Thursday, May 29, 2025
ಸರ್ಪ ಸತ್ರ ಮುಂದಿನ ಭಾಗ...
ಜನಮೇಜಯನ ಸರ್ಪ ಸತ್ರ.. ಮುಂದುವರಿದು...
ವ್ಯವಸ್ಥಿತವಾದ ಯಜ್ಞಶಾಲೆ ನಿರ್ಮಾಣವಾಯಿತು.
ಯಜ್ಞ ನಡೆಸಲು ಬೇಕಾದ ಋತ್ವಿಜರೂ ಸೇರಿದರು.. ಯಜ್ಞಕುಂಡದ ಪೂರ್ವಭಾಗದಲ್ಲಿ ಕುಳಿತು ಖುಗ್ವೇದ ಮಂತ್ರವನ್ನು ಪಠಿಸುವನನು ಹೋತೃ.. ಅದನ್ನು ನಿರ್ವಹಿಸಲು ಚ್ಯವನವಂಶೀಯನಾದ ಚಂಡಭಾರ್ಗವ ಸಿದ್ಧನಾದನು. ದಕ್ಷಿಣ ದಿಕ್ಕಿನಲ್ಲಿ ಕುಳಿತು ಯಜುರ್ವೇದ ಮಂತ್ರ ಪಠಣಮಾಡುವವ ಅಧ್ವರ್ಯು..ಅದಕ್ಕೆ ಪಿಂಗಳರು ಸಿದ್ದರಾದರು.. ಇನ್ನು ಹೋಮಕುಂಡದ ಪಶ್ಚಿಮ ದಿಕ್ಕಿನಲ್ಲಿ ಉಪಸ್ಥಿತರಿದ್ದು ಸಾಮವೇದದ ಮುಖೇನ ಯಜ್ಞವನ್ನು ನಡೆಸುವವರು ಉದ್ಘಾತೃ.. ಅದಕ್ಕೆ ಜೈಮಿನಿಗಳು ಸಿದ್ಧರಾದರು. ಯಜ್ಞ ಕುಂಡದ ಉತ್ತರ ಭಾಗದಲ್ಲಿ ಇದ್ದು ಅಥರ್ವಣ ವೇದವನ್ನು ಪಠಿಸುವವರು ಬ್ರಹ್ಮ.. ಅದಕ್ಕೆ ಶಾಙ್ಗ೯ರೆಂಬ ಬ್ರಾಹಣರು ಸಿದ್ದರಾದರು. ಇನ್ನು ಶಿಷ್ಯರನ್ನೊಡಗೂಡಿದ ವ್ಯಾಸ, ಉದ್ಧಾಲಕ, ಶ್ವೇತಕೇತು ಮುಂತಾದವರು ಬಂದು ಸೇರಿದರು.
ಯಾಗಾರಂಭವಾಯಿತು... ಋತ್ವಿಜರು ಮಂತ್ರಗಳನ್ನು ಉಚ್ಛರಿಸುತ್ತಾ ಸ್ವಾಹಾಕಾರವನ್ನು ಹೇಳಿದಾಕ್ಷಣವೇ ಬೆಂಕಿಯನ್ನು ನೋಡಿ ಆಕರ್ಷಿತವಾಗಿ ಪತಂಗಗಳು ಬಂದು ಬೀಳುವಂತೆ ಸರ್ಪಗಳು ಬಂದು ಯಜ್ಞಕುಂಡದಲ್ಲಿದ್ದ ಅಗ್ನಿಯಲ್ಲಿ ಬಿದ್ದು ಆಹುತಿಯಾಗತೊಡಗಿದವು. ಆಹುತಿಯಾಗುವಾಗ ಆ ಸರ್ಪಗಳ ದೇಹದಿಂದ ಸಿಡಿದ ರಕ್ತ,ಮಾಂಸ, ಮಜ್ಜೆಗಳು ಕೋಡಿಯಾಗಿ ಹರಿಯತೊಡಗಿತು. ಈ ಸಂಧರ್ಭದಲ್ಲಿಯೇ ಯಜ್ಞ ವೇದಿಕೆಯಲ್ಲಿ ಒಂದು ವಿಶೇಷ ಘಟನೆ ನಡೆಯಿತು.. ಯಜ್ಞ ವೇದಿಕೆಯ ಬಳಿಗೆ ಒಂದು ನಾಯಿ ಬಂದು ಅಡ್ಡಾಡತೊಡಗಿತು. ಇದನ್ನು ನೋಡಿದ ಜನಮೇಜಯನ ಸಹೋದರರು ಅದನ್ನು ಹೊಡೆದು ಓಡಿಸಿದರು. ವಿಶೇಷವೆಂದರೆ ಅದು ದೇವಲೋಕದ " ಸರಮೆ " ಎಂಬ ನಾಯಿಯ ಮರಿಯಾಗಿತ್ತು ಪೆಟ್ಟು ತಿಂದ ಆ ನಾಯಿಯ ಮರಿ ನೇರವಾಗಿ ತಾಯಿಯ ಬಳಿ ಹೋಗಿ ದೂರಿಕೊಂಡಿತು. "ಅಮ್ಮಾ ನಾನು ಕೇವಲ ಕುತೂಹಲದಿಂದ ನೋಡಲು ಹೋದೆ..ಅವರು ಸಿದ್ಧಮಾಡಿದ ಹವಿಸ್ಸನ್ನು ನೋಡಿ ತಿನ್ನಲಿಲ್ಲ, ಯಾವ ವಸ್ತುವನ್ನೂ ಮೂಸಿ ಅಪವಿತ್ರಗೊಳಿಸಲೂ ಇಲ್ಲ..ಆದರೂ ನಿರಪರಾಧಿಯಾದ ನನ್ನನ್ನು ದಂಡಿಸಿದರು '' ಮಗನ ಮಾತನ್ನು ಕೇಳಿ ಸರಮೆಗೆ ಕನಿಕರವುಂಟಾಯಿತು. ನೇರವಾಗಿ ತಮ್ಮಂದಿರೊಂದಿಗೆ ಯಜ್ಞಮಾಡುತ್ತಿದ್ದ ಜನಮೇಜಯನಲ್ಲಿಗೆ ಬಂದಳು. ಯಾವುದೇ ಅಪರಾಧವನ್ನು ಮಾಡದಿರುವ ತನ್ನ ಮಗನನ್ನು ದಂಡಿಸಿದ ಕಾರಣವನ್ನು ಕೇಳಿದಳು. ಆದರೆ ಯಾರೊಬ್ಬರೂ ಸರಮೆಯ ಪ್ನಶ್ನೆಗೆ ಸೂಕ್ತ ಉತ್ತರ ಕೊಡಲಿಲ್ಲ. ಅವರು ಹಾಗೆ ತನ್ನನ್ನು ಉಪೇಕ್ಷಿಸಿದ್ದನ್ನು ಕಂಡು ಸರಮೆಗೆ ಕೋಪ ಬಂತು. ನಿರಪರಾಧಿಯಾದ ನನ್ನ ಮಗುವನ್ನು ದಂಡಿಸಿದ್ದಲ್ಲದೇ ನನ್ನನ್ನೂ ಉಪೇಕ್ಷೆ ಮಾಡುತ್ತಿರುವ ನೀವು ಸಂಕಲ್ಪಿಸಿರುವ ಈ ಯಾಗದ ಮದ್ಯದಲ್ಲಿಯೇ ಆತಂಕವುಂಟಾಗಲಿ ಎಂದು ಶಪಿಸಿ ಮಗನನ್ನು ಕರೆದುಕೊಂಡು ಹೋಯಿತು.( ಈ ಘಟನೆ ನಡೆದದ್ದು ಸರ್ಪಯಾಗದ ಪೂರ್ವದಲ್ಲಿ ಜನಮೇಜಯ ಮಾಡಿದ ಇನ್ನೊಂದು ಯಜ್ಞದಲ್ಲಿ ಎಂದೂ ಕೆಲವು ಕಡೆ ಇದೆ.)
ಇತ್ತ ಯಜ್ಞ ಮುಂದುವರಿಯುತ್ತಲೇ ಇತ್ತು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸರ್ಪಗಳು ಅಗ್ನಿಯಲ್ಲಿ ಆಹುತಿಯಾಗುತ್ತಲೇ ಇದ್ದವು .. ಯಜ್ಞ ಕುಂಡಕ್ಕೆ ಬಂದು ಬೀಳುವಾಗ ಅವುಗಳ ಫೂತ್ಕಾರ.. ಚೀತ್ಕಾರ.. ಸುಡುತ್ತಿರುವ ಅವುಗಳ ದೇಹದಿಂದ ಹೊರಡುವ ಕಮಟುವಾಸನೆ ಇಡೀ ಭೂಮಂಡಲವನ್ನೇ ಆವರಿಸಿ ಕಲ್ಪಾಂತ್ಯದ ಭೀಕರತೆಯನ್ನು ಸೃಷ್ಟಿ ಮಾಡಿತ್ತು. ಬಹುಪಾಲು ಸರ್ಪಗಳು ಹೋಮಾಗ್ನಿಯಲ್ಲಿ ಬಿದ್ದು ಆಹುತಿಯಾಗುತ್ತಿದ್ದವು. ಭಯಗೊಂಡ ತಕ್ಷಕ ನೇರವಾಗಿ ದೇವಲೋಕಕ್ಕೆ ಓಡಿದ ಇಂದ್ರನಲ್ಲಿ ತನ್ನ ಭಯವನ್ನು ಹೇಳಿಕೊಂಡ, ಆಗ ಇಂದ್ರ ಸಮಾಧಾನದ ಮಾತನ್ನು ಹೇಳಿದ "ನೀನು ಹೆದರಬೇಕಾದ್ದಿಲ್ಲ ಆ ಕಾಲದಲ್ಲಿಯೇ ಬ್ರಹ್ಮ ದೇವರು ಅಭಯ ವಾಕ್ಯ ಹೇಳಿದ್ದಾರೆ ನಿಮ್ಮಲ್ಲಿಯೇ ಇರುವ ದುಷ್ಟ ಸರ್ಪಗಳ ನಾಶವಾಗುತ್ತದೆ. ಅಲ್ಲಿಯವರೆಗೆ ನೀನು ನನ್ನ ಅರಮನೆಯಲ್ಲಿ ನನ್ನೊಂದಿಗೇ ಇರು" ಎಂದು ಹೇಳಿದ. ಇಂದ್ರನ ಮಾತನ್ನು ಕೇಳಿ ತಕ್ಷಕನೂ ಸಮಾಧಾನದಿಂದ ಇಂದ್ರನೊಂದಿಗೇ ಇರತೊಡಗಿದ. ಇತ್ತ ನಾಗಲೋಕದಲ್ಲಿದ್ದ ವಾಸುಕಿಗೆ ಆತಂಕ ಹೆಚ್ಚಾಯಿತು. ಹೀಗೇ ಮುಂದುವರಿದರೆ ತಾನೂ ಋತ್ವಿಜರ ಮಂತ್ರಕ್ಕೆ ಅಧೀನನಾಗಿ ಅಗ್ನಿಯಲ್ಲಿ ಬೀಳಬೇಕಾದೀತು ಎಂದು ಯೋಚಿಸಿ... ಇಂತಹ ಸಂದರ್ಭ ಒದಗಿ ಬಾರದಿರಲಿ ಎಂದೇ ಅಲ್ಲವೇ ತಮ್ಮ ಸಹೋದರಿಯಾದ ಜರತ್ಕಾರು ಆಸ್ತೀಕನನ್ನು ಪಡೆದಿದ್ದು ಎನ್ನುವುದು ನೆನಪಿಗೆ ಬಂತು. ಕೂಡಲೇ ಸಹೋದರಿಯನ್ನು ಕರೆದು ನಡೆಯುತ್ತಿರುವ ಘಟನೆಯನ್ನು ವಿವರಿಸಿದ, ನಿನ್ನ ಪುತ್ರನಾದ ಆಸ್ತೀಕನನ್ನು ಕರೆದು ನಮ್ಮ ಸಂತತಿಯನ್ನು ಉಳಿಸಿಕೊಡಲು ಹೇಳು ಎಂದು ಕೇಳಿಕೊಂಡ.
ಅಣ್ಣನಾದ ವಾಸುಕಿಯ ಮಾತಿನಂತೆಯೇ ಜರತ್ಕಾರು ಪುತ್ರ ಆಸ್ತೀಕನನ್ನು ಬರಮಾಡಿಕೊಂಡು ಕದ್ರೂವಿನ ಶಾಪದಿಂದ ತೊಡಗಿ ನಡೆದ ಎಲ್ಲಾ ಘಟನೆಗಳನ್ನೂ ಹೇಳುತ್ತಾಳೆ. ಮತ್ತು ತಾನು ಪುತ್ರನನ್ನು ಪಡೆದ ಉದ್ದೇಶವೇ ಸರ್ಪಕುಲದ ರಕ್ಷಣೆಗೆ ಎಂಬುದನ್ನೂ ತಿಳಿಸಿ ಕೊಡುತ್ತಾಳೆ. ತಾಯಿಯ ಮಾತನ್ನು ಕೇಳಿದ ಆಸ್ತೀಕ ತನ್ನ ಸೋದರ ಮಾವಂದಿರನ್ನೂ ಅವರ ಕುಲವನ್ನೂ ಉಳಿಸಲು ಬೇಕಾಗಿ ಜನಮೇಜಯನ ಸರ್ಪಯಾಗವನ್ನು ನಿಲ್ಲಿಸುವುದಾಗಿ ತಾಯಿಯಲ್ಲಿ ಹೇಳಿ ಅವಳಿಂದ ಅಪ್ಪಣೆ ಪಡೆದು ವಾಸುಕಿಯ ಬಳಿಗೆ ಬರುತ್ತಾನೆ. ದುಃಖ ತಪ್ತನಾದ ಸೋದರ ಮಾವನನ್ನು ಕಂಡು ಧೈರ್ಯದ ಮಾತುಗಳನ್ನಾಡುತ್ತಾನೆ. ಎಂತಹಾ ಸಂಧರ್ಭವೇ ಒದಗಿ ಬಂದರೂ.. ಜನಮೇಜಯನ ಮನವೊಲಿಸಿ ಸರ್ಪಸತ್ರವನ್ನು ನಿಲ್ಲಿಸುತ್ತೇನೆ ಎಂದು ಮಾತುಕೊಟ್ಟು ಹೊರಟು ನೇರವಾಗಿ ಯಾಗಶಾಲೆಯತ್ತ ಬರುತ್ತಾನೆ. ಹಾಗೆ ಸಾಗಿ ಬರುವ ಪೂರ್ವದಲ್ಲಿಯೇ ತಕ್ಷಕನ ವಂಶದ, ಐರಾವತನ ವಂಶದ, ಕೌರವ್ಯನ ವಂಶದ, ವಾಸುಕಿಯ ವಂಶದ ವಿವಿದ ಬಣ್ಣ, ಆಕಾರದ, ಒಂದರಿಂದ ಹತ್ತು ಹಲವು ತಲೆಗಳನ್ನು ಹೊಂದಿದ್ದ, ಅತಿ ತೀಕ್ಷ್ಣವಾದ ವಿಷವನ್ನು ಹೊಂದಿದ್ದ ಕೋಟಿ ಕೋಟಿ ನಾಗಗಳು ಅಗ್ನಿಗೆ ಆಹುತಿಯಾಗಿ ಹೋಗಿದ್ದವು. ಇನ್ನೂ ನಿರಂತರವಾಗಿ ಮಂತ್ರದ ಪ್ರಭಾವಕ್ಕೆ ಒಳಗಾಗಿ ಬಂದು ಬೀಳುತ್ತಲೇ ಇದ್ದವು. ಆಸ್ತೀಕ ಯಾಗಶಾಲೆಯ ಬಳಿಗೆ ಬಂದರೆ ಹೊರಾವರಣದಲ್ಲಿದ್ದ ಕಾವಲುಗಾರರು ಇವನನ್ನು ಯಾಗಮಂಟಪದ ಬಳಿಸಾಗಲು ಬಿಡದೇ ತಡೆದು ನಿಲ್ಲಿಸುತ್ತಾರೆ. ಇತ್ತ ಜನಮೇಜಯನಿಗೆ ಅಷ್ಟೆಲ್ಲಾ ಸರ್ಪಗಳು ಬಂದು ಆಹುತಿಯಾಗಿ ಹೋದರೂ ತಕ್ಷಕ ಬಾರದೇ ಇರುವುದು ಅಸಹನೆಯನ್ನು ಉಂಟು ಮಾಡುತ್ತದೆ. ಯಾಕೆಂದರೆ ತಂದೆಯಾದ ಪರೀಕ್ಷಿತನನ್ನು ಕೊಂದವ ಅವನೇ ತಾನೆ.. ಹಾಗಾಗಿಯೇ ಭೂತ - ಭವಿಷ್ಯವನ್ನು ಬಲ್ಲ ಲೋಹಿತಾಕ್ಷ ಎಂಬ ಸೂತನನ್ನು ಕರೆಸಿ ಕೇಳುತ್ತಾನೆ. ಆಗ ಆ ಸೂತನು ತಕ್ಷಕ ಇಂದ್ರನ ಮೊರೆ ಹೊಕ್ಕ ವಿಚಾರ ಮತ್ತು ಇಂದ್ರ ಅವನಿಗೆ ಅಭಯ-ಆಶ್ರಯವನ್ನು ನೀಡಿದ ವರ್ತಮಾನವನ್ನು ತಿಳಿಸ್ತಾನೆ. ಇದರಿಂದ ಕುಪಿತನಾದ ಜನಮೇಜಯ ಇಂದ್ರ ಅವನನ್ನು ಇರಿಸಿಕೊಂಡಿದ್ದಾನೆ ಎಂದಾದರೆ ಇಂದ್ರ ಸಮೇತನಾಗಿಯೇ ಬಂದು ಬೀಳಲಿ ಕರೆಯಿರಿ ಎಂದು ಋತ್ವಿಜರಲ್ಲಿ ಹೇಳುತ್ತಾನೆ. ಅವನ ಮಾತಿಗೆ ಸಹಮತ ವ್ಯಕ್ತಪಡಿಸಿದ ಋತ್ವಿಜನಾದ ಹೋತೃವು "ಸಹೇಂದ್ರಾಯ ತಕ್ಷಕಾಯ ಸ್ವಾಹಾ" ಎಂದು ಕರೆದೇ ಬಿಡುತ್ತಾನೆ.. ಈ ಮಂತ್ರಕ್ಕೆ ಆಕೃಷ್ಟರಾದ ದೇವೇಂದ್ರ ತಕ್ಷಕರಿಬ್ಬರೂ ಪ್ರವಾಹದ ಸೆಳೆತದಲ್ಲಿ ಸಿಕ್ಕಿ ತೇಲಿ ಬರುವಂತೆ ಸ್ವರ್ಗದಿಂದ ಬೀಳತೊಡಗಿದರು. ಇತ್ತ ಕಾವಲುಗಾರರು ತಡೆದ ಕಾರಣದಿಂದ ಆಸ್ತೀಕ ಯಾಗಶಾಲೆಯ ಹೊರಾವರಣದಲ್ಲಿಯೇ ನಿಂತು ಗಟ್ಟಿಯಾದ ಸ್ವರದಲ್ಲಿ ರಾಜೇಂದ್ರನಾದ ಜನಮೇಜಯನನ್ನೂ, ಋತ್ವಿಜರನ್ನೂ ಸ್ವಸ್ತಿವಾಚನಮಾಡಿ ಹೊಗಳತೊಡಗಿದ. ಇದು ಜನಮೇಜಯನಿಗೂ ಕೇಳಿತು, ಕೂಡಲೇ ಆಸ್ತೀಕನನ್ನು ಒಳಗೆ ಬಿಡುವಂತೆ ಸೂಚನೆ ಕೊಡುತ್ತಾನೆ. ಹುಡುಗನಂತೆ ಕಾಣಿಸುತ್ತಿದ್ದರೂ ಅವನ ಮಾತು ನೆಡವಳಿಕೆಯನ್ನು ಕಂಡ ಜನಮೇಜಯನಿಗೆ ಇವನೊಬ್ಬ ಮಹಾಜ್ಞಾನಿ ಎಂಬ ಅರಿವಾಗುತ್ತದೆ. ಜನಮೇಜಯನಿಗೆ ಒಂದುಕಡೆಯಲ್ಲಿ ಆಸ್ತೀಕನಿಗೆ ಆತಿಥ್ಯ ಮಾಡಬೇಕು.. ಇನ್ನೊಂದೆಡೆಯಲ್ಲಿ ಇಂದ್ರ ಸಮೇತನಾಗಿ ತಕ್ಷಕ ಹೋಮಾಗ್ನಿಯಲ್ಲಿ ಬೀಳುವದನ್ನೂ ಕಾಣಬೇಕು... ಹಾಗಾಗಿ ಯಾಗಶಾಲೆಗೆ ಬಂದ ನಿನಗೇನು ದಾನವಾಗಿ ಕೊಡಲಿ.. ಏನನ್ನು ಯಾಚಿಸಿದರೂ ನೀಡುತ್ತೇನೆ ಎಂದು ಹೇಳಿ ಇತ್ತ ಋತ್ವಿಜರಿಗೆ ಇಂದ್ರರಕ್ಷಣೆಯಲ್ಲಿರುವ ತಕ್ಷಕನನ್ನು ಇಂದ್ರನನ್ನು ಸೇರಿಸಿಯೇ ಆಹುತಿ ನೀಡಿ ಎಂದು ಮತ್ತೆ ಮತ್ತೆ ಆತುರಪಡಿಸುತ್ತಾನೆ. ಅದಾಗಲೇ ತಕ್ಷಕನನ್ನು ಜೊತೆಗಿಟ್ಟುಕೊಂಡೇ ಸಾಗಿ ಬರುತಿದ್ದ ಇಂದ್ರ ತಾನೂ ಆಹುತಿಯಾಗುವ ಭಯದಿಂದ ಇನ್ನು ಬೇರೆ ದಾರಿಕಾಣದೇ ತಕ್ಷಕನನ್ನು ಬಿಟ್ಟು ಓಡಿ ಹೋಗಿಬಿಡುತ್ತಾನೆ. ಇದನ್ನು ನೋಡಿದ ಋತ್ವಿಜರು ತಕ್ಷಕ ಮಂತ್ರದ ಸೆಳೆತದಿಂದ ಬರುತ್ತಿರುವುದನ್ನು ಜನಮೇಜಯನಿಗೆ ಹೇಳುತ್ತಾರೆ. ಇವನಿಗೆ ಸಮಾಧಾನವಾಗುತ್ತದೆ, ಆಸ್ತೀಕನತ್ತ ತಿರುಗಿ "ಸ್ವಾಮಿ.. ತಮಗೆ ಬೇಕಾದ್ದನ್ನು ಕೇಳಿ ಕೊಡುತ್ತೇನೆ'' ಎನ್ನುತ್ತಾನೆ. ಆಗ ಆಸ್ತೀಕ "ಈ ಯಾಗವನ್ನು ಇಲ್ಲಿಗೇ ನಿಲ್ಲಿಸು... ಇನ್ನು ಒಂದು ಸರ್ಪವೂ ಆಹುತಿಯಾಗಬಾರದು ಎನ್ನುತ್ತಾನೆ. ಅದು ಸಾಧ್ಯವಾಗದು ಎಂದ ಜನಮೇಜಯ ಬೇರೆ ಏನನ್ನಾದರೂ ಕೇಳು ಎನ್ನುತ್ತಾನೆ. ಆದರೆ ತಾನು ತನ್ನ ಸೋದರ ಮಾವಂದಿರ ವಂಶವನ್ನು ಉಳಿಸಲು ತಾಯಿಯಿಂದ ಆಜ್ಞಪ್ತನಾಗಿ ಬಂದವನಿದ್ದೇನೆ ಇದಕ್ಕೆ ಹೊರತಾಗಿ ಬೇರೇನೂ ಬೇಡ ಎಂದು ನಿರ್ಧಾರದ ನುಡಿಯನ್ನಾಡುತ್ತಾನೆ. ಅವನ ಮಾತಿಗೆ ಯಾಗಶಾಲೆಯಲ್ಲಿದ್ದ ಪ್ರಾಜ್ಞರೆಲ್ಲಾ ಸಹಮತ ವ್ಯಕ್ತಪಡಿಸಿ ಆಸ್ತೀಕ ಕೇಳಿದಂತೆ ನಡೆಯುವುದೇ ಸರಿ ಎನ್ನುತ್ತಾರೆ. ಭವಿಷ್ಯವನ್ನು ಅರಿಯಬಲ್ಲ ಲೋಹಿತಾಕ್ಷನೂ ಇದು ಇಲ್ಲಿಗೇ ನಿಲ್ಲುತ್ತದೆ ಎಂದು ಹೇಳುತ್ತಾನೆ. ಇದನ್ನೆಲ್ಲಾ ಕೇಳಿದ ಜನಮೇಜಯನೂ ಸರಿ ಎಂದು ಯಾಗ ನಿಲ್ಲಿಸಲು ಒಪ್ಪುತ್ತಾನೆ. ಎಲ್ಲರೂ ಹರ್ಷೋದ್ಗಾರದಿಂದ ಚಕ್ರವರ್ತಿಯ ನಿರ್ಧಾರವನ್ನು ಸ್ವಾಗತಿಸುತ್ತಾರೆ. ಕುತೂಹಲದ ವಿಷಯವೆಂದರೆ.. ಇಂದ್ರ ತೊರೆದು ಹೋದಮೇಲೆ ಏಕಾಂಗಿಯಾದ ತಕ್ಷಕ ಈ ಮಧ್ಯದಲ್ಲಿಯೇ ಅಗ್ನಿಗೆ ಆಹುತಿಯಾಗಿ ಹೋಗಬೇಕಿತ್ತು... ಆದರೆ ಮಂತ್ರದಿಂದ ಕರೆಯಲ್ಪಟ್ಟ ತಕ್ಷಕ ಬೀಳುತ್ತಿರುವುದನ್ನು ನೋಡಿದ ಆಸ್ತೀಕ " ನಿಲ್ಲು. ನಿಲ್ಲು, ನಿಲ್ಲು," ಎಂದು ಮೂರು ಬಾರಿ ಹೇಳಿರುತ್ತಾನೆ. ಆ ಶಭ್ಧಕ್ಕೆ ಎಂತಹ ಶಕ್ತಿ ಇತ್ತೆಂದರೆ ಋತ್ವಿಜರ ಸ್ವಾಹಾಕಾರದ ಸೆಳೆತವನ್ನೂ ಪ್ರತಿರೋಧಿಸಿ ಆಗಸದಲ್ಲಿಯೇ ಜಡವಾಗಿ ತಕ್ಷಕ ನಿಂತುಬಿಟ್ಟಿದ್ದ. ಯಾಗವನ್ನು ಅಲ್ಲಿಗೇ ನಿಲ್ಲಿಸಿದ ಜನಮೇಜಯ ಅವಭೃತ ಸ್ನಾನವನ್ನು ಮುಗಿಸಿ ಬಂದು, ಎಲ್ಲಾ ಋತ್ವಿಜರಿಗೂ, ಬ್ರಾಹ್ಮಣರಿಗೂ ಯಥೇಶ್ಚವಾಗಿ ದಾನ ದಕ್ಷಿಣೆಗಳನ್ನು ಕೊಟ್ಟು ಸಂತೃಪ್ತಿಪಡಿಸುತ್ತಾನೆ. ಹಾಗೆಯೇ ಆಸ್ತೀಕನನ್ನೂ ಸತ್ಕರಿಸಿ ಮುಂದೊಂದು ಅಶ್ವಮೇಧ ಯಾಗ ಮಾಡುವ ಇಚ್ಛೆ ಇದೆ. ಆ ಕಾಲಕ್ಕೆ ತಾವು ಬರಬೇಕೆಂದು ಆಮಂತ್ರಣವನ್ನೀಯುತ್ತಾನೆ. ಅರಸನಿಂದ ಬೀಳ್ಳೊಂಡ ಆಸ್ತೀಕ ಮಾವ ವಾಸುಕಿಯಲ್ಲಿ ಬಂದು ನಡೆದ ವಿಚಾರವನ್ನೆಲ್ಲಾ ತಿಳಿಸುತ್ತಾನೆ. ಸರ್ಪಗಳಿಗೆಲ್ಲಾ ಸಂತೋಷವಾಗುತ್ತದೆ. ಇದಕ್ಕೆ ಕಾರಣನಾದ ನಿನಗೆ ಏನು ಬೇಕು ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಆಸ್ತೀಕ "ಮುಂದೆ ಯಾರೇ ಆಗಲಿ ಈ ಘಟನೆಯನ್ನು ಪಾರಾಯಣ ಮಾಡಿದವರಿಗೆ ಸರ್ಪಭಯ ಕಾಡಬಾರದು ಆಸ್ತಿಕನ ಹೆಸರನ್ನು ಹೇಳಿದವರಿಗೆ ಯಾವ ಸರ್ಪಗಳೇ ಆದರೂ ಕಚ್ಚಬಾರದು" ಎಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಸಮ್ಮತಿಸಿದ ವಾಸುಕಿಯ ನೇತೃತ್ವದಲ್ಲಿ ಸರ್ಪಗಳು ಆಸ್ತೀಕನನ್ನು' ಕೊಂಡಾಡುತ್ತಾ.. ಯಾರು ನಿನ್ನ ಹೆಸರನ್ನು ಹೇಳಿದ ಮೇಲೂ ಅಂತವರಿಗೆ ಸರ್ಪ ಕಡಿದರೆ ಅಂತಹ ಸರ್ಪದ ತಲೆ ಸಿಡಿದು ಚೂರಾಗಲಿ ಎಂದು ಹೇಳಿ ಆಸ್ತೀಕನಿಗೆ ನಂಬಿಗೆಯನ್ನು ಕೊಟ್ಟು ನಾಗಲೋಕದತ್ತ ಸಾಗಿ ಹೋದವು.
🙏🙏🙏🙏
Wednesday, May 28, 2025
ಸರ್ಪ ಸತ್ರ
ಜನಮೇಜಯ - ಸರ್ಪ ಸತ್ರ
ಪರೀಕ್ಷಿತನನ್ನು ತಕ್ಷಕ ಮೋಸದಿಂದಲೇ ಸಾಯಿಸಿದ.. ಅವನನ್ನು ಕಚ್ಚಿದಕೂಡಲೇ ನಿಜ ಸರ್ಪಾಕೃತಿಯನ್ನು ತಳೆದು ಆಕಾಶಮಾರ್ಗದಲ್ಲಿ ಹಾರಿಹೋದ. ಮರುಕ್ಷಣದಲ್ಲೇ ಪರೀಕ್ಷಿತನ ದೇಹ ಸಿಡಿಲೆರಗಿದ ಮರದಂತೆ ಸುಟ್ಟುಕರಕಲಾಗಿ ಹೋಯಿತು. ಪರೀಕ್ಷಿತನು ವಾಸ ಮಾಡಿದ್ದ ಏಕಸ್ಥಂಭ ಭವನವೂ ವಿಷದ ಜ್ಜಾಲೆಯಿಂದ ಉರಿದುಹೋಯಿತು. ನಂತರದಲ್ಲಿ ಪ್ರಮುಖರೆಲ್ಲಾ ಸೇರಿ ಚಿಕ್ಕವನಾದ ಜನಮೇಜಯನ ಮೂಲಕ ಅಳಿದ ಅರಸನಿಗೆ ಅಂತ್ಯಕ್ರಿಯೆಗಳನ್ನು ಮಾಡಿಸಿದರು. ಆ ನಂತರದಲ್ಲಿ ಹಸ್ತಿನಾವತಿಯ ಪಟ್ಟಾಭಿಷೇಕವನ್ನು ಜನಮೇಜಯನಿಗೆ ಮಾಡಿದರು.
ಆಡಳಿತವನ್ನು ನಿಭಾಯಿಸುವ ಪ್ರಾಯವಿನ್ನೂ ಅವನಿಗೆ ಆಗಿರದಿದ್ದರೂ ಮಂತ್ರಿಗಳು ಮತ್ತು ಹಿರಿಯರ ನಿರ್ದೇಶನದಲ್ಲಿ ರಾಜ್ಯಾಡಳಿತವನ್ನು ಮಾಡತೊಡಗಿದ. ಹಾಗೆಯೇ ವರುಷಗಳು ಕಳೆದವು.. ರಾಜಕುಮಾರ ಪ್ರಾಯ ಪ್ರಭುದ್ಧನಾದ. ಅರಸನಿಗೆ ವಿವಾಹ ಮಾಡಿಸುವ ಉದ್ದೇಶದಿಂದ ಕಾಶೀ ದೇಶದ ಅರಸನಾದ ಸ್ವರ್ಣವರ್ಮನ ಬಳಿಗೆ ಹೋಗಿ ಅವನ ಪುತ್ರಿಯಾದ ವಪುಷ್ಟಮೆಯನ್ನು ಜನಮೇಜಯನಿಗೆ ಮದುವೆಮಾಡಿಕೊಡಬೇಕೆಂದು ಮಂತ್ರಿಗಳು ಪ್ರಸ್ತಾಪ ಮಾಡಿದರು. ಕಾಶೀಶನೂ ಹಸ್ತಿನಾವತಿಯ ಚಕ್ರವರ್ತಿಗೆ ಮಗಳನ್ನು ಕೊಡಲು ಸಂತೋಷದಿಂದಲೇ ಒಪ್ಪಿದ. ಸಂಭ್ರಮದಿಂದ ವಿವಾಹ ಮಹೋತ್ಸವ ನೆರವೇರಿತು. ಊರ್ವಶೀ- ಪುರೂರವರಂತೆ ಸಂತೋಷದಿಂದ ಜನಮೇಜಯ-ವಪುಷ್ಟಮೆಯರು ಸಾಂಸಾರಿಕ ಜೀವನವನ್ನು ನಡೆಸಿದರು. ಹಲವು ವರ್ಷಗಳ ಕಾಲ ಜನಮೇಜಯನು ಸಂತೋಷದಿಂದ ಈ ಭೂಮಂಡಲವನ್ನು ಆಳಿದನು.ತಕ್ಷಶಿಲೆ ಮುಂತಾದ ದೇಶಗಳನ್ನು ದಿಗ್ವಿಜಯದ ಮುಖೇನ ಗೆದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಇದೇ ಸಂದರ್ಭದಲ್ಲಿ ಸರ್ಪಕುಲದ ಬಗ್ಗೆ ಮೊದಲೇ ದ್ವೇಷವನ್ನು ಹೊಂದಿ, ದುಷ್ಟ ಸರ್ಪಸಂತತಿಯನ್ನು ನಾಶ ಮಾಡಬೇಕೆಂದು ಸಮಯದ ನಿರೀಕ್ಷೆಯಲ್ಲಿದ್ದ ಉತ್ತಂಕ ಅರಸನ ಸಂದರ್ಷನಕ್ಕಾಗಿ ಬರುತ್ತಾನೆ. ತಪಸ್ವಿಯನ್ನು ಕಂಡ ಜನಮೇಜಯ ಆದರದಿಂದ ಆತಿಥ್ಯವನ್ನು ನೆರವೇರಿಸುತ್ತಾನೆ. ಕುಶಲೋಪರಿಯ ನಂತರ ಅನ್ಯತಾ ಭಾವಿಸದೆ ಬಂದ ಉದ್ದೇಷವನ್ನು ಹೇಳಿರೆಂದು ವಿನಂತಿಸಿಕೊಳ್ಳುತ್ತಾನೆ. ಆಗ ಸ್ವಲ್ಪ ಕೋಪಗೊಂಡವನಂತೆಯೇ ಉತ್ತಂಕ ಹೇಳತೊಡಗುತ್ತಾನೆ. ನೀನು ಚಕ್ರವರ್ತಿಯಾಗಿ ವಿಸ್ತಾರವಾದ ಈ ಭೂಮಂಡಲವನ್ನು ಆಳುತಿದ್ದೀಯ.. ನಿನ್ನ ಆಳ್ವಿಕೆ ಉತ್ತಮವಾದದ್ದು ಎಂದು ಪ್ರಜೆಗಳು ಹೊಗಳುತ್ತಿದ್ದಾರೆ.. ಕ್ಷತ್ರಿಯನಾಗಿ ನಿನ್ನ ಕರ್ತವ್ಯವನ್ನು ಮಾಡಿದರೂ ಒಬ್ಬ ಮಗನಾಗಿ ತಂದೆಯ ಸದ್ಗತಿಗಾಗಿ ಮಾಡಬೇಕಾದ ಕಾರ್ಯವನ್ನು ಮಾಡಲಿಲ್ಲ... ಉತ್ತಂಕನ ಮಾತುಗಳನ್ನು ಕೇಳಿದ ಜನಮೇಜಯನಿಗೆ ಆಶ್ಚರ್ಯ - ಆತಂಕ ಉಂಟಾಗುತ್ತದೆ. " ಸ್ವಾಮಿ ತಂದೆಯವರ ಮರಣಾನಂತರ ಪುರೋಹಿತರ ನಿರ್ದೇಶನದಲ್ಲಿಯೇ ತಂದೆಯವರ ಔರ್ಧ್ವದೈಹಿಕ ಕಾರ್ಯಗಳೆಲ್ಲವನ್ನು ಮಾಡಿದ್ದಾಗಿದೆ... ಅದರಲ್ಲಿ ಯಾವ ಕೊರತೆಯೂ ಆಗಲಿಲ್ಲ ಎಂದು ವಿನಯದಿಂದಲೇ ನುಡಿದ. ಆಗ ಉತ್ತಂಕ "ಅದೆಲ್ಲವೂ ಸರಿಯೇ ಆದರೆ ನಿನ್ನ ತಂದೆಯ ಸಾವಿಗೆ ಕಾರಣರಾದವರನ್ನು ಶಿಕ್ಷಿಸದೇ ಬಿಟ್ಟರೆ ಏನು ಪ್ರಯೋಜನ.. ಮಹಾ ಬಲಶಾಲಿಯೂ ಧಾರ್ಮಿಕನೂ ಆಗಿದ್ದ ಪರೀಕ್ಷಿತನನ್ನು ಮೋಸದಿಂದ ಕೊಲ್ಲಲಾಯಿತು " ಎಂದು ನುಡಿದ. ಉತ್ತಂಕನ ಮಾತನ್ನು ಕೇಳಿ ಜನಮೇಜಯ ತಾನು ತಿಳಿಯದೇ ಹೋದ ತಂದೆಯ ಸಾವಿನ ವೃತ್ತಾಂತವನ್ನು ಹೇಳಬೇಕೆಂದು ಕೇಳಿಕೊಂಡ.
(ಮಹಾಭಾರತದಲ್ಲಿಯೇ ಈ ಸಂದರ್ಭ ಎರಡು ರೀತಿಯ ವಿವರಣೆಯನ್ನು ಕೊಡುತ್ತದೆ. ಉತ್ತಂಕನ ಬಗ್ಗೆ ಹೇಳುವಾಗ ಈತನೇ ಜನಮೇಜಯನಿಗೆ ಪರೀಕ್ಷಿತನ ಸಾವಿನ ವೃತ್ತಾಂತವನ್ನು ಹೇಳಿ ಸರ್ಪಯಾಗಕ್ಕೆ ಪ್ರೇರಕನಾಗುತ್ತಾನೆ ಎಂದಿದ್ದರೆ.. ಮುಂದೊಂದು ಕಡೆ ಜನಮೇಜಯನೇ ಮಂತ್ರಿಗಳಲ್ಲಿ ತಂದೆಯ ಸಾವಿನ ವಿವರವಾದ ಘಟನೆಯನ್ನು ಕೇಳಿ ಕ್ರೋಧದಿಂದ ಸರ್ಪಯಾಗದ ಸಂಕಲ್ಪ ಮಾಡುತ್ತಾನೆ ಎಂದಿದೆ. ಕಾಡಿನ ನಿರ್ಜನ ಪ್ರದೇಶದಲ್ಲಿ ನಡೆದ ಕಾಶ್ಯಪ ಎಂಬ ಬ್ರಾಹ್ಮಣನಿಗೂ ತಕ್ಷಕನಿಗೂ ನಡೆದ ಸಂವಾದ ಉಳಿದವರಿಗೆ ತಿಳಿದಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಮಹಾಭಾರತದಲ್ಲಿಯೇ ಒಂದು ಸ್ವಾರಸ್ಯಕರವಾದ ಉತ್ತರವೂ ಇದೆ. ತಕ್ಷಕ ತನ್ನ ವಿಷದಿಂದ ಎದುರು ಬೆಳೆದುನಿಂತ ಮರವೊಂದನ್ನು ಸುಟ್ಟು ಕರಕಲಾಗಿಸುತ್ತಾನೆ.ಕಾಶ್ಯಪ ತನ್ನ ಮಂತ್ರಬಲದಿಂದ ಅದನ್ನು ಮತ್ತೆ ಮೊದಲಿನ ಹಾಗೆಯೇ ಎದ್ದು ನಿಲ್ಲುವ ಹಾಗೆ ಮಾಡುತ್ತಾನೆ. ಈ ಸಂಧರ್ಭದಲ್ಲಿ ಇವರಿಬ್ಬರಿಗೂ ಅರಿಯದೇ ಹೋದ ಒಂದು ವಿಷಯ ನಡೆದಿರುತ್ತದೆ. ಒಬ್ಬ ಕಟ್ಟಿಗೆ ಮಾರುವ ವ್ಯಕ್ತಿ ಕಟ್ಟಿಗೆ ಸಂಗ್ರಹಿಸಲು ಅದೇ ಮರವನ್ನು ಏರಿದ್ದ.. ತಕ್ಷಕನ ವಿಷದಲ್ಲಿ ಅವನೂ ಸುಟ್ಟು ಹೋಗಿದ್ದ.. ಮತ್ತೆ ಕಾಶ್ಯಪನ ಮಂತ್ರದಿಂದ ಬದುಕಿದ... ಇದು ಅವರಿಬ್ಬರ ಗಮನಕ್ಕೂ ಬರಲೇ ಇಲ್ಲ... ಮುಂದೆ ಅವನೇ ಅಲ್ಲಿ ನಡೆದ ಘಟನೆಯನ್ನು ಊರಿನಲ್ಲಿ ಹೇಳಿದ...)
ಉತ್ತಂಕ ವಿವರವಾಗಿ ಪರೀಕ್ಷಿತನ ಮರಣ ವೃತ್ತಾಂತವನ್ನು ಜನಮೇಜಯನಿಗೆ ತಿಳಿಸುತ್ತಾನೆ, ಮತ್ತು ಸರ್ಪಸಂಕುಲದ ಮೇಲೆ ಸೇಡನ್ನು ತೀರಿಸಿಕೊಳ್ಳಲು ಪ್ರೇರೇಪಿಸುತ್ತಾನೆ. ಸೇಡನ್ನು ತೀರಿಸಿಕೊಳ್ಳಲು ಸರ್ಪಯಾಗದ ಸಂಕಲ್ಪವೇ ಆಗುತ್ತದೆ. ಅಂತಹ ಒಂದು ಯಾಗ ಸಾಧ್ಯವೇ ಎಂಬ ಪ್ರಶ್ನೆ ಎದುರಾದಾಗ ಕಲ್ಪಾಂತರದಲ್ಲಿ ಇಂತಹ ಒಂದು ಯಾಗ ನಡೆದಿದ್ದನ್ನು ಉಲ್ಲೇಖಿಸಲಾಗುತ್ತದೆ. (ಹಿಂದಿನ ಕಲ್ಪದಲ್ಲಿ ಜನಮೇಜಯ ಮಾಡಿದ ಸರ್ಪಯಾಗ ಎಂದೇ ಭಾರತದಲ್ಲಿ ಹೇಳಿದೆ) ಅಂದರೆ ಅಂತಹ ಒಂದು ಯಾಗಕ್ಕೆ ಬೇಕಾದ ಮಂತ್ರ ಭಾಗವೂ ಇತ್ತು ಎಂದೇ ಅಲ್ಲವೇ...ಒಟ್ಟಾರೆಯಾಗಿ ದುಷ್ಟ ಸರ್ಪಗಳ ವಿನಾಶಕ್ಕೆ ಬೇಕಾಗಿ ಸಂಕಲ್ಪಬದ್ದನಾದ ಜನಮೇಜಯ ಪುರೋಹಿತರ ನಿರ್ದೇಶನದಂತೆ ಯಜ್ಞಶಾಲೆಯನ್ನು ನಿರ್ಮಾಣ ಮಾಡಿಸಿದ. ಉನ್ನತವಾದ ಯಜ್ಞ ವೇಧಿಕೆ.. ಸರ್ಪಾಹುತಿಗೆ ಬೇಕಾಗಿ ಯಜ್ಞ ಕುಂಡದ ನಿರ್ಮಾಣವಾಯಿತು....
...ಸರ್ಪಾಹುತಿ ಮುಂದಿನ ಭಾಗದಲ್ಲಿ..🙏🙏
Tuesday, May 27, 2025
ಜರತ್ಕಾರು ಮತ್ತು ಆಸ್ತೀಕ
ಜರತ್ಕಾರು ಮತ್ತು ಆಸ್ತೀಕ
ಜನಮೇಜಯನ ಸರ್ಪಯಾಗದ ಕಥೆ ಆರಂಭಿಸುವ ಮುನ್ನವೇ ಅದನ್ನು ನಿಲ್ಲಿಸಲು ಬೇಕಾದ ಒಂದು ಭೂಮಿಕೆ ಸಿದ್ಧವಾದದ್ದನ್ನು ಹೇಳಲೇಬೇಕಾಗುತ್ತದೆ. ಅಂದು ತಾಯಿಯಾದ ಕದ್ರೂ ಕೊಟ್ಟ ಶಾಪದ ಬಗ್ಗೆ ಸರ್ಪ ಸಂತತಿಗೆ ಸದಾ ಆತಂಕ ಇದ್ದೇ ಇರುತ್ತದೆ. ಆ ಶಾಪದ ಪರಿಣಾಮ ಏನಾಗಬಹದು..ಅದರಿಂದ ನಿವೃತ್ತಿ ಹೇಗೆ ಎಂಬ ಬಗ್ಗೆ ಚಿ೦ತೆ ಕಾಡುತ್ತಲೇ ಇತ್ತು. ಆಗಾಗ ಮಾತೆಯ ಶಾಪವಾಕ್ಯ ನೆನಪಾಗಿ ಆತಂಕ ಉಂಟಾಗುತಿತ್ತು. ಇದೇ ಸಂದರ್ಭದಲ್ಲಿ ಒಂದು ಘಟನೆ ನಡೆಯುತ್ತದೆ.
ಜರತ್ಕಾರು ಎಂಬ ಒಬ್ಬ ಋಷಿ ಇದ್ದ, ಇವನ ತಂದೆ ತಾಯಿಗಳು ಯಾರು ಎಂದು ಸರಿಯಾದ ಉಲ್ಲೇಖ ಸಿಗಲಿಲ್ಲ, ಯಾಯಾವರ ಎಂಬುವವರು ಇವನ ಪಿತೃಗಳು... ಒಂದು ಕಡೆ ನಿಲ್ಲದೇ ಸದಾ ಊರೂರು ತಿರುಗುತ್ತಲೇ ಇರುವವರು ಎಂದು ಈ ಹೆಸರು.. ಇವರ ಕುಲದಲ್ಲಿ ಹುಟ್ಟಿದ ಜರತ್ಕಾರು ಕೂಡ ಅಲ್ಲಲ್ಲಿ ತಿರುಗುತ್ತಾ ತಪಸ್ಸು ಮಾಡುತ್ತಾ ಕಾಲ ಕಳೆಯುತ್ತಿದ್ದ. ಒಂದು ದಿನ ಹೀಗೆಯೇ ಸಂಚಾರ ಮಾಡುತ್ತಿರುವಾಗ ಒಂದು ಪಾಳುಭಾವಿ.. ಹುಲ್ಲಿನಿಂದ ಮುಚ್ಚಿ ಹೋಗುವ ಸ್ಥಿತಿಯಲ್ಲಿದೆ.. ಒಂದಷ್ಟು ಜನ ಅದೇ ಹುಲ್ಲನ್ನು ಹಿಡಿದು ನೇತಾಡುತಿದ್ದಾರೆ..ಅವರು ಆಧಾರವಾಗಿ ಹಿಡಿದ ಹುಲ್ಲನ್ನು ಇಲಿಗಳು ಕಡಿಯುತ್ತಾ ಇವೆ. ಪೂರ್ತಿ ಕತ್ತರಿಸಿ ಹೋದರೆ ಅವರು ಕೆಳಗೆ ಬೀಳುತ್ತಾರೆ.. ಅಂತಹ ಸ್ಥಿತಿಯಲ್ಲಿ ಜರತ್ಕಾರು ಅವರನ್ನು ನೋಡಿದ. ಕುತೂಹಲವಾಯಿತು...ಆ ಹುಲ್ಲನ್ನು ಬಿಟ್ಟು ಬೇರೆ ರಕ್ಷಣೆ ಅರಸುವ ಯೋಚನೆಯನ್ನೂ ಅವರು ಮಾಡಿದಂತೆ ಅವನಿಗೆ ಅನ್ನಿಸಲಿಲ್ಲ..ಹಾಗಾಗಿಯೇ ಮಾತನಾಡಿಸಿದ.. ಅಯ್ಯಾ...ನೀವು ಯಾರು ಯಾಕೆ ಈ ಸ್ಥಿತಿಯಲ್ಲಿದ್ದೀರಿ.. ಈ ಪಾಳುಕೂಪದಲ್ಲಿ ನೀವಿರಲು ಕಾರಣವೇನು...? ಜರತ್ಕಾರು ಹೀಗೆ ಕೇಳಲು ಅವರು ಹೇಳಿದರು.." ಅಯ್ಯಾ ಬ್ರಾಹ್ಮಣ..ಯಾಯಾವರರೆಂದು ನಮ್ಮ ಹೆಸರು.. ಭೂಲೋಕದಲ್ಲಿ ತಪಸ್ಸು ಮಾಡುತ್ತಾ ಬದುಕಿ ನಂತರ ಉನ್ನತವಾದ ಪಿತೃ ಲೋಕವನ್ನು ಸೇರಬೇಕಾದವರು ನಾವಾಗಿದ್ದೆವು... ಆದರೆ... ಏನು ಮಾಡೋಣ ನಮ್ಮ ಕುಲದಲ್ಲಿ ಹುಟ್ಟಿದ ಒಬ್ಬನೇ ವ್ಯಕ್ತಿ ಜರತ್ಕಾರು ಎಂಬಾತ ಕೇವಲ ತಪಸ್ಸನ್ನು ಮಾತ್ರ ಮಾಡುತ್ತಾ ಬ್ರಹ್ಮಚಾರಿಯಾಗಿ ತಿರುಗುತ್ತಾ ಇದ್ದಾನೆ...ಅವನು ಸಂಸಾರಿಯಾಗಿ ಸಂತಾನವನ್ನು ಪಡೆಯದೇ ಇರುವ ಕಾರಣ ನಮಗೆ ಇಂತಹ ದುಸ್ಥಿತಿ ಉಂಟಾಗಿದೆ.. ನಮ್ಮ ಪತನಭೀತಿಗೆ ಅವನೇ ಕಾರಣ " ಎಂದರು. ಅವರ ಮಾತನ್ನು ಕೇಳಿ.."ನೀವು ಹೇಳಿದ ಜರತ್ಕಾರು ನಾನೇ..ನನಗೆ ಸಾಂಸಾರಿಕ ಜೀವನದಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲ ಆದರೆ ನಿಮ್ಮ ಸ್ಥಿತಿಯನ್ನು ನೋಡಿ ನಿಮ್ಮ ಉದ್ಧಾರಕ್ಕಾಗಿ ನಾನು ಸಂಸಾರಿಯಗಲು ಸಿದ್ಧನಿದ್ದೇನೆ ಆದರೆ... ಅದಕ್ಕೆ ನಿಬಂಧನೆಗಳಿದೆ. ನಾನು ಕೈ ಹಿಡಿಯುವ ವಧು ನನ್ನ ಹೆಸರಿನವಳೇ ಆಗಿರಬೇಕು..ನಾನು ಕನ್ಯಾರ್ಥಿಯಾಗಿ ಎಲ್ಲಿಗೂ ಹೋಗುವುದಿಲ್ಲ.. ಕನ್ಯಾಪಿತೃವೇ ಬಂದು ಕನ್ಯೆಯನ್ನು ಭಿಕ್ಷೆಯರೂಪದಲ್ಲಿ ನನಗೆ ಕೊಟ್ಟರೆ ನಾನವಳನ್ನು ಸ್ವೀಕರಿಸುತ್ತೇನೆ...ಆ ಕನ್ಯಾಮಣಿಯ ಸದಾ ನನಗೆ ಅನುಕೂಲಳೇ ಆಗಿರಬೇಕು..ನನಗೆ ವಿರೋಧವನ್ನು ಎಸಗಿದರೆ ನಾನವಳನ್ನು ತೊರೆದು ಬಿಡುತ್ತೇನೆ..." ಎಂದನು. ಯಾವುದಕ್ಕೂ ಬ್ರಹ್ಮಚಾರಿಯಾದ ಜರತ್ಕಾರು ಸಂಸಾರಿಯಾಗುವ ಮನಸ್ಸು ಮಾಡಿದ್ದಕ್ಕೆ ಪಿತೃಗಳಿಗೆ ಸಂತೋಷವಾಯಿತು. ಅವರಿಂದ ಬೀಳ್ಕೊಂಡು ಜರತ್ಕಾರು ಮುಂದೆ ಹೊರಟ.
ಇತ್ತ ನಾಗಲೋಕದಲ್ಲಿ ಸರ್ಪಗಳ ಸಭೆ.. ನಾಗರಾಜನಾದ ತಕ್ಷಕನ ಅಧ್ಯಕ್ಷತೆ.. ಅದಾಗಲೇ ಪರೀಕ್ಷಿತ ಪುತ್ರನಾದ ಜನಮೇಜಯ ಪಟ್ಟಾಭಿಷಿಕ್ತನಾಗಿದ್ದಾನೆ.. ಮಾತೆಯ ಶಾಪ ಯಾವಾಗ ಬರಸಿಡಿಲಿನಂತೆ ಎರಗುವುದೋ ಎಂಬ ಭಯ...ಎಲ್ಲರೂ ಒಂದೊಂದು ಸೂಚನೆ ಕೊಡುತ್ತಿದ್ದಾರೆ..ಕೆಲವರು ಪರೀಕ್ಷಿತನನ್ನು ಕೊಂದ ಹಾಗೆ ಇವನನ್ನು ಕಚ್ಚಿ ಕೊಂದು ಬಿಡೋಣ ಎನ್ನುತ್ತಿದ್ದಾರೆ.. ಏಲಾಪತ್ರ ಎಂಬ ನಾಗ ಆ ಸಭೆಯನ್ನು ಉದ್ದೇಶಿಸಿ ಹೇಳುತ್ತಾನೆ. " ಅಯ್ಯಾ ಬಂಧುಗಳೇ.. ನಾವು ಹಿಂದಿನ ಘಟನೆಯನ್ನು ಅವಲೋಕಿಸಬೇಕಾದ ಅನಿವಾರ್ಯತೆ ಇದೆ. ಅಂದು ನಮ್ಮ ಮಾತೆ ನಮಗೆ ಶಾಪವನ್ನು ಕೊಟ್ಟಾಗ ನಾಗ ಸಂತತಿಯೇ ಅಳಿದು ಹೋಗುತ್ತದೆ ಎಂದು ಆತಂಕಕ್ಕೆ ಒಳಗಾದ ದೇವತೆಗಳು ಬೃಹ್ಮದೇವರ ಬಳಿಗೆ ಹೋಗಿ ಕೇಳಿದಾಗ ಸೃಷ್ಠಿಕರ್ತನಾದ ಬ್ರಹ್ಮದೇವರು ದೇವತೆಗಳಿಗೆ ಹೇಳಿದ್ದನ್ನು ನೆನಪಿಸಿಕೊಳ್ಳಿ..ಯಾಯಾವರ ರ ಸಂತತಿಯಲ್ಲಿ ಜನಿಸಿದ ಜರತ್ಕಾರು ಎಂಬ ಋಷಿಯ ಕೈ ಹಿಡಿಯುವ ಅದೇ ಹೆಸರನ್ನು ಹೊಂದಿದ ನಾಗಕನ್ನಿಕೆಯ ಪುತ್ರನಿಂದ ಸರ್ಪಕುಲ ಉಳಿಯುತ್ತದೆ ಎಂದಿದ್ದಾನೆ. ಹಾಗಿದ್ದರೆ ಈಗನಾವು ಬೇರೆ ದಾರಿಯನ್ನು ಹುಡುಕಬೇಕಾಗಿಲ್ಲ.. ಜರತ್ಕಾರು ಎನ್ನುವ ಆ ಖುಷಿಯನ್ನು ಹುಡುಕಿ ತಕ್ಷಕನ ಸಹೋದರಿಯಾದ ಜರತ್ಕಾರುವನ್ನು ಮದುವೆ ಮಾಡುವುದೇ ದಾರಿ ಅವರಿಂದ ಜನಿಸುವ ಸಂತಾನ ನಮ್ಮ ಕುಲಕ್ಷಯವನ್ನು ನಿಲ್ಲಿಸುತ್ತದೆ ".. ಏಲಾಪತ್ರನ ಈ ಮಾತಿಗೆ ಎಲ್ಲರೂ ನಿಟ್ಟುಸಿರು ಬಿಟ್ಟು ಸಮ್ಮತಿಯನ್ನು ಸೂಚಿಸುತ್ತಾರೆ. ಜರತ್ಕಾರುವಿನ ನಿಬಂಧನೆಯನ್ನು ಅರಿತ ತಕ್ಷಕ ತಾನೇ ಮುಂದಾಗಿ ತನ್ನ ಸಹೋದರಿ ಜರತ್ಕಾರುವನ್ನು ಬಿಕ್ಷೆಯ ರೂಪದಲ್ಲಿ ನೀಡಲು ಕರೆದುಕೊಂಡು ಬರುತ್ತಾನೆ. ಜರತ್ಕಾರುವನ್ನು ಕಂಡು ಆಕೆಯನ್ನು ಸ್ವೀಕರಿಸಬೇಕು ಎಂದು ಕೇಳಿಕೊಳ್ಳುತ್ತಾನೆ. ಮೊದಲು ನಿರಾಕರಿಸಲು ಮುಂದಾದ ಜರತ್ಕಾರು ಕನ್ಯೆಯ ಹೆಸರೂ ತನ್ನ ಹೆಸರೇ ಎಂದು ತಿಳಿದಾಗ ಸಮ್ಮತಿಸುತ್ತಾನೆ. ಬಿಕ್ಷಾರೂಪದಲ್ಲಿ ಆಕೆಯನ್ನು ಸ್ವೀಕರಿಸಿ ಮದುವೆಯಾಗುತ್ತಾನೆ.
ಸಾಂಸಾರಿಕ ಜೀವನ ಚೆನ್ನಾಗಿಯೇ ಸಾಗುತ್ತಿರುತ್ತದೆ. ನಾಗಕನ್ನಿಕೆ ಗರ್ಭವತಿಯಾಗುತ್ತಾಳೆ. ಒಂದು ದಿನ ಸಾಯಂಕಾಲ ಪತ್ನಿಯ ತೊಡೆಯ ಮೇಲೆ ತಲೆಯಿಟ್ಟು ಜರತ್ಕಾರು ಮಲಗಿರುತ್ತಾನೆ... ಸೂರ್ಯಾಸ್ತ ಸಮೀಪಿಸಿದರೂ ಏಳುವುದಿಲ್ಲ. ಇತ್ತ ಪತ್ನಿಯಾದ ಜರತ್ಕಾರುವಿಗೆ ಆತಂಕವುಂಟಾಗುತ್ತದೆ. ಸಂಧ್ಯಾ ಕಾಲದಲ್ಲಿ ಪತಿ ಮಾಡಬೇಕಾದ ನಿತ್ಯಕರ್ಮಗಳು ತಪ್ಪಿ ಹೋಗುತ್ತದೆ. ಹಾಗಾಗಿ ಪತಿಯನ್ನು ಎಬ್ಬಿಸಬೇಕು.. ಎಬ್ಬಿಸಿದರೆ ಕೋಪಗೊಂಡರೇ.. ಏನಾದರಾಗಲಿ ಇಂತಹ ಸಂದರ್ಭದಲ್ಲಿ ಬ್ರಾಹ್ಮಣ ಮಾಡಬೇಕಾದ ಕರ್ತವ್ಯಕ್ಕೆ ಚ್ಯುತಿ ಆಗಬಾರದೆಂದು ಪತಿಯನ್ನು ಎಬ್ಬಿಸಿದಳು. ಎಚ್ಚರಗೊಂಡ ಜರತ್ಕಾರು ಕೋಪಗೊಂಡ ಸತಿಯಾದವಳು ಪತಿಗೆ ಅನುಕೂಲೆಯಾಗಿರಬೇಕು..ನೀನು ನನ್ನ ನಿದ್ರಾಭಂಗ ಮಾಡಿದೆ...ನಿನ್ನೊಂದಿಗೆ ಇನ್ನು ಸಂಸಾರ ಮಾಡಲಾರೆ ಎಂದು ಹೇಳಿ.. ನೀನು ನಿನ್ನ ಬದುಕನ್ನು ಮತ್ತೆ ತವರಿನಲ್ಲಿಯೇ ಕಳೆ..ನನ್ನ ನಿರೀಕ್ಷೆ ಬೇಡ.. ಎಂದನು.ಪತ್ನಿ ಕಣ್ಣೀರುಗರೆದು ಬೇಡಿಕೊಂಡರೂ ಕೇಳದೆ ಹೊರಡಲನುವಾದ..ಆ ಕ್ಷಣದಲ್ಲಿ ತಾನು ಗರ್ಭವತಿ ಎಂದೂ ಅರಿಯದ ಜರತ್ಕಾರು ಅವನಲ್ಲಿಯೇ ಕೇಳಿದಾಗ.."ಅಸ್ತಿ" ಎಂದು ಹೇಳಿ.. ನಿನಗೆ ಹುಟ್ಟುವ ಮಗನು ಜ್ಞಾನಿಯೂ ವೇದ ವೇದಾಂಗ ಪಾರಂಗತನೂ ಆಗಿ ನಿಮ್ಮ ಕುಲದ ಉದ್ಧಾರಕನೂ ಆಗುತ್ತಾನೆ ಎಂದು ಹೇಳಿ ಹೊರಟು ಹೋದ. ನಾಗಸ್ತ್ರೀಯಾದ ಜರತ್ಕಾರು ಕಣ್ಣೀರು ಸುರಿಸುತ್ತಾ ತಕ್ಷಕನ ಬಳಿಗೆ ಬರುತ್ತಾಳೆ. ನಡೆದ ಘಟನೆಯನ್ನೆಲ್ಲ ಹೇಳುತ್ತಾಳೆ. ತಕ್ಷಕನಿಗೂ ದುಃಖವಾಗುತ್ತದೆ, ಆದರೆ ತಪಸ್ವಿಯಾದ ಜರತ್ಕಾರುವಿನ ನಿರ್ಧಾರವನ್ನು ತಡೆಯುವ ಸಾಧ್ಯತೆ ತನಗಿಲ್ಲ ಎಂಬುದನ್ನು ಅರಿತು,ತನ್ನ ಸಹೋದರಿ ಗರ್ಭವತಿ ಎಂಬುದನ್ನು ಅರಿತು ಉದ್ದೇಶ ಈಡೇರಿದ ಒಂದು ಸಮಾಧಾನವಾಗುತ್ತದೆ. ತಂಗಿಯನ್ನು ಅತ್ಯಂತ ಎಚ್ಚರಿಕೆಯಿಂದ ಪಾಲಿಸುತ್ತಾನೆ. ದಿನತುಂಬಿ ಜರತ್ಕಾರು ಸರ್ಪಕುಲೋದ್ಧಾರಕನಾದ ಮಗನಿಗೆ ಜನ್ಮ ಕೊಡುತ್ತಾಳೆ. ಗರ್ಭದಲ್ಲಿರುವಾಗಲೇ ಪತಿ ''ಅಸ್ತು'' ಹೇಳಿದ ಕಾರಣಕ್ಕೂ ''ಆಸ್ತೀಕ " ಎಂದು ನಾಮಕರಣವಾಗುತ್ತದೆ. ಚ್ಯವನ ಮಹರ್ಷಿಯಿಂದ ವೇದ ವೇದಾಂಗಗಳನ್ನು ಕಲಿಯುತ್ತಾನೆ.( ದೇವೀ ಭಾಗವತದಲ್ಲಿ.. ಪತಿ ತೊರೆದು ಹೋದ ಮೇಲೆ ಜರತ್ಕಾರು ಕೈಲಾಸಕ್ಕೆ ಹೋಗಿ ಪಾರ್ವತೀ ಪರಮೇಶ್ವರರಲ್ಲಿ ಆಸರೆ ಹೊಂದಿರುತ್ತಾಳೆ. ಅಲ್ಲಿಯೇ ಜನಿಸಿದ ಆಸ್ತೀಕ ಶಿವನಿಂದಲೇ ಸಕಲ ವಿದ್ಯೆಗಳನ್ನೂ ಕಲಿಯುತ್ತಾನೆ.)🙏🙏
Sunday, May 25, 2025
ರುರು ಮತ್ತು ಪ್ರಮಧ್ವರೆ
ರುರು ಮತ್ತು ಪ್ರಮಧ್ವರೆ
ಸರ್ಪಯಾಗದ ನಂತರವೂ ನಡೆದ ಒಂದು ಘಟನೆಯಿಂದ ಋಷಿಯೊಬ್ಬ ಸರ್ಪಕುಲವನ್ನೇ ದ್ವೇಷಿಸುವ ಸಂದರ್ಭ ಒದಗಿ ಬಂದುಹೋಗುತ್ತದೆ. ಪ್ರಸಿದ್ದರಾದ ಚ್ಯವನ ಸುಕನ್ಯಾ ದಂಪತಿಗಳಿಗೆ ಪ್ರಮತಿ ಎಂಬ ಪುತ್ರನಿದ್ದ. ಪ್ರಮತಿಗೆ ಘ್ರತಾಚಿ ಎಂಬ ಅಪ್ಸರೆಯಲ್ಲಿ ರುರು ಎಂಬ ಪುತ್ರ ಜನಿಸುತ್ತಾನೆ. ಇನ್ನೊಂದೆಡೆ ಅಪ್ಸರೆಯಾದ ಮೇನಕೆ ವಿಶ್ವಾವಸು ಎಂಬ ಗಂಧರ್ವನಿಂದ ಗರ್ಭ ಧರಿಸುತ್ತಾಳೆ ಮತ್ತು ದಿನಗಳು ಕಳೆದು ಹೆಣ್ಣು ಮಗುವನ್ನು ಪ್ರಸವಿಸುತ್ತಾಳೆ, ಜನಿಸಿದ ಮಗುವನ್ನು ಯಾವ ಕರುಣೆಯನ್ನೂ ತೋರಿಸದೆ ಸ್ತೂಲಕೇಶ ಎಂಬ ಮುನಿಯ ಆಶ್ರಮದ ಸಮೀಪ ಬಿಟ್ಟು ಹೋಗಿಬಿಡುತ್ತಾಳೆ. ಸ್ತೂಲಕೇಶಮುನಿಯು ಆಶ್ರಮ ಪ್ರದೇಶದಲ್ಲಿ ನಡೆದಾಡುತ್ತ ಬರುತ್ತಿದ್ದಾಗ ಒಂದು ಮರದ ಕೆಳಗೆ ಆಗತಾನೇ ಜನಿಸಿದ ಮಗು ಅನಾಥ ಸ್ಥಿತಿಯಲ್ಲಿ ಅಳುತ್ತಿರುವುದನ್ನು ನೋಡುತ್ತಾನೆ, ಪೂರ್ಣಚಂದ್ರ ಕಾಂತಿಯಿಂದ ಕಂಗೊಳಿಸುತ್ತಿದ್ದ ಶಿಶುವನ್ನು ನೋಡಿ ಕರುಣಾಮಯಿಯಾದ ಮುನಿ ಅದನ್ನು ಆಶ್ರಮಕ್ಕೆ ತಂದು ದೇವಕನ್ನಿಕೆಯರನ್ನೂ ಮೀರಿಸುವ ಸೌಂದರ್ಯ ಹೊಂದಿದ ಮಗುವಿಗೆ"ಪ್ರಮದ್ವತಿ" ಎಂದು ನಾಮಕರಣ ಮಾಡಿ ತಂದೆಯ ಸ್ಥಾನದಲ್ಲಿ ನಿಂತು ಕಾಲಕಾಲಕ್ಕೆ ಬೇಕಾದ ಎಲ್ಲ ಸಂಸ್ಕಾರಗಳನ್ನೂ ನೆರವೇರಿಸುತ್ತಾನೆ. ಅವಳೂ ಬೆಳೆದು ಪ್ರಾಯಪ್ರಬುದ್ಧಳಾಗುತ್ತಾಳೆ.
ಹೀಗೆಯೇ ಒಂದು ದಿನ ಪ್ರಮತಿ ಪುತ್ರನಾದ ರುರು ಸಂಚರಿಸುತ್ತ ಬರುವಾಗ ಅಪ್ಸರೆಯರ ಸೌಂದರ್ಯ ಮೀರಿಸುವ ಪ್ರಮದ್ವತಿ ಅವನ ಕಣ್ಣಿಗೆ ಬೀಳುತ್ತಾಳೆ. ಅವಳನ್ನ ನೋಡಿದಾಕ್ಷಣವೇ ಇವನಿಗೆ ಪ್ರೇಮಾಂಕುರವಾಗಿಬಿಡುತ್ತದೆ, ಜೀವನದಲ್ಲಿ ಸಂಸಾರಿಯಾಗಿ ಬದುಕುವುದಾದರೆ ಪ್ರಮದ್ವತಿಯ ಜೊತೆಗೇ ಎಂದು ತೀರ್ಮಾನಿಸಿಬಿಡುತ್ತಾನೆ. ಹಿಂತಿರುಗಿ ಆಶ್ರಮಕ್ಕೆ ಬಂದು ತನ್ನ ಅಭಿಪ್ರಾಯವನ್ನು ತಂದೆಗೆ ನೇರವಾಗಿ ತಿಳಿಸಲು ನಾಚಿಕೆಯಾಗಿ ತನ್ನ ಮಿತ್ರರ ಮುಖಾಂತರ ಹೇಳಿಸುತ್ತಾನೆ. ತಂದೆಯಾದ ಪ್ರಮತಿಯು ಮಗನ ನಿರ್ಧಾರವನ್ನು ತಿಳಿದು ಸಂತೋಷದಲ್ಲಿಯೇ ಕನ್ಯಾರ್ಥಿಯಾಗಿ ಸ್ತೂಲಕೇಶಮುನಿಯ ಆಶ್ರಮಕ್ಕೆ ಬರುತ್ತಾನೆ. ಇಬ್ಬರ ಪರಸ್ಪರ ಕುಶಲೋಪರಿಯ ನಂತರ ತಾನು ಬಂದ ಉದ್ದೇಶ... ಮಗನ ಅಭಿಪ್ರಾಯವನ್ನು ಹೇಳುತ್ತಾನೆ. ಸ್ತೂಲಕೇಶಮುನಿಯೂ ಸಂತೋಷದಿಂದಲೇ ಒಪ್ಪಿಗೆ ಕೊಟ್ಟು ಮುಂದೆ ಬರುವ ಹಸ್ತಾ ನಕ್ಷತ್ರದ ದಿನ ಮದುವೆಯ ಮುಹೂರ್ತ ಎಂದು ನಿಶ್ಚಯ ಮಾಡುತ್ತಾನೆ. ಸಂತೋಷದಿಂದ ಒಪ್ಪಿದ ಪ್ರಮತಿ ಮುಹೂರ್ತದ ದಿನ ದಿಬ್ಬಣಕೂಡಿ ಬರುವುದಾಗಿ ಹೇಳಿ ಹೊರಡುತ್ತಾನೆ. ಇನ್ನು ಮದುವೆಗೆ ಮೂರ್ನಾಲ್ಕು ದಿನಗಳಿರುವಾಗ ಪ್ರಮದ್ವತಿ ಗೆಳತಿಯರೊಂದಿಗೆ ಆಶ್ರಮದ ಹೂದೋಟದಲ್ಲಿ ಸಂತೋಷದಿಂದ ವಿಹರಿಸುತ್ತ ಇದ್ದಳು, ಹಾಗೇ ಸಾಗುತ್ತಿದ್ದಾಗ ಅಲ್ಲಿ ಮಲಗಿದ್ದ ಒಂದು ವಿಷಸರ್ಪವನ್ನು ನೋಡದೇ ತುಳಿದು ಬಿಡುತ್ತಾಳೆ. ಅವಳ ಆಯಸ್ಸು ಮುಗಿದಕಾರಣ ಮೃತ್ಯುಪ್ರಚೋದನೆಯಿಂದ ಆ ಸರ್ಪವೂ ಕಚ್ಚಿಬಿಡುತ್ತದೆ. ಮೂರುಲೋಕದಲ್ಲಿರುವ ಸುಂದರಿಯರನ್ನೂ ನಾಚಿಸುವ ಸೌಂದರ್ಯ ಹೊಂದಿದ ಪ್ರಮದ್ವತಿಯ ಮುಖ ವಿಷಪ್ರಭಾವದಿಂದ ಕ್ಷಣಮಾತ್ರದಲ್ಲಿ ಕಪ್ಪಿಟ್ಟುಹೋಗುತ್ತದೆ. ಹಾ... ಎಂದು ಕೂಗಿಕೊಳ್ಳುತ್ತಾ ಕುಸಿದುಬೀಳುತ್ತಾಳೆ. ಮದುವೆಯ ಸಂಭ್ರಮಕ್ಕೆ ಸಿದ್ದವಾಗಿದ್ದ ಆಶ್ರಮ ಕ್ಷಣದಲ್ಲಿಯೇ ಮೃತ್ಯುವಿನ ಪ್ರವೇಶದಿಂದ ಸ್ಮಶಾನವಾಗಿಬಿಡುತ್ತದೆ. ವಿಷಯ ತಿಳಿದ ಸಮೀಪದ ಆಶ್ರಮವಾಸಿಗಳೆಲ್ಲ ದುಃಖಿಸುತ್ತ ಬಂದು ಸೇರುತ್ತಾರೆ. ಪ್ರಮತಿಗೂ ವಿಷಯ ತಿಳಿಯುತ್ತದೆ, ಆಶ್ರಮವಾಸಿಗಳನ್ನೂ ಪುತ್ರನಾದ ರುರುವನ್ನು ಕೂಡಿಕೊಂಡು ಸ್ತೂಲಕೇಶಮುನಿಯ ಆಶ್ರಮಕ್ಕೆ ಬರುತ್ತಾನೆ. ಆಶ್ರಮದಲ್ಲಿ ಮುನಿವನಿತೆಯರ ರೋಧನೆ ಮುಗಿಲುಮುಟ್ಟುತಿತ್ತು, ರುರುವಿಗೆ ತನ್ನ ಪ್ರಿಯತಮೆಯ ಶವವನ್ನು ನೋಡಲು ಧೈರ್ಯವೇ ಬರಲಿಲ್ಲ, ಕ್ಷಣಕಾಲ ನಿಂತು ಮತ್ತೆ ಅಲ್ಲಿಂದ ಅರಣ್ಯದತ್ತ ರೋಧಿಸುತ್ತ ಹೊರಟುಬಿಡುತ್ತಾನೆ. ನಿರ್ಜನವಾದ ಅರಣ್ಯಕ್ಕೆ ಬಂದು ಒಬ್ಬನೇ ಕುಳಿತು ರೋಧಿಸತೊಡಗುತ್ತಾನೆ. ಇವನ ದುಃಖವನ್ನು ಕಂಡು ದೇವತೆಗಳಿಗೂ ಕರುಣೆಉಂಟಾಗುತ್ತದೆ, ದುಃಖಿಸುತ್ತಿರುವ ರುರುವನ್ನು ಸಮಾಧಾನಪಡಿಸುವ ಮಾರ್ಗವನ್ನು ಸೂಚಿಸಿ ಒಬ್ಬ ದೇವದೂತನನ್ನು ಕಳುಹಿಸಿಕೊಡುತ್ತಾರೆ. ದೇವತೆಗಳ ನಿರ್ದೇಶನದ ಪ್ರಕಾರ ಸಾಗಿಬಂದ ದೇವದೂತ ರುರುವನ್ನು ಸಮಾಧಾನ ಮಾಡಿ ಅಳಿದುಹೋದ ಪ್ರಮದ್ವತಿಯನ್ನು ನೀನು ಪ್ರಯತ್ನ ಮಾಡಿದರೆ ಮತ್ತೆ ಬದುಕಿಸಿಕೊಳ್ಳಬಹುದು ಎಂದು ಹೇಳುತ್ತಾನೆ. "ಆಕೆ ಬದುಕುವಳೆಂದಾದರೆ ನಾನೇ ಸಾಯಲು ಕೂಡ ಸಿದ್ದ" ಎಂದು ರುರು ಹೇಳುತ್ತಾನೆ. ಹಾಗಿದ್ದರೆ ಆಯಸ್ಸುತೀರಿ ಅಳಿದುಹೋದ ನಿನ್ನ ಪ್ರಿಯತಮೆಗೆ ನಿನ್ನ ಆಯಸ್ಸಿನ ಅರ್ಧವನ್ನು ಕೊಡುವುದಾದರೆ ಅವಳು ಮತ್ತೆ ಬದುಕುತ್ತಾಳೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ರುರು ಸಂತೋಷದಿಂದಲೇ ತನ್ನ ಆಯುಷ್ಯಾರ್ಧವನ್ನು ಕೊಡಲೊಪ್ಪಿ " ಪ್ರಿಯೆಯಾದ ಪ್ರಮದ್ವತಿ ನನ್ನ ಸುದೀರ್ಘವಾದ ಆಯುಷ್ಯದಲ್ಲಿ ಅರ್ಧವನ್ನು ಹೊಂದಿ ಬದುಕಲಿ " ಎಂದು ಕೈಯೆತ್ತಿ ಹೇಳುತ್ತಾನೆ. ಆದರೆ ಅಲ್ಲಿಗೇ ಅದು ಪರಿಪೂರ್ಣ ಆಗಲಿಲ್ಲ. ಪ್ರಮದ್ವತಿಯ ತಂದೆಯಾದ ವಿಶ್ವಾವಸು ಬಂದು ದೇವದೂತನನ್ನು ಕರೆದುಕೊಂಡು ಯಮನಲ್ಲಿಗೆ ಹೋಗಿ ನಡೆದ ವಿಚಾರವನ್ನೆಲ್ಲ ಯಮನಿಗೆ ಹೇಳಿ ಪ್ರಮದ್ವತಿ ಮತ್ತೆ ರುರುವಿನ ಆಯುಷ್ಯವನ್ನು ಹೊಂದಿ ಬದುಕಲು ಅನುಮತಿ ನೀಡುವಂತೆ ವಿನಂತಿಸುತ್ತಾನೆ. ಆಗ ಯಮ " ನಿಮ್ಮೆಲ್ಲರ ನಿರ್ಧಾರ ಅದೇ ಆದರೆ ಹಾಗೇ ಆಗಲಿ" ಎಂದು ಸಮ್ಮತಿಯ ಅಂಕಿತ ಹಾಕುತ್ತಾನೆ. ಇತ್ತ ಸರ್ಪವಿಷದ ಪರಿಣಾಮದಿಂದ ಜೀವ ತೊರೆದಿದ್ದ ಪ್ರಮದ್ವರೆ ಯಮನ ಅನುಮೋದನೆ ಹೊಂದಿ ನಿದ್ರೆಯಿಂದ ಏಳುವಂತೆ ಮತ್ತೆ ಎದ್ದು ನಿಲ್ಲುತ್ತಾಳೆ. ಎಲ್ಲರಿಗೂ ಸಂತೋಷವಾಗುತ್ತದೆ, ನಡೆದ ಎಲ್ಲಾ ವಿಚಾರವನ್ನೂ ರುರು ಹಿರಿಯರಿಗೆ ತಿಳಿಸುತ್ತಾನೆ. ಎಲ್ಲರೂ ರುರುವಿನ ತ್ಯಾಗವನ್ನು ಕೊಂಡಾಡುತ್ತಾರೆ. ಅತ್ಯಂತ ಸಂಭ್ರಮದಿಂದ ರುರು ಪ್ರಮದ್ವರೆಯರ ವಿವಾಹವೂ ನೆರವೇರುತ್ತದೆ. ಪ್ರಿಯತಮೆಯನ್ನು ಹೊಂದಿದ ಸಂತೋಷ ರುರುವಿಗಾದರೂ ನಿರಪರಾಧಿಯಾದ ಪ್ರಮದ್ವರೆಯನ್ನು ಕಚ್ಚಿದ ಕಾರಣಕ್ಕಾಗಿ ಸರ್ಪಗಳ ಬಗ್ಗೆ ದ್ವೇಷ ಉಳಿದುಬಿಡುತ್ತದೆ. ಯಾವಾಗಲೂ ಕೈಯಲ್ಲಿ ಒಂದು ಬಡಿಗೆಯನ್ನು ಹಿಡಿದೇ ಓಡಾಡುತ್ತ ಇರುತ್ತಾನೆ, ಎಲ್ಲಿಯೇ ಸರ್ಪಗಳು ಕಂಡರೂ ಬಡಿದು ಕೊಲ್ಲುತ್ತಿರುತ್ತಾನೆ. ಒಂದು ದಿನ ಹೀಗೇ ಕಾಡಿನಲ್ಲಿ ಸಂಚರಿಸುತ್ತ ಇರುವಾಗ ಒಂದು ಕೊಳದ ಪಕ್ಕದಲ್ಲಿ ಮಲಗಿರುವ ಒಂದು " ಡುನ್ಡುಭ"ವೆನ್ನುವ ಹಾವು ಕಾಣಿಸುತ್ತದೆ. ಕೈಯಲ್ಲಿರುವ ಬಡಿಗೆಯಿಂದ ಇನ್ನೇನು ಹೊಡೆಯಬೇಕು ಎಂದು ಎತ್ತುತ್ತಿದ್ದಂತೆ ಆ ಹಾವು ಮಾತನಾಡತೊಡಗಿತು. "ಅಯ್ಯಾ ಬ್ರಾಹ್ಮಣ.. ವಿನಾಕಾರಣ ನನ್ನ ಮೇಲೆ ಯಾಕೆ ದ್ವೇಷ.. ಇಲ್ಲಿಯವರೆಗೆ ನಾನು ಯಾರಿಗೂ ತೊಂದರೆ ಕೊಟ್ಟವನಲ್ಲ.. ಯಾರನ್ನಾದರೂ ಕಚ್ಚಿ ಕೊಲ್ಲುವ ಸಾಮರ್ಥ್ಯ ಹೊಂದಿದ ವಿಷಸರ್ಪವೂ ನಾನಲ್ಲ, ಕೇವಲ ಹುಳುಹುಪ್ಪಟೆ.. ಕಪ್ಪೆ ಮುಂತಾದವುಗಳನ್ನ ತಿಂದು ಬದುಕುವ ನೀರುಹಾವು ನಾನು, ನನ್ನನ್ನು ಕೊಂದು ಸುಮ್ಮನೇ ಪಾಪವನ್ನ ಯಾಕೆ ಕಟ್ಟಿಕೊಳ್ಳುತ್ತಿ.. ಬ್ರಾಹ್ಮಣರು ಯಾವಾಗಲೂ ಜೀವದಯೆ ಹೊಂದಿದವರು ಆದರೆ ನೀನು ಅದಕ್ಕೆ ವಿರೋಧವಾದ ಕಾರ್ಯವನ್ನೇ ಮಾಡುತ್ತಿರುವೆ" ಎಂದು ಹೇಳಿತು. ಇದನ್ನು ಕೇಳಿದ ರುರುವಿಗೆ ಆಶ್ಚರ್ಯವಾಯಿತು ಒಂದು ಹಾವು ಹೀಗೆ ಮಾತಾಡಬಹುದು ಎಂದು ಅವನಿಗೆ ನಿರೀಕ್ಷೆಯಿಲ್ಲ. ಹಾಗಾಗಿಯೇ ಮತ್ತೆ ಆ ಹಾವಿಗೇ ಕೇಳಿದ " ಅಯ್ಯಾ ಮಹಾನುಭಾವ ನೀನು ಯಾರು... ನಿನ್ನ ಮಾತನ್ನು ಕೇಳಿದರೆ ಈ ಹಾವಿನ ರೂಪವನ್ನು ಹೊಂದಿ ನನ್ನನ್ನು ಪರೀಕ್ಷಿಸಲು ಬಂದ ಯಾವುದೋ ಮಹಾಪುರುಷ ಎಂದು ಬಾವಿಸುತ್ತಿದ್ದೇನೆ ". ರುರುವಿನ ಮಾತನ್ನು ಕೇಳಿದ ಹಾವು ಹೇಳಿತು "ಋಷಿಕುಮಾರ ಒಂದು ಕಾಲದಲ್ಲಿ ನಾನೂ ಬ್ರಾಹ್ಮಣನೇ ಆಗಿದ್ದೆ.. ಸಹಸ್ರಪಾದ ಎಂದು ನನ್ನ ಹೆಸರು, ನನಗೊಬ್ಬ ಮಿತ್ರನಿದ್ದ ಅವನ ಹೆಸರು ಖಗ ಎಂದು. ಒಂದು ದಿನ ನನ್ನ ಮಿತ್ರನಾದ ಖಗನನ್ನು ಕಾಣಲು ಅವನ ಆಶ್ರಮಕ್ಕೆ ಹೋದೆ.. ನಾನು ಹೋಗುವಾಗ ಖಗ ಅಗ್ನಿಕಾರ್ಯದಲ್ಲಿ ತೊಡಗಿದ್ದ. ನಾನು ಅವನ ಅಗ್ನಿಕಾರ್ಯ ಮುಗಿಯುವವರೆಗೆ ಸುಮ್ಮನೇ ಕುಳಿತುಕೊಳ್ಳದೆ ಅಲ್ಲಿಯೇ ಇದ್ದ ಹುಲ್ಲಿನಿಂದ ಒಂದು ಸರ್ಪದ ಆಕೃತಿಯನ್ನು ಮಾಡಿ ಖಗನತ್ತ ಎಸೆದೆ.. ಅಗ್ನಿಕಾರ್ಯದಲ್ಲಿ ತೊಡಗಿದ್ದ ಆತನಿಗೆ ಇದರ ಅರಿವಿಲ್ಲದೆ ನಿಜವಾದ ಹಾವು ಎಂದು ಭಾವಿಸಿ ಹೆದರಿಕೆಯಿಂದ ಕ್ಷಣಕಾಲ ಪ್ರಜ್ಞೆಯೇ ತಪ್ಪಿಬಿಟ್ಟಿತು. ಮತ್ತೆ ಎಚ್ಚರ ಹೊಂದಿ ನನ್ನನ್ನು ನೋಡಿದ.. ಇದು ನಾನು ಮಾಡಿದ ಕುಚೇಷ್ಟೆ ಎನ್ನುವುದು ತಿಳಿಯಿತು.. ಕೋಪದಿಂದ ಕಣ್ಣುಗಳು ಕೆಂಪಾದವು.. ನನ್ನನ್ನು ಹೆದರಿಸಲು ನೀನು ಹಾವಿನ ಆಕೃತಿಯನ್ನು ಬಳಸಿದೆಯಲ್ಲವೇ ಹಾಗಾಗಿ ನೀನೂ ಹಾವೇ ಆಗು ಎಂದು ಶಾಪ ಕೊಟ್ಟುಬಿಟ್ಟ... ನನಗೆ ದುಃಖವಾಯಿತು, ಖಗನ ತಪಸ್ಸಿನ ಸಾಮರ್ಥ್ಯ ತಿಳಿದ ನಾನು ಕಣ್ಣೀರುಸುರಿಸಿ ಕೇಳಿಕೊಂಡೆ.. ಮಿತ್ರತ್ವದ ನೆಲೆಯಲ್ಲಿ ಸಲಿಗೆಯಿಂದ ಎಸಗಿದ ಕಾರ್ಯ.. ಕ್ಷಮಿಸು.. ಎಂದೆ. ನನ್ನ ಮಾತನ್ನು ಕೇಳಿ ಶಾಂತನಾದ ಆ ನನ್ನ ಮಿತ್ರ.. "ನಾನಾಡಿದ ಮಾತು ಹುಸಿಯಾಗುವುದಿಲ್ಲ. ಆದರೆ ನಿನಗೆ ಸರ್ಪದ ರೂಪವೇ ಶಾಶ್ವತವಾಗಿ ಉಳಿಯುವುದಿಲ್ಲ. ಮುಂದೊಂದುದಿನ ಪ್ರಮತಿಪುತ್ರನಾದ ರುರುವಿನ ದರ್ಶನವಾದಾಗ ನಾನು ಕೊಟ್ಟ ಶಾಪವಿಮೋಚನೆ ಆಗುತ್ತದೆ" ಎಂದು ಆಡಿದ. ಅಂದಿನಿಂದ ಈ ಕಾಡಿನಲ್ಲಿ ನೀರುಹಾವಾಗಿ ನಿನ್ನ ನಿರೀಕ್ಷೆಯಲ್ಲಿಯೇ ಇದ್ದೆ.. ಇಂದು ನನ್ನ ಶಾಪವಿಮೋಚನೆ ಆಯಿತು ಎಂದು ಹೇಳಿ ನಿಜರೂಪದಲ್ಲಿ ಎದ್ದುನಿಂತ. ಶಾಪವನ್ನು ಕಳೆದುಕೊಂಡ ಸಹಸ್ರಪಾದ ಬ್ರಾಹ್ಮಣ ರುರುವಿಗೆ ಹೇಳಿದ.. " ಅಯ್ಯಾ.. ಬ್ರಾಹ್ಮಣನಾದವನು ಹಿಂಸೆಗೆ ತೊಡಗುವುದಲ್ಲ.. ಬದಲಾಗಿ ಆಗಬಹುದಾದ ಹಿಂಸೆಯನ್ನು ನಿಲ್ಲಿಸುವ ಪ್ರಯತ್ನವನ್ನು ಸಹಜವಾಗಿ ಕರುಣಾಮಯಿಯಾದ ಆತ ಮಾಡಬೇಕು. ಹಿಂದೊಂದು ಕಾಲದಲ್ಲಿ ಜನಮೇಜಯ ಎಂಬ ಅರಸ ಸರ್ಪ ಸಂತತಿಯನ್ನೇ ನಾಶಮಾಡುವ ಸಲುವಾಗಿ ಸರ್ಪಯಾಗ ಮಾಡತೊಡಗುತ್ತಾನೆ, ಆ ಕಾಲದಲ್ಲಿ ಸರ್ಪಗಳ ಮೊರೆಯನ್ನು ಕೇಳಿದ ಜರತ್ಕಾರು ಪುತ್ರನಾದ ಆಸ್ತೀಕ ತನ್ನ ಪಾಂಡಿತ್ಯದಿಂದ ಜನಮೇಜಯ ರಾಜನ ಮನವೊಲಿಸಿ ಸರ್ಪ ಹಿಂಸೆಯನ್ನು ನಿಲ್ಲಿಸಿದ ಕತೆಯನ್ನು ನಿನ್ನ ಆಶ್ರಮ ಪ್ರದೇಶದಲ್ಲಿರುವ ಹಿರಿಯ ಋಷಿಗಳಲ್ಲಿ ಕೇಳಿ ತಿಳಿದುಕೋ" ಎಂದು ಹೇಳಿ ಹೊರಟುಹೋದ. 🙏🙏
ಜರತ್ಕಾರು... ಆಸ್ತಿಕ ಜನ್ಮ ಮುಂದಿನ ಭಾಗ
ಅಕ್ಷೋಹಿಣಿ
ಅಕ್ಷೋಹಿಣಿ
ಒಂದು ಅಕ್ಷೋಹಿಣಿಯ ಲೆಕ್ಕ...
ಒಂದು ರಥ, ಒಂದು ಆನೆ, ಮೂರು ಕುದುರೆ, ಐದು ಕಾಲಾಳುಗಳಿಗೆ ಒಂದು ಪತ್ತಿ ಎಂದು ಹೆಸರು.
ಮೂರು ಪತ್ತಿಗಳಿಗೆ ಒಂದು ಸೇನಾಮುಖ
ಮೂರು ಸೇನಾಮುಖ ಒಂದು ಗುಲ್ಮ
ಮೂರು ಗುಲ್ಮ ಒಂದು ಗಣ
ಮೂರು ಗಣಗಳಿಗೆ ಒಂದು ವಾಹಿನಿ
ಮೂರು ವಾಹಿನಿ ಒಂದು ಪೃತನೆ
ಮೂರು ಪೃತನೆಗಳಿಗೆ ಒಂದು ಚಮು
ಮೂರು ಚಮುಗಳಿಗೆ ಒಂದು ಅನೀಕಿನಿ
ಹತ್ತು ಅನೀಕಿನಿಗಳಿಗೆ ಒಂದು ಅಕ್ಷೋಹಿಣಿ
ಒಟ್ಟು ಒಂದು ಅಕ್ಷೋಹಿಣಿ ಸೇನೆಯಲ್ಲಿ,
21,870 ರಥಗಳು
21,870 ಆನೆಗಳು
65,610 ಕುದುರೆಗಳು, ಹಾಗೂ
1,09,350 ಕಾಲಾಳುಗಳು ಇರುತ್ತಾರೆ.
*ಆಧಾರ ಮಹಾಭಾರತ*
Monday, May 19, 2025
ಪರೀಕ್ಷಿತ
ಸರ್ಪ ಯಾಗಕ್ಕೆ ಕಾರಣವಾದ ಎರಡು ಘಟನೆಗಳನ್ನು ಈ ಮೊದಲು ತಿಳಿಸಿದೆ. ಈಗ ಮೂರನೆಯ ಘಟನೆ.
ಮಹಾಭಾರತ ಯುದ್ಧದ ನಂತರ ಸುದೀರ್ಘ ಮೂವತ್ತಾರು ವರ್ಷಗಳಕಾಲ ಧರ್ಮರಾಜ ಚಕ್ರವರ್ತಿಯಾಗಿ ಹಸ್ತಿನಾವತಿಯನ್ನು ಪಾಲಿಸಿದ. ಅಶ್ವಮೇಧವೇ ಮುಂತಾದ ಯಾಗಗಳನ್ನು ಮಾಡಿ ಸಂಪೂರ್ಣ ಭೂಮಂಡಲದಲ್ಲಿ ತನ್ನ ಆಡಳಿತ ಸ್ಥಾಪಿಸಿದ.ಹೀಗಿರುವಾಗ ತನ್ನ ಆರಾಧ್ಯ ದೇವನಾದ ಶ್ರೀಕೃಷ್ಣ ಪರಮಾತ್ಮ ಪರಂಧಾಮಗೈದನೆಂಬ ವರ್ತಮಾನ ತಿಳಿದು ಸ್ವಾಮಿಯೇ ಇನ್ನಿಲ್ಲವೆಂದಾದ ಮೇಲೆ ಪಾಂಡವರಾದ ತಾವೂ ನಿರ್ಗಮಿಸಬೇಕೆಂದು ತೀರ್ಮಾನಕ್ಕೆ ಬಂದ. ಹಾಗಾಗಿಯೇ ಪರೀಕ್ಷಿತನಿಗೆ ಹಾಸ್ತಿನಾವತಿಯ ಪಟ್ಟಕಟ್ಟಿದ. ನಾಲ್ವರು ತಮ್ಮಂದಿರು ಹಾಗೂ ದ್ರೌಪದಿಯನ್ನೂ ಜೊತೆಗೂಡಿಕೊಂಡು ಸ್ವರ್ಗಾರೋಹಣ ಮಾಡಲು ಹೊರಟ.
ಮಹಾಭಾರತ ಯುದ್ಧದ ನಂತರ ಪಾಂಡವರನ್ನು ಹೊರತುಪಡಿಸಿ ಚಂದ್ರವಂಶವನ್ನು ಮುನ್ನೆಡಿಸಲಿಕ್ಕೆ ಉಳಿದಿದ್ದು ಈ ಪರೀಕ್ಷಿತ ಒಬ್ಬನೇ. ಮಹಾಭಾರತ ಯುದ್ಧದ ಕೊನೆಯಲ್ಲಿ ಶತ್ರುಗಳನ್ನು ಸಂಪೂರ್ಣ ನಾಶಮಾಡಿಬಿಡುತ್ತೇನೆ ಎಂದು ದ್ರೋಣಪುತ್ರ ಅಶ್ವತ್ತಾಮ ಬ್ರಹ್ಮಾಸ್ತ್ರ ಪ್ರಯೋಗಿಸಿಬಿಡುತ್ತಾನೆ. ಅದಕ್ಕೆ ಪ್ರತಿಯಾಗಿ ಶ್ರೀಕೃಷ್ಣ ನಿರ್ದೇಶನದಂತೆ ಅರ್ಜುನನೂ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ನಾರದ, ವೇದವ್ಯಾಸರ ಮಾತಿನಿಂದ ಅರ್ಜುನ ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ತಾನೇ ಉಪಶಮನ ಮಾಡುತ್ತಾನೆ, ಆದರೆ ಅಶ್ವತ್ತಾಮ ಪ್ರಯೋಗಿಸಿದ ಅಸ್ತ್ರಕ್ಕೆ ಉತ್ತರೆಯ ಗರ್ಭ ಗುರಿಯಾಗುತ್ತದೆ.ಆ ಕಾಲಕ್ಕೆ ಅಭಿಮನ್ಯು ಪತ್ನಿಯಾದ ಉತ್ತರೆ ಗರ್ಭಿಣಿಯಾಗಿರುತ್ತಾಳೆ.
ಶ್ರೀಕೃಷ್ಣ ಕಾರುಣ್ಯದಿಂದ ಗರ್ಭಸ್ತ ಶಿಶು ಸತ್ತರೂ ಮತ್ತೆ ಬದುಕುವಂತಾಗುತ್ತದೆ. ಹಾಗಾಗಿಯೇ ಅವನಿಗೆ ಪರೀಕ್ಷಿತ ಎಂಬ ಹೆಸರಿಡಲಾಯಿತು. ಪಾಂಡವರ ಬಳಿಯಲ್ಲಿಯೇ ಬೆಳೆದು ಕೃಪಾಚಾರ್ಯರಲ್ಲಿ ವಿದ್ಯಾಭ್ಯಾಸ ಮಾಡುತ್ತಾನೆ. ಉತ್ತರನ ಮಗಳಾದ ಇರಾವತಿ ಎಂಬಾಕೆಯನ್ನು ಮದುವೆಯಾಗಿ, ಜನಮೇಜಯ, ಶೃತಸೇನ,ಉಗ್ರಸೇನ ಮತ್ತು ಭೀಮಸೇನ ಎಂಬ ನಾಲ್ಕು ಜನ ಮಕ್ಕಳನ್ನು ಪಡೆಯುತ್ತಾನೆ. ಧರ್ಮರಾಜ ಇವನಿಗೆ ಪಟ್ಟಾಭಿಷೇಕ ಮಾಡುವಾಗ 36 ವರ್ಷ ವಯಸ್ಸು. ನಿಜವಾಗಿ ಆಗ ದ್ವಾಪರಯುಗದ ಅಂತ್ಯ ಮತ್ತು ಕಲಿಯುಗದ ಆರಂಭ ಕಾಲ. ಧರ್ಮರಾಜನ ಆಳ್ವಿಕೆಯಲ್ಲಿಯೇ ಕಲಿ ಪ್ರವೇಶ ಮಾಡಿದ್ದ.. ಭೀಮಸೇನನಿಂದ ಬಂದಿಸಲ್ಪಟ್ಟ ಕಲಿ ಧರ್ಮರಾಯನ ಕೇಳಿಕೆಯಂತೆ ತನ್ನ ಪ್ರಭಾವವನ್ನು ಸಂಪೂರ್ಣ ಬೀರದೆ ಇರಲು ಒಪ್ಪುತ್ತಾನೆ. ಪರೀಕ್ಷಿತನ ಆಡಳಿತದಲ್ಲೂ ಕಲಿ ಕಾಣಿಸಿಕೊಳ್ಳುತ್ತಾನೆ. ಒಬ್ಬ ಚಂಡಾಲನಾಗಿ, ರಾಜ ವೇಷವನ್ನು ತೊಟ್ಟು ಒಂದು ಹಸುವನ್ನು ಮತ್ತು ಒಂದು ವೃಷಭವನ್ನೂ ದಂಡಿಸುತ್ತಾ ಬರುತ್ತಿರುತ್ತಾನೆ. ಪಾಪ ವೃಷಭದ ಮೂರು ಕಾಲುಗಳು ಕುಂಟಾಗಿರುತ್ತದೆ. ಕೇವಲ ಒಂದೇ ಕಾಲಿನಿಂದ ನಿಂತು ಚಂಡಾಲ ಕೊಡುತ್ತಿರುವ ಹಿಂಸೆಯಿಂದ ನಡುಗುತ್ತಿರುತ್ತದೆ. ಹಸುವೋ.. ಬಾಯಾರಿಕೆ ಮತ್ತು ಹಸಿವಿನಿಂದ ಸಣಕಲು ಶರೀರವಾಗಿರುತ್ತದೆ. ಆದರೂ ಅವೆರಡನ್ನು ರಾಜ ವೇಷದಲ್ಲಿರುವ ಚಂಡಾಲ ದಂಡಿಸುತ್ತಿದ್ದ. ಇದನ್ನು ನೋಡಿದ ಪರೀಕ್ಷಿತ ಹರಿತವಾದ ಖಡ್ಗವನ್ನು ಸೆಳೆದು ಅವನನ್ನು ನಿಲ್ಲುವಂತೆ ಹೇಳಿ ಪ್ರಶ್ನಿಸಲಾಗಿ ಅವನೇ ಕಲಿಯೆಂದು ತಿಳಿಯುತ್ತದೆ. ಒಂದುಕಾಲಿನ ಮೇಲೆ ನಿಂತ ವೃಷಭವೇ ಧರ್ಮ, ನಿತ್ರಾಣಗೊಂಡ ಗೋವು ಭೂದೇವಿಯಾಗಿರುತ್ತಾರೆ. ಆಗ ಪರೀಕ್ಷಿತನ ಕೋಪದಿಂದ ಬೆದರಿದ ಕಲಿ ತನಗೆ ವಾಸ ಮಾಡಲು ಸ್ಥಳ ನಿರ್ದೇಶನ ಮಾಡುವಂತೆ ಕೇಳಿಕೊಳ್ಳುತ್ತಾನೆ. ಆಗ ಪರೀಕ್ಷಿತನು ಜೂಜು, ಮದ್ಯಪಾನ, ಆಧಾರ್ಮಿಕ ಸ್ತ್ರೀಸಂಗ, ಮತ್ತು ಹಿಂಸೆ ಇವುಗಳಲ್ಲಿ ವಾಸ ಮಾಡಲು ಅವಕಾಶ ಕೊಡುತ್ತಾನೆ. ಇನ್ನೂ ಸ್ವಲ್ಪ ಹೆಚ್ಚು ಬೇಕು ಎನ್ನಲು ಸುವರ್ಣವನ್ನೂ ಬಿಟ್ಟುಕೊಟ್ಟನು. ಅಲ್ಲಿಗೆ ಕಲಿಪುರುಷನಿಗೆ ವಾಸ ಮಾಡಲು ಅಸತ್ಯ, ಮದ, ಕಾಮ, ವೈರ ಮತ್ತು ರಜೋಗುಣ ಈ ಐದು ಸ್ಥಳಗಳು ದೊರೆತವು.
ಕೆಲವು ವರ್ಷಗಳು ಕಳೆದವು, ಪರೀಕ್ಷಿತನು ಒಂದು ದಿನ ಮೃಗಬೇಟೆಗಾಗಿ ಹೊರಟನು, ಕಾಡಲ್ಲಿ ಬೇಟೆಯಾಡಿ, ತಿರುಗುತ್ತಾ ಬಹಳ ಆಯಾಸವಾಯಿತು. ಎಲ್ಲಿ ಹುಡುಕಿದರೂ ಕುಡಿಯಲು ಒಂದು ಹನಿ ನೀರೂ ಸಹ ಸಿಗಲಿಲ್ಲ. ಹಾಗೆಯೇ ಸಾಗಿಬರುತ್ತಿದ್ದಾಗ ಒಂದು ಆಶ್ರಮ ಕಾಣಿಸಿತು. ಮೊದಲೇ ಬಳಲಿದ್ದ ರಾಜನಿಗೆ ಆಶ್ರಮದಲ್ಲಿ ಬೇಕಾದ ಉಪಚಾರ ಸಿಗಬಹುದೆಂದು ಆಶ್ರಮ ಪ್ರವೇಶ ಮಾಡಿದ. ಆದರೆ ಅಲ್ಲಿ ಯಾರೂ ಇವನನ್ನು ಆದರಿಸಿ ಸ್ವಾಗತಿಸಲಿಲ್ಲ, ಮುಂದೆ ಸಾಗಿ ಬಂದಾಗ ಒಬ್ಬ ಮುನಿ ತಪಸ್ಸು ಮಾಡುತ್ತಾ ಕುಳಿತಿದ್ದ. ಬಾಯಾರಿಕೆಯನ್ನು ತಾಳಲಾರದೆ ಪರೀಕ್ಷಿತ ಅವನನ್ನೇ ಕರೆದು ತನ್ನ ತೃಷೆಯ ನಿವಾರಣೆಗಾಗಿ ಸ್ವಲ್ಪ ನಿರಾನ್ನಾದರೂ ಕೊಡಿರೆಂದು ಕೇಳಿಕೊಂಡ. ಏಕಾಗ್ರತೆಯಿಂದ ತಪಸ್ಸಿನಲ್ಲಿದ್ದ ಮುನಿಗೆ ಇದು ಕೇಳಿಸಲಿಲ್ಲ. ಮತ್ತೆ ಮತ್ತೆ ಕೂಗಿದರೂ ಮುನಿ ಮಾತನಾಡದೇ ಇದ್ದಾಗ ಅರಸನ ಸಹನೆ ಮೀರಿತು, ಒಂದು ನಾಡಿನ ಚಕ್ರವರ್ತಿಯಾದ ತನಗೆ ಅಪಮಾನ ಆಯಿತು ಎಂದು ಭಾವಿಸಿ ಹಿಂತಿರುಗಬೇಕೆಂದು ತೀರ್ಮಾನಿಸುವಾಗಲೇ ಅಲ್ಲಿಯೇ ಸತ್ತುಬಿದ್ದ ಒಂದು ಹಾವು ಕಾಣಿಸಿತು. " ಬಾಯಾರಿಕೆಯಿಂದ ಬಂದವನಿಗೆ ಒಂದು ಗುಟುಕು ನೀರನ್ನೂ ಕೊಡಲಾಗದ ನಿನಗೂ ಈ ಸತ್ತ ಹಾವಿಗೂ ಏನೂ ವ್ಯತ್ಯಾಸ ಇಲ್ಲ " ಎಂದು ಹೇಳಿ ತನ್ನ ಬಿಲ್ಲಿನ ತುದಿಯಿಂದ ಆ ಸತ್ತ ಹಾವನ್ನು ಎತ್ತಿ ತಪಸ್ವಿಯ ಕೊರಳಿಗೆ ಹಾಕಿ ರಾಜ್ಯದತ್ತ ನಡೆದುಬಿಟ್ಟ.
ಅಲ್ಲಿ ತಪಸ್ಸಿನಲ್ಲಿ ತೊಡಗಿದ್ದ ಮಹರ್ಷಿಯ ಹೆಸರು ಶಮೀಕ, ಅವನಿಗೆ ಶೃಂಗಿ ಎಂಬ ತೇಜಸ್ವಿ ಪುತ್ರನಿದ್ದನು. ಅರಸ ಸರ್ಪವನ್ನು ಶಮೀಕನ ಕೊರಳಿಗೆ ಹಾಕಿ ಹೋದಮೇಲೆ ಶೃಂಗಿ ಆಶ್ರಮಕ್ಕೆ ಬಂದು ತಂದೆಯನ್ನು ಕಾಣುವಾಗ ಕೊರಳಲ್ಲಿ ತೂಗುತ್ತಿರುವ ಸತ್ತ ಹಾವು ಕಾಣಿಸುತ್ತದೆ. ಯೋಗದೃಷ್ಟಿಯಿಂದ ನೋಡುವಾಗ ಇದು ಪರೀಕ್ಷಿತ ಎಸಗಿದ ಕಾರ್ಯವೆಂದೂ ತಿಳಿಯುತ್ತಾನೆ. ಇದು ತಂದೆಯನ್ನು ಅವಮಾನಿಸಲೆಂದೇ ಮಾಡಿದ ಕಾರ್ಯ ಎಂದು ಭಾವಿಸಿದ ಶೃಂಗಿ " ಇಂತಹ ದುಃಸ್ಸಾಹಸಕ್ಕೆ ಮುಂದಾದ ಪರೀಕ್ಷಿತನು ಇಂದಿನಿಂದ ಏಳು ದಿನಗಳಲ್ಲಿ ತಕ್ಷಕ ಕಚ್ಚಿ ಸಾಯುವಂತಾಗಲಿ " ಎಂದು ಶಪಿಸಿಬಿಟ್ಟ. ಇಷ್ಟೆಲ್ಲ ನಡೆದಮೇಲೆ ಶಮೀಕ ಮಹರ್ಷಿಗೆ ಎಚ್ಚರವಾಯಿತು. ಎದುರಿಗೆ ಸಿಟ್ಟಿನಿಂದ ಕುಳಿತ ಮಗ, ಕೊರಳಲ್ಲಿ ಸತ್ತ ಹಾವು..., ಕೊರಳಿನಲ್ಲಿದ್ದ ಹಾವನ್ನು ತೆಗೆದೆಸೆದು ಏನಾಯಿತು ಎಂದು ಮಗನನ್ನು ಕೇಳಿದ. ನಡೆದ ವಿಷಯವನ್ನೆಲ್ಲಾ ಶೃಂಗಿ ತಿಳಿಸಿದಾಗ ಶಮೀಕನಿಗೆ ಸಂತೋಷಕ್ಕಿಂತ ದುಃಖವೇ ಆಯಿತು. ಅರಸ ತಾನಾಗಿ ನಮ್ಮ ಆಶ್ರಮಕ್ಕೆ ಬಂದಾಗ ಅವನನ್ನು ಸತ್ಕರಿಸಬೇಕಾದ್ದು ನಮ್ಮ ಕರ್ತವ್ಯವಾಗಿತ್ತು ಧ್ಯಾನಸ್ತನಾಗಿದ್ದ ನನಗೆ ತಿಳಿಯದೇ ಹೋಯಿತು. ಆದರೆ ನೀನು ಘೋರವಾದ ಶಾಪವನ್ನು ಕೊಟ್ಟು ತಪ್ಪುಮಾಡಿಬಿಟ್ಟೆ, ಧರ್ಮದಿಂದ ನಾಡನ್ನು ಆಳುತ್ತಿರುವ ಚಕ್ರವರ್ತಿ ಆತ. ಅವನ ನಾಶವನ್ನು ನಾವು ಬಯಸಬಾರದು, ಹೀಗೆ ಹೇಳಿ ತನ್ನ ಶಿಷ್ಯನಾದ ಗೌರಮುಖ ಎಂಬಾತನನ್ನು ಕರೆದು ಹಸ್ತಿನಾವತಿಗೆ ಹೋಗಿ ಶಾಪದ ಬಗ್ಗೆ ಎಚ್ಚರಿಸಿ ತಕ್ಷಕನಿಂದ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಪರೀಕ್ಷಿತನಿಗೆ ಹೇಳುವಂತೆ ಸೂಚಿಸುತ್ತಾನೆ. ಶಮೀಕನಿಂದ ಕಳುಹಲ್ಪಟ್ಟ ಗೌರಮುಖ ನೇರವಾಗಿ ಪರೀಕ್ಷಿತನ ಬಳಿಗೆ ಬಂದು ನಡೆದ ವಿಚಾರವನ್ನೆಲ್ಲ ತಿಳಿಸಿ ತಕ್ಷಕನಿಂದ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಶಮೀಕ ಮಹರ್ಷಿಗಳೇ ಮತ್ತೆ ಮತ್ತೆ ಹೇಳಿರುವುದಾಗಿ ತಿಳಿಸಿದ. ಪರೀಕ್ಷಿತನಿಗೆ ಸಾವು ಸಮೀಪಿಸಿದ ವಿಚಾರಕ್ಕಿಂತ ಅದು ಶಾಪರೂಪದಲ್ಲಿ ಬಂದಿದ್ದು ಬೇಸರವಾಯಿತು. ಆದರೂ ಗೌರಮುಖನನ್ನು ಆತಿಥ್ಯಮಾಡಿ, ಶಮೀಕರಿಗೂ ಸಮಾಧಾನದ ಮಾತುಗಳನ್ನು ಹೇಳಿ ಕಳುಹಿಸಿ ಕೊಡುತ್ತಾನೆ. ತಕ್ಷಕನಿಂದ ರಕ್ಷಣೆಗೆ ಬೇಕಾಗಿ ಗಂಗಾತೀರದಲ್ಲಿ ಏಕಸ್ತಂಭ ಭವನದ ನಿರ್ಮಾಣವಾಗುತ್ತದೆ. ಪರೀಕ್ಷಿತನಿಗೆ ಬದುಕುವ ಯಾವ ನಿರೀಕ್ಷೆಗಳೂ ಉಳಿದಿರಲಿಲ್ಲ. ತಾನು ಸಹನೆಮೀರಿ ವರ್ತಿಸಿ ಶಾಪಕ್ಕೆ ಗುರಿಯಾದೆ ಎಂಬುದೇ ಕಾಡುತ್ತಿತ್ತು, ಹೇಗಿದ್ದರೂ ಸಾವು ನಿಶ್ಚಿತ. ಹಾಗಾಗಿಯೇ ಉಳಿದ ದಿನಗಳನ್ನು ಪುಣ್ಯಕಥಾ ಶ್ರವಣದ ಮೂಲಕ ಕಳೆಯಲು ತೀರ್ಮಾನಿಸಿದ. ಆ ಸಮಯಕ್ಕೆ ಶುಕಮುನಿಗಳು ರಾಜನ ಬಳಿಗೆ ಆಗಮಿಸುತ್ತಾರೆ. ಅರಸನು ಆದರದಿಂದ ಸತ್ಕಾರ ಮಾಡಿ ಅವರಲ್ಲಿ ಭಾಗವತಶ್ರವಣ ಮಾಡುವ ಆಸೆಯನ್ನು ವ್ಯಕ್ತಪಡಿಸುತ್ತಾನೆ. ಶುಕಮುನಿಗಳು ಅವನಿಗೆ ಸಂಪೂರ್ಣ ಶ್ರೀ ಮದ್ಭಾಗವತವನ್ನು ಹೇಳಲು ಆರಂಭಿಸುತ್ತಾರೆ.
ಇತ್ತ ಶೃಂಗಿಯ ಶಾಪದಿಂದ ಕಾರ್ಯಪ್ರವೃತ್ತನಾದ ತಕ್ಷಕ ಪರೀಕ್ಷಿತ ಇರುವಲ್ಲಿಗೆ ರೂಪ ಮರೆಸಿಕೊಂಡು ಹೊರಡುತ್ತಾನೆ, ದಾರಿಯಲ್ಲಿ ಬರುವಾಗ ಕಶ್ಯಪ ಎನ್ನುವ ಬ್ರಾಹ್ಮಣ ಸಿಗುತ್ತಾನೆ. ಪರಸ್ಪರ ಪರಿಚಯವಾಗುತ್ತದೆ. ಆಗ ಕಶ್ಯಪ ಪರೀಕ್ಷಿತನಿಗೆ ಶೃಂಗಿಯ ಶಾಪ, ಮತ್ತು ಆ ಶಾಪದಿಂದ ರಾಜನನ್ನು ಉಳಿಸಲು ಮಂತ್ರವಿದ್ಯೆ ಅರಿತ ತಾನು ಧಾವಿಸುತ್ತಿರುವುದಾಗಿ ಹೇಳಿದ. ಆಗ ತಕ್ಷಕ.. " ಅಯ್ಯಾ ಬ್ರಾಹ್ಮಣ ಅರಸನನ್ನು ಕಚ್ಚುವುದು ಸಾಮಾನ್ಯ ಹಾವಲ್ಲ.. ಘೋರವಾದ ವಿಷದಿಂದ ಏನನ್ನಾದರೂ ಕ್ಷಣಮಾತ್ರದಲ್ಲಿ ಭಸ್ಮಮಾಡಿಬಿಡಬಹುದಾದ ತಕ್ಷಕನ ವಿಷದಿಂದ ಬದುಕಿಸಬಲ್ಲೆಯಾ.. " ಎಂದು ಕೇಳಿದ. ಆಗ ಕಶ್ಯಪ ಎಂತಹ ವಿಷವೇ ಆಗಲಿ ತನ್ನಲ್ಲಿ ಮಂತ್ರ.. ಉಂಟು ಎಂದು ಹೇಳುತ್ತಾನೆ. ಆಗ ತಕ್ಷಕ ತನ್ನ ನಿಜವನ್ನು ತಿಳಿಸಿ, ಅವನ ಔಷಧಿಯ ಪರಿಣಾಮ ಪರೀಕ್ಷೆಮಾಡಲು ಮುಂದಾಗುತ್ತಾನೆ. ಸಮೀಪದಲ್ಲಿಯೇ ಕಡುಹಸಿರಿನಿಂದ ಕೂಡಿದ್ದ ಮರವನ್ನು ತಕ್ಷಕ ಹೋಗಿ ಕಚ್ಚುತ್ತಾನೆ, ಮರುಕ್ಷಣವೇ ಆ ಮರ ವಿಷಪ್ರಭಾವದಿಂದ ಸುಟ್ಟು ಬೂದಿಯಾಗಿ ಹೋಗುತ್ತದೆ. ಪ್ರಶ್ನಾರ್ಥಕವಾಗಿ ಕಶ್ಯಪನನ್ನು ನೋಡಲು ಮರುಕ್ಷಣದಲ್ಲಿಯೇ ಮಂತ್ರಪ್ರಭಾವದಿಂದ ಬೂದಿಯಾದ ಮರವನ್ನು ಮೊದಲಿನಂತೆಯೇ ಚಿಗುರಿ ನಿಲ್ಲುವಂತೆ ಮಾಡುತ್ತಾನೆ. ತಕ್ಷಕನಿಗೆ ಆತಂಕವಾಗುತ್ತದೆ ಶೃಂಗಿಯ ಶಾಪವನ್ನು ಸತ್ಯವಾಗಿಸಬೇಕಾದ ಅನಿವಾರ್ಯತೆ ಉಂಟು, ಆದರೆ ಈ ಬ್ರಾಹ್ಮಣ ಅಲ್ಲಿಗೆ ಬಂದರೆ ತನ್ನ ಕಾರ್ಯ ಯಶಸ್ವಿಯಾಗಿ ನೆರವೇರುವುದಿಲ್ಲ. ಆಗ ಬ್ರಾಹ್ಮಣನಿಗೆ ಪರೀಕ್ಷಿತನನ್ನು ಬದುಕಿಸಿದರೆ ಸಿಗಬಹುದಾದ ಪ್ರಯೋಜನ ಏನೆಂದು ಕೇಳಲು ಬೇಕಾದಷ್ಟು ಧನಪ್ರಾಪ್ತಿಯಾಗುತ್ತದೆ ಎನ್ನುತ್ತಾನೆ. ಆವಾಗ ಸರ್ಪರಾಜನಾದ ತನ್ನಲ್ಲಿ ಇರುವ ಸಂಪತ್ತನ್ನು ತಿಳಿಸಿ ಹೇರಳವಾದ ಧನರಾಶಿಯನ್ನು ಕಶ್ಯಪನಿಗೆ ಕೊಟ್ಟು ಹಿಂದಕ್ಕೆ ಕಳುಹಿಸುತ್ತಾನೆ.
ಇತ್ತ ಪರೀಕ್ಷಿತ ಏಕಸ್ತ0ಭ ಭವನದಲ್ಲಿ ಕುಳಿತು ಭಾಗವತ ಶ್ರವಣದಲ್ಲಿ ತೊಡಗಿ ಏಳನೆಯ ದಿನ, ಎಲ್ಲೆಲ್ಲಿಯೂ ರಾಜನ ರಕ್ಷಣೆಗೆ ಬಿಗಿ ಭದ್ರತೆ, ಮಣಿ.. ಮಂತ್ರಗಳಿಂದ ರಾಜನನ್ನು ರಕ್ಷಿಸಲು ನೆರೆದ ಪಂಡಿತರು.. ಭಾಗವತದ ಪುಣ್ಯಶ್ರವಣ ಮುಗಿದಿದೆ. ಸುರ್ಯಾಸ್ತ ಆಗುವ ಸಮಯ... ಕೆಲವರಿಗೆ ಆಗಲೇ ಒಂದು ರೀತಿಯ ಸಮಾಧಾನ.. ಇನ್ನು ಏನೂ ಅಗಲಿಕ್ಕಿಲ್ಲ.. ಏಳನೆಯ ದಿನ ಕಳೆಯುತ್ತಾ ಬಂತು... ಆದರೆ ಪರೀಕ್ಷಿತನಿಗೆ ಬದುಕುವ ಆಸೆಯಿಲ್ಲ, ಭಾಗವತ ಶ್ರವಣವಾದಮೇಲೆ ತಾನೇ ಪ್ರಾಯೋಪವೇಷ ಮಾಡುವ ಮನಸ್ಥಿತಿಗೆ ಬಂದುಬಿಟ್ಟಿದ್ದಾನೆ. ತಕ್ಷಕ ಬಂದು ನೋಡಿದಾಗ ಸುಲಭವಾಗಿ ರಾಜನ ಬಳಿ ಹೋಗುವುದು ಕಷ್ಟ ಎಂಬ ಅರಿವಾಗುತ್ತದೆ. ತನ್ನ ಜೊತೆಗಿರುವ ಸರ್ಪಗಳನ್ನು ಕರೆದು ಬ್ರಾಹ್ಮಣ ರೂಪದಿಂದ ಅರಸನನ್ನು ಕಾಣಲು ಹಣ್ಣು.. ದರ್ಬೆಗಳನ್ನು ಹಿಡಿದು ಹೋಗಲು ತಿಳಿಸುತ್ತಾನೆ. ಅವರು ತೆಗೆದುಕೊಂಡುಹೋಗುವ ಹಣ್ಣಿನಲ್ಲಿ ತಾನೇ ಸೂಕ್ಷ್ಮ ರೂಪದಲ್ಲಿ ಹುಳುವಾಗಿ ಅಡಗಿಕೊಳ್ಳುತ್ತಾನೆ. ಕಪಟ ವಿಪ್ರರು ಸ್ವಸ್ತಿವಾಚನ ಮಾಡುತ್ತಾ ರಾಜನನ್ನು ಸಂದರ್ಶಿಸುತ್ತಾರೆ. ತಾವು ತಂದಂತ ಫಲಗಳನ್ನು ಹರಿವಾಣದಲ್ಲಿಟ್ಟು ರಾಜನಿಗೆ ಅರ್ಪಿಸಿ ತೆರಳುತ್ತಾರೆ.ಅದಾಗಲೇ ಸೂರ್ಯಾಸ್ತದ ನಂತರ ಕತ್ತಲೆ ಭವನವನ್ನು ಆವರಿಸತೊಡಗಿರುತ್ತದೆ. ಹರಿವಾಣದಲ್ಲಿದ್ದ ಹಣ್ಣುಗಳನ್ನು ತೆಗೆದುಕೊಂಡು ಕೆಲವನ್ನು ತಂನ್ನೊಂದಿಗಿರುವ ಮಂತ್ರಿಗಳಿಗೂ ಹಿತೈಷಿಗಳಿಗೂ ನೀಡುತ್ತಾನೆ. ಒಂದು ಹಣ್ಣನ್ನು ತಾನೇ ಹಿಡಿದು ತಿನ್ನಬೇಕೆನ್ನುವಾಗ ಯೋಚನೆ.... " ಋಷಿಕುಮಾರನ ಶಾಪವನ್ನು ನಿಜವಾಗಿಸಲು ಈ ಹಣ್ಣೇ ತಕ್ಷಕನಾಗಿ ಕಚ್ಚಿಬಿಡಲಿ... " ಇನ್ನೇನು ಕೈಯಲ್ಲಿರುವ ಹಣ್ಣನ್ನು ಕಚ್ಚಬೇಕೆನ್ನುವಾಗ.. ಅಣುರೂಪದಲ್ಲಿ ಅವಿತಿದ್ದ ತಕ್ಷಕ ಹೊರಬಂದು ಕಚ್ಚಿಬಿಡುತ್ತಾನೆ.. ಕ್ಷಣಮಾತ್ರದಲ್ಲಿ ವಿಷಪ್ರಭಾವದಿಂದ ರಾಜನದೇಹ ಸುಟ್ಟುಹೋಗುತ್ತದೆ.
ಇದೇ ಕಾರಣದಿಂದ ಪರೀಕ್ಷಿತನ ಮಗನಾದ ಜನಮೇಜಯ ಸರ್ಪಯಾಗಕ್ಕೆ ಸಂಕಲ್ಪ ಮಾಡುತ್ತಾನೆ. 🙏🙏
ವಿನತೆ ಮತ್ತು ಕದ್ರೂ
ಗುರುಭಕ್ತಿ ಹೊಂದಿದ, ಶ್ರದ್ದೆಯಿಂದ ಗುರುದಕ್ಷಿಣೆ ಅರ್ಪಿಸಿದ ಶಿಷ್ಯರನ್ನು ಪರಿಚಯಿಸಲು ಹೊರಟಾಗ ಉತ್ತನ್ಕನ ಕಥೆ ತಂದು ನಿಲ್ಲಿಸಿದ್ದು ಜನಮೆಜಯನ ಸರ್ಪಯಾಗದ ಆರಂಭಕ್ಕೆ. ಆದರೆ ನಾನು ಮೊದಲೇ ಹೇಳಿದ್ದೆ... ಜನಮೇಜಯನ ಸರ್ಪಯಾಗಕ್ಕೆಹಲವು ಹಿನ್ನಲೆ ಇದೆ ಎಂದು.
ಮೊದಲ ಹಿನ್ನೆಲೆ ಬಗ್ಗೆ ನೋಡೋಣ.. ದಕ್ಷ ಪ್ರಜಾಪತಿಗೆ 60 ಜನ ಹೆಣ್ಣು ಮಕ್ಕಳು ಅವರಲ್ಲಿ ದಿತಿ ಅದಿತಿ ಮುಂತಾದ 13 ಜನರನ್ನು ಕಶ್ಯಪರಿಗೆ ಮದುವೆ ಮಾಡಿಕೊಟ್ಟ. ಅವರಲ್ಲಿ ಕದ್ರೂ ವಿನತೆ ಎಂಬ ಇಬ್ಬರು ಸಹೋದರಿಯರಿಗೆ ಉತ್ತಮವಾದ ಸಂತಾನ ಹೊಂದಬೇಕೆಂಬ ಅಪೇಕ್ಷೆಯುನ್ಟಾಯಿತು. ಹಾಗೆಯೇ ಕದ್ರೂ ಕಶ್ಯಪರ ಬಳಿ ಹೋಗಿ.. " ಸ್ವಾಮೀ ಲೋಕದಲ್ಲಿ ಪರಾಕ್ರಮಿಗಳದ ಒಂದು ಸಾವಿರ ನಾಗಗಳನ್ನು ನಾನು ಪುತ್ರರನ್ನಾಗಿ ಹೊಂದುವಂತೆ ಅನುಗ್ರಹಿಸಿ " ಎಂದು ಬೇಡಿಕೊಂಡಳು. ಕಶ್ಯಪರು ಅಸ್ತು ಎಂದು ಆಶೀರ್ವದಿಸಿದರು. ಇದನ್ನು ತಿಳಿದ ವಿನತೆಯೂ ಗಂಡನ ಬಳಿ ಹೋಗಿ.. " ಸ್ವಾಮೀ ಸಂಖ್ಯಾಬಲಕ್ಕಿಂತ ಪರಾಕ್ರಮಿಗಳಾದ ಇಬ್ಬರೇ ಇದ್ದರೂ ಸಾಕು ಹಾಗಾಗಿ ನನಗೆ ನನ್ನಕ್ಕನಿಗೆ ಹುಟ್ಟಬಹುದಾದ ಸಾವಿರ ಮಕ್ಕಳನ್ನೂ ಮೀರಿಸುವ ಎರಡು ಜನ ಮಕ್ಕಳು ಬೇಕು " ಎಂದಳು ಕಶ್ಯಪರು ನಸುನಗುತ್ತಾ ಆಗಲಿ ಎಂದು ಹೇಳಿ ತಪಸ್ಸಿಗೆ ಹೊರಟು ಹೋದರು. ಕೆಲವು ವರ್ಷಗಳೇ ಕಳೆಯಿತು, ಕದ್ರೂ ಒಂದು ಸಾವಿರ ಮೊಟ್ಟೆಗಳನ್ನು ಪ್ರಸವಿಸಿದಳು. ದಾಸಿಯರು ಅವುಗಳನ್ನು ಪಾತ್ರೆಯಲ್ಲಿಟ್ಟು ಶಾಖವನ್ನು ಕೊಡುತ್ತ ರಕ್ಷಿಸಿ ಇಟ್ಟರು. ಕೆಲವು ಕಾಲದಲ್ಲಿ ವಿನತೆಯೂ ಎರಡು ಮೊಟ್ಟೆಯನ್ನು ಪ್ರಸವಿಸಿದಳು. ದಾಸಿಯರು ಅವುಗಳನ್ನೂ ಹಾಗೆಯೇ ರಕ್ಷಿಸತೊಡಗಿದರು. ಸುಮಾರು ಇದುನೂರು ವರ್ಷಗಳೇ ಕಳೆಯಿತು.. ಕದ್ರೂ ಪ್ರಸವಿಸಿದ ಮೊಟ್ಟೆಗಳು ಒಂದೊಂದೇ ಒಡೆದು ಸುಂದರವಾದ ಸರ್ಪರೂಪಿ ಮರಿಗಳು ಹೊರಗೆ ಬಂದವು. ತಾಯಿಯಾದ ಕದ್ರೂ ಮಕ್ಕಳನ್ನು ನೋಡಿ ಸಂತೋಷ ಹೊಂದಿದಳು. ವಿನತೆಯ ಮೊಟ್ಟೆಗಳು ಒಡೆಯಲೇ ಇಲ್ಲ. ಒಂದುಕಡೆ ಕದ್ರೂ ಮಕ್ಕಳೊಂದಿಗೆ ಆನಂದಪಡುವುದನ್ನು ನೋಡಿ ಅಸೂಯೆ, ಮತ್ತೊಂದೆಡೆ ತನ್ನ ಮೊಟ್ಟೆಯಿಂದ ಮಕ್ಕಳು ಬರಲಿಲ್ಲ ಎಂಬ ಆತಂಕ.. ದಿನವೂ ಹೋಗಿ ನೋಡುವಳು.
ಕಡೆಗೂ ವಿನತೆಯ ಸಂಯಮ ಮೀರಿತು, ಒಂದು ದಿನ ಒಂದು ಮೊಟ್ಟೆಯನ್ನು ತಾನೇ ಒಡೆದುಬಿಟ್ಟಳು. ಒಳಗಿನ ದೃಶ್ಯವನ್ನು ನೋಡಿ ವಿನತೆಗೆ ಆಘಾತವಾಯಿತು. ದೇಹದ ಮೇಲರ್ದ ಸುಂದರವಾಗಿ ಪರಿಪೂರ್ಣ ಬೆಳವಣಿಗೆ ಆಗಿತ್ತು ಸೊಂಟದ ಕೆಳಗಿನ ಭಾಗ ಪೂರ್ಣವಾಗಿರಲಿಲ್ಲ. ಹಾಗಿದ್ದರೂ ಶಿಶುವಿಗೆ ಚೈತನ್ಯವಿತ್ತು. ಸೂರ್ಯನ ಸರಿಸಮವಾದ ಕಾಂತಿಯಿಂದ ಬೆಳಗುತಿತ್ತು. ಬೆಳವಣಿಗೆ ಪೂರ್ವದಲ್ಲಿಯೇ ಮೊಟ್ಟೆಯನ್ನು ಒಡೆದು ತನ್ನನ್ನು ಅಂಗವಿಕಲನನ್ನಾಗಿಸಿಸದ ತಾಯಿಯನ್ನು ಮಗು ಕೋಪದಿಂದ ದುರುಗುಟ್ಟಿ ನೋಡಿತು. " ನೀನು ಕದ್ರುವಿನ ಬಗ್ಗೆ ಹೊಂದಿದ ಮಾತ್ಸರ್ಯ ನನ್ನನ್ನು ಅಂಗವಿಕಲನನ್ನಾಗಿ ಮಾಡಿತು.. ನನ್ನ ಜೀವನದ ಶ್ರೇಯಸ್ಸಿಗೆ ಕಾರಣಳಾಗಬೇಕಿದ್ದ ನೀನು ನನ್ನನ್ನು ಹೆಳವನನ್ನಾಗಿಸಿದ ಕಾರಣದಿಂದ ದಾಸ್ಯದ ಜೀವನ ನಡೆಸುವಂತಾಗಲಿ" ಎಂದು ಶಪಿಸಿಬಿಟ್ಟಿತು. ಮಗುವಿನ ನುಡಿಯನ್ನು ಕೇಳಿ ವಿನತೆಗೆ ಆಘಾತವಾಯಿತು. " ಮಗೂ ತಪ್ಪು ಮಾಡಿದೆ.. ಆದರೆ ನಾನು ದಾಸ್ಯದ ಬದುಕನ್ನು ಹೇಗೆ ಸ್ವೀಕರಿಸಲಿ ಕಂದಾ.. ನನ್ನನ್ನು ಕ್ಷಮಿಸಿಬಿಡು" ಎಂದು ಎತ್ತಿ ಮುದ್ದಿಸುತ್ತ ಕೇಳಿಕೊಂಡಳು. ಆಗ " ಅಮ್ಮಾ.. ಇಲ್ಲಿರುವ ಇನ್ನೊಂದು ಅಂಡವನ್ನು ಪೂರ್ಣ ಬೆಳೆಯುವ ಅವಕಾಶ ಮಾಡಿಕೊಡು.. ಇನ್ನೂ ಐದುನೂರು ವರ್ಷಗಳು ಬೇಕು, ಹಾಗೆ ಪೂರ್ಣ ಬೆಳವಣಿಗೆ ಹೊಂದಿ ಹೊರಗೆ ಬರುವ ನಿನ್ನ ಮಗನ ಸಾಹಸದಿಂದ ನಿನ್ನ ದಾಸ್ಯದ ನಿವಾರಣೆ ಆಗುತ್ತದೆ" ಎಂದು ಹೇಳಿ ಮೊದಲೇ ದೈವ ನಿರ್ಣಯದಂತೆ ಸೂರ್ಯನ ಸೂರ್ಯನ ರಥವೇರಿ ರಥದ ಸಾರಥಿಯಾಯಿತು. ಅವನೇ ಸೂರ್ಯನ ಸಾರಥಿ ಅರುಣ. ಸೂರ್ಯನ ಸಾರಥಿ ಹೆಳವ ಎಂದು ಏಕೆ ಹೇಳುತ್ತಾರೆ ಎಂಬುದಕ್ಕೂ ಹಿನ್ನೆಲೆ ಇದು.
ನಂತರ ದಿನಗಳು ಕಳೆದವು.. ಅರುಣನ ಶಾಪದಿಂದ ಬೇಸರಹೊಂದಿದ ವಿನತೆ ಇನ್ನೊಂದು ಮೊಟ್ಟೆಯ ಉಪೇಕ್ಷೆಯನ್ನೇ ಮಾಡಿದಳು. ಆದರೂ ಅದರಷ್ಟಕ್ಕೆ ಅದು ಬೆಳೆಯುತ್ತಾ ಇತ್ತು.
ಅದಾಗಲೇ ದೇವಾಸುರರು ಸೇರಿ ಸಮುದ್ರಮಥನ ಮಾಡುತ್ತಿದ್ದರು ಉಚ್ಚೈಶ್ರವಸವೆಂಬ ಶ್ರೇಷ್ಠವಾದ ಕುದುರೆ ಮಥನದಿಂದ ಹುಟ್ಟಿಬಂದಿತ್ತು. ಹೀಗೆಯೇ ಮಾತನಾಡುತ್ತ ಕದ್ರೂ ವಿನತೆಯರು ಅದರ ಬಣ್ಣದ ಬಗ್ಗೆ ಮಾತನಾಡಿಕೊಳ್ಳತೊಡಗಿದರು. ವಿನತೆ ಆ ಕುದುರೆ ಸಂಪೂರ್ಣ ಶ್ವೇತವರ್ಣದಿಂದ ಕೂಡಿದೆ ಎಂದಳು. ಕದ್ರೂ ಅದರ ಬಾಲ ಕಪ್ಪು ಎಂದಳು. ಮಾತು ಮಾತಿನಲ್ಲಿ ಪಂದ್ಯವೇ ಏರ್ಪಟ್ಟಿತು. ಸರಿ ನಾಳೆ ಹೋಗಿ ಪ್ರತ್ಯಕ್ಷ ನೋಡೋಣ.. ಯಾರು ಗೆಲ್ಲುವರೋ ಅವರಿಗೆ ಸೋತವರು ದಾಸಿಯಾಗಬೇಕು ಎಂಬ ಒಪ್ಪಂದವೂ ಆಯಿತು. ರಾತ್ರಿ ಕದ್ರೂ ಯೋಚನೆ ಮಾಡಿದಳು, ದೇವಕುದುರೆ ಸಂಪೂರ್ಣ ಬಿಳಿ ಎಂದು ತಿಳಿದೂ ಮಾತು ಮಾತಿನಲ್ಲಿ ಪಂಥ ಏರ್ಪಟ್ಟಿತಲ್ಲ ಸೋತರೆ ವಿನತೆಯ ದಾಸಿಯಾಗಬೇಕು ಎಂದು ಚಿಂತಿಸಿ ಮಕ್ಕಳಾದ ನಾಗಗಳನ್ನು ಕರೆದಳು. " ಮಕ್ಕಳೇ ನಿಮ್ಮ ಮಾತೆಯಾದ ನಾನು ನಿಮ್ಮ ಚಿಕ್ಕಮ್ಮನ ದಾಸಿಯಾಗಬೇಕಾದ ಸಂದರ್ಭ ಬಂದಿದೆ ಹಾಗಾಗಿ ನೀವೇ ಇದನ್ನು ತಡೆಯಬೇಕು " ಎಂದಳು. " ನಿನಗಾಗಿ ನಾವು ಏನನ್ನು ಮಾಡಬೇಕು ಹೇಳು ತಾಯಿ " ಎಂದು ಮಕ್ಕಳೆಲ್ಲ ಕೇಳಿದರು. "ಮಕ್ಕಳೇ.. ನಾಳೆ ನಾನೂ ಮತ್ತು ನಿಮ್ಮ ಚಿಕ್ಕಮ್ಮ ಕದ್ರೂ ಒಟ್ಟಾಗಿ ದೇವಾಶ್ವವಾದ ಉಚ್ಚೈಶ್ರವಸವನ್ನು ನೋಡಲು ಹೋಗುತ್ತೇವೆ. ಆ ಕಾಲಕ್ಕೆ ಕಪ್ಪಾದ ನೀವು ಹೋಗಿ ಅದರ ಬಾಲವನ್ನು ಕಚ್ಚಿಕೊಂಡು ಅದರ ಬಾಲ ಕಪ್ಪಾಗಿ ಕಾಣುವಂತೆ ಮಾಡಬೇಕು" ಎಂದಳು. ಇದನ್ನು ಕೇಳಿದ ಸರ್ಪಗಳು " ಮಾತೇ.. ತಾಯಿಯಾದವಳು ಎಂದಿಗೂ ಮಕ್ಕಳ ಹಿತವನ್ನೇ ಬಯಸಬೇಕು ಅವರಿಗೆ ಧರ್ಮದ ಮಾರ್ಗವನ್ನೇ ತಿಳಿಸಿಕೊಡಬೇಕು.. ಆದರೆ ನೀನು ಅಧರ್ಮಮಾರ್ಗ ತೋರಿಸುತ್ತಿರುವೆ ಇದು ನಮಗೆ ಸಾಧ್ಯವಾಗದು " ಎಂದು ಹೇಳಿಬಿಟ್ಟವು. ಇದನ್ನು ಕೇಳಿದ ಕದ್ರುವಿಗೆ ತಡೆಯಲಾರದ ಕೋಪ ಬಂದುಬಿಟ್ಟಿತು ತಾನೇ ಸಾಕಿ ಬೆಳೆಸಿದ ಮಕ್ಕಳು ತನ್ನ ಮಾತಿಗೆ ಪ್ರತಿಯಾಡಿಬಿಟ್ಟರಲ್ಲ.. ಪಂದ್ಯದಲ್ಲಿ ಸೋತರೆ ದಾಸಿಯಾಗುವುದೊಂದು ಕಡೆ, ಅವಳ ಕಣ್ಣುಗಳು ಕೆಂಪಾದವು ಇದನ್ನೆಲ್ಲ ಯೋಚಿಸಿ ಅವಳ ಬಾಯಲ್ಲಿ ಶಾಪವಾಕ್ಯ ಬಂದು ಬಿಟ್ಟಿತು. " ಪರೀಕ್ಷಿತ ಪುತ್ರನಾದ ಜನಮೇಜಯನು ಮಾಡುವ ಯಾಗದಲ್ಲಿ ಅಗ್ನಿಯು ನಿಮ್ಮನ್ನು ದಹಿಸಲಿ " ಎಂದು ಹೇಳಿಬಿಟ್ಟಳು. ಲೋಕದಲ್ಲಿ ನಡೆಯುವ ವಿದ್ಯಮಾನವನ್ನು ತಿಳಿಯುವ ಬ್ರಹ್ಮ ಈ ಶಾಪವಾಕ್ಯಕ್ಕೆ ಅಸ್ತು ಎಂದುಬಿಟ್ಟ. ಯಾಕೆಂದರೆ ಪ್ರಪಂಚವನ್ನೇ ಸುಡಬಹುದಾದ ಘೋರ ವಿಷವನ್ನು ಹೊಂದಿದ ಸರ್ಪಗಳು ಅದೇ ಅಹಂಕಾರದಿಂದ ಪ್ರಪಂಚದಲ್ಲಿರುವ ಜೀವರಾಶಿಗಳನ್ನು ಕಚ್ಚಿ ಕೊಲ್ಲತೊಡಗಿದರೆ ತನ್ನ ಸೃಷ್ಟಿಯೇ ನಾಶವಾಗಿ ಹೋಗುತ್ತದೆ. ಹಾಗಾಗಿ ಕಶ್ಯಪನನ್ನು ಕರೆದು ಈ ವಿಚಾರವನ್ನು ಹೇಳಿ ನಡೆದ ಘಟನೆಬಗ್ಗೆ ಬೇಸರಗೊಳ್ಳಬೇಡೆಂದು ಸಮಾಧಾನಪಡಿಸಿದ.
ಇತ್ತ ಶಾಪ ಹೊಂದಿದ ನಾಗಗಳು ಆ ರಾತ್ರಿ ಭಯದಿಂದ ಒಂದೆಡೆ ಸೇರಿದವು. ಕಾರ್ಕೋಟಕನೆಂಬ ಒಬ್ಬ ಸರ್ಪ ಪರಿಣಾಮ ಏನೇ ಆಗಲಿ ಆದರೆ ನಾಳೆ ನಾವು ತಾಯಿಯ ಮಾತನ್ನು ನಡೆಸಲು ದೇವಕುದುರೆಯ ಬಾಲವನ್ನು ಕಚ್ಚಿಕೊಂಡು ಕಪ್ಪು ಕಾಣುವಂತೆ ಮಾಡುವುದೇ ಸೂಕ್ತ ಎಂಬ ನಿರ್ಧಾರದ ಮಾತಾಡಿದ. ಅದಕ್ಕೆ ಎಲ್ಲರೂ ಒಪ್ಪಿದರು. ಮರುದಿನ ಕದ್ರೂ ವಿನತೆಯರಿಬ್ಬರೂ ಅಶ್ವವನ್ನು ನೋಡಲು ಹೋದರು.. ಕದ್ರುವಿಗೆ ತಾನು ಸೋಲುತ್ತೇನೆ ಎಂಬ ತೀರ್ಮಾನ ಆಗಿ ಹೋಗಿತ್ತು. ಆದರೆ ವಾಯುವೇಗವಾಗಿ ಸಾಗುತ್ತಿದ್ದ ಕುದುರೆಯನ್ನು ಇಬ್ಬರೂ ನೋಡಿದರು. ಆಶ್ಚರ್ಯ.. ಅದರ ಬಾಲ ಕಪ್ಪಾಗಿತ್ತು. ವಿನತೆಯ ಮುಖವೂ ಕಪ್ಪಾಯಿತು. ಅಂದು ಪುತ್ರನಾದ ಅರುಣ ಕೊಟ್ಟ ಶಾಪದ ಫಲ ಇದು ಎಂಬ ಅರಿವೂ ಆಯಿತು. ಕದ್ರೂ ಪಂಥ ಗೆದ್ದು ಬೀಗಿದಳು. ಆದರೆ ಹಿಂದೆ ತನ್ನ ಮಕ್ಕಳಿಗೆ ಕೊಟ್ಟ ಶಾಪ ಜನಮೇಜಯನ ಸರ್ಪಯಾಗಕ್ಕೆ ಇನ್ನೊಂದು ಅಡಿಗಲ್ಲು 🙏🙏
ವಿನತೆಯ ಮತ್ತೊಂದು ಮೊಟ್ಟೆಯಿಂದ ಉಧಿಸಿಬಂದವ ಗರುಡ ಇವನಿಂದ ಆಕೆಯ ದಾಸ್ಯ ನಿವಾರಣೆ ಆದದ್ದು ಇನ್ನೊಂದು ರೋಚಕ ಕಥೆ..
ಉತ್ತನ್ಕ.... ಮುಂದುವರಿದ ಭಾಗ
ಪೌಶನ ಅರಮನೆಯಿಂದ ವಿಶಿಷ್ಟವಾದ ಕರ್ಣಕುಂಡಲಗಳನ್ನು ಪಡೆದು ಹೊರಟ ಉತ್ತನ್ಕ. ಸ್ವಲ್ಪ ದೂರ ಸಾಗುವಾಗ ಯಾರೋ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಹಾಗೆ ಅನ್ನಿಸಿತು. ಹಿಂತಿರುಗಿ ನೋಡಿದರೆ ಒಬ್ಬ ದಾರಿಹೋಕ ನಗ್ನನಾಗಿ ಇವನನ್ನು ಹಿಂಬಾಲಿಸುತಿದ್ದ. ಯಾರೋ ಭಿಕ್ಷುಕ ಇರಬೇಕೆಂದು ಉಪೇಕ್ಷಿಸಿ ಮುಂದೆ ನಡೆದ. ಸ್ವಲ್ಪ ದೂರ ಕ್ರಮಿಸಿದ ಮೇಲೆ ಸಂದ್ಯಾ ವಿಧಿಗಳನ್ನು ಮಾಡಬೇಕಾದ ಸಮಯ ಬಂತು, ಅನತಿ ದೂರದಲ್ಲಿಯೇ ಕಾಣುತ್ತಿದ್ದ ಒಂದು ನದಿಯ ದಂಡೆಗೆ ತೆರಳಿ ಒಂದು ಬಂಡೆಯ ಮೇಲೆ ಕರ್ಣ ಕುಂಡಲಗಳನ್ನು ಇಟ್ಟು ನೀರಿಗೆ ಇಳಿದು ಸ್ನಾನ.. ಅರ್ಘ್ಯ ವಿಧಿಗಳನ್ನು ಪೂರೈಸಿ ಮೇಲೆ ಬಂದ. ಅನತಿ ದೂರದಲ್ಲಿ ಇವನು ಬಂಡೆಯ ಮೇಲಿಟ್ಟ ಕರ್ಣಕುಂಡಲಗಳನ್ನು ಅಲ್ಲಿಯವರೆಗೆ ಇವನನ್ನು ಹಿಂಬಾಲಿಸಿ ಬರುತಿದ್ದ ನಗ್ನ ದಾರಿಹೋಕ ಎತ್ತಿಕೊಂಡು ಧಾವಿಸಿ ಹೋಗುತ್ತಿರುವುದು ಕಾಣಿಸಿತು. ಕೂಡಲೇ ಅವನನ್ನು ಹಿಂಬಾಲಿಸಿ ಗಟ್ಟಿಯಾಗಿ ಹಿಡಿದುಕೊಂಡ... ಮರುಕ್ಷಣವೇ ಇವನ ಬಾಹುಗಳಲ್ಲಿ ಬಂದಿಯಾದ ಆ ನಗ್ನವ್ಯಕ್ತಿ ಒಂದು ಹಾವಿನ ರೂಪ ಹೊಂದಿ ಇವನ ಕೈಯಿಂದ ತಪ್ಪಿಸಿಕೊಂಡು ಒಂದು ಬಿಲದೊಳಗೆ ಇಳಿದು ಹೋಗಿಬಿಟ್ಟ. ಉತ್ತನ್ಕನಿಗೆ ಕುಂಡಲಗಳನ್ನು ಕಳೆದುಕೊಂಡ ಬೇಸರದೊಂದಿಗೆ ಅದನ್ನು ಅಪಹರಿಸಿದವ ತಕ್ಷಕ ಎಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಹಾಗಿದ್ದರೆ ಅವನು ಇಳಿದು ಹೋದ ಬಿಲದಲ್ಲಿಯೇ ಮುಂದೆ ಹೋಗಬೇಕೆಂದು ಯೋಚಿಸಿ ಪಕ್ಕದಲ್ಲಿ ನೋಡಿದಾಗ ಒಂದು ಪಾಲಾಷ ದಂಡ ಕಾಣಿಸಿತು. ಅದನ್ನೇ ಹಿಡಿದು ಬಿಲ ದ್ವಾರವನ್ನು ಅಗೆಯುತ್ತ ಮುಂದೆ ಸಾಗಿದ... ಸಾಗುತ್ತಾ ಸಾಗುತ್ತಾ ಆ ಬಿಲ ಮಾರ್ಗ ನೇರವಾಗಿ ನಾಗಲೋಕಕ್ಕೆ ಕೊಂಡಯ್ದಿತು. ಉತ್ತನ್ಕ ವಿಶಿಷ್ಟವಾದ ಸೌಧಗಳಿಂದ ಕೂಡಿದ ನಾಗಲೋಕವನ್ನು ನೋಡಿದ. ತಮ್ಮ ಪೂತ್ಕಾರದಿಂದಲೇ ಜೀವಿಗಳನ್ನು ನಾಶಮಾಡಿಬಿಡಬಲ್ಲ
ವಿಷಸರ್ಪಗಳ ಸಂಚಾರವನ್ನೂ ನೋಡಿದ, ತನ್ನಿಂದ ಕುಂಡಲಗಳನ್ನು ಅಪಹರಿಸಿ ಹೋದ ತಕ್ಷಕ ಎಲ್ಲಿದ್ದಾನೆ ಎನ್ನುವುದನ್ನು ಹುಡುಕಲು ಅವನಿಗೆ ಸಾಧ್ಯವಾಗಲಿಲ್ಲ. ಆದರೂ ದೃತಾರಾಷ್ಟ್ರ.. ತಕ್ಷಕ.. ಐರಾವತ.. ಶ್ರುತಸೇನ ಎಂಬ ನಾಗ ಪ್ರಮುಖರ ನಾಮ ಸ್ತೋತ್ರ ಮಾಡುತ್ತಾ ಉರಗ ಲೋಕದಲ್ಲಿ ಅಲೆದಾಡಿದ.. ಆದರೆ ಕಳೆದುಕೊಂಡ ಕುಂಡಲ ಅವನಿಗೆ ಸಿಗಲಿಲ್ಲ.. ಒಂದು ಪ್ರಯೋಜನ ಆಯಿತು ಸ್ತೋತ್ರ ಆಲಿಸಿದ ನಾಗಗಳು ಇವನಿಗೆ ತೊಂದರೆ ಮಾಡಲಿಲ್ಲ. ಹಾಗೆಯೇ ಮುಂದೆ ಸಾಗುತ್ತಿರುವಾಗ ಇಬ್ಬರು ಸ್ತ್ರೀಯರು ಹಲವು ಧಾರಗಳನ್ನು ಕೈಯಲ್ಲಿ ಹಿಡಿದು ಬಟ್ಟೆಯನ್ನು ನೇಯುತ್ತಿರುವುದನ್ನು ನೋಡಿದ ಅವರು ಕೈಯಲ್ಲಿ ಹಿಡಿದ ಧಾರಗಳ ಅರ್ಧ ಭಾಗ ಕಪ್ಪು ಉಳಿದರ್ದ ಭಾಗ ಬೆಳ್ಳಗೆ ಇತ್ತು. ಅಲ್ಲಿಯೇ ಆರುಜನ ಹುಡುಗರು ಹನ್ನೆರಡು ಗೂಟಗಳಿರುವ ಒಂದು ಚಕ್ರವನ್ನು ತಿರುಗಿಸುತ್ತಾ ಇದ್ದರು. ಸ್ವಲ್ಪ ಮುಂದೆ ಸುಂದರವಾದ ಒಂದು ಕುದುರೆಯನ್ನು ಏರಿ ಒಬ್ಬ ವ್ಯಕ್ತಿ ಬರುತ್ತಿರುವುದನ್ನು ನೋಡಿದ. ಅವನನ್ನು ನೋಡಿದಾಕ್ಷಣ ಉತ್ತನ್ಕ ಅವನನ್ನೂ ಸ್ತುತಿ ಮಾಡತೊಡಗಿದನು. ಇವನ ಸ್ತುತಿಯಿಂದ ಸಂತುಷ್ಟನಾದ ಆ ಪುರುಷ ಏನಾಗಬೇಕು ಎಂದು ಪ್ರಸನ್ನಚಿತ್ತದಿಂದ ಕೇಳಿದ.. ಸ್ವಾಮೀ ನನಗಾಗಿ ಏನಾದರೂ ಮಾಡಬೇಕೆಂಬ ಮನವಿದ್ದರೆ ಈ ನಾಗಲೋಕದ ಉರಗಗಳೆಲ್ಲವೂ ನನಗೆ ಶರಣಾಗುವಂತೆ ಮಾಡು ಎಂದು ಕೇಳಿದ. ಅದನ್ನು ಕೇಳಿದ ಆ ಮಹಾಪುರುಷ ಹಾಗಗಬೇಕೆಂದರೆ ಈ ಕುದುರೆಯ ಹಿಂಭಾಗವನ್ನು ಊದು ಎಂದು ಹೇಳಿದ. ಉತ್ತನ್ಕ ಹಾಗೇ ಮಾಡಲು ಆ ಕುದುರೆಯ ನವದ್ವಾರಗಳಿಂದಲೂ ಹೊಗೆಯಿಂದ ಕೂಡಿದ ಅಗ್ನಿಜ್ವಾಲೆ ಹೊರಸೂಸತೊಡಗಿತು.. ಇನ್ನೇನು ಸರ್ಪಲೋಕವನ್ನೇ ವ್ಯಾಪಿಸಿಬಿಡುತ್ತದೋ ಎನ್ನುವ ಸಂದರ್ಭದಲ್ಲಿ ತಕ್ಷಕ ಓಡೋಡಿ ಬಂದು ನಿನಗೆ ಬೇಕಾದ ಕುಂಡಲಗಳು ಇದೋ ಇಲ್ಲಿದೆ ಎಂದು ಕೊಟ್ಟು ಹೊರಟು ಹೋಗಿಬಿಟ್ಟ. ಉತ್ತನ್ಕನಿಗೆ ಸಂತೋಷವಾಯಿತು. ಜೊತೆಗೆ ಮತ್ತೆ ದುಗುಡ ಆವರಿಸಿತು. ಅಂದು ಆಶ್ರಮದಿಂದ ಹೊರಡುವಾಗ "ಇಂದಿಗೆ ಸರಿಯಾಗಿ ನಾಲ್ಕು ದಿನಕ್ಕೆ ಮಂಗಳ ದಿನವೊಂದು ಇದೆ ಅಂದು ಕುಂಡಲಗಳನ್ನು ಧರಿಸುತ್ತೇನೆ" ಎಂದು ಗುರುಪತ್ನಿ ಹೇಳಿದ್ದರು ಆದರೆ ಇಂದಿಗೆ ಮೂರು ದಿನಗಳು ಕಳೆದು ಹೋಯಿತು ಇನ್ನೊಂದು ದಿನದಲ್ಲಿ ಅಲ್ಲಿಗೇ ಹೋಗುವುದಾದರು ಹೇಗೆ ಎಂಬ ಚಿಂತೆ ಅವನನ್ನು ಆವರಿಸಿತು. ಇವನ ಚಿಂತೆಯನ್ನು ಅರಿತ ಅಶ್ವಾರೋಹಿ ವ್ಯಕ್ತಿ ತನ್ನ ಕುದುರೆಯನ್ನೇ ಏರುವಂತೆ ಸೂಚಿಸಿದ. ಕುದುರೆಯನ್ನು ಏರುತಿದ್ದಂತೆ ಮನೋವೇಗದಲ್ಲಿ ಕುದುರೆ ಸಾಗಿ ಗುರುಗಳ ಆಶ್ರಮಕ್ಕೆ ಬಂದುಬಿಟ್ಟಿತು. ಉತ್ತನ್ಕ ಕುದುರೆಯನ್ನು ಇಳಿಯುತ್ತಲೇ ಕುದುರೆಯೂ.. ಜೊತೆಗಿದ್ದ ವ್ಯಕ್ತಿಯೂ ಅದೃಶ್ಯರಾಗಿಹೋದರು. ಇತ್ತ ಉತ್ತನ್ಕನ ನಿರೀಕ್ಷೆಯಲ್ಲಿಯೇ ಇದ್ದ ಗುರುಪತ್ನಿಯನ್ನು ಕಂಡು ಕುಂಡಲಗಳನ್ನು ಮುಂದಿಟ್ಟು ನಮಸ್ಕರಿಸಿದ. ಆನಂದಭರಿತಳಾದ ಗುರುಮಾತೆ ಉತ್ತನ್ಕನನ್ನು ಮನಸಾರೆ ಹರಸಿದಳು. ಅವಳ ಆಶೀರ್ವಾದ ಪಡೆದು ಗುರುಗಳ ಬಳಿಗೆ ಬಂದು ನಮಸ್ಕರಿಸಿದ.. ಗುರುಗಳು ವಿಳಂಬವಾಗಲು ಕಾರಣ ಕೇಳಿದರು.. ಆಗ ನಡೆದ ಘಟನೆ ವಿವರಿಸಿ ಹೇಳಿದ ಮತ್ತು ತಾನು ಕಂಡ ವಿಚಿತ್ರ ದೃಶ್ಯಗಳನ್ನು ಹೇಳಿ ಅದರ ಹಿನ್ನಲೆ ಏನೆಂದು ಕೇಳಿದ. ಆಗ ಗುರುಗಳು ಒಂದೊಂದಾಗಿ ಹೇಳಿದರು "ಮೊದಲಾಗಿ ಪೌಶನ ಅರಮನೆಗೆ ಸಾಗುವಾಗ ವೃಷಭವನ್ನೇರಿ ಬಂದವ ಇಂದ್ರ.. ವೃಷಭರೂಪದಲ್ಲಿದ್ದುದೆ ಐರಾವತ.. ನೀನು ಸೇವಿಸಿದ ಅದರ ಸಗಣಿ ಮೂತ್ರವೇ ಅಮೃತ ಹಾಗಾಗಿಯೇ ನಿನಗೆ ಉರಗಲೋಕದಲ್ಲಿ ವಿಷದ ಪರಿಣಾಮ ಆಗಲಿಲ್ಲ. ಇಂದ್ರ ನನ್ನ ಮಿತ್ರ ಹಾಗಾಗಿ ನಿನಗೆ ಅನುಕೂಲ ಮಾಡಿದ. ಇನ್ನು ನೀನು ತಕ್ಷಕನನ್ನು ಹಿಂಬಾಲಿಸಿ ಹೋಗಲು ಬಿಲವನ್ನು ಅಗೆಯಲು ನಿನ್ನ ಕೈಗೆ ಸಿಕ್ಕಿದ ಪಲಾಶದಂಡವು ಇಂದ್ರನ ವಜ್ರ ಆಯುಧ, ಮತ್ತೆ ನಾಗಲೋಕದಲ್ಲಿ ಇಬ್ಬರು ಸ್ತ್ರೀಯರು ಬಟ್ಟೆ ನೇಯುವುದನ್ನು ನೋಡಿದೆಯಲ್ಲಾ ಅವರು ಧಾತ್ರಿ-ವಿಧಾತ್ರಿ ಎಂಬುವವರು. ಅವರನ್ನು ಎರಡು ಅಯನಗಳೆಂದು ಬಾವಿಸು. ಅವರು ಕೈಯಲ್ಲಿ ಹಿಡಿದ ದಾರಗಳೆ ದಿನಗಳು.. ದಾರದ ಬಿಳಿ ಕಪ್ಪು ಬಣ್ಣವೇ ಹಗಲು ರಾತ್ರಿ.. ಅದರಿಂದ ಸಿದ್ದವಾಗುವ ಬಟ್ಟೆಯೇ ಸಂವತ್ಸರ.. ಚಕ್ರ ತಿರುಗಿಸುತಿದ್ದ ಆರು ಹುಡುಗರೇ ಋತುಗಳು. 12 ಗೂಟವನ್ನು ಹೊಂದಿದ ಚಕ್ರವೇ 12 ಮಾಸ. ಅಶ್ವರೋಹಿಯಾಗಿ ಬಂದು ನಿನಗೆ ಸಹಕರಿಸಿದವನೇ ಪರ್ಜನ್ಯದೇವ ಅವನೇರಿದ ಅಶ್ವವೇ ಅಗ್ನಿದೇವ. ಇವರೆಲ್ಲರೂ ನಿನ್ನನ್ನು ಮೆಚ್ಚಿ ಸಹಕರಿಸಿದ ಕಾರಣ ನೀನು ಈ ಕಾರ್ಯದಲ್ಲಿ ಯಶಸ್ವಿಯಾಗಲು ಸಾಧ್ಯ ವಾಯಿತು" ಎಂದರು. ಇನ್ನು ನಿನ್ನ ಗುರುಕುಲ ವಾಸವೆಂಬುದು ಮುಗಿಯಿತು ಒಳ್ಳೆಯ ಗುರಿಯನ್ನು ಅರಸಿ ಶ್ರೇಯೋವಂತನಾಗಿ ಬಾಳು ಎಂದು ಹರಸಿದರು. ಗುರುಗಳ ಮಾತನ್ನು ಕೇಳಿದ ಉತ್ತನ್ಕನಿಗೆ ಸಂತೋಷವಾಯಿತು, ಗುರುಗಳ ಆಶೀರ್ವಾದ ಪಡೆದು ಆಶ್ರಮದಿಂದ ಹೊರಟ. ಹೊರಡುವಾಗಲೇ ವಿನಾಕಾರಣ ತನ್ನ ಕಾರ್ಯದಲ್ಲಿ ಅಡ್ಡಿಯಾದ ತಕ್ಷಕನಿಗೆ ಸರಿಯಾದ ಶಿಕ್ಷೆ ಕೊಡಬೇಕು ಉರಗರೆಲ್ಲರೂ ದುಷ್ಟರು ಇವರ ನಾಶ ಆಗಬೇಕು ಎಂಬ ನಿರ್ಣಯ ಮನಸ್ಸಿನಲ್ಲಿ ಸ್ಥಿರವಾಗಿ ಹೋಯಿತು....
ಈ ಘಟನೆ ಜನಮೇಜಯನ ಸರ್ಪಯಾಗಕ್ಕೆ ಒಂದು ಅಡಿಗಲ್ಲು.. ಇನ್ನೂ ಎಷ್ಟು ಕಲ್ಲುಗಳು ಬೀಳುತ್ತದೆ ಮುಂದೆ ನೋಡೋಣ 🙏🙏
ಉತ್ತನ್ಕ.. ಮುಂದಿನ ಭಾಗ
ವೇದ ಶಿಷ್ಯನಾದ ಉತ್ತನ್ಕ ಗುರುಪತ್ನಿ ಕೇಳಿದ ಗುರುದಕ್ಷಿಣೆಯನ್ನು ತಂದೊಪ್ಪಿಸಲು ಅತ್ಯಂತ ಸಂತೋಷದಿಂದ ಪೌಷನ ನಗರಿಗೆ ಹೊರಡುತ್ತಾನೆ. ಅವನು ಸಾಗಿ ಬರುವ ಮಾರ್ಗದಲ್ಲಿ ಎತ್ತರವಾದ ಒಂದು ಎತ್ತನ್ನು ಏರಿ ಒಬ್ಬ ದೃಢಕಾಯ ಬರುತ್ತಿದ್ದನು. ಎದುರಾಗಿ ಬಂದ ಉತ್ತನ್ಕನನ್ನು ನೋಡಿ " ಅಯ್ಯಾ ಬ್ರಾಹ್ಮಣ ನೀನು ಮುಂದೆ ಸಾಗಬೇಕೆಂದರೆ ನಾನು ಏರಿದ ಈ ವೃಷಭದ ಸಗಣಿ ಮತ್ತು ಮೂತ್ರವನ್ನು ಸೇವಿಸಿ ಹೋಗು " ಎನ್ನುತ್ತಾನೆ. ಆಗ ಉತ್ತನ್ಕ ನಿರಾಕರಿಸಿದಾಗ, ನಿನ್ನ ಗುರುಗಳೂ ಹೀಗೇ ಮಾಡಿದ್ದರು ಎನ್ನುತ್ತಾನೆ. ಅದನ್ನು ಕೇಳಿದ ಉತ್ತನ್ಕ ಗುರುಗಳು ಸೇವಿಸಿದ್ದಾರೆ ಎಂದರೆ ನನಗೂ ಅದು ಆದೀತು ಎಂದು ಹೇಳಿ ವೃಷಭದ ಸಗಣಿ ಮತ್ತು ಗಂಜಲವನ್ನು ಸೇವಿಸಿ ಆತುರಾತುರದಲ್ಲಿ ಆಚಮನ ಮುಗಿಸಿ ಮುಂದೆ ಸಾಗುತ್ತಾನೆ. ( ಇಲ್ಲಿ ಹೇಳಬೇಕಾದ ಇನ್ನೊಂದು ವಿಷಯವೇನೆಂದರೆ ವ್ಯಾಸಭಾರತದಲ್ಲಿಯೇ ಈ ಘಟನೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿದೆ, ಆದಿಪರ್ವದಲ್ಲಿ ಉತ್ತನ್ಕ ವೇದ ಶಿಷ್ಯನೆಂದೂ.. ಅವನು ಪೌಷರಾಜನ ಪತ್ನಿಯ ಕುಂಡಲವನ್ನು ತಂದು ಕೊಟ್ಟನೆಂದೂ.. ಅದೇ ವ್ಯಾಸ ಭಾರತದ ಅಶ್ವಮೇಧಿಕ ಪರ್ವದಲ್ಲಿ ಉತ್ತನ್ಕ ಗೌತಮರ ಶಿಷ್ಯನೆಂದೂ ಅಹಲ್ಯೆಯ ಆಸೆಯಂತೆ ಸೂರ್ಯ ವಂಶದ ಸೌದಾಸ ಅಥವಾ ಕಲ್ಮಾಷಪಾದನ ಹೆಂಡತಿಯಾದ ಮದಯಂತಿಯ ಕುಂಡಲವನ್ನು ತಂಡನೆಂದು ಹೇಳಲಾಗಿದೆ. ಪ್ರಸ್ತುತ ನಾನು ಪೌಷ ರಾಜನೆಂದೇ ಭಾವಿಸಿ ಪ್ರಸ್ತುತ ಪಡಿಸುತ್ತಿದ್ದೇನೆ)
ವೃಷಭಾರೋಹಿ ಹೇಳಿದಂತೆ ಮುಂದೆ ಸಾಗಿದ ಉತ್ತನ್ಕ ನೇರವಾಗಿ ಪೌಷ ಅಳುತ್ತಿದ್ದ ನಗರಕ್ಕೆ ಬರುತ್ತಾನೆ. ರಾಜನ ಭೇಟಿ ಮಾಡಿದಾಗ ಪೌಷ ರಾಜ ಸಂತೋಷದಿಂದ ಆತಿಥ್ಯ ನೆರವೇರಿಸುತ್ತಾನೆ. ತಾವು ಬಂದ ಉದ್ದೇಶ ಏನೆಂದು ಕೇಳಿದಾಗ ಗುರುದಕ್ಷಿಣೆಯಾಗಿ ಸಲ್ಲಿಸಲು ನಿನ್ನ ಹೆಂಡತಿಯ ಕರ್ಣಕುಂಡಲಗಳನ್ನು ನೀಡಬೇಕು ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಪೌಷರಾಜ ಅತ್ಯಂತ ಸಂತೋಷದಿಂದಲೇ ಒಪ್ಪಿ ಅಂತಃಪುರದಲ್ಲಿರುವ ತನ್ನ ಪತ್ನಿಯನ್ನು ಕಾಣಲು ಕಳುಹಿಸಿ ಕೊಡುತ್ತಾನೆ. ರಾಣಿಯ ಅಂತಃಪುರಕ್ಕೆ ತೆರಳಿದ ಉತ್ತನ್ಕನಿಗೆ ಅಲ್ಲಿ ರಾಣಿ ಕಾಣಸಿಗುವುದಿಲ್ಲ ಕೋಪದಿಂದ ಹಿಂತಿರುಗಿ ರಾಜನಲ್ಲಿಗೆ ಬಂದು ನಿಂದಿಸಿ ಮಾತಾಡುತ್ತಾನೆ. ಅಂತಃಪುರದಲ್ಲಿಯೇ ಇರುವ ರಾಣಿ ಉತ್ತನ್ಕನಿಗೆ ಕಾಣದೆ ಇರುವುದು ಏಕೆಂದು ಊಹಿಸಿದ ಅರಸ " ಮಹಾ ಪತಿವ್ರತೆಯಾದ ನನ್ನ ಹೆಂಡತಿ ಪರರಿಗೆ ಕಾಣಿಸಿಕೊಳ್ಳಬೇಕಾದರೆ ಬಂದವನು ತನುಮನದಲ್ಲಿ ಶುದ್ಧನಾಗಿರಬೇಕು ಬಹುಷಃ ನಿಮ್ಮಲ್ಲಿಯೇ ಏನೋ ಕಲ್ಮಶ ಇರಬೇಕು " ಎಂದಾಗ ಉತ್ತನ್ಕನಿಗೆ ಮಾರ್ಗದಲ್ಲಿ ನಡೆದ ಘಟನೆ ನೆನಪಾಗುತ್ತದೆ. ಆತುರಾತುರದಲ್ಲಿ ವೃಷಭದ ಸಗಣಿ ಗಂಜಲವನ್ನು ಸ್ವೀಕರಿದವ ನಿಂತೇ ಆಚಮನ ಮಾಡಿ ಇತ್ತ ಸಾಗಿ ಬಂದಿದ್ದ. ರಾಜ ಹೇಳಿದ್ದು ಸರಿ ಎಂದು ತಿಳಿದು ನೇರವಾಗಿ ನದಿ ತೀರಕ್ಕೆ ಹೋಗಿ ಸ್ನಾನ ಸಂದ್ಯಾವಂದನೆಗಳನ್ನು ಪೂರೈಸಿ ಮತ್ತೆ ರಾಣಿಯ ಅರಮನೆಗೆ ಬಂದ. ಅರಮನೆಯಲ್ಲಿಯೇ ಇದ್ದ ಮಹಾರಾಣಿ ಉತ್ತನ್ಕನನ್ನು ಸ್ವಾಗತಿಸಿ ಸತ್ಕರಿಸಿದಳು. ರಾಣಿಯಲ್ಲಿ ತಾನು ಬಂದ ಉದ್ದೇಶ ತಿಳಿಸಿದಾಗ ಅತ್ಯಂತ ಸಂತೋಷದಿಂದಲೇ ಕರ್ಣಕುಂಡಲಗಳನ್ನು ತೆಗೆದು ಕೊಟ್ಟಳು, ಜೊತೆಗೆ ಒಂದು ಎಚ್ಚರಿಕೆಯ ಮಾತನ್ನೂ ಹೇಳಿದಳು "ಈ ವಿಶೇಷವಾದ ಕರ್ಣ ಕುಂಡಲಗಳನ್ನು ಅಪಹರಣ ಮಾಡಲು ನಾಗರಾಜನಾದ ತಕ್ಷಕ ಬಹಳ ಕಾಲದಿಂದ ಪ್ರಯತ್ನ ಮಾಡುತ್ತಿದ್ದಾನೆ ಹಾಗಾಗಿ ಬಹಳ ಎಚ್ಚರ ಇರಲಿ" ಎಂದಳು. ತಕ್ಷಕ ತನಗೇನು ಮಾಡಲಾರ ಎಂದು ಹೇಳಿ ಅವಳಿಂದ ಬೀಳ್ಕೊಂಡು ಮತ್ತೆ ಅರಸನಲ್ಲಿಗೆ ಬಂದ, ಇವನನ್ನು ಬರಮಾಡಿಕೊಂಡ ಅರಸ ತನ್ನ ಬಯಕೆಯನ್ನು ಹೇಳಿಕೊಂಡ. " ನಿಮ್ಮಂತಹ ಮಹಾತ್ಮರ ದರ್ಶನ ಅಪರೂಪಕ್ಕೆ ಆಗುವಂತದ್ದು.. ಹಾಗಾಗಿಯೇ ನಿಮ್ಮಂಥವರು ಅತಿಥಿಯಾಗಿ ಆಗಮಿಸಿದಾಗ ಶ್ರಾದ್ದ ಮಾಡಲು ಸರಿಯಾದ ಸಂದರ್ಭ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ, ಹಾಗಾಗಿ ನಾನಿಂದು ಮಾಡುವ ಶ್ರಾದ್ದಕ್ಕಾಗಿ ಅವಕಾಶ ಮಾಡಿಕೊಟ್ಟು ಸತ್ಕಾರ ಸ್ವೀಕರಿಸಿ ಹರಸಬೇಕು ಎಂದು ಕೇಳಿಕೊಂಡ. ಆಯಿತು ಎಂದು ಅನುಮತಿಸಿದ ಉತ್ತನ್ಕನನ್ನು ಸತ್ಕರಿಸಿ ನೈವೇದ್ಯ ಅರ್ಪಿಸಲು ಭೋಜನಶಾಲೆಗೆ ಕರೆದುಕೊಂಡು ಹೋದನು. ಭೋಜನಕ್ಕೆ ಕುಳಿತ ಉತ್ತನ್ಕನಿಗೆ ಬಡಿಸಿದ ಅನ್ನದಲ್ಲಿ ಕೂದಲು ಇದ್ದದ್ದನ್ನು ಕಂಡನು, ಒಮ್ಮೆಲೇ ಕೋಪದಿಂದ " ಪರಿಶುದ್ಧ ಅನ್ನವನ್ನು ಬಡಿಸಬೇಕಾದ ನೀನು ಅಪರಿಶುದ್ಧವಾದ ಅನ್ನವನ್ನು ಬಡಿಸಿದ್ದಿ ಇದಕ್ಕೆ ನ್ನಿನ್ನ ಔದಾಸೀನ್ಯವೇ ಕಾರಣ ಹಾಗಿದ್ದರೆ ನಿನಗೆ ಕಣ್ಣುಗಳು ಇಲ್ಲವೇ.. ಕಣ್ಣುಗಳು ಇದ್ದೂ ಹೀಗೆ ಮಾಡಿದ ನೀನು ಕುರುಡನಾಗಿ ಹೋಗು " ಎಂದು ಶಪಿಸಿಬಿಟ್ಟ. ಇದನ್ನು ಕೇಳಿದ ರಾಜನಿಗೂ ಕೋಪ ಬಂತು. " ನಾನು ಪರಿಶುದ್ಧ ಎಂದು ಭಾವಿಸಿಯೇ ಬಡಿಸಿದ ಅನ್ನ ಆದರೂ ವಿವೇಚನೆ ಇಲ್ಲದೆ ಶಪಿಸಿದೆ.. ಪ್ರತಿಯಾಗಿ ನಾನು ಶಾಪ ಕೊಡುವೆ.. ಮುಂದೆ ನಿನಗೆ ಮಕ್ಕಳಾಗದೆ ಹೋಗಲಿ " ಎಂದು ಹೇಳಿಬಿಟ್ಟ. ಶಾಪ ಪ್ರಧಾನದಿಂದ ಇಬ್ಬರ ಮನಸ್ಸಿಗೂ ಬೇಸರವಾಯಿತು, ಅನ್ನದಲ್ಲಿದ್ದ ಕೂದಲನ್ನು ಉತ್ತನ್ಕ ತೋರಿಸಿದ.. ಆಗ ಪೌಷ ಕ್ಷಮೆ ಕೇಳಿದ ತನ್ನನ್ನು ಕುರುಡನನ್ನಾಗಿ ಮಾಡಬೇಡ ಎಂದು ಕೇಳಿಕೊಂಡ.. ಆಗ ನಿನ್ನ ಕುರುಡುತನ ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಉತ್ತನ್ಕ ಹೇಳಿದ. ಪ್ರತಿಯಾಗಿ ಪೌಷ ಹೇಳಿದ.. "ಸ್ವಾಮಿ ನಿಮ್ಮ ಮಾತು ಕಠಿಣವಾದರೂ ಹೃದಯ ಬೆಣ್ಣೆಯಂತೆ. ಆದರೆ ನಾನು ಕ್ಷತ್ರಿಯ ನನ್ನ ಮಾತು ಮೃದು ಹೃದಯದಲ್ಲಿ ಕಠಿಣತೆ ನೆಲೆಗೊಂಡಿದೆ.. ಹಾಗಾಗಿ ಶಾಪ ಹಿಂದೆ ಪಡೆಯಲು ಅಸಾಧ್ಯ " ಉತ್ತನ್ಕ ನಗುತ್ತ ಹೇಳಿದ "ಮಹಾರಾಜಾ ನೀನು ಶಾಪ ಹಿಂಪಡೆಯದೇ ಇದ್ದರೂ ಅದರ ಪರಿಣಾಮ ನನ್ನ ಮೇಲೆ ಆಗುವುದಿಲ್ಲ ಯಾಕೆಂದರೆ ಬಡಿಸಿದ ಅನ್ನ ಅಪರಿಶುದ್ಧ ಎಂದು ಹೇಳಿದರೂ ಪರೀಕ್ಷೆ ಮಾಡದೇ ನನಗೆ ಶಪಿಸಿದೆ ಹಾಗಾಗಿ ನಿನ್ನ ಶಾಪ ನನಗೇನು ಮಾಡದು... ಹಾಗಾಗಿ ಮುಂದೆ ನಮ್ಮ ನಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳೋಣ" ಎಂದು ಹೇಳಿ ಪೌಷನನ್ನು ಬೀಳ್ಕೊಂಡು ಹೊರಟ.
ಈ ಕಂತಿನಲ್ಲಿ ಇಷ್ಟೇ ಸಾಕು... ಒಂದು ಕಡೆ ದೂರದರ್ಶನದಲ್ಲಿ ಭಾರತ ಪಾಕಿಸ್ತಾನದ ಯುದ್ಧದ ವಾರ್ತೆ.. ಉತ್ತನ್ಕನ ಮುಂದಿನ ಪ್ರಯಾಣ.. ಮುಂದಿನ ಬರಹಕ್ಕೆ.. 🙏🙏
ವೇದ ಮತ್ತು ಉತ್ತನ್ಕ
ಆಯೋದದೌಮ್ಯರ ಮೂರನೆಯ ಶಿಷ್ಯ ವೇದ, ಸದಾ ಭಕ್ತಿಯಿಂದ ಗುರುಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡವ.ಆಶ್ರಮದಲ್ಲಿ ಯಾವ ಕೆಲಸವೇ ಆಗಲಿ ಭಕ್ತಿಯಿಂದ ಮಾಡಿ ಮುಗಿಸುತ್ತಿದ್ದ, ಬಹಳ ಸಾಧು ಸ್ವಭಾವದವನೂ ಆಗಿದ್ದ. ಉಳಿದ ಶಿಷ್ಯರು ಹೊಲದ ಕೆಲಸಗಳಲ್ಲಿ ಎತ್ತಿನ ಬದಲಿಗೆ ಇವನನ್ನೇ ಕಟ್ಟಿ ಉಳುತ್ತಿದ್ದರು. ಆದರೂ ತನಗಾಗುವ ಆಯಾಸ ನೋವುಗಳನ್ನು ಸಹಿಸಿಕೊಂಡು ಇರುತ್ತಿದ್ದ. ಹಲವು ದಿನ ಇದನ್ನು ಗಮನಿಸುತ್ತಿದ್ದ ಗುರುಗಳು ಒಂದು ದಿನ ಸಂತುಷ್ಟರಾಗಿ ಸರ್ವಜ್ಞತ್ವವನ್ನು ಹೊಂದು ಎಂದು ಹರಸಿ ಬೀಳ್ಕೊಟ್ಟರು. ಮುಂದೆ ವೇದನು ಬ್ರಹ್ಮಚರ್ಯಾಶ್ರಮವನ್ನು ತೊರೆದು ಅನುರೂಪಳಾದ ಕನ್ನಿಕೆಯ ಕೈಹಿಡಿದು ಗೃಹಸ್ಥನಾದನು. ಬಳಿಕ ಇವನಲ್ಲಿಯೂ ಹಲವು ಶಿಷ್ಯರು ವಿದ್ಯಾರ್ಜನೆಗೋಸ್ಕರ ಬಂದು ಆಶ್ರಯಿಸಿದರು. ಆದರೆ ತಾನು ಗುರುಕುಲವಾಸದಲ್ಲಿ ಅನುಭವಿಸಿದ ಕಷ್ಟದ ದಿನಗಳನ್ನು ನೆನಪಿಸಿಕೊಂಡ ವೇದನು ತನ್ನ ಶಿಷ್ಯರಿಗೆ ಯಾವುದೇ ಕೆಲಸವನ್ನೂ ಹೇಳುತ್ತಿರಲಿಲ್ಲ. ಹೀಗೆಯೇ ದಿನಗಳು ಕಳೆಯುತ್ತಿರುವಾಗ ಒಮ್ಮೆ ವೇದನು ಕಾರ್ಯಾರ್ಥವಾಗಿ ಕೆಲವು ದಿನಗಳ ಕಾಲ ಆಶ್ರಮವನ್ನು ತೊರೆಯಬೇಕಾದ ಅನಿವಾರ್ಯತೆ ಒದಗುತ್ತದೆ. ಆಗ ತನ್ನ ಶಿಷ್ಯರಲ್ಲೊಬ್ಬನಾದ ಉತ್ತನ್ಕನನ್ನು (ನಿಜವಾಗಿ ಉತ್ತನ್ಕ ಎಂದು ಬರೆಯುವುದಲ್ಲ "ನ್ಕ" ದ ಬದಲು"ಘ " ದ ನಂತರ ಬರುವ ಅಕ್ಷರಕ್ಕೆ ಕ ವನ್ನು ಒತ್ತಕ್ಷರವಾಗಿ ಬಳಸಬೇಕು.. ಆದರೆ ಕೀಲಿಮಣೆಗೆ ಹಾಗೊಂದು ಅಕ್ಷರ ಇದೆ ಎಂದು ಗೊತ್ತಿಲ್ಲ ) ಕರೆದು ಹೇಳಿದರು " ಕುಮಾರ ನಾನು ಕಾರ್ಯಾರ್ಥದಿಂದ ಕೆಲವು ದಿನ ಆಶ್ರಮದಲ್ಲಿ ಇರುವುದಿಲ್ಲ ಹಾಗಾಗಿ ಕಾಲಕಾಲಕ್ಕೆ ಹೊಣೆಯರಿತು ಆಶ್ರಮದ ಕೆಲಸಗಳನ್ನು ನೀನು ಮಾಡಬೇಕು " ಎಂದು ಹೇಳಿ ಹೊರಟರು.
ಉತ್ತನ್ಕನಿಗೆ ಬಹಳ ಸಂತೋಷವಾಯಿತು, ಎಂದೂ ಕೆಲಸ ಹೇಳದಿದ್ದ ಗುರುಗಳು ಇಂದು ಹೇಳಿದರು.. ಅದೂ ಉಳಿದವರು ಇದ್ದರೂ ನನಗೇ ಹೇಳಿದರು (ಈಗಿನ ಕಾಲವಾದರೆ ಉಳಿದವರಿದ್ದೂ ನನಗೇ ಹೇಳಿದರಲ್ಲಾ ಎಂಬ ಬೇಸರವೇ ಆಗುತಿತ್ತು) ಹಾಗಾಗಿ ಬಹಳ ಶ್ರದ್ಧೆಯಿಂದಲೇ ಆಶ್ರಮದ ಕೆಲಸಗಳಲ್ಲಿ ತೊಡಗಿಕೊಂಡ. ಒಂದು ದಿನ ಗುರುಪತ್ನಿಯ ಜೊತೆಯಲ್ಲಿದ್ದ ಕೆಲವು ಸ್ತ್ರೀಯರು ಇವನ ಬಳಿಗೆ ಬಂದು " ಋತುಸ್ನಾತೆಯಾದ ಗುರುಪತ್ನಿಯು ಇಂದು ಋತುಸ್ನಾನವನ್ನು ಪೂರೈಸಿದ್ದಾರೆ.. ಗುರುಗಳು ಆಶ್ರಮದಲ್ಲಿ ಇಲ್ಲದ ಕಾರಣ ಋತುಕಾಲವು ವ್ಯರ್ಥವಾಗುವುದಲ್ಲಾ ಎಂಬ ಬೇಸರದಲ್ಲಿದ್ದಾರೆ ಹಾಗಾಗಿ ಗುರುವಿನ ಆಣತಿಯಂತೆ ಆಶ್ರದ ಹೊಣೆ ಹೊತ್ತ ನೀನು ಗುರುಪತ್ನಿಯ ಆಸೆಯನ್ನು ನೆರವೇರಿಸು ಇದರಿಂದ ಗುರುಗಳಿಗೂ ಗುರುಪತ್ನಿಗೂ ಸಂತೋಷವಾಗುತ್ತದೆ" ಎಂದರು. ಆಗ ಉತ್ತನ್ಕ "ತಾಯಂದಿರೆ ಗುರುವನ್ನು ನನ್ನ ತಂದೆ ಎಂದು ಭಾವಿಸಿದ್ದೇನೆ ಹಾಗಾಗಿ ಗುರುಪತ್ನಿ ನನಗೆ ಮಾತೆಯೇ ಹೌದು, ಅಧರ್ಮದ ದಾರಿಯಲ್ಲಿ ನಾನೆಂದೂ ಸಾಗಲಾರೆ ಅಂತಹ ಹೇಯವಾದ ಕಾರ್ಯಕ್ಕೆ ನನ್ನ ಮನಸ್ಸು ಎಂದೂ ಒಳಪಡುವುದಿಲ್ಲ" ಎಂದು ನಿರಾಕರಿಸಿದನು. ದಿನಗಳು ಕಳೆದಮೇಲೆ ಗುರುಗಳು ಆಶ್ರಮಕ್ಕೆ ಹಿಂತಿರುಗಿದರು. ಆಶ್ರಮದಲ್ಲಿ ನಡೆದ ವಿಚಾರ ಅವರಿಗೂ ತಿಳಿಯಿತು, ತಮ್ಮ ಶಿಷ್ಯನ ನಿರ್ಧಾರ ಕೇಳಿ ಬಹಳ ಸಂತೋಷವೂ ಆಯಿತು.ಹಾಗಾಗಿಯೇ ಎಲ್ಲಾ ವಿಧ್ಯೆಗಳೂ ಅವನ ಅಂತರ್ಗತವಾಗಲೆಂದು ಹರಸಿದರು. ಇನ್ನೇನು ಆಶ್ರಮವನ್ನು ತೊರೆದು ಉತ್ತನ್ಕ ಹೊರಡಬೇಕು ಆ ಕ್ಷಣದಲ್ಲಿ "ಗುರುಗಳೇ ಯಾರೂ ಸಂಪ್ರದಾಯಕ್ಕೆ ವಿರುದ್ಧವಾಗಿ ವಿದ್ಯೆಯನ್ನು ಕಲಿಯಲಾಗದು ಅದರಿಂದ ಗುರುಶಿಷ್ಯರಿಬ್ಬರಿಗೂ ದೋಷವೇ ಸರಿ ಆದ್ದರಿಂದ ತಮ್ಮಲ್ಲಿ ವಿದ್ಯೆ ಕಲಿತ ನಾನು ಗುರುದಕ್ಷಿಣೆ ಅರ್ಪಿಸಬೇಕೆಂದಿರುವೆ, ತಮಗೆ ಇಷ್ಟವಾದದ್ದು ಯಾವುದು ಹೇಳಿ" ಎಂದು ವಿನಂತಿಸುತ್ತಾನೆ. ಗುರುಗಳು ನಸುನಗೆಯಿಂದ "ಮಗೂ ಇನ್ನೂ ಕೆಲವುಕಾಲ ನೀನು ಈ ಆಶ್ರಮದಲ್ಲಿಯೇ ಇರು ನಂತರದಲ್ಲಿ ನೋಡೋಣ" ಎಂದು ಹೇಳಿದರು. ದಿನ ಕೆಲವು ಕಳೆಯಿತು ಮತ್ತೆ ಗುರುಗಳಲ್ಲಿ ಅದೇ ಪ್ರಶ್ನೆ ಕೇಳುತ್ತಾನೆ, ಗುರುಗಳು ಮತ್ತದೇ ಉತ್ತರ ಕೊಡುತ್ತಾರೆ. ದಿನಗಳ ತರುವಾಯ ಮತ್ತೆ ಬಂದು ಕೇಳುತ್ತಾನೆ, ಗುರುಗಳಿಗೆ ಇನ್ನು ಇವನನ್ನು ತಡೆಯಲಾಗದು ಕೇಳಿದರೆ ಕೊಡಲು ಕಡು ಬಡವನಾದ ಇವನ ಬಳಿ ಏನೂ ಇಲ್ಲ ಎಂದು ಯೋಚಿಸಿ " ಮಗೂ ನನಗೇನೂ ಬೇಡ ಆದರೂ ಕೊಡವ ಮನಸ್ಸಿದ್ದರೆ ನಿನ್ನ ಮಾತೆಯ ಸ್ಥಾನದಲ್ಲಿರುವ ಗುರುಪತ್ನಿಯನ್ನು ಕೇಳು ಅವಳೇನಾದರೂ ಬಯಸಿದರೆ ಕೊಡು " ಎಂದು ಹೇಳುತ್ತಾರೆ. ಆಗ ಉತ್ತನ್ಕ ಗುರುಪತ್ನಿಯ ಬಳಿ ಹೋಗಿ ಗುರುದಕ್ಷಿಣೆಯಾಗಿ ಏನನ್ನು ಕೊಡಲಿ ಎಂದು ಕೇಳಿದಾಗ ಸಹಜವಾಗಿಯೇ ಸ್ತ್ರೀಯರಿಗೆ ಬಂಗಾರದ ಬಗ್ಗೆ ಆಸೆಯಲ್ಲವೇ... ಹಾಗಾಗಿ ತನಗೆ ಸೌದಾಸ ರಾಜನ ಪತ್ನಿಯಾದ ಮದಯಂತಿ ಧರಿಸಿರುವ ವಿಶಿಷ್ಟವಾದ ಕರ್ಣಕುಂಡಲಗಳು ಬೇಕು ಎಂದು ಕೇಳುತ್ತಾಳೆ ( ಕೆಲವು ಕಡೆ ಪೌಷ ರಾಜನ ಸತಿ ಎನ್ನುವ ಉಲ್ಲೇಖ ಇದೆ) ಗುರುಪತ್ನಿಯ ಮಾತನ್ನು ಕೇಳಿ ಸಂತೋಷದಿಂದ ಕರ್ಣಕುಂಡಲ ತರಲು ಹೊರಡುತ್ತಾನೆ.
ಉತ್ತನ್ಕ ದಾರಿಯಲ್ಲಿ ಕಂಡ ವಿಚಿತ್ರಗಳು ಗುರುದಕ್ಷಿಣೆ ಪಡೆದ ಬಗೆ.. ಮುಂದಿನ ಬರಹದಲ್ಲಿ 🙏🙏
ಗುರುಭಕ್ತಿ - ವೇದ ( ಬೈದ )
ಆಯೋದದೌಮ್ಯರ ಮೂರನೇಯ ಶಿಷ್ಯನಾದ ವೇದನನ್ನು ( ಕೆಲವು ಕಡೆ ಬೈದ ಎಂದೂ ಇದೆ ) ಪರಿಚಯಸುವಾಗ ಬಹಳ ದೊಡ್ಡ ಕಾರ್ಯಕ್ಕೆ ಕೈ ಇಕ್ಕಿದಂತಾಗುತ್ತದೆ, ವೇದನ ಬಗ್ಗೆ ಹೇಳಬೇಕಾದದ್ದು ಬಹಳಷ್ಟು ಇಲ್ಲದೆ ಹೋದರೂ ಅವನ ಶಿಷ್ಯನಾದ ಉತ್ತನ್ಕ ( ಉದಂಕ ಎಂದೂ ಕರೆಯುತ್ತಾರೆ ) ನ ಬಗ್ಗೆ ಹೇಳಲೇಬೇಕು.. ಇದನ್ನು ಆರಂಭಿಸಿದರೆ ಅರ್ಧ ಮಹಾಭಾರತವನ್ನೇ ಹೇಳಬೇಕಾಗುತ್ತದೆ. ನನಗನ್ನಿಸಿದಂತೆ ಮಹಾಕಾವ್ಯಗಳಲ್ಲಿ ಸುದೀರ್ಘ ಹಿನ್ನೆಲೆಯನ್ನು ಹೊಂದಿರುವ ಎರಡು ಘಟನೆಗಳು ಎಂದರೆ, ನರಕಾಸುರ ವಧೆ ಮತ್ತು ಜನಮೇಜಯನ ಸರ್ಪಯಾಗ. ಕೃತಯುಗದಲ್ಲಿ ಹಿರಣ್ಯಾಕ್ಷ ವಧಾ ಕಾಲಕ್ಕೆ ಶ್ವೇತವರಾಹನಾಗಿ ಕಾಣಿಸಿಕೊಂಡ ಮಹಾವಿಷ್ಣು ಮತ್ತು ಭೂದೇವಿಯರ ಪುತ್ರ ನರಕ ದೈತ್ಯ, ಅವನ ವಧೆ ಆಗಿದ್ದು ದ್ವಾಪರ ಯುಗದ ಕೊನೆಯ ಕಾಲದಲ್ಲಿ. ಹಾಗೆಯೇ ಕಲಿಯುಗದ ಆರಂಭದಲ್ಲಿ ನಡೆದ ಜನಮೇಜಯನ ಸರ್ಪಯಾಗಕ್ಕೆ ಮುಹೂರ್ತ ಇಟ್ಟದ್ದು ಕೃತಯುಗದ ಆದಿಯಲ್ಲಿ, ಮಹಾಭಾರತದ ಮುಖ್ಯ ಕಥೆಗಳಲ್ಲಿ ಇದು ಪ್ರಸ್ತಾಪ ಆಗದೇ ಹೋದರೂ ನಿಜವಾಗಿ ಮಹಾಭಾರತ ಆರಂಭ ಆಗುವುದೇ ಸರ್ಪಯಾಗದ ದೋಷದಿಂದ ಕುಷ್ಠರೋಗ ಪೀಡಿತನಾದ ಜನಮೇಜಯನಿಗೆ ವ್ಯಾಸ ನಿರ್ದೇಶನದಂತೆ ವೈಶಂಪಾಯನರು ಮಹಾಭಾರತ ಕಥೆ ಹೇಳುವುದರಿಂದ. ಜನಮೇಜಯನ ಸರ್ಪಯಾಗದಲ್ಲಿ ಹಲವು ಹಿನ್ನೆಲೆಗಳ ಸಂಗಮವಿದೆ. ಕೃತಯುಗದಲ್ಲಿ ನಡೆದ ಕದ್ರೂ ವಿನತೆಯರ ಪಂಥ.. ಹೆತ್ತ ತಾಯಿಯಾದ ಕದ್ರುವಿನಿಂದ ಮಕ್ಕಳಾದ ಸರ್ಪಗಳಿಗೆ ಶಾಪ, ಅರುಣ ಮತ್ತು ಗರುಡರ ಜನನ, ಗರುಡನಿಂದ ಅಮೃತಾಪಹಾರಣ, ರುರು ಮತ್ತು ಪ್ರಮದ್ವರೆಯ ಕಥೆ ರುರುವಿಗೆ ಸರ್ಪ ಸಂತತಿಯ ಬಗ್ಗೆ ದ್ವೇಷ, ವೇದ ಶಿಷ್ಯನಾದ ಉತ್ತನ್ಕನಿಗೆ ಸರ್ಪ ಸಂತತಿಯನ್ನು ನಾಶ ಮಾಡಬೇಕೆನ್ನುವ ಛಲ, ಕಲಿಪ್ರಭಾವದಿಂದ ಪರೀಕ್ಷಿತನಿಂದ ಶಮೀಕ ಮಹರ್ಷಿಯ ಆಶ್ರಮದಲ್ಲಿ ಘಟಿಸಿದ ಅಪಚಾರ..ಶಮೀಕ ಪುತ್ರ ಶೃಂಗಿಯ ಶಾಪ, ತಂದೆಯ ಸಾವಿಗೆ ಕಾರಣನಾದ ತಕ್ಷಕನ ವಂಶ ನಿರ್ಮೂಲನೆ ಮಾಡಬೇಕೆನ್ನುವ ಜನಮೇಜಯನ ಛಲ, ಆದರೆ ಇಷ್ಟು ಹಿನ್ನೆಲೆಯಿದ್ದೂ ಯಾಗ ಸಂಪೂರ್ಣ ಆಗಲಿಲ್ಲ..ಭಂಗಗೊಂಡ ದಕ್ಷನ ಯಾಗದ ಬಗ್ಗೆ ಎಲ್ಲರಿಗೂ ಗೊತ್ತು, ಆದರೆ ಇಷ್ಟೆಲ್ಲಾ ಹಿನ್ನೆಲೆ ಇದ್ದೂ ಅಪರಿಪೂರ್ಣವಾದ ಸರ್ಪಯಾಗದ ಪೂರ್ಣ ವಿವರಣೆ ಎಲ್ಲರಿಗೂ ಗೊತ್ತಿಲ್ಲವೆಂದೆ ಭಾವಿಸುತ್ತೇನೆ. ಪೂರ್ಣ ಬರೆಯಲು ಮೂರುನಾಲ್ಕು ಕಂತುಗಳಾದರೂ ಬೇಕಾದೀತು ಶೀರ್ಷಿಕೆ ಕೊಟ್ಟ ಹಾಗೇ ವೇದ ಮತ್ತು ಉತ್ತನ್ಕರಿಂದಲೇ ಮುಂದಿನ ಕಂತು ಆರಂಭವಾಗುವುದು. 🙏🙏
ಗುರುಭಕ್ತಿ ( ಆರುಣಿ )
ಆಯೋದದೌಮ್ಯರ ಶಿಷ್ಯರಲ್ಲಿ ಮತ್ತೊಂದು ಪ್ರಮುಖ ಹೆಸರು "ಆರುಣಿ" ಶ್ರೀಮನ್ಮಹಾಭಾರತ ಪ್ರಕಾರ ಇವನು ಪಾಂಚಾಲ ದೇಶದವನು. ರೂಢಿಯಲ್ಲಿ ಬೃಹದಾರಣ್ಯಕ ಮತ್ತು ಕಠೋಪನಿಷತ್ತಿನಲ್ಲಿ ಬರುವ ನಚಿಕೇತನ ತಂದೆ ಇವನೇ ಎಂದು ಹೇಳುವ ಕ್ರಮ, ಆದರೆ ಶ್ರೀಮನ್ಮಹಾಭಾರತದಲ್ಲಿ ಇವರು ಬೇರೆ ಬೇರೆ ಎಂದೇ ಹೇಳಲಾಗಿದೆ. ಆರುಣಿ ತನ್ನ ಸಹಪಾಠಿಗಳಾದ ಉಪಮನ್ಯು ಮತ್ತು ವೇದ ಇವರುಗಳೊಂದಿಗೆ ಗುರುಕುಲದಲ್ಲಿ ಅಭ್ಯಾಸ ನಿರತನಾಗಿದ್ದ. ಅಂದಿನ ಗುರುಕುಲದ ಶಿಕ್ಷಣ ಪದ್ಧತಿ ಬೇರೆಯೇ ಅಲ್ಲವೇ.. ಸದಾ ಆಶ್ರಮದ ನಿತ್ಯ ಕೆಲಸಗಳನ್ನು ಮಾಡಬೇಕು.. ಗೋಪರಿಪಾಲನೆ, ಕೈತೋಟ, ಹೂದೋಟ, ಹೊಲ, ಗದ್ದೆ.. ಎಲ್ಲವೂ ಇರುತಿತ್ತು, ಆಶ್ರಮಕ್ಕೆ ಅಗತ್ಯವಿರುವ ಎಲ್ಲವನ್ನು ಅಲ್ಲಿರುವ ಶಿಷ್ಯರೇ ಬೆಳೆಯುತ್ತಿದ್ದರು. ಅರಣ್ಯಕ್ಕೆ ಹೋಗಿ ಯಜ್ಞ ಯಾಗಗಳಿಗೆ ಬೇಕಾಗುವ ಸಮಿಧೆಗಳನ್ನೂ ಅವರೇ ಸಂಗ್ರಹಿಸಿ ತರುತ್ತಿದ್ದರು, ನಿಜವಾಗಿ ಜೀವನ ನಿರ್ವಹಣೆ ಮಾಡಲು ಬೇಕಾದ ವಿಧ್ಯೆ ಅದೇ ತಾನೇ... ಕೇವಲ ಪಠ್ಯವನ್ನೇ ಅಭ್ಯಾಸ ಮಾಡಲು ಅಂದಿನವರಿಗೆ ಹೆಚ್ಚು ಕಾಲ ಬೇಕಾಗುತ್ತಿರಲಿಲ್ಲ. ಗುರುಗಳು ನಿನಗೆ ಎಲ್ಲ ವಿದ್ಯೆಗಳು ತಿಳಿಯಲಿ ಎಂದು ಹೇಳಿದ್ದರೂ ಸಾಕಾಗುತಿತ್ತು.. ಇದು ಉತ್ಪ್ರೇಕ್ಷೆ ಎಂದು ಈಗ ಅನ್ನಿಸಿದರೂ ಇತ್ತೀಚಿನ ಕಾಲದಲ್ಲಿ ಆಚಾರ್ಯ ಶಂಕರರು ಎಂಟನೇ ವರ್ಷಕ್ಕೆ ಚತುರ್ವೇಧ ಪಾರಂಗತರಾಗಿದ್ದರು ಎಂಬುದನ್ನು ಕೇಳಿ ಬಲ್ಲೆವು.
ಆರುಣಿ ಕೂಡಾ ಗುರುಸೇವಾ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ, ಒಂದು ದಿನ ಗುರುಗಳು ಅವನಿಗೆ ಗದ್ದೆಗೆ ಹೋಗಿ ನೀರಿನ ವ್ಯವಸ್ಥೆ ನೋಡಿ ಬರಲು ಹೇಳಿದರು. ಗುರುಗಳ ಮಾತಿನಂತೆ ಆರುಣಿ ಗದ್ದೆಗೆ ಹೋಗಿ ನೋಡಿದಾಗ ಒಂದು ಗದ್ದೆಯ ಬದು ನೀರಿನಿಂದ ಕೊಚ್ಚಿ ಹೋಗಿತ್ತು, ಎಷ್ಟು ಪ್ರಯತ್ನ ಮಾಡಿದರೂ ಅದನ್ನು ಸರಿಮಾಡಲಾಗಲಿಲ್ಲ. ಹಾಕಿದ ಮಣ್ಣು ನೀರಿನ ರಭಸಕ್ಕೆ ಮತ್ತೆ ಮತ್ತೆ ಕೊಚ್ಚಿ ಹೋಗುತಿತ್ತು. ಆ ಕ್ಷಣದಲ್ಲಿ ಆರುಣಿಗೆ ಬೇರೆ ದಾರಿ ಕಾಣದಿದ್ದಾಗ ಒಂದು ಯೋಚನೆ ಬಂತು. ಮಣ್ಣಿನ ಬದಲಿಗೆ ಹರಿದು ಹೋಗುತಿದ್ದ ನೀರಿಗೆ ಅಡ್ಡವಾಗಿ ತಾನೇ ಮಲಗಿಬಿಟ್ಟ... ಹರಿದುಹೋಗುತಿದ್ದ ನೀರು ನಿಂತು ಗದ್ದೆಯಲ್ಲಿ ಬೇಕಾದಷ್ಟು ಸಂಗ್ರಹವಾಯಿತು.ಇತ್ತ ಬಹಳ ಸಮಯವಾದರೂ ಆರುಣಿ ಹಿಂತಿರುಗಿ ಬರದಿರುವುದನ್ನು ಗಮನಿಸಿದ ಗುರುಗಳು ಶಿಷ್ಯರ ಸಮೇತ ಇವನನ್ನು ಹುಡುಕುತ್ತಾ ಗದ್ದೆಯ ಬಳಿಗೆ ಬಂದರು. ಅಲ್ಲೆಲ್ಲಿಯೂ ಕಾಣದೆ "ಮಗೂ ಆರುಣಿ ಎಲ್ಲಿದ್ದಿ.. ಶೀಘ್ರವಾಗಿ ಇತ್ತ ಬಾ" ಎಂದು ಕರೆದರು. ಮರುಕ್ಷಣದಲ್ಲಿಯೇ ಗದ್ದೆಯ ಬದುವಾಗಿ ಮಲಗಿದ್ದ ಆರುಣಿ " ಗುರುಗಳೇ ನಾನಿಲ್ಲಿದ್ದೇನೆ " ಎಂದು ಹೇಳುತ್ತಾ ಎದ್ದು ಬಂದು ಗುರುಗಳಿಗೆ ನಮಸ್ಕರಿಸಿ ನಡೆದ ಘಟನೆಯನ್ನು ಅವರಲ್ಲಿ ನಿವೇದಿಸಿಕೊಂಡ. ಆಯೋದದೌಮ್ಯರಿಗೆ ಸಂತೋಷವಾಯಿತು "ನನ್ನ ಮಾತನ್ನು ಚಾಚು ತಪ್ಪದೆ ನಿರ್ವಹಿಸುವಲ್ಲಿ ನೀನು ಮಾಡಿದ ಸಾಹಸದಿಂದ ಸಂತೋಷವಾಯಿತು, ನನ್ನ ಕೂಗನ್ನು ಕೇಳಿದಾಕ್ಷಣ ನೀನು ಗದ್ದೆಯ ಬದುವಿನಿಂದ ಎದ್ದು ಬಂದ ಕಾರಣದಿಂದಲೇ ನೀನು ಉದ್ದಾಲಕನೆಂಬ ಹೆಸರಿನಿಂದ ಪ್ರಸಿದ್ಧನಾಗುವೆ, ಎಲ್ಲ ವೇದಗಳು, ಧರ್ಮಶಾಸ್ತ್ರಗಳೂ ನಿನ್ನ ಬುದ್ದಿಗೆ ಗೋಚರವಾಗಲಿ" ಎಂದು ಹರಸಿದರು.
ಮುಂದೆ ಈ ಉದ್ದಾಲಕ ಗೃಹಸ್ಥನಾಗಿ, ಶ್ವೇತಕೇತು ಎನ್ನುವ ಮಗನನ್ನೂ ಸುಜಾತ ಎನ್ನುವ ಮಗಳನ್ನೂ ಪಡೆದ. ತನ್ನ ಶಿಷ್ಯನಾದ ಕಹೋಡಕನಿಗೆ ಮಗಳನ್ನು ಮದುವೆ ಮಾಡಿಕೊಟ್ಟ, ಪುರಾಣಗಳಲ್ಲಿ ಬರುವ ಅಷ್ಟಾವಕ್ರನೆನ್ನುವ ಋಷಿ ಇದೇ ಕಹೋಡಕ ಮತ್ತು ಸುಜಾತ ದಂಪತಿಗಳ ಮಗ.
ಒಮ್ಮೆ ಉದ್ದಾಲಕ ಯಾಗ ಮಾಡುತ್ತಿರುವಾಗ ಯಜ್ಞವೇದಿಕೆಯಲ್ಲಿ ನೀರಿನ ಅನಿವಾರ್ಯತೆ ಉಂಟಾಯಿತು, ಆ ಹೊತ್ತಿನಲ್ಲಿ ಪುಣ್ಯದಾಯಿನಿಯಾದ ಸರಸ್ವತಿಯನ್ನು ಮನಸ್ಸಿನಲ್ಲಿಯೇ ಸ್ಮರಿಸಿ ಆಹ್ವಾನಿಸಿದರು.. ಮರುಕ್ಷಣವೇ ನದಿಯಾದ ಸರಸ್ವತಿ ಉದ್ದಾಲಕ ಮಾಡುತ್ತಿದ್ದ ಯಜ್ಞಶಾಲೆಗೇ ಹರಿದುಬಂದಳು ಹಾಗಾಗಿಯೇ ಸರಸ್ವತಿ ನದಿಗೆ "ಮನೋರಮಾ " ಎಂಬ ಹೆಸರು ಉಂಟು.
ಗುರುಭಕ್ತಿ
ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಗುರುಗಳು ಇದ್ದೇ ಇರುತ್ತಾರೆ, ಕೇವಲ ಅಕ್ಷರ ಕಲಿಸಿದವ ಮಾತ್ರ ಗುರು ಅಂತ ಭಾವಿಸಬೇಕಾದುದಲ್ಲ. ತನ್ನ ಅನುಭವ ಹಂಚಿಕೊಂಡು ಬದುಕಿನ ದಾರಿ ತೋರಿಸಿದವರೂ ಗುರುಗಳೇ ಅಲ್ಲವೇ.. ಹಾಗೆಂದು ಅಂತಹ ಪಥ ನಿರ್ದೇಶಕರನ್ನು ಗೌರವದಿಂದ ಕಾಣುತ್ತಿರುವುದು ಇಲ್ಲವೇ ಇಲ್ಲ.. ಇನ್ನು ಗುರುಭಕ್ತಿ ಎನ್ನುವ ಭಾವ ಈ ಕಾಲಕ್ಕೆ ಬಹಳ ದೂರ.
ನಮ್ಮ ಪುರಾಣಗಳಲ್ಲಿ ಅಲ್ಲಲ್ಲಿ ಗುರುಭಕ್ತಿಯಿಂದಲೇ ಶ್ರೇಯಸ್ಸನ್ನು ಹೊಂದಿದ ಕೆಲವರು ಆದರ್ಶ ಶಿಷ್ಯರು ಸಿಗುತ್ತಾರೆ.. ಅವರಲ್ಲಿ ಶ್ರೀಮನ್ಮಹಾಭಾರತದಲ್ಲಿ ಬರುವ ಉಪಮನ್ಯುವಿನ ಕಥೆಯೂ ಒಂದು.
ಒಂದು ಕಾಲದಲ್ಲಿ ಆಯೋದದೌಮ್ಯ ರೆಂಬ ಗುರುಗಳಿದ್ದರು, ಅವರಿಗೆ ಮೂರುಜನ ಪ್ರಮುಖ ಶಿಷ್ಯರು, ಉಪಮನ್ಯು, ಆರುಣಿ, ವೇದ ಎಂಬುದಾಗಿ ಅವರ ಹೆಸರು. ಆಶ್ರಮದಲ್ಲಿ ಉಪಮನ್ಯುವಿಗೆ ಗೋವುಗಳನ್ನ ಪಾಲಿಸಬೇಕಾದ ಹೊಣೆ, ಪ್ರತಿದಿನವೂ ಹಸುಗಳನ್ನು ಕಾಡಿಗೆ ಹೊಡೆದುಕೊಂಡು ಹೋಗಿ ಹುಲ್ಲು ಮೇಯಿಸಿಕೊಂಡು ಬರುತಿದ್ದ. ಗುರುಗಳು ಒಮ್ಮೆ ಅವನನ್ನು ಗಮನಿಸಿದಾಗ ತುಂಬಾ ದಷ್ಟಪುಷ್ಟವಾಗಿ ಕಾಣುತಿದ್ದ ಅವನಲ್ಲಿಯೇ ಕೇಳಿದರು " ಮಗೂ ನೀನು ಆಹಾರಕ್ಕೆ ಏನು ವ್ಯವಸ್ಥೆ ಮಾಡಿಕೊಂಡಿದ್ದಿ? " ಉಪಮನ್ಯು ಹೇಳಿದ ಗುರುಗಳೇ ಭಿಕ್ಷೆಯನ್ನು ಬೇಡಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತೇನೆ.. ಗುರುಗಳು ಹೇಳಿದರು " ಉಪಮನ್ಯು ಭಿಕ್ಷೆಯಿಂದ ಪಡೆದ ಆಹಾರವನ್ನು ಗುರುಗಳಿಗೆ ಅರ್ಪಿಸದೆ ಸೇವಿಸುವುದು ತಪ್ಪಲ್ಲವೇ " ಇಷ್ಟು ಕೇಳಿ ಅವರು ನಿತ್ಯಾನುಷ್ಠಾನ ಮಾಡಲು ಹೊರಟುಹೋದರು. ಮರುದಿನ ಉಪಮನ್ಯು ಭಿಕ್ಷೆಯಿಂದ ತಂದ ಆಹಾರವನ್ನು ಗುರುಗಳ ಮುಂದೆ ಇಟ್ಟು ಕೈ ಮುಗಿದ.... ಕೆಲವು ಕ್ಷಣಗಳ ನಂತರ ಗುರುಗಳು ಅವನಿಗೆ ಹೊರಡಲು ಸೂಚಿಸಿದರು. ಹೀಗೇ ಕೆಲವು ದಿನಗಳು ಕಳೆಯಿತು. ಒಂದು ದಿನವೂ ಗುರುಗಳು ಶಿಷ್ಯ ತಂದು ಸಮರ್ಪಿಸಿದ ಆಹಾರದಲ್ಲಿ ಸ್ವಲ್ಪವನ್ನೂ ಹಿಂತಿರುಗಿ ಕೊಡಲಿಲ್ಲ. ಆದರೂ ಉಪಮನ್ಯು ಸಂತೋಷವಾಗಿಯೇ ಇದ್ದ, ಗುರುಗಳು ಮತ್ತೆ ಕೇಳಿದರು " ಉಪಾ.. ಭಿಕ್ಷೆಯಿಂದ ತಂದ ಆಹಾರವನ್ನು ನನಗೆ ಅರ್ಪಿಸುತ್ತಿರುವೆ.. ನೀನು ಆಹಾರಕ್ಕೆ ಏನು ಮಾಡುತ್ತಿರುವೆ..? ಉಪಮನ್ಯು ಹೇಳಿದ "ಗುರುಗಳೇ ಮತ್ತೊಮ್ಮೆ ಭಿಕ್ಷೆ ಬೇಡಿ ಉಣ್ಣುತ್ತಿರುವೆ " ಗುರುಗಳು " ಮಗೂ ಮತ್ತೊಮ್ಮೆ ಭಿಕ್ಷೆ ಕೇಳಿದರೆ ಇನ್ನೊಬ್ಬ ವಿದ್ಯಾರ್ಥಿಯ ಅನ್ನವನ್ನು ಕಸಿದ ಹಾಗಲ್ಲವೇ ಅದು ತಪ್ಪು " ಎಂದು ಹೇಳಿ ಎದ್ದು ಹೋದರು. ಮರುದಿನದಿಂದ ಮತ್ತೆ ಅವನೂ ತನ್ನ ನಿತ್ಯ ಕಾರ್ಯಗಳಲ್ಲಿ ತೊಡಗಿಕೊಂಡ.. ದಿನಗಳು ಕೆಲವು ಕಳೆಯಿತು. ಉಪಮನ್ಯುವಿನ ದೇಹ ಸೊರಗಲಿಲ್ಲ, ಎಂದಿನಂತೆ ಲವಲವಿಕೆಯಿಂದಲೇ ಇದ್ದ. ಒಂದು ಸಂಜೆ ಗುರುಗಳು ಪ್ರಶ್ನೆ ಮಾಡಿದರು " ಉಪಾ.. ಏನು ಆಹಾರವನ್ನು ಸೇವಿಸುತ್ತಿರುವೆ... " ಶಿಷ್ಯ ತುಂಬಾ ಭಕ್ತಿಯಿಂದ ಹೇಳಿದ ಗುರುಗಳೇ ಕಾಡಿಗೆ ಗೋವುಗಳನ್ನ ಕರೆದುಕೊಂಡು ಹೋಗುವಾಗ ಅವುಗಳ ಹಾಲನ್ನೇ ಕುಡಿಯುತ್ತಿರುವೆ.. ಗುರುಗಳು ಹೇಳಿದರು "ಮಗೂ ಗೋವುಗಳ ಹಾಲನ್ನು ಕುಡಿದರೆ ಪುಟ್ಟ ಕರುಗಳ ಆಹಾರವನ್ನು ಕಸಿದಂತಾಗಲಿಲ್ಲವೇ.." ಇಷ್ಟು ಹೇಳಿ ಗುರುಗಳು ನಿತ್ಯಕರ್ಮಗಳಿಗೆ ಎದ್ದು ಹೋದರು. ಹಾಗಿದ್ದರೆ ಆಹಾರವನ್ನು ಹೇಗೆ ಪಡೆಯಬೇಕು ಎಂದು ಗುರುಗಳು ಹೇಳಲಿಲ್ಲ.. ಶಿಷ್ಯ ಕೇಳಲೂ ಇಲ್ಲ. ಮತ್ತೆ ಕೆಲವು ದಿನ ಕಳೆಯಿತು, ಗುರುಗಳು ನಿರೀಕ್ಷೆ ಮಾಡಿದ ಹಾಗೆ ಶಿಷ್ಯನಲ್ಲಿ ಯಾವ ಬದಲಾವಣೆ ಆಗಲಿಲ್ಲ, ಆತ ಎಂದಿನಂತೆಯೇ ಇದ್ದ. ಗುರುಗಳು ಮತ್ತೆ ಒಂದು ಸಂಜೆ ಕೇಳಿದರು. " ಮಗೂ ಒಮ್ಮೆ ಬೇಡಿದ ಭಿಕ್ಷೆಯನ್ನು ನನಗೆ ಅರ್ಪಿಸುತ್ತ ಇದ್ದಿ.. ಎರಡನೇ ಬಾರಿ ಭಿಕ್ಷೆ ಕೇಳುವುದನ್ನ ಬಿಟ್ಟಿದ್ದಿ.. ಗೋವುಗಳ ಹಾಲನ್ನು ಕುಡಿಯುವುದನ್ನು ಬಿಟ್ಟಿದ್ದೀಯ.. ಈಗ ಆಹಾರಕ್ಕೆ ಏನು ಮಾಡುತ್ತಿರುವೆ..
ಆಗ ಸುಳ್ಳು ಹೇಳಲು ಅರಿಯದ ಉಪಮನ್ಯು ಸಹಜವಾಗಿ ಉತ್ತರಿಸುತ್ತಾನೆ, " ಗುರುಗಳೇ ಕರುಗಳು ಗೋವುಗಳ ಹಾಲನ್ನು ಕುಡಿಯುವಾಗ ಅವುಗಳ ಕಟಬಾಯಿಂದ ಹೊರಗೆ ಬರುವ ನೊರೆಯನ್ನೇ ಕುಡಿಯುತ್ತೇನೆ " ಗುರುಗಳಿಗೆ ಅವನ ಸಹಜ ಸರಳತೆಯಿಂದ ಸಂತೋಷವಾದರೂ ತೋರಿಸಿಕೊಳ್ಳದೆ " ಪಾಪ ಆ ಕರುಗಳು ನಿನ್ನಮೇಲಿನ ಕರುಣೆಯಿಂದ ತಾವು ಕುಡಿಯುವ ಹಾಲನ್ನು ನೊರೆಯ ರೂಪದಲ್ಲಿ ನಿನಗೆ ಕುಡಿಸುತ್ತಿರಬೇಕು " ಇಷ್ಟು ಹೇಳಿ ಎದ್ದು ಹೋದರು. ಮರುದಿನದಿಂದ ಉಪಮನ್ಯುವಿಗೆ ಯಾವ ಆಹಾರವೂ ಸಿಗದಂತಾಯಿತು, ಒಂದೆರಡು ದಿನಗಳಲ್ಲಿ ದೇಹಾಯಾಸ ತಡೆದುಕೊಳ್ಳಲಾಗಲಿಲ್ಲ. ಅರಣ್ಯದಲ್ಲಿ ಗೋವುಗಳೊಂದಿಗೆ ತಿರುಗುತ್ತಾ ತಿರುಗುತ್ತಾ ಹಸಿವನ್ನು ತಡೆಯಲಾಗದೆ ಚಿಗುರೊಡೆದು ಹಸಿರಾಗಿ ಕಾಣುತ್ತಿದ್ದ ಎಕ್ಕದ ಎಲೆಗಳನ್ನು ತಿಂದ. ಸ್ವಾಭಾವಿಕವಾಗಿ ಕಹಿಯಾಗಿಯೂ ಕಟುವಾಗಿಯೂ ಇರುವ ಎಕ್ಕದ ಎಲೆಯ ಸೇವನೆ ಬಹುಬೇಗ ಪರಿಣಾಮವನ್ನು ತೋರಿಸಿತು. ಆಯಾಸ ಹೆಚ್ಚಾಯಿತು.. ಕಣ್ಣುಗಳು ಕುರುಡಾದವು, ಎಲ್ಲಿ ಹೋಗಬೇಕೆಂದು ತಿಳಿಯದೆ ಸಾಗುತ್ತಿರುವಾಗ ಕಣ್ಣು ಕಾಣಿಸದೆ ಹಾಳು ಬಾವಿಯೊಂದರಲ್ಲಿ ಬಿದ್ದುಬಿಟ್ಟ. ಇತ್ತ ಆಶ್ರಮದಲ್ಲಿ ಸುರ್ಯಾಸ್ತವಾದರೂ ಶಿಷ್ಯ ಬರದೇ ಇರುವುದನ್ನು ಕಂಡು ಗುರುಗಳು ಉಳಿದ ಶಿಷ್ಯರನ್ನು ಕೂಡಿಕೊಂಡು ಹುಡುಕುತ್ತ ಬಂದರು. ಕರೆಯುತ್ತಾ ಬರುತ್ತಿರುವ ಗುರುಗಳ ದ್ವನಿಯನ್ನು ಆಲಿಸಿದ ಉಪಮನ್ಯು ಬಾವಿಯಿಂದಲೇ ಗುರುಗಳನ್ನು ಮಾತನಾಡಿಸುತ್ತಾನೆ.. ಏನಾಯಿತು ಎಂದು ಕೇಳಿದ ಗುರುಗಳಿಗೆ ನಡೆದ ಘಟನೆ ಹೇಳಿ ಕಣ್ಣುಗಳು ಕುರುಡಾದುದನ್ನು ಹೇಳುತ್ತಾನೆ. ಗುರುಗಳು ದೇವವೈದ್ಯರಾದ ಅಶ್ವಿನಿದೇವತೆಗಳನ್ನು ಸ್ತುತಿಸಲು ಸೂಚಿಸುತ್ತಾರೆ. ಗುರುಗಳ ಅನುಗ್ರಹದಿಂದ ಮಂತ್ರಪೂರ್ವಕವಾಗಿ ಯಮಳರಾದ ಅಶ್ವಿನಿ ದೇವತೆಗಳನ್ನು ಆರಾಧಿಸುತ್ತಾನೆ. ಉಪಮನ್ಯುವಿನ ಸ್ತುತಿಯಿಂದ ಪ್ರಸನ್ನರಾದ ಅಶ್ವಿನಿ ದೇವತೆಗಳು ಪ್ರತ್ಯಕ್ಷರಾಗಿ ದೇವ ನಿರ್ಮಿತವಾದ ಭಕ್ಷ್ಯವೊಂದನ್ನು ಉಪಮನ್ಯುವಿನ ಕೈಯಲ್ಲಿಟ್ಟು ಇದರ ಸೇವನೆಯಿಂದ ನಿನ್ನ ಕಣ್ಣಿನ ದೃಷ್ಟಿ ಹಿಂತಿರುಗಿ ಬರುತ್ತದೆ ಸೇವಿಸು ಎನ್ನುತ್ತಾರೆ. ಆಗ ಉಪಮನ್ಯು " ದೇವತೆಯರೇ ನಾನು ಇದನ್ನು ನನ್ನ ಗುರುಗಳಿಗೆ ಅರ್ಪಿಸದೇ ಸೇವಿಸಲಾರೆ " ಎನ್ನುತ್ತಾನೆ. ಆಗ ದೇವತೆಗಳು ಅವನನ್ನು ಪರೀಕ್ಷೆ ಮಾಡಲಾಗಿಯೇ " ಒಂದು ಕಾಲದಲ್ಲಿ ನಿನ್ನ ಗುರುಗಳಿಗೆ ಇಂತಹ ಪಾಯಸವನ್ನು ನೀಡಿದಾಗ ಅವರು ತನ್ನ ಗುರುಗಳಿಗೆ ನೀಡದೆ ಸ್ವೀಕರಿದ್ದರು " ಎನ್ನುತ್ತಾರೆ. ಆದರೂ ಉಪಮನ್ಯು ಸ್ವೀಕರಿಸಲು ನಿರಾಕರಿಸುತ್ತಾನೆ. ಆಗ ಅಶ್ವಿನೀ ದೇವತೆಗಳು ಇವನ ಗುರುಭಕ್ತಿಗೆ ಸಂತೋಷ ಹೊಂದಿ " ನೀನು ಚಕ್ಷುಷ್ಮಂತನೂ, ಶ್ರೇಯೋವಂತನು ಆಗುವೆ.. ನಿನ್ನ ಹಲ್ಲುಗಳು ಬಂಗಾರದ್ದಾಗಲಿ" ಎಂದು ಹೇಳಿ ಅದೃಷ್ಯರಾಗುತ್ತಾರೆ.
ದೃಷ್ಟಿಯನ್ನು ಹೊಂದಿದ ಉಪಮನ್ಯು ಬಾವಿಯಿಂದ ಮೇಲೆದ್ದು ಬಂದು ಗುರುಗಳಿಗೆ ನಮಸ್ಕರಿಸಿದಾಗ ಸಂತೋಷದಿಂದ ಶಿಷ್ಯನ ತಲೆಯನ್ನು ನೇವರಿಸುತ್ತ "ಮಗೂ ಅಶ್ವಿನಿ ದೇವತೆಗಳು ಹೇಳಿದಂತೆಯೇ ನೀನು ಉತ್ತಮವಾದ ಶ್ರೇಯಸ್ಸನ್ನು ಹೊಂದುವೆ ಎಲ್ಲ ವೇದ, ಶಾಸ್ತ್ರಗಳೂ ನಿನ್ನ ಸ್ಮೃತಿಪಥದಲ್ಲಿ ಶಾಶ್ವತವಾಗಿರಲಿ ಎಂದು ಹರಸುತ್ತಾರೆ.
ಉಳಿದಿಬ್ಬರು ಶಿಷ್ಯರ ಕಥೆ ಮುಂದೊಮ್ಮೆ.
Subscribe to:
Comments (Atom)