Thursday, July 3, 2025

ಗಾಲವ ಕೊನೆಯ ಭಾಗ

ಉಶೀನರನ ಜೊತೆಗಿನ ದಾಂಪತ್ಯವನ್ನೂ ತೊರೆಯಬೇಕಾದ ಕಾಲ ಮಾಧವಿಗೆ ಸನ್ನಿಹಿತವಾಯಿತು. ಪುತ್ರನಾದ ಶಿಬಿ ಹುಟ್ಟಿದ ಕಾರಣದಿಂದ ಮೊದಲೇ ಆಗಿದ್ದ ಒಪ್ಪಂದದ ಅವಧಿ ಮುಗಿಯಿತು... ಅದರ ಸೂಚನೆಯೋ ಎಂಬಂತೆ ಗಾಲವರು ಬಂದಾಯ್ತು. ಮಗುವಾದ ಶಿಬಿಯನ್ನು ಉಶೀನರನಿಗೆ ಒಪ್ಪಿಸಿ', ಮಾಧವಿ ಎಂಬ ಮೂರು ಮಕ್ಕಳ ತಾಯಿ ಮತ್ತೆ ಕನ್ಯಾವಸ್ಥೆಯನ್ನು ಹೊಂದಿ ಗಾಲವನನ್ನು ಹಿಂಬಾಲಿಸುತ್ತಾಳೆ. ಬೋಜ ದೇಶದಿಂದ ಅವರು ಹೊರಡುವ ಸಮಯದಲ್ಲಿ ಮತ್ತೆ ಗರುಡ ಕಾಣಿಸಿಕೊಳ್ಳುತ್ತಾನೆ. " ಅಯ್ಯಾ ಗಾಲವ... ನಿನ್ನ ಗುರುಗಳಿಗೆ ಒಪ್ಪಿಸಬೇಕಾದ ಅಶ್ವಗಳ ಸಂಗ್ರಹವಾಯಿತೇ" ಎಂದು ಕೇಳುತ್ತಾನೆ. ಆಗ ಗಾಲವ ''ಸುಪರ್ಣ.. ಮಹರ್ಷಿ ವಿಶ್ವಾಮಿತ್ರರಿಗೆ ಒಪ್ಪಿಸಬೇಕಾದ ಅಶ್ವಗಳಲ್ಲಿ ನಾಲ್ಕನೇ ಮೂರು ಅಂಶದ ಸಂಗ್ರಹವಾಗಿದೆ. ಇನ್ನುಳಿದಿರುವುದು ನಾಲ್ಕನೇ ಒಂದು ಭಾಗ ಮಾತ್ರ .. ಅದನ್ನು ಪಡೆಯುವ ಯೋಚನೆಯಲ್ಲಿ ಸಾಗುತ್ತಿದ್ದೇನೆ" ಎಂದು ಹೇಳುತ್ತಾನೆ. ಗಾಲವನ ಮಾತನ್ನು ಕೇಳಿದ ಗರುಡ ನಸುನಗುತ್ತ.. " ಇನ್ನು ನೀನು ಉಳಿದ ಎರಡು ನೂರು ಅಶ್ವಗಳನ್ನು ಹುಡುಕುವ ಪ್ರಯತ್ನ ಮಾಡಬೇಡ ಅವು ನಿನಗೆ ದೊರೆಯುವುದಿಲ್ಲ " ಎಂದು ಹೇಳುತ್ತಾನೆ. ಆಶ್ಚರ್ಯಗೊಂಡ ಗಾಲವ ಯಾಕೆ ಹೀಗೆ ಹೇಳಿದೆ ಎಂದು ಕೇಳಲು ಗರುಡ ಒಂದು ಕಿವಿ ಕಪ್ಪಾದ ಆ ಕುದುರೆಗಳ ಹಿನ್ನೆಲೆ ಹೇಳುತ್ತಾನೆ. (ಇಲ್ಲಿ ಈ ಕಥೆಯನ್ನು ಹೇಳುವ ಗರುಡ ಎಲ್ಲಾ ವಿಷಯ ತಿಳಿದರೂ ಮೊದಲೇ ಹೇಳಲಿಲ್ಲ) ಗಾಲವನ ಸಂದೇಹ ನಿವಾರಿಸಲು ಗರುಡ ಹಿಂದಿನ ಒಂದು ಕಥೆಯನ್ನು ಹೇಳುತ್ತಾನೆ. " ಈ ಹಿಂದೆ ಕನ್ಯಾಕುಬ್ಜ ದೇಶವನ್ನು ಗಾಧಿ ಮಹಾರಾಜ ಆಳುತ್ತಿದ್ದ ಅವನಿಗೆ "ಸತ್ಯವತೀ" ಎಂಬ ಸುಂದರಳಾದ ಪುತ್ರಿಯಿದ್ಧಳು, ಪ್ರಾಯಕ್ಕೆ ಬಂದ ಅವಳನ್ನು ಮದುವೆಯಾಗಲು ತಪಸ್ವಿಯಾದ ಋಚೀಕ ಬಯಸುತ್ತಾನೆ. ಋಚೀಕನ ಬಯಕೆಗೆ ಸಮ್ಮತಿಸಿದ ಗಾಧಿ ಒಂದು ಕಿವಿ ಕಪ್ಪಾದ ಶ್ವೇತ ವರ್ಣದ ದೇಹವನ್ನು ಹೊಂದಿದ ಒಂದು ಸಾವಿರ ಕುದುರೆಗಳನ್ನು ಕನ್ಯಾಶುಲ್ಕವಾಗಿ ಕೊಡಲು ಕೇಳುತ್ತಾನೆ. ಇದಕ್ಕೊಪ್ಪಿದ ಋಚೀಕ ಭೂಮಂಡಲದಲ್ಲಿ ಎಲ್ಲಿಯೂ ಅಂತಹ ಕುದುರೆಗಳು ಇಲ್ಲವೆಂದು ತಿಳಿದು ವರುಣಲೋಕಕ್ಕೆ ಹೋಗಿ ಅಲ್ಲಿರುವ ಅಶ್ವತೀರ್ಥದಲ್ಲಿದ್ದ, ಗಾಧಿ ಹೇಳಿದ ಲಕ್ಷಣಗಳಿಂದ ಕೂಡಿದ ಒಂದು ಸಾವಿರ ಕುದುರೆಗಳನ್ನು ತಂದೊಪ್ಪಿಸಿ ಸತ್ಯವತಿಯನ್ನು ವಿವಾಹ ಮಾಡಿಕೊಳ್ಳುತ್ತಾನೆ. ಕೆಲವು ಕಾಲದ ನಂತರ ಗಾಧಿ ಮಹಾರಾಜ " ಪುಂಡರೀಕ" ಎನ್ನುವ ಯಜ್ಞವನ್ನು ಮಾಡಿ ಆ ಒಂದು ಸಾವಿರ ಕುದುರೆಗಳನ್ನು ದಕ್ಷಿಣಾರೂಪವಾಗಿ ಬ್ರಾಹ್ಮಣರಿಗೆ ಕೊಡುತ್ತಾನೆ. ಹಾಗೆ ಗಾಧಿ ಮಹಾರಾಜನಿಂದ ಬ್ರಾಹ್ಮಣರು ಪಡೆದ ಒಂದು ಸಾವಿರ ಕುದುರೆಗಳಲ್ಲಿ ಆರುನೂರು ಕುದುರೆಗಳನ್ನು ಈ ಹಿಂದೆ ನಿನಗೆ ಸಿಕ್ಕ ಮೂವರು ಅರಸರೂ ತಲಾ ಎರಡುನೂರರಂತೆ ಕೊಂಡುಕೊಳ್ಳುತ್ತಾರೆ. ಉಳಿದ ನಾಲ್ಕುನೂರು ಕುದುರೆಗಳೊಂದಿಗೆ ಅವರು ಮುಂದೆ ಸಾಗುತ್ತಿದ್ದಾಗ "ವಿತಸ್ತಾ" ಎಂಬ ನದಿಯ ಪ್ರವಾಹದಲ್ಲಿ ಅವು ಕೊಚ್ಚಿಕೊಂಡು ಹೋಗಿ ಬಿಡುತ್ತವೆ. ಆದ್ದರಿಂದ ಪ್ರಸ್ತುತ ಭೂಮಂಡಲದಲ್ಲಿ ಇರುವುದೇ ಆರುನೂರು!" ಗರುಡನ ಮಾತನ್ನು ಕೇಳಿದ ಗಾಲವನಿಗೆ ಒಂದು ಕ್ಷಣ ಆತಂಕವಾದರೂ ಮರುಕ್ಷಣದಲ್ಲಿ ಒಂದು ದಾರಿ ಗೋಚರಿಸುತ್ತದೆ. ಹಾಗಾಗಿ ಆರುನೂರು ಕುದುರೆಗಳನ್ನೂ ಜೊತೆಗೆ ಮಾಧವಿಯನ್ನು ಕೂಡಿಕೊಂಡು ಗುರುಗಳಾದ ವಿಶ್ವಾಮಿತ್ರರ ಸಮ್ಮುಖಕ್ಕೆ ಬಂದು ನಡೆದ ಘಟನೆಗಳನ್ನೆಲ್ಲ ವಿವರಿಸಿ ಕೈಮುಗಿದು ನಿಲ್ಲುತ್ತಾನೆ... ವಿಶ್ವಾಮಿತ್ರರೂ ಎರಡುನೂರು ಕುದುರೆಗಳ ಬದಲಾಗಿ ಮಾಧವಿಯೊಂದಿಗೆ ಒಂದು ಸಂತಾನ ಪಡೆಯುವ ನಿರ್ಧಾರಕ್ಕೆ ಬರುತ್ತಾರೆ. ಕೆಲವು ಕಾಲಾಂತರದಲ್ಲಿ ವಿಶ್ವಾಮಿತ್ರ - ಮಾಧವಿಯರ ಸಂಯೋಗದಲ್ಲಿ ಒಂದು ಗಂಡು ಸಂತಾನವಾಗುತ್ತದೆ. ಹುಟ್ಟಿದ ಮಗುವಿಗೆ "ಅಷ್ಟಕ" ಎಂದು ನಾಮಕರಣ ಮಾಡಿಸಿ ಗಾಲವನನ್ನು ಕರೆದು " ನೀನು ಕೊಡಬೇಕಾದ ಗುರುದಕ್ಷಿಣೆ ಸಂದಿತು. ಈ ಮಾಧವಿಯನ್ನು ನೀನು ಯಯಾತಿಗೆ ಒಪ್ಪಿಸಬಹುದು " ಎಂದು ಹೇಳಿ ಮೊದಲೇ ನಿರ್ಣಯಿಸಿದಂತೆ ತಪಸ್ಸಿಗೆ ತೆರಳುತ್ತಾರೆ. ಗಾಲವನಿಗೆ ಗುರುದಕ್ಷಿಣೆಯನ್ನು ಸಲ್ಲಿಸಿದ ಸಂತೃಪ್ತಿ ... ಅದಕ್ಕೆ ಕಾರಣಳಾದ ಮಾಧವಿಯನ್ನು ಕರೆದು.." ಮಾಧವೀ ನೀನು ಹಲವರು ನರಕದಲ್ಲಿ ಬೀಳುವುದನ್ನು ತಪ್ಪಿಸಿದ್ದೀ.. ನಿನ್ನಿಂದ ಯಯಾತಿ ಮಹಾರಾಜನ ಪುಣ್ಯ ಹೆಚ್ಚಿತು.. ನನ್ನ ಗುರುದಕ್ಷಿಣೆ ಸಂದಿತು. ಹರ್ಯಶ್ವ,ದಿವೋದಾಸ, ಉಶೀನರ ಮತ್ತು ಗುರು ವಿಶ್ವಾಮಿತ್ರರಿಗೆ ಸತ್ಸಂತಾನ ಒದಗಿತು. ಇನ್ನು ನಿನ್ನನ್ನು ನಿನ್ನ ತಂದೆಗೇ ಒಪ್ಪಿಸುತ್ತೇನೆ, ಎಂದು ಹೇಳಿ ಮರಳಿ ಯಯಾತಿಗೆ ಒಪ್ಪಿಸಿ ತಪಸ್ಸು ಮಾಡಲು ತೆರಳುತ್ತಾನೆ. ಇತ್ತ ಯಯಾತಿ ಮಹಾರಾಜ ಮಾಧವಿಗೆ ಸ್ವಯಂವರ ನಿಶ್ಚಯಿಸಿ ಪ್ರಯಾಗ ಕ್ಷೇತ್ರದಲ್ಲಿ ಎಲ್ಲಾ ವ್ಯವಸ್ಥೆ ಮಾಡಿಸುತ್ತಾನೆ.. ಆದರೆ ಸ್ವಯಂವರಕ್ಕೆ ಬಂದ ಯಾವ ಅರಸರನ್ನೂ ಮಾಧವಿ ವರಿಸುವುದಿಲ್ಲ. ತಾನು ಇಲ್ಲಿರುವ ವನವನ್ನೇ ಗಂಡನನ್ನಾಗಿ ಸ್ವೀಕರಿಸುತ್ತೇನೆ ಎಂದು ಹೇಳಿ ವನಾಭಿಮಾನಿ ದೇವತೆಯನ್ನೇ ವರಿಸಿ ಅಲ್ಲಿಯೇ ತಪಸ್ಸನ್ನು ಮಾಡಿ ಸ್ವರ್ಗವನ್ನು ಹೊಂದುತ್ತಾಳೆ. ಮುಂದೊಂದು ಕಾಲಕ್ಕೆ ಯಯಾತಿ ತನ್ನ ಪುಣ್ಯಕ್ಷಯದಿಂದ ಸ್ವರ್ಗದಿಂದ ಪತನ ಹೊಂದುತ್ತಿದ್ದಾಗ ... ಮಾಧವಿ ಮತ್ತು ಅವಳ ಪುತ್ರರ ಪುಣ್ಯದಿಂದ ಮತ್ತೆ ಸ್ವರ್ಗವನ್ನು ಹೊಂದುತ್ತಾನೆ.🙏 ಹೊಸ ಕಥೆಯೊಂದಿಗೆ ಮುಂದಿನ ಬರಹ🙏🙏

No comments:

Post a Comment