Monday, June 30, 2025
ಗಾಲವ 5ನೇ ಭಾಗ
ಯಯಾತಿಯಿಂದ ಬೀಳ್ಕೊಂಡು ಗರುಡ ಗಾಲವರು ಮಾಧವಿಯನ್ನೂ ಕರೆದುಕೊಂಡು ಪ್ರತಿಷ್ಠಾನಪುರದಿಂದ ಹೊರಬಂದರು.. ಸುಪರ್ಣನು ಗಾಲವನನ್ನು ಕುರಿತು.. "ಮಿತ್ರಾ.. ನೀನು ಯಯಾತಿಪುತ್ರಿಯಾದ ಈ ಮಾಧವಿಯನ್ನು ಕರೆದುಕೊಂಡು ಹೋಗಿ ನಿನಗೆ ಬೇಕಾದ ಅಶ್ವಗಳನ್ನು ಸಂಪಾದಿಸಿಕೊಂಡು ನಿನ್ನ ಗುರುಗಳಿಗೆ ಕೊಡು ನಾನಿನ್ನು ತೆರಳುತ್ತೇನೆ" ಎಂದು ಹೇಳಿ ಗಾಲವನಿಂದ ಅನುಮತಿ ಪಡೆದು ಸಾಗುತ್ತಾನೆ. ಗಾಲವನು ಗರುಡ ತೆರಳಿದ ಮೇಲೆ ತಾನು ಯಾವ ದಿಕ್ಕಿಗೆ ಸಾಗಬೇಕು ಎಂದು ಯೋಚಿಸತೊಡಗಿದಾಗ ಸೂರ್ಯ ವಂಶದ ಅರಸನಾದ ಹರ್ಯಶ್ವ ನೆನಪಾಗುತ್ತಾನೆ. ಹಾಗೆ ಅಯೋಧ್ಯೆಯ ಅರಸನಾದ ಹರ್ಯಶ್ವನ ಬಳಿಗೆ ಹೋಗುವುದೇ ಸೂಕ್ತ ಎಂದು ಮಾಧವಿಯೊಂದಿಗೆ ಅಯೋಧ್ಯೆಗೆ ಬರುತ್ತಾನೆ. ಸೂರ್ಯವಂಶದ ಅರಸನಾದ ಹರ್ಯಶ್ವ ಗಾಲವ ಮಾಧವಿಯರನ್ನು ಸ್ವಾಗತಿಸಿ ಸತ್ಕರಿಸುತ್ತಾನೆ. ಆಗ ಗಾಲವ ತಾನು ಗುರುದಕ್ಷಿಣೆಯ ಸಂಗ್ರಹಕ್ಕಾಗಿ ಬಂದ ವಿಚಾರವನ್ನು ಹೇಳಿ, ಮೊದಲು ಯಯಾತಿಯಲ್ಲಿ ಹೋದ ವಿಷಯವನ್ನೂ.. ಯಯಾತಿ ಮಾಧವಿಯನ್ನು ಕಳುಹಿಕೊಟ್ಟದ್ದನ್ನೂ ಹೇಳುತ್ತಾನೆ. ಹರ್ಯಶ್ವನಿಗೆ ಮಾಧವಿಯನ್ನು ನೋಡಿದಾಕ್ಷಣ ಮನಸ್ಸಿನಲ್ಲಿ ಆಸೆ ಮೂಡಿತು ಒಬ್ಬ ವಂಶೋದ್ಧಾರಕನಾದ ಪುತ್ರನನ್ನು ಇವಳಿಂದಲೇ ಪಡೆದರೆ ತನಗೂ ತನ್ನ ವಂಶಕ್ಕೂ ಸಾರ್ಥಕತೆ ಒದಗುತ್ತದೆ ಎಂದೇ ಭಾವಿಸಿದ. ಮಾಧವಿಗೆ ಪ್ರತಿಯಾಗಿ ಏನನ್ನು ಬೇಕಾದರೂ ಕೊಟ್ಟುಬಿಡಬಹುದು ಎಂಬ ನಿರ್ಧಾರಕ್ಕೆ ಬಂದ. ಆಗ ಗಾಲವ ". ಅರಸಾ ಈಕೆ ನನ್ನ ಜೊತೆಗೆ ಇರುವ ಕನ್ಯೆ ನೀನು ಈಕೆಯನ್ನು ನೋಡುವ ನೋಟದಲ್ಲಿಯೇ ಇವಳನ್ನು ಬಯಸಿದ್ದಿ ಎಂದು ಅರ್ಥಮಾಡಿಕೊಳ್ಳಬಲ್ಲೆ. ನೀನು ನನಗೆ ಕನ್ಯಾಶುಲ್ಕವನ್ನು ನೀಡಿ ಇವಳನ್ನು ಸತಿಯನ್ನಾಗಿ ಹೊಂದಬಹುದು " ಎಂದು ಹೇಳಿ ತನಗೆ ಬೇಕಾದ ಏಕಕರ್ಣ ಕಪ್ಪಾಗಿರುವ ಬಿಳಿ ದೇಹದ ಎಂಟುನೂರು ಅಶ್ವಗಳು ಬೇಕು ಎನ್ನುತ್ತಾನೆ. ಇದನ್ನು ಕೇಳಿದ ಹರ್ಯಶ್ವನಿಗೆ ಒಮ್ಮೆಲೇ ನಿರಾಸೆಯಾಗುತ್ತದೆ. "ಗಾಲವರೇ ನನ್ನ ಆಸೆಯೂ ನಿರಾಸೆಯಾಯ್ತು ... ನಿಮ್ಮ ನಿರೀಕ್ಷೆಯೂ ಹುಸಿಯಾಯ್ತ ನನ್ನ ಅಶ್ವಶಾಲೆಯಲ್ಲಿ ಅಸಂಖ್ಯ ಅಶ್ವಗಳಿರುವುದು ನಿಜ ಆದರೆ... ನೀವು ಹೇಳಿದ ಲಕ್ಷಣಗಳನ್ನು ಹೊಂದಿದ ಕೇವಲ ಎರಡುನೂರು ಕುದುರೆಗಳು ಮಾತ್ರ ಇವೆ, ಇಷ್ಟಾದರೂ ನಿಮ್ಮಲ್ಲಿ ಒಂದು ಬೇಡಿಕೆಯಿದೆ.. ಅಪೂರ್ವ ಸೌಂದರ್ಯವತಿಯಾದ ಈಕೆಯಿಂದ ನಾನೊಂದು ಸಂತಾನ ಹೊಂದಬೇಕು ಎಂದು ಬಯಸಿದ್ದೇನೆ, ಆದರೆ ನಿಮ್ಮನ್ನು ನಿರ್ಭಂಧಿಸಲಾರೆ" ಎನ್ನುತ್ತಾನೆ. ಗಾಲವನಿಗೂ ಏನು ಉತ್ತರಿಸಬೇಕೆಂಬುದೇ ತೋಚಲಿಲ್ಲ. ತನ್ನ ಕಾರ್ಯಕ್ಕಾಗಿ ಅಲ್ಲಿಂದ ಹೊರಡದೇ ಅನ್ಯ ಮಾರ್ಗವಿರಲಿಲ್ಲ.. ಆಗ ಅವನೊಂದಿಗೆ ಇದ್ದ ಮಾಧವಿಯೇ ಒಂದು ಸೂಚನೆ ಕೊಡುತ್ತಾಳೆ " ಅಯ್ಯಾ ಮಹರ್ಷಿ ನಿಮಗೆ ಬೇಕಾದ ಲಕ್ಷಣಗಳನ್ನು ಹೊಂದಿದ ಕುದುರೆಗಳು ಒಂದೆಡೆಯಲ್ಲಿಯೇ ಸಿಗುವುದು ಅಸಾಧ್ಯವಾಗಿರಲೂ ಬಹುದು ಹಾಗಾಗಿ.. ಈ ಅರಸನಲ್ಲಿರುವ ಎರಡುನೂರು ಕುದುರೆಗಳನ್ನು ಪಡೆದುಕೊಳ್ಳಿ ಅದಕ್ಕೆ ಪ್ರತಿಯಾಗಿ ಅವನ ಬಯಕೆಯಂತೆ ಒಂದು ಸಂತಾನವಾಗುವವರೆಗೆ ನಾನಿಲ್ಲಿಯೇ ಇರುತ್ತೇನೆ. ಆತಂಕ ಪಡಬೇಕಾದ್ದಿಲ್ಲ... ನನಗೊಬ್ಬರು ತಪಸ್ವಿಗಳು ಒಂದೊಂದು ಮಗುವನ್ನ ಹೆತ್ತ ಮೇಲೆಯೂ ಮತ್ತೆ ನಾನು ಕನ್ಯೆಯಾಗಿಯೇ ಉಳಿಯುವೆನೆಂದು ವರ ನೀಡಿದ್ದಾರೆ''(ಮಾಧವಿಗೆ ಈ ವರವನ್ನು ಯಾರು ಯಾವಾಗ ಕೊಟ್ಟರು ಎಂಬ ವಿಷಯ ನನಗೆ ತಿಳಿದಿಲ್ಲ.. ಮಹಾಭಾರತದಲ್ಲೂ ಉಲ್ಲೇಖ ಕಾಣಿಸಲಿಲ್ಲ) ಮಾಧವಿಯಾಡಿದ ಮಾತನ್ನು ಕೇಳಿ ಗಾಲವನಿಗೆ ಅದು ಸರಿಯನ್ನಿಸಿತು. ಅವಳು ಹೇಳಿದಂತೆಯೇ ಹರ್ಯಶ್ವನಿಗೆ ನಿಬಂಧನೆಯನ್ನು ವಿಧಿಸಿ ಮಾಧವಿಯನ್ನು ಅವನಿಗೊಪ್ಪಿಸುತ್ತಾನೆ. ಕಾಲ ಕಳೆದಂತೆ ಹರ್ಯಶ್ವ - ಮಾಧವಿಯರ ಪ್ರೀತಿಯ ಸಾಂಗತ್ಯದ ಪ್ರತೀಕವಾಗಿ ಪುತ್ರ ಸಂತಾನವಾಗುತ್ತದೆ. ಹುಟ್ಟಿದ ಮಗುವಿಗೆ "ವಸುಮನಸ" ಎಂದು ನಾಮಕರಣ ಮಾಡುತ್ತಾನೆ. ಕೆಲವು ದಿನಗಳ ತರುವಾಯ ಗಾಲವ ಬಂದು ಮೊದಲೇ ಆಗಿದ್ದ ನಿಬಂಧನೆಯನ್ನು ನೆನಪಿಸುತ್ತಾನೆ. ರಾಜನೂ ಅದನ್ನು ಅನುಮೋದಿಸುತ್ತಾನೆ.. ಅಲ್ಲಿಯವರೆಗೆ ಸುಖದ ಸುಪ್ಪತ್ತಿಗೆಯಲ್ಲಿ ನಲಿದಾಡಿದ್ದ ಮಾಧವಿ ಮನಸ್ಸಿನಲ್ಲಿಯೇ ತನ್ನ ವರವನ್ನು ನೆನಪಿಸಿಕೊಂಡು ಧ್ಯಾನಿಸಿ ಮತ್ತೆ ಕನ್ಯೆಯಾಗಿ ಗಾಲವನನ್ನು ಹಿಂಬಾಲಿಸಲು ಸಿದ್ಧಳಾಗಿಬಿಡುತ್ತಾಳೆ.🙏🙏
ಇನ್ನೂ ಇದೆ ಮುಂದಿನ ಬರಹದಲ್ಲಿ🙏
Subscribe to:
Post Comments (Atom)
No comments:
Post a Comment