Thursday, June 12, 2025
ತ್ರಿಶಂಕು
ಸೂರ್ಯವಂಶದಲ್ಲಿ ತ್ರ್ಯಯ್ಯಾರುಣ ("ತ್ರಿಬಂಧನ" "ಅರುಣ " ಎಂದೂ ಇದೆ)ಎಂಬ ಅರಸನಿದ್ದ, ಪರಾಕ್ರಮಿಯೂ ಪರಮ ಧಾರ್ಮಿಕನೂ ಆಗಿದ್ದ ಅವನಿಗೆ ಸತ್ಯವ್ರತನೆಂಬ ಮಗನಿದ್ದ. "ಸತ್ಯವ್ರತ " ಎಂಬ ಹೆಸರಿನಿಂದ ಆತ "ತ್ರಿಶಂಕು " ಎಂದು ಕರೆಸಿಕೊಂಡು ಅದೇ ಹೆಸರಿನಿಂದ ಲೋಕದಲ್ಲಿ ಪ್ರಖ್ಯಾತನಾದ (ವಿಖ್ಯಾತ ").ಪ್ರಾಜ್ಞನಾದ ಗುರುವೊಬ್ಬನನ್ನು ಉಪೇಕ್ಷಿಸಿ ಅವಮಾನಿಸಿದರೆ ಶಿಶ್ಯನಿಗಾಗಬಹುದಾದ ನಷ್ಟ ಏನು ಎಷ್ಟು ಎಂಬುದನ್ನು ಪುರಾಣದ ಕೆಲವು ಕಥೆಗಳು ಸಾರುತ್ತವೆ. ದೇವಗುರುಗಳಾದ ಬೃಹಸ್ಪತಿಗಳು ಇಂದ್ರಸಭೆಯಲ್ಲಿ ಗೌರವ ಸಿಗಲಿಲ್ಲ ಎಂದು ಹೊರಟು ಹೋದ ಮೇಲೆ ಇಂದ್ರನಿಗಾದ ಪರಾಭವ ದೊಡ್ಡದು.. ಬೇರೆ ಗುರುಗಳನ್ನು ಆರಿಸಿಕೊಂಡು.. ಇಂದ್ರ ಪದವಿಯನ್ನೇ ತೊರೆಯಬೇಕಾದ ಪರಿಸ್ಥಿತಿಯೂ ಒದಗಿ ಬಂತು. ಇನ್ನು ಕುಲಗುರುಗಳಾದ ವಶಿಷ್ಠರನ್ನು ತ್ಯಜಿಸಿ ಮತ್ತೊಂದು ಪೌರೋಹಿತ್ಯಕ್ಕೆ ಆಶ್ರಯಿಸಿದ ತ್ರಿಶಂಕುವಿನ ಕಥೆಯೇ ವಿಚಿತ್ರವಾದದ್ದು. ಸಹಜವಾಗಿಯೇ ಕುಲದ ಹಿನ್ನೆಲೆ ಮತ್ತು ರಕ್ತಗತವಾದ ಪರಾಕ್ರಮದಿಂದ... ಅದೆಲ್ಲವನ್ನೂ ಇಮ್ಮಡಿಗೊಳಿಸುವ ತಾರುಣ್ಯದಿಂದ ಸತ್ಯವ್ರತ ಪ್ರಮತ್ತನಾಗಿದ್ದ. ಆ ಸಂದರ್ಭದಲ್ಲಿ ಮೊದಲ ತಪ್ಪು ಮಾಡುತ್ತಾನೆ. ಬ್ರಾಹ್ಮಣರ ಅಗ್ರಹಾರದಲ್ಲಿ ಮದುವೆ ಸಿದ್ಧತೆ ನಡೆಯುತ್ತಿರುತ್ತದೆ. ವರನನ್ನು ವರಿಸಬೇಕಾದ ವಧುವನ್ನು ಸತ್ಯವ್ರತ ಬಯಸಿರುತ್ತಾನೆ. ಹಾಗಾಗಿಯೇ ವಿವಾಹ ಮಂಟಪದಲ್ಲಿ ವರನಿಗೆ ಮಾಲೆಯಿಕ್ಕಿದ ವಧುವನ್ನು ಎಳೆದು ತರುತ್ತಾನೆ. ಕುಪಿತರಾದ ಬ್ರಾಹ್ಮಣರು ಅರಸನಾದ ಸತ್ಯವ್ರತನ ತಂದೆಗೆ ದೂರಿಡುತ್ತಾರೆ.. ತ್ರಯ್ಯಾರುಣ ಮಗನ ಕಾರ್ಯದಿಂದ ಕೋಪಗೊಳ್ಳುತ್ತಾನೆ. ದುಷ್ಕಾರ್ಯ ಮಾಡಿದ ಸತ್ಯವ್ರತನನ್ನು ರಾಜ್ಯದಿಂದಲೇ ಹೊರ ಹಾಕುತ್ತಾನೆ. ನಾನೆಲ್ಲಿ ಬದುಕಲಿ ಎಂದು ಮಗ ಕೇಳಿದಾಗ ಕೋಪದಿಂದಲೇ "ಚಂಡಾಲರ ಜೊತೆ ಹೋಗು" ಎಂದು ಹೇಳುತ್ತಾನೆ. ರಾಜ್ಯದಿಂದ ಹೊರಬಂದ ಸತ್ಯವ್ರತನಿಗೆ ಚಾಂಡಾಲರ ಸಂಗವೇ ಏರ್ಪಡುತ್ತದೆ. ಅವರೊಂದಿಗೇ ಬದುಕತೊಡಗುತ್ತಾನೆ. ಇತ್ತ ತ್ರಯ್ಯಾರುಣ ಮಗನನ್ನು ಹೊರಹಾಕಿದಮೇಲೆ ಮತ್ತೊಬ್ಬ ಮಗನನ್ನು ಪಡೆಯಬೇಕು ಎಂಬ ಆಶಯದಿಂದ ತಪಸ್ಸು ಮಾಡಲು ಅರಣ್ಯಕ್ಕೆ ಹೋಗಿ ಬಿಡ್ತುತ್ತಾನೆ. ಕುಲಪುರೋಹಿತರಾದ ವಶಿಷ್ಟರ ನಿರ್ದೇಶನದಲ್ಲಿ ರಾಜ್ಯಾಡಳಿತ ನಡೆದರೂ ಅರಾಜಕವಾದ ರಾಜ್ಯವನ್ನು ಅನಾವೃಷ್ಟಿ ಭಾಧಿಸುತ್ತದೆ. ನಿರಂತರವಾದ ಹನ್ನೆರಡು ವರ್ಷಗಳ ಬರಗಾಲದಿಂದ ಪ್ರಜಾಜನರು ಬಳಲಿಹೋಗುತ್ತಾರೆ. ಇದೇ ಸಂದರ್ಭದಲ್ಲಿ ವಿಶ್ವಾಮಿತ್ರ (ಕೌಶಿಕ) ತನ್ನ ಹೆಂಡತಿ ಮತ್ತು ಮಕ್ಕಳನ್ನು ಇದೇ ರಾಜ್ಯದಲ್ಲಿ ಬಿಟ್ಟು ತಪಸ್ಸಿಗಾಗಿ ಕೌಶಿಕೀ ತೀರಕ್ಕೆ ಹೋಗಿರುತ್ತಾನೆ. ತನ್ನ ಐದು ಜನ ಮಕ್ಕಳೊಂದಿಗೆ ವಿಶ್ವಾಮಿತ್ರರ ಪತ್ನಿ ವಾಸವಾಗಿರುತ್ತಾಳೆ. ಭೀಕರವಾದ ಬರಗಾಲದಿಂದ ಅವಳ ಬದುಕೂ ದುಸ್ತರವಾಗುತ್ತದೆ. ಬೇರೆ ದಾರಿ ಕಾಣದೇ ಐವರು ಮಕ್ಕಳಲ್ಲಿ ಮದ್ಯದ ಮಗನನ್ನು ಮಾರಾಟ ಮಾಡಿಬಿಡಲು ಯೋಚಿಸಿ ದರ್ಭೆಯ ಹಗ್ಗವನ್ನು ಮಾಡಿ ಮಗನ ಕತ್ತಿಗೆ ಕಟ್ಟಿ ಬೀದಿ ಬೀದಿಗಳಲ್ಲಿ ಕರೆದುಕೊಂಡು ಬರುತ್ತಾಳೆ. ಇದನ್ನು ಸತ್ಯವ್ರತ ನೋಡುತ್ತಾನೆ. ಇಂತಹ ಸ್ಥಿತಿಗೆ ಕಾರಣವೇನೆಂದು ಕೇಳಿದಾಗ ತನಗೆ ಒಂದು ಹೊತ್ತಿನ ಆಹಾರಕ್ಕೂ ದಾರಿ ಇಲ್ಲದ ಅನಿವಾರ್ಯ ಸ್ಥಿತಿಯನ್ನು ಆಕೆ ಹೇಳಿಕೊಳ್ಳುತ್ತಾಳೆ. ಋಷಿ ಪತ್ನಿಯ ಆ ಧ್ಯೆನ್ಯ ಸ್ಥಿತಿಯನ್ನು ನೋಡಿದ ಸತ್ಯವ್ರತ ಆಕೆಗೂ.. ಅವಳ ಮಕ್ಕಳಿಗೂ ದಿನವೂ ಆಹಾರ ಒದಗಿಸುವ ವಾಗ್ದಾನ ಮಾಡಿ ಮಾರಾಟಕ್ಕೆ ಕಟ್ಟಿದ ಮಗುವಿನ ಕುತ್ತಿಗೆಯ ದರ್ಭೆಯ ದಾರವನ್ನು ಬಿಚ್ಚಿಸುತ್ತಾನೆ. ಮಾರಾಟಕ್ಕಾಗಿ ಕುತ್ತಿಗೆಗೆ ದರ್ಭೆಯ ಹಗ್ಗವನ್ನು ಕಟ್ಟಿಸಿಕೊಂಡ ಕಾರಣ ಆ ವಿಶ್ವಾಮಿತ್ರ ಪುತ್ರ ''ಗಾಲವ '' ಎಂದು ಹೆಸರಾದ ಎಂದು ದೇವೀ ಭಾಗವತದಲ್ಲಿದೆ. ಆದರೆ "ಗಾಲವ '' ಎಂಬ ವಿಶ್ವಾಮಿತ್ರ ಶಿಷ್ಯನ ಬಗ್ಗೆ ಬಹಳ ಕಡೆ ಉಲ್ಲೇಖ ಇದೆ. ಗಾಲವನೆಂಬ ವಿಶ್ವಾಮಿತ್ರ ಶಿಷ್ಯನ ಗುರುದಕ್ಷಿಣೆಯ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ. ಹೀಗೆ ವಿಶ್ವಾಮಿತ್ರರ ಪತ್ನಿಗೂ ಮಕ್ಕಳಿಗೂ ಆಹಾರ ಒದಗಿಸುವ ಹೊಣೆ ಹೊತ್ತ ಸತ್ಯವ್ರತ ದಿನವೂ ಬೇಟೆಯಾಡಿ ಅವರಿಗೆ ಬೇಕಾಗುವಷ್ಟು ಆಹಾರವನ್ನು ಅವರ ಆಶ್ರಮದ ಹೊರಬಾಗದಲ್ಲಿದ್ದ ಒಂದು ಮರದ ಕೊಂಬೆಗೆ ಕಟ್ಟಿ ಬರುತ್ತಿದ್ದ. ಇದನ್ನು ಅವರು ತೆಗೆದುಕೊಂಡು ಹೋಗಿ ಬೇಯಿಸಿ ತಿನ್ನುತ್ತಿದ್ದರು. ಹೀಗೇ ದಿನವೂ ನಡೆಯುತ್ತಿತ್ತು. ಸತ್ಯವ್ರತ ರಾಜ್ಯಭ್ರಷ್ಟನಾದಾಗಿನಿಂದಲೂ ತಮ್ಮ ಕುಲಪುರೋಹಿತರಾದ ವಶಿಷ್ಟರ ಬಗ್ಗೆ ಬೇಸರ.. ದ್ವೇಷ.. ಮನಸ್ಸಿನಲ್ಲಿತ್ತು. ತಂದೆಯವರು ಶಿಕ್ಷೆ ಪ್ರಕಟಿಸಿದರೂ ಇನ್ನೂ ಸಪ್ತಪದಿ ಪೂರೈಸದ ಹೆಣ್ಣನ್ನು ವಿವಾಹ ಮಂಟಪದಿಂದ ತಂದದ್ದು ಶಾಸ್ತ್ರ ವಿರೋಧವಲ್ಲ ಎಂದು ವಶಿಷ್ಟರು ಹೇಳಿ ತನಗೆ ಒದಗಿದ ಶಿಕ್ಷೆಯನ್ನು ಅವರು ತಡೆಯಬಹುದಿತ್ತು.. ಆದರೆ ಹಾಗೆ ಮಾಡದೇ ತನ್ನನ್ನು ವಂಚಿಸಿದರು ಎಂದೇ ಭಾವಿಸಿದ್ದ. ಹೀಗೆಯೇ ಒಂದು ದಿನ ಆಹಾರಕ್ಕಾಗಿ ಕಾಡೆಲ್ಲಾ ಸುತ್ತಿದರೂ ಒಂದು ಪ್ರಾಣಿಯೂ ಸಿಗಲಿಲ್ಲ. ಇವನಿಗೂ ಸುತ್ತಿ.. ಸುತ್ತಿ ಹಸಿವು ಬಾಯಾರಿಕೆಗಳು ಬಾಧಿಸತೊಡಗಿತು. ಹಾಗೆ ತಿರುಗುತ್ತಾ ವಶಿಷ್ಟರ ಆಶ್ರಮದ ಬಳಿ ಬಂದಾಗ ಅಲ್ಲಿ ಆಶ್ರಮದ ಗೋವು ಮೇಯುತ್ತಿರುವುದು ಕಾಣಿಸಿತು. ಒಂದು ಕಡೆ ಬಾಧಿಸುತ್ತಿರುವ ಹಸಿವು ಜೊತೆಗೆ ವಶಿಷ್ಟರ ಬಗ್ಗೆ ಮೊದಲೇ ಇದ್ದ ಬೇಸರ... ಹಾಗಾಗಿ ಆ ಗೋವನ್ನೇ ಕೊಂದ.. ಹೊಟ್ಟೆ ತುಂಬುವಷ್ಟು ಆ ಮಾಂಸವನ್ನೇ ತಿಂದ ಉಳಿದಿದ್ದನ್ನು ವಿಶ್ವಾಮಿತ್ರರ ಆಶ್ರಮಕ್ಕೆ ತಂದು ಇಟ್ಟುಹೋದ.. ಇತ್ತ ರಾತ್ರಿಯಾದರೂ ಗೋವು ಆಶ್ರಮಕ್ಕೆ ಬರದಿದ್ದಾಗ ವಶಿಷ್ಠರಿಗೆ ನಡೆದ ವಿದ್ಯಮಾನ ತಿಳಿಯುತ್ತದೆ. ಕೋಪಗೊಂಡ ವಶಿಷ್ಠರು ಸತ್ಯವ್ರತನನ್ನು ಕುರಿತು " ಅಂದು ಬೇರೊಬ್ಬ ವರನಿಗೆ ನಿಶ್ಚಯಿಸಲ್ಪಟ್ಟ ವಧುವನ್ನು ಅಪಹರಿಸಿದ್ದು ಒಂದು ಪಾಪ.. ಈಗ ಗೋವನ್ನು ವಧಿಸಿದ್ದು ಒಂದು ಪಾಪ.. ಹಾಗೆಯೇ ವಧಿಸಿದ ಗೋವಿನ ಮಾಂಸವನ್ನು ಸಂಸ್ಕರಿಸದೇ ತಿಂದದ್ದು ಒಂದು ಪಾಪ.. ಹೀಗೆ ಮೂರು ಪಾಪಗಳನ್ನು ಮಾಡಿದ ನೀನು "ತ್ರಿಶಂಕು " ಎಂದು ಶಪಿಸಿದರು. ಮೊದಲೇ ರಾಜ್ಯಭ್ರಷ್ಟನಾದವ ಜೊತೆಗೆ ವಶಿಷ್ಟರ ಶಾಪ.. ಮಾನಸಿಕವಾಗಿ ಕುಸಿದುಹೋದ ಸತ್ಯವ್ರತ.. ಊರೂರು ತಿರುಗಿ ಶಾಪದ ಪರಿಮಾರ್ಜನೆಗೆ ಬೇಕಾದ ಯಾವುದಾದರೂ ಯಾಗವನ್ನು ಮಾಡಿಸಿಕೊಡಿ ಎಂದು ಬ್ರಾಹ್ಮಣರಲ್ಲಿ ಅಂಗಾಲಾಚಿದ ಆದರೆ ಯಾರೊಬ್ಬರೂ ಗುರುಶಾಪಕ್ಕೆ ಪ್ರತಿಯಾಗಿ ಏನನ್ನು ಮಾಡಲೂ ಮುಂದಾಗಲಿಲ್ಲ. ಕಡೆಗೆ ಬೇರೆ ದಾರಿ ಸಿಗದೇ ಬದುಕೇ ಬೇಡ ಎಂದೆನ್ನಿಸಿ ಕಾಡಿಗೆ ತೆರಳಿದ. ಆ ಹೊತ್ತಿಗೆ ಅವನು ಯಾರಿಂದಲೋ ದೇವಿಯ ಉಪಾಸನೆ ಮಾಡುವುದನ್ನು ಕಲಿತಿದ್ದ.. ಕಾಡಿಗೆ ಬಂದವನೇ ತನಗೆ ಬೇಕಾದ ಚಿತೆಯನ್ನು ತಾನೇ ನಿರ್ಮಿಸಿದ.. ದೇವಿಯನ್ನು ಸ್ತುತಿಸುತ್ತಾ ಇನ್ನೇನು ಉರಿಯುತ್ತಿರುವ ಚಿತೆಗೆ ಹಾರಬೇಕೆನ್ನುವಾಗ ದೇವಿ ಪತ್ಯಕ್ಷಳಾಗುತ್ತಾಳೆ. ಆತ್ಮಾಹುತಿಗೆ ಮುಂದಾದ ತ್ರಿಶಂಕುವನ್ನು ತಡೆಯುತ್ತಾ "ಮಗೂ ನೀನು ಸಾಯಬೇಕಾದವನಲ್ಲ.. ನಿನ್ನ ತಂದೆಯು ನಿನಗೆ ರಾಜ್ಯದ ಪಟ್ಟವನ್ನು ಕಟ್ಟುತ್ತಾನೆ ಅದಕ್ಕೆ ಪೂರಕವಾಗಿಯೇ ಅವನ ಮಂತ್ರಿಗಳು ನಿನ್ನನ್ನು ಅರಸುತ್ತಾ ಬರುವವರಿದ್ದಾರೆ.. ನಿನ್ನನ್ನು ರಾಜ್ಯಾಧಿಕಾರಿಯನ್ನಾಗಿ ಮಾಡಿ ಅವನು ವಾನಪ್ರಸ್ತಕ್ಕೆ ಹೋಗುತ್ತಾನೆ ಅಲ್ಲಿಯವರೆಗೆ ನಿರೀಕ್ಷಿಸು..." ಎಂದು ಹೇಳಿ ಅದೃಷ್ಯಳಾಗುತ್ತಾಳೆ. ದೇವೀ ಕೃಪೆಯಿಂದ ಆತ್ಮಹತ್ಯೆಯ ಯೋಚನೆಯನ್ನು ಬಿಟ್ಟ ತ್ರಿಶಂಕುವಿಗೆ ಇರುವ ನಿರೀಕ್ಷೆ ರಾಜ್ಯದಿಂದ ತಂದೆ ಕಳುಹಿಸುವ ಆಮಂತ್ರಣ...🙏🙏
ಉಳಿದಿದ್ದು ಮುಂದಿನ ಭಾಗದಲ್ಲಿ....
Subscribe to:
Post Comments (Atom)
No comments:
Post a Comment