Tuesday, June 17, 2025
ತ್ರಿಶಂಕು ೨
ಆತ್ಮಹತ್ಯೆಗೆ ಮನ ಮಾಡಿದ್ದ ತ್ರಿಶಂಕು ಶ್ರೀದೇವಿಯ ದರ್ಶನ ಕಾರುಣ್ಯದಿಂದ ತನ್ನ ನಿರ್ಧಾರದಿಂದ ಹಿಂದೆ ಸರಿದು ಮುಂದೆ ಒದಗಿ ಬರುವ ಶುಭದಿನಗಳ ನಿರೀಕ್ಷೆಯಲ್ಲಿಯೇ ಇರುತ್ತಾನೆ. ಇತ್ತ ನಾರದ ಮಹರ್ಷಿಗಳು ರಾಜ್ಯದಿಂದ ಪರಿತ್ಯಕ್ತನಾದ ಸತ್ಯವ್ರತ (ತ್ರಿಶಂಕು) ದೇವಿಯನ್ನು ಸಾಕ್ಷಾತ್ಕರಿಸಿಕೊಂಡ ಘಟನೆಯನ್ನು ತ್ರಿಬಂಧನನಿಗೆ ಹೇಳುತ್ತಾರೆ. ನಡೆದ ಘಟನಾವಳಿಗಳನ್ನು ನಾರದರ ಮುಖೇನ ಕೇಳಿದ ಅರಸ ತ್ರಿಬಂಧನನಿಗೆ ದುಃಖವಾಗುತ್ತದೆ. ತನ್ನ ಮಗ ಮಾಡಿದ ತಪ್ಪಿಗೆ ತಾನು ದೊಡ್ದ ಶಿಕ್ಷೆಯನ್ನೇ ಕೊಟ್ಟುಬಿಟ್ಟೆನೆಂದು ಮರುಗಿದ ಅರಸ ಮಂತ್ರಿಗಳನ್ನು ಕರೆದು ನಿರ್ಗತಿಕನಾಗಿ ಅಲೆಯುತ್ತಿರುವ ಮಗ ತ್ರಿಶಂಕುವನ್ನು ಅರಸಿ ಕರೆದುಕೊಂಡು ಬರಲು ಸೂಚಿಸುತ್ತಾನೆ. ರಾಜನ ಆಣತಿಯಂತೆ ಮಂತ್ರಿಗಳು ಹುಡುಕುತ್ತಾ ಬಂದು ನೆಲೆ ಇಲ್ಲದೆ ಅಂಡಲೆಯುತ್ತಿದ್ದ ತ್ರಿಶಂಕುವನ್ನು ಕಾಣುತ್ತಾರೆ. ಅರಸನ ಆಜ್ಞೆಯನ್ನು ತಿಳಿಸಿ ರಾಜೋಚಿತವಾದ ಗೌರವ ಸಂಮಾನಗಳೊಂದಿಗೆ ನಾಡಿಗೆ ಕರೆದುಕೊಂಡು ಬರುತ್ತಾರೆ. ತಂದೆ ತ್ರಿಬಂದನ ಹಿಂದೆ ನಡೆದ ಘಟನೆಯನ್ನೆಲ್ಲಾ ಮರೆತು ಸಂತೋಷದಿಂದಲೇ ಮಗನನ್ನು ಬರಮಾಡಿಕೊಂಡು ಅತ್ಯಂತ ಸಂಭ್ರಮದಿಂದ ಮಗನಿಗೆ ಸಾಮಾಜ್ಯದ ಪಟ್ಟ ಕಟ್ಟಿ ಇನ್ನು ಉಳಿದ ಆಯುಷ್ಯವನ್ನು ವಾನಪ್ರಸ್ಥದಲ್ಲಿ ಕಳೆಯಲು ತೆರಳುತ್ತಾನೆ.(ಹರಿವಂಶದ ಪ್ರಕಾರ ಬರಗಾಲ ಪೀಡಿತವಾದ ಸಾಮ್ರಾಜ್ಯದಲ್ಲಿ ಮಳೆಯನ್ನು ತರಿಸುವುದು ಮತ್ತು ತ್ರಿಶಂಕುವಿಗೆ ಪಟ್ಟಾಭಿಷೇಕವನ್ನು ತನ್ನ ಹೆಂಡತಿ.. ಮಕ್ಕಳನ್ನು ರಕ್ಷಿಸಿದ ಕಾರಣದಿಂದ ವಿಶ್ವಾಮಿತ್ರರೇ ಮಾಡುತ್ತಾರೆ. ) ತ್ರಿಶಂಕು ಕೂಡ ತನ್ನ ಜೀವನದಲ್ಲಿ ಗತಿಸಿದ ಸಂಕಷ್ಟದ ಸಂಧರ್ಭಗಳನ್ನು ಮರೆತು ಜನಾನುರಾಗಿಯಾಗಿ, ಪರಮ ಧಾರ್ಮಿಕನೆನಿಸಿಕೊಂಡು ಬಹುಕಾಲ ರಾಜ್ಯಭಾರ ಮಾಡುತ್ತಾನೆ. ಕೈಕಯ ವಂಶಸ್ಥಳಾದ "ಸತ್ಯರಥಾ " ಎಂಬಾಕೆಯೊಂದಿಗೆ ಸಾಂಸಾರಿಕ ಜೀವನವೂ ಸುಖದಿಂದಲೇ ಕೂಡಿರುತ್ತ ಹುಟ್ಟಿದ ಮಗುವಿಗೆ "ಹರಿಶ್ಚಂದ್ರ'' ಎಂದು ನಾಮಕರಣ ಮಾಡಿ ಬೆಳೆಸುತ್ತಾನೆ. ರಾಜ್ಯದ... ಪ್ರಜೆಗಳ ಬಳಿತಿಗಾಗಿ ನೂರು ಯಜ್ಞಗಳನ್ನು ಮಾಡುತ್ತಾನೆ. (ರೂಡಿಯಲ್ಲಿ ಅವನು ಯಜ್ಞ ಮಾಡುವುದೆಲ್ಲವೂ ಸ್ವರ್ಗ ಕಾಮನೆಯಿಂದಲೇ ಎಂದು ಹೇಳುವದನ್ನು ಕೇಳಿದ್ದೇವೆ ಆದರೆ ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ಅವನು ನೂರು ಯಾಗಗಳನ್ನು ಮಾಡುವುದು ಸ್ಪರ್ಗಾಪೇಕ್ಷೆಗಿಂತಲೂ ಮೊದಲು) ರಾಜ್ಯದ ಪ್ರಜೆಗಳು ಸಂತೋಷದಿಂದಲೂ ಇರುತ್ತಾ... ಅರಸನ ಭಂಡಾರವೂ ತುಂಬಿ ತುಳುಕುತ್ತದೆ. ಇಂತಹಾ ಸಂದರ್ಭದಲ್ಲಿ ತ್ರಿಶಂಕುವಿನ ಮನಸ್ಸಿನಲ್ಲಿ ಸಶರೀರವಾಗಿಯೇ ಸ್ವರ್ಗವನ್ನು ಸೇರಿ ಸುಖವನ್ನು ಅನುಭವಿಸಬೇಕೆಂಬ ಅಪೇಕ್ಷೆ ಹುಟ್ಟಿಬಿಡುತ್ತದೆ. ಹಿಂದೆ ತ್ರಿಶಂಕು - ವಶಿಷ್ಟರ ಮದ್ಯೆ ಏರ್ಪಟ್ಟಿದ್ದ ಅಂತರ ಈಗ ಇರಲಿಲ್ಲ, ವಶಿಷ್ಟರೂ ಕುಲಪುರೋಹಿತರಾಗಿ ಕಾಲಕಾಲಕ್ಕೆ ಅರಸನಿಗೆ ಕೊಡಬೇಕಾದ ಸಲಹೆ ಸೂಚನೆಗಳನ್ನು ಕೊಟ್ಟು ತಮ್ಮದಾದ ಹೊಣೆಯನ್ನು ನಿರ್ವಹಿಸುತ್ತಲೇ ಇದ್ದರು. ಲೋಕ ಕಲ್ಯಾಣಕ್ಕಾಗಿ ಅರಸ ಒಂದಾದ ಮೇಲೆ ಒಂದರಂತೆ ನೂರು ಯಾಗಗಳ ಸಂಕಲ್ಪ ಮಾಡಿದರೂ ಎಲ್ಲವನ್ನು ತಮ್ಮ ಪೌರೋಹಿತ್ಯದಲ್ಲಿ ಮಾಡಿ ಮುಗಿಸಿಕೊಟ್ಟಿದ್ದರು.
ಈಗ ಸಶರೀರ ಸ್ವರ್ಗಾರೋಹಣಕ್ಕೆ ಬೇಕಾಗಿ ಮತ್ತೊಂದು ಯಜ್ಞ ಸಂಕಲ್ಪ ಮಾಡಿಸಲು ವಶಿಷ್ಟರಲ್ಲಿ ಕೇಳಿಕೊಳ್ಳುತ್ತಾನೆ. ಆಗ ಗುರು ವಶಿಷ್ಟರು ಅದು "ಅಶಕ್ಯ " ಎಂದು ನಿರಾಕರಿಸಿ ಹೊರಟು ಹೋಗುತ್ತಾರೆ. ಕುಲಗುರುಗಳೇ ನಿರಾಕರಿಸಿದರೂ ತ್ರಿಶಂಕುವಿನ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದ ಸ್ವರ್ಗವಾಂಛೆ ನಾಶವಾಗಲಿಲ್ಲ. ಹಾಗಾಗಿಯೇ ಅರಣ್ಯದಲ್ಲಿ ಆಶ್ರಮ ನಿರ್ಮಿಸಿಕೊಂಡು ತಪಸ್ಸು.. ಯಜ್ಞಾದಿಗಳಲ್ಲಿ ತೊಡಗಿದ್ದ ವಶಿಷ್ಟ ಪುತ್ರರಲ್ಲಿ ಹೋಗಿ ತನ್ನ ಮನದಿಂಗಿತ ಹೇಳಿಕೊಳ್ಳುತ್ತಾನೆ. ವಶಿಷ್ಟರು ಯಜ್ಞ ಮಾಡಿಸಲು ತಿರಸ್ಕರಿಸಿದ ವಿಷಯವನ್ನು ಹೇಳುವಾಗ ಸಹಜವಾಗಿಯೇ ಇವನ ಧ್ವನಿ ಗಡುಸಾಯಿತು. ಇದನ್ನು ಗ್ರಹಿಸಿದ ವಶಿಷ್ಟ ಪುತ್ರರು ತಂದೆ ನಿರಾಕರಿಸಿದ ವಿಷಯದಲ್ಲಿ ತಮ್ಮ ಪ್ರವೇಶ ಇಲ್ಲವೆಂದೂ ವಶಿಷ್ಟರು "ಅಶಕ್ಯ "ಎಂದಾಡಿದರೆ ಅಂತಹ ಕಾರ್ಯವನ್ನು ಮಾಡುವುದು ಸಾಧುವಲ್ಲವೆಂದೂ ಹೇಳುತ್ತಾರೆ.
ತ್ರಿಶಂಕುವಿಗೆ ಸಹನೆ ಮೀರುತ್ತದೆ. ವಶಿಷ್ಟರ ಬಗ್ಗೆ ಇದ್ದ ಅಸಹನೆ ವಶಿಷ್ಟ ಪುತ್ರರ ಸಮ್ಮಖದಲ್ಲಿ ಹೊರಬೀಳುತ್ತದೆ. "ನಿಮ್ಮ ತಂದೆಯವರೂ ಆಗದು ಎಂದರು.. ನೀವೂ ನಿರಾಕರಿಸಿದಿರಿ ಆದರೆ ನನ್ನ ಸಂಕಲ್ಪವನ್ನು ಬಿಡಲಾರೆ.. ಅದನ್ನು ನೆರವೇರಿಸಿಕೊಳ್ಳಲು ಬೇರೆಯಾರಾದರೂ ಪ್ರಾಜ್ಞರಾದ ಬ್ರಾಹ್ಮಣರನ್ನು ಅರಸುತ್ತೇನೆ ಇದು ನಿಶ್ಚಯ" ಎಂದು ಆಡುತ್ತಾನೆ. ಈ ಮಾತು ಶಕ್ತಿ, ಮಹೋದಯಾದಿ ವಶಿಷ್ಟ ಪುತ್ರರಿಗೂ ಕೋಪ ತರಿಸುತ್ತದೆ. ಕೋಪವೆಂಬುದು ಶಾಪವಾಕ್ಕವಾಗಿ ಹೊರಬೀಳುತ್ತದೆ. "ಕುಲಗುರುಗಳನ್ನು ವಿರೋಧಿಸಿದೆ.. ಗುರುಪುತ್ರರಾದ ನಮ್ಮನ್ನೂ ವಿರೋಧಿಸಿ ಮತ್ತೋರ್ವನನ್ನು ಅರಸುವ ಮಾತಾಡಿದೆ ಎಂತಾದರೆ ನೀನು ಚಾಂಡಾಲನಾಗು" ಎಂದು ಶಪಿಸಿ ಬಿಡುತ್ತಾರೆ. ಶಾಪವಾಕ್ಕವನ್ನು ಕೇಳಿ ತ್ರಿಶಂಕುವಿಗೆ ಬಹಳ ದುಃಖವಾಗುತ್ತದೆ. ಆಸೆ ನಿರಾಸೆಯಾಯಿತು. ಮರಳಿ ನಗರಕ್ಕೆ ಹೋಗುವ ಮನಸ್ಸೂ ಬರಲಿಲ್ಲ. ತನ್ನನ್ನು ಅನುಸರಿಸಿ ಬಂದಿದ್ದ ಸೀಮಿತವಾದ ಪರಿವಾರಕ್ಕೆ ಮಗನಾದ ಹರಿಶ್ಚಂದ್ರನಿಗೆ ಸಿಂಹಾಸನವೇರಿ ರಾಜ್ಯಾಡಳಿತ ನಡೆಸುವ ಸಂದೇಶ ಕೊಟ್ಟು ಕಳುಹಿಸಿಕೊಡುತ್ತಾನೆ. ಸಂಜೆಯಾಗುತ್ತಲೇ ವಶಿಷ್ಟ ಪುತ್ರರ ಶಾಪದ ಪರಿಣಾಮ ತಿಳಿಯತೊಡಗುತ್ತದೆ. ತ್ರಿಶಂಕುವಿನ ಶುಭ್ರವಾದ ದೇಹ ಬಣ್ಣ ಕಳೆದುಕೊಂಡು ಕಪ್ಪಾಗತೊಡಗುತ್ತದೆ, ದೇಹವನ್ನು ಅಲಂಕರಿಸಿದ್ದ ಬಂಗಾರದ ಆಭರಣಗಳು ತಮ್ಮ ಹೊಳಪನ್ನು ಕಳೆದುಕೊಂಡು ಕಬ್ಬಿಣದ ಆಭರಣಗಳಾಗುತ್ತವೆ. ತಲೆಯ ಮೇಲೆ ಧರಿಸಿದ್ದ ಕಿರೀಟವೂ ಕಬ್ಬಿಣದ್ದಾಗುತ್ತದೆ. ಮುಖದಲ್ಲಿದ್ದ ಕ್ಷತ್ರಿಯರಾಜೋಚಿತವಾದ ಕಳೆ ಮಾಯವಾಗಿ ಚಾಂಡಾಲ ಕುರುಹುಗಳು ಆವರಿಸಿಕೊಳ್ಳುತ್ತವೆ. ತ್ರಿಶಂಕು ದುಃಖದಿಂದ ಕುಸಿದು ಕೂರುತ್ತಾನೆ. ಮತ್ತೆ ಸಾವರಿಸಿಕೊಂಡು ಮೇಲೆದ್ದು, ತಿರುಗತೊಡಗುತ್ತಾನೆ. ತಿರುಗುತ್ತಾ ತಿರುಗುತ್ತಾ ಮುಂದೆ ವಿಶ್ವಾಮಿತ್ರರ ಆಶ್ರಮವನ್ನು ತಲುಪಿದ, ವಿಶ್ವಾಮಿತ್ರರು ಇವನ ಪರಿಚಯ ಕೇಳಿದ ಕೂಡಲೇ ಬರಗಾಲದ ದಿನಗಳಲ್ಲಿ ತನ್ನ ಹೆಂಡತಿ ಮಕ್ಕಳನ್ನು ರಕ್ಷಿಸಿದವ ಇವನೇ ಎಂಬುದು ತಿಳಿಯುತ್ತದೆ. ಕೂಡಲೇ ತ್ರಿಶಂಕುವಿನ ಆಶಯ ಮತ್ತು ಅದನ್ನು ನಡೆಸಿಕೊಡದ ವಶಿಷ್ಟ ಮತ್ತು ವಾಶಿಷ್ಟರ ಬಗ್ಗೆ ಕೋಪದಿಂದಲೇ ನಿಂದಿಸಿ ತಾನು ಅವನಿಗೆ ಸಶರೀರಿಯಾಗಿ ಸ್ವರ್ಗವನ್ನೇರುವ ಮಾರ್ಗವನ್ನು ಕಲ್ಪಿಸುವುದಾಗಿ ಮಾತು ಕೊಡುತ್ತಾರೆ. "ನೀನು ನನ್ನನ್ನು ಬಂದು ಸೇರಿದೆ ಎಂದಾದರೆ ಸ್ವರ್ಗ ಸಿಕ್ಕಿತು ಎಂದೇ ತಿಳಿ" ಎಂದು ಆಡುತ್ತಾರೆ. ತ್ರಿಶಂಕುವಿಗೆ ಧೈರ್ಯದ ಮಾತುಗಳನ್ನು ಹೇಳಿ ಕೂಡಲೇ ತಮ್ಮ ಶಿಷ್ಯರಿಗೆ ತಾವು ತ್ರಿಶಂಕುವನ್ನು ಸ್ಪರ್ಗಕ್ಕೆ ಏರಿಸಲು ಮಾಡಬೇಕಾಗುವ ಯಜ್ಞದ ಬಗ್ಗೆ ಹೇಳಿ ಅದಕ್ಕೆ ಬೇಕಾದ ಸಂಭಾರಗಳನ್ನು ಸಂಗ್ರಹಿಸಲು ಆಜ್ಞಾಪಿಸುತ್ತಾರೆ, ಇನ್ನೂ ಕೆಲವು ಶಿಷ್ಯರನ್ನು ಕರೆದು ಎಲ್ಲಾ ಕಡೆಯಲ್ಲಿರುವ ಖುಷಿ ಮುನಿಗಳನ್ನು ಆಮಂತ್ರಿಸುವಂತೆಯೂ, ಆಮಂತ್ರಣ ಪಡೆದವರು ಈ ಯಜ್ಞದ ಬಗ್ಗೆ ಏನಾದರೂ ಆಡಿದರೆ ಯಾವ ಮುಚ್ಚುಮರೆಯಿಲ್ಲದೆ ತನಗೆ ವರದಿ ಒಪ್ಪಿಸಬೇಕೆಂದೂ ಹೇಳಿ ಕಳುಹಿಸುತ್ತಾರೆ. ವಿಶ್ವಾಮಿತ್ರರು ಆಜ್ಞಾಪಿಸಿದಂತೆಯೇ ಶಿಷ್ಯರು ಎಲ್ಲೆಡೆ ಸಂಚರಿಸಿ ಋಷಿ ಮುನಿಗಳನ್ನು ಯಜ್ಞಕ್ಕೆ ಆಮಂತ್ರಿಸಿ ಬರುತ್ತಾರೆ. ಕೆಲವರಿಗೆ ಬರಲು ಮನಸ್ಸಿಲ್ಲದಿದ್ದರೂ ಹೋಗದೇ ಉಳಿದರೆ ವಿಶ್ವಾಮಿತ್ರ ಕೋಪಿಸಿಕೊಳ್ಳುತ್ತಾನೆ ಎಂದುಕೊಂಡು ಯಾಗ ನಡೆಯುವ ಸ್ಥಳಕ್ಕೆ ಒಂದು ಸೇರತೊಡಗಿದರು. ಆಮಂತ್ರಣ ಕೊಟ್ಟು ಬಂದ ಶಿಷ್ಯರಲ್ಲಿ ಯಾರಾದರೂ ತನ್ನ ಕಾರ್ಯಕ್ಕೆ ವಿರೋಧವಾಗಿ ಮಾತಾಡಿದರೇ ಎಂದು ಕೇಳಿದಾಗ ವಶಿಷ್ಟ ಪುತ್ರರು ಆಡಿದ ಮಾತುಗಳನ್ನು ಹೇಳುತ್ತಾರೆ.
"ಕ್ಷತ್ರಿಯೋ ಯಾಜಕೋ ಯಸ್ಯ ಚಣ್ಡಾಲಸ್ಯ ವಿಶೇಷತ: |
ಕಥಂ ಸದಸಿ ಭೋಕ್ತಾರೋ ಹವಿಸ್ತಸ್ಯ ಸುರರ್ಷಯ ll"
ಯಾಗ ಮಾಡುವವ ಚಾಂಡಾಲ.. ಮಾಡಿಸುವವ ಕ್ಷತ್ರಿಯ ಇಂತಹ ಯಜ್ಞದ ಹವಿಸ್ಸನ್ನು ದೇವತೆಗಳು ಹೇಗೆ ಸ್ವೀಕರಿಸುತ್ತಾರೆ.... ಋಷಿಮುನಿಗಳು ಯಜ್ಞ ಶೇಷವನ್ನು ಹೇಗೆ ಸ್ವೀಕರಿಸುತ್ತಾರೆ.... ಇದಕ್ಕೆ ಸೂಕ್ತವಾದ ಫಲ ಎಂದೂ ದೊರಕದು ಎಂದು ಶಕ್ತಿ ಮಹೋದಯಾದಿಗಳು ಆಡಿಕೊಂಡರು.... ಈ ಮಾತನ್ನು ಕೇಳಿದ ವಿಶ್ವಾಮಿತ್ರರು ಕೋಪೋದ್ರೇಕದಿಂದ " ದುರಾತ್ಮರಾದ ವಶಿಷ್ಟ ಶಿಷ್ಯರು ನಾನು ಮಾಡುವ ಈ ಯಾಗದ ಬಗ್ಗೆ ಇಂತಹ ಕೀಳು ಮಾತಗಳನ್ನಾಡಿದರು ಎಂದಾದರೆ ಅವರಿಗೆ ಇನ್ನು ಬದುಕುವ ಅವಕಾಶವೇ ಇಲ್ಲ ಅವರು ಈ ಕ್ಷಣವೇ ಕಾಲಪಾಶದಿಂದ ಸೆಳೆಯಲ್ಪಡಲಿ.. ಮುಂದೆ ಅವರು ಹುಟ್ಟುವ ಏಳುನೂರು ಜನ್ಮಗಳಲ್ಲಿ ಸತ್ತಪ್ರಾಣಿಯ ಮಾಂಸವನ್ನೂ ನಾಯಿಗಳ ಮಾಂಸವನ್ನೂ ತಿನ್ನುವ ಕುಲದಲ್ಲಿ ಜನಿಸಲಿ ಅವರು ಲೋಕದಲ್ಲಿ "ಮುಷ್ಟಿಕ"ರೆಂಬ ಹೆಸರಿನಿಂದ ಕರೆಯಲ್ಪಡಲಿ " ಹೀಗೆ ಘೋರವಾದ ಶಾಪವನ್ನು ಕೊಟ್ಟು ತ್ರಿಶಂಕುವಿಗೆ ಯಾಗವನ್ನು ಮಾಡಿಸಲು ಮುಂದಾಗುತ್ತಾರೆ.
ಬಹಳ ದಿನಗಳು ನಡೆದ ಯಜ್ಞದಲ್ಲಿ ಮತ್ತೆ ಮತ್ತೆ ಕರೆದರೂ ದೇವತೆಗಳು ಹವಿರ್ಭಾಗ ಸ್ವೀಕರಿಸಲು ಬರಲಿಲ್ಲ. ಕೃದ್ಧರಾದ ವಿಶ್ವಾಮಿತ್ರರು ತಮ್ಮ ತಪ:ಶ್ಯಕ್ತಿಯಿಂದ ತ್ರಿಶಂಕುವನ್ನು ಕುರಿತು " ರಾಜನ್ ಸಶರೀರೋ ದಿವಂ ವ್ರಜ " ಎಂದು ಹೇಳಿ ತಮ್ಮ ತಪಃಶ್ಯಕ್ತಿಯನ್ನು ವಿನಿಯೋಗಿಸ ತೊಡಗಿದರು. ಹಾಗೆಯೇ ತ್ರಿಶಂಕು ಸಶರೀರನಾಗಿ ಸ್ವರ್ಗಕ್ಕೆ ಏರತೊಡಗಿದ.. ಏರುತ್ತಾ ಸ್ವರ್ಗ ತಲುಪಿದಾಗ ಇಂದ್ರ ವಿರೋಧಿಸಿದ.." ನಿನ್ನಂತಹ ಚಾಂಡಾಲನಿಗೆ ಇಲ್ಲಿ ಸ್ಥಳವಿಲ್ಲ ಬಂದ ಕಡೆಗೇ ತೆರಳು " ಎಂದು ಹೇಳಿ ಸ್ವರ್ಗದಿಂದ ಹೊರತಳ್ಳಿದ. ತ್ರಿಶಂಕು ತಲೆಕೆಳಗಾಗಿ ತ್ರಾಹಿ.. ತ್ರಾಹೀ.. ಎಂದು ಕೂಗಿಕೊಳ್ಳುತ್ತಾ ಬೀಳತೊಡಗಿದ. ಇದನ್ನು ಕೇಳಿದ ವಿಶ್ವಾಮಿತ್ರರು "ನಿಲ್ಲು.. ನಿಲ್ಲು" ಎನ್ನುತ್ತಾ ಕರಗಳನ್ನು ಮೇಲಕ್ಕೆತ್ತಿದರು, ಬೀಳುತ್ತಿದ್ದ ತ್ರಿಶಂಕು ಅಲ್ಲಿಯೇ ನಿಂತ. ಅವನು ನಿಂತಲ್ಲಿಯೇ ಕಲ್ಪಾಂತರದಲ್ಲಿ ಬ್ರಹ್ಮದೇವರು ಹೊಸ ಸೃಷ್ಠಿಯನ್ನು ಆರಂಭಿಸಿದಂತೆ ಹೊಸ ಸ್ವರ್ಗವನ್ನು ನಿರ್ಮಾಣ ಮಾಡಿದರು.. ಸಪ್ತರ್ಷಿ ಮಂಡಲವನ್ನೂ ಇಪ್ಪತ್ತೇಳು ನಕ್ಷತ್ರಗಳನ್ನೂ ಸೃಷ್ಠಿಸಿದರು. ಉತ್ತರದಿಕ್ಕಿನಲ್ಲಿ ಧೃವಮಂಡಲವಿದ್ದರೆ ದಕ್ಷಿಣದಿಕ್ಕಿನಲ್ಲಿ ತ್ರಿಶಂಕು ಸ್ವರ್ಗ ನಿರ್ಮಾಣವಾಯಿತು. ಸೃಷ್ಠಿಸಿದ ಸ್ವರ್ಗಕ್ಕೆ ಮತ್ತೊಬ್ಬ ಇಂದ್ರನನ್ನೂ ಸೃಷ್ಠಿಸಲು ಮುಂದಾದರು ಮತ್ತು ಈಗಿರುವ ಇಂದ್ರನೇ ಬೇಡ ಎಂಬ ನಿರ್ಧಾರ ಮಾಡಿದರು. ಆಗ ಋಷಿಗಳೂ ದೇವತೆಗಳೂ ಬಂದು ಕ್ರೋಧದಿಂದ ಸೃಷ್ಠಿ ಕಾರ್ಯದಲ್ಲಿ ತೊಡಗಿದ ವಿಶ್ವಾಮಿತ್ರರ ಮನವೊಲಿಸುತ್ತಾರೆ. ನೀವು ಸೃಷ್ಠಿಸಿದ ಸಕಲವೂ ತ್ರಿಶಂಕುವಿಗೆ ಸೀಮಿತವಾಗಿರಲಿ ಅವನಿಗೆ ಪ್ರತಿಸ್ವರ್ಗದಲ್ಲಿಯೂ ಸ್ವರ್ಗಸುಖ ದೊರೆಯಲಿ ಆದರೆ ಆ ಸ್ವರ್ಗ ವೈಶ್ವಾನರಪಥವೆಂಬ ಈ ಜ್ಯೋತಿಶ್ಚಕ್ರದ ಹೊರಗಿರಲಿ ಎಂದು ಬೇಡಿಕೊಳ್ಳುತ್ತಾರೆ.. ಸಮಾಧಾನಗೊಂಡು ವಿಶ್ವಾಮಿತ್ರರು ಅಸ್ತು ಎಂದು ಒಪ್ಪಿಕೊಳ್ಳುತ್ತಾರೆ. ಹೀಗೆ ಸ್ಥಾಪಿತವಾದ ಸ್ವರ್ಗ "ತ್ರಿಶಂಕುಸ್ವರ್ಗ" ಎಂದೇ ಕರೆಯಲ್ಪಡುತ್ತದೆ. 🙏🙏
ಹೊಸ ಕಥೆಯೊಂದಿಗೆ ಮುಂದಿನ ಬರಹ🙏🙏
Subscribe to:
Post Comments (Atom)
No comments:
Post a Comment