Monday, July 28, 2025
ವೃತ್ರಾಸುರ 4
ದಶದಿಕ್ಕುಗಳನ್ನೂ ವ್ಯಾಪಿಸಿ ಬೆಳೆದು ನಿಂತ ವೃತ್ರಾಸುರನನ್ನು ಎದುರಿಸಲು ದೇವತೆಗಳು ಆಯುಧಪಾಣಿಗಳಾಗಿ ಮುಂದೆ ಬಂದರು. ಆದರೆ ವೃತ್ರನ ಸಮ್ಮಖದಲ್ಲಿ ದೇವತೆಗಳ ಪರಾಕ್ರಮ ಉಡುಗಿಹೋಯಿತು. ದೇವತೆಗಳ ಆಯುಧಗಳನ್ನೆಲ್ಲಾ ವೃತ್ರನು ನುಂಗಿಬಿಟ್ಟ, ಯಾವ ಆಯುಧಗಳಿಂದಲೂ ವೃತ್ರನನ್ನು ನೋಯಿಸಲೂ ಆಗಲಿಲ್ಲ. ಸಮ್ಮಖದಲ್ಲಿ ನಿಂತ ದೇವತೆಗಳ ತೇಜಸ್ಸನ್ನೂ ಕೂಡ ವೃತ್ರ ಸೆಳೆದುಕೊಂಡುಬಿಟ್ಟ. ಈಗ ಇಂದ್ರಾದಿ ದೇವತೆಗಳಿಗೆ ಇವನು ಸಾಮಾನ್ಯನಾದ ರಾಕ್ಷಸನಲ್ಲ ಎಂಬುದು ಅರಿವಿಗೆ ಬಂತು. ಆತನ ಎದುರು ನಿಲ್ಲಲಾರದೇ ಅವರೆಲ್ಲಾ ಪಲಾಯನ ಮಾಡಿದರು. ಕೊನೆಗೆ ಎಲ್ಲರೂ ಒಂದು ಕಡೆ ಸೇರಿ ಇಂತಹ ದುಷ್ಟ ಶಕ್ತಿಯನ್ನು ನಿವಾರಿಸಲು ಮಹಾವಿಷ್ಣುವಿನ ನಿರ್ದೇಶನವೇ ಬೇಕೆಂಬ ತೀಮಾನಕ್ಕೆ ಬಂದರು. ಎಲ್ಲರೂ ಕ್ಷೀರಸಾಗರದ ತಡಿಗೆ ಬಂದು ಬಹುವಿಧವಾಗಿ ಶ್ರೀ ಹರಿಯನ್ನು ಪ್ರಾರ್ಥಿಸತೊಡಗಿದರು. ದೇವತೆಗಳ ಪ್ರಾರ್ಥನೆಯಿಂದ ಸುಪ್ರೀತನಾಗಿ ಶ್ರೀಮನ್ನಾರಾಯಣ ಪ್ರತ್ಯಕ್ಷನಾದ. ದೇವತೆಗಳನ್ನು ಪ್ರೀತಿಯಿಂದ ಸಂತೈಸಿದ ಶ್ರೀಹರಿ ತನ್ನನ್ನು ಏಕೋಭಾವದಿಂದ ಸ್ತುತಿಸಿದ ಕಾರಣವನ್ನು ಕೇಳಿದ. ಆಗ ದೇವತೆಗಳು ವೃತ್ರಾಸುರನಿಂದ ಆದ ಪರಾಜಯವನ್ನೂ .. ಮತ್ತು ತಮ್ಮ ತೇಜಸ್ಸು ಕೂಡ ವ್ಯರ್ಥವಾದ ವಿಷಯವನ್ನು ತಿಳಿಸಿ ತಮ್ಮನ್ನು ಕಾಪಾಡಬೇಕಾದವ ನೀನೇ ಎಂದು ಹೇಳಿ ಕೈಮುಗಿದು ನಿಂತರು. ಆಗ ಶ್ರೀಹರಿ " ದೇವತೆಗಳೇ ದುಷ್ಟನಾದ ವೃತ್ರಾಸುರ ಇಂದ್ರನಿಂದಲೇ ಹತನಾಗಬೇಕಾದವನು .. ಆದರೆ ಅದಕ್ಕೆ ವಿಶೇಷವಾದ ಆಯುಧದ ಅವಶ್ಯಕತೆ ಇದೆ. ಋಷಿ ಶಿರೋಮಣಿಯಾದ ದದೀಚಿ ಮಹರ್ಷಿಗಳು ವ್ರತ -ಉಪಾಸನೆ - ತಪಸ್ಸುಗಳಿಂದ ತಮ್ಮ ದೇಹವನ್ನು ಅತ್ಯಂತ ಕಠಿಣಗೊಳಿಸಿಕೊಂಡಿದ್ದಾರೆ. ಅವರೇ ಮೊದಲು ಅಥರ್ವವೇದದ ಮುಖೇನ ಆತ್ಮವಿಧ್ಯೆಯನ್ನು ಬಳಸಿ ನನ್ನನ್ನು ಆರಾಧಿಸಿ ನಾರಾಯಣ ಕವಚವನ್ನು ಅರಿತವರು. ಅವರು ಅದನ್ನು ತೃಷ್ಟ ನಿಗೂ .. ತ್ವಷ್ಟನು ವಿಶ್ವರೂಪನಿಗೂ .. ವಿಶ್ವರೂಪನು ನಿನಗೂ ಉಪದೇಶ ಮಾಡಿದನು. ಅಶ್ವಿನೀ ದೇವತೆಗಳು ಕೂಡಾ ದದೀಚಿಗಳ ಆತ್ಮವಿದ್ಯೆಯಿಂದಲೇ ಅಮರತ್ವವನ್ನು ಪಡೆದರು. ಅಂತಹ ದದೀಚಿಯ ದೇಹವನ್ನೇ ನೀವು ಬೇಡಿ ಪಡೆದು ಅದರ ಮೂಳೆಗಳಿಂದ ವಿಶ್ವಕರ್ಮನ ಮೂಲಕ ಒಂದು ವಿಶಿಷ್ಟವಾದ ಆಯುಧ ಸಿದ್ದ ಮಾಡಿಕೊಳ್ಳಿ. ಇಂದ್ರ.. ನೀನು ಆ ಆಯುಧದ ಮುಖೇನವೇ ವೃತ್ರಾಸುರನ ತಲೆಯನ್ನು ಕತ್ತರಿಸು ನೀವು ಕಳೆದುಕೊಂಡ ಸಂಪತ್ತುಗಳೆಲ್ಲ ಮತ್ತೆ ನಿಮಗೆ ದೊರಕುತ್ತದೆ". ಹೀಗೆ ಹೇಳಿ ಮಹಾವಿಷ್ಣು ದೇವತೆಗಳಿಗೆ ಹರಸಿ ಅದೃಷ್ಯನಾದ. ಇಂದ್ರಾದಿ ದೇವತೆಗಳು ದದೀಚಿ ಮಹರ್ಷಿಗಳ ಆಶ್ರಮದತ್ತ ತೆರಳಿದರು. ಇದಕ್ಕೂ ಪೂರ್ವದಲ್ಲಿ ಒಂದು ಘಟನೆ ನಡೆದಿತ್ತು. ಬ್ರಹ್ಯವಿಧ್ಯೆಯನ್ನು ಅರಿತ ದದೀಚಿ ಮಹರ್ಷಿಗಳ ಬಳಿಗೆ ಒಂದು ದಿನ ಅಶ್ವಿನೀ ಕುಮಾರರು ತೆರಳಿ ತಮಗೆ ಬ್ರಹ್ಮವಿದ್ಯೆಯನ್ನು ಉಪದೇಶ ಮಾಡಬೇಕೆಂದು ಕೇಳಿಕೊಂಡರು .. ಆದರೆ ಯಾವುದೋ ಕಾರ್ಯದಲ್ಲಿ ವ್ಯಸ್ಥರಾಗಿದ್ದ ಮಹರ್ಷಿಗಳು "ಈಗ ಸಮಯವಿಲ್ಲ ಇನ್ನೊಮ್ಮೆ ಬನ್ನಿ" ಎಂದು ಹೇಳಿ ಕಳುಹಿಸಿದ್ದರು. ಅವರು ಹಿಂತಿರುಗಿದ ಮೇಲೆ ಇಂದ್ರನಿಗೆ ಈ ವಿಷಯ ತಿಳಿಯಿತು. ತಾನೇ ಮಹರ್ಷಿಗಳ ಬಳಿಗೆ ಹೋಗಿ "ಯಾವ ಕಾರಣಕ್ಕೂ ಅಶ್ವಿನೀಕುಮಾರರಿಗೆ ವಿದ್ಯೆಯನ್ನು ಉಪದೇಶಮಾಡಕೂಡದೆಂದೂ... ತಪ್ಪಿ ಮಾಡಿದ್ದೇ ಆದರೆ ನಿಮ್ಮ ಶಿರಶ್ಚೇದ ಮಾಡುವೆ. " ಎಂದೂ ಹೇಳಿ ಬಂದಿದ್ದ. ಅಶ್ವಿನೀ ದೇವತೆಗಳು ಮತ್ತೊಂದು ದಿನ ದದೀಚಿಗಳ ಬಳಿಗೆ ತೆರಳಿ ವಿದ್ಯೆಯನ್ನು ಉಪದೇಶ ಮಾಡಲು ಕೇಳಿಕೊಂಡರು, ಆಗ ಮಹರ್ಷಿಗಳು ದೇವೇಂದ್ರನ ಸೂಚನೆಯನ್ನು ಹೇಳಿದರು. ಆಗ ಅಶ್ವಿನೀ ದೇವತೆಗಳು ಅದಕ್ಕೆ ಯೋಚಿಸುವ ಅವಶ್ಯಕತೆ ಇಲ್ಲಾ... ದೇವೇಂದ್ರ ಆ ಕಾರಣಕ್ಕಾಗಿ ತಲೆ ಕಡಿಯುವುದೇ ಆದರೆ ಅದಕ್ಕೆ ಬೇಕಾದ ಉತ್ತರ ತಮ್ಮಲ್ಲಿದೆಯೆಂದು ಹೇಳಿ... ನಾವು ಮೊದಲೇ ನಿಮ್ಮ ತಲೆಯನ್ನು ಕಡಿದು ಬೇರೊಂದು ತಲೆಯನ್ನು ಜೋಡಿಸುತ್ತೇವೆ, ಇಂದ್ರ ಬಂದು ನಿಮ್ಮ ತಲೆ ಕಡಿದರೆ ಆವಾಗ ಈಗ ಕತ್ತರಿಸಿದ ರುಂಡವನ್ನೇ ಮತ್ತೆ ತಂದು ಜೋಡಿಸುತ್ತೇವೆ ಎಂದರು. ಅವರ ಮಾತನ್ನು ಮೊದಲು ದದೀಚಿ ಮಹರ್ಷಿ ನಂಬದೇ ಹೋದರೂ ಕೊನೆಗೆ ಹಾಗೆಯೇ ಆಗಲೆಂದು ಹೇಳಿದಾಗ ಅಶ್ವಿನೀ ಕುಮಾರರು ದದೀಚಿಯ ತಲೆ ಕತ್ತರಿಸಿ ಆ ತಲೆಗೆ ಬದಲಾಗಿ ಒಂದು ಕುದುರೆಯ ತಲೆಯನ್ನು ಜೋಡಿಸುತ್ತಾರೆ. ಮಹರ್ಷಿಗಳು ಅದೇ ಅಶ್ವದ ಶಿರದಿಂದಲೇ ಅವರಿಗೆ ಬೋಧಿಸಬೇಕಾದ್ದನ್ನು ಪೂರೈಸುತ್ತಾರೆ.. ಆದ್ದರಿಂದಲೇ ದದೀಚಿ ಮಹರ್ಷಿಗೆ "ಅಶ್ವಶಿರಾ" ಅಂದರೆ ಕುದುರೆಯ ತಲೆಯುಳ್ಳವನು ಎಂಬ ಹೆಸರೂ ಬಂತು. 🙏🙏
ದದೀಚಿಯ ದೇಹದಾನ ಮುಂದಿನ ಭಾಗದಲ್ಲಿ🙏🙏
Sunday, July 27, 2025
ವೃತ್ರಾಸುರ 3
. ವಿಶ್ವರೂಪನಿಂದ ನಾರಾಯಣ ಕವಚನನ್ನು ಉಪದೇಶ ಪಡೆದ ಇಂದ್ರ, ಸ್ವರ್ಗಲೋಕವನ್ನು ಕೈವಶ ಮಾಡಿಕೊಂಡಿದ್ದ ಅಸುರರನ್ನು ಅತ್ಯಂತ ಸುಲಭದಲ್ಲಿ ಜಯಿಸಿ ಮತ್ತೆ ಪಡೆಯುತ್ತಾನೆ. ಇತ್ತ ವಿಶ್ವರೂಪ ದೇವಗುರುವಾಗಿ ಉಳಿದುಕೊಂಡಿದ್ದರೂ ಸಂಪೂರ್ಣವಾಗಿ ದೇವತೆಗಳಿಗಾಗಿಯೇ ಕಾರ್ಯಪ್ರವೃತ್ತನಾಗಲಿಲ್ಲ. ದೇವತೆಗಳ ಸಮ್ಮುಖದಲ್ಲಿ ಅವರಿಗೆ ಆಹುತಿ ನೀಡಿದರೆ... ಯಜ್ಞಗಳಲ್ಲಿ ದೇವತೆಗಳಿಗೆ ಗೊತ್ತಾಗದಂತೆ ಅಸುರರಿಗೂ ಹವಿಸ್ಸು ನೀಡುತ್ತಿದ್ದ. ಅನುಮಾನಗೊಂಡ ದೇವೇಂದ್ರನಿಗೆ ಈ ಕಪಟ ಅರಿವಿಗೆ ಬಂತು. ಕೃದ್ಧನಾದ ಇಂದ್ರ ಹಿಂದೆ ಮುಂದೆ ನೋಡದೇ ವಿಶ್ವರೂಪನ ಮೂರೂ ತಲೆಯನ್ನು ಕತ್ತರಿಸಿ ಹಾಕಿದ. ಹಾಗೆ ಕತ್ತರಿಸಿದ ತಲೆಗಳಲ್ಲಿ ಸೋಮರಸವನ್ನು ಕುಡಿಯುತ್ತಿದ್ದ ತಲೆ ಕಪಿಂಜಲ ಪಕ್ಷಿಯ ರೂಪವನ್ನೂ, ಸುರಾಪಾನ ಮಾಡುತ್ತಿದ್ದ ತಲೆ ಗುಬ್ಬಚ್ಚಿಯ ರೂಪವನ್ನೂ, ಮತ್ತು ಅನ್ನವನ್ನು ಉಣ್ಣುತ್ತಿದ್ದ ತಲೆ ತಿತ್ತಿರಿ ಪಕ್ಷಿಯ ರೂಪವನ್ನೂ ಹೊಂದಿದವು. ವಿದ್ಯಾವಂತನಾದರೂ ದುರ್ನೀತಿವಂತನಾಗಿ ವರ್ತಿಸಿದ ವಿಶ್ವರೂಪ ತಾನು ಮಾಡಿದ ಅಪಚಾರಕ್ಕಾಗಿ ತನ್ನ ಜೀವವನ್ನೇ ತೊರೆದ. ಇತ್ತ ಆತನ ತಲೆಯನ್ನು ಕಡಿದ ದೇವೇಂದ್ರನಿಗೆ ಬ್ರಹ್ಮಹತ್ಯಾ ದೋಷ ಅಂಟಿಕೊಂಡಿತು. ಇಂದ್ರ ತನಗೆ ಹತ್ತಿಕೊಂಡ ದೋಷವನ್ನು ನಾಲ್ಕು ಭಾಗವಾಗಿ ವಿಭಾಗಿಸಿದ. ಅದರಲ್ಲಿ ಒಂದು ಭಾಗವನ್ನು ಭೂಮಿಗೆ ನೀಡಿದ... ಅದರ ಫಲವಾಗಿಯೇ ಭೂಮಿಯಲ್ಲಿ ಅಲ್ಲಲ್ಲಿ ಮರುಭೂಮಿಯ ನಿರ್ಮಾಣವಾಯಿತು. ದೋಷ ಸ್ವೀಕರಿಸಿದ್ದಕ್ಕೆ ಪ್ರತಿಯಾಗಿ ಭೂಮಿಗೆ ಒಂದು ವರವನ್ನೂ ನೀಡಿದ. ಆ ವರದ ಕಾರಣದಿಂದಲೇ ಭೂಮಿಯಲ್ಲಿರುವ ಹಳ್ಳಕೊಳ್ಳಗಳು ಕ್ರಮೇಣ ಭರ್ತಿಯಾಗಿ ಸಮತಟ್ಟಾಗುವವು. ಎರಡನೆಯ ಭಾಗವನ್ನು ವೃಕ್ಷಗಳು ಪಡೆದವು. ಅದರ ಸೂಚನೆಯಾಗಿಯೇ ವೃಕ್ಷಗಳಲ್ಲಿ ಅಂಟಿನ ರೂಪ ಕಾಣುವುದು. ವರರೂಪದಲ್ಲಿ ತಮ್ಮಲ್ಲಿ ಕತ್ತರಿಸಲ್ಪಟ್ಟ ರೆಂಬೆ ಕೊಂಬೆಗಳು ಚಿಗುರಿಕೊಳ್ಳೊಲಿ ಎಂದು ಕೇಳಿದವು. ಮೂರನೆಯ ಭಾಗವನ್ನು ಜಲದಲ್ಲಿ ಬಿಟ್ಟ. ಅದರ ಪರಿಣಾಮವೇ ನೀರಿನಲ್ಲಿ ನೊರೆ ಗುಳ್ಳೆಗಳು ಕಾಣಿಸುವುದು. ಇನ್ನು ವರವಾಗಿ ನೀರು ವ್ಯಯವಾದರೂ ಪ್ರವಾಹ ರೂಪದಲ್ಲಿ ಮತ್ತೆ ತುಂಬಿಕೊಳ್ಳುವುದು. ನಾಲ್ಕನೆಯ ಭಾಗವನ್ನು ಸ್ತ್ರೀಯರಿಗೆ ನೀಡಿದ... ಅದರ ಪರಿಣಾಮವಾಗಿಯೇ ಸ್ತ್ರೀಯರಲ್ಲಿ ತಿಂಗಳೂ ರಜೋ ದೋಷ ಉಂಟಾಗುವುದು. ಇನ್ನು ವರವಾಗಿ ಸ್ತ್ರೀಯರು ಗರ್ಭವತಿಯರಾದರೂ ಕಾಮಸುಖ ಹೊಂದಬಹುದು .. ಜೊತೆಗೆ ಧರಿಸಿದ ಗರ್ಭಕ್ಕೆ ಹಾನಿಯಾಗದು. ಹೀಗೆ ಇಂದ್ರ ತನಗಂಟಿದ ದೋಷವನ್ನು ಹಂಚಿ .. ಸ್ವೀಕರಿಸಿದವರಿಗೆ ವರವನ್ನೂ ಕೊಟ್ಟು ಪರಿಶುದ್ಧನಾದ.
ಆದರೆ ಇದ್ದೊಬ್ಬ ಮಗನಾದ ವಿಶ್ವರೂಪನನ್ನು ಕಳೆದುಕೊಂಡು ತ್ವಷ್ಟ ಕೃಧ್ಧನಾಗಿದ್ದ. ಮಗನ ಸಾವಿಗೆ ಕಾರಣನಾದ ಇಂದ್ರನಿಗೆ ಸರಿಯಾದ ಬುದ್ಧಿಯನ್ನು ಕಲಿಸುವ ಸಲುವಾಗಿ ಇಂದ್ರ ನಾಶಕ್ಕೆ ಬೇಕಾದ ಯಜ್ಞ ಮಾಡಲು ಉಪಕ್ರಮಿಸಿದ. "ಸ್ವಾಹೇನ್ದ್ರ ಶತ್ರುರ್ವರ್ಧಸ್ವ.'' ಎಂಬ ಮಂತ್ರದಿಂದಲೇ ಆಹುತಿ ಕೊಡತೊಡಗಿದ. ಯಾವ ಇಂದ್ರನ ನಿರ್ನಾಮಕ್ಕಾಗಿ ಸಂತಾನವನ್ನು ಯಜ್ಞ ಮುಖೇನ ಪಡೆಯಹೊರಟನೋ ... ಆದರೆ ಮಂತ್ರಸ್ವರದಲ್ಲಿ ಅಪಚಾರವಾದ್ದರಿಂದ ಇಂದ್ರನನ್ನೇ ಶತ್ರುವಾಗಿ ಹೊಂದಿದ ಒಬ್ಬ ದೈತ್ಯ ದಕ್ಷಿಣಾಗ್ನಿಯಲ್ಲಿ ಮೇಲೆದ್ದು ಬಂದ. ಹುಟ್ಟಿ ಬಂದ ಕ್ಷಣದಲ್ಲಿಯೇ ದಶದಿಕ್ಕುಗಳನ್ನೂ ವ್ಯಾಪಿಸಿ ಬೆಳೆಯತೊಡಗಿದ. ಉರಿಯುತ್ತಿರುವ ಅಗ್ನಿಪರ್ವತದಂತೆ ಕಾಣಿಸುತ್ತಾ.. ಕೆಂಪಾದ ಕಣ್ಣುಗಳನ್ನು ಉಳ್ಳವನಾಗಿ ಕೆದರಿದ ಕೇಶರಾಶಿಯನ್ನು ಹೊಂದಿ ಉಗ್ರ ರೂಪದಿಂದ .. ಕೈಯಲ್ಲಿ ಶೂಲವನ್ನು ಹಿಡಿದು ವಿಕಟಾಟ್ಟಹಾಸ ಮಾಡುತ್ತ ಕುಣಿಯುತ್ತಿದ್ದ. ಸೂರ್ಯ ಚಂದ್ರರ ಸಂಚಾರಕ್ಕೂ ತಡೆಯೊಡ್ದುವ ರೀತಿಯಲ್ಲಿ ಭೀಕರವಾದ ಕಾಯವನ್ನು ಹೊಂದಿದ್ದ . ಅವನ ಭೀಕರ ರೂಪವನ್ನು ನೋಡಿ ಪ್ರತ್ಯಕ್ಷ ಕಾಲನೇ ಬೆವರಿದ. ಕೋರೆದಾಡೆಗಳನ್ನು ಹೊಂದಿದ ಆತ ಆಗಾಗ ಆಕಳಿಸುತ್ತಿದ್ದನು. ಆ ಭೀಕರಾಕೃತಿಯನ್ನು ನೋಡಿದ ಸಮಸ್ತ ಭೂತಗಳೂ ದಿಕ್ಕು ದೆಸೆಯಿಲ್ಲದೆ ಓಡತೊಡಗಿದರು. ಹಾಗೆ ಪ್ರಪಂಚವನ್ನೇ ಬೆದರಿಸುವ ರೂಪವನ್ನು ಹೊಂದಿ... ಎಲ್ಲಾ ಕಡೆಯಲ್ಲಿಯೂ ವ್ಯಾಪಿಸಿಕೊಂಡ ಕಾರಣ ಅವನಿಗೆ "ವೃತ್ರ " ಎಂಬ ಹೆಸರಾಯಿತು. 🙏🙏
ಮುಂದಿನ ಭಾಗದಲ್ಲಿ ಇನ್ನೂ ಇದೆ 🙏
Saturday, July 26, 2025
ವೃತ್ರಾಸುರ 2
ಸತ್ಯ ಲೋಕಾಧೀಶನಾದ ಬ್ರಹ್ಮ ದೇವರಿಂದ ನಿರ್ದೇಶಿತರಾದ ಇಂದ್ರಾದಿ ಸುಮನಸರು ನೇರವಾಗಿ ತ್ವಷ್ಟ ಪುತ್ರನಾದ ವಿಶ್ವರೂಪನ ಬಳಿಗೆ ಬರುತ್ತಾರೆ. (ಈ ತ್ವಷ್ಟನು ಯಾರೆಂಬ ಬಗೆಗೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ವಿವರಣೆ ಇದೆ, ಕೆಲವು ಕಡೆ ಶುಕ್ರಾಚಾರ್ಯರ ಮಗನೆಂದೂ, ಕೆಲವುಕಡೆ ಪ್ರಜಾಪತಿಗಳಲ್ಲಿ ಒಬ್ಬನೆಂದೂ, ಕೆಲವು ಕಡೆ ದ್ವಾದಶಾಧಿತ್ಯರಲ್ಲಿ ಒಬ್ಬನೆಂದೂ ಹೇಳಲಾಗಿದೆ..! ಶ್ರೀಮದ್ಭಾಗವತದಲ್ಲಿ ವಿಶ್ವರೂಪನ ಬಳಿಗೆ ಬಂದ ಇಂದ್ರ "ಮಗೂ ವಿಶ್ವರೂಪ " ಎಂದೇ ಸಂಭೋಧಿಸುತ್ತಾನೆ. ) ವಿಶ್ವರೂಪನ ಬಳಿ ಬಂದ ದೇವತೆಗಳಲ್ಲಿ ಇಂದ್ರನೇ ಮುಂದಾಗಿ ಮಾತಿಗೆ ತೊಡಗುತ್ತಾನೆ. "ಮಗೂ ನಿನಗಿಂತ ಹಿಯರಾದ ನಾವು ಒಂದು ಹಿರಿದಾದ ಉದ್ದೇಶವನ್ನಿಟ್ಟುಕೊಂಡು ನಿನ್ನ ಬಳಿಗೆ ಬಂದವರಿದ್ದೇವೆ. ಲೋಕದ ಹಿತಕ್ಕಾಗಿ ನೀನು ದೇವತೆಗಳ ಪರವಾಗಿ ನಿಲ್ಲುತ್ತೀ ಎಂಬ ನಂಬಿಕೆ ನಮಗೆಲ್ಲರಿಗೂ ಇದೆ.. ಈಗಾಗಲೇ ದೇವ ಪುರೋಹಿತರಾದ ಬೃಹಸ್ಪತಿ ಆಚಾರ್ಯರು ನಮ್ಮನ್ನು ತೊರೆದು ಹೋಗಿರುವುದು ನಿನಗೂ ತಿಳಿದೇ ಇದೆ ಎಂದು ಭಾವಿಸಿದ್ದೀವೆ. ದೇವ ಪುರೋಹಿತರ ಅನುಪಸ್ಥಿತಿಯಲ್ಲಿ ನಮಗಾದ ಪರಿಭವದ ಪರಿಣಾಮವನ್ನು ಲೋಕಗಳು ಅನುಭವಿಸುವಂತಾಗಿದೆ. ಈಗ ಅಸುರರ ವಶವಾದ ಸ್ವರ್ಗದ ಅಧಿಪತ್ಯವನ್ನು ಮರಳಿ ಪಡೆಯಲು ನೀನೇ ಕಾರಣನಾಗಬೇಕು.. ಇದು ಕೇವಲ ನಮ್ಮ ನಿರೀಕ್ಷೆ ಮಾತ್ರವಲ್ಲ. ಕಮಲಸಂಭವನಾದ ಬ್ರಹ್ಮ ದೇವರ ನಿರ್ದೇಶನವೂ ಆಗಿರುತ್ತದೆ ಹಾಗಾಗಿ ನೀನೀಗಲೇ ನಮ್ಮ ಉತ್ಕರ್ಷಕ್ಕೆ ಬೇಕಾಗಿ ಪೌರೋಹಿತ್ಯವನ್ನು ವಹಿಸಿಕೋ". ವಿಶ್ವರೂಪನು ಕ್ಷಣಕಾಲ ಯೋಚಿಸಿದ ಯಾಕೆಂದರೆ ಆತನೇನೂ ದೇವ ಪಕ್ಷಪಾತಿಯೇ ಆಗಿರಲಿಲ್ಲ. ವಿಶ್ವರೂಪನ ತಾಯಿ ಪ್ರಹ್ಲಾದನ ಮಗಳು ವಿರೋಚನೆ, ವಿಶ್ವರೂಪನಿಗೆ ಮೂರು ತಲೆಗಳಿದ್ದವು... ಹಾಗಾಗಿಯೇ ಅವನಿಗೆ ತ್ರಿಶಿರ ಎಂಬ ಹೆಸರೂ ಇತ್ತು. ಒಂದು ಮುಖದಿಂದ ವೇದಾಧ್ಯಯನ ಮಾಡುತ್ತಾ ಅನ್ನವನ್ನು ಉಣ್ಣುತ್ತಾ.. ಒಂದು ಮುಖದಲ್ಲಿ ಸೋಮಪಾನ ಮಾಡುತ್ತಾ ಮತ್ತೊಂದು ಮುಖದಲ್ಲಿ ಸುರಾಪಾನ ಮಾಡುತ್ತಿದ್ದ. ತಾಯಿಯ ಸಂಭಂಧದಿಂದ ಅಸುರರ ಬಗೆಗೆ ಹಿತವೂ ... ತಂದೆಯ ಸಂಬಂಧದಿಂದ ದೇವತೆಗಳ ಬಗ್ಗೆ ಅನುರಾಗವೂ ಇತ್ತು. ಹಾಗಾಗಿ ಇಂದ್ರಾದಿಗಳ ಮಾತಿಗೆ ಕ್ಷಣಕಾಲ ಯೋಚಿಸಿ.. " ದೇವತೆಗಳೇ ನೀವು ನನಗಿಂತ ಹಿರಿಯರೂ ಹೌದು, ನಿಮಗಾದ ಪರಿಭವವನ್ನು ನಾನು ತಿಳಿದೇ ಇದ್ದೇನೆ. ಆದರೆ...ನಿಮ್ಮ ಆಮಂತ್ರಣವನ್ನು ಸ್ವೀಕರಿಸಬೇಕಾದುದು ಸಾಧುವೋ ಎಂಬ ಅನುಮಾನ ನನಗೆ, ಬ್ರಾಹ್ಮಣ ತಾನು ಕಲಿತ ವಿದ್ಯೆಯನ್ನು ಎಂದಿಗೂ ಹಣಕ್ಕಾಗಿ ವಿನಿಯೋಗಿಸಕೂಡದು. ಪ್ರತಿಫಲಾಪೇಕ್ಷೆಯಿಂದ ವಿದ್ಯೆಯನ್ನು ಬಳಸಿದರೆ ಅಂತಹ ಕಾರ್ಯದಿಂದ ಅವನ ಬ್ರಾಹ್ಮಣ್ಯವೇ ನಾಶನಾಗುತ್ತದೆ. ಇನ್ನು ಪೌರೋಹಿತ್ಯ ಎನ್ನುವುದು ನನಗೆ ಬಂಧನವೂ ಹೌದು. ಆದರೆ ಹಿರಿಯರಾದ ನಿಮ್ಮ ನಿರ್ದೇಶನವನ್ನು ತಿರಸ್ಕರಿಸುವ ಹಾಗೂ ಇಲ್ಲ. ಈ ನೆವನದಲ್ಲಿಯಾದರೂ ದೇವತೆಗಳ ಸೇವೆಯನ್ನು ಮಾಡುವ ಭಾಗ್ಯ ನನಗೆ ದೊರೆಯುತ್ತದೆ. ನಿಮ್ಮೆಲರ ನಿರೀಕ್ಷೆ... ಹಾಗೆಯೇ ಮುಂದೆ ನಿಮ್ಮ ಸಹಕಾರವೂ ಇದೆ ಎಂದಾದರೆ ಒಪ್ಪಿಕೊಳ್ಳುತ್ತೇನೆ" ಎಂದು ಕೈಮುಗಿದು ಹೇಳಿದ. ವಿಶ್ವರೂಪನಾಡಿದ ಮಾತಿನಿಂದ ದೇವತೆಗಳಿಗೆಲ್ಲಾ ಅತೀವ ಸಂತೋಷವಾಯಿತು. ನಷ್ಟವಾದ ಸ್ವರ್ಗವನ್ನು ಮತ್ತೆ ಪಡೆಯಲು ಬೇಕಾದ ಮಾರ್ಗವನ್ನು ವಿಶ್ವರೂಪನ ನಿರ್ದೇಶನದಲ್ಲಿ ಪಡೆಯಲು ಉದ್ಯುಕ್ತರಾದರು. ವಿಶ್ವರೂಪನು "ವೈಷ್ಣವೀ" ವಿದ್ಯೆಯನ್ನು ಬಲ್ಲವನಾದ ಕಾರಣ ಶುಕ್ರ ಶಿಷ್ಯರಾದ ಅಸುರರಿಂದ ಸ್ವರ್ಗಾಧಿಕಾರವನ್ನು ಕಸಿದುಕೊಳ್ಳಲು ಬೇಕಾದ ಶಕ್ತಿಯ ಮೂಲವನ್ನು ಇಂದ್ರನಿಗೆ ಉಪದೇಶ ಮಾಡಿದ ಅದೇ " ನಾರಾಯಣ ಕವಚ ". ಓಂ ನಮೋ ನಾರಾಯಣಾಯ ಎಂಬ ಅಷ್ಟಾಕ್ಷರಿಯಿಂದ ಅಂಗನ್ಯಾಸ.., ಓಂ ನಮೋ ಭಗವತೇ ವಾಸುದೇವಾಯ ಎಂಬ ದ್ವಾದಶಾಕ್ಷರಿಯಿಂದ ಕರನ್ಯಾಸವನ್ನು ಮಾಡಿ... "ಓಂ ಹರಿರ್ವಿದಧ್ಯಾನ್ಮಮ ಸಮರಕ್ಷಾಂ " ಎಂದು ಆರಂಭಗೊಳ್ಳುವ ನಾರಾಯಣ ಕವಚವನ್ನು ವಿಶ್ವರೂಪನು ಇಂದ್ರನಿಗೆ ಉಪದೇಶ ಮಾಡಿದ. ನಾರಾಯಣ ಕವಚದ ಮಹಿಮೆಯ ಬಗ್ಗೆ ಹೇಳುವುದಾದರೆ ಒಂದು ಕಾಲದಲ್ಲಿ ಬ್ರಾಹ್ಮಣನೊಬ್ಬ ಈ ನಾರಾಯಣ ಕವಚ ಎಂಬ ಮಂತ್ರವಿದ್ಯೆಯನ್ನು ಅರಿತವ ಕಾಲಾಂತರದಲ್ಲಿ ದೇಹ ತೊರೆದು ಮುಕ್ತಿ ಹೊಂದಿದ. ಅವನು ಶರೀರ ತೊರೆದ ಸ್ಥಳದಲ್ಲಿ ಆಕಾಶಮಾರ್ಗದಲ್ಲಿ ಚಿತ್ರರಥನೆಂಬ ಗಂಧರ್ವ ತನ್ನ ಸ್ತ್ರೀಯರೊಡಗೂಡಿ ವಿಮಾನದಲ್ಲಿ ಸಾಗುತ್ತಿದ್ದ. ಇದ್ದಕ್ಕಿದ್ದಂತೆ ಚಿತ್ರರಥನ ವಿಮಾನ ಭೂಸ್ಪರ್ಷ ಮಾಡಿತು. ಕಾರಣ ಅರಿಯದೇ ಚಿಂತಿತನಾದ ಚಿತ್ರರಥನ ಬಳಿಗೆ ವಾಲಖಿಲ್ಯ ಖುಷಿಗಳು ಬಂದು .."ಅಯ್ಯಾ ಹಿಂದೆ ನಾರಾಯಣ ಕವಚ ಧರಿಸಿದ ಬ್ರಾಹ್ಮಣ ದೇಹ ತೊರೆದ ಸ್ಥಳವಪ್ಪಾ ಇದು" ಎಂದು ಹೇಳಿದರು. ಕೂಡಲೇ ಚಿತ್ರರಥ ಆ ಪ್ರದೇಶದಲ್ಲಿ ಸಿಕ್ಕ ಬ್ರಾಹ್ಮಣನ ಮೂಳೆಗಳನ್ನು ಸಂಗ್ರಹಿಸಿ ಪೂರ್ವ ದಿಕ್ಕಿನಲ್ಲಿ ಹರಿಯುತ್ತಿದ್ದ ಸರಸ್ವತೀ ನದಿಯಲ್ಲಿ ವಿಸರ್ಜನೆ ಮಾಡಿದ ಮೇಲೆ ಅವನ ವಿಮಾನ ಮೊದಲಿನಂತೆ ಸಾಗಿತು. ಇಂತಹ ಮಹಿಮೆಯುಳ್ಳ "ನಾರಾಯಣ ಕವಚ " ಇಂದ್ರನ ವಶವಾಯಿತು. 🙏🙏
ಮುಂದಿನ ಭಾಗ... ಇನ್ನೊಂದು ಕಂತಿನಲ್ಲಿ🙏
Thursday, July 24, 2025
ವೃತ್ರಾಸುರ ಭಾಗ 1
ಶ್ರೀಮದ್ಭಾಗವತದಲ್ಲಿ, ಮಹಾಭಾರತದಲ್ಲಿ ಮತ್ತು ರಾಮಾಯಣದಲ್ಲಿ, ಇನ್ನೂ ಅಲ್ಲಲ್ಲಿ ಬರುವ ಒಂದು ಕುತೂಹಲ ಹುಟ್ಟಿಸುವ ಕಥೆ ವೃತ್ರಾಸುರನದ್ದು.. ಈ ಕಥೆಯನ್ನು ಆರಂಭಿಸಿದರೆ ಕೆಲವು ಕಂತುಗಳೇ ಆಗಬಹುದು..
ತ್ರಿಲೋಕಾಧಿಪತಿಯಾದ ಇಂದ್ರ ಒಂದು ದಿನ ಅತ್ಯಂತ ಸಂತೋಷದಿಂದ ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶಾಧಿತ್ಯರು, ಮರುತ್ತುಗಳು, ಸಿದ್ದರು, ಚಾರಣರು, ವಿದ್ಯಾಧರರು, ಗಂಧರ್ವರು, ಮುಂತಾದವರೆಲ್ಲ ಸೇರಿದ್ದ ದೇವ ಸಭೆಯಲ್ಲಿ ತನ್ನರಸಿಯಾದ ಶಚೀದೇವಿಯೊಂದಿಗೆ ಸುರಸಿಂಹಾಸನದಲ್ಲಿ ಮಂಡಿಸಿದ್ದ. ಯಕ್ಷರು ಕಿನ್ನರರು ಮುಂತಾದವರು ಇಂದ್ರನ ಕೀರ್ತಿಯನ್ನು ಕೊಂಡಾಡುತ್ತಿದ್ದರು. ಯಾವುದೇ ರಾಕ್ಷಸರ ಉಪಟಳ ಇಲ್ಲದೇ ಇದ್ದ ಕಾರಣದಿಂದ ಸ್ವತಃ ದೇವೇಂದ್ರನೂ ಆನಂದದಿಂದಲೇ ಸಭಾ ಕಲಾಪವನ್ನು ನೋಡುತ್ತಾ ಮೈಮರೆತಿದ್ದ. ಆ ಸಂದರ್ಭಕ್ಕೆ ಸರಿಯಾಗಿ ದೇವಗುರುಗಳಾದ ಆಚಾರ್ಯ ಬೃಹಸ್ಪತಿಗಳು ಇಂದ್ರನ ಸಭೆಗೆ ಆಗಮಿಸಿದರು. ಸಭೆಯಲ್ಲಿ ನಡೆಯುತಿದ್ದ ನರ್ತನ ಗಾಯನಗಳಲ್ಲಿ ಮೈಮರೆತಿದ್ದ ಇಂದ್ರ ಸಭೆಗೆ ಆಗಮಿಸಿದ ದೇವಗುರುಗಳನ್ನು ಯತೋಚಿತವಾಗಿ ಸತ್ಕರಿಸಲಿಲ್ಲ, ಅಷ್ಟಕ್ಕೂ ಅವರನ್ನು ನೋಡಿ ಗೌರವ ಸೂಚಕವಾಗಿ ತಾನು ಕುಳಿತಿದ್ದ ಸಿಂಹಾಸನದಿಂದ ಮೇಲೇಳಲೂ ಇಲ್ಲ. ಇದನ್ನು ಗಮನಿಸಿದ ಆಚಾರ್ಯ ಬೃಹಸ್ಪತಿಗಳು ಇಂದ್ರನ ಅಹಂಕಾರವನ್ನು ಗಮನಿಸಿ ಬೇಸರಗೊಂಡು ಸಭೆಯಿಂದ ಸುಮ್ಮನೆ ಮನೆಗೆ ಹಿಂದಿರುಗಿ ಬಿಟ್ಟರು. ಇತ್ತ ಗುರುಗಳು ಹಿಂತಿರುಗಿದ ಮೇಲೆ ಇಂದ್ರನಿಗೂ ಇದು ಅರಿವಿಗೆ ಬಂತು.." ಅಯ್ಯೋ ನಾನೆಂತಹಾ ಹೀನ ಕಾರ್ಯ ಮಾಡಿದೆ ಗುರುಗಳು ಸಭೆಗೆ ಬಂದರೂ ಅವರನ್ನು ಉಪಚರಿಸಲಿಲ್ಲವಲ್ಲಾ... ಇದರಿಂದ ಪಾಪಕಾರ್ಯವನ್ನು ಮಾಡಿದ ನನಗೆ ಇನ್ನಾವ ಕೇಡು ಕಾದಿದೆಯೋ.. ಗುರುನಿಂದೆಯನ್ನು ಮಾಡಿದ ಯಾವೊಬ್ಬನೂ ಸ್ವಾಸ್ಥ್ಯದಿಂದ ಇರಲಾರ.. ಏನಾದರಾಗಲಿ ಗುರುಗಳ ಮನೆಗೇ ತೆರಳಿ ಅವರ ಮನವೊಲಿಸಿಕೊಂಡು ಕರೆತರುತ್ತೇನೆ" ಎಂದು ಹೇಳಿಕೊಂಡು ದೇವಗುರು ಬೃಹಸ್ಪತಿಗಳ ಸಧನದತ್ತ ತೆರಳಿದ. ಆದರೆ ಮನೆಗೆ ಬಂದ ಬೃಹಸ್ಪತಿಗಳು ಅಲ್ಲಿಂದಲೂ ಅದೃಶ್ಯರಾಗಿಹೋಗಿದ್ದರು. ಗುರುಗಳ ಮಂದಿರಕ್ಕೆ ಬಂದ ಇಂದ್ರಾದಿ ದೇವತೆಗಳಿಗೆ ಗುರುಗಳು ಕಾಣಿಸಲಿಲ್ಲ... ಎಲ್ಲಿ ಅರಸಿದರೂ ಗುರುಗಳು ಸಿಗಲಿಲ್ಲ. ದೇವೇಂದ್ರನ ದುಃಖ ಆತಂಕ ಇಮ್ಮಡಿಯಾಯಿತು. "ಗುರುಕಾರುಣ್ಯವಿಲ್ಲದೇ ಸ್ವರ್ಗದ ಅಧಿಕಾರವನ್ನು ಉಳಿಸಿಕೊಳ್ಳುವುದು ಹೇಗೆ... ಒಂದೆಡೆಯಲ್ಲಿ ಆಚಾರ್ಯರಾದ ಶುಕ್ರರು ಅಸುರ ಗುರುಗಳಾಗಿ ಅವರಿಗೆ ಬೇಕಾದ ವಿದ್ಯೆಯನ್ನು ಬೋಧಿಸುತ್ತಿದ್ದಾರೆ.. ಸ್ವರ್ಗ ಲೋಕವನ್ನು ಸದಾ ಹಂಬಲಿಸುವ ಅಸುರರೂ ಶುಕ್ರರ ಸಹಾಯದಿಂದ ಆಕ್ರಮಣ ಮಾಡುವ ಸಮಯವನ್ನು ಕಾಯುತ್ತಿದ್ದಾರೆ .. ಆಯ್ಯೋ ಏನು ಮಾಡಲಿ '' ಎಂದು ಚಿಂತಿಸತೊಡಗಿದ. ತ್ರಿಲೋಕಾಧಿಪತ್ಯವನ್ನು ಹೊಂದಿದ ಇಂದ್ರನೂ ಚಿಂತೆಯಲ್ಲಿ ಮುಂದೇನು ಎಂಬ ದಾರಿ ಕಾಣದೇ ಕುಳಿತ. ಈ ಸಂಗತಿಯನ್ನು ತಿಳಿದು ಇದೇ ಸರಿಯಾದ ಸಮಯವೆಂದ ತಿಳಿದ ಕಾಲಕೇಯರೇ ಮುಂತಾದ ಅಸುರರು ಸ್ವರ್ಗದ ಮೇಲೆ ಆಕ್ರಮಣ ಮಾಡಿದರು. ಸುರಾಸುರರಿಗೆ ನಡೆದ ಘೋರವಾದ ಯುದ್ಧದಲ್ಲಿ ದೇವತೆಗಳೆಲ್ಲರೂ ಪರಾಜಯ ಹೊಂದಬೇಕಾದ ಸ್ಥಿತಿ ಬಂತು. ಸೋತ ಇಂದ್ರಾದಿ ದೇವತೆಗಳು ಸ್ವರ್ಗವನ್ನು ಬಿಟ್ಟು ಪಲಾಯನ ಮಾಡಿದರು, ಮುಂದೇನು ಎಂಬ ಮಾರ್ಗ ತಿಳಿಯದೇ ಬ್ರಹ್ಮ ದೇವರ ಮೊರೆ ಹೊಕ್ಕರು. ದೇವತೆಗಳ ಮೊರೆಯನ್ನು ಕೇಳಿದ ಬ್ರಹ್ಮದೇವ " ಇಂದ್ರಾದಿ ದೇವತೆಗಳೇ ನಿಮ್ಮ ಸೋಲಿಗೆ ನಿಮ್ಮಿಂದ ಆದ ಅಪಚಾರವೇ ಕಾರಣ...
ನ ವಿಪ್ರಗೋವಿಂದಗವೀಶ್ವರಾಣಾಂ |
ಭವನ್ತ್ಯಭದ್ರಾಣಿ ನರೇಶ್ವರಾಣಾಂ | | (ಶ್ರೀಮದ್ಭಾಗವತ)
ಬ್ರಾಹ್ಮಣರನ್ನೂ, ಗೋವಿಂದನನ್ನೂ ಮತ್ತು ಗೋವುಗಳನ್ನೂ ತಮ್ಮ ಸರ್ವಸ್ವವೆಂದು ತಿಳಿದು ಗೌರವಿಸಬೇಕಾದ ನೀವು ಆಂಗಿರಸ ಪುತ್ರನಾದ ನಿಮ್ಮ ಗುರು ಬೃಹಸ್ಪತಿಗೆ ನೀವು ಮಾಡಿದ ಅವಮಾನಕ್ಕಾಗಿ ಇಂತಹ ಪರಾಭವವನ್ನು ಅನುಭವಿಸುತ್ತಾ ಇದ್ದೀರಿ... ದೇವಲೋಕದಲ್ಲಿ ಈಗ ಕಾಲ ಕಾಲಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡಿ, ದುಷ್ಟರ ಆಕ್ರಮಣವಾದಾಗ ಗೆಲುವಿಗೆ ಬೇಕಾದುದನ್ನು ಉಪದೇಶ ಮಾಡುವ ಗುರುವೇ ಇಲ್ಲ... ಇನ್ನು ನಿಮಗೆ ಜಯ ಎಲ್ಲಿಯದು. ಅತ್ತ ಆಚಾರ್ಯ ಶುಕ್ರನು ರಾಕ್ಷಸರಿಂದ ಯಜ್ಞಗಳನ್ನು ಮಾಡಿಸುತ್ತಾ ಅವರ ಬಲ ವೃದ್ಧಿಯಾಗುವಂತೆ ಮಾಡುತ್ತಿದ್ದಾನೆ.. ನೀವು ಕಳೆದುಕೊಂಡ ಸ್ವರ್ಗಾಧಿಪತ್ಯವನ್ನು ಮರಳಿ ಪಡೆಯಲು ಯೋಗ್ಯನಾದ ಗುರುವಿನಿಂದ ಸೂಕ್ತವಾದ ನಿರ್ದೇಶನದ ಅನಿವಾರ್ಯತೆ ಇದೆ. ಪ್ರಸ್ತುತ "ತ್ವಸ್ಟ '' ಪುತ್ರನಾದ "ವಿಶ್ವರೂಪ " ಯೋಗ್ಯನಿದ್ದಾನೆ. ಆದರೆ ಅವನಿಗೆ ರಾಕ್ಷಸರ ಬಗ್ಗೆ ಕೂಡ ಒಲವಿದೆ. ಆದರೂ ಅವನನ್ನು ಪ್ರಾರ್ಥಿಸಿ ನಿಮ್ಮ ಗುರುವನ್ನಾಗಿ ಸ್ವೀಕರಿಸಿದರೆ ಅವನ ಉಪದೇಶದಿಂದ ಸ್ಪರ್ಗಾಧಿಕಾರವನ್ನು ಮರಳಿ ಪಡೆಯಬಹುದು ". ಎಂದು ಹೇಳಿದ 🙏
ಮತ್ತೆ ಮುಂದಿನ ಭಾಗದಲ್ಲಿ 🙏🙏
Wednesday, July 23, 2025
ಅಜಾಮಿಳ
ಶ್ರೀಮದ್ಭಾಗವತದ ಆರನೇ ಸ್ಕಂಧದಲ್ಲಿ ಬರುವ ಒಂದು ಕಥೆ... ಸುಲಭ ಭಕ್ತಿಯ ಪ್ರತೀಕವಾಗಿ ಎಲ್ಲೆಡೆಯಲ್ಲಿಯೂ ಹೇಳುವ ಒಂದು ಹೆಸರು "ಅಜಾಮಿಳ "...
ಒಂದು ಕಾಲದಲ್ಲಿ ಕನ್ಯಾಕುಬ್ಜ ದೇಶದಲ್ಲಿ ಧರ್ಮಕರ್ಮಗಳಿಂದ ಜೀವನ ನಡೆಸುತ್ತಿದ್ದ ಒಬ್ಬ ಬ್ರಾಹ್ಮಣನಿದ್ದ ಅವನಿಗೆ ಒಬ್ಬ ಪುತ್ರ ಅವನ ಹೆಸರು ಅಜಾಮಿಳ... ತಂದೆ ತಾಯಿಯರ ಸೇವೆ ಮಾಡುತ್ತಾ ಇದ್ದ. ಚಿಕ್ಕ ಪ್ರಾಯದಲ್ಲಿಯೇ ಅವನಿಗೆ ಮದುವೆಯೂ ಆಗಿತ್ತು, ರೂಪವತಿಯಾದ ಹೆಂಡತಿ ಇದ್ದಳು. ಹೀಗಿರುವಾಗ ಎಂದಿನಂತೆಯೇ ಒಂದು ದಿನ ಕುಶ ಸಮಿಧೆಗಳನ್ನು, ಹಣ್ಣು ಹೂವುಗಳನ್ನು ಸಂಗ್ರಹಿಸಲು ಆತ ಅರಣ್ಯದತ್ತ ಹೊರಟ. ದಾರಿಯಲ್ಲಿ ಸಾಗುತ್ತಿರುವಾಗ ವಿಟ ಪುರುಷನೊಬ್ಬ ಒಬ್ಬಳು ವೇಶ್ಯೆಯೊಂದಿಗೆ ವಿಹರಿಸುತ್ತಿರುವುದನ್ನು ನೋಡಿದ. ಮಧ್ಯವನ್ನು ಸೇವಿಸಿದ್ದ ಆ ಹೆಂಗಸು ಯಾವ ಪರಿವೆಯೂ ಇಲ್ಲದೆ ಅರೆನಗ್ನಳಾಗಿ ಅನ್ಯ ಪುರುಷನೊಂದಿಗೆ ವಿವರಿಸುತ್ತಿದ್ದಳು. ಇದನ್ನು ನೋಡಿದ ಅಜಾಮಿಳನಿಗೆ ಅವಳ ಮೇಲೆ ಕಾಮವಾಂಛೆಯುಂಟಾಯಿತು. ತನ್ನ ಆಶ್ರಮಧರ್ಮವನ್ನು ಮರೆತು ಹೇಗಾದರೂ ಅವಳನ್ನು ಒಲಿಸಿಕೊಳ್ಳಬೇಕೆಂದು ತೀರ್ಮಾನಿಸಿದ. ದಿನದಿನವೂ ಅವಳಿಗೆ ಬೇಕಾದ ಧನಕನಕಗಳನ್ನು ತೆಗೆದುಕೊಂಡು ಹೋಗಿ ಕೊಡತೊಡಗಿದ. ತನ್ನ ಸಂಪತ್ತು... ತಂದೆ ಗಳಿಸಿದ ಸಂಪತ್ತುಗಳೂ ವ್ಯಯವಾಯಿತು. ಕೊನೆಗೆ ತಂದೆ-ತಾಯಿಯರನ್ನು ತೊರೆದು, ಹೆಂಡತಿಯನ್ನು ತೊರೆದು, ಮನೆಯನ್ನು ಬಿಟ್ಟು ಅವಳ ಜೊತೆಗೇ ಇರತೊಡಗಿದ. ಈಗ ವೇಶ್ಯೆಯ ಜೊತೆಗಿನ ಸಂಸಾರ ಬೆಳೆಯತೊಡಗಿತು..! ಅವನಿಂದ ಮಕ್ಕಳು ಹುಟ್ಟಿದರು. ಸಂಸಾರ ನಿರ್ವಹಣೆಗೆ ದರೋಡೆ ಮಾಡಿದ... ಕಳ್ಳತನಕ್ಕೆ ಇಳಿದ.. ಹೀಗೇ ದಿನ ಕಳೆಯುತ್ತಾ ತನ್ನ ಆಶ್ರಮಧರ್ಮವನ್ನು ಪೂರ್ಣ ತ್ಯಜಿಸಿ ತೀರಾ ಹೀನ ಮಾರ್ಗದಲ್ಲಿ ಬದುಕತೊಡಗಿದ. ಹತ್ತು ಜನ ಮಕ್ಕಳು ಅವನಿಗೆ ಹುಟ್ಟಿದರು ಅವರಲ್ಲಿ ಕಿರಿಯ ಮಗನ ಹೆಸರು "ನಾರಾಯಣ". ಹೀಗೇ ಅವಳ ಜೊತೆಯ ಸಂಸಾರದಲ್ಲಿ ಅಜಾಮಿಳನಿಗೆ ಎಂಬತ್ತು ವರ್ಷಗಳ ವಯಸ್ಸು ಕಳೆದವು. ಅಲ್ಲಿಗೆ ಅಜಾಮಿಳನ ಆಯಸ್ಸು ಮುಗಿದ ಕಾರಣ ಅವನನ್ನು ಕರೆದೊಯ್ಯಲು ಮೂರು ಜನ ಯಮದೂತರು ಬಂದರು. ಮರಣಶಯ್ಯೆಯಲ್ಲಿದ್ದ ಅಜಾಮಿಳನಿಗೆ ಯಮದೂತರು ಕಾಣಿಸಿಕೊಂಡರು. ಆ ಸಂದರ್ಭದಲ್ಲಿ ಯಮದೂತರು ಪಾಶವನ್ನು ಬೀಸಿದಕೂಡಲೇ ಅಜಾಮಿಳನಿಗೆ ತನ್ನ ಕಿರಿಯ ಮಗನಾದ ನಾರಾಯಣನ ನೆನಪಾಯಿತು. ಕಿರಿಯ ಪುತ್ರನಾದ ನಾರಾಯಣನನ್ನು ಕಂಡರೆ ಅವನಿಗೆ ತುಂಬಾ ಪ್ರೀತಿ.. ಅವನನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು ಊಟಮಾಡಿಸಿದ.. ಆಟವಾಡಿಸಿದ... ಸಂದರ್ಭಗಳು ನೆನಪಾಯಿತು. ಅಜಾಮಿಳನ ಕಣ್ಣುಗಳಲ್ಲಿ ನೀರು ತುಂಬಿಕೊಂಡು " ನಾರಾಯಣಾ" ಎಂದು ಕರೆದ. ಹಾಗೆ ಕರೆದ ಕೂಡಲೇ ಒಂದು ಚಮತ್ಕಾರವೇ ನಡೆದುಹೋಯಿತು... ಪಾಶವನ್ನು ಬೀಸಿ ಅಜಾಮಿಳನ ಜೀವವನ್ನು ಸೆಳೆಯಲು ಸಿಧ್ಧರಾಗಿದ್ದ ಯಮದೂತರ ಸಮ್ಮುಖದಲ್ಲಿ ನಾಲ್ಕು ಜನ ವಿಷ್ಣುದೂತರು ಬಂದು ನಿಂತಿದ್ದರು. ಇವರನ್ನು ನೋಡಿದಾಕ್ಷಣ ಯಮದೂತರು ಆಶ್ಚರ್ಯದಿಂದ ನೀವಾರೆಂದು ಪ್ರಶ್ನೆ ಮಾಡಿದರು. ಆಗ ವಿಷ್ಣುದೂತರು ತಮ್ಮ ಪರಿಚಯವನ್ನು ಮಾಡಿಕೊಂಡು ಅಜಾಮಿಳನ ಜೀವಾತ್ಮವನ್ನು ಕೊಂಡೊಯ್ಯುವುದನ್ನು ತಡೆಯಲು ಬಂದಿರುವುದಾಗಿ ಹೇಳಿದರು. ಆಗ... "ಮಹಾನುಭಾವರೇ... ವಿಷ್ಣುದೂತರಾದ ನೀವು ಇವನ ಜೀವವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ತಡೆಯಲು ಬಂದದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಈತ ತನ್ನ ಧರ್ಮವನ್ನು ತೊರೆದು ಜೀವನ ಮಾಡಿದವ, ಪಾಣಿಗ್ರಹಣ ಮಾಡಿದ ಸತಿಯನ್ನು ತೊರೆದು.. ತನ್ನ ವೃದ್ಧ ಮಾತಾಪಿತೃಗಳನ್ನು ತೊರೆದು... ತನ್ನ ವರ್ಣಾಶ್ರಮ ಧರ್ಮವನ್ನು ತೊರೆದು.. ಕೇವಲ ಇಂದ್ರಿಯ ಸುಖಕ್ಕಾಗಿ ಒಬ್ಬಳು ವೇಶ್ಯೆಯ ಸಂಗ ಮಾಡಿದ. ಅವಳೊಂದಿಗೆ ಜೀವನ ನಡೆಸಲು ಬೇಕಾಗಿ ಕಳ್ಳತನ ದರೋಡೆಯನ್ನು ಮಾಡಿದ ಇಂತಹ ದುಷ್ಟ ಪೃವೃತ್ತಿಯಲ್ಲಿಯೇ ಬದುಕಿದ ಇವನ ಆಯಸ್ಸು ಮುಗಿದಿದೆ, ಹಾಗಾಗಿ ನಾವು ಕರೆದೊಯ್ದ ಇವನ ಪಾಪ ಕಾರ್ಯಗಳಿಗೆ ಶಿಕ್ಷೆಯನ್ನು ವಿದಿಸಬೇಕಾಗಿದೆ". ಆಗ ವಿಷ್ಣುದೂತರು "ಯಮಕಿಂಕರರೇ...ಈತನು ಹಿಂದಿನ ಹಲವು ಜನ್ಮಗಳಲ್ಲಿ ಮಾಡಿದ ಎಲ್ಲಾ ಪಾಪಗಳಿಗೂ ಪ್ರಾಯಶ್ಚಿತ್ತವನ್ನು ಮಾಡಿಕೊಂಡಾಗಿದೆ. ಯಾಕೆಂದರೆ ಇವನು ತನ್ನ ಮಗನನ್ನು ಕರೆಯುವ ವ್ಯಾಮೋಹದಲ್ಲಿ ಪರಮಪವಿತ್ರವಾದ ಶ್ರೀಹರಿಯ "ನಾರಾಯಣಾ" ಎಂಬ ಹೆಸರನ್ನು ಉಚ್ಛರಿಸಿದ್ದಾನೆ. ಎಂತಹ ಪಾತಕಿಯೇ ಆಗಲಿ .. ಎಲ್ಲಾ ಪಾತಕಗಳಿಗೂ ನಾರಾಯಣ ನಾಮವನ್ನು ಉಚ್ಛರಿಸುವುದೇ ಪ್ರಾಯಶ್ಚಿತ್ತ. ಮಹಾತ್ಮರು ಪಾತಕಗಳ ಪರಿಹಾರಕ್ಕಾಗಿ ಕೃಚ್ಛ- ಚಾಂದ್ರಾಯಣವೇ ಮುಂತಾದ ವ್ರತಗಳನ್ನು ವಿಧಿಸಿದ್ದಾರೆ, ಆದರೆ ಭಗವಂತನ ನಾಮ ಸಂಕೀರ್ತನದಿಂದ ಅಂತಹ ವ್ರತಗಳಿಂದ ಸಿಗಬಹುದಾದ ಫಲಗಳಿಂದ ಹೆಚ್ಚು ದೊರೆಯುತ್ತದೆ. ಅವನು ಯಾವ ಕಾರಣಕ್ಕಾಗಿಯಾದರೂ ಭಗವಂತನ ನಾಮವನ್ನು ಉಚ್ಚರಿಸಲಿ.... ತಿಳಿದೋ ತಿಳಿಯದೆಯೋ ಹೊತ್ತಿಕೊಂಡ ಬೆಂಕಿ ಕಟ್ಟಿಗೆಯನ್ನು ಸುಡುತ್ತದೆ... ಹಾಗೆಯೇ ಯಾವ ಕಾರಣಕ್ಕಾಗಿಯಾದರೂ ಉಚ್ಛರಿಸಿದ ನಾರಾಯಣನೆಂಬ ನಾಮ ಇವನ ಪಾಪವನ್ನು ಸುಟ್ಟು ಬೂದಿ ಮಾಡಿದೆ. ಹಾಗಾಗಿ ಈತ ಯಮಸಧನವನ್ನು ಸೇರಿ ಯಾವುದೇ ರೀತಿಯ ಶಿಕ್ಷೆಗಳನ್ನು ಅನುಭವಿಸಬೇಕಾಗಿಲ್ಲ ಇವನನ್ನು ಬಿಟ್ಟು ಬಿಡಿ" ವಿಷ್ಣುದೂತರ ಮಾತನ್ನ ಕೇಳಿದ ಯಮಕಿಂಕರರು ಪಾಶದಲ್ಲಿ ಬಂಧಿಸಿದ ಅಜಾಮಿಳನನ್ನು ಬಿಟ್ಟು ಹೊರಟು ಹೋಗುತ್ತಾರೆ. ಪ್ರಾಣ ತ್ಯಜಿಸುವ ಹಂತದಲ್ಲಿದ್ದ ಅಜಾಮಿಳನಿಗೆ ಇದೆಲ್ಲವೂ ಕನಸಿನ ರೂಪದಲ್ಲಿ ಕಾಣಿಸುತ್ತದೆ. ಎಚ್ಚರಗೊಂಡು ನೋಡುವಷ್ಟರಲ್ಲಿ ವಿಷ್ಣುದೂತರೂ ಅದೃಷ್ಯರಾಗುತ್ತಾರೆ. ಅಗ ಅಜಾಮಿಳ "ಜೀವನದಲ್ಲಿ ತಾನೆಂತಹ ದುರ್ವರ್ತನೆಗೆ ಮುಂದಾದೆ ... ಒಂದು ಹೆಣ್ಣಿನ ಕಾರಣದಿಂದ ನಾಚಿಕೆಗೆಟ್ಟವನಾಗಿ ಬದುಕಿದೆ.. ಆದರೆ ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯಫಲದಿಂದ ನಾರಾಯಣ ಎಂಬ ನಾಮವನ್ನು ಮರಣಕಾಲದಲ್ಲಿ ಉಚ್ಛರಿಸಿದೆ. ಅದೇ ನನ್ನ ಮರಣಭಯ ನಿವಾರಣೆಗೆ ಕಾರಣವಾಯಿತು ಎಂದಾದರೆ ... ಸಾಕು ಈ ಹೀನ ಬದುಕು" ಎಂದು ಯೋಚಿಸಿ ಎಲ್ಲವನ್ನೂ ತೊರೆದು ಹರಿದ್ವಾರಕ್ಕೆ ಹೋಗುತ್ತಾನೆ. ಅಲ್ಲಿ ಹಲವು ಕಾಲ ಭಗವನ್ನಾಮ ಸಂಕೀರ್ತನೆ ಮಾಡುತ್ತಾ.. ಯೋಗವನ್ನುನುಸರಿಸುತ್ತಾ . ಆತ್ಮಚಿಂತನೆ ಮಾಡುತ್ತಾ .. ವಿಷಯಾಸಕ್ತಿಗಳಿಂದ ಬುದ್ಧಿಯನ್ನು ಬೇರ್ಪಡಿಸಿ ಭಗವಂತನ ಮೋಕ್ಷಧಾಮವನ್ನು ಮಾತ್ರ ಲಕ್ಷ್ಯವಾಗಿಟ್ಟುಕೊಂಡು ಕಳೆದ... ಕೊನೆಗೆ ಒಂದು ದಿನ ಪವಿತ್ರವಾದ ಗಂಗಾತಟದಲ್ಲಿ ದೇಹತ್ಯಾಗ ಮಾಡುತ್ತಾನೆ. ತಕ್ಷಣದಲ್ಲಿಯೇ ವಿಷ್ಣುದೂತರು ಸ್ವರ್ಣಮಯವಾದ ವಿಮಾನವನ್ನು ತಂದು ಇವನನ್ನು ವಿಮಾನವೇರಿಸಿಕೊಳ್ಳುತ್ತಾರೆ.. ಇವನೂ ಕೂಡ ಭಗವಂತನ ಪಾರ್ಷದರಾದ ವಿಷ್ಣುದೂತರ ರೂಪವನ್ನೇ ಹೊಂದಿ ಜನನ ಮರಣವರ್ಜಿತವಾದ ಮೋಕ್ಷವನ್ನು ಪಡೆದು ವೈಕುಂಠ ಲೋಕವನ್ನು ಸೇರಿಕೊಳ್ಳುತ್ತಾನೆ.🙏🙏
ಮುಂದೊಂದು ಹೊಸ ಕಥೆ🙏🙏
Thursday, July 17, 2025
ಸಾವಿತ್ರಿ ಭಾಗ 7
" ನಾನು ನನ್ನ ಪತಿಯನ್ನು ಹಿಂಬಾಲಿಸಿ ಬರುತ್ತಿದ್ದೇನೆ... ಹಾಗಾಗಿ ನನಗೆ ಯಾವ ರೀತಿಯ ಬಳಲಿಕೆಯೂ ಇಲ್ಲ, ಜೊತೆಗೆ ಧರ್ಮದೇವನಾದ ನಿನ್ನೊಂದಿಗೆ ಮಾತಾಡುತ್ತಿರುವ ಕಾರಣದಿಂದ ಕ್ರಮಿಸಿದ ಮಾರ್ಗ ಎಷ್ಟು ಎಂಬ ಗಣನೆಯೂ ನನಗಿಲ್ಲ.. ದೇವ.. ನಿನ್ನಿಂದ ಸೃಷ್ಠಿಯ ಸಮಸ್ತ ಜೀವಿಗಳೂ ಅಂತ್ಯವನ್ನು ಹೊಂದುತ್ತವೆ. ಪ್ರತಿಯೊಂದು ಜೀವಿಯ ಆಯಸ್ಸನ್ನು ತಿಳಿದು ಅದು ಮುಗಿದಾಗ ಅವುಗಳನ್ನು ಕೊಂಡೊಯ್ಯವೆ, ಆದರೆ ಜೀವಿಯ ಆಯಸ್ಸನ್ನು ನಿರ್ಧರಿಸುವವ ನೀನಲ್ಲ ಆಯಾ ಜೀವಿಯ ಲಲಾಟ ಲಿಖಿತವನ್ನರಿತು ನಿನ್ನ ಕಾರ್ಯವನ್ನು ಕೈಗೊಳ್ಳುವೆ.. ಇಲ್ಲಿ ನಿನ್ನ ಇಷ್ಟ-ಅನಿಷ್ಟಗಳ ನಿರ್ಧಾರಗಳಿಲ್ಲ. ಜೀವಿಯ ಕರ್ಮಗಳಿಗನುಗುಣವಾಗಿ ಹೊಂದಬೇಕಾದುದನ್ನು ನೀನು ನಿರ್ಣಯಿಸುತ್ತೀ.. ಹಾಗಾಗಿಯೇ ನೀನು ''ಯಮ''. ಇನ್ನೊಂದು ಮಾತು... ಪ್ರಪಂಚದಲ್ಲಿರುವ ಎಲ್ಲ ಜೀವಿಗಳೂ ಬಲಹೀನರೇ ಸರಿ ಆದರೆ ಸತ್ಪುರುಷರು ಅಂತಹ ಬಲಹೀನರಿಗೆ ಅವುಗಳ ಕರ್ಮಾನುಸಾರ ತಮ್ಮ ಬಲವನ್ನು ನೀಡಿ ಉದ್ಧರಿಸುತ್ತಾರೆ. ಎಂತಹ ವಿರೋಧಿಯೇ ಒಂದು ಸಂದರ್ಭದಲ್ಲಿ ಬಂದು ಯಾಚಿಸಿದರೆ ಸತ್ಪುರುಷರು ದಯೆಯಿಂದ ಅವರಿಗೆ ರಕ್ಷಣೆ ನೀಡುತ್ತಾರೆ ". ಅವಳ ಮಾತನ್ನು ಕೇಳಿದ ಯಮಧರ್ಮ "ಸಾವಿತ್ರೀ.. ನಿನ್ನ ಮಾತುಗಳು ಬಾಯರಿದವನಿಗೆ ತಿಳಿನೀರು ಎಷ್ಟು ಸಂತೋಷ ಕೊಡುವುದೋ ಹಾಗೇ ನನಗೂ ಸಂತೋಷವನ್ನುಂಟುಮಾಡುತ್ತಿದೆ, ನಾನು ಸುಪ್ರೀತನಾದೆ... ನಿನ್ನ ಪತಿಯ ಪ್ರಾಣವೊಂದನ್ನುಳಿದು ಬೇರೇನು ವರ ಬೇಕು ಕೇಳು". ಹೆಣ್ಣಾದವಳು ಕೊಟ್ಟ ಮನೆ ಮತ್ತು ಹುಟ್ಟಿದ ಮನೆಗಳೆರಡರ ಉದ್ಧಾರವನ್ನು ಸದಾ ಯೋಚಿಸುತ್ತಾಳೆ, ಧರ್ಮದೇವ ಕೊಟ್ಟ ಮೊದಲೆರಡು ವರಗಳನ್ನು ತಾನು ಸೇರಿದ ಮನೆಯ ಉದ್ಧಾರಕ್ಕೆ ಬಳಸಿದ ಸಾವಿತ್ರಿ ಮೂರನೆಯ ವರವಾಗಿ "ಧರ್ಮದೇವ ... ಮಾದ್ರ ದೇಶವನ್ನು ಆಳುತ್ತಿರುವ ನನ್ನ ತಂದೆಗೆ ಗಂಡು ಸಂತಾನವಾಗಬೇಕೆಂದು ಬಹಳ ಬಯಕೆಯಿದ್ದಿತು. ನನ್ನ ತಂದೆಯಾದ ಅಶ್ವಪತಿ ಮಹಾರಾಜನಿಗೆ ನೂರು ಮಂದಿ ಔರಸಪುತ್ರರು ಜನಿಸಲಿ" ಎಂದು ಕೇಳಿದಳು. " ಆಯಿತು ಸಾವಿತ್ರಿ... ನಿನ್ನ ತಂದೆಗೆ ವೀರರಾದ ವರ್ಚಸ್ವಿಗಳಾದ ನೂರು ಮಂದಿ ಪುತ್ರರು ಜನಿಸುತ್ತಾರೆ, ಅವರಿಂದ ಆತನ ಕುಲ ಮುಂದುವರಿಯುತ್ತದೆ.. ಸಾದ್ವೀ ನೀನು ಬಯಸಿದ್ದನ್ನು ವರರೂಪದಲ್ಲಿ ಪಡೆದಿದ್ದೀ..ನೀನಿನ್ನು ಹಿಂತಿರುಗಿ ಹೋಗು ಈಗಾಗಲೇ ಬಹಳದೂರ ನನ್ನನ್ನು ಅನುಸರಿಸಿ ಬಂದಿದ್ದೀ...". ಯಮನ ಎಚ್ಚರಿಕೆಯನ್ನು ಗಣಿಸದೆ ಸಾವಿತ್ರೀ " ದೇವ ಎಷ್ಟು ದೂರ ಕ್ರಮಿಸಿದರೂ ನನ್ನ ಜೊತೆಗೆ ಸತ್ಯವಾನನೂ ಇದ್ದಾನೆ ಎಂಬ ಸಮಾಧಾನ ನನಗೆ ಹಾಗಾಗಿ ಇನ್ನೂ ಮುಂದೆ ಸಾಗಬೇಕೆಂಬ ತವಕ.. ಧರ್ಮದೇವ ನೀನು ಸೂರ್ಯಪುತ್ರ ಹಾಗಾಗಿ ನಿನ್ನನ್ನು ವೈವಸ್ವತ ಎಂದೂ ಕರೆಯುತ್ತಾರೆ.. ಸೂರ್ಯಕಿರಣಗಳು ತಾರತಮ್ಯವಿಲ್ಲದೇ ಹೇಗೆ ಎಲ್ಲೆಡೆಯಲ್ಲಿಯೂ ಹರಡಿಕೊಳ್ಳುವವೋ ಹಾಗೇ ನೀನು ಧರ್ಮದಿಂದ ಎಲ್ಲರನ್ನೂ ಪಾಲಿಸುತ್ತೀಯ ಹಾಗಾಗಿ ನೀನು ಧರ್ಮರಾಜ.. ಪ್ರಪಂಚದಲ್ಲಿ ಸತ್ಪುರುಷರೂ ಹಾಗೆಯೇ .. ಮಿತ್ರ - ಶತ್ರು ಎಂಬ ಬೇಧವಿಲ್ಲದೆಯೇ ಎಲ್ಲರಲ್ಲೂ ಪ್ರೀತಿಯಿಂದ ವರ್ತಿಸುತ್ತಾರೆ, ಹಾಗಾಗಿಯೇ ಎಲ್ಲರೂ ಸಜ್ಜನರ ಸಂಗವನ್ನೇ ಬಯಸುತ್ತಾರೆ". ಸಾವಿತ್ರಿಯ ಮಾತುಗಳನ್ನು ಕೇಳಿದ ಧರ್ಮರಾಜ " ಮಗಳೇ ನಾನು ಇಲ್ಲಿಯವರೆಗೆ ಯಾರಿಂದಲೂ ಇಂತಹ ಅರ್ಥಪೂರ್ಣವಾದ ಮಾತುಗಳನ್ನು ಕೇಳಿರಲಿಲ್ಲ .. ನಿನ್ನ ಮಾತಿನ ಸವಿಗೆ ನಾನು ಸೋತಿದ್ದೇನೆ ಹಾಗಾಗಿ ನಾಲ್ಕನೆಯ ವರವನ್ನು ಕೊಡುತ್ತೇನೆ. ಸತ್ಯವಾನನ್ನುಳಿದು ಬೇರೇನು ಬೇಕು ಕೇಳು". ಆಗ ಸಾವಿತ್ರಿ ನಾಲ್ಕನೆಯ ವರವಾಗಿ " ನನ್ನ ವಂಶಾಭಿವೃದ್ಧಿಗೆ ಕಾರಣರಾಗುವ, ಬಲಾನ್ವಿತರಾದ ನೂರು ಮಂದಿ ಮಕ್ಕಳು ನನಗೆ ಔರಸರಾಗಿ ಸತ್ಯವಾನನಿಂದ ಹುಟ್ಟಲಿ ". ಎಂದು ಕೇಳಿದಳು. "ಆಯಿತು ಮಗಳೇ ಪರಾಕ್ರಮಿಗಳಾದ ಕುಲವನ್ನು ಉದ್ಧರಿಸುವ ನೂರು ಜನ ಮಕ್ಕಳು ನಿನಗೆ ಜನಿಸಲಿ.., ಮಗಳೇ ಬಹಳ ದೂರ ಸಾಗಿ ಬಂದಿದ್ದೀ.. ಇನ್ನೂ ಮುಂದೆ ಬಂದರೆ ನಿನಗೆ ಹಿಂತಿರುಗುವದೂ ಕಷ್ಟವಾಗುತ್ತದೆ ಈ ಕ್ಷಣವೇ ಹಿಂತಿರುಗು". ಸತ್ಯವಾನನಿಂದ ನೂರು ಜನ ಪುತ್ರರು ಎಂದು ಸಾವಿತ್ರಿ ಕೇಳಿದ ವರ... ಯಮನೂ ಅದನ್ನು ಕೊಟ್ಟಿದ್ದಾನೆ... ಸಾವಿತ್ರಿ ಇನ್ನೂ ಯವನನ್ನು ಕುರಿತು "ಸ್ವಾಮೀ... ಈ ಪ್ರಪಂಚದಲ್ಲಿನ ಸತ್ಪುರುಷರ ಸತ್ಯನಿಷ್ಠೆ ಇಲ್ಲಿನ ಪ್ರತಿಯೊಂದು ಆಗುಹೋಗುಗಳಿಗೆ ಕಾರಣವಾಗುತ್ತದೆ, ಅವರ ಧರ್ಮವೇ ಸೂರ್ಯ-ಚಂದ್ರರ ಉದಯಾಸ್ತಮಾನಕ್ಕೆ ಕಾರಣ ಎನ್ನುತ್ತಾರೆ.. ಯಾವ ಸಂಧರ್ಭದಲ್ಲಿಯೂ ಸತ್ಪುರುಷರು ಯಾವಾಗಲೂ ಪರಹಿತಕ್ಕಾಗಿಯೇ ಕಾರ್ಯವೆಸಗುತ್ತಾರೆ.. ಅವರ ಸಂದರ್ಷನ ಮಾಡಿದ ಯಾರಿಗೂ ಯಾವ ರೀತಿಯ ನಷ್ಟವಾಗುವುದಿಲ್ಲ. ಇಂತಹ ಅನುಗ್ರಹ ಬುದ್ಧಿಯನ್ನು ಹೊಂದಿದ ಸತ್ಪುರುಷರು ಸಕಲರ ರಕ್ಷಣೆಯನ್ನು ಧರ್ಮದಿಂದಲೇ ಮಾಡುತ್ತಾರೆ''. ಸಾವಿತ್ರಿಯ ಈ ಮಾತುಗಳಿಂದ ಸಂತುಷ್ಟನಾದ ಯಮಧರ್ಮ " ಮಗಳೇ.. ನೀನು ಮಹಾಪತಿವ್ರತೆಯಿದ್ದೀ... ಧರ್ಮಸಮ್ಮತವಾದ ಮಾತುಗಳನ್ನೇ ಆಡುತ್ತಿರುವೆ, ನನಗೆ ನಿನ್ನಲ್ಲಿ ಗೌರವ ಹೆಚ್ಚಾಗುತ್ತಿದೆ ಹಾಗಾಗಿ ಅತಿ ವಿಶಿಷ್ಠವಾದ ವರವೊಂದನ್ನು ಕೇಳು ಕೊಟ್ಟುಬಿಡುತ್ತೇನೆ" . ಎಂದು ಹೇಳಿದ. ಆಗ ಸಾವಿತ್ರಿ " ದೇವಾ... ನಾನು ನೂರು ಮಂದಿ ಔರಸಪುತ್ರರು ಬೇಕು ಎಂದು ವರಕೇಳಿದೆ..ನೀನು ಕೊಟ್ಟಿದ್ದೀ.. ಈ ವರ ಫಲಿಸಬೇಕಾದರೆ ಸತ್ಯವಾನನ ಜೊತೆಗೆ ಧರ್ಮಸಮ್ಮತವಾದ ದಾಂಪತ್ಯವೂ ಬೇಕು ತಾನೇ.. ಸಂತಾನವಾಗುವ ವರವನ್ನು ಅನುಗ್ರಹಿಸಿದ ಮೇಲೂ ನೀನು ಅವನನ್ನು ಸೆಳೆದುಕೊಂಡು ಹೋಗುತ್ತಿರುವೆ, ಅವನಿಲ್ಲದೆ ನನಗೆ ಬದುಕೇ ಇಲ್ಲ... ಕೇವಲ ವರದಿಂದಲೇ ಮಕ್ಕಳಾಗುವುದನ್ನು ನಾನು ಬಯಸುವುದಿಲ್ಲ ಹಾಗಾಗಿ ನನ್ನ ಪತಿಯನ್ನು ನನಗೆ ವರ ರೂಪದಲ್ಲಿ ಅನುಗ್ರಹಿಸು". ಸಾವಿತ್ರಿಯ ಮಾತಿನಿಂದ ಸಂತೋಷಗೊಂಡ ಯಮಧರ್ಮ " ಆಯಿತು ಮಗಳೇ... ನಿನ್ನ ಪತಿಯ ಪ್ರಾಣವನ್ನು ಹಿಂದಿರುಗಿಸುತ್ತೇನೆ.. ಈ ಸತ್ಯವಂತನು ಮತ್ತೆ ಬದುಕಿ ದೃಡಕಾಯನಾಗಿ ನಾಲ್ಕುನೂರು ವರ್ಷಗಳ ಕಾಲ ಧರ್ಮಪರನಾಗಿ ಬದುಕುತ್ತಾನೆ, ಮುಂದೆ ಈತ ಸಿದ್ಧಾರ್ಥನೆನಿಸಿಕೊಂಡು ಯಜ್ಞ-ಯಾಗಗಳನ್ನು ಮಾಡಿ ಪ್ರಸಿದ್ಧಿಯನ್ನೂ ಪಡೆಯುತ್ತಾನೆ. ನನ್ನ ವರದಂತೆಯೇ ನಿನಗೆ ನೂರು ಮಂದಿ ಮಕ್ಕಳು ಜನಿಸುತ್ತಾರೆ ಅವರು ''ಸಾವಿತ್ರ " ರು ಎಂದೆನಿಸಿ ಅಪಾರವಾದ ಕೀರ್ತಿಯನ್ನು ಪಡೆಯುತ್ತಾರೆ. ನಿನ್ನ ತಂದೆಗೆ ನೂರು ಮಂದಿ ಮಕ್ಕಳಾಗಿ ಅವರು " ಮಾಲವ " ರೆಂದು ಪ್ರಸಿದ್ಧರಾಗುತ್ತಾರೆ " ಹೀಗೆಂದು ಹೇಳಿ ಯಮರಾಜ ಪಾಶದಲ್ಲಿ ಬಂಧಿಸಿದ್ದ ಸತ್ಯವಾನನ ಜೀವಾತ್ಮವನ್ನು ಬಿಟ್ಟು ಹಿಂತಿರುಗುತ್ತಾನೆ. ಸಾವಿತ್ರಿ ಸುತೋಷದಿಂದ ಹಿಂತಿರುಗಿ ಸತ್ಯವಾನನ ದೇಹದ ಬಳಿ ಬಂದು ಅವನ ತಲೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು ಕುಳಿತುಕೊಳ್ಳುತ್ತಾಳೆ. ನಿದ್ರೆಯಿಂದ ಎಚ್ಚರಗೊಂಡಂತೆ ಸತ್ಯವಾನ ಮೇಲೇಳುತ್ತಾನೆ. ಅಷ್ಟರಲ್ಲಿ ರಾತ್ರಿಯಾಗಿದೆ.. ತಂದೆ-ತಾಯಿಯರನ್ನು ನೆನಪಿಸಿಕೊಂಡು ದುಃಖಿಸಿದ ಸತ್ಯವಾನನನಿಗೆ ಸಮಾಧಾನ ಮಾಡಿ ಆ ರಾತ್ರಿಯಲ್ಲಿಯೇ ಆಶ್ರಮದತ್ತ ಸಾಗತೊಡಗುತ್ತಾರೆ. 🙏🙏
ಮುಂದಿನ ಬರಹದಲ್ಲಿ ಹೊಸದೊಂದು ಕಥೆ🙏🙏
Wednesday, July 16, 2025
ಸಾವಿತ್ರಿ ಭಾಗ 6
ಯಮಧರ್ಮನನ್ನು ಹಿಂಬಾಲಿಸಿ ಹೊರಟ ಸಾವಿತ್ರಿ ಇಬ್ಬರು ದಾರಿಹೋಕರು ಒಂದೇ ದಾರಿಯಲ್ಲಿ ಜೊತೆ ಜೊತೆಯಾಗಿ ಸಾಗುವಾಗ ಮಾತಿಗೆ ತೊಡಗುವಂತೆ ಮಾತಾಡತೊಡಗಿದಳು. ಅವಳ ಒಂದೊಂದು ಮಾತೂ ಕೂಡ ಅವಳಿಗಿದ್ದ ಆಗಾಧವಾದ ಜ್ಞಾನದ ಪ್ರತೀಕವಾಗಿತ್ತು. "ಧರ್ಮದೇವ ಪ್ರಪಂಚದಲ್ಲಿ ಇಂದ್ರಿಯಗಳ ನಿಗ್ರಹ ಸಾಧ್ಯವಾಗದೇ ಹೋದರೆ ಅರಣ್ಯವಾಸದಲ್ಲಿ ಧರ್ಮ ಪರಿಪಾಲನೆಯೋ ತಪಸ್ಸನ್ನೋ ಆಚರಿಸುವುದು ಕಷ್ಟವಾಗುತ್ತದೆ, ಜ್ಞಾನಿಗಳು ಧರ್ಮಾಚರಣೆ ಮಾಡುತ್ತಾ ಧರ್ಮವೇನೆಂದು ಉಳಿದವರಿಗೂ ತಿಳಿಸಿಕೊಡುತ್ತಾರೆ. ಯಜ್ಞ -ಯಾಗಗಳಿಂದಲೋ, ತಪಸ್ಸು ಮಾಡುವುದರಿಂದಲೋ ಬಯಸುವ ಗುರಿ ಒಂದೇ ಅದು ಪರಮಪುರುಷನ ಸಾಕ್ಷಾತ್ಕಾರ... ಆ ಪರಮಪುರುಷ ನಮ್ಮಲ್ಲಿಯೇ ಇದ್ದಾನೆ.. ಆತ್ಮನಲ್ಲಿ ಪರಮಾತ್ಮನನ್ನು ಕಾಣುವ ಪ್ರಯತ್ನವೇ ಎಲ್ಲವೂ. ನಾವು ತ್ರಿಕಾಲ ಸಂಧ್ಯಾವಂದನೆಯನ್ನು ಮಾಡುವಾಗ ಗಾಯಿತ್ರೀ ದೇವಿಯ ಪ್ರತಿಮೆಯೇನೂ ಇರುವುದಿಲ್ಲ.. ಪ್ರತಿಯೊಬ್ಬ ದ್ವಿಜನೂ ಸಂಧ್ಯಾವಂದನೆಯನ್ನು ಮಾಡಬೇಕು.. ಮಾಡುತ್ತಾನೆ, ಹಾಗೆ ಮಾಡುವ ಕಾಲದಲ್ಲಿ ಅಂಗ-ಕರನ್ಯಾಸಗಳ ಮುಖೇನ ಗಾಯತ್ರಿ ದೇವಿಯನ್ನು ತನ್ನ ಹೃದಯದಲ್ಲಿಯೇ ಪ್ರತಿಷ್ಠಾಪಿಸಿ ಆರಾಧಿಸುವನು. ಅಂದರೆ ಇದರಲ್ಲು ಹೃದಯಾಂತರ್ಗತವಾದ ಪರತತ್ವವನ್ನು ಕಂಡುಕೊಳ್ಳಬೇಕೆಂಬುದೇ ಜ್ಞಾನಿಗಳ ನಿರ್ಣಯವಲ್ಲವೇ... ನಮ್ಮೆಲ್ಲರ ಕರ್ಮಗಳೂ.. ಆಚಾರ-ವಿಚಾರಗಳೂ ಶಾಸ್ತ್ರ - ಸಂಪ್ರದಾಯಗಳೂ ಪರಬ್ರಹ್ಮವನ್ನು ಕಂಡುಕೊಳ್ಳಲು ಬೇಕಾದ ದಾರಿದೀಪಗಳಲ್ಲವೇ.. ಈ ಧರ್ಮದ ಸಾಧನೆ ಎನ್ನುವುದು ನಾಲ್ಕು ಆಶ್ರಮಗಳಿಗೂ ಒಂದೇ ಆಗಿದೆ. ಆತ್ಮಸಾಕ್ಷಾತ್ಕಾರ ಮಾಡಿಕೊಂಡವನಿಗೆ ಆಶ್ರಮಧರ್ಮದ ಪ್ರವೃತ್ತಿ -ನಿವೃತ್ತಿ ಎಂಬುದೇನೂ ಇಲ್ಲ. ಸತ್ಪುರುಷರು ಅರ್ಥವನ್ನಾಗಲೀ.. ಕಾಮವನ್ನಾಗಲಿ ... ಧರ್ಮದ ವ್ಯಾಪ್ತಿಯಲ್ಲಿ ಇಲ್ಲದೇ ಇದ್ದರೆ ಬಯಸುವುದೇ ಇಲ್ಲ. ಸತ್ಪುರುಷರು ಬಯಸುವ ಅಂತಹ ಆತ್ಮಧರ್ಮವನ್ನೇ ನಾನೂ ಬಯಸುತ್ತೇನೆ". ಸಾವಿತ್ರಿಯ ಮಾತನ್ನ ಕೇಳಿದ ಯಮಧರ್ಮನಿಗೆ ಸಂತೋಷವಾಯಿತು. "ಮಗಳೇ ಹಿಂದಿರುಗು.. ನಿನ್ನ ಯುಕ್ತಿಯುಕ್ತವಾಗಿರುವ ಮಾತುಗಳನ್ನು ಕೇಳಿ ಸಂತೋಷಗೊಂಡಿದ್ದೇನೆ ಹಾಗಾಗಿ ಒಂದು ವರವನ್ನು ಕೇಳು.. ಆದರೆ ನಿನ್ನ ಗಂಡನನ್ನು ಮಾತ್ರ ಕೇಳಬೇಡ ಬೇರಾವ ವರವನ್ನಾದರು ಕೊಡುವೆ". ಆಗ ಸಾವಿತ್ರಿ.." ದೇವಾ... ನನ್ನ ಮಾವನು ರಾಜ್ಯಭ್ರಷ್ಠನಾಗಿದ್ದಾನೆ, ತನ್ನ ಕಣ್ಣುಗಳನ್ನೂ ಕಳೆದು ಕೊಂದಿದ್ದಾನೆ, ಅವನ ಅಂಧತ್ವವು ಹೋಗಿ ಮತ್ತೆ ಬಲಿಷ್ಠನೂ ತೇಜೋವಂತನೂ ಆಗಬೇಕು". ಸಾವಿತ್ರಿಯ ಮಾತನ್ನು ಕೇಳಿ ಯಮಧರ್ಮ " ಆಯಿತು ನಿನ್ನ ಮಾವನ ಅಂಧತ್ವ ನಿವಾರಣೆಯಾಗಿ ಸೂರ್ಯನಂತೆ ತೇಜೋವಂತನಾಗುವನು.. ಇನ್ನು ನನ್ನನ್ನು ಹಿಂಬಾಲಿಸಿ ಶ್ರಾಂತಳಾಗಬೇಡ ಹಿಂತಿರುಗು ನಿನಗೆ ವಿಶ್ರಾಂತಿಯ ಅವಶ್ಯಕತೆ ಇದೆ" ಎಂದು ಹೇಳಿದ. ಆಗ ಸಾವಿತ್ರಿ " ಸ್ವಾಮೀ ನನಗೆಲ್ಲಿಯ ಬಳಲಿಕೆ... ನನ್ನ ಪತಿಯನ್ನು ನೀನು ಕರೆದುಕೊಂಡು ಹೋಗುತ್ತಿರುವೆ, ಅವನ ಸಮೀಪವರ್ತಿನಿಯಾಗಿರುವ ನನಗೆ ಆಯಾಸ ಬಳಲಿಕೆಗಳಿಲ್ಲ... ಅವನನ್ನು ನೀನು ಎಲ್ಲಿಗೆ ಒಯ್ದರೂ ಅಲ್ಲಿಯವರೆಗೂ ಹಿಂಬಾಲಿಸುವುದೇ ನನ್ನ ಧರ್ಮ.. ನಾನು ಹೇಳಲಿರುವ ಇನ್ನೊಂದೆರಡು ಮಾತುಗಳನ್ನು ಕೇಳು". "ಸತ್ಪುರುಷರ ಸಮಾಗಮ ಶ್ರೇಷ್ಠ.. ಸತ್ಪುರುಷರ ಜೊತೆಗಿನ ಮೈತ್ರಿ ಅದಕ್ಕಿಂತಲೂ ಉತ್ತಮ.. ಅವರೊಂದಿಗೆ ಸಮಾಗಮ ಎಂದಿಗೂ ವ್ಯರ್ಥವಾಗುವುದಿಲ್ಲ, ಆದ್ದರಿಂದ ಯಾವಾಗಲೂ ಸತ್ಪುರುಷರ ಸಹವಾಸವನ್ನೇ ಮಾಡಬೇಕು". ಈ ಮಾತನ್ನು ಕೇಳಿದ ಅಂತಕನಿಗೆ ಇನ್ನೂ ಸಂತೋಷವಾಗಿ.." ಸಾವಿತ್ರಿ ನೀನು ಹೇಳಿದ್ದು ವಿದ್ವಾಂಸರೂ ಕೂಡ ಅನುಸರಿಸಬೇಕಾದ ವಿಷಯ ಇದರಿಂದ ನಾನು ಸುಪ್ರೀತನಾದೆ ಹಾಗಾಗಿ ಸತ್ಯವಾನನನ್ನು ಬಿಟ್ಟು ಬೇರೊಂದು ವರವನ್ನು ಕೇಳು". ಎರಡನೆಯ ವರವಾಗಿ ಸಾವಿತ್ರಿ " ದೇವಾ ನನ್ನ ಮಾವನು ಕಳೆದುಕೊಂಡ ತನ್ನ ರಾಜ್ಯವನ್ನು ಮತ್ತೆ ಪಡೆಯುವಂತಾಗಲಿ.. ರಾಜನಾಗಿಯು ಅವನು ಸ್ವಧರ್ಮವನ್ನೆಂದಿಗೂ ತ್ಯಜಿಸದೇ ಇರಲಿ". ಸಾವಿತ್ರಿ ಬಯಸಿದ ಎರಡನೆ ವರವನ್ನು ಕೂಡ ಅನುಗ್ರಹಿಸಿದ ಬಳಿಕ ಯಮಧರ್ಮ.." ಇನ್ನಾದರೂ ಹಿಂತಿರುಗು ನನ್ನ ಜೊತೆ ಬಂದು ಶ್ರಮಪಡಬೇಡ" ಎಂದು ಹೇಳಿದ.🙏🙏
ಮುಂದುವರಿಯುತ್ತದೆ.🙏🙏
Tuesday, July 15, 2025
ಸಾವಿತ್ರಿ ಭಾಗ 5
ಸತ್ಯವಾನ ಸಾವಿತ್ರಿಯನ್ನು ಕೂಗುತ್ತಾ ಮರದಿಂದ ಇಳಿದ, ಅವನ ಮೈಯೆಲ್ಲಾ ಬೆವರಿ ಹೋಗಿತ್ತು... ತುಂಬಾ ನಿತ್ರಾಣನಾದಂತೆ ಕಾಣುತ್ತಿದ್ದ." ನಿಧಾನ ಸ್ವಾಮಿ... ಸುಧಾರಿಸಿಕೊಳ್ಳಿ.. " ಎನ್ನುತ್ತಾ ಅವನ ಬಳಿಗೆ ಸಾವಿತ್ರಿ ಸಾಗಿದಳು. "ಸಾವಿತ್ರೀ... ಯಾಕೋ ತುಂಬಾ ತಲೆ ನೋಯುತ್ತ ಇದೆ, ಯಾಕೋ ಬಹಳ ಆಯಾಸವಾಗುತ್ತಿದೆ... ಕಣ್ಣಿಗೆ ಕತ್ತಲು ಆವರಿಸಿದ ಅನುಭವವಾಗುತ್ತಿದೆ.." ಎಂದು ಹೇಳುತ್ತಲೇ ನೆಲಕ್ಕೆ ಕುಸಿದ. ಸಾವಿತ್ರಿ ಅವನು ಬಿಳುವುದನ್ನು ತಡೆಯುತ್ತಾ ಉಪಚರಿಸಿ ಹಾಗೇ ತಾನು ಕುಳಿತುಕೊಂಡು ತನ್ನ ತೊಡೆಯಮೇಲೆ ಅವನ ತಲೆ ಇರಿಸಿಕೊಂಡು ಮಲಗಲು ಹೇಳಿದಳು. ಅವನು ಏದುಸಿರು ಬಿಡುತ್ತಿರುವುದನ್ನು ಸಾವಿತ್ರಿ ಗಮನಿಸಿದಳು... ಆ ಸ್ಥಿತಿಯಲ್ಲೂ ಸಾವಿತ್ರಿಯ ಸಾಮೀಪ್ಯ ಸತ್ಯವಾನನಿಗೆ ಸ್ವಲ್ಪ ನೆಮ್ಮದಿಯನ್ನು ಕೊಟ್ಟಂತಿತ್ತು. ಮರುಕ್ಷಣದಲ್ಲಿಯೇ ಅವಳ ಸಮೀಪದಲ್ಲಿ ಕೆಂಪಾದ ವಸ್ತ್ರಗಳನ್ನು ಧರಿಸಿದ್ದ, ಕೆಂಪು ಕಣ್ಣುಗಳನ್ನು ಹೊಂದಿದ್ದ, ಭಯಂಕರವಾದ ರೂಪದ ವ್ಯಕ್ತಿಯೊಬ್ಬ ಕೈಯಲ್ಲಿ ಪಾಶವನ್ನು ಹಿಡಿದು ನಿಂತಿದ್ದ. ಅವನನ್ನು ನೋಡಿದಾಕ್ಷಣ ಸಾವಿತ್ರಿಯ ಭಯ ನೂರ್ಮಡಿಯಾಯಿತು. ಆದರೂ ಸಾವರಿಸಿಕೊಂಡು ಸತ್ಯವಾನನ ತಲೆಯನ್ನು ತೊಡೆಯಿಂದ ಕೆಳಗಿಳಿಸಿ, "ಸ್ವಾಮಿ... ನೀವಾರು.. ನೋಡಿದರೆ ದೇವಪುರುಷನಂತೆ ಕಾಣಿಸುತ್ತಿದ್ದೀರಿ.. ನೀವು ಇಲ್ಲಿಗೆ ಬರಲು ಕಾರಣವೇನೆಂದು ದಯಮಾಡಿ ತಿಳಿಸಿ''.. ಸಾವಿತ್ರಿಯ ಮಾತನ್ನು ಕೇಳಿದ ಆ ದೇವಪುರುಷ " ಸತ್ಯವಾನನ ಪತ್ನಿಯಾದ ನೀನು ಪರಮ ಪತಿವ್ರತೆಯಾಗಿದ್ದಿ.... ನೀನು ಧರ್ಮದ ನೆಲೆಯರಿತು ನಡೆಯುತ್ತಿರುವ ಕಾರಣದಿಂದ ನಿನಗೆ ನಾನು ಕಾಣಿಸಿಕೊಂಡು ಮಾತನಾಡುತ್ತಿದ್ದೇನೆ. ಸಾವಿತ್ರೀ ನಿನ್ನ ಪತಿಯಾದ ಸತ್ಯವಾನನ ಆಯುಷ್ಯ ಇಂದಿಗೆ ಮುಗಿಯಿತು.. ಹಾಗಾಗಿ ಅವನ ಜೀವವನ್ನು ಸೆಳೆದೊಯ್ಯಲು ಬಂದಿದ್ದೇನೆ ನಾನೇ ಯಮಧರ್ಮ". ಸಾವಿತ್ರಿಯ ಹೃದಯದ ಬಡಿತ ಹೆಚ್ಚಾಯಿತು.. " ನಾರದರಾಡಿದ ಸಮಯ ಬಂದೇ ಬಿಟ್ಟಿತಲ್ಲಾ " ಎಂದು ದುಃಖದಿಂದ ತನ್ನಲ್ಲೇ ತಾನು ಹೇಳಿಕೊಂಡು.. "ಸ್ವಾಮಿ.. ನಾನು ಇಲ್ಲಿಯವರೆಗೆ ಕೇಳಿದ ವಿಷಯ.. ಧರೆಯಲ್ಲಿರುವ ಜೀವಾತ್ಮರನ್ನು ಕರೆದೊಯ್ಯಲು ನಿನ್ನ ಕಿಂಕರರು ಬರುತ್ತಾರೆಂದು ಕೇಳಿದ್ದೆ.. ಆದರೆ ಇಲ್ಲಿ ನೀನೇ ಬಂದೆಯಾ.." ಪ್ರಶ್ನೆಯ ಜೊತೆ ಅನುಮಾನವೂ ಇತ್ತು. "ಸಾವಿತ್ರೀ.. ಸರ್ವಗುಣ ಸಂಪನ್ನನಾದ, ಧರ್ಮಾತ್ಮನಾದ ನಿನ್ನ ಪತಿಯನ್ನು ನನ್ನ ಕಿಂಕರರು ಕರೆದೊಯ್ಯವುದು ಯೋಗ್ಯವಾದುದಲ್ಲ..ಹಾಗಾಗಿ ನಾನೇ ಬಂದಿರುವೆ" ಎಂದು ಹೇಳುತ್ತಾ ತನ್ನ ಕೈಯಲ್ಲಿರುವ ಪಾಶವನ್ನು ಸತ್ಯವಾನನತ್ತ ಬೀಸಿದ, ಮರುಕ್ಷಣದಲ್ಲಿಯೇ ಅಂಗುಷ್ಠ ಮಾತ್ರದ ಜೀವಾತ್ಮನು ಪಾಶದಲ್ಲಿ ಬಂಧನಕ್ಕೊಳಗಾದ. ಹಾಗೆ ಬಂದಿಸಲ್ಪಟ್ಟ ಆ ಕಿರುಗಾತ್ರದ ಜೀವನನ್ನು ಸತ್ಯವಾನನ ದೇಹದಿಂದ ಹೊರಸೆಳೆದ. ತಕ್ಷಣದಲ್ಲಿಯೇ ಸತ್ಯವಾನನ ಉಸಿರಾಟ ನಿಂತುಹೋಯಿತು.. ಮುಖದ ಕಾಂತಿ ಕಪ್ಪಿಟ್ಟಿತು.. ದೇಹದ ಅಂಗಾಂಗಗಳೂ ಸ್ಥಬ್ಧವಾದವು. ಪಾಶದಲ್ಲಿ ಬಂಧಿಸಿದ ಜೀವಾತ್ಮನನ್ನು ಸೆಳೆದುಕೊಂಡು ಯಮನು ದಕ್ಷಿಣಾಭಿಮುಖವಾಗಿ ಸಾಗತೊಡಗಿದ. ಸತ್ಯವಾನನ ಮರಣವಾಯಿತೆಂದು ಅರಿತ ಸಾವಿತ್ರಿ ದುಃಖದಿಂದ ಕಣ್ಣೀರು ಸುರಿಸುತ್ತಾ ತನಗರಿವಿಲ್ಲದಂತೆಯೇ ಪತಿಯ ಜೀವವನ್ನು ಸೆಳೆದೊಯ್ಯತ್ತಿರುವ ಯಮಧರ್ಮನನ್ನು ಹಿಂಬಾಲಿಸತೊಡಗಿದಳು. ಕೆಲವು ದೂರವನ್ನು ಕ್ರಮಿಸಿದ ಮೇಲೆ ಸಾವಿತ್ರಿಯನ್ನು ಕುರಿತು .. "ಸಾವಿತ್ರೀ ನೀನು ಪತಿ ಸೇವೆಯನ್ನು ನಿಷ್ಠೆಯಿಂದ ಮಾಡಿದ ಕಾರಣ ಇಲ್ಲಿಯವರೆಗೆ ಬಂದಿದ್ದೀ, ನೀನು ಮಾಡಬೇಕಾದ ಕರ್ತವ್ಯ ಉಳಿದಿದೆ.. ಆಶ್ರಮಕ್ಕೆ ತೆರಳಿ ಸತ್ಯವಾನನ ದೇಹಕ್ಕೆ ಅಂತ್ಯ ಸಂಸ್ಕಾರವನ್ನು ಮಾಡು ಹೋಗು... ಇನ್ನು ಮುಂದೆ ಬರುವುದು ತರವಲ್ಲ" ಎಂದು ಯಮಧರ್ಮ ಹೇಳುತ್ತಾನೆ.. ಅದಕ್ಕೆ ಪ್ರತಿಯಾಗಿ ಸಾವಿತ್ರಿ.. "ನನ್ನ ಪತಿಯ ಜೀವವನ್ನು ನೀನು ಎಲ್ಲಿಗೇ ಒಯ್ದರೂ ನಾನು ಹಿಂಬಾಲಿಸುವುದು ಧರ್ಮ ಎಂದು ಭಾವಿಸಿದ್ದೀನೆ... ಹಿರಿಯರ ಸೇವೆಯಿಂದ... ಸಂಕಟವನ್ನು ದೂರಮಾಡುವ ವ್ರತಗಳಿಂದ ... ನಾನು ಪತಿಯಲ್ಲಿ ಹೊಂದಿರುವ ಪ್ರೀತಿಯಿಂದ.. ಜೊತೆಗೆ ನಿನ್ನ ಕರುಣೆಯಿಂದ ನನ್ನ ಮುಂದಿನ ಮಾರ್ಗವೂ ಸುಗಮವಾಗಲಿದೆ ಎಂದು ಭಾವಿಸಿದ್ದೇನೆ, ಹಾಗಾಗಿಯೇ ಮುಂದೆ ಕೂಡ ನಿನ್ನನ್ನು ಅನುಸರಿಸುತ್ತೇನೆ... ಯಮದೇವ ಕೇವಲ ಏಳು ಹೆಜ್ಜೆಗಳನ್ನು ಜೊತೆಯಾಗಿ ನಡೆಯುವದರಿಂದ ಮೈತ್ರಿ ಉಂಟಾಗುವುದು ಎಂದು ಪ್ರಾಜ್ಞರಾಡುತ್ತಾರೆ, ಆದರೆ ನಾನು ನಿನ್ನೊಂದಿಗೆ ಹಲವು ಹೆಜ್ಜೆಗಳನ್ನು ಇಟ್ಟಿದ್ದೇನೆ.. ಹಾಗಾಗಿ ಅದೇ ಮೈತ್ರಿ ಭಾವದಿಂದ ನಿನ್ನಲ್ಲಿ ಕೆಲವು ಮಾತುಗಳನ್ನು ಹೇಳಬೇಕು ಎಂದುಕೊಂಡಿದ್ದೇನೆ.."🙏🙏
ಯಮಧರ್ಮ ಸಾವಿತ್ರಿಯರ ಸಂಭಾಷಣೆ ಮುಂದಿನ ಭಾಗ🙏🙏
Monday, July 14, 2025
ಸಾವಿತ್ರಿ ಭಾಗ 4
ಸಾವಿತ್ರಿಗೆ ಯಾವ ಕ್ಷಣದಲ್ಲಿ ಏನಾಗುವುದೋ ಎಂಬ ಆತಂಕ... ಸಂಕಲ್ಪ ಮಾಡಿದ ವ್ರತ ಸಾಂಗವಾಗಿ ನೆರವೇರಿದರೂ ಮುಂದೇನು.. ಬಂದವರನ್ನು ಸತ್ಕರಿಸಿ ಆಶೀರ್ವಾದ ಪಡೆದಿದ್ದು ಆಯಿತು.. ಅವರೆಲ್ಲರೂ ಸುಮಂಗಲಿಯಾಗೆಂದು ಹರಸಿದರೂ ಅಷ್ಟಕ್ಕೆ ಮುಗಿಯಲ್ಲಿಲ್ಲ. ಇನ್ನೂ ಆರಂಭ ಎಂಬುದು ಸಾವಿತ್ರಿಗೂ ಗೊತ್ತು. ಬಳಲಿದ್ದ ಸೊಸೆಯನ್ನು ಕರೆದು ದ್ಯುಮತ್ಸೇನ "ಸಾವಿತ್ರೀ ಎಲ್ಲರನ್ನು ಸತ್ಕರಿಸಿ ಆಶೀರ್ವಾದ ಪಡೆದು ಆಯಿತು ತಾನೇ.. ಇನ್ನಾದರೂ ಪ್ರಸಾಧ ಸ್ವೀಕರಿಸು, ಮೂರು ಹಗಲು -ರಾತ್ರಿ ಏನನ್ನು ಸೇವಿಸದೇ ಈಗಾಗಲೇ ತುಂಬ ಕೃಷಳಾಗಿ ಬಿಟ್ಟಿದ್ದೀ ಮಗಳೇ... ಇನ್ನೂ ಏನನ್ನು ನಿರೀಕ್ಷೆ ಮಾಡುತಿದ್ದೀ.." ಎಂದರು. ಮಾವನ ಮಾತನ್ನು ಕೇಳಿದ ಸಾವಿತ್ರಿ ''ಆಯಿತು ಸ್ವೀಕರಿಸುತ್ತೇನೆ" ಎಂದಷ್ಟೇ ಹೇಳಿದಳು ಈಗ ಅವಳ ಗಮನವೆಲ್ಲಾ ಸತ್ಯವಾನನತ್ತ... ಅವನಿಗೆ ಇದರ ಯಾವ ಕಲ್ಪನೆಯೂ ಇಲ್ಲ. ಎಂದಿನಂತೆ ತಾನು ನಿರ್ವಹಿಸಬೇಕಾದ ಕರ್ತವ್ಯದಲ್ಲಿ ತೊಳಗಿಕೊಳ್ಳಲು ಮುಂದಾದ. ಒಂದು ಕೈಯಲ್ಲಿ ಕೊಡಲಿ.. ಅದು ಕಾಡಿನಿಂದ ಕಟ್ಟಿಗೆ ಸಂಗ್ರಹಿಸಿ ತರಲು.. ಇನ್ನೊಂದು ಸಣ್ಣ ಬುಟ್ಟಿ ... ಅದು ಫಲ ಪುಷ್ಪ ಸಂಗ್ರಹಿಸಲು.. " ಸಾವಿತ್ರೀ ನಾನು ಕಾಡಿಗೆ ಹೋಗಿ ಬರುತ್ತೇನೆ.." ಎಂದು ಹೇಳಿ ಹೊರಡಲು ಸಿದ್ಧನಾದವನ ಕುರಿತು.. " ಸ್ವಾಮೀ ಇಂದು ಕಾಡಿಗೆ ಹೋಗಲೇ ಬೇಕೆ? " ಎಂದೂ ಕೇಳದ ಪ್ರಶ್ನೆ ಅವಳಿಗೆ ಅರಿವಿಲ್ಲದಂತೆಯೇ ಬಂದಿತ್ತು. ಸಾವಿತ್ರಿಯ ಪಶ್ನೆಗೆ ಸತ್ಯವಾನನ ಮುಗುಳ್ನಗೆಯೊಂದಿಗಿನ ಉತ್ತರ " ಹೌದು ಒಂದಷ್ಟು ಫಲ -ಪುಷ್ಪಗಳ ಸಂಗ್ರಹ ಮಾಡಿಕೊಂಡು..ಸ್ವಲ್ಪ ಕಟ್ಟಿಗೆಯನ್ನೂ ತರಬೇಕು" ಉತ್ತರ ಪೂರ್ಣವಾಗುವ ಮೊದಲೇ "ಸ್ವಾಮೀ ನಾನೂ ಬರುತ್ತೇನೆ" ಬೇಡಿಕೆಗಿಂತ ಆ ಧ್ವನಿಯಲ್ಲಿ ನಿರ್ಧಾರವೇ ತುಂಬಿತ್ತು. ಆದರೆ.. ಇಂದು ಅವಳನ್ನು ಕರೆದೊಯ್ಯಲು ಸತ್ಯವಾನನೂ ಯೋಚಿಸಿ.. "ಸಾವಿತ್ರೀ ಕಳೆದ ಮೂರು ದಿನಗಳಿಂದ ವ್ರತದಲ್ಲಿ ತೊಡಗಿಕೊಂಡು ಬಳಲಿದ್ದಿ.. ಇನ್ನೂ ನೀನು ಆಹಾರವನ್ನು ಸೇವಿಸಲಿಲ್ಲ... ಈ ಸ್ಥಿತಿಯಲ್ಲಿ ಕಾಡಿಗೆ ಬರುವುದು ಯೋಗ್ಯವಲ್ಲ, ಇಂದು ನೀನು ಆಶ್ರಮದಲ್ಲಿಯೇ ಇರು. ನಾನಂತೂ ದಿನವೂ ಕಾಡಿಗೆ ಹೋಗುವವ.. ನೀನು ಬರುವವಳೇ ಆದರೆ ನಾಳೆಯೋ ನಾಡಿದ್ದೋ ಬಂದರಾಯಿತು. " ಸತ್ಯವಾನನ ಮಾತು ಆ ಸಂಧರ್ಭದಲ್ಲಿ ಸರಿಯೇ ಆಗಿದ್ದರೂ ಸಾವಿತ್ರಿ ಕಂಡುಕೊಳ್ಳಬೇಕಿದ್ದ ಸತ್ಯ ಬೇರೆಯದೇ ಆಗಿದ್ದರಿಂದ "ಇಲ್ಲ ನನಗೇನೂ ಬಳಲಿಕೆಯಾಗುವುದಿಲ್ಲ ನಾನು ಇಂದೇ ನಿಮ್ಮ ಜೊತೆಗೆ ಅರಣ್ಯಕ್ಕೆ ಬರುತ್ತೇನೆ, ಅರಣ್ಯದಲ್ಲಿ ನಿಮ್ಮೊಂದಿಗೆ ಸುತ್ತಾಡಿದರೆ ನನಗೂ ಸಮಾಧಾನವಾಗುವುದು " ಎಂದು ಹೇಳಿದಳು. "ಆಯಿತು ಹಾಗಿದ್ದರೆ ನಿನ್ನ ಅತ್ತೆ ಮಾವಂದಿರಿಗೆ ಹೇಳಿ ಬಾ '' ಹೀಗೆ ಹೇಳುವಾಗ ಉಪವಾಸದಿಂದ ಬಳಲಿದ್ದ ಸಾವಿತ್ರಿಯನ್ನು ತಂದೆಯಾದರೂ ನಿರ್ಭಂಧಿಸಬಹುದು ಎಂಬ ನಿರೀಕ್ಷೆ ಸತ್ಯವಾನನ ಮನಸ್ಸಿನಲ್ಲಿತ್ತು. ಆದರೆ ಸಾವಿತ್ರಿ ದೃಢ ನಿರ್ಧಾರ ಮಾಡಿದ್ದ ಕಾರಣದಿಂದ ಆ ಯೋಜನೆಯೂ ಪ್ರಯೋಜನಕ್ಕೆ ಬರಲಿಲ್ಲ, ಸಾವಿತ್ರಿ ಸರಸರನೆ ಒಳಮನೆ ಸೇರಿ ಅಲ್ಲಿದ್ದ ಅತ್ತೆ ಮಾವಂದಿರನ್ನು ಒಪ್ಪಿಸಿಯೇ ಬಂದುಬಿಟ್ಟಳು. ಮುಂದೆ ಆಗಸದೆತ್ತರಕ್ಕೆ ಬೆಳೆದುನಿಂತ ಅರಣ್ಯ.. ಸಹಜವಾಗಿಯೇ ಸೂರ್ಯರಶ್ಮಿಯನ್ನು ನಿರ್ಭಂಧಿಸುತಿತ್ತು. ಅಲ್ಲೊಂದು ರೀತಿಯ ಕತ್ತಲೆಯ ಭಾಸವಾದರೆ.. ಸಾವಿತ್ರಿಯನ್ನು ಅವರಿಸಿದ್ದ ಕತ್ತಲೆಯೇ ಬೇರೆ. ಮುಂದೆ ಸಾಗುವ ಸತ್ಯವಾನ... ಅವನ ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಅವನನ್ನು ಹಿಂಬಾಲಿಸುತ್ತಿದ್ದ ಸಾವಿತ್ರಿ.... ಅರಣ್ಯದಲ್ಲಿ ಸ್ವಲ್ಪ ಸ್ವಲ್ಪವೇ ಮುಂದೆ ಸಾಗುತ್ತಾ ಅಲ್ಲಿ ಕಾಣಿಸಿದ ತರು, ಲತೆಗಳನ್ನು ತೋರಿಸುತ್ತಿದ್ದ ಸತ್ಯವಾನ. ಆದರೆ ಇಂದು ಸಾವಿತ್ರಿಗೆ ಅವುಗಳನ್ನು ನೋಡಿ ಆನಂದಿಸುವ ಮನಸ್ಸಾದರೂ ಹೇಗೆ ಇದ್ದೀತು ... ಆದರೂ ಅವನ ಮನಸ್ಸಮಾಧಾನಕ್ಕೆ ಬೇಕಾಗಿ ನೋಡಿ ನಗುತ್ತಿದ್ದಳು. ಹಾಗೆಯೇ ಒಂದಷ್ಟು ಫಲ ಪುಷ್ಪಗಳ ಸಂಗ್ರಹವೂ ಆಯಿತು. ಇನ್ನು ಬೇಕಾದ್ದು ಕಟ್ಟಿಗೆ... . ಸಾವಿತ್ರಿ ಬಾರದೇ ಇರಲಿ ಎಂದು ಪ್ರಾರ್ಥಿಸುತ್ತಿದ್ದ ಆ ಘಳಿಗೆ ಬಂದೇ ಬಿಟ್ಟಿತು. ಸತ್ಯವಾನನ ಕಣ್ಣಿಗೆ ಗೋಚರಿಸಿದ್ದು ಅನತಿ ದೂರದಲಿದ್ದ ಒಂದು ಒಣಗಿದ ಕೊಂಬೆಗಳನ್ನು ಹೊಂದಿದ್ದ ಮರ! ಇತ್ತ ಸಾವಿತ್ರಿಯ ಗಂಟಲೂ ಒಣಗುತ್ತಾ ಇತ್ತು. ಸತ್ಯವಾನ ನೋಡುನೋಡುತ್ತಿದ್ದಂತೆಯೇ ಕೊಡಲಿಯನ್ನು ಹಿಡಿದು ಮರವೇರಿ ಒಣಗಿದ ಒಂದೊಂದೇ ಕೊಂಬೆಗಳನ್ನು ಕಡಿಯತೊಡಗಿದ. ಹಾಗೆ ಮರದ ಒಣಗಿದ ಕೊಂಬೆಗಳನ್ನು ಕಡಿಯುತ್ತಿದ್ದ ಸತ್ಯವಾನನಿಗೆ ಇದ್ದಕ್ಕಿದ್ದಂತೆ ತಲೆಸುತ್ತು ಬಂದಂತೆ ಆಯಿತು... ಎಂದೂ ಇಲ್ಲದ ಆಯಾಸ.. ಬಳಲಿಕೆ.. ಇನ್ನಾಗದು ಎಂದು ಭಾವಿಸಿ ಮರವನ್ನು ಇಳಿಯುತ್ತಾ ಸಾವಿತ್ರೀ.. ಎಂದು ಕೂಗಿದ.🙏🙏
ಉಳಿದದ್ದು ಮುಂದಿನ ಭಾಗಕ್ಕೆ.🙏🙏
Sunday, July 6, 2025
ಸಾವಿತ್ರಿ ಭಾಗ 3
ಅಶ್ವಪತಿ ಮಹಾರಾಜನಿಗೆ ಸಾವಿತ್ರಿಯ ಮದುವೆಯನ್ನು ಸತ್ಯವಾನನೊಂದಿಗೆ ಮಾಡಲು ಸಂಪೂರ್ಣ ಮನಸ್ಸಿಲ್ಲ ಆದರೆ... ನಾರದ ಮಹರ್ಷಿಗಳು ಹೇಳಿದ ಮಾತಿನಂತೆ ವಿವಾಹದ ಸಿದ್ಧತೆ ಮಾಡತೊಡಗಿದ, ರಾಜಪರಿವಾರವನ್ನು ಕೂಡಿಕೊಂಡು ನೇರವಾಗಿ ಮೇಧ್ಯಾರಣ್ಯದತ್ತ ಹೊರಟ. ಪರಿವಾರ ಸಮೇತ ನೇರವಾಗಿ ಬಂದು ಎಲೆ ಮನೆಯ ಹೊರಭಾಗದ ವೃಕ್ಷದ ಕೆಳಗೆ ಧರ್ಭಾಸನದಲ್ಲಿ ಕುಳಿತ ದ್ಯುಮತ್ಸೇನನ ಬಳಿಗೆ ಸಾಗುತ್ತಾನೆ. ಫಲತಾಂಬೂಲದ ಹರಿವಾಣವನ್ನು ಅವನ ಮುಂದಿಟ್ಟು ನಮಸ್ಕರಿಸಿಕೊಳ್ಳುತ್ತಾನೆ. ಕುರುಡನಾದ ಕಾರಣ ಬಂದ ತಾನು ಯಾರು ಎಂಬುದನ್ನೂ ಹೇಳಿಕೊಳ್ಳಬೇಕಾಗುತ್ತದೆ. ಬಂದವ ತಾನು ಮಾದ್ರ ದೇಶದ ಅಧಿಪತಿ ಅಶ್ವಪತಿಯೆಂದೂ ದಿಬ್ಬಣದೊಂದಿಗೆ ರಾಜಪರಿವಾರ ಸಮೇತ ಬಂದಿದ್ದಾಗಿಯೂ ನಿನ್ನ ಮಗನಾದ ಸತ್ಯವಾನನಿಗೆ ತನ್ನ ಮಗಳಾದ ಸಾವಿತ್ರಿಯನ್ನು ವಿವಾಹ ಮಾಡಿಕೊಡುವ ನಿರ್ಣಯ ಕೈಗೊಂಡಿರುವೆನೆಂದೂ ಹೇಳಿಕೊಳ್ಳುತ್ತಾನೆ. ದ್ಯಮತ್ಸೇನನಿಗೆ ಆಶ್ಚರ್ಯ ಆತಂಕಗಳು ಏಕಕಾಲದಲ್ಲಿ ಆಗುತ್ತದೆ. ಕಾಡಿನಲ್ಲಿ ನಿರ್ಗತಿಕನಾಗಿ ಬದುಕುತ್ತಿರುವ ತನ್ನಂತವನ ಮಗನಿಗೆ ರಾಜ ಕುಟುಂಬದ ಸಂಭಂಧವೆ! ಇದು ತನ್ನನ್ನು ಅಪಹಾಸ್ಯ ಮಾಡಲು ಆಡುತ್ತಿರುವ ಮಾತಿರಬಹುದೇ... ಧಾರ್ಮಿಕನಾದ ಮಾದ್ರೇಶ ಎಂದೂ ಯಾರ ದುಃಸ್ಥಿತಿಯನ್ನು ಕಂಡು ಅಪಹಾಸ್ಯ ಮಾಡಲಾರ... ಒಂದು ಕ್ಷಣ ಯೋಚಿಸಿ..." ಅಯ್ಯಾ ಮಹಾರಾಜಾ.. ನೀನು ಹೇಳುತ್ತಿರುವ ಮಾತು ಸತ್ಯವೆಂದು ನಂಬಲೋ... ಕೆಲವು ವರ್ಷಗಳ ಹಿಂದೆ ನಾನು ಸಾಲ್ವ ದೇಶದ ಸಿಂಹಾಸನದಲ್ಲಿ ಕುಳಿತಾಗ ಇಂತಹ ಸಂಧರ್ಭ ಒದಗಿ ಬಂದಿದ್ದರೆ ಸಂತೋಷದಿಂದ ನಂಬುತ್ತಿದ್ದೆ. ಈಗ ಅದೆಲ್ಲವೂ ಕನಸಿನಲ್ಲಿ ಕಂಡ ದಿನಗಳು ಎಂದೆನಿಸತೊಡಗಿದೆ. ದಟ್ಟದರಿದ್ರನಾದ ನಾನು ಈಗ ಸಂಪತ್ತನ್ನು ಹೊಂದುವುದಿರಲಿ.. ಬೇರೆಯವರ ಸಂಪತ್ತು - ಸಂಭ್ರಮವನ್ನು ನೋಡಿ ಸಂತೋಷ ಪಡಲು ಬೇಕಾದ ಕಣ್ಣುಗಳನ್ನು ಕೂಡ ಕಳೆದುಕೊಂಡಿದ್ದೇನೆ. ನನ್ನ ಮಡದಿ ರೋಗಿಯಾಗಿದ್ದಾಳೆ ಇದನ್ನೆಲ್ಲ ನೋಡುತ್ತಾ ನಮ್ಮೀರ್ವರ ಸೇವೆ ಮಾಡುತ್ತಿರುವ ಕಡು ಬಡವ ಸತ್ಯವಾನನಿಗೆ ನಿನ್ನ ಮಗಳನ್ನು ಕೊಡುವ ನಿರ್ಧಾರವಾದರೂ ಯಾಕೆ ಮಾಡಿದೆ... ಇನ್ನು ನಿನ್ನ ಮಗಳಾದರೂ ಇದನ್ನು ಹೇಗೆ ಸ್ವೀಕರಿಸಬಲ್ಲಳು" ಹೀಗೆ ದ್ಯುಮತ್ಸೇನನಾಡಿದ ಮಾತಿಗೆ ಪ್ರತಿಯಾಗಿ ಅಶ್ವಪತಿಯೇ ಉತ್ತರಿಸುತ್ತಾನೆ "ದ್ಯುಮತ್ಸೇನ... ನೀನೋ ನಿನ್ನ ಮಗನಿರುವ ಸ್ಥಿತಿಯನ್ನೋ ತಿಳಿಯದೇ ನಾನು ಈ ನಿರ್ಧಾರ ಕೈಗೊಳ್ಳಲಿಲ್ಲ, ಎಲ್ಲವೂ ನಮ್ಮ ಅರಿವಿಗೆ ಬಂದಿದೆ ವಿಧಿಲಿಖಿತವನ್ನು ಮೀರಲು ಈ ಪ್ರಪಂಚದಲ್ಲಿ ಯಾರಿಂದಲೂ ಸಾಧ್ಯವಿಲ್ಲ, ನೀನು ಅರಣ್ಯದಲ್ಲಿದ್ದರೂ ಕ್ಷತ್ರಿಯನೇ ಅಲ್ಲವೆ... ನಿನ್ನ ನುಗನಾದ ಸತ್ಯವಾನ ರಾಜಕುಮಾರನೇ ಅಲ್ಲವೆ..ಸ್ವತಃ ವಿವಾಹವಾಗಬೇಕಾದ ನನ್ನ ಪುತ್ರಿಯೇ ಸತ್ಯವಾನನನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಅವಳ ನಿರ್ಧಾರವನ್ನು ಅಂಗೀಕರಿಸಿಯೇ ನಾವು ದಿಬ್ಬಣ ಸಮೇತರಾಗಿ ಬಂದವರು " ಅಶ್ವಪತಿಯ ಈ ಮಾತನ್ನು ಕೇಳಿ ದ್ಯುಮತ್ಸೇನನಿಗೆ ಸಮಾಧಾನ-ಸಂತೋಷವಾಗುತ್ತದೆ. "ಹಾಗಿದ್ದರೆ ಎಲ್ಲವನ್ನು ಯೋಚಿಸಿಯೇ ತೀರ್ಮಾನ ಕೈಗೊಂಡಿರುವಿರಾದರೆ ಈ ವಿವಾಹ ನಡೆಯಲಿ " ಎಂದು ಅನುಮತಿಸುತ್ತಾನೆ. ರಾಜರ್ಷಿ ದ್ಯುಮತ್ಸೇನನ ನಿರ್ಧಾರದಿಂದ ಎಲ್ಲರಿಗೂ ಸಂತೋಷವಾಗುತ್ತದೆ. ಅತ್ಯಂತ ಸಂಭ್ರಮದಿಂದ ಅರಣ್ಯದಲ್ಲಿಯೇ ಖುಷಿ ಮುನಿಗಳ ಸಮ್ಮುಖದಲ್ಲಿ ವಿವಾಹ ಸಂಪನ್ನಗೊಳ್ಳುತ್ತದೆ. ಮಾದ್ರಾಧಿಪತಿ ಅಶ್ವಪತಿ ತನ್ನ ಪರಿವಾರದೊಂದಿಗೆ ನಾಲ್ಕಾರು ದಿನ ಅಲ್ಲಿಯೇ ಇದ್ದು ನಂತರ ದ್ಯುಮತ್ಸೇನನ ಅನುಮತಿ ಪಡೆದು ವಧೂವರರಿಗೆ ಉಡುಗೊರೆ ಕೊಟ್ಟು ಹರಸಿ ತನ್ನ ರಾಜ್ಯಕ್ಕೆ ಹಿಂತಿರುಗುತ್ತಾನೆ.
ತಂದೆ ತನ್ನ ಪರಿವಾರವನ್ನು ಕರೆದುಕೊಂಡು ಹಿಂತಿರುಗಿದ ಮರುಕ್ಷಣದಲ್ಲಿಯೇ ಸಾವಿತ್ರಿ ರಾಜಕುಮಾರಿಗೆ ಉಚಿತವಾಗಿ ತಾನು ಧರಿಸಿದ್ದ ವಸ್ತ್ರಾಭರಣಗಳನ್ನು ತೆಗೆದಿರಿಸಿ ವನದಲ್ಲಿ ಆಶ್ರಮವಾಸಿಗಳು ಧರಿಸುವ ನಾರುಡುಗೆಯನ್ನು ಧರಿಸುತ್ತಾಳೆ. ಗಂಡನಾದ ಸತ್ಯವಾನನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾ, ಅತ್ತೆ ಮಾವಂದಿರ ಸೇವೆಯನ್ನು ಮಾಡತೊಡಗುತ್ತಾಳೆ. ತಾನು ತೆಗೆದಿರಿಸಿದ ಆಭರಣಗಳನ್ನು ಅತ್ತೆಗೆ ತೊಡಿಸಿ ಅದರಿಂದ ಅವಳು ಸಂತೋಷ ಹೊಂದಿದಾಗ ತಾನೂ ಸಂತೋಷ ಹೊಂದುವಳು. ಸತ್ಯವಾನನೊಂದಿಗೆ ವನವನ್ನು ಸಂಚರಿಸುತ್ತಾ ಸಂತೋಷಪಡುವಳು. ಸಂತೋಷದ ದಿನಗಳು ಕಳೆಯುವುದೇ ತಿಳಿಯುವುದಿಲ್ಲ. ದಿನ ಕಳೆದು ತಿಂಗಳಾಗಿ.. ತಿಂಗಳುಗಳು ಕಳೆದು ವರ್ಷಕ್ಕೆ ಸಮೀಪಿಸಿತು. ಸಾವಿತ್ರಿ ನಾರದರು ಅಂದು ಹೇಳಿದ ಮಾತು "ಸಂವತ್ಸರೇಣ ಕ್ಷೀಣಾಯುಃ" ಎಂಬುದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿದ್ದಳು. ನಾರದರು ಹೇಳಿದ ಆ ದಿನವೂ ಹತ್ತಿರ ಬಂದೇಬಿಟ್ಟಿತು. ನಾರದರ ಮಾತಿನಂತೆ ವರ್ಷ ಪೂರ್ತಿಯಾಗಲು ಇನ್ನು ನಾಲ್ಕು ದಿನಗಳು ಉಳಿದಿದೆ. ಅದನ್ನು ಎದುರಿಸಲು ಬೇಕಾಗಿ ಸಾವಿತ್ರಿ ಒಂದು ಕಠಿಣವಾದ ವ್ರತವನ್ನು ಕೈಗೊಳ್ಳುತ್ತಾಳೆ. "ತ್ರಿರಾತ್ರ" ವ್ರತ, ಅದು ಸುಲಭದ್ದಾಗಿರಲಿಲ್ಲ .. ಮೂರು ರಾತ್ರಿ - ಹಗಲುಗಳನ್ನು ಉಪವಾಸದಿಂದ ಕಳೆಯಬೇಕು., ಕೇವಲ ಉಪನಾಸವಿದ್ದರೆ ಸಾಲದು.. ಕುಳಿತುಕೊಳ್ಳಲೂ .. ಮಲಗಲೂ ಅವಕಾಶವಿಲ್ಲ ನಿಂತೇ ಕಳೆಯಬೇಕು. ಇಂತಹ ವ್ರತವನ್ನು ಸಂಕಲ್ಪ ಮಾಡಿದ್ದನ್ನು ತಿಳಿದು ಮಾವ ದ್ಯುಮತ್ಸೇನ ಸಾವಿತ್ರಿಯನ್ನು ಕರೆದು " ಮಗಳೇ ಮೊದಲು ನೀನು ಅರಮನೆಯ ಸುಖೋಪಭೋಗಗಳಲ್ಲಿ ಸಂತೋಷದಿಂದ ಬೆಳೆದವಳು ಸಹಜವಾಗಿಯೇ ಈ ಕಾಡಿನ ಜೀವನ ನಿನಗೆ ಕಷ್ಟಕರವಾದದ್ದು, ಅದರ ಜೊತೆಗೆ ಇಂತಹ ಕಠಿಣವಾದ ವ್ರತದ ಸಂಕಲ್ಪ ಯಾಕಮ್ಮ ಅದು ನಿನಗೆ ತುಂಬಾ ಕಠಿಣ" ಮಾವನ ಮಾತನ್ನ ಕೇಳಿದ ಸಾವಿತ್ರಿ .." ತಾತ... ನಾನೊಂದು ಉದ್ದೇಶವನ್ನಿಟ್ಟುಕೊಂಡೇ ಈ ವ್ರತವನ್ನು ಸಂಕಲ್ಪಿಸಿದ್ದೇನೆ. ನಾವು ಸಾಗುವ ಮಾರ್ಗದ ಸ್ಪಷ್ಟವಾದ ಕಲ್ಪನೆ ನಮಗಿದ್ದರೆ ಯಾವುದೂ ಕಠಿಣವಲ್ಲ. ನೀನು ಸಂಕಲ್ಪಿಸಿರುವ ವ್ರತ ಸಾಂಗವಾಗಿ ನೆರವೇರಲಿ ಎಂದು ಹಿರಿಯರಾದ ನೀವು ಆಶೀರ್ವದಿಸಿದರೆ ಅಷ್ಟೇಸಾಕು ಎಲ್ಲವೂ ಸುಲಭವಾಗುತ್ತದೆ. " ( ಸಾವಿತ್ರಿಗೆ ಮಾತ್ರ ಇನ್ನು ನಾಲ್ಕನೆಯ ದಿನ ಸತ್ಯವಾನನಿಗೆ ಮರಣ ಎಂದು ತಿಳಿದಿರುವುದು... ತಿಳಿಯದೇ ಇದ್ದ ಗಂಡನಿಗೋ, ಅತ್ತೆ ಮಾವಂದಿರಿಗೂ ಹೇಳುವ ಹಾಗಿಲ್ಲ ) ಸೊಸೆಯ ಮಾತನ್ನು ಕೇಳಿದ ದ್ಯುಮತ್ಸೇನ ಇನ್ನೇನನ್ನು ಹೇಳಿದರೂ ಸಾವಿತ್ರಿ ಕೇಳಲಾರಳು ಎಂಬುದನ್ನು ತಿಳಿದು " ವ್ರತವನ್ನು ನಿಲ್ಲಿಸು ಎನ್ನಲು ನನಗೂ ಮನಸ್ಸು ಬಾರದು ಹಾಗಾಗಿ ನೀನು ಸಂಕಲ್ಪಿಸಿರುವ ವ್ರತ ಯಶಸ್ವಿಯಾಗಲಿ" ಎಂದು ಆಶೀರ್ವದಿಸಿ ಹರಸಿದ. ತ್ರಿರಾತ್ರ ವ್ರತದ ಸಂಕಲ್ಪ ಮಾಡಿದ ಸಾವಿತ್ರಿ ಎರಡು ದಿನಗಳನ್ನು ಕಳೆದಳು ಅದಾಗಲೇ ಅವಳನ್ನು ನೋಡಿದರೆ ಎಂತವರಿಗೂ ಕನಿಕರ ಮೂಡುವ ಹಾಗೆ ಕಾಣಿಸುತ್ತಿದ್ದಳು ಇನ್ನೊಂದೇ ದಿನ .... ಉಪವಾಸದಿಂದ ಬಳಲಿದ್ದ ಸಾವಿತ್ರಿ ನಾಳೆಯೇ ಸತ್ಯವಾನನಿಗೆ ಮರಣ ಎಂಬುದನ್ನು ನೆನೆದು ಮತ್ತೂ ಬಳಲಿದಳು. ಅಂತೂ ಮೂರನೆಯ ರಾತ್ರಿಯೂ ಕಳೆದು ಸೂರ್ಯ ಉದಯಿಸಿದ, ಸಾವಿತ್ರಿ ಲಗುಬಗೆಯಿಂದ ಸ್ನಾನಮಾಡಿ ಮಡಿವಸನವನ್ನುಟ್ಟು ದೇವತಾರ್ಚನೆಯನ್ನು ಮಾಡಿದಳು. ಆನಂತರದಲ್ಲಿ ಆಶ್ರಮದ ಸಮೀಪವಾಸಿಗಳಾಗಿದ್ದ ಬ್ರಾಹ್ಮಣ ದಂಪತಿಗಳನ್ನೂ, ವೃದ್ಧರನ್ನೂ, ಅತ್ತೆ ಮಾವಂದಿರನ್ನೂ ಸತ್ಕರಿಸಿದಳು. ಅವರೆಲ್ಲರಿಗೂ ನಮಸ್ಕರಿಸಿದಾಗ ಪ್ರತಿಯಾಗಿ ಹರಸಿದ್ದು " ಧೀರ್ಘ ಸುಮಂಗಲೀ ಭವ " ಎಂಬುದಾಗಿ 🙏🙏
ಮುಂದಿನ ಘಟನೆ ಮುಂದಿನ ಬರಹ 🙏🙏
Saturday, July 5, 2025
ಸಾವಿತ್ರೀ ಭಾಗ 2
ಮಿತವಾದ ಪರಿವಾರದೊಂದಿಗೆ ಹೊರಟ ಅರಸುಕುಮಾರಿ ಸಾವಿತ್ರಿ ಅನೇಕ ತೀರ್ಥಕ್ಷೇತ್ರಗಳ ಸಂದರ್ಷನ ಮಾಡಿದಳು, ಹಲವು ಖುಷಿಮುನಿಗಳನ್ನು ಕಂಡು ಸತ್ಕರಿಸಿದಳು . ಮುಂದೆ ಸಾಗುತ್ತಾ ಮೇಧ್ಯಾರಣ್ಯವೆಂಬ ವನ ಪ್ರವೇಶ ಮಾಡಿದಳು. ಅಲ್ಲಿ ಸ್ಪುರದ್ರೂಪಿಯಾದ ಯುವಕ ನೋರ್ವನನ್ನು ನೋಡುತ್ತಾಳೆ. ಬ್ರಾಹ್ಮಣನಂತೆ ಕಾಣುವ ಅವನನ್ನು ನೋಡಿದಾಗ ಆಕರ್ಷಣೆಯಾಗುತ್ತದೆ. ಪರಿಚಯ ಮಾಡಿಕೊಳ್ಳಲು ಮುಂದಾಗುತ್ತಾಳೆ. ಅವಳು ಭಾವಿಸಿದ ಹಾಗೆ ಅವನು ಬ್ರಾಹ್ಮಣ ಕುಮಾರನಾಗಿರುವುದಿಲ್ಲ ಆತನ ತಂದೆಯ ಹೆಸರು ದ್ಯುಮತ್ಸೇನ.. ತಾಯಿ ಶೈಬ್ಯೆ, ಒಂದು ಕಾಲದಲ್ಲಿ ದ್ಯುಮತ್ಸೇನ ಸಾಲ್ವ ದೇಶದ ಅರಸನಾಗಿದ್ದ. ಅರಸನಾಗಿದ್ದಾಗಲೇ ಅಕಾಲದಲ್ಲಿ ಅವನು ಎರಡೂ ಕಣ್ಣುಗಳನ್ನು ಕಳೆದುಕೊಂಡ. ಈ ಸಮಯಕ್ಕೆ ಸರಿಯಾಗಿ ವಿಷಯ ತಿಳಿದ ಶತ್ರು ರಾಜರು (ನಾವು ದುರ್ಬಲರಾದಾಗಲೇ ಮಿತ್ರರು ಯಾರು ಶತ್ರುಗಳು ಯಾರೆಂದು ತಿಳಿಯುತ್ತದೆ) ರಾಜ್ಯದ ಮೇಲೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳುತ್ತಾರೆ. ಆ ಸಂದಭದಲ್ಲಿ ಅವನಿಗೆ ಇನ್ನೂ ಚಿಕ್ಕವನಾಗಿದ್ದ ಮಗನಿದ್ದ... "ಸತ್ಯವಾನ್" ಎಂದು ಹೆಸರು. ಮಗುವಾಗಿದ್ದಾಗಲೇ ಅಶ್ವಗಳ ಬಗ್ಗೆ ಆಸಕ್ತಿ ... ಮಣ್ಣಿನ ಕುದುರೆಗಳನ್ನು ಮಾಡಿ ಆಟವಾಡುತ್ತಿದ್ದ ಹಾಗಾಗಿ ಚಿತ್ರಾಶ್ವ ಎಂದೂ ಕರೆಯುತ್ತಿದ್ದರು. ರಾಜ್ಯವನ್ನು ಕಳೆದುಕೊಂಡ ಕುರುಡ ದ್ಯುಮತ್ಸೇನ ಪತ್ನಿಯನ್ನೂ ಮಗನನ್ನೂ ಕರೆದುಕೊಂಡು ವನದತ್ತ ಬಂದ. ಮೇಧ್ಯಾರಣ್ಯಕ್ಕೆ ಬಂದು ಅಲ್ಲಿರುವ ಖುಷಿಗಳ ಜೊತೆಯಲ್ಲಿ ತಾನೂ ಅವರಂತೆಯೇ ಸತಿ ಸುತರೊಂದಿಗೆ ಬದುಕತೊಡಗಿದ. ಬಾಲನಾಗಿದ್ದ ಸತ್ಕವಾನ ಈಗ ಪ್ರೌಢನಾಗಿದ್ದಾನೆ. ತಂದೆಗೆ ಕಣ್ಣಿಲ್ಲ ಜೊತೆಗೆ ವೃದ್ಧಾಪ್ಯವೂ ಆವರಿಸಿದೆ.. ತಾಯಿಗೂ ವೃದ್ಧಾಪ್ಯದ ಜೊತೆಗೆ ಅನಾರೋಗ್ಯ.. ಹಾಗೆ ತಂದೆ ತಾಯಿಗಳ ಸೇವೆಯನ್ನು ಮಾಡಿಕೊಂಡು... ಸಮೀಪದಲ್ಲಿರುವ ಬ್ರಾಹ್ಮಣರಿಗೂ ಪ್ರಿಯನಾಗಿ ಸತ್ಯವಾನ ಬದುಕುತ್ತಿದ್ದ. ಇಂತಹ ಸ್ಥಿತಿಯಲ್ಲಿ ಸಾವಿತ್ರಿ ಸತ್ಯವಾನನನ್ನು ಕಾಣುತ್ತಾಳೆ. ಪರಿಚಯವಾದಮೇಲೆ ತನ್ನನ್ನು ಮದುವೆಯಾಗೆಂದು ಕೇಳಿಕೊಳ್ಳುತ್ತಾಳೆ. ಸತ್ಯವಾನನ ಬದುಕಿನ ಕರಾಳ ಕಥೆಯನ್ನು ಕೇಳಿದಮೇಲೆಯೂ ನೀನೇ ನನಗೆ ಪತಿಯಾಗಬೇಕೆಂದು ಒಪ್ಪಿಸಿ ದಿಬ್ಬಣ ಸಮೇತ ಬರುವೆನೆಂದು ತನ್ನ ರಾಜ್ಯಕ್ಕೆ ಹಿಂತಿರುಗುತ್ತಾಳೆ.
ಇತ್ತ ಮಾದ್ರೇಶನಾದ ಅಶ್ವಪತಿಯನ್ನು ಕಾಣಲು ನಾರದ ಮಹರ್ಷಿಗಳು ಬರುತ್ತಾರೆ.. ನಾರದರನ್ನು ಸತ್ಕರಿಸಿ ಮಾತಿಗೆ ತೊಡಗಿದ ಸಂದರ್ಭದಲ್ಲಿಯೇ ಸಾವಿತ್ರಿ ಬಂದು ತಂದೆಗೂ ನಾರದರಿಗೂ ನಮಸ್ಕರಿಸಿ ನಿಲ್ಲುತ್ತಾಳೆ. ಸಾವಿತ್ರಿಯನ್ನು ನೋಡಿದ ನಾರದ ಮಹರ್ಷಿಗಳು ದೂರದ ಪ್ರಯಾಣ ಮುಗಿಸಿ ಬಂದವಳೆಂದು ತಿಳಿದು ಏನೆಂದು ಅಶ್ವಪತಿಗೆ ಕೇಳುತ್ತಾರೆ. ಹಿಂದೆ ನಡೆದ ಘಟನೆಗಳನ್ನು ಹೇಳಿದ ಅಶ್ವಪತಿ ಮಗಳು ತಾನೇ ವರಾನ್ವೇಷಣೆಗಾಗಿ ತೆರಳಿದವಳು ಎಂಬುದನ್ನು ವಿವರಿಸುತ್ತಾನೆ. ಮುಂದೆ ನಡೆದ ಎಲ್ಲಾ ವಿದ್ಯಮಾನವನ್ನು ಸಾವಿತ್ರಿಯೇ ಹೇಳುತ್ತಾ ಸತ್ಯವಾನನನ್ನು ಮನಸಾ ವರಿಸಿದ್ದನ್ನು ತಿಳಿಸುತ್ತಾಳೆ. ಕೇಳುತ್ತಿದ್ದ ನಾರದರು "ಅಪರಾಧ ಮಾಡಿಬಿಟ್ಟಳು" ಎಂದು ಉದ್ಗರಿಸುತ್ತಾರೆ. ಅವರ ಮಾತನ್ನು ಕೇಳಿದ ಅಶ್ವಪತಿ ಆತಂಕದಿಂದಲೇ " ಸ್ವಾಮೀ ವರನಲ್ಲಿ ಏನು ಕೊರತೆ ಉಂಟು" ಎಂದು ಕೇಳಿದಾಗ ನಾರದರು "ಕೊರತೆಯೇನಿಲ್ಲ... ರೂಪದಲ್ಲಿ ಮನ್ಮಥ - ಜಯಂತರನ್ನೂ ಮೀರಿಸುವವ.. ಇನ್ನು ಯೋಗ್ಯತೆಯಲ್ಲಿ.. ದಾನ ಧರ್ಮದಲ್ಲಿ ರಂತಿದೇವನನ್ನು ಹಿಂದಿಕ್ಕಬಲ್ಲ.. ಕ್ಷಮೆಯಲ್ಲಿ ಭೂದೇವಿಗೆ ಸರಿಸಾಟಿಯಾಗಬಲ್ಲ... ಸತ್ಯದಲ್ಲಿ ಅವನೇ ಸತ್ಯವಾನ... ಹೆಸರಿಗೆ ಅನುಗುಣವಾಗಿಯೇ ಇಂದ್ರ ಸಮಾನನಿದ್ದಾನೆ" ನಾರದರ ಮಾತನ್ನು ಕೇಳಿದ ಅಶ್ವಪತಿಗೆ ಅಂತವನನ್ನು ಆಯ್ಕೆಮಾಡಿದ ಸಾವಿತ್ರಿಯ ಅಪರಾಧ ಯಾವುದು ಎಂದು ತಿಳಿಯಲಿಲ್ಲ. ಮುಂದುವರಿದು ಕೇಳುತ್ತಾನೆ " ಸ್ವಾಮಿ ಸತ್ಯವಾನ ಸರ್ವಗುಣ ಸಂಪನ್ನ ಎಂದು ನೀವೇ ಹೇಳಿದಿರಿ ಆದರೂ ಏನೋ ಒಂದು ದೋಷ ಇದೆ ಎಂದು ಭಾವಿಸಬೇಕಾಗಿದೆ... ಅಂತಹ ದೋಷ ಅವನಲ್ಲಿರುವುದಾದರೂ ಏನು ಎಂದು ತಿಳಿಸಿ" ಆಗ ನಾರದರು " ಸರ್ವಗುಣ ಸಂಪನ್ನನಾದ ಸತ್ಯವಾನನಲ್ಲಿ ಇನ್ನುಳಿದ ಯಾವುದೋ ಒಂದು ದೋಷವನ್ನು ನಿವಾರಿಸಿ ಬಿಡಬಹುದು ಎಂದು ನೀನು ಯೋಚಿಸಿದರೆ ಅದು ತಪ್ಪು... ಯಾರಿಂದಲೂ ಹೋಗಲಾಡಿಸಲಾಗದ ಒಂದು ದೋಷ ಏನೆಂದರೆ.. "ಸಂವತ್ಸರೇಣ ಕ್ಷೀಣಾಯುರ್ದೇಹನ್ಯಾಸಂ ಕರಿಷ್ಯತಿ "
ಸತ್ಯವಾನನು ಅಲ್ಪಾಯುಷ್ಯವನ್ನು ಹೊಂದಿದ್ದಾನೆ ಇಂದಿಗೆ ಸರಿಯಾಗಿ ಒಂದು ವರ್ಷಕ್ಕೆ ಅವನ ಆಯಸ್ಸು ಮುಗಿದು ಮರಣ ಹೊಂದುವನು" ನಾರದರು ಆಡಿದ ಆ ಮಾತನ್ನು ಕೇಳಿದ ಅಶ್ವಪತಿಗೆ ಬಹಳ ದುಃಖವಾಯಿತು. ಬಹಳ ಪರಿಶ್ರಮದಿಂದ ದೊರಕಿದ ಈ ವರನನ್ನೂ ತೊರೆಯಬೇಕಾಗಿ ಬಂತಲ್ಲಾ... ಅಂತೆಯೇ ಸಾವಿತ್ರಿಯನ್ನು ಕುರಿತು "ಮಗಳೇ... ನಾರದರು ಆಡಿದ ಮಾತನ್ನು ನೀನೂ ಕೇಳಿಸಿಕೊಂಡಿರುವೆ ಸತ್ಯವಾನನಿಗೆ ಎಲ್ಲ ಗುಣಗಳೂ ಇದ್ದರೂ ಆಯುಷ್ಯವೇ ಇಲ್ಲವೆಂದಾದ ಮೇಲೆ ಏನು ಪ್ರಯೋಜನ.. ಹಾಗಾಗಿ ನೀನು ಮತ್ತೆ ವರಾನ್ವೇಶಣೆಗಾಗಿ ತೆರಳು ಮಗಳೇ ಸರ್ವಗುಣಸಂಪನ್ನನಾದ ದೀರ್ಘಾಯುವಾದ ಒಬ್ಬನನ್ನು ಅರಸು" ತಂದೆಯ ಮಾತನ್ನು ಕೇಳಿದ ಸಾವಿತ್ರಿ " ಅಪ್ಪಾ.. ಒಡೆದ ದರ್ಪಣವನ್ನು ಮತ್ತೆ ಕೂಡಿಸಲು ಸಾಧ್ಯವಾಗುವುದಿಲ್ಲವೋ ಹಾಗೆ ಒಮ್ಮೆ ಆಡಿದ ಮಾತು ಕೂಡ.., ಮನಸ್ಸಿನಲ್ಲಿ ಮೂಡಿ.. ಬುದ್ಧಿಯಿಂದ ಪ್ರಚೋದಿತವಾಗಿ ಬಾಯಿಂದ ಮಾತಾಗಿ ಹೊರಬೀಳುವುದು.. ಅಂತಹ ಮಾತನ್ನು ನಾನು ಸತ್ಯವಾನನಿಗೆ ಆಡಿಯಾಗಿದೆ, ಅವನು ಅಲ್ಪಾಯುವಾಗಲೀ ದೀರ್ಘಾಯುವಾಗಲಿ, ಗುಣಾಡ್ಯನೇ ಆಗಿರಲಿ.. ಗುಣಹೀನನೇ ಆಗಿರಲಿ ಅವನನ್ನೇ ವರಿಸುವುದೆಂದು ನಿರ್ಧರಿಸಿಯಾಗಿದೆ ಇನ್ನು ವಿವಾಹದ ಸಿದ್ಧತೆಯೊಂದೇ ಉಳಿದಿರುವುದು.." ಸಾವಿತ್ರಿಯ ಮಾತನ್ನು ಕೇಳಿದ ನಾರದ ಮಹರ್ಷಿಗಳು ಅಶ್ವಪತಿಯನ್ನು ಕುರಿತು " ಅರಸಾ ಸ್ಥಿರವಾದ ಬುದ್ಧಿಯನ್ನು ಹೊಂದಿರುವ ನಿನ್ನ ಮಗಳ ಮನಸ್ಸನ್ನು ಚಂಚಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ , ಧರ್ಮಮಾರ್ಗದಲ್ಲಿ ಪತಿವ್ರತೆಯಾಗಿ ಬದುಕುವ ಸಂಕಲ್ಪ ಅವಳದ್ದಾಗಿದೆ ಎಂದಾದರೆ ಅದನ್ನು ನೆರವೇರಿಸುವುದೇ ಸೂಕ್ತ " ನಾರದರ ಈ ಮಾತನ್ನು ಕೇಳಿದ ಅಶ್ವಪತಿ .. ಸ್ವಾಮೀ ನಿಮ್ಮ ಮಾತನ್ನು ನಾನೂ ಅತಿಕ್ರಮಿಸುವುದಿಲ್ಲ ದೈವ ನಿರ್ಣಯಿಸಿದಂತೆ ಆಗಲಿ ಎಂದು ಸಮ್ಮತಿ ಸೂಚಿಸಿದ. ಮಹರ್ಷಿ ನಾರದರು ಸಾವಿತ್ರಿಯ ವಿವಾಹವು ಸಾಂಗವಾಗಿ ನೆರವೇರಲಿ ಎಂದು ಹರಸಿ ಮುಂದೆ ಸಾಗಿದರು.🙏🙏
ಮುಂದಿನ ಕಥೆ ಮುಂದಿನ ಬರಹದಲ್ಲಿ🙏🙏
ಸಾವಿತ್ರಿ
ಪುರಾಣಗಳಲ್ಲಿ ಹೆಚ್ಚು ಕೇಳಿ ಬರುವುದು "ಸಾವಿತ್ರಿ" ಎಂಬ ಹೆಸರು.. ಅದು ಆರಾಧಿಸುವ ಸಾವಿತ್ರೀ ದೇವಿಯ ಹೆಸರೊಂದೇ ಅಲ್ಲ ಯಾರು ಸಾವಿತ್ರೀ ದೇವಿಯ ಉಪಾಸನೆಯಿಂದ ಜನಿಸಿ ಪತಿವ್ರತಾ ಧರ್ಮವನ್ನು ಪಾಲಿಸಿ ಆ ಮೂಲಕ ತನ್ನ ಪತಿಯನ್ನು ಬದುಕಿಸಿ ಕೊಂಡಳೋ ಅವಳೂ ಸಾವಿತ್ರಿಯೇ... ಸಾವಿತ್ರಿಯ ಕಥೆ ಮುಖ್ಯವಾಗಿ... ವಿಸ್ತಾರವಾಗಿ ಎರಡು ಕಡೆಯಲ್ಲಿ ಹೇಳಲ್ಪಟ್ಟಿದೆ ಮೊದಲನೆಯದು ಮಹಾಭಾರತದ ವನಪರ್ವದ ಕೊನೆಯ ಭಾಗ... ಪಾಂಡವರು ವನವಾಸದ ಕೊನೆಯ ದಿನಗಳಲ್ಲಿ ಮಾರ್ಕಾಂಡೇಯ ಮುನಿಗಳ ಸಂದರ್ಷನ ಮಾಡಿದ ಸಂದರ್ಭದಲ್ಲಿ ಧರ್ಮರಾಯನು ಅವರಿಂದ ಶ್ರೀರಾಮಚಂದ್ರನ ಕಥೆಯನ್ನು ಕೇಳಿ, ತನ್ನ ಸ್ಥಿತಿಯ ಬಗ್ಗೆ ಸಮಾಧಾನ ಹೊಂದಿದ ಮೇಲೂ ದ್ರೌಪದಿಯ ಮುಖ ನೋಡಿದಾಗ ಮತ್ತೆ ದುಃಖದಿಂದ... ನನಗಂತೂ ಕಷ್ಠ ಬಂತು ಆದರೆ ಯಾವ ತಪ್ಪನ್ನೂ ಮಾಡದ ಈಕೆ ವನದಲ್ಲಿ ಅಲೆಯುವ ಸ್ಥಿತಿ ಬಂತಲ್ಲಾ ಎಂದು ಹೇಳಿದಾಗ ಮೃಕಂಡು ಪುತ್ರರು ಸಾವಿತ್ರಿಯ ಕಥೆಯನ್ನು ಹೇಳುತ್ತಾರೆ. ಇನ್ನು ದೇವೀ ಭಾಗವತದಲ್ಲಿ ತಪಸ್ವಿಗಳಾದ ಖುಷಿಗಳ ಸಮ್ಮುಖದಲ್ಲಿ ನಾರಾಯಣ ಮುನಿಯು ನಾರದರಿಗೆ ಸಾವಿತ್ರಿಯ ಕಥೆಯನ್ನು ಹೇಳುತ್ತಾರೆ.
ಮಾದ್ರ ದೇಶವನ್ನಾಳುತಿದ್ದ ಅರಸ " ಅಶ್ವಪತಿ " ಅವನಿಗೆ ಅನುರೂಪಳಾದ ಹೆಂಡತಿ ಮಾಳವದ ರಾಜಕುಮಾರಿ "ಮಾಲತಿ ". ಪರಮ ಧಾರ್ಮಿಕನಾಗಿ ಪ್ರಜಾ ರಂಜಕನಾಗಿ ರಾಜ್ಯಭಾರ ಮಾಡುತ್ತಿದ್ದ ಅಶ್ವಪತಿ ಮಹಾರಾಜ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಸಂತಾನ ಭಾಗ್ಯವಾಗಲಿಲ್ಲ. ವಶಿಷ್ಠ ನಿರ್ದೇಶನದಂತೆ ಮಹಾರಾಣಿ ಮಾಲತಿ ಸಾವಿತ್ರೀ ದೇವಿಯ ಆರಾಧನೆ ಮಾಡಿದರೂ ಫಲ ದೊರೆಯದೇ ದುಃಖತಪ್ತಳಾಗಿದ್ದಳು. ಹೆಂಡತಿಯ ದುಃಖ ನೋಡಿ ಮರುಗಿದ ಅಶ್ವಪತಿ ಮಹಾರಾಜ ತಾನೇ ಸಾವಿತ್ರಿ ದೇವಿಯನ್ನು ಆರಾಧಿಸಲು ಪುಷ್ಕರ ಕ್ಷೇತ್ರಕ್ಕೆ ತೆರಳುತ್ತಾನೆ. ( ಈ ಘಟನೆ ದೇವೀ ಭಾಗವತದಲ್ಲಿ ಇರುವುದಕ್ಕೂ ಮಹಾಭಾರತದ ಉಲ್ಲೇಖದಲ್ಲಿಯಾ ಸ್ವಲ್ಪ ವ್ಯತ್ಯಾಸ ಇದೆ.. ಮಹಾಭಾರತದಲ್ಲಿ ಹದಿನೆಂಟು ವರ್ಷಗಳ ಸಾವಿತ್ರಿ ಆರಾಧನೆಯಿಂದ ದೇವಿ ವರವನ್ನು ಕೊಟ್ಟಳೆಂದೂ .. ದೇವೀ ಭಾಗವತದಲ್ಲಿ ನೂರು ವರ್ಷಗಳ ತಪಸ್ಸು ಜೊತೆಗೆ ಹತ್ತು ಲಕ್ಷ ಗಾಯಿತ್ರೀ ಜಪದಿಂದ ಪ್ರಸನ್ನ ಳಾದ ಸಾವಿತ್ರಿದೇವಿ ವರನೀಡಿದಳೆಂದೂ ಇದೆ... ವರದಲ್ಲಿಯೂ ದೇವೀ ಭಾಗವತದಲ್ಲಿ ಸಾವಿತ್ರೀ ದೇವಿ ನಿನ್ನ ಹೆಂಡತಿ ಪುತ್ರಿಯಾಗಬೇಕೆಂದು ಬಯಕೆ ಹೊಂದಿದ್ದಾಳೆ ... ನಿನಗೆ ಪುತ್ರನ ಹಂಬಲ ಇದೆ ಹಾಗಾಗಿ ಮೊದಲು ಪುತ್ರಿ ಜನಿಸುತ್ತಾಳೆ ನಂತರ ಪುತ್ರರು ಜನಿಸುತ್ತಾರೆ ಎಂದು ಹೇಳಿದರೆ.. ಮಹಾಭಾರತದ ಪ್ರಕಾರ ಅಶ್ವಪತಿಗೆ ಪುತ್ರಾಪೇಕ್ಷೆ ಇದ್ದರೂ ದೇವಿಯೇ ವರ ನೀಡುವುದು ಬ್ರಹ್ಮದೇವರ ನಿರ್ಣಯ ಹಾಗಾಗಿ.."ಉತ್ತರಂ ಚ ನ ಮೇ ಕಿಂಚಿದ್ವ್ಯಾಹರ್ತವ್ಯಂ ಕಥಂಚನ ||" ನಿನ್ನ ಬಯಕೆ ಏನಿದ್ದರೂ ಕೊಟ್ಟ ವರವನ್ನು ಮರುಪ್ರಶ್ನೆ ಮಾಡದೇ ಸ್ವೀಕರಿಸಬೇಕು ಎಂದು ಹೇಳಿ ಮಗಳೊಬ್ಬಳೇ ಜನಿಸುವುದು ಎಂದು ಹೇಳುತ್ತಾಳೆ.)
ದೇವಿ ಸಾವಿತ್ರಿಯ ಆರಾಧನೆಯಿಂದ ಮಾಲತಿ ಗರ್ಭವತಿಯಾಗಿ ಒಬ್ಬಳು ಪುತ್ರಿಯನ್ನು ಪಡೆಯುತ್ತಾಳೆ. ಲಕ್ಷ ಲಕ್ಷ ಗಾಯಿತ್ರೀ ಮಂತ್ರದ ಪುನಶ್ಚರಣೆಯಿಂದ ಮಗು ಜನಿಸಿದ ಕಾರಣದಿಂದ ಅಶ್ವಪತಿ - ಮಾಲತಿಯರ ಸಂತೋಷಕ್ಕೆ ಪಾರವೇ ಇಲ್ಲ .. ಸಾವಿತ್ರಿ ದೇವಿಯ ವರದಿಂದ ಹುಟ್ಟಿದ ಮಗುವಾದ ಕಾರಣ ಸಾವಿತ್ರಿ ಎಂದೇ ನಾಮಕರಣ ಮಾಡುತ್ತಾರೆ. ಶುಕ್ಲ ಪಕ್ಷದ ಚಂದ್ರನಂತೆ ಸಾವಿತ್ರಿ ಬೆಳೆದು ಯೌವನಕ್ಕೆ ಕಾಲಿಡುತ್ತಾಳೆ. ವಿದ್ಯಾವತಿಯೂ, ತುಂಬಾ ಪ್ರಾಜ್ಞಳೂ ಆಗಿದ್ದ ಸಾವಿತ್ರಿಯನ್ನು ನೋಡಿದಾಗ ಹಿರಿಯರೂ ಕೂಡ ಗೌರವ ತೋರುತ್ತಿದ್ದರು. ಸಾವಿತ್ರೀ ದೇವಿಯೇ ಅಶ್ವಪತಿಯ ಮಗಳಾಗಿ ಅವತರಿಸಿದ್ದಾಳೆ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದರು. ಹೀಗಿರುವಾಗ ಪ್ರಾಯಪ್ರಬುದ್ಧಳಾದ ಸಾವಿತ್ರಿಯ ವಿವಾಹ ಮಾಡಬೇಕೆಂದು ಅಶ್ವಪತಿ ನಿರ್ಧರಿಸಿ ಅರಸುಕುಮಾರರಿಗೆ ಆಮಂತ್ರಣ ಕಳುಹಿಸುತ್ತಾನೆ. ಮಹಾರಾಜನ ಅಮಂತ್ರಣ ಸ್ವೀಕರಿಸಿ ಬಂದ ಅರಸುಕುಮಾರರು ಯಾರೂ ಸಾವಿತ್ರಿಯನ್ನು ಮದುವೆಯಾಗಲು ಸಿದ್ಧರಾಗಲಿಲ್ಲ . ಯಾಕೆಂದರೆ ಆಕೆಯನ್ನು ನೋಡಿದಾಕ್ಷಣ ಅವರಿಗೆ ಭಕ್ತಿ ಮೂಡುತಿತ್ತೇ ಹೊರತು ಪ್ರೀತಿಯಲ್ಲ.. ಸಾಕ್ಷಾತ್ ಸರಸ್ವತೀ -ಲಕ್ಷ್ಮೀದೇವಿಯರೇ ಒಂದೇ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವರೋ ಎಂದು ಭಾಸವಾಗುತ್ತಿತ್ತು. ಹಾಗಾಗಿ ಯಾರೊಬ್ಬರೂ ಅವಳನ್ನು ಬಯಸದೆ ಹಾಗೇ ನಮಸ್ಕರಿಸಿ ಹೋಗುತ್ತಿದ್ದರು. ಹೀಗೆಯೇ ಕಾಲ ಕಳೆಯತೊಡಗಿತು. ಅಶ್ವಪತಿ ಮಹಾರಾಜ ಸೂಕ್ತ ಸಮಯದಲ್ಲಿ ಕನ್ಯಾದಾನ ಮಾಡಲಾಗಲಿಲ್ಲ ಎಂಬ ಚಿಂತೆಯಲ್ಲಿ ಬೇಯತೊಡಗಿದ. ಒಂದು ಶುಭ ದಿನದಂದು ಸಾವಿತ್ರಿ ಮಿಂದು ಶುಚಿಯಾಗಿ ದೇವಿಯನ್ನು ಭಕ್ತಿಯಿಂದ ಅರ್ಚಿಸಿ ದೇವಿಪ್ರಸಾದ ರೂಪವಾದ ಪುಷ್ಪವನ್ನು ಮುಡಿದು ತಂದೆಯ ಬಳಿಬಂದು ನಮಸ್ಕರಿಸಿದಳು. ತಾನು ಒಂದು ಧೃಡನಿರ್ಧಾರಕ್ಕೆ ಬಂದವನಾದ ಅಶ್ವಪತಿ ಮಹಾರಾಜ ಮಗಳನ್ನು ಕರೆದು " ಮಗಳೇ ಸರಿಯಾದ ಕಾಲದಲ್ಲಿ ನಿನ್ನ ವಿವಾಹವನ್ನು ನೆರವೇರಿಸಲಾಗದ ನಾನು ಚಿಂತಿತನಾಗಿದ್ದೇನೆ ರೂಢಿಯಲ್ಲಿ ಒಂದು ಸೂಕ್ತಿಯಿದೆ..
ಅಪ್ರದಾತಾ ಪಿತಾ ವಾಚ್ಯೋ ವಾಚ್ಯಶ್ಚಾನುಪಯನ್ಫತಿ:|
ಮೃತೇ ಭರ್ತರಿ ಪುತ್ರಶ್ಚ ವಾಚ್ಯೋ ಮಾತುರರಕ್ಷಿತಾ||
ಪ್ರೌಡಾವಸ್ಥೆಗೆ ಬಂದ ಮಗಳನ್ನು ಮದುವೆ ಮಾಡದ ತಂದೆ, ಋತುಕಾಲದಲ್ಲಿ ಪತ್ನಿ ಸಮಾಗಮ ಮಾಡದ ಪತಿ, ವಿಧವೆಯಾದ ತಾಯಿಯನ್ನು ಸಂರಕ್ಷಿಸದ ಪುತ್ರ ಇವರು ನಿಂದೆಗೆ ಗುರಿಯಾಗುತ್ತಾರೆ. ಆದ್ದರಿದ ಮಗಳೇ ನೀನೇ ವರಾನ್ವೇಷಣೆಗಾಗಿ ತೆರಳು .... ನಿನಗೆ ಅನುರೂಪನಾದ ವರನನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನಿನಗೆ ಕೊಟ್ಟಿದ್ದೇನೆ" ಎಂದು ಹೇಳಿದ. ತಂದೆಯ ಮಾತನ್ನು ಸಾವಿತ್ರಿಯೂ ಅಂಗೀಕರಿಸುತ್ತಾಳೆ. ತಂದೆ ತಾಯಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಅರಮನೆಯಿಂದ ಹೊರಡುತ್ತಾಳೆ, ಅಶ್ವಪತಿಯ ನಿರ್ದೇಶನದಂತೆ ಜ್ಞಾನವೃದ್ಧರಾದ ಮಂತ್ರಿಗಳೂ.. ಮಿತ ಪರಿವಾರವೂ ಅವಳನ್ನು ಹಿಂಬಾಲಿಸುತ್ತದೆ.🙏🙏
ಉಳಿದದ್ದು ಮುಂದಿನ ಬರಹದಲ್ಲಿ🙏🙏
Thursday, July 3, 2025
ಗಾಲವ ಕೊನೆಯ ಭಾಗ
ಉಶೀನರನ ಜೊತೆಗಿನ ದಾಂಪತ್ಯವನ್ನೂ ತೊರೆಯಬೇಕಾದ ಕಾಲ ಮಾಧವಿಗೆ ಸನ್ನಿಹಿತವಾಯಿತು. ಪುತ್ರನಾದ ಶಿಬಿ ಹುಟ್ಟಿದ ಕಾರಣದಿಂದ ಮೊದಲೇ ಆಗಿದ್ದ ಒಪ್ಪಂದದ ಅವಧಿ ಮುಗಿಯಿತು... ಅದರ ಸೂಚನೆಯೋ ಎಂಬಂತೆ ಗಾಲವರು ಬಂದಾಯ್ತು. ಮಗುವಾದ ಶಿಬಿಯನ್ನು ಉಶೀನರನಿಗೆ ಒಪ್ಪಿಸಿ', ಮಾಧವಿ ಎಂಬ ಮೂರು ಮಕ್ಕಳ ತಾಯಿ ಮತ್ತೆ ಕನ್ಯಾವಸ್ಥೆಯನ್ನು ಹೊಂದಿ ಗಾಲವನನ್ನು ಹಿಂಬಾಲಿಸುತ್ತಾಳೆ. ಬೋಜ ದೇಶದಿಂದ ಅವರು ಹೊರಡುವ ಸಮಯದಲ್ಲಿ ಮತ್ತೆ ಗರುಡ ಕಾಣಿಸಿಕೊಳ್ಳುತ್ತಾನೆ. " ಅಯ್ಯಾ ಗಾಲವ... ನಿನ್ನ ಗುರುಗಳಿಗೆ ಒಪ್ಪಿಸಬೇಕಾದ ಅಶ್ವಗಳ ಸಂಗ್ರಹವಾಯಿತೇ" ಎಂದು ಕೇಳುತ್ತಾನೆ. ಆಗ ಗಾಲವ ''ಸುಪರ್ಣ.. ಮಹರ್ಷಿ ವಿಶ್ವಾಮಿತ್ರರಿಗೆ ಒಪ್ಪಿಸಬೇಕಾದ ಅಶ್ವಗಳಲ್ಲಿ ನಾಲ್ಕನೇ ಮೂರು ಅಂಶದ ಸಂಗ್ರಹವಾಗಿದೆ. ಇನ್ನುಳಿದಿರುವುದು ನಾಲ್ಕನೇ ಒಂದು ಭಾಗ ಮಾತ್ರ .. ಅದನ್ನು ಪಡೆಯುವ ಯೋಚನೆಯಲ್ಲಿ ಸಾಗುತ್ತಿದ್ದೇನೆ" ಎಂದು ಹೇಳುತ್ತಾನೆ. ಗಾಲವನ ಮಾತನ್ನು ಕೇಳಿದ ಗರುಡ ನಸುನಗುತ್ತ.. " ಇನ್ನು ನೀನು ಉಳಿದ ಎರಡು ನೂರು ಅಶ್ವಗಳನ್ನು ಹುಡುಕುವ ಪ್ರಯತ್ನ ಮಾಡಬೇಡ ಅವು ನಿನಗೆ ದೊರೆಯುವುದಿಲ್ಲ " ಎಂದು ಹೇಳುತ್ತಾನೆ. ಆಶ್ಚರ್ಯಗೊಂಡ ಗಾಲವ ಯಾಕೆ ಹೀಗೆ ಹೇಳಿದೆ ಎಂದು ಕೇಳಲು ಗರುಡ ಒಂದು ಕಿವಿ ಕಪ್ಪಾದ ಆ ಕುದುರೆಗಳ ಹಿನ್ನೆಲೆ ಹೇಳುತ್ತಾನೆ. (ಇಲ್ಲಿ ಈ ಕಥೆಯನ್ನು ಹೇಳುವ ಗರುಡ ಎಲ್ಲಾ ವಿಷಯ ತಿಳಿದರೂ ಮೊದಲೇ ಹೇಳಲಿಲ್ಲ)
ಗಾಲವನ ಸಂದೇಹ ನಿವಾರಿಸಲು ಗರುಡ ಹಿಂದಿನ ಒಂದು ಕಥೆಯನ್ನು ಹೇಳುತ್ತಾನೆ. " ಈ ಹಿಂದೆ ಕನ್ಯಾಕುಬ್ಜ ದೇಶವನ್ನು ಗಾಧಿ ಮಹಾರಾಜ ಆಳುತ್ತಿದ್ದ ಅವನಿಗೆ "ಸತ್ಯವತೀ" ಎಂಬ ಸುಂದರಳಾದ ಪುತ್ರಿಯಿದ್ಧಳು, ಪ್ರಾಯಕ್ಕೆ ಬಂದ ಅವಳನ್ನು ಮದುವೆಯಾಗಲು ತಪಸ್ವಿಯಾದ ಋಚೀಕ ಬಯಸುತ್ತಾನೆ. ಋಚೀಕನ ಬಯಕೆಗೆ ಸಮ್ಮತಿಸಿದ ಗಾಧಿ ಒಂದು ಕಿವಿ ಕಪ್ಪಾದ ಶ್ವೇತ ವರ್ಣದ ದೇಹವನ್ನು ಹೊಂದಿದ ಒಂದು ಸಾವಿರ ಕುದುರೆಗಳನ್ನು ಕನ್ಯಾಶುಲ್ಕವಾಗಿ ಕೊಡಲು ಕೇಳುತ್ತಾನೆ. ಇದಕ್ಕೊಪ್ಪಿದ ಋಚೀಕ ಭೂಮಂಡಲದಲ್ಲಿ ಎಲ್ಲಿಯೂ ಅಂತಹ ಕುದುರೆಗಳು ಇಲ್ಲವೆಂದು ತಿಳಿದು ವರುಣಲೋಕಕ್ಕೆ ಹೋಗಿ ಅಲ್ಲಿರುವ ಅಶ್ವತೀರ್ಥದಲ್ಲಿದ್ದ, ಗಾಧಿ ಹೇಳಿದ ಲಕ್ಷಣಗಳಿಂದ ಕೂಡಿದ ಒಂದು ಸಾವಿರ ಕುದುರೆಗಳನ್ನು ತಂದೊಪ್ಪಿಸಿ ಸತ್ಯವತಿಯನ್ನು ವಿವಾಹ ಮಾಡಿಕೊಳ್ಳುತ್ತಾನೆ. ಕೆಲವು ಕಾಲದ ನಂತರ ಗಾಧಿ ಮಹಾರಾಜ " ಪುಂಡರೀಕ" ಎನ್ನುವ ಯಜ್ಞವನ್ನು ಮಾಡಿ ಆ ಒಂದು ಸಾವಿರ ಕುದುರೆಗಳನ್ನು ದಕ್ಷಿಣಾರೂಪವಾಗಿ ಬ್ರಾಹ್ಮಣರಿಗೆ ಕೊಡುತ್ತಾನೆ. ಹಾಗೆ ಗಾಧಿ ಮಹಾರಾಜನಿಂದ ಬ್ರಾಹ್ಮಣರು ಪಡೆದ ಒಂದು ಸಾವಿರ ಕುದುರೆಗಳಲ್ಲಿ ಆರುನೂರು ಕುದುರೆಗಳನ್ನು ಈ ಹಿಂದೆ ನಿನಗೆ ಸಿಕ್ಕ ಮೂವರು ಅರಸರೂ ತಲಾ ಎರಡುನೂರರಂತೆ ಕೊಂಡುಕೊಳ್ಳುತ್ತಾರೆ. ಉಳಿದ ನಾಲ್ಕುನೂರು ಕುದುರೆಗಳೊಂದಿಗೆ ಅವರು ಮುಂದೆ ಸಾಗುತ್ತಿದ್ದಾಗ "ವಿತಸ್ತಾ" ಎಂಬ ನದಿಯ ಪ್ರವಾಹದಲ್ಲಿ ಅವು ಕೊಚ್ಚಿಕೊಂಡು ಹೋಗಿ ಬಿಡುತ್ತವೆ. ಆದ್ದರಿಂದ ಪ್ರಸ್ತುತ ಭೂಮಂಡಲದಲ್ಲಿ ಇರುವುದೇ ಆರುನೂರು!" ಗರುಡನ ಮಾತನ್ನು ಕೇಳಿದ ಗಾಲವನಿಗೆ ಒಂದು ಕ್ಷಣ ಆತಂಕವಾದರೂ ಮರುಕ್ಷಣದಲ್ಲಿ ಒಂದು ದಾರಿ ಗೋಚರಿಸುತ್ತದೆ. ಹಾಗಾಗಿ ಆರುನೂರು ಕುದುರೆಗಳನ್ನೂ ಜೊತೆಗೆ ಮಾಧವಿಯನ್ನು ಕೂಡಿಕೊಂಡು ಗುರುಗಳಾದ ವಿಶ್ವಾಮಿತ್ರರ ಸಮ್ಮುಖಕ್ಕೆ ಬಂದು ನಡೆದ ಘಟನೆಗಳನ್ನೆಲ್ಲ ವಿವರಿಸಿ ಕೈಮುಗಿದು ನಿಲ್ಲುತ್ತಾನೆ... ವಿಶ್ವಾಮಿತ್ರರೂ ಎರಡುನೂರು ಕುದುರೆಗಳ ಬದಲಾಗಿ ಮಾಧವಿಯೊಂದಿಗೆ ಒಂದು ಸಂತಾನ ಪಡೆಯುವ ನಿರ್ಧಾರಕ್ಕೆ ಬರುತ್ತಾರೆ. ಕೆಲವು ಕಾಲಾಂತರದಲ್ಲಿ ವಿಶ್ವಾಮಿತ್ರ - ಮಾಧವಿಯರ ಸಂಯೋಗದಲ್ಲಿ ಒಂದು ಗಂಡು ಸಂತಾನವಾಗುತ್ತದೆ. ಹುಟ್ಟಿದ ಮಗುವಿಗೆ "ಅಷ್ಟಕ" ಎಂದು ನಾಮಕರಣ ಮಾಡಿಸಿ ಗಾಲವನನ್ನು ಕರೆದು " ನೀನು ಕೊಡಬೇಕಾದ ಗುರುದಕ್ಷಿಣೆ ಸಂದಿತು. ಈ ಮಾಧವಿಯನ್ನು ನೀನು ಯಯಾತಿಗೆ ಒಪ್ಪಿಸಬಹುದು " ಎಂದು ಹೇಳಿ ಮೊದಲೇ ನಿರ್ಣಯಿಸಿದಂತೆ ತಪಸ್ಸಿಗೆ ತೆರಳುತ್ತಾರೆ. ಗಾಲವನಿಗೆ ಗುರುದಕ್ಷಿಣೆಯನ್ನು ಸಲ್ಲಿಸಿದ ಸಂತೃಪ್ತಿ ... ಅದಕ್ಕೆ ಕಾರಣಳಾದ ಮಾಧವಿಯನ್ನು ಕರೆದು.." ಮಾಧವೀ ನೀನು ಹಲವರು ನರಕದಲ್ಲಿ ಬೀಳುವುದನ್ನು ತಪ್ಪಿಸಿದ್ದೀ.. ನಿನ್ನಿಂದ ಯಯಾತಿ ಮಹಾರಾಜನ ಪುಣ್ಯ ಹೆಚ್ಚಿತು.. ನನ್ನ ಗುರುದಕ್ಷಿಣೆ ಸಂದಿತು. ಹರ್ಯಶ್ವ,ದಿವೋದಾಸ, ಉಶೀನರ ಮತ್ತು ಗುರು ವಿಶ್ವಾಮಿತ್ರರಿಗೆ ಸತ್ಸಂತಾನ ಒದಗಿತು. ಇನ್ನು ನಿನ್ನನ್ನು ನಿನ್ನ ತಂದೆಗೇ ಒಪ್ಪಿಸುತ್ತೇನೆ, ಎಂದು ಹೇಳಿ ಮರಳಿ ಯಯಾತಿಗೆ ಒಪ್ಪಿಸಿ ತಪಸ್ಸು ಮಾಡಲು ತೆರಳುತ್ತಾನೆ. ಇತ್ತ ಯಯಾತಿ ಮಹಾರಾಜ ಮಾಧವಿಗೆ ಸ್ವಯಂವರ ನಿಶ್ಚಯಿಸಿ ಪ್ರಯಾಗ ಕ್ಷೇತ್ರದಲ್ಲಿ ಎಲ್ಲಾ ವ್ಯವಸ್ಥೆ ಮಾಡಿಸುತ್ತಾನೆ.. ಆದರೆ ಸ್ವಯಂವರಕ್ಕೆ ಬಂದ ಯಾವ ಅರಸರನ್ನೂ ಮಾಧವಿ ವರಿಸುವುದಿಲ್ಲ. ತಾನು ಇಲ್ಲಿರುವ ವನವನ್ನೇ ಗಂಡನನ್ನಾಗಿ ಸ್ವೀಕರಿಸುತ್ತೇನೆ ಎಂದು ಹೇಳಿ ವನಾಭಿಮಾನಿ ದೇವತೆಯನ್ನೇ ವರಿಸಿ ಅಲ್ಲಿಯೇ ತಪಸ್ಸನ್ನು ಮಾಡಿ ಸ್ವರ್ಗವನ್ನು ಹೊಂದುತ್ತಾಳೆ. ಮುಂದೊಂದು ಕಾಲಕ್ಕೆ ಯಯಾತಿ ತನ್ನ ಪುಣ್ಯಕ್ಷಯದಿಂದ ಸ್ವರ್ಗದಿಂದ ಪತನ ಹೊಂದುತ್ತಿದ್ದಾಗ ... ಮಾಧವಿ ಮತ್ತು ಅವಳ ಪುತ್ರರ ಪುಣ್ಯದಿಂದ ಮತ್ತೆ ಸ್ವರ್ಗವನ್ನು ಹೊಂದುತ್ತಾನೆ.🙏
ಹೊಸ ಕಥೆಯೊಂದಿಗೆ ಮುಂದಿನ ಬರಹ🙏🙏
Tuesday, July 1, 2025
ಗಾಲವ 6ನೇ ಭಾಗ
ಹರ್ಯಶ್ವನೊಂದಿಗೆ ಅತ್ಯಂತ ಸಂತೋಷದಿಂದ ಮಹಾರಾಣಿಯಾಗಿ ಬದುಕಿದ ಮಾಧವಿ ಹುಟ್ಟಿದ ಮಗು ವಸುಮನಸನನ್ನು ಅಲ್ಲಿಯೇ ಬಿಟ್ಟು ಗಾಲವನನ್ನು ಹಿಂಬಾಲಿಸುತ್ತಾಳೆ. ಮಾಧವಿಯೊಂದಿಗೆ ಅಯೋಧ್ಯೆಯಿಂದ ಹೊರಟ ಗಾಲವ ಮುಂದೆಲ್ಲಿಗೆ ಹೋಗುವುದು ಎಂದು ಯೋಚಿಸಿದಾಗ ಕಾಶಿಯನ್ನು ಆಳುತಿದ್ದ ದಿವೋದಾಸನ ನೆನಪಾಗುತ್ತದೆ. ಆಗ ಮಾಧವಿಯನ್ನು ಕುರಿತು" ಭದ್ರೆ ಅಯೋಧ್ಯೆಯಲ್ಲಿ ನೀನು ಮಹಾರಾಣಿಯಾಗಿ ಸುಖದಿಂದ ಇದ್ದವಳು ಅವೆಲ್ಲವನ್ನು ತೊರೆದು ಬರಬೇಕಾಯಿತು ಎಂದು ದುಃಖಿಸಬೇಡ ಈಗ ನಾವು ಪುಣ್ಯ ಕ್ಷೇತ್ರವಾದ ಕಾಶಿಗೆ ಹೋಗೋಣ ಅಲ್ಲಿ ಭೀಮಸೇನನ ಪುತ್ರನಾದ (ಈತ ಪಾಂಡವರಲ್ಲಿ ಒಬ್ಬನಾದ ಭೀಮಸೇನ ಅಲ್ಲಾ.. ಈ ಕಥೆ ನಡೆದದ್ದು ಕೃತಯುಗದಲ್ಲಿ)ದಿವೋದಾಸ ಅರಸನಾಗಿ ಆಳ್ವಿಕೆಯನ್ನು ನಡೆಸುತ್ತಿದ್ದಾನೆ " . ಗಾಲವನ ಮಾತಿಗೆ ಪ್ರತಿಯಾಡದೇ ಮಾಧವಿ ಸಹಮತ ಸೂಚಿಸಿದಳು. ಮುಂದೆ ನೇರವಾಗಿ ಕಾಶಿಯ ಕಡೆ ಇಬ್ಬರೂ ಪ್ರಯಾಣಿಸುತ್ತಾರೆ. ಕಾಶಿಗೆ ಬಂದಾಗ ಅರಸನಾದ ದಿವೋದಾಸ ಸ್ವಾಗತಿಸಿ ಸತ್ಕರಿಸುತ್ತಾನೆ. ದಿವೋದಾಸನಿಗೆ ಗಾಲವ - ಮಾಧವಿ - ಹರ್ಯಶ್ವನ ಕಥೆ ಅದಾಗಲೇ ತಿಳಿದಿರುತ್ತದೆ! ಅವನೂ ತನ್ನಬಳಿ ಗಾಲವನಿಗೆ ಬೇಕಾದ ಲಕ್ಷಣಗಳುಳ್ಳ ಎರಡುನೂರು ಕುದುರೆಗಳು ಮಾತ್ರ ತನ್ನಲ್ಲಿರುವವೆಂದೂ ಅದಕ್ಕೆ ಪ್ರತಿಯಾಗಿ ಮಾಧವಿಯಿಂದ ತಾನೊಂದು ಸಂತಾನ ಪಡೆಯುವೆನೆಂದೂ ಹೇಳುತ್ತಾನೆ. ಅಯೋದ್ಯೆಯಲ್ಲಿ ನಡೆದ ಘಟನೆಯೇ ಇಲ್ಲಿ ಪುನರಾವರ್ತನೆಯಾಗುತ್ತದೆ. ಆದರೆ ಮಹಾಭಾರತ ರಚಿಸಿದ ವೇದವ್ಯಾಸರು ಹರ್ಯಶ್ವ-ಮಾಧವಿ.. ಮುಂದೆ ಉಶೀನರ-ಮಾಧವಿ.... ನಂತರದಲ್ಲಿ ವಿಶ್ವಾಮಿತ್ರ - ಮಾಧವಿ ಇವರೆಲ್ಲರ ದಾಂಪತ್ಯಕ್ಕಿಂತ ಹೆಚ್ಚಾಗಿ ದಿವೋದಾಸ - ಮಾಧವಿಯರು ಕಳೆದ ಕಾಲವನ್ನು ವರ್ಣಿಸಿದ್ದಾರೆ ಪ್ರಪಂಚದಲ್ಲಿ ಅಲ್ಲಿಯವರೆಗೆ ಆದರ್ಶ ದಾಂಪತ್ಯ ಎಂದು ಯಾರಬಗ್ಗೆ ಲೋಕ ಕಂಡುಕೊಂಡಿತ್ತೋ .. ಅಗ್ನಿದೇವ - ಸ್ವಾಹಾದೇವಿ, ಇಂದ್ರ-ಶಚೀ', ವಿಷ್ಣು - ಲಕ್ಷ್ಮೀ, ಈಶ್ವರ - ಪಾರ್ವತಿ, ಬ್ರಹ್ಮ - ಸರಸ್ವತೀ, ಬೃಹಸ್ಪತಿ-ತಾರೆ, ಕಶ್ಯಪ - ಅದಿತಿ, ಹೀಗೆ ಹಲವು ದಾಂಪತ್ಯವನ್ನು ಹೆಸರಿಸಿ ಅವರಿಗೆ ಸರಿಸಮನಾದ ದಾಂಪತ್ಯ ಜೀವನವನ್ನು ದಿವೋದಾಸ - ಮಾಧವಿಯರು ನೆಡೆಸಿದರು ಎಂದು ಹೇಳುತ್ತಾರೆ. ಅವರ ಆ ಪ್ರೇಮಮಯ ದಾಂಪತ್ಯದಿಂದ ಒಂದು ಗಂಡು ಮಗು ಜನಿಸುತ್ತದೆ. ಹುಟ್ಟಿದ ಮಗುವಿಗೆ "ಪ್ರತರ್ದನ " ಎಂದು ಹೆಸರನ್ನಿಡುತ್ತಾರೆ. ಅಲ್ಲಿಗಾಗಲೇ ಗಾಲವ ಬಂದು ಕಾಲ...ನಿಭಂದನೆಯನ್ನು ನೆನಪಿಸುತ್ತಾನೆ. ದಿವೋದಾಸನೂ ಕೊಟ್ಟ ಮಾತಿನಂತೆ ಮಾಧವಿಯನ್ನು ಗಾಲವನೊಡನೆ ಕಳುಹಿಸಿಕೊಡುತ್ತಾನೆ... ಈ ಸಂಧರ್ಭದಲ್ಲಿ ಮತ್ತು ಅಯೋಧ್ಯೆಯಲ್ಲಿಯೂ ಗಾಲವ ಅಶ್ವಗಳನ್ನು ಪಡೆದುಕೊಳ್ಳುವುದಿಲ್ಲ... ಯಾಕೆಂದರೆ ಅವನಿಗೆ ಎಂಟುನೂರು ಸಂಗ್ರಹವಾದಮೇಲೆ ಒಮ್ಮೆಯೇ ಎಲ್ಲವನ್ನೂ ಕೂಡಿಸಿಕೊಂಡು ಗುರುಗಳಿಗೆ ಸಲ್ಲಿಸುವುದೇ ಸುಲಭ ಹಾಗಾಗಿ ಕುದುರೆಗಳನ್ನು ಅಲ್ಲಿಯೇ ಬಿಟ್ಟು ಮಾಧವಿಯೊಡನೆ ಮುಂದೆ ಸಾಗುತ್ತಾನೆ. ಮಾಧವಿಯೂ ಪುನಃ ಕನ್ಯಾವಸ್ಥೆಯನ್ನು ಹೊಂದಿ ಗಾಲವನನ್ನು ಹಿಂಬಾಲಿಸುತ್ತಾಳೆ. ಸಾಗುತ್ತಾ.. ಮುಂದೆ ಅವರು ಭೋಜ ದೇಶವನ್ನು ಸೇರುತ್ತಾರೆ. ಅಲ್ಲಿ ಉಶೀನರನೆಂಬ ಅರಸ ಆಳ್ವಿಕೆಯನ್ನು ನಡೆಸುತ್ತಿದ್ದ. ರಾಜನ ಸಂದರ್ಶನ ಮಾಡಿದ ಗಾಲವ, ಮಾಧವಿಯ ಕನ್ಯಾಶುಲ್ಕವಾಗಿ ತನಗೆ ಅವಷ್ಯವಿರುವ ನಾಲ್ಕುನೂರು ಕುದುರೆಗಳನ್ನು ಕೇಳುತ್ತಾನೆ.ಆ ಸಂದರ್ಭದಲ್ಲಿ ಅರಸ ಉಶೀನರ ಆಡುವ ಮಾತು ಯಾವಕಾಲಕ್ಕೂ ಅನ್ವಯವಾಗಬೇಕಾದ್ದು "ಸ್ವಾಮೀ ನನ್ನ ಬಳಿಯೂ ಕೇವಲ ಎರಡುನೂರು ಅಶ್ವಗಳು ಮಾತ್ರ ಇದೆ... ಅವುಗಳನ್ನು ಶುಲ್ಕವಾಗಿ ನೀಡಿ ಈ ಕನ್ಯಾರತ್ನದಿಂದ ಕುಲದೀಪಕನಾದ ಒಂದು ಸಂತಾನ ಪಡೆಯುತ್ತೇನೆ... ಇವಳನ್ನು ನೋಡಿದಾಗ ದಾಂಪತ್ಯ ಜೀವನದಲ್ಲಿ ಇವಳಿಂದ ಹಲವು ಮಕ್ಕಳನ್ನು ಹೊಂದಬೇಕು ಎನಿಸುತ್ತದೆ.. ಹಾಗೆ ಅಶ್ವದ ಬದಲು ಕನ್ಯಾಶುಲ್ಕವಾಗಿ ಕೊಡಲು ನನ್ನ ಬಳಿ ಹೇರಳವಾದ ಸಂಪತ್ತೂ ಇದೆ. ಆದರೆ... ಆ ಸಂಪತ್ತು ನನ್ನ ಭೋಗಲಾಲಸೆಗಾಗಿ ವಿನಿಯೋಗಿಸತಕ್ಕದ್ದಲ್ಲ ಅದು ಪ್ರಜಾಹಿತಕ್ಕಾಗಿ ವಿನಿಯೋಗಿಸಬೇಕಿದ್ದು.. ಆದ್ದರಿಂದ ನನ್ನಲ್ಲಿರುವ ಎರಡುನೂರು ಕುದುರೆಗಳ ಬದಲಾಗಿ ಒಂದು ಸಂತಾನವನ್ನು ಮಾತ್ರ ಪಡೆಯುತ್ತೇನೆ" ಹೀಗೆ ಹೇಳಿ ಮಾಧವಿಯೊಂದಿಗೆ ಸಂತೋಷದಿಂದ ಕಾಲ ಕಳೆದು ಒಂದು ಪುತ್ರ ಸಂತಾನವನ್ನು ಪಡೆಯುತ್ತಾನೆ. ಹುಟ್ಟಿದ ಮಗುವಿಗೆ "ಶಿಬಿ" ಎಂದು ನಾಮಕರಣವಾಗುತ್ತದೆ..🙏
(ಉಶೀನರ ಮತ್ತು ಶಿಬಿಯ ಬಗ್ಗೆಯೇ ಮುಂದೊಂದು ಬಾರಿ ಬರೆಯಬೇಕು ಆದ್ದರಿಂದ ಇಲ್ಲಿ ಸಂಕ್ಷಿಪ್ತವಾಗಿ ಬರೆದಿದ್ದೇನೆ)
ಗಾಲವ ಗುರುದಕ್ಷಿಣೆಯ ಕೊನೆಯ ಕಂತು ಮುಂದಿನ ಭಾಗ 🙏🙏
Subscribe to:
Comments (Atom)