Monday, September 15, 2025
ಚ್ಯವನ 7
ಬಹು ಬೇಗ ಚ್ಯವನ ಮಹರ್ಷಿಯ ಸೇವೆಯಲ್ಲಿ ನಿತ್ಯ ಮಾಡಬೇಕಾದ ಕಾರ್ಯಗಳೇನು ಎಂಬುದನ್ನು ಸುಕನ್ಯೆ ಅರಿತುಕೊಂಡಳು. ಅವನೂ ಈಗ ಸಂಸಾರಿ ಹಾಗಾಗಿ ಹೊತ್ತು ಹೊತ್ತಿಗೆ ಸ್ನಾನ ಸಂಧ್ಯಾವಂದನೆ ಅಗ್ನಿಕಾರ್ಯಗಳನ್ನು ಮಾಡುವನು, ಅವನ ಆ ಎಲ್ಲಾ ನಿತ್ಯಾನುಷ್ಠಾನಕ್ಕೆ ಸುಕನ್ಯೆಯೇ ಸಿದ್ಧತೆ ಮಾಡಬೇಕು. ಬೆಳಗಿನ ಜಾವದಲ್ಲಿಯೇ ಪತಿ ಏಳುವ ಮೊದಲೇ ಎದ್ದು ಆಶ್ರಮದ ಕೆಲಸದಲ್ಲಿ ತೊಡಗುವಳು, ಆತ ಎದ್ದಾಕ್ಷಣ ಅವನಿಗೆ ಆಸರೆಯಾಗಿ ಆಶ್ರಮದಿಂದ ಅನತಿದೂರ ಶೌಚಕ್ಕಾಗಿ ಕರೆದೊಯ್ಯವಳು...ಅಂಧನಾದ ಕಾರಣ ನದೀ ತಟಕ್ಕೆ ಸ್ನಾನಕ್ಕೆ ಹೋಗಲಾರ, ಇವಳೇ ನೀರನ್ನು ತಂದು ಬಿಸಿಮಾಡಿ ಸ್ನಾನಕ್ಕೆ ಸಿದ್ದತೆ ಮಾಡಿ ತಾನೇ ಸ್ನಾನ ಮಾಡಿಸುವಳು. ಆನಂತರದಲ್ಲಿ ತಾನೂ ಸ್ನಾನ ಮಾಡಿ ಅವನ ನಿತ್ಯಾನುಷ್ಠಾನಗಳಿಗೆ ಸಿದ್ಧತೆ ಮಾಡಿಕೊಡುವಳು.. ಪತಿಯ ಅನುಷ್ಠಾನ ಮುಗಿದಾಗ ತಾನೇ ಸಂಗ್ರಹಿಸಿ ತಂದ ಫಲ, ಕಂದಮೂಲಗಳನ್ನು ನೀಡುವಳು.. ಅವನು ತಿಂದ ನಂತರ ಉಳಿದಿದ್ದನ್ನು ತಾನೂ ಸೇವಿಸುವಳು. ತ್ರಿಕಾಲದಲ್ಲಿ ಇದೇ ರೀತಿ ವರ್ತಿಸುತ್ತಾ ಪ್ರತಿಷ್ಠಾಪಿಸಿದ ಗಾರ್ಹಪತ್ಯ..ಆವಹನೀಯ.. ದಕ್ಷಿಣಾಗ್ನಿಗಳ ರಕ್ಷಣೆ ಮಾಡಿಕೊಳ್ಳುವಳು. ಈಗ ಸುಕನ್ಯೆಗೆ ಚ್ಯವನನನ್ನು ಬಿಟ್ಟು ಬೇರೆ ಪ್ರಪಂಚವೇ ಇಲ್ಲ. ರಾತ್ರಿಕಾಲದಲ್ಲಿ ಚ್ಯವನನನ್ನು ಮತ್ತನೆಯ ಹುಲ್ಲಿನ ಹಾಸಿನಮೇಲೆ ಮಲಗಿಸಿ ಅವನ ಕಾಲುಗಳನ್ನು ಒತ್ತುವಳು. ಅವನಿಗೆ ನಿದ್ರೆ ಬಂದಮೇಲೆ ತಾನೂ ಅವನ ಪಾದದ ಬಳಿಯಲ್ಲಿ ಮಲಗಿಕೊಳ್ಳುವಳು.
ಹೀಗೇ ಅದೆಷ್ಟೋ ವರ್ಷಗಳೇ ಕಳೆದವು... ಒಂದು ದಿನ ಸುಕನ್ಯೆಯು ನದಿಯಲ್ಲಿ ಸ್ನಾನಮಾಡಿ ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಆಶ್ರಮದ ಕಡೆಗೆ ಸಾಗಿ ಬರುತ್ತಿದ್ದಳು. ಅದೇ ಸಮಯದಲ್ಲಿ ಗಗನ ಮಾರ್ಗದಲ್ಲಿ ಸಾಗುತ್ತಿದ್ದ ಅಶ್ವಿನೀ ದೇವತೆಗಳು ಇವಳನ್ನು ನೋಡಿದರು. ಅನುಪಮವಾದ ರೂಪ ಲಾವಣ್ಯದಿಂದ ಎಂತವರ ಮನಸ್ಸನ್ನಾದರೂ ಆಕರ್ಷಿಸುವ ಹಾಗಿದ್ದ ಸುಕನ್ಯೆಯನ್ನು ನೋಡಿದ ಅಶ್ವಿನೀ ದೇವತೆಗಳೂ ಆಕರ್ಷಿತರಾದರು. ಗಗನ ಮಾರ್ಗದಿಂದ ಕೆಳಗಿಳಿದು ಆಕೆಯ ಸಮ್ಮುಖದಲ್ಲಿ ಕಾಣಿಸಿಕೊಂಡು..." ಸುಂದರೀ... ಯಾರು ನೀನು? ಈ ಘೋರಾರಣ್ಯದಲ್ಲಿ ಒಬ್ಬಳೇ ಏಕೆ ಸಂಚರಿಸುತ್ತಿರುವೆ.. ನಿರಾಭರಣ ಸುಂದರಿಯಾದ ನಿನ್ನ ಮುಖ ಕಾಂತಿಯಿಂದ ಈ ಅರಣ್ಯವೇ ಬೆಳಗುತ್ತಿದೆ. ನೀನು ದೇವ ಕನ್ನಿಕೆಯೋ... ಆದರೂ ಅಶ್ವಿನೀ ದೇವತೆಗಳಾದ ನಾವು ಇಲ್ಲಿಯವರೆಗೆ ನಿನ್ನನ್ನು ನೋಡಿದ್ದಿಲ್ಲ.." ಎಂದು ಕೇಳಿದರು. ಅವರು ಹಾಗೆ ಪ್ರಶ್ನಿಸಿದಾಗ... ಒಂದು ಕ್ಷಣ ಸುಕನ್ಯೆಗೆ ನಾಚಿಕೆಯೂ ಆತಂಕವೂ ಆಯಿತು. ಪರ ಪುರುಷರು ತನ್ನ ಸೌಂದರ್ಯದ ವರ್ಣನೆ ಮಾಡಿದ್ದು ಅವಳ ನಾಚಿಕೆಗೆ ಕಾರಣವಾದರೆ.. ಪರಿಚಯಿಸಿಕೊಳ್ಳಬಹುದೋ ಎಂಬ ಆತಂಕ. ಆದರೂ ಸಾವರಿಸಿಕೊಂಡು ಅವರಿಗೆ ತಾನು ಶರ್ಯಾತಿ ಪುತ್ರಿಯೆಂದೂ, ಚ್ಯವನ ಮಹರ್ಷಿಯ ಸತಿಯೆಂದೂ ಪರಿಚಯಿಸಿಕೊಂಡಳು. ಸುಕನ್ಯೆಯ ಮಾತನ್ನು ಕೇಳಿದ ಅಶ್ವಿನೀ ದೇವತೆಗಳು ನಗುತ್ತಾ.. "ನಿನ್ನ ತಂದೆಯಾದರೋ.. ಕುರುಡನೂ ವೃದ್ಧನೂ ಆಶ್ರಮ ವಾಸಿಯೂ ಆದ ಚ್ಯವನನಿಗೆ ನಿನ್ನನ್ನು ಮದುವೆಮಾಡಿ ಕೊಟ್ಟನು. ಅಲಂಕಾರವಿಲ್ಲದೆಯೇ ಅತ್ಯಂತ ಸೌಂದರ್ಯದಿಂದ ಶೋಭಿಸುತ್ತಿರುವ ನಿನ್ನ ಸೌಂದರ್ಯವನ್ನು ಸವಿಯುವ ಮನಸ್ಸು .. ಕಣ್ಣು...ತಾರುಣ್ಯ ಯಾವುದೂ ನಿನ್ನ ಪತಿಯಲ್ಲಿಲ್ಲ... ಈಗ ನೀನು ನಮ್ಮಿಬ್ಬರಲ್ಲಿ ಯಾರಾದರೊಬ್ಬರನ್ನು ವರಿಸುವ ಮನಸ್ಸು ಮಾಡು ನಿನಗೆ ಸ್ವರ್ಗ ಸುಖವೇನೆಂದು ಅನುಭವಕ್ಕೆ ಬರುತ್ತದೆ.'' ಅಶ್ವಿನೀ ದೇವತೆಗಳು ಆಡಿದ ಮಾತಿನಿಂದ ಸುಕನ್ಯೆಗೆ ಅಸಹನೆಯುಂಟಾಯಿತು. ಅದಕ್ಕಾಗಿಯೇ ಸ್ವಲ್ಪ ನಿಷ್ಠುರವಾದ ವಾಕ್ಯಗಳಲ್ಲಿಯೇ ಅವರಿಗೆ ಉತ್ತರಿಸಿದಳು. "ಅಯ್ಯಾ ದೇವತೆಗಳೇ... ನಾನು ಯಾರ ಬಲವಂತಕ್ಕಾಗಿ ಚ್ಯವನ ಮಹರ್ಷಿಗಳನ್ನು ಮದುವೆಯಾದವಳಲ್ಲ... ಅವರನ್ನು ವರಿಸಿದ್ದು ನನ್ನ ನಿರ್ಧಾರದಿಂದ, ಇನ್ನು ಅವರ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಂಡಂದಿನಿಂದ ಒಂದು ಕ್ಷಣವಾದರೂ ಇದು ನನಗೆ ಸಹ್ಯವಲ್ಲ ಎಂದು ಭಾವಿಸಲೂ ಇಲ್ಲ, ಈ ಪ್ರಪಂಚದಲ್ಲಿ ಹೆಣ್ಣೊಬ್ಬಳು ಪತಿವ್ರತಾ ಧರ್ಮದಿಂದ ಹೇಗೆ ಬದುಕಬೇಕೋ ಹಾಗೇ ಇದ್ದೇನೆ. ಇಲ್ಲಿ ನನಗೆ ಬೇರೆ ಆಯ್ಕೆಯ ಅವಶ್ಯಕತೆ ಕೂಡ ಇಲ್ಲ, ನಾನು ಇಲ್ಲಿ ಸುಖವಾಗಿಯೇ ಇದ್ದೇನೆ ನನ್ನ ಬಗ್ಗೆ ನಿಮಗೆ ಯಾವ ನಿರೀಕ್ಷೆಯಾದರೂ ಬೇಡ ". ಸುಕನ್ಯೆಯ ಮಾತನ್ನು ಕೇಳಿದ ಅಶ್ವಿನೀಕುಮಾರರು ಕುಪಿತರಾಗಲಿಲ್ಲ ಬದಲಿಗೆ ಅವಳೊಂದಿಗೆ ಒಂದು ಪಂಥಾಹ್ವಾನಕ್ಕೆ ಮುಂದಾದರು. 🙏
ಮುಂದುವರಿಯುತ್ತದೆ🙏🙏
Subscribe to:
Post Comments (Atom)
No comments:
Post a Comment