Sunday, August 10, 2025
ವೃತ್ರಾಸುರ 8
ಯುದ್ಧದಲ್ಲಿ ಇಂದ್ರನ ವಜ್ರಾಯುಧ ಕೈತಪ್ಪಿ ಬಿದ್ದಿದ್ದು ವೃತ್ರನ ಸಮ್ಮುಖದಲ್ಲಿ. ಅದನ್ನು ಎತ್ತಿಕೊಳ್ಳುವ ಧ್ಯೆರ್ಯವೂ ಇಂದ್ರನಿಗೆ ಇರಲಿಲ್ಲ.. ದೇವತೆಗಳ ಸಮೂಹದಲ್ಲಿ ಕೋಲಾಹಲ ಉಂಟಾಯಿತು. ಅಯ್ಯೊ ... ಇಂದ್ರನ ದುರ್ವಿಧಿಯೇ.. ಇನ್ನು ಇವನು ಶತ್ರುಗಳನ್ನು ಗೆಲ್ಲುವುದು ಅಸಾಧ್ಯ. ಸ್ವರ್ಗದ ಆಡಳಿತವನ್ನು ಪಡೆಯಲು ಶ್ರೀ ಹರಿಯೇ ಉಪದೇಶಿಸಿದ ಒಂದು ದಾರಿ ಕೂಡ ಕೈ ತಪ್ಪಿ ಹೋಯಿತು ಎಂದು ಮರುಗಿದರು. ಈ ಸ್ಥಿತಿಗೆ ಸ್ವತಃ ವೃತ್ರನೇ ಮರುಗಿ ತಾನೇ ಮಾತಾಡಲು ತೊಡಗಿದ. "ದೇವೇಂದ್ರ... ತ್ರಿಲೋಕಾಧಿಪತಿಯಾಗಿದ್ದ ನೀನು ಎಲ್ಲದಕ್ಕೂ ನೀನೇ ಕಾರಣನೆಂಬ ಅಹಂಕಾರದಿಂದಲೇ ಇಂದ್ರ ಪದವಿಯನ್ನು ಕಳೆದುಕೊಂಡೆ, ಆದರೆ ನೀನೂ ಕೂಡ ಕೇವಲ ನಿಮಿತ್ತ ಮಾತ್ರ. ನಿನ್ನಂತವರು ಕರ್ತವ್ಯವನ್ನು ಮರೆತು ಪ್ರಮತ್ತರಾಗಿ ವರ್ತಿಸಿದ ಸಮಯದಲ್ಲಿ ವಾಸ್ತವದ ಅರಿವನ್ನು ಮಾಡಿಸಲು ನನ್ನಂತವರ ಸೃಷ್ಠಿ ಭಗವಂತನ ಸಂಕಲ್ಪದಂತೆ ಆಗುತ್ತದೆ. ಹಾಗಿರುವಾಗ ನೀನು ಆ ಭಗವಂತನು ನಿರ್ದೇಶಿಸಿದಂತೆ ಆಡುವ ಸೂತ್ರದ ಗೊಂಬೆಯಷ್ಟೇ ಎನ್ನುವುದನ್ನು ಅರಿತುಕೋ... ಸೋಲು ಗೆಲುವುಗಳನ್ನು - ಸಾವು ಬದುಕನ್ನು ನಿರ್ಧರಿಸುವ ಶಕ್ತಿ ಬೇರೆಯೇ ಇದೆ. ಈ ಕ್ಷಣದಲ್ಲಿ ನಿರಾಯುಧನಾದ ನಿನ್ನನ್ನು ನಾನು ಕೊಲ್ಲಬಲ್ಲೆ ಆದರೆ ... ಈ ಸ್ಥಿತಿಯಲ್ಲಿ ನಾನು ನಿನ್ನನ್ನು ಕೊಂದೆನಾದರೆ ಪಾಪದ ಕೂಪದಲ್ಲಿ ತಳ್ಳಲ್ಪಡುತ್ತೇನೆ. ಹಾಗಾಗಿ ಇದೋ ಇಲ್ಲಿರುವ ನಿನ್ನ ಆಯುಧವನ್ನು ತೆಗೆದುಕೊಂಡು ಯುದ್ಧ ಮಾಡು".
ವೃತ್ರನು ಹೀಗೆಂದು ಅವಕಾಶ ಕೊಟ್ಟ ಕೂಡಲೇ ದೇವೇಂದ್ರನು "ನಿನ್ನ ಧರ್ಮಬುದ್ಧಿಗೆ ತಲೆಬಾಗಿದ್ದೇನೆ..ನೀನು ನನ್ನ ಶತ್ರುವೇ ಆದರೂ ನಿನ್ನನ್ನು ಹೊಗಳುವುದರಲ್ಲಿ ಯಾವ ದೋಷವೂ ಇಲ್ಲ.. " ಎನ್ನುತ್ತಾ ತನ್ನ ಕೈಜಾರಿ ಬಿದ್ದುಹೋಗಿದ್ದ ವಜ್ರಾಯುಧವನ್ನು ಮತ್ತೆ ಕೈಗೆತ್ತಿಕೊಂಡ. ಮತ್ತೆ ಯುದ್ಧಾರಂಭವಾಯಿತು. ಒಂದು ಕೈಯನ್ನು ಕಳೆದುಕೊಂಡರೂ ಕೇವಲ ಒಂದು ಕೈಯಲ್ಲೇ ಪರಿಘಾಯುಧವನ್ನು ಧರಿಸಿ ವೃತ್ರನು ಇಂದ್ರನನ್ನು ಘಾತಿಸಲು ಮುಂದಾದ. ತಕ್ಷಣವೇ ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿ ಅವನ ಇನ್ನೊಂದು ಕೈಯನ್ನೂ ಕತ್ತರಿಸಿ ಹಾಕಿದ. ಎರಡೂ ಕೈಗಳನ್ನು ಕಳೆದುಕೊಂಡು ದೇಹದಿಂದ ರಕ್ತ ಸುರಿಯುತ್ತಿದ್ದ ಕ್ಷಣದಲ್ಲಿ ಹೂವರಳಿ ನಿಂತ ಮುತ್ತುಗದ ಮರದಂತೆ ವೃತ್ರ ಕಾಣಿಸುತಿದ್ದ. ಬಾಹುಗಳನ್ನು ಕಳೆದುಕೊಂಡಮೇಲೂ ವೃತ್ರನು ಯುದ್ಧಭೂಮಿಯಿಂದ ಹಿಂದೆ ಸರಿಯಲಿಲ್ಲ... ಸಂಪೂರ್ಣವಾದ ಬ್ರಹ್ಮಾಂಡವನ್ನೇ ಸೆಳೆದು ಆಟಿಕೆಯಂತೆ ಆಡಿಸಬಲ್ಲ ಭೀಕರವಾದ ದೇಹವನ್ನು ಹೊಂದಿದ್ದ ಆತ ಕ್ಷಣಮಾತ್ರದಲ್ಲಿ ತನ್ನ ಬಾಯಿಯನ್ನು ತೆರೆದ... ಅವನ ಬಾಯಿಯ ಕೆಳದವಡೆ ಭೂಮಿಯ ಮೇಲೆ ಹರಡಿಕೊಂಡಿದ್ದರೆ, ಮೇಲಿನ ದವಡೆ ಆಗಸವನ್ನೂ ಮೀರಿ ತೆರೆದುಕೊಂಡಿತ್ತು. ದೇವತೆಗಳೆಲ್ಲಾ ಹಾ...ಹಾ.. ಎನ್ನುತ್ತಿರುವಂತೆಯೇ ವೃತ್ರನು ಐರಾವತ ಸಹಿತವಾಗಿ ಇಂದ್ರನನ್ನು ನುಂಗಿಬಿಟ್ಟ.
ತಾನೇರಿದ ದಿಗ್ಗಜದ ಸಹಿತವಾಗಿ ತನ್ನನ್ನೇ ವೃತ್ರನು ನುಂಗಿದರೂ ದೇವೇಂದ್ರನಿಗೆ ಏನೂ ಆಗಲಿಲ್ಲ, ಅದಾಗಲೇ ಅವನಿಗೆ ನಾರಾಯಣ ಕವಚದ ಉಪದೇಶವನ್ನು ವಿಶ್ವರೂಪನು ಮಾಡಿದ್ದರಿಂದ ಅದರ ಮಹಿಮೆಯಿಂದ ಅವನು ಸುರಕ್ಷಿತವಾಗಿ ವೃತ್ರನ ಹೊಟ್ಟೆಯನ್ನು ಸೇರಿ.. ತನ್ನ ಕೈಯಲ್ಲಿದ್ದ ವಜ್ರಾಯುಧದಿಂದ ಅವನ ಹೊಟ್ಟೆಯನ್ನು ಬೇಧಿಸಿದ. ಹಾಗೆ ವೃತ್ರನ ಹೊಟ್ಟೆಯನ್ನು ಒಡೆದು ಹೊರಬಂದವನೇ ಕ್ಷಣಮಾತ್ರದಲ್ಲಿ ವೃತ್ರನ ತಲೆಯನ್ನು ಕತ್ತರಿಸಿ ಕೆಡವಿದ. ಆ ಕ್ಷಣದಲ್ಲಿ ಇಂದ್ರನಿಗೆ ಜಯವಾಯಿತೆಂದು ದೇವ ದುಂಧುಭಿ ಮೊಳಗಿತು... ದೇವತೆಗಳು ಹೂಮಳೆಗರೆದರು. ಸ್ವರ್ಗವನ್ನು ಕಳೆದುಕೊಂಡಿದ್ದ ದೇವತೆಗಳೆಲ್ಲಾ ಮರಳಿ ಸ್ವಸ್ಥಾನವನ್ನು ಸೇರಿದರು. ಇಂದ್ರನೂ ಮತ್ತೆ ತನ್ನ ಪದವಿಯನ್ನು ಪಡೆದುಕೊಂಡ. ಆದರೆ.. ಅವನಿಗೆ ಅದು ಸುಖದಾಯಕವಾಗಿರಲಿಲ್ಲ, ಹಿಂದೆ ವಿಶ್ವರೂಪನನ್ನು ವಧಿಸಿ ಬ್ರಹ್ಮಹತ್ಯಾ ಪಾತಕ ಅವನನ್ನು ಪೀಡಿಸಿದಾಗ ಅದನ್ನು ಪಾಲುಮಾಡಿ ಹಂಚಿ ತಾನು ಪರಿಶುದ್ಧನಾಗಿದ್ದ. ಆದರೆ ಈಗ ಅದೇ ರೀತಿಯ ಪಾತಕ ಮತ್ತೆ ಇವನನ್ನು ಸೇರಿಕೊಳ್ಳಲು ಹಿಂಬಾಲಿಸುತ್ತಲಿತ್ತು. ವೃದ್ಧೆಯ ರೂಪದಲ್ಲಿ ರಕ್ತ ಸೋರುತ್ತಿರುವ ಸೀರೆಯನ್ನುಟ್ಟು, ಬಿಳಿಯಾದ ಕೆದರಿದ ತಲೆಗೂದಲುಗಳನ್ನು ಹೊಂದಿ, ಕೆಂಪಾದ ಕಣ್ಣುಗಳಿಂದ, ಕುಷ್ಠರೋಗದಿಂದ ಕೂಡಿದ ದೇಹದಿಂದ ಅದು ಇಂದ್ರನನ್ನು ಹಿಂಬಾಲಿಸುತ್ತಿತ್ತು. ಅದನ್ನು ನೋಡಿ ಹೆದರಿದ ಇಂದ್ರ ಸ್ವರ್ಗದಿಂದ ಪಲಾಯನ ಮಾಡಿದ. ಮತ್ತೂ ಅದು ತನ್ನ ಹಿಂದೆ ಬರುತ್ತಿರುವುದನ್ನು ನೋಡಿ ಈಶಾನ್ಯ ದಿಕ್ಕಿಗೆ ಓಡುತ್ತಾ ಹೋಗಿ ಮಾನಸ ಸರೋವರವನ್ನು ತಲುಪಿದ. ಅಲ್ಲಿ ಒಂದು ಸಾವಿರ ವರ್ಷಗಳ ಕಾಲ ಕಮಲದ ಹೂವಿನ ನಾಳವೊಂದರಲ್ಲಿ ಅವಿತುಕೊಂಡಿದ್ದ.🙏🙏
ಇನ್ನೊಂದು ಕಥೆ ಮುಂದಿನ ಬರಹದಲ್ಲಿ🙏
Subscribe to:
Post Comments (Atom)
No comments:
Post a Comment