Thursday, June 26, 2025
ಗಾಲವ.. ಮುಂದಿನ ಭಾಗ
ಗಾಲವ ಮುಂದುವರಿದು...
ಗುರುಗಳಾದ ವಿಶ್ವಾಮಿತ್ರರ ಮಾತುಗಳನ್ನು ಕೇಳಿದ ಗಾಲವನಿಗೆ ನಿಂತ ನೆಲವೇ ಬಿರಿದ ಅನುಭವವಾಯಿತು. ಸಾಮಾನ್ಯವಾದ ಒಂದು ಕುದುರೆಯನ್ನು ತಂದುಕೊಡಲು ಕಷ್ಟವಿದ್ದ ಕಡು ಬಡವನಾದ ಗಾಲವನಿಗೆ ವಿಶಿಷ್ಟ ಲಕ್ಷಣ ಹೊಂದಿದ ದುರ್ಲಭವಾದ ಎಂಟುನೂರು ಕುದುರೆಗಳನ್ನು ತರುವುದು ಅಸಾಧ್ಯವಾದ ಮಾತೇ ಸರಿ. ಗಾಲವ ತನ್ನ ಬಡತನವನ್ನು ಬಹಳವಾಗಿ ಹಳಿದುಕೊಂಡ... ಈ ಪ್ರಪಂಚದಲ್ಲಿ ಬಡವನಾಗಿ ಹುಟ್ಟಕೂಡದು... ಶ್ರೀಮಂತನಾದರೆ ಬಯಸಿದ್ದನ್ನು ಪಡೆಯಬಹುದು..ಹೀಗೆ ಯೋಚಿಸುತ್ತಾ ತನ್ನ ನಿರ್ಧಾರದ ಬಗ್ಗೆಯೂ ಬೇಸರ ಮೂಡಿತು. ಗುರುಗಳು ಬೇಡವೆಂದರೂ ನಾನೇ ಹಠಮಾರಿಯಂತೆ ಮತ್ತೆ ಮತ್ತೆ ಒತ್ತಾಯಿಸಿ ಗುರುಗಳ ಆಗ್ರಹಕ್ಕೆ ಕಾರಣನಾದೆ... ನಾನು ಪುನಃ ಪುನಃ ಗುರುಗಳನ್ನು ಕೇಳಬಾರದಿತ್ತು.... ಏನೇನೋ ಯೋಚಿಸುತ್ತಾ ಗುರುಗಳಿಗೆ ವಂದಿಸಿ ಆಶ್ರಮದಿಂದ ಹೊರಬಂದ. ಎಲ್ಲಿ ಹೋಗುವುದು ..ಅಶ್ವಗಳನ್ನು ಹೇಗೆ ಸಂಪಾದಿಸುವುದು.. ಯಾವ ದಾರಿಯೂ ಅವನಿಗೆ ಗೋಚರಿಸಲಿಲ್ಲ. ಚಿಂತೆಯಲ್ಲಿಯೇ ಅವನು ಅನ್ನಾಹಾರವನ್ನು ತೊರೆದ.. ತನ್ನಷ್ಟಕ್ಕೆ ತಾನೇ ಅಳುತ್ತಿದ್ದ . ಆಹಾರ ಸೇವಿಸದೇ ಅವನ ದೇಹದಲ್ಲಿ ಮೂಳೆ ಚರ್ಮಗಳು ಮಾತ್ರ ಉಳಿದಿತ್ತು. ಇನ್ನು ಬೇರೆ ದಾರಿಯೇ ಇಲ್ಲ ಹೀಗೆ ಊಟ ಮಾಡದೇ ಆತ್ಮಹತ್ಯೆ ಮಾಡಿಕೊಳ್ಳುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದ. ಹಾಗೆ ದಿನಗಳನ್ನು ಕಳೆಯುತ್ತಿರುವಾಗ ಒಂದು ಯೋಚನೆ ಬಂತು. ದೇವತೆಗಳನ್ನು ಆರಾಧಿಸಿ ಆ ಮೂಲಕ ಒಂದು ದಾರಿಯನ್ನು ಕಂಡುಕೊಂಡರೆ ಹೇಗೆ.... ಅದೇ ಸರಿ ಎಂದು ತೀರ್ಮಾನಕ್ಕೆ ಬಂದ . ಯಾವ ದೇವತೆಯನ್ನು ಪ್ರಾರ್ಥಿಸಬೇಕು ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿದಾಗ ದೇವತೆಗಳೂ ಕೂಡ ತಮ್ಮ ಇಷ್ಟಾರ್ಥ ಸಿಧ್ಧಿಗಾಗಿ ಯಾರನ್ನು ಆರಾಧಿಸುವರೋ ಆ ಮಹಾವಿಷ್ಣುವೇ ತನ್ನ ಸಂಕಲ್ಪವನ್ನೂ ಈಡೇರಿಸುತ್ತಾನೆ ಎಂದು ತೀರ್ಮಾನಿಸಿ ಪ್ರಾರ್ಥಿಸಲು ತೊಡಗಿದ. ವಿಷ್ಣು ಪ್ರಾರ್ಥನೆಗೆ ತೊಡಗಿದಾಕ್ಷಣ ಮಹಾವಿಷ್ಣುವಿನ ವಾಹನವಾದ ಗರುಡ ಕಾಣಿಸಿಕೊಂಡ. '' ನನ್ನ ಮಿತ್ರನಾದ ನೀನು ಆಪತ್ತಿನಲ್ಲಿರುವಾಗ ನಿನಗೆ ಸಹಾಯ ಮಾಡುವ ಉದ್ದೇಶದಿಂದ ಬಂದಿದ್ದೇನೆ. ನೀನು ಬಡವನಾಗಿರುವೆ ಎಂಬ ಚಿಂತೆಯನ್ನು ಬಿಟ್ಟು ಬಿಡು.. ಶ್ರೀ ಹರಿಯನ್ನು ಹೊತ್ತು ತಿರುಗುವ ನನ್ನ ಬಳಿ ಬೇಕಾದಷ್ಟು ಸಂಪತ್ತಿದೆ. ನಿನಗೆ ಯಾವ ರೀತಿಯ ಸಹಾಯ ಮಾಡಲಿ ಹೇಳು" ಎಂದು ಕೇಳುತ್ತಾನೆ. (ಇಲ್ಲಿ ಗರುಡನು ಗಾಲವ ನನ್ನು ನೀನು ನನ್ನ ಮಿತ್ರನೆಂದು ಕರೆಯುತ್ತಾನೆ. ಆದರೆ ಅಂತಹ ಮೈತ್ರಿ ಯಾವಾಗ ಏರ್ಪಟ್ಟಿತು ಎಂಬ ಬಗ್ಗೆ ನನಗೆ ಎಲ್ಲಿಯೂ ಸಿಗಲಿಲ್ಲ ಗೊತ್ತಿದ್ದವರು ತಿಳಿಸಿ)
"ಗಾಲವ ನಿನಗಾಗಿ ನಾನು ಸಂಪೂರ್ಣ ಭೂಮಂಡಲವನ್ನು ಸಂಚರಿಸಲು ಸಿದ್ಧನಿದ್ದೇನೆ ಮಹಾವಿಷ್ಣುವು ನಿನಗೆ ಸಹಾಯ ಮಾಡಲೆಂದೇ ನನ್ನನ್ನು ಕಳಿಸಿಕೊಟ್ಟಿದ್ದಾನೆ ನಾನು ನಿನಗೆ ಈ ಭೂಮಿಯ ಎಲ್ಲಾ ದಿಕ್ಕುಗಳ ಮಹತ್ವವನ್ನೂ ಮತ್ತು ಆ ದಿಕ್ಕಿನಲ್ಲಿ ವಾಸಮಾಡುವ ಜೀವರಾಶಿಗಳ ಸೃಷ್ಠಿ,ಅವುಗಳ ಗುಣಸ್ವಭಾವ ಅವರ ಹಿರಿಮೆಯನ್ನು ಹೇಳುತ್ತೇನೆ" ಎಂದು ಪೂರ್ವ ದಿಕ್ಕಿನಿಂದ ಆರಂಭಿಸಿ ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ನಾಸಮಾಡುವ ದೇವತೆಗಳು ರಾಕ್ಷಸಲು, ಗಂಧರ್ವ, ಯಕ್ಷ, ಕಿನ್ನರ, ನಾಗ, ಮುಂತಾದ ವಿಭಾಗಗಳನ್ನೂ, ಅವರುಗಳ ಸೃಷ್ಠಿಯ ಹಿನ್ನೆಲೆಯನ್ನು ಹೇಳುತ್ತಾನೆ. ಆಗ ಗಾಲವನು ಗರುಡ ಮೊದಲು ಹೇಳಿದ.. ದೇವತೆಗಳ, ಸಜ್ಜನರ ಆವಾಸವಾಗಿರುವ ಪೂರ್ವ ದಿಕ್ಕಿನ ಕಡೆಗೇ ಸಾಗೋಣ ಎಂದು ಹೇಳುತ್ತಾನೆ. ಆಯಿತು ಹಾಗಿದ್ದರೆ ನನ್ನನ್ನೇರಿ ಕುಳಿತುಕೋ ಎಂದು ಹೇಳಿ ಗಾಲವನನ್ನು ಬೆನ್ನೇರಿಸಿಕೊಂಡು ಗರುಡ ಪೂರ್ವ ದಿಕ್ಕಿಗೆ ಪ್ರಯಾಣ ಆರಂಭಿಸುತ್ತಾನೆ. ಗರುಡ ಹಾರುತ್ತಿರುವ ವೇಗಕ್ಕೆ ಅವನ ದೇಹ ಬಿಸಿಯಾಗುತ್ತದೆ. ಸ್ವತಃ ಅಗ್ನಿಯನ್ನೇ ಧರಿಸಿ ಅವನು ಹಾರುತ್ತಿರುವನೋ ಎಂದು ಭಾಸವಾಗುತ್ತದೆ. ಗಾಲವನಿಗೆ ಭಯವಾಗತೊಡಗುತ್ತದೆ ಗರುಡನನ್ನು ಕುರಿತು "ಅಯ್ಯಾ ನಿನ್ನ ವೇಗವನ್ನು ಗಮನಿಸಿದಾಗ ನಿನ್ನನ್ನೇರಿದ ನನಗೆ ಬದುಕುತ್ತೇನೆ ಎಂಬ ವಿಶ್ವಾಸವೇ ಉಳಿದಿಲ್ಲ .. ಅಗ್ನಿಯಂತೆ ಬಿಸಿಯಾದ ನಿನ್ನ ದೇಹದಿಂದ ನಾನು ಭಸ್ಮವಾಗಿ ಬಿಡುವೆನೋ ಅನ್ನಿಸುತ್ತಿದೆ. ಹಾಗೆ ನನ್ನ ಸಾವು ಸಂಭವಿಸಿದರೂ ನಿನಗೇ ಬ್ರಾಹ್ಮಣನೋರ್ವನನ್ನು ಕೊಂದ ಕಳಂಕ ತಟ್ಟುತ್ತದೆ ಅದಕ್ಕಿಂತ ಹೆಚ್ಚಾಗಿ ನಾನು ಗುರುಗಳಾದ ವಿಶ್ವಾಮಿತ್ರರಿಗೆ ಗುರುದಕ್ಷಿಣೆಯಾಗಿ ಸಲ್ಲಿಸಬೇಕಾದ ಎಂಟುನೂರು ಕುದುರೆಗಳನ್ನು ಸಲ್ಲಿಸಲಾಗಲಿಲ್ಲವಲ್ಲಾ ಎಂಬ ಖೇದವೂ ಕಾಡುತ್ತದೆ. ನಿನ್ನ ವೇಗವನ್ನು ಕಡಿಮೆ ಮಾಡಿ ಸುಡುತ್ತಿರುವ ನಿನ್ನ ದೇಹದ ಬಿಸಿಯನ್ನು ತಗ್ಗಿಸುವೆಯಾ" ಎಂದು ವಿನಂತಿಸಿಕೊಳ್ಳುತ್ತಾನೆ. ಅಲ್ಲಿಯವರೆಗೆ ಗಾಲವನಿಗೆ ಏನು ಬೇಕಾಗಿದೆಯೆಂದು ತಿಳಿಯದ ಗರುಡ ಹೇಳಿದ, "ಗಾಲವ ಈ ವಿಷಯವನ್ನು ಮೊದಲೇ ಹೇಳುವುದಲ್ಲವೆ.. ನಿನಗೆ ಬೇಕಾದ ಕುದುರೆಗಳನ್ನು ಪಡೆಯಲು ಅವು ಎಲ್ಲಿ ಸಿಗಬಹುದು ಎಂದು ಯೋಚಿಸಿ ಪ್ರಯಾಣವನ್ನು ಆರಂಭಿಸುವುದು ಸೂಕ್ತವಾಗಿರಲಿಲ್ಲವೆ ... ಅದೋ ನೋಡು ಸಮುದ್ರದ ಸಮೀಪ ಕಾಣಿಸುತ್ತಿರುವ ದೊಡ್ದ ಪರ್ವತವನ್ನು ನೋಡು ಅದರ ಹೆಸರು ''ವೃಷಭ ಪರ್ವತ'' ಎಂಬುದಾಗಿ ನಾವು ಅಲ್ಲಿಗೆ ಹೋಗಿ ಏನಾದರೂ ಸ್ವಲ್ಪ ಆಹಾರವನ್ನು ಸೇವಿಸಿ ಕುದುರೆಗಳಿಗಾಗಿ ಯಾವ ದಿಕ್ಕಿಗೆ ಹೋಗುವುದು ಸೂಕ್ತ ಎಂದು ಯೋಚಿಸೋಣ ಆಗದೆ?" ಗರುಡನ ಮಾತಿಗೆ ಗಾಲವನೂ ಒಪ್ಪುತ್ತಾನೆ, ಹಾಗೆಯೇ ಅವರು ವೃಷಭ ಪರ್ವತದ ಶಿಖರದಲ್ಲಿ ಇಳಿಯುತ್ತಾರೆ.
🙏🙏
ಮುಂದಿನ ಕಥೆ ನಂತರದಲ್ಲಿ🙏🙏.
Subscribe to:
Post Comments (Atom)
No comments:
Post a Comment