊಂಡು ಹೇಳುತ್ತಾ ಬಂದಿದ್ದಾರೆ. ಆದರೆ ಇದು ಎಷ್ಟು ಸತ್ಯ ಎಂದು ಯಾರಿಗೆ ಗೊತ್ತು? ಹಾಗೆಯೇ ಈ ಬ್ರಹ್ಮಾಂಡದ ಬಗ್ಗೆ, ಭೂಮಿಯ ಉಗಮದ ಬಗ್ಗೆ ನಮ್ಮ ಪುರಾಣಗಳು ಹೇಳುವುದು ಒಂದಾದರೆ ವಿಜ್ನಾನ ಹೇಳುವುದೇ ಒಂದು.ಹಾಗೆಯೇ ಈ ಭೂಮಿಯ ಜೀವರಾಶಿಗಳಿಗೂ ಒಂದು ಅಂತ್ಯ ಇದೆ ಎಂಬ ವಿಷಯದ ಬಗ್ಗೆಯೂ ವಿಜ್ನಾನ ಒಂದು ದಿಕ್ಕಿನಿಂದ ಹೇಳುತ್ತಿದ್ದರೆ ಜ್ಯೋತಿಷ್ಯ ಒಂದು ದಿಕ್ಕಿನಿಂದ ಹೇಳುತ್ತಿದೆ. ಆದರೆ ಈ ಎಲ್ಲಾ ಯೋಚನೆಗಳನ್ನು ನಮ್ಮ ಭಾರತೀಯರು ಸಾವಿರಾರು ವರ್ಷಗಳ ಹಿಂದೆಯೇ ಮಾಡಿದ್ದಾರೆ ನಮ್ಮ ವೇದಗರಳು, ಪುರಾಣಗಳು, ಭಾಗವತ ರಾಮಾಯಣ ಮಹಾಭಾರತಗಳಲ್ಲಿ ಅಲ್ಲಲ್ಲಿ ಬ್ರಹ್ಮಾಂಡದ ಉಗಮ, ಜೀವರಾಶಿಗಳ ಸೃಷ್ಟಿ, ಬೆಳವಣಿಗೆ, ಇವಕ್ಕೆಲ್ಲಾ ಇಂದಿನವರ ಸಂಶೋಧನೆಯಿಂದ ಬರುವ ಉತ್ತರಕ್ಕೆ ಸಾಮ್ಯತೆ ಹೊಂದಿರುವ ವಿಷಯಗಳೇ ತುಂಬಿರುವುದು ಹೆಮ್ಮೆಯ ವಿಷಯ. ಕೆಲವರು ವೇದ ಪುರಾಣಗಳಲ್ಲಿ ಬರುವ ಘಟನಾವಳಿಗಳು ನಿಜ ಎನ್ನುವವರಿದ್ದಾರೆ ಮತ್ತೆ ಕೆಲವರು ಅದು ಬರೀ ಕಥೆ ಎಂದು ಹೇಳುವವರೂ ಇದ್ದಾರೆ. ಅದು ಅವರವರ ನಂಬಿಕೆಗೆ ಬಿಟ್ಟ ವಿಷಯ ಆದರೆ ನಮ್ಮ ಪುರಾಣಗಳಲ್ಲಿರುವುದೆಲ್ಲಾ ಬರೀ ಕಥೆಗಳೇ ಎಂದುಕೊಂಡರೂ ಆ ಕಥೆಗಳನ್ನು ರಚಿಸಿದ ಕಾಲ ಯಾವುದು ಎಂದು ಯೋಚಿಸಿದರೆ ಸಾವಿರಾರು ವರ್ಷಗಳ ಇತಿಹಾಸವಂತೂ ಇದ್ದೇ ಇದೆ. ಹಾಗಿದ್ದರೆ ಮುಂದುವರಿದ ದೇಶಗಳು ಇಂದು ಯೋಚಿಸುತ್ತಿರುವುದನ್ನು ನಮ್ಮವರು ಆಗಲೇ ತಿಳಿದಿದ್ದರಲ್ಲ ಅದು ಹೆಮ್ಮೆಯ ವಿಷಯ. ರಾಮಾಯಣದಲ್ಲಿ ರಾವಣ ಕುಬೇರನಿಂದ ವಶಪಡಿಸಿಕೊಂಡ ಪುಷ್ಪಕ ವಿಮಾನದ ಹೆಸರು ಕೇಳಲಿಲ್ಲವೆ ಹಾಗೆಯೇ ಶ್ರವಣಕುಮಾರನ ಸಾವಿಗೆ ಕಾರಣವಾದ ಶಬ್ಧವೇದಿ ಶರ ಇಂದಿನ ಮಿಸೈಲ್ ಗಳನ್ನು ಹೋಲುವುದಿಲ್ಲವೆ? ಅಂದಿನ ಋಷಿಮುನಿಗಳು ಮನೋವೇಗದಿಂದ ಚಲಿಸಬಲ್ಲವರಾಗಿದ್ದರು ಎಂದು ಕೇಳಿದ್ದೇವೆ ಅದನ್ನು ನಾವೀಗಲೂ ಸಾಧಿಸಲಾಗಲಿಲ್ಲ ಮುಂದುವರಿದ ಸಂಶೋಧನೆಗಳಲ್ಲಿ ನಾವು ಯಾವತ್ತೋ ಅದನ್ನೂ ಕಂಡುಕೊಳ್ಳಬಹುದೋ ಏನೋ. ಇನ್ನು ಇತ್ತೀಚಿನ ವರ್ಷಗಳಲ್ಲಿ ಪ್ರಳಯದ ಬಗ್ಗೆ ಹಲವು ಲೇಖನಗಳು ಕಾದಂಬರಿಗಳು, ಚಲನಚಿತ್ರಗಳು ಪ್ರಪಂಚದಾದ್ಯಂತ ಹಲವು ಬಾಷೆಗಳಲ್ಲಿ ಹೊರಬಂದು ಜನರ ಚರ್ಚೆಗೆ ವಿಷಯವಾಗಿದ್ದನ್ನು ಕೇಳಿದ್ದೇವೆ. ಕಳೆದೆರಡು ವರ್ಷಗಳಲ್ಲಿ ಇದರ ತೀವ್ರತೆ ಸ್ವಲ್ಪ ಹೆಚ್ಚಾಗಿದೆ ಎಂದೇ ಹೇಳಬಹುದು.
೨೦೦೯ನೇ ಇಸವಿಯಲ್ಲಿ ಇದಕ್ಕೆ ಹೆಚ್ಚು ಒತ್ತು ಸಿಕ್ಕೆದ್ದು ಒಂದು ದೇಶದ ಪುರಾತನ ದಿನದರ್ಶಿಕೆ! ಅದು 2012ರಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾ 2012ರಲ್ಲಿ ಪ್ರಳಯ ಆಗಿಯೇ ತೀರುತ್ತದೆಂದು ಮತ್ತು ಪ್ರಳಯ ಎನ್ನುವುದು ಆಗುವುದಾದರೆ ಹೇಗೆ ಆಗುತ್ತದೆ ಎನ್ನುವ ಸಾಧ್ಯತೆಗಳ ಬಗ್ಗೆ ಎಲ್ಲರೂ ಹಲವು ದೃಷ್ಟಿಯಿಂದ ತರ್ಕಿಸಿದರು.
ಹಲವು ಭಾಷೆಗಳಲ್ಲಿ ಪ್ರಳಯವನ್ನು ವಸ್ತುವನ್ನಾಗಿರಿಸಿಕೊಂಡು ಚಲನಚಿತ್ರಗಳು ನಿರ್ಮಾಣಗೊಂಡವು.ಆ ಹೊತ್ತಿನಲ್ಲಿ ಹೊರಬಂದ ಒಂದು ಚಲನಚಿತ್ರ "2012 ಎಂಡ್ ಆಫ್ ದ ವರ್ಲ್ಡ್" ಬಹುಶಃ ಆ ವರ್ಶ ಹೆಚ್ಚು ಹಣಮಾಡಿದ ಚಿತ್ರವೂ ಅದೇ ಇರಬೇಕು. ನಾನು ಆ ಚಿತ್ರದ ಕಥೆಯನ್ನು ಪೂರ್ಣವಾಗಿ ಹೇಳುವುದಿಲ್ಲ ಮುಕ್ತಾಯ ಹೇಗಾಗುತ್ತದೆಂದು ಮಾತ್ರ ಹೇಳುತ್ತೇನೆ. ಉಲ್ಕಾಪಾತದಿಂದ ಜ್ವಾಲಮುಖಿಯಿಂದ, ಬೃಹತ್ ಕಂಪನಗಳಿಂದ ಮತ್ತೆ ಮೇಲುಕ್ಕಿಬರುವ ಸಮುದ್ರದಿಂದ ಹೇಗೆ ಇಲ್ಲಿನ ಮಾನವರೂ ಅವರಿಂದ ನಿರ್ಮಿಸಲ್ಪಟ್ಟ ವಸ್ತುಗಳೂ ಮತ್ತೆಲ್ಲಾ ಜೀವರಾಶಿಗಳೂ ಹಂತ ಹಂತವಾಗಿ ನಾಶವಾಗುತ್ತದೆಂದು ಗ್ರಾಫಿಕ ತಂತ್ರದಿಂದ ಚಿತ್ರಿಸಲಾಗಿದೆ.
ಆದರೆ ಪ್ರಳಯವಾಗುತ್ತದೆ ಎಂದು ಮೊದಲೇ ತಿಳಿದಿದ್ದ ಚೀನೀಯರು ಈ ಭೂಮಿಯ ಮೇಲಿನ ಜೀವ ಮತ್ತು ಸಸ್ಯರಾಶಿಗಳನ್ನು ಮುಂದಿನ ಸೃಷ್ಟಿಗೆ ಅನುಕೂಲವಾಗುವಂತೆ ಕಾಯ್ದಿಡಲು ಸಾಧ್ಯವಾಗುವಂತ ಒಂದು ಸಬ್ ಮೆರೀನನ್ನು ತಯಾರಿಸಿದ್ದಾರೆ ಅದು ಎಂತಹ ಸಂದರ್ಭದಲ್ಲಿಯೂ ನಾಶವಾಗದಷ್ಟು ಸದೃಢವಾಗಿದೆ ಮತ್ತು ಅದರಲ್ಲಿರುವಷ್ಟು ಜೀವರಾಶಿಗಳಿಗೆ ಸುದೀರ್ಘ ಕಾಲಕ್ಕೆ ಬೇಕಾಗುವ ನೀರು ಆಹಾರದ ವ್ಯವಸ್ಥೆ ಇದೆ. ಅಂತೂ ಚಿತ್ರದ ಹೀರೋ ಹಾಗೂ ಅವನ ಕುಟುಂಬವೂ ಅಲ್ಲಿ ಬಂದು ಸೇರಿಕೊಳ್ಳುತ್ತೆ ಅಷ್ಟೊತ್ತಿಗಾಗಲೇ ಅದು ಜನರಿಂದ ತುಂಬಿಹೋಗಿತ್ತು ಹಾಗೂ ಎಲ್ಲ ಜಾತಿಯ ಜೀವಿಗಳನ್ನೂ ಬೇರೆ ಬೇರೆಯಾಗಿ ಇಟ್ಟುಕೊಂಡಿದ್ದರು. ಅಂತೂ ತುಂಬ ಸಂಕಷ್ಟದಿಂದ ಅದರ ಬಾಗಿಲನ್ನು ಭದ್ರಪಡಿಸಲಾಯಿತು. ಹಲವು ದಿನ ಅದರೊಳಗೇ ಇರುತ್ತಾ ಒಂದು ದಿನ ಆ ಸಬ್ ಮೆರೀನು ನೀರ ಮೇಲೆ ಬರುವುದನ್ನೂ ತೋರಿಸುತ್ತಾರೆ. ಹಾಗೆ ಮೇಲೆ ಬಂದಾಗ ಆಕಾಶ ತಿಳಿಯಾಗಿದೆ, ಸಮುದ್ರ ಶಾಂತವಾಗಿದೆ ಪೂರ್ವ ದಲ್ಲಿ ಸೂರ್ಯೋದಯವಾಗುವುದನ್ನು ನೋಡುತ್ತಾ ಎಲ್ಲರೂ ಆನಂದದಿಂದ ಉದ್ಘರಿಸುತ್ತಾರೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ. ನಾನು ಆ ಚಿತ್ರವನ್ನು ನೋಡಿದಾಗ ಚಿತ್ರದ ಕೊನೆಯ ಕಥೆಯನ್ನು ಎಲ್ಲೋ ಕೇಳಿದ್ದೇನೆ ಎನ್ನಿಸತೊಡಗಿತು. ತುಂಬಾ ಯೋಚನೆ ಮಾಡಿದಾಗ ನೆನಪಾದದ್ದು ದಶಾವತಾರ! ಹೌದು ವಿಷ್ಣುವಿನ ದಶಾವತಾರದಲ್ಲಿ ಮೊದಲನೆಯದು ಮತ್ಸ್ಯಾವತಾರ, ದುರುಳನಾದ ತಮಾಸುರ ಎಂಬಾತ ವೇದಗಳನ್ನು ಅಪಹರಿಸಿ ಸಮುದ್ರದ ಆಳವನ್ನು ಸೇರಿಕೊಳ್ಳುತ್ತಾನೆ ಆ ಹೊತ್ತಿಗೆ ಈ ಭೂಮಿಯನ್ನು ನಮ್ಮ ಮೂಲ ಪುರುಷ ಎಂದೇ ಹೇಳುವ ಮನು ಆಳುತ್ತಿರುತ್ತಾನೆ. ಚಕ್ರವರ್ತಿ ಒಂದು ದಿನ ಪ್ರಾತಃಕಾಲದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಕೊಡಲು ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡಾಗ ಸುಂದರವಾದ ಮೀನೊಂದು ಅವನ ಬೊಗಸೆಯಲ್ಲಿ ಸೇರಿಕೊಳ್ಳುತ್ತದೆ. ಚಿತ್ತಾಕರ್ಷಕವಾದ ಆ ಮೀನನ್ನು ಹಾಗೆಯೇ ತಂದು ತನ್ನರಮನೆಯಲ್ಲಿ ಅದನ್ನು ಬೆಳೆಸುತ್ತಾನೆ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಆ ಮೀನು ಬೃಹತ್ತಾಗಿ ಬೆಳೆಯತೊಡಗುತ್ತದೆ ರಾಜನು ನೀರಿನ ತೊಟ್ಟಿಯಿಂದ ಕೆರೆ, ಕೆರೆಯಿಂದ ಸರೋವರಕ್ಕೆ ತಂದು ಬಿಟ್ಟರೂ ಸರೋವರವೂ ಆ ಮೀನಿಗೆ ಸಾಕಾಗದೇ ಹೋದಾಗ ಮತ್ತೆ ಸಮುದ್ರಕ್ಕೇ ತಂದುಬಿಡುವ ವ್ಯವಸ್ಥೆ ಮಾಡುತ್ತಾನೆ. ಸಮುದ್ರ ಸೇರಿದ ಆ ಮತ್ಸ್ಯ ನೇರವಾಗಿ ಆಳಕ್ಕಿಳಿದು ವೇದಗಳನ್ನು ಅಪಹರಿಸಿ ಅಲ್ಲಿ ಅವಿತಿದ್ದ ತಮಾಸುರನನ್ನು ತನ್ನ ಹರಿತವಾದ ರೆಕ್ಕೆಗಳಿಂದಲೇ ಸೀಳಿ ಕೊಂದುಹಾಕುತ್ತದೆ. ಮತ್ತು ವೇದಗಳನ್ನು ಮರಳಿ ತಂದು ಮನುಚಕ್ರವರ್ತಿಗೆ ತನ್ನ ನಿಜರೂಪವನ್ನು ತೋರಿಸುತ್ತದೆ. ಆಗ ಅರಸನಿಗೆ ತಾನು ಸಾಕಿದ್ದು ಕೇವಲ ಒಂದು ಮೀನಲ್ಲ ಅದು ಮಹಾವಿಷ್ಣು ಎಂದು ತಿಳಿಯುತ್ತದೆ. ಮಹಾವಿಷ್ಣುವಿಗೆ ವಂದಿಸಿದ ಅರಸನಿಗೆ ಆ ದೇವ ಒಂದು ಮಾತನ್ನು ಹೇಳುತ್ತಾನೆ ಇನ್ನು ಕೆಲವು ಕಾಲದಲ್ಲಿಯೇ ಮಹಾ ಪ್ರಳಯವಾಗುತ್ತದೆ. ಎಲ್ಲಾ ಜೀವರಾಶಿಗಳೂ ನಾಶವಾಗಿ ಹೋಗುತ್ತದೆ ಆದರೆ ಮುಂದಿನ ಸೃಷ್ಟಿಗೆ ಅನುಕೂಲವಾಗುವಂತೆ ಜೀವರಾಶಿಗಳನ್ನು ಸಸ್ಯಗಳನ್ನು ಕಾಪಾಡುವ ಹೊಣೆ ನಿನ್ನದು ಅರಸ ಆದ್ದರಿಂದ ನಾವೆಯೊಂದನ್ನು ನಿರ್ಮಿಸಿಕೊಂಡು ಅದರಲ್ಲಿ ಭೂಮಿಯಲ್ಲಿರುವ ಎಲ್ಲಾ ಜೀವರಾಶಿಗಳನ್ನ ( ಅಂದರೆ ಎಲ್ಲರನ್ನೂ ಎಂದಲ್ಲ ಎಲ್ಲಾ ಜಾತಿಗಳನ್ನು ; ನಾಲ್ಕು ಮನುಷ್ಯರು ನಾಲ್ಕು ಆನೆ...... ಎಲ್ಲಾ ಜಾತಿಯ ಸ್ಯಾಂಪಲ್ ಮಾತ್ರ ) ಹಾಗೂ ಸಸ್ಯಗಳ ಬೀಜಗಳನ್ನು ಶೇಖರಿಸು ಪ್ರಳಯದ ಸೂಚನೆ ಸಿಕ್ಕಾಗ ನನ್ನನ್ನು ಪ್ರಾರ್ಥಿಸಿದರೆ ಬಂದು ರಕ್ಷಿಸುತ್ತೇನೆ ಎಂದು ಅಭಯದ ಮಾತಾಡಿ ತೆರಳುತ್ತಾನೆ. ಕೆಲವು ದಿನದಲ್ಲಿಯೇ ದೇವರೆಂದಂತೆ ಪ್ರಳಯದ ಸೂಚನೆಯಾಗಿ ಸಮುದ್ರ ಉಕ್ಕೇರತೊಡಗುತ್ತದೆ.
ಅರಸನು ಮೊದಲೇ ದೇವರ ಅದೇಶವನ್ನು ಪಾಲಿಸಿರುತ್ತಾನೆ ಸಸ್ಯಗಳ ಬೀಜ ಮತ್ತು ಜೀವಿಗಳಿಂದ ತುಂಬಿದ ನಾವೆಯನ್ನೇರಿ ವಿಷ್ಣುವನ್ನು ಪ್ರಾರ್ಥಿಸುತ್ತಾನೆ ಆಗ ಪ್ರತ್ಯಕ್ಷನಾದ ದೇವರು ಅರಸಾ ಇದೋ ನಾನು ಮತ್ತೆ ಮತ್ಸ್ಯರೂಪವನ್ನು ತಳೆಯುತ್ತೇನೆ. ನೀರಿನಲ್ಲಿ ತೇಲಿ ಬರುತ್ತಿರುವ ವಾಸುಕಿಯನ್ನು ನನ್ನ ಬಾಲಕ್ಕೂ ಮತ್ತು ನೀನಿರುವ ನಾವೆಗೂ ಬಂಧಿಸು ಸಮುದ್ರರಾಜ ಶಾಂತನಾಗುವವರೆಗೂ ನಾನು ನೀರಿನಲ್ಲಿ ತೇಲುತ್ತಾ ನೀವಿರುವ ದೋಣಿಯನ್ನು ರಕ್ಷಿಸುತ್ತೇನೆ ಎಂದು ಹೇಳಿ ಹಾಗೆಯೇ ಮಾಡುತ್ತಾನೆ. ಹಲವು ದಿನದ ನಂತರ ಸಮುದ್ರ ಶಾಂತವಾಗುತ್ತದೆ. ಮುಂದೆ ಅರಸ ಮತ್ತೆ ಭೂಮಿಯನ್ನು ಸೇರಿಕೊಂಡು ಸಸ್ಯಕೃಷಿಗೆ ಜೀವರಕ್ಷಣೆಗೆ ತೊಡಗಿಕೊಳ್ಳುತ್ತಾನೆ. ನಾನು "2012 ಎಂಡ್ ಅಫ್ ವರ್ಲ್ಡ್" ಕೊನೆಯಲ್ಲಿ ನೋಡಿದ್ದು ಇದೇ ಕಥೆಯನ್ನು ಎನ್ನಿಸಿತು ಅಬ್ಭಾ! ತಂತ್ರಜ್ನಾನದಲ್ಲಿ ಮುಂದುವರಿದವರು ಎಂದು ನಾವೂ ಒಪ್ಪಿಕೊಳ್ಳುವವರಿಗೆ ಈಗ ಬರುವ ಕಲ್ಪನೆ ನಮ್ಮವರಿಗೆ ಸಾವಿರಾರು ವರ್ಷದ ಹಿಂದೆಯೇ ಗೊತ್ತಿತ್ತೆಂದರೆ ಅವರು ಹುಟ್ಟಿ ಬೆಳೆದ ಭರತ ಭೂಮಿ ಮಹಾನ್ ಅಲ್ಲವೆ?