Saturday, July 5, 2025

ಸಾವಿತ್ರಿ

ಪುರಾಣಗಳಲ್ಲಿ ಹೆಚ್ಚು ಕೇಳಿ ಬರುವುದು "ಸಾವಿತ್ರಿ" ಎಂಬ ಹೆಸರು.. ಅದು ಆರಾಧಿಸುವ ಸಾವಿತ್ರೀ ದೇವಿಯ ಹೆಸರೊಂದೇ ಅಲ್ಲ ಯಾರು ಸಾವಿತ್ರೀ ದೇವಿಯ ಉಪಾಸನೆಯಿಂದ ಜನಿಸಿ ಪತಿವ್ರತಾ ಧರ್ಮವನ್ನು ಪಾಲಿಸಿ ಆ ಮೂಲಕ ತನ್ನ ಪತಿಯನ್ನು ಬದುಕಿಸಿ ಕೊಂಡಳೋ ಅವಳೂ ಸಾವಿತ್ರಿಯೇ... ಸಾವಿತ್ರಿಯ ಕಥೆ ಮುಖ್ಯವಾಗಿ... ವಿಸ್ತಾರವಾಗಿ ಎರಡು ಕಡೆಯಲ್ಲಿ ಹೇಳಲ್ಪಟ್ಟಿದೆ ಮೊದಲನೆಯದು ಮಹಾಭಾರತದ ವನಪರ್ವದ ಕೊನೆಯ ಭಾಗ... ಪಾಂಡವರು ವನವಾಸದ ಕೊನೆಯ ದಿನಗಳಲ್ಲಿ ಮಾರ್ಕಾಂಡೇಯ ಮುನಿಗಳ ಸಂದರ್ಷನ ಮಾಡಿದ ಸಂದರ್ಭದಲ್ಲಿ ಧರ್ಮರಾಯನು ಅವರಿಂದ ಶ್ರೀರಾಮಚಂದ್ರನ ಕಥೆಯನ್ನು ಕೇಳಿ, ತನ್ನ ಸ್ಥಿತಿಯ ಬಗ್ಗೆ ಸಮಾಧಾನ ಹೊಂದಿದ ಮೇಲೂ ದ್ರೌಪದಿಯ ಮುಖ ನೋಡಿದಾಗ ಮತ್ತೆ ದುಃಖದಿಂದ... ನನಗಂತೂ ಕಷ್ಠ ಬಂತು ಆದರೆ ಯಾವ ತಪ್ಪನ್ನೂ ಮಾಡದ ಈಕೆ ವನದಲ್ಲಿ ಅಲೆಯುವ ಸ್ಥಿತಿ ಬಂತಲ್ಲಾ ಎಂದು ಹೇಳಿದಾಗ ಮೃಕಂಡು ಪುತ್ರರು ಸಾವಿತ್ರಿಯ ಕಥೆಯನ್ನು ಹೇಳುತ್ತಾರೆ. ಇನ್ನು ದೇವೀ ಭಾಗವತದಲ್ಲಿ ತಪಸ್ವಿಗಳಾದ ಖುಷಿಗಳ ಸಮ್ಮುಖದಲ್ಲಿ ನಾರಾಯಣ ಮುನಿಯು ನಾರದರಿಗೆ ಸಾವಿತ್ರಿಯ ಕಥೆಯನ್ನು ಹೇಳುತ್ತಾರೆ. ಮಾದ್ರ ದೇಶವನ್ನಾಳುತಿದ್ದ ಅರಸ " ಅಶ್ವಪತಿ " ಅವನಿಗೆ ಅನುರೂಪಳಾದ ಹೆಂಡತಿ ಮಾಳವದ ರಾಜಕುಮಾರಿ "ಮಾಲತಿ ". ಪರಮ ಧಾರ್ಮಿಕನಾಗಿ ಪ್ರಜಾ ರಂಜಕನಾಗಿ ರಾಜ್ಯಭಾರ ಮಾಡುತ್ತಿದ್ದ ಅಶ್ವಪತಿ ಮಹಾರಾಜ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಸಂತಾನ ಭಾಗ್ಯವಾಗಲಿಲ್ಲ. ವಶಿಷ್ಠ ನಿರ್ದೇಶನದಂತೆ ಮಹಾರಾಣಿ ಮಾಲತಿ ಸಾವಿತ್ರೀ ದೇವಿಯ ಆರಾಧನೆ ಮಾಡಿದರೂ ಫಲ ದೊರೆಯದೇ ದುಃಖತಪ್ತಳಾಗಿದ್ದಳು. ಹೆಂಡತಿಯ ದುಃಖ ನೋಡಿ ಮರುಗಿದ ಅಶ್ವಪತಿ ಮಹಾರಾಜ ತಾನೇ ಸಾವಿತ್ರಿ ದೇವಿಯನ್ನು ಆರಾಧಿಸಲು ಪುಷ್ಕರ ಕ್ಷೇತ್ರಕ್ಕೆ ತೆರಳುತ್ತಾನೆ. ( ಈ ಘಟನೆ ದೇವೀ ಭಾಗವತದಲ್ಲಿ ಇರುವುದಕ್ಕೂ ಮಹಾಭಾರತದ ಉಲ್ಲೇಖದಲ್ಲಿಯಾ ಸ್ವಲ್ಪ ವ್ಯತ್ಯಾಸ ಇದೆ.. ಮಹಾಭಾರತದಲ್ಲಿ ಹದಿನೆಂಟು ವರ್ಷಗಳ ಸಾವಿತ್ರಿ ಆರಾಧನೆಯಿಂದ ದೇವಿ ವರವನ್ನು ಕೊಟ್ಟಳೆಂದೂ .. ದೇವೀ ಭಾಗವತದಲ್ಲಿ ನೂರು ವರ್ಷಗಳ ತಪಸ್ಸು ಜೊತೆಗೆ ಹತ್ತು ಲಕ್ಷ ಗಾಯಿತ್ರೀ ಜಪದಿಂದ ಪ್ರಸನ್ನ ಳಾದ ಸಾವಿತ್ರಿದೇವಿ ವರನೀಡಿದಳೆಂದೂ ಇದೆ... ವರದಲ್ಲಿಯೂ ದೇವೀ ಭಾಗವತದಲ್ಲಿ ಸಾವಿತ್ರೀ ದೇವಿ ನಿನ್ನ ಹೆಂಡತಿ ಪುತ್ರಿಯಾಗಬೇಕೆಂದು ಬಯಕೆ ಹೊಂದಿದ್ದಾಳೆ ... ನಿನಗೆ ಪುತ್ರನ ಹಂಬಲ ಇದೆ ಹಾಗಾಗಿ ಮೊದಲು ಪುತ್ರಿ ಜನಿಸುತ್ತಾಳೆ ನಂತರ ಪುತ್ರರು ಜನಿಸುತ್ತಾರೆ ಎಂದು ಹೇಳಿದರೆ.. ಮಹಾಭಾರತದ ಪ್ರಕಾರ ಅಶ್ವಪತಿಗೆ ಪುತ್ರಾಪೇಕ್ಷೆ ಇದ್ದರೂ ದೇವಿಯೇ ವರ ನೀಡುವುದು ಬ್ರಹ್ಮದೇವರ ನಿರ್ಣಯ ಹಾಗಾಗಿ.."ಉತ್ತರಂ ಚ ನ ಮೇ ಕಿಂಚಿದ್ವ್ಯಾಹರ್ತವ್ಯಂ ಕಥಂಚನ ||" ನಿನ್ನ ಬಯಕೆ ಏನಿದ್ದರೂ ಕೊಟ್ಟ ವರವನ್ನು ಮರುಪ್ರಶ್ನೆ ಮಾಡದೇ ಸ್ವೀಕರಿಸಬೇಕು ಎಂದು ಹೇಳಿ ಮಗಳೊಬ್ಬಳೇ ಜನಿಸುವುದು ಎಂದು ಹೇಳುತ್ತಾಳೆ.) ದೇವಿ ಸಾವಿತ್ರಿಯ ಆರಾಧನೆಯಿಂದ ಮಾಲತಿ ಗರ್ಭವತಿಯಾಗಿ ಒಬ್ಬಳು ಪುತ್ರಿಯನ್ನು ಪಡೆಯುತ್ತಾಳೆ. ಲಕ್ಷ ಲಕ್ಷ ಗಾಯಿತ್ರೀ ಮಂತ್ರದ ಪುನಶ್ಚರಣೆಯಿಂದ ಮಗು ಜನಿಸಿದ ಕಾರಣದಿಂದ ಅಶ್ವಪತಿ - ಮಾಲತಿಯರ ಸಂತೋಷಕ್ಕೆ ಪಾರವೇ ಇಲ್ಲ .. ಸಾವಿತ್ರಿ ದೇವಿಯ ವರದಿಂದ ಹುಟ್ಟಿದ ಮಗುವಾದ ಕಾರಣ ಸಾವಿತ್ರಿ ಎಂದೇ ನಾಮಕರಣ ಮಾಡುತ್ತಾರೆ. ಶುಕ್ಲ ಪಕ್ಷದ ಚಂದ್ರನಂತೆ ಸಾವಿತ್ರಿ ಬೆಳೆದು ಯೌವನಕ್ಕೆ ಕಾಲಿಡುತ್ತಾಳೆ. ವಿದ್ಯಾವತಿಯೂ, ತುಂಬಾ ಪ್ರಾಜ್ಞಳೂ ಆಗಿದ್ದ ಸಾವಿತ್ರಿಯನ್ನು ನೋಡಿದಾಗ ಹಿರಿಯರೂ ಕೂಡ ಗೌರವ ತೋರುತ್ತಿದ್ದರು. ಸಾವಿತ್ರೀ ದೇವಿಯೇ ಅಶ್ವಪತಿಯ ಮಗಳಾಗಿ ಅವತರಿಸಿದ್ದಾಳೆ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದರು. ಹೀಗಿರುವಾಗ ಪ್ರಾಯಪ್ರಬುದ್ಧಳಾದ ಸಾವಿತ್ರಿಯ ವಿವಾಹ ಮಾಡಬೇಕೆಂದು ಅಶ್ವಪತಿ ನಿರ್ಧರಿಸಿ ಅರಸುಕುಮಾರರಿಗೆ ಆಮಂತ್ರಣ ಕಳುಹಿಸುತ್ತಾನೆ. ಮಹಾರಾಜನ ಅಮಂತ್ರಣ ಸ್ವೀಕರಿಸಿ ಬಂದ ಅರಸುಕುಮಾರರು ಯಾರೂ ಸಾವಿತ್ರಿಯನ್ನು ಮದುವೆಯಾಗಲು ಸಿದ್ಧರಾಗಲಿಲ್ಲ . ಯಾಕೆಂದರೆ ಆಕೆಯನ್ನು ನೋಡಿದಾಕ್ಷಣ ಅವರಿಗೆ ಭಕ್ತಿ ಮೂಡುತಿತ್ತೇ ಹೊರತು ಪ್ರೀತಿಯಲ್ಲ.. ಸಾಕ್ಷಾತ್ ಸರಸ್ವತೀ -ಲಕ್ಷ್ಮೀದೇವಿಯರೇ ಒಂದೇ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವರೋ ಎಂದು ಭಾಸವಾಗುತ್ತಿತ್ತು. ಹಾಗಾಗಿ ಯಾರೊಬ್ಬರೂ ಅವಳನ್ನು ಬಯಸದೆ ಹಾಗೇ ನಮಸ್ಕರಿಸಿ ಹೋಗುತ್ತಿದ್ದರು. ಹೀಗೆಯೇ ಕಾಲ ಕಳೆಯತೊಡಗಿತು. ಅಶ್ವಪತಿ ಮಹಾರಾಜ ಸೂಕ್ತ ಸಮಯದಲ್ಲಿ ಕನ್ಯಾದಾನ ಮಾಡಲಾಗಲಿಲ್ಲ ಎಂಬ ಚಿಂತೆಯಲ್ಲಿ ಬೇಯತೊಡಗಿದ. ಒಂದು ಶುಭ ದಿನದಂದು ಸಾವಿತ್ರಿ ಮಿಂದು ಶುಚಿಯಾಗಿ ದೇವಿಯನ್ನು ಭಕ್ತಿಯಿಂದ ಅರ್ಚಿಸಿ ದೇವಿಪ್ರಸಾದ ರೂಪವಾದ ಪುಷ್ಪವನ್ನು ಮುಡಿದು ತಂದೆಯ ಬಳಿಬಂದು ನಮಸ್ಕರಿಸಿದಳು. ತಾನು ಒಂದು ಧೃಡನಿರ್ಧಾರಕ್ಕೆ ಬಂದವನಾದ ಅಶ್ವಪತಿ ಮಹಾರಾಜ ಮಗಳನ್ನು ಕರೆದು " ಮಗಳೇ ಸರಿಯಾದ ಕಾಲದಲ್ಲಿ ನಿನ್ನ ವಿವಾಹವನ್ನು ನೆರವೇರಿಸಲಾಗದ ನಾನು ಚಿಂತಿತನಾಗಿದ್ದೇನೆ ರೂಢಿಯಲ್ಲಿ ಒಂದು ಸೂಕ್ತಿಯಿದೆ.. ಅಪ್ರದಾತಾ ಪಿತಾ ವಾಚ್ಯೋ ವಾಚ್ಯಶ್ಚಾನುಪಯನ್ಫತಿ:| ಮೃತೇ ಭರ್ತರಿ ಪುತ್ರಶ್ಚ ವಾಚ್ಯೋ ಮಾತುರರಕ್ಷಿತಾ|| ಪ್ರೌಡಾವಸ್ಥೆಗೆ ಬಂದ ಮಗಳನ್ನು ಮದುವೆ ಮಾಡದ ತಂದೆ, ಋತುಕಾಲದಲ್ಲಿ ಪತ್ನಿ ಸಮಾಗಮ ಮಾಡದ ಪತಿ, ವಿಧವೆಯಾದ ತಾಯಿಯನ್ನು ಸಂರಕ್ಷಿಸದ ಪುತ್ರ ಇವರು ನಿಂದೆಗೆ ಗುರಿಯಾಗುತ್ತಾರೆ. ಆದ್ದರಿದ ಮಗಳೇ ನೀನೇ ವರಾನ್ವೇಷಣೆಗಾಗಿ ತೆರಳು .... ನಿನಗೆ ಅನುರೂಪನಾದ ವರನನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನಿನಗೆ ಕೊಟ್ಟಿದ್ದೇನೆ" ಎಂದು ಹೇಳಿದ. ತಂದೆಯ ಮಾತನ್ನು ಸಾವಿತ್ರಿಯೂ ಅಂಗೀಕರಿಸುತ್ತಾಳೆ. ತಂದೆ ತಾಯಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಅರಮನೆಯಿಂದ ಹೊರಡುತ್ತಾಳೆ, ಅಶ್ವಪತಿಯ ನಿರ್ದೇಶನದಂತೆ ಜ್ಞಾನವೃದ್ಧರಾದ ಮಂತ್ರಿಗಳೂ.. ಮಿತ ಪರಿವಾರವೂ ಅವಳನ್ನು ಹಿಂಬಾಲಿಸುತ್ತದೆ.🙏🙏 ಉಳಿದದ್ದು ಮುಂದಿನ ಬರಹದಲ್ಲಿ🙏🙏

No comments:

Post a Comment