Wednesday, August 13, 2025
ಚ್ಯವನ 2
ಪುಲೋಮೆ ಶಿಶುವನ್ನು ಎತ್ತಿಕೊಂಡು ಆಶ್ರಮಕ್ಕೆ ಬರುತ್ತಿರುವಾಗ ಸಂಧ್ಯಾ ಕಾರ್ಯಗಳನ್ನು ಮುಗಿಸಿ ಹಿಂತಿರುಗುತ್ತಿದ್ದ ಭೃಗು ನೋಡುತ್ತಾನೆ. ಕಣ್ಣೀರು ಸುರಿಸುತ್ತಿದ್ದ ಪುಲೋಮೆಯಿಂದ ನಡೆದ ಘಟನೆಯನ್ನು ತಿಳಿದು ಶೀಘ್ರಕೋಪಿಯಾದ ಮಹರ್ಷಿ ... " ಈ ಆಶ್ರಮದಲ್ಲಿ ನೀನಿರುವ ವರ್ತಮಾನವಾದರೂ ದುಷ್ಟ ರಾಕ್ಷಸನಿಗೆ ತಿಳಿದ ಬಗೆ ಹೇಗೆ ... ಇದರ ಹಿಂದೆ ಬೇರಾರದೋ ಸಹಕಾರ ಇದ್ದಂತೆ ಭಾಸವಾಗುತ್ತಿದೆ " ಎಂದು ಹೇಳಿದಾಗ ಪುಲೋಮೆ ಅಗ್ನಿಯತ್ತ ಕೈಮಾಡಿ ತೋರಿಸುತ್ತಾಳೆ. ಇದರಿಂದ ಮತ್ತಷ್ಟು ಕ್ರೋಧಗೊಂಡ ಭೃಗು ಅಗ್ನಿಯನ್ನು ನೋಡುತ್ತಾ.." ಉಚಿತ ಅನುಚಿತಗಳ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ಅರಿವಿರಬೇಕಾಗಿದ್ದ ನೀನೇ ಈ ಅನುಚಿತ ಕಾರ್ಯಕ್ಕೆ ಸಹಕಾರ ನೀಡಿದೆ ಎಂದಾದರೆ ಇದೋ.. ಇಂದಿನಿಂದ ನೀನು ಸರ್ವಭಕ್ಷಕನಾಗು " ಎಂದು ಶಪಿಸಿಬಿಟ್ಟ. ಭೃಗು ಮಹರ್ಷಿಯ ಶಾಪವಾಕ್ಯವನ್ನು ಕೇಳಿದ ಅಗ್ನಿಗೂ ಸಿಟ್ಟು ಬಂತು.. " ಅಯ್ಯಾ ಮಹರ್ಷಿ.. ಹವ್ಯವಾಹನನಾದ ನಾನು ಯಾವುದು ಸತ್ಯ ಯಾವುದು ವಾಸ್ತವ ಎಂಬ ಕಲ್ಪನೆಯಿದ್ದೇ ವರ್ತಿಸಿದ್ದೇನೆ. ನಾನು ಯಾವ ಕ್ಷಣದಲ್ಲಿಯೂ ಸತ್ಯವನ್ನು ಮರೆಮಾಚಲಿಲ್ಲ, ಇದರ ಅರಿವಿಲ್ಲದೆ ಅಥವಾ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡದೆ ನೀನು ಶಾಪವನ್ನು ಕೊಟ್ಟೆ... ವರವನ್ನು ಅನುಗ್ರಹಿಸುವ ಶಾಪವನ್ನು ನೀಡಬಹುದಾದ ಸ್ಥಾನದಲ್ಲಿ ನಾನೂ ಇದ್ದೇನೆ. ಬಯಸಿದರೆ ನಾನೂ ನಿನಗೆ ಘೋರವಾದ ಶಾಪವನ್ನೇ ನೀಡಬಲ್ಲೆ ಆದರೆ.. ನೀನೊಬ್ಬ ಬ್ರಾಹ್ಮಣ ಎಂಬುದನ್ನು ನಾನು ಮರೆಯಲಾರೆ. ಯಜ್ಞ - ಯಾಗಗಳನ್ನು ಮಾಡಿ ಆ ಮೂಲಕ ದೇವತೆಗಳಿಗೆ ಹವಿರ್ಭೋಜನವನ್ನು ಮಾಡಿಸುವ ಬ್ರಾಹ್ಮಣರ ಬಗ್ಗೆ ನನಗೆ ಅಪಾರವಾದ ಗೌರವವಿದೆ ಹಾಗಾಗಿ ನಿನ್ನನ್ನ ನಾನು ಶಪಿಸಲಾರೆ". ಹೀಗೆ ಹೇಳಿದ ಅಗ್ನಿದೇವ ಭೃಗು ಮಹರ್ಷಿಯ ಯಜ್ಞಶಾಲೆಯಿಂದ ನಿರ್ಗಮಿಸಿ ಬಿಟ್ಟ. ಕೇವಲ ಭೃಗುವಿನ ಆಲಯದಿಂದ ಮಾತ್ರವಲ್ಲ ... ಲೋಕದ ಎಲ್ಲಾ ಕಡೆಯಲ್ಲಿಯೂ ತನ್ನ ಅಸ್ತಿತ್ವವನ್ನು ಮರೆಯಾಗಿಸಿ ಯಾರಿಗೂ ಕಾಣಿಸದಂತೆ ಮರೆಯಾದ.
ಭೃಗು ಶಾಪದಿಂದ ಅಗ್ನಿದೇವ ಮರೆಯಾದ ಮೇಲೆ ಪ್ರಪಂಚದ ಯಾವ ಮೂಲೆಯಲ್ಲಿಯೂ ಅಗ್ನಿ ಪ್ರಜ್ವಲಿಸಲೇ ಇಲ್ಲ.. ಯಜ್ಞ - ಯಾಗಗಳು ನಡೆಯದೇ ಹೋಯಿತು. ದೇವತೆಗಳಿಗೆ ಹವಿಸ್ಸು ಸಿಗದೇ ಹೋಯಿತು. ಆತಂಕಗೊಂಡ ಋಷಿಮುನಿಗಳು ನೇರವಾಗಿ ಇಂದ್ರ ಸಭೆಗೇ ಧಾವಿಸಿದರು. ಇಂದ್ರಾದಿ ದೇವತೆಗಳ ಸಮ್ಮುಖದಲ್ಲಿ ತಮಗಾದ ತೊಂದರೆಯನ್ನು ಹೇಳಿ .. ಇನ್ನು ಮುಂದೆ ದೇವತೆಗಳಾದ ನಿಮಗೆ ಹವಿಸ್ಸನ್ನು ನೀಡುವುದೂ ತಮ್ಮಿಂದ ಸಾಧ್ಯವಾಗದು ಹಾಗಾಗಿ ಸೂಕ್ತ ಮಾರ್ಗದರ್ಶನ ತಮ್ಮಿಂದಲೇ ಆಗಬೇಕೆಂದು ಕೇಳಿಕೊಂಡರು. ಇಂದ್ರಾದಿ ದೇವತೆಗಳಿಗೂ ಚಿಂತೆ ಭಾಧಿಸಿತು... ಮುಂದೇನು ಎಂದು ನಿರ್ಣಯಿಸಲಾಗದೆ ಋಷಿಗಳನ್ನು ಜೊತೆಗೂಡಿಕೊಂಡು ಬ್ರಹ್ಮದೇವರ ಬಳಿಗೆ ಹೋದರು. ಬ್ರಹ್ಮದೇವನಲ್ಲಿ ಅಗ್ನಿಗೆ ಭೃಗು ನೀಡಿದ ಶಾಪದ ವೃತ್ತಾಂತವನ್ನು ವಿವರಿಸಿ ಅಗ್ನಿಯ ಅನುಪಸ್ಥಿತಿಯಿಂದ ಪ್ರಪಂಚಕ್ಕೆ ಆಗುತ್ತಿರುವ ತೊಂದರೆಯನ್ನು ವಿವರಿಸಿದರು. ದೇವತೆಗಳ ಮಾತನ್ನು ಕೇಳಿದ ಬ್ರಹ್ಮದೇವ ತನ್ನ ಸಂಕಲ್ಪಮಾತ್ರದಿಂದ ಮರೆಯಾಗಿದ್ದ ಅಗ್ನಿಯನ್ನು ಕರೆಸಿಕೊಳ್ಳುತ್ತಾನೆ. ಸಮ್ಮುಖದಲ್ಲಿ ನಿಂತ ಅಗ್ನಿಯನ್ನು ಕುರಿತು ಶಾಂತ ಭಾವದಿಂದ.. ಓ ಅಗ್ನಿಯೇ .. ಪ್ರಪಂಚದಲ್ಲಿ ಬೇರೆ ಬೇರೆ ಕಡೆಯಲ್ಲಿ ಬೇರೆ ಬೇರೆ ಕಾರ್ಯಗಳಲ್ಲಿ ನಿನ್ನ ಉಪಸ್ಥಿತಿ ಇದ್ದೇ ಇರಬೇಕು... ಲೋಕದಲ್ಲಿ ನಡೆಯುವ ಕರ್ಮಗಳಿಗೆ ನೀನು ಆಧಾರನಾಗಿರಬೇಕಾದವ, ನಿನ್ನ ಉಪಸ್ಥಿತಿಯಲ್ಲಿ ಲೋಕದ ಜೀವನ ತೊಡಕುಗಳಿಲ್ಲದೇ ನಡೆಯುವುದು. ಯಜ್ಞಯಾಗಗಳಿಂದ ಹವಿಸ್ಸನ್ನು ಸ್ವೀಕರಿಸುವ ನೀನು ಅದನ್ನು ದೇವತೆಗಳಿಗೆ ತಲುಪಿಸುವವ.. ದೇವತೆಗಳಿಗೊ ಪಿತೃಗಳಿಗೊ ಸೇರಬೇಕಾದ ಹವಿಸ್ಸು ತಲುಪಬೇಕಾದ್ದು ನಿನ್ನಿಂದಲೇ ಅಲ್ಲವೇ... ನಿಜವಾಗಿ ಲೋಕವನ್ನು ಸ್ವಚ್ಛಗೊಳಿಸುವವನೂ ನೀನೇ..ನೀನಿಲ್ಲದೆ ಲೋಕದ ಯಾವ ಕಾರ್ಯವೂ ನೆರವೇರಲಾರದು. ಎಲ್ಲ ಜೀವಿಗಳ ದೇಹದಲ್ಲೂ ನೆಲೆಸಿರುವ ನೀನು ಜೀವಿಗಳ ಚೇತನಕ್ಕೆ ಕಾರಣನಾದವ.. ಅಂತಹ ನೀನು ಸರ್ವಭಕ್ಷಕನಾಗಬೇಕಾದ್ದಿಲ್ಲ, ಹಾಗೆಂದು ಭೃಗು ಕೊಟ್ಟ ಶಾಪ ವ್ಯರ್ಥವಾಗುವುದೂ ಇಲ್ಲ. ಕೇವಲ ನಿನ್ನ ಅಪಾನಜ್ವಾಲೆಗಳು ಆ ಕೆಲಸವನ್ನು ಮಾಡಲಿ. ಅಲ್ಲದೇ ಕೇವಲ ಮಾಂಸಭಕ್ಷಣವನ್ನು ಮಾಡುವ ಪ್ರಾಣಿಗಳ ದೇಹದಲ್ಲಿರುವ ನಿನ್ನ ಸ್ವರೂಪ ಸರ್ವಭಕ್ಷಕವಾಗಿರಲಿ.. ಅಷ್ಟಕ್ಕೂ ಭೃಗು ಮಹರ್ಷಿಯ ದೇಹದಲ್ಲೂ ನಿನ್ನ ಸ್ವರೂಪ ಇದೆ ಎಂದಾದರೆ ಅವನಾಡುವ ಶಾಪವಾಕ್ಯದಲ್ಲಿ ಕೂಡ ನಿನ್ನ ಪ್ರೇರಣೆ ಇದೆ ಎಂದೇ ಭಾವಿಸಬೇಕಾಗುತ್ತದೆ. ಹಾಗಿರುವಾಗ ಅವನಾಡಿದ ಮಾತು ಸುಳ್ಳಾದರೆ ಜೀವಿಗಳಲ್ಲಿರುವ ನಿನ್ನ ಅಸ್ಥಿತ್ವ ಕೂಡ ಸುಳ್ಳು ಎಂದಾಗುವುದಿಲ್ಲವೇ... ಹಾಗಾಗಿ ಬೇಸರಿಸದೇ ನಿನ್ನ ಕಾರ್ಯದಲ್ಲಿ ನೀನು ತೊಡಗಿಕೋ". ಹೀಗೆಂದು ಹೇಳಿದ ಬ್ರಹ್ಮ ವಾಕ್ಕವನ್ನು ಕೇಳಿದ ಅಗ್ನಿ ಸಮಾಧಾನದಿಂದ ತನ್ನ ಕರ್ತವ್ಯವನ್ನು ಮಾಡಲು ಒಪ್ಪಿ, ಬ್ರಹ್ಮದೇವರಿಗೆ ವಂದಿಸಿ ಮತ್ತೆ ಲೋಕಗಳಲ್ಲಿ ಪ್ರಕಟಗೊಳ್ಳುತ್ತಾನೆ. ದೇವತೆಗಳೂ ಋಷಿಮುನಿಗಳೂ ಸಂತೋಷಗೊಂಡು ತಮ್ಮ ತಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತಾರೆ.🙏🙏
ಮುಂದುವರಿಯುತ್ತದೆ..🙏
Subscribe to:
Post Comments (Atom)
No comments:
Post a Comment