Friday, August 8, 2025
ವೃತ್ರಾಸುರ 6
ಲೋಕದ ಹಿತಕ್ಕಾಗಿ ಮಹಾ ತಪಸ್ವಿಗಳಾದ, ಅಥರ್ವ ವೇದವನ್ನು ಸಿದ್ಧಿಸಿಕೊಂಡಿದ್ದ ದದೀಚಿ ಮಹರ್ಷಿಗಳು ತಮ್ಮ ದೇಹವನ್ನು ತ್ಯಾಗ ಮಾಡಿದರು. ಇದರಿಂದ ಹರ್ಷ ಮಾನಸರಾದ ದೇವತೆಗಳು ಮಹರ್ಷಿಗಳ ದೇಹದ ವಜ್ರಸಮಾನವಾದ ಮೂಳೆಗಳಿಂದ ಒಂದು ಆಯಧವನ್ನು ನಿರ್ಮಿಸಲು ಸೂಚಿಸುತ್ತಾರೆ. ದೇವತೆಗಳ ನಿರ್ದೇಶನದಂತೆ ವಿಶ್ವಕರ್ಮನು ಇಂದ್ರನಿಗೆ ವಿಶಿಷ್ಟವಾದ ಆಯುಧವನ್ನ ನಿರ್ಮಿಸಿ ಕೊಡುತ್ತಾನೆ. ದೇವತೆಗಳ ನಿರೀಕ್ಷೆಯಂತೆ ಇಂದ್ರನು ವಜ್ರಾಯುಧವನ್ನು ಹಿಡಿದು ಐರಾವತವನ್ನೇರುತ್ತಾನೆ, ಆ ಕ್ಷಣದಲ್ಲಿಯೇ ವೃತ್ರನಿಂದ ಸೆಳೆಯಲ್ಪಟ್ಟ ದೇವತೆಗಳ ತೇಜಸ್ಸು ಮರುಸ್ಥಾಪನೆಯಾಗುತ್ತದೆ. ತ್ರಿಮೂರ್ತಿಗಳ ತೇಜಸ್ಸನ್ನು ಕೂಡ ಒಳಗೊಂಡಂತೆ ದೇವೇಂದ್ರ ಪ್ರಕಾಶಮಾನನಾಗಿ ಕಂಗೊಳಿಸುತ್ತಾನೆ. ದೇವತೆಗಳು ಹರ್ಷೋದ್ಗಾರ ಮಾಡುತ್ತಾರೆ. ಎಲ್ಲರಲ್ಲಿಯೂ ವೃತ್ರನನ್ನು, ಮತ್ತವನ ಆಸುರೀ ಸೇನೆಯನ್ನು ಎದುರಿಸಬೇಕೆಂಬ ಛಲ-ಬಲಗಳು ಕೂಡಿಕೊಳ್ಳುತ್ತದೆ. ದೇವಸೇನೆಯು ಯುದ್ಧೋತ್ಸಾಹದಿಂದ ಇಂದ್ರನ ನಿರ್ದೇಶನದಂತೆ ಮುಂದೆ ಮಂದೆ ಸಾಗುತ್ತದೆ. ರುದ್ರರು, ಆದಿತ್ಯರು, ವಸುಗಳು, ಸಿದ್ಧರು, ಸಾಧ್ಯರು, ವಿಶ್ವೇದೇವತೆಗಳನ್ನು ಒಡಗೂಡಿದ ಇಂದ್ರನು ಸೈನ್ಯವು ಆಕ್ಷಣದಲ್ಲಿ ಮೃತ್ಯು ದೇವತೆಗೂ ಭೀತಿ ಉಂಟುಮಾಡುವ ಹಾಗೆ ಕಾಣಿಸುತಿತ್ತು. ದೇವತೆಗಳು ಸೈನ್ಯ ಸಮೇತರಾಗಿ ಬರುತ್ತಿರುವ ವರ್ತಮಾನವನ್ನು ತಿಳಿದ ವೃತ್ರನು, ನಮೂಚಿ ಶಂಬರ, ಖುಷಭ,ಹಯಗ್ರೀವ, ಶಂಕುಶಿರ,ಅಯೋಮುಖ, ವಿಪ್ರಚಿತ್ತಿ, ಹೇತಿ, ಪ್ರಹೇತಿ, ಉತ್ಕಲ, ಸುಮಾಲಿ ಮುಂತಾದ ಸಾವಿರಾರು ಅಸುರ ಪ್ರಮುಖರನ್ನು ಒಡಗೂಡಿಕೊಂಡು ರಣೋತ್ಸಾಹದಿಂದ ಮುನ್ನುಗ್ಗಿ ಬಂದನು. ಸುರಾಸುರರಿಗೆ ಭಯಂಕರವಾದ ರಣ ಏರ್ಪಟ್ಟಿತು. ಅಸುರರು ತಮ್ಮಲ್ಲಿದ್ದ ಕ್ರೂರವಾದ, ಹರಿತವಾದ ಅಲಗುಗಳನ್ನು ಹೊಂದಿದ ಆಯುಧಗಳನ್ನು ದೇವತೆಗಳ ಮೇಲೆ ಪ್ರಯೋಗಿಸಿದರು. ಹರಿತವಾದ ಅಲಗುಗಳನ್ನು ಹೊಂದಿದ ಬಾಣಗಳನ್ನು ದೇವಸೇನೆಯನ್ನು ಗುರಿಯಾಗಿಸಿಕೊಂಡು ಪ್ರಯೋಗಿಸಿದರು. ಅಸುರರು ಪ್ರಯೋಗಿಸಿದ ಆಯುಧ ಮತ್ತು ಬಾಣಗಳಿಂದ ಆಗಸವೇ ತುಂಬಿ ಹೋಯಿತು. ಕಪ್ಪಾದ ಕಾರ್ಮೋಡ ಕವಿದಂತೆ ಆಯುಧಗಳಿಂದ ತುಂಬಿ ಹೋದ ಆಗಸದಿಂದ ಕತ್ತಲೆಯೇ ಆವರಿಸಿಹೋಯಿತು. ಆದರೆ ದೇವತೆಗಳು ಎದೆಗುಂದದೇ ಕ್ಷಣಮಾತ್ರದಲ್ಲಿ ತಮ್ಮತ್ತ ಬರುತಿದ್ದ ಅಸುರರ ಆಯುಧಗಳನ್ನು ಕತ್ತರಿಸಿ ಹಾಕಿದರು. ಅವರು ಪ್ರಯೋಗಿಸಿದ ಎಲ್ಲಾ ಆಯುಧಗಳೂ ಗಗನದಲ್ಲಿಯೇ ಕತ್ತರಿಸಲ್ಪಟ್ಟು ಚೂರು ಚೂರಾಗಿ ಬಿದ್ದು ಹೋದವು. ಆವಾಗ ರಾಕ್ಷಸರು ದೊಡ್ಡ ದೊಡ್ಡ ಮರಗಳನ್ನು, ಬೆಟ್ಟಗಳನ್ನು ಕಿತ್ತು ದೇವತೆಗಳನ್ನು ಪ್ರಹರಿಸುವ ಸಲುವಾಗಿ ಎಸೆದರು, ಅವುಗಳನ್ನು ಕೂಡ ದೇವತೆಗಳು ತಮ್ಮ ಆಯುಧಗಳಿಂದ ಕತ್ತರಿಸಿ ಹಾಕಿದರು. ತಾವು ಪ್ರಯೋಗಿಸಿದ ಆಯುಧಗಳು ದೇವತೆಗಳಿಗೆ ಒಂದು ಗಾಯವನ್ನು ಮಾಡಲು ವ್ಯರ್ಥವಾದದ್ದನ್ನು ನೋಡಿದ ಅಸುರರು ತಮ್ಮ ಎಲ್ಲಾ ಆಯುಧಗಳೂ ಬರಿದಾದಾಗ ಯುದ್ಧವನ್ನು ಮುಂದುವರಿಸುವ ಯಾವ ದಾರಿಯೂ ಕಾಣಿಸದೇ ದೇವತೆಗಳ ರಣಕೇಕೆಯನ್ನು ಕೇಳಿ ಭಯಭೀತರಾಗಿ ಯುದ್ಧಭೂಮಿಯಿಂದ ಪಲಾಯನಮಾಡತೊಡಗಿದರು. ಆ ಕ್ಷಣದಲ್ಲಿ ದೇವತೆಗಳು ಅವರ ಎಲ್ಲಾ ಬಲ- ಶೌರ್ಯವನ್ನು ಸೆಳೆದುಕೊಂಡು ನಿರ್ವೀರ್ಯರನ್ನಾಗಿಸಿಬಿಟ್ಟರು. ಈ ಘಟನೆಯಿಂದ ವೃತ್ರಾಸುರ ಕಂಗೆಡಲಿಲ್ಲ ಬದಲಾಗಿ ನಗುತ್ತಾ ತನ್ನವರಿಗೆ ಧೈರ್ಯ ತುಂಬುವ ಮಾತನಾಡಿದ.." ಅಸುರರಾದ ನೀವು ದೇವ ಸೈನ್ಮವನ್ನು ನೋಡಿ ಪ್ರಾಣಭೀತಿಯಿಂದ ಓಡಬೇಕಾಗಿಲ್ಲ... ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಒಂದು ಅಂತ್ಯವೆಂಬುದು ನಿಶ್ಚಯ, ಯಾರೂ ಇಲ್ಲಿ ಮರಣವರ್ಜಿತರಾಗಿ ಇರಲು ಸಾಧ್ಯವೇ ಇಲ್ಲ. ಹಾಗಿದ್ದರೂ ಎರಡು ರೀತಿಯ ಮರಣ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ.. ಮೊದಲನೆಯದು ಯೋಗಿಗಳು ತಮ್ಮ ದೇಹವನ್ನು ತೊರೆಯಲು ತಾವೇ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಅವರು ಇಚ್ಛಾಮರಣಿಗಳಂತೆ ಸ್ವತಂತ್ರರು, ಬ್ರಹ್ಮಚಿಂತನೆಯನ್ನು ಮಾಡುತ್ತಾ ಯಾವಾಗ ಬೇಕಾದರೂ ದೇಹ ತೊರೆಯಬಲ್ಲರು. ಇನ್ನೊಂದು ಮಾರ್ಗವೆಂದರೆ ರಣರಂಗದಲ್ಲಿ ಶತ್ರುಗಳಿಗೆ ಹೆದರದೇ .. ಬೆನ್ನು ತೋರಿಸದೇ ಅವರ ಶಸ್ತ್ರಗಳಿಗೆ ಎದೆಯೊಡ್ಡುವುದು ಇಂತಹ ಸುವರ್ಣಾವಕಾಶ ನಿಮ್ಮ ಮುಂದಿದೆ ಇದರಿಂದಲೂ ನೀವು ಸ್ವರ್ಗವನ್ನು ಪಡೆಯಬಹುದು ಹಾಗಾಗಿ ಧೈರ್ಯದಿಂದ ಎದುರಿಸಿ, ಬದುಕಿದರೂ ಸ್ವರ್ಗ... ಅಳಿದರೂ ಸ್ವರ್ಗ". ಹೀಗೆ ವೀರೋಚಿತವಾದ ಮಾತುಗಳನ್ನು ವೃತ್ರನು ಹೇಳುತ್ತಿದ್ದರೂ ಅದನ್ನು ಕೇಳುವ ಸಹನೆಯೂ ಅವನ ಸಂಗಡಿಗರಿಗೆ ಇರಲಿಲ್ಲ, ಹೇಗಾದರೂ ಜೀವ ಉಳಿಸಿಕೊಳ್ಳಬೇಕೆಂದು ಯುದ್ಧಭೂಮಿಯಿಂದ ಓಡತೊಡಗಿದರು. ಆದರೂ ಅವರನ್ನು ಅಟ್ಟಿಸಿಕೊಂಡು ಬರುತ್ತಿದ್ದ ದೇವತೆಗಳು ಹಿಂದಿನಿಂದಲೇ ಪ್ರಹರಿಸುತ್ತಿದ್ದರು. ಇದನ್ನು ನೋಡಿದ ವೃತ್ರಾಸುರನ ಕೋಪ ಇಮ್ಮಡಿಯಾಯಿತು. ಅಸುರರನ್ನು ಬೆನ್ನಟ್ಟಿ ಬರುತಿದ್ದ ದೇವತೆಗಳನ್ನು ತಾನೇ ಏಕಾಂಗಿಯಾಗಿ ತಡೆದು ನಿಲ್ಲಿಸಿದ.🙏
ಮುಂದುವರಿಯುವುದು🙏🙏
Subscribe to:
Post Comments (Atom)
No comments:
Post a Comment