Thursday, June 26, 2025

ಗಾಲವ.. ಮುಂದಿನ ಭಾಗ

ಗಾಲವ ಮುಂದುವರಿದು... ಗುರುಗಳಾದ ವಿಶ್ವಾಮಿತ್ರರ ಮಾತುಗಳನ್ನು ಕೇಳಿದ ಗಾಲವನಿಗೆ ನಿಂತ ನೆಲವೇ ಬಿರಿದ ಅನುಭವವಾಯಿತು. ಸಾಮಾನ್ಯವಾದ ಒಂದು ಕುದುರೆಯನ್ನು ತಂದುಕೊಡಲು ಕಷ್ಟವಿದ್ದ ಕಡು ಬಡವನಾದ ಗಾಲವನಿಗೆ ವಿಶಿಷ್ಟ ಲಕ್ಷಣ ಹೊಂದಿದ ದುರ್ಲಭವಾದ ಎಂಟುನೂರು ಕುದುರೆಗಳನ್ನು ತರುವುದು ಅಸಾಧ್ಯವಾದ ಮಾತೇ ಸರಿ. ಗಾಲವ ತನ್ನ ಬಡತನವನ್ನು ಬಹಳವಾಗಿ ಹಳಿದುಕೊಂಡ... ಈ ಪ್ರಪಂಚದಲ್ಲಿ ಬಡವನಾಗಿ ಹುಟ್ಟಕೂಡದು... ಶ್ರೀಮಂತನಾದರೆ ಬಯಸಿದ್ದನ್ನು ಪಡೆಯಬಹುದು..ಹೀಗೆ ಯೋಚಿಸುತ್ತಾ ತನ್ನ ನಿರ್ಧಾರದ ಬಗ್ಗೆಯೂ ಬೇಸರ ಮೂಡಿತು. ಗುರುಗಳು ಬೇಡವೆಂದರೂ ನಾನೇ ಹಠಮಾರಿಯಂತೆ ಮತ್ತೆ ಮತ್ತೆ ಒತ್ತಾಯಿಸಿ ಗುರುಗಳ ಆಗ್ರಹಕ್ಕೆ ಕಾರಣನಾದೆ... ನಾನು ಪುನಃ ಪುನಃ ಗುರುಗಳನ್ನು ಕೇಳಬಾರದಿತ್ತು.... ಏನೇನೋ ಯೋಚಿಸುತ್ತಾ ಗುರುಗಳಿಗೆ ವಂದಿಸಿ ಆಶ್ರಮದಿಂದ ಹೊರಬಂದ. ಎಲ್ಲಿ ಹೋಗುವುದು ..ಅಶ್ವಗಳನ್ನು ಹೇಗೆ ಸಂಪಾದಿಸುವುದು.. ಯಾವ ದಾರಿಯೂ ಅವನಿಗೆ ಗೋಚರಿಸಲಿಲ್ಲ. ಚಿಂತೆಯಲ್ಲಿಯೇ ಅವನು ಅನ್ನಾಹಾರವನ್ನು ತೊರೆದ.. ತನ್ನಷ್ಟಕ್ಕೆ ತಾನೇ ಅಳುತ್ತಿದ್ದ . ಆಹಾರ ಸೇವಿಸದೇ ಅವನ ದೇಹದಲ್ಲಿ ಮೂಳೆ ಚರ್ಮಗಳು ಮಾತ್ರ ಉಳಿದಿತ್ತು. ಇನ್ನು ಬೇರೆ ದಾರಿಯೇ ಇಲ್ಲ ಹೀಗೆ ಊಟ ಮಾಡದೇ ಆತ್ಮಹತ್ಯೆ ಮಾಡಿಕೊಳ್ಳುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದ. ಹಾಗೆ ದಿನಗಳನ್ನು ಕಳೆಯುತ್ತಿರುವಾಗ ಒಂದು ಯೋಚನೆ ಬಂತು. ದೇವತೆಗಳನ್ನು ಆರಾಧಿಸಿ ಆ ಮೂಲಕ ಒಂದು ದಾರಿಯನ್ನು ಕಂಡುಕೊಂಡರೆ ಹೇಗೆ.... ಅದೇ ಸರಿ ಎಂದು ತೀರ್ಮಾನಕ್ಕೆ ಬಂದ . ಯಾವ ದೇವತೆಯನ್ನು ಪ್ರಾರ್ಥಿಸಬೇಕು ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿದಾಗ ದೇವತೆಗಳೂ ಕೂಡ ತಮ್ಮ ಇಷ್ಟಾರ್ಥ ಸಿಧ್ಧಿಗಾಗಿ ಯಾರನ್ನು ಆರಾಧಿಸುವರೋ ಆ ಮಹಾವಿಷ್ಣುವೇ ತನ್ನ ಸಂಕಲ್ಪವನ್ನೂ ಈಡೇರಿಸುತ್ತಾನೆ ಎಂದು ತೀರ್ಮಾನಿಸಿ ಪ್ರಾರ್ಥಿಸಲು ತೊಡಗಿದ. ವಿಷ್ಣು ಪ್ರಾರ್ಥನೆಗೆ ತೊಡಗಿದಾಕ್ಷಣ ಮಹಾವಿಷ್ಣುವಿನ ವಾಹನವಾದ ಗರುಡ ಕಾಣಿಸಿಕೊಂಡ. '' ನನ್ನ ಮಿತ್ರನಾದ ನೀನು ಆಪತ್ತಿನಲ್ಲಿರುವಾಗ ನಿನಗೆ ಸಹಾಯ ಮಾಡುವ ಉದ್ದೇಶದಿಂದ ಬಂದಿದ್ದೇನೆ. ನೀನು ಬಡವನಾಗಿರುವೆ ಎಂಬ ಚಿಂತೆಯನ್ನು ಬಿಟ್ಟು ಬಿಡು.. ಶ್ರೀ ಹರಿಯನ್ನು ಹೊತ್ತು ತಿರುಗುವ ನನ್ನ ಬಳಿ ಬೇಕಾದಷ್ಟು ಸಂಪತ್ತಿದೆ. ನಿನಗೆ ಯಾವ ರೀತಿಯ ಸಹಾಯ ಮಾಡಲಿ ಹೇಳು" ಎಂದು ಕೇಳುತ್ತಾನೆ. (ಇಲ್ಲಿ ಗರುಡನು ಗಾಲವ ನನ್ನು ನೀನು ನನ್ನ ಮಿತ್ರನೆಂದು ಕರೆಯುತ್ತಾನೆ. ಆದರೆ ಅಂತಹ ಮೈತ್ರಿ ಯಾವಾಗ ಏರ್ಪಟ್ಟಿತು ಎಂಬ ಬಗ್ಗೆ ನನಗೆ ಎಲ್ಲಿಯೂ ಸಿಗಲಿಲ್ಲ ಗೊತ್ತಿದ್ದವರು ತಿಳಿಸಿ) "ಗಾಲವ ನಿನಗಾಗಿ ನಾನು ಸಂಪೂರ್ಣ ಭೂಮಂಡಲವನ್ನು ಸಂಚರಿಸಲು ಸಿದ್ಧನಿದ್ದೇನೆ ಮಹಾವಿಷ್ಣುವು ನಿನಗೆ ಸಹಾಯ ಮಾಡಲೆಂದೇ ನನ್ನನ್ನು ಕಳಿಸಿಕೊಟ್ಟಿದ್ದಾನೆ ನಾನು ನಿನಗೆ ಈ ಭೂಮಿಯ ಎಲ್ಲಾ ದಿಕ್ಕುಗಳ ಮಹತ್ವವನ್ನೂ ಮತ್ತು ಆ ದಿಕ್ಕಿನಲ್ಲಿ ವಾಸಮಾಡುವ ಜೀವರಾಶಿಗಳ ಸೃಷ್ಠಿ,ಅವುಗಳ ಗುಣಸ್ವಭಾವ ಅವರ ಹಿರಿಮೆಯನ್ನು ಹೇಳುತ್ತೇನೆ" ಎಂದು ಪೂರ್ವ ದಿಕ್ಕಿನಿಂದ ಆರಂಭಿಸಿ ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ನಾಸಮಾಡುವ ದೇವತೆಗಳು ರಾಕ್ಷಸಲು, ಗಂಧರ್ವ, ಯಕ್ಷ, ಕಿನ್ನರ, ನಾಗ, ಮುಂತಾದ ವಿಭಾಗಗಳನ್ನೂ, ಅವರುಗಳ ಸೃಷ್ಠಿಯ ಹಿನ್ನೆಲೆಯನ್ನು ಹೇಳುತ್ತಾನೆ. ಆಗ ಗಾಲವನು ಗರುಡ ಮೊದಲು ಹೇಳಿದ.. ದೇವತೆಗಳ, ಸಜ್ಜನರ ಆವಾಸವಾಗಿರುವ ಪೂರ್ವ ದಿಕ್ಕಿನ ಕಡೆಗೇ ಸಾಗೋಣ ಎಂದು ಹೇಳುತ್ತಾನೆ. ಆಯಿತು ಹಾಗಿದ್ದರೆ ನನ್ನನ್ನೇರಿ ಕುಳಿತುಕೋ ಎಂದು ಹೇಳಿ ಗಾಲವನನ್ನು ಬೆನ್ನೇರಿಸಿಕೊಂಡು ಗರುಡ ಪೂರ್ವ ದಿಕ್ಕಿಗೆ ಪ್ರಯಾಣ ಆರಂಭಿಸುತ್ತಾನೆ. ಗರುಡ ಹಾರುತ್ತಿರುವ ವೇಗಕ್ಕೆ ಅವನ ದೇಹ ಬಿಸಿಯಾಗುತ್ತದೆ. ಸ್ವತಃ ಅಗ್ನಿಯನ್ನೇ ಧರಿಸಿ ಅವನು ಹಾರುತ್ತಿರುವನೋ ಎಂದು ಭಾಸವಾಗುತ್ತದೆ. ಗಾಲವನಿಗೆ ಭಯವಾಗತೊಡಗುತ್ತದೆ ಗರುಡನನ್ನು ಕುರಿತು "ಅಯ್ಯಾ ನಿನ್ನ ವೇಗವನ್ನು ಗಮನಿಸಿದಾಗ ನಿನ್ನನ್ನೇರಿದ ನನಗೆ ಬದುಕುತ್ತೇನೆ ಎಂಬ ವಿಶ್ವಾಸವೇ ಉಳಿದಿಲ್ಲ .. ಅಗ್ನಿಯಂತೆ ಬಿಸಿಯಾದ ನಿನ್ನ ದೇಹದಿಂದ ನಾನು ಭಸ್ಮವಾಗಿ ಬಿಡುವೆನೋ ಅನ್ನಿಸುತ್ತಿದೆ. ಹಾಗೆ ನನ್ನ ಸಾವು ಸಂಭವಿಸಿದರೂ ನಿನಗೇ ಬ್ರಾಹ್ಮಣನೋರ್ವನನ್ನು ಕೊಂದ ಕಳಂಕ ತಟ್ಟುತ್ತದೆ ಅದಕ್ಕಿಂತ ಹೆಚ್ಚಾಗಿ ನಾನು ಗುರುಗಳಾದ ವಿಶ್ವಾಮಿತ್ರರಿಗೆ ಗುರುದಕ್ಷಿಣೆಯಾಗಿ ಸಲ್ಲಿಸಬೇಕಾದ ಎಂಟುನೂರು ಕುದುರೆಗಳನ್ನು ಸಲ್ಲಿಸಲಾಗಲಿಲ್ಲವಲ್ಲಾ ಎಂಬ ಖೇದವೂ ಕಾಡುತ್ತದೆ. ನಿನ್ನ ವೇಗವನ್ನು ಕಡಿಮೆ ಮಾಡಿ ಸುಡುತ್ತಿರುವ ನಿನ್ನ ದೇಹದ ಬಿಸಿಯನ್ನು ತಗ್ಗಿಸುವೆಯಾ" ಎಂದು ವಿನಂತಿಸಿಕೊಳ್ಳುತ್ತಾನೆ. ಅಲ್ಲಿಯವರೆಗೆ ಗಾಲವನಿಗೆ ಏನು ಬೇಕಾಗಿದೆಯೆಂದು ತಿಳಿಯದ ಗರುಡ ಹೇಳಿದ, "ಗಾಲವ ಈ ವಿಷಯವನ್ನು ಮೊದಲೇ ಹೇಳುವುದಲ್ಲವೆ.. ನಿನಗೆ ಬೇಕಾದ ಕುದುರೆಗಳನ್ನು ಪಡೆಯಲು ಅವು ಎಲ್ಲಿ ಸಿಗಬಹುದು ಎಂದು ಯೋಚಿಸಿ ಪ್ರಯಾಣವನ್ನು ಆರಂಭಿಸುವುದು ಸೂಕ್ತವಾಗಿರಲಿಲ್ಲವೆ ... ಅದೋ ನೋಡು ಸಮುದ್ರದ ಸಮೀಪ ಕಾಣಿಸುತ್ತಿರುವ ದೊಡ್ದ ಪರ್ವತವನ್ನು ನೋಡು ಅದರ ಹೆಸರು ''ವೃಷಭ ಪರ್ವತ'' ಎಂಬುದಾಗಿ ನಾವು ಅಲ್ಲಿಗೆ ಹೋಗಿ ಏನಾದರೂ ಸ್ವಲ್ಪ ಆಹಾರವನ್ನು ಸೇವಿಸಿ ಕುದುರೆಗಳಿಗಾಗಿ ಯಾವ ದಿಕ್ಕಿಗೆ ಹೋಗುವುದು ಸೂಕ್ತ ಎಂದು ಯೋಚಿಸೋಣ ಆಗದೆ?" ಗರುಡನ ಮಾತಿಗೆ ಗಾಲವನೂ ಒಪ್ಪುತ್ತಾನೆ, ಹಾಗೆಯೇ ಅವರು ವೃಷಭ ಪರ್ವತದ ಶಿಖರದಲ್ಲಿ ಇಳಿಯುತ್ತಾರೆ. 🙏🙏 ಮುಂದಿನ ಕಥೆ ನಂತರದಲ್ಲಿ🙏🙏.

Wednesday, June 25, 2025

ಗಾಲವ

ಗಾಲವ..ಗುರುದಕ್ಷಿಣೆ... ವಿಶಿಷ್ಟ ವಾದ ಗುರುದಕ್ಷಿಣೆಯನ್ನು ಸಲ್ಲಿಸುವ ಮುಖೇನ ಗುರುಭಕ್ತಿಯನ್ನು ಪ್ರಪಂಚಕ್ಕೆ ತೋರಿಸಿ ಕೊಟ್ಟ ಕಥೆಗಳನ್ನು ಹೇಳಲು ಹೊರಟವನಿಗೆ ಉತ್ತಂಕನ' ಕಥೆ ಹೇಳುತ್ತಾ ಜನಮೇಜಯನ ಸರ್ಪಯಾಗದ ಕಥೆಯವರೆಗೆ ಬರೆಯಬೇಕಾಗಿ ಬಂತು. ವಿಶಿಷ್ಟವಾದ ಗುರುದಕ್ಷಿಣೆಯನ್ನು ಸಲ್ಲಿಸಿದವರ ಪಟ್ಟಿಯಲ್ಲಿ "ಗಾಲವ " ಈ ಹೆಸರು ಪುರಾಣದಲ್ಲಿ ಹೆಚ್ಚು ಚರ್ಚೆಗೆ ಅವಕಾಶ ಮಾಡಿಕೊಟ್ಟದ್ದು ಎನ್ನಬಹುದೇನೋ... ರಾಮಾಯಣ..ಮಹಾಭಾರತಗಳಲ್ಲಿ ಕೆಲವು ಕಡೆ "ಗಾಲವ" ವಿಶ್ವಾಮಿತ್ರ ಶಿಷ್ಯನೆಂದೂ... ವಿಶ್ವಾಮಿತ್ರ ಪುತ್ರನೆಂದೂ ಹೇಳಲಾಗಿದೆ. ತ್ರಿಶಂಕುವಿನ ಸಂದರ್ಭದಲ್ಲಿ ಈತ ವಿಶ್ವಾಮಿತ್ರ ಪುತ್ರನೆಂದೇ ಹೇಳಿದ್ದಾರೆ. ಮಹಾಭಾರತದ "ಸಭಾಪರ್ವ " ದಲ್ಲಿ ಇವನನ್ನು ವಿಶ್ವಾಮಿತ್ರ ಶಿಷ್ಯನೆಂದು ಹೇಳಲಾಗಿದೆ. ಇಲ್ಲಿ ನಾನು ಬರೆಯಹೊರಟಿರುವುದು ವಿಶ್ವಾಮಿತ್ರ ಶಿಷ್ಯನಾದ ಗಾಲವನ ಬಗ್ಗೆ. ವಶಿಷ್ಟ ವಿರೋಧವನ್ನು ಕಟ್ಟಿಕೊಂಡ ಕೌಶಿಕ ರಾಜ್ಯವನ್ನು ತೊರೆದು ತಪಸ್ಸಿಗೆ ತೆರಳಿ ವಿಶ್ವಾಮಿತ್ರನಾಗುವಲ್ಲಿ ನಡೆದ ಒಂದು ಘಟನೆ... ಯಮಧರ್ಮನು ವಿಶ್ವಾಮಿತ್ರರನ್ನು ಪರೀಕ್ಷಿಸಲು ವಶಿಷ್ಟರ ರೂಪವನ್ನು ಧರಿಸಿ ವಿಶ್ವಾಮಿತ್ರರ ಆಶ್ರಮಕ್ಕೆ ಬರುತ್ತಾನೆ. ವಿಶ್ವಾಮಿತ್ರನಿಗೆ ಒಮ್ಮೆಯೇ ಆತಂಕವಾಗುತ್ತದೆ...ತನ್ನ ವಿರೋಧಿಯಾದ ವಶಿಷ್ಟ... ಅದೂ ತನ್ನ ಆಶ್ರಮದ ಸಮ್ಮುಖದಲ್ಲಿ.... ಆದರೂ ವಾಸ್ತವಕ್ಕೆ ಬಂದು ಕರೆದು ಉಪಚರಿಸುತ್ತಾನೆ, ಬಂದ ಕಾರಣವನ್ನು ಕೇಳುತ್ತಾನೆ. ವಶಿಷ್ಟರು "ಅಯ್ಯಾ ವಿಶ್ವಾಮಿತ್ರರೇ ಹಸಿವಿನಿಂದ ಬಳಲಿದ ನಾನು ನಿಮ್ಮ ಆಶ್ರಮದಲ್ಲಿ ಭೋಜನಕ್ಕಾಗಿ ಬಂದಿದ್ದೇನೆ" ಎನ್ನುತ್ತಾರೆ. ಒಂದು ಕಡೆಯಲ್ಲಿ ಆಶ್ಚರ್ಯ ಮತ್ತೊಂದೆಡೆಯಲ್ಲಿ ಸಂತೋಷ... ಕ್ಷಣಕಾಲ ನಿರೀಕ್ಷೆ ಮಾಡಿದರೆ ಕೈಯಾರೆ ಚರುವನ್ನು ಸಿದ್ಧಪಡಿಸಿ ಬಡಿಸುವುದಾಗಿ ಹೇಳಿ ಅಡುಗೆಯ ಸಿದ್ಧತೆಯಲ್ಲಿ ತೊಡಗುತ್ತಾರೆ. ಅಡುಗೆಯನ್ನು ಮಾಡಿ ಅದನ್ನು ಬಡಿಸಲು ಆಶ್ರಮದ ಹೊರಬಂದು ನೋಡಿದರೆ ಅಲ್ಲಿ ವಶಿಷ್ಟರಿಲ್ಲ. ಸಿದ್ಧಪಡಿಸಿದ ಚರುವನ್ನು ತಲೆಯ ಮೇಲೆ ಹೊತ್ತು ವಶಿಷ್ಟರನ್ನು ಹುಡುಕುತ್ತಾ ಬರುತ್ತಾರೆ. ಹಾಗೆ ಸಾಗುತ್ತಿರುವಾಗ ವಶಿಷ್ಟರು ಕಾಣಸಿಗುತ್ತಾರೆ. ತಂದ ಅಡುಗೆಯನ್ನು ಉಣ್ಣಲು ಹೇಳಿದರೆ.. ತಾನು ಈಗಾಗಲೇ ಸಮೀಪದ ಆಶ್ರಮದಲ್ಲಿ ಆಹಾರವನ್ನು ಸೇವಿಸಿದ್ದಾಗಿಯೂ ನೀವು ಸಿದ್ಧಪಡಿಸಿದ ಚರುವನ್ನೂ ಸ್ವಲ್ಪ ಹೊತ್ತಿನಲ್ಲಿ ಬಂದು ಉಣ್ಣುವುದಾಗಿ ಹೇಳಿ ಹೋಗಿಬಿಡುತ್ತಾರೆ. ವಿಶ್ವಾಮಿತ್ರರು ತಲೆಯ ಮೇಲೆ ಚರುವನ್ನು ಹೊತ್ತು ಅಲ್ಲಿಯೇ ಕಾದು ನಿಲ್ಲುತ್ತಾರೆ. ದಿನಗಳು ಕಳೆಯತೊಡಗುತ್ತದೆ. ವಶಿಷ್ಟರು ಬರಲಿಲ್ಲ... ವಿಶ್ವಾಮಿತ್ರರ ನಿಂತಲ್ಲಿಂದ ಒಂದು ಹೆಜ್ಜೆಯನ್ನೂ ಕದಲಿಸಲಿಲ್ಲ.. ಈ ಸಂದರ್ಭದಲ್ಲಿ ವಿಶ್ವಾಮಿತ್ರರ ಬಳಿಯಲ್ಲಿದ್ದ ಗಾಲವನೆಂಬ ಶಿಷ್ಯ ಅವರ ಸೇವೆಯನ್ನು ಮಾಡತೊಡಗುತ್ತಾನೆ. ದಿನ ಕಳೆದು ತಿಂಗಳುಗಳು ಕಳೆದು ವರ್ಷಗಳೂ ಕಳೆಯತೊಡಗುತ್ತವೆ. ನಿಂತಲ್ಲಿಯೇ ನಿಂತ ವಿಶ್ವಾಮಿತ್ರ ಅವರ ಸೇವೆಯನ್ನು ಮಾಡುತ್ತಿರುವ ಗಾಲವ.. ಹೀಗೆ ಸುಧೀರ್ಘ ಒಂದು ನೂರು ವರ್ಷಗಳು ಕಳೆದುಬಿಡುತ್ತವೆ. ಸಂತೋಷಗೊಂಡ ಯಮಧರ್ಮ ಮತ್ತೆ ವಶಿಷ್ಟರ ರೂಪದಿಂದಲೇ ಬರುತ್ತಾನೆ.. ವಶಿಷ್ಟರನ್ನು ನೋಡಿದ ವಿಶ್ವಾಮಿತ್ರರು ಸಿದ್ಧ ಮಾಡಿ ತಲೆಯ ಮೇಲೆ ಹೊತ್ತಿದ್ದ ಚರುವನ್ನು ಕೆಳಗಿಳಿಸುತ್ತಾರೆ. ನೂರು ವರ್ಷಗಳು ಕಳೆದಿದ್ದರೂ ಮಾಡಿದ ಪಾಕ ತನ್ನ ಬಿಸಿಯನ್ನು ಕಳೆದುಕೊಳ್ಳದೇ ಈಗ ತಾನೇ ಒಲೆಯಿಂದ ಇಳಿಸಿದ ಪಕ್ವಾನ್ನದ ಹಾಗೆಯೇ. ಇರುತ್ತದೆ. ಸಂತೋಷದಿಂದ ಊಟ ಮಾಡಿದ ವಶಿಷ್ಟ ರೂಪದ ಯಮಧರ್ಮ ವಿಶ್ವಾಮಿತ್ರರನ್ನು ಹರಸಿ ಹೊರಟು ಹೋಗುತ್ತಾನೆ. ಇತ್ತ ವಿಶ್ವಾಮಿತ್ರರು ಸುದೀರ್ಘ ನೂರು ವರ್ಷಗಳ ಕಾಲ ನಿಂತಲ್ಲೇ ಇದ್ದ ತಮ್ಮನ್ನು ಸೇವೆ ಮಾಡಿದ ಗಾಲವನ ಗುರುಭಕ್ತಿಗೆ ಸೋತು ಎಲ್ಲಾ ವಿದ್ಯೆಗಳನ್ನು ಉಪದೇಶ ಮಾಡಿ ಹರಸುತ್ತಾರೆ. ಗಾಲವನೂ ಸಂತೋಷ ಹೊಂದುತ್ತಾನೆ. ಆದರೆ ತನ್ನನ್ನು ಸರ್ವ ವಿದ್ಯಾಪಾರಂಗತನನ್ನಾಗಿ ಮಾಡಿದ ಗುರುಗಳಿಗೆ ಗುರುದಕ್ಷಿಣೆಯನ್ನು ಕೊಡಬೇಕೆಂದು ತಿರ್ಮಾನಿಸುತ್ತಾನೆ. ಗುರುಗಳಲ್ಲಿ.. "ಸ್ವಾಮೀ ನಿಮ್ಮಿಂದ ನಾನು ಉದ್ಧರಿಸಲ್ಪಟ್ಟಿದ್ದೇನೆ ಸಕಲ ವಿದ್ಯೆಗಳೂ ಇಂದು ನನಗೆ ದೊರೆತವು ಇದಕ್ಕೆ ಕಾರಣರಾದ ಕರುಣಾಮಯಿಯಾದ ತಮಗೆ ಗುರುದಕ್ಷಿಣೆಯ ರೂಪದಲ್ಲಿ ಏನನ್ನು ಕೊಡಲಿ " ಎಂದು ಕೇಳುತ್ತಾನೆ. ವಿಶ್ವಾಮಿತ್ರರು "ಮಗೂ ಗಾಲವ... ಸುದೀರ್ಘ ನೂರು ವರ್ಷಗಳ ಕಾಲ ನನ್ನ ಸೇನೆಯನ್ನು ಮಾಡಿದ್ದಿ ಇದಕ್ಕಿಂತ ಮಿಗಿಲಾದ ಮತ್ತೊಂದು ಗುರುದಕ್ಷಿಣೆ ಬೇಡ.. ಗುರುದಕ್ಷಿಣೆ ಸಂದಿತು ಎಂದು ಭಾವಿಸಿಕೊಂಡು ಹೋಗಿ ನಿನ್ನ ಜೀವನವನ್ನು ನಡೆಸು" ಎಂದು ಹೇಳುತ್ತಾರೆ. ಇದನ್ನು ಕೇಳಿದ ಗಾಲವನಿಗೆ ಸಮಾಧಾನವಾಗುವುದಿಲ್ಲ ಗುರುಗಳಿಗೆ ಏನಾದರೂ ಕೊಡಬೇಕು ಎಂಬ ಭಾವನೆ ಹೋಗುವುದಿಲ್ಲ.. ಗುರುಗಳು ಏನನ್ನಾದರೂ ಕೇಳಿದರೆ ಬಡವನಾದ ತನ್ನ ಬಳಿ ಕೊಡಲು ಇದೆಯೇ ಎಂದೂ ಯೋಚಿಸಿದೇ ಮತ್ತೆ ಮತ್ತೆ ಕೇಳುತ್ತಾನೆ. ಇವನ ಮಾತಿನಿಂದ ವಿಶ್ವಾಮಿತ್ರರಿಗೆ ಸ್ವಲ್ಪ ಕೊಪವೇ ಬರುತ್ತದೆ. ಹಾಗಾಗಿಯೇ "ಏಕತ: ಶ್ಯಾಮ ಕರ್ಣಾನಾಂ ಹಯಾನಾಂ ಚನ್ದ್ರವರ್ಚಸಾಮ್ | ಅಷ್ಟೌ ಶತಾನಿ ಮೇ ದೇಹಿ ಗಚ್ಛ ಗಾಲವ ಮಾಚಿರಮ್ II " ಎಂದು ಹೇಳಿಬಿಡುತ್ತಾರೆ. ಒಂದು ಕಿವಿ ಕಪ್ಪಾಗಿರುವ ಬಿಳಿ ಬಣ್ಣದ ಎಂಟುನೂರು ಕುದುರೆಗಳನ್ನು ತಂದುಕೊಡು ಎಂದು ಕೇಳಿಬಿಡುತ್ತಾರೆ.🙏🙏... ಅಶ್ವಶೋಧನೆಗೆ ಹೊರಡುವ ಗಾಲವನ ಬಗ್ಗೆ. ಮುಂದಿನ ಬರಹ🙏🙏

Tuesday, June 17, 2025

ತ್ರಿಶಂಕು ೨

ಆತ್ಮಹತ್ಯೆಗೆ ಮನ ಮಾಡಿದ್ದ ತ್ರಿಶಂಕು ಶ್ರೀದೇವಿಯ ದರ್ಶನ ಕಾರುಣ್ಯದಿಂದ ತನ್ನ ನಿರ್ಧಾರದಿಂದ ಹಿಂದೆ ಸರಿದು ಮುಂದೆ ಒದಗಿ ಬರುವ ಶುಭದಿನಗಳ ನಿರೀಕ್ಷೆಯಲ್ಲಿಯೇ ಇರುತ್ತಾನೆ. ಇತ್ತ ನಾರದ ಮಹರ್ಷಿಗಳು ರಾಜ್ಯದಿಂದ ಪರಿತ್ಯಕ್ತನಾದ ಸತ್ಯವ್ರತ (ತ್ರಿಶಂಕು) ದೇವಿಯನ್ನು ಸಾಕ್ಷಾತ್ಕರಿಸಿಕೊಂಡ ಘಟನೆಯನ್ನು ತ್ರಿಬಂಧನನಿಗೆ ಹೇಳುತ್ತಾರೆ. ನಡೆದ ಘಟನಾವಳಿಗಳನ್ನು ನಾರದರ ಮುಖೇನ ಕೇಳಿದ ಅರಸ ತ್ರಿಬಂಧನನಿಗೆ ದುಃಖವಾಗುತ್ತದೆ. ತನ್ನ ಮಗ ಮಾಡಿದ ತಪ್ಪಿಗೆ ತಾನು ದೊಡ್ದ ಶಿಕ್ಷೆಯನ್ನೇ ಕೊಟ್ಟುಬಿಟ್ಟೆನೆಂದು ಮರುಗಿದ ಅರಸ ಮಂತ್ರಿಗಳನ್ನು ಕರೆದು ನಿರ್ಗತಿಕನಾಗಿ ಅಲೆಯುತ್ತಿರುವ ಮಗ ತ್ರಿಶಂಕುವನ್ನು ಅರಸಿ ಕರೆದುಕೊಂಡು ಬರಲು ಸೂಚಿಸುತ್ತಾನೆ. ರಾಜನ ಆಣತಿಯಂತೆ ಮಂತ್ರಿಗಳು ಹುಡುಕುತ್ತಾ ಬಂದು ನೆಲೆ ಇಲ್ಲದೆ ಅಂಡಲೆಯುತ್ತಿದ್ದ ತ್ರಿಶಂಕುವನ್ನು ಕಾಣುತ್ತಾರೆ. ಅರಸನ ಆಜ್ಞೆಯನ್ನು ತಿಳಿಸಿ ರಾಜೋಚಿತವಾದ ಗೌರವ ಸಂಮಾನಗಳೊಂದಿಗೆ ನಾಡಿಗೆ ಕರೆದುಕೊಂಡು ಬರುತ್ತಾರೆ. ತಂದೆ ತ್ರಿಬಂದನ ಹಿಂದೆ ನಡೆದ ಘಟನೆಯನ್ನೆಲ್ಲಾ ಮರೆತು ಸಂತೋಷದಿಂದಲೇ ಮಗನನ್ನು ಬರಮಾಡಿಕೊಂಡು ಅತ್ಯಂತ ಸಂಭ್ರಮದಿಂದ ಮಗನಿಗೆ ಸಾಮಾಜ್ಯದ ಪಟ್ಟ ಕಟ್ಟಿ ಇನ್ನು ಉಳಿದ ಆಯುಷ್ಯವನ್ನು ವಾನಪ್ರಸ್ಥದಲ್ಲಿ ಕಳೆಯಲು ತೆರಳುತ್ತಾನೆ.(ಹರಿವಂಶದ ಪ್ರಕಾರ ಬರಗಾಲ ಪೀಡಿತವಾದ ಸಾಮ್ರಾಜ್ಯದಲ್ಲಿ ಮಳೆಯನ್ನು ತರಿಸುವುದು ಮತ್ತು ತ್ರಿಶಂಕುವಿಗೆ ಪಟ್ಟಾಭಿಷೇಕವನ್ನು ತನ್ನ ಹೆಂಡತಿ.. ಮಕ್ಕಳನ್ನು ರಕ್ಷಿಸಿದ ಕಾರಣದಿಂದ ವಿಶ್ವಾಮಿತ್ರರೇ ಮಾಡುತ್ತಾರೆ. ) ತ್ರಿಶಂಕು ಕೂಡ ತನ್ನ ಜೀವನದಲ್ಲಿ ಗತಿಸಿದ ಸಂಕಷ್ಟದ ಸಂಧರ್ಭಗಳನ್ನು ಮರೆತು ಜನಾನುರಾಗಿಯಾಗಿ, ಪರಮ ಧಾರ್ಮಿಕನೆನಿಸಿಕೊಂಡು ಬಹುಕಾಲ ರಾಜ್ಯಭಾರ ಮಾಡುತ್ತಾನೆ. ಕೈಕಯ ವಂಶಸ್ಥಳಾದ "ಸತ್ಯರಥಾ " ಎಂಬಾಕೆಯೊಂದಿಗೆ ಸಾಂಸಾರಿಕ ಜೀವನವೂ ಸುಖದಿಂದಲೇ ಕೂಡಿರುತ್ತ ಹುಟ್ಟಿದ ಮಗುವಿಗೆ "ಹರಿಶ್ಚಂದ್ರ'' ಎಂದು ನಾಮಕರಣ ಮಾಡಿ ಬೆಳೆಸುತ್ತಾನೆ. ರಾಜ್ಯದ... ಪ್ರಜೆಗಳ ಬಳಿತಿಗಾಗಿ ನೂರು ಯಜ್ಞಗಳನ್ನು ಮಾಡುತ್ತಾನೆ. (ರೂಡಿಯಲ್ಲಿ ಅವನು ಯಜ್ಞ ಮಾಡುವುದೆಲ್ಲವೂ ಸ್ವರ್ಗ ಕಾಮನೆಯಿಂದಲೇ ಎಂದು ಹೇಳುವದನ್ನು ಕೇಳಿದ್ದೇವೆ ಆದರೆ ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ಅವನು ನೂರು ಯಾಗಗಳನ್ನು ಮಾಡುವುದು ಸ್ಪರ್ಗಾಪೇಕ್ಷೆಗಿಂತಲೂ ಮೊದಲು) ರಾಜ್ಯದ ಪ್ರಜೆಗಳು ಸಂತೋಷದಿಂದಲೂ ಇರುತ್ತಾ... ಅರಸನ ಭಂಡಾರವೂ ತುಂಬಿ ತುಳುಕುತ್ತದೆ. ಇಂತಹಾ ಸಂದರ್ಭದಲ್ಲಿ ತ್ರಿಶಂಕುವಿನ ಮನಸ್ಸಿನಲ್ಲಿ ಸಶರೀರವಾಗಿಯೇ ಸ್ವರ್ಗವನ್ನು ಸೇರಿ ಸುಖವನ್ನು ಅನುಭವಿಸಬೇಕೆಂಬ ಅಪೇಕ್ಷೆ ಹುಟ್ಟಿಬಿಡುತ್ತದೆ. ಹಿಂದೆ ತ್ರಿಶಂಕು - ವಶಿಷ್ಟರ ಮದ್ಯೆ ಏರ್ಪಟ್ಟಿದ್ದ ಅಂತರ ಈಗ ಇರಲಿಲ್ಲ, ವಶಿಷ್ಟರೂ ಕುಲಪುರೋಹಿತರಾಗಿ ಕಾಲಕಾಲಕ್ಕೆ ಅರಸನಿಗೆ ಕೊಡಬೇಕಾದ ಸಲಹೆ ಸೂಚನೆಗಳನ್ನು ಕೊಟ್ಟು ತಮ್ಮದಾದ ಹೊಣೆಯನ್ನು ನಿರ್ವಹಿಸುತ್ತಲೇ ಇದ್ದರು. ಲೋಕ ಕಲ್ಯಾಣಕ್ಕಾಗಿ ಅರಸ ಒಂದಾದ ಮೇಲೆ ಒಂದರಂತೆ ನೂರು ಯಾಗಗಳ ಸಂಕಲ್ಪ ಮಾಡಿದರೂ ಎಲ್ಲವನ್ನು ತಮ್ಮ ಪೌರೋಹಿತ್ಯದಲ್ಲಿ ಮಾಡಿ ಮುಗಿಸಿಕೊಟ್ಟಿದ್ದರು. ಈಗ ಸಶರೀರ ಸ್ವರ್ಗಾರೋಹಣಕ್ಕೆ ಬೇಕಾಗಿ ಮತ್ತೊಂದು ಯಜ್ಞ ಸಂಕಲ್ಪ ಮಾಡಿಸಲು ವಶಿಷ್ಟರಲ್ಲಿ ಕೇಳಿಕೊಳ್ಳುತ್ತಾನೆ. ಆಗ ಗುರು ವಶಿಷ್ಟರು ಅದು "ಅಶಕ್ಯ " ಎಂದು ನಿರಾಕರಿಸಿ ಹೊರಟು ಹೋಗುತ್ತಾರೆ. ಕುಲಗುರುಗಳೇ ನಿರಾಕರಿಸಿದರೂ ತ್ರಿಶಂಕುವಿನ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದ ಸ್ವರ್ಗವಾಂಛೆ ನಾಶವಾಗಲಿಲ್ಲ. ಹಾಗಾಗಿಯೇ ಅರಣ್ಯದಲ್ಲಿ ಆಶ್ರಮ ನಿರ್ಮಿಸಿಕೊಂಡು ತಪಸ್ಸು.. ಯಜ್ಞಾದಿಗಳಲ್ಲಿ ತೊಡಗಿದ್ದ ವಶಿಷ್ಟ ಪುತ್ರರಲ್ಲಿ ಹೋಗಿ ತನ್ನ ಮನದಿಂಗಿತ ಹೇಳಿಕೊಳ್ಳುತ್ತಾನೆ. ವಶಿಷ್ಟರು ಯಜ್ಞ ಮಾಡಿಸಲು ತಿರಸ್ಕರಿಸಿದ ವಿಷಯವನ್ನು ಹೇಳುವಾಗ ಸಹಜವಾಗಿಯೇ ಇವನ ಧ್ವನಿ ಗಡುಸಾಯಿತು. ಇದನ್ನು ಗ್ರಹಿಸಿದ ವಶಿಷ್ಟ ಪುತ್ರರು ತಂದೆ ನಿರಾಕರಿಸಿದ ವಿಷಯದಲ್ಲಿ ತಮ್ಮ ಪ್ರವೇಶ ಇಲ್ಲವೆಂದೂ ವಶಿಷ್ಟರು "ಅಶಕ್ಯ "ಎಂದಾಡಿದರೆ ಅಂತಹ ಕಾರ್ಯವನ್ನು ಮಾಡುವುದು ಸಾಧುವಲ್ಲವೆಂದೂ ಹೇಳುತ್ತಾರೆ. ತ್ರಿಶಂಕುವಿಗೆ ಸಹನೆ ಮೀರುತ್ತದೆ. ವಶಿಷ್ಟರ ಬಗ್ಗೆ ಇದ್ದ ಅಸಹನೆ ವಶಿಷ್ಟ ಪುತ್ರರ ಸಮ್ಮಖದಲ್ಲಿ ಹೊರಬೀಳುತ್ತದೆ. "ನಿಮ್ಮ ತಂದೆಯವರೂ ಆಗದು ಎಂದರು.. ನೀವೂ ನಿರಾಕರಿಸಿದಿರಿ ಆದರೆ ನನ್ನ ಸಂಕಲ್ಪವನ್ನು ಬಿಡಲಾರೆ.. ಅದನ್ನು ನೆರವೇರಿಸಿಕೊಳ್ಳಲು ಬೇರೆಯಾರಾದರೂ ಪ್ರಾಜ್ಞರಾದ ಬ್ರಾಹ್ಮಣರನ್ನು ಅರಸುತ್ತೇನೆ ಇದು ನಿಶ್ಚಯ" ಎಂದು ಆಡುತ್ತಾನೆ. ಈ ಮಾತು ಶಕ್ತಿ, ಮಹೋದಯಾದಿ ವಶಿಷ್ಟ ಪುತ್ರರಿಗೂ ಕೋಪ ತರಿಸುತ್ತದೆ. ಕೋಪವೆಂಬುದು ಶಾಪವಾಕ್ಕವಾಗಿ ಹೊರಬೀಳುತ್ತದೆ. "ಕುಲಗುರುಗಳನ್ನು ವಿರೋಧಿಸಿದೆ.. ಗುರುಪುತ್ರರಾದ ನಮ್ಮನ್ನೂ ವಿರೋಧಿಸಿ ಮತ್ತೋರ್ವನನ್ನು ಅರಸುವ ಮಾತಾಡಿದೆ ಎಂತಾದರೆ ನೀನು ಚಾಂಡಾಲನಾಗು" ಎಂದು ಶಪಿಸಿ ಬಿಡುತ್ತಾರೆ. ಶಾಪವಾಕ್ಕವನ್ನು ಕೇಳಿ ತ್ರಿಶಂಕುವಿಗೆ ಬಹಳ ದುಃಖವಾಗುತ್ತದೆ. ಆಸೆ ನಿರಾಸೆಯಾಯಿತು. ಮರಳಿ ನಗರಕ್ಕೆ ಹೋಗುವ ಮನಸ್ಸೂ ಬರಲಿಲ್ಲ. ತನ್ನನ್ನು ಅನುಸರಿಸಿ ಬಂದಿದ್ದ ಸೀಮಿತವಾದ ಪರಿವಾರಕ್ಕೆ ಮಗನಾದ ಹರಿಶ್ಚಂದ್ರನಿಗೆ ಸಿಂಹಾಸನವೇರಿ ರಾಜ್ಯಾಡಳಿತ ನಡೆಸುವ ಸಂದೇಶ ಕೊಟ್ಟು ಕಳುಹಿಸಿಕೊಡುತ್ತಾನೆ. ಸಂಜೆಯಾಗುತ್ತಲೇ ವಶಿಷ್ಟ ಪುತ್ರರ ಶಾಪದ ಪರಿಣಾಮ ತಿಳಿಯತೊಡಗುತ್ತದೆ. ತ್ರಿಶಂಕುವಿನ ಶುಭ್ರವಾದ ದೇಹ ಬಣ್ಣ ಕಳೆದುಕೊಂಡು ಕಪ್ಪಾಗತೊಡಗುತ್ತದೆ, ದೇಹವನ್ನು ಅಲಂಕರಿಸಿದ್ದ ಬಂಗಾರದ ಆಭರಣಗಳು ತಮ್ಮ ಹೊಳಪನ್ನು ಕಳೆದುಕೊಂಡು ಕಬ್ಬಿಣದ ಆಭರಣಗಳಾಗುತ್ತವೆ. ತಲೆಯ ಮೇಲೆ ಧರಿಸಿದ್ದ ಕಿರೀಟವೂ ಕಬ್ಬಿಣದ್ದಾಗುತ್ತದೆ. ಮುಖದಲ್ಲಿದ್ದ ಕ್ಷತ್ರಿಯರಾಜೋಚಿತವಾದ ಕಳೆ ಮಾಯವಾಗಿ ಚಾಂಡಾಲ ಕುರುಹುಗಳು ಆವರಿಸಿಕೊಳ್ಳುತ್ತವೆ. ತ್ರಿಶಂಕು ದುಃಖದಿಂದ ಕುಸಿದು ಕೂರುತ್ತಾನೆ. ಮತ್ತೆ ಸಾವರಿಸಿಕೊಂಡು ಮೇಲೆದ್ದು, ತಿರುಗತೊಡಗುತ್ತಾನೆ. ತಿರುಗುತ್ತಾ ತಿರುಗುತ್ತಾ ಮುಂದೆ ವಿಶ್ವಾಮಿತ್ರರ ಆಶ್ರಮವನ್ನು ತಲುಪಿದ, ವಿಶ್ವಾಮಿತ್ರರು ಇವನ ಪರಿಚಯ ಕೇಳಿದ ಕೂಡಲೇ ಬರಗಾಲದ ದಿನಗಳಲ್ಲಿ ತನ್ನ ಹೆಂಡತಿ ಮಕ್ಕಳನ್ನು ರಕ್ಷಿಸಿದವ ಇವನೇ ಎಂಬುದು ತಿಳಿಯುತ್ತದೆ. ಕೂಡಲೇ ತ್ರಿಶಂಕುವಿನ ಆಶಯ ಮತ್ತು ಅದನ್ನು ನಡೆಸಿಕೊಡದ ವಶಿಷ್ಟ ಮತ್ತು ವಾಶಿಷ್ಟರ ಬಗ್ಗೆ ಕೋಪದಿಂದಲೇ ನಿಂದಿಸಿ ತಾನು ಅವನಿಗೆ ಸಶರೀರಿಯಾಗಿ ಸ್ವರ್ಗವನ್ನೇರುವ ಮಾರ್ಗವನ್ನು ಕಲ್ಪಿಸುವುದಾಗಿ ಮಾತು ಕೊಡುತ್ತಾರೆ. "ನೀನು ನನ್ನನ್ನು ಬಂದು ಸೇರಿದೆ ಎಂದಾದರೆ ಸ್ವರ್ಗ ಸಿಕ್ಕಿತು ಎಂದೇ ತಿಳಿ" ಎಂದು ಆಡುತ್ತಾರೆ. ತ್ರಿಶಂಕುವಿಗೆ ಧೈರ್ಯದ ಮಾತುಗಳನ್ನು ಹೇಳಿ ಕೂಡಲೇ ತಮ್ಮ ಶಿಷ್ಯರಿಗೆ ತಾವು ತ್ರಿಶಂಕುವನ್ನು ಸ್ಪರ್ಗಕ್ಕೆ ಏರಿಸಲು ಮಾಡಬೇಕಾಗುವ ಯಜ್ಞದ ಬಗ್ಗೆ ಹೇಳಿ ಅದಕ್ಕೆ ಬೇಕಾದ ಸಂಭಾರಗಳನ್ನು ಸಂಗ್ರಹಿಸಲು ಆಜ್ಞಾಪಿಸುತ್ತಾರೆ, ಇನ್ನೂ ಕೆಲವು ಶಿಷ್ಯರನ್ನು ಕರೆದು ಎಲ್ಲಾ ಕಡೆಯಲ್ಲಿರುವ ಖುಷಿ ಮುನಿಗಳನ್ನು ಆಮಂತ್ರಿಸುವಂತೆಯೂ, ಆಮಂತ್ರಣ ಪಡೆದವರು ಈ ಯಜ್ಞದ ಬಗ್ಗೆ ಏನಾದರೂ ಆಡಿದರೆ ಯಾವ ಮುಚ್ಚುಮರೆಯಿಲ್ಲದೆ ತನಗೆ ವರದಿ ಒಪ್ಪಿಸಬೇಕೆಂದೂ ಹೇಳಿ ಕಳುಹಿಸುತ್ತಾರೆ. ವಿಶ್ವಾಮಿತ್ರರು ಆಜ್ಞಾಪಿಸಿದಂತೆಯೇ ಶಿಷ್ಯರು ಎಲ್ಲೆಡೆ ಸಂಚರಿಸಿ ಋಷಿ ಮುನಿಗಳನ್ನು ಯಜ್ಞಕ್ಕೆ ಆಮಂತ್ರಿಸಿ ಬರುತ್ತಾರೆ. ಕೆಲವರಿಗೆ ಬರಲು ಮನಸ್ಸಿಲ್ಲದಿದ್ದರೂ ಹೋಗದೇ ಉಳಿದರೆ ವಿಶ್ವಾಮಿತ್ರ ಕೋಪಿಸಿಕೊಳ್ಳುತ್ತಾನೆ ಎಂದುಕೊಂಡು ಯಾಗ ನಡೆಯುವ ಸ್ಥಳಕ್ಕೆ ಒಂದು ಸೇರತೊಡಗಿದರು. ಆಮಂತ್ರಣ ಕೊಟ್ಟು ಬಂದ ಶಿಷ್ಯರಲ್ಲಿ ಯಾರಾದರೂ ತನ್ನ ಕಾರ್ಯಕ್ಕೆ ವಿರೋಧವಾಗಿ ಮಾತಾಡಿದರೇ ಎಂದು ಕೇಳಿದಾಗ ವಶಿಷ್ಟ ಪುತ್ರರು ಆಡಿದ ಮಾತುಗಳನ್ನು ಹೇಳುತ್ತಾರೆ. "ಕ್ಷತ್ರಿಯೋ ಯಾಜಕೋ ಯಸ್ಯ ಚಣ್ಡಾಲಸ್ಯ ವಿಶೇಷತ: | ಕಥಂ ಸದಸಿ ಭೋಕ್ತಾರೋ ಹವಿಸ್ತಸ್ಯ ಸುರರ್ಷಯ ll" ಯಾಗ ಮಾಡುವವ ಚಾಂಡಾಲ.. ಮಾಡಿಸುವವ ಕ್ಷತ್ರಿಯ ಇಂತಹ ಯಜ್ಞದ ಹವಿಸ್ಸನ್ನು ದೇವತೆಗಳು ಹೇಗೆ ಸ್ವೀಕರಿಸುತ್ತಾರೆ.... ಋಷಿಮುನಿಗಳು ಯಜ್ಞ ಶೇಷವನ್ನು ಹೇಗೆ ಸ್ವೀಕರಿಸುತ್ತಾರೆ.... ಇದಕ್ಕೆ ಸೂಕ್ತವಾದ ಫಲ ಎಂದೂ ದೊರಕದು ಎಂದು ಶಕ್ತಿ ಮಹೋದಯಾದಿಗಳು ಆಡಿಕೊಂಡರು.... ಈ ಮಾತನ್ನು ಕೇಳಿದ ವಿಶ್ವಾಮಿತ್ರರು ಕೋಪೋದ್ರೇಕದಿಂದ " ದುರಾತ್ಮರಾದ ವಶಿಷ್ಟ ಶಿಷ್ಯರು ನಾನು ಮಾಡುವ ಈ ಯಾಗದ ಬಗ್ಗೆ ಇಂತಹ ಕೀಳು ಮಾತಗಳನ್ನಾಡಿದರು ಎಂದಾದರೆ ಅವರಿಗೆ ಇನ್ನು ಬದುಕುವ ಅವಕಾಶವೇ ಇಲ್ಲ ಅವರು ಈ ಕ್ಷಣವೇ ಕಾಲಪಾಶದಿಂದ ಸೆಳೆಯಲ್ಪಡಲಿ.. ಮುಂದೆ ಅವರು ಹುಟ್ಟುವ ಏಳುನೂರು ಜನ್ಮಗಳಲ್ಲಿ ಸತ್ತಪ್ರಾಣಿಯ ಮಾಂಸವನ್ನೂ ನಾಯಿಗಳ ಮಾಂಸವನ್ನೂ ತಿನ್ನುವ ಕುಲದಲ್ಲಿ ಜನಿಸಲಿ ಅವರು ಲೋಕದಲ್ಲಿ "ಮುಷ್ಟಿಕ"ರೆಂಬ ಹೆಸರಿನಿಂದ ಕರೆಯಲ್ಪಡಲಿ " ಹೀಗೆ ಘೋರವಾದ ಶಾಪವನ್ನು ಕೊಟ್ಟು ತ್ರಿಶಂಕುವಿಗೆ ಯಾಗವನ್ನು ಮಾಡಿಸಲು ಮುಂದಾಗುತ್ತಾರೆ. ಬಹಳ ದಿನಗಳು ನಡೆದ ಯಜ್ಞದಲ್ಲಿ ಮತ್ತೆ ಮತ್ತೆ ಕರೆದರೂ ದೇವತೆಗಳು ಹವಿರ್ಭಾಗ ಸ್ವೀಕರಿಸಲು ಬರಲಿಲ್ಲ. ಕೃದ್ಧರಾದ ವಿಶ್ವಾಮಿತ್ರರು ತಮ್ಮ ತಪ:ಶ್ಯಕ್ತಿಯಿಂದ ತ್ರಿಶಂಕುವನ್ನು ಕುರಿತು " ರಾಜನ್ ಸಶರೀರೋ ದಿವಂ ವ್ರಜ " ಎಂದು ಹೇಳಿ ತಮ್ಮ ತಪಃಶ್ಯಕ್ತಿಯನ್ನು ವಿನಿಯೋಗಿಸ ತೊಡಗಿದರು. ಹಾಗೆಯೇ ತ್ರಿಶಂಕು ಸಶರೀರನಾಗಿ ಸ್ವರ್ಗಕ್ಕೆ ಏರತೊಡಗಿದ.. ಏರುತ್ತಾ ಸ್ವರ್ಗ ತಲುಪಿದಾಗ ಇಂದ್ರ ವಿರೋಧಿಸಿದ.." ನಿನ್ನಂತಹ ಚಾಂಡಾಲನಿಗೆ ಇಲ್ಲಿ ಸ್ಥಳವಿಲ್ಲ ಬಂದ ಕಡೆಗೇ ತೆರಳು " ಎಂದು ಹೇಳಿ ಸ್ವರ್ಗದಿಂದ ಹೊರತಳ್ಳಿದ. ತ್ರಿಶಂಕು ತಲೆಕೆಳಗಾಗಿ ತ್ರಾಹಿ.. ತ್ರಾಹೀ.. ಎಂದು ಕೂಗಿಕೊಳ್ಳುತ್ತಾ ಬೀಳತೊಡಗಿದ. ಇದನ್ನು ಕೇಳಿದ ವಿಶ್ವಾಮಿತ್ರರು "ನಿಲ್ಲು.. ನಿಲ್ಲು" ಎನ್ನುತ್ತಾ ಕರಗಳನ್ನು ಮೇಲಕ್ಕೆತ್ತಿದರು, ಬೀಳುತ್ತಿದ್ದ ತ್ರಿಶಂಕು ಅಲ್ಲಿಯೇ ನಿಂತ. ಅವನು ನಿಂತಲ್ಲಿಯೇ ಕಲ್ಪಾಂತರದಲ್ಲಿ ಬ್ರಹ್ಮದೇವರು ಹೊಸ ಸೃಷ್ಠಿಯನ್ನು ಆರಂಭಿಸಿದಂತೆ ಹೊಸ ಸ್ವರ್ಗವನ್ನು ನಿರ್ಮಾಣ ಮಾಡಿದರು.. ಸಪ್ತರ್ಷಿ ಮಂಡಲವನ್ನೂ ಇಪ್ಪತ್ತೇಳು ನಕ್ಷತ್ರಗಳನ್ನೂ ಸೃಷ್ಠಿಸಿದರು. ಉತ್ತರದಿಕ್ಕಿನಲ್ಲಿ ಧೃವಮಂಡಲವಿದ್ದರೆ ದಕ್ಷಿಣದಿಕ್ಕಿನಲ್ಲಿ ತ್ರಿಶಂಕು ಸ್ವರ್ಗ ನಿರ್ಮಾಣವಾಯಿತು. ಸೃಷ್ಠಿಸಿದ ಸ್ವರ್ಗಕ್ಕೆ ಮತ್ತೊಬ್ಬ ಇಂದ್ರನನ್ನೂ ಸೃಷ್ಠಿಸಲು ಮುಂದಾದರು ಮತ್ತು ಈಗಿರುವ ಇಂದ್ರನೇ ಬೇಡ ಎಂಬ ನಿರ್ಧಾರ ಮಾಡಿದರು. ಆಗ ಋಷಿಗಳೂ ದೇವತೆಗಳೂ ಬಂದು ಕ್ರೋಧದಿಂದ ಸೃಷ್ಠಿ ಕಾರ್ಯದಲ್ಲಿ ತೊಡಗಿದ ವಿಶ್ವಾಮಿತ್ರರ ಮನವೊಲಿಸುತ್ತಾರೆ. ನೀವು ಸೃಷ್ಠಿಸಿದ ಸಕಲವೂ ತ್ರಿಶಂಕುವಿಗೆ ಸೀಮಿತವಾಗಿರಲಿ ಅವನಿಗೆ ಪ್ರತಿಸ್ವರ್ಗದಲ್ಲಿಯೂ ಸ್ವರ್ಗಸುಖ ದೊರೆಯಲಿ ಆದರೆ ಆ ಸ್ವರ್ಗ ವೈಶ್ವಾನರಪಥವೆಂಬ ಈ ಜ್ಯೋತಿಶ್ಚಕ್ರದ ಹೊರಗಿರಲಿ ಎಂದು ಬೇಡಿಕೊಳ್ಳುತ್ತಾರೆ.. ಸಮಾಧಾನಗೊಂಡು ವಿಶ್ವಾಮಿತ್ರರು ಅಸ್ತು ಎಂದು ಒಪ್ಪಿಕೊಳ್ಳುತ್ತಾರೆ. ಹೀಗೆ ಸ್ಥಾಪಿತವಾದ ಸ್ವರ್ಗ "ತ್ರಿಶಂಕುಸ್ವರ್ಗ" ಎಂದೇ ಕರೆಯಲ್ಪಡುತ್ತದೆ. 🙏🙏 ಹೊಸ ಕಥೆಯೊಂದಿಗೆ ಮುಂದಿನ ಬರಹ🙏🙏

Thursday, June 12, 2025

ತ್ರಿಶಂಕು

ಸೂರ್ಯವಂಶದಲ್ಲಿ ತ್ರ್ಯಯ್ಯಾರುಣ ("ತ್ರಿಬಂಧನ" "ಅರುಣ " ಎಂದೂ ಇದೆ)ಎಂಬ ಅರಸನಿದ್ದ, ಪರಾಕ್ರಮಿಯೂ ಪರಮ ಧಾರ್ಮಿಕನೂ ಆಗಿದ್ದ ಅವನಿಗೆ ಸತ್ಯವ್ರತನೆಂಬ ಮಗನಿದ್ದ. "ಸತ್ಯವ್ರತ " ಎಂಬ ಹೆಸರಿನಿಂದ ಆತ "ತ್ರಿಶಂಕು " ಎಂದು ಕರೆಸಿಕೊಂಡು ಅದೇ ಹೆಸರಿನಿಂದ ಲೋಕದಲ್ಲಿ ಪ್ರಖ್ಯಾತನಾದ (ವಿಖ್ಯಾತ ").ಪ್ರಾಜ್ಞನಾದ ಗುರುವೊಬ್ಬನನ್ನು ಉಪೇಕ್ಷಿಸಿ ಅವಮಾನಿಸಿದರೆ ಶಿಶ್ಯನಿಗಾಗಬಹುದಾದ ನಷ್ಟ ಏನು ಎಷ್ಟು ಎಂಬುದನ್ನು ಪುರಾಣದ ಕೆಲವು ಕಥೆಗಳು ಸಾರುತ್ತವೆ. ದೇವಗುರುಗಳಾದ ಬೃಹಸ್ಪತಿಗಳು ಇಂದ್ರಸಭೆಯಲ್ಲಿ ಗೌರವ ಸಿಗಲಿಲ್ಲ ಎಂದು ಹೊರಟು ಹೋದ ಮೇಲೆ ಇಂದ್ರನಿಗಾದ ಪರಾಭವ ದೊಡ್ಡದು.. ಬೇರೆ ಗುರುಗಳನ್ನು ಆರಿಸಿಕೊಂಡು.. ಇಂದ್ರ ಪದವಿಯನ್ನೇ ತೊರೆಯಬೇಕಾದ ಪರಿಸ್ಥಿತಿಯೂ ಒದಗಿ ಬಂತು. ಇನ್ನು ಕುಲಗುರುಗಳಾದ ವಶಿಷ್ಠರನ್ನು ತ್ಯಜಿಸಿ ಮತ್ತೊಂದು ಪೌರೋಹಿತ್ಯಕ್ಕೆ ಆಶ್ರಯಿಸಿದ ತ್ರಿಶಂಕುವಿನ ಕಥೆಯೇ ವಿಚಿತ್ರವಾದದ್ದು. ಸಹಜವಾಗಿಯೇ ಕುಲದ ಹಿನ್ನೆಲೆ ಮತ್ತು ರಕ್ತಗತವಾದ ಪರಾಕ್ರಮದಿಂದ... ಅದೆಲ್ಲವನ್ನೂ ಇಮ್ಮಡಿಗೊಳಿಸುವ ತಾರುಣ್ಯದಿಂದ ಸತ್ಯವ್ರತ ಪ್ರಮತ್ತನಾಗಿದ್ದ. ಆ ಸಂದರ್ಭದಲ್ಲಿ ಮೊದಲ ತಪ್ಪು ಮಾಡುತ್ತಾನೆ. ಬ್ರಾಹ್ಮಣರ ಅಗ್ರಹಾರದಲ್ಲಿ ಮದುವೆ ಸಿದ್ಧತೆ ನಡೆಯುತ್ತಿರುತ್ತದೆ. ವರನನ್ನು ವರಿಸಬೇಕಾದ ವಧುವನ್ನು ಸತ್ಯವ್ರತ ಬಯಸಿರುತ್ತಾನೆ. ಹಾಗಾಗಿಯೇ ವಿವಾಹ ಮಂಟಪದಲ್ಲಿ ವರನಿಗೆ ಮಾಲೆಯಿಕ್ಕಿದ ವಧುವನ್ನು ಎಳೆದು ತರುತ್ತಾನೆ. ಕುಪಿತರಾದ ಬ್ರಾಹ್ಮಣರು ಅರಸನಾದ ಸತ್ಯವ್ರತನ ತಂದೆಗೆ ದೂರಿಡುತ್ತಾರೆ.. ತ್ರಯ್ಯಾರುಣ ಮಗನ ಕಾರ್ಯದಿಂದ ಕೋಪಗೊಳ್ಳುತ್ತಾನೆ. ದುಷ್ಕಾರ್ಯ ಮಾಡಿದ ಸತ್ಯವ್ರತನನ್ನು ರಾಜ್ಯದಿಂದಲೇ ಹೊರ ಹಾಕುತ್ತಾನೆ. ನಾನೆಲ್ಲಿ ಬದುಕಲಿ ಎಂದು ಮಗ ಕೇಳಿದಾಗ ಕೋಪದಿಂದಲೇ "ಚಂಡಾಲರ ಜೊತೆ ಹೋಗು" ಎಂದು ಹೇಳುತ್ತಾನೆ. ರಾಜ್ಯದಿಂದ ಹೊರಬಂದ ಸತ್ಯವ್ರತನಿಗೆ ಚಾಂಡಾಲರ ಸಂಗವೇ ಏರ್ಪಡುತ್ತದೆ. ಅವರೊಂದಿಗೇ ಬದುಕತೊಡಗುತ್ತಾನೆ. ಇತ್ತ ತ್ರಯ್ಯಾರುಣ ಮಗನನ್ನು ಹೊರಹಾಕಿದಮೇಲೆ ಮತ್ತೊಬ್ಬ ಮಗನನ್ನು ಪಡೆಯಬೇಕು ಎಂಬ ಆಶಯದಿಂದ ತಪಸ್ಸು ಮಾಡಲು ಅರಣ್ಯಕ್ಕೆ ಹೋಗಿ ಬಿಡ್ತುತ್ತಾನೆ. ಕುಲಪುರೋಹಿತರಾದ ವಶಿಷ್ಟರ ನಿರ್ದೇಶನದಲ್ಲಿ ರಾಜ್ಯಾಡಳಿತ ನಡೆದರೂ ಅರಾಜಕವಾದ ರಾಜ್ಯವನ್ನು ಅನಾವೃಷ್ಟಿ ಭಾಧಿಸುತ್ತದೆ. ನಿರಂತರವಾದ ಹನ್ನೆರಡು ವರ್ಷಗಳ ಬರಗಾಲದಿಂದ ಪ್ರಜಾಜನರು ಬಳಲಿಹೋಗುತ್ತಾರೆ. ಇದೇ ಸಂದರ್ಭದಲ್ಲಿ ವಿಶ್ವಾಮಿತ್ರ (ಕೌಶಿಕ) ತನ್ನ ಹೆಂಡತಿ ಮತ್ತು ಮಕ್ಕಳನ್ನು ಇದೇ ರಾಜ್ಯದಲ್ಲಿ ಬಿಟ್ಟು ತಪಸ್ಸಿಗಾಗಿ ಕೌಶಿಕೀ ತೀರಕ್ಕೆ ಹೋಗಿರುತ್ತಾನೆ. ತನ್ನ ಐದು ಜನ ಮಕ್ಕಳೊಂದಿಗೆ ವಿಶ್ವಾಮಿತ್ರರ ಪತ್ನಿ ವಾಸವಾಗಿರುತ್ತಾಳೆ. ಭೀಕರವಾದ ಬರಗಾಲದಿಂದ ಅವಳ ಬದುಕೂ ದುಸ್ತರವಾಗುತ್ತದೆ. ಬೇರೆ ದಾರಿ ಕಾಣದೇ ಐವರು ಮಕ್ಕಳಲ್ಲಿ ಮದ್ಯದ ಮಗನನ್ನು ಮಾರಾಟ ಮಾಡಿಬಿಡಲು ಯೋಚಿಸಿ ದರ್ಭೆಯ ಹಗ್ಗವನ್ನು ಮಾಡಿ ಮಗನ ಕತ್ತಿಗೆ ಕಟ್ಟಿ ಬೀದಿ ಬೀದಿಗಳಲ್ಲಿ ಕರೆದುಕೊಂಡು ಬರುತ್ತಾಳೆ. ಇದನ್ನು ಸತ್ಯವ್ರತ ನೋಡುತ್ತಾನೆ. ಇಂತಹ ಸ್ಥಿತಿಗೆ ಕಾರಣವೇನೆಂದು ಕೇಳಿದಾಗ ತನಗೆ ಒಂದು ಹೊತ್ತಿನ ಆಹಾರಕ್ಕೂ ದಾರಿ ಇಲ್ಲದ ಅನಿವಾರ್ಯ ಸ್ಥಿತಿಯನ್ನು ಆಕೆ ಹೇಳಿಕೊಳ್ಳುತ್ತಾಳೆ. ಋಷಿ ಪತ್ನಿಯ ಆ ಧ್ಯೆನ್ಯ ಸ್ಥಿತಿಯನ್ನು ನೋಡಿದ ಸತ್ಯವ್ರತ ಆಕೆಗೂ.. ಅವಳ ಮಕ್ಕಳಿಗೂ ದಿನವೂ ಆಹಾರ ಒದಗಿಸುವ ವಾಗ್ದಾನ ಮಾಡಿ ಮಾರಾಟಕ್ಕೆ ಕಟ್ಟಿದ ಮಗುವಿನ ಕುತ್ತಿಗೆಯ ದರ್ಭೆಯ ದಾರವನ್ನು ಬಿಚ್ಚಿಸುತ್ತಾನೆ. ಮಾರಾಟಕ್ಕಾಗಿ ಕುತ್ತಿಗೆಗೆ ದರ್ಭೆಯ ಹಗ್ಗವನ್ನು ಕಟ್ಟಿಸಿಕೊಂಡ ಕಾರಣ ಆ ವಿಶ್ವಾಮಿತ್ರ ಪುತ್ರ ''ಗಾಲವ '' ಎಂದು ಹೆಸರಾದ ಎಂದು ದೇವೀ ಭಾಗವತದಲ್ಲಿದೆ. ಆದರೆ "ಗಾಲವ '' ಎಂಬ ವಿಶ್ವಾಮಿತ್ರ ಶಿಷ್ಯನ ಬಗ್ಗೆ ಬಹಳ ಕಡೆ ಉಲ್ಲೇಖ ಇದೆ. ಗಾಲವನೆಂಬ ವಿಶ್ವಾಮಿತ್ರ ಶಿಷ್ಯನ ಗುರುದಕ್ಷಿಣೆಯ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ. ಹೀಗೆ ವಿಶ್ವಾಮಿತ್ರರ ಪತ್ನಿಗೂ ಮಕ್ಕಳಿಗೂ ಆಹಾರ ಒದಗಿಸುವ ಹೊಣೆ ಹೊತ್ತ ಸತ್ಯವ್ರತ ದಿನವೂ ಬೇಟೆಯಾಡಿ ಅವರಿಗೆ ಬೇಕಾಗುವಷ್ಟು ಆಹಾರವನ್ನು ಅವರ ಆಶ್ರಮದ ಹೊರಬಾಗದಲ್ಲಿದ್ದ ಒಂದು ಮರದ ಕೊಂಬೆಗೆ ಕಟ್ಟಿ ಬರುತ್ತಿದ್ದ. ಇದನ್ನು ಅವರು ತೆಗೆದುಕೊಂಡು ಹೋಗಿ ಬೇಯಿಸಿ ತಿನ್ನುತ್ತಿದ್ದರು. ಹೀಗೇ ದಿನವೂ ನಡೆಯುತ್ತಿತ್ತು. ಸತ್ಯವ್ರತ ರಾಜ್ಯಭ್ರಷ್ಟನಾದಾಗಿನಿಂದಲೂ ತಮ್ಮ ಕುಲಪುರೋಹಿತರಾದ ವಶಿಷ್ಟರ ಬಗ್ಗೆ ಬೇಸರ.. ದ್ವೇಷ.. ಮನಸ್ಸಿನಲ್ಲಿತ್ತು. ತಂದೆಯವರು ಶಿಕ್ಷೆ ಪ್ರಕಟಿಸಿದರೂ ಇನ್ನೂ ಸಪ್ತಪದಿ ಪೂರೈಸದ ಹೆಣ್ಣನ್ನು ವಿವಾಹ ಮಂಟಪದಿಂದ ತಂದದ್ದು ಶಾಸ್ತ್ರ ವಿರೋಧವಲ್ಲ ಎಂದು ವಶಿಷ್ಟರು ಹೇಳಿ ತನಗೆ ಒದಗಿದ ಶಿಕ್ಷೆಯನ್ನು ಅವರು ತಡೆಯಬಹುದಿತ್ತು.. ಆದರೆ ಹಾಗೆ ಮಾಡದೇ ತನ್ನನ್ನು ವಂಚಿಸಿದರು ಎಂದೇ ಭಾವಿಸಿದ್ದ. ಹೀಗೆಯೇ ಒಂದು ದಿನ ಆಹಾರಕ್ಕಾಗಿ ಕಾಡೆಲ್ಲಾ ಸುತ್ತಿದರೂ ಒಂದು ಪ್ರಾಣಿಯೂ ಸಿಗಲಿಲ್ಲ. ಇವನಿಗೂ ಸುತ್ತಿ.. ಸುತ್ತಿ ಹಸಿವು ಬಾಯಾರಿಕೆಗಳು ಬಾಧಿಸತೊಡಗಿತು. ಹಾಗೆ ತಿರುಗುತ್ತಾ ವಶಿಷ್ಟರ ಆಶ್ರಮದ ಬಳಿ ಬಂದಾಗ ಅಲ್ಲಿ ಆಶ್ರಮದ ಗೋವು ಮೇಯುತ್ತಿರುವುದು ಕಾಣಿಸಿತು. ಒಂದು ಕಡೆ ಬಾಧಿಸುತ್ತಿರುವ ಹಸಿವು ಜೊತೆಗೆ ವಶಿಷ್ಟರ ಬಗ್ಗೆ ಮೊದಲೇ ಇದ್ದ ಬೇಸರ... ಹಾಗಾಗಿ ಆ ಗೋವನ್ನೇ ಕೊಂದ.. ಹೊಟ್ಟೆ ತುಂಬುವಷ್ಟು ಆ ಮಾಂಸವನ್ನೇ ತಿಂದ ಉಳಿದಿದ್ದನ್ನು ವಿಶ್ವಾಮಿತ್ರರ ಆಶ್ರಮಕ್ಕೆ ತಂದು ಇಟ್ಟುಹೋದ.. ಇತ್ತ ರಾತ್ರಿಯಾದರೂ ಗೋವು ಆಶ್ರಮಕ್ಕೆ ಬರದಿದ್ದಾಗ ವಶಿಷ್ಠರಿಗೆ ನಡೆದ ವಿದ್ಯಮಾನ ತಿಳಿಯುತ್ತದೆ. ಕೋಪಗೊಂಡ ವಶಿಷ್ಠರು ಸತ್ಯವ್ರತನನ್ನು ಕುರಿತು " ಅಂದು ಬೇರೊಬ್ಬ ವರನಿಗೆ ನಿಶ್ಚಯಿಸಲ್ಪಟ್ಟ ವಧುವನ್ನು ಅಪಹರಿಸಿದ್ದು ಒಂದು ಪಾಪ.. ಈಗ ಗೋವನ್ನು ವಧಿಸಿದ್ದು ಒಂದು ಪಾಪ.. ಹಾಗೆಯೇ ವಧಿಸಿದ ಗೋವಿನ ಮಾಂಸವನ್ನು ಸಂಸ್ಕರಿಸದೇ ತಿಂದದ್ದು ಒಂದು ಪಾಪ.. ಹೀಗೆ ಮೂರು ಪಾಪಗಳನ್ನು ಮಾಡಿದ ನೀನು "ತ್ರಿಶಂಕು " ಎಂದು ಶಪಿಸಿದರು. ಮೊದಲೇ ರಾಜ್ಯಭ್ರಷ್ಟನಾದವ ಜೊತೆಗೆ ವಶಿಷ್ಟರ ಶಾಪ.. ಮಾನಸಿಕವಾಗಿ ಕುಸಿದುಹೋದ ಸತ್ಯವ್ರತ.. ಊರೂರು ತಿರುಗಿ ಶಾಪದ ಪರಿಮಾರ್ಜನೆಗೆ ಬೇಕಾದ ಯಾವುದಾದರೂ ಯಾಗವನ್ನು ಮಾಡಿಸಿಕೊಡಿ ಎಂದು ಬ್ರಾಹ್ಮಣರಲ್ಲಿ ಅಂಗಾಲಾಚಿದ ಆದರೆ ಯಾರೊಬ್ಬರೂ ಗುರುಶಾಪಕ್ಕೆ ಪ್ರತಿಯಾಗಿ ಏನನ್ನು ಮಾಡಲೂ ಮುಂದಾಗಲಿಲ್ಲ. ಕಡೆಗೆ ಬೇರೆ ದಾರಿ ಸಿಗದೇ ಬದುಕೇ ಬೇಡ ಎಂದೆನ್ನಿಸಿ ಕಾಡಿಗೆ ತೆರಳಿದ. ಆ ಹೊತ್ತಿಗೆ ಅವನು ಯಾರಿಂದಲೋ ದೇವಿಯ ಉಪಾಸನೆ ಮಾಡುವುದನ್ನು ಕಲಿತಿದ್ದ.. ಕಾಡಿಗೆ ಬಂದವನೇ ತನಗೆ ಬೇಕಾದ ಚಿತೆಯನ್ನು ತಾನೇ ನಿರ್ಮಿಸಿದ.. ದೇವಿಯನ್ನು ಸ್ತುತಿಸುತ್ತಾ ಇನ್ನೇನು ಉರಿಯುತ್ತಿರುವ ಚಿತೆಗೆ ಹಾರಬೇಕೆನ್ನುವಾಗ ದೇವಿ ಪತ್ಯಕ್ಷಳಾಗುತ್ತಾಳೆ. ಆತ್ಮಾಹುತಿಗೆ ಮುಂದಾದ ತ್ರಿಶಂಕುವನ್ನು ತಡೆಯುತ್ತಾ "ಮಗೂ ನೀನು ಸಾಯಬೇಕಾದವನಲ್ಲ.. ನಿನ್ನ ತಂದೆಯು ನಿನಗೆ ರಾಜ್ಯದ ಪಟ್ಟವನ್ನು ಕಟ್ಟುತ್ತಾನೆ ಅದಕ್ಕೆ ಪೂರಕವಾಗಿಯೇ ಅವನ ಮಂತ್ರಿಗಳು ನಿನ್ನನ್ನು ಅರಸುತ್ತಾ ಬರುವವರಿದ್ದಾರೆ.. ನಿನ್ನನ್ನು ರಾಜ್ಯಾಧಿಕಾರಿಯನ್ನಾಗಿ ಮಾಡಿ ಅವನು ವಾನಪ್ರಸ್ತಕ್ಕೆ ಹೋಗುತ್ತಾನೆ ಅಲ್ಲಿಯವರೆಗೆ ನಿರೀಕ್ಷಿಸು..." ಎಂದು ಹೇಳಿ ಅದೃಷ್ಯಳಾಗುತ್ತಾಳೆ. ದೇವೀ ಕೃಪೆಯಿಂದ ಆತ್ಮಹತ್ಯೆಯ ಯೋಚನೆಯನ್ನು ಬಿಟ್ಟ ತ್ರಿಶಂಕುವಿಗೆ ಇರುವ ನಿರೀಕ್ಷೆ ರಾಜ್ಯದಿಂದ ತಂದೆ ಕಳುಹಿಸುವ ಆಮಂತ್ರಣ...🙏🙏 ಉಳಿದಿದ್ದು ಮುಂದಿನ ಭಾಗದಲ್ಲಿ....

Saturday, June 7, 2025

ಅಮೃತಾಪಹರಣ 2ನೇ ಭಾಗ

ಮುಂದುವರಿದ ಭಾಗ... ತನ್ನೆರಡು ಕಾಲುಗಳಲ್ಲಿ ಗಜಕಚ್ಛಪರನ್ನೂ ಕೊಕ್ಕಿನಲ್ಲಿ ವಾಲಖಿಲ್ಯರಿದ್ದ ವಿಸ್ತಾರವಾದ ಆಲದ ಕೊಂಬೆಯನ್ನೂ ಕಚ್ಚಿಕೊಂಡು ಹಾರಿದ ಗರುಡನಿಗೆ ಅವರನ್ನು ಇಳಿಸಲು ಸರಿಯಾದ ಸ್ಥಳವೇ ಕಾಣಿಸಲಿಲ್ಲ... ಒಂದುಕಡೆ ತಪೋಭಂಗವಾಯಿತು ಎಂದು ಖುಷಿಗಳು ಶಾಪ ಕೊಟ್ಟಾರು ಎಂಬ ಭಯ... ಹಾರುತ್ತಾ ಮತ್ತೆ ತಂದೆಯವರಾದ ಕಶ್ಯಪರು ತಪಸ್ಸು ಮಾಡುತಿದ್ದ ಗಂಧಮಾದನ ಪರ್ವತಕ್ಕೆ ಬಂದ, ಇವನು ಬರುತಿದ್ದಂತೆಯೇ ನಡೆದ ಅಚಾತುರ್ಯ ಕಶ್ಯಪರ ಅರಿವಿಗೆ ಬಂತು.. ಮಗನನ್ನುದ್ದೇಶಿಸಿ "ಮಗೂ ಆತುರ ಪಡಬೇಡ ನೀನು ಹೊತ್ತು ತರುತ್ತಿರುವ ಕೊಂಬೆಯಲ್ಲಿ ತಪಸ್ಸನ್ನಾಚರಿಸುತ್ತಿರುವವರು ಸಾಮಾನ್ಯರೆಂದು ಭಾವಿಸದಿರು ಕೇವಲ ಸೂರ್ಯಕಿರಣಗಳನ್ನೇ ಆಹಾರವಾಗಿ ಸ್ವೀಕರಿಸಿ ಘೋರವಾದ ತಪೋನಿರತರು ವಾಲಖಿಲ್ಯರು ಹಾಗಾಗಿ ಎಚ್ಚರಿಕೆಯಿಂದ ವರ್ತಿಸು" ಎಂದು ಹೇಳಿ .. ವಾಲಖಿಲ್ಯರನ್ನು ಕುರಿತು ''ಇವನು ನನ್ನ ಮಗ ವೈನತೇಯ ತಾಯಿಯ ದಾಸ್ಯವನ್ನು ಬಿಡಿಸಲೂ.. ಲೋಕಕಲ್ಯಾಣಕ್ಕಾಗಿಯೂ ಕಾರ್ಯನಿರತನಾಗಿದ್ದಾನೆ ಅವನ ಕಾರ್ಯದಿಂದ ನಿಮಗೆ ತೊಂದರೆಯಾದರೆ ಕ್ಷಮಿಸಿಬಿಡಿ " ಎಂದು ಹೇಳುತ್ತಾರೆ. ಕಶ್ಯಪರ ಮಾತನ್ನು ಮನ್ನಿಸಿದ ವಾಲಖಿಲ್ಯರು ಆ ಬೃಹದಾಕಾರದ ಕೊಂಬೆಯಿಂದ ಕೆಳಗಿಳಿದು ತಪಸ್ಸನ್ನು ಮುಂದುವರಿಸಲು ಹಿಮಾಲಯದತ್ತ ತೆರಳುತ್ತಾರೆ. ಗರುಡ ಆ ಕೊಂಬೆಯನ್ನು ಕಚ್ಚಿಕೊಂಡೇ ತೊದಲು ನುಡಿಯಲ್ಲಿ ಕೊಂಬೆಯನ್ನು ಎಸೆಯಲು ಸೂಕ್ತ ಸ್ಥಳವನ್ನು ತೋರಿಸಲು ಕೇಳಿಕೊಳ್ಳುತ್ತಾನೆ. ಆಗ ಕಶ್ಯಪರು ನೂರು ಯೋಜನ ದೂರದಲ್ಲಿರುವ ಒಂದು ನಿರ್ಜನವಾದ ಪರ್ವತವನ್ನು ತೋರಿಸುತ್ತಾರೆ. ಅವರ ಮಾತಿನಂತೆಯೇ ಅತ್ತ ತೆರಳಿದ ಗರುಡ ಆ ಕೊಂಬೆಯನ್ನು ಅಲ್ಲಿ ಎಸೆದು.. ಅದೇ ಪರ್ವತಾಗ್ರದಲ್ಲಿ ಕುಳಿತು ತಾನು ಹಿಡಿದುಕೊಂಡಿದ್ದ ಗಜಕಚ್ಛಪರನ್ನು ತಿಂದು ಮುಗಿಸುತ್ತಾನೆ. ಹೊಟ್ಟೆತುಂಬಿದ ಅನುಭವವಾಗುತ್ತದೆ. ಮುಂದೆ ಅಮೃತವನ್ನು ತರಲು ದೇವಲೋಕದತ್ತ ಪ್ರಯಾಣ ಆರಂಭಿಸುತ್ತಾನೆ. ಇತ್ತ ದೇವಲೋಕದಲ್ಲಿ ಉತ್ಪಾತಗಳು ಉಂಟಾಗತೊಡಗುತ್ತದೆ. ದುಷ್ಟರಾದ ಅಸುರಾರೋ ಆಕ್ರಮಣ ಮಾಡಿದರೋ ಎಂದು ದೇವತೆಗಳು ಭಯಭೀತರಾಗುತ್ತಾರೆ. ದೇವೇಂದ್ರ ಸುರಗುರುಗಳಾದ ಬೃಹಸ್ಪತಿಗಳ ಬಳಿಗೆ ತೆರಳಿ ಆಗುತ್ತಿರುವ ಉತ್ಪಾತಗಳಿಗೆ ಕಾರಣವೇನೆಂದು ಕೇಳುತ್ತಾನೆ. ಆಚಾರ್ಯ ಬೃಹಸ್ಪತಿ ಗರುಡ ಅಮೃತವನ್ನು ಅಪಹರಿಸಲು ಬರುತ್ತಿರುವ ಬಗ್ಗೆ ಹೇಳುತ್ತಾರೆ. ಕೂಡಲೇ ಅಮೃತಬಾಂಡದ ರಕ್ಷಣೆಗಿರುವ ಬಲವನ್ನು ಹೆಚ್ಚಿಸಲಾಗುತ್ತದೆ. ಸುರರೆಲ್ಲರೂ ಆಕ್ರಮಣವನ್ನು ಎದುರಿಸಲು ಸರ್ವಸನ್ನದ್ಧರಾಗಿ ನಿಲ್ಲುತ್ತಾರೆ. ದೇವಲೋಕವನ್ನು ಪ್ರತೀಶಿಸಿದ ಗರುಡನಿಗೆ ಪ್ರಬಲ ಪ್ರತಿರೋಧವೇ ಎದುರಾಗುತ್ತದೆ. ಆಕ್ರಮಿಸಲು ಮುಂದಾದ ದೇವತೆಗಳನ್ನು ತನ್ನ ಕಾಲಿನಿಂದ ಒದೆಯುತ್ತಾ ಕೊಕ್ಕಿನಿಂದ ಘಾಸಿಗೊಳಿಸುತ್ತಾ.. ರೆಕ್ಕೆಗಳಿಂದ ಬಡಿಯುತ್ತಾ ಓಡಿಸ ತೊಡಗುತ್ತಾನೆ. ಸುರರು.. ಸುರ ಪಕ್ಷಪಾತಿಗಳಾಗಿ ಬಂದ ಬಲವೂ ಗರುಡನ ಸಾಮರ್ಥ್ಯದ ಸಮ್ಮಖದಲ್ಲಿ ಪಲಾಯನ ಮಾಡಬೇಕಾದ ಸ್ಥಿತಿ ಉಂಟಾಗುತ್ತದೆ. ಅವರನ್ನೆಲ್ಲಾ ಹಿಮ್ಮೆಟ್ಟಿಸಿ ಅಮೃತಬಾಂಡವಿರುವ ಸ್ಥಳಕ್ಕೆ ಬರುತ್ತಾನೆ.. ಅಲ್ಲಿ ನೋಡಿದರೆ ಅಮೃತವಿರುವ ಪ್ರದೇಶವನ್ನು ತಲುಪಲಾಗದಂತೆ ವರ್ತುಲಾಕಾರದಲ್ಲಿ ಅಗ್ನಿ ಧಗಧಗಿಸುತ್ತಿರುತ್ತದೆ. ಅದನ್ನು ಪ್ರವೇಶಿಸುವುದು ದುಃಸಾಧ್ಯವೆಂದು ಅರಿತ ಗರುಡ ಹಿಂತಿರುಗಿ ಬಂದು ತನ್ನ ಮುಖವನ್ನು ಎಂಟುಸಾವಿರದ ಒಂದುನೂರು ಮುಖಗಳನ್ನಾಗಿಸಿಕೊಂಡು ಪ್ರತಿಯೊಂದು ಬಾಯಿಯಲ್ಲಿಯೂ ಹಲವು ನದಿಗಳ ಜಲವನ್ನು ತುಂಬಿಕೊಂಡು ಹಿಂತಿರುಗಿ ಬಂದು ಉರಿಯುತ್ತಿರುವ ಆ ಆಗ್ನಿಯಮೇಲೆ ಉಗುಳಿಬಿಡುತ್ತಾನೆ. ಕೂಡಲೇ ಬಡಬಾನಲದಂತೆ ಉರಿಯುತ್ತಿದ್ದ ಅಗ್ನಿ ಶಾಂತವಾಗುತ್ತದೆ. ಮುಂದೆ ಸಾಗಬೇಕೆನ್ನುವಾಗ ಹರಿತಾದ ಅರೆಗಳಿಂದ ಕೂಡಿದ ಒಂದು ಉಕ್ಕಿನ ಯಂತ್ರ ಸುತ್ತಲೂ ವೇಗವಾಗಿ ತಿರುಗುತ್ತಾ ಇರುತ್ತದೆ. ಕ್ಷಣಕಾಲ ಯೋಚಿಸಿದ ಗರುಡ ತನ್ನ ದೇಹವನ್ನು ಕುಗ್ಗಿಸಿಕೊಂಡು ಅಣುರೂಪದಿಂದ ಆ ಅರೆಗಳ ಮದ್ಯದಲ್ಲಿಯೇ ನುಸುಳಿಕೊಂಡು ದಾಟಿಬಿಡುತ್ತಾನೆ,ಮತ್ತೆ ಮುಂದೆ ನೋಡಿದರೆ ಘೋರವಾದ ವಿಷವುಳ್ಳ ಎರಡು ಸರ್ಪಗಳು ಸುತ್ತಲೂ ನೋಡುತ್ತಾ ಕಾಯುತ್ತಿರುತ್ತವೆ. ಕೇವಲ ಕಣ್ಣಿನಿಂದ ನೋಡಿದರೂ ಸಾಕು ಅವುಗಳ ವಿಷ ಪ್ರಭಾವಕ್ಕೆ ಜೀವಿಗಳು ಸತ್ತು ಹೋಗಬೇಕು.. ಅಷ್ಟು ಕ್ರೂರವಾದ ಆ ಸರ್ಪಗಳ ಕಣ್ಣೇ ಕಾಣಿಸದಂತೆ ತನ್ನ ರೆಕ್ಕೆಯಿಂದ ದೂಳನ್ನು ಎಬ್ಬಿಸಿ ಮತ್ತೆ ತನ್ನ ರೆಕ್ಕೆಗಳಿಂದ ಬಡಿದು.. ಕೊಕ್ಕಿನಿಂದ ಸೀಳಿ ಹಾಕುತ್ತಾನೆ. ಮುಂದೆ ಎತ್ತರದ ವೇದಿಕೆಯಲ್ಲಿ ಬಂಗಾರದ ಕುಂಭದಲ್ಲಿ ಅಮೃತವನ್ನು ಇರಿಸಲಾಗಿತ್ತು. ಗರುಡ ಅದನ್ನು ಎತ್ತಿಕೊಂಡು ಹಿಂತಿರುಗಿ.. ತಿರುಗುತ್ತಿರುವ ಉಕ್ಕಿನ ಯಂತ್ರವನ್ನು ಒದೆದು ಒಡೆದುಹಾಕಿ ಮೇಲೆ ಹಾರಿ ಸಾಗುತ್ತಾನೆ. ದೇವತೆಗಳು ವಿಶಿಷ್ಟವಾದ ತಮ್ಮ ಆಯುಧಗಳನ್ನು ಗರುಡನತ್ತ ಪ್ರಯೋಗಿಸಿದರೂ ಯಾವ ಪ್ರಯೋಜನವೂ ಆಗಲಿಲ್ಲ, ಅಮೃತಬಾಂಡವನ್ನು ಹಿಡಿದು ಗಗನಮಾರ್ಗದಲ್ಲಿ ಸಾಗತೊಡಗುತ್ತಾನೆ. ತನಗೆ ಅಮೃತ ದೊರೆತರೂ ಅದನ್ನು ತಾನು ಸೇವಿಸದೇ ಪರರಿಗಾಗಿ ಕೊಂಡೊಯ್ಯುತ್ತಿರುವ ಗರುಡನ ಗುಣವನ್ನು ಕಂಡು ಸಂತೋಷಗೊಂಡ ಮಹಾವಿಷ್ಣು ಗರುಡನಿಗೆ ಇದಿರಾಗುತ್ತಾನೆ. ''ನಿನ್ನ ಈ ಪರಾಕ್ರಮ ತ್ಯಾಗಬಾವವನ್ನು ಕಂಡು ಸಂತುಷ್ಟನಾಗಿದ್ದೇನೆ ನಿನಗೇನು ವರ ಬೇಕು ಕೇಳು" ಎಂದಾಗ "ನಿನ್ನ ಧ್ವಜದಲ್ಲಿ ನನಗೆ ಸ್ಥಾನ ಕೊಡು " ಎಂದು ಕೇಳಿಕೊಳ್ಳುತ್ತಾನೆ. ಆಗಲಿ ಎಂದು ವಿಷ್ಣು ಅನುಗ್ರಹಿಸುತ್ತಾನೆ. ಹಾಗೆಯೇ ಪರಾಕ್ರಮಿಯಾದ ಗರುಡ "ನನ್ನಿಂದ ನಿನಗೇನು ಸಹಾಯವಾಗಬೇಕೆಂದು ಕೇಳುತ್ತಾನೆ. "ನೀನು ನನಗೆ ವಾಹನವಾಗಿ ಬೇಕು" ಎಂದು ವಿಷ್ಣು ಹೇಳಿದಾಗ ಸಂತೋಷದಿಂದ ಒಪ್ಪುತ್ತಾನೆ. ಹಾಗಾಗಿಯೇ ಮಹಾವಿಷ್ಣು "ಗರುಡಧ್ವಜ" ನೂ "ಗರುಡವಾಹನ " ನೂ ಆಗಿದ್ದು. ಪರಮಾತ್ಮನಿಂದ ಅನುಗ್ರಹಿತನಾದ ಗರುಡ ಮುಂದೆ ಸಾಗುತ್ತಿದ್ದಾಗ ಮತ್ತೆ ದೇವೇಂದ್ರ ವಜ್ರಧಾರಿಯಾಗಿ ಎದುರಾಗುತ್ತಾನೆ. ಪ್ರತಿಭಟಿಸಿದ ದೇವೇಂದ್ರನಿಂದ ಹೋರಾಟದಲ್ಲಿ ವಜ್ರಾಯುಧದ ಪ್ರಯೋಗವಾಗುತ್ತದೆ. ವಜ್ರಾಯುಧ ಗರುಡನನ್ನು ಘಾತಿಸಲು ಅಸಾಧ್ಯವಾದರೂ ಗರುಡ ಇಂದ್ರನನ್ನು ಕುರಿತು "ಅಯ್ಯಾ ದೇವೇಂದ್ರ.. ನೀನು ಯಾವ ಆಯುಧವನ್ನು ಪ್ರಯೋಗಿಸಿದರೂ ಅವು ನನ್ನನ್ನು ಏನೂ ಮಾಡಲಾರವು ಆದರೆ... ಈ ವಜ್ರಾಯುಧದ ಹಿನ್ನೆಲೆ ಏನು ಎನ್ನುವುದನ್ನು ಅರಿತಿದ್ದೇನೆ. ನಿರಂತರ ತಪಸ್ಸನ್ನು ಆಚರಿಸಿದ ತಪಸ್ವಿಯ ತ್ಯಾಗ ಇದರಲ್ಲಿದೆ ಹಾಗಾಗಿ ಇದು ನನ್ನನ್ನು ಫಾತಿಸಲಾಗದೇ ವ್ಯರ್ಥವಾಯಿತು ಎಂದಾಗಕೂಡದು ಅದಕ್ಕಾಗಿಯೇ ಇದೋ ನೋಡು ನನ್ನ ರೆಕ್ಕೆಯಲ್ಲಿರುವ ಒಂದು ಗರಿಯನ್ನು ಕೆಡವಿದ್ದೇನೆ" ಎಂದು ಗರಿಯನ್ನು ಬೀಳಿಸುತ್ತಾನೆ. ಅವನ ರೆಕ್ಕೆಯಿಂದ ಸುವರ್ಣಮಯ ತೇಜದಿಂದ ಗರಿಯೊಂದು ಕೆಳಗೆ ಬೀಳುತ್ತದೆ. ಅದನ್ನು ಕಂಡು "ಸುಪರ್ಣ..ಸುಪರ್ಣ '' ಎಂದು ಎಲ್ಲರೂ ಕೊಂಡಾಡುತ್ತಾರೆ. ಹಾಗಾಗಿಯೇ ಗರುಡನಿಗೆ "ಸುಪರ್ಣ " ಎಂಬ ಹೆಸರೂ ಬಂತು. ಗರುಡನ ಪರಾಕ್ರಮವನ್ನು ಕಂಡು ಸೋಲೊಪ್ಪಿಕೊಂಡ ಇಂದ್ರ ಸ್ನೇಹಹಸ್ತವನ್ನು ಬಯಸುತ್ತಾನೆ. ಒಪ್ಪಿದ ಗರುಡನಲ್ಲಿ "ನಿನಗೆ ಪ್ರಯೋಜನವಿಲ್ಲದ ಈ ಅಮೃತವನ್ನು ಯಾಕೆ ಕೊಂಡೊಯ್ಯುತ್ತಿದ್ದೀ..ಮರಳಿ ಕೊಟ್ಟುಬಿಡು" ಎಂದಾಗ.. "ಇದರಿಂದ ನನ್ನ ತಾಯಿಯ ದಾಸ್ಯ ವಿಮೋಚನೆಯಾಗಬೇಕು ಹಾಗಾಗಿ ಇದನ್ನು ಒಯ್ಯುತ್ತಿದ್ದೇನೆ..ಆದರೆ ಯಾವ ಕಾರಣಕ್ಕೂ ಸರ್ಪಗಳಿಗೆ ಕುಡಿಯಲು ಅವಕಾಶ ಮಾಡಿಕೊಡುವುದಿಲ್ಲ..ನಾನು ಅವುಗಳ ಮುಂದೆ ಇದನ್ನು ಇಟ್ಟ ಕೂಡಲೇ ನೀನು ಇದನ್ನು ಕೊಂಡೊಯ್ಯಬಹುದು" ಎಂದು ಹೇಳುತ್ತಾನೆ. ಇಂದ್ರನಿಗೆ ಸಂತೋಷವಾಗಿ ವರವೇನು ಬೇಕು ಎಂದು ಕೇಳಿದಾಗ ಸರ್ಪಗಳು ತನ್ನ ತಾಯಿಗೆ ಮಾಡಿದ ಮೋಸವನ್ನು ನೆನಪಿಸಿಕೊಂಡು '' ದುಷ್ಟರಾದ ಆ ಸರ್ಪಗಳೇ ತನಗೆ ಆಹಾರವಾಗಬೇಕೆಂದು ಕೇಳಿಕೊಳ್ಳುತ್ತಾನೆ. ಇಂದ್ರನು ವರರೂಪವಾಗಿ ಅದನ್ನು , "ಅಸ್ತು" ಎನ್ನುತ್ತಾನೆ. ಹಾಗೆ ಇಂದ್ರನನ್ನೂ ಹಿಂಬಾಲಿಸಲು ಹೇಳಿ ಅಮೃತದೊಂದಿಗೆ ತಾಯಿಯ ಬಳಿಗೆ ಬರುತ್ತಾನೆ. ಹೊರಟ ಕಾರ್ಯದಲ್ಲಿ ಯಶ ಸಾಧಿಸಿ ಬಂದ ಮಗನನ್ನು ನೋಡಿ ವಿನತೆಗೆ ಸಂತೋಷವಾಗುತ್ತದೆ. ವರರೂಪವಾಗಿ "ನಿನಗೆ ಮುಪ್ಪು.. ಮರಣ ಭಾಧಿಸದೇ ಇರಲಿ" ಎಂದು ಹೇಳುತ್ತಾಳೆ. ಕದ್ರು ಸುತರಾದ ಸರ್ಪಗಳ ಬಳಿ ಅಮೃತಕಲಶದೊಂದಿಗೆ ಸಾಗುತ್ತಾರೆ. " ನೀವು ಬಯಸಿದ ಅಮೃತವನ್ನು ತಂದಿದ್ದೇನೆ ಈ ಕ್ಷಣವೇ ನನ್ನ ತಾಯಿ ದಾಸಿಯಲ್ಲ ಎನ್ನುವುದನ್ನು ನೀವು ಘೋಷಿಸಬೇಕು '' ಎಂದಾಗ ಅಮೃತವನ್ನು ಕಂಡ ಸಂತೋಷದಲ್ಲಿ ಎಲ್ಲರೂ "ವಿನತೆ ಇನ್ನು ದಾಸಿಯಲ್ಲ" ಎಂದು ಹೇಳುತ್ತಾರೆ. ಆಗ ತಂದ ಅಮೃತಕಲಶವನ್ನು ಪವಿತ್ರವಾದ ದರ್ಭೆ ಬೆಳೆದ ಸ್ಥಳದಲ್ಲಿ ಇಟ್ಟು... . " ಇದನ್ನು ಸ್ನಾನಾದಿಗಳನ್ನು ಪೂರೈಸಿ ಶುಚಿರ್ಭೂತರಾಗಿ ಸೇವಿಸಿ '' ಎಂದು ಹೇಳುತ್ತಾನೆ. ಸರ್ಪಗಳು ಆತುರಾತುರವಾಗಿ ನದಿಯತ್ತ ಧಾವಿಸುತ್ತವೆ. ಇದೇ ಸಂದರ್ಭ ಕಾಯುತ್ತಿದ್ದ ದೇವೇಂದ್ರ ಅಮೃತಕಲಶವನ್ನು ಎತ್ತಿಕೊಂಡು ದೇವಲೋಕದತ್ತ ಸಾಗುತ್ತಾನೆ. ಇತ್ತ ಸ್ನಾನ ಸಂಧ್ಯಾದಿಗಳನ್ನು ಪೂರೈಸಿದ ಸರ್ಪಗಳು ಅಮೃತವಿದ್ದ ಸ್ಥಳಕ್ಕೆ ಧಾವಿಸಿ ಬರುತ್ತವೆ. ಇರಿಸಿದ ಅಮೃತಕಲಶವಿಲ್ಲ... ಆದರೂ ಆಮೃತ ಕಲಶವನ್ನಿಟ್ಟ ಸ್ಥಳದಲ್ಲಿದ್ದ ದರ್ಭೆಹುಲ್ಲುಗಳ ಮೇಲೆ ಅಮೃತ ಬಿದ್ದಿರಬಹುದೆಂಬ ಭ್ರಮೆಯಿಂದ ಆ ಧರ್ಭೆ ಹುಲ್ಲುಗಳನ್ನೇ ನೆಕ್ಕತೊಡಗುತ್ತವೆ. ಹರಿತವಾದ ಗರಿಯನ್ನು ಹೊಂದಿದ ದರ್ಭೆಯನ್ನು ನೆಕ್ಕಿದ ಕಾರಣದಿಂದ ಸರ್ಪಗಳ ನಾಲಿಗೆ ಸೀಳಿ ಇಭ್ಭಾಗವಾಯಿತು. ಅಂದಿನಿಂದ ಎಲ್ಲ ಸರ್ಪ ಸಂತತಿಯ ನಾಲಿಗೆಯೂ ಸೀಳಾಗಿಯೇ ಇದೆ. ಪವಿತ್ರವಾದ ಅಮೃತವನ್ನು ಇಟ್ಟಕಾರಣ... ಅಮೃತಸ್ಪರ್ಷವಾದ ದರ್ಭೆ ಪವಿತ್ರವಾಯಿತು.🙏🙏 ಹೊಸದೊಂದು ಕಥೆಯೊಂದಿಗೆ ಮುಂದಿನ ಬರಹ🙏

Friday, June 6, 2025

ಅಮೃತಾಪಹರಣ

ಸವತಿ ಮತ್ತು ಅವಳ ಮಕ್ಕಳ ಬೇಡಿಕೆಯನ್ನು ಕೇಳಿದ ವಿನತೆಗೆ ದುಃಖವಾಗುತ್ತದೆ. ಯಾರಿಂದಲೂ ಈಡೇರಿಸಲು ಅಸಾಧ್ಯವಾದ ಬೇಡಿಕೆಯನ್ನೇ ಇಟ್ಟಿದ್ದರು. ಹಾಗಾಗಿಯೇ ಎಂತವರಿಗೂ ದುರ್ಲಭವಾದ ಅಮೃತವನ್ನು ತರುವ ಪ್ರಯತ್ನ ವ್ಯರ್ಥ ಎಂದು ಮಗನಾದ ಗರುಡನಲ್ಲಿ ಹೇಳುತ್ತಾಳೆ. ಆದರೆ ಎಷ್ಟೇ ಕಷ್ಠವಾದ ಕಾರ್ಯವನ್ನಾದರೂ ಮಾಡುತ್ತೇನೆ ಎಂದು ಗರುಡ ಧೈರ್ಯವನ್ನು ತುಂಬುತ್ತಾನೆ. ಹಾಗೂ ತಾನು ಅಮೃತವನ್ನು ತರುವ ಕಾರ್ಯಕ್ಕೆ ಮುಂದಾಗುವುದಾಗಿಯೂ ಆ ಮೊದಲು ತನ್ನ ಹಸಿವನ್ನು ನೀಗಿಸಲು ಆಹಾರವನ್ನು ತೋರಿಸುವಂತೆಯೂ ಕೇಳಿಕೊಳ್ಳುತ್ತಾನೆ. ಆಗ ವಿನತೆ ಸಮುದ್ರ ಮಧ್ಯದಲ್ಲಿರುವ ದ್ವೀಪವೊಂದರಲ್ಲಿ ದುಷ್ಟರಾದ ನಿಷಾದರ ಇರುವನ್ನು ಹೇಳಿ ಅವರನ್ನು ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳಲು ಹೇಳುತ್ತಾಳೆ, ಜೊತೆಗೆ ಯಾವುದೇ ಕಾರಣಕ್ಕೂ ಬ್ರಾಹ್ಮಣರನ್ನು ಹಿಂಸಿಸಕೂಡದೆಂದು ಹೇಳುತ್ತಾಳೆ. ಮರುಕ್ಷಣದಲ್ಲಿಯೇ ಗರುಡನ ಪ್ರಶ್ನೆ " ಅಮ್ಮಾ ಬ್ರಾಹ್ಮಣರನ್ನು ಗುರುತಿಸುವ ಬಗೆ ಹೇಗೆ?" ಉತ್ತರಿಸಲು ಹಲವಿದ್ದರೂ ವಿನತೆ ಸರಳವಾಗಿ ಹೇಳಿದಳು. "ಯಾರನ್ನು ನುಂಗುವಾಗ ನಿನ್ನ ಗಂಟಲು ಬಿಸಿಯಾಗುತ್ತದೋ ಮುಳ್ಳು ಚುಚ್ಚಿದ ಅನುಭವವಾಗುವುದೋ ಅವರನ್ನು ಬ್ರಾಹ್ಮಣರೆಂದು ತಿಳಿ" ಗರುಡನಿಗೆ ಅರ್ಥವಾಯಿತು, ಆಗಲಿ ಎಂದು ಹೇಳಿ ತಾಯಿಗೆ ವಂದಿಸಿ ಆಶಿರ್ವಾದ ಪಡೆದು ಹೊರಡುತ್ತಾನೆ. ನೇರವಾಗಿ ಶರಧಿಮಧ್ಯದಲ್ಲಿರುವ ದುರುಳ ನಿಷಾಧರ ದ್ವೀಪಕ್ಕೆ ಬಂದು ಅವರನ್ನು ನುಂಗತೊಡಗುತ್ತಾನೆ. ನುಂಗುತ್ತಾ ನುಂಗುತ್ತಾ ಒಬ್ಬನನ್ನು ನುಂಗುವಾಗ ತಾಯಿ ಹೇಳಿದ ಅನುಭವವಾಗುತ್ತದೆ. ಗಂಟಲಲ್ಲಿ ಚುಚ್ಚಿದ ಅನುಭವ.. ಕೂಡಲೇ ಅವನನ್ನು ಉಗುಳುತ್ತಾನೆ. ತಪ್ಪಾಯಿತು ಕ್ಷಮಿಸಿ... ಈ ನಿಷಾಧರ ಮಧ್ಯದಲ್ಲಿ ವಾಸಿಸುವ ತಾವು ಯಾರೆಂದು ಕೇಳಲು "ನಾನೊಬ್ಬ ಬ್ರಾಹ್ಮಣ ತಿರುಗಾಡುತ್ತಾ ಈ ನಿಷಾಧರ ಊರಿಗೆ ಬಂದೆ ಒಬ್ಬಳು ನಿಷಾಧ ಸ್ತ್ರೀಯನ್ನೇ ವಿವಾಹವಾದೆ..ಅವಳಿಂದ ಮಕ್ಕಳೂ ಜನಿಸಿದರು, ಮಡದಿ ಮಕ್ಕಳನ್ನು ಬಿಟ್ಟು ಹೋಗಲಾರದೇ ಅವರೊಂದಿಗೇ ವಾಸ ಮಾಡುತ್ತಿದ್ದೇನೆ" ಎಂದು ಹೇಳುತ್ತಾನೆ. ಆ ಬ್ರಾಹ್ಮಣನಿಂದ ಬೀಳ್ಕೊಂಡು ಅಲ್ಲಿಂದ ಮುಂದೆ ಹಾರುತ್ತಾನೆ, ಅಷ್ಟು ಬೇಡರನ್ನು ತಿಂದಮೇಲೂ ಗರುಡನ ಹಸಿವು ಇಂಗಲಿಲ್ಲ.. ಆವಾಗ ಇನ್ನು ಆಹಾರವನ್ನು ತಂದೆಯಲ್ಲಿಯೇ ಕೇಳಬೇಕೆಂದು ನೇರವಾಗಿ ಕಶ್ಯಪರನ್ನು ಅರಸಿ ಸಾಗುತ್ತಾನೆ. ತಂದೆಯನ್ನು ಕಂಡು ವಂದಿಸಿಕೊಳ್ಳುತ್ತಾನೆ. ಸಂತೋಷದಿಂದ ಮಗನನ್ನು ಬರಮಾಡಿಕೊಂಡ ಕಶ್ಯಪರು ಆಶೀರ್ವದಿಸಿ ಮೈದಡುವುತ್ತಾರೆ. ತಂದೆಯಲ್ಲಿ ಅಮ್ಮ ಕೊಟ್ಟ ಆಹಾರ ದಲ್ಲಿ ಸ್ವಾರಸ್ಯವಿಲ್ಲ... ಹಾಗಾಗಿ ತನ್ನನ್ನು ಭಾಧಿಸುತ್ತಿರುವ ಹಸಿವಿನ ಬಗ್ಗೆ ಕೇಳಿಕೊಳ್ಳುತ್ತಾನೆ. ಆಗ ಕಶ್ಯಪರು ಸಮೀಪದಲ್ಲಿರುವ ಒಂದು ಸರೋವರವನ್ನು ತೋರಿಸಿ ಅಲ್ಲಿಯೇ ವಾಸಮಾಡುವ ಒಂದು ಆಮೆ ಮತ್ತು ಆ ಆಮೆಯ ಮೇಲಿನ ದ್ವೇಷದಿಂದ ಅದರೊಂದಿಗೆ ಕಾದಾಡಲು ಬರುವ ಒಂದು ಗಜವನ್ನು ತಿನ್ನಲು ಹೇಳುತ್ತಾರೆ. ಗರುಡ ಆ ಗಜಕಚ್ಛಪರ ದ್ವೇಷದ ಹಿನ್ನೆಲೆ ಏನೆಂದು ಕೇಳಲು ಅವರ ಪೂರ್ವಜನ್ಮದ ಕಥೆಯನ್ನು ಕಶ್ಯಪರು ಹೇಳುತ್ತಾರೆ. ಬಹಳ ಹಿಂದೆ ವಿಭಾವಸು ಮತ್ತು ಸುಪ್ರತೀಕರೆಂಬ ಇಬ್ಬರು ಋಷಿ ಕುಮಾರರಿದ್ದರು. ಸಹೋದರರಾದ ಅವರಲ್ಲಿ ಕಿರಿಯನಾದ ಸುಪ್ರತೀಕ ತಂದೆಯ ಮರಣಾನಂತರ ಆಸ್ತಿಯನ್ನು ವಿಭಾಗಿಸಿ ತನ್ನ ಪಾಲನ್ನು ಕೊಡಲು ಅಣ್ಣನಲ್ಲಿ ಕೇಳುತ್ತಾನೆ. ಅಣ್ಣ ವಿಭಾವಸು ತಂದೆಯಿಂದ ಬಂದ ಸಂಪತ್ತನ್ನು ವಿಭಾಗಿಸಲು ವಿರೋಧಿಸುತ್ತಾನೆ. ಅದರಿಂದಾಗುವ ದುಷ್ಪರಿಣಾಮಗಳು ಮತ್ತು ಅವಿಭಕ್ತರಾಗಿದ್ದರೆ ಆಗುವ ಅನುಕೂಲಗಳ ಬಗ್ಗೆ ತಿಳಿಹೇಳುತ್ತಾನೆ. ಆದರೆ ಅಣ್ಣನ ಹಿತನುಡಿಗಳನ್ನು ಕೇಳುವ ಮನಸ್ಸು ಸುಪ್ರತೀಕನಿಗಿರಲಿಲ್ಲ, ಮತ್ತೆ ಮತ್ತೆ ಕೇಳಿದಾಗ ವಿಭಾವಸುವಿಗೆ ಕೋಪ ಬರುತ್ತದೆ. ಕೋಪದಿಂದ "ನೀನು ಆನೆಯಾಗಿ ಹುಟ್ಟು " ಎಂದು ಶಾಪ ಕೊಡುತ್ತಾನೆ. ಅಣ್ಣ ಶಪಿಸಿದ್ದರಿಂದ ಸುಪ್ರತೀಕ ನಿಗೂ ಸಿಟ್ಟು ಬಂತು... "ನೀನು ಆಮೆಯಾಗಿ ಜನಿಸು " ಎಂದು ಪ್ರತಿಶಾಪ ಕೊಡುತ್ತಾನೆ. ಅವರೇ ಗಜಕಚ್ಛಪರಾಗಿ ಜನಿಸಿ ಈ ಜನ್ಮದಲ್ಲಿಯೂ ಪೂರ್ವದ್ವೇಷವನ್ನು ಮರೆಯದೇ ಹೋರಾಡುತಿದ್ದಾರೆ..ಆ ಗಜವು ಆರು ಯೋಜನ ಎತ್ತರವೂ ಹನ್ನೆರಡು ಯೋಜನ ಉದ್ದವೂ ಇದೆ.. ಹಾಗೆಯೇ ಆಮೆಯು ಮೂರು ಯೋಜನ ಎತ್ತರವೂ ಹತ್ತು ಯೋಜನಗಳ ಸುತ್ತಳತೆಯನ್ನೂ ಹೊಂದಿದೆ ಅವರೆಡನ್ನು ತಿಂದರೆ ನಿನ್ನ ಹಸಿವು ನಿವಾರಣೆಯಾಗುತ್ತದೆ ಎಂದು ಕಶ್ಯಪರು ಹೇಳುತ್ತಾರೆ. ಜೊತೆಯಲ್ಲಿ ಅಮೃತವನ್ನು ತರಲು ಹೊರಟ ನಿನ್ನ ಕಾರ್ಯಕ್ಕೆ ಯಶಸ್ಸು ಒದಗಲಿ.. ದೇವತೆಗಳೊಂದಿಗಿನ ಹೋರಾಟದಲ್ಲಿ ವಿಜಯವಾಗಲಿ ಎಂದು ಆಶೀರ್ವದಿಸಿ ಕಳುಹಿಸುತ್ತಾರೆ. ತಂದೆಯ ನಿರ್ದೇಶನದಂತೆ ಸರೋವರದ ಬಳಿಗೆ ಬಂದ ಗುರುಡನಿಗೆ ತಮ್ಮ ಉಗ್ರ ಹೋರಾಟದಿಂದ ಪವಿತ್ರವಾದ ಸರೋವರದ ಜಲವನ್ನೇ ಕಲುಕುತ್ತಿರುವ ಗಜ ಕಚ್ಛಪರು ಕಾಣಿಸುತ್ತಾರೆ. ತನ್ನ ಒಂದು ಕಾಲಿನ ತೀಕ್ಷ್ಣವಾದ ಉಗುರಿನಿಂದ ಗಜನನ್ನೂ ಇನ್ನೊಂದು ಕಾಲಿನಿಂದ ಕಚ್ಛಪನನ್ನೂ ಕುಕ್ಕಿ ಮೇಲೆತ್ತಿಕೊಂಡು ಹಾರುತ್ತಾನೆ. ಹಾಗೆ ಅವರನ್ನು ಎತ್ತಿಕೊಂಡು ಗಗನ ಮಾರ್ಗದಲ್ಲಿ ಹೊರಟ ಗರುಡನಿಗೆ ಒಂದು ಕಡೆ ಕುಳಿತು ಅವರನ್ನು ತಿನ್ನಲು ಯೋಗ್ಯ ಸ್ಥಳ ಕಾಣಿಸಲಿಲ್ಲ..ಹಾರುತ್ತಾ ಸಾಗುವಾಗ ಸಾವಿರ ಯೋಜನ ವಿಸ್ತೀರ್ಣವುಳ್ಳ ಒಂದು ಆಲದ ಮರ ಕಾಣಿಸುತ್ತದೆ. ಆಗಸದಲ್ಲಿ ಸಾಗುತ್ತಿರುವ ಗರುಡನನ್ನು ಆ ಮರವೇ "ಅಯ್ಯಾ ಇದೋ ನನ್ನ ಕೊಂಬೆಗಳು ನೂರು ಯೋಜನ ವಿಸ್ತೀರ್ಣವುಳ್ಳದ್ದಾಗಿವೆ ಇಲ್ಲಿ ಕುಳಿತು ನೀನು ತಂದ ಆಹಾರವನ್ನು ತಿನ್ನಬಹುದು " ಎಂದು ಹೇಳುತ್ತದೆ. ಗರುಡನಿಗೂ ಅದು ಸರಿಯನಿಸಿ ಆ ಕೊಂಬೆಯ ಮೇಲೆ ಕುಳಿತುಕೊಂಡಾಗ ಬೃಹದಾಕಾರ ಹೊಂದಿದ ಆ ಕೊಂಬೆಯೇ ಮುರಿಯುತ್ತದೆ. ಇನ್ನೇನು ಅಲ್ಲಿಂದಲೂ ಮೇಲೆ ಹಾರಬೇಕೆನ್ನುವಾಗ ಮುರಿದು ಕೆಳಗೆ ಬೀಳುತ್ತಿರುವ ಕೊಂಬೆಯಲ್ಲಿ ಸೂಕ್ಷ್ಮ ರೂಪದಲ್ಲಿರುವ ಹಲವು ಋಷಿಗಳು ತಲೆಕೆಳಗಾಗಿ ಜೋತಾಡಿಕೊಂಡು ತಪಸ್ಸನ್ನಾಚರಿಸುತ್ತಿರುವುದು ಕಾಣಿಸುತ್ತದೆ. ಅಯ್ಯೋ ಅವರ ತಪಸ್ಸು ಭಂಗವಾಗಕೂಡದೆಂದು ತ್ವರಿತವಾಗಿ ಬೀಳುತ್ತಿರುವ ಕೊಂಬೆಯನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಮತ್ತೆ ಮೇಲೆ ಹಾರುತ್ತಾನೆ. (ಅಲ್ಲಿ ಆ ಸ್ಥಿತಿಯಲ್ಲಿ ತಪಸ್ಸನ್ನು ಮಾಡುತ್ತಿದ್ದವರು "ವಾಲಖಿಲ್ಯ " ಎಂಬ ಋಷಿಗಳು ವಿಷ್ಣು ಪುರಾಣದ ಪ್ರಕಾರ ಕಶ್ಯಪರಿಗೆ ಕೃತು ನಾಮಕಳಾದ ಮಡದಿಯಲ್ಲಿ ಹುಟ್ಟಿದವರು ಸಂಖ್ಯೆಯಲ್ಲಿ ಅರವತ್ತು ಸಾವಿರ... ಗರುಡನ ಹುಟ್ಟಿಗೂ ಈ ವಾಲಖಿಲ್ಯರಿಗೂ ಒಂದು ಸಂಭಂಧ ಇದೆ ಹಿಂದೊಮ್ಮೆ ಕಶ್ಯಪರು ಒಂದು ಯಜ್ಞ ಸಂಕಲ್ಪ ಮಾಡುತ್ತಾರೆ, ಅದಕ್ಕೆ ಬೇಕಾದ ಸಮಿಧೆಗಳನ್ನು ತರಲು ಪುತ್ರರಿಗೆ ಆದೇಶಿಸುತ್ತಾರೆ., ಇಂದ್ರನೂ.. ವಾಲಖಿಲ್ಯರೂ ಕಾಡಿನಿಂದ ಸಮಿಧೆಗಳನ್ನು ತರಲು ಮುಂದಾಗುತ್ತಾರೆ.. ದೃಡಕಾಯನಾದ ಪರಾಕ್ರಮಿಯಾದ ಇಂದ್ರನಿಗೆ ಅದು ಕಷ್ಟದ ಕಾರ್ಯವೇನೂ ಅಲ್ಲ ಆದರೆ... ಒಂದು ಹೆಬ್ಬೆರೆಳಿನ ಗಾತ್ರದಲ್ಲಿ ಅರ್ಧದಷ್ಟು ಶರೀರ ಗಾತ್ರವನ್ನು ಹೊಂದಿದ್ದ ವಾಲಖಿಲ್ಯರಿಗೆ ಅದು ಪ್ರಯಾಸದಾಯಕವಾದ ಕೆಲಸ.. ಒಂದು ಮುತ್ತುಗದ ದಂಡವನ್ನು ಎಲ್ಲರೂ ಸೇರಿ ಪ್ರಾಯಾಸದಿಂದ ಎತ್ತಿ ತರುವಾಗ ಮಾರ್ಗದಲ್ಲಿ ಒಂದು ಗೋವಿನ ಹೆಜ್ಜೆಯಲ್ಲಿ ತುಂಬಿದ ನೀರನ್ನು ದಾಟಲಾಗದೇ ನಿಂತಿರುತ್ತಾರೆ..ಅದೇ ಮಾರ್ಗದಲ್ಲಿ ಬಂದ ಇಂದ್ರನಿಗದು ಕಾಣಿಸುತ್ತದೆ. ಅವರ ಸ್ಥಿತಿಗೆ ಅಪಹಾಸ್ಯ ಮಾಡುತ್ತಾ ಅವರನ್ನು ದಾಟಿ ಹೋಗುತ್ತಾನೆ. ಇಂದ್ರನ ಕಾರ್ಯದಿಂದ ಕುಪಿತರಾದ ವಾಲಖಿಲ್ಯರು ಅವನ ಅಹಂಕಾರವನ್ನು ಇಳಿಸಲು ಇನ್ನೊಬ್ಬ ಇಂದ್ರನನ್ನು ಸೃಷ್ಠಿಸುವ ಸಂಕಲ್ಪ ಮಾಡಿ ಅಲ್ಲೇ ಯಜ್ಞಕ್ಕೆ ತೊಡಗುತ್ತಾರೆ. ಇದನ್ನು ತಿಳಿದು ಭಯಗೊಂಡ ಇಂದ್ರ ಕಶ್ಯಪರ ಮೊರೆ ಹೋಗುತ್ತಾನೆ. ಕಶ್ಯಪರು ವಾಲಖಿಲ್ಯರ ಬಳಿಬಂದು ತ್ರಿಮೂರ್ತಿಗಳ ಸಂಕಲ್ಪದಂತೆ ಇಂದ್ರನಾದವನಿಗೆ ಪ್ರತಿಯಾಗಿ ಇಂದ್ರ ಸೃಷ್ಠಿ ಸರಿಯಲ್ಲ ಎಂದು ಮನವೊಲಿಸುತ್ತಾರೆ... ಜೊತೆಗೆ ನಿಮ್ಮ ಸಂಕಲ್ಪವೂ ವ್ಯರ್ಥವಾಗಕೂಡದು ಹಾಗಾಗಿ ನಿಮ್ಮ ಸಂಕಲ್ಪದಂತೆ ಹುಟ್ಟಿದವ ವಿಹಗೇಂದ್ರನಾಗಲಿ ಎಂದು ಹೇಳುತ್ತಾರೆ. ತಂದೆಯ ಮಾತನ್ನು ಒಪ್ಪಿದ ವಾಲಖಿಲ್ಯರು ನಾವು ಮಾಡಿದ ಸಂಕಲ್ಪವೂ ಇನ್ನು ಮುಂದೆ ನಿಮ್ಮದೇ ಎಂದು ಹೇಳಿ ಅದನ್ನು ಈಡೇರಿಸುವ ಹೊಣೆಯನ್ನು ಕಶ್ಯಪರಿಗೇ ಬಿಡುತ್ತಾರೆ. ಹಾಗೆ ವಾಲಖಿಲ್ಯರ ಸಂಕಲ್ಪ ಶಕ್ತಿಯೂ ಕಶ್ಯಪರ ತಪಸ್ಸಿನ ಫಲವೂ ಸೇರಿ ಹುಟ್ಟಿದವ ಗರುಡ. ) ಮುರಿದುಬೀಳುತ್ತಿರುವ ಆಲದಮರದ ಕೊಂಬೆಯನ್ನು ಕೊಕ್ಕಿನಲ್ಲಿಯೂ.. ಗಜಕಚ್ಛಪರನ್ನು ಕಾಲಿನಲ್ಲಿಯೂ ಗರುಡ ಎತ್ತಿಕೊಂಡು ಸಾಗುತ್ತಿರುವಾಗ ತಪೋನಿರತರಾದ ವಾಲಖಿಲ್ಯರಿಗೆ ಎಚ್ಚರವಾಗುತ್ತದೆ. ಗುರುತರವಾದ ಭಾರವನ್ನು ಎತ್ತಿಕೊಂಡು ಸಾಗುತ್ತಿರುವ ಇವ ಅತ್ಯಂತ ಪರಾಕ್ರಮಿಯೇ ಸರಿ ಹಾಗಾಗಿ ಇವ "ಗರುಡ" ಎಂದು ಕರೆಯುತ್ತಾರೆ.🙏🙏 ಉಳಿದದ್ದು ಮುಂದಿನ ಭಾಗದಲ್ಲಿ

Thursday, June 5, 2025

ಗರುಡ ಜನ್ಮ

ಜನಮೇಜಯನ ಸರ್ಪಯಾಗಕ್ಕೆ ಕಾರಣವಾದ ಘಟನೆಗಳನ್ನು ಬರೆಯುವಾಗ ಅಕ್ಕತಂಗಿಯರಾದ ವಿನತೆ ಮತ್ತು ಕದ್ರೂ ಇವರಲ್ಲಿ ಏರ್ಪಟ್ಟ ಪಂದ್ಯ... ಕದ್ರೂವಿನ ಕುತಂತ್ರದಿಂದ ಸೋತು ಅವಳಿಗೇ ದಾಸಿಯಾದ ವಿನತೆಯ ಬಗ್ಗೆ ಹೇಳಿದ್ದೆ. ಪ್ರಬಲನಾಗಿ ಹುಟ್ಟಬೇಕಾಗಿದ್ದ ಒಂದು ಮಗು ವಿನತೆಯ ಅಸೂಯೆ ಮತ್ತು ಆತುರದ ಕಾರಣದಿಂದ ಹೆಳವನಾಗಿ ಹೋದ.. ಆದರೂ ದೈವ ನಿರ್ಣಯವೇ ಬೇರೆ ..ಹೆಳವನಾದ ವಿನತೆಯ ಹಿರಿಯ ಪುತ್ರ ಅರುಣನೆಂಬ ನಾಮದಿಂದ ಸೂರ್ಯನಾರಾಯಣನ ರಥದ ಸಾರಥಿಯಾದ. ಇಲ್ಲಿ ಅರುಣನು ಸೂರ್ಯರಥದ ಸಾರಥಿಯಾಗಲೂ ಒಂದು ಘಟನೆ ಕಾರಣವಾಗುತ್ತದೆ. ಸಮುದ್ರ ಮಂಥನದ ಕಾಲದಲ್ಲಿ ಉದ್ಭವಿಸಿದ ಅಮೃತವನ್ನು ವಿಷ್ಣು ಮೋಹಿನಿ ರೂಪದಿಂದ ದೇವತೆಗಳಿಗೆ ಹಂಚುವ ಸಂಧರ್ಭ.. ದೇವತೆಗಳ ಪಂಕ್ತಿಯಲ್ಲಿ ರಾಕ್ಷಸನೊಬ್ಬ ವಂಚನೆಯಿಂದ ಕುಳಿತು ಅಮೃತ ಕುಡಿದಿದ್ದನ್ನು ಸೂರ್ಯ ಚಂದ್ರರು ನೋಡುತ್ತಾರೆ,ಮತ್ತು ಮಹಾವಿಷ್ಣುವಿಗೆ ಸೂಚಿಸುತ್ತಾರೆ. ಮಹಾವಿಷ್ಣು ಕೂಡಲೇ ಸುದರ್ಶನ ಪ್ರಯೋಗದಿಂದ ಆತನ ತಲೆಯನ್ನು ಕತ್ತರಿಸುತ್ತಾನೆ. ಆದರೆ ಅದಾಗಲೇ ಅಮೃತ ಅವನ ದೇಹದಲ್ಲಿ ಸೇರಿಹೋಗಿದ್ದರಿಂದ ರುಂಡ ಮುಂಡಗಳು ಬೇರೆಯಾದರೂ ಬೇರೆ ಬೇರೆಯಾಗಿಯೇ ಉಳಿದುಕೊಂಡು ರಾಹು ಕೇತುಗಳೆಂಬ ಹೆಸರಿನಿಂದ ಉಳಿದುಕೊಂಡುಬಿಡುತ್ತಾರೆ. ಇದಕ್ಕೆ ಕಾರಣರಾದ ಸೂರ್ಯ ಚಂದ್ರರ ಬಗ್ಗೆ ದ್ವೇಶದಿಂದ ಆಗಾಗ ಅವರನ್ನು ಪೀಡಿಸತೊಡಗುತ್ತಾರೆ. ಹೀಗೆ ರಾಹುಕೇತುಗಳ ಪೀಡನೆಗೆ ಒಳಗಾದ ಸೂರ್ಯನಿಗೆ ಸಿಟ್ಟು ಬರುತ್ತದೆ ದೇವತೆಗಳ ಹಿತಕ್ಕಾಗಿ ತಾವು ಮಾಡಿದ ಕಾರ್ಯವಾದರೂ ತಮಗೆ ಸಂಕಷ್ಟ ಬಂದಾಗ ದೇವತೆಗಳು ಸಹಾಯಕ್ಕೆ ಬರಲಿಲ್ಲ ಹಾಗಿದ್ದರೆ ತನ್ನ ತೀಕ್ಷ್ಣವಾದ ಕಿರಣಗಳಿಂದ ಲೋಕವನ್ನೇ ನಾಶ ಮಾಡಿಬಿಡುತ್ತೇನೆ ಎಂದು ಬಿಸಿಯಾದ ಕಿರಣಗಳನ್ನು ಹೊರಸೂಸತೊಡಗಿದ. ಇದರಿಂದ ಲೋಕಗಳು ಬಸವಳಿದವು ದೇವತೆಗಳು ಚಿಂತಿತರಾದವರು ಬ್ರಹ್ಮದೇವರ ಬಳಿ ಓಡಿದರು. ಬ್ರಹ್ಮದೇವರು ಸೂರ್ಯದೇವನ ಕಿರಣದ ಉರಿಯನ್ನು ಹೀರಿ ಲೋಕವನ್ನು ಉಳಿಸಬೇಕಾದರೆ ಕಷ್ಯಪ ಮುನಿಯಿಂದ ವಿನತೆಯಲ್ಲಿ ಜನಿಸಿದ ಅರುಣನಿಗೆ ಮಾತ್ರ ಸಾಧ್ಯ ಎನ್ನುತ್ತಾನೆ. ಆಗ ದೇವತೆಗಳು ಅರುಣನನ್ನು ಪ್ರಾರ್ಥಿಸಿ ಸೂರ್ಯನ ರಥದ ಸಾರಥಿಯನ್ನಾಗಿ ಮಾಡುತ್ತಾರೆ. ಅರುಣನು ಸೂರ್ಯದೇವನ ಸುಡುವ ಕಿರಣಗಳನ್ನು ತಾನು ಹೀರಿಕೊಂಡು ಲೋಕಗಳನ್ನು ಸಂರಕ್ಷಿಸುತ್ತಾನೆ. ಹಾಗಾಗಿಯೇ ಕಿರಣೋದಯದ ಪೂರ್ವದಲ್ಲಿಯೇ ಅರುಣೋದಯ.. ಎಂದು ಹೇಳುವುದು ರೂಢಿ. ಇತ್ತ ಕದ್ರೂವಿನ ದಾಸ್ಯವನ್ನು ಅಂಗೀಕರಿಸಿದ ವಿನತೆ ದುಃಖದಿಂದ ಉಳಿದ ಒಂದು ಮೊಟ್ಟೆಯನ್ನು ನಿರ್ಲಕ್ಷಿಸಿಯೇಬಿಟ್ಟಳು. ಆದರೆ ಆ ನಿಯಾಮಕನ ನಿರ್ಣಯ ಮೀರಲು ಯಾರಿಗೆ ಸಾಧ್ಯ..? ಉಳಿದ ಆ ಒಂದು ಮೊಟ್ಟೆ ಸುದೀರ್ಘ ಒಂದು ಸಾವಿರ ವರ್ಷಗಳ ಕಾಲ ಬೆಳವಣಿಗೆಯನ್ನು ಹೊಂದಿತು. ಕಾಲ ಪರಿಪಕ್ವವಾದಾಗ ತಾನಾಗಿಯೇ ತನ್ನ ಹೊರ ಕವಚವನ್ನು ಬೇಧಿಸಿ ಹೊರ ಬಂದಿತು. ವಿಸ್ತಾರಾದ ರೆಕ್ಕೆಗಳನ್ನು ಹೊಂದಿ..ಮೊನಚಾದ ಕೊಕ್ಕನ್ನು ಹೊಂದಿ ಸೂಕ್ಷ್ಮವಾದ ಕೆಂಪಡರಿದ ಕಣ್ಣುಗಳನ್ನು ಹೊಂದಿದ ಪಕ್ಷಿಯ ಆಕಾರ.. ಒಮ್ಮೆಲೇ ದೇವತೆಗಳು ಕೂಡ ಬೆದರಿದರು. ಹಾಗೆ ಹುಟ್ಟಿದವನೇ ಮಹಾಬಲಿಷ್ಠನಾದ ಗರುಡ.... ಅವನ ದೇಹದಿಂದ ಹೊರಸೂಸುವ ತೇಜಸ್ಸು ಅಗ್ನಿಯ ಜ್ವಾಲೆಯನ್ನೂ ಮೀರಿಸುತಿತ್ತು ಇದನ್ನು ನೋಡಿದ ದೇವತೆಗಳು ಅಗ್ನಿಯೇ ಲೋಕಗಳನ್ನು ದಹಿಸಲು ಇಂತಹ ರೂಪವನ್ನು ಹೊಂದಿದ್ದಾನೆಂದು ಭಾವಿಸಿ ಅಗ್ನಿಯ ಸ್ತುತಿ ಮಾಡಿದರು. ಪ್ರತ್ಯಕ್ಷನಾದ ಅಗ್ನಿದೇವನು ಆ ರೂಪದಲ್ಲಿ ಕಾಣಿಸುತ್ತಿರುವುದು ವಿನತೆ ಪುತ್ರನಾದ ಗರುಡ ಎನ್ನುತ್ತಾನೆ. ಆಗ ದೇವತೆಗಳು ಗರುಡನ ಬಳಿ ಬಂದು ಘೋರ ರೂಪವನ್ನು ಮರೆಯಾಗಿಸಿ ಶಾಂತನಾಗಲು ಪ್ರಾರ್ಥಿಸುತ್ತಾರೆ. ದೇವತೆಗಳು ಹಾಗೆ ಹೇಳಿದಾಗ ಗರುಡ ಒಮ್ಮೆ ತನ್ನ ದೇಹವನ್ನೇ ನೋಡಿಕೊಳ್ಳುತ್ತಾನೆ ಅವರ ಮಾತು ಸರಿಯೆನಿಸಿ ಶಾಂತನಾಗುತ್ತಾನೆ. ಇತ್ತ ವಿನತೆಗೆ ತನ್ನ ಇನ್ನೊಂದು ಮೊಟ್ಟೆಗೆ ಒಂದು ಸಾವಿರ ವರ್ಷಗಳಾಗಿದ್ದು ಅರಿವಿಗೆ ಬರುತ್ತದೆ. ಹಾಗಾಗಿಯೇ ಅದನ್ನು ಇರಿಸಿದ ಸ್ಥಳಕ್ಕೆ ಬರುತ್ತಾಳೆ, ಅಂಡ ಒಡೆದುಹೋಗಿರುತ್ತದೆ. ಎದುರಿಗೆ ಬೃಹದಾಕಾರದ ಪಕ್ಷಿ ಕಾಣಿಸುತ್ತದೆ. ಹೆದರಿಕೆಯಿಂದಲೇ ನೀನಾರು ಎಂದು ಗರುಡನಲ್ಲಿ ಕೇಳುತ್ತಾಳೆ. ಅವನು ಅದೇ ಮೊಟ್ಟೆಯಿಂದ ಉದಿಸಿದವ ತಾನೆಂದು ಹೇಳಿ ತಾಯಿಗೆ ನಮಸ್ಕರಿಸುತ್ತಾನೆ. ವಿನತೆಗೆ ಪ್ರಬಲನಾದ ಮಗನನ್ನು ಪಡೆದೆ ಎಂಬ ಸಂತೋಷವಾಗುತ್ತದೆ. ಆದರೂ ಕದ್ರೂವಿನ ದಾಸ್ಯ ನೆನಪಾಗಿ ಗರುಡನ ಹೆಗಲೇರಿಯೆ ಕದ್ರೂವಿನ ಬಳಿಗೆ ತೆರಳುತ್ತಾಳೆ. ಗರುಡನೂ ದೊಡ್ಡಮ್ಮನಿಗೆ ನಮಸ್ಕರಿಸುತ್ತಾನೆ. ವಿನತೆ ಆತ ತನ್ನ ಮಗನೆಂದು ಹೇಳಿದಾಗ "ಎಷ್ಟಾದರೂ ದಾಸಿಯ ಮಗ ದೂರನಿಲ್ಲು" ಎಂದು ಹಳಿಯುತ್ತಾಳೆ.( ವ್ಯಾಸ ಮಹಾಭಾರತದಲ್ಲಿ ಕದ್ರೂ ವಿನತೆಯ ಅಕ್ಕ ಎಂದೂ ಕವಿ ಪರಮದೇವನ ತುರಂಗ ಭಾರತದಲ್ಲಿ ಆಕೆ ವಿನತೆಯ ತಂಗಿ ಎಂಬುದಾಗಿಯೂ ಇದೆ.) ಹೀಗಿರುವಾಗ ಒಂದು ದಿನ ಕದ್ರೂ ವಿನತೆಯನ್ನು ಕರೆದು "ಸಮುದ್ರ ಮಧ್ಯದಲ್ಲಿ ವಿಶ್ವಕರ್ಮನಿಂದ ನಿರ್ಮಿತವಾದ ವಿಶಿಷ್ಟವಾದ ರಮಣಕವೆಂಬ ದ್ವೀಪವಿದೆಯಂತೆ, ಅದನ್ನು ನೋಡಬೇಕಾಗಿದೆ ನೀನು ನನ್ನನ್ನು ಹೊತ್ತುಕೊಂಡು ಆ ದ್ವೀಪಕ್ಕೆ ಹೋಗು ನನ್ನ ಮಕ್ಕಳಾದ ಸರ್ಪಗಳು ನಿನ್ನ ಮಗನಾದ ಗರುಡನ ಬೆನ್ನೇರಲಿ" ಎಂದು ಆಜ್ಞಾಪಿಸುತ್ತಾಳೆ. ವಿನತೆ ಹಾಗೆಯೇ ಕದ್ರೂವನ್ನು ಹೊತ್ತುಕೊಳ್ಳುತ್ತಾಳೆ. ನಾಗಗಳು ಗರುಡನ ಬೆನ್ನೇರುತ್ತಾರೆ. ಗಗನ ಮಾರ್ಗದಲ್ಲಿ ಸಾಗುವಾಗ ಗರುಡ ಸೂರ್ಯನಿಗೆ ಸಮೀಪಿಸುತ್ತಾನೆ. ಸೂರ್ಯನ ಶಾಖದಿಂದ ಅವನ ಬೆನ್ನೇರಿದ್ದ ಸರ್ಪಗಳು ಪ್ರಜ್ಞಾಹೀನರಾಗಿ ಬೀಳತೊಡಗುತ್ತವೆ. ದುಃಖಿತಳಾದ ಕದ್ರೂ ಇಂದ್ರನನ್ನು ಪ್ರಾರ್ಥಿಸುತ್ತಾಳೆ. ಪ್ರಸನ್ನನಾದ ಇಂದ್ರ ಮಳೆ ಸುರಿಸುತ್ತಾನೆ, ಮಳೆಯಿಂದ ತಂಪಾಗಿ ಇಳೆಯಲ್ಲಿ ಬಿದ್ದ ಸರ್ಪಗಳು ಮತ್ತೆ ಚೇತನ ಹೊಂದುತ್ತವೆ. ಪುನಃ ರಮಣಕ ದ್ವೀಪದೆಡೆಗೆ ಪ್ರಯಾಣಿಸಿ ಅತಿ ಮನೋಹರವಾದ ಆ ಪ್ರದೇಶವನ್ನು ಎಲ್ಲರೂ ತಲುಪುತ್ತಾರೆ. ಅಲ್ಲಿಯ ಸೌಂಧರ್ಯವನ್ನು ನೋಡುತ್ತಾ ಕದ್ರೂ ಮತ್ತು ಆಕೆಯ ಪುತ್ರರಾದ ಸರ್ಪಗಳು ವಿಹರಿಸತೊಡಗುತ್ತಾರೆ. ಕೆಲವು ಕಾಲ ಕಳೆದ ಮೇಲೆ, ಕದ್ರೂ ಮತ್ತು ಆಕೆಯ ಪುತ್ರರು ಬೇರೊಂದು ದ್ವೀಪಕ್ಕೆ ಕರೆದುಕೊಂಡು ಹೋಗಲು ಗರುಡನಿಗೆ ಹೇಳುತ್ತಾರೆ. ಆಗ ಗರುಡನಿಗೆ ಅವರು ಹೇಳುವ ಶೈಲಿಯಲ್ಲಿ ತಮ್ಮದು ದಾಸ್ಯದ ಬದುಕು ಎಂಬ ಅರಿವಾಗುತ್ತದೆ. ತಾಯಿಯನ್ನು ಕರೆದು "ಅಮ್ಮಾ ಈ ದುಃಸ್ತಿತಿಗೆ ಕಾರಣವೇನು" ಎಂದು ಕೇಳುತ್ತಾನೆ. ವಿನತೆ ದುಃಖದಿಂದ ಹಿಂದೆ ನಡೆದ ಘಟನೆಯನ್ನು ಹೇಳುತ್ತಾಳೆ. ತಾಯಿಯ ದಾಸ್ಯ ನಿವಾರಣೆಗೆ ಬದಲಾಗಿ ಏನು ತಂದುಕೊಡಲಿ ಎಂದು ಕದ್ರೂವಿನಲ್ಲಿ ಕೇಳಿದಾಗ ಮಕ್ಕಳಲ್ಲಿಯೂ ವಿಚಾರಮಾಡಿ ಹೇಗಿದ್ದರೂ ಅಸಾಧ್ಯವಾದುದನ್ನೇ ಕೇಳಬೇಕೆಂದು "ತಮಗೆ ಅಮೃತವನ್ನು ತಂದುಕೊಟ್ಟರೆ ವಿನತೆಯ ದಾಸ್ಯ ನಿವಾರಣೆ " ಎಂದು ಹೇಳುತ್ತಾಳೆ...🙏🙏 ಗರುಡನ ಹಸಿವಿನ ನಿವಾರಣೆ... ಅವೃತಾಪಹರಣ ಮುಂದಿನ ಭಾಗ.. .

Thursday, May 29, 2025

ಸರ್ಪ ಸತ್ರ ಮುಂದಿನ ಭಾಗ...

ಜನಮೇಜಯನ ಸರ್ಪ ಸತ್ರ.. ಮುಂದುವರಿದು... ವ್ಯವಸ್ಥಿತವಾದ ಯಜ್ಞಶಾಲೆ ನಿರ್ಮಾಣವಾಯಿತು. ಯಜ್ಞ ನಡೆಸಲು ಬೇಕಾದ ಋತ್ವಿಜರೂ ಸೇರಿದರು.. ಯಜ್ಞಕುಂಡದ ಪೂರ್ವಭಾಗದಲ್ಲಿ ಕುಳಿತು ಖುಗ್ವೇದ ಮಂತ್ರವನ್ನು ಪಠಿಸುವನನು ಹೋತೃ.. ಅದನ್ನು ನಿರ್ವಹಿಸಲು ಚ್ಯವನವಂಶೀಯನಾದ ಚಂಡಭಾರ್ಗವ ಸಿದ್ಧನಾದನು. ದಕ್ಷಿಣ ದಿಕ್ಕಿನಲ್ಲಿ ಕುಳಿತು ಯಜುರ್ವೇದ ಮಂತ್ರ ಪಠಣಮಾಡುವವ ಅಧ್ವರ್ಯು..ಅದಕ್ಕೆ ಪಿಂಗಳರು ಸಿದ್ದರಾದರು.. ಇನ್ನು ಹೋಮಕುಂಡದ ಪಶ್ಚಿಮ ದಿಕ್ಕಿನಲ್ಲಿ ಉಪಸ್ಥಿತರಿದ್ದು ಸಾಮವೇದದ ಮುಖೇನ ಯಜ್ಞವನ್ನು ನಡೆಸುವವರು ಉದ್ಘಾತೃ.. ಅದಕ್ಕೆ ಜೈಮಿನಿಗಳು ಸಿದ್ಧರಾದರು. ಯಜ್ಞ ಕುಂಡದ ಉತ್ತರ ಭಾಗದಲ್ಲಿ ಇದ್ದು ಅಥರ್ವಣ ವೇದವನ್ನು ಪಠಿಸುವವರು ಬ್ರಹ್ಮ.. ಅದಕ್ಕೆ ಶಾಙ್ಗ೯ರೆಂಬ ಬ್ರಾಹಣರು ಸಿದ್ದರಾದರು. ಇನ್ನು ಶಿಷ್ಯರನ್ನೊಡಗೂಡಿದ ವ್ಯಾಸ, ಉದ್ಧಾಲಕ, ಶ್ವೇತಕೇತು ಮುಂತಾದವರು ಬಂದು ಸೇರಿದರು. ಯಾಗಾರಂಭವಾಯಿತು... ಋತ್ವಿಜರು ಮಂತ್ರಗಳನ್ನು ಉಚ್ಛರಿಸುತ್ತಾ ಸ್ವಾಹಾಕಾರವನ್ನು ಹೇಳಿದಾಕ್ಷಣವೇ ಬೆಂಕಿಯನ್ನು ನೋಡಿ ಆಕರ್ಷಿತವಾಗಿ ಪತಂಗಗಳು ಬಂದು ಬೀಳುವಂತೆ ಸರ್ಪಗಳು ಬಂದು ಯಜ್ಞಕುಂಡದಲ್ಲಿದ್ದ ಅಗ್ನಿಯಲ್ಲಿ ಬಿದ್ದು ಆಹುತಿಯಾಗತೊಡಗಿದವು. ಆಹುತಿಯಾಗುವಾಗ ಆ ಸರ್ಪಗಳ ದೇಹದಿಂದ ಸಿಡಿದ ರಕ್ತ,ಮಾಂಸ, ಮಜ್ಜೆಗಳು ಕೋಡಿಯಾಗಿ ಹರಿಯತೊಡಗಿತು. ಈ ಸಂಧರ್ಭದಲ್ಲಿಯೇ ಯಜ್ಞ ವೇದಿಕೆಯಲ್ಲಿ ಒಂದು ವಿಶೇಷ ಘಟನೆ ನಡೆಯಿತು.. ಯಜ್ಞ ವೇದಿಕೆಯ ಬಳಿಗೆ ಒಂದು ನಾಯಿ ಬಂದು ಅಡ್ಡಾಡತೊಡಗಿತು. ಇದನ್ನು ನೋಡಿದ ಜನಮೇಜಯನ ಸಹೋದರರು ಅದನ್ನು ಹೊಡೆದು ಓಡಿಸಿದರು. ವಿಶೇಷವೆಂದರೆ ಅದು ದೇವಲೋಕದ " ಸರಮೆ " ಎಂಬ ನಾಯಿಯ ಮರಿಯಾಗಿತ್ತು ಪೆಟ್ಟು ತಿಂದ ಆ ನಾಯಿಯ ಮರಿ ನೇರವಾಗಿ ತಾಯಿಯ ಬಳಿ ಹೋಗಿ ದೂರಿಕೊಂಡಿತು. "ಅಮ್ಮಾ ನಾನು ಕೇವಲ ಕುತೂಹಲದಿಂದ ನೋಡಲು ಹೋದೆ..ಅವರು ಸಿದ್ಧಮಾಡಿದ ಹವಿಸ್ಸನ್ನು ನೋಡಿ ತಿನ್ನಲಿಲ್ಲ, ಯಾವ ವಸ್ತುವನ್ನೂ ಮೂಸಿ ಅಪವಿತ್ರಗೊಳಿಸಲೂ ಇಲ್ಲ..ಆದರೂ ನಿರಪರಾಧಿಯಾದ ನನ್ನನ್ನು ದಂಡಿಸಿದರು '' ಮಗನ ಮಾತನ್ನು ಕೇಳಿ ಸರಮೆಗೆ ಕನಿಕರವುಂಟಾಯಿತು. ನೇರವಾಗಿ ತಮ್ಮಂದಿರೊಂದಿಗೆ ಯಜ್ಞಮಾಡುತ್ತಿದ್ದ ಜನಮೇಜಯನಲ್ಲಿಗೆ ಬಂದಳು. ಯಾವುದೇ ಅಪರಾಧವನ್ನು ಮಾಡದಿರುವ ತನ್ನ ಮಗನನ್ನು ದಂಡಿಸಿದ ಕಾರಣವನ್ನು ಕೇಳಿದಳು. ಆದರೆ ಯಾರೊಬ್ಬರೂ ಸರಮೆಯ ಪ್ನಶ್ನೆಗೆ ಸೂಕ್ತ ಉತ್ತರ ಕೊಡಲಿಲ್ಲ. ಅವರು ಹಾಗೆ ತನ್ನನ್ನು ಉಪೇಕ್ಷಿಸಿದ್ದನ್ನು ಕಂಡು ಸರಮೆಗೆ ಕೋಪ ಬಂತು. ನಿರಪರಾಧಿಯಾದ ನನ್ನ ಮಗುವನ್ನು ದಂಡಿಸಿದ್ದಲ್ಲದೇ ನನ್ನನ್ನೂ ಉಪೇಕ್ಷೆ ಮಾಡುತ್ತಿರುವ ನೀವು ಸಂಕಲ್ಪಿಸಿರುವ ಈ ಯಾಗದ ಮದ್ಯದಲ್ಲಿಯೇ ಆತಂಕವುಂಟಾಗಲಿ ಎಂದು ಶಪಿಸಿ ಮಗನನ್ನು ಕರೆದುಕೊಂಡು ಹೋಯಿತು.( ಈ ಘಟನೆ ನಡೆದದ್ದು ಸರ್ಪಯಾಗದ ಪೂರ್ವದಲ್ಲಿ ಜನಮೇಜಯ ಮಾಡಿದ ಇನ್ನೊಂದು ಯಜ್ಞದಲ್ಲಿ ಎಂದೂ ಕೆಲವು ಕಡೆ ಇದೆ.) ಇತ್ತ ಯಜ್ಞ ಮುಂದುವರಿಯುತ್ತಲೇ ಇತ್ತು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸರ್ಪಗಳು ಅಗ್ನಿಯಲ್ಲಿ ಆಹುತಿಯಾಗುತ್ತಲೇ ಇದ್ದವು .. ಯಜ್ಞ ಕುಂಡಕ್ಕೆ ಬಂದು ಬೀಳುವಾಗ ಅವುಗಳ ಫೂತ್ಕಾರ.. ಚೀತ್ಕಾರ.. ಸುಡುತ್ತಿರುವ ಅವುಗಳ ದೇಹದಿಂದ ಹೊರಡುವ ಕಮಟುವಾಸನೆ ಇಡೀ ಭೂಮಂಡಲವನ್ನೇ ಆವರಿಸಿ ಕಲ್ಪಾಂತ್ಯದ ಭೀಕರತೆಯನ್ನು ಸೃಷ್ಟಿ ಮಾಡಿತ್ತು. ಬಹುಪಾಲು ಸರ್ಪಗಳು ಹೋಮಾಗ್ನಿಯಲ್ಲಿ ಬಿದ್ದು ಆಹುತಿಯಾಗುತ್ತಿದ್ದವು. ಭಯಗೊಂಡ ತಕ್ಷಕ ನೇರವಾಗಿ ದೇವಲೋಕಕ್ಕೆ ಓಡಿದ ಇಂದ್ರನಲ್ಲಿ ತನ್ನ ಭಯವನ್ನು ಹೇಳಿಕೊಂಡ, ಆಗ ಇಂದ್ರ ಸಮಾಧಾನದ ಮಾತನ್ನು ಹೇಳಿದ "ನೀನು ಹೆದರಬೇಕಾದ್ದಿಲ್ಲ ಆ ಕಾಲದಲ್ಲಿಯೇ ಬ್ರಹ್ಮ ದೇವರು ಅಭಯ ವಾಕ್ಯ ಹೇಳಿದ್ದಾರೆ ನಿಮ್ಮಲ್ಲಿಯೇ ಇರುವ ದುಷ್ಟ ಸರ್ಪಗಳ ನಾಶವಾಗುತ್ತದೆ. ಅಲ್ಲಿಯವರೆಗೆ ನೀನು ನನ್ನ ಅರಮನೆಯಲ್ಲಿ ನನ್ನೊಂದಿಗೇ ಇರು" ಎಂದು ಹೇಳಿದ. ಇಂದ್ರನ ಮಾತನ್ನು ಕೇಳಿ ತಕ್ಷಕನೂ ಸಮಾಧಾನದಿಂದ ಇಂದ್ರನೊಂದಿಗೇ ಇರತೊಡಗಿದ. ಇತ್ತ ನಾಗಲೋಕದಲ್ಲಿದ್ದ ವಾಸುಕಿಗೆ ಆತಂಕ ಹೆಚ್ಚಾಯಿತು. ಹೀಗೇ ಮುಂದುವರಿದರೆ ತಾನೂ ಋತ್ವಿಜರ ಮಂತ್ರಕ್ಕೆ ಅಧೀನನಾಗಿ ಅಗ್ನಿಯಲ್ಲಿ ಬೀಳಬೇಕಾದೀತು ಎಂದು ಯೋಚಿಸಿ... ಇಂತಹ ಸಂದರ್ಭ ಒದಗಿ ಬಾರದಿರಲಿ ಎಂದೇ ಅಲ್ಲವೇ ತಮ್ಮ ಸಹೋದರಿಯಾದ ಜರತ್ಕಾರು ಆಸ್ತೀಕನನ್ನು ಪಡೆದಿದ್ದು ಎನ್ನುವುದು ನೆನಪಿಗೆ ಬಂತು. ಕೂಡಲೇ ಸಹೋದರಿಯನ್ನು ಕರೆದು ನಡೆಯುತ್ತಿರುವ ಘಟನೆಯನ್ನು ವಿವರಿಸಿದ, ನಿನ್ನ ಪುತ್ರನಾದ ಆಸ್ತೀಕನನ್ನು ಕರೆದು ನಮ್ಮ ಸಂತತಿಯನ್ನು ಉಳಿಸಿಕೊಡಲು ಹೇಳು ಎಂದು ಕೇಳಿಕೊಂಡ. ಅಣ್ಣನಾದ ವಾಸುಕಿಯ ಮಾತಿನಂತೆಯೇ ಜರತ್ಕಾರು ಪುತ್ರ ಆಸ್ತೀಕನನ್ನು ಬರಮಾಡಿಕೊಂಡು ಕದ್ರೂವಿನ ಶಾಪದಿಂದ ತೊಡಗಿ ನಡೆದ ಎಲ್ಲಾ ಘಟನೆಗಳನ್ನೂ ಹೇಳುತ್ತಾಳೆ. ಮತ್ತು ತಾನು ಪುತ್ರನನ್ನು ಪಡೆದ ಉದ್ದೇಶವೇ ಸರ್ಪಕುಲದ ರಕ್ಷಣೆಗೆ ಎಂಬುದನ್ನೂ ತಿಳಿಸಿ ಕೊಡುತ್ತಾಳೆ. ತಾಯಿಯ ಮಾತನ್ನು ಕೇಳಿದ ಆಸ್ತೀಕ ತನ್ನ ಸೋದರ ಮಾವಂದಿರನ್ನೂ ಅವರ ಕುಲವನ್ನೂ ಉಳಿಸಲು ಬೇಕಾಗಿ ಜನಮೇಜಯನ ಸರ್ಪಯಾಗವನ್ನು ನಿಲ್ಲಿಸುವುದಾಗಿ ತಾಯಿಯಲ್ಲಿ ಹೇಳಿ ಅವಳಿಂದ ಅಪ್ಪಣೆ ಪಡೆದು ವಾಸುಕಿಯ ಬಳಿಗೆ ಬರುತ್ತಾನೆ. ದುಃಖ ತಪ್ತನಾದ ಸೋದರ ಮಾವನನ್ನು ಕಂಡು ಧೈರ್ಯದ ಮಾತುಗಳನ್ನಾಡುತ್ತಾನೆ. ಎಂತಹಾ ಸಂಧರ್ಭವೇ ಒದಗಿ ಬಂದರೂ.. ಜನಮೇಜಯನ ಮನವೊಲಿಸಿ ಸರ್ಪಸತ್ರವನ್ನು ನಿಲ್ಲಿಸುತ್ತೇನೆ ಎಂದು ಮಾತುಕೊಟ್ಟು ಹೊರಟು ನೇರವಾಗಿ ಯಾಗಶಾಲೆಯತ್ತ ಬರುತ್ತಾನೆ. ಹಾಗೆ ಸಾಗಿ ಬರುವ ಪೂರ್ವದಲ್ಲಿಯೇ ತಕ್ಷಕನ ವಂಶದ, ಐರಾವತನ ವಂಶದ, ಕೌರವ್ಯನ ವಂಶದ, ವಾಸುಕಿಯ ವಂಶದ ವಿವಿದ ಬಣ್ಣ, ಆಕಾರದ, ಒಂದರಿಂದ ಹತ್ತು ಹಲವು ತಲೆಗಳನ್ನು ಹೊಂದಿದ್ದ, ಅತಿ ತೀಕ್ಷ್ಣವಾದ ವಿಷವನ್ನು ಹೊಂದಿದ್ದ ಕೋಟಿ ಕೋಟಿ ನಾಗಗಳು ಅಗ್ನಿಗೆ ಆಹುತಿಯಾಗಿ ಹೋಗಿದ್ದವು. ಇನ್ನೂ ನಿರಂತರವಾಗಿ ಮಂತ್ರದ ಪ್ರಭಾವಕ್ಕೆ ಒಳಗಾಗಿ ಬಂದು ಬೀಳುತ್ತಲೇ ಇದ್ದವು. ಆಸ್ತೀಕ ಯಾಗಶಾಲೆಯ ಬಳಿಗೆ ಬಂದರೆ ಹೊರಾವರಣದಲ್ಲಿದ್ದ ಕಾವಲುಗಾರರು ಇವನನ್ನು ಯಾಗಮಂಟಪದ ಬಳಿಸಾಗಲು ಬಿಡದೇ ತಡೆದು ನಿಲ್ಲಿಸುತ್ತಾರೆ. ಇತ್ತ ಜನಮೇಜಯನಿಗೆ ಅಷ್ಟೆಲ್ಲಾ ಸರ್ಪಗಳು ಬಂದು ಆಹುತಿಯಾಗಿ ಹೋದರೂ ತಕ್ಷಕ ಬಾರದೇ ಇರುವುದು ಅಸಹನೆಯನ್ನು ಉಂಟು ಮಾಡುತ್ತದೆ. ಯಾಕೆಂದರೆ ತಂದೆಯಾದ ಪರೀಕ್ಷಿತನನ್ನು ಕೊಂದವ ಅವನೇ ತಾನೆ.. ಹಾಗಾಗಿಯೇ ಭೂತ - ಭವಿಷ್ಯವನ್ನು ಬಲ್ಲ ಲೋಹಿತಾಕ್ಷ ಎಂಬ ಸೂತನನ್ನು ಕರೆಸಿ ಕೇಳುತ್ತಾನೆ. ಆಗ ಆ ಸೂತನು ತಕ್ಷಕ ಇಂದ್ರನ ಮೊರೆ ಹೊಕ್ಕ ವಿಚಾರ ಮತ್ತು ಇಂದ್ರ ಅವನಿಗೆ ಅಭಯ-ಆಶ್ರಯವನ್ನು ನೀಡಿದ ವರ್ತಮಾನವನ್ನು ತಿಳಿಸ್ತಾನೆ. ಇದರಿಂದ ಕುಪಿತನಾದ ಜನಮೇಜಯ ಇಂದ್ರ ಅವನನ್ನು ಇರಿಸಿಕೊಂಡಿದ್ದಾನೆ ಎಂದಾದರೆ ಇಂದ್ರ ಸಮೇತನಾಗಿಯೇ ಬಂದು ಬೀಳಲಿ ಕರೆಯಿರಿ ಎಂದು ಋತ್ವಿಜರಲ್ಲಿ ಹೇಳುತ್ತಾನೆ. ಅವನ ಮಾತಿಗೆ ಸಹಮತ ವ್ಯಕ್ತಪಡಿಸಿದ ಋತ್ವಿಜನಾದ ಹೋತೃವು "ಸಹೇಂದ್ರಾಯ ತಕ್ಷಕಾಯ ಸ್ವಾಹಾ" ಎಂದು ಕರೆದೇ ಬಿಡುತ್ತಾನೆ.. ಈ ಮಂತ್ರಕ್ಕೆ ಆಕೃಷ್ಟರಾದ ದೇವೇಂದ್ರ ತಕ್ಷಕರಿಬ್ಬರೂ ಪ್ರವಾಹದ ಸೆಳೆತದಲ್ಲಿ ಸಿಕ್ಕಿ ತೇಲಿ ಬರುವಂತೆ ಸ್ವರ್ಗದಿಂದ ಬೀಳತೊಡಗಿದರು. ಇತ್ತ ಕಾವಲುಗಾರರು ತಡೆದ ಕಾರಣದಿಂದ ಆಸ್ತೀಕ ಯಾಗಶಾಲೆಯ ಹೊರಾವರಣದಲ್ಲಿಯೇ ನಿಂತು ಗಟ್ಟಿಯಾದ ಸ್ವರದಲ್ಲಿ ರಾಜೇಂದ್ರನಾದ ಜನಮೇಜಯನನ್ನೂ, ಋತ್ವಿಜರನ್ನೂ ಸ್ವಸ್ತಿವಾಚನಮಾಡಿ ಹೊಗಳತೊಡಗಿದ. ಇದು ಜನಮೇಜಯನಿಗೂ ಕೇಳಿತು, ಕೂಡಲೇ ಆಸ್ತೀಕನನ್ನು ಒಳಗೆ ಬಿಡುವಂತೆ ಸೂಚನೆ ಕೊಡುತ್ತಾನೆ. ಹುಡುಗನಂತೆ ಕಾಣಿಸುತ್ತಿದ್ದರೂ ಅವನ ಮಾತು ನೆಡವಳಿಕೆಯನ್ನು ಕಂಡ ಜನಮೇಜಯನಿಗೆ ಇವನೊಬ್ಬ ಮಹಾಜ್ಞಾನಿ ಎಂಬ ಅರಿವಾಗುತ್ತದೆ. ಜನಮೇಜಯನಿಗೆ ಒಂದುಕಡೆಯಲ್ಲಿ ಆಸ್ತೀಕನಿಗೆ ಆತಿಥ್ಯ ಮಾಡಬೇಕು.. ಇನ್ನೊಂದೆಡೆಯಲ್ಲಿ ಇಂದ್ರ ಸಮೇತನಾಗಿ ತಕ್ಷಕ ಹೋಮಾಗ್ನಿಯಲ್ಲಿ ಬೀಳುವದನ್ನೂ ಕಾಣಬೇಕು... ಹಾಗಾಗಿ ಯಾಗಶಾಲೆಗೆ ಬಂದ ನಿನಗೇನು ದಾನವಾಗಿ ಕೊಡಲಿ.. ಏನನ್ನು ಯಾಚಿಸಿದರೂ ನೀಡುತ್ತೇನೆ ಎಂದು ಹೇಳಿ ಇತ್ತ ಋತ್ವಿಜರಿಗೆ ಇಂದ್ರರಕ್ಷಣೆಯಲ್ಲಿರುವ ತಕ್ಷಕನನ್ನು ಇಂದ್ರನನ್ನು ಸೇರಿಸಿಯೇ ಆಹುತಿ ನೀಡಿ ಎಂದು ಮತ್ತೆ ಮತ್ತೆ ಆತುರಪಡಿಸುತ್ತಾನೆ. ಅದಾಗಲೇ ತಕ್ಷಕನನ್ನು ಜೊತೆಗಿಟ್ಟುಕೊಂಡೇ ಸಾಗಿ ಬರುತಿದ್ದ ಇಂದ್ರ ತಾನೂ ಆಹುತಿಯಾಗುವ ಭಯದಿಂದ ಇನ್ನು ಬೇರೆ ದಾರಿಕಾಣದೇ ತಕ್ಷಕನನ್ನು ಬಿಟ್ಟು ಓಡಿ ಹೋಗಿಬಿಡುತ್ತಾನೆ. ಇದನ್ನು ನೋಡಿದ ಋತ್ವಿಜರು ತಕ್ಷಕ ಮಂತ್ರದ ಸೆಳೆತದಿಂದ ಬರುತ್ತಿರುವುದನ್ನು ಜನಮೇಜಯನಿಗೆ ಹೇಳುತ್ತಾರೆ. ಇವನಿಗೆ ಸಮಾಧಾನವಾಗುತ್ತದೆ, ಆಸ್ತೀಕನತ್ತ ತಿರುಗಿ "ಸ್ವಾಮಿ.. ತಮಗೆ ಬೇಕಾದ್ದನ್ನು ಕೇಳಿ ಕೊಡುತ್ತೇನೆ'' ಎನ್ನುತ್ತಾನೆ. ಆಗ ಆಸ್ತೀಕ "ಈ ಯಾಗವನ್ನು ಇಲ್ಲಿಗೇ ನಿಲ್ಲಿಸು... ಇನ್ನು ಒಂದು ಸರ್ಪವೂ ಆಹುತಿಯಾಗಬಾರದು ಎನ್ನುತ್ತಾನೆ. ಅದು ಸಾಧ್ಯವಾಗದು ಎಂದ ಜನಮೇಜಯ ಬೇರೆ ಏನನ್ನಾದರೂ ಕೇಳು ಎನ್ನುತ್ತಾನೆ. ಆದರೆ ತಾನು ತನ್ನ ಸೋದರ ಮಾವಂದಿರ ವಂಶವನ್ನು ಉಳಿಸಲು ತಾಯಿಯಿಂದ ಆಜ್ಞಪ್ತನಾಗಿ ಬಂದವನಿದ್ದೇನೆ ಇದಕ್ಕೆ ಹೊರತಾಗಿ ಬೇರೇನೂ ಬೇಡ ಎಂದು ನಿರ್ಧಾರದ ನುಡಿಯನ್ನಾಡುತ್ತಾನೆ. ಅವನ ಮಾತಿಗೆ ಯಾಗಶಾಲೆಯಲ್ಲಿದ್ದ ಪ್ರಾಜ್ಞರೆಲ್ಲಾ ಸಹಮತ ವ್ಯಕ್ತಪಡಿಸಿ ಆಸ್ತೀಕ ಕೇಳಿದಂತೆ ನಡೆಯುವುದೇ ಸರಿ ಎನ್ನುತ್ತಾರೆ. ಭವಿಷ್ಯವನ್ನು ಅರಿಯಬಲ್ಲ ಲೋಹಿತಾಕ್ಷನೂ ಇದು ಇಲ್ಲಿಗೇ ನಿಲ್ಲುತ್ತದೆ ಎಂದು ಹೇಳುತ್ತಾನೆ. ಇದನ್ನೆಲ್ಲಾ ಕೇಳಿದ ಜನಮೇಜಯನೂ ಸರಿ ಎಂದು ಯಾಗ ನಿಲ್ಲಿಸಲು ಒಪ್ಪುತ್ತಾನೆ. ಎಲ್ಲರೂ ಹರ್ಷೋದ್ಗಾರದಿಂದ ಚಕ್ರವರ್ತಿಯ ನಿರ್ಧಾರವನ್ನು ಸ್ವಾಗತಿಸುತ್ತಾರೆ. ಕುತೂಹಲದ ವಿಷಯವೆಂದರೆ.. ಇಂದ್ರ ತೊರೆದು ಹೋದಮೇಲೆ ಏಕಾಂಗಿಯಾದ ತಕ್ಷಕ ಈ ಮಧ್ಯದಲ್ಲಿಯೇ ಅಗ್ನಿಗೆ ಆಹುತಿಯಾಗಿ ಹೋಗಬೇಕಿತ್ತು... ಆದರೆ ಮಂತ್ರದಿಂದ ಕರೆಯಲ್ಪಟ್ಟ ತಕ್ಷಕ ಬೀಳುತ್ತಿರುವುದನ್ನು ನೋಡಿದ ಆಸ್ತೀಕ " ನಿಲ್ಲು. ನಿಲ್ಲು, ನಿಲ್ಲು," ಎಂದು ಮೂರು ಬಾರಿ ಹೇಳಿರುತ್ತಾನೆ. ಆ ಶಭ್ಧಕ್ಕೆ ಎಂತಹ ಶಕ್ತಿ ಇತ್ತೆಂದರೆ ಋತ್ವಿಜರ ಸ್ವಾಹಾಕಾರದ ಸೆಳೆತವನ್ನೂ ಪ್ರತಿರೋಧಿಸಿ ಆಗಸದಲ್ಲಿಯೇ ಜಡವಾಗಿ ತಕ್ಷಕ ನಿಂತುಬಿಟ್ಟಿದ್ದ. ಯಾಗವನ್ನು ಅಲ್ಲಿಗೇ ನಿಲ್ಲಿಸಿದ ಜನಮೇಜಯ ಅವಭೃತ ಸ್ನಾನವನ್ನು ಮುಗಿಸಿ ಬಂದು, ಎಲ್ಲಾ ಋತ್ವಿಜರಿಗೂ, ಬ್ರಾಹ್ಮಣರಿಗೂ ಯಥೇಶ್ಚವಾಗಿ ದಾನ ದಕ್ಷಿಣೆಗಳನ್ನು ಕೊಟ್ಟು ಸಂತೃಪ್ತಿಪಡಿಸುತ್ತಾನೆ. ಹಾಗೆಯೇ ಆಸ್ತೀಕನನ್ನೂ ಸತ್ಕರಿಸಿ ಮುಂದೊಂದು ಅಶ್ವಮೇಧ ಯಾಗ ಮಾಡುವ ಇಚ್ಛೆ ಇದೆ. ಆ ಕಾಲಕ್ಕೆ ತಾವು ಬರಬೇಕೆಂದು ಆಮಂತ್ರಣವನ್ನೀಯುತ್ತಾನೆ. ಅರಸನಿಂದ ಬೀಳ್ಳೊಂಡ ಆಸ್ತೀಕ ಮಾವ ವಾಸುಕಿಯಲ್ಲಿ ಬಂದು ನಡೆದ ವಿಚಾರವನ್ನೆಲ್ಲಾ ತಿಳಿಸುತ್ತಾನೆ. ಸರ್ಪಗಳಿಗೆಲ್ಲಾ ಸಂತೋಷವಾಗುತ್ತದೆ. ಇದಕ್ಕೆ ಕಾರಣನಾದ ನಿನಗೆ ಏನು ಬೇಕು ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಆಸ್ತೀಕ "ಮುಂದೆ ಯಾರೇ ಆಗಲಿ ಈ ಘಟನೆಯನ್ನು ಪಾರಾಯಣ ಮಾಡಿದವರಿಗೆ ಸರ್ಪಭಯ ಕಾಡಬಾರದು ಆಸ್ತಿಕನ ಹೆಸರನ್ನು ಹೇಳಿದವರಿಗೆ ಯಾವ ಸರ್ಪಗಳೇ ಆದರೂ ಕಚ್ಚಬಾರದು" ಎಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಸಮ್ಮತಿಸಿದ ವಾಸುಕಿಯ ನೇತೃತ್ವದಲ್ಲಿ ಸರ್ಪಗಳು ಆಸ್ತೀಕನನ್ನು' ಕೊಂಡಾಡುತ್ತಾ.. ಯಾರು ನಿನ್ನ ಹೆಸರನ್ನು ಹೇಳಿದ ಮೇಲೂ ಅಂತವರಿಗೆ ಸರ್ಪ ಕಡಿದರೆ ಅಂತಹ ಸರ್ಪದ ತಲೆ ಸಿಡಿದು ಚೂರಾಗಲಿ ಎಂದು ಹೇಳಿ ಆಸ್ತೀಕನಿಗೆ ನಂಬಿಗೆಯನ್ನು ಕೊಟ್ಟು ನಾಗಲೋಕದತ್ತ ಸಾಗಿ ಹೋದವು. 🙏🙏🙏🙏

Wednesday, May 28, 2025

ಸರ್ಪ ಸತ್ರ

ಜನಮೇಜಯ - ಸರ್ಪ ಸತ್ರ ಪರೀಕ್ಷಿತನನ್ನು ತಕ್ಷಕ ಮೋಸದಿಂದಲೇ ಸಾಯಿಸಿದ.. ಅವನನ್ನು ಕಚ್ಚಿದಕೂಡಲೇ ನಿಜ ಸರ್ಪಾಕೃತಿಯನ್ನು ತಳೆದು ಆಕಾಶಮಾರ್ಗದಲ್ಲಿ ಹಾರಿಹೋದ. ಮರುಕ್ಷಣದಲ್ಲೇ ಪರೀಕ್ಷಿತನ ದೇಹ ಸಿಡಿಲೆರಗಿದ ಮರದಂತೆ ಸುಟ್ಟುಕರಕಲಾಗಿ ಹೋಯಿತು. ಪರೀಕ್ಷಿತನು ವಾಸ ಮಾಡಿದ್ದ ಏಕಸ್ಥಂಭ ಭವನವೂ ವಿಷದ ಜ್ಜಾಲೆಯಿಂದ ಉರಿದುಹೋಯಿತು. ನಂತರದಲ್ಲಿ ಪ್ರಮುಖರೆಲ್ಲಾ ಸೇರಿ ಚಿಕ್ಕವನಾದ ಜನಮೇಜಯನ ಮೂಲಕ ಅಳಿದ ಅರಸನಿಗೆ ಅಂತ್ಯಕ್ರಿಯೆಗಳನ್ನು ಮಾಡಿಸಿದರು. ಆ ನಂತರದಲ್ಲಿ ಹಸ್ತಿನಾವತಿಯ ಪಟ್ಟಾಭಿಷೇಕವನ್ನು ಜನಮೇಜಯನಿಗೆ ಮಾಡಿದರು. ಆಡಳಿತವನ್ನು ನಿಭಾಯಿಸುವ ಪ್ರಾಯವಿನ್ನೂ ಅವನಿಗೆ ಆಗಿರದಿದ್ದರೂ ಮಂತ್ರಿಗಳು ಮತ್ತು ಹಿರಿಯರ ನಿರ್ದೇಶನದಲ್ಲಿ ರಾಜ್ಯಾಡಳಿತವನ್ನು ಮಾಡತೊಡಗಿದ. ಹಾಗೆಯೇ ವರುಷಗಳು ಕಳೆದವು.. ರಾಜಕುಮಾರ ಪ್ರಾಯ ಪ್ರಭುದ್ಧನಾದ. ಅರಸನಿಗೆ ವಿವಾಹ ಮಾಡಿಸುವ ಉದ್ದೇಶದಿಂದ ಕಾಶೀ ದೇಶದ ಅರಸನಾದ ಸ್ವರ್ಣವರ್ಮನ ಬಳಿಗೆ ಹೋಗಿ ಅವನ ಪುತ್ರಿಯಾದ ವಪುಷ್ಟಮೆಯನ್ನು ಜನಮೇಜಯನಿಗೆ ಮದುವೆಮಾಡಿಕೊಡಬೇಕೆಂದು ಮಂತ್ರಿಗಳು ಪ್ರಸ್ತಾಪ ಮಾಡಿದರು. ಕಾಶೀಶನೂ ಹಸ್ತಿನಾವತಿಯ ಚಕ್ರವರ್ತಿಗೆ ಮಗಳನ್ನು ಕೊಡಲು ಸಂತೋಷದಿಂದಲೇ ಒಪ್ಪಿದ. ಸಂಭ್ರಮದಿಂದ ವಿವಾಹ ಮಹೋತ್ಸವ ನೆರವೇರಿತು. ಊರ್ವಶೀ- ಪುರೂರವರಂತೆ ಸಂತೋಷದಿಂದ ಜನಮೇಜಯ-ವಪುಷ್ಟಮೆಯರು ಸಾಂಸಾರಿಕ ಜೀವನವನ್ನು ನಡೆಸಿದರು. ಹಲವು ವರ್ಷಗಳ ಕಾಲ ಜನಮೇಜಯನು ಸಂತೋಷದಿಂದ ಈ ಭೂಮಂಡಲವನ್ನು ಆಳಿದನು.ತಕ್ಷಶಿಲೆ ಮುಂತಾದ ದೇಶಗಳನ್ನು ದಿಗ್ವಿಜಯದ ಮುಖೇನ ಗೆದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಇದೇ ಸಂದರ್ಭದಲ್ಲಿ ಸರ್ಪಕುಲದ ಬಗ್ಗೆ ಮೊದಲೇ ದ್ವೇಷವನ್ನು ಹೊಂದಿ, ದುಷ್ಟ ಸರ್ಪಸಂತತಿಯನ್ನು ನಾಶ ಮಾಡಬೇಕೆಂದು ಸಮಯದ ನಿರೀಕ್ಷೆಯಲ್ಲಿದ್ದ ಉತ್ತಂಕ ಅರಸನ ಸಂದರ್ಷನಕ್ಕಾಗಿ ಬರುತ್ತಾನೆ. ತಪಸ್ವಿಯನ್ನು ಕಂಡ ಜನಮೇಜಯ ಆದರದಿಂದ ಆತಿಥ್ಯವನ್ನು ನೆರವೇರಿಸುತ್ತಾನೆ. ಕುಶಲೋಪರಿಯ ನಂತರ ಅನ್ಯತಾ ಭಾವಿಸದೆ ಬಂದ ಉದ್ದೇಷವನ್ನು ಹೇಳಿರೆಂದು ವಿನಂತಿಸಿಕೊಳ್ಳುತ್ತಾನೆ. ಆಗ ಸ್ವಲ್ಪ ಕೋಪಗೊಂಡವನಂತೆಯೇ ಉತ್ತಂಕ ಹೇಳತೊಡಗುತ್ತಾನೆ. ನೀನು ಚಕ್ರವರ್ತಿಯಾಗಿ ವಿಸ್ತಾರವಾದ ಈ ಭೂಮಂಡಲವನ್ನು ಆಳುತಿದ್ದೀಯ.. ನಿನ್ನ ಆಳ್ವಿಕೆ ಉತ್ತಮವಾದದ್ದು ಎಂದು ಪ್ರಜೆಗಳು ಹೊಗಳುತ್ತಿದ್ದಾರೆ.. ಕ್ಷತ್ರಿಯನಾಗಿ ನಿನ್ನ ಕರ್ತವ್ಯವನ್ನು ಮಾಡಿದರೂ ಒಬ್ಬ ಮಗನಾಗಿ ತಂದೆಯ ಸದ್ಗತಿಗಾಗಿ ಮಾಡಬೇಕಾದ ಕಾರ್ಯವನ್ನು ಮಾಡಲಿಲ್ಲ... ಉತ್ತಂಕನ ಮಾತುಗಳನ್ನು ಕೇಳಿದ ಜನಮೇಜಯನಿಗೆ ಆಶ್ಚರ್ಯ - ಆತಂಕ ಉಂಟಾಗುತ್ತದೆ. " ಸ್ವಾಮಿ ತಂದೆಯವರ ಮರಣಾನಂತರ ಪುರೋಹಿತರ ನಿರ್ದೇಶನದಲ್ಲಿಯೇ ತಂದೆಯವರ ಔರ್ಧ್ವದೈಹಿಕ ಕಾರ್ಯಗಳೆಲ್ಲವನ್ನು ಮಾಡಿದ್ದಾಗಿದೆ... ಅದರಲ್ಲಿ ಯಾವ ಕೊರತೆಯೂ ಆಗಲಿಲ್ಲ ಎಂದು ವಿನಯದಿಂದಲೇ ನುಡಿದ. ಆಗ ಉತ್ತಂಕ "ಅದೆಲ್ಲವೂ ಸರಿಯೇ ಆದರೆ ನಿನ್ನ ತಂದೆಯ ಸಾವಿಗೆ ಕಾರಣರಾದವರನ್ನು ಶಿಕ್ಷಿಸದೇ ಬಿಟ್ಟರೆ ಏನು ಪ್ರಯೋಜನ.. ಮಹಾ ಬಲಶಾಲಿಯೂ ಧಾರ್ಮಿಕನೂ ಆಗಿದ್ದ ಪರೀಕ್ಷಿತನನ್ನು ಮೋಸದಿಂದ ಕೊಲ್ಲಲಾಯಿತು " ಎಂದು ನುಡಿದ. ಉತ್ತಂಕನ ಮಾತನ್ನು ಕೇಳಿ ಜನಮೇಜಯ ತಾನು ತಿಳಿಯದೇ ಹೋದ ತಂದೆಯ ಸಾವಿನ ವೃತ್ತಾಂತವನ್ನು ಹೇಳಬೇಕೆಂದು ಕೇಳಿಕೊಂಡ. (ಮಹಾಭಾರತದಲ್ಲಿಯೇ ಈ ಸಂದರ್ಭ ಎರಡು ರೀತಿಯ ವಿವರಣೆಯನ್ನು ಕೊಡುತ್ತದೆ. ಉತ್ತಂಕನ ಬಗ್ಗೆ ಹೇಳುವಾಗ ಈತನೇ ಜನಮೇಜಯನಿಗೆ ಪರೀಕ್ಷಿತನ ಸಾವಿನ ವೃತ್ತಾಂತವನ್ನು ಹೇಳಿ ಸರ್ಪಯಾಗಕ್ಕೆ ಪ್ರೇರಕನಾಗುತ್ತಾನೆ ಎಂದಿದ್ದರೆ.. ಮುಂದೊಂದು ಕಡೆ ಜನಮೇಜಯನೇ ಮಂತ್ರಿಗಳಲ್ಲಿ ತಂದೆಯ ಸಾವಿನ ವಿವರವಾದ ಘಟನೆಯನ್ನು ಕೇಳಿ ಕ್ರೋಧದಿಂದ ಸರ್ಪಯಾಗದ ಸಂಕಲ್ಪ ಮಾಡುತ್ತಾನೆ ಎಂದಿದೆ. ಕಾಡಿನ ನಿರ್ಜನ ಪ್ರದೇಶದಲ್ಲಿ ನಡೆದ ಕಾಶ್ಯಪ ಎಂಬ ಬ್ರಾಹ್ಮಣನಿಗೂ ತಕ್ಷಕನಿಗೂ ನಡೆದ ಸಂವಾದ ಉಳಿದವರಿಗೆ ತಿಳಿದಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಮಹಾಭಾರತದಲ್ಲಿಯೇ ಒಂದು ಸ್ವಾರಸ್ಯಕರವಾದ ಉತ್ತರವೂ ಇದೆ. ತಕ್ಷಕ ತನ್ನ ವಿಷದಿಂದ ಎದುರು ಬೆಳೆದುನಿಂತ ಮರವೊಂದನ್ನು ಸುಟ್ಟು ಕರಕಲಾಗಿಸುತ್ತಾನೆ.ಕಾಶ್ಯಪ ತನ್ನ ಮಂತ್ರಬಲದಿಂದ ಅದನ್ನು ಮತ್ತೆ ಮೊದಲಿನ ಹಾಗೆಯೇ ಎದ್ದು ನಿಲ್ಲುವ ಹಾಗೆ ಮಾಡುತ್ತಾನೆ. ಈ ಸಂಧರ್ಭದಲ್ಲಿ ಇವರಿಬ್ಬರಿಗೂ ಅರಿಯದೇ ಹೋದ ಒಂದು ವಿಷಯ ನಡೆದಿರುತ್ತದೆ. ಒಬ್ಬ ಕಟ್ಟಿಗೆ ಮಾರುವ ವ್ಯಕ್ತಿ ಕಟ್ಟಿಗೆ ಸಂಗ್ರಹಿಸಲು ಅದೇ ಮರವನ್ನು ಏರಿದ್ದ.. ತಕ್ಷಕನ ವಿಷದಲ್ಲಿ ಅವನೂ ಸುಟ್ಟು ಹೋಗಿದ್ದ.. ಮತ್ತೆ ಕಾಶ್ಯಪನ ಮಂತ್ರದಿಂದ ಬದುಕಿದ... ಇದು ಅವರಿಬ್ಬರ ಗಮನಕ್ಕೂ ಬರಲೇ ಇಲ್ಲ... ಮುಂದೆ ಅವನೇ ಅಲ್ಲಿ ನಡೆದ ಘಟನೆಯನ್ನು ಊರಿನಲ್ಲಿ ಹೇಳಿದ...) ಉತ್ತಂಕ ವಿವರವಾಗಿ ಪರೀಕ್ಷಿತನ ಮರಣ ವೃತ್ತಾಂತವನ್ನು ಜನಮೇಜಯನಿಗೆ ತಿಳಿಸುತ್ತಾನೆ, ಮತ್ತು ಸರ್ಪಸಂಕುಲದ ಮೇಲೆ ಸೇಡನ್ನು ತೀರಿಸಿಕೊಳ್ಳಲು ಪ್ರೇರೇಪಿಸುತ್ತಾನೆ. ಸೇಡನ್ನು ತೀರಿಸಿಕೊಳ್ಳಲು ಸರ್ಪಯಾಗದ ಸಂಕಲ್ಪವೇ ಆಗುತ್ತದೆ. ಅಂತಹ ಒಂದು ಯಾಗ ಸಾಧ್ಯವೇ ಎಂಬ ಪ್ರಶ್ನೆ ಎದುರಾದಾಗ ಕಲ್ಪಾಂತರದಲ್ಲಿ ಇಂತಹ ಒಂದು ಯಾಗ ನಡೆದಿದ್ದನ್ನು ಉಲ್ಲೇಖಿಸಲಾಗುತ್ತದೆ. (ಹಿಂದಿನ ಕಲ್ಪದಲ್ಲಿ ಜನಮೇಜಯ ಮಾಡಿದ ಸರ್ಪಯಾಗ ಎಂದೇ ಭಾರತದಲ್ಲಿ ಹೇಳಿದೆ) ಅಂದರೆ ಅಂತಹ ಒಂದು ಯಾಗಕ್ಕೆ ಬೇಕಾದ ಮಂತ್ರ ಭಾಗವೂ ಇತ್ತು ಎಂದೇ ಅಲ್ಲವೇ...ಒಟ್ಟಾರೆಯಾಗಿ ದುಷ್ಟ ಸರ್ಪಗಳ ವಿನಾಶಕ್ಕೆ ಬೇಕಾಗಿ ಸಂಕಲ್ಪಬದ್ದನಾದ ಜನಮೇಜಯ ಪುರೋಹಿತರ ನಿರ್ದೇಶನದಂತೆ ಯಜ್ಞಶಾಲೆಯನ್ನು ನಿರ್ಮಾಣ ಮಾಡಿಸಿದ. ಉನ್ನತವಾದ ಯಜ್ಞ ವೇಧಿಕೆ.. ಸರ್ಪಾಹುತಿಗೆ ಬೇಕಾಗಿ ಯಜ್ಞ ಕುಂಡದ ನಿರ್ಮಾಣವಾಯಿತು.... ...ಸರ್ಪಾಹುತಿ ಮುಂದಿನ ಭಾಗದಲ್ಲಿ..🙏🙏

Tuesday, May 27, 2025

ಜರತ್ಕಾರು ಮತ್ತು ಆಸ್ತೀಕ

ಜರತ್ಕಾರು ಮತ್ತು ಆಸ್ತೀಕ ಜನಮೇಜಯನ ಸರ್ಪಯಾಗದ ಕಥೆ ಆರಂಭಿಸುವ ಮುನ್ನವೇ ಅದನ್ನು ನಿಲ್ಲಿಸಲು ಬೇಕಾದ ಒಂದು ಭೂಮಿಕೆ ಸಿದ್ಧವಾದದ್ದನ್ನು ಹೇಳಲೇಬೇಕಾಗುತ್ತದೆ. ಅಂದು ತಾಯಿಯಾದ ಕದ್ರೂ ಕೊಟ್ಟ ಶಾಪದ ಬಗ್ಗೆ ಸರ್ಪ ಸಂತತಿಗೆ ಸದಾ ಆತಂಕ ಇದ್ದೇ ಇರುತ್ತದೆ. ಆ ಶಾಪದ ಪರಿಣಾಮ ಏನಾಗಬಹದು..ಅದರಿಂದ ನಿವೃತ್ತಿ ಹೇಗೆ ಎಂಬ ಬಗ್ಗೆ ಚಿ೦ತೆ ಕಾಡುತ್ತಲೇ ಇತ್ತು. ಆಗಾಗ ಮಾತೆಯ ಶಾಪವಾಕ್ಯ ನೆನಪಾಗಿ ಆತಂಕ ಉಂಟಾಗುತಿತ್ತು. ಇದೇ ಸಂದರ್ಭದಲ್ಲಿ ಒಂದು ಘಟನೆ ನಡೆಯುತ್ತದೆ. ಜರತ್ಕಾರು ಎಂಬ ಒಬ್ಬ ಋಷಿ ಇದ್ದ, ಇವನ ತಂದೆ ತಾಯಿಗಳು ಯಾರು ಎಂದು ಸರಿಯಾದ ಉಲ್ಲೇಖ ಸಿಗಲಿಲ್ಲ, ಯಾಯಾವರ ಎಂಬುವವರು ಇವನ ಪಿತೃಗಳು... ಒಂದು ಕಡೆ ನಿಲ್ಲದೇ ಸದಾ ಊರೂರು ತಿರುಗುತ್ತಲೇ ಇರುವವರು ಎಂದು ಈ ಹೆಸರು.. ಇವರ ಕುಲದಲ್ಲಿ ಹುಟ್ಟಿದ ಜರತ್ಕಾರು ಕೂಡ ಅಲ್ಲಲ್ಲಿ ತಿರುಗುತ್ತಾ ತಪಸ್ಸು ಮಾಡುತ್ತಾ ಕಾಲ ಕಳೆಯುತ್ತಿದ್ದ. ಒಂದು ದಿನ ಹೀಗೆಯೇ ಸಂಚಾರ ಮಾಡುತ್ತಿರುವಾಗ ಒಂದು ಪಾಳುಭಾವಿ.. ಹುಲ್ಲಿನಿಂದ ಮುಚ್ಚಿ ಹೋಗುವ ಸ್ಥಿತಿಯಲ್ಲಿದೆ.. ಒಂದಷ್ಟು ಜನ ಅದೇ ಹುಲ್ಲನ್ನು ಹಿಡಿದು ನೇತಾಡುತಿದ್ದಾರೆ..ಅವರು ಆಧಾರವಾಗಿ ಹಿಡಿದ ಹುಲ್ಲನ್ನು ಇಲಿಗಳು ಕಡಿಯುತ್ತಾ ಇವೆ. ಪೂರ್ತಿ ಕತ್ತರಿಸಿ ಹೋದರೆ ಅವರು ಕೆಳಗೆ ಬೀಳುತ್ತಾರೆ.. ಅಂತಹ ಸ್ಥಿತಿಯಲ್ಲಿ ಜರತ್ಕಾರು ಅವರನ್ನು ನೋಡಿದ. ಕುತೂಹಲವಾಯಿತು...ಆ ಹುಲ್ಲನ್ನು ಬಿಟ್ಟು ಬೇರೆ ರಕ್ಷಣೆ ಅರಸುವ ಯೋಚನೆಯನ್ನೂ ಅವರು ಮಾಡಿದಂತೆ ಅವನಿಗೆ ಅನ್ನಿಸಲಿಲ್ಲ..ಹಾಗಾಗಿಯೇ ಮಾತನಾಡಿಸಿದ.. ಅಯ್ಯಾ...ನೀವು ಯಾರು ಯಾಕೆ ಈ ಸ್ಥಿತಿಯಲ್ಲಿದ್ದೀರಿ.. ಈ ಪಾಳುಕೂಪದಲ್ಲಿ ನೀವಿರಲು ಕಾರಣವೇನು...? ಜರತ್ಕಾರು ಹೀಗೆ ಕೇಳಲು ಅವರು ಹೇಳಿದರು.." ಅಯ್ಯಾ ಬ್ರಾಹ್ಮಣ..ಯಾಯಾವರರೆಂದು ನಮ್ಮ ಹೆಸರು.. ಭೂಲೋಕದಲ್ಲಿ ತಪಸ್ಸು ಮಾಡುತ್ತಾ ಬದುಕಿ ನಂತರ ಉನ್ನತವಾದ ಪಿತೃ ಲೋಕವನ್ನು ಸೇರಬೇಕಾದವರು ನಾವಾಗಿದ್ದೆವು... ಆದರೆ... ಏನು ಮಾಡೋಣ ನಮ್ಮ ಕುಲದಲ್ಲಿ ಹುಟ್ಟಿದ ಒಬ್ಬನೇ ವ್ಯಕ್ತಿ ಜರತ್ಕಾರು ಎಂಬಾತ ಕೇವಲ ತಪಸ್ಸನ್ನು ಮಾತ್ರ ಮಾಡುತ್ತಾ ಬ್ರಹ್ಮಚಾರಿಯಾಗಿ ತಿರುಗುತ್ತಾ ಇದ್ದಾನೆ...ಅವನು ಸಂಸಾರಿಯಾಗಿ ಸಂತಾನವನ್ನು ಪಡೆಯದೇ ಇರುವ ಕಾರಣ ನಮಗೆ ಇಂತಹ ದುಸ್ಥಿತಿ ಉಂಟಾಗಿದೆ.. ನಮ್ಮ ಪತನಭೀತಿಗೆ ಅವನೇ ಕಾರಣ " ಎಂದರು. ಅವರ ಮಾತನ್ನು ಕೇಳಿ.."ನೀವು ಹೇಳಿದ ಜರತ್ಕಾರು ನಾನೇ..ನನಗೆ ಸಾಂಸಾರಿಕ ಜೀವನದಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲ ಆದರೆ ನಿಮ್ಮ ಸ್ಥಿತಿಯನ್ನು ನೋಡಿ ನಿಮ್ಮ ಉದ್ಧಾರಕ್ಕಾಗಿ ನಾನು ಸಂಸಾರಿಯಗಲು ಸಿದ್ಧನಿದ್ದೇನೆ ಆದರೆ... ಅದಕ್ಕೆ ನಿಬಂಧನೆಗಳಿದೆ. ನಾನು ಕೈ ಹಿಡಿಯುವ ವಧು ನನ್ನ ಹೆಸರಿನವಳೇ ಆಗಿರಬೇಕು..ನಾನು ಕನ್ಯಾರ್ಥಿಯಾಗಿ ಎಲ್ಲಿಗೂ ಹೋಗುವುದಿಲ್ಲ.. ಕನ್ಯಾಪಿತೃವೇ ಬಂದು ಕನ್ಯೆಯನ್ನು ಭಿಕ್ಷೆಯರೂಪದಲ್ಲಿ ನನಗೆ ಕೊಟ್ಟರೆ ನಾನವಳನ್ನು ಸ್ವೀಕರಿಸುತ್ತೇನೆ...ಆ ಕನ್ಯಾಮಣಿಯ ಸದಾ ನನಗೆ ಅನುಕೂಲಳೇ ಆಗಿರಬೇಕು..ನನಗೆ ವಿರೋಧವನ್ನು ಎಸಗಿದರೆ ನಾನವಳನ್ನು ತೊರೆದು ಬಿಡುತ್ತೇನೆ..." ಎಂದನು. ಯಾವುದಕ್ಕೂ ಬ್ರಹ್ಮಚಾರಿಯಾದ ಜರತ್ಕಾರು ಸಂಸಾರಿಯಾಗುವ ಮನಸ್ಸು ಮಾಡಿದ್ದಕ್ಕೆ ಪಿತೃಗಳಿಗೆ ಸಂತೋಷವಾಯಿತು. ಅವರಿಂದ ಬೀಳ್ಕೊಂಡು ಜರತ್ಕಾರು ಮುಂದೆ ಹೊರಟ. ಇತ್ತ ನಾಗಲೋಕದಲ್ಲಿ ಸರ್ಪಗಳ ಸಭೆ.. ನಾಗರಾಜನಾದ ತಕ್ಷಕನ ಅಧ್ಯಕ್ಷತೆ.. ಅದಾಗಲೇ ಪರೀಕ್ಷಿತ ಪುತ್ರನಾದ ಜನಮೇಜಯ ಪಟ್ಟಾಭಿಷಿಕ್ತನಾಗಿದ್ದಾನೆ.. ಮಾತೆಯ ಶಾಪ ಯಾವಾಗ ಬರಸಿಡಿಲಿನಂತೆ ಎರಗುವುದೋ ಎಂಬ ಭಯ...ಎಲ್ಲರೂ ಒಂದೊಂದು ಸೂಚನೆ ಕೊಡುತ್ತಿದ್ದಾರೆ..ಕೆಲವರು ಪರೀಕ್ಷಿತನನ್ನು ಕೊಂದ ಹಾಗೆ ಇವನನ್ನು ಕಚ್ಚಿ ಕೊಂದು ಬಿಡೋಣ ಎನ್ನುತ್ತಿದ್ದಾರೆ.. ಏಲಾಪತ್ರ ಎಂಬ ನಾಗ ಆ ಸಭೆಯನ್ನು ಉದ್ದೇಶಿಸಿ ಹೇಳುತ್ತಾನೆ. " ಅಯ್ಯಾ ಬಂಧುಗಳೇ.. ನಾವು ಹಿಂದಿನ ಘಟನೆಯನ್ನು ಅವಲೋಕಿಸಬೇಕಾದ ಅನಿವಾರ್ಯತೆ ಇದೆ. ಅಂದು ನಮ್ಮ ಮಾತೆ ನಮಗೆ ಶಾಪವನ್ನು ಕೊಟ್ಟಾಗ ನಾಗ ಸಂತತಿಯೇ ಅಳಿದು ಹೋಗುತ್ತದೆ ಎಂದು ಆತಂಕಕ್ಕೆ ಒಳಗಾದ ದೇವತೆಗಳು ಬೃಹ್ಮದೇವರ ಬಳಿಗೆ ಹೋಗಿ ಕೇಳಿದಾಗ ಸೃಷ್ಠಿಕರ್ತನಾದ ಬ್ರಹ್ಮದೇವರು ದೇವತೆಗಳಿಗೆ ಹೇಳಿದ್ದನ್ನು ನೆನಪಿಸಿಕೊಳ್ಳಿ..ಯಾಯಾವರ ರ ಸಂತತಿಯಲ್ಲಿ ಜನಿಸಿದ ಜರತ್ಕಾರು ಎಂಬ ಋಷಿಯ ಕೈ ಹಿಡಿಯುವ ಅದೇ ಹೆಸರನ್ನು ಹೊಂದಿದ ನಾಗಕನ್ನಿಕೆಯ ಪುತ್ರನಿಂದ ಸರ್ಪಕುಲ ಉಳಿಯುತ್ತದೆ ಎಂದಿದ್ದಾನೆ. ಹಾಗಿದ್ದರೆ ಈಗನಾವು ಬೇರೆ ದಾರಿಯನ್ನು ಹುಡುಕಬೇಕಾಗಿಲ್ಲ.. ಜರತ್ಕಾರು ಎನ್ನುವ ಆ ಖುಷಿಯನ್ನು ಹುಡುಕಿ ತಕ್ಷಕನ ಸಹೋದರಿಯಾದ ಜರತ್ಕಾರುವನ್ನು ಮದುವೆ ಮಾಡುವುದೇ ದಾರಿ ಅವರಿಂದ ಜನಿಸುವ ಸಂತಾನ ನಮ್ಮ ಕುಲಕ್ಷಯವನ್ನು ನಿಲ್ಲಿಸುತ್ತದೆ ".. ಏಲಾಪತ್ರನ ಈ ಮಾತಿಗೆ ಎಲ್ಲರೂ ನಿಟ್ಟುಸಿರು ಬಿಟ್ಟು ಸಮ್ಮತಿಯನ್ನು ಸೂಚಿಸುತ್ತಾರೆ. ಜರತ್ಕಾರುವಿನ ನಿಬಂಧನೆಯನ್ನು ಅರಿತ ತಕ್ಷಕ ತಾನೇ ಮುಂದಾಗಿ ತನ್ನ ಸಹೋದರಿ ಜರತ್ಕಾರುವನ್ನು ಬಿಕ್ಷೆಯ ರೂಪದಲ್ಲಿ ನೀಡಲು ಕರೆದುಕೊಂಡು ಬರುತ್ತಾನೆ. ಜರತ್ಕಾರುವನ್ನು ಕಂಡು ಆಕೆಯನ್ನು ಸ್ವೀಕರಿಸಬೇಕು ಎಂದು ಕೇಳಿಕೊಳ್ಳುತ್ತಾನೆ. ಮೊದಲು ನಿರಾಕರಿಸಲು ಮುಂದಾದ ಜರತ್ಕಾರು ಕನ್ಯೆಯ ಹೆಸರೂ ತನ್ನ ಹೆಸರೇ ಎಂದು ತಿಳಿದಾಗ ಸಮ್ಮತಿಸುತ್ತಾನೆ. ಬಿಕ್ಷಾರೂಪದಲ್ಲಿ ಆಕೆಯನ್ನು ಸ್ವೀಕರಿಸಿ ಮದುವೆಯಾಗುತ್ತಾನೆ. ಸಾಂಸಾರಿಕ ಜೀವನ ಚೆನ್ನಾಗಿಯೇ ಸಾಗುತ್ತಿರುತ್ತದೆ. ನಾಗಕನ್ನಿಕೆ ಗರ್ಭವತಿಯಾಗುತ್ತಾಳೆ. ಒಂದು ದಿನ ಸಾಯಂಕಾಲ ಪತ್ನಿಯ ತೊಡೆಯ ಮೇಲೆ ತಲೆಯಿಟ್ಟು ಜರತ್ಕಾರು ಮಲಗಿರುತ್ತಾನೆ... ಸೂರ್ಯಾಸ್ತ ಸಮೀಪಿಸಿದರೂ ಏಳುವುದಿಲ್ಲ. ಇತ್ತ ಪತ್ನಿಯಾದ ಜರತ್ಕಾರುವಿಗೆ ಆತಂಕವುಂಟಾಗುತ್ತದೆ. ಸಂಧ್ಯಾ ಕಾಲದಲ್ಲಿ ಪತಿ ಮಾಡಬೇಕಾದ ನಿತ್ಯಕರ್ಮಗಳು ತಪ್ಪಿ ಹೋಗುತ್ತದೆ. ಹಾಗಾಗಿ ಪತಿಯನ್ನು ಎಬ್ಬಿಸಬೇಕು.. ಎಬ್ಬಿಸಿದರೆ ಕೋಪಗೊಂಡರೇ.. ಏನಾದರಾಗಲಿ ಇಂತಹ ಸಂದರ್ಭದಲ್ಲಿ ಬ್ರಾಹ್ಮಣ ಮಾಡಬೇಕಾದ ಕರ್ತವ್ಯಕ್ಕೆ ಚ್ಯುತಿ ಆಗಬಾರದೆಂದು ಪತಿಯನ್ನು ಎಬ್ಬಿಸಿದಳು. ಎಚ್ಚರಗೊಂಡ ಜರತ್ಕಾರು ಕೋಪಗೊಂಡ ಸತಿಯಾದವಳು ಪತಿಗೆ ಅನುಕೂಲೆಯಾಗಿರಬೇಕು..ನೀನು ನನ್ನ ನಿದ್ರಾಭಂಗ ಮಾಡಿದೆ...ನಿನ್ನೊಂದಿಗೆ ಇನ್ನು ಸಂಸಾರ ಮಾಡಲಾರೆ ಎಂದು ಹೇಳಿ.. ನೀನು ನಿನ್ನ ಬದುಕನ್ನು ಮತ್ತೆ ತವರಿನಲ್ಲಿಯೇ ಕಳೆ..ನನ್ನ ನಿರೀಕ್ಷೆ ಬೇಡ.. ಎಂದನು.ಪತ್ನಿ ಕಣ್ಣೀರುಗರೆದು ಬೇಡಿಕೊಂಡರೂ ಕೇಳದೆ ಹೊರಡಲನುವಾದ..ಆ ಕ್ಷಣದಲ್ಲಿ ತಾನು ಗರ್ಭವತಿ ಎಂದೂ ಅರಿಯದ ಜರತ್ಕಾರು ಅವನಲ್ಲಿಯೇ ಕೇಳಿದಾಗ.."ಅಸ್ತಿ" ಎಂದು ಹೇಳಿ.. ನಿನಗೆ ಹುಟ್ಟುವ ಮಗನು ಜ್ಞಾನಿಯೂ ವೇದ ವೇದಾಂಗ ಪಾರಂಗತನೂ ಆಗಿ ನಿಮ್ಮ ಕುಲದ ಉದ್ಧಾರಕನೂ ಆಗುತ್ತಾನೆ ಎಂದು ಹೇಳಿ ಹೊರಟು ಹೋದ. ನಾಗಸ್ತ್ರೀಯಾದ ಜರತ್ಕಾರು ಕಣ್ಣೀರು ಸುರಿಸುತ್ತಾ ತಕ್ಷಕನ ಬಳಿಗೆ ಬರುತ್ತಾಳೆ. ನಡೆದ ಘಟನೆಯನ್ನೆಲ್ಲ ಹೇಳುತ್ತಾಳೆ. ತಕ್ಷಕನಿಗೂ ದುಃಖವಾಗುತ್ತದೆ, ಆದರೆ ತಪಸ್ವಿಯಾದ ಜರತ್ಕಾರುವಿನ ನಿರ್ಧಾರವನ್ನು ತಡೆಯುವ ಸಾಧ್ಯತೆ ತನಗಿಲ್ಲ ಎಂಬುದನ್ನು ಅರಿತು,ತನ್ನ ಸಹೋದರಿ ಗರ್ಭವತಿ ಎಂಬುದನ್ನು ಅರಿತು ಉದ್ದೇಶ ಈಡೇರಿದ ಒಂದು ಸಮಾಧಾನವಾಗುತ್ತದೆ. ತಂಗಿಯನ್ನು ಅತ್ಯಂತ ಎಚ್ಚರಿಕೆಯಿಂದ ಪಾಲಿಸುತ್ತಾನೆ. ದಿನತುಂಬಿ ಜರತ್ಕಾರು ಸರ್ಪಕುಲೋದ್ಧಾರಕನಾದ ಮಗನಿಗೆ ಜನ್ಮ ಕೊಡುತ್ತಾಳೆ. ಗರ್ಭದಲ್ಲಿರುವಾಗಲೇ ಪತಿ ''ಅಸ್ತು'' ಹೇಳಿದ ಕಾರಣಕ್ಕೂ ''ಆಸ್ತೀಕ " ಎಂದು ನಾಮಕರಣವಾಗುತ್ತದೆ. ಚ್ಯವನ ಮಹರ್ಷಿಯಿಂದ ವೇದ ವೇದಾಂಗಗಳನ್ನು ಕಲಿಯುತ್ತಾನೆ.( ದೇವೀ ಭಾಗವತದಲ್ಲಿ.. ಪತಿ ತೊರೆದು ಹೋದ ಮೇಲೆ ಜರತ್ಕಾರು ಕೈಲಾಸಕ್ಕೆ ಹೋಗಿ ಪಾರ್ವತೀ ಪರಮೇಶ್ವರರಲ್ಲಿ ಆಸರೆ ಹೊಂದಿರುತ್ತಾಳೆ. ಅಲ್ಲಿಯೇ ಜನಿಸಿದ ಆಸ್ತೀಕ ಶಿವನಿಂದಲೇ ಸಕಲ ವಿದ್ಯೆಗಳನ್ನೂ ಕಲಿಯುತ್ತಾನೆ.)🙏🙏

Sunday, May 25, 2025

ರುರು ಮತ್ತು ಪ್ರಮಧ್ವರೆ

ರುರು ಮತ್ತು ಪ್ರಮಧ್ವರೆ ಸರ್ಪಯಾಗದ ನಂತರವೂ ನಡೆದ ಒಂದು ಘಟನೆಯಿಂದ ಋಷಿಯೊಬ್ಬ ಸರ್ಪಕುಲವನ್ನೇ ದ್ವೇಷಿಸುವ ಸಂದರ್ಭ ಒದಗಿ ಬಂದುಹೋಗುತ್ತದೆ. ಪ್ರಸಿದ್ದರಾದ ಚ್ಯವನ ಸುಕನ್ಯಾ ದಂಪತಿಗಳಿಗೆ ಪ್ರಮತಿ ಎಂಬ ಪುತ್ರನಿದ್ದ. ಪ್ರಮತಿಗೆ ಘ್ರತಾಚಿ ಎಂಬ ಅಪ್ಸರೆಯಲ್ಲಿ ರುರು ಎಂಬ ಪುತ್ರ ಜನಿಸುತ್ತಾನೆ. ಇನ್ನೊಂದೆಡೆ ಅಪ್ಸರೆಯಾದ ಮೇನಕೆ ವಿಶ್ವಾವಸು ಎಂಬ ಗಂಧರ್ವನಿಂದ ಗರ್ಭ ಧರಿಸುತ್ತಾಳೆ ಮತ್ತು ದಿನಗಳು ಕಳೆದು ಹೆಣ್ಣು ಮಗುವನ್ನು ಪ್ರಸವಿಸುತ್ತಾಳೆ, ಜನಿಸಿದ ಮಗುವನ್ನು ಯಾವ ಕರುಣೆಯನ್ನೂ ತೋರಿಸದೆ ಸ್ತೂಲಕೇಶ ಎಂಬ ಮುನಿಯ ಆಶ್ರಮದ ಸಮೀಪ ಬಿಟ್ಟು ಹೋಗಿಬಿಡುತ್ತಾಳೆ. ಸ್ತೂಲಕೇಶಮುನಿಯು ಆಶ್ರಮ ಪ್ರದೇಶದಲ್ಲಿ ನಡೆದಾಡುತ್ತ ಬರುತ್ತಿದ್ದಾಗ ಒಂದು ಮರದ ಕೆಳಗೆ ಆಗತಾನೇ ಜನಿಸಿದ ಮಗು ಅನಾಥ ಸ್ಥಿತಿಯಲ್ಲಿ ಅಳುತ್ತಿರುವುದನ್ನು ನೋಡುತ್ತಾನೆ, ಪೂರ್ಣಚಂದ್ರ ಕಾಂತಿಯಿಂದ ಕಂಗೊಳಿಸುತ್ತಿದ್ದ ಶಿಶುವನ್ನು ನೋಡಿ ಕರುಣಾಮಯಿಯಾದ ಮುನಿ ಅದನ್ನು ಆಶ್ರಮಕ್ಕೆ ತಂದು ದೇವಕನ್ನಿಕೆಯರನ್ನೂ ಮೀರಿಸುವ ಸೌಂದರ್ಯ ಹೊಂದಿದ ಮಗುವಿಗೆ"ಪ್ರಮದ್ವತಿ" ಎಂದು ನಾಮಕರಣ ಮಾಡಿ ತಂದೆಯ ಸ್ಥಾನದಲ್ಲಿ ನಿಂತು ಕಾಲಕಾಲಕ್ಕೆ ಬೇಕಾದ ಎಲ್ಲ ಸಂಸ್ಕಾರಗಳನ್ನೂ ನೆರವೇರಿಸುತ್ತಾನೆ. ಅವಳೂ ಬೆಳೆದು ಪ್ರಾಯಪ್ರಬುದ್ಧಳಾಗುತ್ತಾಳೆ. ಹೀಗೆಯೇ ಒಂದು ದಿನ ಪ್ರಮತಿ ಪುತ್ರನಾದ ರುರು ಸಂಚರಿಸುತ್ತ ಬರುವಾಗ ಅಪ್ಸರೆಯರ ಸೌಂದರ್ಯ ಮೀರಿಸುವ ಪ್ರಮದ್ವತಿ ಅವನ ಕಣ್ಣಿಗೆ ಬೀಳುತ್ತಾಳೆ. ಅವಳನ್ನ ನೋಡಿದಾಕ್ಷಣವೇ ಇವನಿಗೆ ಪ್ರೇಮಾಂಕುರವಾಗಿಬಿಡುತ್ತದೆ, ಜೀವನದಲ್ಲಿ ಸಂಸಾರಿಯಾಗಿ ಬದುಕುವುದಾದರೆ ಪ್ರಮದ್ವತಿಯ ಜೊತೆಗೇ ಎಂದು ತೀರ್ಮಾನಿಸಿಬಿಡುತ್ತಾನೆ. ಹಿಂತಿರುಗಿ ಆಶ್ರಮಕ್ಕೆ ಬಂದು ತನ್ನ ಅಭಿಪ್ರಾಯವನ್ನು ತಂದೆಗೆ ನೇರವಾಗಿ ತಿಳಿಸಲು ನಾಚಿಕೆಯಾಗಿ ತನ್ನ ಮಿತ್ರರ ಮುಖಾಂತರ ಹೇಳಿಸುತ್ತಾನೆ. ತಂದೆಯಾದ ಪ್ರಮತಿಯು ಮಗನ ನಿರ್ಧಾರವನ್ನು ತಿಳಿದು ಸಂತೋಷದಲ್ಲಿಯೇ ಕನ್ಯಾರ್ಥಿಯಾಗಿ ಸ್ತೂಲಕೇಶಮುನಿಯ ಆಶ್ರಮಕ್ಕೆ ಬರುತ್ತಾನೆ. ಇಬ್ಬರ ಪರಸ್ಪರ ಕುಶಲೋಪರಿಯ ನಂತರ ತಾನು ಬಂದ ಉದ್ದೇಶ... ಮಗನ ಅಭಿಪ್ರಾಯವನ್ನು ಹೇಳುತ್ತಾನೆ. ಸ್ತೂಲಕೇಶಮುನಿಯೂ ಸಂತೋಷದಿಂದಲೇ ಒಪ್ಪಿಗೆ ಕೊಟ್ಟು ಮುಂದೆ ಬರುವ ಹಸ್ತಾ ನಕ್ಷತ್ರದ ದಿನ ಮದುವೆಯ ಮುಹೂರ್ತ ಎಂದು ನಿಶ್ಚಯ ಮಾಡುತ್ತಾನೆ. ಸಂತೋಷದಿಂದ ಒಪ್ಪಿದ ಪ್ರಮತಿ ಮುಹೂರ್ತದ ದಿನ ದಿಬ್ಬಣಕೂಡಿ ಬರುವುದಾಗಿ ಹೇಳಿ ಹೊರಡುತ್ತಾನೆ. ಇನ್ನು ಮದುವೆಗೆ ಮೂರ್ನಾಲ್ಕು ದಿನಗಳಿರುವಾಗ ಪ್ರಮದ್ವತಿ ಗೆಳತಿಯರೊಂದಿಗೆ ಆಶ್ರಮದ ಹೂದೋಟದಲ್ಲಿ ಸಂತೋಷದಿಂದ ವಿಹರಿಸುತ್ತ ಇದ್ದಳು, ಹಾಗೇ ಸಾಗುತ್ತಿದ್ದಾಗ ಅಲ್ಲಿ ಮಲಗಿದ್ದ ಒಂದು ವಿಷಸರ್ಪವನ್ನು ನೋಡದೇ ತುಳಿದು ಬಿಡುತ್ತಾಳೆ. ಅವಳ ಆಯಸ್ಸು ಮುಗಿದಕಾರಣ ಮೃತ್ಯುಪ್ರಚೋದನೆಯಿಂದ ಆ ಸರ್ಪವೂ ಕಚ್ಚಿಬಿಡುತ್ತದೆ. ಮೂರುಲೋಕದಲ್ಲಿರುವ ಸುಂದರಿಯರನ್ನೂ ನಾಚಿಸುವ ಸೌಂದರ್ಯ ಹೊಂದಿದ ಪ್ರಮದ್ವತಿಯ ಮುಖ ವಿಷಪ್ರಭಾವದಿಂದ ಕ್ಷಣಮಾತ್ರದಲ್ಲಿ ಕಪ್ಪಿಟ್ಟುಹೋಗುತ್ತದೆ. ಹಾ... ಎಂದು ಕೂಗಿಕೊಳ್ಳುತ್ತಾ ಕುಸಿದುಬೀಳುತ್ತಾಳೆ. ಮದುವೆಯ ಸಂಭ್ರಮಕ್ಕೆ ಸಿದ್ದವಾಗಿದ್ದ ಆಶ್ರಮ ಕ್ಷಣದಲ್ಲಿಯೇ ಮೃತ್ಯುವಿನ ಪ್ರವೇಶದಿಂದ ಸ್ಮಶಾನವಾಗಿಬಿಡುತ್ತದೆ. ವಿಷಯ ತಿಳಿದ ಸಮೀಪದ ಆಶ್ರಮವಾಸಿಗಳೆಲ್ಲ ದುಃಖಿಸುತ್ತ ಬಂದು ಸೇರುತ್ತಾರೆ. ಪ್ರಮತಿಗೂ ವಿಷಯ ತಿಳಿಯುತ್ತದೆ, ಆಶ್ರಮವಾಸಿಗಳನ್ನೂ ಪುತ್ರನಾದ ರುರುವನ್ನು ಕೂಡಿಕೊಂಡು ಸ್ತೂಲಕೇಶಮುನಿಯ ಆಶ್ರಮಕ್ಕೆ ಬರುತ್ತಾನೆ. ಆಶ್ರಮದಲ್ಲಿ ಮುನಿವನಿತೆಯರ ರೋಧನೆ ಮುಗಿಲುಮುಟ್ಟುತಿತ್ತು, ರುರುವಿಗೆ ತನ್ನ ಪ್ರಿಯತಮೆಯ ಶವವನ್ನು ನೋಡಲು ಧೈರ್ಯವೇ ಬರಲಿಲ್ಲ, ಕ್ಷಣಕಾಲ ನಿಂತು ಮತ್ತೆ ಅಲ್ಲಿಂದ ಅರಣ್ಯದತ್ತ ರೋಧಿಸುತ್ತ ಹೊರಟುಬಿಡುತ್ತಾನೆ. ನಿರ್ಜನವಾದ ಅರಣ್ಯಕ್ಕೆ ಬಂದು ಒಬ್ಬನೇ ಕುಳಿತು ರೋಧಿಸತೊಡಗುತ್ತಾನೆ. ಇವನ ದುಃಖವನ್ನು ಕಂಡು ದೇವತೆಗಳಿಗೂ ಕರುಣೆಉಂಟಾಗುತ್ತದೆ, ದುಃಖಿಸುತ್ತಿರುವ ರುರುವನ್ನು ಸಮಾಧಾನಪಡಿಸುವ ಮಾರ್ಗವನ್ನು ಸೂಚಿಸಿ ಒಬ್ಬ ದೇವದೂತನನ್ನು ಕಳುಹಿಸಿಕೊಡುತ್ತಾರೆ. ದೇವತೆಗಳ ನಿರ್ದೇಶನದ ಪ್ರಕಾರ ಸಾಗಿಬಂದ ದೇವದೂತ ರುರುವನ್ನು ಸಮಾಧಾನ ಮಾಡಿ ಅಳಿದುಹೋದ ಪ್ರಮದ್ವತಿಯನ್ನು ನೀನು ಪ್ರಯತ್ನ ಮಾಡಿದರೆ ಮತ್ತೆ ಬದುಕಿಸಿಕೊಳ್ಳಬಹುದು ಎಂದು ಹೇಳುತ್ತಾನೆ. "ಆಕೆ ಬದುಕುವಳೆಂದಾದರೆ ನಾನೇ ಸಾಯಲು ಕೂಡ ಸಿದ್ದ" ಎಂದು ರುರು ಹೇಳುತ್ತಾನೆ. ಹಾಗಿದ್ದರೆ ಆಯಸ್ಸುತೀರಿ ಅಳಿದುಹೋದ ನಿನ್ನ ಪ್ರಿಯತಮೆಗೆ ನಿನ್ನ ಆಯಸ್ಸಿನ ಅರ್ಧವನ್ನು ಕೊಡುವುದಾದರೆ ಅವಳು ಮತ್ತೆ ಬದುಕುತ್ತಾಳೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ರುರು ಸಂತೋಷದಿಂದಲೇ ತನ್ನ ಆಯುಷ್ಯಾರ್ಧವನ್ನು ಕೊಡಲೊಪ್ಪಿ " ಪ್ರಿಯೆಯಾದ ಪ್ರಮದ್ವತಿ ನನ್ನ ಸುದೀರ್ಘವಾದ ಆಯುಷ್ಯದಲ್ಲಿ ಅರ್ಧವನ್ನು ಹೊಂದಿ ಬದುಕಲಿ " ಎಂದು ಕೈಯೆತ್ತಿ ಹೇಳುತ್ತಾನೆ. ಆದರೆ ಅಲ್ಲಿಗೇ ಅದು ಪರಿಪೂರ್ಣ ಆಗಲಿಲ್ಲ. ಪ್ರಮದ್ವತಿಯ ತಂದೆಯಾದ ವಿಶ್ವಾವಸು ಬಂದು ದೇವದೂತನನ್ನು ಕರೆದುಕೊಂಡು ಯಮನಲ್ಲಿಗೆ ಹೋಗಿ ನಡೆದ ವಿಚಾರವನ್ನೆಲ್ಲ ಯಮನಿಗೆ ಹೇಳಿ ಪ್ರಮದ್ವತಿ ಮತ್ತೆ ರುರುವಿನ ಆಯುಷ್ಯವನ್ನು ಹೊಂದಿ ಬದುಕಲು ಅನುಮತಿ ನೀಡುವಂತೆ ವಿನಂತಿಸುತ್ತಾನೆ. ಆಗ ಯಮ " ನಿಮ್ಮೆಲ್ಲರ ನಿರ್ಧಾರ ಅದೇ ಆದರೆ ಹಾಗೇ ಆಗಲಿ" ಎಂದು ಸಮ್ಮತಿಯ ಅಂಕಿತ ಹಾಕುತ್ತಾನೆ. ಇತ್ತ ಸರ್ಪವಿಷದ ಪರಿಣಾಮದಿಂದ ಜೀವ ತೊರೆದಿದ್ದ ಪ್ರಮದ್ವರೆ ಯಮನ ಅನುಮೋದನೆ ಹೊಂದಿ ನಿದ್ರೆಯಿಂದ ಏಳುವಂತೆ ಮತ್ತೆ ಎದ್ದು ನಿಲ್ಲುತ್ತಾಳೆ. ಎಲ್ಲರಿಗೂ ಸಂತೋಷವಾಗುತ್ತದೆ, ನಡೆದ ಎಲ್ಲಾ ವಿಚಾರವನ್ನೂ ರುರು ಹಿರಿಯರಿಗೆ ತಿಳಿಸುತ್ತಾನೆ. ಎಲ್ಲರೂ ರುರುವಿನ ತ್ಯಾಗವನ್ನು ಕೊಂಡಾಡುತ್ತಾರೆ. ಅತ್ಯಂತ ಸಂಭ್ರಮದಿಂದ ರುರು ಪ್ರಮದ್ವರೆಯರ ವಿವಾಹವೂ ನೆರವೇರುತ್ತದೆ. ಪ್ರಿಯತಮೆಯನ್ನು ಹೊಂದಿದ ಸಂತೋಷ ರುರುವಿಗಾದರೂ ನಿರಪರಾಧಿಯಾದ ಪ್ರಮದ್ವರೆಯನ್ನು ಕಚ್ಚಿದ ಕಾರಣಕ್ಕಾಗಿ ಸರ್ಪಗಳ ಬಗ್ಗೆ ದ್ವೇಷ ಉಳಿದುಬಿಡುತ್ತದೆ. ಯಾವಾಗಲೂ ಕೈಯಲ್ಲಿ ಒಂದು ಬಡಿಗೆಯನ್ನು ಹಿಡಿದೇ ಓಡಾಡುತ್ತ ಇರುತ್ತಾನೆ, ಎಲ್ಲಿಯೇ ಸರ್ಪಗಳು ಕಂಡರೂ ಬಡಿದು ಕೊಲ್ಲುತ್ತಿರುತ್ತಾನೆ. ಒಂದು ದಿನ ಹೀಗೇ ಕಾಡಿನಲ್ಲಿ ಸಂಚರಿಸುತ್ತ ಇರುವಾಗ ಒಂದು ಕೊಳದ ಪಕ್ಕದಲ್ಲಿ ಮಲಗಿರುವ ಒಂದು " ಡುನ್ಡುಭ"ವೆನ್ನುವ ಹಾವು ಕಾಣಿಸುತ್ತದೆ. ಕೈಯಲ್ಲಿರುವ ಬಡಿಗೆಯಿಂದ ಇನ್ನೇನು ಹೊಡೆಯಬೇಕು ಎಂದು ಎತ್ತುತ್ತಿದ್ದಂತೆ ಆ ಹಾವು ಮಾತನಾಡತೊಡಗಿತು. "ಅಯ್ಯಾ ಬ್ರಾಹ್ಮಣ.. ವಿನಾಕಾರಣ ನನ್ನ ಮೇಲೆ ಯಾಕೆ ದ್ವೇಷ.. ಇಲ್ಲಿಯವರೆಗೆ ನಾನು ಯಾರಿಗೂ ತೊಂದರೆ ಕೊಟ್ಟವನಲ್ಲ.. ಯಾರನ್ನಾದರೂ ಕಚ್ಚಿ ಕೊಲ್ಲುವ ಸಾಮರ್ಥ್ಯ ಹೊಂದಿದ ವಿಷಸರ್ಪವೂ ನಾನಲ್ಲ, ಕೇವಲ ಹುಳುಹುಪ್ಪಟೆ.. ಕಪ್ಪೆ ಮುಂತಾದವುಗಳನ್ನ ತಿಂದು ಬದುಕುವ ನೀರುಹಾವು ನಾನು, ನನ್ನನ್ನು ಕೊಂದು ಸುಮ್ಮನೇ ಪಾಪವನ್ನ ಯಾಕೆ ಕಟ್ಟಿಕೊಳ್ಳುತ್ತಿ.. ಬ್ರಾಹ್ಮಣರು ಯಾವಾಗಲೂ ಜೀವದಯೆ ಹೊಂದಿದವರು ಆದರೆ ನೀನು ಅದಕ್ಕೆ ವಿರೋಧವಾದ ಕಾರ್ಯವನ್ನೇ ಮಾಡುತ್ತಿರುವೆ" ಎಂದು ಹೇಳಿತು. ಇದನ್ನು ಕೇಳಿದ ರುರುವಿಗೆ ಆಶ್ಚರ್ಯವಾಯಿತು ಒಂದು ಹಾವು ಹೀಗೆ ಮಾತಾಡಬಹುದು ಎಂದು ಅವನಿಗೆ ನಿರೀಕ್ಷೆಯಿಲ್ಲ. ಹಾಗಾಗಿಯೇ ಮತ್ತೆ ಆ ಹಾವಿಗೇ ಕೇಳಿದ " ಅಯ್ಯಾ ಮಹಾನುಭಾವ ನೀನು ಯಾರು... ನಿನ್ನ ಮಾತನ್ನು ಕೇಳಿದರೆ ಈ ಹಾವಿನ ರೂಪವನ್ನು ಹೊಂದಿ ನನ್ನನ್ನು ಪರೀಕ್ಷಿಸಲು ಬಂದ ಯಾವುದೋ ಮಹಾಪುರುಷ ಎಂದು ಬಾವಿಸುತ್ತಿದ್ದೇನೆ ". ರುರುವಿನ ಮಾತನ್ನು ಕೇಳಿದ ಹಾವು ಹೇಳಿತು "ಋಷಿಕುಮಾರ ಒಂದು ಕಾಲದಲ್ಲಿ ನಾನೂ ಬ್ರಾಹ್ಮಣನೇ ಆಗಿದ್ದೆ.. ಸಹಸ್ರಪಾದ ಎಂದು ನನ್ನ ಹೆಸರು, ನನಗೊಬ್ಬ ಮಿತ್ರನಿದ್ದ ಅವನ ಹೆಸರು ಖಗ ಎಂದು. ಒಂದು ದಿನ ನನ್ನ ಮಿತ್ರನಾದ ಖಗನನ್ನು ಕಾಣಲು ಅವನ ಆಶ್ರಮಕ್ಕೆ ಹೋದೆ.. ನಾನು ಹೋಗುವಾಗ ಖಗ ಅಗ್ನಿಕಾರ್ಯದಲ್ಲಿ ತೊಡಗಿದ್ದ. ನಾನು ಅವನ ಅಗ್ನಿಕಾರ್ಯ ಮುಗಿಯುವವರೆಗೆ ಸುಮ್ಮನೇ ಕುಳಿತುಕೊಳ್ಳದೆ ಅಲ್ಲಿಯೇ ಇದ್ದ ಹುಲ್ಲಿನಿಂದ ಒಂದು ಸರ್ಪದ ಆಕೃತಿಯನ್ನು ಮಾಡಿ ಖಗನತ್ತ ಎಸೆದೆ.. ಅಗ್ನಿಕಾರ್ಯದಲ್ಲಿ ತೊಡಗಿದ್ದ ಆತನಿಗೆ ಇದರ ಅರಿವಿಲ್ಲದೆ ನಿಜವಾದ ಹಾವು ಎಂದು ಭಾವಿಸಿ ಹೆದರಿಕೆಯಿಂದ ಕ್ಷಣಕಾಲ ಪ್ರಜ್ಞೆಯೇ ತಪ್ಪಿಬಿಟ್ಟಿತು. ಮತ್ತೆ ಎಚ್ಚರ ಹೊಂದಿ ನನ್ನನ್ನು ನೋಡಿದ.. ಇದು ನಾನು ಮಾಡಿದ ಕುಚೇಷ್ಟೆ ಎನ್ನುವುದು ತಿಳಿಯಿತು.. ಕೋಪದಿಂದ ಕಣ್ಣುಗಳು ಕೆಂಪಾದವು.. ನನ್ನನ್ನು ಹೆದರಿಸಲು ನೀನು ಹಾವಿನ ಆಕೃತಿಯನ್ನು ಬಳಸಿದೆಯಲ್ಲವೇ ಹಾಗಾಗಿ ನೀನೂ ಹಾವೇ ಆಗು ಎಂದು ಶಾಪ ಕೊಟ್ಟುಬಿಟ್ಟ... ನನಗೆ ದುಃಖವಾಯಿತು, ಖಗನ ತಪಸ್ಸಿನ ಸಾಮರ್ಥ್ಯ ತಿಳಿದ ನಾನು ಕಣ್ಣೀರುಸುರಿಸಿ ಕೇಳಿಕೊಂಡೆ.. ಮಿತ್ರತ್ವದ ನೆಲೆಯಲ್ಲಿ ಸಲಿಗೆಯಿಂದ ಎಸಗಿದ ಕಾರ್ಯ.. ಕ್ಷಮಿಸು.. ಎಂದೆ. ನನ್ನ ಮಾತನ್ನು ಕೇಳಿ ಶಾಂತನಾದ ಆ ನನ್ನ ಮಿತ್ರ.. "ನಾನಾಡಿದ ಮಾತು ಹುಸಿಯಾಗುವುದಿಲ್ಲ. ಆದರೆ ನಿನಗೆ ಸರ್ಪದ ರೂಪವೇ ಶಾಶ್ವತವಾಗಿ ಉಳಿಯುವುದಿಲ್ಲ. ಮುಂದೊಂದುದಿನ ಪ್ರಮತಿಪುತ್ರನಾದ ರುರುವಿನ ದರ್ಶನವಾದಾಗ ನಾನು ಕೊಟ್ಟ ಶಾಪವಿಮೋಚನೆ ಆಗುತ್ತದೆ" ಎಂದು ಆಡಿದ. ಅಂದಿನಿಂದ ಈ ಕಾಡಿನಲ್ಲಿ ನೀರುಹಾವಾಗಿ ನಿನ್ನ ನಿರೀಕ್ಷೆಯಲ್ಲಿಯೇ ಇದ್ದೆ.. ಇಂದು ನನ್ನ ಶಾಪವಿಮೋಚನೆ ಆಯಿತು ಎಂದು ಹೇಳಿ ನಿಜರೂಪದಲ್ಲಿ ಎದ್ದುನಿಂತ. ಶಾಪವನ್ನು ಕಳೆದುಕೊಂಡ ಸಹಸ್ರಪಾದ ಬ್ರಾಹ್ಮಣ ರುರುವಿಗೆ ಹೇಳಿದ.. " ಅಯ್ಯಾ.. ಬ್ರಾಹ್ಮಣನಾದವನು ಹಿಂಸೆಗೆ ತೊಡಗುವುದಲ್ಲ.. ಬದಲಾಗಿ ಆಗಬಹುದಾದ ಹಿಂಸೆಯನ್ನು ನಿಲ್ಲಿಸುವ ಪ್ರಯತ್ನವನ್ನು ಸಹಜವಾಗಿ ಕರುಣಾಮಯಿಯಾದ ಆತ ಮಾಡಬೇಕು. ಹಿಂದೊಂದು ಕಾಲದಲ್ಲಿ ಜನಮೇಜಯ ಎಂಬ ಅರಸ ಸರ್ಪ ಸಂತತಿಯನ್ನೇ ನಾಶಮಾಡುವ ಸಲುವಾಗಿ ಸರ್ಪಯಾಗ ಮಾಡತೊಡಗುತ್ತಾನೆ, ಆ ಕಾಲದಲ್ಲಿ ಸರ್ಪಗಳ ಮೊರೆಯನ್ನು ಕೇಳಿದ ಜರತ್ಕಾರು ಪುತ್ರನಾದ ಆಸ್ತೀಕ ತನ್ನ ಪಾಂಡಿತ್ಯದಿಂದ ಜನಮೇಜಯ ರಾಜನ ಮನವೊಲಿಸಿ ಸರ್ಪ ಹಿಂಸೆಯನ್ನು ನಿಲ್ಲಿಸಿದ ಕತೆಯನ್ನು ನಿನ್ನ ಆಶ್ರಮ ಪ್ರದೇಶದಲ್ಲಿರುವ ಹಿರಿಯ ಋಷಿಗಳಲ್ಲಿ ಕೇಳಿ ತಿಳಿದುಕೋ" ಎಂದು ಹೇಳಿ ಹೊರಟುಹೋದ. 🙏🙏 ಜರತ್ಕಾರು... ಆಸ್ತಿಕ ಜನ್ಮ ಮುಂದಿನ ಭಾಗ

ಅಕ್ಷೋಹಿಣಿ

ಅಕ್ಷೋಹಿಣಿ ಒಂದು ಅಕ್ಷೋಹಿಣಿಯ ಲೆಕ್ಕ... ಒಂದು ರಥ, ಒಂದು ಆನೆ, ಮೂರು ಕುದುರೆ, ಐದು ಕಾಲಾಳುಗಳಿಗೆ ಒಂದು ಪತ್ತಿ ಎಂದು ಹೆಸರು. ಮೂರು ಪತ್ತಿಗಳಿಗೆ ಒಂದು ಸೇನಾಮುಖ ಮೂರು ಸೇನಾಮುಖ ಒಂದು ಗುಲ್ಮ ಮೂರು ಗುಲ್ಮ ಒಂದು ಗಣ ಮೂರು ಗಣಗಳಿಗೆ ಒಂದು ವಾಹಿನಿ ಮೂರು ವಾಹಿನಿ ಒಂದು ಪೃತನೆ ಮೂರು ಪೃತನೆಗಳಿಗೆ ಒಂದು ಚಮು ಮೂರು ಚಮುಗಳಿಗೆ ಒಂದು ಅನೀಕಿನಿ ಹತ್ತು ಅನೀಕಿನಿಗಳಿಗೆ ಒಂದು ಅಕ್ಷೋಹಿಣಿ ಒಟ್ಟು ಒಂದು ಅಕ್ಷೋಹಿಣಿ ಸೇನೆಯಲ್ಲಿ, 21,870 ರಥಗಳು 21,870 ಆನೆಗಳು 65,610 ಕುದುರೆಗಳು, ಹಾಗೂ 1,09,350 ಕಾಲಾಳುಗಳು ಇರುತ್ತಾರೆ. *ಆಧಾರ ಮಹಾಭಾರತ*

Monday, May 19, 2025

ಪರೀಕ್ಷಿತ ಸರ್ಪ ಯಾಗಕ್ಕೆ ಕಾರಣವಾದ ಎರಡು ಘಟನೆಗಳನ್ನು ಈ ಮೊದಲು ತಿಳಿಸಿದೆ. ಈಗ ಮೂರನೆಯ ಘಟನೆ. ಮಹಾಭಾರತ ಯುದ್ಧದ ನಂತರ ಸುದೀರ್ಘ ಮೂವತ್ತಾರು ವರ್ಷಗಳಕಾಲ ಧರ್ಮರಾಜ ಚಕ್ರವರ್ತಿಯಾಗಿ ಹಸ್ತಿನಾವತಿಯನ್ನು ಪಾಲಿಸಿದ. ಅಶ್ವಮೇಧವೇ ಮುಂತಾದ ಯಾಗಗಳನ್ನು ಮಾಡಿ ಸಂಪೂರ್ಣ ಭೂಮಂಡಲದಲ್ಲಿ ತನ್ನ ಆಡಳಿತ ಸ್ಥಾಪಿಸಿದ.ಹೀಗಿರುವಾಗ ತನ್ನ ಆರಾಧ್ಯ ದೇವನಾದ ಶ್ರೀಕೃಷ್ಣ ಪರಮಾತ್ಮ ಪರಂಧಾಮಗೈದನೆಂಬ ವರ್ತಮಾನ ತಿಳಿದು ಸ್ವಾಮಿಯೇ ಇನ್ನಿಲ್ಲವೆಂದಾದ ಮೇಲೆ ಪಾಂಡವರಾದ ತಾವೂ ನಿರ್ಗಮಿಸಬೇಕೆಂದು ತೀರ್ಮಾನಕ್ಕೆ ಬಂದ. ಹಾಗಾಗಿಯೇ ಪರೀಕ್ಷಿತನಿಗೆ ಹಾಸ್ತಿನಾವತಿಯ ಪಟ್ಟಕಟ್ಟಿದ. ನಾಲ್ವರು ತಮ್ಮಂದಿರು ಹಾಗೂ ದ್ರೌಪದಿಯನ್ನೂ ಜೊತೆಗೂಡಿಕೊಂಡು ಸ್ವರ್ಗಾರೋಹಣ ಮಾಡಲು ಹೊರಟ. ಮಹಾಭಾರತ ಯುದ್ಧದ ನಂತರ ಪಾಂಡವರನ್ನು ಹೊರತುಪಡಿಸಿ ಚಂದ್ರವಂಶವನ್ನು ಮುನ್ನೆಡಿಸಲಿಕ್ಕೆ ಉಳಿದಿದ್ದು ಈ ಪರೀಕ್ಷಿತ ಒಬ್ಬನೇ. ಮಹಾಭಾರತ ಯುದ್ಧದ ಕೊನೆಯಲ್ಲಿ ಶತ್ರುಗಳನ್ನು ಸಂಪೂರ್ಣ ನಾಶಮಾಡಿಬಿಡುತ್ತೇನೆ ಎಂದು ದ್ರೋಣಪುತ್ರ ಅಶ್ವತ್ತಾಮ ಬ್ರಹ್ಮಾಸ್ತ್ರ ಪ್ರಯೋಗಿಸಿಬಿಡುತ್ತಾನೆ. ಅದಕ್ಕೆ ಪ್ರತಿಯಾಗಿ ಶ್ರೀಕೃಷ್ಣ ನಿರ್ದೇಶನದಂತೆ ಅರ್ಜುನನೂ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ನಾರದ, ವೇದವ್ಯಾಸರ ಮಾತಿನಿಂದ ಅರ್ಜುನ ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ತಾನೇ ಉಪಶಮನ ಮಾಡುತ್ತಾನೆ, ಆದರೆ ಅಶ್ವತ್ತಾಮ ಪ್ರಯೋಗಿಸಿದ ಅಸ್ತ್ರಕ್ಕೆ ಉತ್ತರೆಯ ಗರ್ಭ ಗುರಿಯಾಗುತ್ತದೆ.ಆ ಕಾಲಕ್ಕೆ ಅಭಿಮನ್ಯು ಪತ್ನಿಯಾದ ಉತ್ತರೆ ಗರ್ಭಿಣಿಯಾಗಿರುತ್ತಾಳೆ. ಶ್ರೀಕೃಷ್ಣ ಕಾರುಣ್ಯದಿಂದ ಗರ್ಭಸ್ತ ಶಿಶು ಸತ್ತರೂ ಮತ್ತೆ ಬದುಕುವಂತಾಗುತ್ತದೆ. ಹಾಗಾಗಿಯೇ ಅವನಿಗೆ ಪರೀಕ್ಷಿತ ಎಂಬ ಹೆಸರಿಡಲಾಯಿತು. ಪಾಂಡವರ ಬಳಿಯಲ್ಲಿಯೇ ಬೆಳೆದು ಕೃಪಾಚಾರ್ಯರಲ್ಲಿ ವಿದ್ಯಾಭ್ಯಾಸ ಮಾಡುತ್ತಾನೆ. ಉತ್ತರನ ಮಗಳಾದ ಇರಾವತಿ ಎಂಬಾಕೆಯನ್ನು ಮದುವೆಯಾಗಿ, ಜನಮೇಜಯ, ಶೃತಸೇನ,ಉಗ್ರಸೇನ ಮತ್ತು ಭೀಮಸೇನ ಎಂಬ ನಾಲ್ಕು ಜನ ಮಕ್ಕಳನ್ನು ಪಡೆಯುತ್ತಾನೆ. ಧರ್ಮರಾಜ ಇವನಿಗೆ ಪಟ್ಟಾಭಿಷೇಕ ಮಾಡುವಾಗ 36 ವರ್ಷ ವಯಸ್ಸು. ನಿಜವಾಗಿ ಆಗ ದ್ವಾಪರಯುಗದ ಅಂತ್ಯ ಮತ್ತು ಕಲಿಯುಗದ ಆರಂಭ ಕಾಲ. ಧರ್ಮರಾಜನ ಆಳ್ವಿಕೆಯಲ್ಲಿಯೇ ಕಲಿ ಪ್ರವೇಶ ಮಾಡಿದ್ದ.. ಭೀಮಸೇನನಿಂದ ಬಂದಿಸಲ್ಪಟ್ಟ ಕಲಿ ಧರ್ಮರಾಯನ ಕೇಳಿಕೆಯಂತೆ ತನ್ನ ಪ್ರಭಾವವನ್ನು ಸಂಪೂರ್ಣ ಬೀರದೆ ಇರಲು ಒಪ್ಪುತ್ತಾನೆ. ಪರೀಕ್ಷಿತನ ಆಡಳಿತದಲ್ಲೂ ಕಲಿ ಕಾಣಿಸಿಕೊಳ್ಳುತ್ತಾನೆ. ಒಬ್ಬ ಚಂಡಾಲನಾಗಿ, ರಾಜ ವೇಷವನ್ನು ತೊಟ್ಟು ಒಂದು ಹಸುವನ್ನು ಮತ್ತು ಒಂದು ವೃಷಭವನ್ನೂ ದಂಡಿಸುತ್ತಾ ಬರುತ್ತಿರುತ್ತಾನೆ. ಪಾಪ ವೃಷಭದ ಮೂರು ಕಾಲುಗಳು ಕುಂಟಾಗಿರುತ್ತದೆ. ಕೇವಲ ಒಂದೇ ಕಾಲಿನಿಂದ ನಿಂತು ಚಂಡಾಲ ಕೊಡುತ್ತಿರುವ ಹಿಂಸೆಯಿಂದ ನಡುಗುತ್ತಿರುತ್ತದೆ. ಹಸುವೋ.. ಬಾಯಾರಿಕೆ ಮತ್ತು ಹಸಿವಿನಿಂದ ಸಣಕಲು ಶರೀರವಾಗಿರುತ್ತದೆ. ಆದರೂ ಅವೆರಡನ್ನು ರಾಜ ವೇಷದಲ್ಲಿರುವ ಚಂಡಾಲ ದಂಡಿಸುತ್ತಿದ್ದ. ಇದನ್ನು ನೋಡಿದ ಪರೀಕ್ಷಿತ ಹರಿತವಾದ ಖಡ್ಗವನ್ನು ಸೆಳೆದು ಅವನನ್ನು ನಿಲ್ಲುವಂತೆ ಹೇಳಿ ಪ್ರಶ್ನಿಸಲಾಗಿ ಅವನೇ ಕಲಿಯೆಂದು ತಿಳಿಯುತ್ತದೆ. ಒಂದುಕಾಲಿನ ಮೇಲೆ ನಿಂತ ವೃಷಭವೇ ಧರ್ಮ, ನಿತ್ರಾಣಗೊಂಡ ಗೋವು ಭೂದೇವಿಯಾಗಿರುತ್ತಾರೆ. ಆಗ ಪರೀಕ್ಷಿತನ ಕೋಪದಿಂದ ಬೆದರಿದ ಕಲಿ ತನಗೆ ವಾಸ ಮಾಡಲು ಸ್ಥಳ ನಿರ್ದೇಶನ ಮಾಡುವಂತೆ ಕೇಳಿಕೊಳ್ಳುತ್ತಾನೆ. ಆಗ ಪರೀಕ್ಷಿತನು ಜೂಜು, ಮದ್ಯಪಾನ, ಆಧಾರ್ಮಿಕ ಸ್ತ್ರೀಸಂಗ, ಮತ್ತು ಹಿಂಸೆ ಇವುಗಳಲ್ಲಿ ವಾಸ ಮಾಡಲು ಅವಕಾಶ ಕೊಡುತ್ತಾನೆ. ಇನ್ನೂ ಸ್ವಲ್ಪ ಹೆಚ್ಚು ಬೇಕು ಎನ್ನಲು ಸುವರ್ಣವನ್ನೂ ಬಿಟ್ಟುಕೊಟ್ಟನು. ಅಲ್ಲಿಗೆ ಕಲಿಪುರುಷನಿಗೆ ವಾಸ ಮಾಡಲು ಅಸತ್ಯ, ಮದ, ಕಾಮ, ವೈರ ಮತ್ತು ರಜೋಗುಣ ಈ ಐದು ಸ್ಥಳಗಳು ದೊರೆತವು. ಕೆಲವು ವರ್ಷಗಳು ಕಳೆದವು, ಪರೀಕ್ಷಿತನು ಒಂದು ದಿನ ಮೃಗಬೇಟೆಗಾಗಿ ಹೊರಟನು, ಕಾಡಲ್ಲಿ ಬೇಟೆಯಾಡಿ, ತಿರುಗುತ್ತಾ ಬಹಳ ಆಯಾಸವಾಯಿತು. ಎಲ್ಲಿ ಹುಡುಕಿದರೂ ಕುಡಿಯಲು ಒಂದು ಹನಿ ನೀರೂ ಸಹ ಸಿಗಲಿಲ್ಲ. ಹಾಗೆಯೇ ಸಾಗಿಬರುತ್ತಿದ್ದಾಗ ಒಂದು ಆಶ್ರಮ ಕಾಣಿಸಿತು. ಮೊದಲೇ ಬಳಲಿದ್ದ ರಾಜನಿಗೆ ಆಶ್ರಮದಲ್ಲಿ ಬೇಕಾದ ಉಪಚಾರ ಸಿಗಬಹುದೆಂದು ಆಶ್ರಮ ಪ್ರವೇಶ ಮಾಡಿದ. ಆದರೆ ಅಲ್ಲಿ ಯಾರೂ ಇವನನ್ನು ಆದರಿಸಿ ಸ್ವಾಗತಿಸಲಿಲ್ಲ, ಮುಂದೆ ಸಾಗಿ ಬಂದಾಗ ಒಬ್ಬ ಮುನಿ ತಪಸ್ಸು ಮಾಡುತ್ತಾ ಕುಳಿತಿದ್ದ. ಬಾಯಾರಿಕೆಯನ್ನು ತಾಳಲಾರದೆ ಪರೀಕ್ಷಿತ ಅವನನ್ನೇ ಕರೆದು ತನ್ನ ತೃಷೆಯ ನಿವಾರಣೆಗಾಗಿ ಸ್ವಲ್ಪ ನಿರಾನ್ನಾದರೂ ಕೊಡಿರೆಂದು ಕೇಳಿಕೊಂಡ. ಏಕಾಗ್ರತೆಯಿಂದ ತಪಸ್ಸಿನಲ್ಲಿದ್ದ ಮುನಿಗೆ ಇದು ಕೇಳಿಸಲಿಲ್ಲ. ಮತ್ತೆ ಮತ್ತೆ ಕೂಗಿದರೂ ಮುನಿ ಮಾತನಾಡದೇ ಇದ್ದಾಗ ಅರಸನ ಸಹನೆ ಮೀರಿತು, ಒಂದು ನಾಡಿನ ಚಕ್ರವರ್ತಿಯಾದ ತನಗೆ ಅಪಮಾನ ಆಯಿತು ಎಂದು ಭಾವಿಸಿ ಹಿಂತಿರುಗಬೇಕೆಂದು ತೀರ್ಮಾನಿಸುವಾಗಲೇ ಅಲ್ಲಿಯೇ ಸತ್ತುಬಿದ್ದ ಒಂದು ಹಾವು ಕಾಣಿಸಿತು. " ಬಾಯಾರಿಕೆಯಿಂದ ಬಂದವನಿಗೆ ಒಂದು ಗುಟುಕು ನೀರನ್ನೂ ಕೊಡಲಾಗದ ನಿನಗೂ ಈ ಸತ್ತ ಹಾವಿಗೂ ಏನೂ ವ್ಯತ್ಯಾಸ ಇಲ್ಲ " ಎಂದು ಹೇಳಿ ತನ್ನ ಬಿಲ್ಲಿನ ತುದಿಯಿಂದ ಆ ಸತ್ತ ಹಾವನ್ನು ಎತ್ತಿ ತಪಸ್ವಿಯ ಕೊರಳಿಗೆ ಹಾಕಿ ರಾಜ್ಯದತ್ತ ನಡೆದುಬಿಟ್ಟ. ಅಲ್ಲಿ ತಪಸ್ಸಿನಲ್ಲಿ ತೊಡಗಿದ್ದ ಮಹರ್ಷಿಯ ಹೆಸರು ಶಮೀಕ, ಅವನಿಗೆ ಶೃಂಗಿ ಎಂಬ ತೇಜಸ್ವಿ ಪುತ್ರನಿದ್ದನು. ಅರಸ ಸರ್ಪವನ್ನು ಶಮೀಕನ ಕೊರಳಿಗೆ ಹಾಕಿ ಹೋದಮೇಲೆ ಶೃಂಗಿ ಆಶ್ರಮಕ್ಕೆ ಬಂದು ತಂದೆಯನ್ನು ಕಾಣುವಾಗ ಕೊರಳಲ್ಲಿ ತೂಗುತ್ತಿರುವ ಸತ್ತ ಹಾವು ಕಾಣಿಸುತ್ತದೆ. ಯೋಗದೃಷ್ಟಿಯಿಂದ ನೋಡುವಾಗ ಇದು ಪರೀಕ್ಷಿತ ಎಸಗಿದ ಕಾರ್ಯವೆಂದೂ ತಿಳಿಯುತ್ತಾನೆ. ಇದು ತಂದೆಯನ್ನು ಅವಮಾನಿಸಲೆಂದೇ ಮಾಡಿದ ಕಾರ್ಯ ಎಂದು ಭಾವಿಸಿದ ಶೃಂಗಿ " ಇಂತಹ ದುಃಸ್ಸಾಹಸಕ್ಕೆ ಮುಂದಾದ ಪರೀಕ್ಷಿತನು ಇಂದಿನಿಂದ ಏಳು ದಿನಗಳಲ್ಲಿ ತಕ್ಷಕ ಕಚ್ಚಿ ಸಾಯುವಂತಾಗಲಿ " ಎಂದು ಶಪಿಸಿಬಿಟ್ಟ. ಇಷ್ಟೆಲ್ಲ ನಡೆದಮೇಲೆ ಶಮೀಕ ಮಹರ್ಷಿಗೆ ಎಚ್ಚರವಾಯಿತು. ಎದುರಿಗೆ ಸಿಟ್ಟಿನಿಂದ ಕುಳಿತ ಮಗ, ಕೊರಳಲ್ಲಿ ಸತ್ತ ಹಾವು..., ಕೊರಳಿನಲ್ಲಿದ್ದ ಹಾವನ್ನು ತೆಗೆದೆಸೆದು ಏನಾಯಿತು ಎಂದು ಮಗನನ್ನು ಕೇಳಿದ. ನಡೆದ ವಿಷಯವನ್ನೆಲ್ಲಾ ಶೃಂಗಿ ತಿಳಿಸಿದಾಗ ಶಮೀಕನಿಗೆ ಸಂತೋಷಕ್ಕಿಂತ ದುಃಖವೇ ಆಯಿತು. ಅರಸ ತಾನಾಗಿ ನಮ್ಮ ಆಶ್ರಮಕ್ಕೆ ಬಂದಾಗ ಅವನನ್ನು ಸತ್ಕರಿಸಬೇಕಾದ್ದು ನಮ್ಮ ಕರ್ತವ್ಯವಾಗಿತ್ತು ಧ್ಯಾನಸ್ತನಾಗಿದ್ದ ನನಗೆ ತಿಳಿಯದೇ ಹೋಯಿತು. ಆದರೆ ನೀನು ಘೋರವಾದ ಶಾಪವನ್ನು ಕೊಟ್ಟು ತಪ್ಪುಮಾಡಿಬಿಟ್ಟೆ, ಧರ್ಮದಿಂದ ನಾಡನ್ನು ಆಳುತ್ತಿರುವ ಚಕ್ರವರ್ತಿ ಆತ. ಅವನ ನಾಶವನ್ನು ನಾವು ಬಯಸಬಾರದು, ಹೀಗೆ ಹೇಳಿ ತನ್ನ ಶಿಷ್ಯನಾದ ಗೌರಮುಖ ಎಂಬಾತನನ್ನು ಕರೆದು ಹಸ್ತಿನಾವತಿಗೆ ಹೋಗಿ ಶಾಪದ ಬಗ್ಗೆ ಎಚ್ಚರಿಸಿ ತಕ್ಷಕನಿಂದ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಪರೀಕ್ಷಿತನಿಗೆ ಹೇಳುವಂತೆ ಸೂಚಿಸುತ್ತಾನೆ. ಶಮೀಕನಿಂದ ಕಳುಹಲ್ಪಟ್ಟ ಗೌರಮುಖ ನೇರವಾಗಿ ಪರೀಕ್ಷಿತನ ಬಳಿಗೆ ಬಂದು ನಡೆದ ವಿಚಾರವನ್ನೆಲ್ಲ ತಿಳಿಸಿ ತಕ್ಷಕನಿಂದ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಶಮೀಕ ಮಹರ್ಷಿಗಳೇ ಮತ್ತೆ ಮತ್ತೆ ಹೇಳಿರುವುದಾಗಿ ತಿಳಿಸಿದ. ಪರೀಕ್ಷಿತನಿಗೆ ಸಾವು ಸಮೀಪಿಸಿದ ವಿಚಾರಕ್ಕಿಂತ ಅದು ಶಾಪರೂಪದಲ್ಲಿ ಬಂದಿದ್ದು ಬೇಸರವಾಯಿತು. ಆದರೂ ಗೌರಮುಖನನ್ನು ಆತಿಥ್ಯಮಾಡಿ, ಶಮೀಕರಿಗೂ ಸಮಾಧಾನದ ಮಾತುಗಳನ್ನು ಹೇಳಿ ಕಳುಹಿಸಿ ಕೊಡುತ್ತಾನೆ. ತಕ್ಷಕನಿಂದ ರಕ್ಷಣೆಗೆ ಬೇಕಾಗಿ ಗಂಗಾತೀರದಲ್ಲಿ ಏಕಸ್ತಂಭ ಭವನದ ನಿರ್ಮಾಣವಾಗುತ್ತದೆ. ಪರೀಕ್ಷಿತನಿಗೆ ಬದುಕುವ ಯಾವ ನಿರೀಕ್ಷೆಗಳೂ ಉಳಿದಿರಲಿಲ್ಲ. ತಾನು ಸಹನೆಮೀರಿ ವರ್ತಿಸಿ ಶಾಪಕ್ಕೆ ಗುರಿಯಾದೆ ಎಂಬುದೇ ಕಾಡುತ್ತಿತ್ತು, ಹೇಗಿದ್ದರೂ ಸಾವು ನಿಶ್ಚಿತ. ಹಾಗಾಗಿಯೇ ಉಳಿದ ದಿನಗಳನ್ನು ಪುಣ್ಯಕಥಾ ಶ್ರವಣದ ಮೂಲಕ ಕಳೆಯಲು ತೀರ್ಮಾನಿಸಿದ. ಆ ಸಮಯಕ್ಕೆ ಶುಕಮುನಿಗಳು ರಾಜನ ಬಳಿಗೆ ಆಗಮಿಸುತ್ತಾರೆ. ಅರಸನು ಆದರದಿಂದ ಸತ್ಕಾರ ಮಾಡಿ ಅವರಲ್ಲಿ ಭಾಗವತಶ್ರವಣ ಮಾಡುವ ಆಸೆಯನ್ನು ವ್ಯಕ್ತಪಡಿಸುತ್ತಾನೆ. ಶುಕಮುನಿಗಳು ಅವನಿಗೆ ಸಂಪೂರ್ಣ ಶ್ರೀ ಮದ್ಭಾಗವತವನ್ನು ಹೇಳಲು ಆರಂಭಿಸುತ್ತಾರೆ. ಇತ್ತ ಶೃಂಗಿಯ ಶಾಪದಿಂದ ಕಾರ್ಯಪ್ರವೃತ್ತನಾದ ತಕ್ಷಕ ಪರೀಕ್ಷಿತ ಇರುವಲ್ಲಿಗೆ ರೂಪ ಮರೆಸಿಕೊಂಡು ಹೊರಡುತ್ತಾನೆ, ದಾರಿಯಲ್ಲಿ ಬರುವಾಗ ಕಶ್ಯಪ ಎನ್ನುವ ಬ್ರಾಹ್ಮಣ ಸಿಗುತ್ತಾನೆ. ಪರಸ್ಪರ ಪರಿಚಯವಾಗುತ್ತದೆ. ಆಗ ಕಶ್ಯಪ ಪರೀಕ್ಷಿತನಿಗೆ ಶೃಂಗಿಯ ಶಾಪ, ಮತ್ತು ಆ ಶಾಪದಿಂದ ರಾಜನನ್ನು ಉಳಿಸಲು ಮಂತ್ರವಿದ್ಯೆ ಅರಿತ ತಾನು ಧಾವಿಸುತ್ತಿರುವುದಾಗಿ ಹೇಳಿದ. ಆಗ ತಕ್ಷಕ.. " ಅಯ್ಯಾ ಬ್ರಾಹ್ಮಣ ಅರಸನನ್ನು ಕಚ್ಚುವುದು ಸಾಮಾನ್ಯ ಹಾವಲ್ಲ.. ಘೋರವಾದ ವಿಷದಿಂದ ಏನನ್ನಾದರೂ ಕ್ಷಣಮಾತ್ರದಲ್ಲಿ ಭಸ್ಮಮಾಡಿಬಿಡಬಹುದಾದ ತಕ್ಷಕನ ವಿಷದಿಂದ ಬದುಕಿಸಬಲ್ಲೆಯಾ.. " ಎಂದು ಕೇಳಿದ. ಆಗ ಕಶ್ಯಪ ಎಂತಹ ವಿಷವೇ ಆಗಲಿ ತನ್ನಲ್ಲಿ ಮಂತ್ರ.. ಉಂಟು ಎಂದು ಹೇಳುತ್ತಾನೆ. ಆಗ ತಕ್ಷಕ ತನ್ನ ನಿಜವನ್ನು ತಿಳಿಸಿ, ಅವನ ಔಷಧಿಯ ಪರಿಣಾಮ ಪರೀಕ್ಷೆಮಾಡಲು ಮುಂದಾಗುತ್ತಾನೆ. ಸಮೀಪದಲ್ಲಿಯೇ ಕಡುಹಸಿರಿನಿಂದ ಕೂಡಿದ್ದ ಮರವನ್ನು ತಕ್ಷಕ ಹೋಗಿ ಕಚ್ಚುತ್ತಾನೆ, ಮರುಕ್ಷಣವೇ ಆ ಮರ ವಿಷಪ್ರಭಾವದಿಂದ ಸುಟ್ಟು ಬೂದಿಯಾಗಿ ಹೋಗುತ್ತದೆ. ಪ್ರಶ್ನಾರ್ಥಕವಾಗಿ ಕಶ್ಯಪನನ್ನು ನೋಡಲು ಮರುಕ್ಷಣದಲ್ಲಿಯೇ ಮಂತ್ರಪ್ರಭಾವದಿಂದ ಬೂದಿಯಾದ ಮರವನ್ನು ಮೊದಲಿನಂತೆಯೇ ಚಿಗುರಿ ನಿಲ್ಲುವಂತೆ ಮಾಡುತ್ತಾನೆ. ತಕ್ಷಕನಿಗೆ ಆತಂಕವಾಗುತ್ತದೆ ಶೃಂಗಿಯ ಶಾಪವನ್ನು ಸತ್ಯವಾಗಿಸಬೇಕಾದ ಅನಿವಾರ್ಯತೆ ಉಂಟು, ಆದರೆ ಈ ಬ್ರಾಹ್ಮಣ ಅಲ್ಲಿಗೆ ಬಂದರೆ ತನ್ನ ಕಾರ್ಯ ಯಶಸ್ವಿಯಾಗಿ ನೆರವೇರುವುದಿಲ್ಲ. ಆಗ ಬ್ರಾಹ್ಮಣನಿಗೆ ಪರೀಕ್ಷಿತನನ್ನು ಬದುಕಿಸಿದರೆ ಸಿಗಬಹುದಾದ ಪ್ರಯೋಜನ ಏನೆಂದು ಕೇಳಲು ಬೇಕಾದಷ್ಟು ಧನಪ್ರಾಪ್ತಿಯಾಗುತ್ತದೆ ಎನ್ನುತ್ತಾನೆ. ಆವಾಗ ಸರ್ಪರಾಜನಾದ ತನ್ನಲ್ಲಿ ಇರುವ ಸಂಪತ್ತನ್ನು ತಿಳಿಸಿ ಹೇರಳವಾದ ಧನರಾಶಿಯನ್ನು ಕಶ್ಯಪನಿಗೆ ಕೊಟ್ಟು ಹಿಂದಕ್ಕೆ ಕಳುಹಿಸುತ್ತಾನೆ. ಇತ್ತ ಪರೀಕ್ಷಿತ ಏಕಸ್ತ0ಭ ಭವನದಲ್ಲಿ ಕುಳಿತು ಭಾಗವತ ಶ್ರವಣದಲ್ಲಿ ತೊಡಗಿ ಏಳನೆಯ ದಿನ, ಎಲ್ಲೆಲ್ಲಿಯೂ ರಾಜನ ರಕ್ಷಣೆಗೆ ಬಿಗಿ ಭದ್ರತೆ, ಮಣಿ.. ಮಂತ್ರಗಳಿಂದ ರಾಜನನ್ನು ರಕ್ಷಿಸಲು ನೆರೆದ ಪಂಡಿತರು.. ಭಾಗವತದ ಪುಣ್ಯಶ್ರವಣ ಮುಗಿದಿದೆ. ಸುರ್ಯಾಸ್ತ ಆಗುವ ಸಮಯ... ಕೆಲವರಿಗೆ ಆಗಲೇ ಒಂದು ರೀತಿಯ ಸಮಾಧಾನ.. ಇನ್ನು ಏನೂ ಅಗಲಿಕ್ಕಿಲ್ಲ.. ಏಳನೆಯ ದಿನ ಕಳೆಯುತ್ತಾ ಬಂತು... ಆದರೆ ಪರೀಕ್ಷಿತನಿಗೆ ಬದುಕುವ ಆಸೆಯಿಲ್ಲ, ಭಾಗವತ ಶ್ರವಣವಾದಮೇಲೆ ತಾನೇ ಪ್ರಾಯೋಪವೇಷ ಮಾಡುವ ಮನಸ್ಥಿತಿಗೆ ಬಂದುಬಿಟ್ಟಿದ್ದಾನೆ. ತಕ್ಷಕ ಬಂದು ನೋಡಿದಾಗ ಸುಲಭವಾಗಿ ರಾಜನ ಬಳಿ ಹೋಗುವುದು ಕಷ್ಟ ಎಂಬ ಅರಿವಾಗುತ್ತದೆ. ತನ್ನ ಜೊತೆಗಿರುವ ಸರ್ಪಗಳನ್ನು ಕರೆದು ಬ್ರಾಹ್ಮಣ ರೂಪದಿಂದ ಅರಸನನ್ನು ಕಾಣಲು ಹಣ್ಣು.. ದರ್ಬೆಗಳನ್ನು ಹಿಡಿದು ಹೋಗಲು ತಿಳಿಸುತ್ತಾನೆ. ಅವರು ತೆಗೆದುಕೊಂಡುಹೋಗುವ ಹಣ್ಣಿನಲ್ಲಿ ತಾನೇ ಸೂಕ್ಷ್ಮ ರೂಪದಲ್ಲಿ ಹುಳುವಾಗಿ ಅಡಗಿಕೊಳ್ಳುತ್ತಾನೆ. ಕಪಟ ವಿಪ್ರರು ಸ್ವಸ್ತಿವಾಚನ ಮಾಡುತ್ತಾ ರಾಜನನ್ನು ಸಂದರ್ಶಿಸುತ್ತಾರೆ. ತಾವು ತಂದಂತ ಫಲಗಳನ್ನು ಹರಿವಾಣದಲ್ಲಿಟ್ಟು ರಾಜನಿಗೆ ಅರ್ಪಿಸಿ ತೆರಳುತ್ತಾರೆ.ಅದಾಗಲೇ ಸೂರ್ಯಾಸ್ತದ ನಂತರ ಕತ್ತಲೆ ಭವನವನ್ನು ಆವರಿಸತೊಡಗಿರುತ್ತದೆ. ಹರಿವಾಣದಲ್ಲಿದ್ದ ಹಣ್ಣುಗಳನ್ನು ತೆಗೆದುಕೊಂಡು ಕೆಲವನ್ನು ತಂನ್ನೊಂದಿಗಿರುವ ಮಂತ್ರಿಗಳಿಗೂ ಹಿತೈಷಿಗಳಿಗೂ ನೀಡುತ್ತಾನೆ. ಒಂದು ಹಣ್ಣನ್ನು ತಾನೇ ಹಿಡಿದು ತಿನ್ನಬೇಕೆನ್ನುವಾಗ ಯೋಚನೆ.... " ಋಷಿಕುಮಾರನ ಶಾಪವನ್ನು ನಿಜವಾಗಿಸಲು ಈ ಹಣ್ಣೇ ತಕ್ಷಕನಾಗಿ ಕಚ್ಚಿಬಿಡಲಿ... " ಇನ್ನೇನು ಕೈಯಲ್ಲಿರುವ ಹಣ್ಣನ್ನು ಕಚ್ಚಬೇಕೆನ್ನುವಾಗ.. ಅಣುರೂಪದಲ್ಲಿ ಅವಿತಿದ್ದ ತಕ್ಷಕ ಹೊರಬಂದು ಕಚ್ಚಿಬಿಡುತ್ತಾನೆ.. ಕ್ಷಣಮಾತ್ರದಲ್ಲಿ ವಿಷಪ್ರಭಾವದಿಂದ ರಾಜನದೇಹ ಸುಟ್ಟುಹೋಗುತ್ತದೆ. ಇದೇ ಕಾರಣದಿಂದ ಪರೀಕ್ಷಿತನ ಮಗನಾದ ಜನಮೇಜಯ ಸರ್ಪಯಾಗಕ್ಕೆ ಸಂಕಲ್ಪ ಮಾಡುತ್ತಾನೆ. 🙏🙏
ವಿನತೆ ಮತ್ತು ಕದ್ರೂ ಗುರುಭಕ್ತಿ ಹೊಂದಿದ, ಶ್ರದ್ದೆಯಿಂದ ಗುರುದಕ್ಷಿಣೆ ಅರ್ಪಿಸಿದ ಶಿಷ್ಯರನ್ನು ಪರಿಚಯಿಸಲು ಹೊರಟಾಗ ಉತ್ತನ್ಕನ ಕಥೆ ತಂದು ನಿಲ್ಲಿಸಿದ್ದು ಜನಮೆಜಯನ ಸರ್ಪಯಾಗದ ಆರಂಭಕ್ಕೆ. ಆದರೆ ನಾನು ಮೊದಲೇ ಹೇಳಿದ್ದೆ... ಜನಮೇಜಯನ ಸರ್ಪಯಾಗಕ್ಕೆಹಲವು ಹಿನ್ನಲೆ ಇದೆ ಎಂದು. ಮೊದಲ ಹಿನ್ನೆಲೆ ಬಗ್ಗೆ ನೋಡೋಣ.. ದಕ್ಷ ಪ್ರಜಾಪತಿಗೆ 60 ಜನ ಹೆಣ್ಣು ಮಕ್ಕಳು ಅವರಲ್ಲಿ ದಿತಿ ಅದಿತಿ ಮುಂತಾದ 13 ಜನರನ್ನು ಕಶ್ಯಪರಿಗೆ ಮದುವೆ ಮಾಡಿಕೊಟ್ಟ. ಅವರಲ್ಲಿ ಕದ್ರೂ ವಿನತೆ ಎಂಬ ಇಬ್ಬರು ಸಹೋದರಿಯರಿಗೆ ಉತ್ತಮವಾದ ಸಂತಾನ ಹೊಂದಬೇಕೆಂಬ ಅಪೇಕ್ಷೆಯುನ್ಟಾಯಿತು. ಹಾಗೆಯೇ ಕದ್ರೂ ಕಶ್ಯಪರ ಬಳಿ ಹೋಗಿ.. " ಸ್ವಾಮೀ ಲೋಕದಲ್ಲಿ ಪರಾಕ್ರಮಿಗಳದ ಒಂದು ಸಾವಿರ ನಾಗಗಳನ್ನು ನಾನು ಪುತ್ರರನ್ನಾಗಿ ಹೊಂದುವಂತೆ ಅನುಗ್ರಹಿಸಿ " ಎಂದು ಬೇಡಿಕೊಂಡಳು. ಕಶ್ಯಪರು ಅಸ್ತು ಎಂದು ಆಶೀರ್ವದಿಸಿದರು. ಇದನ್ನು ತಿಳಿದ ವಿನತೆಯೂ ಗಂಡನ ಬಳಿ ಹೋಗಿ.. " ಸ್ವಾಮೀ ಸಂಖ್ಯಾಬಲಕ್ಕಿಂತ ಪರಾಕ್ರಮಿಗಳಾದ ಇಬ್ಬರೇ ಇದ್ದರೂ ಸಾಕು ಹಾಗಾಗಿ ನನಗೆ ನನ್ನಕ್ಕನಿಗೆ ಹುಟ್ಟಬಹುದಾದ ಸಾವಿರ ಮಕ್ಕಳನ್ನೂ ಮೀರಿಸುವ ಎರಡು ಜನ ಮಕ್ಕಳು ಬೇಕು " ಎಂದಳು ಕಶ್ಯಪರು ನಸುನಗುತ್ತಾ ಆಗಲಿ ಎಂದು ಹೇಳಿ ತಪಸ್ಸಿಗೆ ಹೊರಟು ಹೋದರು. ಕೆಲವು ವರ್ಷಗಳೇ ಕಳೆಯಿತು, ಕದ್ರೂ ಒಂದು ಸಾವಿರ ಮೊಟ್ಟೆಗಳನ್ನು ಪ್ರಸವಿಸಿದಳು. ದಾಸಿಯರು ಅವುಗಳನ್ನು ಪಾತ್ರೆಯಲ್ಲಿಟ್ಟು ಶಾಖವನ್ನು ಕೊಡುತ್ತ ರಕ್ಷಿಸಿ ಇಟ್ಟರು. ಕೆಲವು ಕಾಲದಲ್ಲಿ ವಿನತೆಯೂ ಎರಡು ಮೊಟ್ಟೆಯನ್ನು ಪ್ರಸವಿಸಿದಳು. ದಾಸಿಯರು ಅವುಗಳನ್ನೂ ಹಾಗೆಯೇ ರಕ್ಷಿಸತೊಡಗಿದರು. ಸುಮಾರು ಇದುನೂರು ವರ್ಷಗಳೇ ಕಳೆಯಿತು.. ಕದ್ರೂ ಪ್ರಸವಿಸಿದ ಮೊಟ್ಟೆಗಳು ಒಂದೊಂದೇ ಒಡೆದು ಸುಂದರವಾದ ಸರ್ಪರೂಪಿ ಮರಿಗಳು ಹೊರಗೆ ಬಂದವು. ತಾಯಿಯಾದ ಕದ್ರೂ ಮಕ್ಕಳನ್ನು ನೋಡಿ ಸಂತೋಷ ಹೊಂದಿದಳು. ವಿನತೆಯ ಮೊಟ್ಟೆಗಳು ಒಡೆಯಲೇ ಇಲ್ಲ. ಒಂದುಕಡೆ ಕದ್ರೂ ಮಕ್ಕಳೊಂದಿಗೆ ಆನಂದಪಡುವುದನ್ನು ನೋಡಿ ಅಸೂಯೆ, ಮತ್ತೊಂದೆಡೆ ತನ್ನ ಮೊಟ್ಟೆಯಿಂದ ಮಕ್ಕಳು ಬರಲಿಲ್ಲ ಎಂಬ ಆತಂಕ.. ದಿನವೂ ಹೋಗಿ ನೋಡುವಳು. ಕಡೆಗೂ ವಿನತೆಯ ಸಂಯಮ ಮೀರಿತು, ಒಂದು ದಿನ ಒಂದು ಮೊಟ್ಟೆಯನ್ನು ತಾನೇ ಒಡೆದುಬಿಟ್ಟಳು. ಒಳಗಿನ ದೃಶ್ಯವನ್ನು ನೋಡಿ ವಿನತೆಗೆ ಆಘಾತವಾಯಿತು. ದೇಹದ ಮೇಲರ್ದ ಸುಂದರವಾಗಿ ಪರಿಪೂರ್ಣ ಬೆಳವಣಿಗೆ ಆಗಿತ್ತು ಸೊಂಟದ ಕೆಳಗಿನ ಭಾಗ ಪೂರ್ಣವಾಗಿರಲಿಲ್ಲ. ಹಾಗಿದ್ದರೂ ಶಿಶುವಿಗೆ ಚೈತನ್ಯವಿತ್ತು. ಸೂರ್ಯನ ಸರಿಸಮವಾದ ಕಾಂತಿಯಿಂದ ಬೆಳಗುತಿತ್ತು. ಬೆಳವಣಿಗೆ ಪೂರ್ವದಲ್ಲಿಯೇ ಮೊಟ್ಟೆಯನ್ನು ಒಡೆದು ತನ್ನನ್ನು ಅಂಗವಿಕಲನನ್ನಾಗಿಸಿಸದ ತಾಯಿಯನ್ನು ಮಗು ಕೋಪದಿಂದ ದುರುಗುಟ್ಟಿ ನೋಡಿತು. " ನೀನು ಕದ್ರುವಿನ ಬಗ್ಗೆ ಹೊಂದಿದ ಮಾತ್ಸರ್ಯ ನನ್ನನ್ನು ಅಂಗವಿಕಲನನ್ನಾಗಿ ಮಾಡಿತು.. ನನ್ನ ಜೀವನದ ಶ್ರೇಯಸ್ಸಿಗೆ ಕಾರಣಳಾಗಬೇಕಿದ್ದ ನೀನು ನನ್ನನ್ನು ಹೆಳವನನ್ನಾಗಿಸಿದ ಕಾರಣದಿಂದ ದಾಸ್ಯದ ಜೀವನ ನಡೆಸುವಂತಾಗಲಿ" ಎಂದು ಶಪಿಸಿಬಿಟ್ಟಿತು. ಮಗುವಿನ ನುಡಿಯನ್ನು ಕೇಳಿ ವಿನತೆಗೆ ಆಘಾತವಾಯಿತು. " ಮಗೂ ತಪ್ಪು ಮಾಡಿದೆ.. ಆದರೆ ನಾನು ದಾಸ್ಯದ ಬದುಕನ್ನು ಹೇಗೆ ಸ್ವೀಕರಿಸಲಿ ಕಂದಾ.. ನನ್ನನ್ನು ಕ್ಷಮಿಸಿಬಿಡು" ಎಂದು ಎತ್ತಿ ಮುದ್ದಿಸುತ್ತ ಕೇಳಿಕೊಂಡಳು. ಆಗ " ಅಮ್ಮಾ.. ಇಲ್ಲಿರುವ ಇನ್ನೊಂದು ಅಂಡವನ್ನು ಪೂರ್ಣ ಬೆಳೆಯುವ ಅವಕಾಶ ಮಾಡಿಕೊಡು.. ಇನ್ನೂ ಐದುನೂರು ವರ್ಷಗಳು ಬೇಕು, ಹಾಗೆ ಪೂರ್ಣ ಬೆಳವಣಿಗೆ ಹೊಂದಿ ಹೊರಗೆ ಬರುವ ನಿನ್ನ ಮಗನ ಸಾಹಸದಿಂದ ನಿನ್ನ ದಾಸ್ಯದ ನಿವಾರಣೆ ಆಗುತ್ತದೆ" ಎಂದು ಹೇಳಿ ಮೊದಲೇ ದೈವ ನಿರ್ಣಯದಂತೆ ಸೂರ್ಯನ ಸೂರ್ಯನ ರಥವೇರಿ ರಥದ ಸಾರಥಿಯಾಯಿತು. ಅವನೇ ಸೂರ್ಯನ ಸಾರಥಿ ಅರುಣ. ಸೂರ್ಯನ ಸಾರಥಿ ಹೆಳವ ಎಂದು ಏಕೆ ಹೇಳುತ್ತಾರೆ ಎಂಬುದಕ್ಕೂ ಹಿನ್ನೆಲೆ ಇದು. ನಂತರ ದಿನಗಳು ಕಳೆದವು.. ಅರುಣನ ಶಾಪದಿಂದ ಬೇಸರಹೊಂದಿದ ವಿನತೆ ಇನ್ನೊಂದು ಮೊಟ್ಟೆಯ ಉಪೇಕ್ಷೆಯನ್ನೇ ಮಾಡಿದಳು. ಆದರೂ ಅದರಷ್ಟಕ್ಕೆ ಅದು ಬೆಳೆಯುತ್ತಾ ಇತ್ತು. ಅದಾಗಲೇ ದೇವಾಸುರರು ಸೇರಿ ಸಮುದ್ರಮಥನ ಮಾಡುತ್ತಿದ್ದರು ಉಚ್ಚೈಶ್ರವಸವೆಂಬ ಶ್ರೇಷ್ಠವಾದ ಕುದುರೆ ಮಥನದಿಂದ ಹುಟ್ಟಿಬಂದಿತ್ತು. ಹೀಗೆಯೇ ಮಾತನಾಡುತ್ತ ಕದ್ರೂ ವಿನತೆಯರು ಅದರ ಬಣ್ಣದ ಬಗ್ಗೆ ಮಾತನಾಡಿಕೊಳ್ಳತೊಡಗಿದರು. ವಿನತೆ ಆ ಕುದುರೆ ಸಂಪೂರ್ಣ ಶ್ವೇತವರ್ಣದಿಂದ ಕೂಡಿದೆ ಎಂದಳು. ಕದ್ರೂ ಅದರ ಬಾಲ ಕಪ್ಪು ಎಂದಳು. ಮಾತು ಮಾತಿನಲ್ಲಿ ಪಂದ್ಯವೇ ಏರ್ಪಟ್ಟಿತು. ಸರಿ ನಾಳೆ ಹೋಗಿ ಪ್ರತ್ಯಕ್ಷ ನೋಡೋಣ.. ಯಾರು ಗೆಲ್ಲುವರೋ ಅವರಿಗೆ ಸೋತವರು ದಾಸಿಯಾಗಬೇಕು ಎಂಬ ಒಪ್ಪಂದವೂ ಆಯಿತು. ರಾತ್ರಿ ಕದ್ರೂ ಯೋಚನೆ ಮಾಡಿದಳು, ದೇವಕುದುರೆ ಸಂಪೂರ್ಣ ಬಿಳಿ ಎಂದು ತಿಳಿದೂ ಮಾತು ಮಾತಿನಲ್ಲಿ ಪಂಥ ಏರ್ಪಟ್ಟಿತಲ್ಲ ಸೋತರೆ ವಿನತೆಯ ದಾಸಿಯಾಗಬೇಕು ಎಂದು ಚಿಂತಿಸಿ ಮಕ್ಕಳಾದ ನಾಗಗಳನ್ನು ಕರೆದಳು. " ಮಕ್ಕಳೇ ನಿಮ್ಮ ಮಾತೆಯಾದ ನಾನು ನಿಮ್ಮ ಚಿಕ್ಕಮ್ಮನ ದಾಸಿಯಾಗಬೇಕಾದ ಸಂದರ್ಭ ಬಂದಿದೆ ಹಾಗಾಗಿ ನೀವೇ ಇದನ್ನು ತಡೆಯಬೇಕು " ಎಂದಳು. " ನಿನಗಾಗಿ ನಾವು ಏನನ್ನು ಮಾಡಬೇಕು ಹೇಳು ತಾಯಿ " ಎಂದು ಮಕ್ಕಳೆಲ್ಲ ಕೇಳಿದರು. "ಮಕ್ಕಳೇ.. ನಾಳೆ ನಾನೂ ಮತ್ತು ನಿಮ್ಮ ಚಿಕ್ಕಮ್ಮ ಕದ್ರೂ ಒಟ್ಟಾಗಿ ದೇವಾಶ್ವವಾದ ಉಚ್ಚೈಶ್ರವಸವನ್ನು ನೋಡಲು ಹೋಗುತ್ತೇವೆ. ಆ ಕಾಲಕ್ಕೆ ಕಪ್ಪಾದ ನೀವು ಹೋಗಿ ಅದರ ಬಾಲವನ್ನು ಕಚ್ಚಿಕೊಂಡು ಅದರ ಬಾಲ ಕಪ್ಪಾಗಿ ಕಾಣುವಂತೆ ಮಾಡಬೇಕು" ಎಂದಳು. ಇದನ್ನು ಕೇಳಿದ ಸರ್ಪಗಳು " ಮಾತೇ.. ತಾಯಿಯಾದವಳು ಎಂದಿಗೂ ಮಕ್ಕಳ ಹಿತವನ್ನೇ ಬಯಸಬೇಕು ಅವರಿಗೆ ಧರ್ಮದ ಮಾರ್ಗವನ್ನೇ ತಿಳಿಸಿಕೊಡಬೇಕು.. ಆದರೆ ನೀನು ಅಧರ್ಮಮಾರ್ಗ ತೋರಿಸುತ್ತಿರುವೆ ಇದು ನಮಗೆ ಸಾಧ್ಯವಾಗದು " ಎಂದು ಹೇಳಿಬಿಟ್ಟವು. ಇದನ್ನು ಕೇಳಿದ ಕದ್ರುವಿಗೆ ತಡೆಯಲಾರದ ಕೋಪ ಬಂದುಬಿಟ್ಟಿತು ತಾನೇ ಸಾಕಿ ಬೆಳೆಸಿದ ಮಕ್ಕಳು ತನ್ನ ಮಾತಿಗೆ ಪ್ರತಿಯಾಡಿಬಿಟ್ಟರಲ್ಲ.. ಪಂದ್ಯದಲ್ಲಿ ಸೋತರೆ ದಾಸಿಯಾಗುವುದೊಂದು ಕಡೆ, ಅವಳ ಕಣ್ಣುಗಳು ಕೆಂಪಾದವು ಇದನ್ನೆಲ್ಲ ಯೋಚಿಸಿ ಅವಳ ಬಾಯಲ್ಲಿ ಶಾಪವಾಕ್ಯ ಬಂದು ಬಿಟ್ಟಿತು. " ಪರೀಕ್ಷಿತ ಪುತ್ರನಾದ ಜನಮೇಜಯನು ಮಾಡುವ ಯಾಗದಲ್ಲಿ ಅಗ್ನಿಯು ನಿಮ್ಮನ್ನು ದಹಿಸಲಿ " ಎಂದು ಹೇಳಿಬಿಟ್ಟಳು. ಲೋಕದಲ್ಲಿ ನಡೆಯುವ ವಿದ್ಯಮಾನವನ್ನು ತಿಳಿಯುವ ಬ್ರಹ್ಮ ಈ ಶಾಪವಾಕ್ಯಕ್ಕೆ ಅಸ್ತು ಎಂದುಬಿಟ್ಟ. ಯಾಕೆಂದರೆ ಪ್ರಪಂಚವನ್ನೇ ಸುಡಬಹುದಾದ ಘೋರ ವಿಷವನ್ನು ಹೊಂದಿದ ಸರ್ಪಗಳು ಅದೇ ಅಹಂಕಾರದಿಂದ ಪ್ರಪಂಚದಲ್ಲಿರುವ ಜೀವರಾಶಿಗಳನ್ನು ಕಚ್ಚಿ ಕೊಲ್ಲತೊಡಗಿದರೆ ತನ್ನ ಸೃಷ್ಟಿಯೇ ನಾಶವಾಗಿ ಹೋಗುತ್ತದೆ. ಹಾಗಾಗಿ ಕಶ್ಯಪನನ್ನು ಕರೆದು ಈ ವಿಚಾರವನ್ನು ಹೇಳಿ ನಡೆದ ಘಟನೆಬಗ್ಗೆ ಬೇಸರಗೊಳ್ಳಬೇಡೆಂದು ಸಮಾಧಾನಪಡಿಸಿದ. ಇತ್ತ ಶಾಪ ಹೊಂದಿದ ನಾಗಗಳು ಆ ರಾತ್ರಿ ಭಯದಿಂದ ಒಂದೆಡೆ ಸೇರಿದವು. ಕಾರ್ಕೋಟಕನೆಂಬ ಒಬ್ಬ ಸರ್ಪ ಪರಿಣಾಮ ಏನೇ ಆಗಲಿ ಆದರೆ ನಾಳೆ ನಾವು ತಾಯಿಯ ಮಾತನ್ನು ನಡೆಸಲು ದೇವಕುದುರೆಯ ಬಾಲವನ್ನು ಕಚ್ಚಿಕೊಂಡು ಕಪ್ಪು ಕಾಣುವಂತೆ ಮಾಡುವುದೇ ಸೂಕ್ತ ಎಂಬ ನಿರ್ಧಾರದ ಮಾತಾಡಿದ. ಅದಕ್ಕೆ ಎಲ್ಲರೂ ಒಪ್ಪಿದರು. ಮರುದಿನ ಕದ್ರೂ ವಿನತೆಯರಿಬ್ಬರೂ ಅಶ್ವವನ್ನು ನೋಡಲು ಹೋದರು.. ಕದ್ರುವಿಗೆ ತಾನು ಸೋಲುತ್ತೇನೆ ಎಂಬ ತೀರ್ಮಾನ ಆಗಿ ಹೋಗಿತ್ತು. ಆದರೆ ವಾಯುವೇಗವಾಗಿ ಸಾಗುತ್ತಿದ್ದ ಕುದುರೆಯನ್ನು ಇಬ್ಬರೂ ನೋಡಿದರು. ಆಶ್ಚರ್ಯ.. ಅದರ ಬಾಲ ಕಪ್ಪಾಗಿತ್ತು. ವಿನತೆಯ ಮುಖವೂ ಕಪ್ಪಾಯಿತು. ಅಂದು ಪುತ್ರನಾದ ಅರುಣ ಕೊಟ್ಟ ಶಾಪದ ಫಲ ಇದು ಎಂಬ ಅರಿವೂ ಆಯಿತು. ಕದ್ರೂ ಪಂಥ ಗೆದ್ದು ಬೀಗಿದಳು. ಆದರೆ ಹಿಂದೆ ತನ್ನ ಮಕ್ಕಳಿಗೆ ಕೊಟ್ಟ ಶಾಪ ಜನಮೇಜಯನ ಸರ್ಪಯಾಗಕ್ಕೆ ಇನ್ನೊಂದು ಅಡಿಗಲ್ಲು 🙏🙏 ವಿನತೆಯ ಮತ್ತೊಂದು ಮೊಟ್ಟೆಯಿಂದ ಉಧಿಸಿಬಂದವ ಗರುಡ ಇವನಿಂದ ಆಕೆಯ ದಾಸ್ಯ ನಿವಾರಣೆ ಆದದ್ದು ಇನ್ನೊಂದು ರೋಚಕ ಕಥೆ..
ಉತ್ತನ್ಕ.... ಮುಂದುವರಿದ ಭಾಗ ಪೌಶನ ಅರಮನೆಯಿಂದ ವಿಶಿಷ್ಟವಾದ ಕರ್ಣಕುಂಡಲಗಳನ್ನು ಪಡೆದು ಹೊರಟ ಉತ್ತನ್ಕ. ಸ್ವಲ್ಪ ದೂರ ಸಾಗುವಾಗ ಯಾರೋ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಹಾಗೆ ಅನ್ನಿಸಿತು. ಹಿಂತಿರುಗಿ ನೋಡಿದರೆ ಒಬ್ಬ ದಾರಿಹೋಕ ನಗ್ನನಾಗಿ ಇವನನ್ನು ಹಿಂಬಾಲಿಸುತಿದ್ದ. ಯಾರೋ ಭಿಕ್ಷುಕ ಇರಬೇಕೆಂದು ಉಪೇಕ್ಷಿಸಿ ಮುಂದೆ ನಡೆದ. ಸ್ವಲ್ಪ ದೂರ ಕ್ರಮಿಸಿದ ಮೇಲೆ ಸಂದ್ಯಾ ವಿಧಿಗಳನ್ನು ಮಾಡಬೇಕಾದ ಸಮಯ ಬಂತು, ಅನತಿ ದೂರದಲ್ಲಿಯೇ ಕಾಣುತ್ತಿದ್ದ ಒಂದು ನದಿಯ ದಂಡೆಗೆ ತೆರಳಿ ಒಂದು ಬಂಡೆಯ ಮೇಲೆ ಕರ್ಣ ಕುಂಡಲಗಳನ್ನು ಇಟ್ಟು ನೀರಿಗೆ ಇಳಿದು ಸ್ನಾನ.. ಅರ್ಘ್ಯ ವಿಧಿಗಳನ್ನು ಪೂರೈಸಿ ಮೇಲೆ ಬಂದ. ಅನತಿ ದೂರದಲ್ಲಿ ಇವನು ಬಂಡೆಯ ಮೇಲಿಟ್ಟ ಕರ್ಣಕುಂಡಲಗಳನ್ನು ಅಲ್ಲಿಯವರೆಗೆ ಇವನನ್ನು ಹಿಂಬಾಲಿಸಿ ಬರುತಿದ್ದ ನಗ್ನ ದಾರಿಹೋಕ ಎತ್ತಿಕೊಂಡು ಧಾವಿಸಿ ಹೋಗುತ್ತಿರುವುದು ಕಾಣಿಸಿತು. ಕೂಡಲೇ ಅವನನ್ನು ಹಿಂಬಾಲಿಸಿ ಗಟ್ಟಿಯಾಗಿ ಹಿಡಿದುಕೊಂಡ... ಮರುಕ್ಷಣವೇ ಇವನ ಬಾಹುಗಳಲ್ಲಿ ಬಂದಿಯಾದ ಆ ನಗ್ನವ್ಯಕ್ತಿ ಒಂದು ಹಾವಿನ ರೂಪ ಹೊಂದಿ ಇವನ ಕೈಯಿಂದ ತಪ್ಪಿಸಿಕೊಂಡು ಒಂದು ಬಿಲದೊಳಗೆ ಇಳಿದು ಹೋಗಿಬಿಟ್ಟ. ಉತ್ತನ್ಕನಿಗೆ ಕುಂಡಲಗಳನ್ನು ಕಳೆದುಕೊಂಡ ಬೇಸರದೊಂದಿಗೆ ಅದನ್ನು ಅಪಹರಿಸಿದವ ತಕ್ಷಕ ಎಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಹಾಗಿದ್ದರೆ ಅವನು ಇಳಿದು ಹೋದ ಬಿಲದಲ್ಲಿಯೇ ಮುಂದೆ ಹೋಗಬೇಕೆಂದು ಯೋಚಿಸಿ ಪಕ್ಕದಲ್ಲಿ ನೋಡಿದಾಗ ಒಂದು ಪಾಲಾಷ ದಂಡ ಕಾಣಿಸಿತು. ಅದನ್ನೇ ಹಿಡಿದು ಬಿಲ ದ್ವಾರವನ್ನು ಅಗೆಯುತ್ತ ಮುಂದೆ ಸಾಗಿದ... ಸಾಗುತ್ತಾ ಸಾಗುತ್ತಾ ಆ ಬಿಲ ಮಾರ್ಗ ನೇರವಾಗಿ ನಾಗಲೋಕಕ್ಕೆ ಕೊಂಡಯ್ದಿತು. ಉತ್ತನ್ಕ ವಿಶಿಷ್ಟವಾದ ಸೌಧಗಳಿಂದ ಕೂಡಿದ ನಾಗಲೋಕವನ್ನು ನೋಡಿದ. ತಮ್ಮ ಪೂತ್ಕಾರದಿಂದಲೇ ಜೀವಿಗಳನ್ನು ನಾಶಮಾಡಿಬಿಡಬಲ್ಲ ವಿಷಸರ್ಪಗಳ ಸಂಚಾರವನ್ನೂ ನೋಡಿದ, ತನ್ನಿಂದ ಕುಂಡಲಗಳನ್ನು ಅಪಹರಿಸಿ ಹೋದ ತಕ್ಷಕ ಎಲ್ಲಿದ್ದಾನೆ ಎನ್ನುವುದನ್ನು ಹುಡುಕಲು ಅವನಿಗೆ ಸಾಧ್ಯವಾಗಲಿಲ್ಲ. ಆದರೂ ದೃತಾರಾಷ್ಟ್ರ.. ತಕ್ಷಕ.. ಐರಾವತ.. ಶ್ರುತಸೇನ ಎಂಬ ನಾಗ ಪ್ರಮುಖರ ನಾಮ ಸ್ತೋತ್ರ ಮಾಡುತ್ತಾ ಉರಗ ಲೋಕದಲ್ಲಿ ಅಲೆದಾಡಿದ.. ಆದರೆ ಕಳೆದುಕೊಂಡ ಕುಂಡಲ ಅವನಿಗೆ ಸಿಗಲಿಲ್ಲ.. ಒಂದು ಪ್ರಯೋಜನ ಆಯಿತು ಸ್ತೋತ್ರ ಆಲಿಸಿದ ನಾಗಗಳು ಇವನಿಗೆ ತೊಂದರೆ ಮಾಡಲಿಲ್ಲ. ಹಾಗೆಯೇ ಮುಂದೆ ಸಾಗುತ್ತಿರುವಾಗ ಇಬ್ಬರು ಸ್ತ್ರೀಯರು ಹಲವು ಧಾರಗಳನ್ನು ಕೈಯಲ್ಲಿ ಹಿಡಿದು ಬಟ್ಟೆಯನ್ನು ನೇಯುತ್ತಿರುವುದನ್ನು ನೋಡಿದ ಅವರು ಕೈಯಲ್ಲಿ ಹಿಡಿದ ಧಾರಗಳ ಅರ್ಧ ಭಾಗ ಕಪ್ಪು ಉಳಿದರ್ದ ಭಾಗ ಬೆಳ್ಳಗೆ ಇತ್ತು. ಅಲ್ಲಿಯೇ ಆರುಜನ ಹುಡುಗರು ಹನ್ನೆರಡು ಗೂಟಗಳಿರುವ ಒಂದು ಚಕ್ರವನ್ನು ತಿರುಗಿಸುತ್ತಾ ಇದ್ದರು. ಸ್ವಲ್ಪ ಮುಂದೆ ಸುಂದರವಾದ ಒಂದು ಕುದುರೆಯನ್ನು ಏರಿ ಒಬ್ಬ ವ್ಯಕ್ತಿ ಬರುತ್ತಿರುವುದನ್ನು ನೋಡಿದ. ಅವನನ್ನು ನೋಡಿದಾಕ್ಷಣ ಉತ್ತನ್ಕ ಅವನನ್ನೂ ಸ್ತುತಿ ಮಾಡತೊಡಗಿದನು. ಇವನ ಸ್ತುತಿಯಿಂದ ಸಂತುಷ್ಟನಾದ ಆ ಪುರುಷ ಏನಾಗಬೇಕು ಎಂದು ಪ್ರಸನ್ನಚಿತ್ತದಿಂದ ಕೇಳಿದ.. ಸ್ವಾಮೀ ನನಗಾಗಿ ಏನಾದರೂ ಮಾಡಬೇಕೆಂಬ ಮನವಿದ್ದರೆ ಈ ನಾಗಲೋಕದ ಉರಗಗಳೆಲ್ಲವೂ ನನಗೆ ಶರಣಾಗುವಂತೆ ಮಾಡು ಎಂದು ಕೇಳಿದ. ಅದನ್ನು ಕೇಳಿದ ಆ ಮಹಾಪುರುಷ ಹಾಗಗಬೇಕೆಂದರೆ ಈ ಕುದುರೆಯ ಹಿಂಭಾಗವನ್ನು ಊದು ಎಂದು ಹೇಳಿದ. ಉತ್ತನ್ಕ ಹಾಗೇ ಮಾಡಲು ಆ ಕುದುರೆಯ ನವದ್ವಾರಗಳಿಂದಲೂ ಹೊಗೆಯಿಂದ ಕೂಡಿದ ಅಗ್ನಿಜ್ವಾಲೆ ಹೊರಸೂಸತೊಡಗಿತು.. ಇನ್ನೇನು ಸರ್ಪಲೋಕವನ್ನೇ ವ್ಯಾಪಿಸಿಬಿಡುತ್ತದೋ ಎನ್ನುವ ಸಂದರ್ಭದಲ್ಲಿ ತಕ್ಷಕ ಓಡೋಡಿ ಬಂದು ನಿನಗೆ ಬೇಕಾದ ಕುಂಡಲಗಳು ಇದೋ ಇಲ್ಲಿದೆ ಎಂದು ಕೊಟ್ಟು ಹೊರಟು ಹೋಗಿಬಿಟ್ಟ. ಉತ್ತನ್ಕನಿಗೆ ಸಂತೋಷವಾಯಿತು. ಜೊತೆಗೆ ಮತ್ತೆ ದುಗುಡ ಆವರಿಸಿತು. ಅಂದು ಆಶ್ರಮದಿಂದ ಹೊರಡುವಾಗ "ಇಂದಿಗೆ ಸರಿಯಾಗಿ ನಾಲ್ಕು ದಿನಕ್ಕೆ ಮಂಗಳ ದಿನವೊಂದು ಇದೆ ಅಂದು ಕುಂಡಲಗಳನ್ನು ಧರಿಸುತ್ತೇನೆ" ಎಂದು ಗುರುಪತ್ನಿ ಹೇಳಿದ್ದರು ಆದರೆ ಇಂದಿಗೆ ಮೂರು ದಿನಗಳು ಕಳೆದು ಹೋಯಿತು ಇನ್ನೊಂದು ದಿನದಲ್ಲಿ ಅಲ್ಲಿಗೇ ಹೋಗುವುದಾದರು ಹೇಗೆ ಎಂಬ ಚಿಂತೆ ಅವನನ್ನು ಆವರಿಸಿತು. ಇವನ ಚಿಂತೆಯನ್ನು ಅರಿತ ಅಶ್ವಾರೋಹಿ ವ್ಯಕ್ತಿ ತನ್ನ ಕುದುರೆಯನ್ನೇ ಏರುವಂತೆ ಸೂಚಿಸಿದ. ಕುದುರೆಯನ್ನು ಏರುತಿದ್ದಂತೆ ಮನೋವೇಗದಲ್ಲಿ ಕುದುರೆ ಸಾಗಿ ಗುರುಗಳ ಆಶ್ರಮಕ್ಕೆ ಬಂದುಬಿಟ್ಟಿತು. ಉತ್ತನ್ಕ ಕುದುರೆಯನ್ನು ಇಳಿಯುತ್ತಲೇ ಕುದುರೆಯೂ.. ಜೊತೆಗಿದ್ದ ವ್ಯಕ್ತಿಯೂ ಅದೃಶ್ಯರಾಗಿಹೋದರು. ಇತ್ತ ಉತ್ತನ್ಕನ ನಿರೀಕ್ಷೆಯಲ್ಲಿಯೇ ಇದ್ದ ಗುರುಪತ್ನಿಯನ್ನು ಕಂಡು ಕುಂಡಲಗಳನ್ನು ಮುಂದಿಟ್ಟು ನಮಸ್ಕರಿಸಿದ. ಆನಂದಭರಿತಳಾದ ಗುರುಮಾತೆ ಉತ್ತನ್ಕನನ್ನು ಮನಸಾರೆ ಹರಸಿದಳು. ಅವಳ ಆಶೀರ್ವಾದ ಪಡೆದು ಗುರುಗಳ ಬಳಿಗೆ ಬಂದು ನಮಸ್ಕರಿಸಿದ.. ಗುರುಗಳು ವಿಳಂಬವಾಗಲು ಕಾರಣ ಕೇಳಿದರು.. ಆಗ ನಡೆದ ಘಟನೆ ವಿವರಿಸಿ ಹೇಳಿದ ಮತ್ತು ತಾನು ಕಂಡ ವಿಚಿತ್ರ ದೃಶ್ಯಗಳನ್ನು ಹೇಳಿ ಅದರ ಹಿನ್ನಲೆ ಏನೆಂದು ಕೇಳಿದ. ಆಗ ಗುರುಗಳು ಒಂದೊಂದಾಗಿ ಹೇಳಿದರು "ಮೊದಲಾಗಿ ಪೌಶನ ಅರಮನೆಗೆ ಸಾಗುವಾಗ ವೃಷಭವನ್ನೇರಿ ಬಂದವ ಇಂದ್ರ.. ವೃಷಭರೂಪದಲ್ಲಿದ್ದುದೆ ಐರಾವತ.. ನೀನು ಸೇವಿಸಿದ ಅದರ ಸಗಣಿ ಮೂತ್ರವೇ ಅಮೃತ ಹಾಗಾಗಿಯೇ ನಿನಗೆ ಉರಗಲೋಕದಲ್ಲಿ ವಿಷದ ಪರಿಣಾಮ ಆಗಲಿಲ್ಲ. ಇಂದ್ರ ನನ್ನ ಮಿತ್ರ ಹಾಗಾಗಿ ನಿನಗೆ ಅನುಕೂಲ ಮಾಡಿದ. ಇನ್ನು ನೀನು ತಕ್ಷಕನನ್ನು ಹಿಂಬಾಲಿಸಿ ಹೋಗಲು ಬಿಲವನ್ನು ಅಗೆಯಲು ನಿನ್ನ ಕೈಗೆ ಸಿಕ್ಕಿದ ಪಲಾಶದಂಡವು ಇಂದ್ರನ ವಜ್ರ ಆಯುಧ, ಮತ್ತೆ ನಾಗಲೋಕದಲ್ಲಿ ಇಬ್ಬರು ಸ್ತ್ರೀಯರು ಬಟ್ಟೆ ನೇಯುವುದನ್ನು ನೋಡಿದೆಯಲ್ಲಾ ಅವರು ಧಾತ್ರಿ-ವಿಧಾತ್ರಿ ಎಂಬುವವರು. ಅವರನ್ನು ಎರಡು ಅಯನಗಳೆಂದು ಬಾವಿಸು. ಅವರು ಕೈಯಲ್ಲಿ ಹಿಡಿದ ದಾರಗಳೆ ದಿನಗಳು.. ದಾರದ ಬಿಳಿ ಕಪ್ಪು ಬಣ್ಣವೇ ಹಗಲು ರಾತ್ರಿ.. ಅದರಿಂದ ಸಿದ್ದವಾಗುವ ಬಟ್ಟೆಯೇ ಸಂವತ್ಸರ.. ಚಕ್ರ ತಿರುಗಿಸುತಿದ್ದ ಆರು ಹುಡುಗರೇ ಋತುಗಳು. 12 ಗೂಟವನ್ನು ಹೊಂದಿದ ಚಕ್ರವೇ 12 ಮಾಸ. ಅಶ್ವರೋಹಿಯಾಗಿ ಬಂದು ನಿನಗೆ ಸಹಕರಿಸಿದವನೇ ಪರ್ಜನ್ಯದೇವ ಅವನೇರಿದ ಅಶ್ವವೇ ಅಗ್ನಿದೇವ. ಇವರೆಲ್ಲರೂ ನಿನ್ನನ್ನು ಮೆಚ್ಚಿ ಸಹಕರಿಸಿದ ಕಾರಣ ನೀನು ಈ ಕಾರ್ಯದಲ್ಲಿ ಯಶಸ್ವಿಯಾಗಲು ಸಾಧ್ಯ ವಾಯಿತು" ಎಂದರು. ಇನ್ನು ನಿನ್ನ ಗುರುಕುಲ ವಾಸವೆಂಬುದು ಮುಗಿಯಿತು ಒಳ್ಳೆಯ ಗುರಿಯನ್ನು ಅರಸಿ ಶ್ರೇಯೋವಂತನಾಗಿ ಬಾಳು ಎಂದು ಹರಸಿದರು. ಗುರುಗಳ ಮಾತನ್ನು ಕೇಳಿದ ಉತ್ತನ್ಕನಿಗೆ ಸಂತೋಷವಾಯಿತು, ಗುರುಗಳ ಆಶೀರ್ವಾದ ಪಡೆದು ಆಶ್ರಮದಿಂದ ಹೊರಟ. ಹೊರಡುವಾಗಲೇ ವಿನಾಕಾರಣ ತನ್ನ ಕಾರ್ಯದಲ್ಲಿ ಅಡ್ಡಿಯಾದ ತಕ್ಷಕನಿಗೆ ಸರಿಯಾದ ಶಿಕ್ಷೆ ಕೊಡಬೇಕು ಉರಗರೆಲ್ಲರೂ ದುಷ್ಟರು ಇವರ ನಾಶ ಆಗಬೇಕು ಎಂಬ ನಿರ್ಣಯ ಮನಸ್ಸಿನಲ್ಲಿ ಸ್ಥಿರವಾಗಿ ಹೋಯಿತು.... ಈ ಘಟನೆ ಜನಮೇಜಯನ ಸರ್ಪಯಾಗಕ್ಕೆ ಒಂದು ಅಡಿಗಲ್ಲು.. ಇನ್ನೂ ಎಷ್ಟು ಕಲ್ಲುಗಳು ಬೀಳುತ್ತದೆ ಮುಂದೆ ನೋಡೋಣ 🙏🙏
ಉತ್ತನ್ಕ.. ಮುಂದಿನ ಭಾಗ ವೇದ ಶಿಷ್ಯನಾದ ಉತ್ತನ್ಕ ಗುರುಪತ್ನಿ ಕೇಳಿದ ಗುರುದಕ್ಷಿಣೆಯನ್ನು ತಂದೊಪ್ಪಿಸಲು ಅತ್ಯಂತ ಸಂತೋಷದಿಂದ ಪೌಷನ ನಗರಿಗೆ ಹೊರಡುತ್ತಾನೆ. ಅವನು ಸಾಗಿ ಬರುವ ಮಾರ್ಗದಲ್ಲಿ ಎತ್ತರವಾದ ಒಂದು ಎತ್ತನ್ನು ಏರಿ ಒಬ್ಬ ದೃಢಕಾಯ ಬರುತ್ತಿದ್ದನು. ಎದುರಾಗಿ ಬಂದ ಉತ್ತನ್ಕನನ್ನು ನೋಡಿ " ಅಯ್ಯಾ ಬ್ರಾಹ್ಮಣ ನೀನು ಮುಂದೆ ಸಾಗಬೇಕೆಂದರೆ ನಾನು ಏರಿದ ಈ ವೃಷಭದ ಸಗಣಿ ಮತ್ತು ಮೂತ್ರವನ್ನು ಸೇವಿಸಿ ಹೋಗು " ಎನ್ನುತ್ತಾನೆ. ಆಗ ಉತ್ತನ್ಕ ನಿರಾಕರಿಸಿದಾಗ, ನಿನ್ನ ಗುರುಗಳೂ ಹೀಗೇ ಮಾಡಿದ್ದರು ಎನ್ನುತ್ತಾನೆ. ಅದನ್ನು ಕೇಳಿದ ಉತ್ತನ್ಕ ಗುರುಗಳು ಸೇವಿಸಿದ್ದಾರೆ ಎಂದರೆ ನನಗೂ ಅದು ಆದೀತು ಎಂದು ಹೇಳಿ ವೃಷಭದ ಸಗಣಿ ಮತ್ತು ಗಂಜಲವನ್ನು ಸೇವಿಸಿ ಆತುರಾತುರದಲ್ಲಿ ಆಚಮನ ಮುಗಿಸಿ ಮುಂದೆ ಸಾಗುತ್ತಾನೆ. ( ಇಲ್ಲಿ ಹೇಳಬೇಕಾದ ಇನ್ನೊಂದು ವಿಷಯವೇನೆಂದರೆ ವ್ಯಾಸಭಾರತದಲ್ಲಿಯೇ ಈ ಘಟನೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿದೆ, ಆದಿಪರ್ವದಲ್ಲಿ ಉತ್ತನ್ಕ ವೇದ ಶಿಷ್ಯನೆಂದೂ.. ಅವನು ಪೌಷರಾಜನ ಪತ್ನಿಯ ಕುಂಡಲವನ್ನು ತಂದು ಕೊಟ್ಟನೆಂದೂ.. ಅದೇ ವ್ಯಾಸ ಭಾರತದ ಅಶ್ವಮೇಧಿಕ ಪರ್ವದಲ್ಲಿ ಉತ್ತನ್ಕ ಗೌತಮರ ಶಿಷ್ಯನೆಂದೂ ಅಹಲ್ಯೆಯ ಆಸೆಯಂತೆ ಸೂರ್ಯ ವಂಶದ ಸೌದಾಸ ಅಥವಾ ಕಲ್ಮಾಷಪಾದನ ಹೆಂಡತಿಯಾದ ಮದಯಂತಿಯ ಕುಂಡಲವನ್ನು ತಂಡನೆಂದು ಹೇಳಲಾಗಿದೆ. ಪ್ರಸ್ತುತ ನಾನು ಪೌಷ ರಾಜನೆಂದೇ ಭಾವಿಸಿ ಪ್ರಸ್ತುತ ಪಡಿಸುತ್ತಿದ್ದೇನೆ) ವೃಷಭಾರೋಹಿ ಹೇಳಿದಂತೆ ಮುಂದೆ ಸಾಗಿದ ಉತ್ತನ್ಕ ನೇರವಾಗಿ ಪೌಷ ಅಳುತ್ತಿದ್ದ ನಗರಕ್ಕೆ ಬರುತ್ತಾನೆ. ರಾಜನ ಭೇಟಿ ಮಾಡಿದಾಗ ಪೌಷ ರಾಜ ಸಂತೋಷದಿಂದ ಆತಿಥ್ಯ ನೆರವೇರಿಸುತ್ತಾನೆ. ತಾವು ಬಂದ ಉದ್ದೇಶ ಏನೆಂದು ಕೇಳಿದಾಗ ಗುರುದಕ್ಷಿಣೆಯಾಗಿ ಸಲ್ಲಿಸಲು ನಿನ್ನ ಹೆಂಡತಿಯ ಕರ್ಣಕುಂಡಲಗಳನ್ನು ನೀಡಬೇಕು ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಪೌಷರಾಜ ಅತ್ಯಂತ ಸಂತೋಷದಿಂದಲೇ ಒಪ್ಪಿ ಅಂತಃಪುರದಲ್ಲಿರುವ ತನ್ನ ಪತ್ನಿಯನ್ನು ಕಾಣಲು ಕಳುಹಿಸಿ ಕೊಡುತ್ತಾನೆ. ರಾಣಿಯ ಅಂತಃಪುರಕ್ಕೆ ತೆರಳಿದ ಉತ್ತನ್ಕನಿಗೆ ಅಲ್ಲಿ ರಾಣಿ ಕಾಣಸಿಗುವುದಿಲ್ಲ ಕೋಪದಿಂದ ಹಿಂತಿರುಗಿ ರಾಜನಲ್ಲಿಗೆ ಬಂದು ನಿಂದಿಸಿ ಮಾತಾಡುತ್ತಾನೆ. ಅಂತಃಪುರದಲ್ಲಿಯೇ ಇರುವ ರಾಣಿ ಉತ್ತನ್ಕನಿಗೆ ಕಾಣದೆ ಇರುವುದು ಏಕೆಂದು ಊಹಿಸಿದ ಅರಸ " ಮಹಾ ಪತಿವ್ರತೆಯಾದ ನನ್ನ ಹೆಂಡತಿ ಪರರಿಗೆ ಕಾಣಿಸಿಕೊಳ್ಳಬೇಕಾದರೆ ಬಂದವನು ತನುಮನದಲ್ಲಿ ಶುದ್ಧನಾಗಿರಬೇಕು ಬಹುಷಃ ನಿಮ್ಮಲ್ಲಿಯೇ ಏನೋ ಕಲ್ಮಶ ಇರಬೇಕು " ಎಂದಾಗ ಉತ್ತನ್ಕನಿಗೆ ಮಾರ್ಗದಲ್ಲಿ ನಡೆದ ಘಟನೆ ನೆನಪಾಗುತ್ತದೆ. ಆತುರಾತುರದಲ್ಲಿ ವೃಷಭದ ಸಗಣಿ ಗಂಜಲವನ್ನು ಸ್ವೀಕರಿದವ ನಿಂತೇ ಆಚಮನ ಮಾಡಿ ಇತ್ತ ಸಾಗಿ ಬಂದಿದ್ದ. ರಾಜ ಹೇಳಿದ್ದು ಸರಿ ಎಂದು ತಿಳಿದು ನೇರವಾಗಿ ನದಿ ತೀರಕ್ಕೆ ಹೋಗಿ ಸ್ನಾನ ಸಂದ್ಯಾವಂದನೆಗಳನ್ನು ಪೂರೈಸಿ ಮತ್ತೆ ರಾಣಿಯ ಅರಮನೆಗೆ ಬಂದ. ಅರಮನೆಯಲ್ಲಿಯೇ ಇದ್ದ ಮಹಾರಾಣಿ ಉತ್ತನ್ಕನನ್ನು ಸ್ವಾಗತಿಸಿ ಸತ್ಕರಿಸಿದಳು. ರಾಣಿಯಲ್ಲಿ ತಾನು ಬಂದ ಉದ್ದೇಶ ತಿಳಿಸಿದಾಗ ಅತ್ಯಂತ ಸಂತೋಷದಿಂದಲೇ ಕರ್ಣಕುಂಡಲಗಳನ್ನು ತೆಗೆದು ಕೊಟ್ಟಳು, ಜೊತೆಗೆ ಒಂದು ಎಚ್ಚರಿಕೆಯ ಮಾತನ್ನೂ ಹೇಳಿದಳು "ಈ ವಿಶೇಷವಾದ ಕರ್ಣ ಕುಂಡಲಗಳನ್ನು ಅಪಹರಣ ಮಾಡಲು ನಾಗರಾಜನಾದ ತಕ್ಷಕ ಬಹಳ ಕಾಲದಿಂದ ಪ್ರಯತ್ನ ಮಾಡುತ್ತಿದ್ದಾನೆ ಹಾಗಾಗಿ ಬಹಳ ಎಚ್ಚರ ಇರಲಿ" ಎಂದಳು. ತಕ್ಷಕ ತನಗೇನು ಮಾಡಲಾರ ಎಂದು ಹೇಳಿ ಅವಳಿಂದ ಬೀಳ್ಕೊಂಡು ಮತ್ತೆ ಅರಸನಲ್ಲಿಗೆ ಬಂದ, ಇವನನ್ನು ಬರಮಾಡಿಕೊಂಡ ಅರಸ ತನ್ನ ಬಯಕೆಯನ್ನು ಹೇಳಿಕೊಂಡ. " ನಿಮ್ಮಂತಹ ಮಹಾತ್ಮರ ದರ್ಶನ ಅಪರೂಪಕ್ಕೆ ಆಗುವಂತದ್ದು.. ಹಾಗಾಗಿಯೇ ನಿಮ್ಮಂಥವರು ಅತಿಥಿಯಾಗಿ ಆಗಮಿಸಿದಾಗ ಶ್ರಾದ್ದ ಮಾಡಲು ಸರಿಯಾದ ಸಂದರ್ಭ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ, ಹಾಗಾಗಿ ನಾನಿಂದು ಮಾಡುವ ಶ್ರಾದ್ದಕ್ಕಾಗಿ ಅವಕಾಶ ಮಾಡಿಕೊಟ್ಟು ಸತ್ಕಾರ ಸ್ವೀಕರಿಸಿ ಹರಸಬೇಕು ಎಂದು ಕೇಳಿಕೊಂಡ. ಆಯಿತು ಎಂದು ಅನುಮತಿಸಿದ ಉತ್ತನ್ಕನನ್ನು ಸತ್ಕರಿಸಿ ನೈವೇದ್ಯ ಅರ್ಪಿಸಲು ಭೋಜನಶಾಲೆಗೆ ಕರೆದುಕೊಂಡು ಹೋದನು. ಭೋಜನಕ್ಕೆ ಕುಳಿತ ಉತ್ತನ್ಕನಿಗೆ ಬಡಿಸಿದ ಅನ್ನದಲ್ಲಿ ಕೂದಲು ಇದ್ದದ್ದನ್ನು ಕಂಡನು, ಒಮ್ಮೆಲೇ ಕೋಪದಿಂದ " ಪರಿಶುದ್ಧ ಅನ್ನವನ್ನು ಬಡಿಸಬೇಕಾದ ನೀನು ಅಪರಿಶುದ್ಧವಾದ ಅನ್ನವನ್ನು ಬಡಿಸಿದ್ದಿ ಇದಕ್ಕೆ ನ್ನಿನ್ನ ಔದಾಸೀನ್ಯವೇ ಕಾರಣ ಹಾಗಿದ್ದರೆ ನಿನಗೆ ಕಣ್ಣುಗಳು ಇಲ್ಲವೇ.. ಕಣ್ಣುಗಳು ಇದ್ದೂ ಹೀಗೆ ಮಾಡಿದ ನೀನು ಕುರುಡನಾಗಿ ಹೋಗು " ಎಂದು ಶಪಿಸಿಬಿಟ್ಟ. ಇದನ್ನು ಕೇಳಿದ ರಾಜನಿಗೂ ಕೋಪ ಬಂತು. " ನಾನು ಪರಿಶುದ್ಧ ಎಂದು ಭಾವಿಸಿಯೇ ಬಡಿಸಿದ ಅನ್ನ ಆದರೂ ವಿವೇಚನೆ ಇಲ್ಲದೆ ಶಪಿಸಿದೆ.. ಪ್ರತಿಯಾಗಿ ನಾನು ಶಾಪ ಕೊಡುವೆ.. ಮುಂದೆ ನಿನಗೆ ಮಕ್ಕಳಾಗದೆ ಹೋಗಲಿ " ಎಂದು ಹೇಳಿಬಿಟ್ಟ. ಶಾಪ ಪ್ರಧಾನದಿಂದ ಇಬ್ಬರ ಮನಸ್ಸಿಗೂ ಬೇಸರವಾಯಿತು, ಅನ್ನದಲ್ಲಿದ್ದ ಕೂದಲನ್ನು ಉತ್ತನ್ಕ ತೋರಿಸಿದ.. ಆಗ ಪೌಷ ಕ್ಷಮೆ ಕೇಳಿದ ತನ್ನನ್ನು ಕುರುಡನನ್ನಾಗಿ ಮಾಡಬೇಡ ಎಂದು ಕೇಳಿಕೊಂಡ.. ಆಗ ನಿನ್ನ ಕುರುಡುತನ ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಉತ್ತನ್ಕ ಹೇಳಿದ. ಪ್ರತಿಯಾಗಿ ಪೌಷ ಹೇಳಿದ.. "ಸ್ವಾಮಿ ನಿಮ್ಮ ಮಾತು ಕಠಿಣವಾದರೂ ಹೃದಯ ಬೆಣ್ಣೆಯಂತೆ. ಆದರೆ ನಾನು ಕ್ಷತ್ರಿಯ ನನ್ನ ಮಾತು ಮೃದು ಹೃದಯದಲ್ಲಿ ಕಠಿಣತೆ ನೆಲೆಗೊಂಡಿದೆ.. ಹಾಗಾಗಿ ಶಾಪ ಹಿಂದೆ ಪಡೆಯಲು ಅಸಾಧ್ಯ " ಉತ್ತನ್ಕ ನಗುತ್ತ ಹೇಳಿದ "ಮಹಾರಾಜಾ ನೀನು ಶಾಪ ಹಿಂಪಡೆಯದೇ ಇದ್ದರೂ ಅದರ ಪರಿಣಾಮ ನನ್ನ ಮೇಲೆ ಆಗುವುದಿಲ್ಲ ಯಾಕೆಂದರೆ ಬಡಿಸಿದ ಅನ್ನ ಅಪರಿಶುದ್ಧ ಎಂದು ಹೇಳಿದರೂ ಪರೀಕ್ಷೆ ಮಾಡದೇ ನನಗೆ ಶಪಿಸಿದೆ ಹಾಗಾಗಿ ನಿನ್ನ ಶಾಪ ನನಗೇನು ಮಾಡದು... ಹಾಗಾಗಿ ಮುಂದೆ ನಮ್ಮ ನಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳೋಣ" ಎಂದು ಹೇಳಿ ಪೌಷನನ್ನು ಬೀಳ್ಕೊಂಡು ಹೊರಟ. ಈ ಕಂತಿನಲ್ಲಿ ಇಷ್ಟೇ ಸಾಕು... ಒಂದು ಕಡೆ ದೂರದರ್ಶನದಲ್ಲಿ ಭಾರತ ಪಾಕಿಸ್ತಾನದ ಯುದ್ಧದ ವಾರ್ತೆ.. ಉತ್ತನ್ಕನ ಮುಂದಿನ ಪ್ರಯಾಣ.. ಮುಂದಿನ ಬರಹಕ್ಕೆ.. 🙏🙏
ವೇದ ಮತ್ತು ಉತ್ತನ್ಕ ಆಯೋದದೌಮ್ಯರ ಮೂರನೆಯ ಶಿಷ್ಯ ವೇದ, ಸದಾ ಭಕ್ತಿಯಿಂದ ಗುರುಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡವ.ಆಶ್ರಮದಲ್ಲಿ ಯಾವ ಕೆಲಸವೇ ಆಗಲಿ ಭಕ್ತಿಯಿಂದ ಮಾಡಿ ಮುಗಿಸುತ್ತಿದ್ದ, ಬಹಳ ಸಾಧು ಸ್ವಭಾವದವನೂ ಆಗಿದ್ದ. ಉಳಿದ ಶಿಷ್ಯರು ಹೊಲದ ಕೆಲಸಗಳಲ್ಲಿ ಎತ್ತಿನ ಬದಲಿಗೆ ಇವನನ್ನೇ ಕಟ್ಟಿ ಉಳುತ್ತಿದ್ದರು. ಆದರೂ ತನಗಾಗುವ ಆಯಾಸ ನೋವುಗಳನ್ನು ಸಹಿಸಿಕೊಂಡು ಇರುತ್ತಿದ್ದ. ಹಲವು ದಿನ ಇದನ್ನು ಗಮನಿಸುತ್ತಿದ್ದ ಗುರುಗಳು ಒಂದು ದಿನ ಸಂತುಷ್ಟರಾಗಿ ಸರ್ವಜ್ಞತ್ವವನ್ನು ಹೊಂದು ಎಂದು ಹರಸಿ ಬೀಳ್ಕೊಟ್ಟರು. ಮುಂದೆ ವೇದನು ಬ್ರಹ್ಮಚರ್ಯಾಶ್ರಮವನ್ನು ತೊರೆದು ಅನುರೂಪಳಾದ ಕನ್ನಿಕೆಯ ಕೈಹಿಡಿದು ಗೃಹಸ್ಥನಾದನು. ಬಳಿಕ ಇವನಲ್ಲಿಯೂ ಹಲವು ಶಿಷ್ಯರು ವಿದ್ಯಾರ್ಜನೆಗೋಸ್ಕರ ಬಂದು ಆಶ್ರಯಿಸಿದರು. ಆದರೆ ತಾನು ಗುರುಕುಲವಾಸದಲ್ಲಿ ಅನುಭವಿಸಿದ ಕಷ್ಟದ ದಿನಗಳನ್ನು ನೆನಪಿಸಿಕೊಂಡ ವೇದನು ತನ್ನ ಶಿಷ್ಯರಿಗೆ ಯಾವುದೇ ಕೆಲಸವನ್ನೂ ಹೇಳುತ್ತಿರಲಿಲ್ಲ. ಹೀಗೆಯೇ ದಿನಗಳು ಕಳೆಯುತ್ತಿರುವಾಗ ಒಮ್ಮೆ ವೇದನು ಕಾರ್ಯಾರ್ಥವಾಗಿ ಕೆಲವು ದಿನಗಳ ಕಾಲ ಆಶ್ರಮವನ್ನು ತೊರೆಯಬೇಕಾದ ಅನಿವಾರ್ಯತೆ ಒದಗುತ್ತದೆ. ಆಗ ತನ್ನ ಶಿಷ್ಯರಲ್ಲೊಬ್ಬನಾದ ಉತ್ತನ್ಕನನ್ನು (ನಿಜವಾಗಿ ಉತ್ತನ್ಕ ಎಂದು ಬರೆಯುವುದಲ್ಲ "ನ್ಕ" ದ ಬದಲು"ಘ " ದ ನಂತರ ಬರುವ ಅಕ್ಷರಕ್ಕೆ ಕ ವನ್ನು ಒತ್ತಕ್ಷರವಾಗಿ ಬಳಸಬೇಕು.. ಆದರೆ ಕೀಲಿಮಣೆಗೆ ಹಾಗೊಂದು ಅಕ್ಷರ ಇದೆ ಎಂದು ಗೊತ್ತಿಲ್ಲ ) ಕರೆದು ಹೇಳಿದರು " ಕುಮಾರ ನಾನು ಕಾರ್ಯಾರ್ಥದಿಂದ ಕೆಲವು ದಿನ ಆಶ್ರಮದಲ್ಲಿ ಇರುವುದಿಲ್ಲ ಹಾಗಾಗಿ ಕಾಲಕಾಲಕ್ಕೆ ಹೊಣೆಯರಿತು ಆಶ್ರಮದ ಕೆಲಸಗಳನ್ನು ನೀನು ಮಾಡಬೇಕು " ಎಂದು ಹೇಳಿ ಹೊರಟರು. ಉತ್ತನ್ಕನಿಗೆ ಬಹಳ ಸಂತೋಷವಾಯಿತು, ಎಂದೂ ಕೆಲಸ ಹೇಳದಿದ್ದ ಗುರುಗಳು ಇಂದು ಹೇಳಿದರು.. ಅದೂ ಉಳಿದವರು ಇದ್ದರೂ ನನಗೇ ಹೇಳಿದರು (ಈಗಿನ ಕಾಲವಾದರೆ ಉಳಿದವರಿದ್ದೂ ನನಗೇ ಹೇಳಿದರಲ್ಲಾ ಎಂಬ ಬೇಸರವೇ ಆಗುತಿತ್ತು) ಹಾಗಾಗಿ ಬಹಳ ಶ್ರದ್ಧೆಯಿಂದಲೇ ಆಶ್ರಮದ ಕೆಲಸಗಳಲ್ಲಿ ತೊಡಗಿಕೊಂಡ. ಒಂದು ದಿನ ಗುರುಪತ್ನಿಯ ಜೊತೆಯಲ್ಲಿದ್ದ ಕೆಲವು ಸ್ತ್ರೀಯರು ಇವನ ಬಳಿಗೆ ಬಂದು " ಋತುಸ್ನಾತೆಯಾದ ಗುರುಪತ್ನಿಯು ಇಂದು ಋತುಸ್ನಾನವನ್ನು ಪೂರೈಸಿದ್ದಾರೆ.. ಗುರುಗಳು ಆಶ್ರಮದಲ್ಲಿ ಇಲ್ಲದ ಕಾರಣ ಋತುಕಾಲವು ವ್ಯರ್ಥವಾಗುವುದಲ್ಲಾ ಎಂಬ ಬೇಸರದಲ್ಲಿದ್ದಾರೆ ಹಾಗಾಗಿ ಗುರುವಿನ ಆಣತಿಯಂತೆ ಆಶ್ರದ ಹೊಣೆ ಹೊತ್ತ ನೀನು ಗುರುಪತ್ನಿಯ ಆಸೆಯನ್ನು ನೆರವೇರಿಸು ಇದರಿಂದ ಗುರುಗಳಿಗೂ ಗುರುಪತ್ನಿಗೂ ಸಂತೋಷವಾಗುತ್ತದೆ" ಎಂದರು. ಆಗ ಉತ್ತನ್ಕ "ತಾಯಂದಿರೆ ಗುರುವನ್ನು ನನ್ನ ತಂದೆ ಎಂದು ಭಾವಿಸಿದ್ದೇನೆ ಹಾಗಾಗಿ ಗುರುಪತ್ನಿ ನನಗೆ ಮಾತೆಯೇ ಹೌದು, ಅಧರ್ಮದ ದಾರಿಯಲ್ಲಿ ನಾನೆಂದೂ ಸಾಗಲಾರೆ ಅಂತಹ ಹೇಯವಾದ ಕಾರ್ಯಕ್ಕೆ ನನ್ನ ಮನಸ್ಸು ಎಂದೂ ಒಳಪಡುವುದಿಲ್ಲ" ಎಂದು ನಿರಾಕರಿಸಿದನು. ದಿನಗಳು ಕಳೆದಮೇಲೆ ಗುರುಗಳು ಆಶ್ರಮಕ್ಕೆ ಹಿಂತಿರುಗಿದರು. ಆಶ್ರಮದಲ್ಲಿ ನಡೆದ ವಿಚಾರ ಅವರಿಗೂ ತಿಳಿಯಿತು, ತಮ್ಮ ಶಿಷ್ಯನ ನಿರ್ಧಾರ ಕೇಳಿ ಬಹಳ ಸಂತೋಷವೂ ಆಯಿತು.ಹಾಗಾಗಿಯೇ ಎಲ್ಲಾ ವಿಧ್ಯೆಗಳೂ ಅವನ ಅಂತರ್ಗತವಾಗಲೆಂದು ಹರಸಿದರು. ಇನ್ನೇನು ಆಶ್ರಮವನ್ನು ತೊರೆದು ಉತ್ತನ್ಕ ಹೊರಡಬೇಕು ಆ ಕ್ಷಣದಲ್ಲಿ "ಗುರುಗಳೇ ಯಾರೂ ಸಂಪ್ರದಾಯಕ್ಕೆ ವಿರುದ್ಧವಾಗಿ ವಿದ್ಯೆಯನ್ನು ಕಲಿಯಲಾಗದು ಅದರಿಂದ ಗುರುಶಿಷ್ಯರಿಬ್ಬರಿಗೂ ದೋಷವೇ ಸರಿ ಆದ್ದರಿಂದ ತಮ್ಮಲ್ಲಿ ವಿದ್ಯೆ ಕಲಿತ ನಾನು ಗುರುದಕ್ಷಿಣೆ ಅರ್ಪಿಸಬೇಕೆಂದಿರುವೆ, ತಮಗೆ ಇಷ್ಟವಾದದ್ದು ಯಾವುದು ಹೇಳಿ" ಎಂದು ವಿನಂತಿಸುತ್ತಾನೆ. ಗುರುಗಳು ನಸುನಗೆಯಿಂದ "ಮಗೂ ಇನ್ನೂ ಕೆಲವುಕಾಲ ನೀನು ಈ ಆಶ್ರಮದಲ್ಲಿಯೇ ಇರು ನಂತರದಲ್ಲಿ ನೋಡೋಣ" ಎಂದು ಹೇಳಿದರು. ದಿನ ಕೆಲವು ಕಳೆಯಿತು ಮತ್ತೆ ಗುರುಗಳಲ್ಲಿ ಅದೇ ಪ್ರಶ್ನೆ ಕೇಳುತ್ತಾನೆ, ಗುರುಗಳು ಮತ್ತದೇ ಉತ್ತರ ಕೊಡುತ್ತಾರೆ. ದಿನಗಳ ತರುವಾಯ ಮತ್ತೆ ಬಂದು ಕೇಳುತ್ತಾನೆ, ಗುರುಗಳಿಗೆ ಇನ್ನು ಇವನನ್ನು ತಡೆಯಲಾಗದು ಕೇಳಿದರೆ ಕೊಡಲು ಕಡು ಬಡವನಾದ ಇವನ ಬಳಿ ಏನೂ ಇಲ್ಲ ಎಂದು ಯೋಚಿಸಿ " ಮಗೂ ನನಗೇನೂ ಬೇಡ ಆದರೂ ಕೊಡವ ಮನಸ್ಸಿದ್ದರೆ ನಿನ್ನ ಮಾತೆಯ ಸ್ಥಾನದಲ್ಲಿರುವ ಗುರುಪತ್ನಿಯನ್ನು ಕೇಳು ಅವಳೇನಾದರೂ ಬಯಸಿದರೆ ಕೊಡು " ಎಂದು ಹೇಳುತ್ತಾರೆ. ಆಗ ಉತ್ತನ್ಕ ಗುರುಪತ್ನಿಯ ಬಳಿ ಹೋಗಿ ಗುರುದಕ್ಷಿಣೆಯಾಗಿ ಏನನ್ನು ಕೊಡಲಿ ಎಂದು ಕೇಳಿದಾಗ ಸಹಜವಾಗಿಯೇ ಸ್ತ್ರೀಯರಿಗೆ ಬಂಗಾರದ ಬಗ್ಗೆ ಆಸೆಯಲ್ಲವೇ... ಹಾಗಾಗಿ ತನಗೆ ಸೌದಾಸ ರಾಜನ ಪತ್ನಿಯಾದ ಮದಯಂತಿ ಧರಿಸಿರುವ ವಿಶಿಷ್ಟವಾದ ಕರ್ಣಕುಂಡಲಗಳು ಬೇಕು ಎಂದು ಕೇಳುತ್ತಾಳೆ ( ಕೆಲವು ಕಡೆ ಪೌಷ ರಾಜನ ಸತಿ ಎನ್ನುವ ಉಲ್ಲೇಖ ಇದೆ) ಗುರುಪತ್ನಿಯ ಮಾತನ್ನು ಕೇಳಿ ಸಂತೋಷದಿಂದ ಕರ್ಣಕುಂಡಲ ತರಲು ಹೊರಡುತ್ತಾನೆ. ಉತ್ತನ್ಕ ದಾರಿಯಲ್ಲಿ ಕಂಡ ವಿಚಿತ್ರಗಳು ಗುರುದಕ್ಷಿಣೆ ಪಡೆದ ಬಗೆ.. ಮುಂದಿನ ಬರಹದಲ್ಲಿ 🙏🙏
ಗುರುಭಕ್ತಿ - ವೇದ ( ಬೈದ ) ಆಯೋದದೌಮ್ಯರ ಮೂರನೇಯ ಶಿಷ್ಯನಾದ ವೇದನನ್ನು ( ಕೆಲವು ಕಡೆ ಬೈದ ಎಂದೂ ಇದೆ ) ಪರಿಚಯಸುವಾಗ ಬಹಳ ದೊಡ್ಡ ಕಾರ್ಯಕ್ಕೆ ಕೈ ಇಕ್ಕಿದಂತಾಗುತ್ತದೆ, ವೇದನ ಬಗ್ಗೆ ಹೇಳಬೇಕಾದದ್ದು ಬಹಳಷ್ಟು ಇಲ್ಲದೆ ಹೋದರೂ ಅವನ ಶಿಷ್ಯನಾದ ಉತ್ತನ್ಕ ( ಉದಂಕ ಎಂದೂ ಕರೆಯುತ್ತಾರೆ ) ನ ಬಗ್ಗೆ ಹೇಳಲೇಬೇಕು.. ಇದನ್ನು ಆರಂಭಿಸಿದರೆ ಅರ್ಧ ಮಹಾಭಾರತವನ್ನೇ ಹೇಳಬೇಕಾಗುತ್ತದೆ. ನನಗನ್ನಿಸಿದಂತೆ ಮಹಾಕಾವ್ಯಗಳಲ್ಲಿ ಸುದೀರ್ಘ ಹಿನ್ನೆಲೆಯನ್ನು ಹೊಂದಿರುವ ಎರಡು ಘಟನೆಗಳು ಎಂದರೆ, ನರಕಾಸುರ ವಧೆ ಮತ್ತು ಜನಮೇಜಯನ ಸರ್ಪಯಾಗ. ಕೃತಯುಗದಲ್ಲಿ ಹಿರಣ್ಯಾಕ್ಷ ವಧಾ ಕಾಲಕ್ಕೆ ಶ್ವೇತವರಾಹನಾಗಿ ಕಾಣಿಸಿಕೊಂಡ ಮಹಾವಿಷ್ಣು ಮತ್ತು ಭೂದೇವಿಯರ ಪುತ್ರ ನರಕ ದೈತ್ಯ, ಅವನ ವಧೆ ಆಗಿದ್ದು ದ್ವಾಪರ ಯುಗದ ಕೊನೆಯ ಕಾಲದಲ್ಲಿ. ಹಾಗೆಯೇ ಕಲಿಯುಗದ ಆರಂಭದಲ್ಲಿ ನಡೆದ ಜನಮೇಜಯನ ಸರ್ಪಯಾಗಕ್ಕೆ ಮುಹೂರ್ತ ಇಟ್ಟದ್ದು ಕೃತಯುಗದ ಆದಿಯಲ್ಲಿ, ಮಹಾಭಾರತದ ಮುಖ್ಯ ಕಥೆಗಳಲ್ಲಿ ಇದು ಪ್ರಸ್ತಾಪ ಆಗದೇ ಹೋದರೂ ನಿಜವಾಗಿ ಮಹಾಭಾರತ ಆರಂಭ ಆಗುವುದೇ ಸರ್ಪಯಾಗದ ದೋಷದಿಂದ ಕುಷ್ಠರೋಗ ಪೀಡಿತನಾದ ಜನಮೇಜಯನಿಗೆ ವ್ಯಾಸ ನಿರ್ದೇಶನದಂತೆ ವೈಶಂಪಾಯನರು ಮಹಾಭಾರತ ಕಥೆ ಹೇಳುವುದರಿಂದ. ಜನಮೇಜಯನ ಸರ್ಪಯಾಗದಲ್ಲಿ ಹಲವು ಹಿನ್ನೆಲೆಗಳ ಸಂಗಮವಿದೆ. ಕೃತಯುಗದಲ್ಲಿ ನಡೆದ ಕದ್ರೂ ವಿನತೆಯರ ಪಂಥ.. ಹೆತ್ತ ತಾಯಿಯಾದ ಕದ್ರುವಿನಿಂದ ಮಕ್ಕಳಾದ ಸರ್ಪಗಳಿಗೆ ಶಾಪ, ಅರುಣ ಮತ್ತು ಗರುಡರ ಜನನ, ಗರುಡನಿಂದ ಅಮೃತಾಪಹಾರಣ, ರುರು ಮತ್ತು ಪ್ರಮದ್ವರೆಯ ಕಥೆ ರುರುವಿಗೆ ಸರ್ಪ ಸಂತತಿಯ ಬಗ್ಗೆ ದ್ವೇಷ, ವೇದ ಶಿಷ್ಯನಾದ ಉತ್ತನ್ಕನಿಗೆ ಸರ್ಪ ಸಂತತಿಯನ್ನು ನಾಶ ಮಾಡಬೇಕೆನ್ನುವ ಛಲ, ಕಲಿಪ್ರಭಾವದಿಂದ ಪರೀಕ್ಷಿತನಿಂದ ಶಮೀಕ ಮಹರ್ಷಿಯ ಆಶ್ರಮದಲ್ಲಿ ಘಟಿಸಿದ ಅಪಚಾರ..ಶಮೀಕ ಪುತ್ರ ಶೃಂಗಿಯ ಶಾಪ, ತಂದೆಯ ಸಾವಿಗೆ ಕಾರಣನಾದ ತಕ್ಷಕನ ವಂಶ ನಿರ್ಮೂಲನೆ ಮಾಡಬೇಕೆನ್ನುವ ಜನಮೇಜಯನ ಛಲ, ಆದರೆ ಇಷ್ಟು ಹಿನ್ನೆಲೆಯಿದ್ದೂ ಯಾಗ ಸಂಪೂರ್ಣ ಆಗಲಿಲ್ಲ..ಭಂಗಗೊಂಡ ದಕ್ಷನ ಯಾಗದ ಬಗ್ಗೆ ಎಲ್ಲರಿಗೂ ಗೊತ್ತು, ಆದರೆ ಇಷ್ಟೆಲ್ಲಾ ಹಿನ್ನೆಲೆ ಇದ್ದೂ ಅಪರಿಪೂರ್ಣವಾದ ಸರ್ಪಯಾಗದ ಪೂರ್ಣ ವಿವರಣೆ ಎಲ್ಲರಿಗೂ ಗೊತ್ತಿಲ್ಲವೆಂದೆ ಭಾವಿಸುತ್ತೇನೆ. ಪೂರ್ಣ ಬರೆಯಲು ಮೂರುನಾಲ್ಕು ಕಂತುಗಳಾದರೂ ಬೇಕಾದೀತು ಶೀರ್ಷಿಕೆ ಕೊಟ್ಟ ಹಾಗೇ ವೇದ ಮತ್ತು ಉತ್ತನ್ಕರಿಂದಲೇ ಮುಂದಿನ ಕಂತು ಆರಂಭವಾಗುವುದು. 🙏🙏
ಗುರುಭಕ್ತಿ ( ಆರುಣಿ ) ಆಯೋದದೌಮ್ಯರ ಶಿಷ್ಯರಲ್ಲಿ ಮತ್ತೊಂದು ಪ್ರಮುಖ ಹೆಸರು "ಆರುಣಿ" ಶ್ರೀಮನ್ಮಹಾಭಾರತ ಪ್ರಕಾರ ಇವನು ಪಾಂಚಾಲ ದೇಶದವನು. ರೂಢಿಯಲ್ಲಿ ಬೃಹದಾರಣ್ಯಕ ಮತ್ತು ಕಠೋಪನಿಷತ್ತಿನಲ್ಲಿ ಬರುವ ನಚಿಕೇತನ ತಂದೆ ಇವನೇ ಎಂದು ಹೇಳುವ ಕ್ರಮ, ಆದರೆ ಶ್ರೀಮನ್ಮಹಾಭಾರತದಲ್ಲಿ ಇವರು ಬೇರೆ ಬೇರೆ ಎಂದೇ ಹೇಳಲಾಗಿದೆ. ಆರುಣಿ ತನ್ನ ಸಹಪಾಠಿಗಳಾದ ಉಪಮನ್ಯು ಮತ್ತು ವೇದ ಇವರುಗಳೊಂದಿಗೆ ಗುರುಕುಲದಲ್ಲಿ ಅಭ್ಯಾಸ ನಿರತನಾಗಿದ್ದ. ಅಂದಿನ ಗುರುಕುಲದ ಶಿಕ್ಷಣ ಪದ್ಧತಿ ಬೇರೆಯೇ ಅಲ್ಲವೇ.. ಸದಾ ಆಶ್ರಮದ ನಿತ್ಯ ಕೆಲಸಗಳನ್ನು ಮಾಡಬೇಕು.. ಗೋಪರಿಪಾಲನೆ, ಕೈತೋಟ, ಹೂದೋಟ, ಹೊಲ, ಗದ್ದೆ.. ಎಲ್ಲವೂ ಇರುತಿತ್ತು, ಆಶ್ರಮಕ್ಕೆ ಅಗತ್ಯವಿರುವ ಎಲ್ಲವನ್ನು ಅಲ್ಲಿರುವ ಶಿಷ್ಯರೇ ಬೆಳೆಯುತ್ತಿದ್ದರು. ಅರಣ್ಯಕ್ಕೆ ಹೋಗಿ ಯಜ್ಞ ಯಾಗಗಳಿಗೆ ಬೇಕಾಗುವ ಸಮಿಧೆಗಳನ್ನೂ ಅವರೇ ಸಂಗ್ರಹಿಸಿ ತರುತ್ತಿದ್ದರು, ನಿಜವಾಗಿ ಜೀವನ ನಿರ್ವಹಣೆ ಮಾಡಲು ಬೇಕಾದ ವಿಧ್ಯೆ ಅದೇ ತಾನೇ... ಕೇವಲ ಪಠ್ಯವನ್ನೇ ಅಭ್ಯಾಸ ಮಾಡಲು ಅಂದಿನವರಿಗೆ ಹೆಚ್ಚು ಕಾಲ ಬೇಕಾಗುತ್ತಿರಲಿಲ್ಲ. ಗುರುಗಳು ನಿನಗೆ ಎಲ್ಲ ವಿದ್ಯೆಗಳು ತಿಳಿಯಲಿ ಎಂದು ಹೇಳಿದ್ದರೂ ಸಾಕಾಗುತಿತ್ತು.. ಇದು ಉತ್ಪ್ರೇಕ್ಷೆ ಎಂದು ಈಗ ಅನ್ನಿಸಿದರೂ ಇತ್ತೀಚಿನ ಕಾಲದಲ್ಲಿ ಆಚಾರ್ಯ ಶಂಕರರು ಎಂಟನೇ ವರ್ಷಕ್ಕೆ ಚತುರ್ವೇಧ ಪಾರಂಗತರಾಗಿದ್ದರು ಎಂಬುದನ್ನು ಕೇಳಿ ಬಲ್ಲೆವು. ಆರುಣಿ ಕೂಡಾ ಗುರುಸೇವಾ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ, ಒಂದು ದಿನ ಗುರುಗಳು ಅವನಿಗೆ ಗದ್ದೆಗೆ ಹೋಗಿ ನೀರಿನ ವ್ಯವಸ್ಥೆ ನೋಡಿ ಬರಲು ಹೇಳಿದರು. ಗುರುಗಳ ಮಾತಿನಂತೆ ಆರುಣಿ ಗದ್ದೆಗೆ ಹೋಗಿ ನೋಡಿದಾಗ ಒಂದು ಗದ್ದೆಯ ಬದು ನೀರಿನಿಂದ ಕೊಚ್ಚಿ ಹೋಗಿತ್ತು, ಎಷ್ಟು ಪ್ರಯತ್ನ ಮಾಡಿದರೂ ಅದನ್ನು ಸರಿಮಾಡಲಾಗಲಿಲ್ಲ. ಹಾಕಿದ ಮಣ್ಣು ನೀರಿನ ರಭಸಕ್ಕೆ ಮತ್ತೆ ಮತ್ತೆ ಕೊಚ್ಚಿ ಹೋಗುತಿತ್ತು. ಆ ಕ್ಷಣದಲ್ಲಿ ಆರುಣಿಗೆ ಬೇರೆ ದಾರಿ ಕಾಣದಿದ್ದಾಗ ಒಂದು ಯೋಚನೆ ಬಂತು. ಮಣ್ಣಿನ ಬದಲಿಗೆ ಹರಿದು ಹೋಗುತಿದ್ದ ನೀರಿಗೆ ಅಡ್ಡವಾಗಿ ತಾನೇ ಮಲಗಿಬಿಟ್ಟ... ಹರಿದುಹೋಗುತಿದ್ದ ನೀರು ನಿಂತು ಗದ್ದೆಯಲ್ಲಿ ಬೇಕಾದಷ್ಟು ಸಂಗ್ರಹವಾಯಿತು.ಇತ್ತ ಬಹಳ ಸಮಯವಾದರೂ ಆರುಣಿ ಹಿಂತಿರುಗಿ ಬರದಿರುವುದನ್ನು ಗಮನಿಸಿದ ಗುರುಗಳು ಶಿಷ್ಯರ ಸಮೇತ ಇವನನ್ನು ಹುಡುಕುತ್ತಾ ಗದ್ದೆಯ ಬಳಿಗೆ ಬಂದರು. ಅಲ್ಲೆಲ್ಲಿಯೂ ಕಾಣದೆ "ಮಗೂ ಆರುಣಿ ಎಲ್ಲಿದ್ದಿ.. ಶೀಘ್ರವಾಗಿ ಇತ್ತ ಬಾ" ಎಂದು ಕರೆದರು. ಮರುಕ್ಷಣದಲ್ಲಿಯೇ ಗದ್ದೆಯ ಬದುವಾಗಿ ಮಲಗಿದ್ದ ಆರುಣಿ " ಗುರುಗಳೇ ನಾನಿಲ್ಲಿದ್ದೇನೆ " ಎಂದು ಹೇಳುತ್ತಾ ಎದ್ದು ಬಂದು ಗುರುಗಳಿಗೆ ನಮಸ್ಕರಿಸಿ ನಡೆದ ಘಟನೆಯನ್ನು ಅವರಲ್ಲಿ ನಿವೇದಿಸಿಕೊಂಡ. ಆಯೋದದೌಮ್ಯರಿಗೆ ಸಂತೋಷವಾಯಿತು "ನನ್ನ ಮಾತನ್ನು ಚಾಚು ತಪ್ಪದೆ ನಿರ್ವಹಿಸುವಲ್ಲಿ ನೀನು ಮಾಡಿದ ಸಾಹಸದಿಂದ ಸಂತೋಷವಾಯಿತು, ನನ್ನ ಕೂಗನ್ನು ಕೇಳಿದಾಕ್ಷಣ ನೀನು ಗದ್ದೆಯ ಬದುವಿನಿಂದ ಎದ್ದು ಬಂದ ಕಾರಣದಿಂದಲೇ ನೀನು ಉದ್ದಾಲಕನೆಂಬ ಹೆಸರಿನಿಂದ ಪ್ರಸಿದ್ಧನಾಗುವೆ, ಎಲ್ಲ ವೇದಗಳು, ಧರ್ಮಶಾಸ್ತ್ರಗಳೂ ನಿನ್ನ ಬುದ್ದಿಗೆ ಗೋಚರವಾಗಲಿ" ಎಂದು ಹರಸಿದರು. ಮುಂದೆ ಈ ಉದ್ದಾಲಕ ಗೃಹಸ್ಥನಾಗಿ, ಶ್ವೇತಕೇತು ಎನ್ನುವ ಮಗನನ್ನೂ ಸುಜಾತ ಎನ್ನುವ ಮಗಳನ್ನೂ ಪಡೆದ. ತನ್ನ ಶಿಷ್ಯನಾದ ಕಹೋಡಕನಿಗೆ ಮಗಳನ್ನು ಮದುವೆ ಮಾಡಿಕೊಟ್ಟ, ಪುರಾಣಗಳಲ್ಲಿ ಬರುವ ಅಷ್ಟಾವಕ್ರನೆನ್ನುವ ಋಷಿ ಇದೇ ಕಹೋಡಕ ಮತ್ತು ಸುಜಾತ ದಂಪತಿಗಳ ಮಗ. ಒಮ್ಮೆ ಉದ್ದಾಲಕ ಯಾಗ ಮಾಡುತ್ತಿರುವಾಗ ಯಜ್ಞವೇದಿಕೆಯಲ್ಲಿ ನೀರಿನ ಅನಿವಾರ್ಯತೆ ಉಂಟಾಯಿತು, ಆ ಹೊತ್ತಿನಲ್ಲಿ ಪುಣ್ಯದಾಯಿನಿಯಾದ ಸರಸ್ವತಿಯನ್ನು ಮನಸ್ಸಿನಲ್ಲಿಯೇ ಸ್ಮರಿಸಿ ಆಹ್ವಾನಿಸಿದರು.. ಮರುಕ್ಷಣವೇ ನದಿಯಾದ ಸರಸ್ವತಿ ಉದ್ದಾಲಕ ಮಾಡುತ್ತಿದ್ದ ಯಜ್ಞಶಾಲೆಗೇ ಹರಿದುಬಂದಳು ಹಾಗಾಗಿಯೇ ಸರಸ್ವತಿ ನದಿಗೆ "ಮನೋರಮಾ " ಎಂಬ ಹೆಸರು ಉಂಟು.
ಗುರುಭಕ್ತಿ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಗುರುಗಳು ಇದ್ದೇ ಇರುತ್ತಾರೆ, ಕೇವಲ ಅಕ್ಷರ ಕಲಿಸಿದವ ಮಾತ್ರ ಗುರು ಅಂತ ಭಾವಿಸಬೇಕಾದುದಲ್ಲ. ತನ್ನ ಅನುಭವ ಹಂಚಿಕೊಂಡು ಬದುಕಿನ ದಾರಿ ತೋರಿಸಿದವರೂ ಗುರುಗಳೇ ಅಲ್ಲವೇ.. ಹಾಗೆಂದು ಅಂತಹ ಪಥ ನಿರ್ದೇಶಕರನ್ನು ಗೌರವದಿಂದ ಕಾಣುತ್ತಿರುವುದು ಇಲ್ಲವೇ ಇಲ್ಲ.. ಇನ್ನು ಗುರುಭಕ್ತಿ ಎನ್ನುವ ಭಾವ ಈ ಕಾಲಕ್ಕೆ ಬಹಳ ದೂರ. ನಮ್ಮ ಪುರಾಣಗಳಲ್ಲಿ ಅಲ್ಲಲ್ಲಿ ಗುರುಭಕ್ತಿಯಿಂದಲೇ ಶ್ರೇಯಸ್ಸನ್ನು ಹೊಂದಿದ ಕೆಲವರು ಆದರ್ಶ ಶಿಷ್ಯರು ಸಿಗುತ್ತಾರೆ.. ಅವರಲ್ಲಿ ಶ್ರೀಮನ್ಮಹಾಭಾರತದಲ್ಲಿ ಬರುವ ಉಪಮನ್ಯುವಿನ ಕಥೆಯೂ ಒಂದು. ಒಂದು ಕಾಲದಲ್ಲಿ ಆಯೋದದೌಮ್ಯ ರೆಂಬ ಗುರುಗಳಿದ್ದರು, ಅವರಿಗೆ ಮೂರುಜನ ಪ್ರಮುಖ ಶಿಷ್ಯರು, ಉಪಮನ್ಯು, ಆರುಣಿ, ವೇದ ಎಂಬುದಾಗಿ ಅವರ ಹೆಸರು. ಆಶ್ರಮದಲ್ಲಿ ಉಪಮನ್ಯುವಿಗೆ ಗೋವುಗಳನ್ನ ಪಾಲಿಸಬೇಕಾದ ಹೊಣೆ, ಪ್ರತಿದಿನವೂ ಹಸುಗಳನ್ನು ಕಾಡಿಗೆ ಹೊಡೆದುಕೊಂಡು ಹೋಗಿ ಹುಲ್ಲು ಮೇಯಿಸಿಕೊಂಡು ಬರುತಿದ್ದ. ಗುರುಗಳು ಒಮ್ಮೆ ಅವನನ್ನು ಗಮನಿಸಿದಾಗ ತುಂಬಾ ದಷ್ಟಪುಷ್ಟವಾಗಿ ಕಾಣುತಿದ್ದ ಅವನಲ್ಲಿಯೇ ಕೇಳಿದರು " ಮಗೂ ನೀನು ಆಹಾರಕ್ಕೆ ಏನು ವ್ಯವಸ್ಥೆ ಮಾಡಿಕೊಂಡಿದ್ದಿ? " ಉಪಮನ್ಯು ಹೇಳಿದ ಗುರುಗಳೇ ಭಿಕ್ಷೆಯನ್ನು ಬೇಡಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತೇನೆ.. ಗುರುಗಳು ಹೇಳಿದರು " ಉಪಮನ್ಯು ಭಿಕ್ಷೆಯಿಂದ ಪಡೆದ ಆಹಾರವನ್ನು ಗುರುಗಳಿಗೆ ಅರ್ಪಿಸದೆ ಸೇವಿಸುವುದು ತಪ್ಪಲ್ಲವೇ " ಇಷ್ಟು ಕೇಳಿ ಅವರು ನಿತ್ಯಾನುಷ್ಠಾನ ಮಾಡಲು ಹೊರಟುಹೋದರು. ಮರುದಿನ ಉಪಮನ್ಯು ಭಿಕ್ಷೆಯಿಂದ ತಂದ ಆಹಾರವನ್ನು ಗುರುಗಳ ಮುಂದೆ ಇಟ್ಟು ಕೈ ಮುಗಿದ.... ಕೆಲವು ಕ್ಷಣಗಳ ನಂತರ ಗುರುಗಳು ಅವನಿಗೆ ಹೊರಡಲು ಸೂಚಿಸಿದರು. ಹೀಗೇ ಕೆಲವು ದಿನಗಳು ಕಳೆಯಿತು. ಒಂದು ದಿನವೂ ಗುರುಗಳು ಶಿಷ್ಯ ತಂದು ಸಮರ್ಪಿಸಿದ ಆಹಾರದಲ್ಲಿ ಸ್ವಲ್ಪವನ್ನೂ ಹಿಂತಿರುಗಿ ಕೊಡಲಿಲ್ಲ. ಆದರೂ ಉಪಮನ್ಯು ಸಂತೋಷವಾಗಿಯೇ ಇದ್ದ, ಗುರುಗಳು ಮತ್ತೆ ಕೇಳಿದರು " ಉಪಾ.. ಭಿಕ್ಷೆಯಿಂದ ತಂದ ಆಹಾರವನ್ನು ನನಗೆ ಅರ್ಪಿಸುತ್ತಿರುವೆ.. ನೀನು ಆಹಾರಕ್ಕೆ ಏನು ಮಾಡುತ್ತಿರುವೆ..? ಉಪಮನ್ಯು ಹೇಳಿದ "ಗುರುಗಳೇ ಮತ್ತೊಮ್ಮೆ ಭಿಕ್ಷೆ ಬೇಡಿ ಉಣ್ಣುತ್ತಿರುವೆ " ಗುರುಗಳು " ಮಗೂ ಮತ್ತೊಮ್ಮೆ ಭಿಕ್ಷೆ ಕೇಳಿದರೆ ಇನ್ನೊಬ್ಬ ವಿದ್ಯಾರ್ಥಿಯ ಅನ್ನವನ್ನು ಕಸಿದ ಹಾಗಲ್ಲವೇ ಅದು ತಪ್ಪು " ಎಂದು ಹೇಳಿ ಎದ್ದು ಹೋದರು. ಮರುದಿನದಿಂದ ಮತ್ತೆ ಅವನೂ ತನ್ನ ನಿತ್ಯ ಕಾರ್ಯಗಳಲ್ಲಿ ತೊಡಗಿಕೊಂಡ.. ದಿನಗಳು ಕೆಲವು ಕಳೆಯಿತು. ಉಪಮನ್ಯುವಿನ ದೇಹ ಸೊರಗಲಿಲ್ಲ, ಎಂದಿನಂತೆ ಲವಲವಿಕೆಯಿಂದಲೇ ಇದ್ದ. ಒಂದು ಸಂಜೆ ಗುರುಗಳು ಪ್ರಶ್ನೆ ಮಾಡಿದರು " ಉಪಾ.. ಏನು ಆಹಾರವನ್ನು ಸೇವಿಸುತ್ತಿರುವೆ... " ಶಿಷ್ಯ ತುಂಬಾ ಭಕ್ತಿಯಿಂದ ಹೇಳಿದ ಗುರುಗಳೇ ಕಾಡಿಗೆ ಗೋವುಗಳನ್ನ ಕರೆದುಕೊಂಡು ಹೋಗುವಾಗ ಅವುಗಳ ಹಾಲನ್ನೇ ಕುಡಿಯುತ್ತಿರುವೆ.. ಗುರುಗಳು ಹೇಳಿದರು "ಮಗೂ ಗೋವುಗಳ ಹಾಲನ್ನು ಕುಡಿದರೆ ಪುಟ್ಟ ಕರುಗಳ ಆಹಾರವನ್ನು ಕಸಿದಂತಾಗಲಿಲ್ಲವೇ.." ಇಷ್ಟು ಹೇಳಿ ಗುರುಗಳು ನಿತ್ಯಕರ್ಮಗಳಿಗೆ ಎದ್ದು ಹೋದರು. ಹಾಗಿದ್ದರೆ ಆಹಾರವನ್ನು ಹೇಗೆ ಪಡೆಯಬೇಕು ಎಂದು ಗುರುಗಳು ಹೇಳಲಿಲ್ಲ.. ಶಿಷ್ಯ ಕೇಳಲೂ ಇಲ್ಲ. ಮತ್ತೆ ಕೆಲವು ದಿನ ಕಳೆಯಿತು, ಗುರುಗಳು ನಿರೀಕ್ಷೆ ಮಾಡಿದ ಹಾಗೆ ಶಿಷ್ಯನಲ್ಲಿ ಯಾವ ಬದಲಾವಣೆ ಆಗಲಿಲ್ಲ, ಆತ ಎಂದಿನಂತೆಯೇ ಇದ್ದ. ಗುರುಗಳು ಮತ್ತೆ ಒಂದು ಸಂಜೆ ಕೇಳಿದರು. " ಮಗೂ ಒಮ್ಮೆ ಬೇಡಿದ ಭಿಕ್ಷೆಯನ್ನು ನನಗೆ ಅರ್ಪಿಸುತ್ತ ಇದ್ದಿ.. ಎರಡನೇ ಬಾರಿ ಭಿಕ್ಷೆ ಕೇಳುವುದನ್ನ ಬಿಟ್ಟಿದ್ದಿ.. ಗೋವುಗಳ ಹಾಲನ್ನು ಕುಡಿಯುವುದನ್ನು ಬಿಟ್ಟಿದ್ದೀಯ.. ಈಗ ಆಹಾರಕ್ಕೆ ಏನು ಮಾಡುತ್ತಿರುವೆ.. ಆಗ ಸುಳ್ಳು ಹೇಳಲು ಅರಿಯದ ಉಪಮನ್ಯು ಸಹಜವಾಗಿ ಉತ್ತರಿಸುತ್ತಾನೆ, " ಗುರುಗಳೇ ಕರುಗಳು ಗೋವುಗಳ ಹಾಲನ್ನು ಕುಡಿಯುವಾಗ ಅವುಗಳ ಕಟಬಾಯಿಂದ ಹೊರಗೆ ಬರುವ ನೊರೆಯನ್ನೇ ಕುಡಿಯುತ್ತೇನೆ " ಗುರುಗಳಿಗೆ ಅವನ ಸಹಜ ಸರಳತೆಯಿಂದ ಸಂತೋಷವಾದರೂ ತೋರಿಸಿಕೊಳ್ಳದೆ " ಪಾಪ ಆ ಕರುಗಳು ನಿನ್ನಮೇಲಿನ ಕರುಣೆಯಿಂದ ತಾವು ಕುಡಿಯುವ ಹಾಲನ್ನು ನೊರೆಯ ರೂಪದಲ್ಲಿ ನಿನಗೆ ಕುಡಿಸುತ್ತಿರಬೇಕು " ಇಷ್ಟು ಹೇಳಿ ಎದ್ದು ಹೋದರು. ಮರುದಿನದಿಂದ ಉಪಮನ್ಯುವಿಗೆ ಯಾವ ಆಹಾರವೂ ಸಿಗದಂತಾಯಿತು, ಒಂದೆರಡು ದಿನಗಳಲ್ಲಿ ದೇಹಾಯಾಸ ತಡೆದುಕೊಳ್ಳಲಾಗಲಿಲ್ಲ. ಅರಣ್ಯದಲ್ಲಿ ಗೋವುಗಳೊಂದಿಗೆ ತಿರುಗುತ್ತಾ ತಿರುಗುತ್ತಾ ಹಸಿವನ್ನು ತಡೆಯಲಾಗದೆ ಚಿಗುರೊಡೆದು ಹಸಿರಾಗಿ ಕಾಣುತ್ತಿದ್ದ ಎಕ್ಕದ ಎಲೆಗಳನ್ನು ತಿಂದ. ಸ್ವಾಭಾವಿಕವಾಗಿ ಕಹಿಯಾಗಿಯೂ ಕಟುವಾಗಿಯೂ ಇರುವ ಎಕ್ಕದ ಎಲೆಯ ಸೇವನೆ ಬಹುಬೇಗ ಪರಿಣಾಮವನ್ನು ತೋರಿಸಿತು. ಆಯಾಸ ಹೆಚ್ಚಾಯಿತು.. ಕಣ್ಣುಗಳು ಕುರುಡಾದವು, ಎಲ್ಲಿ ಹೋಗಬೇಕೆಂದು ತಿಳಿಯದೆ ಸಾಗುತ್ತಿರುವಾಗ ಕಣ್ಣು ಕಾಣಿಸದೆ ಹಾಳು ಬಾವಿಯೊಂದರಲ್ಲಿ ಬಿದ್ದುಬಿಟ್ಟ. ಇತ್ತ ಆಶ್ರಮದಲ್ಲಿ ಸುರ್ಯಾಸ್ತವಾದರೂ ಶಿಷ್ಯ ಬರದೇ ಇರುವುದನ್ನು ಕಂಡು ಗುರುಗಳು ಉಳಿದ ಶಿಷ್ಯರನ್ನು ಕೂಡಿಕೊಂಡು ಹುಡುಕುತ್ತ ಬಂದರು. ಕರೆಯುತ್ತಾ ಬರುತ್ತಿರುವ ಗುರುಗಳ ದ್ವನಿಯನ್ನು ಆಲಿಸಿದ ಉಪಮನ್ಯು ಬಾವಿಯಿಂದಲೇ ಗುರುಗಳನ್ನು ಮಾತನಾಡಿಸುತ್ತಾನೆ.. ಏನಾಯಿತು ಎಂದು ಕೇಳಿದ ಗುರುಗಳಿಗೆ ನಡೆದ ಘಟನೆ ಹೇಳಿ ಕಣ್ಣುಗಳು ಕುರುಡಾದುದನ್ನು ಹೇಳುತ್ತಾನೆ. ಗುರುಗಳು ದೇವವೈದ್ಯರಾದ ಅಶ್ವಿನಿದೇವತೆಗಳನ್ನು ಸ್ತುತಿಸಲು ಸೂಚಿಸುತ್ತಾರೆ. ಗುರುಗಳ ಅನುಗ್ರಹದಿಂದ ಮಂತ್ರಪೂರ್ವಕವಾಗಿ ಯಮಳರಾದ ಅಶ್ವಿನಿ ದೇವತೆಗಳನ್ನು ಆರಾಧಿಸುತ್ತಾನೆ. ಉಪಮನ್ಯುವಿನ ಸ್ತುತಿಯಿಂದ ಪ್ರಸನ್ನರಾದ ಅಶ್ವಿನಿ ದೇವತೆಗಳು ಪ್ರತ್ಯಕ್ಷರಾಗಿ ದೇವ ನಿರ್ಮಿತವಾದ ಭಕ್ಷ್ಯವೊಂದನ್ನು ಉಪಮನ್ಯುವಿನ ಕೈಯಲ್ಲಿಟ್ಟು ಇದರ ಸೇವನೆಯಿಂದ ನಿನ್ನ ಕಣ್ಣಿನ ದೃಷ್ಟಿ ಹಿಂತಿರುಗಿ ಬರುತ್ತದೆ ಸೇವಿಸು ಎನ್ನುತ್ತಾರೆ. ಆಗ ಉಪಮನ್ಯು " ದೇವತೆಯರೇ ನಾನು ಇದನ್ನು ನನ್ನ ಗುರುಗಳಿಗೆ ಅರ್ಪಿಸದೇ ಸೇವಿಸಲಾರೆ " ಎನ್ನುತ್ತಾನೆ. ಆಗ ದೇವತೆಗಳು ಅವನನ್ನು ಪರೀಕ್ಷೆ ಮಾಡಲಾಗಿಯೇ " ಒಂದು ಕಾಲದಲ್ಲಿ ನಿನ್ನ ಗುರುಗಳಿಗೆ ಇಂತಹ ಪಾಯಸವನ್ನು ನೀಡಿದಾಗ ಅವರು ತನ್ನ ಗುರುಗಳಿಗೆ ನೀಡದೆ ಸ್ವೀಕರಿದ್ದರು " ಎನ್ನುತ್ತಾರೆ. ಆದರೂ ಉಪಮನ್ಯು ಸ್ವೀಕರಿಸಲು ನಿರಾಕರಿಸುತ್ತಾನೆ. ಆಗ ಅಶ್ವಿನೀ ದೇವತೆಗಳು ಇವನ ಗುರುಭಕ್ತಿಗೆ ಸಂತೋಷ ಹೊಂದಿ " ನೀನು ಚಕ್ಷುಷ್ಮಂತನೂ, ಶ್ರೇಯೋವಂತನು ಆಗುವೆ.. ನಿನ್ನ ಹಲ್ಲುಗಳು ಬಂಗಾರದ್ದಾಗಲಿ" ಎಂದು ಹೇಳಿ ಅದೃಷ್ಯರಾಗುತ್ತಾರೆ. ದೃಷ್ಟಿಯನ್ನು ಹೊಂದಿದ ಉಪಮನ್ಯು ಬಾವಿಯಿಂದ ಮೇಲೆದ್ದು ಬಂದು ಗುರುಗಳಿಗೆ ನಮಸ್ಕರಿಸಿದಾಗ ಸಂತೋಷದಿಂದ ಶಿಷ್ಯನ ತಲೆಯನ್ನು ನೇವರಿಸುತ್ತ "ಮಗೂ ಅಶ್ವಿನಿ ದೇವತೆಗಳು ಹೇಳಿದಂತೆಯೇ ನೀನು ಉತ್ತಮವಾದ ಶ್ರೇಯಸ್ಸನ್ನು ಹೊಂದುವೆ ಎಲ್ಲ ವೇದ, ಶಾಸ್ತ್ರಗಳೂ ನಿನ್ನ ಸ್ಮೃತಿಪಥದಲ್ಲಿ ಶಾಶ್ವತವಾಗಿರಲಿ ಎಂದು ಹರಸುತ್ತಾರೆ. ಉಳಿದಿಬ್ಬರು ಶಿಷ್ಯರ ಕಥೆ ಮುಂದೊಮ್ಮೆ.