Wednesday, August 20, 2025
ಚ್ಯವನ 4
ರಾಜಪರಿವಾರ ಕ್ಷಣ ಕ್ಷಣಕ್ಕೂ ಪರಿತಪಿಸುವ ಸ್ಥಿತಿಗೆ ತಲುಪಿತು. ಶರ್ಯಾತಿ ಮಹಾರಾಜನಿಗೆ ಆಗ ಹೊಳೆದದ್ದು... "ಈ ಪ್ರದೇಶದಲ್ಲಿ ಚ್ಯವನ ಎಂಬ ಮಹರ್ಷಿ ಬಹಳ ಕಾಲದಿಂದ ತಪವನ್ನು ಆಚರಿಸುತ್ತಾ ಇದ್ದಾನೆ ಎಂದು ಕೇಳಿ ಬಲ್ಲೆ.. ನಿಮ್ಮಲ್ಲಿ ಯಾರಾದರೂ ಅವನ ತಪಸ್ಸಿಗೆ ಭಂಗ ತರುವ ಯಾವ ಕಾರ್ಯವನ್ನಾದರೂ ಮಾಡಿರುವಿರೇ.. ''? . ಅದು ಕೇವಲ ಪ್ರಶ್ನೆ ಮಾತ್ರವಲ್ಲ.. ವಿಚಾರಣೆಯಾಗಿತ್ತು. ಮೊದಲೇ ಹೊಟ್ಟೆ ಉಬ್ಬರಿಸಿ ಪರದಾಡುತಿದ್ದ ಅವರಿಗೆ ರಾಜನ ವಿಚಾರಣೆಯ ಹಿಂಸೆ ಬೇರೆ.. ಆದರೆ ಯಾರಿಂದಲೂ ಪೂರಕವಾದ ಉತ್ತರ ಬರಲಿಲ್ಲ. ಶರ್ಯಾತಿ ಮಹಾರಾಜನು ಬಳಿಕ ತನ್ನ ಅರಮನೆಯ ಬಂಧುವರ್ಗದವರನ್ನೂ ಉದ್ದೇಶಿಸಿ ಇದೇ ಪ್ರಶ್ನೆಯನ್ನು ಕೇಳಿದನು. ಯಾರಿಂದಲೂ ಸರಿಯಾದ ಉತ್ತರ ಬರಲಿಲ್ಲ.
ತಮ್ಮನ್ನು ಅನುಸರಿಸಿ ಬಂದ ಸೇವಕರು, ಸೈನಿಕರು, ಅರಮನೆಯ ಪರಿವಾರದವರು ಬಂಧು ಬಾಂಧವರು ಎಲ್ಲರೂ ಹಿಂಸೆಯನ್ನು ಅನುಭವಿಸುತ್ತಿರುವುದನ್ನು ನೋಡಿದ ಅರಸುಕುಮಾರಿ ಸುಕನ್ಯೆ ಧ್ಯೆರ್ಯವನ್ನು ತಂದುಕೊಂಡು ತಂದೆಯ ಬಳಿ ಬಂದು ಅರಣ್ಯದಲ್ಲಿ ನಡೆದ ವಿಚಾರವನ್ನು ಹೇಳಿದಳು. "ಹುತ್ತದಲ್ಲಿ ಹೊಳೆಯುತ್ತಿದ್ದ ವಸ್ತು ಯಾವುದೆಂದು ನಾನರಿಯೆ ... ಆದರೆ ನಾನು ಮುಳ್ಳಿನಿಂದ ಚುಚ್ಚಿದ ಕೂಡಲೇ ಏನೋ ಕೂಗಿದ ಅನುಭವವಾಯಿತು. ನಾನು ಚುಚ್ಚಿದ ಸ್ಥಳದಿಂದ ರಕ್ತ ಸುರಿಯುತ್ತಿರುವುದನ್ನೂ ನೋಡಿ ನಾನು ನೋಡಿ ಭಯದಿಂದ ಓಡಿ ಬಂದೆ". ಮಗಳಾಡಿದ ಮಾತನ್ನು ಕೇಳಿ ಅರಸನಿಗೆ ಇದು ಖಂಡಿತವಾಗಿಯೂ ಮಹರ್ಷಿಗೆ ಮಾಡಿದ ಅಪಚಾರ ಎಂದು ನಿರ್ಧರಿಸಿ, ಮಗಳನ್ನು ಮತ್ತು ಕೆಲವು ಸೇವಕರನ್ನು ಜೊತೆಗಿಟ್ಟುಕೊಂಡು ನೇರವಾಗಿ ಅರಣ್ಯದಲ್ಲಿ ಸುಕನ್ಯೆ ಹೇಳಿದ ಹುತ್ತದ ಬಳಿಗೆ ಬಂದ. ಹುತ್ತವನ್ನು ನಿಧಾನವಾಗಿ ಒಡೆಯಲು ಸೇವಕರಿಗೆ ಸೂಚನೆಯನ್ನು ಕೊಡುತ್ತಾನೆ. ಸುತ್ತಲೂ ಆವರಿಸಿದ್ದ ಹುತ್ತವನ್ನು ಅಗೆದು ತೆಗೆದಾಗ ಅಲ್ಲಿ ಕಣ್ಣಿನಿಂದ ರಕ್ತ ಒಸರುತ್ತಿರುವ ಸ್ಥಿತಿಯಲ್ಲಿ ಕುಳಿತ ವೃಧ್ಧನಾದ ಚ್ಯವನ ಮಹರ್ಷಿ ಕಾಣಿಸುತ್ತಾನೆ.
ಮಹರ್ಷಿಯ ಸ್ಥಿತಿಯನ್ನು ನೋಡುತ್ತಿದ್ದಂತೆ ಅರಸನ ಮುಖ ಕಳೆಗುಂದುತ್ತದೆ. ಭಯದಿಂದ ನಡುಗುತ್ತಾ ಮಹರ್ಷಿಗಳಿಗೆ ನಮಸ್ಕಾರ ಮಾಡಿ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ಮತ್ತು ನಡೆದ ವಿಚಾರವನ್ನು ನಿವೇದಿಸಿಕೊಂಡು .." ಸ್ವಾಮೀ ತಾವು ಬ್ರಹ್ಮಜ್ಞಾನಿಗಳು ನನ್ನ ಮಗಳಾದರೋ ಏನನ್ನೂ ಅರಿಯದವಳು.. ತಪಸ್ವಿಗಳಾದ ತಾವು ಕೋಪವನ್ನೂ ಜಯಿಸಿದವರು, ಹಾಗಾಗಿ ನನ್ನ ಪುತ್ರಿಯಿಂದಾದ ಅಪಚಾರವನ್ನು ಮನ್ನಿಸಿ ನಮ್ಮ ಮೇಲೆ ಕೃಪೆ ತೋರಿಸಬೇಕು". ಎಂದು ಹೇಳಿ ಕೈ ಜೋಡಿಸಿ ನಿಲ್ಲುತ್ತಾನೆ. ಅರಸನಾಡಿದ ಮಾತುಗಳನ್ನು ಕೇಳಿದ ಚ್ಯವನ ವಹರ್ಷಿ.. " ಅಯ್ಯಾ ಮಹಾರಾಜಾ.. ನಾನೂ ಯಾವತ್ತೂ ಮಾಡದೇ ಇರುವ ತಪ್ಪಿಗೆ ಈ ಶಿಕ್ಷೆ ಯಾಕೆ... ಹಾಗಿದ್ದರೂ ನಾನು ಯಾರನ್ನೂ ಶಪಿಸಲಿಲ್ಲ, ಆದರೆ ತಪ್ಪನ್ನೇ ಮಾಡದೇ ಇರುವ ನನಗೆ ಹಿಂಸೆಯನ್ನು ಕೊಟ್ಟ ಕಾರಣದಿಂದ ನೀವು ಬಳಲುವ ಸ್ಥಿತಿ ಬಂದಿದೆ ಅಷ್ಟೇ.. ಆದರೂ ಅದರಿಂದಲೂ ನಿಮ್ಮನ್ನು ಮುಕ್ತರನ್ನಾಗಿಸ ಬಲ್ಲೆ .. ಆದರೆ ವೃಧ್ಧನಾದ ನಾನು ನನ್ನ ಕಣ್ಣುಗಳನ್ನೂ ಕಳೆದುಕೊಂಡಮೇಲೆ ಮುಂದೆ ಜೀವನ ಹೇಗೆ.. ನಾನು ತಪಸ್ಸಾಚರಣೆ ಮಾಡುವಾಗ ನನ್ನನ್ನು ನೋಡಿಕೊಳ್ಳುವರು ಯಾರು.:'' ಮುನಿಯ ಮಾತು ಮುಗಿಯುವ ಮೊದಲೆ ಅರಸನಾಡಿದ.. " ಸ್ವಾಮೀ ನಿಮ್ಮ ಸೇವೆಗೆ ಬೇಕಾಗಿ ನನ್ನ ಸೇವಕರನ್ನು ನಿಯೋಜಿಸುತ್ತೇನೆ.. ಕಾಲ ಕಾಲಕ್ಕೆ ನಿಮಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಸುತ್ತೇನೆ". ಶರ್ಯಾತಿಯ ಮಾತನ್ನು ಕೇಳಿದ ಚ್ಯವನ ಮಹರ್ಷಿ... "ಅರಸಾ ನಿನ್ನಿಂದ ನಿಯೋಜಿತ ಸೇವಕರು ನನ್ನ ಸೇವೆಯಲ್ಲಿದ್ದರೆ ಏನು ಪ್ರಯೋಜನ, ಹೇಳಿದ ಕೆಲಸವನ್ನಷ್ಟೇ ಮಾಡುವವರಲ್ಲ ನನಗೆ ಈಗ ಬೇಕಾದವರು, ಕಳೆದು ಹೋದ ನನ್ನ ಕಣ್ಣುಗಳೇ ಆಗಿ ನನ್ನನ್ನು ನೋಡಿಕೊಳ್ಳುವವರು ಬೇಕು. ಹೇಳದೆಯೂ ಕಾಲಕಾಲಕ್ಕೆ ಏನಾಗಬೇಕೆಂದು ಅರಿತು ವರ್ತಿಸುವವರು ಬೇಕು. ಹಾಗಾಗಿ ನನ್ನ ಈ ಸ್ಥಿತಿಗೆ ಕಾರಣಳಾದ ನಿನ್ನ ಪುತ್ರಿಯನ್ನೇ ನನ್ನ ಸೇವೆಗಾಗಿ ನನಗೆ ಮದುವೆ ಮಾಡಿಕೊಟ್ಟರೆ ಆದೀತು, ಅವಳ ಸೇವೆಯಿಂದ ನಾನು ಸಮಾಧಾನ ಹೊಂದಬಲ್ಲೆ.. ಜೊತೆಗೆ ನಿಮಗೆ ಒದಗಿದ ಸಂಕಷ್ಟವನ್ನೂ ಪರಿಹರಿಸಬಲ್ಲೆ". 🙏🙏
ಮುಂದುವರಿಯುವುದು🙏
Subscribe to:
Post Comments (Atom)
No comments:
Post a Comment