Monday, June 30, 2025
ಗಾಲವ 5ನೇ ಭಾಗ
ಯಯಾತಿಯಿಂದ ಬೀಳ್ಕೊಂಡು ಗರುಡ ಗಾಲವರು ಮಾಧವಿಯನ್ನೂ ಕರೆದುಕೊಂಡು ಪ್ರತಿಷ್ಠಾನಪುರದಿಂದ ಹೊರಬಂದರು.. ಸುಪರ್ಣನು ಗಾಲವನನ್ನು ಕುರಿತು.. "ಮಿತ್ರಾ.. ನೀನು ಯಯಾತಿಪುತ್ರಿಯಾದ ಈ ಮಾಧವಿಯನ್ನು ಕರೆದುಕೊಂಡು ಹೋಗಿ ನಿನಗೆ ಬೇಕಾದ ಅಶ್ವಗಳನ್ನು ಸಂಪಾದಿಸಿಕೊಂಡು ನಿನ್ನ ಗುರುಗಳಿಗೆ ಕೊಡು ನಾನಿನ್ನು ತೆರಳುತ್ತೇನೆ" ಎಂದು ಹೇಳಿ ಗಾಲವನಿಂದ ಅನುಮತಿ ಪಡೆದು ಸಾಗುತ್ತಾನೆ. ಗಾಲವನು ಗರುಡ ತೆರಳಿದ ಮೇಲೆ ತಾನು ಯಾವ ದಿಕ್ಕಿಗೆ ಸಾಗಬೇಕು ಎಂದು ಯೋಚಿಸತೊಡಗಿದಾಗ ಸೂರ್ಯ ವಂಶದ ಅರಸನಾದ ಹರ್ಯಶ್ವ ನೆನಪಾಗುತ್ತಾನೆ. ಹಾಗೆ ಅಯೋಧ್ಯೆಯ ಅರಸನಾದ ಹರ್ಯಶ್ವನ ಬಳಿಗೆ ಹೋಗುವುದೇ ಸೂಕ್ತ ಎಂದು ಮಾಧವಿಯೊಂದಿಗೆ ಅಯೋಧ್ಯೆಗೆ ಬರುತ್ತಾನೆ. ಸೂರ್ಯವಂಶದ ಅರಸನಾದ ಹರ್ಯಶ್ವ ಗಾಲವ ಮಾಧವಿಯರನ್ನು ಸ್ವಾಗತಿಸಿ ಸತ್ಕರಿಸುತ್ತಾನೆ. ಆಗ ಗಾಲವ ತಾನು ಗುರುದಕ್ಷಿಣೆಯ ಸಂಗ್ರಹಕ್ಕಾಗಿ ಬಂದ ವಿಚಾರವನ್ನು ಹೇಳಿ, ಮೊದಲು ಯಯಾತಿಯಲ್ಲಿ ಹೋದ ವಿಷಯವನ್ನೂ.. ಯಯಾತಿ ಮಾಧವಿಯನ್ನು ಕಳುಹಿಕೊಟ್ಟದ್ದನ್ನೂ ಹೇಳುತ್ತಾನೆ. ಹರ್ಯಶ್ವನಿಗೆ ಮಾಧವಿಯನ್ನು ನೋಡಿದಾಕ್ಷಣ ಮನಸ್ಸಿನಲ್ಲಿ ಆಸೆ ಮೂಡಿತು ಒಬ್ಬ ವಂಶೋದ್ಧಾರಕನಾದ ಪುತ್ರನನ್ನು ಇವಳಿಂದಲೇ ಪಡೆದರೆ ತನಗೂ ತನ್ನ ವಂಶಕ್ಕೂ ಸಾರ್ಥಕತೆ ಒದಗುತ್ತದೆ ಎಂದೇ ಭಾವಿಸಿದ. ಮಾಧವಿಗೆ ಪ್ರತಿಯಾಗಿ ಏನನ್ನು ಬೇಕಾದರೂ ಕೊಟ್ಟುಬಿಡಬಹುದು ಎಂಬ ನಿರ್ಧಾರಕ್ಕೆ ಬಂದ. ಆಗ ಗಾಲವ ". ಅರಸಾ ಈಕೆ ನನ್ನ ಜೊತೆಗೆ ಇರುವ ಕನ್ಯೆ ನೀನು ಈಕೆಯನ್ನು ನೋಡುವ ನೋಟದಲ್ಲಿಯೇ ಇವಳನ್ನು ಬಯಸಿದ್ದಿ ಎಂದು ಅರ್ಥಮಾಡಿಕೊಳ್ಳಬಲ್ಲೆ. ನೀನು ನನಗೆ ಕನ್ಯಾಶುಲ್ಕವನ್ನು ನೀಡಿ ಇವಳನ್ನು ಸತಿಯನ್ನಾಗಿ ಹೊಂದಬಹುದು " ಎಂದು ಹೇಳಿ ತನಗೆ ಬೇಕಾದ ಏಕಕರ್ಣ ಕಪ್ಪಾಗಿರುವ ಬಿಳಿ ದೇಹದ ಎಂಟುನೂರು ಅಶ್ವಗಳು ಬೇಕು ಎನ್ನುತ್ತಾನೆ. ಇದನ್ನು ಕೇಳಿದ ಹರ್ಯಶ್ವನಿಗೆ ಒಮ್ಮೆಲೇ ನಿರಾಸೆಯಾಗುತ್ತದೆ. "ಗಾಲವರೇ ನನ್ನ ಆಸೆಯೂ ನಿರಾಸೆಯಾಯ್ತು ... ನಿಮ್ಮ ನಿರೀಕ್ಷೆಯೂ ಹುಸಿಯಾಯ್ತ ನನ್ನ ಅಶ್ವಶಾಲೆಯಲ್ಲಿ ಅಸಂಖ್ಯ ಅಶ್ವಗಳಿರುವುದು ನಿಜ ಆದರೆ... ನೀವು ಹೇಳಿದ ಲಕ್ಷಣಗಳನ್ನು ಹೊಂದಿದ ಕೇವಲ ಎರಡುನೂರು ಕುದುರೆಗಳು ಮಾತ್ರ ಇವೆ, ಇಷ್ಟಾದರೂ ನಿಮ್ಮಲ್ಲಿ ಒಂದು ಬೇಡಿಕೆಯಿದೆ.. ಅಪೂರ್ವ ಸೌಂದರ್ಯವತಿಯಾದ ಈಕೆಯಿಂದ ನಾನೊಂದು ಸಂತಾನ ಹೊಂದಬೇಕು ಎಂದು ಬಯಸಿದ್ದೇನೆ, ಆದರೆ ನಿಮ್ಮನ್ನು ನಿರ್ಭಂಧಿಸಲಾರೆ" ಎನ್ನುತ್ತಾನೆ. ಗಾಲವನಿಗೂ ಏನು ಉತ್ತರಿಸಬೇಕೆಂಬುದೇ ತೋಚಲಿಲ್ಲ. ತನ್ನ ಕಾರ್ಯಕ್ಕಾಗಿ ಅಲ್ಲಿಂದ ಹೊರಡದೇ ಅನ್ಯ ಮಾರ್ಗವಿರಲಿಲ್ಲ.. ಆಗ ಅವನೊಂದಿಗೆ ಇದ್ದ ಮಾಧವಿಯೇ ಒಂದು ಸೂಚನೆ ಕೊಡುತ್ತಾಳೆ " ಅಯ್ಯಾ ಮಹರ್ಷಿ ನಿಮಗೆ ಬೇಕಾದ ಲಕ್ಷಣಗಳನ್ನು ಹೊಂದಿದ ಕುದುರೆಗಳು ಒಂದೆಡೆಯಲ್ಲಿಯೇ ಸಿಗುವುದು ಅಸಾಧ್ಯವಾಗಿರಲೂ ಬಹುದು ಹಾಗಾಗಿ.. ಈ ಅರಸನಲ್ಲಿರುವ ಎರಡುನೂರು ಕುದುರೆಗಳನ್ನು ಪಡೆದುಕೊಳ್ಳಿ ಅದಕ್ಕೆ ಪ್ರತಿಯಾಗಿ ಅವನ ಬಯಕೆಯಂತೆ ಒಂದು ಸಂತಾನವಾಗುವವರೆಗೆ ನಾನಿಲ್ಲಿಯೇ ಇರುತ್ತೇನೆ. ಆತಂಕ ಪಡಬೇಕಾದ್ದಿಲ್ಲ... ನನಗೊಬ್ಬರು ತಪಸ್ವಿಗಳು ಒಂದೊಂದು ಮಗುವನ್ನ ಹೆತ್ತ ಮೇಲೆಯೂ ಮತ್ತೆ ನಾನು ಕನ್ಯೆಯಾಗಿಯೇ ಉಳಿಯುವೆನೆಂದು ವರ ನೀಡಿದ್ದಾರೆ''(ಮಾಧವಿಗೆ ಈ ವರವನ್ನು ಯಾರು ಯಾವಾಗ ಕೊಟ್ಟರು ಎಂಬ ವಿಷಯ ನನಗೆ ತಿಳಿದಿಲ್ಲ.. ಮಹಾಭಾರತದಲ್ಲೂ ಉಲ್ಲೇಖ ಕಾಣಿಸಲಿಲ್ಲ) ಮಾಧವಿಯಾಡಿದ ಮಾತನ್ನು ಕೇಳಿ ಗಾಲವನಿಗೆ ಅದು ಸರಿಯನ್ನಿಸಿತು. ಅವಳು ಹೇಳಿದಂತೆಯೇ ಹರ್ಯಶ್ವನಿಗೆ ನಿಬಂಧನೆಯನ್ನು ವಿಧಿಸಿ ಮಾಧವಿಯನ್ನು ಅವನಿಗೊಪ್ಪಿಸುತ್ತಾನೆ. ಕಾಲ ಕಳೆದಂತೆ ಹರ್ಯಶ್ವ - ಮಾಧವಿಯರ ಪ್ರೀತಿಯ ಸಾಂಗತ್ಯದ ಪ್ರತೀಕವಾಗಿ ಪುತ್ರ ಸಂತಾನವಾಗುತ್ತದೆ. ಹುಟ್ಟಿದ ಮಗುವಿಗೆ "ವಸುಮನಸ" ಎಂದು ನಾಮಕರಣ ಮಾಡುತ್ತಾನೆ. ಕೆಲವು ದಿನಗಳ ತರುವಾಯ ಗಾಲವ ಬಂದು ಮೊದಲೇ ಆಗಿದ್ದ ನಿಬಂಧನೆಯನ್ನು ನೆನಪಿಸುತ್ತಾನೆ. ರಾಜನೂ ಅದನ್ನು ಅನುಮೋದಿಸುತ್ತಾನೆ.. ಅಲ್ಲಿಯವರೆಗೆ ಸುಖದ ಸುಪ್ಪತ್ತಿಗೆಯಲ್ಲಿ ನಲಿದಾಡಿದ್ದ ಮಾಧವಿ ಮನಸ್ಸಿನಲ್ಲಿಯೇ ತನ್ನ ವರವನ್ನು ನೆನಪಿಸಿಕೊಂಡು ಧ್ಯಾನಿಸಿ ಮತ್ತೆ ಕನ್ಯೆಯಾಗಿ ಗಾಲವನನ್ನು ಹಿಂಬಾಲಿಸಲು ಸಿದ್ಧಳಾಗಿಬಿಡುತ್ತಾಳೆ.🙏🙏
ಇನ್ನೂ ಇದೆ ಮುಂದಿನ ಬರಹದಲ್ಲಿ🙏
Sunday, June 29, 2025
ಗಾಲವ ನಾಲ್ಕನೇ ಭಾಗ
ವಿಶ್ವಾಮಿತ್ರರ ಮಾತನ್ನು ಕೇಳಿದ ಗಾಲವ ವ್ಯಥೆ ಪಡುತ್ತಿದ್ದಾಗ ಗರುಡನೇ ಧೈರ್ಯದ ಮಾತುಗಳನ್ನು ಆಡುತ್ತಾನೆ. ''ಅಯ್ಯಾ ಗಾಲವ ಈ ಪ್ರಪಂಚದಲ್ಲಿ ಏನನ್ನಾದರೂ ಪಡೆಯುವ ಮೊದಲು ಧನವನ್ನು ಗಳಿಸಿಕೊಳ್ಳಬೇಕಾಗುತ್ತದೆ. ಸುವರ್ಣ ಧನವಿಲ್ಲದೇ ಹೋದರೆ ಯಾವುದೇ ವಸ್ತುವನ್ನು ಹೊಂದಲು ಸಾಧ್ಯವಿಲ್ಲ..ನೀನು ಮೊದಲಿಗೆ ಶ್ಯಾಮ ಕರ್ಣದ ಎಂಟು ನೂರು ಕುದುರೆಗಳನ್ನು ಪಡೆಯಲು ಬೇಕಾದ ಧನ ಸಂಗ್ರಹ ಮಾಡುವ ದಾರಿಯನ್ನು ಅರಸು, ನನ್ನ ಪ್ರಕಾರ ಯಾರು ಧಾರ್ಮಿಕನೆಂದು ಹೇಳಿಸಿಕೊಂಡಿರುವನೋ.. ಯಜ್ಞ ಯಾಗಗಳನ್ನು ಮಾಡಿ ಪ್ರಜಾರಂಜಕನಾಗಿ ಬದುಕಿರುವನೋ.. ಯಾರು ದಾನಧರ್ಮಗಳನ್ನು ಮಾಡಿ ದೇವತೆಗಳ ಸಂಪ್ರೀತಿಗೂ ಪಾತ್ರವಾಗಿರುವನೋ ಅಂತಹ ವ್ಯಕ್ತಿಯಲ್ಲಿ ಹೋಗಿ ದಾನದ ರೂಪದಲ್ಲಿ ಧನವನ್ನು ಪಡೆದು ಮುಂದೆ ಸಾಗಬೇಕು. ಹಾಗೆ ಯೋಚಿಸಿದರೆ ಸದ್ಯದಲ್ಲಿ ಚಂದ್ರವಂಶೀಯನಾದ ಯಯಾತಿ ಮಹಾರಾಜ ಪ್ರತಿಷ್ಠಾ ನಗರವನ್ನು ರಾಜಧಾನಿಯನ್ನಾಗಿಸಿಕೊಂಡು ಭೂಮಂಡಲವನ್ನು ಆಳುತ್ತಿದ್ದಾನೆ.. ನೂರಾರು ಯಾಗಗಳನ್ನು ಮಾಡುವ ಮುಖೇನ ದೇವತೆಗಳನ್ನೂ . ಸಂಪ್ರೀತಿ ಗೊಳ್ಳುವಂತೆ ಮಾಡಿದ್ದಾನೆ, ಪ್ರಜೆಗಳನ್ನು ಪೀಡಿಸದೇ ಸಂಗ್ರಹವಾಗುವ ಕರಗಳಿಂದ.. ಸಾಮಂತರು ತಂದೊಪ್ಪಿಸುವ ಕಪ್ಪ ಕಾಣಿಕೆಗಳಿಂದ ಶ್ರೀಮಂತನೂ ಇದ್ದಾನೆ. ನಾವು ನೇರವಾಗಿ ಅವನ ಬಳಿಗೇ ಹೋಗೋಣ ನನಗೂ ಅವನು ಪ್ರಿಯ ಮಿತ್ರನೇ ಇದ್ದಾನೆ. ನಿನ್ನ ಪರವಾಗಿ ನಾನೂ ಕೆಳಿಕೊಳ್ಳುತ್ತೇನೆ" ಗರುಡನ ಮಾತನ್ನು ಕೇಳಿದ ಗಾಲವ ಸಮಾಧಾನದ ನಿಟ್ಟುಸಿರು ಬಿಟ್ಟು "ಹಾಗೇ ಆಗಲಿ" ಎಂದು ಯಯಾತಿಯ ಪಟ್ಟಣವಾದ ಪ್ರತಿಷ್ಠಾನಪುರಕ್ಕೆ ತೆರಳಲು ಅನುಮತಿಯನ್ನು ನೀಡುತ್ತಾನೆ. ಇಬ್ಬರೂ ನೇರವಾಗಿ ಯಯಾತಿ ಮಹಾರಾಜನ ಬಳಿ ಬರುತ್ತಾರೆ. ಇವರ ಆಗಮನದಿಂದ ಸಂತೋಷಗೊಂಡ ಯಯಾತಿ ಸುಪರ್ಣನಿಗೂ ಗಾಲವನಿಗೂ ಆಸನವಿರಿಸಿ ಸತ್ಕಾರ ಮಾಡುತ್ತಾನೆ. ಆಗ ತಾವು ಬಂದ ಉದ್ದೇಶವನ್ನು ಗರುಡನೇ ಮೊದಲಾಗಿ ಹೇಳುತ್ತಾನೆ. "ಯಯಾತಿ ಮಹಾರಾಜ ಒಂದು ಗುರುತರವಾದ ವಿಷಯವನ್ನಿಟ್ಟುಕೊಂಡು ನಿನ್ನ ಬಳಿಗೆ ಬಂದಿದ್ದೇವೆ. ನನ್ನ ಜೊತೆಗಿರುವ ಈ ಬ್ರಾಹ್ಮಣನ ಹೆಸರು ಗಾಲವ ಎಂಬುದಾಗಿ ಸುಮಾರು ಹತ್ತುಸಾವಿರ ವರ್ಷಗಳ ಕಾಲ ವಿಶ್ವಾಮಿತ್ರ ಮುನಿಗಳ ಶಿಷ್ಯನಾಗಿ ಸೇವೆಯನ್ನು ಮಾಡಿ ಸಕಲ ವಿದ್ಯೆಗಳಲ್ಲಿಯೂ ಪಾರಂಗತನಾಗಿದ್ದಾನೆ. ಗುರುಮಠದಿಂದ ಹೊರಡುವ ಕಾಲಕ್ಕೆ ಗುರುಗಳು ಬಯಸದೇ ಇದ್ದರೂ ಗುರುದಕ್ಷಿಣೆಯನ್ನು ನೀಡುವುದು ಶಿಷ್ಯನ ಕರ್ತವ್ಯ ಎಂದು ಅರಿತ ಈತ ಮತ್ತೆ ಮತ್ತೆ ಗುರುಗಳನ್ನು ಕೇಳಲಾಗಿ ಒಂದು ಕಿವಿ ಕಪ್ಪಾದ ಬಿಳಿಯ ದೇಹವನ್ನು ಹೊಂದಿದ ಎಂಟುನೂರು ಕುದುರೆಗಳನ್ನು ಗುರುದಕ್ಷಿಣೆಯಾಗಿ ಬಯಸಿದರು, ಅವನಿಗೆ ಸಹಾಯ ಮಾಡಲು ನಾನೂ ಬಂದೆ... ಪ್ರಸ್ತುತ ನೀನು ಭೂಮಂಡಲವನ್ನು ಆಳುತಿದ್ದೀ..ನಿನ್ನ ಬಳಿಗೆ ಇವನನ್ನು ನಾನೇ ಕರೆದುಕೊಂಡು ಬಂದಿದ್ದೇನೆ. ಈ ಗಾಲವನಿಗೆ ಗುರುದಕ್ಷಿಣೆಯನ್ನು ಸಲ್ಲಿಸಲು ನೀನು ಸಹಕಾರಿಯಾದರೆ ಮುಂದೆ ಈತ ಸಂತೋಷದಿಂದ ತಪಸ್ಸನ್ನು ಆಚರಿಸಲು ಅನುಕೂಲವಾಗುತ್ತದೆ. ಮುಂದೆ ಅವನು ಆಚರಿಸುವ ತಪಸ್ಸಿನ ಫಲದ ಒಂದು ಭಾಗ ನಿನಗೂ ಲಭಿಸುತ್ತದೆ." ಗರುಡನ ಮಾತನ್ನು ಕೇಳಿದ ಯಯಾತಿಗೆ ಒಂದು ಕ್ಷಣ ಹೆಮ್ಮೆಯಾಗುತ್ತದೆ. ಪ್ರಪಂಚದಲ್ಲಿ ಅದೆಷ್ಟೋ ಅರಸರಿದ್ದರೂ ಇವರು ನನ್ನನ್ನೇ ಆಯ್ಕೆ ಮಾಡಿಕೊಂಡು ಇಲ್ಲಿಗೆ ಬಂದರಲ್ಲಾ.. ಹಾಗೆ ಯೋಚಿಸಿದ ಯಯಾತಿ ಗರುಡನನ್ನು ಕುರಿತು ಹೇಳುತ್ತಾನೆ..." ಗರುಡದೇವ ನೀವು ನನ್ನ ಬಳಿಗೆ ಬಂದದ್ದು ನನಗೆ ಸಂತೋಷವನ್ನು ಉಂಟುಮಾಡಿದೆ ಆದರೆ... ನೀನು ಕೇಳಿದಂತೆ ಮೊದಲು ನನ್ನ ಬಳಿಯಿದ್ದಷ್ಟು ಸಂಪತ್ತು ಈಗ ಇಲ್ಲ ನನ್ನಲಿದ್ದ ಸಂಪತ್ತೆಲ್ಲಾ ಈಗ ಕ್ಷೀಣಿಸಿದೆ... ಆದರೂ ನಿಮಗೆ ಇಲ್ಲಾ ಎನ್ನಲು ಮನಸ್ಸಾಗುತ್ತಿಲ್ಲ ನನಗೊಬ್ಬಳು ಮಗಳಿದ್ದಾಳೆ "ಮಾಧವಿ" ಎಂದು ಹೆಸರು ಅಪ್ರತಿಮ ಸುಂದರಿಯಾದ ಅವಳನ್ನು ಪಡೆಯಲು ಕೇವಲ ಮನುಷ್ಯರು ಮಾತ್ರವಲ್ಲ ದೇವತೆಗಳೂ ಕೂಡ ತಮ್ಮ ಸರ್ವ ಸಂಪತ್ತನ್ನೂ ವ್ಯಯಿಸಲು ಸಿದ್ಧರಿದ್ದಾರೆ ಅಂತಹ ರೂಪವತಿಯೂ ಗುಣವತಿಯೂ ಆದ ನನ್ನ ಮಗಳನ್ನೇ ನಿಮ್ಮೊಂದಿಗೆ ಕಳುಹಿಸಿಕೊಡುತ್ತೇನೆ ಅವಳನ್ನು ಬಳಸಿಕೊಂಡೇ ನಿಮಗೆ ಬೇಕಾದ್ದನ್ನು ಗಳಿಸಿಕೊಳ್ಳಿ" ಯಯಾತಿಯ ಮಾತನ್ನು ಒಪ್ಪಿದ ಗಾಲವ ಮಾಧವಿಯನ್ನು ಸ್ವೀಕರಿಸುತ್ತಾನೆ. ಗರುಡ- ಗಾಲವರು ಮಾಧವಿಯನ್ನು ಕರೆದುಕೊಂಡು ಪ್ರತಿಷ್ಠಾನ ಪುರದಿಂದ ಹೊರಬೀಳುತ್ತಾರೆ.🙏🙏
ಉಳಿದಿದ್ದು ಮುಂದಿನ ಭಾಗದಲ್ಲಿ🙏🙏
Saturday, June 28, 2025
ಗಾಲವ... ಮುಂದಿನ ಭಾಗ
ಗರುಡ.. ಗಾಲವರು ವೃಷಭ ಪರ್ವತದಲ್ಲಿ ಬಂದು ಇಳಿದಾಕ್ಷಣ ಅಲ್ಲಿಯೇ ಅನತಿ ದೂರದಲ್ಲಿ ಒಂದು ಆಶ್ರಮವನ್ನು ನೋಡಿದರು. ಯಾರೋ ಖುಷಿಗಳು ಎಲೆಮನೆಯನ್ನು ಕಟ್ಟಿಕೊಂಡು ತಪಸ್ಸಿನಲ್ಲಿ ತೊಡಗಿಕೊಂಡಿರಬೇಕು ಎಂದುಕೊಂಡು ಅತ್ತಲೇ ಸಾಗಿದರು... ಅಲ್ಲಿ ಶಾಂಡಿಲಿ ಎಂಬ ತಪಸ್ಪಿನಿಯೊಬ್ಬಳು ವಾಸಮಾಡಿಕೊಂಡಿದ್ದಳು. ಇವರಿಬ್ಬರನ್ನು ನೋಡಿದಾಕ್ಷಣ ತುಂಬಾ ಆದರದಿಂದ ಸ್ವಾಗತಿಸಿ ಸತ್ಕಾರ ಮಾಡಿದಳು. ಇಬ್ಬರನ್ನೂ ದ್ವಿಜರೆಂದೇ ಪರಿಗಣಿಸಿ ಉತ್ತಮವಾದ ಭೋಜನವನ್ನು ಸಿದ್ಧಗೊಳಿಸಿ ಬಡಿಸಿದಳು. (ಈ ಶಾಂಡಿಲಿ ಮತ್ತು ಸೀತಾನ್ವೇಷಣೆಯ ಕಾಲದಲ್ಲಿ ಜಾಂಬವಾದಿಗಳಿಗೆ ಸಿಕ್ಕ ಸ್ವಯಂಪ್ರಭೆ ಒಬ್ಬಳೇ ಎಂಬ ಉಲ್ಲೇಖ ಇದೆ) ಗರುಡ ಗಾಲವರಿಬ್ಬರೂ ಹೊಟ್ಟೆತುಂಬಾ ಊಟ ಮಾಡಿದ ಮರುಕ್ಷಣದಲ್ಲಿಯೇ ಗಾಡವಾದ ನಿದ್ರೆ ಅವರನ್ನು ಆವರಿಸಿತು. ಅಲ್ಲಿಯೇ ಅವರು ಕೆಲಕಾಲ ಮಲಗಿದರು. ಸ್ವಲ್ಪ ಸಮಯದ ಮೇಲೆ ಎಚ್ಚರಗೊಂಡು ನೋಡಿದಾಗ ಗರುಡನ ರೆಕ್ಕೆಗಳೆಲ್ಲಾ ಉದುರಿ ಹೋಗಿದ್ದವು ಕೊಕ್ಕು ಮತ್ತು ಕಾಲುಗಳನ್ನು ಹೊಂದಿ ಕೇವಲ ಒಂದು ಮಾಂಸದ ಮುದ್ದೆಯ ಹಾಗೆ ಅವನು ಕಾಣಿಸುತ್ತಿದ್ದ. ಆ ಸ್ಥಿತಿಯಲ್ಲಿ ಸ್ವತಃ ರೆಕ್ಕೆ ಕಳೆದುಕೊಂಡ ಗರುಡನಿಗಿಂತ ಗಾಲವನಿಗೆ ಹೆಚ್ಚು ದುಃಖವಾಯಿತು .... ತನ್ನ ಗುರುದಕ್ಷಿಣೆಯನ್ನು ಸಲ್ಲಿಸಲು ಒದಗಿಬಂದ ಒಂದು ಸಹಾಯವೂ ನಿಷ್ಟ್ರಯೋಜಕವಾಗಿ ಹೋಯಿತಲ್ಲಾ ಮುಂದೇನು ಮಾಡಲಿ ಎಂದು ದುಃಖಿಸತೊಡಗಿದ. ರೆಕ್ಕೆಗಳನ್ನು ಕಳೆದುಕೊಂಡು ದುಃಖಿತನಾಗಿದ್ದ ಗರುಡನನ್ನು ಕುರಿತು "ಅಯ್ಯಾ ಈ ಪವಿತ್ರನಾದ ಪ್ರದೇಶದಲ್ಲಿ ನಿನ್ನಂತಹ ಮಹಾತ್ಮನಿಗೆ ಹಾನಿಯಾಯಿತು ಎಂದಾದರೆ ಬಹುಶಃ ಸ್ವತಃ ನೀನೆ ಮನಸ್ಸಿನಲ್ಲಿ ಯಾವುದೋ ಕೆಡುಕನ್ನು ಯೋಚಿಸಿರಬೇಕು... ಹಾಗೇನಾದರೂ ಇದ್ದದ್ದೇ ಆದರೆ ಶಾಂಡಿಲಿಯನ್ನು ಕಂಡು ಕ್ಷಮೆಯನ್ನು ಯಾಚಿಸು" ಎಂದು ಸೂಚಿಸುತ್ತಾನೆ. ಅಗ ಗರುಡ " ಹೌದು ನಾನು ಈಕೆಯನ್ನು ನೋಡಿದಾಗ ಸರ್ವಗುಣ ಸಂಪನ್ನಳಾದ ಈಕೆ ಬ್ರಹ್ಮಲೋಕದಲ್ಲಿಯೋ ಕೈಲಾಸದಲ್ಲಿಯೋ ಅಥವಾ ವೈಕುಂಠ ಲೋಕದಲ್ಲಿಯೋ ಇರಬೇಕಾದವಳು ಎಂದು ಯೋಜಿಸಿದ್ದೆ ಅದಕ್ಕಿಂತ ಹೊರತಾಗಿ ಇನ್ಯಾವುದೇ ದುರಾಲೋಚನೆ ಮಾಡಲಿಲ್ಲ... ಏನೇ ಇರಲಿ ಅವಳ ಬಳಿಗೇ ಹೋಗಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿ ಶಾಂಡಿಲಿಯ ಸಮ್ಮುಖಕ್ಕೆ ಹೋಗಿ ತನಗಾದ ದುಃಸ್ಥಿತಿಯನ್ನು ನಿವೇದಿಸಿಕೊಂಡ. ಆಕೆ ಮುಗುಳ್ನಗುತ್ತಾ "ಗರುಡ ನೀನು ಯೋಚಿಸಿದ ವಿಷಯ ಕೆಟ್ಟದಲ್ಲದೇ ಹೋದರೂ ನನ್ನ ಯೋಗ್ಯತೆಯನ್ನು ಅವಮಾನಿಸಿದ ಹಾಗಾದ್ದರಿಂದ ನಿನಗೆ ಇಂತಹ ಸ್ಥಿತಿ ಉಂಟಾಯಿತು. ಆದರೆ ಈಗ ಉದುರಿಹೋದ ನಿನ್ನ ಗರಿಗಳೆಲ್ಲಾ ಮತ್ತೆ ಹುಟ್ಟಿಕೊಳ್ಳಲಿ " ಎಂದು ಹೇಳಿದಳು. ಮರುಕ್ಷಣದಲ್ಲಿಯೇ ಗರುಡನ ರೆಕ್ಕೆಗಳು ಚಿಗುರಿಕೊಂಡವು. ಸಂತೋಷ ಹೊಂದಿದ ಗರುಡ.. ಗಾಲವರು ತಪಸ್ವಿನಿಗೆ ವಂದಿಸಿ ಬೀಳ್ಕೊಂಡು ಮುಂದಿನ ಪ್ರಯಾಣ ಆರಂಭಿಸಿದರು. ಅವರು ಹಾಗೆ ಪ್ರಯಾಣಿಸುತ್ತ ಮುಂದೆ ಸಾಗಿದರೂ ಗಾಲವನಿಗೆ ಬೇಕಾದ ಲಕ್ಷಣಗಳುಳ್ಳ ಕುದುರೆಗಳು ಕಾಣಿಸಲಿಲ್ಲ..ಹೀಗೆ ಮುಂದೆ ಸಾಗುತ್ತಿರುವಾಗ ವಿಶ್ವಾಮಿತ್ರರು ಇವರಿಬ್ಬರನ್ನು ನೋಡಿದರು, ಗರುಡನ ಜೊತೆಯಲ್ಲಿರುವ ಗಾಲವನನ್ನು ಕುರಿತು "ಗಾಲವ.. ನೀನಾಗಿಯೇ ಗುರುದಕ್ಷಿಣೆಯನ್ನು ಸಲ್ಲಿಸುತ್ತೇನೆ ಎಂದು ಮಾತು ಕೊಟ್ಟಿದ್ದೀ.. ಆ ಮಾತಿನ ಅರ್ಥ ಯಾವಾಗಲಾದರೂ ಸಲ್ಲಿಸಿದರೆ ಆದೀತು ... ಬೇಕಾದಷ್ಟು ಸಮಯ ಇದೆ ಎಂದು ಭಾವಿಸಿಕೊಳ್ಳಬೇಡ... ನಾನಿಲ್ಲಿ ಕೆಲವು ಸಮಯ ಮಾತ್ರ ಇರುತ್ತೇನೆ ನೀನು ಕೊಡುವುದೇ ಆದರೆ ನಾನಿಲ್ಲಿರುವಾಗಲೇ ಕೊಡಬೇಕು" ಎಂದು ಹೇಳಿ ಎಚ್ಚರಿಸಿದರು. ಗುರುಗಳ ಮಾತನ್ನು ಕೇಳಿದ ಗಾಲವನಿಗೆ ಆತಂಕವಾಯಿತು. ಬಹಳವಾಗಿ ದುಖಿಸತೊಡಗಿದ...🙏
ಮುಂದುವರಿಯುವುದು🙏🙏
Thursday, June 26, 2025
ಗಾಲವ.. ಮುಂದಿನ ಭಾಗ
ಗಾಲವ ಮುಂದುವರಿದು...
ಗುರುಗಳಾದ ವಿಶ್ವಾಮಿತ್ರರ ಮಾತುಗಳನ್ನು ಕೇಳಿದ ಗಾಲವನಿಗೆ ನಿಂತ ನೆಲವೇ ಬಿರಿದ ಅನುಭವವಾಯಿತು. ಸಾಮಾನ್ಯವಾದ ಒಂದು ಕುದುರೆಯನ್ನು ತಂದುಕೊಡಲು ಕಷ್ಟವಿದ್ದ ಕಡು ಬಡವನಾದ ಗಾಲವನಿಗೆ ವಿಶಿಷ್ಟ ಲಕ್ಷಣ ಹೊಂದಿದ ದುರ್ಲಭವಾದ ಎಂಟುನೂರು ಕುದುರೆಗಳನ್ನು ತರುವುದು ಅಸಾಧ್ಯವಾದ ಮಾತೇ ಸರಿ. ಗಾಲವ ತನ್ನ ಬಡತನವನ್ನು ಬಹಳವಾಗಿ ಹಳಿದುಕೊಂಡ... ಈ ಪ್ರಪಂಚದಲ್ಲಿ ಬಡವನಾಗಿ ಹುಟ್ಟಕೂಡದು... ಶ್ರೀಮಂತನಾದರೆ ಬಯಸಿದ್ದನ್ನು ಪಡೆಯಬಹುದು..ಹೀಗೆ ಯೋಚಿಸುತ್ತಾ ತನ್ನ ನಿರ್ಧಾರದ ಬಗ್ಗೆಯೂ ಬೇಸರ ಮೂಡಿತು. ಗುರುಗಳು ಬೇಡವೆಂದರೂ ನಾನೇ ಹಠಮಾರಿಯಂತೆ ಮತ್ತೆ ಮತ್ತೆ ಒತ್ತಾಯಿಸಿ ಗುರುಗಳ ಆಗ್ರಹಕ್ಕೆ ಕಾರಣನಾದೆ... ನಾನು ಪುನಃ ಪುನಃ ಗುರುಗಳನ್ನು ಕೇಳಬಾರದಿತ್ತು.... ಏನೇನೋ ಯೋಚಿಸುತ್ತಾ ಗುರುಗಳಿಗೆ ವಂದಿಸಿ ಆಶ್ರಮದಿಂದ ಹೊರಬಂದ. ಎಲ್ಲಿ ಹೋಗುವುದು ..ಅಶ್ವಗಳನ್ನು ಹೇಗೆ ಸಂಪಾದಿಸುವುದು.. ಯಾವ ದಾರಿಯೂ ಅವನಿಗೆ ಗೋಚರಿಸಲಿಲ್ಲ. ಚಿಂತೆಯಲ್ಲಿಯೇ ಅವನು ಅನ್ನಾಹಾರವನ್ನು ತೊರೆದ.. ತನ್ನಷ್ಟಕ್ಕೆ ತಾನೇ ಅಳುತ್ತಿದ್ದ . ಆಹಾರ ಸೇವಿಸದೇ ಅವನ ದೇಹದಲ್ಲಿ ಮೂಳೆ ಚರ್ಮಗಳು ಮಾತ್ರ ಉಳಿದಿತ್ತು. ಇನ್ನು ಬೇರೆ ದಾರಿಯೇ ಇಲ್ಲ ಹೀಗೆ ಊಟ ಮಾಡದೇ ಆತ್ಮಹತ್ಯೆ ಮಾಡಿಕೊಳ್ಳುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದ. ಹಾಗೆ ದಿನಗಳನ್ನು ಕಳೆಯುತ್ತಿರುವಾಗ ಒಂದು ಯೋಚನೆ ಬಂತು. ದೇವತೆಗಳನ್ನು ಆರಾಧಿಸಿ ಆ ಮೂಲಕ ಒಂದು ದಾರಿಯನ್ನು ಕಂಡುಕೊಂಡರೆ ಹೇಗೆ.... ಅದೇ ಸರಿ ಎಂದು ತೀರ್ಮಾನಕ್ಕೆ ಬಂದ . ಯಾವ ದೇವತೆಯನ್ನು ಪ್ರಾರ್ಥಿಸಬೇಕು ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿದಾಗ ದೇವತೆಗಳೂ ಕೂಡ ತಮ್ಮ ಇಷ್ಟಾರ್ಥ ಸಿಧ್ಧಿಗಾಗಿ ಯಾರನ್ನು ಆರಾಧಿಸುವರೋ ಆ ಮಹಾವಿಷ್ಣುವೇ ತನ್ನ ಸಂಕಲ್ಪವನ್ನೂ ಈಡೇರಿಸುತ್ತಾನೆ ಎಂದು ತೀರ್ಮಾನಿಸಿ ಪ್ರಾರ್ಥಿಸಲು ತೊಡಗಿದ. ವಿಷ್ಣು ಪ್ರಾರ್ಥನೆಗೆ ತೊಡಗಿದಾಕ್ಷಣ ಮಹಾವಿಷ್ಣುವಿನ ವಾಹನವಾದ ಗರುಡ ಕಾಣಿಸಿಕೊಂಡ. '' ನನ್ನ ಮಿತ್ರನಾದ ನೀನು ಆಪತ್ತಿನಲ್ಲಿರುವಾಗ ನಿನಗೆ ಸಹಾಯ ಮಾಡುವ ಉದ್ದೇಶದಿಂದ ಬಂದಿದ್ದೇನೆ. ನೀನು ಬಡವನಾಗಿರುವೆ ಎಂಬ ಚಿಂತೆಯನ್ನು ಬಿಟ್ಟು ಬಿಡು.. ಶ್ರೀ ಹರಿಯನ್ನು ಹೊತ್ತು ತಿರುಗುವ ನನ್ನ ಬಳಿ ಬೇಕಾದಷ್ಟು ಸಂಪತ್ತಿದೆ. ನಿನಗೆ ಯಾವ ರೀತಿಯ ಸಹಾಯ ಮಾಡಲಿ ಹೇಳು" ಎಂದು ಕೇಳುತ್ತಾನೆ. (ಇಲ್ಲಿ ಗರುಡನು ಗಾಲವ ನನ್ನು ನೀನು ನನ್ನ ಮಿತ್ರನೆಂದು ಕರೆಯುತ್ತಾನೆ. ಆದರೆ ಅಂತಹ ಮೈತ್ರಿ ಯಾವಾಗ ಏರ್ಪಟ್ಟಿತು ಎಂಬ ಬಗ್ಗೆ ನನಗೆ ಎಲ್ಲಿಯೂ ಸಿಗಲಿಲ್ಲ ಗೊತ್ತಿದ್ದವರು ತಿಳಿಸಿ)
"ಗಾಲವ ನಿನಗಾಗಿ ನಾನು ಸಂಪೂರ್ಣ ಭೂಮಂಡಲವನ್ನು ಸಂಚರಿಸಲು ಸಿದ್ಧನಿದ್ದೇನೆ ಮಹಾವಿಷ್ಣುವು ನಿನಗೆ ಸಹಾಯ ಮಾಡಲೆಂದೇ ನನ್ನನ್ನು ಕಳಿಸಿಕೊಟ್ಟಿದ್ದಾನೆ ನಾನು ನಿನಗೆ ಈ ಭೂಮಿಯ ಎಲ್ಲಾ ದಿಕ್ಕುಗಳ ಮಹತ್ವವನ್ನೂ ಮತ್ತು ಆ ದಿಕ್ಕಿನಲ್ಲಿ ವಾಸಮಾಡುವ ಜೀವರಾಶಿಗಳ ಸೃಷ್ಠಿ,ಅವುಗಳ ಗುಣಸ್ವಭಾವ ಅವರ ಹಿರಿಮೆಯನ್ನು ಹೇಳುತ್ತೇನೆ" ಎಂದು ಪೂರ್ವ ದಿಕ್ಕಿನಿಂದ ಆರಂಭಿಸಿ ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ನಾಸಮಾಡುವ ದೇವತೆಗಳು ರಾಕ್ಷಸಲು, ಗಂಧರ್ವ, ಯಕ್ಷ, ಕಿನ್ನರ, ನಾಗ, ಮುಂತಾದ ವಿಭಾಗಗಳನ್ನೂ, ಅವರುಗಳ ಸೃಷ್ಠಿಯ ಹಿನ್ನೆಲೆಯನ್ನು ಹೇಳುತ್ತಾನೆ. ಆಗ ಗಾಲವನು ಗರುಡ ಮೊದಲು ಹೇಳಿದ.. ದೇವತೆಗಳ, ಸಜ್ಜನರ ಆವಾಸವಾಗಿರುವ ಪೂರ್ವ ದಿಕ್ಕಿನ ಕಡೆಗೇ ಸಾಗೋಣ ಎಂದು ಹೇಳುತ್ತಾನೆ. ಆಯಿತು ಹಾಗಿದ್ದರೆ ನನ್ನನ್ನೇರಿ ಕುಳಿತುಕೋ ಎಂದು ಹೇಳಿ ಗಾಲವನನ್ನು ಬೆನ್ನೇರಿಸಿಕೊಂಡು ಗರುಡ ಪೂರ್ವ ದಿಕ್ಕಿಗೆ ಪ್ರಯಾಣ ಆರಂಭಿಸುತ್ತಾನೆ. ಗರುಡ ಹಾರುತ್ತಿರುವ ವೇಗಕ್ಕೆ ಅವನ ದೇಹ ಬಿಸಿಯಾಗುತ್ತದೆ. ಸ್ವತಃ ಅಗ್ನಿಯನ್ನೇ ಧರಿಸಿ ಅವನು ಹಾರುತ್ತಿರುವನೋ ಎಂದು ಭಾಸವಾಗುತ್ತದೆ. ಗಾಲವನಿಗೆ ಭಯವಾಗತೊಡಗುತ್ತದೆ ಗರುಡನನ್ನು ಕುರಿತು "ಅಯ್ಯಾ ನಿನ್ನ ವೇಗವನ್ನು ಗಮನಿಸಿದಾಗ ನಿನ್ನನ್ನೇರಿದ ನನಗೆ ಬದುಕುತ್ತೇನೆ ಎಂಬ ವಿಶ್ವಾಸವೇ ಉಳಿದಿಲ್ಲ .. ಅಗ್ನಿಯಂತೆ ಬಿಸಿಯಾದ ನಿನ್ನ ದೇಹದಿಂದ ನಾನು ಭಸ್ಮವಾಗಿ ಬಿಡುವೆನೋ ಅನ್ನಿಸುತ್ತಿದೆ. ಹಾಗೆ ನನ್ನ ಸಾವು ಸಂಭವಿಸಿದರೂ ನಿನಗೇ ಬ್ರಾಹ್ಮಣನೋರ್ವನನ್ನು ಕೊಂದ ಕಳಂಕ ತಟ್ಟುತ್ತದೆ ಅದಕ್ಕಿಂತ ಹೆಚ್ಚಾಗಿ ನಾನು ಗುರುಗಳಾದ ವಿಶ್ವಾಮಿತ್ರರಿಗೆ ಗುರುದಕ್ಷಿಣೆಯಾಗಿ ಸಲ್ಲಿಸಬೇಕಾದ ಎಂಟುನೂರು ಕುದುರೆಗಳನ್ನು ಸಲ್ಲಿಸಲಾಗಲಿಲ್ಲವಲ್ಲಾ ಎಂಬ ಖೇದವೂ ಕಾಡುತ್ತದೆ. ನಿನ್ನ ವೇಗವನ್ನು ಕಡಿಮೆ ಮಾಡಿ ಸುಡುತ್ತಿರುವ ನಿನ್ನ ದೇಹದ ಬಿಸಿಯನ್ನು ತಗ್ಗಿಸುವೆಯಾ" ಎಂದು ವಿನಂತಿಸಿಕೊಳ್ಳುತ್ತಾನೆ. ಅಲ್ಲಿಯವರೆಗೆ ಗಾಲವನಿಗೆ ಏನು ಬೇಕಾಗಿದೆಯೆಂದು ತಿಳಿಯದ ಗರುಡ ಹೇಳಿದ, "ಗಾಲವ ಈ ವಿಷಯವನ್ನು ಮೊದಲೇ ಹೇಳುವುದಲ್ಲವೆ.. ನಿನಗೆ ಬೇಕಾದ ಕುದುರೆಗಳನ್ನು ಪಡೆಯಲು ಅವು ಎಲ್ಲಿ ಸಿಗಬಹುದು ಎಂದು ಯೋಚಿಸಿ ಪ್ರಯಾಣವನ್ನು ಆರಂಭಿಸುವುದು ಸೂಕ್ತವಾಗಿರಲಿಲ್ಲವೆ ... ಅದೋ ನೋಡು ಸಮುದ್ರದ ಸಮೀಪ ಕಾಣಿಸುತ್ತಿರುವ ದೊಡ್ದ ಪರ್ವತವನ್ನು ನೋಡು ಅದರ ಹೆಸರು ''ವೃಷಭ ಪರ್ವತ'' ಎಂಬುದಾಗಿ ನಾವು ಅಲ್ಲಿಗೆ ಹೋಗಿ ಏನಾದರೂ ಸ್ವಲ್ಪ ಆಹಾರವನ್ನು ಸೇವಿಸಿ ಕುದುರೆಗಳಿಗಾಗಿ ಯಾವ ದಿಕ್ಕಿಗೆ ಹೋಗುವುದು ಸೂಕ್ತ ಎಂದು ಯೋಚಿಸೋಣ ಆಗದೆ?" ಗರುಡನ ಮಾತಿಗೆ ಗಾಲವನೂ ಒಪ್ಪುತ್ತಾನೆ, ಹಾಗೆಯೇ ಅವರು ವೃಷಭ ಪರ್ವತದ ಶಿಖರದಲ್ಲಿ ಇಳಿಯುತ್ತಾರೆ.
🙏🙏
ಮುಂದಿನ ಕಥೆ ನಂತರದಲ್ಲಿ🙏🙏.
Wednesday, June 25, 2025
ಗಾಲವ
ಗಾಲವ..ಗುರುದಕ್ಷಿಣೆ...
ವಿಶಿಷ್ಟ ವಾದ ಗುರುದಕ್ಷಿಣೆಯನ್ನು ಸಲ್ಲಿಸುವ ಮುಖೇನ ಗುರುಭಕ್ತಿಯನ್ನು ಪ್ರಪಂಚಕ್ಕೆ ತೋರಿಸಿ ಕೊಟ್ಟ ಕಥೆಗಳನ್ನು ಹೇಳಲು ಹೊರಟವನಿಗೆ ಉತ್ತಂಕನ' ಕಥೆ ಹೇಳುತ್ತಾ ಜನಮೇಜಯನ ಸರ್ಪಯಾಗದ ಕಥೆಯವರೆಗೆ ಬರೆಯಬೇಕಾಗಿ ಬಂತು. ವಿಶಿಷ್ಟವಾದ ಗುರುದಕ್ಷಿಣೆಯನ್ನು ಸಲ್ಲಿಸಿದವರ ಪಟ್ಟಿಯಲ್ಲಿ "ಗಾಲವ " ಈ ಹೆಸರು ಪುರಾಣದಲ್ಲಿ ಹೆಚ್ಚು ಚರ್ಚೆಗೆ ಅವಕಾಶ ಮಾಡಿಕೊಟ್ಟದ್ದು ಎನ್ನಬಹುದೇನೋ... ರಾಮಾಯಣ..ಮಹಾಭಾರತಗಳಲ್ಲಿ ಕೆಲವು ಕಡೆ "ಗಾಲವ" ವಿಶ್ವಾಮಿತ್ರ ಶಿಷ್ಯನೆಂದೂ... ವಿಶ್ವಾಮಿತ್ರ ಪುತ್ರನೆಂದೂ ಹೇಳಲಾಗಿದೆ. ತ್ರಿಶಂಕುವಿನ ಸಂದರ್ಭದಲ್ಲಿ ಈತ ವಿಶ್ವಾಮಿತ್ರ ಪುತ್ರನೆಂದೇ ಹೇಳಿದ್ದಾರೆ. ಮಹಾಭಾರತದ "ಸಭಾಪರ್ವ " ದಲ್ಲಿ ಇವನನ್ನು ವಿಶ್ವಾಮಿತ್ರ ಶಿಷ್ಯನೆಂದು ಹೇಳಲಾಗಿದೆ. ಇಲ್ಲಿ ನಾನು ಬರೆಯಹೊರಟಿರುವುದು ವಿಶ್ವಾಮಿತ್ರ ಶಿಷ್ಯನಾದ ಗಾಲವನ ಬಗ್ಗೆ.
ವಶಿಷ್ಟ ವಿರೋಧವನ್ನು ಕಟ್ಟಿಕೊಂಡ ಕೌಶಿಕ ರಾಜ್ಯವನ್ನು ತೊರೆದು ತಪಸ್ಸಿಗೆ ತೆರಳಿ ವಿಶ್ವಾಮಿತ್ರನಾಗುವಲ್ಲಿ ನಡೆದ ಒಂದು ಘಟನೆ... ಯಮಧರ್ಮನು ವಿಶ್ವಾಮಿತ್ರರನ್ನು ಪರೀಕ್ಷಿಸಲು ವಶಿಷ್ಟರ ರೂಪವನ್ನು ಧರಿಸಿ ವಿಶ್ವಾಮಿತ್ರರ ಆಶ್ರಮಕ್ಕೆ ಬರುತ್ತಾನೆ. ವಿಶ್ವಾಮಿತ್ರನಿಗೆ ಒಮ್ಮೆಯೇ ಆತಂಕವಾಗುತ್ತದೆ...ತನ್ನ ವಿರೋಧಿಯಾದ ವಶಿಷ್ಟ... ಅದೂ ತನ್ನ ಆಶ್ರಮದ ಸಮ್ಮುಖದಲ್ಲಿ.... ಆದರೂ ವಾಸ್ತವಕ್ಕೆ ಬಂದು ಕರೆದು ಉಪಚರಿಸುತ್ತಾನೆ, ಬಂದ ಕಾರಣವನ್ನು ಕೇಳುತ್ತಾನೆ. ವಶಿಷ್ಟರು "ಅಯ್ಯಾ ವಿಶ್ವಾಮಿತ್ರರೇ ಹಸಿವಿನಿಂದ ಬಳಲಿದ ನಾನು ನಿಮ್ಮ ಆಶ್ರಮದಲ್ಲಿ ಭೋಜನಕ್ಕಾಗಿ ಬಂದಿದ್ದೇನೆ" ಎನ್ನುತ್ತಾರೆ. ಒಂದು ಕಡೆಯಲ್ಲಿ ಆಶ್ಚರ್ಯ ಮತ್ತೊಂದೆಡೆಯಲ್ಲಿ ಸಂತೋಷ... ಕ್ಷಣಕಾಲ ನಿರೀಕ್ಷೆ ಮಾಡಿದರೆ ಕೈಯಾರೆ ಚರುವನ್ನು ಸಿದ್ಧಪಡಿಸಿ ಬಡಿಸುವುದಾಗಿ ಹೇಳಿ ಅಡುಗೆಯ ಸಿದ್ಧತೆಯಲ್ಲಿ ತೊಡಗುತ್ತಾರೆ. ಅಡುಗೆಯನ್ನು ಮಾಡಿ ಅದನ್ನು ಬಡಿಸಲು ಆಶ್ರಮದ ಹೊರಬಂದು ನೋಡಿದರೆ ಅಲ್ಲಿ ವಶಿಷ್ಟರಿಲ್ಲ. ಸಿದ್ಧಪಡಿಸಿದ ಚರುವನ್ನು ತಲೆಯ ಮೇಲೆ ಹೊತ್ತು ವಶಿಷ್ಟರನ್ನು ಹುಡುಕುತ್ತಾ ಬರುತ್ತಾರೆ. ಹಾಗೆ ಸಾಗುತ್ತಿರುವಾಗ ವಶಿಷ್ಟರು ಕಾಣಸಿಗುತ್ತಾರೆ. ತಂದ ಅಡುಗೆಯನ್ನು ಉಣ್ಣಲು ಹೇಳಿದರೆ.. ತಾನು ಈಗಾಗಲೇ ಸಮೀಪದ ಆಶ್ರಮದಲ್ಲಿ ಆಹಾರವನ್ನು ಸೇವಿಸಿದ್ದಾಗಿಯೂ ನೀವು ಸಿದ್ಧಪಡಿಸಿದ ಚರುವನ್ನೂ ಸ್ವಲ್ಪ ಹೊತ್ತಿನಲ್ಲಿ ಬಂದು ಉಣ್ಣುವುದಾಗಿ ಹೇಳಿ ಹೋಗಿಬಿಡುತ್ತಾರೆ. ವಿಶ್ವಾಮಿತ್ರರು ತಲೆಯ ಮೇಲೆ ಚರುವನ್ನು ಹೊತ್ತು ಅಲ್ಲಿಯೇ ಕಾದು ನಿಲ್ಲುತ್ತಾರೆ. ದಿನಗಳು ಕಳೆಯತೊಡಗುತ್ತದೆ. ವಶಿಷ್ಟರು ಬರಲಿಲ್ಲ... ವಿಶ್ವಾಮಿತ್ರರ ನಿಂತಲ್ಲಿಂದ ಒಂದು ಹೆಜ್ಜೆಯನ್ನೂ ಕದಲಿಸಲಿಲ್ಲ.. ಈ ಸಂದರ್ಭದಲ್ಲಿ ವಿಶ್ವಾಮಿತ್ರರ ಬಳಿಯಲ್ಲಿದ್ದ ಗಾಲವನೆಂಬ ಶಿಷ್ಯ ಅವರ ಸೇವೆಯನ್ನು ಮಾಡತೊಡಗುತ್ತಾನೆ. ದಿನ ಕಳೆದು ತಿಂಗಳುಗಳು ಕಳೆದು ವರ್ಷಗಳೂ ಕಳೆಯತೊಡಗುತ್ತವೆ. ನಿಂತಲ್ಲಿಯೇ ನಿಂತ ವಿಶ್ವಾಮಿತ್ರ ಅವರ ಸೇವೆಯನ್ನು ಮಾಡುತ್ತಿರುವ ಗಾಲವ.. ಹೀಗೆ ಸುಧೀರ್ಘ ಒಂದು ನೂರು ವರ್ಷಗಳು ಕಳೆದುಬಿಡುತ್ತವೆ. ಸಂತೋಷಗೊಂಡ ಯಮಧರ್ಮ ಮತ್ತೆ ವಶಿಷ್ಟರ ರೂಪದಿಂದಲೇ ಬರುತ್ತಾನೆ.. ವಶಿಷ್ಟರನ್ನು ನೋಡಿದ ವಿಶ್ವಾಮಿತ್ರರು ಸಿದ್ಧ ಮಾಡಿ ತಲೆಯ ಮೇಲೆ ಹೊತ್ತಿದ್ದ ಚರುವನ್ನು ಕೆಳಗಿಳಿಸುತ್ತಾರೆ. ನೂರು ವರ್ಷಗಳು ಕಳೆದಿದ್ದರೂ ಮಾಡಿದ ಪಾಕ ತನ್ನ ಬಿಸಿಯನ್ನು ಕಳೆದುಕೊಳ್ಳದೇ ಈಗ ತಾನೇ ಒಲೆಯಿಂದ ಇಳಿಸಿದ ಪಕ್ವಾನ್ನದ ಹಾಗೆಯೇ. ಇರುತ್ತದೆ. ಸಂತೋಷದಿಂದ ಊಟ ಮಾಡಿದ ವಶಿಷ್ಟ ರೂಪದ ಯಮಧರ್ಮ ವಿಶ್ವಾಮಿತ್ರರನ್ನು ಹರಸಿ ಹೊರಟು ಹೋಗುತ್ತಾನೆ. ಇತ್ತ ವಿಶ್ವಾಮಿತ್ರರು ಸುದೀರ್ಘ ನೂರು ವರ್ಷಗಳ ಕಾಲ ನಿಂತಲ್ಲೇ ಇದ್ದ ತಮ್ಮನ್ನು ಸೇವೆ ಮಾಡಿದ ಗಾಲವನ ಗುರುಭಕ್ತಿಗೆ ಸೋತು ಎಲ್ಲಾ ವಿದ್ಯೆಗಳನ್ನು ಉಪದೇಶ ಮಾಡಿ ಹರಸುತ್ತಾರೆ. ಗಾಲವನೂ ಸಂತೋಷ ಹೊಂದುತ್ತಾನೆ. ಆದರೆ ತನ್ನನ್ನು ಸರ್ವ ವಿದ್ಯಾಪಾರಂಗತನನ್ನಾಗಿ ಮಾಡಿದ ಗುರುಗಳಿಗೆ ಗುರುದಕ್ಷಿಣೆಯನ್ನು ಕೊಡಬೇಕೆಂದು ತಿರ್ಮಾನಿಸುತ್ತಾನೆ. ಗುರುಗಳಲ್ಲಿ.. "ಸ್ವಾಮೀ ನಿಮ್ಮಿಂದ ನಾನು ಉದ್ಧರಿಸಲ್ಪಟ್ಟಿದ್ದೇನೆ ಸಕಲ ವಿದ್ಯೆಗಳೂ ಇಂದು ನನಗೆ ದೊರೆತವು ಇದಕ್ಕೆ ಕಾರಣರಾದ ಕರುಣಾಮಯಿಯಾದ ತಮಗೆ ಗುರುದಕ್ಷಿಣೆಯ ರೂಪದಲ್ಲಿ ಏನನ್ನು ಕೊಡಲಿ " ಎಂದು ಕೇಳುತ್ತಾನೆ. ವಿಶ್ವಾಮಿತ್ರರು "ಮಗೂ ಗಾಲವ... ಸುದೀರ್ಘ ನೂರು ವರ್ಷಗಳ ಕಾಲ ನನ್ನ ಸೇನೆಯನ್ನು ಮಾಡಿದ್ದಿ ಇದಕ್ಕಿಂತ ಮಿಗಿಲಾದ ಮತ್ತೊಂದು ಗುರುದಕ್ಷಿಣೆ ಬೇಡ.. ಗುರುದಕ್ಷಿಣೆ ಸಂದಿತು ಎಂದು ಭಾವಿಸಿಕೊಂಡು ಹೋಗಿ ನಿನ್ನ ಜೀವನವನ್ನು ನಡೆಸು" ಎಂದು ಹೇಳುತ್ತಾರೆ. ಇದನ್ನು ಕೇಳಿದ ಗಾಲವನಿಗೆ ಸಮಾಧಾನವಾಗುವುದಿಲ್ಲ ಗುರುಗಳಿಗೆ ಏನಾದರೂ ಕೊಡಬೇಕು ಎಂಬ ಭಾವನೆ ಹೋಗುವುದಿಲ್ಲ.. ಗುರುಗಳು ಏನನ್ನಾದರೂ ಕೇಳಿದರೆ ಬಡವನಾದ ತನ್ನ ಬಳಿ ಕೊಡಲು ಇದೆಯೇ ಎಂದೂ ಯೋಚಿಸಿದೇ ಮತ್ತೆ ಮತ್ತೆ ಕೇಳುತ್ತಾನೆ. ಇವನ ಮಾತಿನಿಂದ ವಿಶ್ವಾಮಿತ್ರರಿಗೆ ಸ್ವಲ್ಪ ಕೊಪವೇ ಬರುತ್ತದೆ. ಹಾಗಾಗಿಯೇ "ಏಕತ: ಶ್ಯಾಮ ಕರ್ಣಾನಾಂ ಹಯಾನಾಂ ಚನ್ದ್ರವರ್ಚಸಾಮ್ | ಅಷ್ಟೌ ಶತಾನಿ ಮೇ ದೇಹಿ ಗಚ್ಛ ಗಾಲವ ಮಾಚಿರಮ್ II " ಎಂದು ಹೇಳಿಬಿಡುತ್ತಾರೆ. ಒಂದು ಕಿವಿ ಕಪ್ಪಾಗಿರುವ ಬಿಳಿ ಬಣ್ಣದ ಎಂಟುನೂರು ಕುದುರೆಗಳನ್ನು ತಂದುಕೊಡು ಎಂದು ಕೇಳಿಬಿಡುತ್ತಾರೆ.🙏🙏...
ಅಶ್ವಶೋಧನೆಗೆ ಹೊರಡುವ ಗಾಲವನ ಬಗ್ಗೆ. ಮುಂದಿನ ಬರಹ🙏🙏
Tuesday, June 17, 2025
ತ್ರಿಶಂಕು ೨
ಆತ್ಮಹತ್ಯೆಗೆ ಮನ ಮಾಡಿದ್ದ ತ್ರಿಶಂಕು ಶ್ರೀದೇವಿಯ ದರ್ಶನ ಕಾರುಣ್ಯದಿಂದ ತನ್ನ ನಿರ್ಧಾರದಿಂದ ಹಿಂದೆ ಸರಿದು ಮುಂದೆ ಒದಗಿ ಬರುವ ಶುಭದಿನಗಳ ನಿರೀಕ್ಷೆಯಲ್ಲಿಯೇ ಇರುತ್ತಾನೆ. ಇತ್ತ ನಾರದ ಮಹರ್ಷಿಗಳು ರಾಜ್ಯದಿಂದ ಪರಿತ್ಯಕ್ತನಾದ ಸತ್ಯವ್ರತ (ತ್ರಿಶಂಕು) ದೇವಿಯನ್ನು ಸಾಕ್ಷಾತ್ಕರಿಸಿಕೊಂಡ ಘಟನೆಯನ್ನು ತ್ರಿಬಂಧನನಿಗೆ ಹೇಳುತ್ತಾರೆ. ನಡೆದ ಘಟನಾವಳಿಗಳನ್ನು ನಾರದರ ಮುಖೇನ ಕೇಳಿದ ಅರಸ ತ್ರಿಬಂಧನನಿಗೆ ದುಃಖವಾಗುತ್ತದೆ. ತನ್ನ ಮಗ ಮಾಡಿದ ತಪ್ಪಿಗೆ ತಾನು ದೊಡ್ದ ಶಿಕ್ಷೆಯನ್ನೇ ಕೊಟ್ಟುಬಿಟ್ಟೆನೆಂದು ಮರುಗಿದ ಅರಸ ಮಂತ್ರಿಗಳನ್ನು ಕರೆದು ನಿರ್ಗತಿಕನಾಗಿ ಅಲೆಯುತ್ತಿರುವ ಮಗ ತ್ರಿಶಂಕುವನ್ನು ಅರಸಿ ಕರೆದುಕೊಂಡು ಬರಲು ಸೂಚಿಸುತ್ತಾನೆ. ರಾಜನ ಆಣತಿಯಂತೆ ಮಂತ್ರಿಗಳು ಹುಡುಕುತ್ತಾ ಬಂದು ನೆಲೆ ಇಲ್ಲದೆ ಅಂಡಲೆಯುತ್ತಿದ್ದ ತ್ರಿಶಂಕುವನ್ನು ಕಾಣುತ್ತಾರೆ. ಅರಸನ ಆಜ್ಞೆಯನ್ನು ತಿಳಿಸಿ ರಾಜೋಚಿತವಾದ ಗೌರವ ಸಂಮಾನಗಳೊಂದಿಗೆ ನಾಡಿಗೆ ಕರೆದುಕೊಂಡು ಬರುತ್ತಾರೆ. ತಂದೆ ತ್ರಿಬಂದನ ಹಿಂದೆ ನಡೆದ ಘಟನೆಯನ್ನೆಲ್ಲಾ ಮರೆತು ಸಂತೋಷದಿಂದಲೇ ಮಗನನ್ನು ಬರಮಾಡಿಕೊಂಡು ಅತ್ಯಂತ ಸಂಭ್ರಮದಿಂದ ಮಗನಿಗೆ ಸಾಮಾಜ್ಯದ ಪಟ್ಟ ಕಟ್ಟಿ ಇನ್ನು ಉಳಿದ ಆಯುಷ್ಯವನ್ನು ವಾನಪ್ರಸ್ಥದಲ್ಲಿ ಕಳೆಯಲು ತೆರಳುತ್ತಾನೆ.(ಹರಿವಂಶದ ಪ್ರಕಾರ ಬರಗಾಲ ಪೀಡಿತವಾದ ಸಾಮ್ರಾಜ್ಯದಲ್ಲಿ ಮಳೆಯನ್ನು ತರಿಸುವುದು ಮತ್ತು ತ್ರಿಶಂಕುವಿಗೆ ಪಟ್ಟಾಭಿಷೇಕವನ್ನು ತನ್ನ ಹೆಂಡತಿ.. ಮಕ್ಕಳನ್ನು ರಕ್ಷಿಸಿದ ಕಾರಣದಿಂದ ವಿಶ್ವಾಮಿತ್ರರೇ ಮಾಡುತ್ತಾರೆ. ) ತ್ರಿಶಂಕು ಕೂಡ ತನ್ನ ಜೀವನದಲ್ಲಿ ಗತಿಸಿದ ಸಂಕಷ್ಟದ ಸಂಧರ್ಭಗಳನ್ನು ಮರೆತು ಜನಾನುರಾಗಿಯಾಗಿ, ಪರಮ ಧಾರ್ಮಿಕನೆನಿಸಿಕೊಂಡು ಬಹುಕಾಲ ರಾಜ್ಯಭಾರ ಮಾಡುತ್ತಾನೆ. ಕೈಕಯ ವಂಶಸ್ಥಳಾದ "ಸತ್ಯರಥಾ " ಎಂಬಾಕೆಯೊಂದಿಗೆ ಸಾಂಸಾರಿಕ ಜೀವನವೂ ಸುಖದಿಂದಲೇ ಕೂಡಿರುತ್ತ ಹುಟ್ಟಿದ ಮಗುವಿಗೆ "ಹರಿಶ್ಚಂದ್ರ'' ಎಂದು ನಾಮಕರಣ ಮಾಡಿ ಬೆಳೆಸುತ್ತಾನೆ. ರಾಜ್ಯದ... ಪ್ರಜೆಗಳ ಬಳಿತಿಗಾಗಿ ನೂರು ಯಜ್ಞಗಳನ್ನು ಮಾಡುತ್ತಾನೆ. (ರೂಡಿಯಲ್ಲಿ ಅವನು ಯಜ್ಞ ಮಾಡುವುದೆಲ್ಲವೂ ಸ್ವರ್ಗ ಕಾಮನೆಯಿಂದಲೇ ಎಂದು ಹೇಳುವದನ್ನು ಕೇಳಿದ್ದೇವೆ ಆದರೆ ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ಅವನು ನೂರು ಯಾಗಗಳನ್ನು ಮಾಡುವುದು ಸ್ಪರ್ಗಾಪೇಕ್ಷೆಗಿಂತಲೂ ಮೊದಲು) ರಾಜ್ಯದ ಪ್ರಜೆಗಳು ಸಂತೋಷದಿಂದಲೂ ಇರುತ್ತಾ... ಅರಸನ ಭಂಡಾರವೂ ತುಂಬಿ ತುಳುಕುತ್ತದೆ. ಇಂತಹಾ ಸಂದರ್ಭದಲ್ಲಿ ತ್ರಿಶಂಕುವಿನ ಮನಸ್ಸಿನಲ್ಲಿ ಸಶರೀರವಾಗಿಯೇ ಸ್ವರ್ಗವನ್ನು ಸೇರಿ ಸುಖವನ್ನು ಅನುಭವಿಸಬೇಕೆಂಬ ಅಪೇಕ್ಷೆ ಹುಟ್ಟಿಬಿಡುತ್ತದೆ. ಹಿಂದೆ ತ್ರಿಶಂಕು - ವಶಿಷ್ಟರ ಮದ್ಯೆ ಏರ್ಪಟ್ಟಿದ್ದ ಅಂತರ ಈಗ ಇರಲಿಲ್ಲ, ವಶಿಷ್ಟರೂ ಕುಲಪುರೋಹಿತರಾಗಿ ಕಾಲಕಾಲಕ್ಕೆ ಅರಸನಿಗೆ ಕೊಡಬೇಕಾದ ಸಲಹೆ ಸೂಚನೆಗಳನ್ನು ಕೊಟ್ಟು ತಮ್ಮದಾದ ಹೊಣೆಯನ್ನು ನಿರ್ವಹಿಸುತ್ತಲೇ ಇದ್ದರು. ಲೋಕ ಕಲ್ಯಾಣಕ್ಕಾಗಿ ಅರಸ ಒಂದಾದ ಮೇಲೆ ಒಂದರಂತೆ ನೂರು ಯಾಗಗಳ ಸಂಕಲ್ಪ ಮಾಡಿದರೂ ಎಲ್ಲವನ್ನು ತಮ್ಮ ಪೌರೋಹಿತ್ಯದಲ್ಲಿ ಮಾಡಿ ಮುಗಿಸಿಕೊಟ್ಟಿದ್ದರು.
ಈಗ ಸಶರೀರ ಸ್ವರ್ಗಾರೋಹಣಕ್ಕೆ ಬೇಕಾಗಿ ಮತ್ತೊಂದು ಯಜ್ಞ ಸಂಕಲ್ಪ ಮಾಡಿಸಲು ವಶಿಷ್ಟರಲ್ಲಿ ಕೇಳಿಕೊಳ್ಳುತ್ತಾನೆ. ಆಗ ಗುರು ವಶಿಷ್ಟರು ಅದು "ಅಶಕ್ಯ " ಎಂದು ನಿರಾಕರಿಸಿ ಹೊರಟು ಹೋಗುತ್ತಾರೆ. ಕುಲಗುರುಗಳೇ ನಿರಾಕರಿಸಿದರೂ ತ್ರಿಶಂಕುವಿನ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದ ಸ್ವರ್ಗವಾಂಛೆ ನಾಶವಾಗಲಿಲ್ಲ. ಹಾಗಾಗಿಯೇ ಅರಣ್ಯದಲ್ಲಿ ಆಶ್ರಮ ನಿರ್ಮಿಸಿಕೊಂಡು ತಪಸ್ಸು.. ಯಜ್ಞಾದಿಗಳಲ್ಲಿ ತೊಡಗಿದ್ದ ವಶಿಷ್ಟ ಪುತ್ರರಲ್ಲಿ ಹೋಗಿ ತನ್ನ ಮನದಿಂಗಿತ ಹೇಳಿಕೊಳ್ಳುತ್ತಾನೆ. ವಶಿಷ್ಟರು ಯಜ್ಞ ಮಾಡಿಸಲು ತಿರಸ್ಕರಿಸಿದ ವಿಷಯವನ್ನು ಹೇಳುವಾಗ ಸಹಜವಾಗಿಯೇ ಇವನ ಧ್ವನಿ ಗಡುಸಾಯಿತು. ಇದನ್ನು ಗ್ರಹಿಸಿದ ವಶಿಷ್ಟ ಪುತ್ರರು ತಂದೆ ನಿರಾಕರಿಸಿದ ವಿಷಯದಲ್ಲಿ ತಮ್ಮ ಪ್ರವೇಶ ಇಲ್ಲವೆಂದೂ ವಶಿಷ್ಟರು "ಅಶಕ್ಯ "ಎಂದಾಡಿದರೆ ಅಂತಹ ಕಾರ್ಯವನ್ನು ಮಾಡುವುದು ಸಾಧುವಲ್ಲವೆಂದೂ ಹೇಳುತ್ತಾರೆ.
ತ್ರಿಶಂಕುವಿಗೆ ಸಹನೆ ಮೀರುತ್ತದೆ. ವಶಿಷ್ಟರ ಬಗ್ಗೆ ಇದ್ದ ಅಸಹನೆ ವಶಿಷ್ಟ ಪುತ್ರರ ಸಮ್ಮಖದಲ್ಲಿ ಹೊರಬೀಳುತ್ತದೆ. "ನಿಮ್ಮ ತಂದೆಯವರೂ ಆಗದು ಎಂದರು.. ನೀವೂ ನಿರಾಕರಿಸಿದಿರಿ ಆದರೆ ನನ್ನ ಸಂಕಲ್ಪವನ್ನು ಬಿಡಲಾರೆ.. ಅದನ್ನು ನೆರವೇರಿಸಿಕೊಳ್ಳಲು ಬೇರೆಯಾರಾದರೂ ಪ್ರಾಜ್ಞರಾದ ಬ್ರಾಹ್ಮಣರನ್ನು ಅರಸುತ್ತೇನೆ ಇದು ನಿಶ್ಚಯ" ಎಂದು ಆಡುತ್ತಾನೆ. ಈ ಮಾತು ಶಕ್ತಿ, ಮಹೋದಯಾದಿ ವಶಿಷ್ಟ ಪುತ್ರರಿಗೂ ಕೋಪ ತರಿಸುತ್ತದೆ. ಕೋಪವೆಂಬುದು ಶಾಪವಾಕ್ಕವಾಗಿ ಹೊರಬೀಳುತ್ತದೆ. "ಕುಲಗುರುಗಳನ್ನು ವಿರೋಧಿಸಿದೆ.. ಗುರುಪುತ್ರರಾದ ನಮ್ಮನ್ನೂ ವಿರೋಧಿಸಿ ಮತ್ತೋರ್ವನನ್ನು ಅರಸುವ ಮಾತಾಡಿದೆ ಎಂತಾದರೆ ನೀನು ಚಾಂಡಾಲನಾಗು" ಎಂದು ಶಪಿಸಿ ಬಿಡುತ್ತಾರೆ. ಶಾಪವಾಕ್ಕವನ್ನು ಕೇಳಿ ತ್ರಿಶಂಕುವಿಗೆ ಬಹಳ ದುಃಖವಾಗುತ್ತದೆ. ಆಸೆ ನಿರಾಸೆಯಾಯಿತು. ಮರಳಿ ನಗರಕ್ಕೆ ಹೋಗುವ ಮನಸ್ಸೂ ಬರಲಿಲ್ಲ. ತನ್ನನ್ನು ಅನುಸರಿಸಿ ಬಂದಿದ್ದ ಸೀಮಿತವಾದ ಪರಿವಾರಕ್ಕೆ ಮಗನಾದ ಹರಿಶ್ಚಂದ್ರನಿಗೆ ಸಿಂಹಾಸನವೇರಿ ರಾಜ್ಯಾಡಳಿತ ನಡೆಸುವ ಸಂದೇಶ ಕೊಟ್ಟು ಕಳುಹಿಸಿಕೊಡುತ್ತಾನೆ. ಸಂಜೆಯಾಗುತ್ತಲೇ ವಶಿಷ್ಟ ಪುತ್ರರ ಶಾಪದ ಪರಿಣಾಮ ತಿಳಿಯತೊಡಗುತ್ತದೆ. ತ್ರಿಶಂಕುವಿನ ಶುಭ್ರವಾದ ದೇಹ ಬಣ್ಣ ಕಳೆದುಕೊಂಡು ಕಪ್ಪಾಗತೊಡಗುತ್ತದೆ, ದೇಹವನ್ನು ಅಲಂಕರಿಸಿದ್ದ ಬಂಗಾರದ ಆಭರಣಗಳು ತಮ್ಮ ಹೊಳಪನ್ನು ಕಳೆದುಕೊಂಡು ಕಬ್ಬಿಣದ ಆಭರಣಗಳಾಗುತ್ತವೆ. ತಲೆಯ ಮೇಲೆ ಧರಿಸಿದ್ದ ಕಿರೀಟವೂ ಕಬ್ಬಿಣದ್ದಾಗುತ್ತದೆ. ಮುಖದಲ್ಲಿದ್ದ ಕ್ಷತ್ರಿಯರಾಜೋಚಿತವಾದ ಕಳೆ ಮಾಯವಾಗಿ ಚಾಂಡಾಲ ಕುರುಹುಗಳು ಆವರಿಸಿಕೊಳ್ಳುತ್ತವೆ. ತ್ರಿಶಂಕು ದುಃಖದಿಂದ ಕುಸಿದು ಕೂರುತ್ತಾನೆ. ಮತ್ತೆ ಸಾವರಿಸಿಕೊಂಡು ಮೇಲೆದ್ದು, ತಿರುಗತೊಡಗುತ್ತಾನೆ. ತಿರುಗುತ್ತಾ ತಿರುಗುತ್ತಾ ಮುಂದೆ ವಿಶ್ವಾಮಿತ್ರರ ಆಶ್ರಮವನ್ನು ತಲುಪಿದ, ವಿಶ್ವಾಮಿತ್ರರು ಇವನ ಪರಿಚಯ ಕೇಳಿದ ಕೂಡಲೇ ಬರಗಾಲದ ದಿನಗಳಲ್ಲಿ ತನ್ನ ಹೆಂಡತಿ ಮಕ್ಕಳನ್ನು ರಕ್ಷಿಸಿದವ ಇವನೇ ಎಂಬುದು ತಿಳಿಯುತ್ತದೆ. ಕೂಡಲೇ ತ್ರಿಶಂಕುವಿನ ಆಶಯ ಮತ್ತು ಅದನ್ನು ನಡೆಸಿಕೊಡದ ವಶಿಷ್ಟ ಮತ್ತು ವಾಶಿಷ್ಟರ ಬಗ್ಗೆ ಕೋಪದಿಂದಲೇ ನಿಂದಿಸಿ ತಾನು ಅವನಿಗೆ ಸಶರೀರಿಯಾಗಿ ಸ್ವರ್ಗವನ್ನೇರುವ ಮಾರ್ಗವನ್ನು ಕಲ್ಪಿಸುವುದಾಗಿ ಮಾತು ಕೊಡುತ್ತಾರೆ. "ನೀನು ನನ್ನನ್ನು ಬಂದು ಸೇರಿದೆ ಎಂದಾದರೆ ಸ್ವರ್ಗ ಸಿಕ್ಕಿತು ಎಂದೇ ತಿಳಿ" ಎಂದು ಆಡುತ್ತಾರೆ. ತ್ರಿಶಂಕುವಿಗೆ ಧೈರ್ಯದ ಮಾತುಗಳನ್ನು ಹೇಳಿ ಕೂಡಲೇ ತಮ್ಮ ಶಿಷ್ಯರಿಗೆ ತಾವು ತ್ರಿಶಂಕುವನ್ನು ಸ್ಪರ್ಗಕ್ಕೆ ಏರಿಸಲು ಮಾಡಬೇಕಾಗುವ ಯಜ್ಞದ ಬಗ್ಗೆ ಹೇಳಿ ಅದಕ್ಕೆ ಬೇಕಾದ ಸಂಭಾರಗಳನ್ನು ಸಂಗ್ರಹಿಸಲು ಆಜ್ಞಾಪಿಸುತ್ತಾರೆ, ಇನ್ನೂ ಕೆಲವು ಶಿಷ್ಯರನ್ನು ಕರೆದು ಎಲ್ಲಾ ಕಡೆಯಲ್ಲಿರುವ ಖುಷಿ ಮುನಿಗಳನ್ನು ಆಮಂತ್ರಿಸುವಂತೆಯೂ, ಆಮಂತ್ರಣ ಪಡೆದವರು ಈ ಯಜ್ಞದ ಬಗ್ಗೆ ಏನಾದರೂ ಆಡಿದರೆ ಯಾವ ಮುಚ್ಚುಮರೆಯಿಲ್ಲದೆ ತನಗೆ ವರದಿ ಒಪ್ಪಿಸಬೇಕೆಂದೂ ಹೇಳಿ ಕಳುಹಿಸುತ್ತಾರೆ. ವಿಶ್ವಾಮಿತ್ರರು ಆಜ್ಞಾಪಿಸಿದಂತೆಯೇ ಶಿಷ್ಯರು ಎಲ್ಲೆಡೆ ಸಂಚರಿಸಿ ಋಷಿ ಮುನಿಗಳನ್ನು ಯಜ್ಞಕ್ಕೆ ಆಮಂತ್ರಿಸಿ ಬರುತ್ತಾರೆ. ಕೆಲವರಿಗೆ ಬರಲು ಮನಸ್ಸಿಲ್ಲದಿದ್ದರೂ ಹೋಗದೇ ಉಳಿದರೆ ವಿಶ್ವಾಮಿತ್ರ ಕೋಪಿಸಿಕೊಳ್ಳುತ್ತಾನೆ ಎಂದುಕೊಂಡು ಯಾಗ ನಡೆಯುವ ಸ್ಥಳಕ್ಕೆ ಒಂದು ಸೇರತೊಡಗಿದರು. ಆಮಂತ್ರಣ ಕೊಟ್ಟು ಬಂದ ಶಿಷ್ಯರಲ್ಲಿ ಯಾರಾದರೂ ತನ್ನ ಕಾರ್ಯಕ್ಕೆ ವಿರೋಧವಾಗಿ ಮಾತಾಡಿದರೇ ಎಂದು ಕೇಳಿದಾಗ ವಶಿಷ್ಟ ಪುತ್ರರು ಆಡಿದ ಮಾತುಗಳನ್ನು ಹೇಳುತ್ತಾರೆ.
"ಕ್ಷತ್ರಿಯೋ ಯಾಜಕೋ ಯಸ್ಯ ಚಣ್ಡಾಲಸ್ಯ ವಿಶೇಷತ: |
ಕಥಂ ಸದಸಿ ಭೋಕ್ತಾರೋ ಹವಿಸ್ತಸ್ಯ ಸುರರ್ಷಯ ll"
ಯಾಗ ಮಾಡುವವ ಚಾಂಡಾಲ.. ಮಾಡಿಸುವವ ಕ್ಷತ್ರಿಯ ಇಂತಹ ಯಜ್ಞದ ಹವಿಸ್ಸನ್ನು ದೇವತೆಗಳು ಹೇಗೆ ಸ್ವೀಕರಿಸುತ್ತಾರೆ.... ಋಷಿಮುನಿಗಳು ಯಜ್ಞ ಶೇಷವನ್ನು ಹೇಗೆ ಸ್ವೀಕರಿಸುತ್ತಾರೆ.... ಇದಕ್ಕೆ ಸೂಕ್ತವಾದ ಫಲ ಎಂದೂ ದೊರಕದು ಎಂದು ಶಕ್ತಿ ಮಹೋದಯಾದಿಗಳು ಆಡಿಕೊಂಡರು.... ಈ ಮಾತನ್ನು ಕೇಳಿದ ವಿಶ್ವಾಮಿತ್ರರು ಕೋಪೋದ್ರೇಕದಿಂದ " ದುರಾತ್ಮರಾದ ವಶಿಷ್ಟ ಶಿಷ್ಯರು ನಾನು ಮಾಡುವ ಈ ಯಾಗದ ಬಗ್ಗೆ ಇಂತಹ ಕೀಳು ಮಾತಗಳನ್ನಾಡಿದರು ಎಂದಾದರೆ ಅವರಿಗೆ ಇನ್ನು ಬದುಕುವ ಅವಕಾಶವೇ ಇಲ್ಲ ಅವರು ಈ ಕ್ಷಣವೇ ಕಾಲಪಾಶದಿಂದ ಸೆಳೆಯಲ್ಪಡಲಿ.. ಮುಂದೆ ಅವರು ಹುಟ್ಟುವ ಏಳುನೂರು ಜನ್ಮಗಳಲ್ಲಿ ಸತ್ತಪ್ರಾಣಿಯ ಮಾಂಸವನ್ನೂ ನಾಯಿಗಳ ಮಾಂಸವನ್ನೂ ತಿನ್ನುವ ಕುಲದಲ್ಲಿ ಜನಿಸಲಿ ಅವರು ಲೋಕದಲ್ಲಿ "ಮುಷ್ಟಿಕ"ರೆಂಬ ಹೆಸರಿನಿಂದ ಕರೆಯಲ್ಪಡಲಿ " ಹೀಗೆ ಘೋರವಾದ ಶಾಪವನ್ನು ಕೊಟ್ಟು ತ್ರಿಶಂಕುವಿಗೆ ಯಾಗವನ್ನು ಮಾಡಿಸಲು ಮುಂದಾಗುತ್ತಾರೆ.
ಬಹಳ ದಿನಗಳು ನಡೆದ ಯಜ್ಞದಲ್ಲಿ ಮತ್ತೆ ಮತ್ತೆ ಕರೆದರೂ ದೇವತೆಗಳು ಹವಿರ್ಭಾಗ ಸ್ವೀಕರಿಸಲು ಬರಲಿಲ್ಲ. ಕೃದ್ಧರಾದ ವಿಶ್ವಾಮಿತ್ರರು ತಮ್ಮ ತಪ:ಶ್ಯಕ್ತಿಯಿಂದ ತ್ರಿಶಂಕುವನ್ನು ಕುರಿತು " ರಾಜನ್ ಸಶರೀರೋ ದಿವಂ ವ್ರಜ " ಎಂದು ಹೇಳಿ ತಮ್ಮ ತಪಃಶ್ಯಕ್ತಿಯನ್ನು ವಿನಿಯೋಗಿಸ ತೊಡಗಿದರು. ಹಾಗೆಯೇ ತ್ರಿಶಂಕು ಸಶರೀರನಾಗಿ ಸ್ವರ್ಗಕ್ಕೆ ಏರತೊಡಗಿದ.. ಏರುತ್ತಾ ಸ್ವರ್ಗ ತಲುಪಿದಾಗ ಇಂದ್ರ ವಿರೋಧಿಸಿದ.." ನಿನ್ನಂತಹ ಚಾಂಡಾಲನಿಗೆ ಇಲ್ಲಿ ಸ್ಥಳವಿಲ್ಲ ಬಂದ ಕಡೆಗೇ ತೆರಳು " ಎಂದು ಹೇಳಿ ಸ್ವರ್ಗದಿಂದ ಹೊರತಳ್ಳಿದ. ತ್ರಿಶಂಕು ತಲೆಕೆಳಗಾಗಿ ತ್ರಾಹಿ.. ತ್ರಾಹೀ.. ಎಂದು ಕೂಗಿಕೊಳ್ಳುತ್ತಾ ಬೀಳತೊಡಗಿದ. ಇದನ್ನು ಕೇಳಿದ ವಿಶ್ವಾಮಿತ್ರರು "ನಿಲ್ಲು.. ನಿಲ್ಲು" ಎನ್ನುತ್ತಾ ಕರಗಳನ್ನು ಮೇಲಕ್ಕೆತ್ತಿದರು, ಬೀಳುತ್ತಿದ್ದ ತ್ರಿಶಂಕು ಅಲ್ಲಿಯೇ ನಿಂತ. ಅವನು ನಿಂತಲ್ಲಿಯೇ ಕಲ್ಪಾಂತರದಲ್ಲಿ ಬ್ರಹ್ಮದೇವರು ಹೊಸ ಸೃಷ್ಠಿಯನ್ನು ಆರಂಭಿಸಿದಂತೆ ಹೊಸ ಸ್ವರ್ಗವನ್ನು ನಿರ್ಮಾಣ ಮಾಡಿದರು.. ಸಪ್ತರ್ಷಿ ಮಂಡಲವನ್ನೂ ಇಪ್ಪತ್ತೇಳು ನಕ್ಷತ್ರಗಳನ್ನೂ ಸೃಷ್ಠಿಸಿದರು. ಉತ್ತರದಿಕ್ಕಿನಲ್ಲಿ ಧೃವಮಂಡಲವಿದ್ದರೆ ದಕ್ಷಿಣದಿಕ್ಕಿನಲ್ಲಿ ತ್ರಿಶಂಕು ಸ್ವರ್ಗ ನಿರ್ಮಾಣವಾಯಿತು. ಸೃಷ್ಠಿಸಿದ ಸ್ವರ್ಗಕ್ಕೆ ಮತ್ತೊಬ್ಬ ಇಂದ್ರನನ್ನೂ ಸೃಷ್ಠಿಸಲು ಮುಂದಾದರು ಮತ್ತು ಈಗಿರುವ ಇಂದ್ರನೇ ಬೇಡ ಎಂಬ ನಿರ್ಧಾರ ಮಾಡಿದರು. ಆಗ ಋಷಿಗಳೂ ದೇವತೆಗಳೂ ಬಂದು ಕ್ರೋಧದಿಂದ ಸೃಷ್ಠಿ ಕಾರ್ಯದಲ್ಲಿ ತೊಡಗಿದ ವಿಶ್ವಾಮಿತ್ರರ ಮನವೊಲಿಸುತ್ತಾರೆ. ನೀವು ಸೃಷ್ಠಿಸಿದ ಸಕಲವೂ ತ್ರಿಶಂಕುವಿಗೆ ಸೀಮಿತವಾಗಿರಲಿ ಅವನಿಗೆ ಪ್ರತಿಸ್ವರ್ಗದಲ್ಲಿಯೂ ಸ್ವರ್ಗಸುಖ ದೊರೆಯಲಿ ಆದರೆ ಆ ಸ್ವರ್ಗ ವೈಶ್ವಾನರಪಥವೆಂಬ ಈ ಜ್ಯೋತಿಶ್ಚಕ್ರದ ಹೊರಗಿರಲಿ ಎಂದು ಬೇಡಿಕೊಳ್ಳುತ್ತಾರೆ.. ಸಮಾಧಾನಗೊಂಡು ವಿಶ್ವಾಮಿತ್ರರು ಅಸ್ತು ಎಂದು ಒಪ್ಪಿಕೊಳ್ಳುತ್ತಾರೆ. ಹೀಗೆ ಸ್ಥಾಪಿತವಾದ ಸ್ವರ್ಗ "ತ್ರಿಶಂಕುಸ್ವರ್ಗ" ಎಂದೇ ಕರೆಯಲ್ಪಡುತ್ತದೆ. 🙏🙏
ಹೊಸ ಕಥೆಯೊಂದಿಗೆ ಮುಂದಿನ ಬರಹ🙏🙏
Thursday, June 12, 2025
ತ್ರಿಶಂಕು
ಸೂರ್ಯವಂಶದಲ್ಲಿ ತ್ರ್ಯಯ್ಯಾರುಣ ("ತ್ರಿಬಂಧನ" "ಅರುಣ " ಎಂದೂ ಇದೆ)ಎಂಬ ಅರಸನಿದ್ದ, ಪರಾಕ್ರಮಿಯೂ ಪರಮ ಧಾರ್ಮಿಕನೂ ಆಗಿದ್ದ ಅವನಿಗೆ ಸತ್ಯವ್ರತನೆಂಬ ಮಗನಿದ್ದ. "ಸತ್ಯವ್ರತ " ಎಂಬ ಹೆಸರಿನಿಂದ ಆತ "ತ್ರಿಶಂಕು " ಎಂದು ಕರೆಸಿಕೊಂಡು ಅದೇ ಹೆಸರಿನಿಂದ ಲೋಕದಲ್ಲಿ ಪ್ರಖ್ಯಾತನಾದ (ವಿಖ್ಯಾತ ").ಪ್ರಾಜ್ಞನಾದ ಗುರುವೊಬ್ಬನನ್ನು ಉಪೇಕ್ಷಿಸಿ ಅವಮಾನಿಸಿದರೆ ಶಿಶ್ಯನಿಗಾಗಬಹುದಾದ ನಷ್ಟ ಏನು ಎಷ್ಟು ಎಂಬುದನ್ನು ಪುರಾಣದ ಕೆಲವು ಕಥೆಗಳು ಸಾರುತ್ತವೆ. ದೇವಗುರುಗಳಾದ ಬೃಹಸ್ಪತಿಗಳು ಇಂದ್ರಸಭೆಯಲ್ಲಿ ಗೌರವ ಸಿಗಲಿಲ್ಲ ಎಂದು ಹೊರಟು ಹೋದ ಮೇಲೆ ಇಂದ್ರನಿಗಾದ ಪರಾಭವ ದೊಡ್ಡದು.. ಬೇರೆ ಗುರುಗಳನ್ನು ಆರಿಸಿಕೊಂಡು.. ಇಂದ್ರ ಪದವಿಯನ್ನೇ ತೊರೆಯಬೇಕಾದ ಪರಿಸ್ಥಿತಿಯೂ ಒದಗಿ ಬಂತು. ಇನ್ನು ಕುಲಗುರುಗಳಾದ ವಶಿಷ್ಠರನ್ನು ತ್ಯಜಿಸಿ ಮತ್ತೊಂದು ಪೌರೋಹಿತ್ಯಕ್ಕೆ ಆಶ್ರಯಿಸಿದ ತ್ರಿಶಂಕುವಿನ ಕಥೆಯೇ ವಿಚಿತ್ರವಾದದ್ದು. ಸಹಜವಾಗಿಯೇ ಕುಲದ ಹಿನ್ನೆಲೆ ಮತ್ತು ರಕ್ತಗತವಾದ ಪರಾಕ್ರಮದಿಂದ... ಅದೆಲ್ಲವನ್ನೂ ಇಮ್ಮಡಿಗೊಳಿಸುವ ತಾರುಣ್ಯದಿಂದ ಸತ್ಯವ್ರತ ಪ್ರಮತ್ತನಾಗಿದ್ದ. ಆ ಸಂದರ್ಭದಲ್ಲಿ ಮೊದಲ ತಪ್ಪು ಮಾಡುತ್ತಾನೆ. ಬ್ರಾಹ್ಮಣರ ಅಗ್ರಹಾರದಲ್ಲಿ ಮದುವೆ ಸಿದ್ಧತೆ ನಡೆಯುತ್ತಿರುತ್ತದೆ. ವರನನ್ನು ವರಿಸಬೇಕಾದ ವಧುವನ್ನು ಸತ್ಯವ್ರತ ಬಯಸಿರುತ್ತಾನೆ. ಹಾಗಾಗಿಯೇ ವಿವಾಹ ಮಂಟಪದಲ್ಲಿ ವರನಿಗೆ ಮಾಲೆಯಿಕ್ಕಿದ ವಧುವನ್ನು ಎಳೆದು ತರುತ್ತಾನೆ. ಕುಪಿತರಾದ ಬ್ರಾಹ್ಮಣರು ಅರಸನಾದ ಸತ್ಯವ್ರತನ ತಂದೆಗೆ ದೂರಿಡುತ್ತಾರೆ.. ತ್ರಯ್ಯಾರುಣ ಮಗನ ಕಾರ್ಯದಿಂದ ಕೋಪಗೊಳ್ಳುತ್ತಾನೆ. ದುಷ್ಕಾರ್ಯ ಮಾಡಿದ ಸತ್ಯವ್ರತನನ್ನು ರಾಜ್ಯದಿಂದಲೇ ಹೊರ ಹಾಕುತ್ತಾನೆ. ನಾನೆಲ್ಲಿ ಬದುಕಲಿ ಎಂದು ಮಗ ಕೇಳಿದಾಗ ಕೋಪದಿಂದಲೇ "ಚಂಡಾಲರ ಜೊತೆ ಹೋಗು" ಎಂದು ಹೇಳುತ್ತಾನೆ. ರಾಜ್ಯದಿಂದ ಹೊರಬಂದ ಸತ್ಯವ್ರತನಿಗೆ ಚಾಂಡಾಲರ ಸಂಗವೇ ಏರ್ಪಡುತ್ತದೆ. ಅವರೊಂದಿಗೇ ಬದುಕತೊಡಗುತ್ತಾನೆ. ಇತ್ತ ತ್ರಯ್ಯಾರುಣ ಮಗನನ್ನು ಹೊರಹಾಕಿದಮೇಲೆ ಮತ್ತೊಬ್ಬ ಮಗನನ್ನು ಪಡೆಯಬೇಕು ಎಂಬ ಆಶಯದಿಂದ ತಪಸ್ಸು ಮಾಡಲು ಅರಣ್ಯಕ್ಕೆ ಹೋಗಿ ಬಿಡ್ತುತ್ತಾನೆ. ಕುಲಪುರೋಹಿತರಾದ ವಶಿಷ್ಟರ ನಿರ್ದೇಶನದಲ್ಲಿ ರಾಜ್ಯಾಡಳಿತ ನಡೆದರೂ ಅರಾಜಕವಾದ ರಾಜ್ಯವನ್ನು ಅನಾವೃಷ್ಟಿ ಭಾಧಿಸುತ್ತದೆ. ನಿರಂತರವಾದ ಹನ್ನೆರಡು ವರ್ಷಗಳ ಬರಗಾಲದಿಂದ ಪ್ರಜಾಜನರು ಬಳಲಿಹೋಗುತ್ತಾರೆ. ಇದೇ ಸಂದರ್ಭದಲ್ಲಿ ವಿಶ್ವಾಮಿತ್ರ (ಕೌಶಿಕ) ತನ್ನ ಹೆಂಡತಿ ಮತ್ತು ಮಕ್ಕಳನ್ನು ಇದೇ ರಾಜ್ಯದಲ್ಲಿ ಬಿಟ್ಟು ತಪಸ್ಸಿಗಾಗಿ ಕೌಶಿಕೀ ತೀರಕ್ಕೆ ಹೋಗಿರುತ್ತಾನೆ. ತನ್ನ ಐದು ಜನ ಮಕ್ಕಳೊಂದಿಗೆ ವಿಶ್ವಾಮಿತ್ರರ ಪತ್ನಿ ವಾಸವಾಗಿರುತ್ತಾಳೆ. ಭೀಕರವಾದ ಬರಗಾಲದಿಂದ ಅವಳ ಬದುಕೂ ದುಸ್ತರವಾಗುತ್ತದೆ. ಬೇರೆ ದಾರಿ ಕಾಣದೇ ಐವರು ಮಕ್ಕಳಲ್ಲಿ ಮದ್ಯದ ಮಗನನ್ನು ಮಾರಾಟ ಮಾಡಿಬಿಡಲು ಯೋಚಿಸಿ ದರ್ಭೆಯ ಹಗ್ಗವನ್ನು ಮಾಡಿ ಮಗನ ಕತ್ತಿಗೆ ಕಟ್ಟಿ ಬೀದಿ ಬೀದಿಗಳಲ್ಲಿ ಕರೆದುಕೊಂಡು ಬರುತ್ತಾಳೆ. ಇದನ್ನು ಸತ್ಯವ್ರತ ನೋಡುತ್ತಾನೆ. ಇಂತಹ ಸ್ಥಿತಿಗೆ ಕಾರಣವೇನೆಂದು ಕೇಳಿದಾಗ ತನಗೆ ಒಂದು ಹೊತ್ತಿನ ಆಹಾರಕ್ಕೂ ದಾರಿ ಇಲ್ಲದ ಅನಿವಾರ್ಯ ಸ್ಥಿತಿಯನ್ನು ಆಕೆ ಹೇಳಿಕೊಳ್ಳುತ್ತಾಳೆ. ಋಷಿ ಪತ್ನಿಯ ಆ ಧ್ಯೆನ್ಯ ಸ್ಥಿತಿಯನ್ನು ನೋಡಿದ ಸತ್ಯವ್ರತ ಆಕೆಗೂ.. ಅವಳ ಮಕ್ಕಳಿಗೂ ದಿನವೂ ಆಹಾರ ಒದಗಿಸುವ ವಾಗ್ದಾನ ಮಾಡಿ ಮಾರಾಟಕ್ಕೆ ಕಟ್ಟಿದ ಮಗುವಿನ ಕುತ್ತಿಗೆಯ ದರ್ಭೆಯ ದಾರವನ್ನು ಬಿಚ್ಚಿಸುತ್ತಾನೆ. ಮಾರಾಟಕ್ಕಾಗಿ ಕುತ್ತಿಗೆಗೆ ದರ್ಭೆಯ ಹಗ್ಗವನ್ನು ಕಟ್ಟಿಸಿಕೊಂಡ ಕಾರಣ ಆ ವಿಶ್ವಾಮಿತ್ರ ಪುತ್ರ ''ಗಾಲವ '' ಎಂದು ಹೆಸರಾದ ಎಂದು ದೇವೀ ಭಾಗವತದಲ್ಲಿದೆ. ಆದರೆ "ಗಾಲವ '' ಎಂಬ ವಿಶ್ವಾಮಿತ್ರ ಶಿಷ್ಯನ ಬಗ್ಗೆ ಬಹಳ ಕಡೆ ಉಲ್ಲೇಖ ಇದೆ. ಗಾಲವನೆಂಬ ವಿಶ್ವಾಮಿತ್ರ ಶಿಷ್ಯನ ಗುರುದಕ್ಷಿಣೆಯ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ. ಹೀಗೆ ವಿಶ್ವಾಮಿತ್ರರ ಪತ್ನಿಗೂ ಮಕ್ಕಳಿಗೂ ಆಹಾರ ಒದಗಿಸುವ ಹೊಣೆ ಹೊತ್ತ ಸತ್ಯವ್ರತ ದಿನವೂ ಬೇಟೆಯಾಡಿ ಅವರಿಗೆ ಬೇಕಾಗುವಷ್ಟು ಆಹಾರವನ್ನು ಅವರ ಆಶ್ರಮದ ಹೊರಬಾಗದಲ್ಲಿದ್ದ ಒಂದು ಮರದ ಕೊಂಬೆಗೆ ಕಟ್ಟಿ ಬರುತ್ತಿದ್ದ. ಇದನ್ನು ಅವರು ತೆಗೆದುಕೊಂಡು ಹೋಗಿ ಬೇಯಿಸಿ ತಿನ್ನುತ್ತಿದ್ದರು. ಹೀಗೇ ದಿನವೂ ನಡೆಯುತ್ತಿತ್ತು. ಸತ್ಯವ್ರತ ರಾಜ್ಯಭ್ರಷ್ಟನಾದಾಗಿನಿಂದಲೂ ತಮ್ಮ ಕುಲಪುರೋಹಿತರಾದ ವಶಿಷ್ಟರ ಬಗ್ಗೆ ಬೇಸರ.. ದ್ವೇಷ.. ಮನಸ್ಸಿನಲ್ಲಿತ್ತು. ತಂದೆಯವರು ಶಿಕ್ಷೆ ಪ್ರಕಟಿಸಿದರೂ ಇನ್ನೂ ಸಪ್ತಪದಿ ಪೂರೈಸದ ಹೆಣ್ಣನ್ನು ವಿವಾಹ ಮಂಟಪದಿಂದ ತಂದದ್ದು ಶಾಸ್ತ್ರ ವಿರೋಧವಲ್ಲ ಎಂದು ವಶಿಷ್ಟರು ಹೇಳಿ ತನಗೆ ಒದಗಿದ ಶಿಕ್ಷೆಯನ್ನು ಅವರು ತಡೆಯಬಹುದಿತ್ತು.. ಆದರೆ ಹಾಗೆ ಮಾಡದೇ ತನ್ನನ್ನು ವಂಚಿಸಿದರು ಎಂದೇ ಭಾವಿಸಿದ್ದ. ಹೀಗೆಯೇ ಒಂದು ದಿನ ಆಹಾರಕ್ಕಾಗಿ ಕಾಡೆಲ್ಲಾ ಸುತ್ತಿದರೂ ಒಂದು ಪ್ರಾಣಿಯೂ ಸಿಗಲಿಲ್ಲ. ಇವನಿಗೂ ಸುತ್ತಿ.. ಸುತ್ತಿ ಹಸಿವು ಬಾಯಾರಿಕೆಗಳು ಬಾಧಿಸತೊಡಗಿತು. ಹಾಗೆ ತಿರುಗುತ್ತಾ ವಶಿಷ್ಟರ ಆಶ್ರಮದ ಬಳಿ ಬಂದಾಗ ಅಲ್ಲಿ ಆಶ್ರಮದ ಗೋವು ಮೇಯುತ್ತಿರುವುದು ಕಾಣಿಸಿತು. ಒಂದು ಕಡೆ ಬಾಧಿಸುತ್ತಿರುವ ಹಸಿವು ಜೊತೆಗೆ ವಶಿಷ್ಟರ ಬಗ್ಗೆ ಮೊದಲೇ ಇದ್ದ ಬೇಸರ... ಹಾಗಾಗಿ ಆ ಗೋವನ್ನೇ ಕೊಂದ.. ಹೊಟ್ಟೆ ತುಂಬುವಷ್ಟು ಆ ಮಾಂಸವನ್ನೇ ತಿಂದ ಉಳಿದಿದ್ದನ್ನು ವಿಶ್ವಾಮಿತ್ರರ ಆಶ್ರಮಕ್ಕೆ ತಂದು ಇಟ್ಟುಹೋದ.. ಇತ್ತ ರಾತ್ರಿಯಾದರೂ ಗೋವು ಆಶ್ರಮಕ್ಕೆ ಬರದಿದ್ದಾಗ ವಶಿಷ್ಠರಿಗೆ ನಡೆದ ವಿದ್ಯಮಾನ ತಿಳಿಯುತ್ತದೆ. ಕೋಪಗೊಂಡ ವಶಿಷ್ಠರು ಸತ್ಯವ್ರತನನ್ನು ಕುರಿತು " ಅಂದು ಬೇರೊಬ್ಬ ವರನಿಗೆ ನಿಶ್ಚಯಿಸಲ್ಪಟ್ಟ ವಧುವನ್ನು ಅಪಹರಿಸಿದ್ದು ಒಂದು ಪಾಪ.. ಈಗ ಗೋವನ್ನು ವಧಿಸಿದ್ದು ಒಂದು ಪಾಪ.. ಹಾಗೆಯೇ ವಧಿಸಿದ ಗೋವಿನ ಮಾಂಸವನ್ನು ಸಂಸ್ಕರಿಸದೇ ತಿಂದದ್ದು ಒಂದು ಪಾಪ.. ಹೀಗೆ ಮೂರು ಪಾಪಗಳನ್ನು ಮಾಡಿದ ನೀನು "ತ್ರಿಶಂಕು " ಎಂದು ಶಪಿಸಿದರು. ಮೊದಲೇ ರಾಜ್ಯಭ್ರಷ್ಟನಾದವ ಜೊತೆಗೆ ವಶಿಷ್ಟರ ಶಾಪ.. ಮಾನಸಿಕವಾಗಿ ಕುಸಿದುಹೋದ ಸತ್ಯವ್ರತ.. ಊರೂರು ತಿರುಗಿ ಶಾಪದ ಪರಿಮಾರ್ಜನೆಗೆ ಬೇಕಾದ ಯಾವುದಾದರೂ ಯಾಗವನ್ನು ಮಾಡಿಸಿಕೊಡಿ ಎಂದು ಬ್ರಾಹ್ಮಣರಲ್ಲಿ ಅಂಗಾಲಾಚಿದ ಆದರೆ ಯಾರೊಬ್ಬರೂ ಗುರುಶಾಪಕ್ಕೆ ಪ್ರತಿಯಾಗಿ ಏನನ್ನು ಮಾಡಲೂ ಮುಂದಾಗಲಿಲ್ಲ. ಕಡೆಗೆ ಬೇರೆ ದಾರಿ ಸಿಗದೇ ಬದುಕೇ ಬೇಡ ಎಂದೆನ್ನಿಸಿ ಕಾಡಿಗೆ ತೆರಳಿದ. ಆ ಹೊತ್ತಿಗೆ ಅವನು ಯಾರಿಂದಲೋ ದೇವಿಯ ಉಪಾಸನೆ ಮಾಡುವುದನ್ನು ಕಲಿತಿದ್ದ.. ಕಾಡಿಗೆ ಬಂದವನೇ ತನಗೆ ಬೇಕಾದ ಚಿತೆಯನ್ನು ತಾನೇ ನಿರ್ಮಿಸಿದ.. ದೇವಿಯನ್ನು ಸ್ತುತಿಸುತ್ತಾ ಇನ್ನೇನು ಉರಿಯುತ್ತಿರುವ ಚಿತೆಗೆ ಹಾರಬೇಕೆನ್ನುವಾಗ ದೇವಿ ಪತ್ಯಕ್ಷಳಾಗುತ್ತಾಳೆ. ಆತ್ಮಾಹುತಿಗೆ ಮುಂದಾದ ತ್ರಿಶಂಕುವನ್ನು ತಡೆಯುತ್ತಾ "ಮಗೂ ನೀನು ಸಾಯಬೇಕಾದವನಲ್ಲ.. ನಿನ್ನ ತಂದೆಯು ನಿನಗೆ ರಾಜ್ಯದ ಪಟ್ಟವನ್ನು ಕಟ್ಟುತ್ತಾನೆ ಅದಕ್ಕೆ ಪೂರಕವಾಗಿಯೇ ಅವನ ಮಂತ್ರಿಗಳು ನಿನ್ನನ್ನು ಅರಸುತ್ತಾ ಬರುವವರಿದ್ದಾರೆ.. ನಿನ್ನನ್ನು ರಾಜ್ಯಾಧಿಕಾರಿಯನ್ನಾಗಿ ಮಾಡಿ ಅವನು ವಾನಪ್ರಸ್ತಕ್ಕೆ ಹೋಗುತ್ತಾನೆ ಅಲ್ಲಿಯವರೆಗೆ ನಿರೀಕ್ಷಿಸು..." ಎಂದು ಹೇಳಿ ಅದೃಷ್ಯಳಾಗುತ್ತಾಳೆ. ದೇವೀ ಕೃಪೆಯಿಂದ ಆತ್ಮಹತ್ಯೆಯ ಯೋಚನೆಯನ್ನು ಬಿಟ್ಟ ತ್ರಿಶಂಕುವಿಗೆ ಇರುವ ನಿರೀಕ್ಷೆ ರಾಜ್ಯದಿಂದ ತಂದೆ ಕಳುಹಿಸುವ ಆಮಂತ್ರಣ...🙏🙏
ಉಳಿದಿದ್ದು ಮುಂದಿನ ಭಾಗದಲ್ಲಿ....
Saturday, June 7, 2025
ಅಮೃತಾಪಹರಣ 2ನೇ ಭಾಗ
ಮುಂದುವರಿದ ಭಾಗ...
ತನ್ನೆರಡು ಕಾಲುಗಳಲ್ಲಿ ಗಜಕಚ್ಛಪರನ್ನೂ ಕೊಕ್ಕಿನಲ್ಲಿ ವಾಲಖಿಲ್ಯರಿದ್ದ ವಿಸ್ತಾರವಾದ ಆಲದ ಕೊಂಬೆಯನ್ನೂ ಕಚ್ಚಿಕೊಂಡು ಹಾರಿದ ಗರುಡನಿಗೆ ಅವರನ್ನು ಇಳಿಸಲು ಸರಿಯಾದ ಸ್ಥಳವೇ ಕಾಣಿಸಲಿಲ್ಲ... ಒಂದುಕಡೆ ತಪೋಭಂಗವಾಯಿತು ಎಂದು ಖುಷಿಗಳು ಶಾಪ ಕೊಟ್ಟಾರು ಎಂಬ ಭಯ... ಹಾರುತ್ತಾ ಮತ್ತೆ ತಂದೆಯವರಾದ ಕಶ್ಯಪರು ತಪಸ್ಸು ಮಾಡುತಿದ್ದ ಗಂಧಮಾದನ ಪರ್ವತಕ್ಕೆ ಬಂದ, ಇವನು ಬರುತಿದ್ದಂತೆಯೇ ನಡೆದ ಅಚಾತುರ್ಯ ಕಶ್ಯಪರ ಅರಿವಿಗೆ ಬಂತು.. ಮಗನನ್ನುದ್ದೇಶಿಸಿ "ಮಗೂ ಆತುರ ಪಡಬೇಡ ನೀನು ಹೊತ್ತು ತರುತ್ತಿರುವ ಕೊಂಬೆಯಲ್ಲಿ ತಪಸ್ಸನ್ನಾಚರಿಸುತ್ತಿರುವವರು ಸಾಮಾನ್ಯರೆಂದು ಭಾವಿಸದಿರು ಕೇವಲ ಸೂರ್ಯಕಿರಣಗಳನ್ನೇ ಆಹಾರವಾಗಿ ಸ್ವೀಕರಿಸಿ ಘೋರವಾದ ತಪೋನಿರತರು ವಾಲಖಿಲ್ಯರು ಹಾಗಾಗಿ ಎಚ್ಚರಿಕೆಯಿಂದ ವರ್ತಿಸು" ಎಂದು ಹೇಳಿ .. ವಾಲಖಿಲ್ಯರನ್ನು ಕುರಿತು ''ಇವನು ನನ್ನ ಮಗ ವೈನತೇಯ ತಾಯಿಯ ದಾಸ್ಯವನ್ನು ಬಿಡಿಸಲೂ.. ಲೋಕಕಲ್ಯಾಣಕ್ಕಾಗಿಯೂ ಕಾರ್ಯನಿರತನಾಗಿದ್ದಾನೆ ಅವನ ಕಾರ್ಯದಿಂದ ನಿಮಗೆ ತೊಂದರೆಯಾದರೆ ಕ್ಷಮಿಸಿಬಿಡಿ " ಎಂದು ಹೇಳುತ್ತಾರೆ. ಕಶ್ಯಪರ ಮಾತನ್ನು ಮನ್ನಿಸಿದ ವಾಲಖಿಲ್ಯರು ಆ ಬೃಹದಾಕಾರದ ಕೊಂಬೆಯಿಂದ ಕೆಳಗಿಳಿದು ತಪಸ್ಸನ್ನು ಮುಂದುವರಿಸಲು ಹಿಮಾಲಯದತ್ತ ತೆರಳುತ್ತಾರೆ. ಗರುಡ ಆ ಕೊಂಬೆಯನ್ನು ಕಚ್ಚಿಕೊಂಡೇ ತೊದಲು ನುಡಿಯಲ್ಲಿ ಕೊಂಬೆಯನ್ನು ಎಸೆಯಲು ಸೂಕ್ತ ಸ್ಥಳವನ್ನು ತೋರಿಸಲು ಕೇಳಿಕೊಳ್ಳುತ್ತಾನೆ. ಆಗ ಕಶ್ಯಪರು ನೂರು ಯೋಜನ ದೂರದಲ್ಲಿರುವ ಒಂದು ನಿರ್ಜನವಾದ ಪರ್ವತವನ್ನು ತೋರಿಸುತ್ತಾರೆ. ಅವರ ಮಾತಿನಂತೆಯೇ ಅತ್ತ ತೆರಳಿದ ಗರುಡ ಆ ಕೊಂಬೆಯನ್ನು ಅಲ್ಲಿ ಎಸೆದು.. ಅದೇ ಪರ್ವತಾಗ್ರದಲ್ಲಿ ಕುಳಿತು ತಾನು ಹಿಡಿದುಕೊಂಡಿದ್ದ ಗಜಕಚ್ಛಪರನ್ನು ತಿಂದು ಮುಗಿಸುತ್ತಾನೆ. ಹೊಟ್ಟೆತುಂಬಿದ ಅನುಭವವಾಗುತ್ತದೆ. ಮುಂದೆ ಅಮೃತವನ್ನು ತರಲು ದೇವಲೋಕದತ್ತ ಪ್ರಯಾಣ ಆರಂಭಿಸುತ್ತಾನೆ. ಇತ್ತ ದೇವಲೋಕದಲ್ಲಿ ಉತ್ಪಾತಗಳು ಉಂಟಾಗತೊಡಗುತ್ತದೆ. ದುಷ್ಟರಾದ ಅಸುರಾರೋ ಆಕ್ರಮಣ ಮಾಡಿದರೋ ಎಂದು ದೇವತೆಗಳು ಭಯಭೀತರಾಗುತ್ತಾರೆ. ದೇವೇಂದ್ರ ಸುರಗುರುಗಳಾದ ಬೃಹಸ್ಪತಿಗಳ ಬಳಿಗೆ ತೆರಳಿ ಆಗುತ್ತಿರುವ ಉತ್ಪಾತಗಳಿಗೆ ಕಾರಣವೇನೆಂದು ಕೇಳುತ್ತಾನೆ. ಆಚಾರ್ಯ ಬೃಹಸ್ಪತಿ ಗರುಡ ಅಮೃತವನ್ನು ಅಪಹರಿಸಲು ಬರುತ್ತಿರುವ ಬಗ್ಗೆ ಹೇಳುತ್ತಾರೆ. ಕೂಡಲೇ ಅಮೃತಬಾಂಡದ ರಕ್ಷಣೆಗಿರುವ ಬಲವನ್ನು ಹೆಚ್ಚಿಸಲಾಗುತ್ತದೆ. ಸುರರೆಲ್ಲರೂ ಆಕ್ರಮಣವನ್ನು ಎದುರಿಸಲು ಸರ್ವಸನ್ನದ್ಧರಾಗಿ ನಿಲ್ಲುತ್ತಾರೆ. ದೇವಲೋಕವನ್ನು ಪ್ರತೀಶಿಸಿದ ಗರುಡನಿಗೆ ಪ್ರಬಲ ಪ್ರತಿರೋಧವೇ ಎದುರಾಗುತ್ತದೆ. ಆಕ್ರಮಿಸಲು ಮುಂದಾದ ದೇವತೆಗಳನ್ನು ತನ್ನ ಕಾಲಿನಿಂದ ಒದೆಯುತ್ತಾ ಕೊಕ್ಕಿನಿಂದ ಘಾಸಿಗೊಳಿಸುತ್ತಾ.. ರೆಕ್ಕೆಗಳಿಂದ ಬಡಿಯುತ್ತಾ ಓಡಿಸ ತೊಡಗುತ್ತಾನೆ. ಸುರರು.. ಸುರ ಪಕ್ಷಪಾತಿಗಳಾಗಿ ಬಂದ ಬಲವೂ ಗರುಡನ ಸಾಮರ್ಥ್ಯದ ಸಮ್ಮಖದಲ್ಲಿ ಪಲಾಯನ ಮಾಡಬೇಕಾದ ಸ್ಥಿತಿ ಉಂಟಾಗುತ್ತದೆ. ಅವರನ್ನೆಲ್ಲಾ ಹಿಮ್ಮೆಟ್ಟಿಸಿ ಅಮೃತಬಾಂಡವಿರುವ ಸ್ಥಳಕ್ಕೆ ಬರುತ್ತಾನೆ.. ಅಲ್ಲಿ ನೋಡಿದರೆ ಅಮೃತವಿರುವ ಪ್ರದೇಶವನ್ನು ತಲುಪಲಾಗದಂತೆ ವರ್ತುಲಾಕಾರದಲ್ಲಿ ಅಗ್ನಿ ಧಗಧಗಿಸುತ್ತಿರುತ್ತದೆ. ಅದನ್ನು ಪ್ರವೇಶಿಸುವುದು ದುಃಸಾಧ್ಯವೆಂದು ಅರಿತ ಗರುಡ ಹಿಂತಿರುಗಿ ಬಂದು ತನ್ನ ಮುಖವನ್ನು ಎಂಟುಸಾವಿರದ ಒಂದುನೂರು ಮುಖಗಳನ್ನಾಗಿಸಿಕೊಂಡು ಪ್ರತಿಯೊಂದು ಬಾಯಿಯಲ್ಲಿಯೂ ಹಲವು ನದಿಗಳ ಜಲವನ್ನು ತುಂಬಿಕೊಂಡು ಹಿಂತಿರುಗಿ ಬಂದು ಉರಿಯುತ್ತಿರುವ ಆ ಆಗ್ನಿಯಮೇಲೆ ಉಗುಳಿಬಿಡುತ್ತಾನೆ. ಕೂಡಲೇ ಬಡಬಾನಲದಂತೆ ಉರಿಯುತ್ತಿದ್ದ ಅಗ್ನಿ ಶಾಂತವಾಗುತ್ತದೆ. ಮುಂದೆ ಸಾಗಬೇಕೆನ್ನುವಾಗ ಹರಿತಾದ ಅರೆಗಳಿಂದ ಕೂಡಿದ ಒಂದು ಉಕ್ಕಿನ ಯಂತ್ರ ಸುತ್ತಲೂ ವೇಗವಾಗಿ ತಿರುಗುತ್ತಾ ಇರುತ್ತದೆ. ಕ್ಷಣಕಾಲ ಯೋಚಿಸಿದ ಗರುಡ ತನ್ನ ದೇಹವನ್ನು ಕುಗ್ಗಿಸಿಕೊಂಡು ಅಣುರೂಪದಿಂದ ಆ ಅರೆಗಳ ಮದ್ಯದಲ್ಲಿಯೇ ನುಸುಳಿಕೊಂಡು ದಾಟಿಬಿಡುತ್ತಾನೆ,ಮತ್ತೆ ಮುಂದೆ ನೋಡಿದರೆ ಘೋರವಾದ ವಿಷವುಳ್ಳ ಎರಡು ಸರ್ಪಗಳು ಸುತ್ತಲೂ ನೋಡುತ್ತಾ ಕಾಯುತ್ತಿರುತ್ತವೆ. ಕೇವಲ ಕಣ್ಣಿನಿಂದ ನೋಡಿದರೂ ಸಾಕು ಅವುಗಳ ವಿಷ ಪ್ರಭಾವಕ್ಕೆ ಜೀವಿಗಳು ಸತ್ತು ಹೋಗಬೇಕು.. ಅಷ್ಟು ಕ್ರೂರವಾದ ಆ ಸರ್ಪಗಳ ಕಣ್ಣೇ ಕಾಣಿಸದಂತೆ ತನ್ನ ರೆಕ್ಕೆಯಿಂದ ದೂಳನ್ನು ಎಬ್ಬಿಸಿ ಮತ್ತೆ ತನ್ನ ರೆಕ್ಕೆಗಳಿಂದ ಬಡಿದು.. ಕೊಕ್ಕಿನಿಂದ ಸೀಳಿ ಹಾಕುತ್ತಾನೆ. ಮುಂದೆ ಎತ್ತರದ ವೇದಿಕೆಯಲ್ಲಿ ಬಂಗಾರದ ಕುಂಭದಲ್ಲಿ ಅಮೃತವನ್ನು ಇರಿಸಲಾಗಿತ್ತು. ಗರುಡ ಅದನ್ನು ಎತ್ತಿಕೊಂಡು ಹಿಂತಿರುಗಿ.. ತಿರುಗುತ್ತಿರುವ ಉಕ್ಕಿನ ಯಂತ್ರವನ್ನು ಒದೆದು ಒಡೆದುಹಾಕಿ ಮೇಲೆ ಹಾರಿ ಸಾಗುತ್ತಾನೆ. ದೇವತೆಗಳು ವಿಶಿಷ್ಟವಾದ ತಮ್ಮ ಆಯುಧಗಳನ್ನು ಗರುಡನತ್ತ ಪ್ರಯೋಗಿಸಿದರೂ ಯಾವ ಪ್ರಯೋಜನವೂ ಆಗಲಿಲ್ಲ, ಅಮೃತಬಾಂಡವನ್ನು ಹಿಡಿದು ಗಗನಮಾರ್ಗದಲ್ಲಿ ಸಾಗತೊಡಗುತ್ತಾನೆ. ತನಗೆ ಅಮೃತ ದೊರೆತರೂ ಅದನ್ನು ತಾನು ಸೇವಿಸದೇ ಪರರಿಗಾಗಿ ಕೊಂಡೊಯ್ಯುತ್ತಿರುವ ಗರುಡನ ಗುಣವನ್ನು ಕಂಡು ಸಂತೋಷಗೊಂಡ ಮಹಾವಿಷ್ಣು ಗರುಡನಿಗೆ ಇದಿರಾಗುತ್ತಾನೆ. ''ನಿನ್ನ ಈ ಪರಾಕ್ರಮ ತ್ಯಾಗಬಾವವನ್ನು ಕಂಡು ಸಂತುಷ್ಟನಾಗಿದ್ದೇನೆ ನಿನಗೇನು ವರ ಬೇಕು ಕೇಳು" ಎಂದಾಗ "ನಿನ್ನ ಧ್ವಜದಲ್ಲಿ ನನಗೆ ಸ್ಥಾನ ಕೊಡು " ಎಂದು ಕೇಳಿಕೊಳ್ಳುತ್ತಾನೆ. ಆಗಲಿ ಎಂದು ವಿಷ್ಣು ಅನುಗ್ರಹಿಸುತ್ತಾನೆ. ಹಾಗೆಯೇ ಪರಾಕ್ರಮಿಯಾದ ಗರುಡ "ನನ್ನಿಂದ ನಿನಗೇನು ಸಹಾಯವಾಗಬೇಕೆಂದು ಕೇಳುತ್ತಾನೆ. "ನೀನು ನನಗೆ ವಾಹನವಾಗಿ ಬೇಕು" ಎಂದು ವಿಷ್ಣು ಹೇಳಿದಾಗ ಸಂತೋಷದಿಂದ ಒಪ್ಪುತ್ತಾನೆ. ಹಾಗಾಗಿಯೇ ಮಹಾವಿಷ್ಣು "ಗರುಡಧ್ವಜ" ನೂ "ಗರುಡವಾಹನ " ನೂ ಆಗಿದ್ದು. ಪರಮಾತ್ಮನಿಂದ ಅನುಗ್ರಹಿತನಾದ ಗರುಡ ಮುಂದೆ ಸಾಗುತ್ತಿದ್ದಾಗ ಮತ್ತೆ ದೇವೇಂದ್ರ ವಜ್ರಧಾರಿಯಾಗಿ ಎದುರಾಗುತ್ತಾನೆ. ಪ್ರತಿಭಟಿಸಿದ ದೇವೇಂದ್ರನಿಂದ ಹೋರಾಟದಲ್ಲಿ ವಜ್ರಾಯುಧದ ಪ್ರಯೋಗವಾಗುತ್ತದೆ. ವಜ್ರಾಯುಧ ಗರುಡನನ್ನು ಘಾತಿಸಲು ಅಸಾಧ್ಯವಾದರೂ ಗರುಡ ಇಂದ್ರನನ್ನು ಕುರಿತು "ಅಯ್ಯಾ ದೇವೇಂದ್ರ.. ನೀನು ಯಾವ ಆಯುಧವನ್ನು ಪ್ರಯೋಗಿಸಿದರೂ ಅವು ನನ್ನನ್ನು ಏನೂ ಮಾಡಲಾರವು ಆದರೆ... ಈ ವಜ್ರಾಯುಧದ ಹಿನ್ನೆಲೆ ಏನು ಎನ್ನುವುದನ್ನು ಅರಿತಿದ್ದೇನೆ. ನಿರಂತರ ತಪಸ್ಸನ್ನು ಆಚರಿಸಿದ ತಪಸ್ವಿಯ ತ್ಯಾಗ ಇದರಲ್ಲಿದೆ ಹಾಗಾಗಿ ಇದು ನನ್ನನ್ನು ಫಾತಿಸಲಾಗದೇ ವ್ಯರ್ಥವಾಯಿತು ಎಂದಾಗಕೂಡದು ಅದಕ್ಕಾಗಿಯೇ ಇದೋ ನೋಡು ನನ್ನ ರೆಕ್ಕೆಯಲ್ಲಿರುವ ಒಂದು ಗರಿಯನ್ನು ಕೆಡವಿದ್ದೇನೆ" ಎಂದು ಗರಿಯನ್ನು ಬೀಳಿಸುತ್ತಾನೆ. ಅವನ ರೆಕ್ಕೆಯಿಂದ ಸುವರ್ಣಮಯ ತೇಜದಿಂದ ಗರಿಯೊಂದು ಕೆಳಗೆ ಬೀಳುತ್ತದೆ. ಅದನ್ನು ಕಂಡು "ಸುಪರ್ಣ..ಸುಪರ್ಣ '' ಎಂದು ಎಲ್ಲರೂ ಕೊಂಡಾಡುತ್ತಾರೆ. ಹಾಗಾಗಿಯೇ ಗರುಡನಿಗೆ "ಸುಪರ್ಣ " ಎಂಬ ಹೆಸರೂ ಬಂತು. ಗರುಡನ ಪರಾಕ್ರಮವನ್ನು ಕಂಡು ಸೋಲೊಪ್ಪಿಕೊಂಡ ಇಂದ್ರ ಸ್ನೇಹಹಸ್ತವನ್ನು ಬಯಸುತ್ತಾನೆ. ಒಪ್ಪಿದ ಗರುಡನಲ್ಲಿ "ನಿನಗೆ ಪ್ರಯೋಜನವಿಲ್ಲದ ಈ ಅಮೃತವನ್ನು ಯಾಕೆ ಕೊಂಡೊಯ್ಯುತ್ತಿದ್ದೀ..ಮರಳಿ ಕೊಟ್ಟುಬಿಡು" ಎಂದಾಗ.. "ಇದರಿಂದ ನನ್ನ ತಾಯಿಯ ದಾಸ್ಯ ವಿಮೋಚನೆಯಾಗಬೇಕು ಹಾಗಾಗಿ ಇದನ್ನು ಒಯ್ಯುತ್ತಿದ್ದೇನೆ..ಆದರೆ ಯಾವ ಕಾರಣಕ್ಕೂ ಸರ್ಪಗಳಿಗೆ ಕುಡಿಯಲು ಅವಕಾಶ ಮಾಡಿಕೊಡುವುದಿಲ್ಲ..ನಾನು ಅವುಗಳ ಮುಂದೆ ಇದನ್ನು ಇಟ್ಟ ಕೂಡಲೇ ನೀನು ಇದನ್ನು ಕೊಂಡೊಯ್ಯಬಹುದು" ಎಂದು ಹೇಳುತ್ತಾನೆ. ಇಂದ್ರನಿಗೆ ಸಂತೋಷವಾಗಿ ವರವೇನು ಬೇಕು ಎಂದು ಕೇಳಿದಾಗ ಸರ್ಪಗಳು ತನ್ನ ತಾಯಿಗೆ ಮಾಡಿದ ಮೋಸವನ್ನು ನೆನಪಿಸಿಕೊಂಡು '' ದುಷ್ಟರಾದ ಆ ಸರ್ಪಗಳೇ ತನಗೆ ಆಹಾರವಾಗಬೇಕೆಂದು ಕೇಳಿಕೊಳ್ಳುತ್ತಾನೆ. ಇಂದ್ರನು ವರರೂಪವಾಗಿ ಅದನ್ನು , "ಅಸ್ತು" ಎನ್ನುತ್ತಾನೆ. ಹಾಗೆ ಇಂದ್ರನನ್ನೂ ಹಿಂಬಾಲಿಸಲು ಹೇಳಿ ಅಮೃತದೊಂದಿಗೆ ತಾಯಿಯ ಬಳಿಗೆ ಬರುತ್ತಾನೆ. ಹೊರಟ ಕಾರ್ಯದಲ್ಲಿ ಯಶ ಸಾಧಿಸಿ ಬಂದ ಮಗನನ್ನು ನೋಡಿ ವಿನತೆಗೆ ಸಂತೋಷವಾಗುತ್ತದೆ. ವರರೂಪವಾಗಿ "ನಿನಗೆ ಮುಪ್ಪು.. ಮರಣ ಭಾಧಿಸದೇ ಇರಲಿ" ಎಂದು ಹೇಳುತ್ತಾಳೆ. ಕದ್ರು ಸುತರಾದ ಸರ್ಪಗಳ ಬಳಿ ಅಮೃತಕಲಶದೊಂದಿಗೆ ಸಾಗುತ್ತಾರೆ. " ನೀವು ಬಯಸಿದ ಅಮೃತವನ್ನು ತಂದಿದ್ದೇನೆ ಈ ಕ್ಷಣವೇ ನನ್ನ ತಾಯಿ ದಾಸಿಯಲ್ಲ ಎನ್ನುವುದನ್ನು ನೀವು ಘೋಷಿಸಬೇಕು '' ಎಂದಾಗ ಅಮೃತವನ್ನು ಕಂಡ ಸಂತೋಷದಲ್ಲಿ ಎಲ್ಲರೂ "ವಿನತೆ ಇನ್ನು ದಾಸಿಯಲ್ಲ" ಎಂದು ಹೇಳುತ್ತಾರೆ. ಆಗ ತಂದ ಅಮೃತಕಲಶವನ್ನು ಪವಿತ್ರವಾದ ದರ್ಭೆ ಬೆಳೆದ ಸ್ಥಳದಲ್ಲಿ ಇಟ್ಟು... . " ಇದನ್ನು ಸ್ನಾನಾದಿಗಳನ್ನು ಪೂರೈಸಿ ಶುಚಿರ್ಭೂತರಾಗಿ ಸೇವಿಸಿ '' ಎಂದು ಹೇಳುತ್ತಾನೆ. ಸರ್ಪಗಳು ಆತುರಾತುರವಾಗಿ ನದಿಯತ್ತ ಧಾವಿಸುತ್ತವೆ. ಇದೇ ಸಂದರ್ಭ ಕಾಯುತ್ತಿದ್ದ ದೇವೇಂದ್ರ ಅಮೃತಕಲಶವನ್ನು ಎತ್ತಿಕೊಂಡು ದೇವಲೋಕದತ್ತ ಸಾಗುತ್ತಾನೆ. ಇತ್ತ ಸ್ನಾನ ಸಂಧ್ಯಾದಿಗಳನ್ನು ಪೂರೈಸಿದ ಸರ್ಪಗಳು ಅಮೃತವಿದ್ದ ಸ್ಥಳಕ್ಕೆ ಧಾವಿಸಿ ಬರುತ್ತವೆ. ಇರಿಸಿದ ಅಮೃತಕಲಶವಿಲ್ಲ... ಆದರೂ ಆಮೃತ ಕಲಶವನ್ನಿಟ್ಟ ಸ್ಥಳದಲ್ಲಿದ್ದ ದರ್ಭೆಹುಲ್ಲುಗಳ ಮೇಲೆ ಅಮೃತ ಬಿದ್ದಿರಬಹುದೆಂಬ ಭ್ರಮೆಯಿಂದ ಆ ಧರ್ಭೆ ಹುಲ್ಲುಗಳನ್ನೇ ನೆಕ್ಕತೊಡಗುತ್ತವೆ. ಹರಿತವಾದ ಗರಿಯನ್ನು ಹೊಂದಿದ ದರ್ಭೆಯನ್ನು ನೆಕ್ಕಿದ ಕಾರಣದಿಂದ ಸರ್ಪಗಳ ನಾಲಿಗೆ ಸೀಳಿ ಇಭ್ಭಾಗವಾಯಿತು. ಅಂದಿನಿಂದ ಎಲ್ಲ ಸರ್ಪ ಸಂತತಿಯ ನಾಲಿಗೆಯೂ ಸೀಳಾಗಿಯೇ ಇದೆ. ಪವಿತ್ರವಾದ ಅಮೃತವನ್ನು ಇಟ್ಟಕಾರಣ... ಅಮೃತಸ್ಪರ್ಷವಾದ ದರ್ಭೆ ಪವಿತ್ರವಾಯಿತು.🙏🙏
ಹೊಸದೊಂದು ಕಥೆಯೊಂದಿಗೆ ಮುಂದಿನ ಬರಹ🙏
Friday, June 6, 2025
ಅಮೃತಾಪಹರಣ
ಸವತಿ ಮತ್ತು ಅವಳ ಮಕ್ಕಳ ಬೇಡಿಕೆಯನ್ನು ಕೇಳಿದ ವಿನತೆಗೆ ದುಃಖವಾಗುತ್ತದೆ. ಯಾರಿಂದಲೂ ಈಡೇರಿಸಲು ಅಸಾಧ್ಯವಾದ ಬೇಡಿಕೆಯನ್ನೇ ಇಟ್ಟಿದ್ದರು. ಹಾಗಾಗಿಯೇ ಎಂತವರಿಗೂ ದುರ್ಲಭವಾದ ಅಮೃತವನ್ನು ತರುವ ಪ್ರಯತ್ನ ವ್ಯರ್ಥ ಎಂದು ಮಗನಾದ ಗರುಡನಲ್ಲಿ ಹೇಳುತ್ತಾಳೆ. ಆದರೆ ಎಷ್ಟೇ ಕಷ್ಠವಾದ ಕಾರ್ಯವನ್ನಾದರೂ ಮಾಡುತ್ತೇನೆ ಎಂದು ಗರುಡ ಧೈರ್ಯವನ್ನು ತುಂಬುತ್ತಾನೆ. ಹಾಗೂ ತಾನು ಅಮೃತವನ್ನು ತರುವ ಕಾರ್ಯಕ್ಕೆ ಮುಂದಾಗುವುದಾಗಿಯೂ ಆ ಮೊದಲು ತನ್ನ ಹಸಿವನ್ನು ನೀಗಿಸಲು ಆಹಾರವನ್ನು ತೋರಿಸುವಂತೆಯೂ ಕೇಳಿಕೊಳ್ಳುತ್ತಾನೆ. ಆಗ ವಿನತೆ ಸಮುದ್ರ ಮಧ್ಯದಲ್ಲಿರುವ ದ್ವೀಪವೊಂದರಲ್ಲಿ ದುಷ್ಟರಾದ ನಿಷಾದರ ಇರುವನ್ನು ಹೇಳಿ ಅವರನ್ನು ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳಲು ಹೇಳುತ್ತಾಳೆ, ಜೊತೆಗೆ ಯಾವುದೇ ಕಾರಣಕ್ಕೂ ಬ್ರಾಹ್ಮಣರನ್ನು ಹಿಂಸಿಸಕೂಡದೆಂದು ಹೇಳುತ್ತಾಳೆ. ಮರುಕ್ಷಣದಲ್ಲಿಯೇ ಗರುಡನ ಪ್ರಶ್ನೆ " ಅಮ್ಮಾ ಬ್ರಾಹ್ಮಣರನ್ನು ಗುರುತಿಸುವ ಬಗೆ ಹೇಗೆ?" ಉತ್ತರಿಸಲು ಹಲವಿದ್ದರೂ ವಿನತೆ ಸರಳವಾಗಿ ಹೇಳಿದಳು. "ಯಾರನ್ನು ನುಂಗುವಾಗ ನಿನ್ನ ಗಂಟಲು ಬಿಸಿಯಾಗುತ್ತದೋ ಮುಳ್ಳು ಚುಚ್ಚಿದ ಅನುಭವವಾಗುವುದೋ ಅವರನ್ನು ಬ್ರಾಹ್ಮಣರೆಂದು ತಿಳಿ" ಗರುಡನಿಗೆ ಅರ್ಥವಾಯಿತು, ಆಗಲಿ ಎಂದು ಹೇಳಿ ತಾಯಿಗೆ ವಂದಿಸಿ ಆಶಿರ್ವಾದ ಪಡೆದು ಹೊರಡುತ್ತಾನೆ. ನೇರವಾಗಿ ಶರಧಿಮಧ್ಯದಲ್ಲಿರುವ ದುರುಳ ನಿಷಾಧರ ದ್ವೀಪಕ್ಕೆ ಬಂದು ಅವರನ್ನು ನುಂಗತೊಡಗುತ್ತಾನೆ. ನುಂಗುತ್ತಾ ನುಂಗುತ್ತಾ ಒಬ್ಬನನ್ನು ನುಂಗುವಾಗ ತಾಯಿ ಹೇಳಿದ ಅನುಭವವಾಗುತ್ತದೆ. ಗಂಟಲಲ್ಲಿ ಚುಚ್ಚಿದ ಅನುಭವ.. ಕೂಡಲೇ ಅವನನ್ನು ಉಗುಳುತ್ತಾನೆ. ತಪ್ಪಾಯಿತು ಕ್ಷಮಿಸಿ... ಈ ನಿಷಾಧರ ಮಧ್ಯದಲ್ಲಿ ವಾಸಿಸುವ ತಾವು ಯಾರೆಂದು ಕೇಳಲು "ನಾನೊಬ್ಬ ಬ್ರಾಹ್ಮಣ ತಿರುಗಾಡುತ್ತಾ ಈ ನಿಷಾಧರ ಊರಿಗೆ ಬಂದೆ ಒಬ್ಬಳು ನಿಷಾಧ ಸ್ತ್ರೀಯನ್ನೇ ವಿವಾಹವಾದೆ..ಅವಳಿಂದ ಮಕ್ಕಳೂ ಜನಿಸಿದರು, ಮಡದಿ ಮಕ್ಕಳನ್ನು ಬಿಟ್ಟು ಹೋಗಲಾರದೇ ಅವರೊಂದಿಗೇ ವಾಸ ಮಾಡುತ್ತಿದ್ದೇನೆ" ಎಂದು ಹೇಳುತ್ತಾನೆ. ಆ ಬ್ರಾಹ್ಮಣನಿಂದ ಬೀಳ್ಕೊಂಡು ಅಲ್ಲಿಂದ ಮುಂದೆ ಹಾರುತ್ತಾನೆ, ಅಷ್ಟು ಬೇಡರನ್ನು ತಿಂದಮೇಲೂ ಗರುಡನ ಹಸಿವು ಇಂಗಲಿಲ್ಲ.. ಆವಾಗ ಇನ್ನು ಆಹಾರವನ್ನು ತಂದೆಯಲ್ಲಿಯೇ ಕೇಳಬೇಕೆಂದು ನೇರವಾಗಿ ಕಶ್ಯಪರನ್ನು ಅರಸಿ ಸಾಗುತ್ತಾನೆ. ತಂದೆಯನ್ನು ಕಂಡು ವಂದಿಸಿಕೊಳ್ಳುತ್ತಾನೆ. ಸಂತೋಷದಿಂದ ಮಗನನ್ನು ಬರಮಾಡಿಕೊಂಡ ಕಶ್ಯಪರು ಆಶೀರ್ವದಿಸಿ ಮೈದಡುವುತ್ತಾರೆ. ತಂದೆಯಲ್ಲಿ ಅಮ್ಮ ಕೊಟ್ಟ ಆಹಾರ ದಲ್ಲಿ ಸ್ವಾರಸ್ಯವಿಲ್ಲ... ಹಾಗಾಗಿ ತನ್ನನ್ನು ಭಾಧಿಸುತ್ತಿರುವ ಹಸಿವಿನ ಬಗ್ಗೆ ಕೇಳಿಕೊಳ್ಳುತ್ತಾನೆ. ಆಗ ಕಶ್ಯಪರು ಸಮೀಪದಲ್ಲಿರುವ ಒಂದು ಸರೋವರವನ್ನು ತೋರಿಸಿ ಅಲ್ಲಿಯೇ ವಾಸಮಾಡುವ ಒಂದು ಆಮೆ ಮತ್ತು ಆ ಆಮೆಯ ಮೇಲಿನ ದ್ವೇಷದಿಂದ ಅದರೊಂದಿಗೆ ಕಾದಾಡಲು ಬರುವ ಒಂದು ಗಜವನ್ನು ತಿನ್ನಲು ಹೇಳುತ್ತಾರೆ. ಗರುಡ ಆ ಗಜಕಚ್ಛಪರ ದ್ವೇಷದ ಹಿನ್ನೆಲೆ ಏನೆಂದು ಕೇಳಲು ಅವರ ಪೂರ್ವಜನ್ಮದ ಕಥೆಯನ್ನು ಕಶ್ಯಪರು ಹೇಳುತ್ತಾರೆ. ಬಹಳ ಹಿಂದೆ ವಿಭಾವಸು ಮತ್ತು ಸುಪ್ರತೀಕರೆಂಬ ಇಬ್ಬರು ಋಷಿ ಕುಮಾರರಿದ್ದರು. ಸಹೋದರರಾದ ಅವರಲ್ಲಿ ಕಿರಿಯನಾದ ಸುಪ್ರತೀಕ ತಂದೆಯ ಮರಣಾನಂತರ ಆಸ್ತಿಯನ್ನು ವಿಭಾಗಿಸಿ ತನ್ನ ಪಾಲನ್ನು ಕೊಡಲು ಅಣ್ಣನಲ್ಲಿ ಕೇಳುತ್ತಾನೆ. ಅಣ್ಣ ವಿಭಾವಸು ತಂದೆಯಿಂದ ಬಂದ ಸಂಪತ್ತನ್ನು ವಿಭಾಗಿಸಲು ವಿರೋಧಿಸುತ್ತಾನೆ. ಅದರಿಂದಾಗುವ ದುಷ್ಪರಿಣಾಮಗಳು ಮತ್ತು ಅವಿಭಕ್ತರಾಗಿದ್ದರೆ ಆಗುವ ಅನುಕೂಲಗಳ ಬಗ್ಗೆ ತಿಳಿಹೇಳುತ್ತಾನೆ. ಆದರೆ ಅಣ್ಣನ ಹಿತನುಡಿಗಳನ್ನು ಕೇಳುವ ಮನಸ್ಸು ಸುಪ್ರತೀಕನಿಗಿರಲಿಲ್ಲ, ಮತ್ತೆ ಮತ್ತೆ ಕೇಳಿದಾಗ ವಿಭಾವಸುವಿಗೆ ಕೋಪ ಬರುತ್ತದೆ. ಕೋಪದಿಂದ "ನೀನು ಆನೆಯಾಗಿ ಹುಟ್ಟು " ಎಂದು ಶಾಪ ಕೊಡುತ್ತಾನೆ. ಅಣ್ಣ ಶಪಿಸಿದ್ದರಿಂದ ಸುಪ್ರತೀಕ ನಿಗೂ ಸಿಟ್ಟು ಬಂತು... "ನೀನು ಆಮೆಯಾಗಿ ಜನಿಸು " ಎಂದು ಪ್ರತಿಶಾಪ ಕೊಡುತ್ತಾನೆ. ಅವರೇ ಗಜಕಚ್ಛಪರಾಗಿ ಜನಿಸಿ ಈ ಜನ್ಮದಲ್ಲಿಯೂ ಪೂರ್ವದ್ವೇಷವನ್ನು ಮರೆಯದೇ ಹೋರಾಡುತಿದ್ದಾರೆ..ಆ ಗಜವು ಆರು ಯೋಜನ ಎತ್ತರವೂ ಹನ್ನೆರಡು ಯೋಜನ ಉದ್ದವೂ ಇದೆ.. ಹಾಗೆಯೇ ಆಮೆಯು ಮೂರು ಯೋಜನ ಎತ್ತರವೂ ಹತ್ತು ಯೋಜನಗಳ ಸುತ್ತಳತೆಯನ್ನೂ ಹೊಂದಿದೆ ಅವರೆಡನ್ನು ತಿಂದರೆ ನಿನ್ನ ಹಸಿವು ನಿವಾರಣೆಯಾಗುತ್ತದೆ ಎಂದು ಕಶ್ಯಪರು ಹೇಳುತ್ತಾರೆ. ಜೊತೆಯಲ್ಲಿ ಅಮೃತವನ್ನು ತರಲು ಹೊರಟ ನಿನ್ನ ಕಾರ್ಯಕ್ಕೆ ಯಶಸ್ಸು ಒದಗಲಿ.. ದೇವತೆಗಳೊಂದಿಗಿನ ಹೋರಾಟದಲ್ಲಿ ವಿಜಯವಾಗಲಿ ಎಂದು ಆಶೀರ್ವದಿಸಿ ಕಳುಹಿಸುತ್ತಾರೆ. ತಂದೆಯ ನಿರ್ದೇಶನದಂತೆ ಸರೋವರದ ಬಳಿಗೆ ಬಂದ ಗುರುಡನಿಗೆ ತಮ್ಮ ಉಗ್ರ ಹೋರಾಟದಿಂದ ಪವಿತ್ರವಾದ ಸರೋವರದ ಜಲವನ್ನೇ ಕಲುಕುತ್ತಿರುವ ಗಜ ಕಚ್ಛಪರು ಕಾಣಿಸುತ್ತಾರೆ. ತನ್ನ ಒಂದು ಕಾಲಿನ ತೀಕ್ಷ್ಣವಾದ ಉಗುರಿನಿಂದ ಗಜನನ್ನೂ ಇನ್ನೊಂದು ಕಾಲಿನಿಂದ ಕಚ್ಛಪನನ್ನೂ ಕುಕ್ಕಿ ಮೇಲೆತ್ತಿಕೊಂಡು ಹಾರುತ್ತಾನೆ. ಹಾಗೆ ಅವರನ್ನು ಎತ್ತಿಕೊಂಡು ಗಗನ ಮಾರ್ಗದಲ್ಲಿ ಹೊರಟ ಗರುಡನಿಗೆ ಒಂದು ಕಡೆ ಕುಳಿತು ಅವರನ್ನು ತಿನ್ನಲು ಯೋಗ್ಯ ಸ್ಥಳ ಕಾಣಿಸಲಿಲ್ಲ..ಹಾರುತ್ತಾ ಸಾಗುವಾಗ ಸಾವಿರ ಯೋಜನ ವಿಸ್ತೀರ್ಣವುಳ್ಳ ಒಂದು ಆಲದ ಮರ ಕಾಣಿಸುತ್ತದೆ. ಆಗಸದಲ್ಲಿ ಸಾಗುತ್ತಿರುವ ಗರುಡನನ್ನು ಆ ಮರವೇ "ಅಯ್ಯಾ ಇದೋ ನನ್ನ ಕೊಂಬೆಗಳು ನೂರು ಯೋಜನ ವಿಸ್ತೀರ್ಣವುಳ್ಳದ್ದಾಗಿವೆ ಇಲ್ಲಿ ಕುಳಿತು ನೀನು ತಂದ ಆಹಾರವನ್ನು ತಿನ್ನಬಹುದು " ಎಂದು ಹೇಳುತ್ತದೆ. ಗರುಡನಿಗೂ ಅದು ಸರಿಯನಿಸಿ ಆ ಕೊಂಬೆಯ ಮೇಲೆ ಕುಳಿತುಕೊಂಡಾಗ ಬೃಹದಾಕಾರ ಹೊಂದಿದ ಆ ಕೊಂಬೆಯೇ ಮುರಿಯುತ್ತದೆ. ಇನ್ನೇನು ಅಲ್ಲಿಂದಲೂ ಮೇಲೆ ಹಾರಬೇಕೆನ್ನುವಾಗ ಮುರಿದು ಕೆಳಗೆ ಬೀಳುತ್ತಿರುವ ಕೊಂಬೆಯಲ್ಲಿ ಸೂಕ್ಷ್ಮ ರೂಪದಲ್ಲಿರುವ ಹಲವು ಋಷಿಗಳು ತಲೆಕೆಳಗಾಗಿ ಜೋತಾಡಿಕೊಂಡು ತಪಸ್ಸನ್ನಾಚರಿಸುತ್ತಿರುವುದು ಕಾಣಿಸುತ್ತದೆ. ಅಯ್ಯೋ ಅವರ ತಪಸ್ಸು ಭಂಗವಾಗಕೂಡದೆಂದು ತ್ವರಿತವಾಗಿ ಬೀಳುತ್ತಿರುವ ಕೊಂಬೆಯನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಮತ್ತೆ ಮೇಲೆ ಹಾರುತ್ತಾನೆ. (ಅಲ್ಲಿ ಆ ಸ್ಥಿತಿಯಲ್ಲಿ ತಪಸ್ಸನ್ನು ಮಾಡುತ್ತಿದ್ದವರು "ವಾಲಖಿಲ್ಯ " ಎಂಬ ಋಷಿಗಳು ವಿಷ್ಣು ಪುರಾಣದ ಪ್ರಕಾರ ಕಶ್ಯಪರಿಗೆ ಕೃತು ನಾಮಕಳಾದ ಮಡದಿಯಲ್ಲಿ ಹುಟ್ಟಿದವರು ಸಂಖ್ಯೆಯಲ್ಲಿ ಅರವತ್ತು ಸಾವಿರ... ಗರುಡನ ಹುಟ್ಟಿಗೂ ಈ ವಾಲಖಿಲ್ಯರಿಗೂ ಒಂದು ಸಂಭಂಧ ಇದೆ ಹಿಂದೊಮ್ಮೆ ಕಶ್ಯಪರು ಒಂದು ಯಜ್ಞ ಸಂಕಲ್ಪ ಮಾಡುತ್ತಾರೆ, ಅದಕ್ಕೆ ಬೇಕಾದ ಸಮಿಧೆಗಳನ್ನು ತರಲು ಪುತ್ರರಿಗೆ ಆದೇಶಿಸುತ್ತಾರೆ., ಇಂದ್ರನೂ.. ವಾಲಖಿಲ್ಯರೂ ಕಾಡಿನಿಂದ ಸಮಿಧೆಗಳನ್ನು ತರಲು ಮುಂದಾಗುತ್ತಾರೆ.. ದೃಡಕಾಯನಾದ ಪರಾಕ್ರಮಿಯಾದ ಇಂದ್ರನಿಗೆ ಅದು ಕಷ್ಟದ ಕಾರ್ಯವೇನೂ ಅಲ್ಲ ಆದರೆ... ಒಂದು ಹೆಬ್ಬೆರೆಳಿನ ಗಾತ್ರದಲ್ಲಿ ಅರ್ಧದಷ್ಟು ಶರೀರ ಗಾತ್ರವನ್ನು ಹೊಂದಿದ್ದ ವಾಲಖಿಲ್ಯರಿಗೆ ಅದು ಪ್ರಯಾಸದಾಯಕವಾದ ಕೆಲಸ.. ಒಂದು ಮುತ್ತುಗದ ದಂಡವನ್ನು ಎಲ್ಲರೂ ಸೇರಿ ಪ್ರಾಯಾಸದಿಂದ ಎತ್ತಿ ತರುವಾಗ ಮಾರ್ಗದಲ್ಲಿ ಒಂದು ಗೋವಿನ ಹೆಜ್ಜೆಯಲ್ಲಿ ತುಂಬಿದ ನೀರನ್ನು ದಾಟಲಾಗದೇ ನಿಂತಿರುತ್ತಾರೆ..ಅದೇ ಮಾರ್ಗದಲ್ಲಿ ಬಂದ ಇಂದ್ರನಿಗದು ಕಾಣಿಸುತ್ತದೆ. ಅವರ ಸ್ಥಿತಿಗೆ ಅಪಹಾಸ್ಯ ಮಾಡುತ್ತಾ ಅವರನ್ನು ದಾಟಿ ಹೋಗುತ್ತಾನೆ. ಇಂದ್ರನ ಕಾರ್ಯದಿಂದ ಕುಪಿತರಾದ ವಾಲಖಿಲ್ಯರು ಅವನ ಅಹಂಕಾರವನ್ನು ಇಳಿಸಲು ಇನ್ನೊಬ್ಬ ಇಂದ್ರನನ್ನು ಸೃಷ್ಠಿಸುವ ಸಂಕಲ್ಪ ಮಾಡಿ ಅಲ್ಲೇ ಯಜ್ಞಕ್ಕೆ ತೊಡಗುತ್ತಾರೆ. ಇದನ್ನು ತಿಳಿದು ಭಯಗೊಂಡ ಇಂದ್ರ ಕಶ್ಯಪರ ಮೊರೆ ಹೋಗುತ್ತಾನೆ. ಕಶ್ಯಪರು ವಾಲಖಿಲ್ಯರ ಬಳಿಬಂದು ತ್ರಿಮೂರ್ತಿಗಳ ಸಂಕಲ್ಪದಂತೆ ಇಂದ್ರನಾದವನಿಗೆ ಪ್ರತಿಯಾಗಿ ಇಂದ್ರ ಸೃಷ್ಠಿ ಸರಿಯಲ್ಲ ಎಂದು ಮನವೊಲಿಸುತ್ತಾರೆ... ಜೊತೆಗೆ ನಿಮ್ಮ ಸಂಕಲ್ಪವೂ ವ್ಯರ್ಥವಾಗಕೂಡದು ಹಾಗಾಗಿ ನಿಮ್ಮ ಸಂಕಲ್ಪದಂತೆ ಹುಟ್ಟಿದವ ವಿಹಗೇಂದ್ರನಾಗಲಿ ಎಂದು ಹೇಳುತ್ತಾರೆ. ತಂದೆಯ ಮಾತನ್ನು ಒಪ್ಪಿದ ವಾಲಖಿಲ್ಯರು ನಾವು ಮಾಡಿದ ಸಂಕಲ್ಪವೂ ಇನ್ನು ಮುಂದೆ ನಿಮ್ಮದೇ ಎಂದು ಹೇಳಿ ಅದನ್ನು ಈಡೇರಿಸುವ ಹೊಣೆಯನ್ನು ಕಶ್ಯಪರಿಗೇ ಬಿಡುತ್ತಾರೆ. ಹಾಗೆ ವಾಲಖಿಲ್ಯರ ಸಂಕಲ್ಪ ಶಕ್ತಿಯೂ ಕಶ್ಯಪರ ತಪಸ್ಸಿನ ಫಲವೂ ಸೇರಿ ಹುಟ್ಟಿದವ ಗರುಡ. ) ಮುರಿದುಬೀಳುತ್ತಿರುವ ಆಲದಮರದ ಕೊಂಬೆಯನ್ನು ಕೊಕ್ಕಿನಲ್ಲಿಯೂ.. ಗಜಕಚ್ಛಪರನ್ನು ಕಾಲಿನಲ್ಲಿಯೂ ಗರುಡ ಎತ್ತಿಕೊಂಡು ಸಾಗುತ್ತಿರುವಾಗ ತಪೋನಿರತರಾದ ವಾಲಖಿಲ್ಯರಿಗೆ ಎಚ್ಚರವಾಗುತ್ತದೆ. ಗುರುತರವಾದ ಭಾರವನ್ನು ಎತ್ತಿಕೊಂಡು ಸಾಗುತ್ತಿರುವ ಇವ ಅತ್ಯಂತ ಪರಾಕ್ರಮಿಯೇ ಸರಿ ಹಾಗಾಗಿ ಇವ "ಗರುಡ" ಎಂದು ಕರೆಯುತ್ತಾರೆ.🙏🙏
ಉಳಿದದ್ದು ಮುಂದಿನ ಭಾಗದಲ್ಲಿ
Thursday, June 5, 2025
ಗರುಡ ಜನ್ಮ
ಜನಮೇಜಯನ ಸರ್ಪಯಾಗಕ್ಕೆ ಕಾರಣವಾದ ಘಟನೆಗಳನ್ನು ಬರೆಯುವಾಗ ಅಕ್ಕತಂಗಿಯರಾದ ವಿನತೆ ಮತ್ತು ಕದ್ರೂ ಇವರಲ್ಲಿ ಏರ್ಪಟ್ಟ ಪಂದ್ಯ... ಕದ್ರೂವಿನ ಕುತಂತ್ರದಿಂದ ಸೋತು ಅವಳಿಗೇ ದಾಸಿಯಾದ ವಿನತೆಯ ಬಗ್ಗೆ ಹೇಳಿದ್ದೆ. ಪ್ರಬಲನಾಗಿ ಹುಟ್ಟಬೇಕಾಗಿದ್ದ ಒಂದು ಮಗು ವಿನತೆಯ ಅಸೂಯೆ ಮತ್ತು ಆತುರದ ಕಾರಣದಿಂದ ಹೆಳವನಾಗಿ ಹೋದ.. ಆದರೂ ದೈವ ನಿರ್ಣಯವೇ ಬೇರೆ ..ಹೆಳವನಾದ ವಿನತೆಯ ಹಿರಿಯ ಪುತ್ರ ಅರುಣನೆಂಬ ನಾಮದಿಂದ ಸೂರ್ಯನಾರಾಯಣನ ರಥದ ಸಾರಥಿಯಾದ. ಇಲ್ಲಿ ಅರುಣನು ಸೂರ್ಯರಥದ ಸಾರಥಿಯಾಗಲೂ ಒಂದು ಘಟನೆ ಕಾರಣವಾಗುತ್ತದೆ. ಸಮುದ್ರ ಮಂಥನದ ಕಾಲದಲ್ಲಿ ಉದ್ಭವಿಸಿದ ಅಮೃತವನ್ನು ವಿಷ್ಣು ಮೋಹಿನಿ ರೂಪದಿಂದ ದೇವತೆಗಳಿಗೆ ಹಂಚುವ ಸಂಧರ್ಭ.. ದೇವತೆಗಳ ಪಂಕ್ತಿಯಲ್ಲಿ ರಾಕ್ಷಸನೊಬ್ಬ ವಂಚನೆಯಿಂದ ಕುಳಿತು ಅಮೃತ ಕುಡಿದಿದ್ದನ್ನು ಸೂರ್ಯ ಚಂದ್ರರು ನೋಡುತ್ತಾರೆ,ಮತ್ತು ಮಹಾವಿಷ್ಣುವಿಗೆ ಸೂಚಿಸುತ್ತಾರೆ. ಮಹಾವಿಷ್ಣು ಕೂಡಲೇ ಸುದರ್ಶನ ಪ್ರಯೋಗದಿಂದ ಆತನ ತಲೆಯನ್ನು ಕತ್ತರಿಸುತ್ತಾನೆ. ಆದರೆ ಅದಾಗಲೇ ಅಮೃತ ಅವನ ದೇಹದಲ್ಲಿ ಸೇರಿಹೋಗಿದ್ದರಿಂದ ರುಂಡ ಮುಂಡಗಳು ಬೇರೆಯಾದರೂ ಬೇರೆ ಬೇರೆಯಾಗಿಯೇ ಉಳಿದುಕೊಂಡು ರಾಹು ಕೇತುಗಳೆಂಬ ಹೆಸರಿನಿಂದ ಉಳಿದುಕೊಂಡುಬಿಡುತ್ತಾರೆ. ಇದಕ್ಕೆ ಕಾರಣರಾದ ಸೂರ್ಯ ಚಂದ್ರರ ಬಗ್ಗೆ ದ್ವೇಶದಿಂದ ಆಗಾಗ ಅವರನ್ನು ಪೀಡಿಸತೊಡಗುತ್ತಾರೆ. ಹೀಗೆ ರಾಹುಕೇತುಗಳ ಪೀಡನೆಗೆ ಒಳಗಾದ ಸೂರ್ಯನಿಗೆ ಸಿಟ್ಟು ಬರುತ್ತದೆ ದೇವತೆಗಳ ಹಿತಕ್ಕಾಗಿ ತಾವು ಮಾಡಿದ ಕಾರ್ಯವಾದರೂ ತಮಗೆ ಸಂಕಷ್ಟ ಬಂದಾಗ ದೇವತೆಗಳು ಸಹಾಯಕ್ಕೆ ಬರಲಿಲ್ಲ ಹಾಗಿದ್ದರೆ ತನ್ನ ತೀಕ್ಷ್ಣವಾದ ಕಿರಣಗಳಿಂದ ಲೋಕವನ್ನೇ ನಾಶ ಮಾಡಿಬಿಡುತ್ತೇನೆ ಎಂದು ಬಿಸಿಯಾದ ಕಿರಣಗಳನ್ನು ಹೊರಸೂಸತೊಡಗಿದ. ಇದರಿಂದ ಲೋಕಗಳು ಬಸವಳಿದವು ದೇವತೆಗಳು ಚಿಂತಿತರಾದವರು ಬ್ರಹ್ಮದೇವರ ಬಳಿ ಓಡಿದರು. ಬ್ರಹ್ಮದೇವರು ಸೂರ್ಯದೇವನ ಕಿರಣದ ಉರಿಯನ್ನು ಹೀರಿ ಲೋಕವನ್ನು ಉಳಿಸಬೇಕಾದರೆ ಕಷ್ಯಪ ಮುನಿಯಿಂದ ವಿನತೆಯಲ್ಲಿ ಜನಿಸಿದ ಅರುಣನಿಗೆ ಮಾತ್ರ ಸಾಧ್ಯ ಎನ್ನುತ್ತಾನೆ. ಆಗ ದೇವತೆಗಳು ಅರುಣನನ್ನು ಪ್ರಾರ್ಥಿಸಿ ಸೂರ್ಯನ ರಥದ ಸಾರಥಿಯನ್ನಾಗಿ ಮಾಡುತ್ತಾರೆ. ಅರುಣನು ಸೂರ್ಯದೇವನ ಸುಡುವ ಕಿರಣಗಳನ್ನು ತಾನು ಹೀರಿಕೊಂಡು ಲೋಕಗಳನ್ನು ಸಂರಕ್ಷಿಸುತ್ತಾನೆ. ಹಾಗಾಗಿಯೇ ಕಿರಣೋದಯದ ಪೂರ್ವದಲ್ಲಿಯೇ ಅರುಣೋದಯ.. ಎಂದು ಹೇಳುವುದು ರೂಢಿ. ಇತ್ತ ಕದ್ರೂವಿನ ದಾಸ್ಯವನ್ನು ಅಂಗೀಕರಿಸಿದ ವಿನತೆ ದುಃಖದಿಂದ ಉಳಿದ ಒಂದು ಮೊಟ್ಟೆಯನ್ನು ನಿರ್ಲಕ್ಷಿಸಿಯೇಬಿಟ್ಟಳು. ಆದರೆ ಆ ನಿಯಾಮಕನ ನಿರ್ಣಯ ಮೀರಲು ಯಾರಿಗೆ ಸಾಧ್ಯ..? ಉಳಿದ ಆ ಒಂದು ಮೊಟ್ಟೆ ಸುದೀರ್ಘ ಒಂದು ಸಾವಿರ ವರ್ಷಗಳ ಕಾಲ ಬೆಳವಣಿಗೆಯನ್ನು ಹೊಂದಿತು. ಕಾಲ ಪರಿಪಕ್ವವಾದಾಗ ತಾನಾಗಿಯೇ ತನ್ನ ಹೊರ ಕವಚವನ್ನು ಬೇಧಿಸಿ ಹೊರ ಬಂದಿತು. ವಿಸ್ತಾರಾದ ರೆಕ್ಕೆಗಳನ್ನು ಹೊಂದಿ..ಮೊನಚಾದ ಕೊಕ್ಕನ್ನು ಹೊಂದಿ ಸೂಕ್ಷ್ಮವಾದ ಕೆಂಪಡರಿದ ಕಣ್ಣುಗಳನ್ನು ಹೊಂದಿದ ಪಕ್ಷಿಯ ಆಕಾರ.. ಒಮ್ಮೆಲೇ ದೇವತೆಗಳು ಕೂಡ ಬೆದರಿದರು. ಹಾಗೆ ಹುಟ್ಟಿದವನೇ ಮಹಾಬಲಿಷ್ಠನಾದ ಗರುಡ.... ಅವನ ದೇಹದಿಂದ ಹೊರಸೂಸುವ ತೇಜಸ್ಸು ಅಗ್ನಿಯ ಜ್ವಾಲೆಯನ್ನೂ ಮೀರಿಸುತಿತ್ತು ಇದನ್ನು ನೋಡಿದ ದೇವತೆಗಳು ಅಗ್ನಿಯೇ ಲೋಕಗಳನ್ನು ದಹಿಸಲು ಇಂತಹ ರೂಪವನ್ನು ಹೊಂದಿದ್ದಾನೆಂದು ಭಾವಿಸಿ ಅಗ್ನಿಯ ಸ್ತುತಿ ಮಾಡಿದರು. ಪ್ರತ್ಯಕ್ಷನಾದ ಅಗ್ನಿದೇವನು ಆ ರೂಪದಲ್ಲಿ ಕಾಣಿಸುತ್ತಿರುವುದು ವಿನತೆ ಪುತ್ರನಾದ ಗರುಡ ಎನ್ನುತ್ತಾನೆ. ಆಗ ದೇವತೆಗಳು ಗರುಡನ ಬಳಿ ಬಂದು ಘೋರ ರೂಪವನ್ನು ಮರೆಯಾಗಿಸಿ ಶಾಂತನಾಗಲು ಪ್ರಾರ್ಥಿಸುತ್ತಾರೆ. ದೇವತೆಗಳು ಹಾಗೆ ಹೇಳಿದಾಗ ಗರುಡ ಒಮ್ಮೆ ತನ್ನ ದೇಹವನ್ನೇ ನೋಡಿಕೊಳ್ಳುತ್ತಾನೆ ಅವರ ಮಾತು ಸರಿಯೆನಿಸಿ ಶಾಂತನಾಗುತ್ತಾನೆ. ಇತ್ತ ವಿನತೆಗೆ ತನ್ನ ಇನ್ನೊಂದು ಮೊಟ್ಟೆಗೆ ಒಂದು ಸಾವಿರ ವರ್ಷಗಳಾಗಿದ್ದು ಅರಿವಿಗೆ ಬರುತ್ತದೆ. ಹಾಗಾಗಿಯೇ ಅದನ್ನು ಇರಿಸಿದ ಸ್ಥಳಕ್ಕೆ ಬರುತ್ತಾಳೆ, ಅಂಡ ಒಡೆದುಹೋಗಿರುತ್ತದೆ. ಎದುರಿಗೆ ಬೃಹದಾಕಾರದ ಪಕ್ಷಿ ಕಾಣಿಸುತ್ತದೆ. ಹೆದರಿಕೆಯಿಂದಲೇ ನೀನಾರು ಎಂದು ಗರುಡನಲ್ಲಿ ಕೇಳುತ್ತಾಳೆ. ಅವನು ಅದೇ ಮೊಟ್ಟೆಯಿಂದ ಉದಿಸಿದವ ತಾನೆಂದು ಹೇಳಿ ತಾಯಿಗೆ ನಮಸ್ಕರಿಸುತ್ತಾನೆ. ವಿನತೆಗೆ ಪ್ರಬಲನಾದ ಮಗನನ್ನು ಪಡೆದೆ ಎಂಬ ಸಂತೋಷವಾಗುತ್ತದೆ. ಆದರೂ ಕದ್ರೂವಿನ ದಾಸ್ಯ ನೆನಪಾಗಿ ಗರುಡನ ಹೆಗಲೇರಿಯೆ ಕದ್ರೂವಿನ ಬಳಿಗೆ ತೆರಳುತ್ತಾಳೆ. ಗರುಡನೂ ದೊಡ್ಡಮ್ಮನಿಗೆ ನಮಸ್ಕರಿಸುತ್ತಾನೆ. ವಿನತೆ ಆತ ತನ್ನ ಮಗನೆಂದು ಹೇಳಿದಾಗ "ಎಷ್ಟಾದರೂ ದಾಸಿಯ ಮಗ ದೂರನಿಲ್ಲು" ಎಂದು ಹಳಿಯುತ್ತಾಳೆ.( ವ್ಯಾಸ ಮಹಾಭಾರತದಲ್ಲಿ ಕದ್ರೂ ವಿನತೆಯ ಅಕ್ಕ ಎಂದೂ ಕವಿ ಪರಮದೇವನ ತುರಂಗ ಭಾರತದಲ್ಲಿ ಆಕೆ ವಿನತೆಯ ತಂಗಿ ಎಂಬುದಾಗಿಯೂ ಇದೆ.) ಹೀಗಿರುವಾಗ ಒಂದು ದಿನ ಕದ್ರೂ ವಿನತೆಯನ್ನು ಕರೆದು "ಸಮುದ್ರ ಮಧ್ಯದಲ್ಲಿ ವಿಶ್ವಕರ್ಮನಿಂದ ನಿರ್ಮಿತವಾದ ವಿಶಿಷ್ಟವಾದ ರಮಣಕವೆಂಬ ದ್ವೀಪವಿದೆಯಂತೆ, ಅದನ್ನು ನೋಡಬೇಕಾಗಿದೆ ನೀನು ನನ್ನನ್ನು ಹೊತ್ತುಕೊಂಡು ಆ ದ್ವೀಪಕ್ಕೆ ಹೋಗು ನನ್ನ ಮಕ್ಕಳಾದ ಸರ್ಪಗಳು ನಿನ್ನ ಮಗನಾದ ಗರುಡನ ಬೆನ್ನೇರಲಿ" ಎಂದು ಆಜ್ಞಾಪಿಸುತ್ತಾಳೆ. ವಿನತೆ ಹಾಗೆಯೇ ಕದ್ರೂವನ್ನು ಹೊತ್ತುಕೊಳ್ಳುತ್ತಾಳೆ. ನಾಗಗಳು ಗರುಡನ ಬೆನ್ನೇರುತ್ತಾರೆ. ಗಗನ ಮಾರ್ಗದಲ್ಲಿ ಸಾಗುವಾಗ ಗರುಡ ಸೂರ್ಯನಿಗೆ ಸಮೀಪಿಸುತ್ತಾನೆ. ಸೂರ್ಯನ ಶಾಖದಿಂದ ಅವನ ಬೆನ್ನೇರಿದ್ದ ಸರ್ಪಗಳು ಪ್ರಜ್ಞಾಹೀನರಾಗಿ ಬೀಳತೊಡಗುತ್ತವೆ. ದುಃಖಿತಳಾದ ಕದ್ರೂ ಇಂದ್ರನನ್ನು ಪ್ರಾರ್ಥಿಸುತ್ತಾಳೆ. ಪ್ರಸನ್ನನಾದ ಇಂದ್ರ ಮಳೆ ಸುರಿಸುತ್ತಾನೆ, ಮಳೆಯಿಂದ ತಂಪಾಗಿ ಇಳೆಯಲ್ಲಿ ಬಿದ್ದ ಸರ್ಪಗಳು ಮತ್ತೆ ಚೇತನ ಹೊಂದುತ್ತವೆ. ಪುನಃ ರಮಣಕ ದ್ವೀಪದೆಡೆಗೆ ಪ್ರಯಾಣಿಸಿ ಅತಿ ಮನೋಹರವಾದ ಆ ಪ್ರದೇಶವನ್ನು ಎಲ್ಲರೂ ತಲುಪುತ್ತಾರೆ. ಅಲ್ಲಿಯ ಸೌಂಧರ್ಯವನ್ನು ನೋಡುತ್ತಾ ಕದ್ರೂ ಮತ್ತು ಆಕೆಯ ಪುತ್ರರಾದ ಸರ್ಪಗಳು ವಿಹರಿಸತೊಡಗುತ್ತಾರೆ. ಕೆಲವು ಕಾಲ ಕಳೆದ ಮೇಲೆ, ಕದ್ರೂ ಮತ್ತು ಆಕೆಯ ಪುತ್ರರು ಬೇರೊಂದು ದ್ವೀಪಕ್ಕೆ ಕರೆದುಕೊಂಡು ಹೋಗಲು ಗರುಡನಿಗೆ ಹೇಳುತ್ತಾರೆ. ಆಗ ಗರುಡನಿಗೆ ಅವರು ಹೇಳುವ ಶೈಲಿಯಲ್ಲಿ ತಮ್ಮದು ದಾಸ್ಯದ ಬದುಕು ಎಂಬ ಅರಿವಾಗುತ್ತದೆ. ತಾಯಿಯನ್ನು ಕರೆದು "ಅಮ್ಮಾ ಈ ದುಃಸ್ತಿತಿಗೆ ಕಾರಣವೇನು" ಎಂದು ಕೇಳುತ್ತಾನೆ. ವಿನತೆ ದುಃಖದಿಂದ ಹಿಂದೆ ನಡೆದ ಘಟನೆಯನ್ನು ಹೇಳುತ್ತಾಳೆ. ತಾಯಿಯ ದಾಸ್ಯ ನಿವಾರಣೆಗೆ ಬದಲಾಗಿ ಏನು ತಂದುಕೊಡಲಿ ಎಂದು ಕದ್ರೂವಿನಲ್ಲಿ ಕೇಳಿದಾಗ ಮಕ್ಕಳಲ್ಲಿಯೂ ವಿಚಾರಮಾಡಿ ಹೇಗಿದ್ದರೂ ಅಸಾಧ್ಯವಾದುದನ್ನೇ ಕೇಳಬೇಕೆಂದು "ತಮಗೆ ಅಮೃತವನ್ನು ತಂದುಕೊಟ್ಟರೆ ವಿನತೆಯ ದಾಸ್ಯ ನಿವಾರಣೆ " ಎಂದು ಹೇಳುತ್ತಾಳೆ...🙏🙏
ಗರುಡನ ಹಸಿವಿನ ನಿವಾರಣೆ... ಅವೃತಾಪಹರಣ ಮುಂದಿನ ಭಾಗ..
.
Subscribe to:
Comments (Atom)