Sunday, May 25, 2025

ರುರು ಮತ್ತು ಪ್ರಮಧ್ವರೆ

ರುರು ಮತ್ತು ಪ್ರಮಧ್ವರೆ ಸರ್ಪಯಾಗದ ನಂತರವೂ ನಡೆದ ಒಂದು ಘಟನೆಯಿಂದ ಋಷಿಯೊಬ್ಬ ಸರ್ಪಕುಲವನ್ನೇ ದ್ವೇಷಿಸುವ ಸಂದರ್ಭ ಒದಗಿ ಬಂದುಹೋಗುತ್ತದೆ. ಪ್ರಸಿದ್ದರಾದ ಚ್ಯವನ ಸುಕನ್ಯಾ ದಂಪತಿಗಳಿಗೆ ಪ್ರಮತಿ ಎಂಬ ಪುತ್ರನಿದ್ದ. ಪ್ರಮತಿಗೆ ಘ್ರತಾಚಿ ಎಂಬ ಅಪ್ಸರೆಯಲ್ಲಿ ರುರು ಎಂಬ ಪುತ್ರ ಜನಿಸುತ್ತಾನೆ. ಇನ್ನೊಂದೆಡೆ ಅಪ್ಸರೆಯಾದ ಮೇನಕೆ ವಿಶ್ವಾವಸು ಎಂಬ ಗಂಧರ್ವನಿಂದ ಗರ್ಭ ಧರಿಸುತ್ತಾಳೆ ಮತ್ತು ದಿನಗಳು ಕಳೆದು ಹೆಣ್ಣು ಮಗುವನ್ನು ಪ್ರಸವಿಸುತ್ತಾಳೆ, ಜನಿಸಿದ ಮಗುವನ್ನು ಯಾವ ಕರುಣೆಯನ್ನೂ ತೋರಿಸದೆ ಸ್ತೂಲಕೇಶ ಎಂಬ ಮುನಿಯ ಆಶ್ರಮದ ಸಮೀಪ ಬಿಟ್ಟು ಹೋಗಿಬಿಡುತ್ತಾಳೆ. ಸ್ತೂಲಕೇಶಮುನಿಯು ಆಶ್ರಮ ಪ್ರದೇಶದಲ್ಲಿ ನಡೆದಾಡುತ್ತ ಬರುತ್ತಿದ್ದಾಗ ಒಂದು ಮರದ ಕೆಳಗೆ ಆಗತಾನೇ ಜನಿಸಿದ ಮಗು ಅನಾಥ ಸ್ಥಿತಿಯಲ್ಲಿ ಅಳುತ್ತಿರುವುದನ್ನು ನೋಡುತ್ತಾನೆ, ಪೂರ್ಣಚಂದ್ರ ಕಾಂತಿಯಿಂದ ಕಂಗೊಳಿಸುತ್ತಿದ್ದ ಶಿಶುವನ್ನು ನೋಡಿ ಕರುಣಾಮಯಿಯಾದ ಮುನಿ ಅದನ್ನು ಆಶ್ರಮಕ್ಕೆ ತಂದು ದೇವಕನ್ನಿಕೆಯರನ್ನೂ ಮೀರಿಸುವ ಸೌಂದರ್ಯ ಹೊಂದಿದ ಮಗುವಿಗೆ"ಪ್ರಮದ್ವತಿ" ಎಂದು ನಾಮಕರಣ ಮಾಡಿ ತಂದೆಯ ಸ್ಥಾನದಲ್ಲಿ ನಿಂತು ಕಾಲಕಾಲಕ್ಕೆ ಬೇಕಾದ ಎಲ್ಲ ಸಂಸ್ಕಾರಗಳನ್ನೂ ನೆರವೇರಿಸುತ್ತಾನೆ. ಅವಳೂ ಬೆಳೆದು ಪ್ರಾಯಪ್ರಬುದ್ಧಳಾಗುತ್ತಾಳೆ. ಹೀಗೆಯೇ ಒಂದು ದಿನ ಪ್ರಮತಿ ಪುತ್ರನಾದ ರುರು ಸಂಚರಿಸುತ್ತ ಬರುವಾಗ ಅಪ್ಸರೆಯರ ಸೌಂದರ್ಯ ಮೀರಿಸುವ ಪ್ರಮದ್ವತಿ ಅವನ ಕಣ್ಣಿಗೆ ಬೀಳುತ್ತಾಳೆ. ಅವಳನ್ನ ನೋಡಿದಾಕ್ಷಣವೇ ಇವನಿಗೆ ಪ್ರೇಮಾಂಕುರವಾಗಿಬಿಡುತ್ತದೆ, ಜೀವನದಲ್ಲಿ ಸಂಸಾರಿಯಾಗಿ ಬದುಕುವುದಾದರೆ ಪ್ರಮದ್ವತಿಯ ಜೊತೆಗೇ ಎಂದು ತೀರ್ಮಾನಿಸಿಬಿಡುತ್ತಾನೆ. ಹಿಂತಿರುಗಿ ಆಶ್ರಮಕ್ಕೆ ಬಂದು ತನ್ನ ಅಭಿಪ್ರಾಯವನ್ನು ತಂದೆಗೆ ನೇರವಾಗಿ ತಿಳಿಸಲು ನಾಚಿಕೆಯಾಗಿ ತನ್ನ ಮಿತ್ರರ ಮುಖಾಂತರ ಹೇಳಿಸುತ್ತಾನೆ. ತಂದೆಯಾದ ಪ್ರಮತಿಯು ಮಗನ ನಿರ್ಧಾರವನ್ನು ತಿಳಿದು ಸಂತೋಷದಲ್ಲಿಯೇ ಕನ್ಯಾರ್ಥಿಯಾಗಿ ಸ್ತೂಲಕೇಶಮುನಿಯ ಆಶ್ರಮಕ್ಕೆ ಬರುತ್ತಾನೆ. ಇಬ್ಬರ ಪರಸ್ಪರ ಕುಶಲೋಪರಿಯ ನಂತರ ತಾನು ಬಂದ ಉದ್ದೇಶ... ಮಗನ ಅಭಿಪ್ರಾಯವನ್ನು ಹೇಳುತ್ತಾನೆ. ಸ್ತೂಲಕೇಶಮುನಿಯೂ ಸಂತೋಷದಿಂದಲೇ ಒಪ್ಪಿಗೆ ಕೊಟ್ಟು ಮುಂದೆ ಬರುವ ಹಸ್ತಾ ನಕ್ಷತ್ರದ ದಿನ ಮದುವೆಯ ಮುಹೂರ್ತ ಎಂದು ನಿಶ್ಚಯ ಮಾಡುತ್ತಾನೆ. ಸಂತೋಷದಿಂದ ಒಪ್ಪಿದ ಪ್ರಮತಿ ಮುಹೂರ್ತದ ದಿನ ದಿಬ್ಬಣಕೂಡಿ ಬರುವುದಾಗಿ ಹೇಳಿ ಹೊರಡುತ್ತಾನೆ. ಇನ್ನು ಮದುವೆಗೆ ಮೂರ್ನಾಲ್ಕು ದಿನಗಳಿರುವಾಗ ಪ್ರಮದ್ವತಿ ಗೆಳತಿಯರೊಂದಿಗೆ ಆಶ್ರಮದ ಹೂದೋಟದಲ್ಲಿ ಸಂತೋಷದಿಂದ ವಿಹರಿಸುತ್ತ ಇದ್ದಳು, ಹಾಗೇ ಸಾಗುತ್ತಿದ್ದಾಗ ಅಲ್ಲಿ ಮಲಗಿದ್ದ ಒಂದು ವಿಷಸರ್ಪವನ್ನು ನೋಡದೇ ತುಳಿದು ಬಿಡುತ್ತಾಳೆ. ಅವಳ ಆಯಸ್ಸು ಮುಗಿದಕಾರಣ ಮೃತ್ಯುಪ್ರಚೋದನೆಯಿಂದ ಆ ಸರ್ಪವೂ ಕಚ್ಚಿಬಿಡುತ್ತದೆ. ಮೂರುಲೋಕದಲ್ಲಿರುವ ಸುಂದರಿಯರನ್ನೂ ನಾಚಿಸುವ ಸೌಂದರ್ಯ ಹೊಂದಿದ ಪ್ರಮದ್ವತಿಯ ಮುಖ ವಿಷಪ್ರಭಾವದಿಂದ ಕ್ಷಣಮಾತ್ರದಲ್ಲಿ ಕಪ್ಪಿಟ್ಟುಹೋಗುತ್ತದೆ. ಹಾ... ಎಂದು ಕೂಗಿಕೊಳ್ಳುತ್ತಾ ಕುಸಿದುಬೀಳುತ್ತಾಳೆ. ಮದುವೆಯ ಸಂಭ್ರಮಕ್ಕೆ ಸಿದ್ದವಾಗಿದ್ದ ಆಶ್ರಮ ಕ್ಷಣದಲ್ಲಿಯೇ ಮೃತ್ಯುವಿನ ಪ್ರವೇಶದಿಂದ ಸ್ಮಶಾನವಾಗಿಬಿಡುತ್ತದೆ. ವಿಷಯ ತಿಳಿದ ಸಮೀಪದ ಆಶ್ರಮವಾಸಿಗಳೆಲ್ಲ ದುಃಖಿಸುತ್ತ ಬಂದು ಸೇರುತ್ತಾರೆ. ಪ್ರಮತಿಗೂ ವಿಷಯ ತಿಳಿಯುತ್ತದೆ, ಆಶ್ರಮವಾಸಿಗಳನ್ನೂ ಪುತ್ರನಾದ ರುರುವನ್ನು ಕೂಡಿಕೊಂಡು ಸ್ತೂಲಕೇಶಮುನಿಯ ಆಶ್ರಮಕ್ಕೆ ಬರುತ್ತಾನೆ. ಆಶ್ರಮದಲ್ಲಿ ಮುನಿವನಿತೆಯರ ರೋಧನೆ ಮುಗಿಲುಮುಟ್ಟುತಿತ್ತು, ರುರುವಿಗೆ ತನ್ನ ಪ್ರಿಯತಮೆಯ ಶವವನ್ನು ನೋಡಲು ಧೈರ್ಯವೇ ಬರಲಿಲ್ಲ, ಕ್ಷಣಕಾಲ ನಿಂತು ಮತ್ತೆ ಅಲ್ಲಿಂದ ಅರಣ್ಯದತ್ತ ರೋಧಿಸುತ್ತ ಹೊರಟುಬಿಡುತ್ತಾನೆ. ನಿರ್ಜನವಾದ ಅರಣ್ಯಕ್ಕೆ ಬಂದು ಒಬ್ಬನೇ ಕುಳಿತು ರೋಧಿಸತೊಡಗುತ್ತಾನೆ. ಇವನ ದುಃಖವನ್ನು ಕಂಡು ದೇವತೆಗಳಿಗೂ ಕರುಣೆಉಂಟಾಗುತ್ತದೆ, ದುಃಖಿಸುತ್ತಿರುವ ರುರುವನ್ನು ಸಮಾಧಾನಪಡಿಸುವ ಮಾರ್ಗವನ್ನು ಸೂಚಿಸಿ ಒಬ್ಬ ದೇವದೂತನನ್ನು ಕಳುಹಿಸಿಕೊಡುತ್ತಾರೆ. ದೇವತೆಗಳ ನಿರ್ದೇಶನದ ಪ್ರಕಾರ ಸಾಗಿಬಂದ ದೇವದೂತ ರುರುವನ್ನು ಸಮಾಧಾನ ಮಾಡಿ ಅಳಿದುಹೋದ ಪ್ರಮದ್ವತಿಯನ್ನು ನೀನು ಪ್ರಯತ್ನ ಮಾಡಿದರೆ ಮತ್ತೆ ಬದುಕಿಸಿಕೊಳ್ಳಬಹುದು ಎಂದು ಹೇಳುತ್ತಾನೆ. "ಆಕೆ ಬದುಕುವಳೆಂದಾದರೆ ನಾನೇ ಸಾಯಲು ಕೂಡ ಸಿದ್ದ" ಎಂದು ರುರು ಹೇಳುತ್ತಾನೆ. ಹಾಗಿದ್ದರೆ ಆಯಸ್ಸುತೀರಿ ಅಳಿದುಹೋದ ನಿನ್ನ ಪ್ರಿಯತಮೆಗೆ ನಿನ್ನ ಆಯಸ್ಸಿನ ಅರ್ಧವನ್ನು ಕೊಡುವುದಾದರೆ ಅವಳು ಮತ್ತೆ ಬದುಕುತ್ತಾಳೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ರುರು ಸಂತೋಷದಿಂದಲೇ ತನ್ನ ಆಯುಷ್ಯಾರ್ಧವನ್ನು ಕೊಡಲೊಪ್ಪಿ " ಪ್ರಿಯೆಯಾದ ಪ್ರಮದ್ವತಿ ನನ್ನ ಸುದೀರ್ಘವಾದ ಆಯುಷ್ಯದಲ್ಲಿ ಅರ್ಧವನ್ನು ಹೊಂದಿ ಬದುಕಲಿ " ಎಂದು ಕೈಯೆತ್ತಿ ಹೇಳುತ್ತಾನೆ. ಆದರೆ ಅಲ್ಲಿಗೇ ಅದು ಪರಿಪೂರ್ಣ ಆಗಲಿಲ್ಲ. ಪ್ರಮದ್ವತಿಯ ತಂದೆಯಾದ ವಿಶ್ವಾವಸು ಬಂದು ದೇವದೂತನನ್ನು ಕರೆದುಕೊಂಡು ಯಮನಲ್ಲಿಗೆ ಹೋಗಿ ನಡೆದ ವಿಚಾರವನ್ನೆಲ್ಲ ಯಮನಿಗೆ ಹೇಳಿ ಪ್ರಮದ್ವತಿ ಮತ್ತೆ ರುರುವಿನ ಆಯುಷ್ಯವನ್ನು ಹೊಂದಿ ಬದುಕಲು ಅನುಮತಿ ನೀಡುವಂತೆ ವಿನಂತಿಸುತ್ತಾನೆ. ಆಗ ಯಮ " ನಿಮ್ಮೆಲ್ಲರ ನಿರ್ಧಾರ ಅದೇ ಆದರೆ ಹಾಗೇ ಆಗಲಿ" ಎಂದು ಸಮ್ಮತಿಯ ಅಂಕಿತ ಹಾಕುತ್ತಾನೆ. ಇತ್ತ ಸರ್ಪವಿಷದ ಪರಿಣಾಮದಿಂದ ಜೀವ ತೊರೆದಿದ್ದ ಪ್ರಮದ್ವರೆ ಯಮನ ಅನುಮೋದನೆ ಹೊಂದಿ ನಿದ್ರೆಯಿಂದ ಏಳುವಂತೆ ಮತ್ತೆ ಎದ್ದು ನಿಲ್ಲುತ್ತಾಳೆ. ಎಲ್ಲರಿಗೂ ಸಂತೋಷವಾಗುತ್ತದೆ, ನಡೆದ ಎಲ್ಲಾ ವಿಚಾರವನ್ನೂ ರುರು ಹಿರಿಯರಿಗೆ ತಿಳಿಸುತ್ತಾನೆ. ಎಲ್ಲರೂ ರುರುವಿನ ತ್ಯಾಗವನ್ನು ಕೊಂಡಾಡುತ್ತಾರೆ. ಅತ್ಯಂತ ಸಂಭ್ರಮದಿಂದ ರುರು ಪ್ರಮದ್ವರೆಯರ ವಿವಾಹವೂ ನೆರವೇರುತ್ತದೆ. ಪ್ರಿಯತಮೆಯನ್ನು ಹೊಂದಿದ ಸಂತೋಷ ರುರುವಿಗಾದರೂ ನಿರಪರಾಧಿಯಾದ ಪ್ರಮದ್ವರೆಯನ್ನು ಕಚ್ಚಿದ ಕಾರಣಕ್ಕಾಗಿ ಸರ್ಪಗಳ ಬಗ್ಗೆ ದ್ವೇಷ ಉಳಿದುಬಿಡುತ್ತದೆ. ಯಾವಾಗಲೂ ಕೈಯಲ್ಲಿ ಒಂದು ಬಡಿಗೆಯನ್ನು ಹಿಡಿದೇ ಓಡಾಡುತ್ತ ಇರುತ್ತಾನೆ, ಎಲ್ಲಿಯೇ ಸರ್ಪಗಳು ಕಂಡರೂ ಬಡಿದು ಕೊಲ್ಲುತ್ತಿರುತ್ತಾನೆ. ಒಂದು ದಿನ ಹೀಗೇ ಕಾಡಿನಲ್ಲಿ ಸಂಚರಿಸುತ್ತ ಇರುವಾಗ ಒಂದು ಕೊಳದ ಪಕ್ಕದಲ್ಲಿ ಮಲಗಿರುವ ಒಂದು " ಡುನ್ಡುಭ"ವೆನ್ನುವ ಹಾವು ಕಾಣಿಸುತ್ತದೆ. ಕೈಯಲ್ಲಿರುವ ಬಡಿಗೆಯಿಂದ ಇನ್ನೇನು ಹೊಡೆಯಬೇಕು ಎಂದು ಎತ್ತುತ್ತಿದ್ದಂತೆ ಆ ಹಾವು ಮಾತನಾಡತೊಡಗಿತು. "ಅಯ್ಯಾ ಬ್ರಾಹ್ಮಣ.. ವಿನಾಕಾರಣ ನನ್ನ ಮೇಲೆ ಯಾಕೆ ದ್ವೇಷ.. ಇಲ್ಲಿಯವರೆಗೆ ನಾನು ಯಾರಿಗೂ ತೊಂದರೆ ಕೊಟ್ಟವನಲ್ಲ.. ಯಾರನ್ನಾದರೂ ಕಚ್ಚಿ ಕೊಲ್ಲುವ ಸಾಮರ್ಥ್ಯ ಹೊಂದಿದ ವಿಷಸರ್ಪವೂ ನಾನಲ್ಲ, ಕೇವಲ ಹುಳುಹುಪ್ಪಟೆ.. ಕಪ್ಪೆ ಮುಂತಾದವುಗಳನ್ನ ತಿಂದು ಬದುಕುವ ನೀರುಹಾವು ನಾನು, ನನ್ನನ್ನು ಕೊಂದು ಸುಮ್ಮನೇ ಪಾಪವನ್ನ ಯಾಕೆ ಕಟ್ಟಿಕೊಳ್ಳುತ್ತಿ.. ಬ್ರಾಹ್ಮಣರು ಯಾವಾಗಲೂ ಜೀವದಯೆ ಹೊಂದಿದವರು ಆದರೆ ನೀನು ಅದಕ್ಕೆ ವಿರೋಧವಾದ ಕಾರ್ಯವನ್ನೇ ಮಾಡುತ್ತಿರುವೆ" ಎಂದು ಹೇಳಿತು. ಇದನ್ನು ಕೇಳಿದ ರುರುವಿಗೆ ಆಶ್ಚರ್ಯವಾಯಿತು ಒಂದು ಹಾವು ಹೀಗೆ ಮಾತಾಡಬಹುದು ಎಂದು ಅವನಿಗೆ ನಿರೀಕ್ಷೆಯಿಲ್ಲ. ಹಾಗಾಗಿಯೇ ಮತ್ತೆ ಆ ಹಾವಿಗೇ ಕೇಳಿದ " ಅಯ್ಯಾ ಮಹಾನುಭಾವ ನೀನು ಯಾರು... ನಿನ್ನ ಮಾತನ್ನು ಕೇಳಿದರೆ ಈ ಹಾವಿನ ರೂಪವನ್ನು ಹೊಂದಿ ನನ್ನನ್ನು ಪರೀಕ್ಷಿಸಲು ಬಂದ ಯಾವುದೋ ಮಹಾಪುರುಷ ಎಂದು ಬಾವಿಸುತ್ತಿದ್ದೇನೆ ". ರುರುವಿನ ಮಾತನ್ನು ಕೇಳಿದ ಹಾವು ಹೇಳಿತು "ಋಷಿಕುಮಾರ ಒಂದು ಕಾಲದಲ್ಲಿ ನಾನೂ ಬ್ರಾಹ್ಮಣನೇ ಆಗಿದ್ದೆ.. ಸಹಸ್ರಪಾದ ಎಂದು ನನ್ನ ಹೆಸರು, ನನಗೊಬ್ಬ ಮಿತ್ರನಿದ್ದ ಅವನ ಹೆಸರು ಖಗ ಎಂದು. ಒಂದು ದಿನ ನನ್ನ ಮಿತ್ರನಾದ ಖಗನನ್ನು ಕಾಣಲು ಅವನ ಆಶ್ರಮಕ್ಕೆ ಹೋದೆ.. ನಾನು ಹೋಗುವಾಗ ಖಗ ಅಗ್ನಿಕಾರ್ಯದಲ್ಲಿ ತೊಡಗಿದ್ದ. ನಾನು ಅವನ ಅಗ್ನಿಕಾರ್ಯ ಮುಗಿಯುವವರೆಗೆ ಸುಮ್ಮನೇ ಕುಳಿತುಕೊಳ್ಳದೆ ಅಲ್ಲಿಯೇ ಇದ್ದ ಹುಲ್ಲಿನಿಂದ ಒಂದು ಸರ್ಪದ ಆಕೃತಿಯನ್ನು ಮಾಡಿ ಖಗನತ್ತ ಎಸೆದೆ.. ಅಗ್ನಿಕಾರ್ಯದಲ್ಲಿ ತೊಡಗಿದ್ದ ಆತನಿಗೆ ಇದರ ಅರಿವಿಲ್ಲದೆ ನಿಜವಾದ ಹಾವು ಎಂದು ಭಾವಿಸಿ ಹೆದರಿಕೆಯಿಂದ ಕ್ಷಣಕಾಲ ಪ್ರಜ್ಞೆಯೇ ತಪ್ಪಿಬಿಟ್ಟಿತು. ಮತ್ತೆ ಎಚ್ಚರ ಹೊಂದಿ ನನ್ನನ್ನು ನೋಡಿದ.. ಇದು ನಾನು ಮಾಡಿದ ಕುಚೇಷ್ಟೆ ಎನ್ನುವುದು ತಿಳಿಯಿತು.. ಕೋಪದಿಂದ ಕಣ್ಣುಗಳು ಕೆಂಪಾದವು.. ನನ್ನನ್ನು ಹೆದರಿಸಲು ನೀನು ಹಾವಿನ ಆಕೃತಿಯನ್ನು ಬಳಸಿದೆಯಲ್ಲವೇ ಹಾಗಾಗಿ ನೀನೂ ಹಾವೇ ಆಗು ಎಂದು ಶಾಪ ಕೊಟ್ಟುಬಿಟ್ಟ... ನನಗೆ ದುಃಖವಾಯಿತು, ಖಗನ ತಪಸ್ಸಿನ ಸಾಮರ್ಥ್ಯ ತಿಳಿದ ನಾನು ಕಣ್ಣೀರುಸುರಿಸಿ ಕೇಳಿಕೊಂಡೆ.. ಮಿತ್ರತ್ವದ ನೆಲೆಯಲ್ಲಿ ಸಲಿಗೆಯಿಂದ ಎಸಗಿದ ಕಾರ್ಯ.. ಕ್ಷಮಿಸು.. ಎಂದೆ. ನನ್ನ ಮಾತನ್ನು ಕೇಳಿ ಶಾಂತನಾದ ಆ ನನ್ನ ಮಿತ್ರ.. "ನಾನಾಡಿದ ಮಾತು ಹುಸಿಯಾಗುವುದಿಲ್ಲ. ಆದರೆ ನಿನಗೆ ಸರ್ಪದ ರೂಪವೇ ಶಾಶ್ವತವಾಗಿ ಉಳಿಯುವುದಿಲ್ಲ. ಮುಂದೊಂದುದಿನ ಪ್ರಮತಿಪುತ್ರನಾದ ರುರುವಿನ ದರ್ಶನವಾದಾಗ ನಾನು ಕೊಟ್ಟ ಶಾಪವಿಮೋಚನೆ ಆಗುತ್ತದೆ" ಎಂದು ಆಡಿದ. ಅಂದಿನಿಂದ ಈ ಕಾಡಿನಲ್ಲಿ ನೀರುಹಾವಾಗಿ ನಿನ್ನ ನಿರೀಕ್ಷೆಯಲ್ಲಿಯೇ ಇದ್ದೆ.. ಇಂದು ನನ್ನ ಶಾಪವಿಮೋಚನೆ ಆಯಿತು ಎಂದು ಹೇಳಿ ನಿಜರೂಪದಲ್ಲಿ ಎದ್ದುನಿಂತ. ಶಾಪವನ್ನು ಕಳೆದುಕೊಂಡ ಸಹಸ್ರಪಾದ ಬ್ರಾಹ್ಮಣ ರುರುವಿಗೆ ಹೇಳಿದ.. " ಅಯ್ಯಾ.. ಬ್ರಾಹ್ಮಣನಾದವನು ಹಿಂಸೆಗೆ ತೊಡಗುವುದಲ್ಲ.. ಬದಲಾಗಿ ಆಗಬಹುದಾದ ಹಿಂಸೆಯನ್ನು ನಿಲ್ಲಿಸುವ ಪ್ರಯತ್ನವನ್ನು ಸಹಜವಾಗಿ ಕರುಣಾಮಯಿಯಾದ ಆತ ಮಾಡಬೇಕು. ಹಿಂದೊಂದು ಕಾಲದಲ್ಲಿ ಜನಮೇಜಯ ಎಂಬ ಅರಸ ಸರ್ಪ ಸಂತತಿಯನ್ನೇ ನಾಶಮಾಡುವ ಸಲುವಾಗಿ ಸರ್ಪಯಾಗ ಮಾಡತೊಡಗುತ್ತಾನೆ, ಆ ಕಾಲದಲ್ಲಿ ಸರ್ಪಗಳ ಮೊರೆಯನ್ನು ಕೇಳಿದ ಜರತ್ಕಾರು ಪುತ್ರನಾದ ಆಸ್ತೀಕ ತನ್ನ ಪಾಂಡಿತ್ಯದಿಂದ ಜನಮೇಜಯ ರಾಜನ ಮನವೊಲಿಸಿ ಸರ್ಪ ಹಿಂಸೆಯನ್ನು ನಿಲ್ಲಿಸಿದ ಕತೆಯನ್ನು ನಿನ್ನ ಆಶ್ರಮ ಪ್ರದೇಶದಲ್ಲಿರುವ ಹಿರಿಯ ಋಷಿಗಳಲ್ಲಿ ಕೇಳಿ ತಿಳಿದುಕೋ" ಎಂದು ಹೇಳಿ ಹೊರಟುಹೋದ. 🙏🙏 ಜರತ್ಕಾರು... ಆಸ್ತಿಕ ಜನ್ಮ ಮುಂದಿನ ಭಾಗ

No comments:

Post a Comment