Sunday, September 28, 2025

ಚ್ಯವನ 8

ಅನಿವಾರ್ಯ ಕಾರಣಗಳಿಂದ ಚ್ಯವನ ಸ್ವಲ್ಪ ಹಿಂದಾಯಿತು ಕ್ಷಮೆ ಇರಲಿ 🙏🙏 ಅಶ್ವಿನೀ ದೇವತೆಗಳು ಸುಕನ್ಯೆಗೆ ಸಹಾಯ ಮಾಡಲು ಮುಂದಾಗಿದ್ದರು. ಇದರಲ್ಲಿ ಅವರಿಗೂ ಒಂದು ಸ್ವಾರ್ಥ ಇತ್ತು... ಸಂಜ್ಞಾ ದೇವಿಯು ಅಶ್ವದರೂಪದಲ್ಲಿ ಇದ್ದಾಗ ಸೂರ್ಯನಿಂದ ಹುಟ್ಟಿದವರು ಅವರು, ಉಳಿದ ದೇವತೆಗಳಿಗೆ ಸಿಗುವಂತೆ ಇವರಿಗೆ ಸೋಮಪಾನದ ಅಧಿಕಾರ ಇರಲಿಲ್ಲ, ನಾಸತ್ಯ ಮತ್ತು ದಸ್ರ ಎಂಬ ಹೆಸರಿನ ಅಶ್ವಿನೀ ಕುಮಾರರು ದೇವತೆಗಳ ಪಂಕ್ತಿಯಲ್ಲಿ ಶೂದ್ರ ವರ್ಣಕ್ಕೆ ಸೇರಿಸಲ್ಪಟ್ಟವರೆಂದು ಮಹಾಭಾರತದ ಶಾಂತಿ ಪರ್ವದಲ್ಲಿ ಹೇಳಿದೆ. '' ಅಶ್ವಿನೌ ತು ಸ್ಮೃತೌ ಶೂದ್ರೌ ತಪಸ್ಯುಗ್ರೇ ಸಮಾಸ್ಥಿತೌ " ಹಾಗಾಗಿ ತಾವೂ ದೇವತೆಗಳ ಪಂಕ್ತಿಯಲ್ಲಿ ಸೋಮಪಾನದ ಅಧಿಕಾರ ಪಡೆಯಬೇಕೆಂಬುದು ಅವರ ನಿರೀಕ್ಷೆಯಾಗಿತ್ತು. ಹಾಗಾಗಿ ಸುಕನ್ಯೆಯ ಪಾತಿವ್ರತ್ಯಕ್ಕೆ ಮೆಚ್ಚಿದ ಅವರು "ದೇವೀ... ದೇವ ವೈದ್ಯರಾದ ನಾವು ನಿನ್ನ ಪತಿಯನ್ನೂ ನಮ್ಮ ಹಾಗೇ ಸುಂದರ ಯುವಕನನ್ನಾಗಿ ಮಾಡಬಲ್ಲೆವು ಆದರೆ.. ನಿನ್ನ ಪತಿಯೂ ಸೇರಿ ನಾವು ಮೂವರೂ ಒಂದೇ ರೂಪದಲ್ಲಿರುವಾಗ ನೀನು ನಿನ್ನ ಪತಿಯನ್ನು ಮತ್ತೆ ವರಿಸಬೇಕಾಗುತ್ತದೆ". ತನ್ನ ಪತಿಯು ಸುಂದರ ಯುವಕನಾಗುತ್ತಾನೆ ಎಂದರೆ ಯಾವ ಹೆಣ್ಣಾದರೂ ಅದನ್ನು ಬಯಸುವಂತೆಯೇ ಸುಕನ್ಯೆಯೂ ಅವರ ಮಾತಿಗೆ ಒಪ್ಪುತ್ತಾಳೆ. ಹಾಗೆಯೇ ತನ್ನ ಪತಿಯಾದ ಚ್ಯವನನನ್ನು ಒಪ್ಪಿಸಿ ಕರೆದುಕೊಂಡು ಬರಲು ತಿಳಿಸುತ್ತಾರೆ. ಹಾಗೆಯೇ ತನ್ನಾಶ್ರಮಕ್ಕೆ ತೆರಳಿದ ಸುಕನ್ಯೆ ಪತಿಯಲ್ಲಿ ಅಶ್ವಿನೀ ದೇವತೆಗಳೊಂದಿಗೆ ನಡೆದ ಸಂಪೂರ್ಣ ಮಾತುಕತೆಯನ್ನು ತಿಳಿಸುತ್ತಾಳೆ. ಮೊದಲು ಅಷ್ಟು ಆಸಕ್ತಿಯನ್ನು ಹೊಂದಿರದಿದ್ದರೂ ನಂತರದಲ್ಲಿ ಚ್ಯವನ ಅವಳ ಮಾತಿಗೆ ಒಪ್ಪಿಕೊಳ್ಳುತ್ತಾನೆ. ನಂತರದಲ್ಲಿ ಅವರಿಬ್ಬರೂ ಅಶ್ವಿನೀ ದೇವತೆಗಳ ಬಳಿಗೆ ಬರುತ್ತಾರೆ. ಸತಿಯ ಜೊತೆಗೆ ಬಂದ ಚ್ಯವನನನ್ನು ನೋಡಿ ಅವರಿಬ್ಬರೂ ಅವನ ಕೈ ಹಿಡಿದುಕೊಂಡು ಬಳಿಯಲ್ಲೆ ಇರುವ ಸರೋವರವನ್ನು ಇಳಿದರು. ಕ್ಷಣಕಾಲ ... ಸುಕನ್ಯೆ ನೋಡುತ್ತಿರುವಂತೆಯೇ ಸುಂದರರಾದ ಮೂರು ಜನ ದೇವಪುರುಷರು ಆ ಸರೋವರದಿಂದ ಮೇಲೆದ್ದು ಬಂದರು. ಉತ್ತಮವಾದ ವಸನಗಳನ್ನು ತೊಟ್ಟು ದಿವ್ಯಾಭರಣಗಳನ್ನು ಧರಿಸಿದ್ದ ಆ ಮೂವರ ರೂಪದಲ್ಲಿ ಎಳ್ಳಿನಿತೂ ವ್ಯತ್ಯಾಸ ಇರಲಿಲ್ಲ. ಮೇಲೆ ಬಂದ ಮೂವರೂ ಕಣ್ಣರಳಿಸಿ ನೋಡುತ್ತಿದ್ದ ಸುಕನ್ಯೆಯನ್ನು ಕುರಿತು ಏಕಕಂಠದಿಂದ.. " ಸುಂದರಿ.. ನಾವು ಮೂರು ಜನರೂ ನಿನ್ನನ್ನು ವರಿಸಲು ಬಯಸಿದ್ದೇವೆ.. ಆದರೆ ನಿನಗೆ ಆಯ್ಕೆಯ ಅವಕಾಶ ಹಾಗಾಗಿ ನಿನಗೆ ಯಾರು ಪತಿಯಾಗಬೇಕೆಂದು ನೀನೇ ಆಯ್ಕೆ ಮಾಡು." ಈಗ ಚ್ಯವನ ಸುಕನ್ಯೆಯರಿಬ್ಬರಿಗೂ ಪರೀಕ್ಷೆ. ಸುಂದರ ರೂಪವನ್ನು ಹೊಂದಿದ ಆತ ಸೂಚಿಸುವ ಅವಕಾಶವೂ ಇಲ್ಲ. ಒಂದೇ ರೂಪ ಹೊಂದಿದ ಮೂವರಲ್ಲಿ ಆಕೆ ಮತ್ತೆ ತನ್ನ ಪತಿಯನ್ನೇ ಆಯ್ಕೆಮಾಡಿಕೊಳ್ಳಬೇಕು, ಸ್ವಲ್ಪ ಯೋಚಿಸಿ ಆಕೆ ತನ್ನ ಪಾತಿವ್ರತ್ಯವನ್ನೇ ಪಣಕ್ಕಿಡಲು ಮುಂದಾದಳು.. ಮನಸ್ಸಿನಲ್ಲಿಯೇ ಪತಿಯನ್ನು ಧ್ಯಾನಿಸಿ ಆ ಮೂವರಲ್ಲಿ ತನ್ನ ಪತಿಯಾರೆಂದು ತಿಳಿದು ಮುಂದೆ ಬಂದು ಆತನ ಕೈ ಹಿಡಿದಳು. ಪತಿಯ ಆಶೀರ್ವಾದ, ದೇವಾನುಗ್ರಹ ಇದ್ದ ಕಾರಣ ಅವಳು ಹಿಡಿದ ಕೈ ಚ್ಯವನನದ್ದೇ ಆಗಿತ್ತು. ಆತನಿಗೂ ತನ್ನ ಸತಿಯ ಪಾತಿವ್ರತ್ಯದ ಬಲವನ್ನು ಕಂಡು ಸಂತೋಷವಾಯಿತು. ವೃದ್ಧನಾದವ ಈಗ ಯುವಕನಾಗಿದ್ದ, ಕುರುಡುತನ ಕಳೆದು ದೃಷ್ಠಿ ದೊರಕಿತ್ತು. ಸುಕನ್ಯೆಯೂ ಪತಿಯ ಸುಂದರ ರೂಪವನ್ನು ನೋಡಿ ಬಹಳ ಆನಂದ ಹೊಂದಿದಳು . ಅಶ್ವಿನೀ ದೇವತೆಗಳ ಅನುಗ್ರಹದಿಂದ ಸಂತಸಗೊಂಡ ಚ್ಯವನ ಅವರನ್ನು ಕುರಿತು " ಯಮಳರೇ ನಿಮ್ಮ ಅನುಗ್ರಹದಿಂದ ನಾನು ಹೊಸ ತಾರುಣ್ಯದ ರೂಪವನ್ನು ಹೊಂದಿದೆ... ನನಗೆ ಅನುರೂಪಳಾದ ಸುಕನ್ಯೆಯೂ ಮತ್ತೆ ನನ್ನನ್ನೇ ವರಿಸಿದಳು. ನನ್ನ ಬದುಕಿಗೇ ಒಂದು ಸುಂದರ ರೂಪವನ್ನು ಕೊಟ್ಟ ನಿಮಗೆ ಇದಕ್ಕೆ ಪ್ರತಿಯಾಗಿ ನೀವು ಬಯಸಿದ ಸೋಮಪಾನವನ್ನು ಇಂದ್ರನ ಸಮ್ಮುಖದಲ್ಲಿಯೇ ಮಾಡಿಸುತ್ತೇನೆ ಇದು ಸತ್ಯ" ಎಂದು ಗಂಭೀರವಾಣಿಯಲ್ಲಿ ಹೇಳಿದ. ಚ್ಯವನನ ಮಾತುಗಳನ್ನು ಕೇಳಿದ ಅಶ್ವಿನೀಕುಮಾರರಿಗೂ ಸಂತೋಷವಾಗಿ ಸ್ವರ್ಗಲೋಕದತ್ತ ಪ್ರಯಾಣ ಬೆಳಸಿದರು. ಇತ್ತ ಚ್ಯವನ ಸುಕನ್ಯೆಯರು ಸಂತೋಷಚಿತ್ತದಿಂದ ಆಶ್ರಮದತ್ತ ತಿರುಗಿ ಬಂದರು.🙏🙏 ಮುಂದುವರಿಯುವುದು🙏

Monday, September 15, 2025

ಚ್ಯವನ 7

ಬಹು ಬೇಗ ಚ್ಯವನ ಮಹರ್ಷಿಯ ಸೇವೆಯಲ್ಲಿ ನಿತ್ಯ ಮಾಡಬೇಕಾದ ಕಾರ್ಯಗಳೇನು ಎಂಬುದನ್ನು ಸುಕನ್ಯೆ ಅರಿತುಕೊಂಡಳು. ಅವನೂ ಈಗ ಸಂಸಾರಿ ಹಾಗಾಗಿ ಹೊತ್ತು ಹೊತ್ತಿಗೆ ಸ್ನಾನ ಸಂಧ್ಯಾವಂದನೆ ಅಗ್ನಿಕಾರ್ಯಗಳನ್ನು ಮಾಡುವನು, ಅವನ ಆ ಎಲ್ಲಾ ನಿತ್ಯಾನುಷ್ಠಾನಕ್ಕೆ ಸುಕನ್ಯೆಯೇ ಸಿದ್ಧತೆ ಮಾಡಬೇಕು. ಬೆಳಗಿನ ಜಾವದಲ್ಲಿಯೇ ಪತಿ ಏಳುವ ಮೊದಲೇ ಎದ್ದು ಆಶ್ರಮದ ಕೆಲಸದಲ್ಲಿ ತೊಡಗುವಳು, ಆತ ಎದ್ದಾಕ್ಷಣ ಅವನಿಗೆ ಆಸರೆಯಾಗಿ ಆಶ್ರಮದಿಂದ ಅನತಿದೂರ ಶೌಚಕ್ಕಾಗಿ ಕರೆದೊಯ್ಯವಳು...ಅಂಧನಾದ ಕಾರಣ ನದೀ ತಟಕ್ಕೆ ಸ್ನಾನಕ್ಕೆ ಹೋಗಲಾರ, ಇವಳೇ ನೀರನ್ನು ತಂದು ಬಿಸಿಮಾಡಿ ಸ್ನಾನಕ್ಕೆ ಸಿದ್ದತೆ ಮಾಡಿ ತಾನೇ ಸ್ನಾನ ಮಾಡಿಸುವಳು. ಆನಂತರದಲ್ಲಿ ತಾನೂ ಸ್ನಾನ ಮಾಡಿ ಅವನ ನಿತ್ಯಾನುಷ್ಠಾನಗಳಿಗೆ ಸಿದ್ಧತೆ ಮಾಡಿಕೊಡುವಳು.. ಪತಿಯ ಅನುಷ್ಠಾನ ಮುಗಿದಾಗ ತಾನೇ ಸಂಗ್ರಹಿಸಿ ತಂದ ಫಲ, ಕಂದಮೂಲಗಳನ್ನು ನೀಡುವಳು.. ಅವನು ತಿಂದ ನಂತರ ಉಳಿದಿದ್ದನ್ನು ತಾನೂ ಸೇವಿಸುವಳು. ತ್ರಿಕಾಲದಲ್ಲಿ ಇದೇ ರೀತಿ ವರ್ತಿಸುತ್ತಾ ಪ್ರತಿಷ್ಠಾಪಿಸಿದ ಗಾರ್ಹಪತ್ಯ..ಆವಹನೀಯ.. ದಕ್ಷಿಣಾಗ್ನಿಗಳ ರಕ್ಷಣೆ ಮಾಡಿಕೊಳ್ಳುವಳು. ಈಗ ಸುಕನ್ಯೆಗೆ ಚ್ಯವನನನ್ನು ಬಿಟ್ಟು ಬೇರೆ ಪ್ರಪಂಚವೇ ಇಲ್ಲ. ರಾತ್ರಿಕಾಲದಲ್ಲಿ ಚ್ಯವನನನ್ನು ಮತ್ತನೆಯ ಹುಲ್ಲಿನ ಹಾಸಿನಮೇಲೆ ಮಲಗಿಸಿ ಅವನ ಕಾಲುಗಳನ್ನು ಒತ್ತುವಳು. ಅವನಿಗೆ ನಿದ್ರೆ ಬಂದಮೇಲೆ ತಾನೂ ಅವನ ಪಾದದ ಬಳಿಯಲ್ಲಿ ಮಲಗಿಕೊಳ್ಳುವಳು. ಹೀಗೇ ಅದೆಷ್ಟೋ ವರ್ಷಗಳೇ ಕಳೆದವು... ಒಂದು ದಿನ ಸುಕನ್ಯೆಯು ನದಿಯಲ್ಲಿ ಸ್ನಾನಮಾಡಿ ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಆಶ್ರಮದ ಕಡೆಗೆ ಸಾಗಿ ಬರುತ್ತಿದ್ದಳು. ಅದೇ ಸಮಯದಲ್ಲಿ ಗಗನ ಮಾರ್ಗದಲ್ಲಿ ಸಾಗುತ್ತಿದ್ದ ಅಶ್ವಿನೀ ದೇವತೆಗಳು ಇವಳನ್ನು ನೋಡಿದರು. ಅನುಪಮವಾದ ರೂಪ ಲಾವಣ್ಯದಿಂದ ಎಂತವರ ಮನಸ್ಸನ್ನಾದರೂ ಆಕರ್ಷಿಸುವ ಹಾಗಿದ್ದ ಸುಕನ್ಯೆಯನ್ನು ನೋಡಿದ ಅಶ್ವಿನೀ ದೇವತೆಗಳೂ ಆಕರ್ಷಿತರಾದರು. ಗಗನ ಮಾರ್ಗದಿಂದ ಕೆಳಗಿಳಿದು ಆಕೆಯ ಸಮ್ಮುಖದಲ್ಲಿ ಕಾಣಿಸಿಕೊಂಡು..." ಸುಂದರೀ... ಯಾರು ನೀನು? ಈ ಘೋರಾರಣ್ಯದಲ್ಲಿ ಒಬ್ಬಳೇ ಏಕೆ ಸಂಚರಿಸುತ್ತಿರುವೆ.. ನಿರಾಭರಣ ಸುಂದರಿಯಾದ ನಿನ್ನ ಮುಖ ಕಾಂತಿಯಿಂದ ಈ ಅರಣ್ಯವೇ ಬೆಳಗುತ್ತಿದೆ. ನೀನು ದೇವ ಕನ್ನಿಕೆಯೋ... ಆದರೂ ಅಶ್ವಿನೀ ದೇವತೆಗಳಾದ ನಾವು ಇಲ್ಲಿಯವರೆಗೆ ನಿನ್ನನ್ನು ನೋಡಿದ್ದಿಲ್ಲ.." ಎಂದು ಕೇಳಿದರು. ಅವರು ಹಾಗೆ ಪ್ರಶ್ನಿಸಿದಾಗ... ಒಂದು ಕ್ಷಣ ಸುಕನ್ಯೆಗೆ ನಾಚಿಕೆಯೂ ಆತಂಕವೂ ಆಯಿತು. ಪರ ಪುರುಷರು ತನ್ನ ಸೌಂದರ್ಯದ ವರ್ಣನೆ ಮಾಡಿದ್ದು ಅವಳ ನಾಚಿಕೆಗೆ ಕಾರಣವಾದರೆ.. ಪರಿಚಯಿಸಿಕೊಳ್ಳಬಹುದೋ ಎಂಬ ಆತಂಕ. ಆದರೂ ಸಾವರಿಸಿಕೊಂಡು ಅವರಿಗೆ ತಾನು ಶರ್ಯಾತಿ ಪುತ್ರಿಯೆಂದೂ, ಚ್ಯವನ ಮಹರ್ಷಿಯ ಸತಿಯೆಂದೂ ಪರಿಚಯಿಸಿಕೊಂಡಳು. ಸುಕನ್ಯೆಯ ಮಾತನ್ನು ಕೇಳಿದ ಅಶ್ವಿನೀ ದೇವತೆಗಳು ನಗುತ್ತಾ.. "ನಿನ್ನ ತಂದೆಯಾದರೋ.. ಕುರುಡನೂ ವೃದ್ಧನೂ ಆಶ್ರಮ ವಾಸಿಯೂ ಆದ ಚ್ಯವನನಿಗೆ ನಿನ್ನನ್ನು ಮದುವೆಮಾಡಿ ಕೊಟ್ಟನು. ಅಲಂಕಾರವಿಲ್ಲದೆಯೇ ಅತ್ಯಂತ ಸೌಂದರ್ಯದಿಂದ ಶೋಭಿಸುತ್ತಿರುವ ನಿನ್ನ ಸೌಂದರ್ಯವನ್ನು ಸವಿಯುವ ಮನಸ್ಸು .. ಕಣ್ಣು...ತಾರುಣ್ಯ ಯಾವುದೂ ನಿನ್ನ ಪತಿಯಲ್ಲಿಲ್ಲ... ಈಗ ನೀನು ನಮ್ಮಿಬ್ಬರಲ್ಲಿ ಯಾರಾದರೊಬ್ಬರನ್ನು ವರಿಸುವ ಮನಸ್ಸು ಮಾಡು ನಿನಗೆ ಸ್ವರ್ಗ ಸುಖವೇನೆಂದು ಅನುಭವಕ್ಕೆ ಬರುತ್ತದೆ.'' ಅಶ್ವಿನೀ ದೇವತೆಗಳು ಆಡಿದ ಮಾತಿನಿಂದ ಸುಕನ್ಯೆಗೆ ಅಸಹನೆಯುಂಟಾಯಿತು. ಅದಕ್ಕಾಗಿಯೇ ಸ್ವಲ್ಪ ನಿಷ್ಠುರವಾದ ವಾಕ್ಯಗಳಲ್ಲಿಯೇ ಅವರಿಗೆ ಉತ್ತರಿಸಿದಳು. "ಅಯ್ಯಾ ದೇವತೆಗಳೇ... ನಾನು ಯಾರ ಬಲವಂತಕ್ಕಾಗಿ ಚ್ಯವನ ಮಹರ್ಷಿಗಳನ್ನು ಮದುವೆಯಾದವಳಲ್ಲ... ಅವರನ್ನು ವರಿಸಿದ್ದು ನನ್ನ ನಿರ್ಧಾರದಿಂದ, ಇನ್ನು ಅವರ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಂಡಂದಿನಿಂದ ಒಂದು ಕ್ಷಣವಾದರೂ ಇದು ನನಗೆ ಸಹ್ಯವಲ್ಲ ಎಂದು ಭಾವಿಸಲೂ ಇಲ್ಲ, ಈ ಪ್ರಪಂಚದಲ್ಲಿ ಹೆಣ್ಣೊಬ್ಬಳು ಪತಿವ್ರತಾ ಧರ್ಮದಿಂದ ಹೇಗೆ ಬದುಕಬೇಕೋ ಹಾಗೇ ಇದ್ದೇನೆ. ಇಲ್ಲಿ ನನಗೆ ಬೇರೆ ಆಯ್ಕೆಯ ಅವಶ್ಯಕತೆ ಕೂಡ ಇಲ್ಲ, ನಾನು ಇಲ್ಲಿ ಸುಖವಾಗಿಯೇ ಇದ್ದೇನೆ ನನ್ನ ಬಗ್ಗೆ ನಿಮಗೆ ಯಾವ ನಿರೀಕ್ಷೆಯಾದರೂ ಬೇಡ ". ಸುಕನ್ಯೆಯ ಮಾತನ್ನು ಕೇಳಿದ ಅಶ್ವಿನೀಕುಮಾರರು ಕುಪಿತರಾಗಲಿಲ್ಲ ಬದಲಿಗೆ ಅವಳೊಂದಿಗೆ ಒಂದು ಪಂಥಾಹ್ವಾನಕ್ಕೆ ಮುಂದಾದರು. 🙏 ಮುಂದುವರಿಯುತ್ತದೆ🙏🙏

Wednesday, August 27, 2025

ಚ್ಯವನ 6

ಸೀಮಿತವಾದ ಪರಿವಾರವನ್ನು ಹಿಂದಿಟ್ಟುಕೊಂಡು ಚ್ಯವನಾಶ್ರಮವನ್ನು ಶರ್ಯಾತಿ ಸೇರಿದ. ಮಹರ್ಷಿಗಳಿಗೆ ವಂಧಿಸಿ ತಾನು ತನ್ನ ಪುತ್ರಿಯನ್ನು ಶಾಸ್ತ್ರೋಕ್ತವಾಗಿ ಧಾರಾಪೂರ್ವಕವಾಗಿ ನೀಡಲು ಸಿಧ್ಧನಾಗಿರುವುದಾಗಿ ಹೇಳಿದ. ಶರ್ಯಾತಿಯ ಮಾತಿನಿಂದ ಚ್ಯವನಮಹರ್ಷಿಗಳಿಗೂ ಸಂತೋಷವಾಯಿತು. ಕ್ಷಿಪ್ರ ಸಮಯದಲ್ಲಿಯೇ ಅಲ್ಲೊಂದು ಮದುವೆಯ ಸಿದ್ಧತೆಯಾಗಿ ಸಂಭ್ರಮದಿಂದಲೇ ತನ್ನ ಪುತ್ರಿಯನ್ನು ಶರ್ಯಾತಿ ಮಹಾರಾಜ ಚ್ಯವನ ಮಹರ್ಷಿಗೆ ಮದುವೆ ಮಾಡಿಕೊಟ್ಟ... ಜೊತೆಗೆ ಅಪಾರವಾದ ಸಂಪತ್ತನ್ನೂ ಕೂಡ ಬಳುವಳಿಯ ರೂಪದಲ್ಲಿ ಕೊಡಲು ಮುಂದಾದ. ಆದರೆ ಸ್ವಾಭಿಮಾನಿಯಾದ ಚ್ಯವನ " ಅರಸ.. ನಿನ್ನ ಮಗಳ ಹೊರತಾಗಿ ತಾನು ಬೇರೆ ಏನನ್ನೂ ಸ್ವಿಕರಿಸಲಾರೆ" ಎಂದು ನಿರ್ಧಾಕ್ಷಿಣ್ಯದಿಂದಲೇ ಆಡಿದ. ಇದನ್ನು ಕೇಳಿ ತಾನು ಅರ್ಪಿಸಬೇಕೆಂದುಕೊಂಡಿದ್ದ ಸಂಪತ್ತು, ಸುವಸ್ತುಗಳನ್ನು ಅರಸ ಹಿಂದೆ ಪಡೆಯಬೇಕಾಯ್ತು. ಸುವ್ಯವಸ್ಥಿತವಾಗಿ ಮದುವೆ ಮಾಡಿಕೊಟ್ಟ ಶರ್ಯಾತಿ ಮಹಾರಾಜ ಒಂದೆರಡು ದಿನ ಅಲ್ಲಿಯೇ ಪರಿವಾರದೊಂದಿಗೆ ಉಳಿದ. ಅಲ್ಲಿಯವರೆಗೆ ಒಂದು ಎಲೆಮನೆಯನ್ನು ಕೂಡ ಮಾಡಿಕೊಂಡಿರದ ಮಹರ್ಷಿ ಇಂದು ಸಂಸಾರಿಯಾದ ಕಾರಣ ಒಂದು ಎಲೆಮನೆಯನ್ನು ನಿರ್ಮಿಸಲಾಯಿತು. ಅರಸನ ರಾಣಿಯರ ಮುಖದಲ್ಲಿ ಸಲ್ಪವೂ ಸಂತೋಷ ಸಮಾಧಾನಗಳಿರಲಿಲ್ಲ. ಅರಮನೆಯಲ್ಲಿ ಸುಖದಲ್ಲಿ ಕಾಲ ಕಳೆದ ರಾಜಕುಮಾರಿ ಅರಣ್ಯದ ಮಧ್ಯದಲ್ಲಿ ಸಾಮಾನ್ಯವಾದ ಎಲೆ ಮನೆಯಲ್ಲಿ ಬದುಕಬೇಕಾದ ಸ್ಥಿತಿ ಬಂದೊದಗಿತಲ್ಲಾ.. ಎಂಬುದೇ ಅವರ ಕಣ್ಣಿನಲ್ಲಿ ಕಂಬನಿ ತುಂಬಿಸಿತ್ತು. ಹೇಗೋ ಎರಡು ದಿನಗಳನ್ನು ಕಳೆದಮೇಲೆ ರಾಜ ಪರಿವಾರ ಹಿಂತಿರುಗುವುದೆಂದು ನಿರ್ಧಾರವಾಯಿತು. ಆ ಸಮಯಕ್ಕೆ ಸರಿಯಾಗಿ ಸುಕನ್ಯೆ ತನ್ನ ಸೇವಕಿಯರಿಗೆ ಹೇಳಿ ಮುನಿವಧುಗಳು ಉಡುವ ನಾರು ಸೀರೆಯನ್ನು ತರಿಸಿಕೊಂಡಳು. ತಾನು ಧರಿಸಿದ್ದ ಎಲ್ಲಾ ಅಭರಣಗಳನ್ನು ತೆಗೆದು, ತೊಟ್ಟ ರಾಜೋಚಿತವಾದ ಬಟ್ಟೆಗಳನ್ನು ಕಳಚಿ ದಾಸಿಯರು ತಂದ ನಾರುಡುಗೆಯನ್ನು ಉಟ್ಟಳು. ಎಲ್ಲಾ ಆಭರಣ,ಬಟ್ಟೆಗಳನ್ನು ಅರಮನೆಗೆ ಹಿಂತಿರುಗುವ ದಾಸಿಯರ ಕೈಗಿತ್ತಳು. ಕೆಲವು ಹೊತ್ತಿನ ಹಿಂದೆ ಸರ್ವಾಲಂಕಾರ ಭೂಷಿತೆಯಾಗಿ ಕಂಗೊಳಿಸುತಿದ್ದ ಸುಕನ್ಯೆ ಈಗ ನಾರುಡುಗೆಯಲ್ಲಿ ಹೊರ ಬಂದಿದ್ದು ನೋಡಿ ರಾಣಿಯರ ದುಃಖದ ಕಟ್ಟೆ ಒಡೆಯಿತು.. ಎಲ್ಲರೂ ರೋಧಿಸತೊಡಗಿದರು. ಅಳುತ್ತಿದ್ದ ಮಾತೆಯರನ್ನು ಸುಕನ್ಯೆ ತಾನೇ ಮುಂದಾಗಿ ಸಂತೈಸಿದಳು. ಶರ್ಯಾತಿ ಮಹಾರಾಜ ಸುಕನ್ಯೆಗೆ ಮತ್ತೆ ಮತ್ತೆ ಆಶ್ರಮದ ಜೀವನದ ಬಗ್ಗೆ ಹೇಳಿ ಋುಷಿ ಸೇವೆಯಲ್ಲಿ ಎಲ್ಲಿಯೂ ತೊಡಕು ಬಾರದಂತೆ ನಡೆದುಕೊಳ್ಳುವಂತೆ ಎಚ್ಚರಿಸಿ, ಚ್ಯವನ ಮಹರ್ಷಿಗೆ ವಂದಿಸಿ ಆತನ ಅಪ್ಪಣೆಯನ್ನು ಪಡೆದು ಪರಿವಾರದೊಂದಿಗೆ ರಾಜ್ಯದತ್ತ ಪ್ರಯಾಣಿಸಿದ. ಈಗ ಸುಕನ್ಯೆಗೆ ಆಶ್ರಮವಾಸ... ಸಾಂಧರ್ಭಿಕವಾಗಿ ಎರಡು ದಿನಗಳಿಂದ ನನ್ನನ್ನು ತುಂಬಾ ಕಾಡುತ್ತಿರುವ ಕನಕದಾಸರ ಪದ..ಎರಡು ದಿನಗಳ ಹಿಂದೆ ತೀರಿಹೋದ "ಕಟಗೇರಿ ಅನಂತಾಚಾರ್ಯರು " ಕಟಗೇರಿ ದಾಸರೆಂದೇ ಪ್ರಸಿದ್ಧರಾಗಿ ದಾಸರ ಪದಗಳನ್ನು ಎಲ್ಲೆಲ್ಲಿಯೂ ಪಸರಿಸುವಂತೆ ಮಾಡಿದವರು. ಇವರಿಗೆ ಪ್ರಸಿಧ್ಧರಾದ ಹಲವಾರು ಶಿಷ್ಯರಿದ್ದಾರೆ. ಅಶೋಕವನದಲ್ಲಿದ್ದ ಸೀತೆಯನ್ನು ಕಂಡು ಮಾತಾಡಿದ ಹನೂಮಂತನಲ್ಲಿ ಆಕೆ ಕೇಳುವ ಮಾತು... " ನನ್ನ ಕಂದ ಹಳ್ಳಿಯ ಹನುಮ... ಚೆನ್ನಾಗಿಹರೆ ಲಕ್ಷ್ಮಣ ದೇವರು... ಶ್ರೀಪತಿ ರಾಘವ ಕ್ಷೇಮದಲ್ಲಿಹರೆ. ತುಪ್ಪ ಪಂಚಾಮೃತ ಅಂದು... ಅಡವಿ ಗಡ್ಡೆಗಳಿಂದು.. ಕರ್ಪೂರ ವೀಳ್ಯ ಅಂದು.. ಕುರುಕು ಇಂದು, ಸುಪ್ಪತ್ತಿಗೆ ಮಂಚ ಅಂದು ... ಹುಲ್ಲು ಹಾಸಿಗೆಯಿಂದು, ಶ್ರೀಪತಿ ರಾಘವ ಕ್ಷೇಮದಲ್ಲಿಹರೆ. ನವವಸ್ತ್ರಗಳು ಅಂದು.. ನಾರಸೀರೆಗಳಿಂದು, ಹೂವಿನ ಗಂಟು ಅಂದು... ಜಡೆಗಳಿಂದು, ಜವ್ವಾಜಿ ಕತ್ತುರಿಯಂದು.. ಭಸಿತ ಧೂಳಿಂದು, ಶ್ರೀವರ ರಾಘವ ಕ್ಷೇಮದಲ್ಲಿಹರೆ. ಕನಕ ರಥಗಳಂದು.. ಕಾಲು ನಡಿಗೆಯಿಂದು, ಘನ ಛತ್ರ ಚಾಮರ ಅಂದು.. ಬಿಸಿಲು ಇಂದು, ಸನಕಾದಿ ಓಲೈಪೆ ಆದಿಕೇಶವ ನಮ್ಮ ಹನುಮೇಶ ರಾಘವ ಕ್ಷೇಮದಲ್ಲಿಹರೆ. ಈ ಪದವನ್ನು ಅದೆಷ್ಟೋ ಪ್ರಸಿದ್ಧ ಗಾಯಕರು ತುಂಬಾ ಚನ್ನಾಗಿಯೇ ಹಾಡಿದ್ದಾರೆ . ಆದರೆ ಕಟಗೇರಿ ದಾಸರು ಹಾಡಿದ್ದನ್ನು ಕೇಳಿದರೆ ಒಂದು ಕ್ಷಣ ನಾವೇ ಅಶೋಕವನದಲ್ಲಿ ಸೀತೆಯ ಸಮ್ಮುಖದಲ್ಲಿ ಕೈ ಜೋಡಿಸಿ ನಿಂತ ಹನೂಮನಾಗಿಬಿಡಬೇಕು. ಇಲ್ಲಿ ಪ್ರಸ್ತುತ ಸುಕನ್ಯೆಯ ಬದುಕೂ ಅದೇ ಅಲ್ಲವೆ.. ಒಂದು ಕ್ಷಣದ ಹಿಂದೆ ಎಲ್ಲವೂ ಇತ್ತು... ಈಗ ಏನೂ ಇಲ್ಲ. ಹಾಗೆಂದು ಯಾರೂ ಒತ್ತಾಯಪೂರ್ವಕವಾಗಿ ಅದನ್ನು ಕಸಿದುಕೊಳ್ಳಲಿಲ್ಲ.. ಸ್ವತಃ ಆಕೆಯೇ ಅದನ್ನು ತೊರೆದಿದ್ದಾಳೆ. ಸಾಮಾನ್ಯರಾದ ನಮಗೆ ಇರುವ ವ್ಯವಸ್ಥೆಯಲ್ಲಿ ಸ್ವಲ್ಪ ಲೋಪವಾದರೆ, ಸಿಗಬೇಕಿದ್ದು ಸಿಗಲು ಒಂದು ಕ್ಷಣ ವಿಳಂಬವಾದರೆ ಅಸಹನೆ.. ಸಿಟ್ಟು ಆವರಿಸಿಬಿಡುತ್ತದೆ. ಆದರೆ ತಾನು ಬದುಕಿನಲ್ಲಿ ಅಳವಡಿಸಿಕೊಂಡು ಬೆಳೆದ ಎಲ್ಲವನ್ನು ಕ್ಷಣಮಾತ್ರದಲ್ಲಿ ಯಾವ ಚಿಂತೆಯೂ ಇಲ್ಲದೆ ತೊರೆದುಬಿಡಲು ಸುಕನ್ಯೆಯಂತವರಿಗೆ, ಸಾವಿತ್ರಿಯಂತವರಿಗೆ, ಶ್ರೀರಾಮನಂತವರಿಗೆ ಮಾತ್ರ ಸಾಧ್ಯ. 🙏🙏 ಸುಕನ್ಯೆ ಆಶ್ರಮ ಜೀವನ ಮುಂದಿನ ಬರಹ..🙏🙏

Friday, August 22, 2025

ಚ್ಯವನ 5

ಚ್ಯವನ ಮಹರ್ಷಿಯ ಮಾತನ್ನ ಕೇಳಿದ ಶರ್ಯಾತಿ ಮಹಾರಾಜನಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವವಾಯಿತು. ಈಗ ತಾನೇ ಹರೆಯಕ್ಕೆ ಕಾಲಿಡುತ್ತಿರುವ ಅತ್ಯಂತ ರೂಪವತಿಯಾದ, ರಾಜಕುಮಾರಿಯಾದ ತನ್ನ ಮಗಳೆಲ್ಲಿ... ಮುದಿತನದಿಂದ ಕೂಡಿದ ದೇಹ ಕೃಷವಾದ, ಸುಕ್ಕುಗಟ್ಟಿದ, ಕಣ್ಣುಗಳನ್ನೂ ಕಳೆದುಕೊಂಡ ಈ ತಪಸ್ವಿಯೆಲ್ಲಿ... ( ಇಲ್ಲಿ ಒಂದು ವಿಷಯ ಗಮನಿಸಬೇಕಾದ್ದು.. ಮಹಾಭಾರತದ ಪ್ರಕಾರ ಚ್ಯವನ ಕೇಳಿದಾಕ್ಷಣ ಶರ್ಯಾತಿ ಸತೋಷದಿಂದಲೇ ತನ್ನ ಮಗಳನ್ನು ಕೊಡಲು ಒಪ್ಪುತ್ತಾನೆ, ಸುಕನ್ಯೆಯೂ ತಂದೆಯ ನಿರ್ಧಾರದಕ್ಕೆ ಅನುಮೋದಿಸುತ್ತಾಳೆ, ಇನ್ನು ದೇವೀ ಭಾಗವತದಲ್ಲಿ ಶರ್ಯಾತಿ ಸುಲಭದಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ) ಈ ಕಾಡಾಡಿಯಾದ ವೃದ್ಧನ ಕೈಗೆ ತನ್ನ ಮಗಳನ್ನು ಒಪ್ಪಿಸಿಕೊಟ್ಟರೆ ಲೋಕ ದೂರದೇ ಇದ್ದೀತೆ... ಪ್ರತಿಯೊಬ್ಬ ತಂದೆ- ತಾಯಿಯರೂ ತಮ್ಮ ಮಕ್ಕಳ ಸುಖಕ್ಕಾಗಿ ಹಂಬಲಿಸುತ್ತಾರೆ... ಹೀಗೆ ಯೋಚಿಸಿದವನು ಚ್ಯವನನಿಗೆ ಏನೂ ಹೇಳದೆ ಮೌನವಾಗಿ ನಮಸ್ಕರಿಸಿ ಪರಿವಾರದೊಂದಿಗೆ ಬಿಡಾರಕ್ಕೆ ಹಿಂತಿರುಗಿ ಬಂದು ಬಿಡುತ್ತಾನೆ. ಬಂದವನೇ ಆಪ್ತರಾದ ಮಂತ್ರಿಗಳು ಮತ್ತು ಪರಿವಾರದೊಂದಿಗೆ ಸಭೆ ಸೇರುತ್ತಾನೆ. ಎಲ್ಲರೂ ಮೌನವಾಗಿ ಅರಸ ಹೇಳಬಹುದಾದ ಮಾತುಗಳಿಗಾಗಿ ಕಾತರದಿಂದ ನಿರೀಕ್ಷಿಸುತ್ತಾರೆ. ಅವರನ್ನು ಉದ್ದೇಶಿಸಿ... "ತಮಗೆ ಮುನಿಗಳು ಹೇಳಿದ ಮಾತುಗಳ ಬಗ್ಗೆ ತಿಳಿದೇ ಇದೆ, ಆದರೆ ಒಬ್ಬ ತಂದೆಯಾಗಿ ಅವರ ಅಪೇಕ್ಷೆಯನ್ನು ಈಡೇರಿಸಲು ನಾನು ಅಸಮರ್ಥನೆಂದೇ ಭಾವಿಸುತ್ತೇನೆ. ನನ್ನ ಮಗಳು ಅರಮನೆಯ ಸುಖೋಪಭೋಗಗಳನ್ನು ಅನುಭವಿಸುತ್ತಾ ಬೆಳೆದವಳು, ಅಂತಹಾ ನನ್ನ ಕುಮಾರಿಯನ್ನು ಆ ವೃದ್ಧ ತಪಸ್ವಿಯ ವಶಕ್ಕೆ ಒಪ್ಪಿಸಲು ನನ್ನ ಮನಸ್ಸು ಸರ್ವತಾ ಒಪ್ಪುತ್ತಿಲ್ಲ. ಅವಳು ಅರಿಯದೇ ಮಾಡಿದ ಕಾರ್ಯದಿಂದ ಅಷ್ಟು ದೊಡ್ಡ ಶಿಕ್ಷೆಯನ್ನು ಅನುಭವಿಸಲಾರಳು. ಹಾಗಾಗಿ ಬಂದ ಅವಘಡವನ್ನು ನಾವು ಹೇಗೆ ಎದುರಿಸಬೇಕೆಂದು ಬದಲು ಮಾರ್ಗವನ್ನು ಯೋಚಿಸಬೇಕಾಗಿದೆ". ಶರ್ಯಾತಿಯ ಈ ಮಾತಿಗೆ ಯಾರೂ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಜೊತೆಗೆ ಎಲ್ಲರ ಆರೋಗ್ಯವೂ ಕ್ಷಣ ಕ್ಷಣಕ್ಕೂ ಗಂಭೀರವಾಗುತಿತ್ತು. ಈ ಕ್ಷಣ ಕ್ಷಣದ ವಿದ್ಯಮಾನವನ್ನೂ ಸುಕನ್ಯೆ ಗಮನಿಸುತಿದ್ದಳು. ಎಲ್ಲರೂ ನಿರುತ್ತರರಾದಾಗ ತಂದೆಯ ಸಮ್ಮಖಕ್ಕೆ ಅವಳೇ ಒಂದು.. " ಅಪ್ಪಾ... ಸಂಪೂರ್ಣವಾದ ನಮ್ಮ ಪರಿವಾರ ನಾ ಮಾಡಿದ ಅಪರಾಧದಿಂದ ಸಂಕಷ್ಟಕ್ಕೆ ಸಿಲುಕಿದೆ, ಯಾವ ತಪ್ಪನ್ನೂ ಮಾಡದ ನೀವು ಹೀಗೆ ಚಿಂತಿಸಿ ಕಣ್ಣೀರು ಸುರಿಸಬೇಕಾದ್ದಿಲ್ಲ, ಅಪ್ಪಾ... ನಾನು ಇಲ್ಲಿಯವರೆಗೆ ಅರಮನೆಯಲ್ಲಿ ನಿಮ್ಮ ಆರೈಕೆಯಲ್ಲಿ ಸಂತೋಷವಾಗಿ ಕಾಲ ಕಳೆದಿದ್ದೇನೆ. ಆದರೆ... ಅದೇ ಸುಖ ಶಾಶ್ವತವಾಗಿರಬೇಕೆಂದು ಎಂದೂ ಯೋಚಿಸಿದವಳಲ್ಲ. ಆ ಮಹರ್ಷಿಗಳು ನಮಗೆ ಸುಲಭದ ದಾರಿಯನ್ನೇ ತೋರಿಸಿದ್ದಾರೆ, ನನ್ನಿಂದಲಾಗಿ ತಮ್ಮ ಕಣ್ಣುಗಳನ್ನೇ ಕಳೆದುಕೊಂಡ ಅವರ ಬದುಕಿಗೆ ಯಾರು ಬೆಳಕಾಗಬೇಕು. ಒಮ್ಮೆ ಯೋಚಿಸಿ ನೋಡಿ.. ಜೀವನಪೂರ್ತಿ ಅವರ ಸೇವೆಯನ್ನು ಮಾಡುವ ಅವಕಾಶ ನನಗೆ ಒದಗಿ ಬಂತಾದರೆ ಅದು ನನ್ನ ಭಾಗ್ಯ ಎಂದು ಭಾವಿಸಿಕೊಳುತ್ತೇನೆ. ಅರಮನೆಯ ಆಡಂಬರದ ಬದುಕಿಗಿಂತ ಅರಣ್ಯದ ಆ ಶಾಂತ ಬದುಕೇ ನನಗೂ ಹಿತವಾಗುತ್ತದೆ. ನಿಮಗೆ ಯಾವ ಅನುಮಾನವೂ ಬೇಡ... ಈ ಕೂಡಲೇ ನನ್ನನ್ನು ಅವರಿಗೆ ವಿವಾಹ ಮಾಡಿ ಒಪ್ಪಿಸುವ ಮನಸ್ಸು ಮಾಡಿ. ಈ ಮಾತನ್ನು ನಾನು ಯಾವ ಒತ್ತಡವೂ ಇಲ್ಲದೇ ಸಮಾಧಾನದಿಂದಲೇ ಆಡುತ್ತಿದ್ದೇನೆ". ಸುಕನ್ಯೆಯಾಡಿದ ಮಾತುಗಳನ್ನು ಕೇಳಿದ ಮಂತ್ರಿಗಳಿಗೂ ಪರಿವಾರಕ್ಕೂ ಸ್ವಲ್ಪ ಸಮಾಧಾನವಾದರೂ... ಅರಸ ಶರ್ಯಾತಿಯ ಮನಸ್ಸು ಅಷ್ಟು ಸುಲಭವಾಗಿ ಒಪ್ಪುವ ಸ್ಥಿತಿಯಲ್ಲಿರಲಿಲ್ಲ. "ಬೇಡ ಮಗಳೇ... ಆ ಜೀವನ ನಿನ್ನಿಂದಾಗದು, ಇದು ಗಂಭೀರವಾದ ವಿಷಯ, ಒಂದು ಕ್ಷಣದಲ್ಲಿ ಯೋಚಿಸಿ ತೀರ್ಮಾನ ಕೈಗೊಳ್ಳುವುದಲ್ಲ... ತಾರುಣ್ಯದಿಂದ ಕೂಡಿದ ದೇಹವು ಸಹಜವಾಗಿಯೇ ಸುಖವನ್ನು ಬಯಸುತ್ತದೆ. ಕೈ ಹಿಡಿದ ಪತಿ ಕಾಲ ಕಾಲಕ್ಕೆ ಅಂತಹ ಸುಖವನ್ನು ನೀಡಲು ಸಮರ್ಥನಾಗಿರಬೇಕು, ಇಲ್ಲದೇ ಹೋದರೆ ಚಂಚಲವಾದ ಮನಸ್ಸು ದಾರಿ ತಪ್ಪಿಸುತ್ತದೆ. ಈ ಹಿಂದೆ ಗೌತಮ ಮಹರ್ಷಿಯ ಪತ್ನಿಯಾದ ಅಹಲ್ಯೆ ಶಾಪಕ್ಕೆ ಒಳಗಾದದ್ದು ನೀ ಕೇಳಿ ಬಲ್ಲೆ ( ಗೌತಮ ಅಹಲ್ಯೆಯರ ದಾಂಪತ್ಯ ಆ ಕಾಲದಲ್ಲೇ ಮುರಿದು ಹೋಗಿತ್ತು ) ಹಾಗಾಗಿ ಬೇಡ ಮಗಳೇ ನಾವು ಬೇರೆ ಏನಾದರೂ ಮಾರ್ಗವನ್ನು ಅರಸೋಣ". ಎಂದು ಹೇಳುತ್ತಾನೆ. ತಂದೆಯ ಮಾತನ್ನು ಕೇಳಿದ ಸುಕನ್ಯೆ .. " ಅಪ್ಪಾ... ನೀವಾಡುವ ಮಾತು ಸಾಂಧರ್ಭಿಕವಾಗಿ ಸರಿಯಾದರೂ ನನ್ನ ವಿಚಾರದಲ್ಲಿ ಹಾಗೇ ಯೋಚಿಸಕೂಡದು, ನಾನು ಇಲ್ಲಿ ಅನುಭವಿಸುತ್ತಿರುವ ಎಲ್ಲ ಸುಖಗಳನ್ನು ಕ್ಷಣಮಾತ್ರದಲ್ಲಿ ತೊರೆಯಲು ಸಿದ್ಧಳಿದ್ದೇನೆ. ಆ ತಪಸ್ವಿ ಯೊಂದಿಗೆ ಜೀವನವನ್ನು ನಡೆಸುವೆ ಎಂಬ ಭರವಸೆಯೂ ನನಗಿದೆ. ನಿಮ್ಮ ಹೆಸರಿಗೆ, ನಾನು ಜನಿಸಿದ ವಂಶಕ್ಕೆ ಕಳಂಕ ತರುವ ಕಾರ್ಯವನ್ನು ಎಂದಿಗೂ ಮಾಡಲಾರೆ, ಹಾಗಾಗಿ ನನ್ನ ಮೇಲೆ ನಂಬಿಕೆಯಿಟ್ಟು ಮುಂದಾಗಬೇಕಾದ ಕಾರ್ಯದ ಬಗ್ಗೆ ಮನಮಾಡಿ". ಮಗಳ ನಿರ್ಧಾರದ ಮಾತನ್ನು ಕೇಳಿದ ಶರ್ಯಾತಿ ಮಹಾರಾಜ ತಾನೂ ದೃಡವಾದ ಮನಸ್ಸಿನಿಂದ... "ಆಯಿತು ನಿನ್ನ ಯೋಚನೆ ಇದೇ ಆದರೆ ಮತ್ತೆ ನಾನೇನನ್ನೂ ಆಡುವ ಸ್ಥಿತಿಯಲ್ಲಿಲ್ಲ, ಹಾಗೇ ಆಗಲಿ... ಎಲ್ಲರೂ ಮಹರ್ಷಿಗಳ ಬಳಿ ಹೋಗೋಣ ಬನ್ನಿ" ಎಂದು ಹೇಳಿ ಮಗಳನ್ನು, ರಾಣೀವಾಸದವರನ್ನು, ಮಂತ್ರಿ ಪರಿವಾರವನ್ನೂ ಕರೆದುಕೊಂಡು ತಪಸ್ವಿಯ ಸಂದರ್ಶನಕ್ಕಾಗಿ ಹೊರಟ🙏 ಮುಂದುವರಿಯುವುದು...🙏

Wednesday, August 20, 2025

ಚ್ಯವನ 4

ರಾಜಪರಿವಾರ ಕ್ಷಣ ಕ್ಷಣಕ್ಕೂ ಪರಿತಪಿಸುವ ಸ್ಥಿತಿಗೆ ತಲುಪಿತು. ಶರ್ಯಾತಿ ಮಹಾರಾಜನಿಗೆ ಆಗ ಹೊಳೆದದ್ದು... "ಈ ಪ್ರದೇಶದಲ್ಲಿ ಚ್ಯವನ ಎಂಬ ಮಹರ್ಷಿ ಬಹಳ ಕಾಲದಿಂದ ತಪವನ್ನು ಆಚರಿಸುತ್ತಾ ಇದ್ದಾನೆ ಎಂದು ಕೇಳಿ ಬಲ್ಲೆ.. ನಿಮ್ಮಲ್ಲಿ ಯಾರಾದರೂ ಅವನ ತಪಸ್ಸಿಗೆ ಭಂಗ ತರುವ ಯಾವ ಕಾರ್ಯವನ್ನಾದರೂ ಮಾಡಿರುವಿರೇ.. ''? . ಅದು ಕೇವಲ ಪ್ರಶ್ನೆ ಮಾತ್ರವಲ್ಲ.. ವಿಚಾರಣೆಯಾಗಿತ್ತು. ಮೊದಲೇ ಹೊಟ್ಟೆ ಉಬ್ಬರಿಸಿ ಪರದಾಡುತಿದ್ದ ಅವರಿಗೆ ರಾಜನ ವಿಚಾರಣೆಯ ಹಿಂಸೆ ಬೇರೆ.. ಆದರೆ ಯಾರಿಂದಲೂ ಪೂರಕವಾದ ಉತ್ತರ ಬರಲಿಲ್ಲ. ಶರ್ಯಾತಿ ಮಹಾರಾಜನು ಬಳಿಕ ತನ್ನ ಅರಮನೆಯ ಬಂಧುವರ್ಗದವರನ್ನೂ ಉದ್ದೇಶಿಸಿ ಇದೇ ಪ್ರಶ್ನೆಯನ್ನು ಕೇಳಿದನು. ಯಾರಿಂದಲೂ ಸರಿಯಾದ ಉತ್ತರ ಬರಲಿಲ್ಲ. ತಮ್ಮನ್ನು ಅನುಸರಿಸಿ ಬಂದ ಸೇವಕರು, ಸೈನಿಕರು, ಅರಮನೆಯ ಪರಿವಾರದವರು ಬಂಧು ಬಾಂಧವರು ಎಲ್ಲರೂ ಹಿಂಸೆಯನ್ನು ಅನುಭವಿಸುತ್ತಿರುವುದನ್ನು ನೋಡಿದ ಅರಸುಕುಮಾರಿ ಸುಕನ್ಯೆ ಧ್ಯೆರ್ಯವನ್ನು ತಂದುಕೊಂಡು ತಂದೆಯ ಬಳಿ ಬಂದು ಅರಣ್ಯದಲ್ಲಿ ನಡೆದ ವಿಚಾರವನ್ನು ಹೇಳಿದಳು. "ಹುತ್ತದಲ್ಲಿ ಹೊಳೆಯುತ್ತಿದ್ದ ವಸ್ತು ಯಾವುದೆಂದು ನಾನರಿಯೆ ... ಆದರೆ ನಾನು ಮುಳ್ಳಿನಿಂದ ಚುಚ್ಚಿದ ಕೂಡಲೇ ಏನೋ ಕೂಗಿದ ಅನುಭವವಾಯಿತು. ನಾನು ಚುಚ್ಚಿದ ಸ್ಥಳದಿಂದ ರಕ್ತ ಸುರಿಯುತ್ತಿರುವುದನ್ನೂ ನೋಡಿ ನಾನು ನೋಡಿ ಭಯದಿಂದ ಓಡಿ ಬಂದೆ". ಮಗಳಾಡಿದ ಮಾತನ್ನು ಕೇಳಿ ಅರಸನಿಗೆ ಇದು ಖಂಡಿತವಾಗಿಯೂ ಮಹರ್ಷಿಗೆ ಮಾಡಿದ ಅಪಚಾರ ಎಂದು ನಿರ್ಧರಿಸಿ, ಮಗಳನ್ನು ಮತ್ತು ಕೆಲವು ಸೇವಕರನ್ನು ಜೊತೆಗಿಟ್ಟುಕೊಂಡು ನೇರವಾಗಿ ಅರಣ್ಯದಲ್ಲಿ ಸುಕನ್ಯೆ ಹೇಳಿದ ಹುತ್ತದ ಬಳಿಗೆ ಬಂದ. ಹುತ್ತವನ್ನು ನಿಧಾನವಾಗಿ ಒಡೆಯಲು ಸೇವಕರಿಗೆ ಸೂಚನೆಯನ್ನು ಕೊಡುತ್ತಾನೆ. ಸುತ್ತಲೂ ಆವರಿಸಿದ್ದ ಹುತ್ತವನ್ನು ಅಗೆದು ತೆಗೆದಾಗ ಅಲ್ಲಿ ಕಣ್ಣಿನಿಂದ ರಕ್ತ ಒಸರುತ್ತಿರುವ ಸ್ಥಿತಿಯಲ್ಲಿ ಕುಳಿತ ವೃಧ್ಧನಾದ ಚ್ಯವನ ಮಹರ್ಷಿ ಕಾಣಿಸುತ್ತಾನೆ. ಮಹರ್ಷಿಯ ಸ್ಥಿತಿಯನ್ನು ನೋಡುತ್ತಿದ್ದಂತೆ ಅರಸನ ಮುಖ ಕಳೆಗುಂದುತ್ತದೆ. ಭಯದಿಂದ ನಡುಗುತ್ತಾ ಮಹರ್ಷಿಗಳಿಗೆ ನಮಸ್ಕಾರ ಮಾಡಿ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ಮತ್ತು ನಡೆದ ವಿಚಾರವನ್ನು ನಿವೇದಿಸಿಕೊಂಡು .." ಸ್ವಾಮೀ ತಾವು ಬ್ರಹ್ಮಜ್ಞಾನಿಗಳು ನನ್ನ ಮಗಳಾದರೋ ಏನನ್ನೂ ಅರಿಯದವಳು.. ತಪಸ್ವಿಗಳಾದ ತಾವು ಕೋಪವನ್ನೂ ಜಯಿಸಿದವರು, ಹಾಗಾಗಿ ನನ್ನ ಪುತ್ರಿಯಿಂದಾದ ಅಪಚಾರವನ್ನು ಮನ್ನಿಸಿ ನಮ್ಮ ಮೇಲೆ ಕೃಪೆ ತೋರಿಸಬೇಕು". ಎಂದು ಹೇಳಿ ಕೈ ಜೋಡಿಸಿ ನಿಲ್ಲುತ್ತಾನೆ. ಅರಸನಾಡಿದ ಮಾತುಗಳನ್ನು ಕೇಳಿದ ಚ್ಯವನ ವಹರ್ಷಿ.. " ಅಯ್ಯಾ ಮಹಾರಾಜಾ.. ನಾನೂ ಯಾವತ್ತೂ ಮಾಡದೇ ಇರುವ ತಪ್ಪಿಗೆ ಈ ಶಿಕ್ಷೆ ಯಾಕೆ... ಹಾಗಿದ್ದರೂ ನಾನು ಯಾರನ್ನೂ ಶಪಿಸಲಿಲ್ಲ, ಆದರೆ ತಪ್ಪನ್ನೇ ಮಾಡದೇ ಇರುವ ನನಗೆ ಹಿಂಸೆಯನ್ನು ಕೊಟ್ಟ ಕಾರಣದಿಂದ ನೀವು ಬಳಲುವ ಸ್ಥಿತಿ ಬಂದಿದೆ ಅಷ್ಟೇ.. ಆದರೂ ಅದರಿಂದಲೂ ನಿಮ್ಮನ್ನು ಮುಕ್ತರನ್ನಾಗಿಸ ಬಲ್ಲೆ .. ಆದರೆ ವೃಧ್ಧನಾದ ನಾನು ನನ್ನ ಕಣ್ಣುಗಳನ್ನೂ ಕಳೆದುಕೊಂಡಮೇಲೆ ಮುಂದೆ ಜೀವನ ಹೇಗೆ.. ನಾನು ತಪಸ್ಸಾಚರಣೆ ಮಾಡುವಾಗ ನನ್ನನ್ನು ನೋಡಿಕೊಳ್ಳುವರು ಯಾರು.:'' ಮುನಿಯ ಮಾತು ಮುಗಿಯುವ ಮೊದಲೆ ಅರಸನಾಡಿದ.. " ಸ್ವಾಮೀ ನಿಮ್ಮ ಸೇವೆಗೆ ಬೇಕಾಗಿ ನನ್ನ ಸೇವಕರನ್ನು ನಿಯೋಜಿಸುತ್ತೇನೆ.. ಕಾಲ ಕಾಲಕ್ಕೆ ನಿಮಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಸುತ್ತೇನೆ". ಶರ್ಯಾತಿಯ ಮಾತನ್ನು ಕೇಳಿದ ಚ್ಯವನ ಮಹರ್ಷಿ... "ಅರಸಾ ನಿನ್ನಿಂದ ನಿಯೋಜಿತ ಸೇವಕರು ನನ್ನ ಸೇವೆಯಲ್ಲಿದ್ದರೆ ಏನು ಪ್ರಯೋಜನ, ಹೇಳಿದ ಕೆಲಸವನ್ನಷ್ಟೇ ಮಾಡುವವರಲ್ಲ ನನಗೆ ಈಗ ಬೇಕಾದವರು, ಕಳೆದು ಹೋದ ನನ್ನ ಕಣ್ಣುಗಳೇ ಆಗಿ ನನ್ನನ್ನು ನೋಡಿಕೊಳ್ಳುವವರು ಬೇಕು. ಹೇಳದೆಯೂ ಕಾಲಕಾಲಕ್ಕೆ ಏನಾಗಬೇಕೆಂದು ಅರಿತು ವರ್ತಿಸುವವರು ಬೇಕು. ಹಾಗಾಗಿ ನನ್ನ ಈ ಸ್ಥಿತಿಗೆ ಕಾರಣಳಾದ ನಿನ್ನ ಪುತ್ರಿಯನ್ನೇ ನನ್ನ ಸೇವೆಗಾಗಿ ನನಗೆ ಮದುವೆ ಮಾಡಿಕೊಟ್ಟರೆ ಆದೀತು, ಅವಳ ಸೇವೆಯಿಂದ ನಾನು ಸಮಾಧಾನ ಹೊಂದಬಲ್ಲೆ.. ಜೊತೆಗೆ ನಿಮಗೆ ಒದಗಿದ ಸಂಕಷ್ಟವನ್ನೂ ಪರಿಹರಿಸಬಲ್ಲೆ". 🙏🙏 ಮುಂದುವರಿಯುವುದು🙏

Friday, August 15, 2025

ಚ್ಯವನ 3

ಭೃಗು ಪುತ್ರನಾದ ಚ್ಯವನನು ಬೆಳೆಯುತ್ತಾ ವೇದಗಳನ್ನಭ್ಯಾಸ ಮಾಡಿ, ಧ್ಯಾನ ತಪಸ್ಸನ್ನಾಚರಿಸುತ್ತ ಕಾಲವನ್ನು ಕಳೆಯುತ್ತಿದ್ದನು. ಹೀಗೆ ಒಮ್ಮೆ ನರ್ಮದಾ ತೀರದ ವೈಢೂರ್ಯ ಪರ್ವತದ ತಪ್ಪಲಿನಲ್ಲಿ ಒಂದು ಪ್ರಶಸ್ತವಾದ ಸ್ಥಳದಲ್ಲಿ ತಪಸ್ಸನ್ನಾಚರಿಸುತ್ತ ಕುಳಿತನು. ಬಹುಕಾಲ ಸಂದುಹೋಯಿತು, ಏಕಾಗ್ರಚಿತ್ತನಾಗಿದ್ದ ಚ್ಯವನನಿಗೆ ಕಾಲದ ಪರಿವೆಯೇ ಇರಲಿಲ್ಲ. ಅವನು ಕುಳಿತಿದ್ದ ಸ್ಥಳದ ಸುತ್ತಲೂ ಗಿಡಗಳು ಹುಟ್ಟಿ ಬೆಳೆದು ಹೆಮ್ಮರಗಳಾದವು. ಅವನ ದೇಹವನ್ನು ಬಳಸಿ ಹುತ್ತವೊಂದು ಬೆಳೆದು ನಿಂತಿತು. ಇದಾವುದರ ಪರಿವೆಯೂ ಅವನಿಗಿರಲಿಲ್ಲ. ಯೋಗ ಬಲದಿಂದ ಅವನ ದೇಹಕ್ಕೆ ಆಹಾರ ಬೇಕೆನಿಸಲಿಲ್ಲ. ವೈವಸ್ವತ ಮನುವಿಗೆ ಒಂಬತ್ತು ಜನ ಮಕ್ಕಳು, ಅವರಲ್ಲಿ ಶರ್ಯಾತಿ ಒಬ್ಬ, ಶರ್ಯಾತಿಗೆ ನಾಲ್ಕು ಸಾವಿರ ಜನ ಪತ್ನಿಯರಾದರೂ ಮಕ್ಕಳು ಮಾತ್ರ ಎರಡು ಜನ. ಪುತ್ರನ ಹೆಸರು "ಆನರ್ತ " "ಸುಕನ್ಯಾ" ಎಂಬ ಪುತ್ರಿ. ಪ್ರಾಯದಿಂದ ಶೋಭಿಸುತ್ತಿದ್ದ ಸುಕನ್ಯೆ ಮನ್ಮಥನರಸಿಯಾದ ರತಿಗೂ ಮೀರಿದ ಸೌಂದರ್ಯದಿಂದ ಕಂಗೊಳಿಸುತಿದ್ದಳು. ಒಂದು ದಿನ ಶರ್ಯಾತಿ ಮಹಾರಾಜ ತನ್ನ ಪರಿವಾರದೊಂದಿಗೆ ವಿಹಾರಾರ್ಥವಾಗಿ ಚ್ಯವನ ತಪಸ್ಸನ್ನು ಆಚರಿಸುತ್ತಿದ್ದ ಪ್ರದೇಶಕ್ಕೆ ಬಂದ. ಅರಸನ ಪರಿವಾರಕ್ಕೆ ನರ್ಮದಾ ತೀರದಲ್ಲಿ ವ್ಯವಸ್ಥಿತವಾದ ಬಿಡಾರಗಳನ್ನು ನಿರ್ಮಿಸಲಾಯಿತು. ಅರಮನೆಯ ಸ್ತ್ರೀಯರು ಸಂತೋಷದಿಂದ ಜಲಕೇಳಿ., ವನಕೇಳಿ ಎಂದು ತಮ್ಮಿಷ್ಟದಂತೆ ಆನಂದಿಸತೊಡಗಿದರು. ಪರಿವಾರದಲ್ಲಿದ್ದ ಸುಕನ್ಯೆಯೂ ಸಖಿಯರನ್ನು ಕೂಡಿಕೊಂಡು ನಲಿಯುತ್ತಾ ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದಳು. ಮುಂದೆ ಸಾಗುತ್ತಾ ಅವಳು ಏಕಾಂಗಿಯಾಗಿ ಒಂದು ವೃಕ್ಷದ ನೆರಳಿನಲ್ಲಿ ಆಟವಾಡುತ್ತಾ ಕುಳಿತಳು, ಅವಳು ಕುಳಿತ ಸ್ಥಳದ ಎದುರಿನಲ್ಲಿಯೇ ಎತ್ತರಕ್ಕೆ ಬೆಳೆದ ಹುತ್ತ... ಅದು ಚ್ಯವನನನ್ನು ಆವರಿಸಿ ಬೆಳೆದಿದ್ದು. ಹುತ್ತದ ಎದುರು ಕುಳಿತಿದ್ದ ಸುಕನ್ಯೆಯ ಗಮನ ಹುತ್ತದತ್ತ ಹೋಯಿತು. ಅಲ್ಲಿ ಯಾವುದೋ ಪ್ರಕಾಶಮಾನವಾದ ಮಣಿಗಳೆರಡು ಹುತ್ತದ ಮಧ್ಯದಲ್ಲಿ ಹೊಳೆಯುತ್ತಿರುವದನ್ನು ನೋಡಿದಳು. ಅದೇ ಕ್ಷಣದಲ್ಲಿ ತಪೋಮಗ್ನನಾಗಿದ್ದ ಚ್ಯವನನಿಗೂ ಎಚ್ಚರವಾಗಿತ್ತು. ತನ್ನನ್ನು ಆವರಿಸಿದ ಆ ಹುತ್ತದ ಒಳಗಿನಿಂದಲೇ ಸುಕನ್ಯೆಯನ್ನು ಕರೆದು ಮಾತನಾಡಿದ.. ಆದರೆ ಆಹಾರವಿಲ್ಲದೆ ಕೃಶವಾಗಿದ್ದ ಅವನ ಬಾಯಿಯಿಂದ ಹೊರಟ ಧ್ವನಿ ಸುಕನ್ಯೆಗೆ ಕೇಳಿಸಲೇ ಇಲ್ಲ. ಅವಳು ಅಲ್ಲಿ ಹೊಳೆಯುತ್ತಿರುವ ವಸ್ತುವೇನೆಂದು ತಿಳಿಯಬೇಕೆಂಬ ಕುತೂಹಲದಿಂದ ಒಂದು ಮುಳನ್ನು ತೆಗೆದು ಚುಚ್ಚಿದಳು, ತನ್ನ ಕಣ್ಣುಗಳಿಗೇ ಆಕೆ ಚುಚ್ಚಿದ ಕಾರಣದಿಂದ ಮಹರ್ಷಿಗೆ ಸಹಿಸಲಾರದ ನೋವಾಯಿತು. ಕಣ್ಣುಗಳಿಂದ ಧಾರಾಕಾರವಾಗಿ ರಕ್ತ ಸುರಿಯತೊಡಗಿತು. ಇದರಿಂದ ಬೆದರಿದ ಸುಕನ್ಯೆ ಅಲ್ಲಿಂದ ಹೊರಟುಬಿಟ್ಟಳು. ಚ್ಯವನನಿಗೆ ನೋವಿನ ಜೊತೆಯಲ್ಲಿಯೇ ಸಿಟ್ಟೂ ಬಂತು, ಅದರ ಪರಿಣಾಮವಾಗಿಯೇ ಅಲ್ಲಿ ಬಿಡಾರಗಳನ್ನು ನಿರ್ಮಿಸಿಕೊಂಡಿದ್ದ ಶರ್ಯಾತಿಯ ಪರಿವಾರ ಬಳಲಿತು. ಚ್ಯವನನ ಕೋಪ ರಾಜ ಪರಿವಾರದವರ ಮಲ-ಮೂತ್ರವನ್ನು ನಿರ್ಭಂಧಿಸಿ ಬಿಟ್ಟಿತ್ತು. ಎಲ್ಲರ ಹೊಟ್ಟೆಯೂ ಉಬ್ಬರಿಸಿತು ಯಾವ ಔಷಧವೂ ಪರಿಣಾಮ ಬೀರಲಿಲ್ಲ, ರಾಜ ವೈದ್ಯರು ರೋಗದ ಕಾರಣವೇನೆಂದು ತಿಳಿಯದೆ ಕೈಚೆಲ್ಲಿದರು. 🙏 ಮುಂದುವರಿಯುವುದು.🙏

Wednesday, August 13, 2025

ಚ್ಯವನ 2

ಪುಲೋಮೆ ಶಿಶುವನ್ನು ಎತ್ತಿಕೊಂಡು ಆಶ್ರಮಕ್ಕೆ ಬರುತ್ತಿರುವಾಗ ಸಂಧ್ಯಾ ಕಾರ್ಯಗಳನ್ನು ಮುಗಿಸಿ ಹಿಂತಿರುಗುತ್ತಿದ್ದ ಭೃಗು ನೋಡುತ್ತಾನೆ. ಕಣ್ಣೀರು ಸುರಿಸುತ್ತಿದ್ದ ಪುಲೋಮೆಯಿಂದ ನಡೆದ ಘಟನೆಯನ್ನು ತಿಳಿದು ಶೀಘ್ರಕೋಪಿಯಾದ ಮಹರ್ಷಿ ... " ಈ ಆಶ್ರಮದಲ್ಲಿ ನೀನಿರುವ ವರ್ತಮಾನವಾದರೂ ದುಷ್ಟ ರಾಕ್ಷಸನಿಗೆ ತಿಳಿದ ಬಗೆ ಹೇಗೆ ... ಇದರ ಹಿಂದೆ ಬೇರಾರದೋ ಸಹಕಾರ ಇದ್ದಂತೆ ಭಾಸವಾಗುತ್ತಿದೆ " ಎಂದು ಹೇಳಿದಾಗ ಪುಲೋಮೆ ಅಗ್ನಿಯತ್ತ ಕೈಮಾಡಿ ತೋರಿಸುತ್ತಾಳೆ. ಇದರಿಂದ ಮತ್ತಷ್ಟು ಕ್ರೋಧಗೊಂಡ ಭೃಗು ಅಗ್ನಿಯನ್ನು ನೋಡುತ್ತಾ.." ಉಚಿತ ಅನುಚಿತಗಳ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ಅರಿವಿರಬೇಕಾಗಿದ್ದ ನೀನೇ ಈ ಅನುಚಿತ ಕಾರ್ಯಕ್ಕೆ ಸಹಕಾರ ನೀಡಿದೆ ಎಂದಾದರೆ ಇದೋ.. ಇಂದಿನಿಂದ ನೀನು ಸರ್ವಭಕ್ಷಕನಾಗು " ಎಂದು ಶಪಿಸಿಬಿಟ್ಟ. ಭೃಗು ಮಹರ್ಷಿಯ ಶಾಪವಾಕ್ಯವನ್ನು ಕೇಳಿದ ಅಗ್ನಿಗೂ ಸಿಟ್ಟು ಬಂತು.. " ಅಯ್ಯಾ ಮಹರ್ಷಿ.. ಹವ್ಯವಾಹನನಾದ ನಾನು ಯಾವುದು ಸತ್ಯ ಯಾವುದು ವಾಸ್ತವ ಎಂಬ ಕಲ್ಪನೆಯಿದ್ದೇ ವರ್ತಿಸಿದ್ದೇನೆ. ನಾನು ಯಾವ ಕ್ಷಣದಲ್ಲಿಯೂ ಸತ್ಯವನ್ನು ಮರೆಮಾಚಲಿಲ್ಲ, ಇದರ ಅರಿವಿಲ್ಲದೆ ಅಥವಾ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡದೆ ನೀನು ಶಾಪವನ್ನು ಕೊಟ್ಟೆ... ವರವನ್ನು ಅನುಗ್ರಹಿಸುವ ಶಾಪವನ್ನು ನೀಡಬಹುದಾದ ಸ್ಥಾನದಲ್ಲಿ ನಾನೂ ಇದ್ದೇನೆ. ಬಯಸಿದರೆ ನಾನೂ ನಿನಗೆ ಘೋರವಾದ ಶಾಪವನ್ನೇ ನೀಡಬಲ್ಲೆ ಆದರೆ.. ನೀನೊಬ್ಬ ಬ್ರಾಹ್ಮಣ ಎಂಬುದನ್ನು ನಾನು ಮರೆಯಲಾರೆ. ಯಜ್ಞ - ಯಾಗಗಳನ್ನು ಮಾಡಿ ಆ ಮೂಲಕ ದೇವತೆಗಳಿಗೆ ಹವಿರ್ಭೋಜನವನ್ನು ಮಾಡಿಸುವ ಬ್ರಾಹ್ಮಣರ ಬಗ್ಗೆ ನನಗೆ ಅಪಾರವಾದ ಗೌರವವಿದೆ ಹಾಗಾಗಿ ನಿನ್ನನ್ನ ನಾನು ಶಪಿಸಲಾರೆ". ಹೀಗೆ ಹೇಳಿದ ಅಗ್ನಿದೇವ ಭೃಗು ಮಹರ್ಷಿಯ ಯಜ್ಞಶಾಲೆಯಿಂದ ನಿರ್ಗಮಿಸಿ ಬಿಟ್ಟ. ಕೇವಲ ಭೃಗುವಿನ ಆಲಯದಿಂದ ಮಾತ್ರವಲ್ಲ ... ಲೋಕದ ಎಲ್ಲಾ ಕಡೆಯಲ್ಲಿಯೂ ತನ್ನ ಅಸ್ತಿತ್ವವನ್ನು ಮರೆಯಾಗಿಸಿ ಯಾರಿಗೂ ಕಾಣಿಸದಂತೆ ಮರೆಯಾದ. ಭೃಗು ಶಾಪದಿಂದ ಅಗ್ನಿದೇವ ಮರೆಯಾದ ಮೇಲೆ ಪ್ರಪಂಚದ ಯಾವ ಮೂಲೆಯಲ್ಲಿಯೂ ಅಗ್ನಿ ಪ್ರಜ್ವಲಿಸಲೇ ಇಲ್ಲ.. ಯಜ್ಞ - ಯಾಗಗಳು ನಡೆಯದೇ ಹೋಯಿತು. ದೇವತೆಗಳಿಗೆ ಹವಿಸ್ಸು ಸಿಗದೇ ಹೋಯಿತು. ಆತಂಕಗೊಂಡ ಋಷಿಮುನಿಗಳು ನೇರವಾಗಿ ಇಂದ್ರ ಸಭೆಗೇ ಧಾವಿಸಿದರು. ಇಂದ್ರಾದಿ ದೇವತೆಗಳ ಸಮ್ಮುಖದಲ್ಲಿ ತಮಗಾದ ತೊಂದರೆಯನ್ನು ಹೇಳಿ .. ಇನ್ನು ಮುಂದೆ ದೇವತೆಗಳಾದ ನಿಮಗೆ ಹವಿಸ್ಸನ್ನು ನೀಡುವುದೂ ತಮ್ಮಿಂದ ಸಾಧ್ಯವಾಗದು ಹಾಗಾಗಿ ಸೂಕ್ತ ಮಾರ್ಗದರ್ಶನ ತಮ್ಮಿಂದಲೇ ಆಗಬೇಕೆಂದು ಕೇಳಿಕೊಂಡರು. ಇಂದ್ರಾದಿ ದೇವತೆಗಳಿಗೂ ಚಿಂತೆ ಭಾಧಿಸಿತು... ಮುಂದೇನು ಎಂದು ನಿರ್ಣಯಿಸಲಾಗದೆ ಋಷಿಗಳನ್ನು ಜೊತೆಗೂಡಿಕೊಂಡು ಬ್ರಹ್ಮದೇವರ ಬಳಿಗೆ ಹೋದರು. ಬ್ರಹ್ಮದೇವನಲ್ಲಿ ಅಗ್ನಿಗೆ ಭೃಗು ನೀಡಿದ ಶಾಪದ ವೃತ್ತಾಂತವನ್ನು ವಿವರಿಸಿ ಅಗ್ನಿಯ ಅನುಪಸ್ಥಿತಿಯಿಂದ ಪ್ರಪಂಚಕ್ಕೆ ಆಗುತ್ತಿರುವ ತೊಂದರೆಯನ್ನು ವಿವರಿಸಿದರು. ದೇವತೆಗಳ ಮಾತನ್ನು ಕೇಳಿದ ಬ್ರಹ್ಮದೇವ ತನ್ನ ಸಂಕಲ್ಪಮಾತ್ರದಿಂದ ಮರೆಯಾಗಿದ್ದ ಅಗ್ನಿಯನ್ನು ಕರೆಸಿಕೊಳ್ಳುತ್ತಾನೆ. ಸಮ್ಮುಖದಲ್ಲಿ ನಿಂತ ಅಗ್ನಿಯನ್ನು ಕುರಿತು ಶಾಂತ ಭಾವದಿಂದ.. ಓ ಅಗ್ನಿಯೇ .. ಪ್ರಪಂಚದಲ್ಲಿ ಬೇರೆ ಬೇರೆ ಕಡೆಯಲ್ಲಿ ಬೇರೆ ಬೇರೆ ಕಾರ್ಯಗಳಲ್ಲಿ ನಿನ್ನ ಉಪಸ್ಥಿತಿ ಇದ್ದೇ ಇರಬೇಕು... ಲೋಕದಲ್ಲಿ ನಡೆಯುವ ಕರ್ಮಗಳಿಗೆ ನೀನು ಆಧಾರನಾಗಿರಬೇಕಾದವ, ನಿನ್ನ ಉಪಸ್ಥಿತಿಯಲ್ಲಿ ಲೋಕದ ಜೀವನ ತೊಡಕುಗಳಿಲ್ಲದೇ ನಡೆಯುವುದು. ಯಜ್ಞಯಾಗಗಳಿಂದ ಹವಿಸ್ಸನ್ನು ಸ್ವೀಕರಿಸುವ ನೀನು ಅದನ್ನು ದೇವತೆಗಳಿಗೆ ತಲುಪಿಸುವವ.. ದೇವತೆಗಳಿಗೊ ಪಿತೃಗಳಿಗೊ ಸೇರಬೇಕಾದ ಹವಿಸ್ಸು ತಲುಪಬೇಕಾದ್ದು ನಿನ್ನಿಂದಲೇ ಅಲ್ಲವೇ... ನಿಜವಾಗಿ ಲೋಕವನ್ನು ಸ್ವಚ್ಛಗೊಳಿಸುವವನೂ ನೀನೇ..ನೀನಿಲ್ಲದೆ ಲೋಕದ ಯಾವ ಕಾರ್ಯವೂ ನೆರವೇರಲಾರದು. ಎಲ್ಲ ಜೀವಿಗಳ ದೇಹದಲ್ಲೂ ನೆಲೆಸಿರುವ ನೀನು ಜೀವಿಗಳ ಚೇತನಕ್ಕೆ ಕಾರಣನಾದವ.. ಅಂತಹ ನೀನು ಸರ್ವಭಕ್ಷಕನಾಗಬೇಕಾದ್ದಿಲ್ಲ, ಹಾಗೆಂದು ಭೃಗು ಕೊಟ್ಟ ಶಾಪ ವ್ಯರ್ಥವಾಗುವುದೂ ಇಲ್ಲ. ಕೇವಲ ನಿನ್ನ ಅಪಾನಜ್ವಾಲೆಗಳು ಆ ಕೆಲಸವನ್ನು ಮಾಡಲಿ. ಅಲ್ಲದೇ ಕೇವಲ ಮಾಂಸಭಕ್ಷಣವನ್ನು ಮಾಡುವ ಪ್ರಾಣಿಗಳ ದೇಹದಲ್ಲಿರುವ ನಿನ್ನ ಸ್ವರೂಪ ಸರ್ವಭಕ್ಷಕವಾಗಿರಲಿ.. ಅಷ್ಟಕ್ಕೂ ಭೃಗು ಮಹರ್ಷಿಯ ದೇಹದಲ್ಲೂ ನಿನ್ನ ಸ್ವರೂಪ ಇದೆ ಎಂದಾದರೆ ಅವನಾಡುವ ಶಾಪವಾಕ್ಯದಲ್ಲಿ ಕೂಡ ನಿನ್ನ ಪ್ರೇರಣೆ ಇದೆ ಎಂದೇ ಭಾವಿಸಬೇಕಾಗುತ್ತದೆ. ಹಾಗಿರುವಾಗ ಅವನಾಡಿದ ಮಾತು ಸುಳ್ಳಾದರೆ ಜೀವಿಗಳಲ್ಲಿರುವ ನಿನ್ನ ಅಸ್ಥಿತ್ವ ಕೂಡ ಸುಳ್ಳು ಎಂದಾಗುವುದಿಲ್ಲವೇ... ಹಾಗಾಗಿ ಬೇಸರಿಸದೇ ನಿನ್ನ ಕಾರ್ಯದಲ್ಲಿ ನೀನು ತೊಡಗಿಕೋ". ಹೀಗೆಂದು ಹೇಳಿದ ಬ್ರಹ್ಮ ವಾಕ್ಕವನ್ನು ಕೇಳಿದ ಅಗ್ನಿ ಸಮಾಧಾನದಿಂದ ತನ್ನ ಕರ್ತವ್ಯವನ್ನು ಮಾಡಲು ಒಪ್ಪಿ, ಬ್ರಹ್ಮದೇವರಿಗೆ ವಂದಿಸಿ ಮತ್ತೆ ಲೋಕಗಳಲ್ಲಿ ಪ್ರಕಟಗೊಳ್ಳುತ್ತಾನೆ. ದೇವತೆಗಳೂ ಋಷಿಮುನಿಗಳೂ ಸಂತೋಷಗೊಂಡು ತಮ್ಮ ತಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತಾರೆ.🙏🙏 ಮುಂದುವರಿಯುತ್ತದೆ..🙏

Tuesday, August 12, 2025

ಚ್ಯವನ 1

ಈ ಹಿಂದೆ ನಾನು ಸರ್ಪಯಾಗದ ಬಗ್ಗೆ ಬರೆಯುವಾಗ ರುರು ಮತ್ತು ಪ್ರಮುಧ್ವರೆಯರ ಕಥೆಯನ್ನು ವಿವರಿಸುವಾಗ ಚ್ಯವನನ ಬಗ್ಗೆ ಬರೆದಿದ್ದೆ. ಇಲ್ಲಿ ಸ್ವಲ್ಪ ವಿಸ್ತಾರವಾಗಿ ಬರೆಯತೊಡಗಿದ್ದೇನೆ. ಭೃಗು ಮಹರ್ಷಿಗಳಿಗೆ ಪುಲೋಮೆ ಎಂಬ ಪ್ರೀತಿಯ ಹೆಂಡತಿಯಿದ್ದಳು. ಪತ್ನಿಯಾದ ಪುಲೋಮೆಯಿಂದ ತನಗಿಂತ ಹೆಚ್ಚು ತೇಜಸ್ವಿಯಾದ ಸಂತಾನವನ್ನು ಪಡೆಯಬೇಕೆಂದು ಭೃಗು ಮಹರ್ಷಿಗಳು ಆಶಿಸಿದ್ದರು. ಅಂತೆಯೇ ಪುಲೋಮೆ ಗರ್ಭವನ್ನು ಧರಿಸಿದ್ದಳು, ಹೀಗೆ ಸಂತಾನದ ನಿರೀಕ್ಷೆಯಲ್ಲಿಯೇ ಸತಿಪತಿಗಳು ಆನಂದದಿಂದ ಇದ್ದರು. ಎಂದಿನಂತೆ ಒಂದು ದಿನ ಭೃಗು ಮಹರ್ಷಿಗಳು ಸ್ನಾನ ಸಂಧ್ಯಾದಿ ನಿತ್ಯಕರ್ಮಗಳಿಗಾಗಿ ಆಶ್ರಮದಿಂದ ನದಿಯೆಡೆಗೆ ತೆರಳಿದರು. ಭೃಗು ಮಹರ್ಷಿಗಳು ಆಶ್ರಮವನ್ನು ಬಿಟ್ಟು ತೆರಳುವುದನ್ನೇ ಪುಲೋಮನೆಂಬ ರಾಕ್ಷಸ ನಿರೀಕ್ಷಿಸುತ್ತಿದ್ದ. ಅವರು ಅತ್ತ ಸಾಗಿದ ಮರುಕ್ಷಣವೇ ನಿಧಾನವಾಗಿ ಆಶ್ರಮದ ಪರಿಸರವನ್ನು ಪ್ರವೇಶಮಾಡಿದ. ಆಶ್ರಮದ ಹೊರಾವರಣದಲ್ಲಿ ಅಗ್ನಿಹೋತ್ರಕ್ಕಾಗಿ ಸ್ಥಾಪಿಸಿದ ಅಗ್ನಿದೇವ ಆನಂದದಿಂದ ಕಂಗೊಳಿಸುತ್ತಿದ್ದ. ಪುಲೋಮೆಯನ್ನು ಅಪಹರಿಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ಆಶ್ರಮ ಪ್ರವೇಶ ಮಾಡಿದ್ದ ರಾಕ್ಷಸನ ಕಣ್ಣಿಗೆ ಅಗ್ನಿದೇವ ಕಾಣಿಸಿದ. ಆಗ ಪುಲೋಮ ರಾಕ್ಷಸನ ಮನಸ್ಸಿನಲ್ಲಿದ್ದ ಅನುಮಾನಕ್ಕೆ ಸರಿಯಾದ ಉತ್ತರವನ್ನು ಅಗ್ನಿ ಕೊಡುತ್ತಾನೆ ... ಕೊಡಬಲ್ಲನೆಂದು ಭಾವಿಸಿ ಅವನಲ್ಲೇ ಕೇಳಿದ.. " ಅಯ್ಯಾ ಅಗ್ನಿಯೇ ಈ ಆಶ್ರಮದಲ್ಲಿ ವಾಸವಾಗಿರುವ ಸುಂದರಿಯಾದ ಪುಲೋಮೆ ನನಗೆ ಸೇರಿದವಳು... ಇವಳ ಬಾಲ್ಯಾವಸ್ಥೆಯಲ್ಲಿಯೇ ಇವಳ ತಂದೆ ಈಕೆ ನನಗೆ ಸೇರಿದವಳೆಂದು ಆಡಿದ್ದಾನೆ. ಆದರೆ ದುಷ್ಟನಾದ ಆತ ನನಗರಿವಿಲ್ಲದಂತೆ ಪ್ರಾಯಕ್ಕೆ ಬಂದ ಈಕೆಯನ್ನು ಈ ಬ್ರಾಹ್ಮಣನಿಗೆ ಮದುವೆ ಮಾಡಿ ಕೊಟ್ಟುಬಿಟ್ಟ. ನನಗೆ ತಿಳಿಯದ ಹಾಗೆ ಈಕೆ ಇಲ್ಲಿ ಈ ಬಡ ಮುನಿಯೊಂದಿಗೆ ಸಂಸಾರ ನಡೆಸುತ್ತಾ ಇದ್ದಾಳೆ. ಆದರೆ ಇವಳ ತಂದೆಯಾಡಿದ ಮಾತಿನ ಪ್ರಕಾರ ಇವಳು ನನಗೇ ಸೇರಬೇಕಾದವಳು ... ಈ ನನ್ನ ನಿರ್ಣಯ ಸರಿಯಲ್ಲವೇ ನೀನೇ ಹೇಳು". ಹೀಗೆಂದು ಅಗ್ನಿಯಲ್ಲಿ ಕೇಳಿದ... ಉತ್ತರ ಬರಲಿಲ್ಲ, ಮತ್ತೆ ಮತ್ತೆ ಕೇಳಿದ... ಆಗ ಅಗ್ನಿ ಕೂಡ ಯೋಚಿಸತೊಡಗಿದ, ಬಾಲ್ಯದಲ್ಲಿ ಕೊಡುತ್ತೇನೆ ಎಂದು ಹೇಳಿದ ಕಾರಣ ನಿನಗೆ ಸೇರಬೇಕು ಎಂದು ಹೇಳಿದರೆ ಭೃಗು ಶಪಿಸುತ್ತಾನೆ. ನಿನಗೆ ಅಧಿಕಾರ ಇಲ್ಲವೆಂದರೆ ರಾಕ್ಷಸ ಪೀಡಿಸುತ್ತಾನೆ... ಆಗ ಅನಿವಾರ್ಯವಾಗಿ ಅಗ್ನಿ ಪುಲೋಮ ರಾಕ್ಷಸನನ್ನು ಹತ್ತಿರ ಕರೆದು ಗುಟ್ಟಾಗಿ ಹೇಳುತ್ತಾನೆ.. " ಅಯ್ಯಾ ಅಸುರಾ... ಇವಳ ತಂದೆ ಬಾಲ್ಯದಲ್ಲಿಯೇ ನಿನಗೀಯುತ್ತೇನೆಂದು ಹೇಳಿದ ಕಾರಣದಿಂದ ಅವಳು ನಿನಗೆ ಸೇರಬೇಕಾದವಳೇ ಆದರೂ ... ಮುಂದೆ ಆತನೇ ನನ್ನನ್ನು ಸಾಕ್ಷಿಯನ್ನಾಗಿಟ್ಟುಕೊಂಡು ಯಥಾವಿದಿಯಿಂದ ವೇದೋಕ್ತ ಕರ್ಮಗಳಿಂದ ಭೃಗುವಿಗೆ ನೀಡಿದ್ದಾನೆ.. ಹಾಗಾಗಿ ಪುಲೋಮೆ ಈಗ ಭೃಗುವಿಗೇ ಸೇರಬೇಕಾದವಳು ಇದು ಸತ್ಯ ಇನ್ನು ಮುಂದಿನ ನಿರ್ಧಾರ ನಿನ್ನದು". ( ಇಲ್ಲಿ ತರ್ಕಿಸಬೇಕಾದ್ದು.. ಪುಲೋಮೆಯ ತಂದೆ ಆಕೆಯನ್ನು ಯಾವ ಕಾಲದಲ್ಲಿಯೂ ರಾಕ್ಷಸನಿಗೆ ಕೊಟ್ಟಿದ್ದು ಸುಳ್ಳಾಗಿರಬಹುದು... ಹಾಗೆಂದು ಮಕ್ಕಳು ಬಾಲ್ಯದಲ್ಲಿ ಹಠ ಮಾಡಿದಾಗ ನಿನ್ನನ್ನು ಅವರಿಗೆ ಕೊಡುತ್ತೇನೆ ... ಇವರಿಗೆ ಕೊಡುತ್ತೇನೆ ಎಂದು ಹೆದರಿಸುವುದಿಲ್ಲವೇ.. ಇದೂ ಹಾಗೇ ಆಗಿರಬೇಕು) ಅಗ್ನಿಯಾಡಿದ ಮಾತುಗಳನ್ನು ಕೇಳಿಸಿಕೊಂಡ ಪುಲೋಮ ರಾಕ್ಷಸ ಹೆಚ್ಚು ಯೋಚಿಸುವ ಗೊಡವೆಗೇ ಹೋಗಲಿಲ್ಲ. ಒಂದು ಕ್ರೂರವಾದ ಹಂದಿಯ ರೂಪವನ್ನು ತಳೆದು ಆಶ್ರಮದಲ್ಲಿದ್ದ ಗರ್ಭಿಣಿ ಪುಲೋಮೆಯನ್ನು ಅಪಹರಿಸಿಕೊಂಡು ವೇಗವಾಗಿ ಹೊರಟುಬಿಟ್ಟ. ಹಾಗೆ ಸಾಗುವಾಗ ಗರ್ಭದಲ್ಲಿದ್ದ ಶಿಶುವಿಗೆ ಇದನ್ನು ತಿಳಿದು ಕ್ರೋಧವುಂಟಾಯಿತು, ಸಿಟ್ಟುಗೊಂಡ ಶಿಶು ಗರ್ಭದಿಂದ ತಾನಾಗಿಯೇ ಹೊರ ಜಾರಿ ಭೂಮಿಗೆ ಬಿತ್ತು. ನೆಲಕ್ಕೆ ಬಿದ್ದ ಆ ಹಸುಗೂಸು ತಕ್ಷಣ ತನ್ನ ತಾಯಿಯನ್ನು ಅಪಹರಿಸಿಕೊಂಡು ಹೋಗುತ್ತಿದ್ದ ರಾಕ್ಷಸನನ್ನು ದುರುಗುಟ್ಟಿ ನೋಡಿತು. ಬಲಿಷ್ಠನಾಗಿದ್ದ ಪುಲೋಮ ಕ್ಷಣಮಾತ್ರದಲ್ಲಿ ಶಿಶುವಿನ ಕಣ್ಣಿನಿಂದ ಹೊರಟ ಕ್ರೋಧಾಗ್ನಿಗೆ ಭಸ್ಮವಾಗಿ ಹೋದ. ಋಷೀಪತ್ನಿ ಪುಲೋಮೆ ತಕ್ಷಣವೇ ನೆಲದ ಮೇಲೆ ಬಿದ್ದಿದ್ದ ತನ್ನ ಶಿಶುವನ್ನು ಎತ್ತಿಕೊಂಡು ದುಃಖದಿಂದ ಆಶ್ರಮದತ್ತ ನಡೆದು ಬರತೊಡಗಿದಳು. ಹಾಗೆ ಆಶ್ರಮದತ್ತ ಆಕೆ ಸಾಗಿ ಬರುವಾಗ ಅವಳ ಕಣ್ಣಿನಿಂದ ಕೆಳಗಿಳಿದ ಕಣ್ಣೀರು ನದಿಯಾಗಿ ಹರಿದು "ವಧೂಸರ '' ಎಂಬ ಹೆಸರಿನಿಂದ ಪ್ರಖ್ಯಾತವಾಯಿತು. ಅತ್ತ ಪುಲೋಮೆಯ ಗರ್ಭದಿಂದ ಜಾರಿದ ಕಾರಣಕ್ಕಾಗಿ ಆ ಶಿಶುವಿಗೆ ಬ್ರಹ್ಮ ಸಂಕಲ್ಪದಂತೆ ಬಂದ ಹೆಸರು "ಚ್ಯವನ ". 🙏🙏 ಮುಂದುವರಿಯುವುದು🙏

Sunday, August 10, 2025

ವೃತ್ರಾಸುರ 8

ಯುದ್ಧದಲ್ಲಿ ಇಂದ್ರನ ವಜ್ರಾಯುಧ ಕೈತಪ್ಪಿ ಬಿದ್ದಿದ್ದು ವೃತ್ರನ ಸಮ್ಮುಖದಲ್ಲಿ. ಅದನ್ನು ಎತ್ತಿಕೊಳ್ಳುವ ಧ್ಯೆರ್ಯವೂ ಇಂದ್ರನಿಗೆ ಇರಲಿಲ್ಲ.. ದೇವತೆಗಳ ಸಮೂಹದಲ್ಲಿ ಕೋಲಾಹಲ ಉಂಟಾಯಿತು. ಅಯ್ಯೊ ... ಇಂದ್ರನ ದುರ್ವಿಧಿಯೇ.. ಇನ್ನು ಇವನು ಶತ್ರುಗಳನ್ನು ಗೆಲ್ಲುವುದು ಅಸಾಧ್ಯ. ಸ್ವರ್ಗದ ಆಡಳಿತವನ್ನು ಪಡೆಯಲು ಶ್ರೀ ಹರಿಯೇ ಉಪದೇಶಿಸಿದ ಒಂದು ದಾರಿ ಕೂಡ ಕೈ ತಪ್ಪಿ ಹೋಯಿತು ಎಂದು ಮರುಗಿದರು. ಈ ಸ್ಥಿತಿಗೆ ಸ್ವತಃ ವೃತ್ರನೇ ಮರುಗಿ ತಾನೇ ಮಾತಾಡಲು ತೊಡಗಿದ. "ದೇವೇಂದ್ರ... ತ್ರಿಲೋಕಾಧಿಪತಿಯಾಗಿದ್ದ ನೀನು ಎಲ್ಲದಕ್ಕೂ ನೀನೇ ಕಾರಣನೆಂಬ ಅಹಂಕಾರದಿಂದಲೇ ಇಂದ್ರ ಪದವಿಯನ್ನು ಕಳೆದುಕೊಂಡೆ, ಆದರೆ ನೀನೂ ಕೂಡ ಕೇವಲ ನಿಮಿತ್ತ ಮಾತ್ರ. ನಿನ್ನಂತವರು ಕರ್ತವ್ಯವನ್ನು ಮರೆತು ಪ್ರಮತ್ತರಾಗಿ ವರ್ತಿಸಿದ ಸಮಯದಲ್ಲಿ ವಾಸ್ತವದ ಅರಿವನ್ನು ಮಾಡಿಸಲು ನನ್ನಂತವರ ಸೃಷ್ಠಿ ಭಗವಂತನ ಸಂಕಲ್ಪದಂತೆ ಆಗುತ್ತದೆ. ಹಾಗಿರುವಾಗ ನೀನು ಆ ಭಗವಂತನು ನಿರ್ದೇಶಿಸಿದಂತೆ ಆಡುವ ಸೂತ್ರದ ಗೊಂಬೆಯಷ್ಟೇ ಎನ್ನುವುದನ್ನು ಅರಿತುಕೋ... ಸೋಲು ಗೆಲುವುಗಳನ್ನು - ಸಾವು ಬದುಕನ್ನು ನಿರ್ಧರಿಸುವ ಶಕ್ತಿ ಬೇರೆಯೇ ಇದೆ. ಈ ಕ್ಷಣದಲ್ಲಿ ನಿರಾಯುಧನಾದ ನಿನ್ನನ್ನು ನಾನು ಕೊಲ್ಲಬಲ್ಲೆ ಆದರೆ ... ಈ ಸ್ಥಿತಿಯಲ್ಲಿ ನಾನು ನಿನ್ನನ್ನು ಕೊಂದೆನಾದರೆ ಪಾಪದ ಕೂಪದಲ್ಲಿ ತಳ್ಳಲ್ಪಡುತ್ತೇನೆ. ಹಾಗಾಗಿ ಇದೋ ಇಲ್ಲಿರುವ ನಿನ್ನ ಆಯುಧವನ್ನು ತೆಗೆದುಕೊಂಡು ಯುದ್ಧ ಮಾಡು". ವೃತ್ರನು ಹೀಗೆಂದು ಅವಕಾಶ ಕೊಟ್ಟ ಕೂಡಲೇ ದೇವೇಂದ್ರನು "ನಿನ್ನ ಧರ್ಮಬುದ್ಧಿಗೆ ತಲೆಬಾಗಿದ್ದೇನೆ..ನೀನು ನನ್ನ ಶತ್ರುವೇ ಆದರೂ ನಿನ್ನನ್ನು ಹೊಗಳುವುದರಲ್ಲಿ ಯಾವ ದೋಷವೂ ಇಲ್ಲ.. " ಎನ್ನುತ್ತಾ ತನ್ನ ಕೈಜಾರಿ ಬಿದ್ದುಹೋಗಿದ್ದ ವಜ್ರಾಯುಧವನ್ನು ಮತ್ತೆ ಕೈಗೆತ್ತಿಕೊಂಡ. ಮತ್ತೆ ಯುದ್ಧಾರಂಭವಾಯಿತು. ಒಂದು ಕೈಯನ್ನು ಕಳೆದುಕೊಂಡರೂ ಕೇವಲ ಒಂದು ಕೈಯಲ್ಲೇ ಪರಿಘಾಯುಧವನ್ನು ಧರಿಸಿ ವೃತ್ರನು ಇಂದ್ರನನ್ನು ಘಾತಿಸಲು ಮುಂದಾದ. ತಕ್ಷಣವೇ ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿ ಅವನ ಇನ್ನೊಂದು ಕೈಯನ್ನೂ ಕತ್ತರಿಸಿ ಹಾಕಿದ. ಎರಡೂ ಕೈಗಳನ್ನು ಕಳೆದುಕೊಂಡು ದೇಹದಿಂದ ರಕ್ತ ಸುರಿಯುತ್ತಿದ್ದ ಕ್ಷಣದಲ್ಲಿ ಹೂವರಳಿ ನಿಂತ ಮುತ್ತುಗದ ಮರದಂತೆ ವೃತ್ರ ಕಾಣಿಸುತಿದ್ದ. ಬಾಹುಗಳನ್ನು ಕಳೆದುಕೊಂಡಮೇಲೂ ವೃತ್ರನು ಯುದ್ಧಭೂಮಿಯಿಂದ ಹಿಂದೆ ಸರಿಯಲಿಲ್ಲ... ಸಂಪೂರ್ಣವಾದ ಬ್ರಹ್ಮಾಂಡವನ್ನೇ ಸೆಳೆದು ಆಟಿಕೆಯಂತೆ ಆಡಿಸಬಲ್ಲ ಭೀಕರವಾದ ದೇಹವನ್ನು ಹೊಂದಿದ್ದ ಆತ ಕ್ಷಣಮಾತ್ರದಲ್ಲಿ ತನ್ನ ಬಾಯಿಯನ್ನು ತೆರೆದ... ಅವನ ಬಾಯಿಯ ಕೆಳದವಡೆ ಭೂಮಿಯ ಮೇಲೆ ಹರಡಿಕೊಂಡಿದ್ದರೆ, ಮೇಲಿನ ದವಡೆ ಆಗಸವನ್ನೂ ಮೀರಿ ತೆರೆದುಕೊಂಡಿತ್ತು. ದೇವತೆಗಳೆಲ್ಲಾ ಹಾ...ಹಾ.. ಎನ್ನುತ್ತಿರುವಂತೆಯೇ ವೃತ್ರನು ಐರಾವತ ಸಹಿತವಾಗಿ ಇಂದ್ರನನ್ನು ನುಂಗಿಬಿಟ್ಟ. ತಾನೇರಿದ ದಿಗ್ಗಜದ ಸಹಿತವಾಗಿ ತನ್ನನ್ನೇ ವೃತ್ರನು ನುಂಗಿದರೂ ದೇವೇಂದ್ರನಿಗೆ ಏನೂ ಆಗಲಿಲ್ಲ, ಅದಾಗಲೇ ಅವನಿಗೆ ನಾರಾಯಣ ಕವಚದ ಉಪದೇಶವನ್ನು ವಿಶ್ವರೂಪನು ಮಾಡಿದ್ದರಿಂದ ಅದರ ಮಹಿಮೆಯಿಂದ ಅವನು ಸುರಕ್ಷಿತವಾಗಿ ವೃತ್ರನ ಹೊಟ್ಟೆಯನ್ನು ಸೇರಿ.. ತನ್ನ ಕೈಯಲ್ಲಿದ್ದ ವಜ್ರಾಯುಧದಿಂದ ಅವನ ಹೊಟ್ಟೆಯನ್ನು ಬೇಧಿಸಿದ. ಹಾಗೆ ವೃತ್ರನ ಹೊಟ್ಟೆಯನ್ನು ಒಡೆದು ಹೊರಬಂದವನೇ ಕ್ಷಣಮಾತ್ರದಲ್ಲಿ ವೃತ್ರನ ತಲೆಯನ್ನು ಕತ್ತರಿಸಿ ಕೆಡವಿದ. ಆ ಕ್ಷಣದಲ್ಲಿ ಇಂದ್ರನಿಗೆ ಜಯವಾಯಿತೆಂದು ದೇವ ದುಂಧುಭಿ ಮೊಳಗಿತು... ದೇವತೆಗಳು ಹೂಮಳೆಗರೆದರು. ಸ್ವರ್ಗವನ್ನು ಕಳೆದುಕೊಂಡಿದ್ದ ದೇವತೆಗಳೆಲ್ಲಾ ಮರಳಿ ಸ್ವಸ್ಥಾನವನ್ನು ಸೇರಿದರು. ಇಂದ್ರನೂ ಮತ್ತೆ ತನ್ನ ಪದವಿಯನ್ನು ಪಡೆದುಕೊಂಡ. ಆದರೆ.. ಅವನಿಗೆ ಅದು ಸುಖದಾಯಕವಾಗಿರಲಿಲ್ಲ, ಹಿಂದೆ ವಿಶ್ವರೂಪನನ್ನು ವಧಿಸಿ ಬ್ರಹ್ಮಹತ್ಯಾ ಪಾತಕ ಅವನನ್ನು ಪೀಡಿಸಿದಾಗ ಅದನ್ನು ಪಾಲುಮಾಡಿ ಹಂಚಿ ತಾನು ಪರಿಶುದ್ಧನಾಗಿದ್ದ. ಆದರೆ ಈಗ ಅದೇ ರೀತಿಯ ಪಾತಕ ಮತ್ತೆ ಇವನನ್ನು ಸೇರಿಕೊಳ್ಳಲು ಹಿಂಬಾಲಿಸುತ್ತಲಿತ್ತು. ವೃದ್ಧೆಯ ರೂಪದಲ್ಲಿ ರಕ್ತ ಸೋರುತ್ತಿರುವ ಸೀರೆಯನ್ನುಟ್ಟು, ಬಿಳಿಯಾದ ಕೆದರಿದ ತಲೆಗೂದಲುಗಳನ್ನು ಹೊಂದಿ, ಕೆಂಪಾದ ಕಣ್ಣುಗಳಿಂದ, ಕುಷ್ಠರೋಗದಿಂದ ಕೂಡಿದ ದೇಹದಿಂದ ಅದು ಇಂದ್ರನನ್ನು ಹಿಂಬಾಲಿಸುತ್ತಿತ್ತು. ಅದನ್ನು ನೋಡಿ ಹೆದರಿದ ಇಂದ್ರ ಸ್ವರ್ಗದಿಂದ ಪಲಾಯನ ಮಾಡಿದ. ಮತ್ತೂ ಅದು ತನ್ನ ಹಿಂದೆ ಬರುತ್ತಿರುವುದನ್ನು ನೋಡಿ ಈಶಾನ್ಯ ದಿಕ್ಕಿಗೆ ಓಡುತ್ತಾ ಹೋಗಿ ಮಾನಸ ಸರೋವರವನ್ನು ತಲುಪಿದ. ಅಲ್ಲಿ ಒಂದು ಸಾವಿರ ವರ್ಷಗಳ ಕಾಲ ಕಮಲದ ಹೂವಿನ ನಾಳವೊಂದರಲ್ಲಿ ಅವಿತುಕೊಂಡಿದ್ದ.🙏🙏 ಇನ್ನೊಂದು ಕಥೆ ಮುಂದಿನ ಬರಹದಲ್ಲಿ🙏

Saturday, August 9, 2025

ವೃತ್ರಾಸುರ 7

ಮಹಾ ಬಲಶಾಲಿಯಾದ ವೃತ್ರಾಸುರ ಆಕ್ರಮಣಕ್ಕಾಗಿ ಬರುತಿದ್ದ ದೇವಸೇನೆಯನ್ನು ಏಕಾಂಗಿಯಾಗಿ ಕ್ರೋಧದಿಂದ ತಡೆದು ನಿಲ್ಲಿಸುತ್ತಾನೆ. "ಎಲೈ ದೇವತೆಗಳಿರಾ... ಹೇಡಿಗಳಂತೆ ರಣಾಂಗಣಕ್ಕೆ ಬೆನ್ನು ಹಾಕಿ ಓಡಿ ಹೋಗುತ್ತಿರುವ ನಮ್ಮವರನ್ನು ಹೊಡೆದು ಕೊಲ್ಲುವುದು ಪರಾಕ್ರಮವಲ್ಲ... ನಿಜವಾಗಿ ನಿಮಗೆ ಸಾಮರ್ಥ್ಯವಿರುವುದೇ ಆದರೆ ಒಂದು ಘಳಿಗೆಯಾದರೂ ನನ್ನೊಂದಿಗೆ ನಿಂತು ಯುದ್ಧವನ್ನು ಮಾಡಿ, ನನ್ನ ಪರಾಕ್ರಮ ಏನೆಂಬುದನ್ನು ತೋರಿಸಿಕೊಡುತ್ತೇನೆ". ಎಂದು ಹೇಳುತ್ತಾ ಕೈಯಲ್ಲಿ ತ್ರಿಶೂಲವನ್ನು ಹಿಡಿದು ಘರ್ಜಿಸುತ್ತಾ ಮುಂದೊತ್ತಿ ಬಂದ. ಅವನ ವೀರವಾಣಿಯನ್ನು ಕೇಳುತ್ತಲೇ ದೇವತೆಗಳಲ್ಲಿ ಕೆಲವರು ಮೂರ್ಛಿತರಾದರು, ಹಾಗೆ ನೆಲಕ್ಕುರುಳಿದ ದೇವತೆಗಳನ್ನು ತುಳಿಯುತ್ತಲೇ ಅವನು ಮುಂದೆ ಸಾಗಿ ಬರುತಿದ್ದ. ವೃತ್ರಾಸುರ ಈ ರೀತಿಯಲ್ಲಿ ಕ್ರೋಧದಿಂದ ಸಾಗಿ ಬರುತ್ತಿರುವುದನ್ನು ನೋಡಿದ ಇಂದ್ರ ವಜ್ರಾಯುಧಪಾಣಿಯಾಗಿ ಐರಾವತವನ್ನೇರಿ ಅವನನ್ನು ಎದುರಿಸಲು ಮುಂದಾಗುತ್ತಾನೆ. ತನ್ನ ಸಮ್ಮಖಕ್ಕೆ ಸಾಗಿ ಬರುತ್ತಿರುವ ಇಂದ್ರನನ್ನು ನೋಡಿದ ವೃತ್ರ ಬಲವಾದ ಒಂದು ಗದೆಯಿಂದ ಐರಾವತದ ನೆತ್ತಿಗೆ ಹೊಡೆಯುತ್ತಾನೆ. ಅವನ ಗದಾಪ್ರಹಾರಕ್ಕೆ ಐರಾವತವೆಂಬ ಆ ದಿಗ್ಗಜವೂ ಒಂದು ಕ್ಷಣ ನೋವಿನಿಂದ ಫೀಳಿಡುತ್ತಾ ಇಪ್ಪತ್ತೆಂಟು ಗಜಗಳಷ್ಟು ಹಿಂದೆ ಸರಿಯುತ್ತದೆ. ತಕ್ಷಣದಲ್ಲಿಯೇ ಇಂದ್ರನು. ಅಮೃತವನ್ನೇ ಸ್ಪುರಿಸುವ ಅನುಭವ ನೀಡುವ ತನ್ನ ಕೈಯಿಂದ ಅದರ ನೆತ್ತಿಯನ್ನು ನೇವರಿಸಿ ನೋವು ಶಮನವಾಗುವಂತೆ ಮಾಡುತ್ತಾನೆ. ಹಾಗೆ ಐರಾವತವನ್ನು ಸಂತೈಸಿದ ದೇವೆಂದ್ರ ಮತ್ತೂ ಕೃದ್ಧನಾಗಿ ಸಿಂಹನಾದಗೈಯತ್ತಾ ವೃತ್ರನ ಸಮ್ಮಖಕ್ಕೆ ಬರುತ್ತಾನೆ. ಸ್ವತಃ ಇಂದ್ರನೇ ತನ್ನ ಸಮ್ಮಖಕ್ಕೆ ಬರುತ್ತಿರುವುದನ್ನು ನೋಡಿ ವೃತ್ರಾಸುರನ ಕ್ರೋಧ ಇಮ್ಮಡಿಯಾಯಿತು. ಹಾಗಾಗಿ ಇಂದ್ರನನ್ನು ಉದ್ದೇಶಿಸಿ " ದೇವೇಂದ್ರಾ... ಬ್ರಾಹ್ಮಣನೂ... ನಿನ್ನ ಗುರುವೂ... ಹಾಗೆಯೇ ನನ್ನ ಸಹೋದರನೂ ಆಗಿದ್ದ ವಿಶ್ವರೂಪನನ್ನು ನಿರ್ದಯಿಯಾದ ನೀನು ಕೊಂದು ಕಳೆದಿದ್ದೀ .. ನಿನ್ನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದೇ ನನ್ನ ಜನನವಾಗಿದೆ, ಇದೋ ನನ್ನ ಕೈಯಲ್ಲಿರುವ ಶೂಲದಿಂದ ನಿನ್ನನ್ನು ಇರಿದು ಕೊಂದೆನಾದರೆ ನಾನು ನನ್ನ ಅಣ್ಣನ ಋಣವನ್ನು ತೀರಿಸಿದ ಹಾಗಾಗುತ್ತದೆ. ನೀನೇ ನೀನಾಗಿ ನನ್ನ ಸಮ್ಮುಖಕ್ಕೆ ಬಂದುದೇ ಒಳ್ಳೆಯದಾಯಿತು, ದಯಾಹೀನನೂ ನಿರ್ಲಜ್ಜನೂ ಆದ ನಿನ್ನನ್ನು ಸ್ವರ್ಗ ಲಕ್ಷ್ಮಿಯೂ ಕೂಡ ತೊರೆದು ಹೋಗಿದ್ದಾಳೆ. ಹೇಗೆ ನನ್ನಣ್ಣನಾದ ವಿಶ್ವರೂಪನ ಮೂರೂ ತಲೆಗಳನ್ನು ನೀನು ಕತ್ತರಿಸಿ ಹಾಕಿದೆಯೋ ಅದೇ ರೀತಿ ನಾನು ದುಷ್ಟನಾದ ನಿನ್ನ ತಲೆಯನ್ನೂ ಕತ್ತರಿಸಿ ಕೆಡುಹುವೆನು, ಅದೋ ಅಲ್ಲಿ ನಿನ್ನ ಆಜ್ಞಾಪಾಲಕರಾದ ಸುರರು ರಣದಲ್ಲಿ ಸೋತು ಪಲಾಯನ ಮಾಡುತ್ತಿರುವ ನನ್ನವರನ್ನು ಹಿಂಬಾಲಿಸಿ ಕೊಲ್ಲುತ್ತಿದ್ದಾರೆ... ಈ ಕ್ಷಣದಲ್ಲಿ ನಾನು ನಿನ್ನನ್ನು ಕೊಂದೆನಾದರೆ ಅವರೂ ನಿರ್ಗತಿಕರಾಗುತ್ತಾರೆ". ಹೀಗೆಂದು ಹೇಳುತ್ತಾ ಇಂದ್ರನಿಗೆ ಎದುರಾದ ವೃತ್ರನ ಕ್ರೋಧಕ್ಕೆ ದೇವತೆಗಳು ಮೂರ್ಛಿತರಾದರು. ಇಂದ್ರನ ಕೈಯಲ್ಲಿರುವ ವಜ್ರಾಯುಧವನ್ನು ನೋಡಿದ ವೃತ್ರ.. " ಅಯ್ಯಾ ನಡೆಯುವಂತಹ ಯುದ್ಧಕ್ಕೆ ಬೇಕಾದ ಸಿದ್ಧತೆಯನ್ನು ನೀನು ಮಾಡಿಕೊಂಡೇ ಬಂದಿದ್ದೀ ಎಂದು ಕೇಳಿದ್ದೇನೆ. ನಿನ್ನ ಕೈಯಲ್ಲಿರುವ ಆಯುಧ ವಿಷ್ಣುವಿನ ಶಕ್ತಿಯ ಮತ್ತು ದಧೀಚಿಯ ತ್ಯಾಗದ ಫಲ ಎಂಬುದೂ ತಿಳಿದಿದೆ... ಮುಂದಾಗುವ ಯುದ್ಧದಲ್ಲಿ ನೀನೇನಾದರೂ ಆ ಆಯುಧವನ್ನೆ ಬಳಸಿ ನನ್ನನ್ನು ಕೊಲ್ಲುವ ಸಾಧ್ಯತೆಯೂ ಇದೆ ಆದರೆ ಅಂಜಿಕೆಯಿಂದ ನಾನು ನನ್ನ ಉದ್ದೇಶದಿಂದ ಹಿಂದೆ ಸರಿಯಲಾರೆ.. ಯಾಕೆಂದರೆ ನಿನ್ನ ಕೈಯಲ್ಲಿರುವ ವಜ್ರವನ್ನು ನೋಡಿದ ಮೇಲೆ ನೀನು ಕೈಗೊಂಡ ಕಾರ್ಯ ವಿಷ್ಣು ಸಂಕಲ್ಪ ಎಂಬುದರಲ್ಲಿ ಎರಡು ಮಾತಿಲ್ಲ... ಪ್ರಪಂಚದ ಚರಾಚರಗಳಲ್ಲಿ ಅವ್ಯಕ್ತನಾಗಿರುವ.. ಯೋಗಿಗಳ ಸಂಮುಖದಲ್ಲಿ ಸದಾ ವ್ಯಕ್ತನಾಗಿಯೇ ಇರುವ ಆ ಭಗವಂತನ ಸಂಕಲ್ಪ ಹೇಗಿದೆಯೋ... ಆದರೆ ನನಗೆ ಅವನ ಹೊರತಾದ ಸ್ವರ್ಗಕಾಮವಿಲ್ಲ... ಅವನಿರುವ ಲೋಕದ ಮೋಕ್ಷ ಸ್ಥಾನದ ಅಭಿಲಾಷೆಯೂ ಇಲ್ಲ... ಯಾಕೆಂದರೆ ಜನ್ಮ ಜನ್ಮಾಂತರದ ಪಾಪವನ್ನು ತೊಳೆದುಕೊಳ್ಳದೆ ಅದು ನನಗೆ ದಕ್ಕುವುದೂ ಇಲ್ಲ, ಆದರೆ ವಿಷ್ಣು ಸಾನ್ನಿಧ್ಯಕ್ಕೆ ಕರೆದೊಯ್ಯಬಲ್ಲ ಸಜ್ಜನರ ಸಂಗ ದೊರೆತರೆ ಸಾಕು. ಅದನ್ನು ನಾನು ಪೌರುಷದಿಂದಲೇ ಪಡೆಯುವೆ ". ಎಂದು ಹೇಳುತ್ತಾ ಆಕ್ರಮಣಕ್ಕೆ ಸಿದ್ಧನಾದ. ಕ್ರುದ್ಧನಾಗಿ ಇಂದ್ರನ ಎದುರಾಗಿ ಬಂದ ವೃತ್ರ ತನ್ನ ಕೈಯಲ್ಲಿದ್ದ ಶೂಲದಿಂದ ಇಂದ್ರನನ್ನು ಘಾತಿಸಲು ಮುಂದಾದ. ಅವನು ಶೂಲದಿಂದ ತಿವಿಯಲು ತನ್ನ ಬಲಿಷ್ಠವಾದ ಬಾಹುವನ್ನು ಮುಂದೆ ಚಾಚಿದ ಕೂಡಲೇ ದೇವೇಂದ್ರ ಸ್ವಲ್ಪವೂ ಅಂಜಿಕೊಳ್ಳದೇ ಹರಿತವಾದ ನೂರು ಅಲಗುಗಳನ್ನು ಹೊಂದಿದ ತನ್ನ ವಜ್ರಾಯುಧದಿಂದ ಅವನ ಬಲತೋಳನ್ನೇ ಕತ್ತರಿಸಿಹಾಕಿದ. ದೇವತೆಗಳಲ್ಲ ಈ ಕಾರ್ಯದಿಂದ ಸಂತೋಷಗೊಂಡು ಜಯಕಾರ ಮಾಡಿದರು. ತನ್ನ ಒಂದು ಬಾಹುವನ್ನು ಮತ್ತು ಶೂಲಾಯುಧವನ್ನೂ ಕಳೆದುಕೊಂಡರೂ ವೃತ್ರಾಸುರ ಎದೆಗುಂದಲಿಲ್ಲ.. ಮತ್ತೊಂದು ಕೈಯಿಂದ ಪರಿಘಾಯುಧವನ್ನು ಹಿಡಿದು ಇಂದ್ರನಿಗೂ ಅವನೇರಿದ ಐರಾವತಕ್ಕೂ ಅಪ್ಪಳಿಸಿದ. ಬೀಸಿದ ರಭಸ ಹೇಗಿತ್ತೆಂದರೆ... ಇಂದ್ರನೇರಿದ ದಿಗ್ಗಜ ಒಂದು ಕ್ಷಣ ಕಂಪಿಸಿತು. ಇಂದ್ರನ ಕೈಯಲ್ಲಿದ್ದ ವಜ್ರಾಯುಧ ಜಾರಿ ಬಂದು ವೃತ್ರನ ಸಮ್ಮುಖದಲ್ಲಿ ಬಿದ್ದಿತು.🙏🙏 ಮುಂದುವರಿಯುವುದು🙏

Friday, August 8, 2025

ವೃತ್ರಾಸುರ 6

ಲೋಕದ ಹಿತಕ್ಕಾಗಿ ಮಹಾ ತಪಸ್ವಿಗಳಾದ, ಅಥರ್ವ ವೇದವನ್ನು ಸಿದ್ಧಿಸಿಕೊಂಡಿದ್ದ ದದೀಚಿ ಮಹರ್ಷಿಗಳು ತಮ್ಮ ದೇಹವನ್ನು ತ್ಯಾಗ ಮಾಡಿದರು. ಇದರಿಂದ ಹರ್ಷ ಮಾನಸರಾದ ದೇವತೆಗಳು ಮಹರ್ಷಿಗಳ ದೇಹದ ವಜ್ರಸಮಾನವಾದ ಮೂಳೆಗಳಿಂದ ಒಂದು ಆಯಧವನ್ನು ನಿರ್ಮಿಸಲು ಸೂಚಿಸುತ್ತಾರೆ. ದೇವತೆಗಳ ನಿರ್ದೇಶನದಂತೆ ವಿಶ್ವಕರ್ಮನು ಇಂದ್ರನಿಗೆ ವಿಶಿಷ್ಟವಾದ ಆಯುಧವನ್ನ ನಿರ್ಮಿಸಿ ಕೊಡುತ್ತಾನೆ. ದೇವತೆಗಳ ನಿರೀಕ್ಷೆಯಂತೆ ಇಂದ್ರನು ವಜ್ರಾಯುಧವನ್ನು ಹಿಡಿದು ಐರಾವತವನ್ನೇರುತ್ತಾನೆ, ಆ ಕ್ಷಣದಲ್ಲಿಯೇ ವೃತ್ರನಿಂದ ಸೆಳೆಯಲ್ಪಟ್ಟ ದೇವತೆಗಳ ತೇಜಸ್ಸು ಮರುಸ್ಥಾಪನೆಯಾಗುತ್ತದೆ. ತ್ರಿಮೂರ್ತಿಗಳ ತೇಜಸ್ಸನ್ನು ಕೂಡ ಒಳಗೊಂಡಂತೆ ದೇವೇಂದ್ರ ಪ್ರಕಾಶಮಾನನಾಗಿ ಕಂಗೊಳಿಸುತ್ತಾನೆ. ದೇವತೆಗಳು ಹರ್ಷೋದ್ಗಾರ ಮಾಡುತ್ತಾರೆ. ಎಲ್ಲರಲ್ಲಿಯೂ ವೃತ್ರನನ್ನು, ಮತ್ತವನ ಆಸುರೀ ಸೇನೆಯನ್ನು ಎದುರಿಸಬೇಕೆಂಬ ಛಲ-ಬಲಗಳು ಕೂಡಿಕೊಳ್ಳುತ್ತದೆ. ದೇವಸೇನೆಯು ಯುದ್ಧೋತ್ಸಾಹದಿಂದ ಇಂದ್ರನ ನಿರ್ದೇಶನದಂತೆ ಮುಂದೆ ಮಂದೆ ಸಾಗುತ್ತದೆ. ರುದ್ರರು, ಆದಿತ್ಯರು, ವಸುಗಳು, ಸಿದ್ಧರು, ಸಾಧ್ಯರು, ವಿಶ್ವೇದೇವತೆಗಳನ್ನು ಒಡಗೂಡಿದ ಇಂದ್ರನು ಸೈನ್ಯವು ಆಕ್ಷಣದಲ್ಲಿ ಮೃತ್ಯು ದೇವತೆಗೂ ಭೀತಿ ಉಂಟುಮಾಡುವ ಹಾಗೆ ಕಾಣಿಸುತಿತ್ತು. ದೇವತೆಗಳು ಸೈನ್ಯ ಸಮೇತರಾಗಿ ಬರುತ್ತಿರುವ ವರ್ತಮಾನವನ್ನು ತಿಳಿದ ವೃತ್ರನು, ನಮೂಚಿ ಶಂಬರ, ಖುಷಭ,ಹಯಗ್ರೀವ, ಶಂಕುಶಿರ,ಅಯೋಮುಖ, ವಿಪ್ರಚಿತ್ತಿ, ಹೇತಿ, ಪ್ರಹೇತಿ, ಉತ್ಕಲ, ಸುಮಾಲಿ ಮುಂತಾದ ಸಾವಿರಾರು ಅಸುರ ಪ್ರಮುಖರನ್ನು ಒಡಗೂಡಿಕೊಂಡು ರಣೋತ್ಸಾಹದಿಂದ ಮುನ್ನುಗ್ಗಿ ಬಂದನು. ಸುರಾಸುರರಿಗೆ ಭಯಂಕರವಾದ ರಣ ಏರ್ಪಟ್ಟಿತು. ಅಸುರರು ತಮ್ಮಲ್ಲಿದ್ದ ಕ್ರೂರವಾದ, ಹರಿತವಾದ ಅಲಗುಗಳನ್ನು ಹೊಂದಿದ ಆಯುಧಗಳನ್ನು ದೇವತೆಗಳ ಮೇಲೆ ಪ್ರಯೋಗಿಸಿದರು. ಹರಿತವಾದ ಅಲಗುಗಳನ್ನು ಹೊಂದಿದ ಬಾಣಗಳನ್ನು ದೇವಸೇನೆಯನ್ನು ಗುರಿಯಾಗಿಸಿಕೊಂಡು ಪ್ರಯೋಗಿಸಿದರು. ಅಸುರರು ಪ್ರಯೋಗಿಸಿದ ಆಯುಧ ಮತ್ತು ಬಾಣಗಳಿಂದ ಆಗಸವೇ ತುಂಬಿ ಹೋಯಿತು. ಕಪ್ಪಾದ ಕಾರ್ಮೋಡ ಕವಿದಂತೆ ಆಯುಧಗಳಿಂದ ತುಂಬಿ ಹೋದ ಆಗಸದಿಂದ ಕತ್ತಲೆಯೇ ಆವರಿಸಿಹೋಯಿತು. ಆದರೆ ದೇವತೆಗಳು ಎದೆಗುಂದದೇ ಕ್ಷಣಮಾತ್ರದಲ್ಲಿ ತಮ್ಮತ್ತ ಬರುತಿದ್ದ ಅಸುರರ ಆಯುಧಗಳನ್ನು ಕತ್ತರಿಸಿ ಹಾಕಿದರು. ಅವರು ಪ್ರಯೋಗಿಸಿದ ಎಲ್ಲಾ ಆಯುಧಗಳೂ ಗಗನದಲ್ಲಿಯೇ ಕತ್ತರಿಸಲ್ಪಟ್ಟು ಚೂರು ಚೂರಾಗಿ ಬಿದ್ದು ಹೋದವು. ಆವಾಗ ರಾಕ್ಷಸರು ದೊಡ್ಡ ದೊಡ್ಡ ಮರಗಳನ್ನು, ಬೆಟ್ಟಗಳನ್ನು ಕಿತ್ತು ದೇವತೆಗಳನ್ನು ಪ್ರಹರಿಸುವ ಸಲುವಾಗಿ ಎಸೆದರು, ಅವುಗಳನ್ನು ಕೂಡ ದೇವತೆಗಳು ತಮ್ಮ ಆಯುಧಗಳಿಂದ ಕತ್ತರಿಸಿ ಹಾಕಿದರು. ತಾವು ಪ್ರಯೋಗಿಸಿದ ಆಯುಧಗಳು ದೇವತೆಗಳಿಗೆ ಒಂದು ಗಾಯವನ್ನು ಮಾಡಲು ವ್ಯರ್ಥವಾದದ್ದನ್ನು ನೋಡಿದ ಅಸುರರು ತಮ್ಮ ಎಲ್ಲಾ ಆಯುಧಗಳೂ ಬರಿದಾದಾಗ ಯುದ್ಧವನ್ನು ಮುಂದುವರಿಸುವ ಯಾವ ದಾರಿಯೂ ಕಾಣಿಸದೇ ದೇವತೆಗಳ ರಣಕೇಕೆಯನ್ನು ಕೇಳಿ ಭಯಭೀತರಾಗಿ ಯುದ್ಧಭೂಮಿಯಿಂದ ಪಲಾಯನಮಾಡತೊಡಗಿದರು. ಆ ಕ್ಷಣದಲ್ಲಿ ದೇವತೆಗಳು ಅವರ ಎಲ್ಲಾ ಬಲ- ಶೌರ್ಯವನ್ನು ಸೆಳೆದುಕೊಂಡು ನಿರ್ವೀರ್ಯರನ್ನಾಗಿಸಿಬಿಟ್ಟರು. ಈ ಘಟನೆಯಿಂದ ವೃತ್ರಾಸುರ ಕಂಗೆಡಲಿಲ್ಲ ಬದಲಾಗಿ ನಗುತ್ತಾ ತನ್ನವರಿಗೆ ಧೈರ್ಯ ತುಂಬುವ ಮಾತನಾಡಿದ.." ಅಸುರರಾದ ನೀವು ದೇವ ಸೈನ್ಮವನ್ನು ನೋಡಿ ಪ್ರಾಣಭೀತಿಯಿಂದ ಓಡಬೇಕಾಗಿಲ್ಲ... ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಒಂದು ಅಂತ್ಯವೆಂಬುದು ನಿಶ್ಚಯ, ಯಾರೂ ಇಲ್ಲಿ ಮರಣವರ್ಜಿತರಾಗಿ ಇರಲು ಸಾಧ್ಯವೇ ಇಲ್ಲ. ಹಾಗಿದ್ದರೂ ಎರಡು ರೀತಿಯ ಮರಣ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ.. ಮೊದಲನೆಯದು ಯೋಗಿಗಳು ತಮ್ಮ ದೇಹವನ್ನು ತೊರೆಯಲು ತಾವೇ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಅವರು ಇಚ್ಛಾಮರಣಿಗಳಂತೆ ಸ್ವತಂತ್ರರು, ಬ್ರಹ್ಮಚಿಂತನೆಯನ್ನು ಮಾಡುತ್ತಾ ಯಾವಾಗ ಬೇಕಾದರೂ ದೇಹ ತೊರೆಯಬಲ್ಲರು. ಇನ್ನೊಂದು ಮಾರ್ಗವೆಂದರೆ ರಣರಂಗದಲ್ಲಿ ಶತ್ರುಗಳಿಗೆ ಹೆದರದೇ .. ಬೆನ್ನು ತೋರಿಸದೇ ಅವರ ಶಸ್ತ್ರಗಳಿಗೆ ಎದೆಯೊಡ್ಡುವುದು ಇಂತಹ ಸುವರ್ಣಾವಕಾಶ ನಿಮ್ಮ ಮುಂದಿದೆ ಇದರಿಂದಲೂ ನೀವು ಸ್ವರ್ಗವನ್ನು ಪಡೆಯಬಹುದು ಹಾಗಾಗಿ ಧೈರ್ಯದಿಂದ ಎದುರಿಸಿ, ಬದುಕಿದರೂ ಸ್ವರ್ಗ... ಅಳಿದರೂ ಸ್ವರ್ಗ". ಹೀಗೆ ವೀರೋಚಿತವಾದ ಮಾತುಗಳನ್ನು ವೃತ್ರನು ಹೇಳುತ್ತಿದ್ದರೂ ಅದನ್ನು ಕೇಳುವ ಸಹನೆಯೂ ಅವನ ಸಂಗಡಿಗರಿಗೆ ಇರಲಿಲ್ಲ, ಹೇಗಾದರೂ ಜೀವ ಉಳಿಸಿಕೊಳ್ಳಬೇಕೆಂದು ಯುದ್ಧಭೂಮಿಯಿಂದ ಓಡತೊಡಗಿದರು. ಆದರೂ ಅವರನ್ನು ಅಟ್ಟಿಸಿಕೊಂಡು ಬರುತ್ತಿದ್ದ ದೇವತೆಗಳು ಹಿಂದಿನಿಂದಲೇ ಪ್ರಹರಿಸುತ್ತಿದ್ದರು. ಇದನ್ನು ನೋಡಿದ ವೃತ್ರಾಸುರನ ಕೋಪ ಇಮ್ಮಡಿಯಾಯಿತು. ಅಸುರರನ್ನು ಬೆನ್ನಟ್ಟಿ ಬರುತಿದ್ದ ದೇವತೆಗಳನ್ನು ತಾನೇ ಏಕಾಂಗಿಯಾಗಿ ತಡೆದು ನಿಲ್ಲಿಸಿದ.🙏 ಮುಂದುವರಿಯುವುದು🙏🙏

Saturday, August 2, 2025

ವೃತ್ರಾಸುರ 5

ದೇವತೆಗಳನ್ನೆಲ್ಲಾ ತನ್ನ ಜೊತೆಗೆ ಕೊಡಿಕೊಂಡು ಬಂದ ಇಂದ್ರ ದದೀಚಿ ಮಹರ್ಷಿಗಳ ದರ್ಶನ ಮಾಡಿ ಕೈಮುಗಿದು ನಿಲ್ಲುತ್ತಾನೆ. ಬಂದಂತಹ ದೇವತೆಗಳನ್ನು ನೋಡಿದ ದದೀಚಿ ಮಹರ್ಷಿ ಅವರನ್ನ ಸತ್ಕರಿಸಿ ತನ್ನಾಶ್ರಮದವರೆಗೆ ಆಗಮಿಸಿದ ಉದ್ದೇಶವನ್ನು ತಿಳಿಸಿರೆಂದು ಕೇಳಿಕೊಳ್ಳುತ್ತಾನೆ. ಆಗ ಇಂದ್ರಾದಿಗಳು ವೃತ್ರಾಸುರನ ಉತ್ಪತ್ತಿಯ ವಿದ್ಯಮಾನವನ್ನು ತಿಳಿಸಿ ಅವನನ್ನು ವಧಿಸುವ ಸಲುವಾಗಿ ತಮ್ಮ ಅಮೂಲ್ಯವಾದ ದೇಹವನ್ನು ದಾನ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಆ ಮಾತನ್ನು ಕೇಳಿದ ದದೀಚಿ ಮಹರ್ಷಿ " ಅಯ್ಯಾ ಇಂದ್ರಾದಿ ದೇವತೆಗಳೇ... ನೀವು ದರ್ಶನಭಾಗ್ಯವನ್ನು ಕರುಣಿಸಿದ್ದು ನನಗೆ ಪುಣ್ಯದಾಯಕವೇ ಹೌದು ಆದರೆ.. ನೀವು ಅಪೇಕ್ಷಿಸುತ್ತಿರುವುದನ್ನು ಕೇಳಿದಾಗ ಆಶ್ಚರ್ಯ ಎಂದೆನಿಸುತ್ತಿದೆ. ಈ ಪ್ರಪಂಚದಲ್ಲಿ ಯಾವುದೇ ಜೀವಿಯೇ ಆಗಿರಲಿ ತನ್ನ ದೇಹದ ಮೇಲೆ ಅಭಿಮಾನವನ್ನು ಹೊಂದಿರುತ್ತದೆ. ತನ್ನ ದೇಹ ಪೋಷಣೆಗೆ ಬೇಕಾದ್ದನ್ನು ಗಳಿಸಲು ಸಾಹಸ ಪಡುತ್ತದೆ. ಭೂಮಿಯಲ್ಲಿ ಹುಟ್ಟಿದ್ದೇವೆ ಎಂದಾದರೆ ನಮ್ಮ ಅಸ್ತಿತ್ವವನ್ನು ತೋರಿಸುವುದೇ ದೇಹವಲ್ಲವೇ... ದೇಹವನ್ನು ತೊರೆದಲ್ಲಿಗೇ ಆ ಜೀವಿಯ ಅಂತ್ಯವಾಯಿತು ಎಂಬುದು ಸತ್ಯ. ಈ ನೆಲೆಯಲ್ಲಿಯೇ ಅಲ್ಲವೇ ಪ್ರತಿಯೊಂದು ಜೀವಿಯೂ ದೇಹ ತೊರೆಯುವಾಗ ಅಂದರೆ ಮರಣ ಕಾಲದಲ್ಲಿ ದುಃಖಿಸುವುದು ಅಯ್ಯೋ ಬಿಟ್ಟು ಹೋಗುವೆನಲ್ಲಾ.. ಎಂದು, ಹಾಗಿದ್ದಾಗ ನನಗೂ ಕೂಡ ಅಂತಹ ದೇಹಾಭಿಮಾನ ಇದ್ದರೆ ತಪ್ಪಲ್ಲ ತಾನೆ. ಈ ಜೀವನದಲ್ಲಿ ಏನನ್ನು ಸಾಧಿಸಿದೆನೋ ಅದೆಲ್ಲವೂ ಈ ದೇಹದಿಂದ ಎಂದು ಭಾವಿಸಿದರೆ ತಪ್ಪೇ..? ಹಾಗಿರುವಾಗ ಅಂತಹ ದೇಹವನ್ನೇ ನೀವು ಬಯಸಿದರೆ ಅದನ್ನು ಅಷ್ಟು ಸುಲಭವಾಗಿ ಕೊಟ್ಟುಬಿಡುತ್ತೇನೆ ಎಂದು ಹೇಳಲಾದೀತೆ..'' . ಹೀಗೆ ದೇವತೆಗಳ ಮುಂದೆ ಪ್ರಶ್ನಾರ್ಥಕವಾಗಿ ವಿಷಯವನ್ನು ಮುಂದಿಟ್ಟರು. ಮಹರ್ಷಿಗಳ ಮಾತಿಗೆ ಪ್ರತಿಯಾಗಿ ಇಂದ್ರ.. "ಸ್ವಾಮೀ ಕರ್ಮಭೂಮಿಯಲ್ಲಿ ಹುಟ್ಟಿದ ಸಾಮಾನ್ಯ ಜೀವಿಗಳಿಗೆ ನೀವು ಹೇಳಿದಂತೆ ದೇಹಾಭಿಮಾನ ಸಹಜ ಆದರೆ ನಿಮ್ಮಂತಹ ಜ್ಞಾನಿಗಳು ಲೋಕಕಲ್ಯಾಣದ ಕಾರಣಕ್ಕಾಗಿಯೇ ಸಮಸ್ತವನ್ನು ವಿನಿಯೋಗಿಸುವವರು, ಕೊಡು ಎಂದು ಕೇಳುವವರು ಸ್ವಾರ್ಥಿಗಳಾಗಿರುತ್ತಾರೆ. ಅವರಿಗೆ ಕೊಡುವವರ ಕಷ್ಟ ಗೊತ್ತಾಗುವದಿಲ್ಲ ಹಾಗೇ ಗೊತ್ತಾದರೆ ಅವರು ಕೇಳಲಾರರು, ಇನ್ನು ಕೊಡುವವನಿಗೂ ಕೇಳುವವನ ಕಷ್ಟದ ಅರಿವಿರುವುದಿಲ್ಲ ಹಾಗೆ ಅರಿವಿಗೆ ಬಂದರೆ ಅವನು ಇಲ್ಲಾ ಎಂದು ಹೇಳುವುದೂ ಇಲ್ಲ. ನೀವು ಗಳಿಸಿದ ವಿದ್ಯಾ ಸಂಪತ್ತೋ... ತಪ: ಶ್ಯಕ್ತಿಯೋ ಅದು ಲೋಕೋದ್ಧಾರಕ್ಕೆ ವಿನಿಯೋಗವಾದರೆ ಅದರಿಂದ ಅತ್ಯಂತ ಸಂತೋಷ ಹೊಂದುವವರು ನೀವು. ಈ ದೇಹ ಎಂಬುದು ನಿಮಗೆ ಕೇವಲ ಒಂದು ಮಾಧ್ಯಮ ಅಷ್ಟೇ ಅಲ್ಲವೇ... ನೀವು ಹೀಗೆ ಭಾವಿಸಿದ್ದೀರಿ ಎಂಬ ಕಾರಣದಿಂದಲೇ ಶ್ರೀಮನ್ಮಹಾವಿಷ್ಣು ನಮ್ಮನ್ನು ನಿಮ್ಮ ಬಳಿಗೆ ಕಳುಹಿಕೊಟ್ಟಿದ್ದಾನೆ. ದುಷ್ಟನಾದ ವೃತ್ರನನ್ನು ತರಿದು ಲೋಕ ಲೋಕಗಳಿಗೆ ಕ್ಷೇಮವನ್ನು ಉಂಟುಮಾಡಲು ಯೋಗ, ವ್ರತಾನುಷ್ಠಾನಗಳಿಂದ ಕಠಿಣವಾದ ನಿಮ್ಮ ದೇಹದಿಂದಲೇ ವಿಶಿಷ್ಟವಾದ ಒಂದು ಆಯುಧ ಸಿದ್ಧವಾಗಬೇಕಾಗಿದೆ". ಇಂದ್ರನಾಡಿದ ಮಾತನ್ನು ಕೇಳಿದ ದದೀಚಿ ಮಹರ್ಷಿ ಆಶ್ಚರ್ಯದಿಂದ ... " ಏನೂ ಮಹಾವಿಷ್ಣು ಆಡಿದ ಮಾತೇ ಇದು... ದೇವತೆಗಳೇ ನಿಮ್ಮಿಂದ ಧರ್ಮಸಮ್ಮತವಾದ ಮಾತುಗಳನ್ನೇ ಕೊಳಬೇಕೆಂದು ಬಯಸಿ ನಾನು ಮೊದಲಾಡಿದ ಮಾತುಗಳು . ಅಳಿದು ಹೋಗಬೇಕಾದ ಈ ದೇಹ ದುಃಖದಲ್ಲಿರುವ ನೀವೋ ಅಲ್ಲಾ ನಿಮ್ಮ ಮುಖೇನ ಲೋಕದ ಉದ್ಧಾರಕ್ಕೆ ವಿನಿಯೋಗವಾಗುತ್ತದೆ ಎಂದಾದರೆ ಅದೇ ಭಾಗ್ಯವಲ್ಲವೆ... ಈ ದೇಹ ಪಂಚಭೂತಗಳನ್ನು ಬಳಸಿಕೊಂಡು ಪುಷ್ಠವಾಗಿರುವುದು. ಮುಂದೆ ಇದು ಅಲ್ಲಿಯೇ ಲೀನವಾಗಬೇಕಾದ್ದು ಆದರೆ.... ಅದೂ ವ್ಯರ್ಥವಾಗಿ ಮಣ್ಣಿನಲ್ಲಿ ಮಣ್ಣಾಗಿ ಹೋಗದೇ ನಿಮ್ಮ ಉಪಯೋಗಕ್ಕೆ ಬರುವುದು ಎಂದಾದರೆ ಈಗಲೇ ನಾನು ನಿಮಗಾಗಿ ನನ್ನ ದೇಹವನ್ನು ತೊರೆಯುತ್ತೇನೆ. ಈ ದೇಹವನ್ನು ನಿಮಗೆ ಬೇಕಾದ ಹಾಗೆ ಬಳಸಿಕೊಳ್ಳಬಹುದು". ಹೀಗೆ ಹೇಳಿದ ದದೀಚಿ ಮಹರ್ಷಿಗಳು ತಮ್ಮ ಸಾಂಸಾರಿಕವಾದ ಎಲ್ಲ ಕಟ್ಟುಗಳನ್ನು ಕತ್ತರಿಸಿ, ಇಂದ್ರಿಯ, ಪ್ರಾಣ, ಮನಸ್ಸು, ಬುದ್ಧಿ, ಎಲ್ಲವನ್ನೂ ಸಂಯಮಕ್ಕೆ ತಂದುಕೊಂಡು ತಮ್ಮನ್ನು ಪರಬ್ರಹ್ಮನಲ್ಲಿ ಲೀನಗೊಳಿಸಿದವರಾಗಿ ಯೋಗದಿಂದ ಅವರ ದೇಹವನ್ನು ತೊರೆದು ಬಿಟ್ಟರು. 🙏 ಮುಂದುವರಿಯುವುದು 🙏🙏

Monday, July 28, 2025

ವೃತ್ರಾಸುರ 4

ದಶದಿಕ್ಕುಗಳನ್ನೂ ವ್ಯಾಪಿಸಿ ಬೆಳೆದು ನಿಂತ ವೃತ್ರಾಸುರನನ್ನು ಎದುರಿಸಲು ದೇವತೆಗಳು ಆಯುಧಪಾಣಿಗಳಾಗಿ ಮುಂದೆ ಬಂದರು. ಆದರೆ ವೃತ್ರನ ಸಮ್ಮಖದಲ್ಲಿ ದೇವತೆಗಳ ಪರಾಕ್ರಮ ಉಡುಗಿಹೋಯಿತು. ದೇವತೆಗಳ ಆಯುಧಗಳನ್ನೆಲ್ಲಾ ವೃತ್ರನು ನುಂಗಿಬಿಟ್ಟ, ಯಾವ ಆಯುಧಗಳಿಂದಲೂ ವೃತ್ರನನ್ನು ನೋಯಿಸಲೂ ಆಗಲಿಲ್ಲ. ಸಮ್ಮಖದಲ್ಲಿ ನಿಂತ ದೇವತೆಗಳ ತೇಜಸ್ಸನ್ನೂ ಕೂಡ ವೃತ್ರ ಸೆಳೆದುಕೊಂಡುಬಿಟ್ಟ. ಈಗ ಇಂದ್ರಾದಿ ದೇವತೆಗಳಿಗೆ ಇವನು ಸಾಮಾನ್ಯನಾದ ರಾಕ್ಷಸನಲ್ಲ ಎಂಬುದು ಅರಿವಿಗೆ ಬಂತು. ಆತನ ಎದುರು ನಿಲ್ಲಲಾರದೇ ಅವರೆಲ್ಲಾ ಪಲಾಯನ ಮಾಡಿದರು. ಕೊನೆಗೆ ಎಲ್ಲರೂ ಒಂದು ಕಡೆ ಸೇರಿ ಇಂತಹ ದುಷ್ಟ ಶಕ್ತಿಯನ್ನು ನಿವಾರಿಸಲು ಮಹಾವಿಷ್ಣುವಿನ ನಿರ್ದೇಶನವೇ ಬೇಕೆಂಬ ತೀಮಾನಕ್ಕೆ ಬಂದರು. ಎಲ್ಲರೂ ಕ್ಷೀರಸಾಗರದ ತಡಿಗೆ ಬಂದು ಬಹುವಿಧವಾಗಿ ಶ್ರೀ ಹರಿಯನ್ನು ಪ್ರಾರ್ಥಿಸತೊಡಗಿದರು. ದೇವತೆಗಳ ಪ್ರಾರ್ಥನೆಯಿಂದ ಸುಪ್ರೀತನಾಗಿ ಶ್ರೀಮನ್ನಾರಾಯಣ ಪ್ರತ್ಯಕ್ಷನಾದ. ದೇವತೆಗಳನ್ನು ಪ್ರೀತಿಯಿಂದ ಸಂತೈಸಿದ ಶ್ರೀಹರಿ ತನ್ನನ್ನು ಏಕೋಭಾವದಿಂದ ಸ್ತುತಿಸಿದ ಕಾರಣವನ್ನು ಕೇಳಿದ. ಆಗ ದೇವತೆಗಳು ವೃತ್ರಾಸುರನಿಂದ ಆದ ಪರಾಜಯವನ್ನೂ .. ಮತ್ತು ತಮ್ಮ ತೇಜಸ್ಸು ಕೂಡ ವ್ಯರ್ಥವಾದ ವಿಷಯವನ್ನು ತಿಳಿಸಿ ತಮ್ಮನ್ನು ಕಾಪಾಡಬೇಕಾದವ ನೀನೇ ಎಂದು ಹೇಳಿ ಕೈಮುಗಿದು ನಿಂತರು. ಆಗ ಶ್ರೀಹರಿ " ದೇವತೆಗಳೇ ದುಷ್ಟನಾದ ವೃತ್ರಾಸುರ ಇಂದ್ರನಿಂದಲೇ ಹತನಾಗಬೇಕಾದವನು .. ಆದರೆ ಅದಕ್ಕೆ ವಿಶೇಷವಾದ ಆಯುಧದ ಅವಶ್ಯಕತೆ ಇದೆ. ಋಷಿ ಶಿರೋಮಣಿಯಾದ ದದೀಚಿ ಮಹರ್ಷಿಗಳು ವ್ರತ -ಉಪಾಸನೆ - ತಪಸ್ಸುಗಳಿಂದ ತಮ್ಮ ದೇಹವನ್ನು ಅತ್ಯಂತ ಕಠಿಣಗೊಳಿಸಿಕೊಂಡಿದ್ದಾರೆ. ಅವರೇ ಮೊದಲು ಅಥರ್ವವೇದದ ಮುಖೇನ ಆತ್ಮವಿಧ್ಯೆಯನ್ನು ಬಳಸಿ ನನ್ನನ್ನು ಆರಾಧಿಸಿ ನಾರಾಯಣ ಕವಚವನ್ನು ಅರಿತವರು. ಅವರು ಅದನ್ನು ತೃಷ್ಟ ನಿಗೂ .. ತ್ವಷ್ಟನು ವಿಶ್ವರೂಪನಿಗೂ .. ವಿಶ್ವರೂಪನು ನಿನಗೂ ಉಪದೇಶ ಮಾಡಿದನು. ಅಶ್ವಿನೀ ದೇವತೆಗಳು ಕೂಡಾ ದದೀಚಿಗಳ ಆತ್ಮವಿದ್ಯೆಯಿಂದಲೇ ಅಮರತ್ವವನ್ನು ಪಡೆದರು. ಅಂತಹ ದದೀಚಿಯ ದೇಹವನ್ನೇ ನೀವು ಬೇಡಿ ಪಡೆದು ಅದರ ಮೂಳೆಗಳಿಂದ ವಿಶ್ವಕರ್ಮನ ಮೂಲಕ ಒಂದು ವಿಶಿಷ್ಟವಾದ ಆಯುಧ ಸಿದ್ದ ಮಾಡಿಕೊಳ್ಳಿ. ಇಂದ್ರ.. ನೀನು ಆ ಆಯುಧದ ಮುಖೇನವೇ ವೃತ್ರಾಸುರನ ತಲೆಯನ್ನು ಕತ್ತರಿಸು ನೀವು ಕಳೆದುಕೊಂಡ ಸಂಪತ್ತುಗಳೆಲ್ಲ ಮತ್ತೆ ನಿಮಗೆ ದೊರಕುತ್ತದೆ". ಹೀಗೆ ಹೇಳಿ ಮಹಾವಿಷ್ಣು ದೇವತೆಗಳಿಗೆ ಹರಸಿ ಅದೃಷ್ಯನಾದ. ಇಂದ್ರಾದಿ ದೇವತೆಗಳು ದದೀಚಿ ಮಹರ್ಷಿಗಳ ಆಶ್ರಮದತ್ತ ತೆರಳಿದರು. ಇದಕ್ಕೂ ಪೂರ್ವದಲ್ಲಿ ಒಂದು ಘಟನೆ ನಡೆದಿತ್ತು. ಬ್ರಹ್ಯವಿಧ್ಯೆಯನ್ನು ಅರಿತ ದದೀಚಿ ಮಹರ್ಷಿಗಳ ಬಳಿಗೆ ಒಂದು ದಿನ ಅಶ್ವಿನೀ ಕುಮಾರರು ತೆರಳಿ ತಮಗೆ ಬ್ರಹ್ಮವಿದ್ಯೆಯನ್ನು ಉಪದೇಶ ಮಾಡಬೇಕೆಂದು ಕೇಳಿಕೊಂಡರು .. ಆದರೆ ಯಾವುದೋ ಕಾರ್ಯದಲ್ಲಿ ವ್ಯಸ್ಥರಾಗಿದ್ದ ಮಹರ್ಷಿಗಳು "ಈಗ ಸಮಯವಿಲ್ಲ ಇನ್ನೊಮ್ಮೆ ಬನ್ನಿ" ಎಂದು ಹೇಳಿ ಕಳುಹಿಸಿದ್ದರು. ಅವರು ಹಿಂತಿರುಗಿದ ಮೇಲೆ ಇಂದ್ರನಿಗೆ ಈ ವಿಷಯ ತಿಳಿಯಿತು. ತಾನೇ ಮಹರ್ಷಿಗಳ ಬಳಿಗೆ ಹೋಗಿ "ಯಾವ ಕಾರಣಕ್ಕೂ ಅಶ್ವಿನೀಕುಮಾರರಿಗೆ ವಿದ್ಯೆಯನ್ನು ಉಪದೇಶಮಾಡಕೂಡದೆಂದೂ... ತಪ್ಪಿ ಮಾಡಿದ್ದೇ ಆದರೆ ನಿಮ್ಮ ಶಿರಶ್ಚೇದ ಮಾಡುವೆ. " ಎಂದೂ ಹೇಳಿ ಬಂದಿದ್ದ. ಅಶ್ವಿನೀ ದೇವತೆಗಳು ಮತ್ತೊಂದು ದಿನ ದದೀಚಿಗಳ ಬಳಿಗೆ ತೆರಳಿ ವಿದ್ಯೆಯನ್ನು ಉಪದೇಶ ಮಾಡಲು ಕೇಳಿಕೊಂಡರು, ಆಗ ಮಹರ್ಷಿಗಳು ದೇವೇಂದ್ರನ ಸೂಚನೆಯನ್ನು ಹೇಳಿದರು. ಆಗ ಅಶ್ವಿನೀ ದೇವತೆಗಳು ಅದಕ್ಕೆ ಯೋಚಿಸುವ ಅವಶ್ಯಕತೆ ಇಲ್ಲಾ... ದೇವೇಂದ್ರ ಆ ಕಾರಣಕ್ಕಾಗಿ ತಲೆ ಕಡಿಯುವುದೇ ಆದರೆ ಅದಕ್ಕೆ ಬೇಕಾದ ಉತ್ತರ ತಮ್ಮಲ್ಲಿದೆಯೆಂದು ಹೇಳಿ... ನಾವು ಮೊದಲೇ ನಿಮ್ಮ ತಲೆಯನ್ನು ಕಡಿದು ಬೇರೊಂದು ತಲೆಯನ್ನು ಜೋಡಿಸುತ್ತೇವೆ, ಇಂದ್ರ ಬಂದು ನಿಮ್ಮ ತಲೆ ಕಡಿದರೆ ಆವಾಗ ಈಗ ಕತ್ತರಿಸಿದ ರುಂಡವನ್ನೇ ಮತ್ತೆ ತಂದು ಜೋಡಿಸುತ್ತೇವೆ ಎಂದರು. ಅವರ ಮಾತನ್ನು ಮೊದಲು ದದೀಚಿ ಮಹರ್ಷಿ ನಂಬದೇ ಹೋದರೂ ಕೊನೆಗೆ ಹಾಗೆಯೇ ಆಗಲೆಂದು ಹೇಳಿದಾಗ ಅಶ್ವಿನೀ ಕುಮಾರರು ದದೀಚಿಯ ತಲೆ ಕತ್ತರಿಸಿ ಆ ತಲೆಗೆ ಬದಲಾಗಿ ಒಂದು ಕುದುರೆಯ ತಲೆಯನ್ನು ಜೋಡಿಸುತ್ತಾರೆ. ಮಹರ್ಷಿಗಳು ಅದೇ ಅಶ್ವದ ಶಿರದಿಂದಲೇ ಅವರಿಗೆ ಬೋಧಿಸಬೇಕಾದ್ದನ್ನು ಪೂರೈಸುತ್ತಾರೆ.. ಆದ್ದರಿಂದಲೇ ದದೀಚಿ ಮಹರ್ಷಿಗೆ "ಅಶ್ವಶಿರಾ" ಅಂದರೆ ಕುದುರೆಯ ತಲೆಯುಳ್ಳವನು ಎಂಬ ಹೆಸರೂ ಬಂತು. 🙏🙏 ದದೀಚಿಯ ದೇಹದಾನ ಮುಂದಿನ ಭಾಗದಲ್ಲಿ🙏🙏

Sunday, July 27, 2025

ವೃತ್ರಾಸುರ 3

. ವಿಶ್ವರೂಪನಿಂದ ನಾರಾಯಣ ಕವಚನನ್ನು ಉಪದೇಶ ಪಡೆದ ಇಂದ್ರ, ಸ್ವರ್ಗಲೋಕವನ್ನು ಕೈವಶ ಮಾಡಿಕೊಂಡಿದ್ದ ಅಸುರರನ್ನು ಅತ್ಯಂತ ಸುಲಭದಲ್ಲಿ ಜಯಿಸಿ ಮತ್ತೆ ಪಡೆಯುತ್ತಾನೆ. ಇತ್ತ ವಿಶ್ವರೂಪ ದೇವಗುರುವಾಗಿ ಉಳಿದುಕೊಂಡಿದ್ದರೂ ಸಂಪೂರ್ಣವಾಗಿ ದೇವತೆಗಳಿಗಾಗಿಯೇ ಕಾರ್ಯಪ್ರವೃತ್ತನಾಗಲಿಲ್ಲ. ದೇವತೆಗಳ ಸಮ್ಮುಖದಲ್ಲಿ ಅವರಿಗೆ ಆಹುತಿ ನೀಡಿದರೆ... ಯಜ್ಞಗಳಲ್ಲಿ ದೇವತೆಗಳಿಗೆ ಗೊತ್ತಾಗದಂತೆ ಅಸುರರಿಗೂ ಹವಿಸ್ಸು ನೀಡುತ್ತಿದ್ದ. ಅನುಮಾನಗೊಂಡ ದೇವೇಂದ್ರನಿಗೆ ಈ ಕಪಟ ಅರಿವಿಗೆ ಬಂತು. ಕೃದ್ಧನಾದ ಇಂದ್ರ ಹಿಂದೆ ಮುಂದೆ ನೋಡದೇ ವಿಶ್ವರೂಪನ ಮೂರೂ ತಲೆಯನ್ನು ಕತ್ತರಿಸಿ ಹಾಕಿದ. ಹಾಗೆ ಕತ್ತರಿಸಿದ ತಲೆಗಳಲ್ಲಿ ಸೋಮರಸವನ್ನು ಕುಡಿಯುತ್ತಿದ್ದ ತಲೆ ಕಪಿಂಜಲ ಪಕ್ಷಿಯ ರೂಪವನ್ನೂ, ಸುರಾಪಾನ ಮಾಡುತ್ತಿದ್ದ ತಲೆ ಗುಬ್ಬಚ್ಚಿಯ ರೂಪವನ್ನೂ, ಮತ್ತು ಅನ್ನವನ್ನು ಉಣ್ಣುತ್ತಿದ್ದ ತಲೆ ತಿತ್ತಿರಿ ಪಕ್ಷಿಯ ರೂಪವನ್ನೂ ಹೊಂದಿದವು. ವಿದ್ಯಾವಂತನಾದರೂ ದುರ್ನೀತಿವಂತನಾಗಿ ವರ್ತಿಸಿದ ವಿಶ್ವರೂಪ ತಾನು ಮಾಡಿದ ಅಪಚಾರಕ್ಕಾಗಿ ತನ್ನ ಜೀವವನ್ನೇ ತೊರೆದ. ಇತ್ತ ಆತನ ತಲೆಯನ್ನು ಕಡಿದ ದೇವೇಂದ್ರನಿಗೆ ಬ್ರಹ್ಮಹತ್ಯಾ ದೋಷ ಅಂಟಿಕೊಂಡಿತು. ಇಂದ್ರ ತನಗೆ ಹತ್ತಿಕೊಂಡ ದೋಷವನ್ನು ನಾಲ್ಕು ಭಾಗವಾಗಿ ವಿಭಾಗಿಸಿದ. ಅದರಲ್ಲಿ ಒಂದು ಭಾಗವನ್ನು ಭೂಮಿಗೆ ನೀಡಿದ... ಅದರ ಫಲವಾಗಿಯೇ ಭೂಮಿಯಲ್ಲಿ ಅಲ್ಲಲ್ಲಿ ಮರುಭೂಮಿಯ ನಿರ್ಮಾಣವಾಯಿತು. ದೋಷ ಸ್ವೀಕರಿಸಿದ್ದಕ್ಕೆ ಪ್ರತಿಯಾಗಿ ಭೂಮಿಗೆ ಒಂದು ವರವನ್ನೂ ನೀಡಿದ. ಆ ವರದ ಕಾರಣದಿಂದಲೇ ಭೂಮಿಯಲ್ಲಿರುವ ಹಳ್ಳಕೊಳ್ಳಗಳು ಕ್ರಮೇಣ ಭರ್ತಿಯಾಗಿ ಸಮತಟ್ಟಾಗುವವು. ಎರಡನೆಯ ಭಾಗವನ್ನು ವೃಕ್ಷಗಳು ಪಡೆದವು. ಅದರ ಸೂಚನೆಯಾಗಿಯೇ ವೃಕ್ಷಗಳಲ್ಲಿ ಅಂಟಿನ ರೂಪ ಕಾಣುವುದು. ವರರೂಪದಲ್ಲಿ ತಮ್ಮಲ್ಲಿ ಕತ್ತರಿಸಲ್ಪಟ್ಟ ರೆಂಬೆ ಕೊಂಬೆಗಳು ಚಿಗುರಿಕೊಳ್ಳೊಲಿ ಎಂದು ಕೇಳಿದವು. ಮೂರನೆಯ ಭಾಗವನ್ನು ಜಲದಲ್ಲಿ ಬಿಟ್ಟ. ಅದರ ಪರಿಣಾಮವೇ ನೀರಿನಲ್ಲಿ ನೊರೆ ಗುಳ್ಳೆಗಳು ಕಾಣಿಸುವುದು. ಇನ್ನು ವರವಾಗಿ ನೀರು ವ್ಯಯವಾದರೂ ಪ್ರವಾಹ ರೂಪದಲ್ಲಿ ಮತ್ತೆ ತುಂಬಿಕೊಳ್ಳುವುದು. ನಾಲ್ಕನೆಯ ಭಾಗವನ್ನು ಸ್ತ್ರೀಯರಿಗೆ ನೀಡಿದ... ಅದರ ಪರಿಣಾಮವಾಗಿಯೇ ಸ್ತ್ರೀಯರಲ್ಲಿ ತಿಂಗಳೂ ರಜೋ ದೋಷ ಉಂಟಾಗುವುದು. ಇನ್ನು ವರವಾಗಿ ಸ್ತ್ರೀಯರು ಗರ್ಭವತಿಯರಾದರೂ ಕಾಮಸುಖ ಹೊಂದಬಹುದು .. ಜೊತೆಗೆ ಧರಿಸಿದ ಗರ್ಭಕ್ಕೆ ಹಾನಿಯಾಗದು. ಹೀಗೆ ಇಂದ್ರ ತನಗಂಟಿದ ದೋಷವನ್ನು ಹಂಚಿ .. ಸ್ವೀಕರಿಸಿದವರಿಗೆ ವರವನ್ನೂ ಕೊಟ್ಟು ಪರಿಶುದ್ಧನಾದ. ಆದರೆ ಇದ್ದೊಬ್ಬ ಮಗನಾದ ವಿಶ್ವರೂಪನನ್ನು ಕಳೆದುಕೊಂಡು ತ್ವಷ್ಟ ಕೃಧ್ಧನಾಗಿದ್ದ. ಮಗನ ಸಾವಿಗೆ ಕಾರಣನಾದ ಇಂದ್ರನಿಗೆ ಸರಿಯಾದ ಬುದ್ಧಿಯನ್ನು ಕಲಿಸುವ ಸಲುವಾಗಿ ಇಂದ್ರ ನಾಶಕ್ಕೆ ಬೇಕಾದ ಯಜ್ಞ ಮಾಡಲು ಉಪಕ್ರಮಿಸಿದ. "ಸ್ವಾಹೇನ್ದ್ರ ಶತ್ರುರ್ವರ್ಧಸ್ವ.'' ಎಂಬ ಮಂತ್ರದಿಂದಲೇ ಆಹುತಿ ಕೊಡತೊಡಗಿದ. ಯಾವ ಇಂದ್ರನ ನಿರ್ನಾಮಕ್ಕಾಗಿ ಸಂತಾನವನ್ನು ಯಜ್ಞ ಮುಖೇನ ಪಡೆಯಹೊರಟನೋ ... ಆದರೆ ಮಂತ್ರಸ್ವರದಲ್ಲಿ ಅಪಚಾರವಾದ್ದರಿಂದ ಇಂದ್ರನನ್ನೇ ಶತ್ರುವಾಗಿ ಹೊಂದಿದ ಒಬ್ಬ ದೈತ್ಯ ದಕ್ಷಿಣಾಗ್ನಿಯಲ್ಲಿ ಮೇಲೆದ್ದು ಬಂದ. ಹುಟ್ಟಿ ಬಂದ ಕ್ಷಣದಲ್ಲಿಯೇ ದಶದಿಕ್ಕುಗಳನ್ನೂ ವ್ಯಾಪಿಸಿ ಬೆಳೆಯತೊಡಗಿದ. ಉರಿಯುತ್ತಿರುವ ಅಗ್ನಿಪರ್ವತದಂತೆ ಕಾಣಿಸುತ್ತಾ.. ಕೆಂಪಾದ ಕಣ್ಣುಗಳನ್ನು ಉಳ್ಳವನಾಗಿ ಕೆದರಿದ ಕೇಶರಾಶಿಯನ್ನು ಹೊಂದಿ ಉಗ್ರ ರೂಪದಿಂದ .. ಕೈಯಲ್ಲಿ ಶೂಲವನ್ನು ಹಿಡಿದು ವಿಕಟಾಟ್ಟಹಾಸ ಮಾಡುತ್ತ ಕುಣಿಯುತ್ತಿದ್ದ. ಸೂರ್ಯ ಚಂದ್ರರ ಸಂಚಾರಕ್ಕೂ ತಡೆಯೊಡ್ದುವ ರೀತಿಯಲ್ಲಿ ಭೀಕರವಾದ ಕಾಯವನ್ನು ಹೊಂದಿದ್ದ . ಅವನ ಭೀಕರ ರೂಪವನ್ನು ನೋಡಿ ಪ್ರತ್ಯಕ್ಷ ಕಾಲನೇ ಬೆವರಿದ. ಕೋರೆದಾಡೆಗಳನ್ನು ಹೊಂದಿದ ಆತ ಆಗಾಗ ಆಕಳಿಸುತ್ತಿದ್ದನು. ಆ ಭೀಕರಾಕೃತಿಯನ್ನು ನೋಡಿದ ಸಮಸ್ತ ಭೂತಗಳೂ ದಿಕ್ಕು ದೆಸೆಯಿಲ್ಲದೆ ಓಡತೊಡಗಿದರು. ಹಾಗೆ ಪ್ರಪಂಚವನ್ನೇ ಬೆದರಿಸುವ ರೂಪವನ್ನು ಹೊಂದಿ... ಎಲ್ಲಾ ಕಡೆಯಲ್ಲಿಯೂ ವ್ಯಾಪಿಸಿಕೊಂಡ ಕಾರಣ ಅವನಿಗೆ "ವೃತ್ರ " ಎಂಬ ಹೆಸರಾಯಿತು. 🙏🙏 ಮುಂದಿನ ಭಾಗದಲ್ಲಿ ಇನ್ನೂ ಇದೆ 🙏

Saturday, July 26, 2025

ವೃತ್ರಾಸುರ 2

ಸತ್ಯ ಲೋಕಾಧೀಶನಾದ ಬ್ರಹ್ಮ ದೇವರಿಂದ ನಿರ್ದೇಶಿತರಾದ ಇಂದ್ರಾದಿ ಸುಮನಸರು ನೇರವಾಗಿ ತ್ವಷ್ಟ ಪುತ್ರನಾದ ವಿಶ್ವರೂಪನ ಬಳಿಗೆ ಬರುತ್ತಾರೆ. (ಈ ತ್ವಷ್ಟನು ಯಾರೆಂಬ ಬಗೆಗೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ವಿವರಣೆ ಇದೆ, ಕೆಲವು ಕಡೆ ಶುಕ್ರಾಚಾರ್ಯರ ಮಗನೆಂದೂ, ಕೆಲವುಕಡೆ ಪ್ರಜಾಪತಿಗಳಲ್ಲಿ ಒಬ್ಬನೆಂದೂ, ಕೆಲವು ಕಡೆ ದ್ವಾದಶಾಧಿತ್ಯರಲ್ಲಿ ಒಬ್ಬನೆಂದೂ ಹೇಳಲಾಗಿದೆ..! ಶ್ರೀಮದ್ಭಾಗವತದಲ್ಲಿ ವಿಶ್ವರೂಪನ ಬಳಿಗೆ ಬಂದ ಇಂದ್ರ "ಮಗೂ ವಿಶ್ವರೂಪ " ಎಂದೇ ಸಂಭೋಧಿಸುತ್ತಾನೆ. ) ವಿಶ್ವರೂಪನ ಬಳಿ ಬಂದ ದೇವತೆಗಳಲ್ಲಿ ಇಂದ್ರನೇ ಮುಂದಾಗಿ ಮಾತಿಗೆ ತೊಡಗುತ್ತಾನೆ. "ಮಗೂ ನಿನಗಿಂತ ಹಿಯರಾದ ನಾವು ಒಂದು ಹಿರಿದಾದ ಉದ್ದೇಶವನ್ನಿಟ್ಟುಕೊಂಡು ನಿನ್ನ ಬಳಿಗೆ ಬಂದವರಿದ್ದೇವೆ. ಲೋಕದ ಹಿತಕ್ಕಾಗಿ ನೀನು ದೇವತೆಗಳ ಪರವಾಗಿ ನಿಲ್ಲುತ್ತೀ ಎಂಬ ನಂಬಿಕೆ ನಮಗೆಲ್ಲರಿಗೂ ಇದೆ.. ಈಗಾಗಲೇ ದೇವ ಪುರೋಹಿತರಾದ ಬೃಹಸ್ಪತಿ ಆಚಾರ್ಯರು ನಮ್ಮನ್ನು ತೊರೆದು ಹೋಗಿರುವುದು ನಿನಗೂ ತಿಳಿದೇ ಇದೆ ಎಂದು ಭಾವಿಸಿದ್ದೀವೆ. ದೇವ ಪುರೋಹಿತರ ಅನುಪಸ್ಥಿತಿಯಲ್ಲಿ ನಮಗಾದ ಪರಿಭವದ ಪರಿಣಾಮವನ್ನು ಲೋಕಗಳು ಅನುಭವಿಸುವಂತಾಗಿದೆ. ಈಗ ಅಸುರರ ವಶವಾದ ಸ್ವರ್ಗದ ಅಧಿಪತ್ಯವನ್ನು ಮರಳಿ ಪಡೆಯಲು ನೀನೇ ಕಾರಣನಾಗಬೇಕು.. ಇದು ಕೇವಲ ನಮ್ಮ ನಿರೀಕ್ಷೆ ಮಾತ್ರವಲ್ಲ. ಕಮಲಸಂಭವನಾದ ಬ್ರಹ್ಮ ದೇವರ ನಿರ್ದೇಶನವೂ ಆಗಿರುತ್ತದೆ ಹಾಗಾಗಿ ನೀನೀಗಲೇ ನಮ್ಮ ಉತ್ಕರ್ಷಕ್ಕೆ ಬೇಕಾಗಿ ಪೌರೋಹಿತ್ಯವನ್ನು ವಹಿಸಿಕೋ". ವಿಶ್ವರೂಪನು ಕ್ಷಣಕಾಲ ಯೋಚಿಸಿದ ಯಾಕೆಂದರೆ ಆತನೇನೂ ದೇವ ಪಕ್ಷಪಾತಿಯೇ ಆಗಿರಲಿಲ್ಲ. ವಿಶ್ವರೂಪನ ತಾಯಿ ಪ್ರಹ್ಲಾದನ ಮಗಳು ವಿರೋಚನೆ, ವಿಶ್ವರೂಪನಿಗೆ ಮೂರು ತಲೆಗಳಿದ್ದವು... ಹಾಗಾಗಿಯೇ ಅವನಿಗೆ ತ್ರಿಶಿರ ಎಂಬ ಹೆಸರೂ ಇತ್ತು. ಒಂದು ಮುಖದಿಂದ ವೇದಾಧ್ಯಯನ ಮಾಡುತ್ತಾ ಅನ್ನವನ್ನು ಉಣ್ಣುತ್ತಾ.. ಒಂದು ಮುಖದಲ್ಲಿ ಸೋಮಪಾನ ಮಾಡುತ್ತಾ ಮತ್ತೊಂದು ಮುಖದಲ್ಲಿ ಸುರಾಪಾನ ಮಾಡುತ್ತಿದ್ದ. ತಾಯಿಯ ಸಂಭಂಧದಿಂದ ಅಸುರರ ಬಗೆಗೆ ಹಿತವೂ ... ತಂದೆಯ ಸಂಬಂಧದಿಂದ ದೇವತೆಗಳ ಬಗ್ಗೆ ಅನುರಾಗವೂ ಇತ್ತು. ಹಾಗಾಗಿ ಇಂದ್ರಾದಿಗಳ ಮಾತಿಗೆ ಕ್ಷಣಕಾಲ ಯೋಚಿಸಿ.. " ದೇವತೆಗಳೇ ನೀವು ನನಗಿಂತ ಹಿರಿಯರೂ ಹೌದು, ನಿಮಗಾದ ಪರಿಭವವನ್ನು ನಾನು ತಿಳಿದೇ ಇದ್ದೇನೆ. ಆದರೆ...ನಿಮ್ಮ ಆಮಂತ್ರಣವನ್ನು ಸ್ವೀಕರಿಸಬೇಕಾದುದು ಸಾಧುವೋ ಎಂಬ ಅನುಮಾನ ನನಗೆ, ಬ್ರಾಹ್ಮಣ ತಾನು ಕಲಿತ ವಿದ್ಯೆಯನ್ನು ಎಂದಿಗೂ ಹಣಕ್ಕಾಗಿ ವಿನಿಯೋಗಿಸಕೂಡದು. ಪ್ರತಿಫಲಾಪೇಕ್ಷೆಯಿಂದ ವಿದ್ಯೆಯನ್ನು ಬಳಸಿದರೆ ಅಂತಹ ಕಾರ್ಯದಿಂದ ಅವನ ಬ್ರಾಹ್ಮಣ್ಯವೇ ನಾಶನಾಗುತ್ತದೆ. ಇನ್ನು ಪೌರೋಹಿತ್ಯ ಎನ್ನುವುದು ನನಗೆ ಬಂಧನವೂ ಹೌದು. ಆದರೆ ಹಿರಿಯರಾದ ನಿಮ್ಮ ನಿರ್ದೇಶನವನ್ನು ತಿರಸ್ಕರಿಸುವ ಹಾಗೂ ಇಲ್ಲ. ಈ ನೆವನದಲ್ಲಿಯಾದರೂ ದೇವತೆಗಳ ಸೇವೆಯನ್ನು ಮಾಡುವ ಭಾಗ್ಯ ನನಗೆ ದೊರೆಯುತ್ತದೆ. ನಿಮ್ಮೆಲರ ನಿರೀಕ್ಷೆ... ಹಾಗೆಯೇ ಮುಂದೆ ನಿಮ್ಮ ಸಹಕಾರವೂ ಇದೆ ಎಂದಾದರೆ ಒಪ್ಪಿಕೊಳ್ಳುತ್ತೇನೆ" ಎಂದು ಕೈಮುಗಿದು ಹೇಳಿದ. ವಿಶ್ವರೂಪನಾಡಿದ ಮಾತಿನಿಂದ ದೇವತೆಗಳಿಗೆಲ್ಲಾ ಅತೀವ ಸಂತೋಷವಾಯಿತು. ನಷ್ಟವಾದ ಸ್ವರ್ಗವನ್ನು ಮತ್ತೆ ಪಡೆಯಲು ಬೇಕಾದ ಮಾರ್ಗವನ್ನು ವಿಶ್ವರೂಪನ ನಿರ್ದೇಶನದಲ್ಲಿ ಪಡೆಯಲು ಉದ್ಯುಕ್ತರಾದರು. ವಿಶ್ವರೂಪನು "ವೈಷ್ಣವೀ" ವಿದ್ಯೆಯನ್ನು ಬಲ್ಲವನಾದ ಕಾರಣ ಶುಕ್ರ ಶಿಷ್ಯರಾದ ಅಸುರರಿಂದ ಸ್ವರ್ಗಾಧಿಕಾರವನ್ನು ಕಸಿದುಕೊಳ್ಳಲು ಬೇಕಾದ ಶಕ್ತಿಯ ಮೂಲವನ್ನು ಇಂದ್ರನಿಗೆ ಉಪದೇಶ ಮಾಡಿದ ಅದೇ " ನಾರಾಯಣ ಕವಚ ". ಓಂ ನಮೋ ನಾರಾಯಣಾಯ ಎಂಬ ಅಷ್ಟಾಕ್ಷರಿಯಿಂದ ಅಂಗನ್ಯಾಸ.., ಓಂ ನಮೋ ಭಗವತೇ ವಾಸುದೇವಾಯ ಎಂಬ ದ್ವಾದಶಾಕ್ಷರಿಯಿಂದ ಕರನ್ಯಾಸವನ್ನು ಮಾಡಿ... "ಓಂ ಹರಿರ್ವಿದಧ್ಯಾನ್ಮಮ ಸಮರಕ್ಷಾಂ " ಎಂದು ಆರಂಭಗೊಳ್ಳುವ ನಾರಾಯಣ ಕವಚವನ್ನು ವಿಶ್ವರೂಪನು ಇಂದ್ರನಿಗೆ ಉಪದೇಶ ಮಾಡಿದ. ನಾರಾಯಣ ಕವಚದ ಮಹಿಮೆಯ ಬಗ್ಗೆ ಹೇಳುವುದಾದರೆ ಒಂದು ಕಾಲದಲ್ಲಿ ಬ್ರಾಹ್ಮಣನೊಬ್ಬ ಈ ನಾರಾಯಣ ಕವಚ ಎಂಬ ಮಂತ್ರವಿದ್ಯೆಯನ್ನು ಅರಿತವ ಕಾಲಾಂತರದಲ್ಲಿ ದೇಹ ತೊರೆದು ಮುಕ್ತಿ ಹೊಂದಿದ. ಅವನು ಶರೀರ ತೊರೆದ ಸ್ಥಳದಲ್ಲಿ ಆಕಾಶಮಾರ್ಗದಲ್ಲಿ ಚಿತ್ರರಥನೆಂಬ ಗಂಧರ್ವ ತನ್ನ ಸ್ತ್ರೀಯರೊಡಗೂಡಿ ವಿಮಾನದಲ್ಲಿ ಸಾಗುತ್ತಿದ್ದ. ಇದ್ದಕ್ಕಿದ್ದಂತೆ ಚಿತ್ರರಥನ ವಿಮಾನ ಭೂಸ್ಪರ್ಷ ಮಾಡಿತು. ಕಾರಣ ಅರಿಯದೇ ಚಿಂತಿತನಾದ ಚಿತ್ರರಥನ ಬಳಿಗೆ ವಾಲಖಿಲ್ಯ ಖುಷಿಗಳು ಬಂದು .."ಅಯ್ಯಾ ಹಿಂದೆ ನಾರಾಯಣ ಕವಚ ಧರಿಸಿದ ಬ್ರಾಹ್ಮಣ ದೇಹ ತೊರೆದ ಸ್ಥಳವಪ್ಪಾ ಇದು" ಎಂದು ಹೇಳಿದರು. ಕೂಡಲೇ ಚಿತ್ರರಥ ಆ ಪ್ರದೇಶದಲ್ಲಿ ಸಿಕ್ಕ ಬ್ರಾಹ್ಮಣನ ಮೂಳೆಗಳನ್ನು ಸಂಗ್ರಹಿಸಿ ಪೂರ್ವ ದಿಕ್ಕಿನಲ್ಲಿ ಹರಿಯುತ್ತಿದ್ದ ಸರಸ್ವತೀ ನದಿಯಲ್ಲಿ ವಿಸರ್ಜನೆ ಮಾಡಿದ ಮೇಲೆ ಅವನ ವಿಮಾನ ಮೊದಲಿನಂತೆ ಸಾಗಿತು. ಇಂತಹ ಮಹಿಮೆಯುಳ್ಳ "ನಾರಾಯಣ ಕವಚ " ಇಂದ್ರನ ವಶವಾಯಿತು. 🙏🙏 ಮುಂದಿನ ಭಾಗ... ಇನ್ನೊಂದು ಕಂತಿನಲ್ಲಿ🙏

Thursday, July 24, 2025

ವೃತ್ರಾಸುರ ಭಾಗ 1

ಶ್ರೀಮದ್ಭಾಗವತದಲ್ಲಿ, ಮಹಾಭಾರತದಲ್ಲಿ ಮತ್ತು ರಾಮಾಯಣದಲ್ಲಿ, ಇನ್ನೂ ಅಲ್ಲಲ್ಲಿ ಬರುವ ಒಂದು ಕುತೂಹಲ ಹುಟ್ಟಿಸುವ ಕಥೆ ವೃತ್ರಾಸುರನದ್ದು.. ಈ ಕಥೆಯನ್ನು ಆರಂಭಿಸಿದರೆ ಕೆಲವು ಕಂತುಗಳೇ ಆಗಬಹುದು.. ತ್ರಿಲೋಕಾಧಿಪತಿಯಾದ ಇಂದ್ರ ಒಂದು ದಿನ ಅತ್ಯಂತ ಸಂತೋಷದಿಂದ ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶಾಧಿತ್ಯರು, ಮರುತ್ತುಗಳು, ಸಿದ್ದರು, ಚಾರಣರು, ವಿದ್ಯಾಧರರು, ಗಂಧರ್ವರು, ಮುಂತಾದವರೆಲ್ಲ ಸೇರಿದ್ದ ದೇವ ಸಭೆಯಲ್ಲಿ ತನ್ನರಸಿಯಾದ ಶಚೀದೇವಿಯೊಂದಿಗೆ ಸುರಸಿಂಹಾಸನದಲ್ಲಿ ಮಂಡಿಸಿದ್ದ. ಯಕ್ಷರು ಕಿನ್ನರರು ಮುಂತಾದವರು ಇಂದ್ರನ ಕೀರ್ತಿಯನ್ನು ಕೊಂಡಾಡುತ್ತಿದ್ದರು. ಯಾವುದೇ ರಾಕ್ಷಸರ ಉಪಟಳ ಇಲ್ಲದೇ ಇದ್ದ ಕಾರಣದಿಂದ ಸ್ವತಃ ದೇವೇಂದ್ರನೂ ಆನಂದದಿಂದಲೇ ಸಭಾ ಕಲಾಪವನ್ನು ನೋಡುತ್ತಾ ಮೈಮರೆತಿದ್ದ. ಆ ಸಂದರ್ಭಕ್ಕೆ ಸರಿಯಾಗಿ ದೇವಗುರುಗಳಾದ ಆಚಾರ್ಯ ಬೃಹಸ್ಪತಿಗಳು ಇಂದ್ರನ ಸಭೆಗೆ ಆಗಮಿಸಿದರು. ಸಭೆಯಲ್ಲಿ ನಡೆಯುತಿದ್ದ ನರ್ತನ ಗಾಯನಗಳಲ್ಲಿ ಮೈಮರೆತಿದ್ದ ಇಂದ್ರ ಸಭೆಗೆ ಆಗಮಿಸಿದ ದೇವಗುರುಗಳನ್ನು ಯತೋಚಿತವಾಗಿ ಸತ್ಕರಿಸಲಿಲ್ಲ, ಅಷ್ಟಕ್ಕೂ ಅವರನ್ನು ನೋಡಿ ಗೌರವ ಸೂಚಕವಾಗಿ ತಾನು ಕುಳಿತಿದ್ದ ಸಿಂಹಾಸನದಿಂದ ಮೇಲೇಳಲೂ ಇಲ್ಲ. ಇದನ್ನು ಗಮನಿಸಿದ ಆಚಾರ್ಯ ಬೃಹಸ್ಪತಿಗಳು ಇಂದ್ರನ ಅಹಂಕಾರವನ್ನು ಗಮನಿಸಿ ಬೇಸರಗೊಂಡು ಸಭೆಯಿಂದ ಸುಮ್ಮನೆ ಮನೆಗೆ ಹಿಂದಿರುಗಿ ಬಿಟ್ಟರು. ಇತ್ತ ಗುರುಗಳು ಹಿಂತಿರುಗಿದ ಮೇಲೆ ಇಂದ್ರನಿಗೂ ಇದು ಅರಿವಿಗೆ ಬಂತು.." ಅಯ್ಯೋ ನಾನೆಂತಹಾ ಹೀನ ಕಾರ್ಯ ಮಾಡಿದೆ ಗುರುಗಳು ಸಭೆಗೆ ಬಂದರೂ ಅವರನ್ನು ಉಪಚರಿಸಲಿಲ್ಲವಲ್ಲಾ... ಇದರಿಂದ ಪಾಪಕಾರ್ಯವನ್ನು ಮಾಡಿದ ನನಗೆ ಇನ್ನಾವ ಕೇಡು ಕಾದಿದೆಯೋ.. ಗುರುನಿಂದೆಯನ್ನು ಮಾಡಿದ ಯಾವೊಬ್ಬನೂ ಸ್ವಾಸ್ಥ್ಯದಿಂದ ಇರಲಾರ.. ಏನಾದರಾಗಲಿ ಗುರುಗಳ ಮನೆಗೇ ತೆರಳಿ ಅವರ ಮನವೊಲಿಸಿಕೊಂಡು ಕರೆತರುತ್ತೇನೆ" ಎಂದು ಹೇಳಿಕೊಂಡು ದೇವಗುರು ಬೃಹಸ್ಪತಿಗಳ ಸಧನದತ್ತ ತೆರಳಿದ. ಆದರೆ ಮನೆಗೆ ಬಂದ ಬೃಹಸ್ಪತಿಗಳು ಅಲ್ಲಿಂದಲೂ ಅದೃಶ್ಯರಾಗಿಹೋಗಿದ್ದರು. ಗುರುಗಳ ಮಂದಿರಕ್ಕೆ ಬಂದ ಇಂದ್ರಾದಿ ದೇವತೆಗಳಿಗೆ ಗುರುಗಳು ಕಾಣಿಸಲಿಲ್ಲ... ಎಲ್ಲಿ ಅರಸಿದರೂ ಗುರುಗಳು ಸಿಗಲಿಲ್ಲ. ದೇವೇಂದ್ರನ ದುಃಖ ಆತಂಕ ಇಮ್ಮಡಿಯಾಯಿತು. "ಗುರುಕಾರುಣ್ಯವಿಲ್ಲದೇ ಸ್ವರ್ಗದ ಅಧಿಕಾರವನ್ನು ಉಳಿಸಿಕೊಳ್ಳುವುದು ಹೇಗೆ... ಒಂದೆಡೆಯಲ್ಲಿ ಆಚಾರ್ಯರಾದ ಶುಕ್ರರು ಅಸುರ ಗುರುಗಳಾಗಿ ಅವರಿಗೆ ಬೇಕಾದ ವಿದ್ಯೆಯನ್ನು ಬೋಧಿಸುತ್ತಿದ್ದಾರೆ.. ಸ್ವರ್ಗ ಲೋಕವನ್ನು ಸದಾ ಹಂಬಲಿಸುವ ಅಸುರರೂ ಶುಕ್ರರ ಸಹಾಯದಿಂದ ಆಕ್ರಮಣ ಮಾಡುವ ಸಮಯವನ್ನು ಕಾಯುತ್ತಿದ್ದಾರೆ .. ಆಯ್ಯೋ ಏನು ಮಾಡಲಿ '' ಎಂದು ಚಿಂತಿಸತೊಡಗಿದ. ತ್ರಿಲೋಕಾಧಿಪತ್ಯವನ್ನು ಹೊಂದಿದ ಇಂದ್ರನೂ ಚಿಂತೆಯಲ್ಲಿ ಮುಂದೇನು ಎಂಬ ದಾರಿ ಕಾಣದೇ ಕುಳಿತ. ಈ ಸಂಗತಿಯನ್ನು ತಿಳಿದು ಇದೇ ಸರಿಯಾದ ಸಮಯವೆಂದ ತಿಳಿದ ಕಾಲಕೇಯರೇ ಮುಂತಾದ ಅಸುರರು ಸ್ವರ್ಗದ ಮೇಲೆ ಆಕ್ರಮಣ ಮಾಡಿದರು. ಸುರಾಸುರರಿಗೆ ನಡೆದ ಘೋರವಾದ ಯುದ್ಧದಲ್ಲಿ ದೇವತೆಗಳೆಲ್ಲರೂ ಪರಾಜಯ ಹೊಂದಬೇಕಾದ ಸ್ಥಿತಿ ಬಂತು. ಸೋತ ಇಂದ್ರಾದಿ ದೇವತೆಗಳು ಸ್ವರ್ಗವನ್ನು ಬಿಟ್ಟು ಪಲಾಯನ ಮಾಡಿದರು, ಮುಂದೇನು ಎಂಬ ಮಾರ್ಗ ತಿಳಿಯದೇ ಬ್ರಹ್ಮ ದೇವರ ಮೊರೆ ಹೊಕ್ಕರು. ದೇವತೆಗಳ ಮೊರೆಯನ್ನು ಕೇಳಿದ ಬ್ರಹ್ಮದೇವ " ಇಂದ್ರಾದಿ ದೇವತೆಗಳೇ ನಿಮ್ಮ ಸೋಲಿಗೆ ನಿಮ್ಮಿಂದ ಆದ ಅಪಚಾರವೇ ಕಾರಣ... ನ ವಿಪ್ರಗೋವಿಂದಗವೀಶ್ವರಾಣಾಂ | ಭವನ್ತ್ಯಭದ್ರಾಣಿ ನರೇಶ್ವರಾಣಾಂ | | (ಶ್ರೀಮದ್ಭಾಗವತ) ಬ್ರಾಹ್ಮಣರನ್ನೂ, ಗೋವಿಂದನನ್ನೂ ಮತ್ತು ಗೋವುಗಳನ್ನೂ ತಮ್ಮ ಸರ್ವಸ್ವವೆಂದು ತಿಳಿದು ಗೌರವಿಸಬೇಕಾದ ನೀವು ಆಂಗಿರಸ ಪುತ್ರನಾದ ನಿಮ್ಮ ಗುರು ಬೃಹಸ್ಪತಿಗೆ ನೀವು ಮಾಡಿದ ಅವಮಾನಕ್ಕಾಗಿ ಇಂತಹ ಪರಾಭವವನ್ನು ಅನುಭವಿಸುತ್ತಾ ಇದ್ದೀರಿ... ದೇವಲೋಕದಲ್ಲಿ ಈಗ ಕಾಲ ಕಾಲಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡಿ, ದುಷ್ಟರ ಆಕ್ರಮಣವಾದಾಗ ಗೆಲುವಿಗೆ ಬೇಕಾದುದನ್ನು ಉಪದೇಶ ಮಾಡುವ ಗುರುವೇ ಇಲ್ಲ... ಇನ್ನು ನಿಮಗೆ ಜಯ ಎಲ್ಲಿಯದು. ಅತ್ತ ಆಚಾರ್ಯ ಶುಕ್ರನು ರಾಕ್ಷಸರಿಂದ ಯಜ್ಞಗಳನ್ನು ಮಾಡಿಸುತ್ತಾ ಅವರ ಬಲ ವೃದ್ಧಿಯಾಗುವಂತೆ ಮಾಡುತ್ತಿದ್ದಾನೆ.. ನೀವು ಕಳೆದುಕೊಂಡ ಸ್ವರ್ಗಾಧಿಪತ್ಯವನ್ನು ಮರಳಿ ಪಡೆಯಲು ಯೋಗ್ಯನಾದ ಗುರುವಿನಿಂದ ಸೂಕ್ತವಾದ ನಿರ್ದೇಶನದ ಅನಿವಾರ್ಯತೆ ಇದೆ. ಪ್ರಸ್ತುತ "ತ್ವಸ್ಟ '' ಪುತ್ರನಾದ "ವಿಶ್ವರೂಪ " ಯೋಗ್ಯನಿದ್ದಾನೆ. ಆದರೆ ಅವನಿಗೆ ರಾಕ್ಷಸರ ಬಗ್ಗೆ ಕೂಡ ಒಲವಿದೆ. ಆದರೂ ಅವನನ್ನು ಪ್ರಾರ್ಥಿಸಿ ನಿಮ್ಮ ಗುರುವನ್ನಾಗಿ ಸ್ವೀಕರಿಸಿದರೆ ಅವನ ಉಪದೇಶದಿಂದ ಸ್ಪರ್ಗಾಧಿಕಾರವನ್ನು ಮರಳಿ ಪಡೆಯಬಹುದು ". ಎಂದು ಹೇಳಿದ 🙏 ಮತ್ತೆ ಮುಂದಿನ ಭಾಗದಲ್ಲಿ 🙏🙏

Wednesday, July 23, 2025

ಅಜಾಮಿಳ

ಶ್ರೀಮದ್ಭಾಗವತದ ಆರನೇ ಸ್ಕಂಧದಲ್ಲಿ ಬರುವ ಒಂದು ಕಥೆ... ಸುಲಭ ಭಕ್ತಿಯ ಪ್ರತೀಕವಾಗಿ ಎಲ್ಲೆಡೆಯಲ್ಲಿಯೂ ಹೇಳುವ ಒಂದು ಹೆಸರು "ಅಜಾಮಿಳ "... ಒಂದು ಕಾಲದಲ್ಲಿ ಕನ್ಯಾಕುಬ್ಜ ದೇಶದಲ್ಲಿ ಧರ್ಮಕರ್ಮಗಳಿಂದ ಜೀವನ ನಡೆಸುತ್ತಿದ್ದ ಒಬ್ಬ ಬ್ರಾಹ್ಮಣನಿದ್ದ ಅವನಿಗೆ ಒಬ್ಬ ಪುತ್ರ ಅವನ ಹೆಸರು ಅಜಾಮಿಳ... ತಂದೆ ತಾಯಿಯರ ಸೇವೆ ಮಾಡುತ್ತಾ ಇದ್ದ. ಚಿಕ್ಕ ಪ್ರಾಯದಲ್ಲಿಯೇ ಅವನಿಗೆ ಮದುವೆಯೂ ಆಗಿತ್ತು, ರೂಪವತಿಯಾದ ಹೆಂಡತಿ ಇದ್ದಳು. ಹೀಗಿರುವಾಗ ಎಂದಿನಂತೆಯೇ ಒಂದು ದಿನ ಕುಶ ಸಮಿಧೆಗಳನ್ನು, ಹಣ್ಣು ಹೂವುಗಳನ್ನು ಸಂಗ್ರಹಿಸಲು ಆತ ಅರಣ್ಯದತ್ತ ಹೊರಟ. ದಾರಿಯಲ್ಲಿ ಸಾಗುತ್ತಿರುವಾಗ ವಿಟ ಪುರುಷನೊಬ್ಬ ಒಬ್ಬಳು ವೇಶ್ಯೆಯೊಂದಿಗೆ ವಿಹರಿಸುತ್ತಿರುವುದನ್ನು ನೋಡಿದ. ಮಧ್ಯವನ್ನು ಸೇವಿಸಿದ್ದ ಆ ಹೆಂಗಸು ಯಾವ ಪರಿವೆಯೂ ಇಲ್ಲದೆ ಅರೆನಗ್ನಳಾಗಿ ಅನ್ಯ ಪುರುಷನೊಂದಿಗೆ ವಿವರಿಸುತ್ತಿದ್ದಳು. ಇದನ್ನು ನೋಡಿದ ಅಜಾಮಿಳನಿಗೆ ಅವಳ ಮೇಲೆ ಕಾಮವಾಂಛೆಯುಂಟಾಯಿತು. ತನ್ನ ಆಶ್ರಮಧರ್ಮವನ್ನು ಮರೆತು ಹೇಗಾದರೂ ಅವಳನ್ನು ಒಲಿಸಿಕೊಳ್ಳಬೇಕೆಂದು ತೀರ್ಮಾನಿಸಿದ. ದಿನದಿನವೂ ಅವಳಿಗೆ ಬೇಕಾದ ಧನಕನಕಗಳನ್ನು ತೆಗೆದುಕೊಂಡು ಹೋಗಿ ಕೊಡತೊಡಗಿದ. ತನ್ನ ಸಂಪತ್ತು... ತಂದೆ ಗಳಿಸಿದ ಸಂಪತ್ತುಗಳೂ ವ್ಯಯವಾಯಿತು. ಕೊನೆಗೆ ತಂದೆ-ತಾಯಿಯರನ್ನು ತೊರೆದು, ಹೆಂಡತಿಯನ್ನು ತೊರೆದು, ಮನೆಯನ್ನು ಬಿಟ್ಟು ಅವಳ ಜೊತೆಗೇ ಇರತೊಡಗಿದ. ಈಗ ವೇಶ್ಯೆಯ ಜೊತೆಗಿನ ಸಂಸಾರ ಬೆಳೆಯತೊಡಗಿತು..! ಅವನಿಂದ ಮಕ್ಕಳು ಹುಟ್ಟಿದರು. ಸಂಸಾರ ನಿರ್ವಹಣೆಗೆ ದರೋಡೆ ಮಾಡಿದ... ಕಳ್ಳತನಕ್ಕೆ ಇಳಿದ.. ಹೀಗೇ ದಿನ ಕಳೆಯುತ್ತಾ ತನ್ನ ಆಶ್ರಮಧರ್ಮವನ್ನು ಪೂರ್ಣ ತ್ಯಜಿಸಿ ತೀರಾ ಹೀನ ಮಾರ್ಗದಲ್ಲಿ ಬದುಕತೊಡಗಿದ. ಹತ್ತು ಜನ ಮಕ್ಕಳು ಅವನಿಗೆ ಹುಟ್ಟಿದರು ಅವರಲ್ಲಿ ಕಿರಿಯ ಮಗನ ಹೆಸರು "ನಾರಾಯಣ". ಹೀಗೇ ಅವಳ ಜೊತೆಯ ಸಂಸಾರದಲ್ಲಿ ಅಜಾಮಿಳನಿಗೆ ಎಂಬತ್ತು ವರ್ಷಗಳ ವಯಸ್ಸು ಕಳೆದವು. ಅಲ್ಲಿಗೆ ಅಜಾಮಿಳನ ಆಯಸ್ಸು ಮುಗಿದ ಕಾರಣ ಅವನನ್ನು ಕರೆದೊಯ್ಯಲು ಮೂರು ಜನ ಯಮದೂತರು ಬಂದರು. ಮರಣಶಯ್ಯೆಯಲ್ಲಿದ್ದ ಅಜಾಮಿಳನಿಗೆ ಯಮದೂತರು ಕಾಣಿಸಿಕೊಂಡರು. ಆ ಸಂದರ್ಭದಲ್ಲಿ ಯಮದೂತರು ಪಾಶವನ್ನು ಬೀಸಿದಕೂಡಲೇ ಅಜಾಮಿಳನಿಗೆ ತನ್ನ ಕಿರಿಯ ಮಗನಾದ ನಾರಾಯಣನ ನೆನಪಾಯಿತು. ಕಿರಿಯ ಪುತ್ರನಾದ ನಾರಾಯಣನನ್ನು ಕಂಡರೆ ಅವನಿಗೆ ತುಂಬಾ ಪ್ರೀತಿ.. ಅವನನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು ಊಟಮಾಡಿಸಿದ.. ಆಟವಾಡಿಸಿದ... ಸಂದರ್ಭಗಳು ನೆನಪಾಯಿತು. ಅಜಾಮಿಳನ ಕಣ್ಣುಗಳಲ್ಲಿ ನೀರು ತುಂಬಿಕೊಂಡು " ನಾರಾಯಣಾ" ಎಂದು ಕರೆದ. ಹಾಗೆ ಕರೆದ ಕೂಡಲೇ ಒಂದು ಚಮತ್ಕಾರವೇ ನಡೆದುಹೋಯಿತು... ಪಾಶವನ್ನು ಬೀಸಿ ಅಜಾಮಿಳನ ಜೀವವನ್ನು ಸೆಳೆಯಲು ಸಿಧ್ಧರಾಗಿದ್ದ ಯಮದೂತರ ಸಮ್ಮುಖದಲ್ಲಿ ನಾಲ್ಕು ಜನ ವಿಷ್ಣುದೂತರು ಬಂದು ನಿಂತಿದ್ದರು. ಇವರನ್ನು ನೋಡಿದಾಕ್ಷಣ ಯಮದೂತರು ಆಶ್ಚರ್ಯದಿಂದ ನೀವಾರೆಂದು ಪ್ರಶ್ನೆ ಮಾಡಿದರು. ಆಗ ವಿಷ್ಣುದೂತರು ತಮ್ಮ ಪರಿಚಯವನ್ನು ಮಾಡಿಕೊಂಡು ಅಜಾಮಿಳನ ಜೀವಾತ್ಮವನ್ನು ಕೊಂಡೊಯ್ಯುವುದನ್ನು ತಡೆಯಲು ಬಂದಿರುವುದಾಗಿ ಹೇಳಿದರು. ಆಗ... "ಮಹಾನುಭಾವರೇ... ವಿಷ್ಣುದೂತರಾದ ನೀವು ಇವನ ಜೀವವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ತಡೆಯಲು ಬಂದದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಈತ ತನ್ನ ಧರ್ಮವನ್ನು ತೊರೆದು ಜೀವನ ಮಾಡಿದವ, ಪಾಣಿಗ್ರಹಣ ಮಾಡಿದ ಸತಿಯನ್ನು ತೊರೆದು.. ತನ್ನ ವೃದ್ಧ ಮಾತಾಪಿತೃಗಳನ್ನು ತೊರೆದು... ತನ್ನ ವರ್ಣಾಶ್ರಮ ಧರ್ಮವನ್ನು ತೊರೆದು.. ಕೇವಲ ಇಂದ್ರಿಯ ಸುಖಕ್ಕಾಗಿ ಒಬ್ಬಳು ವೇಶ್ಯೆಯ ಸಂಗ ಮಾಡಿದ. ಅವಳೊಂದಿಗೆ ಜೀವನ ನಡೆಸಲು ಬೇಕಾಗಿ ಕಳ್ಳತನ ದರೋಡೆಯನ್ನು ಮಾಡಿದ ಇಂತಹ ದುಷ್ಟ ಪೃವೃತ್ತಿಯಲ್ಲಿಯೇ ಬದುಕಿದ ಇವನ ಆಯಸ್ಸು ಮುಗಿದಿದೆ, ಹಾಗಾಗಿ ನಾವು ಕರೆದೊಯ್ದ ಇವನ ಪಾಪ ಕಾರ್ಯಗಳಿಗೆ ಶಿಕ್ಷೆಯನ್ನು ವಿದಿಸಬೇಕಾಗಿದೆ". ಆಗ ವಿಷ್ಣುದೂತರು "ಯಮಕಿಂಕರರೇ...ಈತನು ಹಿಂದಿನ ಹಲವು ಜನ್ಮಗಳಲ್ಲಿ ಮಾಡಿದ ಎಲ್ಲಾ ಪಾಪಗಳಿಗೂ ಪ್ರಾಯಶ್ಚಿತ್ತವನ್ನು ಮಾಡಿಕೊಂಡಾಗಿದೆ. ಯಾಕೆಂದರೆ ಇವನು ತನ್ನ ಮಗನನ್ನು ಕರೆಯುವ ವ್ಯಾಮೋಹದಲ್ಲಿ ಪರಮಪವಿತ್ರವಾದ ಶ್ರೀಹರಿಯ "ನಾರಾಯಣಾ" ಎಂಬ ಹೆಸರನ್ನು ಉಚ್ಛರಿಸಿದ್ದಾನೆ. ಎಂತಹ ಪಾತಕಿಯೇ ಆಗಲಿ .. ಎಲ್ಲಾ ಪಾತಕಗಳಿಗೂ ನಾರಾಯಣ ನಾಮವನ್ನು ಉಚ್ಛರಿಸುವುದೇ ಪ್ರಾಯಶ್ಚಿತ್ತ. ಮಹಾತ್ಮರು ಪಾತಕಗಳ ಪರಿಹಾರಕ್ಕಾಗಿ ಕೃಚ್ಛ- ಚಾಂದ್ರಾಯಣವೇ ಮುಂತಾದ ವ್ರತಗಳನ್ನು ವಿಧಿಸಿದ್ದಾರೆ, ಆದರೆ ಭಗವಂತನ ನಾಮ ಸಂಕೀರ್ತನದಿಂದ ಅಂತಹ ವ್ರತಗಳಿಂದ ಸಿಗಬಹುದಾದ ಫಲಗಳಿಂದ ಹೆಚ್ಚು ದೊರೆಯುತ್ತದೆ. ಅವನು ಯಾವ ಕಾರಣಕ್ಕಾಗಿಯಾದರೂ ಭಗವಂತನ ನಾಮವನ್ನು ಉಚ್ಚರಿಸಲಿ.... ತಿಳಿದೋ ತಿಳಿಯದೆಯೋ ಹೊತ್ತಿಕೊಂಡ ಬೆಂಕಿ ಕಟ್ಟಿಗೆಯನ್ನು ಸುಡುತ್ತದೆ... ಹಾಗೆಯೇ ಯಾವ ಕಾರಣಕ್ಕಾಗಿಯಾದರೂ ಉಚ್ಛರಿಸಿದ ನಾರಾಯಣನೆಂಬ ನಾಮ ಇವನ ಪಾಪವನ್ನು ಸುಟ್ಟು ಬೂದಿ ಮಾಡಿದೆ. ಹಾಗಾಗಿ ಈತ ಯಮಸಧನವನ್ನು ಸೇರಿ ಯಾವುದೇ ರೀತಿಯ ಶಿಕ್ಷೆಗಳನ್ನು ಅನುಭವಿಸಬೇಕಾಗಿಲ್ಲ ಇವನನ್ನು ಬಿಟ್ಟು ಬಿಡಿ" ವಿಷ್ಣುದೂತರ ಮಾತನ್ನ ಕೇಳಿದ ಯಮಕಿಂಕರರು ಪಾಶದಲ್ಲಿ ಬಂಧಿಸಿದ ಅಜಾಮಿಳನನ್ನು ಬಿಟ್ಟು ಹೊರಟು ಹೋಗುತ್ತಾರೆ. ಪ್ರಾಣ ತ್ಯಜಿಸುವ ಹಂತದಲ್ಲಿದ್ದ ಅಜಾಮಿಳನಿಗೆ ಇದೆಲ್ಲವೂ ಕನಸಿನ ರೂಪದಲ್ಲಿ ಕಾಣಿಸುತ್ತದೆ. ಎಚ್ಚರಗೊಂಡು ನೋಡುವಷ್ಟರಲ್ಲಿ ವಿಷ್ಣುದೂತರೂ ಅದೃಷ್ಯರಾಗುತ್ತಾರೆ. ಅಗ ಅಜಾಮಿಳ "ಜೀವನದಲ್ಲಿ ತಾನೆಂತಹ ದುರ್ವರ್ತನೆಗೆ ಮುಂದಾದೆ ... ಒಂದು ಹೆಣ್ಣಿನ ಕಾರಣದಿಂದ ನಾಚಿಕೆಗೆಟ್ಟವನಾಗಿ ಬದುಕಿದೆ.. ಆದರೆ ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯಫಲದಿಂದ ನಾರಾಯಣ ಎಂಬ ನಾಮವನ್ನು ಮರಣಕಾಲದಲ್ಲಿ ಉಚ್ಛರಿಸಿದೆ. ಅದೇ ನನ್ನ ಮರಣಭಯ ನಿವಾರಣೆಗೆ ಕಾರಣವಾಯಿತು ಎಂದಾದರೆ ... ಸಾಕು ಈ ಹೀನ ಬದುಕು" ಎಂದು ಯೋಚಿಸಿ ಎಲ್ಲವನ್ನೂ ತೊರೆದು ಹರಿದ್ವಾರಕ್ಕೆ ಹೋಗುತ್ತಾನೆ. ಅಲ್ಲಿ ಹಲವು ಕಾಲ ಭಗವನ್ನಾಮ ಸಂಕೀರ್ತನೆ ಮಾಡುತ್ತಾ.. ಯೋಗವನ್ನುನುಸರಿಸುತ್ತಾ . ಆತ್ಮಚಿಂತನೆ ಮಾಡುತ್ತಾ .. ವಿಷಯಾಸಕ್ತಿಗಳಿಂದ ಬುದ್ಧಿಯನ್ನು ಬೇರ್ಪಡಿಸಿ ಭಗವಂತನ ಮೋಕ್ಷಧಾಮವನ್ನು ಮಾತ್ರ ಲಕ್ಷ್ಯವಾಗಿಟ್ಟುಕೊಂಡು ಕಳೆದ... ಕೊನೆಗೆ ಒಂದು ದಿನ ಪವಿತ್ರವಾದ ಗಂಗಾತಟದಲ್ಲಿ ದೇಹತ್ಯಾಗ ಮಾಡುತ್ತಾನೆ. ತಕ್ಷಣದಲ್ಲಿಯೇ ವಿಷ್ಣುದೂತರು ಸ್ವರ್ಣಮಯವಾದ ವಿಮಾನವನ್ನು ತಂದು ಇವನನ್ನು ವಿಮಾನವೇರಿಸಿಕೊಳ್ಳುತ್ತಾರೆ.. ಇವನೂ ಕೂಡ ಭಗವಂತನ ಪಾರ್ಷದರಾದ ವಿಷ್ಣುದೂತರ ರೂಪವನ್ನೇ ಹೊಂದಿ ಜನನ ಮರಣವರ್ಜಿತವಾದ ಮೋಕ್ಷವನ್ನು ಪಡೆದು ವೈಕುಂಠ ಲೋಕವನ್ನು ಸೇರಿಕೊಳ್ಳುತ್ತಾನೆ.🙏🙏 ಮುಂದೊಂದು ಹೊಸ ಕಥೆ🙏🙏

Thursday, July 17, 2025

ಸಾವಿತ್ರಿ ಭಾಗ 7

" ನಾನು ನನ್ನ ಪತಿಯನ್ನು ಹಿಂಬಾಲಿಸಿ ಬರುತ್ತಿದ್ದೇನೆ... ಹಾಗಾಗಿ ನನಗೆ ಯಾವ ರೀತಿಯ ಬಳಲಿಕೆಯೂ ಇಲ್ಲ, ಜೊತೆಗೆ ಧರ್ಮದೇವನಾದ ನಿನ್ನೊಂದಿಗೆ ಮಾತಾಡುತ್ತಿರುವ ಕಾರಣದಿಂದ ಕ್ರಮಿಸಿದ ಮಾರ್ಗ ಎಷ್ಟು ಎಂಬ ಗಣನೆಯೂ ನನಗಿಲ್ಲ.. ದೇವ.. ನಿನ್ನಿಂದ ಸೃಷ್ಠಿಯ ಸಮಸ್ತ ಜೀವಿಗಳೂ ಅಂತ್ಯವನ್ನು ಹೊಂದುತ್ತವೆ. ಪ್ರತಿಯೊಂದು ಜೀವಿಯ ಆಯಸ್ಸನ್ನು ತಿಳಿದು ಅದು ಮುಗಿದಾಗ ಅವುಗಳನ್ನು ಕೊಂಡೊಯ್ಯವೆ, ಆದರೆ ಜೀವಿಯ ಆಯಸ್ಸನ್ನು ನಿರ್ಧರಿಸುವವ ನೀನಲ್ಲ ಆಯಾ ಜೀವಿಯ ಲಲಾಟ ಲಿಖಿತವನ್ನರಿತು ನಿನ್ನ ಕಾರ್ಯವನ್ನು ಕೈಗೊಳ್ಳುವೆ.. ಇಲ್ಲಿ ನಿನ್ನ ಇಷ್ಟ-ಅನಿಷ್ಟಗಳ ನಿರ್ಧಾರಗಳಿಲ್ಲ. ಜೀವಿಯ ಕರ್ಮಗಳಿಗನುಗುಣವಾಗಿ ಹೊಂದಬೇಕಾದುದನ್ನು ನೀನು ನಿರ್ಣಯಿಸುತ್ತೀ.. ಹಾಗಾಗಿಯೇ ನೀನು ''ಯಮ''. ಇನ್ನೊಂದು ಮಾತು... ಪ್ರಪಂಚದಲ್ಲಿರುವ ಎಲ್ಲ ಜೀವಿಗಳೂ ಬಲಹೀನರೇ ಸರಿ ಆದರೆ ಸತ್ಪುರುಷರು ಅಂತಹ ಬಲಹೀನರಿಗೆ ಅವುಗಳ ಕರ್ಮಾನುಸಾರ ತಮ್ಮ ಬಲವನ್ನು ನೀಡಿ ಉದ್ಧರಿಸುತ್ತಾರೆ. ಎಂತಹ ವಿರೋಧಿಯೇ ಒಂದು ಸಂದರ್ಭದಲ್ಲಿ ಬಂದು ಯಾಚಿಸಿದರೆ ಸತ್ಪುರುಷರು ದಯೆಯಿಂದ ಅವರಿಗೆ ರಕ್ಷಣೆ ನೀಡುತ್ತಾರೆ ". ಅವಳ ಮಾತನ್ನು ಕೇಳಿದ ಯಮಧರ್ಮ "ಸಾವಿತ್ರೀ.. ನಿನ್ನ ಮಾತುಗಳು ಬಾಯರಿದವನಿಗೆ ತಿಳಿನೀರು ಎಷ್ಟು ಸಂತೋಷ ಕೊಡುವುದೋ ಹಾಗೇ ನನಗೂ ಸಂತೋಷವನ್ನುಂಟುಮಾಡುತ್ತಿದೆ, ನಾನು ಸುಪ್ರೀತನಾದೆ... ನಿನ್ನ ಪತಿಯ ಪ್ರಾಣವೊಂದನ್ನುಳಿದು ಬೇರೇನು ವರ ಬೇಕು ಕೇಳು". ಹೆಣ್ಣಾದವಳು ಕೊಟ್ಟ ಮನೆ ಮತ್ತು ಹುಟ್ಟಿದ ಮನೆಗಳೆರಡರ ಉದ್ಧಾರವನ್ನು ಸದಾ ಯೋಚಿಸುತ್ತಾಳೆ, ಧರ್ಮದೇವ ಕೊಟ್ಟ ಮೊದಲೆರಡು ವರಗಳನ್ನು ತಾನು ಸೇರಿದ ಮನೆಯ ಉದ್ಧಾರಕ್ಕೆ ಬಳಸಿದ ಸಾವಿತ್ರಿ ಮೂರನೆಯ ವರವಾಗಿ "ಧರ್ಮದೇವ ... ಮಾದ್ರ ದೇಶವನ್ನು ಆಳುತ್ತಿರುವ ನನ್ನ ತಂದೆಗೆ ಗಂಡು ಸಂತಾನವಾಗಬೇಕೆಂದು ಬಹಳ ಬಯಕೆಯಿದ್ದಿತು. ನನ್ನ ತಂದೆಯಾದ ಅಶ್ವಪತಿ ಮಹಾರಾಜನಿಗೆ ನೂರು ಮಂದಿ ಔರಸಪುತ್ರರು ಜನಿಸಲಿ" ಎಂದು ಕೇಳಿದಳು. " ಆಯಿತು ಸಾವಿತ್ರಿ... ನಿನ್ನ ತಂದೆಗೆ ವೀರರಾದ ವರ್ಚಸ್ವಿಗಳಾದ ನೂರು ಮಂದಿ ಪುತ್ರರು ಜನಿಸುತ್ತಾರೆ, ಅವರಿಂದ ಆತನ ಕುಲ ಮುಂದುವರಿಯುತ್ತದೆ.. ಸಾದ್ವೀ ನೀನು ಬಯಸಿದ್ದನ್ನು ವರರೂಪದಲ್ಲಿ ಪಡೆದಿದ್ದೀ..ನೀನಿನ್ನು ಹಿಂತಿರುಗಿ ಹೋಗು ಈಗಾಗಲೇ ಬಹಳದೂರ ನನ್ನನ್ನು ಅನುಸರಿಸಿ ಬಂದಿದ್ದೀ...". ಯಮನ ಎಚ್ಚರಿಕೆಯನ್ನು ಗಣಿಸದೆ ಸಾವಿತ್ರೀ " ದೇವ ಎಷ್ಟು ದೂರ ಕ್ರಮಿಸಿದರೂ ನನ್ನ ಜೊತೆಗೆ ಸತ್ಯವಾನನೂ ಇದ್ದಾನೆ ಎಂಬ ಸಮಾಧಾನ ನನಗೆ ಹಾಗಾಗಿ ಇನ್ನೂ ಮುಂದೆ ಸಾಗಬೇಕೆಂಬ ತವಕ.. ಧರ್ಮದೇವ ನೀನು ಸೂರ್ಯಪುತ್ರ ಹಾಗಾಗಿ ನಿನ್ನನ್ನು ವೈವಸ್ವತ ಎಂದೂ ಕರೆಯುತ್ತಾರೆ.. ಸೂರ್ಯಕಿರಣಗಳು ತಾರತಮ್ಯವಿಲ್ಲದೇ ಹೇಗೆ ಎಲ್ಲೆಡೆಯಲ್ಲಿಯೂ ಹರಡಿಕೊಳ್ಳುವವೋ ಹಾಗೇ ನೀನು ಧರ್ಮದಿಂದ ಎಲ್ಲರನ್ನೂ ಪಾಲಿಸುತ್ತೀಯ ಹಾಗಾಗಿ ನೀನು ಧರ್ಮರಾಜ.. ಪ್ರಪಂಚದಲ್ಲಿ ಸತ್ಪುರುಷರೂ ಹಾಗೆಯೇ .. ಮಿತ್ರ - ಶತ್ರು ಎಂಬ ಬೇಧವಿಲ್ಲದೆಯೇ ಎಲ್ಲರಲ್ಲೂ ಪ್ರೀತಿಯಿಂದ ವರ್ತಿಸುತ್ತಾರೆ, ಹಾಗಾಗಿಯೇ ಎಲ್ಲರೂ ಸಜ್ಜನರ ಸಂಗವನ್ನೇ ಬಯಸುತ್ತಾರೆ". ಸಾವಿತ್ರಿಯ ಮಾತುಗಳನ್ನು ಕೇಳಿದ ಧರ್ಮರಾಜ " ಮಗಳೇ ನಾನು ಇಲ್ಲಿಯವರೆಗೆ ಯಾರಿಂದಲೂ ಇಂತಹ ಅರ್ಥಪೂರ್ಣವಾದ ಮಾತುಗಳನ್ನು ಕೇಳಿರಲಿಲ್ಲ .. ನಿನ್ನ ಮಾತಿನ ಸವಿಗೆ ನಾನು ಸೋತಿದ್ದೇನೆ ಹಾಗಾಗಿ ನಾಲ್ಕನೆಯ ವರವನ್ನು ಕೊಡುತ್ತೇನೆ. ಸತ್ಯವಾನನ್ನುಳಿದು ಬೇರೇನು ಬೇಕು ಕೇಳು". ಆಗ ಸಾವಿತ್ರಿ ನಾಲ್ಕನೆಯ ವರವಾಗಿ " ನನ್ನ ವಂಶಾಭಿವೃದ್ಧಿಗೆ ಕಾರಣರಾಗುವ, ಬಲಾನ್ವಿತರಾದ ನೂರು ಮಂದಿ ಮಕ್ಕಳು ನನಗೆ ಔರಸರಾಗಿ ಸತ್ಯವಾನನಿಂದ ಹುಟ್ಟಲಿ ". ಎಂದು ಕೇಳಿದಳು. "ಆಯಿತು ಮಗಳೇ ಪರಾಕ್ರಮಿಗಳಾದ ಕುಲವನ್ನು ಉದ್ಧರಿಸುವ ನೂರು ಜನ ಮಕ್ಕಳು ನಿನಗೆ ಜನಿಸಲಿ.., ಮಗಳೇ ಬಹಳ ದೂರ ಸಾಗಿ ಬಂದಿದ್ದೀ.. ಇನ್ನೂ ಮುಂದೆ ಬಂದರೆ ನಿನಗೆ ಹಿಂತಿರುಗುವದೂ ಕಷ್ಟವಾಗುತ್ತದೆ ಈ ಕ್ಷಣವೇ ಹಿಂತಿರುಗು". ಸತ್ಯವಾನನಿಂದ ನೂರು ಜನ ಪುತ್ರರು ಎಂದು ಸಾವಿತ್ರಿ ಕೇಳಿದ ವರ... ಯಮನೂ ಅದನ್ನು ಕೊಟ್ಟಿದ್ದಾನೆ... ಸಾವಿತ್ರಿ ಇನ್ನೂ ಯವನನ್ನು ಕುರಿತು "ಸ್ವಾಮೀ... ಈ ಪ್ರಪಂಚದಲ್ಲಿನ ಸತ್ಪುರುಷರ ಸತ್ಯನಿಷ್ಠೆ ಇಲ್ಲಿನ ಪ್ರತಿಯೊಂದು ಆಗುಹೋಗುಗಳಿಗೆ ಕಾರಣವಾಗುತ್ತದೆ, ಅವರ ಧರ್ಮವೇ ಸೂರ್ಯ-ಚಂದ್ರರ ಉದಯಾಸ್ತಮಾನಕ್ಕೆ ಕಾರಣ ಎನ್ನುತ್ತಾರೆ.. ಯಾವ ಸಂಧರ್ಭದಲ್ಲಿಯೂ ಸತ್ಪುರುಷರು ಯಾವಾಗಲೂ ಪರಹಿತಕ್ಕಾಗಿಯೇ ಕಾರ್ಯವೆಸಗುತ್ತಾರೆ.. ಅವರ ಸಂದರ್ಷನ ಮಾಡಿದ ಯಾರಿಗೂ ಯಾವ ರೀತಿಯ ನಷ್ಟವಾಗುವುದಿಲ್ಲ. ಇಂತಹ ಅನುಗ್ರಹ ಬುದ್ಧಿಯನ್ನು ಹೊಂದಿದ ಸತ್ಪುರುಷರು ಸಕಲರ ರಕ್ಷಣೆಯನ್ನು ಧರ್ಮದಿಂದಲೇ ಮಾಡುತ್ತಾರೆ''. ಸಾವಿತ್ರಿಯ ಈ ಮಾತುಗಳಿಂದ ಸಂತುಷ್ಟನಾದ ಯಮಧರ್ಮ " ಮಗಳೇ.. ನೀನು ಮಹಾಪತಿವ್ರತೆಯಿದ್ದೀ... ಧರ್ಮಸಮ್ಮತವಾದ ಮಾತುಗಳನ್ನೇ ಆಡುತ್ತಿರುವೆ, ನನಗೆ ನಿನ್ನಲ್ಲಿ ಗೌರವ ಹೆಚ್ಚಾಗುತ್ತಿದೆ ಹಾಗಾಗಿ ಅತಿ ವಿಶಿಷ್ಠವಾದ ವರವೊಂದನ್ನು ಕೇಳು ಕೊಟ್ಟುಬಿಡುತ್ತೇನೆ" . ಎಂದು ಹೇಳಿದ. ಆಗ ಸಾವಿತ್ರಿ " ದೇವಾ... ನಾನು ನೂರು ಮಂದಿ ಔರಸಪುತ್ರರು ಬೇಕು ಎಂದು ವರಕೇಳಿದೆ..ನೀನು ಕೊಟ್ಟಿದ್ದೀ.. ಈ ವರ ಫಲಿಸಬೇಕಾದರೆ ಸತ್ಯವಾನನ ಜೊತೆಗೆ ಧರ್ಮಸಮ್ಮತವಾದ ದಾಂಪತ್ಯವೂ ಬೇಕು ತಾನೇ.. ಸಂತಾನವಾಗುವ ವರವನ್ನು ಅನುಗ್ರಹಿಸಿದ ಮೇಲೂ ನೀನು ಅವನನ್ನು ಸೆಳೆದುಕೊಂಡು ಹೋಗುತ್ತಿರುವೆ, ಅವನಿಲ್ಲದೆ ನನಗೆ ಬದುಕೇ ಇಲ್ಲ... ಕೇವಲ ವರದಿಂದಲೇ ಮಕ್ಕಳಾಗುವುದನ್ನು ನಾನು ಬಯಸುವುದಿಲ್ಲ ಹಾಗಾಗಿ ನನ್ನ ಪತಿಯನ್ನು ನನಗೆ ವರ ರೂಪದಲ್ಲಿ ಅನುಗ್ರಹಿಸು". ಸಾವಿತ್ರಿಯ ಮಾತಿನಿಂದ ಸಂತೋಷಗೊಂಡ ಯಮಧರ್ಮ " ಆಯಿತು ಮಗಳೇ... ನಿನ್ನ ಪತಿಯ ಪ್ರಾಣವನ್ನು ಹಿಂದಿರುಗಿಸುತ್ತೇನೆ.. ಈ ಸತ್ಯವಂತನು ಮತ್ತೆ ಬದುಕಿ ದೃಡಕಾಯನಾಗಿ ನಾಲ್ಕುನೂರು ವರ್ಷಗಳ ಕಾಲ ಧರ್ಮಪರನಾಗಿ ಬದುಕುತ್ತಾನೆ, ಮುಂದೆ ಈತ ಸಿದ್ಧಾರ್ಥನೆನಿಸಿಕೊಂಡು ಯಜ್ಞ-ಯಾಗಗಳನ್ನು ಮಾಡಿ ಪ್ರಸಿದ್ಧಿಯನ್ನೂ ಪಡೆಯುತ್ತಾನೆ. ನನ್ನ ವರದಂತೆಯೇ ನಿನಗೆ ನೂರು ಮಂದಿ ಮಕ್ಕಳು ಜನಿಸುತ್ತಾರೆ ಅವರು ''ಸಾವಿತ್ರ " ರು ಎಂದೆನಿಸಿ ಅಪಾರವಾದ ಕೀರ್ತಿಯನ್ನು ಪಡೆಯುತ್ತಾರೆ. ನಿನ್ನ ತಂದೆಗೆ ನೂರು ಮಂದಿ ಮಕ್ಕಳಾಗಿ ಅವರು " ಮಾಲವ " ರೆಂದು ಪ್ರಸಿದ್ಧರಾಗುತ್ತಾರೆ " ಹೀಗೆಂದು ಹೇಳಿ ಯಮರಾಜ ಪಾಶದಲ್ಲಿ ಬಂಧಿಸಿದ್ದ ಸತ್ಯವಾನನ ಜೀವಾತ್ಮವನ್ನು ಬಿಟ್ಟು ಹಿಂತಿರುಗುತ್ತಾನೆ. ಸಾವಿತ್ರಿ ಸುತೋಷದಿಂದ ಹಿಂತಿರುಗಿ ಸತ್ಯವಾನನ ದೇಹದ ಬಳಿ ಬಂದು ಅವನ ತಲೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು ಕುಳಿತುಕೊಳ್ಳುತ್ತಾಳೆ. ನಿದ್ರೆಯಿಂದ ಎಚ್ಚರಗೊಂಡಂತೆ ಸತ್ಯವಾನ ಮೇಲೇಳುತ್ತಾನೆ. ಅಷ್ಟರಲ್ಲಿ ರಾತ್ರಿಯಾಗಿದೆ.. ತಂದೆ-ತಾಯಿಯರನ್ನು ನೆನಪಿಸಿಕೊಂಡು ದುಃಖಿಸಿದ ಸತ್ಯವಾನನನಿಗೆ ಸಮಾಧಾನ ಮಾಡಿ ಆ ರಾತ್ರಿಯಲ್ಲಿಯೇ ಆಶ್ರಮದತ್ತ ಸಾಗತೊಡಗುತ್ತಾರೆ. 🙏🙏 ಮುಂದಿನ ಬರಹದಲ್ಲಿ ಹೊಸದೊಂದು ಕಥೆ🙏🙏

Wednesday, July 16, 2025

ಸಾವಿತ್ರಿ ಭಾಗ 6

ಯಮಧರ್ಮನನ್ನು ಹಿಂಬಾಲಿಸಿ ಹೊರಟ ಸಾವಿತ್ರಿ ಇಬ್ಬರು ದಾರಿಹೋಕರು ಒಂದೇ ದಾರಿಯಲ್ಲಿ ಜೊತೆ ಜೊತೆಯಾಗಿ ಸಾಗುವಾಗ ಮಾತಿಗೆ ತೊಡಗುವಂತೆ ಮಾತಾಡತೊಡಗಿದಳು. ಅವಳ ಒಂದೊಂದು ಮಾತೂ ಕೂಡ ಅವಳಿಗಿದ್ದ ಆಗಾಧವಾದ ಜ್ಞಾನದ ಪ್ರತೀಕವಾಗಿತ್ತು. "ಧರ್ಮದೇವ ಪ್ರಪಂಚದಲ್ಲಿ ಇಂದ್ರಿಯಗಳ ನಿಗ್ರಹ ಸಾಧ್ಯವಾಗದೇ ಹೋದರೆ ಅರಣ್ಯವಾಸದಲ್ಲಿ ಧರ್ಮ ಪರಿಪಾಲನೆಯೋ ತಪಸ್ಸನ್ನೋ ಆಚರಿಸುವುದು ಕಷ್ಟವಾಗುತ್ತದೆ, ಜ್ಞಾನಿಗಳು ಧರ್ಮಾಚರಣೆ ಮಾಡುತ್ತಾ ಧರ್ಮವೇನೆಂದು ಉಳಿದವರಿಗೂ ತಿಳಿಸಿಕೊಡುತ್ತಾರೆ. ಯಜ್ಞ -ಯಾಗಗಳಿಂದಲೋ, ತಪಸ್ಸು ಮಾಡುವುದರಿಂದಲೋ ಬಯಸುವ ಗುರಿ ಒಂದೇ ಅದು ಪರಮಪುರುಷನ ಸಾಕ್ಷಾತ್ಕಾರ... ಆ ಪರಮಪುರುಷ ನಮ್ಮಲ್ಲಿಯೇ ಇದ್ದಾನೆ.. ಆತ್ಮನಲ್ಲಿ ಪರಮಾತ್ಮನನ್ನು ಕಾಣುವ ಪ್ರಯತ್ನವೇ ಎಲ್ಲವೂ. ನಾವು ತ್ರಿಕಾಲ ಸಂಧ್ಯಾವಂದನೆಯನ್ನು ಮಾಡುವಾಗ ಗಾಯಿತ್ರೀ ದೇವಿಯ ಪ್ರತಿಮೆಯೇನೂ ಇರುವುದಿಲ್ಲ.. ಪ್ರತಿಯೊಬ್ಬ ದ್ವಿಜನೂ ಸಂಧ್ಯಾವಂದನೆಯನ್ನು ಮಾಡಬೇಕು.. ಮಾಡುತ್ತಾನೆ, ಹಾಗೆ ಮಾಡುವ ಕಾಲದಲ್ಲಿ ಅಂಗ-ಕರನ್ಯಾಸಗಳ ಮುಖೇನ ಗಾಯತ್ರಿ ದೇವಿಯನ್ನು ತನ್ನ ಹೃದಯದಲ್ಲಿಯೇ ಪ್ರತಿಷ್ಠಾಪಿಸಿ ಆರಾಧಿಸುವನು. ಅಂದರೆ ಇದರಲ್ಲು ಹೃದಯಾಂತರ್ಗತವಾದ ಪರತತ್ವವನ್ನು ಕಂಡುಕೊಳ್ಳಬೇಕೆಂಬುದೇ ಜ್ಞಾನಿಗಳ ನಿರ್ಣಯವಲ್ಲವೇ... ನಮ್ಮೆಲ್ಲರ ಕರ್ಮಗಳೂ.. ಆಚಾರ-ವಿಚಾರಗಳೂ ಶಾಸ್ತ್ರ - ಸಂಪ್ರದಾಯಗಳೂ ಪರಬ್ರಹ್ಮವನ್ನು ಕಂಡುಕೊಳ್ಳಲು ಬೇಕಾದ ದಾರಿದೀಪಗಳಲ್ಲವೇ.. ಈ ಧರ್ಮದ ಸಾಧನೆ ಎನ್ನುವುದು ನಾಲ್ಕು ಆಶ್ರಮಗಳಿಗೂ ಒಂದೇ ಆಗಿದೆ. ಆತ್ಮಸಾಕ್ಷಾತ್ಕಾರ ಮಾಡಿಕೊಂಡವನಿಗೆ ಆಶ್ರಮಧರ್ಮದ ಪ್ರವೃತ್ತಿ -ನಿವೃತ್ತಿ ಎಂಬುದೇನೂ ಇಲ್ಲ. ಸತ್ಪುರುಷರು ಅರ್ಥವನ್ನಾಗಲೀ.. ಕಾಮವನ್ನಾಗಲಿ ... ಧರ್ಮದ ವ್ಯಾಪ್ತಿಯಲ್ಲಿ ಇಲ್ಲದೇ ಇದ್ದರೆ ಬಯಸುವುದೇ ಇಲ್ಲ. ಸತ್ಪುರುಷರು ಬಯಸುವ ಅಂತಹ ಆತ್ಮಧರ್ಮವನ್ನೇ ನಾನೂ ಬಯಸುತ್ತೇನೆ". ಸಾವಿತ್ರಿಯ ಮಾತನ್ನ ಕೇಳಿದ ಯಮಧರ್ಮನಿಗೆ ಸಂತೋಷವಾಯಿತು. "ಮಗಳೇ ಹಿಂದಿರುಗು.. ನಿನ್ನ ಯುಕ್ತಿಯುಕ್ತವಾಗಿರುವ ಮಾತುಗಳನ್ನು ಕೇಳಿ ಸಂತೋಷಗೊಂಡಿದ್ದೇನೆ ಹಾಗಾಗಿ ಒಂದು ವರವನ್ನು ಕೇಳು.. ಆದರೆ ನಿನ್ನ ಗಂಡನನ್ನು ಮಾತ್ರ ಕೇಳಬೇಡ ಬೇರಾವ ವರವನ್ನಾದರು ಕೊಡುವೆ". ಆಗ ಸಾವಿತ್ರಿ.." ದೇವಾ... ನನ್ನ ಮಾವನು ರಾಜ್ಯಭ್ರಷ್ಠನಾಗಿದ್ದಾನೆ, ತನ್ನ ಕಣ್ಣುಗಳನ್ನೂ ಕಳೆದು ಕೊಂದಿದ್ದಾನೆ, ಅವನ ಅಂಧತ್ವವು ಹೋಗಿ ಮತ್ತೆ ಬಲಿಷ್ಠನೂ ತೇಜೋವಂತನೂ ಆಗಬೇಕು". ಸಾವಿತ್ರಿಯ ಮಾತನ್ನು ಕೇಳಿ ಯಮಧರ್ಮ " ಆಯಿತು ನಿನ್ನ ಮಾವನ ಅಂಧತ್ವ ನಿವಾರಣೆಯಾಗಿ ಸೂರ್ಯನಂತೆ ತೇಜೋವಂತನಾಗುವನು.. ಇನ್ನು ನನ್ನನ್ನು ಹಿಂಬಾಲಿಸಿ ಶ್ರಾಂತಳಾಗಬೇಡ ಹಿಂತಿರುಗು ನಿನಗೆ ವಿಶ್ರಾಂತಿಯ ಅವಶ್ಯಕತೆ ಇದೆ" ಎಂದು ಹೇಳಿದ. ಆಗ ಸಾವಿತ್ರಿ " ಸ್ವಾಮೀ ನನಗೆಲ್ಲಿಯ ಬಳಲಿಕೆ... ನನ್ನ ಪತಿಯನ್ನು ನೀನು ಕರೆದುಕೊಂಡು ಹೋಗುತ್ತಿರುವೆ, ಅವನ ಸಮೀಪವರ್ತಿನಿಯಾಗಿರುವ ನನಗೆ ಆಯಾಸ ಬಳಲಿಕೆಗಳಿಲ್ಲ... ಅವನನ್ನು ನೀನು ಎಲ್ಲಿಗೆ ಒಯ್ದರೂ ಅಲ್ಲಿಯವರೆಗೂ ಹಿಂಬಾಲಿಸುವುದೇ ನನ್ನ ಧರ್ಮ.. ನಾನು ಹೇಳಲಿರುವ ಇನ್ನೊಂದೆರಡು ಮಾತುಗಳನ್ನು ಕೇಳು". "ಸತ್ಪುರುಷರ ಸಮಾಗಮ ಶ್ರೇಷ್ಠ.. ಸತ್ಪುರುಷರ ಜೊತೆಗಿನ ಮೈತ್ರಿ ಅದಕ್ಕಿಂತಲೂ ಉತ್ತಮ.. ಅವರೊಂದಿಗೆ ಸಮಾಗಮ ಎಂದಿಗೂ ವ್ಯರ್ಥವಾಗುವುದಿಲ್ಲ, ಆದ್ದರಿಂದ ಯಾವಾಗಲೂ ಸತ್ಪುರುಷರ ಸಹವಾಸವನ್ನೇ ಮಾಡಬೇಕು". ಈ ಮಾತನ್ನು ಕೇಳಿದ ಅಂತಕನಿಗೆ ಇನ್ನೂ ಸಂತೋಷವಾಗಿ.." ಸಾವಿತ್ರಿ ನೀನು ಹೇಳಿದ್ದು ವಿದ್ವಾಂಸರೂ ಕೂಡ ಅನುಸರಿಸಬೇಕಾದ ವಿಷಯ ಇದರಿಂದ ನಾನು ಸುಪ್ರೀತನಾದೆ ಹಾಗಾಗಿ ಸತ್ಯವಾನನನ್ನು ಬಿಟ್ಟು ಬೇರೊಂದು ವರವನ್ನು ಕೇಳು". ಎರಡನೆಯ ವರವಾಗಿ ಸಾವಿತ್ರಿ " ದೇವಾ ನನ್ನ ಮಾವನು ಕಳೆದುಕೊಂಡ ತನ್ನ ರಾಜ್ಯವನ್ನು ಮತ್ತೆ ಪಡೆಯುವಂತಾಗಲಿ.. ರಾಜನಾಗಿಯು ಅವನು ಸ್ವಧರ್ಮವನ್ನೆಂದಿಗೂ ತ್ಯಜಿಸದೇ ಇರಲಿ". ಸಾವಿತ್ರಿ ಬಯಸಿದ ಎರಡನೆ ವರವನ್ನು ಕೂಡ ಅನುಗ್ರಹಿಸಿದ ಬಳಿಕ ಯಮಧರ್ಮ.." ಇನ್ನಾದರೂ ಹಿಂತಿರುಗು ನನ್ನ ಜೊತೆ ಬಂದು ಶ್ರಮಪಡಬೇಡ" ಎಂದು ಹೇಳಿದ.🙏🙏 ಮುಂದುವರಿಯುತ್ತದೆ.🙏🙏

Tuesday, July 15, 2025

ಸಾವಿತ್ರಿ ಭಾಗ 5

ಸತ್ಯವಾನ ಸಾವಿತ್ರಿಯನ್ನು ಕೂಗುತ್ತಾ ಮರದಿಂದ ಇಳಿದ, ಅವನ ಮೈಯೆಲ್ಲಾ ಬೆವರಿ ಹೋಗಿತ್ತು... ತುಂಬಾ ನಿತ್ರಾಣನಾದಂತೆ ಕಾಣುತ್ತಿದ್ದ." ನಿಧಾನ ಸ್ವಾಮಿ... ಸುಧಾರಿಸಿಕೊಳ್ಳಿ.. " ಎನ್ನುತ್ತಾ ಅವನ ಬಳಿಗೆ ಸಾವಿತ್ರಿ ಸಾಗಿದಳು. "ಸಾವಿತ್ರೀ... ಯಾಕೋ ತುಂಬಾ ತಲೆ ನೋಯುತ್ತ ಇದೆ, ಯಾಕೋ ಬಹಳ ಆಯಾಸವಾಗುತ್ತಿದೆ... ಕಣ್ಣಿಗೆ ಕತ್ತಲು ಆವರಿಸಿದ ಅನುಭವವಾಗುತ್ತಿದೆ.." ಎಂದು ಹೇಳುತ್ತಲೇ ನೆಲಕ್ಕೆ ಕುಸಿದ. ಸಾವಿತ್ರಿ ಅವನು ಬಿಳುವುದನ್ನು ತಡೆಯುತ್ತಾ ಉಪಚರಿಸಿ ಹಾಗೇ ತಾನು ಕುಳಿತುಕೊಂಡು ತನ್ನ ತೊಡೆಯಮೇಲೆ ಅವನ ತಲೆ ಇರಿಸಿಕೊಂಡು ಮಲಗಲು ಹೇಳಿದಳು. ಅವನು ಏದುಸಿರು ಬಿಡುತ್ತಿರುವುದನ್ನು ಸಾವಿತ್ರಿ ಗಮನಿಸಿದಳು... ಆ ಸ್ಥಿತಿಯಲ್ಲೂ ಸಾವಿತ್ರಿಯ ಸಾಮೀಪ್ಯ ಸತ್ಯವಾನನಿಗೆ ಸ್ವಲ್ಪ ನೆಮ್ಮದಿಯನ್ನು ಕೊಟ್ಟಂತಿತ್ತು. ಮರುಕ್ಷಣದಲ್ಲಿಯೇ ಅವಳ ಸಮೀಪದಲ್ಲಿ ಕೆಂಪಾದ ವಸ್ತ್ರಗಳನ್ನು ಧರಿಸಿದ್ದ, ಕೆಂಪು ಕಣ್ಣುಗಳನ್ನು ಹೊಂದಿದ್ದ, ಭಯಂಕರವಾದ ರೂಪದ ವ್ಯಕ್ತಿಯೊಬ್ಬ ಕೈಯಲ್ಲಿ ಪಾಶವನ್ನು ಹಿಡಿದು ನಿಂತಿದ್ದ. ಅವನನ್ನು ನೋಡಿದಾಕ್ಷಣ ಸಾವಿತ್ರಿಯ ಭಯ ನೂರ್ಮಡಿಯಾಯಿತು. ಆದರೂ ಸಾವರಿಸಿಕೊಂಡು ಸತ್ಯವಾನನ ತಲೆಯನ್ನು ತೊಡೆಯಿಂದ ಕೆಳಗಿಳಿಸಿ, "ಸ್ವಾಮಿ... ನೀವಾರು.. ನೋಡಿದರೆ ದೇವಪುರುಷನಂತೆ ಕಾಣಿಸುತ್ತಿದ್ದೀರಿ.. ನೀವು ಇಲ್ಲಿಗೆ ಬರಲು ಕಾರಣವೇನೆಂದು ದಯಮಾಡಿ ತಿಳಿಸಿ''.. ಸಾವಿತ್ರಿಯ ಮಾತನ್ನು ಕೇಳಿದ ಆ ದೇವಪುರುಷ " ಸತ್ಯವಾನನ ಪತ್ನಿಯಾದ ನೀನು ಪರಮ ಪತಿವ್ರತೆಯಾಗಿದ್ದಿ.... ನೀನು ಧರ್ಮದ ನೆಲೆಯರಿತು ನಡೆಯುತ್ತಿರುವ ಕಾರಣದಿಂದ ನಿನಗೆ ನಾನು ಕಾಣಿಸಿಕೊಂಡು ಮಾತನಾಡುತ್ತಿದ್ದೇನೆ. ಸಾವಿತ್ರೀ ನಿನ್ನ ಪತಿಯಾದ ಸತ್ಯವಾನನ ಆಯುಷ್ಯ ಇಂದಿಗೆ ಮುಗಿಯಿತು.. ಹಾಗಾಗಿ ಅವನ ಜೀವವನ್ನು ಸೆಳೆದೊಯ್ಯಲು ಬಂದಿದ್ದೇನೆ ನಾನೇ ಯಮಧರ್ಮ". ಸಾವಿತ್ರಿಯ ಹೃದಯದ ಬಡಿತ ಹೆಚ್ಚಾಯಿತು.. " ನಾರದರಾಡಿದ ಸಮಯ ಬಂದೇ ಬಿಟ್ಟಿತಲ್ಲಾ " ಎಂದು ದುಃಖದಿಂದ ತನ್ನಲ್ಲೇ ತಾನು ಹೇಳಿಕೊಂಡು.. "ಸ್ವಾಮಿ.. ನಾನು ಇಲ್ಲಿಯವರೆಗೆ ಕೇಳಿದ ವಿಷಯ.. ಧರೆಯಲ್ಲಿರುವ ಜೀವಾತ್ಮರನ್ನು ಕರೆದೊಯ್ಯಲು ನಿನ್ನ ಕಿಂಕರರು ಬರುತ್ತಾರೆಂದು ಕೇಳಿದ್ದೆ.. ಆದರೆ ಇಲ್ಲಿ ನೀನೇ ಬಂದೆಯಾ.." ಪ್ರಶ್ನೆಯ ಜೊತೆ ಅನುಮಾನವೂ ಇತ್ತು. "ಸಾವಿತ್ರೀ.. ಸರ್ವಗುಣ ಸಂಪನ್ನನಾದ, ಧರ್ಮಾತ್ಮನಾದ ನಿನ್ನ ಪತಿಯನ್ನು ನನ್ನ ಕಿಂಕರರು ಕರೆದೊಯ್ಯವುದು ಯೋಗ್ಯವಾದುದಲ್ಲ..ಹಾಗಾಗಿ ನಾನೇ ಬಂದಿರುವೆ" ಎಂದು ಹೇಳುತ್ತಾ ತನ್ನ ಕೈಯಲ್ಲಿರುವ ಪಾಶವನ್ನು ಸತ್ಯವಾನನತ್ತ ಬೀಸಿದ, ಮರುಕ್ಷಣದಲ್ಲಿಯೇ ಅಂಗುಷ್ಠ ಮಾತ್ರದ ಜೀವಾತ್ಮನು ಪಾಶದಲ್ಲಿ ಬಂಧನಕ್ಕೊಳಗಾದ. ಹಾಗೆ ಬಂದಿಸಲ್ಪಟ್ಟ ಆ ಕಿರುಗಾತ್ರದ ಜೀವನನ್ನು ಸತ್ಯವಾನನ ದೇಹದಿಂದ ಹೊರಸೆಳೆದ. ತಕ್ಷಣದಲ್ಲಿಯೇ ಸತ್ಯವಾನನ ಉಸಿರಾಟ ನಿಂತುಹೋಯಿತು.. ಮುಖದ ಕಾಂತಿ ಕಪ್ಪಿಟ್ಟಿತು.. ದೇಹದ ಅಂಗಾಂಗಗಳೂ ಸ್ಥಬ್ಧವಾದವು. ಪಾಶದಲ್ಲಿ ಬಂಧಿಸಿದ ಜೀವಾತ್ಮನನ್ನು ಸೆಳೆದುಕೊಂಡು ಯಮನು ದಕ್ಷಿಣಾಭಿಮುಖವಾಗಿ ಸಾಗತೊಡಗಿದ. ಸತ್ಯವಾನನ ಮರಣವಾಯಿತೆಂದು ಅರಿತ ಸಾವಿತ್ರಿ ದುಃಖದಿಂದ ಕಣ್ಣೀರು ಸುರಿಸುತ್ತಾ ತನಗರಿವಿಲ್ಲದಂತೆಯೇ ಪತಿಯ ಜೀವವನ್ನು ಸೆಳೆದೊಯ್ಯತ್ತಿರುವ ಯಮಧರ್ಮನನ್ನು ಹಿಂಬಾಲಿಸತೊಡಗಿದಳು. ಕೆಲವು ದೂರವನ್ನು ಕ್ರಮಿಸಿದ ಮೇಲೆ ಸಾವಿತ್ರಿಯನ್ನು ಕುರಿತು .. "ಸಾವಿತ್ರೀ ನೀನು ಪತಿ ಸೇವೆಯನ್ನು ನಿಷ್ಠೆಯಿಂದ ಮಾಡಿದ ಕಾರಣ ಇಲ್ಲಿಯವರೆಗೆ ಬಂದಿದ್ದೀ, ನೀನು ಮಾಡಬೇಕಾದ ಕರ್ತವ್ಯ ಉಳಿದಿದೆ.. ಆಶ್ರಮಕ್ಕೆ ತೆರಳಿ ಸತ್ಯವಾನನ ದೇಹಕ್ಕೆ ಅಂತ್ಯ ಸಂಸ್ಕಾರವನ್ನು ಮಾಡು ಹೋಗು... ಇನ್ನು ಮುಂದೆ ಬರುವುದು ತರವಲ್ಲ" ಎಂದು ಯಮಧರ್ಮ ಹೇಳುತ್ತಾನೆ.. ಅದಕ್ಕೆ ಪ್ರತಿಯಾಗಿ ಸಾವಿತ್ರಿ.. "ನನ್ನ ಪತಿಯ ಜೀವವನ್ನು ನೀನು ಎಲ್ಲಿಗೇ ಒಯ್ದರೂ ನಾನು ಹಿಂಬಾಲಿಸುವುದು ಧರ್ಮ ಎಂದು ಭಾವಿಸಿದ್ದೀನೆ... ಹಿರಿಯರ ಸೇವೆಯಿಂದ... ಸಂಕಟವನ್ನು ದೂರಮಾಡುವ ವ್ರತಗಳಿಂದ ... ನಾನು ಪತಿಯಲ್ಲಿ ಹೊಂದಿರುವ ಪ್ರೀತಿಯಿಂದ.. ಜೊತೆಗೆ ನಿನ್ನ ಕರುಣೆಯಿಂದ ನನ್ನ ಮುಂದಿನ ಮಾರ್ಗವೂ ಸುಗಮವಾಗಲಿದೆ ಎಂದು ಭಾವಿಸಿದ್ದೇನೆ, ಹಾಗಾಗಿಯೇ ಮುಂದೆ ಕೂಡ ನಿನ್ನನ್ನು ಅನುಸರಿಸುತ್ತೇನೆ... ಯಮದೇವ ಕೇವಲ ಏಳು ಹೆಜ್ಜೆಗಳನ್ನು ಜೊತೆಯಾಗಿ ನಡೆಯುವದರಿಂದ ಮೈತ್ರಿ ಉಂಟಾಗುವುದು ಎಂದು ಪ್ರಾಜ್ಞರಾಡುತ್ತಾರೆ, ಆದರೆ ನಾನು ನಿನ್ನೊಂದಿಗೆ ಹಲವು ಹೆಜ್ಜೆಗಳನ್ನು ಇಟ್ಟಿದ್ದೇನೆ.. ಹಾಗಾಗಿ ಅದೇ ಮೈತ್ರಿ ಭಾವದಿಂದ ನಿನ್ನಲ್ಲಿ ಕೆಲವು ಮಾತುಗಳನ್ನು ಹೇಳಬೇಕು ಎಂದುಕೊಂಡಿದ್ದೇನೆ.."🙏🙏 ಯಮಧರ್ಮ ಸಾವಿತ್ರಿಯರ ಸಂಭಾಷಣೆ ಮುಂದಿನ ಭಾಗ🙏🙏