Tuesday, July 1, 2025

ಗಾಲವ 6ನೇ ಭಾಗ

ಹರ್ಯಶ್ವನೊಂದಿಗೆ ಅತ್ಯಂತ ಸಂತೋಷದಿಂದ ಮಹಾರಾಣಿಯಾಗಿ ಬದುಕಿದ ಮಾಧವಿ ಹುಟ್ಟಿದ ಮಗು ವಸುಮನಸನನ್ನು ಅಲ್ಲಿಯೇ ಬಿಟ್ಟು ಗಾಲವನನ್ನು ಹಿಂಬಾಲಿಸುತ್ತಾಳೆ. ಮಾಧವಿಯೊಂದಿಗೆ ಅಯೋಧ್ಯೆಯಿಂದ ಹೊರಟ ಗಾಲವ ಮುಂದೆಲ್ಲಿಗೆ ಹೋಗುವುದು ಎಂದು ಯೋಚಿಸಿದಾಗ ಕಾಶಿಯನ್ನು ಆಳುತಿದ್ದ ದಿವೋದಾಸನ ನೆನಪಾಗುತ್ತದೆ. ಆಗ ಮಾಧವಿಯನ್ನು ಕುರಿತು" ಭದ್ರೆ ಅಯೋಧ್ಯೆಯಲ್ಲಿ ನೀನು ಮಹಾರಾಣಿಯಾಗಿ ಸುಖದಿಂದ ಇದ್ದವಳು ಅವೆಲ್ಲವನ್ನು ತೊರೆದು ಬರಬೇಕಾಯಿತು ಎಂದು ದುಃಖಿಸಬೇಡ ಈಗ ನಾವು ಪುಣ್ಯ ಕ್ಷೇತ್ರವಾದ ಕಾಶಿಗೆ ಹೋಗೋಣ ಅಲ್ಲಿ ಭೀಮಸೇನನ ಪುತ್ರನಾದ (ಈತ ಪಾಂಡವರಲ್ಲಿ ಒಬ್ಬನಾದ ಭೀಮಸೇನ ಅಲ್ಲಾ.. ಈ ಕಥೆ ನಡೆದದ್ದು ಕೃತಯುಗದಲ್ಲಿ)ದಿವೋದಾಸ ಅರಸನಾಗಿ ಆಳ್ವಿಕೆಯನ್ನು ನಡೆಸುತ್ತಿದ್ದಾನೆ " . ಗಾಲವನ ಮಾತಿಗೆ ಪ್ರತಿಯಾಡದೇ ಮಾಧವಿ ಸಹಮತ ಸೂಚಿಸಿದಳು. ಮುಂದೆ ನೇರವಾಗಿ ಕಾಶಿಯ ಕಡೆ ಇಬ್ಬರೂ ಪ್ರಯಾಣಿಸುತ್ತಾರೆ. ಕಾಶಿಗೆ ಬಂದಾಗ ಅರಸನಾದ ದಿವೋದಾಸ ಸ್ವಾಗತಿಸಿ ಸತ್ಕರಿಸುತ್ತಾನೆ. ದಿವೋದಾಸನಿಗೆ ಗಾಲವ - ಮಾಧವಿ - ಹರ್ಯಶ್ವನ ಕಥೆ ಅದಾಗಲೇ ತಿಳಿದಿರುತ್ತದೆ! ಅವನೂ ತನ್ನಬಳಿ ಗಾಲವನಿಗೆ ಬೇಕಾದ ಲಕ್ಷಣಗಳುಳ್ಳ ಎರಡುನೂರು ಕುದುರೆಗಳು ಮಾತ್ರ ತನ್ನಲ್ಲಿರುವವೆಂದೂ ಅದಕ್ಕೆ ಪ್ರತಿಯಾಗಿ ಮಾಧವಿಯಿಂದ ತಾನೊಂದು ಸಂತಾನ ಪಡೆಯುವೆನೆಂದೂ ಹೇಳುತ್ತಾನೆ. ಅಯೋದ್ಯೆಯಲ್ಲಿ ನಡೆದ ಘಟನೆಯೇ ಇಲ್ಲಿ ಪುನರಾವರ್ತನೆಯಾಗುತ್ತದೆ. ಆದರೆ ಮಹಾಭಾರತ ರಚಿಸಿದ ವೇದವ್ಯಾಸರು ಹರ್ಯಶ್ವ-ಮಾಧವಿ.. ಮುಂದೆ ಉಶೀನರ-ಮಾಧವಿ.... ನಂತರದಲ್ಲಿ ವಿಶ್ವಾಮಿತ್ರ - ಮಾಧವಿ ಇವರೆಲ್ಲರ ದಾಂಪತ್ಯಕ್ಕಿಂತ ಹೆಚ್ಚಾಗಿ ದಿವೋದಾಸ - ಮಾಧವಿಯರು ಕಳೆದ ಕಾಲವನ್ನು ವರ್ಣಿಸಿದ್ದಾರೆ ಪ್ರಪಂಚದಲ್ಲಿ ಅಲ್ಲಿಯವರೆಗೆ ಆದರ್ಶ ದಾಂಪತ್ಯ ಎಂದು ಯಾರಬಗ್ಗೆ ಲೋಕ ಕಂಡುಕೊಂಡಿತ್ತೋ .. ಅಗ್ನಿದೇವ - ಸ್ವಾಹಾದೇವಿ, ಇಂದ್ರ-ಶಚೀ', ವಿಷ್ಣು - ಲಕ್ಷ್ಮೀ, ಈಶ್ವರ - ಪಾರ್ವತಿ, ಬ್ರಹ್ಮ - ಸರಸ್ವತೀ, ಬೃಹಸ್ಪತಿ-ತಾರೆ, ಕಶ್ಯಪ - ಅದಿತಿ, ಹೀಗೆ ಹಲವು ದಾಂಪತ್ಯವನ್ನು ಹೆಸರಿಸಿ ಅವರಿಗೆ ಸರಿಸಮನಾದ ದಾಂಪತ್ಯ ಜೀವನವನ್ನು ದಿವೋದಾಸ - ಮಾಧವಿಯರು ನೆಡೆಸಿದರು ಎಂದು ಹೇಳುತ್ತಾರೆ. ಅವರ ಆ ಪ್ರೇಮಮಯ ದಾಂಪತ್ಯದಿಂದ ಒಂದು ಗಂಡು ಮಗು ಜನಿಸುತ್ತದೆ. ಹುಟ್ಟಿದ ಮಗುವಿಗೆ "ಪ್ರತರ್ದನ " ಎಂದು ಹೆಸರನ್ನಿಡುತ್ತಾರೆ. ಅಲ್ಲಿಗಾಗಲೇ ಗಾಲವ ಬಂದು ಕಾಲ...ನಿಭಂದನೆಯನ್ನು ನೆನಪಿಸುತ್ತಾನೆ. ದಿವೋದಾಸನೂ ಕೊಟ್ಟ ಮಾತಿನಂತೆ ಮಾಧವಿಯನ್ನು ಗಾಲವನೊಡನೆ ಕಳುಹಿಸಿಕೊಡುತ್ತಾನೆ... ಈ ಸಂಧರ್ಭದಲ್ಲಿ ಮತ್ತು ಅಯೋಧ್ಯೆಯಲ್ಲಿಯೂ ಗಾಲವ ಅಶ್ವಗಳನ್ನು ಪಡೆದುಕೊಳ್ಳುವುದಿಲ್ಲ... ಯಾಕೆಂದರೆ ಅವನಿಗೆ ಎಂಟುನೂರು ಸಂಗ್ರಹವಾದಮೇಲೆ ಒಮ್ಮೆಯೇ ಎಲ್ಲವನ್ನೂ ಕೂಡಿಸಿಕೊಂಡು ಗುರುಗಳಿಗೆ ಸಲ್ಲಿಸುವುದೇ ಸುಲಭ ಹಾಗಾಗಿ ಕುದುರೆಗಳನ್ನು ಅಲ್ಲಿಯೇ ಬಿಟ್ಟು ಮಾಧವಿಯೊಡನೆ ಮುಂದೆ ಸಾಗುತ್ತಾನೆ. ಮಾಧವಿಯೂ ಪುನಃ ಕನ್ಯಾವಸ್ಥೆಯನ್ನು ಹೊಂದಿ ಗಾಲವನನ್ನು ಹಿಂಬಾಲಿಸುತ್ತಾಳೆ. ಸಾಗುತ್ತಾ.. ಮುಂದೆ ಅವರು ಭೋಜ ದೇಶವನ್ನು ಸೇರುತ್ತಾರೆ. ಅಲ್ಲಿ ಉಶೀನರನೆಂಬ ಅರಸ ಆಳ್ವಿಕೆಯನ್ನು ನಡೆಸುತ್ತಿದ್ದ. ರಾಜನ ಸಂದರ್ಶನ ಮಾಡಿದ ಗಾಲವ, ಮಾಧವಿಯ ಕನ್ಯಾಶುಲ್ಕವಾಗಿ ತನಗೆ ಅವಷ್ಯವಿರುವ ನಾಲ್ಕುನೂರು ಕುದುರೆಗಳನ್ನು ಕೇಳುತ್ತಾನೆ.ಆ ಸಂದರ್ಭದಲ್ಲಿ ಅರಸ ಉಶೀನರ ಆಡುವ ಮಾತು ಯಾವಕಾಲಕ್ಕೂ ಅನ್ವಯವಾಗಬೇಕಾದ್ದು "ಸ್ವಾಮೀ ನನ್ನ ಬಳಿಯೂ ಕೇವಲ ಎರಡುನೂರು ಅಶ್ವಗಳು ಮಾತ್ರ ಇದೆ... ಅವುಗಳನ್ನು ಶುಲ್ಕವಾಗಿ ನೀಡಿ ಈ ಕನ್ಯಾರತ್ನದಿಂದ ಕುಲದೀಪಕನಾದ ಒಂದು ಸಂತಾನ ಪಡೆಯುತ್ತೇನೆ... ಇವಳನ್ನು ನೋಡಿದಾಗ ದಾಂಪತ್ಯ ಜೀವನದಲ್ಲಿ ಇವಳಿಂದ ಹಲವು ಮಕ್ಕಳನ್ನು ಹೊಂದಬೇಕು ಎನಿಸುತ್ತದೆ.. ಹಾಗೆ ಅಶ್ವದ ಬದಲು ಕನ್ಯಾಶುಲ್ಕವಾಗಿ ಕೊಡಲು ನನ್ನ ಬಳಿ ಹೇರಳವಾದ ಸಂಪತ್ತೂ ಇದೆ. ಆದರೆ... ಆ ಸಂಪತ್ತು ನನ್ನ ಭೋಗಲಾಲಸೆಗಾಗಿ ವಿನಿಯೋಗಿಸತಕ್ಕದ್ದಲ್ಲ ಅದು ಪ್ರಜಾಹಿತಕ್ಕಾಗಿ ವಿನಿಯೋಗಿಸಬೇಕಿದ್ದು.. ಆದ್ದರಿಂದ ನನ್ನಲ್ಲಿರುವ ಎರಡುನೂರು ಕುದುರೆಗಳ ಬದಲಾಗಿ ಒಂದು ಸಂತಾನವನ್ನು ಮಾತ್ರ ಪಡೆಯುತ್ತೇನೆ" ಹೀಗೆ ಹೇಳಿ ಮಾಧವಿಯೊಂದಿಗೆ ಸಂತೋಷದಿಂದ ಕಾಲ ಕಳೆದು ಒಂದು ಪುತ್ರ ಸಂತಾನವನ್ನು ಪಡೆಯುತ್ತಾನೆ. ಹುಟ್ಟಿದ ಮಗುವಿಗೆ "ಶಿಬಿ" ಎಂದು ನಾಮಕರಣವಾಗುತ್ತದೆ..🙏 (ಉಶೀನರ ಮತ್ತು ಶಿಬಿಯ ಬಗ್ಗೆಯೇ ಮುಂದೊಂದು ಬಾರಿ ಬರೆಯಬೇಕು ಆದ್ದರಿಂದ ಇಲ್ಲಿ ಸಂಕ್ಷಿಪ್ತವಾಗಿ ಬರೆದಿದ್ದೇನೆ) ಗಾಲವ ಗುರುದಕ್ಷಿಣೆಯ ಕೊನೆಯ ಕಂತು ಮುಂದಿನ ಭಾಗ 🙏🙏

No comments:

Post a Comment