Wednesday, August 27, 2025
ಚ್ಯವನ 6
ಸೀಮಿತವಾದ ಪರಿವಾರವನ್ನು ಹಿಂದಿಟ್ಟುಕೊಂಡು ಚ್ಯವನಾಶ್ರಮವನ್ನು ಶರ್ಯಾತಿ ಸೇರಿದ. ಮಹರ್ಷಿಗಳಿಗೆ ವಂಧಿಸಿ ತಾನು ತನ್ನ ಪುತ್ರಿಯನ್ನು ಶಾಸ್ತ್ರೋಕ್ತವಾಗಿ ಧಾರಾಪೂರ್ವಕವಾಗಿ ನೀಡಲು ಸಿಧ್ಧನಾಗಿರುವುದಾಗಿ ಹೇಳಿದ. ಶರ್ಯಾತಿಯ ಮಾತಿನಿಂದ ಚ್ಯವನಮಹರ್ಷಿಗಳಿಗೂ ಸಂತೋಷವಾಯಿತು.
ಕ್ಷಿಪ್ರ ಸಮಯದಲ್ಲಿಯೇ ಅಲ್ಲೊಂದು ಮದುವೆಯ ಸಿದ್ಧತೆಯಾಗಿ ಸಂಭ್ರಮದಿಂದಲೇ ತನ್ನ ಪುತ್ರಿಯನ್ನು ಶರ್ಯಾತಿ ಮಹಾರಾಜ ಚ್ಯವನ ಮಹರ್ಷಿಗೆ ಮದುವೆ ಮಾಡಿಕೊಟ್ಟ... ಜೊತೆಗೆ ಅಪಾರವಾದ ಸಂಪತ್ತನ್ನೂ ಕೂಡ ಬಳುವಳಿಯ ರೂಪದಲ್ಲಿ ಕೊಡಲು ಮುಂದಾದ. ಆದರೆ ಸ್ವಾಭಿಮಾನಿಯಾದ ಚ್ಯವನ " ಅರಸ.. ನಿನ್ನ ಮಗಳ ಹೊರತಾಗಿ ತಾನು ಬೇರೆ ಏನನ್ನೂ ಸ್ವಿಕರಿಸಲಾರೆ" ಎಂದು ನಿರ್ಧಾಕ್ಷಿಣ್ಯದಿಂದಲೇ ಆಡಿದ. ಇದನ್ನು ಕೇಳಿ ತಾನು ಅರ್ಪಿಸಬೇಕೆಂದುಕೊಂಡಿದ್ದ ಸಂಪತ್ತು, ಸುವಸ್ತುಗಳನ್ನು ಅರಸ ಹಿಂದೆ ಪಡೆಯಬೇಕಾಯ್ತು. ಸುವ್ಯವಸ್ಥಿತವಾಗಿ ಮದುವೆ ಮಾಡಿಕೊಟ್ಟ ಶರ್ಯಾತಿ ಮಹಾರಾಜ ಒಂದೆರಡು ದಿನ ಅಲ್ಲಿಯೇ ಪರಿವಾರದೊಂದಿಗೆ ಉಳಿದ. ಅಲ್ಲಿಯವರೆಗೆ ಒಂದು ಎಲೆಮನೆಯನ್ನು ಕೂಡ ಮಾಡಿಕೊಂಡಿರದ ಮಹರ್ಷಿ ಇಂದು ಸಂಸಾರಿಯಾದ ಕಾರಣ ಒಂದು ಎಲೆಮನೆಯನ್ನು ನಿರ್ಮಿಸಲಾಯಿತು. ಅರಸನ ರಾಣಿಯರ ಮುಖದಲ್ಲಿ ಸಲ್ಪವೂ ಸಂತೋಷ ಸಮಾಧಾನಗಳಿರಲಿಲ್ಲ. ಅರಮನೆಯಲ್ಲಿ ಸುಖದಲ್ಲಿ ಕಾಲ ಕಳೆದ ರಾಜಕುಮಾರಿ ಅರಣ್ಯದ ಮಧ್ಯದಲ್ಲಿ ಸಾಮಾನ್ಯವಾದ ಎಲೆ ಮನೆಯಲ್ಲಿ ಬದುಕಬೇಕಾದ ಸ್ಥಿತಿ ಬಂದೊದಗಿತಲ್ಲಾ.. ಎಂಬುದೇ ಅವರ ಕಣ್ಣಿನಲ್ಲಿ ಕಂಬನಿ ತುಂಬಿಸಿತ್ತು. ಹೇಗೋ ಎರಡು ದಿನಗಳನ್ನು ಕಳೆದಮೇಲೆ ರಾಜ ಪರಿವಾರ ಹಿಂತಿರುಗುವುದೆಂದು ನಿರ್ಧಾರವಾಯಿತು. ಆ ಸಮಯಕ್ಕೆ ಸರಿಯಾಗಿ ಸುಕನ್ಯೆ ತನ್ನ ಸೇವಕಿಯರಿಗೆ ಹೇಳಿ ಮುನಿವಧುಗಳು ಉಡುವ ನಾರು ಸೀರೆಯನ್ನು ತರಿಸಿಕೊಂಡಳು. ತಾನು ಧರಿಸಿದ್ದ ಎಲ್ಲಾ ಅಭರಣಗಳನ್ನು ತೆಗೆದು, ತೊಟ್ಟ ರಾಜೋಚಿತವಾದ ಬಟ್ಟೆಗಳನ್ನು ಕಳಚಿ ದಾಸಿಯರು ತಂದ ನಾರುಡುಗೆಯನ್ನು ಉಟ್ಟಳು. ಎಲ್ಲಾ ಆಭರಣ,ಬಟ್ಟೆಗಳನ್ನು ಅರಮನೆಗೆ ಹಿಂತಿರುಗುವ ದಾಸಿಯರ ಕೈಗಿತ್ತಳು. ಕೆಲವು ಹೊತ್ತಿನ ಹಿಂದೆ ಸರ್ವಾಲಂಕಾರ ಭೂಷಿತೆಯಾಗಿ ಕಂಗೊಳಿಸುತಿದ್ದ ಸುಕನ್ಯೆ ಈಗ ನಾರುಡುಗೆಯಲ್ಲಿ ಹೊರ ಬಂದಿದ್ದು ನೋಡಿ ರಾಣಿಯರ ದುಃಖದ ಕಟ್ಟೆ ಒಡೆಯಿತು.. ಎಲ್ಲರೂ ರೋಧಿಸತೊಡಗಿದರು. ಅಳುತ್ತಿದ್ದ ಮಾತೆಯರನ್ನು ಸುಕನ್ಯೆ ತಾನೇ ಮುಂದಾಗಿ ಸಂತೈಸಿದಳು. ಶರ್ಯಾತಿ ಮಹಾರಾಜ ಸುಕನ್ಯೆಗೆ ಮತ್ತೆ ಮತ್ತೆ ಆಶ್ರಮದ ಜೀವನದ ಬಗ್ಗೆ ಹೇಳಿ ಋುಷಿ ಸೇವೆಯಲ್ಲಿ ಎಲ್ಲಿಯೂ ತೊಡಕು ಬಾರದಂತೆ ನಡೆದುಕೊಳ್ಳುವಂತೆ ಎಚ್ಚರಿಸಿ, ಚ್ಯವನ ಮಹರ್ಷಿಗೆ ವಂದಿಸಿ ಆತನ ಅಪ್ಪಣೆಯನ್ನು ಪಡೆದು ಪರಿವಾರದೊಂದಿಗೆ ರಾಜ್ಯದತ್ತ ಪ್ರಯಾಣಿಸಿದ.
ಈಗ ಸುಕನ್ಯೆಗೆ ಆಶ್ರಮವಾಸ... ಸಾಂಧರ್ಭಿಕವಾಗಿ ಎರಡು ದಿನಗಳಿಂದ ನನ್ನನ್ನು ತುಂಬಾ ಕಾಡುತ್ತಿರುವ ಕನಕದಾಸರ ಪದ..ಎರಡು ದಿನಗಳ ಹಿಂದೆ ತೀರಿಹೋದ "ಕಟಗೇರಿ ಅನಂತಾಚಾರ್ಯರು " ಕಟಗೇರಿ ದಾಸರೆಂದೇ ಪ್ರಸಿದ್ಧರಾಗಿ ದಾಸರ ಪದಗಳನ್ನು ಎಲ್ಲೆಲ್ಲಿಯೂ ಪಸರಿಸುವಂತೆ ಮಾಡಿದವರು. ಇವರಿಗೆ ಪ್ರಸಿಧ್ಧರಾದ ಹಲವಾರು ಶಿಷ್ಯರಿದ್ದಾರೆ. ಅಶೋಕವನದಲ್ಲಿದ್ದ ಸೀತೆಯನ್ನು ಕಂಡು ಮಾತಾಡಿದ ಹನೂಮಂತನಲ್ಲಿ ಆಕೆ ಕೇಳುವ ಮಾತು... " ನನ್ನ ಕಂದ ಹಳ್ಳಿಯ ಹನುಮ... ಚೆನ್ನಾಗಿಹರೆ ಲಕ್ಷ್ಮಣ ದೇವರು... ಶ್ರೀಪತಿ ರಾಘವ ಕ್ಷೇಮದಲ್ಲಿಹರೆ. ತುಪ್ಪ ಪಂಚಾಮೃತ ಅಂದು... ಅಡವಿ ಗಡ್ಡೆಗಳಿಂದು.. ಕರ್ಪೂರ ವೀಳ್ಯ ಅಂದು.. ಕುರುಕು ಇಂದು, ಸುಪ್ಪತ್ತಿಗೆ ಮಂಚ ಅಂದು ... ಹುಲ್ಲು ಹಾಸಿಗೆಯಿಂದು, ಶ್ರೀಪತಿ ರಾಘವ ಕ್ಷೇಮದಲ್ಲಿಹರೆ.
ನವವಸ್ತ್ರಗಳು ಅಂದು.. ನಾರಸೀರೆಗಳಿಂದು, ಹೂವಿನ ಗಂಟು ಅಂದು... ಜಡೆಗಳಿಂದು, ಜವ್ವಾಜಿ ಕತ್ತುರಿಯಂದು.. ಭಸಿತ ಧೂಳಿಂದು, ಶ್ರೀವರ ರಾಘವ ಕ್ಷೇಮದಲ್ಲಿಹರೆ. ಕನಕ ರಥಗಳಂದು.. ಕಾಲು ನಡಿಗೆಯಿಂದು, ಘನ ಛತ್ರ ಚಾಮರ ಅಂದು.. ಬಿಸಿಲು ಇಂದು, ಸನಕಾದಿ ಓಲೈಪೆ ಆದಿಕೇಶವ ನಮ್ಮ ಹನುಮೇಶ ರಾಘವ ಕ್ಷೇಮದಲ್ಲಿಹರೆ. ಈ ಪದವನ್ನು ಅದೆಷ್ಟೋ ಪ್ರಸಿದ್ಧ ಗಾಯಕರು ತುಂಬಾ ಚನ್ನಾಗಿಯೇ ಹಾಡಿದ್ದಾರೆ . ಆದರೆ ಕಟಗೇರಿ ದಾಸರು ಹಾಡಿದ್ದನ್ನು ಕೇಳಿದರೆ ಒಂದು ಕ್ಷಣ ನಾವೇ ಅಶೋಕವನದಲ್ಲಿ ಸೀತೆಯ ಸಮ್ಮುಖದಲ್ಲಿ ಕೈ ಜೋಡಿಸಿ ನಿಂತ ಹನೂಮನಾಗಿಬಿಡಬೇಕು. ಇಲ್ಲಿ ಪ್ರಸ್ತುತ ಸುಕನ್ಯೆಯ ಬದುಕೂ ಅದೇ ಅಲ್ಲವೆ.. ಒಂದು ಕ್ಷಣದ ಹಿಂದೆ ಎಲ್ಲವೂ ಇತ್ತು... ಈಗ ಏನೂ ಇಲ್ಲ. ಹಾಗೆಂದು ಯಾರೂ ಒತ್ತಾಯಪೂರ್ವಕವಾಗಿ ಅದನ್ನು ಕಸಿದುಕೊಳ್ಳಲಿಲ್ಲ.. ಸ್ವತಃ ಆಕೆಯೇ ಅದನ್ನು ತೊರೆದಿದ್ದಾಳೆ. ಸಾಮಾನ್ಯರಾದ ನಮಗೆ ಇರುವ ವ್ಯವಸ್ಥೆಯಲ್ಲಿ ಸ್ವಲ್ಪ ಲೋಪವಾದರೆ, ಸಿಗಬೇಕಿದ್ದು ಸಿಗಲು ಒಂದು ಕ್ಷಣ ವಿಳಂಬವಾದರೆ ಅಸಹನೆ.. ಸಿಟ್ಟು ಆವರಿಸಿಬಿಡುತ್ತದೆ. ಆದರೆ ತಾನು ಬದುಕಿನಲ್ಲಿ ಅಳವಡಿಸಿಕೊಂಡು ಬೆಳೆದ ಎಲ್ಲವನ್ನು ಕ್ಷಣಮಾತ್ರದಲ್ಲಿ ಯಾವ ಚಿಂತೆಯೂ ಇಲ್ಲದೆ ತೊರೆದುಬಿಡಲು ಸುಕನ್ಯೆಯಂತವರಿಗೆ, ಸಾವಿತ್ರಿಯಂತವರಿಗೆ, ಶ್ರೀರಾಮನಂತವರಿಗೆ ಮಾತ್ರ ಸಾಧ್ಯ. 🙏🙏
ಸುಕನ್ಯೆ ಆಶ್ರಮ ಜೀವನ ಮುಂದಿನ ಬರಹ..🙏🙏
Friday, August 22, 2025
ಚ್ಯವನ 5
ಚ್ಯವನ ಮಹರ್ಷಿಯ ಮಾತನ್ನ ಕೇಳಿದ ಶರ್ಯಾತಿ ಮಹಾರಾಜನಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವವಾಯಿತು. ಈಗ ತಾನೇ ಹರೆಯಕ್ಕೆ ಕಾಲಿಡುತ್ತಿರುವ ಅತ್ಯಂತ ರೂಪವತಿಯಾದ, ರಾಜಕುಮಾರಿಯಾದ ತನ್ನ ಮಗಳೆಲ್ಲಿ... ಮುದಿತನದಿಂದ ಕೂಡಿದ ದೇಹ ಕೃಷವಾದ, ಸುಕ್ಕುಗಟ್ಟಿದ, ಕಣ್ಣುಗಳನ್ನೂ ಕಳೆದುಕೊಂಡ ಈ ತಪಸ್ವಿಯೆಲ್ಲಿ... ( ಇಲ್ಲಿ ಒಂದು ವಿಷಯ ಗಮನಿಸಬೇಕಾದ್ದು.. ಮಹಾಭಾರತದ ಪ್ರಕಾರ ಚ್ಯವನ ಕೇಳಿದಾಕ್ಷಣ ಶರ್ಯಾತಿ ಸತೋಷದಿಂದಲೇ ತನ್ನ ಮಗಳನ್ನು ಕೊಡಲು ಒಪ್ಪುತ್ತಾನೆ, ಸುಕನ್ಯೆಯೂ ತಂದೆಯ ನಿರ್ಧಾರದಕ್ಕೆ ಅನುಮೋದಿಸುತ್ತಾಳೆ, ಇನ್ನು ದೇವೀ ಭಾಗವತದಲ್ಲಿ ಶರ್ಯಾತಿ ಸುಲಭದಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ) ಈ ಕಾಡಾಡಿಯಾದ ವೃದ್ಧನ ಕೈಗೆ ತನ್ನ ಮಗಳನ್ನು ಒಪ್ಪಿಸಿಕೊಟ್ಟರೆ ಲೋಕ ದೂರದೇ ಇದ್ದೀತೆ... ಪ್ರತಿಯೊಬ್ಬ ತಂದೆ- ತಾಯಿಯರೂ ತಮ್ಮ ಮಕ್ಕಳ ಸುಖಕ್ಕಾಗಿ ಹಂಬಲಿಸುತ್ತಾರೆ... ಹೀಗೆ ಯೋಚಿಸಿದವನು ಚ್ಯವನನಿಗೆ ಏನೂ ಹೇಳದೆ ಮೌನವಾಗಿ ನಮಸ್ಕರಿಸಿ ಪರಿವಾರದೊಂದಿಗೆ ಬಿಡಾರಕ್ಕೆ ಹಿಂತಿರುಗಿ ಬಂದು ಬಿಡುತ್ತಾನೆ.
ಬಂದವನೇ ಆಪ್ತರಾದ ಮಂತ್ರಿಗಳು ಮತ್ತು ಪರಿವಾರದೊಂದಿಗೆ ಸಭೆ ಸೇರುತ್ತಾನೆ. ಎಲ್ಲರೂ ಮೌನವಾಗಿ ಅರಸ ಹೇಳಬಹುದಾದ ಮಾತುಗಳಿಗಾಗಿ ಕಾತರದಿಂದ ನಿರೀಕ್ಷಿಸುತ್ತಾರೆ. ಅವರನ್ನು ಉದ್ದೇಶಿಸಿ... "ತಮಗೆ ಮುನಿಗಳು ಹೇಳಿದ ಮಾತುಗಳ ಬಗ್ಗೆ ತಿಳಿದೇ ಇದೆ, ಆದರೆ ಒಬ್ಬ ತಂದೆಯಾಗಿ ಅವರ ಅಪೇಕ್ಷೆಯನ್ನು ಈಡೇರಿಸಲು ನಾನು ಅಸಮರ್ಥನೆಂದೇ ಭಾವಿಸುತ್ತೇನೆ. ನನ್ನ ಮಗಳು ಅರಮನೆಯ ಸುಖೋಪಭೋಗಗಳನ್ನು ಅನುಭವಿಸುತ್ತಾ ಬೆಳೆದವಳು, ಅಂತಹಾ ನನ್ನ ಕುಮಾರಿಯನ್ನು ಆ ವೃದ್ಧ ತಪಸ್ವಿಯ ವಶಕ್ಕೆ ಒಪ್ಪಿಸಲು ನನ್ನ ಮನಸ್ಸು ಸರ್ವತಾ ಒಪ್ಪುತ್ತಿಲ್ಲ. ಅವಳು ಅರಿಯದೇ ಮಾಡಿದ ಕಾರ್ಯದಿಂದ ಅಷ್ಟು ದೊಡ್ಡ ಶಿಕ್ಷೆಯನ್ನು ಅನುಭವಿಸಲಾರಳು. ಹಾಗಾಗಿ ಬಂದ ಅವಘಡವನ್ನು ನಾವು ಹೇಗೆ ಎದುರಿಸಬೇಕೆಂದು ಬದಲು ಮಾರ್ಗವನ್ನು ಯೋಚಿಸಬೇಕಾಗಿದೆ". ಶರ್ಯಾತಿಯ ಈ ಮಾತಿಗೆ ಯಾರೂ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಜೊತೆಗೆ ಎಲ್ಲರ ಆರೋಗ್ಯವೂ ಕ್ಷಣ ಕ್ಷಣಕ್ಕೂ ಗಂಭೀರವಾಗುತಿತ್ತು. ಈ ಕ್ಷಣ ಕ್ಷಣದ ವಿದ್ಯಮಾನವನ್ನೂ ಸುಕನ್ಯೆ ಗಮನಿಸುತಿದ್ದಳು. ಎಲ್ಲರೂ ನಿರುತ್ತರರಾದಾಗ ತಂದೆಯ ಸಮ್ಮಖಕ್ಕೆ ಅವಳೇ ಒಂದು.. " ಅಪ್ಪಾ... ಸಂಪೂರ್ಣವಾದ ನಮ್ಮ ಪರಿವಾರ ನಾ ಮಾಡಿದ ಅಪರಾಧದಿಂದ ಸಂಕಷ್ಟಕ್ಕೆ ಸಿಲುಕಿದೆ, ಯಾವ ತಪ್ಪನ್ನೂ ಮಾಡದ ನೀವು ಹೀಗೆ ಚಿಂತಿಸಿ ಕಣ್ಣೀರು ಸುರಿಸಬೇಕಾದ್ದಿಲ್ಲ, ಅಪ್ಪಾ... ನಾನು ಇಲ್ಲಿಯವರೆಗೆ ಅರಮನೆಯಲ್ಲಿ ನಿಮ್ಮ ಆರೈಕೆಯಲ್ಲಿ ಸಂತೋಷವಾಗಿ ಕಾಲ ಕಳೆದಿದ್ದೇನೆ. ಆದರೆ... ಅದೇ ಸುಖ ಶಾಶ್ವತವಾಗಿರಬೇಕೆಂದು ಎಂದೂ ಯೋಚಿಸಿದವಳಲ್ಲ. ಆ ಮಹರ್ಷಿಗಳು ನಮಗೆ ಸುಲಭದ ದಾರಿಯನ್ನೇ ತೋರಿಸಿದ್ದಾರೆ, ನನ್ನಿಂದಲಾಗಿ ತಮ್ಮ ಕಣ್ಣುಗಳನ್ನೇ ಕಳೆದುಕೊಂಡ ಅವರ ಬದುಕಿಗೆ ಯಾರು ಬೆಳಕಾಗಬೇಕು. ಒಮ್ಮೆ ಯೋಚಿಸಿ ನೋಡಿ.. ಜೀವನಪೂರ್ತಿ ಅವರ ಸೇವೆಯನ್ನು ಮಾಡುವ ಅವಕಾಶ ನನಗೆ ಒದಗಿ ಬಂತಾದರೆ ಅದು ನನ್ನ ಭಾಗ್ಯ ಎಂದು ಭಾವಿಸಿಕೊಳುತ್ತೇನೆ. ಅರಮನೆಯ ಆಡಂಬರದ ಬದುಕಿಗಿಂತ ಅರಣ್ಯದ ಆ ಶಾಂತ ಬದುಕೇ ನನಗೂ ಹಿತವಾಗುತ್ತದೆ. ನಿಮಗೆ ಯಾವ ಅನುಮಾನವೂ ಬೇಡ... ಈ ಕೂಡಲೇ ನನ್ನನ್ನು ಅವರಿಗೆ ವಿವಾಹ ಮಾಡಿ ಒಪ್ಪಿಸುವ ಮನಸ್ಸು ಮಾಡಿ. ಈ ಮಾತನ್ನು ನಾನು ಯಾವ ಒತ್ತಡವೂ ಇಲ್ಲದೇ ಸಮಾಧಾನದಿಂದಲೇ ಆಡುತ್ತಿದ್ದೇನೆ".
ಸುಕನ್ಯೆಯಾಡಿದ ಮಾತುಗಳನ್ನು ಕೇಳಿದ ಮಂತ್ರಿಗಳಿಗೂ ಪರಿವಾರಕ್ಕೂ ಸ್ವಲ್ಪ ಸಮಾಧಾನವಾದರೂ... ಅರಸ ಶರ್ಯಾತಿಯ ಮನಸ್ಸು ಅಷ್ಟು ಸುಲಭವಾಗಿ ಒಪ್ಪುವ ಸ್ಥಿತಿಯಲ್ಲಿರಲಿಲ್ಲ. "ಬೇಡ ಮಗಳೇ... ಆ ಜೀವನ ನಿನ್ನಿಂದಾಗದು, ಇದು ಗಂಭೀರವಾದ ವಿಷಯ, ಒಂದು ಕ್ಷಣದಲ್ಲಿ ಯೋಚಿಸಿ ತೀರ್ಮಾನ ಕೈಗೊಳ್ಳುವುದಲ್ಲ... ತಾರುಣ್ಯದಿಂದ ಕೂಡಿದ ದೇಹವು ಸಹಜವಾಗಿಯೇ ಸುಖವನ್ನು ಬಯಸುತ್ತದೆ. ಕೈ ಹಿಡಿದ ಪತಿ ಕಾಲ ಕಾಲಕ್ಕೆ ಅಂತಹ ಸುಖವನ್ನು ನೀಡಲು ಸಮರ್ಥನಾಗಿರಬೇಕು, ಇಲ್ಲದೇ ಹೋದರೆ ಚಂಚಲವಾದ ಮನಸ್ಸು ದಾರಿ ತಪ್ಪಿಸುತ್ತದೆ. ಈ ಹಿಂದೆ ಗೌತಮ ಮಹರ್ಷಿಯ ಪತ್ನಿಯಾದ ಅಹಲ್ಯೆ ಶಾಪಕ್ಕೆ ಒಳಗಾದದ್ದು ನೀ ಕೇಳಿ ಬಲ್ಲೆ ( ಗೌತಮ ಅಹಲ್ಯೆಯರ ದಾಂಪತ್ಯ ಆ ಕಾಲದಲ್ಲೇ ಮುರಿದು ಹೋಗಿತ್ತು ) ಹಾಗಾಗಿ ಬೇಡ ಮಗಳೇ ನಾವು ಬೇರೆ ಏನಾದರೂ ಮಾರ್ಗವನ್ನು ಅರಸೋಣ". ಎಂದು ಹೇಳುತ್ತಾನೆ. ತಂದೆಯ ಮಾತನ್ನು ಕೇಳಿದ ಸುಕನ್ಯೆ .. " ಅಪ್ಪಾ... ನೀವಾಡುವ ಮಾತು ಸಾಂಧರ್ಭಿಕವಾಗಿ ಸರಿಯಾದರೂ ನನ್ನ ವಿಚಾರದಲ್ಲಿ ಹಾಗೇ ಯೋಚಿಸಕೂಡದು, ನಾನು ಇಲ್ಲಿ ಅನುಭವಿಸುತ್ತಿರುವ ಎಲ್ಲ ಸುಖಗಳನ್ನು ಕ್ಷಣಮಾತ್ರದಲ್ಲಿ ತೊರೆಯಲು ಸಿದ್ಧಳಿದ್ದೇನೆ. ಆ ತಪಸ್ವಿ ಯೊಂದಿಗೆ ಜೀವನವನ್ನು ನಡೆಸುವೆ ಎಂಬ ಭರವಸೆಯೂ ನನಗಿದೆ. ನಿಮ್ಮ ಹೆಸರಿಗೆ, ನಾನು ಜನಿಸಿದ ವಂಶಕ್ಕೆ ಕಳಂಕ ತರುವ ಕಾರ್ಯವನ್ನು ಎಂದಿಗೂ ಮಾಡಲಾರೆ, ಹಾಗಾಗಿ ನನ್ನ ಮೇಲೆ ನಂಬಿಕೆಯಿಟ್ಟು ಮುಂದಾಗಬೇಕಾದ ಕಾರ್ಯದ ಬಗ್ಗೆ ಮನಮಾಡಿ". ಮಗಳ ನಿರ್ಧಾರದ ಮಾತನ್ನು ಕೇಳಿದ ಶರ್ಯಾತಿ ಮಹಾರಾಜ ತಾನೂ ದೃಡವಾದ ಮನಸ್ಸಿನಿಂದ... "ಆಯಿತು ನಿನ್ನ ಯೋಚನೆ ಇದೇ ಆದರೆ ಮತ್ತೆ ನಾನೇನನ್ನೂ ಆಡುವ ಸ್ಥಿತಿಯಲ್ಲಿಲ್ಲ, ಹಾಗೇ ಆಗಲಿ... ಎಲ್ಲರೂ ಮಹರ್ಷಿಗಳ ಬಳಿ ಹೋಗೋಣ ಬನ್ನಿ" ಎಂದು ಹೇಳಿ ಮಗಳನ್ನು, ರಾಣೀವಾಸದವರನ್ನು, ಮಂತ್ರಿ ಪರಿವಾರವನ್ನೂ ಕರೆದುಕೊಂಡು ತಪಸ್ವಿಯ ಸಂದರ್ಶನಕ್ಕಾಗಿ ಹೊರಟ🙏
ಮುಂದುವರಿಯುವುದು...🙏
Wednesday, August 20, 2025
ಚ್ಯವನ 4
ರಾಜಪರಿವಾರ ಕ್ಷಣ ಕ್ಷಣಕ್ಕೂ ಪರಿತಪಿಸುವ ಸ್ಥಿತಿಗೆ ತಲುಪಿತು. ಶರ್ಯಾತಿ ಮಹಾರಾಜನಿಗೆ ಆಗ ಹೊಳೆದದ್ದು... "ಈ ಪ್ರದೇಶದಲ್ಲಿ ಚ್ಯವನ ಎಂಬ ಮಹರ್ಷಿ ಬಹಳ ಕಾಲದಿಂದ ತಪವನ್ನು ಆಚರಿಸುತ್ತಾ ಇದ್ದಾನೆ ಎಂದು ಕೇಳಿ ಬಲ್ಲೆ.. ನಿಮ್ಮಲ್ಲಿ ಯಾರಾದರೂ ಅವನ ತಪಸ್ಸಿಗೆ ಭಂಗ ತರುವ ಯಾವ ಕಾರ್ಯವನ್ನಾದರೂ ಮಾಡಿರುವಿರೇ.. ''? . ಅದು ಕೇವಲ ಪ್ರಶ್ನೆ ಮಾತ್ರವಲ್ಲ.. ವಿಚಾರಣೆಯಾಗಿತ್ತು. ಮೊದಲೇ ಹೊಟ್ಟೆ ಉಬ್ಬರಿಸಿ ಪರದಾಡುತಿದ್ದ ಅವರಿಗೆ ರಾಜನ ವಿಚಾರಣೆಯ ಹಿಂಸೆ ಬೇರೆ.. ಆದರೆ ಯಾರಿಂದಲೂ ಪೂರಕವಾದ ಉತ್ತರ ಬರಲಿಲ್ಲ. ಶರ್ಯಾತಿ ಮಹಾರಾಜನು ಬಳಿಕ ತನ್ನ ಅರಮನೆಯ ಬಂಧುವರ್ಗದವರನ್ನೂ ಉದ್ದೇಶಿಸಿ ಇದೇ ಪ್ರಶ್ನೆಯನ್ನು ಕೇಳಿದನು. ಯಾರಿಂದಲೂ ಸರಿಯಾದ ಉತ್ತರ ಬರಲಿಲ್ಲ.
ತಮ್ಮನ್ನು ಅನುಸರಿಸಿ ಬಂದ ಸೇವಕರು, ಸೈನಿಕರು, ಅರಮನೆಯ ಪರಿವಾರದವರು ಬಂಧು ಬಾಂಧವರು ಎಲ್ಲರೂ ಹಿಂಸೆಯನ್ನು ಅನುಭವಿಸುತ್ತಿರುವುದನ್ನು ನೋಡಿದ ಅರಸುಕುಮಾರಿ ಸುಕನ್ಯೆ ಧ್ಯೆರ್ಯವನ್ನು ತಂದುಕೊಂಡು ತಂದೆಯ ಬಳಿ ಬಂದು ಅರಣ್ಯದಲ್ಲಿ ನಡೆದ ವಿಚಾರವನ್ನು ಹೇಳಿದಳು. "ಹುತ್ತದಲ್ಲಿ ಹೊಳೆಯುತ್ತಿದ್ದ ವಸ್ತು ಯಾವುದೆಂದು ನಾನರಿಯೆ ... ಆದರೆ ನಾನು ಮುಳ್ಳಿನಿಂದ ಚುಚ್ಚಿದ ಕೂಡಲೇ ಏನೋ ಕೂಗಿದ ಅನುಭವವಾಯಿತು. ನಾನು ಚುಚ್ಚಿದ ಸ್ಥಳದಿಂದ ರಕ್ತ ಸುರಿಯುತ್ತಿರುವುದನ್ನೂ ನೋಡಿ ನಾನು ನೋಡಿ ಭಯದಿಂದ ಓಡಿ ಬಂದೆ". ಮಗಳಾಡಿದ ಮಾತನ್ನು ಕೇಳಿ ಅರಸನಿಗೆ ಇದು ಖಂಡಿತವಾಗಿಯೂ ಮಹರ್ಷಿಗೆ ಮಾಡಿದ ಅಪಚಾರ ಎಂದು ನಿರ್ಧರಿಸಿ, ಮಗಳನ್ನು ಮತ್ತು ಕೆಲವು ಸೇವಕರನ್ನು ಜೊತೆಗಿಟ್ಟುಕೊಂಡು ನೇರವಾಗಿ ಅರಣ್ಯದಲ್ಲಿ ಸುಕನ್ಯೆ ಹೇಳಿದ ಹುತ್ತದ ಬಳಿಗೆ ಬಂದ. ಹುತ್ತವನ್ನು ನಿಧಾನವಾಗಿ ಒಡೆಯಲು ಸೇವಕರಿಗೆ ಸೂಚನೆಯನ್ನು ಕೊಡುತ್ತಾನೆ. ಸುತ್ತಲೂ ಆವರಿಸಿದ್ದ ಹುತ್ತವನ್ನು ಅಗೆದು ತೆಗೆದಾಗ ಅಲ್ಲಿ ಕಣ್ಣಿನಿಂದ ರಕ್ತ ಒಸರುತ್ತಿರುವ ಸ್ಥಿತಿಯಲ್ಲಿ ಕುಳಿತ ವೃಧ್ಧನಾದ ಚ್ಯವನ ಮಹರ್ಷಿ ಕಾಣಿಸುತ್ತಾನೆ.
ಮಹರ್ಷಿಯ ಸ್ಥಿತಿಯನ್ನು ನೋಡುತ್ತಿದ್ದಂತೆ ಅರಸನ ಮುಖ ಕಳೆಗುಂದುತ್ತದೆ. ಭಯದಿಂದ ನಡುಗುತ್ತಾ ಮಹರ್ಷಿಗಳಿಗೆ ನಮಸ್ಕಾರ ಮಾಡಿ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ಮತ್ತು ನಡೆದ ವಿಚಾರವನ್ನು ನಿವೇದಿಸಿಕೊಂಡು .." ಸ್ವಾಮೀ ತಾವು ಬ್ರಹ್ಮಜ್ಞಾನಿಗಳು ನನ್ನ ಮಗಳಾದರೋ ಏನನ್ನೂ ಅರಿಯದವಳು.. ತಪಸ್ವಿಗಳಾದ ತಾವು ಕೋಪವನ್ನೂ ಜಯಿಸಿದವರು, ಹಾಗಾಗಿ ನನ್ನ ಪುತ್ರಿಯಿಂದಾದ ಅಪಚಾರವನ್ನು ಮನ್ನಿಸಿ ನಮ್ಮ ಮೇಲೆ ಕೃಪೆ ತೋರಿಸಬೇಕು". ಎಂದು ಹೇಳಿ ಕೈ ಜೋಡಿಸಿ ನಿಲ್ಲುತ್ತಾನೆ. ಅರಸನಾಡಿದ ಮಾತುಗಳನ್ನು ಕೇಳಿದ ಚ್ಯವನ ವಹರ್ಷಿ.. " ಅಯ್ಯಾ ಮಹಾರಾಜಾ.. ನಾನೂ ಯಾವತ್ತೂ ಮಾಡದೇ ಇರುವ ತಪ್ಪಿಗೆ ಈ ಶಿಕ್ಷೆ ಯಾಕೆ... ಹಾಗಿದ್ದರೂ ನಾನು ಯಾರನ್ನೂ ಶಪಿಸಲಿಲ್ಲ, ಆದರೆ ತಪ್ಪನ್ನೇ ಮಾಡದೇ ಇರುವ ನನಗೆ ಹಿಂಸೆಯನ್ನು ಕೊಟ್ಟ ಕಾರಣದಿಂದ ನೀವು ಬಳಲುವ ಸ್ಥಿತಿ ಬಂದಿದೆ ಅಷ್ಟೇ.. ಆದರೂ ಅದರಿಂದಲೂ ನಿಮ್ಮನ್ನು ಮುಕ್ತರನ್ನಾಗಿಸ ಬಲ್ಲೆ .. ಆದರೆ ವೃಧ್ಧನಾದ ನಾನು ನನ್ನ ಕಣ್ಣುಗಳನ್ನೂ ಕಳೆದುಕೊಂಡಮೇಲೆ ಮುಂದೆ ಜೀವನ ಹೇಗೆ.. ನಾನು ತಪಸ್ಸಾಚರಣೆ ಮಾಡುವಾಗ ನನ್ನನ್ನು ನೋಡಿಕೊಳ್ಳುವರು ಯಾರು.:'' ಮುನಿಯ ಮಾತು ಮುಗಿಯುವ ಮೊದಲೆ ಅರಸನಾಡಿದ.. " ಸ್ವಾಮೀ ನಿಮ್ಮ ಸೇವೆಗೆ ಬೇಕಾಗಿ ನನ್ನ ಸೇವಕರನ್ನು ನಿಯೋಜಿಸುತ್ತೇನೆ.. ಕಾಲ ಕಾಲಕ್ಕೆ ನಿಮಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಸುತ್ತೇನೆ". ಶರ್ಯಾತಿಯ ಮಾತನ್ನು ಕೇಳಿದ ಚ್ಯವನ ಮಹರ್ಷಿ... "ಅರಸಾ ನಿನ್ನಿಂದ ನಿಯೋಜಿತ ಸೇವಕರು ನನ್ನ ಸೇವೆಯಲ್ಲಿದ್ದರೆ ಏನು ಪ್ರಯೋಜನ, ಹೇಳಿದ ಕೆಲಸವನ್ನಷ್ಟೇ ಮಾಡುವವರಲ್ಲ ನನಗೆ ಈಗ ಬೇಕಾದವರು, ಕಳೆದು ಹೋದ ನನ್ನ ಕಣ್ಣುಗಳೇ ಆಗಿ ನನ್ನನ್ನು ನೋಡಿಕೊಳ್ಳುವವರು ಬೇಕು. ಹೇಳದೆಯೂ ಕಾಲಕಾಲಕ್ಕೆ ಏನಾಗಬೇಕೆಂದು ಅರಿತು ವರ್ತಿಸುವವರು ಬೇಕು. ಹಾಗಾಗಿ ನನ್ನ ಈ ಸ್ಥಿತಿಗೆ ಕಾರಣಳಾದ ನಿನ್ನ ಪುತ್ರಿಯನ್ನೇ ನನ್ನ ಸೇವೆಗಾಗಿ ನನಗೆ ಮದುವೆ ಮಾಡಿಕೊಟ್ಟರೆ ಆದೀತು, ಅವಳ ಸೇವೆಯಿಂದ ನಾನು ಸಮಾಧಾನ ಹೊಂದಬಲ್ಲೆ.. ಜೊತೆಗೆ ನಿಮಗೆ ಒದಗಿದ ಸಂಕಷ್ಟವನ್ನೂ ಪರಿಹರಿಸಬಲ್ಲೆ". 🙏🙏
ಮುಂದುವರಿಯುವುದು🙏
Friday, August 15, 2025
ಚ್ಯವನ 3
ಭೃಗು ಪುತ್ರನಾದ ಚ್ಯವನನು ಬೆಳೆಯುತ್ತಾ ವೇದಗಳನ್ನಭ್ಯಾಸ ಮಾಡಿ, ಧ್ಯಾನ ತಪಸ್ಸನ್ನಾಚರಿಸುತ್ತ ಕಾಲವನ್ನು ಕಳೆಯುತ್ತಿದ್ದನು. ಹೀಗೆ ಒಮ್ಮೆ ನರ್ಮದಾ ತೀರದ ವೈಢೂರ್ಯ ಪರ್ವತದ ತಪ್ಪಲಿನಲ್ಲಿ ಒಂದು ಪ್ರಶಸ್ತವಾದ ಸ್ಥಳದಲ್ಲಿ ತಪಸ್ಸನ್ನಾಚರಿಸುತ್ತ ಕುಳಿತನು. ಬಹುಕಾಲ ಸಂದುಹೋಯಿತು, ಏಕಾಗ್ರಚಿತ್ತನಾಗಿದ್ದ ಚ್ಯವನನಿಗೆ ಕಾಲದ ಪರಿವೆಯೇ ಇರಲಿಲ್ಲ. ಅವನು ಕುಳಿತಿದ್ದ ಸ್ಥಳದ ಸುತ್ತಲೂ ಗಿಡಗಳು ಹುಟ್ಟಿ ಬೆಳೆದು ಹೆಮ್ಮರಗಳಾದವು. ಅವನ ದೇಹವನ್ನು ಬಳಸಿ ಹುತ್ತವೊಂದು ಬೆಳೆದು ನಿಂತಿತು. ಇದಾವುದರ ಪರಿವೆಯೂ ಅವನಿಗಿರಲಿಲ್ಲ. ಯೋಗ ಬಲದಿಂದ ಅವನ ದೇಹಕ್ಕೆ ಆಹಾರ ಬೇಕೆನಿಸಲಿಲ್ಲ.
ವೈವಸ್ವತ ಮನುವಿಗೆ ಒಂಬತ್ತು ಜನ ಮಕ್ಕಳು, ಅವರಲ್ಲಿ ಶರ್ಯಾತಿ ಒಬ್ಬ, ಶರ್ಯಾತಿಗೆ ನಾಲ್ಕು ಸಾವಿರ ಜನ ಪತ್ನಿಯರಾದರೂ ಮಕ್ಕಳು ಮಾತ್ರ ಎರಡು ಜನ. ಪುತ್ರನ ಹೆಸರು "ಆನರ್ತ " "ಸುಕನ್ಯಾ" ಎಂಬ ಪುತ್ರಿ. ಪ್ರಾಯದಿಂದ ಶೋಭಿಸುತ್ತಿದ್ದ ಸುಕನ್ಯೆ ಮನ್ಮಥನರಸಿಯಾದ ರತಿಗೂ ಮೀರಿದ ಸೌಂದರ್ಯದಿಂದ ಕಂಗೊಳಿಸುತಿದ್ದಳು. ಒಂದು ದಿನ ಶರ್ಯಾತಿ ಮಹಾರಾಜ ತನ್ನ ಪರಿವಾರದೊಂದಿಗೆ ವಿಹಾರಾರ್ಥವಾಗಿ ಚ್ಯವನ ತಪಸ್ಸನ್ನು ಆಚರಿಸುತ್ತಿದ್ದ ಪ್ರದೇಶಕ್ಕೆ ಬಂದ. ಅರಸನ ಪರಿವಾರಕ್ಕೆ ನರ್ಮದಾ ತೀರದಲ್ಲಿ ವ್ಯವಸ್ಥಿತವಾದ ಬಿಡಾರಗಳನ್ನು ನಿರ್ಮಿಸಲಾಯಿತು.
ಅರಮನೆಯ ಸ್ತ್ರೀಯರು ಸಂತೋಷದಿಂದ ಜಲಕೇಳಿ., ವನಕೇಳಿ ಎಂದು ತಮ್ಮಿಷ್ಟದಂತೆ ಆನಂದಿಸತೊಡಗಿದರು. ಪರಿವಾರದಲ್ಲಿದ್ದ ಸುಕನ್ಯೆಯೂ ಸಖಿಯರನ್ನು ಕೂಡಿಕೊಂಡು ನಲಿಯುತ್ತಾ ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದಳು. ಮುಂದೆ ಸಾಗುತ್ತಾ ಅವಳು ಏಕಾಂಗಿಯಾಗಿ ಒಂದು ವೃಕ್ಷದ ನೆರಳಿನಲ್ಲಿ ಆಟವಾಡುತ್ತಾ ಕುಳಿತಳು, ಅವಳು ಕುಳಿತ ಸ್ಥಳದ ಎದುರಿನಲ್ಲಿಯೇ ಎತ್ತರಕ್ಕೆ ಬೆಳೆದ ಹುತ್ತ... ಅದು ಚ್ಯವನನನ್ನು ಆವರಿಸಿ ಬೆಳೆದಿದ್ದು. ಹುತ್ತದ ಎದುರು ಕುಳಿತಿದ್ದ ಸುಕನ್ಯೆಯ ಗಮನ ಹುತ್ತದತ್ತ ಹೋಯಿತು. ಅಲ್ಲಿ ಯಾವುದೋ ಪ್ರಕಾಶಮಾನವಾದ ಮಣಿಗಳೆರಡು ಹುತ್ತದ ಮಧ್ಯದಲ್ಲಿ ಹೊಳೆಯುತ್ತಿರುವದನ್ನು ನೋಡಿದಳು. ಅದೇ ಕ್ಷಣದಲ್ಲಿ ತಪೋಮಗ್ನನಾಗಿದ್ದ ಚ್ಯವನನಿಗೂ ಎಚ್ಚರವಾಗಿತ್ತು. ತನ್ನನ್ನು ಆವರಿಸಿದ ಆ ಹುತ್ತದ ಒಳಗಿನಿಂದಲೇ ಸುಕನ್ಯೆಯನ್ನು ಕರೆದು ಮಾತನಾಡಿದ.. ಆದರೆ ಆಹಾರವಿಲ್ಲದೆ ಕೃಶವಾಗಿದ್ದ ಅವನ ಬಾಯಿಯಿಂದ ಹೊರಟ ಧ್ವನಿ ಸುಕನ್ಯೆಗೆ ಕೇಳಿಸಲೇ ಇಲ್ಲ. ಅವಳು ಅಲ್ಲಿ ಹೊಳೆಯುತ್ತಿರುವ ವಸ್ತುವೇನೆಂದು ತಿಳಿಯಬೇಕೆಂಬ ಕುತೂಹಲದಿಂದ ಒಂದು ಮುಳನ್ನು ತೆಗೆದು ಚುಚ್ಚಿದಳು, ತನ್ನ ಕಣ್ಣುಗಳಿಗೇ ಆಕೆ ಚುಚ್ಚಿದ ಕಾರಣದಿಂದ ಮಹರ್ಷಿಗೆ ಸಹಿಸಲಾರದ ನೋವಾಯಿತು. ಕಣ್ಣುಗಳಿಂದ ಧಾರಾಕಾರವಾಗಿ ರಕ್ತ ಸುರಿಯತೊಡಗಿತು. ಇದರಿಂದ ಬೆದರಿದ ಸುಕನ್ಯೆ ಅಲ್ಲಿಂದ ಹೊರಟುಬಿಟ್ಟಳು.
ಚ್ಯವನನಿಗೆ ನೋವಿನ ಜೊತೆಯಲ್ಲಿಯೇ ಸಿಟ್ಟೂ ಬಂತು, ಅದರ ಪರಿಣಾಮವಾಗಿಯೇ ಅಲ್ಲಿ ಬಿಡಾರಗಳನ್ನು ನಿರ್ಮಿಸಿಕೊಂಡಿದ್ದ ಶರ್ಯಾತಿಯ ಪರಿವಾರ ಬಳಲಿತು. ಚ್ಯವನನ ಕೋಪ ರಾಜ ಪರಿವಾರದವರ ಮಲ-ಮೂತ್ರವನ್ನು ನಿರ್ಭಂಧಿಸಿ ಬಿಟ್ಟಿತ್ತು. ಎಲ್ಲರ ಹೊಟ್ಟೆಯೂ ಉಬ್ಬರಿಸಿತು ಯಾವ ಔಷಧವೂ ಪರಿಣಾಮ ಬೀರಲಿಲ್ಲ, ರಾಜ ವೈದ್ಯರು ರೋಗದ ಕಾರಣವೇನೆಂದು ತಿಳಿಯದೆ ಕೈಚೆಲ್ಲಿದರು. 🙏
ಮುಂದುವರಿಯುವುದು.🙏
Wednesday, August 13, 2025
ಚ್ಯವನ 2
ಪುಲೋಮೆ ಶಿಶುವನ್ನು ಎತ್ತಿಕೊಂಡು ಆಶ್ರಮಕ್ಕೆ ಬರುತ್ತಿರುವಾಗ ಸಂಧ್ಯಾ ಕಾರ್ಯಗಳನ್ನು ಮುಗಿಸಿ ಹಿಂತಿರುಗುತ್ತಿದ್ದ ಭೃಗು ನೋಡುತ್ತಾನೆ. ಕಣ್ಣೀರು ಸುರಿಸುತ್ತಿದ್ದ ಪುಲೋಮೆಯಿಂದ ನಡೆದ ಘಟನೆಯನ್ನು ತಿಳಿದು ಶೀಘ್ರಕೋಪಿಯಾದ ಮಹರ್ಷಿ ... " ಈ ಆಶ್ರಮದಲ್ಲಿ ನೀನಿರುವ ವರ್ತಮಾನವಾದರೂ ದುಷ್ಟ ರಾಕ್ಷಸನಿಗೆ ತಿಳಿದ ಬಗೆ ಹೇಗೆ ... ಇದರ ಹಿಂದೆ ಬೇರಾರದೋ ಸಹಕಾರ ಇದ್ದಂತೆ ಭಾಸವಾಗುತ್ತಿದೆ " ಎಂದು ಹೇಳಿದಾಗ ಪುಲೋಮೆ ಅಗ್ನಿಯತ್ತ ಕೈಮಾಡಿ ತೋರಿಸುತ್ತಾಳೆ. ಇದರಿಂದ ಮತ್ತಷ್ಟು ಕ್ರೋಧಗೊಂಡ ಭೃಗು ಅಗ್ನಿಯನ್ನು ನೋಡುತ್ತಾ.." ಉಚಿತ ಅನುಚಿತಗಳ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ಅರಿವಿರಬೇಕಾಗಿದ್ದ ನೀನೇ ಈ ಅನುಚಿತ ಕಾರ್ಯಕ್ಕೆ ಸಹಕಾರ ನೀಡಿದೆ ಎಂದಾದರೆ ಇದೋ.. ಇಂದಿನಿಂದ ನೀನು ಸರ್ವಭಕ್ಷಕನಾಗು " ಎಂದು ಶಪಿಸಿಬಿಟ್ಟ. ಭೃಗು ಮಹರ್ಷಿಯ ಶಾಪವಾಕ್ಯವನ್ನು ಕೇಳಿದ ಅಗ್ನಿಗೂ ಸಿಟ್ಟು ಬಂತು.. " ಅಯ್ಯಾ ಮಹರ್ಷಿ.. ಹವ್ಯವಾಹನನಾದ ನಾನು ಯಾವುದು ಸತ್ಯ ಯಾವುದು ವಾಸ್ತವ ಎಂಬ ಕಲ್ಪನೆಯಿದ್ದೇ ವರ್ತಿಸಿದ್ದೇನೆ. ನಾನು ಯಾವ ಕ್ಷಣದಲ್ಲಿಯೂ ಸತ್ಯವನ್ನು ಮರೆಮಾಚಲಿಲ್ಲ, ಇದರ ಅರಿವಿಲ್ಲದೆ ಅಥವಾ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡದೆ ನೀನು ಶಾಪವನ್ನು ಕೊಟ್ಟೆ... ವರವನ್ನು ಅನುಗ್ರಹಿಸುವ ಶಾಪವನ್ನು ನೀಡಬಹುದಾದ ಸ್ಥಾನದಲ್ಲಿ ನಾನೂ ಇದ್ದೇನೆ. ಬಯಸಿದರೆ ನಾನೂ ನಿನಗೆ ಘೋರವಾದ ಶಾಪವನ್ನೇ ನೀಡಬಲ್ಲೆ ಆದರೆ.. ನೀನೊಬ್ಬ ಬ್ರಾಹ್ಮಣ ಎಂಬುದನ್ನು ನಾನು ಮರೆಯಲಾರೆ. ಯಜ್ಞ - ಯಾಗಗಳನ್ನು ಮಾಡಿ ಆ ಮೂಲಕ ದೇವತೆಗಳಿಗೆ ಹವಿರ್ಭೋಜನವನ್ನು ಮಾಡಿಸುವ ಬ್ರಾಹ್ಮಣರ ಬಗ್ಗೆ ನನಗೆ ಅಪಾರವಾದ ಗೌರವವಿದೆ ಹಾಗಾಗಿ ನಿನ್ನನ್ನ ನಾನು ಶಪಿಸಲಾರೆ". ಹೀಗೆ ಹೇಳಿದ ಅಗ್ನಿದೇವ ಭೃಗು ಮಹರ್ಷಿಯ ಯಜ್ಞಶಾಲೆಯಿಂದ ನಿರ್ಗಮಿಸಿ ಬಿಟ್ಟ. ಕೇವಲ ಭೃಗುವಿನ ಆಲಯದಿಂದ ಮಾತ್ರವಲ್ಲ ... ಲೋಕದ ಎಲ್ಲಾ ಕಡೆಯಲ್ಲಿಯೂ ತನ್ನ ಅಸ್ತಿತ್ವವನ್ನು ಮರೆಯಾಗಿಸಿ ಯಾರಿಗೂ ಕಾಣಿಸದಂತೆ ಮರೆಯಾದ.
ಭೃಗು ಶಾಪದಿಂದ ಅಗ್ನಿದೇವ ಮರೆಯಾದ ಮೇಲೆ ಪ್ರಪಂಚದ ಯಾವ ಮೂಲೆಯಲ್ಲಿಯೂ ಅಗ್ನಿ ಪ್ರಜ್ವಲಿಸಲೇ ಇಲ್ಲ.. ಯಜ್ಞ - ಯಾಗಗಳು ನಡೆಯದೇ ಹೋಯಿತು. ದೇವತೆಗಳಿಗೆ ಹವಿಸ್ಸು ಸಿಗದೇ ಹೋಯಿತು. ಆತಂಕಗೊಂಡ ಋಷಿಮುನಿಗಳು ನೇರವಾಗಿ ಇಂದ್ರ ಸಭೆಗೇ ಧಾವಿಸಿದರು. ಇಂದ್ರಾದಿ ದೇವತೆಗಳ ಸಮ್ಮುಖದಲ್ಲಿ ತಮಗಾದ ತೊಂದರೆಯನ್ನು ಹೇಳಿ .. ಇನ್ನು ಮುಂದೆ ದೇವತೆಗಳಾದ ನಿಮಗೆ ಹವಿಸ್ಸನ್ನು ನೀಡುವುದೂ ತಮ್ಮಿಂದ ಸಾಧ್ಯವಾಗದು ಹಾಗಾಗಿ ಸೂಕ್ತ ಮಾರ್ಗದರ್ಶನ ತಮ್ಮಿಂದಲೇ ಆಗಬೇಕೆಂದು ಕೇಳಿಕೊಂಡರು. ಇಂದ್ರಾದಿ ದೇವತೆಗಳಿಗೂ ಚಿಂತೆ ಭಾಧಿಸಿತು... ಮುಂದೇನು ಎಂದು ನಿರ್ಣಯಿಸಲಾಗದೆ ಋಷಿಗಳನ್ನು ಜೊತೆಗೂಡಿಕೊಂಡು ಬ್ರಹ್ಮದೇವರ ಬಳಿಗೆ ಹೋದರು. ಬ್ರಹ್ಮದೇವನಲ್ಲಿ ಅಗ್ನಿಗೆ ಭೃಗು ನೀಡಿದ ಶಾಪದ ವೃತ್ತಾಂತವನ್ನು ವಿವರಿಸಿ ಅಗ್ನಿಯ ಅನುಪಸ್ಥಿತಿಯಿಂದ ಪ್ರಪಂಚಕ್ಕೆ ಆಗುತ್ತಿರುವ ತೊಂದರೆಯನ್ನು ವಿವರಿಸಿದರು. ದೇವತೆಗಳ ಮಾತನ್ನು ಕೇಳಿದ ಬ್ರಹ್ಮದೇವ ತನ್ನ ಸಂಕಲ್ಪಮಾತ್ರದಿಂದ ಮರೆಯಾಗಿದ್ದ ಅಗ್ನಿಯನ್ನು ಕರೆಸಿಕೊಳ್ಳುತ್ತಾನೆ. ಸಮ್ಮುಖದಲ್ಲಿ ನಿಂತ ಅಗ್ನಿಯನ್ನು ಕುರಿತು ಶಾಂತ ಭಾವದಿಂದ.. ಓ ಅಗ್ನಿಯೇ .. ಪ್ರಪಂಚದಲ್ಲಿ ಬೇರೆ ಬೇರೆ ಕಡೆಯಲ್ಲಿ ಬೇರೆ ಬೇರೆ ಕಾರ್ಯಗಳಲ್ಲಿ ನಿನ್ನ ಉಪಸ್ಥಿತಿ ಇದ್ದೇ ಇರಬೇಕು... ಲೋಕದಲ್ಲಿ ನಡೆಯುವ ಕರ್ಮಗಳಿಗೆ ನೀನು ಆಧಾರನಾಗಿರಬೇಕಾದವ, ನಿನ್ನ ಉಪಸ್ಥಿತಿಯಲ್ಲಿ ಲೋಕದ ಜೀವನ ತೊಡಕುಗಳಿಲ್ಲದೇ ನಡೆಯುವುದು. ಯಜ್ಞಯಾಗಗಳಿಂದ ಹವಿಸ್ಸನ್ನು ಸ್ವೀಕರಿಸುವ ನೀನು ಅದನ್ನು ದೇವತೆಗಳಿಗೆ ತಲುಪಿಸುವವ.. ದೇವತೆಗಳಿಗೊ ಪಿತೃಗಳಿಗೊ ಸೇರಬೇಕಾದ ಹವಿಸ್ಸು ತಲುಪಬೇಕಾದ್ದು ನಿನ್ನಿಂದಲೇ ಅಲ್ಲವೇ... ನಿಜವಾಗಿ ಲೋಕವನ್ನು ಸ್ವಚ್ಛಗೊಳಿಸುವವನೂ ನೀನೇ..ನೀನಿಲ್ಲದೆ ಲೋಕದ ಯಾವ ಕಾರ್ಯವೂ ನೆರವೇರಲಾರದು. ಎಲ್ಲ ಜೀವಿಗಳ ದೇಹದಲ್ಲೂ ನೆಲೆಸಿರುವ ನೀನು ಜೀವಿಗಳ ಚೇತನಕ್ಕೆ ಕಾರಣನಾದವ.. ಅಂತಹ ನೀನು ಸರ್ವಭಕ್ಷಕನಾಗಬೇಕಾದ್ದಿಲ್ಲ, ಹಾಗೆಂದು ಭೃಗು ಕೊಟ್ಟ ಶಾಪ ವ್ಯರ್ಥವಾಗುವುದೂ ಇಲ್ಲ. ಕೇವಲ ನಿನ್ನ ಅಪಾನಜ್ವಾಲೆಗಳು ಆ ಕೆಲಸವನ್ನು ಮಾಡಲಿ. ಅಲ್ಲದೇ ಕೇವಲ ಮಾಂಸಭಕ್ಷಣವನ್ನು ಮಾಡುವ ಪ್ರಾಣಿಗಳ ದೇಹದಲ್ಲಿರುವ ನಿನ್ನ ಸ್ವರೂಪ ಸರ್ವಭಕ್ಷಕವಾಗಿರಲಿ.. ಅಷ್ಟಕ್ಕೂ ಭೃಗು ಮಹರ್ಷಿಯ ದೇಹದಲ್ಲೂ ನಿನ್ನ ಸ್ವರೂಪ ಇದೆ ಎಂದಾದರೆ ಅವನಾಡುವ ಶಾಪವಾಕ್ಯದಲ್ಲಿ ಕೂಡ ನಿನ್ನ ಪ್ರೇರಣೆ ಇದೆ ಎಂದೇ ಭಾವಿಸಬೇಕಾಗುತ್ತದೆ. ಹಾಗಿರುವಾಗ ಅವನಾಡಿದ ಮಾತು ಸುಳ್ಳಾದರೆ ಜೀವಿಗಳಲ್ಲಿರುವ ನಿನ್ನ ಅಸ್ಥಿತ್ವ ಕೂಡ ಸುಳ್ಳು ಎಂದಾಗುವುದಿಲ್ಲವೇ... ಹಾಗಾಗಿ ಬೇಸರಿಸದೇ ನಿನ್ನ ಕಾರ್ಯದಲ್ಲಿ ನೀನು ತೊಡಗಿಕೋ". ಹೀಗೆಂದು ಹೇಳಿದ ಬ್ರಹ್ಮ ವಾಕ್ಕವನ್ನು ಕೇಳಿದ ಅಗ್ನಿ ಸಮಾಧಾನದಿಂದ ತನ್ನ ಕರ್ತವ್ಯವನ್ನು ಮಾಡಲು ಒಪ್ಪಿ, ಬ್ರಹ್ಮದೇವರಿಗೆ ವಂದಿಸಿ ಮತ್ತೆ ಲೋಕಗಳಲ್ಲಿ ಪ್ರಕಟಗೊಳ್ಳುತ್ತಾನೆ. ದೇವತೆಗಳೂ ಋಷಿಮುನಿಗಳೂ ಸಂತೋಷಗೊಂಡು ತಮ್ಮ ತಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತಾರೆ.🙏🙏
ಮುಂದುವರಿಯುತ್ತದೆ..🙏
Tuesday, August 12, 2025
ಚ್ಯವನ 1
ಈ ಹಿಂದೆ ನಾನು ಸರ್ಪಯಾಗದ ಬಗ್ಗೆ ಬರೆಯುವಾಗ ರುರು ಮತ್ತು ಪ್ರಮುಧ್ವರೆಯರ ಕಥೆಯನ್ನು ವಿವರಿಸುವಾಗ ಚ್ಯವನನ ಬಗ್ಗೆ ಬರೆದಿದ್ದೆ. ಇಲ್ಲಿ ಸ್ವಲ್ಪ ವಿಸ್ತಾರವಾಗಿ ಬರೆಯತೊಡಗಿದ್ದೇನೆ. ಭೃಗು ಮಹರ್ಷಿಗಳಿಗೆ ಪುಲೋಮೆ ಎಂಬ ಪ್ರೀತಿಯ ಹೆಂಡತಿಯಿದ್ದಳು. ಪತ್ನಿಯಾದ ಪುಲೋಮೆಯಿಂದ ತನಗಿಂತ ಹೆಚ್ಚು ತೇಜಸ್ವಿಯಾದ ಸಂತಾನವನ್ನು ಪಡೆಯಬೇಕೆಂದು ಭೃಗು ಮಹರ್ಷಿಗಳು ಆಶಿಸಿದ್ದರು. ಅಂತೆಯೇ ಪುಲೋಮೆ ಗರ್ಭವನ್ನು ಧರಿಸಿದ್ದಳು, ಹೀಗೆ ಸಂತಾನದ ನಿರೀಕ್ಷೆಯಲ್ಲಿಯೇ ಸತಿಪತಿಗಳು ಆನಂದದಿಂದ ಇದ್ದರು. ಎಂದಿನಂತೆ ಒಂದು ದಿನ ಭೃಗು ಮಹರ್ಷಿಗಳು ಸ್ನಾನ ಸಂಧ್ಯಾದಿ ನಿತ್ಯಕರ್ಮಗಳಿಗಾಗಿ ಆಶ್ರಮದಿಂದ ನದಿಯೆಡೆಗೆ ತೆರಳಿದರು. ಭೃಗು ಮಹರ್ಷಿಗಳು ಆಶ್ರಮವನ್ನು ಬಿಟ್ಟು ತೆರಳುವುದನ್ನೇ ಪುಲೋಮನೆಂಬ ರಾಕ್ಷಸ ನಿರೀಕ್ಷಿಸುತ್ತಿದ್ದ. ಅವರು ಅತ್ತ ಸಾಗಿದ ಮರುಕ್ಷಣವೇ ನಿಧಾನವಾಗಿ ಆಶ್ರಮದ ಪರಿಸರವನ್ನು ಪ್ರವೇಶಮಾಡಿದ. ಆಶ್ರಮದ ಹೊರಾವರಣದಲ್ಲಿ ಅಗ್ನಿಹೋತ್ರಕ್ಕಾಗಿ ಸ್ಥಾಪಿಸಿದ ಅಗ್ನಿದೇವ ಆನಂದದಿಂದ ಕಂಗೊಳಿಸುತ್ತಿದ್ದ. ಪುಲೋಮೆಯನ್ನು ಅಪಹರಿಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ಆಶ್ರಮ ಪ್ರವೇಶ ಮಾಡಿದ್ದ ರಾಕ್ಷಸನ ಕಣ್ಣಿಗೆ ಅಗ್ನಿದೇವ ಕಾಣಿಸಿದ. ಆಗ ಪುಲೋಮ ರಾಕ್ಷಸನ ಮನಸ್ಸಿನಲ್ಲಿದ್ದ ಅನುಮಾನಕ್ಕೆ ಸರಿಯಾದ ಉತ್ತರವನ್ನು ಅಗ್ನಿ ಕೊಡುತ್ತಾನೆ ... ಕೊಡಬಲ್ಲನೆಂದು ಭಾವಿಸಿ ಅವನಲ್ಲೇ ಕೇಳಿದ.. " ಅಯ್ಯಾ ಅಗ್ನಿಯೇ ಈ ಆಶ್ರಮದಲ್ಲಿ ವಾಸವಾಗಿರುವ ಸುಂದರಿಯಾದ ಪುಲೋಮೆ ನನಗೆ ಸೇರಿದವಳು... ಇವಳ ಬಾಲ್ಯಾವಸ್ಥೆಯಲ್ಲಿಯೇ ಇವಳ ತಂದೆ ಈಕೆ ನನಗೆ ಸೇರಿದವಳೆಂದು ಆಡಿದ್ದಾನೆ. ಆದರೆ ದುಷ್ಟನಾದ ಆತ ನನಗರಿವಿಲ್ಲದಂತೆ ಪ್ರಾಯಕ್ಕೆ ಬಂದ ಈಕೆಯನ್ನು ಈ ಬ್ರಾಹ್ಮಣನಿಗೆ ಮದುವೆ ಮಾಡಿ ಕೊಟ್ಟುಬಿಟ್ಟ. ನನಗೆ ತಿಳಿಯದ ಹಾಗೆ ಈಕೆ ಇಲ್ಲಿ ಈ ಬಡ ಮುನಿಯೊಂದಿಗೆ ಸಂಸಾರ ನಡೆಸುತ್ತಾ ಇದ್ದಾಳೆ. ಆದರೆ ಇವಳ ತಂದೆಯಾಡಿದ ಮಾತಿನ ಪ್ರಕಾರ ಇವಳು ನನಗೇ ಸೇರಬೇಕಾದವಳು ... ಈ ನನ್ನ ನಿರ್ಣಯ ಸರಿಯಲ್ಲವೇ ನೀನೇ ಹೇಳು". ಹೀಗೆಂದು ಅಗ್ನಿಯಲ್ಲಿ ಕೇಳಿದ... ಉತ್ತರ ಬರಲಿಲ್ಲ, ಮತ್ತೆ ಮತ್ತೆ ಕೇಳಿದ... ಆಗ ಅಗ್ನಿ ಕೂಡ ಯೋಚಿಸತೊಡಗಿದ, ಬಾಲ್ಯದಲ್ಲಿ ಕೊಡುತ್ತೇನೆ ಎಂದು ಹೇಳಿದ ಕಾರಣ ನಿನಗೆ ಸೇರಬೇಕು ಎಂದು ಹೇಳಿದರೆ ಭೃಗು ಶಪಿಸುತ್ತಾನೆ. ನಿನಗೆ ಅಧಿಕಾರ ಇಲ್ಲವೆಂದರೆ ರಾಕ್ಷಸ ಪೀಡಿಸುತ್ತಾನೆ... ಆಗ ಅನಿವಾರ್ಯವಾಗಿ ಅಗ್ನಿ ಪುಲೋಮ ರಾಕ್ಷಸನನ್ನು ಹತ್ತಿರ ಕರೆದು ಗುಟ್ಟಾಗಿ ಹೇಳುತ್ತಾನೆ.. " ಅಯ್ಯಾ ಅಸುರಾ... ಇವಳ ತಂದೆ ಬಾಲ್ಯದಲ್ಲಿಯೇ ನಿನಗೀಯುತ್ತೇನೆಂದು ಹೇಳಿದ ಕಾರಣದಿಂದ ಅವಳು ನಿನಗೆ ಸೇರಬೇಕಾದವಳೇ ಆದರೂ ... ಮುಂದೆ ಆತನೇ ನನ್ನನ್ನು ಸಾಕ್ಷಿಯನ್ನಾಗಿಟ್ಟುಕೊಂಡು ಯಥಾವಿದಿಯಿಂದ ವೇದೋಕ್ತ ಕರ್ಮಗಳಿಂದ ಭೃಗುವಿಗೆ ನೀಡಿದ್ದಾನೆ.. ಹಾಗಾಗಿ ಪುಲೋಮೆ ಈಗ ಭೃಗುವಿಗೇ ಸೇರಬೇಕಾದವಳು ಇದು ಸತ್ಯ ಇನ್ನು ಮುಂದಿನ ನಿರ್ಧಾರ ನಿನ್ನದು". ( ಇಲ್ಲಿ ತರ್ಕಿಸಬೇಕಾದ್ದು.. ಪುಲೋಮೆಯ ತಂದೆ ಆಕೆಯನ್ನು ಯಾವ ಕಾಲದಲ್ಲಿಯೂ ರಾಕ್ಷಸನಿಗೆ ಕೊಟ್ಟಿದ್ದು ಸುಳ್ಳಾಗಿರಬಹುದು... ಹಾಗೆಂದು ಮಕ್ಕಳು ಬಾಲ್ಯದಲ್ಲಿ ಹಠ ಮಾಡಿದಾಗ ನಿನ್ನನ್ನು ಅವರಿಗೆ ಕೊಡುತ್ತೇನೆ ... ಇವರಿಗೆ ಕೊಡುತ್ತೇನೆ ಎಂದು ಹೆದರಿಸುವುದಿಲ್ಲವೇ.. ಇದೂ ಹಾಗೇ ಆಗಿರಬೇಕು)
ಅಗ್ನಿಯಾಡಿದ ಮಾತುಗಳನ್ನು ಕೇಳಿಸಿಕೊಂಡ ಪುಲೋಮ ರಾಕ್ಷಸ ಹೆಚ್ಚು ಯೋಚಿಸುವ ಗೊಡವೆಗೇ ಹೋಗಲಿಲ್ಲ. ಒಂದು ಕ್ರೂರವಾದ ಹಂದಿಯ ರೂಪವನ್ನು ತಳೆದು ಆಶ್ರಮದಲ್ಲಿದ್ದ ಗರ್ಭಿಣಿ ಪುಲೋಮೆಯನ್ನು ಅಪಹರಿಸಿಕೊಂಡು ವೇಗವಾಗಿ ಹೊರಟುಬಿಟ್ಟ. ಹಾಗೆ ಸಾಗುವಾಗ ಗರ್ಭದಲ್ಲಿದ್ದ ಶಿಶುವಿಗೆ ಇದನ್ನು ತಿಳಿದು ಕ್ರೋಧವುಂಟಾಯಿತು, ಸಿಟ್ಟುಗೊಂಡ ಶಿಶು ಗರ್ಭದಿಂದ ತಾನಾಗಿಯೇ ಹೊರ ಜಾರಿ ಭೂಮಿಗೆ ಬಿತ್ತು. ನೆಲಕ್ಕೆ ಬಿದ್ದ ಆ ಹಸುಗೂಸು ತಕ್ಷಣ ತನ್ನ ತಾಯಿಯನ್ನು ಅಪಹರಿಸಿಕೊಂಡು ಹೋಗುತ್ತಿದ್ದ ರಾಕ್ಷಸನನ್ನು ದುರುಗುಟ್ಟಿ ನೋಡಿತು. ಬಲಿಷ್ಠನಾಗಿದ್ದ ಪುಲೋಮ ಕ್ಷಣಮಾತ್ರದಲ್ಲಿ ಶಿಶುವಿನ ಕಣ್ಣಿನಿಂದ ಹೊರಟ ಕ್ರೋಧಾಗ್ನಿಗೆ ಭಸ್ಮವಾಗಿ ಹೋದ. ಋಷೀಪತ್ನಿ ಪುಲೋಮೆ ತಕ್ಷಣವೇ ನೆಲದ ಮೇಲೆ ಬಿದ್ದಿದ್ದ ತನ್ನ ಶಿಶುವನ್ನು ಎತ್ತಿಕೊಂಡು ದುಃಖದಿಂದ ಆಶ್ರಮದತ್ತ ನಡೆದು ಬರತೊಡಗಿದಳು. ಹಾಗೆ ಆಶ್ರಮದತ್ತ ಆಕೆ ಸಾಗಿ ಬರುವಾಗ ಅವಳ ಕಣ್ಣಿನಿಂದ ಕೆಳಗಿಳಿದ ಕಣ್ಣೀರು ನದಿಯಾಗಿ ಹರಿದು "ವಧೂಸರ '' ಎಂಬ ಹೆಸರಿನಿಂದ ಪ್ರಖ್ಯಾತವಾಯಿತು. ಅತ್ತ ಪುಲೋಮೆಯ ಗರ್ಭದಿಂದ ಜಾರಿದ ಕಾರಣಕ್ಕಾಗಿ ಆ ಶಿಶುವಿಗೆ ಬ್ರಹ್ಮ ಸಂಕಲ್ಪದಂತೆ ಬಂದ ಹೆಸರು "ಚ್ಯವನ ". 🙏🙏
ಮುಂದುವರಿಯುವುದು🙏
Sunday, August 10, 2025
ವೃತ್ರಾಸುರ 8
ಯುದ್ಧದಲ್ಲಿ ಇಂದ್ರನ ವಜ್ರಾಯುಧ ಕೈತಪ್ಪಿ ಬಿದ್ದಿದ್ದು ವೃತ್ರನ ಸಮ್ಮುಖದಲ್ಲಿ. ಅದನ್ನು ಎತ್ತಿಕೊಳ್ಳುವ ಧ್ಯೆರ್ಯವೂ ಇಂದ್ರನಿಗೆ ಇರಲಿಲ್ಲ.. ದೇವತೆಗಳ ಸಮೂಹದಲ್ಲಿ ಕೋಲಾಹಲ ಉಂಟಾಯಿತು. ಅಯ್ಯೊ ... ಇಂದ್ರನ ದುರ್ವಿಧಿಯೇ.. ಇನ್ನು ಇವನು ಶತ್ರುಗಳನ್ನು ಗೆಲ್ಲುವುದು ಅಸಾಧ್ಯ. ಸ್ವರ್ಗದ ಆಡಳಿತವನ್ನು ಪಡೆಯಲು ಶ್ರೀ ಹರಿಯೇ ಉಪದೇಶಿಸಿದ ಒಂದು ದಾರಿ ಕೂಡ ಕೈ ತಪ್ಪಿ ಹೋಯಿತು ಎಂದು ಮರುಗಿದರು. ಈ ಸ್ಥಿತಿಗೆ ಸ್ವತಃ ವೃತ್ರನೇ ಮರುಗಿ ತಾನೇ ಮಾತಾಡಲು ತೊಡಗಿದ. "ದೇವೇಂದ್ರ... ತ್ರಿಲೋಕಾಧಿಪತಿಯಾಗಿದ್ದ ನೀನು ಎಲ್ಲದಕ್ಕೂ ನೀನೇ ಕಾರಣನೆಂಬ ಅಹಂಕಾರದಿಂದಲೇ ಇಂದ್ರ ಪದವಿಯನ್ನು ಕಳೆದುಕೊಂಡೆ, ಆದರೆ ನೀನೂ ಕೂಡ ಕೇವಲ ನಿಮಿತ್ತ ಮಾತ್ರ. ನಿನ್ನಂತವರು ಕರ್ತವ್ಯವನ್ನು ಮರೆತು ಪ್ರಮತ್ತರಾಗಿ ವರ್ತಿಸಿದ ಸಮಯದಲ್ಲಿ ವಾಸ್ತವದ ಅರಿವನ್ನು ಮಾಡಿಸಲು ನನ್ನಂತವರ ಸೃಷ್ಠಿ ಭಗವಂತನ ಸಂಕಲ್ಪದಂತೆ ಆಗುತ್ತದೆ. ಹಾಗಿರುವಾಗ ನೀನು ಆ ಭಗವಂತನು ನಿರ್ದೇಶಿಸಿದಂತೆ ಆಡುವ ಸೂತ್ರದ ಗೊಂಬೆಯಷ್ಟೇ ಎನ್ನುವುದನ್ನು ಅರಿತುಕೋ... ಸೋಲು ಗೆಲುವುಗಳನ್ನು - ಸಾವು ಬದುಕನ್ನು ನಿರ್ಧರಿಸುವ ಶಕ್ತಿ ಬೇರೆಯೇ ಇದೆ. ಈ ಕ್ಷಣದಲ್ಲಿ ನಿರಾಯುಧನಾದ ನಿನ್ನನ್ನು ನಾನು ಕೊಲ್ಲಬಲ್ಲೆ ಆದರೆ ... ಈ ಸ್ಥಿತಿಯಲ್ಲಿ ನಾನು ನಿನ್ನನ್ನು ಕೊಂದೆನಾದರೆ ಪಾಪದ ಕೂಪದಲ್ಲಿ ತಳ್ಳಲ್ಪಡುತ್ತೇನೆ. ಹಾಗಾಗಿ ಇದೋ ಇಲ್ಲಿರುವ ನಿನ್ನ ಆಯುಧವನ್ನು ತೆಗೆದುಕೊಂಡು ಯುದ್ಧ ಮಾಡು".
ವೃತ್ರನು ಹೀಗೆಂದು ಅವಕಾಶ ಕೊಟ್ಟ ಕೂಡಲೇ ದೇವೇಂದ್ರನು "ನಿನ್ನ ಧರ್ಮಬುದ್ಧಿಗೆ ತಲೆಬಾಗಿದ್ದೇನೆ..ನೀನು ನನ್ನ ಶತ್ರುವೇ ಆದರೂ ನಿನ್ನನ್ನು ಹೊಗಳುವುದರಲ್ಲಿ ಯಾವ ದೋಷವೂ ಇಲ್ಲ.. " ಎನ್ನುತ್ತಾ ತನ್ನ ಕೈಜಾರಿ ಬಿದ್ದುಹೋಗಿದ್ದ ವಜ್ರಾಯುಧವನ್ನು ಮತ್ತೆ ಕೈಗೆತ್ತಿಕೊಂಡ. ಮತ್ತೆ ಯುದ್ಧಾರಂಭವಾಯಿತು. ಒಂದು ಕೈಯನ್ನು ಕಳೆದುಕೊಂಡರೂ ಕೇವಲ ಒಂದು ಕೈಯಲ್ಲೇ ಪರಿಘಾಯುಧವನ್ನು ಧರಿಸಿ ವೃತ್ರನು ಇಂದ್ರನನ್ನು ಘಾತಿಸಲು ಮುಂದಾದ. ತಕ್ಷಣವೇ ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿ ಅವನ ಇನ್ನೊಂದು ಕೈಯನ್ನೂ ಕತ್ತರಿಸಿ ಹಾಕಿದ. ಎರಡೂ ಕೈಗಳನ್ನು ಕಳೆದುಕೊಂಡು ದೇಹದಿಂದ ರಕ್ತ ಸುರಿಯುತ್ತಿದ್ದ ಕ್ಷಣದಲ್ಲಿ ಹೂವರಳಿ ನಿಂತ ಮುತ್ತುಗದ ಮರದಂತೆ ವೃತ್ರ ಕಾಣಿಸುತಿದ್ದ. ಬಾಹುಗಳನ್ನು ಕಳೆದುಕೊಂಡಮೇಲೂ ವೃತ್ರನು ಯುದ್ಧಭೂಮಿಯಿಂದ ಹಿಂದೆ ಸರಿಯಲಿಲ್ಲ... ಸಂಪೂರ್ಣವಾದ ಬ್ರಹ್ಮಾಂಡವನ್ನೇ ಸೆಳೆದು ಆಟಿಕೆಯಂತೆ ಆಡಿಸಬಲ್ಲ ಭೀಕರವಾದ ದೇಹವನ್ನು ಹೊಂದಿದ್ದ ಆತ ಕ್ಷಣಮಾತ್ರದಲ್ಲಿ ತನ್ನ ಬಾಯಿಯನ್ನು ತೆರೆದ... ಅವನ ಬಾಯಿಯ ಕೆಳದವಡೆ ಭೂಮಿಯ ಮೇಲೆ ಹರಡಿಕೊಂಡಿದ್ದರೆ, ಮೇಲಿನ ದವಡೆ ಆಗಸವನ್ನೂ ಮೀರಿ ತೆರೆದುಕೊಂಡಿತ್ತು. ದೇವತೆಗಳೆಲ್ಲಾ ಹಾ...ಹಾ.. ಎನ್ನುತ್ತಿರುವಂತೆಯೇ ವೃತ್ರನು ಐರಾವತ ಸಹಿತವಾಗಿ ಇಂದ್ರನನ್ನು ನುಂಗಿಬಿಟ್ಟ.
ತಾನೇರಿದ ದಿಗ್ಗಜದ ಸಹಿತವಾಗಿ ತನ್ನನ್ನೇ ವೃತ್ರನು ನುಂಗಿದರೂ ದೇವೇಂದ್ರನಿಗೆ ಏನೂ ಆಗಲಿಲ್ಲ, ಅದಾಗಲೇ ಅವನಿಗೆ ನಾರಾಯಣ ಕವಚದ ಉಪದೇಶವನ್ನು ವಿಶ್ವರೂಪನು ಮಾಡಿದ್ದರಿಂದ ಅದರ ಮಹಿಮೆಯಿಂದ ಅವನು ಸುರಕ್ಷಿತವಾಗಿ ವೃತ್ರನ ಹೊಟ್ಟೆಯನ್ನು ಸೇರಿ.. ತನ್ನ ಕೈಯಲ್ಲಿದ್ದ ವಜ್ರಾಯುಧದಿಂದ ಅವನ ಹೊಟ್ಟೆಯನ್ನು ಬೇಧಿಸಿದ. ಹಾಗೆ ವೃತ್ರನ ಹೊಟ್ಟೆಯನ್ನು ಒಡೆದು ಹೊರಬಂದವನೇ ಕ್ಷಣಮಾತ್ರದಲ್ಲಿ ವೃತ್ರನ ತಲೆಯನ್ನು ಕತ್ತರಿಸಿ ಕೆಡವಿದ. ಆ ಕ್ಷಣದಲ್ಲಿ ಇಂದ್ರನಿಗೆ ಜಯವಾಯಿತೆಂದು ದೇವ ದುಂಧುಭಿ ಮೊಳಗಿತು... ದೇವತೆಗಳು ಹೂಮಳೆಗರೆದರು. ಸ್ವರ್ಗವನ್ನು ಕಳೆದುಕೊಂಡಿದ್ದ ದೇವತೆಗಳೆಲ್ಲಾ ಮರಳಿ ಸ್ವಸ್ಥಾನವನ್ನು ಸೇರಿದರು. ಇಂದ್ರನೂ ಮತ್ತೆ ತನ್ನ ಪದವಿಯನ್ನು ಪಡೆದುಕೊಂಡ. ಆದರೆ.. ಅವನಿಗೆ ಅದು ಸುಖದಾಯಕವಾಗಿರಲಿಲ್ಲ, ಹಿಂದೆ ವಿಶ್ವರೂಪನನ್ನು ವಧಿಸಿ ಬ್ರಹ್ಮಹತ್ಯಾ ಪಾತಕ ಅವನನ್ನು ಪೀಡಿಸಿದಾಗ ಅದನ್ನು ಪಾಲುಮಾಡಿ ಹಂಚಿ ತಾನು ಪರಿಶುದ್ಧನಾಗಿದ್ದ. ಆದರೆ ಈಗ ಅದೇ ರೀತಿಯ ಪಾತಕ ಮತ್ತೆ ಇವನನ್ನು ಸೇರಿಕೊಳ್ಳಲು ಹಿಂಬಾಲಿಸುತ್ತಲಿತ್ತು. ವೃದ್ಧೆಯ ರೂಪದಲ್ಲಿ ರಕ್ತ ಸೋರುತ್ತಿರುವ ಸೀರೆಯನ್ನುಟ್ಟು, ಬಿಳಿಯಾದ ಕೆದರಿದ ತಲೆಗೂದಲುಗಳನ್ನು ಹೊಂದಿ, ಕೆಂಪಾದ ಕಣ್ಣುಗಳಿಂದ, ಕುಷ್ಠರೋಗದಿಂದ ಕೂಡಿದ ದೇಹದಿಂದ ಅದು ಇಂದ್ರನನ್ನು ಹಿಂಬಾಲಿಸುತ್ತಿತ್ತು. ಅದನ್ನು ನೋಡಿ ಹೆದರಿದ ಇಂದ್ರ ಸ್ವರ್ಗದಿಂದ ಪಲಾಯನ ಮಾಡಿದ. ಮತ್ತೂ ಅದು ತನ್ನ ಹಿಂದೆ ಬರುತ್ತಿರುವುದನ್ನು ನೋಡಿ ಈಶಾನ್ಯ ದಿಕ್ಕಿಗೆ ಓಡುತ್ತಾ ಹೋಗಿ ಮಾನಸ ಸರೋವರವನ್ನು ತಲುಪಿದ. ಅಲ್ಲಿ ಒಂದು ಸಾವಿರ ವರ್ಷಗಳ ಕಾಲ ಕಮಲದ ಹೂವಿನ ನಾಳವೊಂದರಲ್ಲಿ ಅವಿತುಕೊಂಡಿದ್ದ.🙏🙏
ಇನ್ನೊಂದು ಕಥೆ ಮುಂದಿನ ಬರಹದಲ್ಲಿ🙏
Saturday, August 9, 2025
ವೃತ್ರಾಸುರ 7
ಮಹಾ ಬಲಶಾಲಿಯಾದ ವೃತ್ರಾಸುರ ಆಕ್ರಮಣಕ್ಕಾಗಿ ಬರುತಿದ್ದ ದೇವಸೇನೆಯನ್ನು ಏಕಾಂಗಿಯಾಗಿ ಕ್ರೋಧದಿಂದ ತಡೆದು ನಿಲ್ಲಿಸುತ್ತಾನೆ. "ಎಲೈ ದೇವತೆಗಳಿರಾ... ಹೇಡಿಗಳಂತೆ ರಣಾಂಗಣಕ್ಕೆ ಬೆನ್ನು ಹಾಕಿ ಓಡಿ ಹೋಗುತ್ತಿರುವ ನಮ್ಮವರನ್ನು ಹೊಡೆದು ಕೊಲ್ಲುವುದು ಪರಾಕ್ರಮವಲ್ಲ... ನಿಜವಾಗಿ ನಿಮಗೆ ಸಾಮರ್ಥ್ಯವಿರುವುದೇ ಆದರೆ ಒಂದು ಘಳಿಗೆಯಾದರೂ ನನ್ನೊಂದಿಗೆ ನಿಂತು ಯುದ್ಧವನ್ನು ಮಾಡಿ, ನನ್ನ ಪರಾಕ್ರಮ ಏನೆಂಬುದನ್ನು ತೋರಿಸಿಕೊಡುತ್ತೇನೆ". ಎಂದು ಹೇಳುತ್ತಾ ಕೈಯಲ್ಲಿ ತ್ರಿಶೂಲವನ್ನು ಹಿಡಿದು ಘರ್ಜಿಸುತ್ತಾ ಮುಂದೊತ್ತಿ ಬಂದ. ಅವನ ವೀರವಾಣಿಯನ್ನು ಕೇಳುತ್ತಲೇ ದೇವತೆಗಳಲ್ಲಿ ಕೆಲವರು ಮೂರ್ಛಿತರಾದರು, ಹಾಗೆ ನೆಲಕ್ಕುರುಳಿದ ದೇವತೆಗಳನ್ನು ತುಳಿಯುತ್ತಲೇ ಅವನು ಮುಂದೆ ಸಾಗಿ ಬರುತಿದ್ದ. ವೃತ್ರಾಸುರ ಈ ರೀತಿಯಲ್ಲಿ ಕ್ರೋಧದಿಂದ ಸಾಗಿ ಬರುತ್ತಿರುವುದನ್ನು ನೋಡಿದ ಇಂದ್ರ ವಜ್ರಾಯುಧಪಾಣಿಯಾಗಿ ಐರಾವತವನ್ನೇರಿ ಅವನನ್ನು ಎದುರಿಸಲು ಮುಂದಾಗುತ್ತಾನೆ.
ತನ್ನ ಸಮ್ಮಖಕ್ಕೆ ಸಾಗಿ ಬರುತ್ತಿರುವ ಇಂದ್ರನನ್ನು ನೋಡಿದ ವೃತ್ರ ಬಲವಾದ ಒಂದು ಗದೆಯಿಂದ ಐರಾವತದ ನೆತ್ತಿಗೆ ಹೊಡೆಯುತ್ತಾನೆ. ಅವನ ಗದಾಪ್ರಹಾರಕ್ಕೆ ಐರಾವತವೆಂಬ ಆ ದಿಗ್ಗಜವೂ ಒಂದು ಕ್ಷಣ ನೋವಿನಿಂದ ಫೀಳಿಡುತ್ತಾ ಇಪ್ಪತ್ತೆಂಟು ಗಜಗಳಷ್ಟು ಹಿಂದೆ ಸರಿಯುತ್ತದೆ. ತಕ್ಷಣದಲ್ಲಿಯೇ ಇಂದ್ರನು. ಅಮೃತವನ್ನೇ ಸ್ಪುರಿಸುವ ಅನುಭವ ನೀಡುವ ತನ್ನ ಕೈಯಿಂದ ಅದರ ನೆತ್ತಿಯನ್ನು ನೇವರಿಸಿ ನೋವು ಶಮನವಾಗುವಂತೆ ಮಾಡುತ್ತಾನೆ. ಹಾಗೆ ಐರಾವತವನ್ನು ಸಂತೈಸಿದ ದೇವೆಂದ್ರ ಮತ್ತೂ ಕೃದ್ಧನಾಗಿ ಸಿಂಹನಾದಗೈಯತ್ತಾ ವೃತ್ರನ ಸಮ್ಮಖಕ್ಕೆ ಬರುತ್ತಾನೆ. ಸ್ವತಃ ಇಂದ್ರನೇ ತನ್ನ ಸಮ್ಮಖಕ್ಕೆ ಬರುತ್ತಿರುವುದನ್ನು ನೋಡಿ ವೃತ್ರಾಸುರನ ಕ್ರೋಧ ಇಮ್ಮಡಿಯಾಯಿತು. ಹಾಗಾಗಿ ಇಂದ್ರನನ್ನು ಉದ್ದೇಶಿಸಿ " ದೇವೇಂದ್ರಾ... ಬ್ರಾಹ್ಮಣನೂ... ನಿನ್ನ ಗುರುವೂ... ಹಾಗೆಯೇ ನನ್ನ ಸಹೋದರನೂ ಆಗಿದ್ದ ವಿಶ್ವರೂಪನನ್ನು ನಿರ್ದಯಿಯಾದ ನೀನು ಕೊಂದು ಕಳೆದಿದ್ದೀ .. ನಿನ್ನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದೇ ನನ್ನ ಜನನವಾಗಿದೆ, ಇದೋ ನನ್ನ ಕೈಯಲ್ಲಿರುವ ಶೂಲದಿಂದ ನಿನ್ನನ್ನು ಇರಿದು ಕೊಂದೆನಾದರೆ ನಾನು ನನ್ನ ಅಣ್ಣನ ಋಣವನ್ನು ತೀರಿಸಿದ ಹಾಗಾಗುತ್ತದೆ. ನೀನೇ ನೀನಾಗಿ ನನ್ನ ಸಮ್ಮುಖಕ್ಕೆ ಬಂದುದೇ ಒಳ್ಳೆಯದಾಯಿತು, ದಯಾಹೀನನೂ ನಿರ್ಲಜ್ಜನೂ ಆದ ನಿನ್ನನ್ನು ಸ್ವರ್ಗ ಲಕ್ಷ್ಮಿಯೂ ಕೂಡ ತೊರೆದು ಹೋಗಿದ್ದಾಳೆ. ಹೇಗೆ ನನ್ನಣ್ಣನಾದ ವಿಶ್ವರೂಪನ ಮೂರೂ ತಲೆಗಳನ್ನು ನೀನು ಕತ್ತರಿಸಿ ಹಾಕಿದೆಯೋ ಅದೇ ರೀತಿ ನಾನು ದುಷ್ಟನಾದ ನಿನ್ನ ತಲೆಯನ್ನೂ ಕತ್ತರಿಸಿ ಕೆಡುಹುವೆನು, ಅದೋ ಅಲ್ಲಿ ನಿನ್ನ ಆಜ್ಞಾಪಾಲಕರಾದ ಸುರರು ರಣದಲ್ಲಿ ಸೋತು ಪಲಾಯನ ಮಾಡುತ್ತಿರುವ ನನ್ನವರನ್ನು ಹಿಂಬಾಲಿಸಿ ಕೊಲ್ಲುತ್ತಿದ್ದಾರೆ... ಈ ಕ್ಷಣದಲ್ಲಿ ನಾನು ನಿನ್ನನ್ನು ಕೊಂದೆನಾದರೆ ಅವರೂ ನಿರ್ಗತಿಕರಾಗುತ್ತಾರೆ". ಹೀಗೆಂದು ಹೇಳುತ್ತಾ ಇಂದ್ರನಿಗೆ ಎದುರಾದ ವೃತ್ರನ ಕ್ರೋಧಕ್ಕೆ ದೇವತೆಗಳು ಮೂರ್ಛಿತರಾದರು.
ಇಂದ್ರನ ಕೈಯಲ್ಲಿರುವ ವಜ್ರಾಯುಧವನ್ನು ನೋಡಿದ ವೃತ್ರ.. " ಅಯ್ಯಾ ನಡೆಯುವಂತಹ ಯುದ್ಧಕ್ಕೆ ಬೇಕಾದ ಸಿದ್ಧತೆಯನ್ನು ನೀನು ಮಾಡಿಕೊಂಡೇ ಬಂದಿದ್ದೀ ಎಂದು ಕೇಳಿದ್ದೇನೆ. ನಿನ್ನ ಕೈಯಲ್ಲಿರುವ ಆಯುಧ ವಿಷ್ಣುವಿನ ಶಕ್ತಿಯ ಮತ್ತು ದಧೀಚಿಯ ತ್ಯಾಗದ ಫಲ ಎಂಬುದೂ ತಿಳಿದಿದೆ... ಮುಂದಾಗುವ ಯುದ್ಧದಲ್ಲಿ ನೀನೇನಾದರೂ ಆ ಆಯುಧವನ್ನೆ ಬಳಸಿ ನನ್ನನ್ನು ಕೊಲ್ಲುವ ಸಾಧ್ಯತೆಯೂ ಇದೆ ಆದರೆ ಅಂಜಿಕೆಯಿಂದ ನಾನು ನನ್ನ ಉದ್ದೇಶದಿಂದ ಹಿಂದೆ ಸರಿಯಲಾರೆ.. ಯಾಕೆಂದರೆ ನಿನ್ನ ಕೈಯಲ್ಲಿರುವ ವಜ್ರವನ್ನು ನೋಡಿದ ಮೇಲೆ ನೀನು ಕೈಗೊಂಡ ಕಾರ್ಯ ವಿಷ್ಣು ಸಂಕಲ್ಪ ಎಂಬುದರಲ್ಲಿ ಎರಡು ಮಾತಿಲ್ಲ... ಪ್ರಪಂಚದ ಚರಾಚರಗಳಲ್ಲಿ ಅವ್ಯಕ್ತನಾಗಿರುವ.. ಯೋಗಿಗಳ ಸಂಮುಖದಲ್ಲಿ ಸದಾ ವ್ಯಕ್ತನಾಗಿಯೇ ಇರುವ ಆ ಭಗವಂತನ ಸಂಕಲ್ಪ ಹೇಗಿದೆಯೋ... ಆದರೆ ನನಗೆ ಅವನ ಹೊರತಾದ ಸ್ವರ್ಗಕಾಮವಿಲ್ಲ... ಅವನಿರುವ ಲೋಕದ ಮೋಕ್ಷ ಸ್ಥಾನದ ಅಭಿಲಾಷೆಯೂ ಇಲ್ಲ... ಯಾಕೆಂದರೆ ಜನ್ಮ ಜನ್ಮಾಂತರದ ಪಾಪವನ್ನು ತೊಳೆದುಕೊಳ್ಳದೆ ಅದು ನನಗೆ ದಕ್ಕುವುದೂ ಇಲ್ಲ, ಆದರೆ ವಿಷ್ಣು ಸಾನ್ನಿಧ್ಯಕ್ಕೆ ಕರೆದೊಯ್ಯಬಲ್ಲ ಸಜ್ಜನರ ಸಂಗ ದೊರೆತರೆ ಸಾಕು. ಅದನ್ನು ನಾನು ಪೌರುಷದಿಂದಲೇ ಪಡೆಯುವೆ ". ಎಂದು ಹೇಳುತ್ತಾ ಆಕ್ರಮಣಕ್ಕೆ ಸಿದ್ಧನಾದ.
ಕ್ರುದ್ಧನಾಗಿ ಇಂದ್ರನ ಎದುರಾಗಿ ಬಂದ ವೃತ್ರ ತನ್ನ ಕೈಯಲ್ಲಿದ್ದ ಶೂಲದಿಂದ ಇಂದ್ರನನ್ನು ಘಾತಿಸಲು ಮುಂದಾದ. ಅವನು ಶೂಲದಿಂದ ತಿವಿಯಲು ತನ್ನ ಬಲಿಷ್ಠವಾದ ಬಾಹುವನ್ನು ಮುಂದೆ ಚಾಚಿದ ಕೂಡಲೇ ದೇವೇಂದ್ರ ಸ್ವಲ್ಪವೂ ಅಂಜಿಕೊಳ್ಳದೇ ಹರಿತವಾದ ನೂರು ಅಲಗುಗಳನ್ನು ಹೊಂದಿದ ತನ್ನ ವಜ್ರಾಯುಧದಿಂದ ಅವನ ಬಲತೋಳನ್ನೇ ಕತ್ತರಿಸಿಹಾಕಿದ. ದೇವತೆಗಳಲ್ಲ ಈ ಕಾರ್ಯದಿಂದ ಸಂತೋಷಗೊಂಡು ಜಯಕಾರ ಮಾಡಿದರು. ತನ್ನ ಒಂದು ಬಾಹುವನ್ನು ಮತ್ತು ಶೂಲಾಯುಧವನ್ನೂ ಕಳೆದುಕೊಂಡರೂ ವೃತ್ರಾಸುರ ಎದೆಗುಂದಲಿಲ್ಲ.. ಮತ್ತೊಂದು ಕೈಯಿಂದ ಪರಿಘಾಯುಧವನ್ನು ಹಿಡಿದು ಇಂದ್ರನಿಗೂ ಅವನೇರಿದ ಐರಾವತಕ್ಕೂ ಅಪ್ಪಳಿಸಿದ. ಬೀಸಿದ ರಭಸ ಹೇಗಿತ್ತೆಂದರೆ... ಇಂದ್ರನೇರಿದ ದಿಗ್ಗಜ ಒಂದು ಕ್ಷಣ ಕಂಪಿಸಿತು. ಇಂದ್ರನ ಕೈಯಲ್ಲಿದ್ದ ವಜ್ರಾಯುಧ ಜಾರಿ ಬಂದು ವೃತ್ರನ ಸಮ್ಮುಖದಲ್ಲಿ ಬಿದ್ದಿತು.🙏🙏
ಮುಂದುವರಿಯುವುದು🙏
Friday, August 8, 2025
ವೃತ್ರಾಸುರ 6
ಲೋಕದ ಹಿತಕ್ಕಾಗಿ ಮಹಾ ತಪಸ್ವಿಗಳಾದ, ಅಥರ್ವ ವೇದವನ್ನು ಸಿದ್ಧಿಸಿಕೊಂಡಿದ್ದ ದದೀಚಿ ಮಹರ್ಷಿಗಳು ತಮ್ಮ ದೇಹವನ್ನು ತ್ಯಾಗ ಮಾಡಿದರು. ಇದರಿಂದ ಹರ್ಷ ಮಾನಸರಾದ ದೇವತೆಗಳು ಮಹರ್ಷಿಗಳ ದೇಹದ ವಜ್ರಸಮಾನವಾದ ಮೂಳೆಗಳಿಂದ ಒಂದು ಆಯಧವನ್ನು ನಿರ್ಮಿಸಲು ಸೂಚಿಸುತ್ತಾರೆ. ದೇವತೆಗಳ ನಿರ್ದೇಶನದಂತೆ ವಿಶ್ವಕರ್ಮನು ಇಂದ್ರನಿಗೆ ವಿಶಿಷ್ಟವಾದ ಆಯುಧವನ್ನ ನಿರ್ಮಿಸಿ ಕೊಡುತ್ತಾನೆ. ದೇವತೆಗಳ ನಿರೀಕ್ಷೆಯಂತೆ ಇಂದ್ರನು ವಜ್ರಾಯುಧವನ್ನು ಹಿಡಿದು ಐರಾವತವನ್ನೇರುತ್ತಾನೆ, ಆ ಕ್ಷಣದಲ್ಲಿಯೇ ವೃತ್ರನಿಂದ ಸೆಳೆಯಲ್ಪಟ್ಟ ದೇವತೆಗಳ ತೇಜಸ್ಸು ಮರುಸ್ಥಾಪನೆಯಾಗುತ್ತದೆ. ತ್ರಿಮೂರ್ತಿಗಳ ತೇಜಸ್ಸನ್ನು ಕೂಡ ಒಳಗೊಂಡಂತೆ ದೇವೇಂದ್ರ ಪ್ರಕಾಶಮಾನನಾಗಿ ಕಂಗೊಳಿಸುತ್ತಾನೆ. ದೇವತೆಗಳು ಹರ್ಷೋದ್ಗಾರ ಮಾಡುತ್ತಾರೆ. ಎಲ್ಲರಲ್ಲಿಯೂ ವೃತ್ರನನ್ನು, ಮತ್ತವನ ಆಸುರೀ ಸೇನೆಯನ್ನು ಎದುರಿಸಬೇಕೆಂಬ ಛಲ-ಬಲಗಳು ಕೂಡಿಕೊಳ್ಳುತ್ತದೆ. ದೇವಸೇನೆಯು ಯುದ್ಧೋತ್ಸಾಹದಿಂದ ಇಂದ್ರನ ನಿರ್ದೇಶನದಂತೆ ಮುಂದೆ ಮಂದೆ ಸಾಗುತ್ತದೆ. ರುದ್ರರು, ಆದಿತ್ಯರು, ವಸುಗಳು, ಸಿದ್ಧರು, ಸಾಧ್ಯರು, ವಿಶ್ವೇದೇವತೆಗಳನ್ನು ಒಡಗೂಡಿದ ಇಂದ್ರನು ಸೈನ್ಯವು ಆಕ್ಷಣದಲ್ಲಿ ಮೃತ್ಯು ದೇವತೆಗೂ ಭೀತಿ ಉಂಟುಮಾಡುವ ಹಾಗೆ ಕಾಣಿಸುತಿತ್ತು. ದೇವತೆಗಳು ಸೈನ್ಯ ಸಮೇತರಾಗಿ ಬರುತ್ತಿರುವ ವರ್ತಮಾನವನ್ನು ತಿಳಿದ ವೃತ್ರನು, ನಮೂಚಿ ಶಂಬರ, ಖುಷಭ,ಹಯಗ್ರೀವ, ಶಂಕುಶಿರ,ಅಯೋಮುಖ, ವಿಪ್ರಚಿತ್ತಿ, ಹೇತಿ, ಪ್ರಹೇತಿ, ಉತ್ಕಲ, ಸುಮಾಲಿ ಮುಂತಾದ ಸಾವಿರಾರು ಅಸುರ ಪ್ರಮುಖರನ್ನು ಒಡಗೂಡಿಕೊಂಡು ರಣೋತ್ಸಾಹದಿಂದ ಮುನ್ನುಗ್ಗಿ ಬಂದನು. ಸುರಾಸುರರಿಗೆ ಭಯಂಕರವಾದ ರಣ ಏರ್ಪಟ್ಟಿತು. ಅಸುರರು ತಮ್ಮಲ್ಲಿದ್ದ ಕ್ರೂರವಾದ, ಹರಿತವಾದ ಅಲಗುಗಳನ್ನು ಹೊಂದಿದ ಆಯುಧಗಳನ್ನು ದೇವತೆಗಳ ಮೇಲೆ ಪ್ರಯೋಗಿಸಿದರು. ಹರಿತವಾದ ಅಲಗುಗಳನ್ನು ಹೊಂದಿದ ಬಾಣಗಳನ್ನು ದೇವಸೇನೆಯನ್ನು ಗುರಿಯಾಗಿಸಿಕೊಂಡು ಪ್ರಯೋಗಿಸಿದರು. ಅಸುರರು ಪ್ರಯೋಗಿಸಿದ ಆಯುಧ ಮತ್ತು ಬಾಣಗಳಿಂದ ಆಗಸವೇ ತುಂಬಿ ಹೋಯಿತು. ಕಪ್ಪಾದ ಕಾರ್ಮೋಡ ಕವಿದಂತೆ ಆಯುಧಗಳಿಂದ ತುಂಬಿ ಹೋದ ಆಗಸದಿಂದ ಕತ್ತಲೆಯೇ ಆವರಿಸಿಹೋಯಿತು. ಆದರೆ ದೇವತೆಗಳು ಎದೆಗುಂದದೇ ಕ್ಷಣಮಾತ್ರದಲ್ಲಿ ತಮ್ಮತ್ತ ಬರುತಿದ್ದ ಅಸುರರ ಆಯುಧಗಳನ್ನು ಕತ್ತರಿಸಿ ಹಾಕಿದರು. ಅವರು ಪ್ರಯೋಗಿಸಿದ ಎಲ್ಲಾ ಆಯುಧಗಳೂ ಗಗನದಲ್ಲಿಯೇ ಕತ್ತರಿಸಲ್ಪಟ್ಟು ಚೂರು ಚೂರಾಗಿ ಬಿದ್ದು ಹೋದವು. ಆವಾಗ ರಾಕ್ಷಸರು ದೊಡ್ಡ ದೊಡ್ಡ ಮರಗಳನ್ನು, ಬೆಟ್ಟಗಳನ್ನು ಕಿತ್ತು ದೇವತೆಗಳನ್ನು ಪ್ರಹರಿಸುವ ಸಲುವಾಗಿ ಎಸೆದರು, ಅವುಗಳನ್ನು ಕೂಡ ದೇವತೆಗಳು ತಮ್ಮ ಆಯುಧಗಳಿಂದ ಕತ್ತರಿಸಿ ಹಾಕಿದರು. ತಾವು ಪ್ರಯೋಗಿಸಿದ ಆಯುಧಗಳು ದೇವತೆಗಳಿಗೆ ಒಂದು ಗಾಯವನ್ನು ಮಾಡಲು ವ್ಯರ್ಥವಾದದ್ದನ್ನು ನೋಡಿದ ಅಸುರರು ತಮ್ಮ ಎಲ್ಲಾ ಆಯುಧಗಳೂ ಬರಿದಾದಾಗ ಯುದ್ಧವನ್ನು ಮುಂದುವರಿಸುವ ಯಾವ ದಾರಿಯೂ ಕಾಣಿಸದೇ ದೇವತೆಗಳ ರಣಕೇಕೆಯನ್ನು ಕೇಳಿ ಭಯಭೀತರಾಗಿ ಯುದ್ಧಭೂಮಿಯಿಂದ ಪಲಾಯನಮಾಡತೊಡಗಿದರು. ಆ ಕ್ಷಣದಲ್ಲಿ ದೇವತೆಗಳು ಅವರ ಎಲ್ಲಾ ಬಲ- ಶೌರ್ಯವನ್ನು ಸೆಳೆದುಕೊಂಡು ನಿರ್ವೀರ್ಯರನ್ನಾಗಿಸಿಬಿಟ್ಟರು. ಈ ಘಟನೆಯಿಂದ ವೃತ್ರಾಸುರ ಕಂಗೆಡಲಿಲ್ಲ ಬದಲಾಗಿ ನಗುತ್ತಾ ತನ್ನವರಿಗೆ ಧೈರ್ಯ ತುಂಬುವ ಮಾತನಾಡಿದ.." ಅಸುರರಾದ ನೀವು ದೇವ ಸೈನ್ಮವನ್ನು ನೋಡಿ ಪ್ರಾಣಭೀತಿಯಿಂದ ಓಡಬೇಕಾಗಿಲ್ಲ... ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಒಂದು ಅಂತ್ಯವೆಂಬುದು ನಿಶ್ಚಯ, ಯಾರೂ ಇಲ್ಲಿ ಮರಣವರ್ಜಿತರಾಗಿ ಇರಲು ಸಾಧ್ಯವೇ ಇಲ್ಲ. ಹಾಗಿದ್ದರೂ ಎರಡು ರೀತಿಯ ಮರಣ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ.. ಮೊದಲನೆಯದು ಯೋಗಿಗಳು ತಮ್ಮ ದೇಹವನ್ನು ತೊರೆಯಲು ತಾವೇ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಅವರು ಇಚ್ಛಾಮರಣಿಗಳಂತೆ ಸ್ವತಂತ್ರರು, ಬ್ರಹ್ಮಚಿಂತನೆಯನ್ನು ಮಾಡುತ್ತಾ ಯಾವಾಗ ಬೇಕಾದರೂ ದೇಹ ತೊರೆಯಬಲ್ಲರು. ಇನ್ನೊಂದು ಮಾರ್ಗವೆಂದರೆ ರಣರಂಗದಲ್ಲಿ ಶತ್ರುಗಳಿಗೆ ಹೆದರದೇ .. ಬೆನ್ನು ತೋರಿಸದೇ ಅವರ ಶಸ್ತ್ರಗಳಿಗೆ ಎದೆಯೊಡ್ಡುವುದು ಇಂತಹ ಸುವರ್ಣಾವಕಾಶ ನಿಮ್ಮ ಮುಂದಿದೆ ಇದರಿಂದಲೂ ನೀವು ಸ್ವರ್ಗವನ್ನು ಪಡೆಯಬಹುದು ಹಾಗಾಗಿ ಧೈರ್ಯದಿಂದ ಎದುರಿಸಿ, ಬದುಕಿದರೂ ಸ್ವರ್ಗ... ಅಳಿದರೂ ಸ್ವರ್ಗ". ಹೀಗೆ ವೀರೋಚಿತವಾದ ಮಾತುಗಳನ್ನು ವೃತ್ರನು ಹೇಳುತ್ತಿದ್ದರೂ ಅದನ್ನು ಕೇಳುವ ಸಹನೆಯೂ ಅವನ ಸಂಗಡಿಗರಿಗೆ ಇರಲಿಲ್ಲ, ಹೇಗಾದರೂ ಜೀವ ಉಳಿಸಿಕೊಳ್ಳಬೇಕೆಂದು ಯುದ್ಧಭೂಮಿಯಿಂದ ಓಡತೊಡಗಿದರು. ಆದರೂ ಅವರನ್ನು ಅಟ್ಟಿಸಿಕೊಂಡು ಬರುತ್ತಿದ್ದ ದೇವತೆಗಳು ಹಿಂದಿನಿಂದಲೇ ಪ್ರಹರಿಸುತ್ತಿದ್ದರು. ಇದನ್ನು ನೋಡಿದ ವೃತ್ರಾಸುರನ ಕೋಪ ಇಮ್ಮಡಿಯಾಯಿತು. ಅಸುರರನ್ನು ಬೆನ್ನಟ್ಟಿ ಬರುತಿದ್ದ ದೇವತೆಗಳನ್ನು ತಾನೇ ಏಕಾಂಗಿಯಾಗಿ ತಡೆದು ನಿಲ್ಲಿಸಿದ.🙏
ಮುಂದುವರಿಯುವುದು🙏🙏
Saturday, August 2, 2025
ವೃತ್ರಾಸುರ 5
ದೇವತೆಗಳನ್ನೆಲ್ಲಾ ತನ್ನ ಜೊತೆಗೆ ಕೊಡಿಕೊಂಡು ಬಂದ ಇಂದ್ರ ದದೀಚಿ ಮಹರ್ಷಿಗಳ ದರ್ಶನ ಮಾಡಿ ಕೈಮುಗಿದು ನಿಲ್ಲುತ್ತಾನೆ. ಬಂದಂತಹ ದೇವತೆಗಳನ್ನು ನೋಡಿದ ದದೀಚಿ ಮಹರ್ಷಿ ಅವರನ್ನ ಸತ್ಕರಿಸಿ ತನ್ನಾಶ್ರಮದವರೆಗೆ ಆಗಮಿಸಿದ ಉದ್ದೇಶವನ್ನು ತಿಳಿಸಿರೆಂದು ಕೇಳಿಕೊಳ್ಳುತ್ತಾನೆ. ಆಗ ಇಂದ್ರಾದಿಗಳು ವೃತ್ರಾಸುರನ ಉತ್ಪತ್ತಿಯ ವಿದ್ಯಮಾನವನ್ನು ತಿಳಿಸಿ ಅವನನ್ನು ವಧಿಸುವ ಸಲುವಾಗಿ ತಮ್ಮ ಅಮೂಲ್ಯವಾದ ದೇಹವನ್ನು ದಾನ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಆ ಮಾತನ್ನು ಕೇಳಿದ ದದೀಚಿ ಮಹರ್ಷಿ " ಅಯ್ಯಾ ಇಂದ್ರಾದಿ ದೇವತೆಗಳೇ... ನೀವು ದರ್ಶನಭಾಗ್ಯವನ್ನು ಕರುಣಿಸಿದ್ದು ನನಗೆ ಪುಣ್ಯದಾಯಕವೇ ಹೌದು ಆದರೆ.. ನೀವು ಅಪೇಕ್ಷಿಸುತ್ತಿರುವುದನ್ನು ಕೇಳಿದಾಗ ಆಶ್ಚರ್ಯ ಎಂದೆನಿಸುತ್ತಿದೆ. ಈ ಪ್ರಪಂಚದಲ್ಲಿ ಯಾವುದೇ ಜೀವಿಯೇ ಆಗಿರಲಿ ತನ್ನ ದೇಹದ ಮೇಲೆ ಅಭಿಮಾನವನ್ನು ಹೊಂದಿರುತ್ತದೆ. ತನ್ನ ದೇಹ ಪೋಷಣೆಗೆ ಬೇಕಾದ್ದನ್ನು ಗಳಿಸಲು ಸಾಹಸ ಪಡುತ್ತದೆ. ಭೂಮಿಯಲ್ಲಿ ಹುಟ್ಟಿದ್ದೇವೆ ಎಂದಾದರೆ ನಮ್ಮ ಅಸ್ತಿತ್ವವನ್ನು ತೋರಿಸುವುದೇ ದೇಹವಲ್ಲವೇ... ದೇಹವನ್ನು ತೊರೆದಲ್ಲಿಗೇ ಆ ಜೀವಿಯ ಅಂತ್ಯವಾಯಿತು ಎಂಬುದು ಸತ್ಯ. ಈ ನೆಲೆಯಲ್ಲಿಯೇ ಅಲ್ಲವೇ ಪ್ರತಿಯೊಂದು ಜೀವಿಯೂ ದೇಹ ತೊರೆಯುವಾಗ ಅಂದರೆ ಮರಣ ಕಾಲದಲ್ಲಿ ದುಃಖಿಸುವುದು ಅಯ್ಯೋ ಬಿಟ್ಟು ಹೋಗುವೆನಲ್ಲಾ.. ಎಂದು, ಹಾಗಿದ್ದಾಗ ನನಗೂ ಕೂಡ ಅಂತಹ ದೇಹಾಭಿಮಾನ ಇದ್ದರೆ ತಪ್ಪಲ್ಲ ತಾನೆ. ಈ ಜೀವನದಲ್ಲಿ ಏನನ್ನು ಸಾಧಿಸಿದೆನೋ ಅದೆಲ್ಲವೂ ಈ ದೇಹದಿಂದ ಎಂದು ಭಾವಿಸಿದರೆ ತಪ್ಪೇ..? ಹಾಗಿರುವಾಗ ಅಂತಹ ದೇಹವನ್ನೇ ನೀವು ಬಯಸಿದರೆ ಅದನ್ನು ಅಷ್ಟು ಸುಲಭವಾಗಿ ಕೊಟ್ಟುಬಿಡುತ್ತೇನೆ ಎಂದು ಹೇಳಲಾದೀತೆ..'' . ಹೀಗೆ ದೇವತೆಗಳ ಮುಂದೆ ಪ್ರಶ್ನಾರ್ಥಕವಾಗಿ ವಿಷಯವನ್ನು ಮುಂದಿಟ್ಟರು. ಮಹರ್ಷಿಗಳ ಮಾತಿಗೆ ಪ್ರತಿಯಾಗಿ ಇಂದ್ರ.. "ಸ್ವಾಮೀ ಕರ್ಮಭೂಮಿಯಲ್ಲಿ ಹುಟ್ಟಿದ ಸಾಮಾನ್ಯ ಜೀವಿಗಳಿಗೆ ನೀವು ಹೇಳಿದಂತೆ ದೇಹಾಭಿಮಾನ ಸಹಜ ಆದರೆ ನಿಮ್ಮಂತಹ ಜ್ಞಾನಿಗಳು ಲೋಕಕಲ್ಯಾಣದ ಕಾರಣಕ್ಕಾಗಿಯೇ ಸಮಸ್ತವನ್ನು ವಿನಿಯೋಗಿಸುವವರು, ಕೊಡು ಎಂದು ಕೇಳುವವರು ಸ್ವಾರ್ಥಿಗಳಾಗಿರುತ್ತಾರೆ. ಅವರಿಗೆ ಕೊಡುವವರ ಕಷ್ಟ ಗೊತ್ತಾಗುವದಿಲ್ಲ ಹಾಗೇ ಗೊತ್ತಾದರೆ ಅವರು ಕೇಳಲಾರರು, ಇನ್ನು ಕೊಡುವವನಿಗೂ ಕೇಳುವವನ ಕಷ್ಟದ ಅರಿವಿರುವುದಿಲ್ಲ ಹಾಗೆ ಅರಿವಿಗೆ ಬಂದರೆ ಅವನು ಇಲ್ಲಾ ಎಂದು ಹೇಳುವುದೂ ಇಲ್ಲ. ನೀವು ಗಳಿಸಿದ ವಿದ್ಯಾ ಸಂಪತ್ತೋ... ತಪ: ಶ್ಯಕ್ತಿಯೋ ಅದು ಲೋಕೋದ್ಧಾರಕ್ಕೆ ವಿನಿಯೋಗವಾದರೆ ಅದರಿಂದ ಅತ್ಯಂತ ಸಂತೋಷ ಹೊಂದುವವರು ನೀವು. ಈ ದೇಹ ಎಂಬುದು ನಿಮಗೆ ಕೇವಲ ಒಂದು ಮಾಧ್ಯಮ ಅಷ್ಟೇ ಅಲ್ಲವೇ... ನೀವು ಹೀಗೆ ಭಾವಿಸಿದ್ದೀರಿ ಎಂಬ ಕಾರಣದಿಂದಲೇ ಶ್ರೀಮನ್ಮಹಾವಿಷ್ಣು ನಮ್ಮನ್ನು ನಿಮ್ಮ ಬಳಿಗೆ ಕಳುಹಿಕೊಟ್ಟಿದ್ದಾನೆ. ದುಷ್ಟನಾದ ವೃತ್ರನನ್ನು ತರಿದು ಲೋಕ ಲೋಕಗಳಿಗೆ ಕ್ಷೇಮವನ್ನು ಉಂಟುಮಾಡಲು ಯೋಗ, ವ್ರತಾನುಷ್ಠಾನಗಳಿಂದ ಕಠಿಣವಾದ ನಿಮ್ಮ ದೇಹದಿಂದಲೇ ವಿಶಿಷ್ಟವಾದ ಒಂದು ಆಯುಧ ಸಿದ್ಧವಾಗಬೇಕಾಗಿದೆ". ಇಂದ್ರನಾಡಿದ ಮಾತನ್ನು ಕೇಳಿದ ದದೀಚಿ ಮಹರ್ಷಿ ಆಶ್ಚರ್ಯದಿಂದ ... " ಏನೂ ಮಹಾವಿಷ್ಣು ಆಡಿದ ಮಾತೇ ಇದು... ದೇವತೆಗಳೇ ನಿಮ್ಮಿಂದ ಧರ್ಮಸಮ್ಮತವಾದ ಮಾತುಗಳನ್ನೇ ಕೊಳಬೇಕೆಂದು ಬಯಸಿ ನಾನು ಮೊದಲಾಡಿದ ಮಾತುಗಳು . ಅಳಿದು ಹೋಗಬೇಕಾದ ಈ ದೇಹ ದುಃಖದಲ್ಲಿರುವ ನೀವೋ ಅಲ್ಲಾ ನಿಮ್ಮ ಮುಖೇನ ಲೋಕದ ಉದ್ಧಾರಕ್ಕೆ ವಿನಿಯೋಗವಾಗುತ್ತದೆ ಎಂದಾದರೆ ಅದೇ ಭಾಗ್ಯವಲ್ಲವೆ... ಈ ದೇಹ ಪಂಚಭೂತಗಳನ್ನು ಬಳಸಿಕೊಂಡು ಪುಷ್ಠವಾಗಿರುವುದು. ಮುಂದೆ ಇದು ಅಲ್ಲಿಯೇ ಲೀನವಾಗಬೇಕಾದ್ದು ಆದರೆ.... ಅದೂ ವ್ಯರ್ಥವಾಗಿ ಮಣ್ಣಿನಲ್ಲಿ ಮಣ್ಣಾಗಿ ಹೋಗದೇ ನಿಮ್ಮ ಉಪಯೋಗಕ್ಕೆ ಬರುವುದು ಎಂದಾದರೆ ಈಗಲೇ ನಾನು ನಿಮಗಾಗಿ ನನ್ನ ದೇಹವನ್ನು ತೊರೆಯುತ್ತೇನೆ. ಈ ದೇಹವನ್ನು ನಿಮಗೆ ಬೇಕಾದ ಹಾಗೆ ಬಳಸಿಕೊಳ್ಳಬಹುದು". ಹೀಗೆ ಹೇಳಿದ ದದೀಚಿ ಮಹರ್ಷಿಗಳು ತಮ್ಮ ಸಾಂಸಾರಿಕವಾದ ಎಲ್ಲ ಕಟ್ಟುಗಳನ್ನು ಕತ್ತರಿಸಿ, ಇಂದ್ರಿಯ, ಪ್ರಾಣ, ಮನಸ್ಸು, ಬುದ್ಧಿ, ಎಲ್ಲವನ್ನೂ ಸಂಯಮಕ್ಕೆ ತಂದುಕೊಂಡು ತಮ್ಮನ್ನು ಪರಬ್ರಹ್ಮನಲ್ಲಿ ಲೀನಗೊಳಿಸಿದವರಾಗಿ ಯೋಗದಿಂದ ಅವರ ದೇಹವನ್ನು ತೊರೆದು ಬಿಟ್ಟರು. 🙏
ಮುಂದುವರಿಯುವುದು 🙏🙏
Subscribe to:
Comments (Atom)