Friday, June 6, 2025
ಅಮೃತಾಪಹರಣ
ಸವತಿ ಮತ್ತು ಅವಳ ಮಕ್ಕಳ ಬೇಡಿಕೆಯನ್ನು ಕೇಳಿದ ವಿನತೆಗೆ ದುಃಖವಾಗುತ್ತದೆ. ಯಾರಿಂದಲೂ ಈಡೇರಿಸಲು ಅಸಾಧ್ಯವಾದ ಬೇಡಿಕೆಯನ್ನೇ ಇಟ್ಟಿದ್ದರು. ಹಾಗಾಗಿಯೇ ಎಂತವರಿಗೂ ದುರ್ಲಭವಾದ ಅಮೃತವನ್ನು ತರುವ ಪ್ರಯತ್ನ ವ್ಯರ್ಥ ಎಂದು ಮಗನಾದ ಗರುಡನಲ್ಲಿ ಹೇಳುತ್ತಾಳೆ. ಆದರೆ ಎಷ್ಟೇ ಕಷ್ಠವಾದ ಕಾರ್ಯವನ್ನಾದರೂ ಮಾಡುತ್ತೇನೆ ಎಂದು ಗರುಡ ಧೈರ್ಯವನ್ನು ತುಂಬುತ್ತಾನೆ. ಹಾಗೂ ತಾನು ಅಮೃತವನ್ನು ತರುವ ಕಾರ್ಯಕ್ಕೆ ಮುಂದಾಗುವುದಾಗಿಯೂ ಆ ಮೊದಲು ತನ್ನ ಹಸಿವನ್ನು ನೀಗಿಸಲು ಆಹಾರವನ್ನು ತೋರಿಸುವಂತೆಯೂ ಕೇಳಿಕೊಳ್ಳುತ್ತಾನೆ. ಆಗ ವಿನತೆ ಸಮುದ್ರ ಮಧ್ಯದಲ್ಲಿರುವ ದ್ವೀಪವೊಂದರಲ್ಲಿ ದುಷ್ಟರಾದ ನಿಷಾದರ ಇರುವನ್ನು ಹೇಳಿ ಅವರನ್ನು ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳಲು ಹೇಳುತ್ತಾಳೆ, ಜೊತೆಗೆ ಯಾವುದೇ ಕಾರಣಕ್ಕೂ ಬ್ರಾಹ್ಮಣರನ್ನು ಹಿಂಸಿಸಕೂಡದೆಂದು ಹೇಳುತ್ತಾಳೆ. ಮರುಕ್ಷಣದಲ್ಲಿಯೇ ಗರುಡನ ಪ್ರಶ್ನೆ " ಅಮ್ಮಾ ಬ್ರಾಹ್ಮಣರನ್ನು ಗುರುತಿಸುವ ಬಗೆ ಹೇಗೆ?" ಉತ್ತರಿಸಲು ಹಲವಿದ್ದರೂ ವಿನತೆ ಸರಳವಾಗಿ ಹೇಳಿದಳು. "ಯಾರನ್ನು ನುಂಗುವಾಗ ನಿನ್ನ ಗಂಟಲು ಬಿಸಿಯಾಗುತ್ತದೋ ಮುಳ್ಳು ಚುಚ್ಚಿದ ಅನುಭವವಾಗುವುದೋ ಅವರನ್ನು ಬ್ರಾಹ್ಮಣರೆಂದು ತಿಳಿ" ಗರುಡನಿಗೆ ಅರ್ಥವಾಯಿತು, ಆಗಲಿ ಎಂದು ಹೇಳಿ ತಾಯಿಗೆ ವಂದಿಸಿ ಆಶಿರ್ವಾದ ಪಡೆದು ಹೊರಡುತ್ತಾನೆ. ನೇರವಾಗಿ ಶರಧಿಮಧ್ಯದಲ್ಲಿರುವ ದುರುಳ ನಿಷಾಧರ ದ್ವೀಪಕ್ಕೆ ಬಂದು ಅವರನ್ನು ನುಂಗತೊಡಗುತ್ತಾನೆ. ನುಂಗುತ್ತಾ ನುಂಗುತ್ತಾ ಒಬ್ಬನನ್ನು ನುಂಗುವಾಗ ತಾಯಿ ಹೇಳಿದ ಅನುಭವವಾಗುತ್ತದೆ. ಗಂಟಲಲ್ಲಿ ಚುಚ್ಚಿದ ಅನುಭವ.. ಕೂಡಲೇ ಅವನನ್ನು ಉಗುಳುತ್ತಾನೆ. ತಪ್ಪಾಯಿತು ಕ್ಷಮಿಸಿ... ಈ ನಿಷಾಧರ ಮಧ್ಯದಲ್ಲಿ ವಾಸಿಸುವ ತಾವು ಯಾರೆಂದು ಕೇಳಲು "ನಾನೊಬ್ಬ ಬ್ರಾಹ್ಮಣ ತಿರುಗಾಡುತ್ತಾ ಈ ನಿಷಾಧರ ಊರಿಗೆ ಬಂದೆ ಒಬ್ಬಳು ನಿಷಾಧ ಸ್ತ್ರೀಯನ್ನೇ ವಿವಾಹವಾದೆ..ಅವಳಿಂದ ಮಕ್ಕಳೂ ಜನಿಸಿದರು, ಮಡದಿ ಮಕ್ಕಳನ್ನು ಬಿಟ್ಟು ಹೋಗಲಾರದೇ ಅವರೊಂದಿಗೇ ವಾಸ ಮಾಡುತ್ತಿದ್ದೇನೆ" ಎಂದು ಹೇಳುತ್ತಾನೆ. ಆ ಬ್ರಾಹ್ಮಣನಿಂದ ಬೀಳ್ಕೊಂಡು ಅಲ್ಲಿಂದ ಮುಂದೆ ಹಾರುತ್ತಾನೆ, ಅಷ್ಟು ಬೇಡರನ್ನು ತಿಂದಮೇಲೂ ಗರುಡನ ಹಸಿವು ಇಂಗಲಿಲ್ಲ.. ಆವಾಗ ಇನ್ನು ಆಹಾರವನ್ನು ತಂದೆಯಲ್ಲಿಯೇ ಕೇಳಬೇಕೆಂದು ನೇರವಾಗಿ ಕಶ್ಯಪರನ್ನು ಅರಸಿ ಸಾಗುತ್ತಾನೆ. ತಂದೆಯನ್ನು ಕಂಡು ವಂದಿಸಿಕೊಳ್ಳುತ್ತಾನೆ. ಸಂತೋಷದಿಂದ ಮಗನನ್ನು ಬರಮಾಡಿಕೊಂಡ ಕಶ್ಯಪರು ಆಶೀರ್ವದಿಸಿ ಮೈದಡುವುತ್ತಾರೆ. ತಂದೆಯಲ್ಲಿ ಅಮ್ಮ ಕೊಟ್ಟ ಆಹಾರ ದಲ್ಲಿ ಸ್ವಾರಸ್ಯವಿಲ್ಲ... ಹಾಗಾಗಿ ತನ್ನನ್ನು ಭಾಧಿಸುತ್ತಿರುವ ಹಸಿವಿನ ಬಗ್ಗೆ ಕೇಳಿಕೊಳ್ಳುತ್ತಾನೆ. ಆಗ ಕಶ್ಯಪರು ಸಮೀಪದಲ್ಲಿರುವ ಒಂದು ಸರೋವರವನ್ನು ತೋರಿಸಿ ಅಲ್ಲಿಯೇ ವಾಸಮಾಡುವ ಒಂದು ಆಮೆ ಮತ್ತು ಆ ಆಮೆಯ ಮೇಲಿನ ದ್ವೇಷದಿಂದ ಅದರೊಂದಿಗೆ ಕಾದಾಡಲು ಬರುವ ಒಂದು ಗಜವನ್ನು ತಿನ್ನಲು ಹೇಳುತ್ತಾರೆ. ಗರುಡ ಆ ಗಜಕಚ್ಛಪರ ದ್ವೇಷದ ಹಿನ್ನೆಲೆ ಏನೆಂದು ಕೇಳಲು ಅವರ ಪೂರ್ವಜನ್ಮದ ಕಥೆಯನ್ನು ಕಶ್ಯಪರು ಹೇಳುತ್ತಾರೆ. ಬಹಳ ಹಿಂದೆ ವಿಭಾವಸು ಮತ್ತು ಸುಪ್ರತೀಕರೆಂಬ ಇಬ್ಬರು ಋಷಿ ಕುಮಾರರಿದ್ದರು. ಸಹೋದರರಾದ ಅವರಲ್ಲಿ ಕಿರಿಯನಾದ ಸುಪ್ರತೀಕ ತಂದೆಯ ಮರಣಾನಂತರ ಆಸ್ತಿಯನ್ನು ವಿಭಾಗಿಸಿ ತನ್ನ ಪಾಲನ್ನು ಕೊಡಲು ಅಣ್ಣನಲ್ಲಿ ಕೇಳುತ್ತಾನೆ. ಅಣ್ಣ ವಿಭಾವಸು ತಂದೆಯಿಂದ ಬಂದ ಸಂಪತ್ತನ್ನು ವಿಭಾಗಿಸಲು ವಿರೋಧಿಸುತ್ತಾನೆ. ಅದರಿಂದಾಗುವ ದುಷ್ಪರಿಣಾಮಗಳು ಮತ್ತು ಅವಿಭಕ್ತರಾಗಿದ್ದರೆ ಆಗುವ ಅನುಕೂಲಗಳ ಬಗ್ಗೆ ತಿಳಿಹೇಳುತ್ತಾನೆ. ಆದರೆ ಅಣ್ಣನ ಹಿತನುಡಿಗಳನ್ನು ಕೇಳುವ ಮನಸ್ಸು ಸುಪ್ರತೀಕನಿಗಿರಲಿಲ್ಲ, ಮತ್ತೆ ಮತ್ತೆ ಕೇಳಿದಾಗ ವಿಭಾವಸುವಿಗೆ ಕೋಪ ಬರುತ್ತದೆ. ಕೋಪದಿಂದ "ನೀನು ಆನೆಯಾಗಿ ಹುಟ್ಟು " ಎಂದು ಶಾಪ ಕೊಡುತ್ತಾನೆ. ಅಣ್ಣ ಶಪಿಸಿದ್ದರಿಂದ ಸುಪ್ರತೀಕ ನಿಗೂ ಸಿಟ್ಟು ಬಂತು... "ನೀನು ಆಮೆಯಾಗಿ ಜನಿಸು " ಎಂದು ಪ್ರತಿಶಾಪ ಕೊಡುತ್ತಾನೆ. ಅವರೇ ಗಜಕಚ್ಛಪರಾಗಿ ಜನಿಸಿ ಈ ಜನ್ಮದಲ್ಲಿಯೂ ಪೂರ್ವದ್ವೇಷವನ್ನು ಮರೆಯದೇ ಹೋರಾಡುತಿದ್ದಾರೆ..ಆ ಗಜವು ಆರು ಯೋಜನ ಎತ್ತರವೂ ಹನ್ನೆರಡು ಯೋಜನ ಉದ್ದವೂ ಇದೆ.. ಹಾಗೆಯೇ ಆಮೆಯು ಮೂರು ಯೋಜನ ಎತ್ತರವೂ ಹತ್ತು ಯೋಜನಗಳ ಸುತ್ತಳತೆಯನ್ನೂ ಹೊಂದಿದೆ ಅವರೆಡನ್ನು ತಿಂದರೆ ನಿನ್ನ ಹಸಿವು ನಿವಾರಣೆಯಾಗುತ್ತದೆ ಎಂದು ಕಶ್ಯಪರು ಹೇಳುತ್ತಾರೆ. ಜೊತೆಯಲ್ಲಿ ಅಮೃತವನ್ನು ತರಲು ಹೊರಟ ನಿನ್ನ ಕಾರ್ಯಕ್ಕೆ ಯಶಸ್ಸು ಒದಗಲಿ.. ದೇವತೆಗಳೊಂದಿಗಿನ ಹೋರಾಟದಲ್ಲಿ ವಿಜಯವಾಗಲಿ ಎಂದು ಆಶೀರ್ವದಿಸಿ ಕಳುಹಿಸುತ್ತಾರೆ. ತಂದೆಯ ನಿರ್ದೇಶನದಂತೆ ಸರೋವರದ ಬಳಿಗೆ ಬಂದ ಗುರುಡನಿಗೆ ತಮ್ಮ ಉಗ್ರ ಹೋರಾಟದಿಂದ ಪವಿತ್ರವಾದ ಸರೋವರದ ಜಲವನ್ನೇ ಕಲುಕುತ್ತಿರುವ ಗಜ ಕಚ್ಛಪರು ಕಾಣಿಸುತ್ತಾರೆ. ತನ್ನ ಒಂದು ಕಾಲಿನ ತೀಕ್ಷ್ಣವಾದ ಉಗುರಿನಿಂದ ಗಜನನ್ನೂ ಇನ್ನೊಂದು ಕಾಲಿನಿಂದ ಕಚ್ಛಪನನ್ನೂ ಕುಕ್ಕಿ ಮೇಲೆತ್ತಿಕೊಂಡು ಹಾರುತ್ತಾನೆ. ಹಾಗೆ ಅವರನ್ನು ಎತ್ತಿಕೊಂಡು ಗಗನ ಮಾರ್ಗದಲ್ಲಿ ಹೊರಟ ಗರುಡನಿಗೆ ಒಂದು ಕಡೆ ಕುಳಿತು ಅವರನ್ನು ತಿನ್ನಲು ಯೋಗ್ಯ ಸ್ಥಳ ಕಾಣಿಸಲಿಲ್ಲ..ಹಾರುತ್ತಾ ಸಾಗುವಾಗ ಸಾವಿರ ಯೋಜನ ವಿಸ್ತೀರ್ಣವುಳ್ಳ ಒಂದು ಆಲದ ಮರ ಕಾಣಿಸುತ್ತದೆ. ಆಗಸದಲ್ಲಿ ಸಾಗುತ್ತಿರುವ ಗರುಡನನ್ನು ಆ ಮರವೇ "ಅಯ್ಯಾ ಇದೋ ನನ್ನ ಕೊಂಬೆಗಳು ನೂರು ಯೋಜನ ವಿಸ್ತೀರ್ಣವುಳ್ಳದ್ದಾಗಿವೆ ಇಲ್ಲಿ ಕುಳಿತು ನೀನು ತಂದ ಆಹಾರವನ್ನು ತಿನ್ನಬಹುದು " ಎಂದು ಹೇಳುತ್ತದೆ. ಗರುಡನಿಗೂ ಅದು ಸರಿಯನಿಸಿ ಆ ಕೊಂಬೆಯ ಮೇಲೆ ಕುಳಿತುಕೊಂಡಾಗ ಬೃಹದಾಕಾರ ಹೊಂದಿದ ಆ ಕೊಂಬೆಯೇ ಮುರಿಯುತ್ತದೆ. ಇನ್ನೇನು ಅಲ್ಲಿಂದಲೂ ಮೇಲೆ ಹಾರಬೇಕೆನ್ನುವಾಗ ಮುರಿದು ಕೆಳಗೆ ಬೀಳುತ್ತಿರುವ ಕೊಂಬೆಯಲ್ಲಿ ಸೂಕ್ಷ್ಮ ರೂಪದಲ್ಲಿರುವ ಹಲವು ಋಷಿಗಳು ತಲೆಕೆಳಗಾಗಿ ಜೋತಾಡಿಕೊಂಡು ತಪಸ್ಸನ್ನಾಚರಿಸುತ್ತಿರುವುದು ಕಾಣಿಸುತ್ತದೆ. ಅಯ್ಯೋ ಅವರ ತಪಸ್ಸು ಭಂಗವಾಗಕೂಡದೆಂದು ತ್ವರಿತವಾಗಿ ಬೀಳುತ್ತಿರುವ ಕೊಂಬೆಯನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಮತ್ತೆ ಮೇಲೆ ಹಾರುತ್ತಾನೆ. (ಅಲ್ಲಿ ಆ ಸ್ಥಿತಿಯಲ್ಲಿ ತಪಸ್ಸನ್ನು ಮಾಡುತ್ತಿದ್ದವರು "ವಾಲಖಿಲ್ಯ " ಎಂಬ ಋಷಿಗಳು ವಿಷ್ಣು ಪುರಾಣದ ಪ್ರಕಾರ ಕಶ್ಯಪರಿಗೆ ಕೃತು ನಾಮಕಳಾದ ಮಡದಿಯಲ್ಲಿ ಹುಟ್ಟಿದವರು ಸಂಖ್ಯೆಯಲ್ಲಿ ಅರವತ್ತು ಸಾವಿರ... ಗರುಡನ ಹುಟ್ಟಿಗೂ ಈ ವಾಲಖಿಲ್ಯರಿಗೂ ಒಂದು ಸಂಭಂಧ ಇದೆ ಹಿಂದೊಮ್ಮೆ ಕಶ್ಯಪರು ಒಂದು ಯಜ್ಞ ಸಂಕಲ್ಪ ಮಾಡುತ್ತಾರೆ, ಅದಕ್ಕೆ ಬೇಕಾದ ಸಮಿಧೆಗಳನ್ನು ತರಲು ಪುತ್ರರಿಗೆ ಆದೇಶಿಸುತ್ತಾರೆ., ಇಂದ್ರನೂ.. ವಾಲಖಿಲ್ಯರೂ ಕಾಡಿನಿಂದ ಸಮಿಧೆಗಳನ್ನು ತರಲು ಮುಂದಾಗುತ್ತಾರೆ.. ದೃಡಕಾಯನಾದ ಪರಾಕ್ರಮಿಯಾದ ಇಂದ್ರನಿಗೆ ಅದು ಕಷ್ಟದ ಕಾರ್ಯವೇನೂ ಅಲ್ಲ ಆದರೆ... ಒಂದು ಹೆಬ್ಬೆರೆಳಿನ ಗಾತ್ರದಲ್ಲಿ ಅರ್ಧದಷ್ಟು ಶರೀರ ಗಾತ್ರವನ್ನು ಹೊಂದಿದ್ದ ವಾಲಖಿಲ್ಯರಿಗೆ ಅದು ಪ್ರಯಾಸದಾಯಕವಾದ ಕೆಲಸ.. ಒಂದು ಮುತ್ತುಗದ ದಂಡವನ್ನು ಎಲ್ಲರೂ ಸೇರಿ ಪ್ರಾಯಾಸದಿಂದ ಎತ್ತಿ ತರುವಾಗ ಮಾರ್ಗದಲ್ಲಿ ಒಂದು ಗೋವಿನ ಹೆಜ್ಜೆಯಲ್ಲಿ ತುಂಬಿದ ನೀರನ್ನು ದಾಟಲಾಗದೇ ನಿಂತಿರುತ್ತಾರೆ..ಅದೇ ಮಾರ್ಗದಲ್ಲಿ ಬಂದ ಇಂದ್ರನಿಗದು ಕಾಣಿಸುತ್ತದೆ. ಅವರ ಸ್ಥಿತಿಗೆ ಅಪಹಾಸ್ಯ ಮಾಡುತ್ತಾ ಅವರನ್ನು ದಾಟಿ ಹೋಗುತ್ತಾನೆ. ಇಂದ್ರನ ಕಾರ್ಯದಿಂದ ಕುಪಿತರಾದ ವಾಲಖಿಲ್ಯರು ಅವನ ಅಹಂಕಾರವನ್ನು ಇಳಿಸಲು ಇನ್ನೊಬ್ಬ ಇಂದ್ರನನ್ನು ಸೃಷ್ಠಿಸುವ ಸಂಕಲ್ಪ ಮಾಡಿ ಅಲ್ಲೇ ಯಜ್ಞಕ್ಕೆ ತೊಡಗುತ್ತಾರೆ. ಇದನ್ನು ತಿಳಿದು ಭಯಗೊಂಡ ಇಂದ್ರ ಕಶ್ಯಪರ ಮೊರೆ ಹೋಗುತ್ತಾನೆ. ಕಶ್ಯಪರು ವಾಲಖಿಲ್ಯರ ಬಳಿಬಂದು ತ್ರಿಮೂರ್ತಿಗಳ ಸಂಕಲ್ಪದಂತೆ ಇಂದ್ರನಾದವನಿಗೆ ಪ್ರತಿಯಾಗಿ ಇಂದ್ರ ಸೃಷ್ಠಿ ಸರಿಯಲ್ಲ ಎಂದು ಮನವೊಲಿಸುತ್ತಾರೆ... ಜೊತೆಗೆ ನಿಮ್ಮ ಸಂಕಲ್ಪವೂ ವ್ಯರ್ಥವಾಗಕೂಡದು ಹಾಗಾಗಿ ನಿಮ್ಮ ಸಂಕಲ್ಪದಂತೆ ಹುಟ್ಟಿದವ ವಿಹಗೇಂದ್ರನಾಗಲಿ ಎಂದು ಹೇಳುತ್ತಾರೆ. ತಂದೆಯ ಮಾತನ್ನು ಒಪ್ಪಿದ ವಾಲಖಿಲ್ಯರು ನಾವು ಮಾಡಿದ ಸಂಕಲ್ಪವೂ ಇನ್ನು ಮುಂದೆ ನಿಮ್ಮದೇ ಎಂದು ಹೇಳಿ ಅದನ್ನು ಈಡೇರಿಸುವ ಹೊಣೆಯನ್ನು ಕಶ್ಯಪರಿಗೇ ಬಿಡುತ್ತಾರೆ. ಹಾಗೆ ವಾಲಖಿಲ್ಯರ ಸಂಕಲ್ಪ ಶಕ್ತಿಯೂ ಕಶ್ಯಪರ ತಪಸ್ಸಿನ ಫಲವೂ ಸೇರಿ ಹುಟ್ಟಿದವ ಗರುಡ. ) ಮುರಿದುಬೀಳುತ್ತಿರುವ ಆಲದಮರದ ಕೊಂಬೆಯನ್ನು ಕೊಕ್ಕಿನಲ್ಲಿಯೂ.. ಗಜಕಚ್ಛಪರನ್ನು ಕಾಲಿನಲ್ಲಿಯೂ ಗರುಡ ಎತ್ತಿಕೊಂಡು ಸಾಗುತ್ತಿರುವಾಗ ತಪೋನಿರತರಾದ ವಾಲಖಿಲ್ಯರಿಗೆ ಎಚ್ಚರವಾಗುತ್ತದೆ. ಗುರುತರವಾದ ಭಾರವನ್ನು ಎತ್ತಿಕೊಂಡು ಸಾಗುತ್ತಿರುವ ಇವ ಅತ್ಯಂತ ಪರಾಕ್ರಮಿಯೇ ಸರಿ ಹಾಗಾಗಿ ಇವ "ಗರುಡ" ಎಂದು ಕರೆಯುತ್ತಾರೆ.🙏🙏
ಉಳಿದದ್ದು ಮುಂದಿನ ಭಾಗದಲ್ಲಿ
Subscribe to:
Post Comments (Atom)
No comments:
Post a Comment