Friday, August 22, 2025
ಚ್ಯವನ 5
ಚ್ಯವನ ಮಹರ್ಷಿಯ ಮಾತನ್ನ ಕೇಳಿದ ಶರ್ಯಾತಿ ಮಹಾರಾಜನಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವವಾಯಿತು. ಈಗ ತಾನೇ ಹರೆಯಕ್ಕೆ ಕಾಲಿಡುತ್ತಿರುವ ಅತ್ಯಂತ ರೂಪವತಿಯಾದ, ರಾಜಕುಮಾರಿಯಾದ ತನ್ನ ಮಗಳೆಲ್ಲಿ... ಮುದಿತನದಿಂದ ಕೂಡಿದ ದೇಹ ಕೃಷವಾದ, ಸುಕ್ಕುಗಟ್ಟಿದ, ಕಣ್ಣುಗಳನ್ನೂ ಕಳೆದುಕೊಂಡ ಈ ತಪಸ್ವಿಯೆಲ್ಲಿ... ( ಇಲ್ಲಿ ಒಂದು ವಿಷಯ ಗಮನಿಸಬೇಕಾದ್ದು.. ಮಹಾಭಾರತದ ಪ್ರಕಾರ ಚ್ಯವನ ಕೇಳಿದಾಕ್ಷಣ ಶರ್ಯಾತಿ ಸತೋಷದಿಂದಲೇ ತನ್ನ ಮಗಳನ್ನು ಕೊಡಲು ಒಪ್ಪುತ್ತಾನೆ, ಸುಕನ್ಯೆಯೂ ತಂದೆಯ ನಿರ್ಧಾರದಕ್ಕೆ ಅನುಮೋದಿಸುತ್ತಾಳೆ, ಇನ್ನು ದೇವೀ ಭಾಗವತದಲ್ಲಿ ಶರ್ಯಾತಿ ಸುಲಭದಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ) ಈ ಕಾಡಾಡಿಯಾದ ವೃದ್ಧನ ಕೈಗೆ ತನ್ನ ಮಗಳನ್ನು ಒಪ್ಪಿಸಿಕೊಟ್ಟರೆ ಲೋಕ ದೂರದೇ ಇದ್ದೀತೆ... ಪ್ರತಿಯೊಬ್ಬ ತಂದೆ- ತಾಯಿಯರೂ ತಮ್ಮ ಮಕ್ಕಳ ಸುಖಕ್ಕಾಗಿ ಹಂಬಲಿಸುತ್ತಾರೆ... ಹೀಗೆ ಯೋಚಿಸಿದವನು ಚ್ಯವನನಿಗೆ ಏನೂ ಹೇಳದೆ ಮೌನವಾಗಿ ನಮಸ್ಕರಿಸಿ ಪರಿವಾರದೊಂದಿಗೆ ಬಿಡಾರಕ್ಕೆ ಹಿಂತಿರುಗಿ ಬಂದು ಬಿಡುತ್ತಾನೆ.
ಬಂದವನೇ ಆಪ್ತರಾದ ಮಂತ್ರಿಗಳು ಮತ್ತು ಪರಿವಾರದೊಂದಿಗೆ ಸಭೆ ಸೇರುತ್ತಾನೆ. ಎಲ್ಲರೂ ಮೌನವಾಗಿ ಅರಸ ಹೇಳಬಹುದಾದ ಮಾತುಗಳಿಗಾಗಿ ಕಾತರದಿಂದ ನಿರೀಕ್ಷಿಸುತ್ತಾರೆ. ಅವರನ್ನು ಉದ್ದೇಶಿಸಿ... "ತಮಗೆ ಮುನಿಗಳು ಹೇಳಿದ ಮಾತುಗಳ ಬಗ್ಗೆ ತಿಳಿದೇ ಇದೆ, ಆದರೆ ಒಬ್ಬ ತಂದೆಯಾಗಿ ಅವರ ಅಪೇಕ್ಷೆಯನ್ನು ಈಡೇರಿಸಲು ನಾನು ಅಸಮರ್ಥನೆಂದೇ ಭಾವಿಸುತ್ತೇನೆ. ನನ್ನ ಮಗಳು ಅರಮನೆಯ ಸುಖೋಪಭೋಗಗಳನ್ನು ಅನುಭವಿಸುತ್ತಾ ಬೆಳೆದವಳು, ಅಂತಹಾ ನನ್ನ ಕುಮಾರಿಯನ್ನು ಆ ವೃದ್ಧ ತಪಸ್ವಿಯ ವಶಕ್ಕೆ ಒಪ್ಪಿಸಲು ನನ್ನ ಮನಸ್ಸು ಸರ್ವತಾ ಒಪ್ಪುತ್ತಿಲ್ಲ. ಅವಳು ಅರಿಯದೇ ಮಾಡಿದ ಕಾರ್ಯದಿಂದ ಅಷ್ಟು ದೊಡ್ಡ ಶಿಕ್ಷೆಯನ್ನು ಅನುಭವಿಸಲಾರಳು. ಹಾಗಾಗಿ ಬಂದ ಅವಘಡವನ್ನು ನಾವು ಹೇಗೆ ಎದುರಿಸಬೇಕೆಂದು ಬದಲು ಮಾರ್ಗವನ್ನು ಯೋಚಿಸಬೇಕಾಗಿದೆ". ಶರ್ಯಾತಿಯ ಈ ಮಾತಿಗೆ ಯಾರೂ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಜೊತೆಗೆ ಎಲ್ಲರ ಆರೋಗ್ಯವೂ ಕ್ಷಣ ಕ್ಷಣಕ್ಕೂ ಗಂಭೀರವಾಗುತಿತ್ತು. ಈ ಕ್ಷಣ ಕ್ಷಣದ ವಿದ್ಯಮಾನವನ್ನೂ ಸುಕನ್ಯೆ ಗಮನಿಸುತಿದ್ದಳು. ಎಲ್ಲರೂ ನಿರುತ್ತರರಾದಾಗ ತಂದೆಯ ಸಮ್ಮಖಕ್ಕೆ ಅವಳೇ ಒಂದು.. " ಅಪ್ಪಾ... ಸಂಪೂರ್ಣವಾದ ನಮ್ಮ ಪರಿವಾರ ನಾ ಮಾಡಿದ ಅಪರಾಧದಿಂದ ಸಂಕಷ್ಟಕ್ಕೆ ಸಿಲುಕಿದೆ, ಯಾವ ತಪ್ಪನ್ನೂ ಮಾಡದ ನೀವು ಹೀಗೆ ಚಿಂತಿಸಿ ಕಣ್ಣೀರು ಸುರಿಸಬೇಕಾದ್ದಿಲ್ಲ, ಅಪ್ಪಾ... ನಾನು ಇಲ್ಲಿಯವರೆಗೆ ಅರಮನೆಯಲ್ಲಿ ನಿಮ್ಮ ಆರೈಕೆಯಲ್ಲಿ ಸಂತೋಷವಾಗಿ ಕಾಲ ಕಳೆದಿದ್ದೇನೆ. ಆದರೆ... ಅದೇ ಸುಖ ಶಾಶ್ವತವಾಗಿರಬೇಕೆಂದು ಎಂದೂ ಯೋಚಿಸಿದವಳಲ್ಲ. ಆ ಮಹರ್ಷಿಗಳು ನಮಗೆ ಸುಲಭದ ದಾರಿಯನ್ನೇ ತೋರಿಸಿದ್ದಾರೆ, ನನ್ನಿಂದಲಾಗಿ ತಮ್ಮ ಕಣ್ಣುಗಳನ್ನೇ ಕಳೆದುಕೊಂಡ ಅವರ ಬದುಕಿಗೆ ಯಾರು ಬೆಳಕಾಗಬೇಕು. ಒಮ್ಮೆ ಯೋಚಿಸಿ ನೋಡಿ.. ಜೀವನಪೂರ್ತಿ ಅವರ ಸೇವೆಯನ್ನು ಮಾಡುವ ಅವಕಾಶ ನನಗೆ ಒದಗಿ ಬಂತಾದರೆ ಅದು ನನ್ನ ಭಾಗ್ಯ ಎಂದು ಭಾವಿಸಿಕೊಳುತ್ತೇನೆ. ಅರಮನೆಯ ಆಡಂಬರದ ಬದುಕಿಗಿಂತ ಅರಣ್ಯದ ಆ ಶಾಂತ ಬದುಕೇ ನನಗೂ ಹಿತವಾಗುತ್ತದೆ. ನಿಮಗೆ ಯಾವ ಅನುಮಾನವೂ ಬೇಡ... ಈ ಕೂಡಲೇ ನನ್ನನ್ನು ಅವರಿಗೆ ವಿವಾಹ ಮಾಡಿ ಒಪ್ಪಿಸುವ ಮನಸ್ಸು ಮಾಡಿ. ಈ ಮಾತನ್ನು ನಾನು ಯಾವ ಒತ್ತಡವೂ ಇಲ್ಲದೇ ಸಮಾಧಾನದಿಂದಲೇ ಆಡುತ್ತಿದ್ದೇನೆ".
ಸುಕನ್ಯೆಯಾಡಿದ ಮಾತುಗಳನ್ನು ಕೇಳಿದ ಮಂತ್ರಿಗಳಿಗೂ ಪರಿವಾರಕ್ಕೂ ಸ್ವಲ್ಪ ಸಮಾಧಾನವಾದರೂ... ಅರಸ ಶರ್ಯಾತಿಯ ಮನಸ್ಸು ಅಷ್ಟು ಸುಲಭವಾಗಿ ಒಪ್ಪುವ ಸ್ಥಿತಿಯಲ್ಲಿರಲಿಲ್ಲ. "ಬೇಡ ಮಗಳೇ... ಆ ಜೀವನ ನಿನ್ನಿಂದಾಗದು, ಇದು ಗಂಭೀರವಾದ ವಿಷಯ, ಒಂದು ಕ್ಷಣದಲ್ಲಿ ಯೋಚಿಸಿ ತೀರ್ಮಾನ ಕೈಗೊಳ್ಳುವುದಲ್ಲ... ತಾರುಣ್ಯದಿಂದ ಕೂಡಿದ ದೇಹವು ಸಹಜವಾಗಿಯೇ ಸುಖವನ್ನು ಬಯಸುತ್ತದೆ. ಕೈ ಹಿಡಿದ ಪತಿ ಕಾಲ ಕಾಲಕ್ಕೆ ಅಂತಹ ಸುಖವನ್ನು ನೀಡಲು ಸಮರ್ಥನಾಗಿರಬೇಕು, ಇಲ್ಲದೇ ಹೋದರೆ ಚಂಚಲವಾದ ಮನಸ್ಸು ದಾರಿ ತಪ್ಪಿಸುತ್ತದೆ. ಈ ಹಿಂದೆ ಗೌತಮ ಮಹರ್ಷಿಯ ಪತ್ನಿಯಾದ ಅಹಲ್ಯೆ ಶಾಪಕ್ಕೆ ಒಳಗಾದದ್ದು ನೀ ಕೇಳಿ ಬಲ್ಲೆ ( ಗೌತಮ ಅಹಲ್ಯೆಯರ ದಾಂಪತ್ಯ ಆ ಕಾಲದಲ್ಲೇ ಮುರಿದು ಹೋಗಿತ್ತು ) ಹಾಗಾಗಿ ಬೇಡ ಮಗಳೇ ನಾವು ಬೇರೆ ಏನಾದರೂ ಮಾರ್ಗವನ್ನು ಅರಸೋಣ". ಎಂದು ಹೇಳುತ್ತಾನೆ. ತಂದೆಯ ಮಾತನ್ನು ಕೇಳಿದ ಸುಕನ್ಯೆ .. " ಅಪ್ಪಾ... ನೀವಾಡುವ ಮಾತು ಸಾಂಧರ್ಭಿಕವಾಗಿ ಸರಿಯಾದರೂ ನನ್ನ ವಿಚಾರದಲ್ಲಿ ಹಾಗೇ ಯೋಚಿಸಕೂಡದು, ನಾನು ಇಲ್ಲಿ ಅನುಭವಿಸುತ್ತಿರುವ ಎಲ್ಲ ಸುಖಗಳನ್ನು ಕ್ಷಣಮಾತ್ರದಲ್ಲಿ ತೊರೆಯಲು ಸಿದ್ಧಳಿದ್ದೇನೆ. ಆ ತಪಸ್ವಿ ಯೊಂದಿಗೆ ಜೀವನವನ್ನು ನಡೆಸುವೆ ಎಂಬ ಭರವಸೆಯೂ ನನಗಿದೆ. ನಿಮ್ಮ ಹೆಸರಿಗೆ, ನಾನು ಜನಿಸಿದ ವಂಶಕ್ಕೆ ಕಳಂಕ ತರುವ ಕಾರ್ಯವನ್ನು ಎಂದಿಗೂ ಮಾಡಲಾರೆ, ಹಾಗಾಗಿ ನನ್ನ ಮೇಲೆ ನಂಬಿಕೆಯಿಟ್ಟು ಮುಂದಾಗಬೇಕಾದ ಕಾರ್ಯದ ಬಗ್ಗೆ ಮನಮಾಡಿ". ಮಗಳ ನಿರ್ಧಾರದ ಮಾತನ್ನು ಕೇಳಿದ ಶರ್ಯಾತಿ ಮಹಾರಾಜ ತಾನೂ ದೃಡವಾದ ಮನಸ್ಸಿನಿಂದ... "ಆಯಿತು ನಿನ್ನ ಯೋಚನೆ ಇದೇ ಆದರೆ ಮತ್ತೆ ನಾನೇನನ್ನೂ ಆಡುವ ಸ್ಥಿತಿಯಲ್ಲಿಲ್ಲ, ಹಾಗೇ ಆಗಲಿ... ಎಲ್ಲರೂ ಮಹರ್ಷಿಗಳ ಬಳಿ ಹೋಗೋಣ ಬನ್ನಿ" ಎಂದು ಹೇಳಿ ಮಗಳನ್ನು, ರಾಣೀವಾಸದವರನ್ನು, ಮಂತ್ರಿ ಪರಿವಾರವನ್ನೂ ಕರೆದುಕೊಂಡು ತಪಸ್ವಿಯ ಸಂದರ್ಶನಕ್ಕಾಗಿ ಹೊರಟ🙏
ಮುಂದುವರಿಯುವುದು...🙏
Subscribe to:
Post Comments (Atom)
No comments:
Post a Comment