Saturday, June 28, 2025

ಗಾಲವ... ಮುಂದಿನ ಭಾಗ

ಗರುಡ.. ಗಾಲವರು ವೃಷಭ ಪರ್ವತದಲ್ಲಿ ಬಂದು ಇಳಿದಾಕ್ಷಣ ಅಲ್ಲಿಯೇ ಅನತಿ ದೂರದಲ್ಲಿ ಒಂದು ಆಶ್ರಮವನ್ನು ನೋಡಿದರು. ಯಾರೋ ಖುಷಿಗಳು ಎಲೆಮನೆಯನ್ನು ಕಟ್ಟಿಕೊಂಡು ತಪಸ್ಸಿನಲ್ಲಿ ತೊಡಗಿಕೊಂಡಿರಬೇಕು ಎಂದುಕೊಂಡು ಅತ್ತಲೇ ಸಾಗಿದರು... ಅಲ್ಲಿ ಶಾಂಡಿಲಿ ಎಂಬ ತಪಸ್ಪಿನಿಯೊಬ್ಬಳು ವಾಸಮಾಡಿಕೊಂಡಿದ್ದಳು. ಇವರಿಬ್ಬರನ್ನು ನೋಡಿದಾಕ್ಷಣ ತುಂಬಾ ಆದರದಿಂದ ಸ್ವಾಗತಿಸಿ ಸತ್ಕಾರ ಮಾಡಿದಳು. ಇಬ್ಬರನ್ನೂ ದ್ವಿಜರೆಂದೇ ಪರಿಗಣಿಸಿ ಉತ್ತಮವಾದ ಭೋಜನವನ್ನು ಸಿದ್ಧಗೊಳಿಸಿ ಬಡಿಸಿದಳು. (ಈ ಶಾಂಡಿಲಿ ಮತ್ತು ಸೀತಾನ್ವೇಷಣೆಯ ಕಾಲದಲ್ಲಿ ಜಾಂಬವಾದಿಗಳಿಗೆ ಸಿಕ್ಕ ಸ್ವಯಂಪ್ರಭೆ ಒಬ್ಬಳೇ ಎಂಬ ಉಲ್ಲೇಖ ಇದೆ) ಗರುಡ ಗಾಲವರಿಬ್ಬರೂ ಹೊಟ್ಟೆತುಂಬಾ ಊಟ ಮಾಡಿದ ಮರುಕ್ಷಣದಲ್ಲಿಯೇ ಗಾಡವಾದ ನಿದ್ರೆ ಅವರನ್ನು ಆವರಿಸಿತು. ಅಲ್ಲಿಯೇ ಅವರು ಕೆಲಕಾಲ ಮಲಗಿದರು. ಸ್ವಲ್ಪ ಸಮಯದ ಮೇಲೆ ಎಚ್ಚರಗೊಂಡು ನೋಡಿದಾಗ ಗರುಡನ ರೆಕ್ಕೆಗಳೆಲ್ಲಾ ಉದುರಿ ಹೋಗಿದ್ದವು ಕೊಕ್ಕು ಮತ್ತು ಕಾಲುಗಳನ್ನು ಹೊಂದಿ ಕೇವಲ ಒಂದು ಮಾಂಸದ ಮುದ್ದೆಯ ಹಾಗೆ ಅವನು ಕಾಣಿಸುತ್ತಿದ್ದ. ಆ ಸ್ಥಿತಿಯಲ್ಲಿ ಸ್ವತಃ ರೆಕ್ಕೆ ಕಳೆದುಕೊಂಡ ಗರುಡನಿಗಿಂತ ಗಾಲವನಿಗೆ ಹೆಚ್ಚು ದುಃಖವಾಯಿತು .... ತನ್ನ ಗುರುದಕ್ಷಿಣೆಯನ್ನು ಸಲ್ಲಿಸಲು ಒದಗಿಬಂದ ಒಂದು ಸಹಾಯವೂ ನಿಷ್ಟ್ರಯೋಜಕವಾಗಿ ಹೋಯಿತಲ್ಲಾ ಮುಂದೇನು ಮಾಡಲಿ ಎಂದು ದುಃಖಿಸತೊಡಗಿದ. ರೆಕ್ಕೆಗಳನ್ನು ಕಳೆದುಕೊಂಡು ದುಃಖಿತನಾಗಿದ್ದ ಗರುಡನನ್ನು ಕುರಿತು "ಅಯ್ಯಾ ಈ ಪವಿತ್ರನಾದ ಪ್ರದೇಶದಲ್ಲಿ ನಿನ್ನಂತಹ ಮಹಾತ್ಮನಿಗೆ ಹಾನಿಯಾಯಿತು ಎಂದಾದರೆ ಬಹುಶಃ ಸ್ವತಃ ನೀನೆ ಮನಸ್ಸಿನಲ್ಲಿ ಯಾವುದೋ ಕೆಡುಕನ್ನು ಯೋಚಿಸಿರಬೇಕು... ಹಾಗೇನಾದರೂ ಇದ್ದದ್ದೇ ಆದರೆ ಶಾಂಡಿಲಿಯನ್ನು ಕಂಡು ಕ್ಷಮೆಯನ್ನು ಯಾಚಿಸು" ಎಂದು ಸೂಚಿಸುತ್ತಾನೆ. ಅಗ ಗರುಡ " ಹೌದು ನಾನು ಈಕೆಯನ್ನು ನೋಡಿದಾಗ ಸರ್ವಗುಣ ಸಂಪನ್ನಳಾದ ಈಕೆ ಬ್ರಹ್ಮಲೋಕದಲ್ಲಿಯೋ ಕೈಲಾಸದಲ್ಲಿಯೋ ಅಥವಾ ವೈಕುಂಠ ಲೋಕದಲ್ಲಿಯೋ ಇರಬೇಕಾದವಳು ಎಂದು ಯೋಜಿಸಿದ್ದೆ ಅದಕ್ಕಿಂತ ಹೊರತಾಗಿ ಇನ್ಯಾವುದೇ ದುರಾಲೋಚನೆ ಮಾಡಲಿಲ್ಲ... ಏನೇ ಇರಲಿ ಅವಳ ಬಳಿಗೇ ಹೋಗಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿ ಶಾಂಡಿಲಿಯ ಸಮ್ಮುಖಕ್ಕೆ ಹೋಗಿ ತನಗಾದ ದುಃಸ್ಥಿತಿಯನ್ನು ನಿವೇದಿಸಿಕೊಂಡ. ಆಕೆ ಮುಗುಳ್ನಗುತ್ತಾ "ಗರುಡ ನೀನು ಯೋಚಿಸಿದ ವಿಷಯ ಕೆಟ್ಟದಲ್ಲದೇ ಹೋದರೂ ನನ್ನ ಯೋಗ್ಯತೆಯನ್ನು ಅವಮಾನಿಸಿದ ಹಾಗಾದ್ದರಿಂದ ನಿನಗೆ ಇಂತಹ ಸ್ಥಿತಿ ಉಂಟಾಯಿತು. ಆದರೆ ಈಗ ಉದುರಿಹೋದ ನಿನ್ನ ಗರಿಗಳೆಲ್ಲಾ ಮತ್ತೆ ಹುಟ್ಟಿಕೊಳ್ಳಲಿ " ಎಂದು ಹೇಳಿದಳು. ಮರುಕ್ಷಣದಲ್ಲಿಯೇ ಗರುಡನ ರೆಕ್ಕೆಗಳು ಚಿಗುರಿಕೊಂಡವು. ಸಂತೋಷ ಹೊಂದಿದ ಗರುಡ.. ಗಾಲವರು ತಪಸ್ವಿನಿಗೆ ವಂದಿಸಿ ಬೀಳ್ಕೊಂಡು ಮುಂದಿನ ಪ್ರಯಾಣ ಆರಂಭಿಸಿದರು. ಅವರು ಹಾಗೆ ಪ್ರಯಾಣಿಸುತ್ತ ಮುಂದೆ ಸಾಗಿದರೂ ಗಾಲವನಿಗೆ ಬೇಕಾದ ಲಕ್ಷಣಗಳುಳ್ಳ ಕುದುರೆಗಳು ಕಾಣಿಸಲಿಲ್ಲ..ಹೀಗೆ ಮುಂದೆ ಸಾಗುತ್ತಿರುವಾಗ ವಿಶ್ವಾಮಿತ್ರರು ಇವರಿಬ್ಬರನ್ನು ನೋಡಿದರು, ಗರುಡನ ಜೊತೆಯಲ್ಲಿರುವ ಗಾಲವನನ್ನು ಕುರಿತು "ಗಾಲವ.. ನೀನಾಗಿಯೇ ಗುರುದಕ್ಷಿಣೆಯನ್ನು ಸಲ್ಲಿಸುತ್ತೇನೆ ಎಂದು ಮಾತು ಕೊಟ್ಟಿದ್ದೀ.. ಆ ಮಾತಿನ ಅರ್ಥ ಯಾವಾಗಲಾದರೂ ಸಲ್ಲಿಸಿದರೆ ಆದೀತು ... ಬೇಕಾದಷ್ಟು ಸಮಯ ಇದೆ ಎಂದು ಭಾವಿಸಿಕೊಳ್ಳಬೇಡ... ನಾನಿಲ್ಲಿ ಕೆಲವು ಸಮಯ ಮಾತ್ರ ಇರುತ್ತೇನೆ ನೀನು ಕೊಡುವುದೇ ಆದರೆ ನಾನಿಲ್ಲಿರುವಾಗಲೇ ಕೊಡಬೇಕು" ಎಂದು ಹೇಳಿ ಎಚ್ಚರಿಸಿದರು. ಗುರುಗಳ ಮಾತನ್ನು ಕೇಳಿದ ಗಾಲವನಿಗೆ ಆತಂಕವಾಯಿತು. ಬಹಳವಾಗಿ ದುಖಿಸತೊಡಗಿದ...🙏 ಮುಂದುವರಿಯುವುದು🙏🙏

No comments:

Post a Comment