Sunday, September 28, 2025

ಚ್ಯವನ 8

ಅನಿವಾರ್ಯ ಕಾರಣಗಳಿಂದ ಚ್ಯವನ ಸ್ವಲ್ಪ ಹಿಂದಾಯಿತು ಕ್ಷಮೆ ಇರಲಿ 🙏🙏 ಅಶ್ವಿನೀ ದೇವತೆಗಳು ಸುಕನ್ಯೆಗೆ ಸಹಾಯ ಮಾಡಲು ಮುಂದಾಗಿದ್ದರು. ಇದರಲ್ಲಿ ಅವರಿಗೂ ಒಂದು ಸ್ವಾರ್ಥ ಇತ್ತು... ಸಂಜ್ಞಾ ದೇವಿಯು ಅಶ್ವದರೂಪದಲ್ಲಿ ಇದ್ದಾಗ ಸೂರ್ಯನಿಂದ ಹುಟ್ಟಿದವರು ಅವರು, ಉಳಿದ ದೇವತೆಗಳಿಗೆ ಸಿಗುವಂತೆ ಇವರಿಗೆ ಸೋಮಪಾನದ ಅಧಿಕಾರ ಇರಲಿಲ್ಲ, ನಾಸತ್ಯ ಮತ್ತು ದಸ್ರ ಎಂಬ ಹೆಸರಿನ ಅಶ್ವಿನೀ ಕುಮಾರರು ದೇವತೆಗಳ ಪಂಕ್ತಿಯಲ್ಲಿ ಶೂದ್ರ ವರ್ಣಕ್ಕೆ ಸೇರಿಸಲ್ಪಟ್ಟವರೆಂದು ಮಹಾಭಾರತದ ಶಾಂತಿ ಪರ್ವದಲ್ಲಿ ಹೇಳಿದೆ. '' ಅಶ್ವಿನೌ ತು ಸ್ಮೃತೌ ಶೂದ್ರೌ ತಪಸ್ಯುಗ್ರೇ ಸಮಾಸ್ಥಿತೌ " ಹಾಗಾಗಿ ತಾವೂ ದೇವತೆಗಳ ಪಂಕ್ತಿಯಲ್ಲಿ ಸೋಮಪಾನದ ಅಧಿಕಾರ ಪಡೆಯಬೇಕೆಂಬುದು ಅವರ ನಿರೀಕ್ಷೆಯಾಗಿತ್ತು. ಹಾಗಾಗಿ ಸುಕನ್ಯೆಯ ಪಾತಿವ್ರತ್ಯಕ್ಕೆ ಮೆಚ್ಚಿದ ಅವರು "ದೇವೀ... ದೇವ ವೈದ್ಯರಾದ ನಾವು ನಿನ್ನ ಪತಿಯನ್ನೂ ನಮ್ಮ ಹಾಗೇ ಸುಂದರ ಯುವಕನನ್ನಾಗಿ ಮಾಡಬಲ್ಲೆವು ಆದರೆ.. ನಿನ್ನ ಪತಿಯೂ ಸೇರಿ ನಾವು ಮೂವರೂ ಒಂದೇ ರೂಪದಲ್ಲಿರುವಾಗ ನೀನು ನಿನ್ನ ಪತಿಯನ್ನು ಮತ್ತೆ ವರಿಸಬೇಕಾಗುತ್ತದೆ". ತನ್ನ ಪತಿಯು ಸುಂದರ ಯುವಕನಾಗುತ್ತಾನೆ ಎಂದರೆ ಯಾವ ಹೆಣ್ಣಾದರೂ ಅದನ್ನು ಬಯಸುವಂತೆಯೇ ಸುಕನ್ಯೆಯೂ ಅವರ ಮಾತಿಗೆ ಒಪ್ಪುತ್ತಾಳೆ. ಹಾಗೆಯೇ ತನ್ನ ಪತಿಯಾದ ಚ್ಯವನನನ್ನು ಒಪ್ಪಿಸಿ ಕರೆದುಕೊಂಡು ಬರಲು ತಿಳಿಸುತ್ತಾರೆ. ಹಾಗೆಯೇ ತನ್ನಾಶ್ರಮಕ್ಕೆ ತೆರಳಿದ ಸುಕನ್ಯೆ ಪತಿಯಲ್ಲಿ ಅಶ್ವಿನೀ ದೇವತೆಗಳೊಂದಿಗೆ ನಡೆದ ಸಂಪೂರ್ಣ ಮಾತುಕತೆಯನ್ನು ತಿಳಿಸುತ್ತಾಳೆ. ಮೊದಲು ಅಷ್ಟು ಆಸಕ್ತಿಯನ್ನು ಹೊಂದಿರದಿದ್ದರೂ ನಂತರದಲ್ಲಿ ಚ್ಯವನ ಅವಳ ಮಾತಿಗೆ ಒಪ್ಪಿಕೊಳ್ಳುತ್ತಾನೆ. ನಂತರದಲ್ಲಿ ಅವರಿಬ್ಬರೂ ಅಶ್ವಿನೀ ದೇವತೆಗಳ ಬಳಿಗೆ ಬರುತ್ತಾರೆ. ಸತಿಯ ಜೊತೆಗೆ ಬಂದ ಚ್ಯವನನನ್ನು ನೋಡಿ ಅವರಿಬ್ಬರೂ ಅವನ ಕೈ ಹಿಡಿದುಕೊಂಡು ಬಳಿಯಲ್ಲೆ ಇರುವ ಸರೋವರವನ್ನು ಇಳಿದರು. ಕ್ಷಣಕಾಲ ... ಸುಕನ್ಯೆ ನೋಡುತ್ತಿರುವಂತೆಯೇ ಸುಂದರರಾದ ಮೂರು ಜನ ದೇವಪುರುಷರು ಆ ಸರೋವರದಿಂದ ಮೇಲೆದ್ದು ಬಂದರು. ಉತ್ತಮವಾದ ವಸನಗಳನ್ನು ತೊಟ್ಟು ದಿವ್ಯಾಭರಣಗಳನ್ನು ಧರಿಸಿದ್ದ ಆ ಮೂವರ ರೂಪದಲ್ಲಿ ಎಳ್ಳಿನಿತೂ ವ್ಯತ್ಯಾಸ ಇರಲಿಲ್ಲ. ಮೇಲೆ ಬಂದ ಮೂವರೂ ಕಣ್ಣರಳಿಸಿ ನೋಡುತ್ತಿದ್ದ ಸುಕನ್ಯೆಯನ್ನು ಕುರಿತು ಏಕಕಂಠದಿಂದ.. " ಸುಂದರಿ.. ನಾವು ಮೂರು ಜನರೂ ನಿನ್ನನ್ನು ವರಿಸಲು ಬಯಸಿದ್ದೇವೆ.. ಆದರೆ ನಿನಗೆ ಆಯ್ಕೆಯ ಅವಕಾಶ ಹಾಗಾಗಿ ನಿನಗೆ ಯಾರು ಪತಿಯಾಗಬೇಕೆಂದು ನೀನೇ ಆಯ್ಕೆ ಮಾಡು." ಈಗ ಚ್ಯವನ ಸುಕನ್ಯೆಯರಿಬ್ಬರಿಗೂ ಪರೀಕ್ಷೆ. ಸುಂದರ ರೂಪವನ್ನು ಹೊಂದಿದ ಆತ ಸೂಚಿಸುವ ಅವಕಾಶವೂ ಇಲ್ಲ. ಒಂದೇ ರೂಪ ಹೊಂದಿದ ಮೂವರಲ್ಲಿ ಆಕೆ ಮತ್ತೆ ತನ್ನ ಪತಿಯನ್ನೇ ಆಯ್ಕೆಮಾಡಿಕೊಳ್ಳಬೇಕು, ಸ್ವಲ್ಪ ಯೋಚಿಸಿ ಆಕೆ ತನ್ನ ಪಾತಿವ್ರತ್ಯವನ್ನೇ ಪಣಕ್ಕಿಡಲು ಮುಂದಾದಳು.. ಮನಸ್ಸಿನಲ್ಲಿಯೇ ಪತಿಯನ್ನು ಧ್ಯಾನಿಸಿ ಆ ಮೂವರಲ್ಲಿ ತನ್ನ ಪತಿಯಾರೆಂದು ತಿಳಿದು ಮುಂದೆ ಬಂದು ಆತನ ಕೈ ಹಿಡಿದಳು. ಪತಿಯ ಆಶೀರ್ವಾದ, ದೇವಾನುಗ್ರಹ ಇದ್ದ ಕಾರಣ ಅವಳು ಹಿಡಿದ ಕೈ ಚ್ಯವನನದ್ದೇ ಆಗಿತ್ತು. ಆತನಿಗೂ ತನ್ನ ಸತಿಯ ಪಾತಿವ್ರತ್ಯದ ಬಲವನ್ನು ಕಂಡು ಸಂತೋಷವಾಯಿತು. ವೃದ್ಧನಾದವ ಈಗ ಯುವಕನಾಗಿದ್ದ, ಕುರುಡುತನ ಕಳೆದು ದೃಷ್ಠಿ ದೊರಕಿತ್ತು. ಸುಕನ್ಯೆಯೂ ಪತಿಯ ಸುಂದರ ರೂಪವನ್ನು ನೋಡಿ ಬಹಳ ಆನಂದ ಹೊಂದಿದಳು . ಅಶ್ವಿನೀ ದೇವತೆಗಳ ಅನುಗ್ರಹದಿಂದ ಸಂತಸಗೊಂಡ ಚ್ಯವನ ಅವರನ್ನು ಕುರಿತು " ಯಮಳರೇ ನಿಮ್ಮ ಅನುಗ್ರಹದಿಂದ ನಾನು ಹೊಸ ತಾರುಣ್ಯದ ರೂಪವನ್ನು ಹೊಂದಿದೆ... ನನಗೆ ಅನುರೂಪಳಾದ ಸುಕನ್ಯೆಯೂ ಮತ್ತೆ ನನ್ನನ್ನೇ ವರಿಸಿದಳು. ನನ್ನ ಬದುಕಿಗೇ ಒಂದು ಸುಂದರ ರೂಪವನ್ನು ಕೊಟ್ಟ ನಿಮಗೆ ಇದಕ್ಕೆ ಪ್ರತಿಯಾಗಿ ನೀವು ಬಯಸಿದ ಸೋಮಪಾನವನ್ನು ಇಂದ್ರನ ಸಮ್ಮುಖದಲ್ಲಿಯೇ ಮಾಡಿಸುತ್ತೇನೆ ಇದು ಸತ್ಯ" ಎಂದು ಗಂಭೀರವಾಣಿಯಲ್ಲಿ ಹೇಳಿದ. ಚ್ಯವನನ ಮಾತುಗಳನ್ನು ಕೇಳಿದ ಅಶ್ವಿನೀಕುಮಾರರಿಗೂ ಸಂತೋಷವಾಗಿ ಸ್ವರ್ಗಲೋಕದತ್ತ ಪ್ರಯಾಣ ಬೆಳಸಿದರು. ಇತ್ತ ಚ್ಯವನ ಸುಕನ್ಯೆಯರು ಸಂತೋಷಚಿತ್ತದಿಂದ ಆಶ್ರಮದತ್ತ ತಿರುಗಿ ಬಂದರು.🙏🙏 ಮುಂದುವರಿಯುವುದು🙏

Monday, September 15, 2025

ಚ್ಯವನ 7

ಬಹು ಬೇಗ ಚ್ಯವನ ಮಹರ್ಷಿಯ ಸೇವೆಯಲ್ಲಿ ನಿತ್ಯ ಮಾಡಬೇಕಾದ ಕಾರ್ಯಗಳೇನು ಎಂಬುದನ್ನು ಸುಕನ್ಯೆ ಅರಿತುಕೊಂಡಳು. ಅವನೂ ಈಗ ಸಂಸಾರಿ ಹಾಗಾಗಿ ಹೊತ್ತು ಹೊತ್ತಿಗೆ ಸ್ನಾನ ಸಂಧ್ಯಾವಂದನೆ ಅಗ್ನಿಕಾರ್ಯಗಳನ್ನು ಮಾಡುವನು, ಅವನ ಆ ಎಲ್ಲಾ ನಿತ್ಯಾನುಷ್ಠಾನಕ್ಕೆ ಸುಕನ್ಯೆಯೇ ಸಿದ್ಧತೆ ಮಾಡಬೇಕು. ಬೆಳಗಿನ ಜಾವದಲ್ಲಿಯೇ ಪತಿ ಏಳುವ ಮೊದಲೇ ಎದ್ದು ಆಶ್ರಮದ ಕೆಲಸದಲ್ಲಿ ತೊಡಗುವಳು, ಆತ ಎದ್ದಾಕ್ಷಣ ಅವನಿಗೆ ಆಸರೆಯಾಗಿ ಆಶ್ರಮದಿಂದ ಅನತಿದೂರ ಶೌಚಕ್ಕಾಗಿ ಕರೆದೊಯ್ಯವಳು...ಅಂಧನಾದ ಕಾರಣ ನದೀ ತಟಕ್ಕೆ ಸ್ನಾನಕ್ಕೆ ಹೋಗಲಾರ, ಇವಳೇ ನೀರನ್ನು ತಂದು ಬಿಸಿಮಾಡಿ ಸ್ನಾನಕ್ಕೆ ಸಿದ್ದತೆ ಮಾಡಿ ತಾನೇ ಸ್ನಾನ ಮಾಡಿಸುವಳು. ಆನಂತರದಲ್ಲಿ ತಾನೂ ಸ್ನಾನ ಮಾಡಿ ಅವನ ನಿತ್ಯಾನುಷ್ಠಾನಗಳಿಗೆ ಸಿದ್ಧತೆ ಮಾಡಿಕೊಡುವಳು.. ಪತಿಯ ಅನುಷ್ಠಾನ ಮುಗಿದಾಗ ತಾನೇ ಸಂಗ್ರಹಿಸಿ ತಂದ ಫಲ, ಕಂದಮೂಲಗಳನ್ನು ನೀಡುವಳು.. ಅವನು ತಿಂದ ನಂತರ ಉಳಿದಿದ್ದನ್ನು ತಾನೂ ಸೇವಿಸುವಳು. ತ್ರಿಕಾಲದಲ್ಲಿ ಇದೇ ರೀತಿ ವರ್ತಿಸುತ್ತಾ ಪ್ರತಿಷ್ಠಾಪಿಸಿದ ಗಾರ್ಹಪತ್ಯ..ಆವಹನೀಯ.. ದಕ್ಷಿಣಾಗ್ನಿಗಳ ರಕ್ಷಣೆ ಮಾಡಿಕೊಳ್ಳುವಳು. ಈಗ ಸುಕನ್ಯೆಗೆ ಚ್ಯವನನನ್ನು ಬಿಟ್ಟು ಬೇರೆ ಪ್ರಪಂಚವೇ ಇಲ್ಲ. ರಾತ್ರಿಕಾಲದಲ್ಲಿ ಚ್ಯವನನನ್ನು ಮತ್ತನೆಯ ಹುಲ್ಲಿನ ಹಾಸಿನಮೇಲೆ ಮಲಗಿಸಿ ಅವನ ಕಾಲುಗಳನ್ನು ಒತ್ತುವಳು. ಅವನಿಗೆ ನಿದ್ರೆ ಬಂದಮೇಲೆ ತಾನೂ ಅವನ ಪಾದದ ಬಳಿಯಲ್ಲಿ ಮಲಗಿಕೊಳ್ಳುವಳು. ಹೀಗೇ ಅದೆಷ್ಟೋ ವರ್ಷಗಳೇ ಕಳೆದವು... ಒಂದು ದಿನ ಸುಕನ್ಯೆಯು ನದಿಯಲ್ಲಿ ಸ್ನಾನಮಾಡಿ ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಆಶ್ರಮದ ಕಡೆಗೆ ಸಾಗಿ ಬರುತ್ತಿದ್ದಳು. ಅದೇ ಸಮಯದಲ್ಲಿ ಗಗನ ಮಾರ್ಗದಲ್ಲಿ ಸಾಗುತ್ತಿದ್ದ ಅಶ್ವಿನೀ ದೇವತೆಗಳು ಇವಳನ್ನು ನೋಡಿದರು. ಅನುಪಮವಾದ ರೂಪ ಲಾವಣ್ಯದಿಂದ ಎಂತವರ ಮನಸ್ಸನ್ನಾದರೂ ಆಕರ್ಷಿಸುವ ಹಾಗಿದ್ದ ಸುಕನ್ಯೆಯನ್ನು ನೋಡಿದ ಅಶ್ವಿನೀ ದೇವತೆಗಳೂ ಆಕರ್ಷಿತರಾದರು. ಗಗನ ಮಾರ್ಗದಿಂದ ಕೆಳಗಿಳಿದು ಆಕೆಯ ಸಮ್ಮುಖದಲ್ಲಿ ಕಾಣಿಸಿಕೊಂಡು..." ಸುಂದರೀ... ಯಾರು ನೀನು? ಈ ಘೋರಾರಣ್ಯದಲ್ಲಿ ಒಬ್ಬಳೇ ಏಕೆ ಸಂಚರಿಸುತ್ತಿರುವೆ.. ನಿರಾಭರಣ ಸುಂದರಿಯಾದ ನಿನ್ನ ಮುಖ ಕಾಂತಿಯಿಂದ ಈ ಅರಣ್ಯವೇ ಬೆಳಗುತ್ತಿದೆ. ನೀನು ದೇವ ಕನ್ನಿಕೆಯೋ... ಆದರೂ ಅಶ್ವಿನೀ ದೇವತೆಗಳಾದ ನಾವು ಇಲ್ಲಿಯವರೆಗೆ ನಿನ್ನನ್ನು ನೋಡಿದ್ದಿಲ್ಲ.." ಎಂದು ಕೇಳಿದರು. ಅವರು ಹಾಗೆ ಪ್ರಶ್ನಿಸಿದಾಗ... ಒಂದು ಕ್ಷಣ ಸುಕನ್ಯೆಗೆ ನಾಚಿಕೆಯೂ ಆತಂಕವೂ ಆಯಿತು. ಪರ ಪುರುಷರು ತನ್ನ ಸೌಂದರ್ಯದ ವರ್ಣನೆ ಮಾಡಿದ್ದು ಅವಳ ನಾಚಿಕೆಗೆ ಕಾರಣವಾದರೆ.. ಪರಿಚಯಿಸಿಕೊಳ್ಳಬಹುದೋ ಎಂಬ ಆತಂಕ. ಆದರೂ ಸಾವರಿಸಿಕೊಂಡು ಅವರಿಗೆ ತಾನು ಶರ್ಯಾತಿ ಪುತ್ರಿಯೆಂದೂ, ಚ್ಯವನ ಮಹರ್ಷಿಯ ಸತಿಯೆಂದೂ ಪರಿಚಯಿಸಿಕೊಂಡಳು. ಸುಕನ್ಯೆಯ ಮಾತನ್ನು ಕೇಳಿದ ಅಶ್ವಿನೀ ದೇವತೆಗಳು ನಗುತ್ತಾ.. "ನಿನ್ನ ತಂದೆಯಾದರೋ.. ಕುರುಡನೂ ವೃದ್ಧನೂ ಆಶ್ರಮ ವಾಸಿಯೂ ಆದ ಚ್ಯವನನಿಗೆ ನಿನ್ನನ್ನು ಮದುವೆಮಾಡಿ ಕೊಟ್ಟನು. ಅಲಂಕಾರವಿಲ್ಲದೆಯೇ ಅತ್ಯಂತ ಸೌಂದರ್ಯದಿಂದ ಶೋಭಿಸುತ್ತಿರುವ ನಿನ್ನ ಸೌಂದರ್ಯವನ್ನು ಸವಿಯುವ ಮನಸ್ಸು .. ಕಣ್ಣು...ತಾರುಣ್ಯ ಯಾವುದೂ ನಿನ್ನ ಪತಿಯಲ್ಲಿಲ್ಲ... ಈಗ ನೀನು ನಮ್ಮಿಬ್ಬರಲ್ಲಿ ಯಾರಾದರೊಬ್ಬರನ್ನು ವರಿಸುವ ಮನಸ್ಸು ಮಾಡು ನಿನಗೆ ಸ್ವರ್ಗ ಸುಖವೇನೆಂದು ಅನುಭವಕ್ಕೆ ಬರುತ್ತದೆ.'' ಅಶ್ವಿನೀ ದೇವತೆಗಳು ಆಡಿದ ಮಾತಿನಿಂದ ಸುಕನ್ಯೆಗೆ ಅಸಹನೆಯುಂಟಾಯಿತು. ಅದಕ್ಕಾಗಿಯೇ ಸ್ವಲ್ಪ ನಿಷ್ಠುರವಾದ ವಾಕ್ಯಗಳಲ್ಲಿಯೇ ಅವರಿಗೆ ಉತ್ತರಿಸಿದಳು. "ಅಯ್ಯಾ ದೇವತೆಗಳೇ... ನಾನು ಯಾರ ಬಲವಂತಕ್ಕಾಗಿ ಚ್ಯವನ ಮಹರ್ಷಿಗಳನ್ನು ಮದುವೆಯಾದವಳಲ್ಲ... ಅವರನ್ನು ವರಿಸಿದ್ದು ನನ್ನ ನಿರ್ಧಾರದಿಂದ, ಇನ್ನು ಅವರ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಂಡಂದಿನಿಂದ ಒಂದು ಕ್ಷಣವಾದರೂ ಇದು ನನಗೆ ಸಹ್ಯವಲ್ಲ ಎಂದು ಭಾವಿಸಲೂ ಇಲ್ಲ, ಈ ಪ್ರಪಂಚದಲ್ಲಿ ಹೆಣ್ಣೊಬ್ಬಳು ಪತಿವ್ರತಾ ಧರ್ಮದಿಂದ ಹೇಗೆ ಬದುಕಬೇಕೋ ಹಾಗೇ ಇದ್ದೇನೆ. ಇಲ್ಲಿ ನನಗೆ ಬೇರೆ ಆಯ್ಕೆಯ ಅವಶ್ಯಕತೆ ಕೂಡ ಇಲ್ಲ, ನಾನು ಇಲ್ಲಿ ಸುಖವಾಗಿಯೇ ಇದ್ದೇನೆ ನನ್ನ ಬಗ್ಗೆ ನಿಮಗೆ ಯಾವ ನಿರೀಕ್ಷೆಯಾದರೂ ಬೇಡ ". ಸುಕನ್ಯೆಯ ಮಾತನ್ನು ಕೇಳಿದ ಅಶ್ವಿನೀಕುಮಾರರು ಕುಪಿತರಾಗಲಿಲ್ಲ ಬದಲಿಗೆ ಅವಳೊಂದಿಗೆ ಒಂದು ಪಂಥಾಹ್ವಾನಕ್ಕೆ ಮುಂದಾದರು. 🙏 ಮುಂದುವರಿಯುತ್ತದೆ🙏🙏