Sunday, June 29, 2025

ಗಾಲವ ನಾಲ್ಕನೇ ಭಾಗ

ವಿಶ್ವಾಮಿತ್ರರ ಮಾತನ್ನು ಕೇಳಿದ ಗಾಲವ ವ್ಯಥೆ ಪಡುತ್ತಿದ್ದಾಗ ಗರುಡನೇ ಧೈರ್ಯದ ಮಾತುಗಳನ್ನು ಆಡುತ್ತಾನೆ. ''ಅಯ್ಯಾ ಗಾಲವ ಈ ಪ್ರಪಂಚದಲ್ಲಿ ಏನನ್ನಾದರೂ ಪಡೆಯುವ ಮೊದಲು ಧನವನ್ನು ಗಳಿಸಿಕೊಳ್ಳಬೇಕಾಗುತ್ತದೆ. ಸುವರ್ಣ ಧನವಿಲ್ಲದೇ ಹೋದರೆ ಯಾವುದೇ ವಸ್ತುವನ್ನು ಹೊಂದಲು ಸಾಧ್ಯವಿಲ್ಲ..ನೀನು ಮೊದಲಿಗೆ ಶ್ಯಾಮ ಕರ್ಣದ ಎಂಟು ನೂರು ಕುದುರೆಗಳನ್ನು ಪಡೆಯಲು ಬೇಕಾದ ಧನ ಸಂಗ್ರಹ ಮಾಡುವ ದಾರಿಯನ್ನು ಅರಸು, ನನ್ನ ಪ್ರಕಾರ ಯಾರು ಧಾರ್ಮಿಕನೆಂದು ಹೇಳಿಸಿಕೊಂಡಿರುವನೋ.. ಯಜ್ಞ ಯಾಗಗಳನ್ನು ಮಾಡಿ ಪ್ರಜಾರಂಜಕನಾಗಿ ಬದುಕಿರುವನೋ.. ಯಾರು ದಾನಧರ್ಮಗಳನ್ನು ಮಾಡಿ ದೇವತೆಗಳ ಸಂಪ್ರೀತಿಗೂ ಪಾತ್ರವಾಗಿರುವನೋ ಅಂತಹ ವ್ಯಕ್ತಿಯಲ್ಲಿ ಹೋಗಿ ದಾನದ ರೂಪದಲ್ಲಿ ಧನವನ್ನು ಪಡೆದು ಮುಂದೆ ಸಾಗಬೇಕು. ಹಾಗೆ ಯೋಚಿಸಿದರೆ ಸದ್ಯದಲ್ಲಿ ಚಂದ್ರವಂಶೀಯನಾದ ಯಯಾತಿ ಮಹಾರಾಜ ಪ್ರತಿಷ್ಠಾ ನಗರವನ್ನು ರಾಜಧಾನಿಯನ್ನಾಗಿಸಿಕೊಂಡು ಭೂಮಂಡಲವನ್ನು ಆಳುತ್ತಿದ್ದಾನೆ.. ನೂರಾರು ಯಾಗಗಳನ್ನು ಮಾಡುವ ಮುಖೇನ ದೇವತೆಗಳನ್ನೂ . ಸಂಪ್ರೀತಿ ಗೊಳ್ಳುವಂತೆ ಮಾಡಿದ್ದಾನೆ, ಪ್ರಜೆಗಳನ್ನು ಪೀಡಿಸದೇ ಸಂಗ್ರಹವಾಗುವ ಕರಗಳಿಂದ.. ಸಾಮಂತರು ತಂದೊಪ್ಪಿಸುವ ಕಪ್ಪ ಕಾಣಿಕೆಗಳಿಂದ ಶ್ರೀಮಂತನೂ ಇದ್ದಾನೆ. ನಾವು ನೇರವಾಗಿ ಅವನ ಬಳಿಗೇ ಹೋಗೋಣ ನನಗೂ ಅವನು ಪ್ರಿಯ ಮಿತ್ರನೇ ಇದ್ದಾನೆ. ನಿನ್ನ ಪರವಾಗಿ ನಾನೂ ಕೆಳಿಕೊಳ್ಳುತ್ತೇನೆ" ಗರುಡನ ಮಾತನ್ನು ಕೇಳಿದ ಗಾಲವ ಸಮಾಧಾನದ ನಿಟ್ಟುಸಿರು ಬಿಟ್ಟು "ಹಾಗೇ ಆಗಲಿ" ಎಂದು ಯಯಾತಿಯ ಪಟ್ಟಣವಾದ ಪ್ರತಿಷ್ಠಾನಪುರಕ್ಕೆ ತೆರಳಲು ಅನುಮತಿಯನ್ನು ನೀಡುತ್ತಾನೆ. ಇಬ್ಬರೂ ನೇರವಾಗಿ ಯಯಾತಿ ಮಹಾರಾಜನ ಬಳಿ ಬರುತ್ತಾರೆ. ಇವರ ಆಗಮನದಿಂದ ಸಂತೋಷಗೊಂಡ ಯಯಾತಿ ಸುಪರ್ಣನಿಗೂ ಗಾಲವನಿಗೂ ಆಸನವಿರಿಸಿ ಸತ್ಕಾರ ಮಾಡುತ್ತಾನೆ. ಆಗ ತಾವು ಬಂದ ಉದ್ದೇಶವನ್ನು ಗರುಡನೇ ಮೊದಲಾಗಿ ಹೇಳುತ್ತಾನೆ. "ಯಯಾತಿ ಮಹಾರಾಜ ಒಂದು ಗುರುತರವಾದ ವಿಷಯವನ್ನಿಟ್ಟುಕೊಂಡು ನಿನ್ನ ಬಳಿಗೆ ಬಂದಿದ್ದೇವೆ. ನನ್ನ ಜೊತೆಗಿರುವ ಈ ಬ್ರಾಹ್ಮಣನ ಹೆಸರು ಗಾಲವ ಎಂಬುದಾಗಿ ಸುಮಾರು ಹತ್ತುಸಾವಿರ ವರ್ಷಗಳ ಕಾಲ ವಿಶ್ವಾಮಿತ್ರ ಮುನಿಗಳ ಶಿಷ್ಯನಾಗಿ ಸೇವೆಯನ್ನು ಮಾಡಿ ಸಕಲ ವಿದ್ಯೆಗಳಲ್ಲಿಯೂ ಪಾರಂಗತನಾಗಿದ್ದಾನೆ. ಗುರುಮಠದಿಂದ ಹೊರಡುವ ಕಾಲಕ್ಕೆ ಗುರುಗಳು ಬಯಸದೇ ಇದ್ದರೂ ಗುರುದಕ್ಷಿಣೆಯನ್ನು ನೀಡುವುದು ಶಿಷ್ಯನ ಕರ್ತವ್ಯ ಎಂದು ಅರಿತ ಈತ ಮತ್ತೆ ಮತ್ತೆ ಗುರುಗಳನ್ನು ಕೇಳಲಾಗಿ ಒಂದು ಕಿವಿ ಕಪ್ಪಾದ ಬಿಳಿಯ ದೇಹವನ್ನು ಹೊಂದಿದ ಎಂಟುನೂರು ಕುದುರೆಗಳನ್ನು ಗುರುದಕ್ಷಿಣೆಯಾಗಿ ಬಯಸಿದರು, ಅವನಿಗೆ ಸಹಾಯ ಮಾಡಲು ನಾನೂ ಬಂದೆ... ಪ್ರಸ್ತುತ ನೀನು ಭೂಮಂಡಲವನ್ನು ಆಳುತಿದ್ದೀ..ನಿನ್ನ ಬಳಿಗೆ ಇವನನ್ನು ನಾನೇ ಕರೆದುಕೊಂಡು ಬಂದಿದ್ದೇನೆ. ಈ ಗಾಲವನಿಗೆ ಗುರುದಕ್ಷಿಣೆಯನ್ನು ಸಲ್ಲಿಸಲು ನೀನು ಸಹಕಾರಿಯಾದರೆ ಮುಂದೆ ಈತ ಸಂತೋಷದಿಂದ ತಪಸ್ಸನ್ನು ಆಚರಿಸಲು ಅನುಕೂಲವಾಗುತ್ತದೆ. ಮುಂದೆ ಅವನು ಆಚರಿಸುವ ತಪಸ್ಸಿನ ಫಲದ ಒಂದು ಭಾಗ ನಿನಗೂ ಲಭಿಸುತ್ತದೆ." ಗರುಡನ ಮಾತನ್ನು ಕೇಳಿದ ಯಯಾತಿಗೆ ಒಂದು ಕ್ಷಣ ಹೆಮ್ಮೆಯಾಗುತ್ತದೆ. ಪ್ರಪಂಚದಲ್ಲಿ ಅದೆಷ್ಟೋ ಅರಸರಿದ್ದರೂ ಇವರು ನನ್ನನ್ನೇ ಆಯ್ಕೆ ಮಾಡಿಕೊಂಡು ಇಲ್ಲಿಗೆ ಬಂದರಲ್ಲಾ.. ಹಾಗೆ ಯೋಚಿಸಿದ ಯಯಾತಿ ಗರುಡನನ್ನು ಕುರಿತು ಹೇಳುತ್ತಾನೆ..." ಗರುಡದೇವ ನೀವು ನನ್ನ ಬಳಿಗೆ ಬಂದದ್ದು ನನಗೆ ಸಂತೋಷವನ್ನು ಉಂಟುಮಾಡಿದೆ ಆದರೆ... ನೀನು ಕೇಳಿದಂತೆ ಮೊದಲು ನನ್ನ ಬಳಿಯಿದ್ದಷ್ಟು ಸಂಪತ್ತು ಈಗ ಇಲ್ಲ ನನ್ನಲಿದ್ದ ಸಂಪತ್ತೆಲ್ಲಾ ಈಗ ಕ್ಷೀಣಿಸಿದೆ... ಆದರೂ ನಿಮಗೆ ಇಲ್ಲಾ ಎನ್ನಲು ಮನಸ್ಸಾಗುತ್ತಿಲ್ಲ ನನಗೊಬ್ಬಳು ಮಗಳಿದ್ದಾಳೆ "ಮಾಧವಿ" ಎಂದು ಹೆಸರು ಅಪ್ರತಿಮ ಸುಂದರಿಯಾದ ಅವಳನ್ನು ಪಡೆಯಲು ಕೇವಲ ಮನುಷ್ಯರು ಮಾತ್ರವಲ್ಲ ದೇವತೆಗಳೂ ಕೂಡ ತಮ್ಮ ಸರ್ವ ಸಂಪತ್ತನ್ನೂ ವ್ಯಯಿಸಲು ಸಿದ್ಧರಿದ್ದಾರೆ ಅಂತಹ ರೂಪವತಿಯೂ ಗುಣವತಿಯೂ ಆದ ನನ್ನ ಮಗಳನ್ನೇ ನಿಮ್ಮೊಂದಿಗೆ ಕಳುಹಿಸಿಕೊಡುತ್ತೇನೆ ಅವಳನ್ನು ಬಳಸಿಕೊಂಡೇ ನಿಮಗೆ ಬೇಕಾದ್ದನ್ನು ಗಳಿಸಿಕೊಳ್ಳಿ" ಯಯಾತಿಯ ಮಾತನ್ನು ಒಪ್ಪಿದ ಗಾಲವ ಮಾಧವಿಯನ್ನು ಸ್ವೀಕರಿಸುತ್ತಾನೆ. ಗರುಡ- ಗಾಲವರು ಮಾಧವಿಯನ್ನು ಕರೆದುಕೊಂಡು ಪ್ರತಿಷ್ಠಾನ ಪುರದಿಂದ ಹೊರಬೀಳುತ್ತಾರೆ.🙏🙏 ಉಳಿದಿದ್ದು ಮುಂದಿನ ಭಾಗದಲ್ಲಿ🙏🙏

No comments:

Post a Comment